ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 29, 2016

ಸ್ವಾತಂತ್ರ್ಯೋತ್ಸವ ವಿಶೇಷ ಸರಣಿ – ದಿನಕ್ಕೊಬ್ಬ ದೇಶಭಕ್ತರ ಸ್ಮರಣೆ

‍ನಿಲುಮೆ ಮೂಲಕ

ದಿನ– 13
ವೀರಪಾಂಡ್ಯ ಕಟ್ಟಬೊಮ್ಮನ್
– ರಾಮಚಂದ್ರ ಹೆಗಡೆ

Veerapandiya_Kattabomman_postage_stampಈಸ್ಟ್ ಇಂಡಿಯಾ ಕಂಪನಿ ಭಾರತಕ್ಕೆ ಆಗಮಿಸಿ ತನ್ನ ಬೇರು ಬಿಡಲು ಆರಂಭಿಸಿದ ದಿನಗಳಲ್ಲೇ ಅವರ ವಿರುದ್ಧ ಸಿಡಿದೆದ್ದು ಅವರಿಗೆ ಸೆಡ್ಡು ಹೊಡೆದು ನೇಣು ಶಿಕ್ಷೆಗೆ ಗುರಿಯಾದ ಅಪ್ರತಿಮ ಹೋರಾಟಗಾರ ವೀರಪಾಂಡ್ಯ ಕಟ್ಟಬೊಮ್ಮನ್. ಬ್ರಿಟಿಷರು ಭಾರತದಲ್ಲಿ ಭದ್ರವಾಗಿ ನೆಲೆಯೂರಿದ ತಕ್ಷಣ ತಮ್ಮ ದಬ್ಬಾಳಿಕೆಯನ್ನು ಆರಂಭಿಸಿದರು. ಸಣ್ಣ ಪುಟ್ಟ ರಾಜರುಗಳಿಗೆ ಕಿರುಕುಳ ನೀಡುತ್ತಾ ಅಧಿಕಾರ ಚಲಾಯಿಸಲು ಶುರುಮಾಡಿದರು. ಹೆಚ್ಚು ಹೆಚ್ಚು ತೆರಿಗೆ ವಿಧಿಸಿದರು. ಅವರ ಕಿರುಕುಳ ಸಹಿಸಲಾರದ ಬಹು ಮಂದಿ ರಾಜರುಗಳು ಅವರ ಅಡಿಯಾಳುಗಳಾದರು. ಆದರೆ ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ಪಾಂಚಾಲಂಕುರುಚ್ಚಿಯ ಪಾಳೆಯಗಾರ ವೀರಪಾಂಡ್ಯ ಕಟ್ಟಬೊಮ್ಮನ್ ಮಾತ್ರ ಅವರೆದುರು ಬಗ್ಗಲಿಲ್ಲ. ಪಾಂಚಾಲಂಕುರುಚ್ಚಿಯ ಸುತ್ತಮುತ್ತಲಿನ ಪ್ರದೇಶಕ್ಕೆ ಮ್ಯಾಕ್ಸ್‌ವೆಲ್ ಎಂಬಾತ ಆಗಿನ ಕಂಪೆನಿಯ ಅಧಿಕಾರಿ. ಬ್ರಿಟಿಷ್ ಸರ್ಕಾರಕ್ಕೆ ತೆರಿಗೆ ಕಟ್ಟಲು ಹಲವು ಬಾರಿ ನೋಟೀಸ್ ಕಳಿಸಿದರೂ ವೀರಪಾಂಡ್ಯ ಅದಕ್ಕೆ ಸೊಪ್ಪು ಹಾಕಲಿಲ್ಲ. ಇದನ್ನರಿತ ಮ್ಯಾಕ್ಸ್‌ವೆಲ್ ಬೊಮ್ಮುವಿಗೆ ಹಲವಾರು ಬೆದರಿಕೆ ಪತ್ರಗಳನ್ನು ಬರೆದ. ‘ಕಪ್ಪ ಸಲ್ಲಿಸಿ, ಇಲ್ಲದಿದ್ದರೆ ಯುದ್ಧಕ್ಕೆ ಬರುತ್ತೇವೆ’ ಎಂದು ಹೆದರಿಸಿದ. ‘ನಾವೀ ಮಣ್ಣಿನ ಮಕ್ಕಳು. ಇದು ನಮ್ಮ ಭೂಮಿತಾಯಿ. ನಾವು ಘನತೆ ಗೌರವಗಳಿಂದ ಬಾಳುವವರು. ನಮ್ಮ ಭೂಮಿಯ ಮರ್ಯಾದೆಯ ಸಲುವಾಗಿ ನಾವು ಪ್ರಾಣ ನೀಡುವೆವೇ ಹೊರತು ವಿದೇಶಿ ಶತ್ರುಗಳಿಗೆ ತಲೆಬಾಗುವುದಿಲ್ಲ. ಬನ್ನಿ ಹೋರಾಡೋಣ’ ಎಂದು ವೀರಪಾಂಡ್ಯ ಯುದ್ಧಕ್ಕೆ ಆಹ್ವಾನ ನೀಡಿದ.

ಕಂಪೆನಿಯವರಿಗೆ ಬೊಮ್ಮುವಿನ ರೀತಿ ಸರಿತೋರಲಿಲ್ಲ. 1792 ರಿಂದ 1798 ರ ವರೆಗೆ ಅವರು ಆರುವರ್ಷಗಳ ಕಾಲ ಬೊಮ್ಮುವಿನ ಜತೆ ಸೆಣಸಾಡಿದರು. ಬೊಮ್ಮು ಮಾತ್ರ ಬಗ್ಗಲಿಲ್ಲ. ಹಲವರು ಅವನ ಮನವೊಲಿಸಲು ಪ್ರಯತ್ನ ಮಾಡಿದರೆ “ವ್ಯಾಪಾರಿಗಳ ವೇಷದಲ್ಲಿ ಬಂದು ನಮ್ಮನ್ನು ಹೀರುತ್ತಿರುವ ಹೇಡಿ ಆಂಗ್ಲರಿಗೆ ನಾವು ಗುಲಾಮರಾಗುವುದೇ? ಎಂದಿಗೂ ಇಲ್ಲ” ಎಂದು ಅವರಿಗೆ ಬುದ್ಧಿ ಹೇಳಿದ ಬೊಮ್ಮು. ಯಾವುದೇ ಬೆದರಿಕೆಗೂ ಬೊಮ್ಮು ಬಗ್ಗದೆ ಹೋದಾಗ ಬ್ರಿಟಿಷರು ಸಂಧಿಗೆ ಕರೆದರು. ಸಂಧಿಯ ನೆಪದಲ್ಲಿ ಬಂಧಿಸುವ ಬ್ರಿಟಿಷರ ಕುತಂತ್ರ ಅರಿತಿದ್ದ ವೀರಪಾಂಡ್ಯ ಅವರ ತಾಣಕ್ಕೇ ಹೋಗಿ ಬಂಧಿಸಲು ಬಂದ ಬ್ರಿಟಿಷರ ಅಧಿಕಾರಿಗಳ ತಲೆಕತ್ತರಿಸಿ ಉತ್ತರ ಕೊಟ್ಟು ಬಂದ. 1799ರ ಸೆಪ್ಟೆಂಬರ್ 5ರಂದು ಬ್ರಿಟಿಷ್ ಸೈನ್ಯ ಕಟ್ಟಬೊಮ್ಮುವಿನ ಪಾಂಚಾಲಂಕುರುಚ್ಚಿಯ ಮೇಲೆ ಆಕ್ರಮಣ ಮಾಡಿತು. ಬ್ರಿಟಿಷರ ಬಲಾಢ್ಯ ಪಡೆಯೆದುರು ವೀರಪಾಂಡ್ಯ ವೀರಾವೇಶದಿಂದ ಹೋರಾಡಿದ. ಬ್ರಿಟಿಷರ ಸೈನ್ಯದೆದುರು ವೀರಪಾಂಡ್ಯನಿಗೆ ಸೋಲಾದರೂ ಆತ ಸಿಗದೇ ತಪ್ಪಿಸಿಕೊಂಡ. ಮತ್ತೆ ಬ್ರಿಟಿಷರು ಒಡೆದು ಆಳುವ ನೀತಿ ಅನುಸರಿಸಿದರು. ಹಣದ ಆಮಿಷಕ್ಕೆ ಒಳಗಾದ ವೀರಪಾಂಡ್ಯನ ಸ್ನೇಹಿತನೊಬ್ಬ 1799ರ ಸೆಪ್ಟೆಂಬರ್ 24ರಂದು ಮೋಸದಿಂದ ಬೊಮ್ಮುವನ್ನು ಬಂಧಿಸಿ ಬ್ರಿಟಿಷರಿಗೆ ಒಪ್ಪಿಸಿದ.

ವಿಚಾರಣೆಯ ಕಪಟನಾಟಕದ ಅನಂತರ ಮಹಾ ಪರಾಕ್ರಮಿ ಯೋಧ ಬೊಮ್ಮು ಬ್ರಿಟಿಷರನ್ನು ಹಳಿಯುತ್ತ, ‘ನೀವು ಅನೈತಿಕವಾಗಿ, ಅನ್ಯಾಯವಾಗಿ ನಮ್ಮ ಭೂಮಿಯನ್ನು ಆಕ್ರಮಿಸಿದ್ದೀರಿ. ನೀವು ಇಲ್ಲಿಂದ ತೊಲಗಬೇಕು. ನಾನು ತಲೆಬಾಗಲಾರೆ. ಏನು ಬೇಕಾದರೂ ಮಾಡಿಕೊಳ್ಳಿರಿ’ ಎಂದು ಗರ್ಜಿಸಿದ. ವಿದೇಶಿ ವೈರಿಗೆ ತಲೆಬಾಗದ ಆ ಸ್ವಾಭಿಮಾನಿ ದೇಶಭಕ್ತರನ್ನು ಕಯಾತ್ತಾರ್ನ ಒಂದು ಹುಣಿಸೆಮರಕ್ಕೆ 1799ರ ಅಕ್ಟೋಬರ್ 16ರಂದು ಸಾರ್ವಜನಿಕರ ಮುಂದೆ ಬಹಿರಂಗವಾಗಿ ನೇಣು ಹಾಕಲಾಯಿತು. ಬ್ರಿಟಿಷರ ದಬ್ಬಾಳಿಕೆ, ದೌರ್ಜನ್ಯದ ವಿರುದ್ಧ ದನಿಯೆತ್ತಿ ಸ್ವಾತಂತ್ರ್ಯದ ಕನಸು ಕಂಡ ಮಹಾಪರಾಕ್ರಮಿ ವೀರಪಾಂಡ್ಯ ಕಟ್ಟಬೊಮ್ಮನ್ ತಾಯ್ನಾಡಿಗಾಗಿ ಬಲಿದಾನ ಮಾಡಿ ಮುಂದೆ ನಡೆಯಲಿದ್ದ ಮಹಾ ಸ್ವಾತಂತ್ರ್ಯಾಂದೋಲನಕ್ಕೆ ಪ್ರೇರಣೆಯಾದ. ಅವನು ಕಂಡ ಕನಸಿಂದು ನನಸಾಗಿದೆ, ನಮಗೆ ಮಾತ್ರ ಅಂತವರ ನೆನಪಿಲ್ಲವಾಗಿದೆ.

ಮಾಹಿತಿ ಕೃಪೆ : ಕಣಜ.ಇನ್, ವಿಕಿಪಿಡೀಯಾ ಇತರ ಮೂಲಗಳಿಂದ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments