ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 31, 2016

4

ಕಾಶ್ಮೀರದ ಐತಿಹಾಸಿಕ ಸತ್ಯಗಳು : ನಿಲುಮೆ ವಿಚಾರ ಸಂಕಿರಣ

‍ನಿಲುಮೆ ಮೂಲಕ

– ಹರೀಶ್ ಆತ್ರೇಯ

14088692_10154596775090649_5386569408904041755_nಕಾಶ್ಮೀರ ವಿವಾದಿತ ಪ್ರದೇಶವೇಕಾಗುತ್ತಿದೆ ಮತ್ತು ಅಲ್ಲಿನ ನಿಜ ಸ್ವರೂಪವೇನು ಎಂಬುದನ್ನು ತಿಳಿಯಲು ನಿಲುಮೆ ತಂಡ ಆಯೋಜಿಸಿದ ಕಾಶ್ಮೀರದ ಐತಿಹಾಸಿಕ ಸತ್ಯಗಳು ಮತ್ತು ವರ್ತಮಾನದ ತಲ್ಲಣಗಳು ಎಂಬ ಸಂವಾದ ಕಾರ್ಯಕ್ರಮದಲ್ಲಿನ ಪ್ರೊ. ಪ್ರೇಮಶೇಖರ್ ರವರ ಕೆಲವು ವಿಚಾರಗಳನ್ನು ಹಂಚಿಕೊಳ್ಳುತಿದ್ದೇನೆ..

ಭಾರತದ ವಿಭಜನೆಯಾದಾಗ ಬ್ರಿಟಿಷರು ತಮ್ಮ ನೇರ ಆಡಳಿತಕ್ಕೆ ಒಳಪಟ್ಟ ರಾಜ್ಯಗಳನ್ನು ಭಾರತವೆಂದು ಮತ್ತು ಉಳಿದ ದೇಶೀಯ ಸ್ವತಂತ್ರ್ಯ ಪ್ರಾಂತ್ಯಗಳನ್ನು ಅವುಗಳ ಇಚ್ಚೆಯಂತೆ ಭಾರತದಲ್ಲಾಗಲೀ ಅಥವಾ ಪಾಕೀಸ್ತಾನದಲ್ಲಿಯಾಗಲೀ ಸೇರುವಂತೆ ಹೇಳಲಾಯ್ತು. ಇಂಡಿಯನ್ ಇಂಡಿಪೆಂಡೆನ್ಸ್ ಆಕ್ಟ್ ಪ್ರಕಾರ “British paramount should relapse on the midnight of 14 Aug 1947. ಎಂದರೆ ಸುಮಾರು ಆರುನೂರು ಸ್ಥಳೀಯ ಸಂಸ್ಥಾನಗಳು ಬ್ರಿಟಿಷ್ ಕಾಲನಿಗಳಾಗುವದಕ್ಕೂ ಮುಂಚೆ ಇದ್ದ ರೀತಿಯಲ್ಲಿ ಸ್ವತಂತ್ರ್ಯವಾಗಿರಬಹುದು. ಅಲ್ಲಿನ ಸ್ಥಳೀಯ ನಾಯಕನ (ಆತ ನವಾಬನಾಗಿರಬಹುದು ಅಥವ ಅರಸನಾಗಿರಬಹುದು) ಆತನ ಆಜ್ಞೆ ಅಥವಾ ನಡೆಯಂತೆ ಆ ಸಂಸ್ಥಾನಗಳು ಪಾಕೀಸ್ತಾನದೊಳಗೆ ಅಥವಾ ಭಾರತದೊಳಗೆ ವಿಲೀನವಾಗಬಹುದು. ಅದರ ಜೊತೆಗೆ ಮತ್ತೂ ಒಂದು ಸಲಹೆಯನ್ನು ಬ್ರಿಟಿಷರು ಕೊಡುತ್ತಾರೆ ಅದೇನೆ೦ದರೆ ವಿಲೀನಗೊಳಿಸಿಕೊಳ್ಳುವಾಗ ಆ ಪ್ರಾಂತ್ಯದ ಭೌಗೋಳಿಕ ನೆಲೆ ಮತ್ತು ಪ್ರಜೆಗಳ ಧರ್ಮವನ್ನು ಪರಿಗಣಿಸಿ ಎಂಬುದಾಗಿತ್ತು. ಇದನ್ನು ಕೇಳಿದ ಕಾಶ್ಮೀರ ಮತ್ತು ತಿರುವನಂತಪುರಂ ಸಂಸ್ಥಾನಗಳು ಸ್ವತಂತ್ರ್ಯವಾಗುವ ಯೋಚನೆಯನ್ನು ಮಾಡಿದವು. ಅಂದರೆ ಯಾರ ಆಡಳಿತಕ್ಕೂ ಒಳಪಡದೆ (ಅತ್ತ ಪಾಕೀಸ್ತಾನವೂ ಅಲ್ಲ ಇತ್ತ ಭಾರತವೂ ಅಲ್ಲ) ಸ್ವತಂತ್ರ್ಯವಾಗಿ ರಾಜ್ಯಭಾರ ಮಾಡುವುದು. ಇದು ಪಾಕೀಸ್ತಾನಕ್ಕೆ ಸಮ್ಮತವಾಗಲಿಲ್ಲ. ಏಕೆಂದರೆ PAKISTAN ನಲ್ಲಿನ K ಕಾಶ್ಮೀರವನ್ನ ಸೂಚಿಸುತ್ತೆ. PAKISTAN ಎನ್ನುವುದು ಒಂದು ಪೂರ್ಣ ಹೆಸರಲ್ಲ, ಹಲವು ಸ್ಥಳಗಳ ಅಕ್ಷರಗಳನ್ನು ಸೇರಿಸಿದ ಸಂಕ್ಷಿಪ್ತ ರೂಪ. ಇದನ್ನು ಕೊಡಮಾಡಿದವನು ಲಂಡನ್ನಿನ ವಿದ್ಯಾರ್ಥಿಯಾಗಿದ್ದ  ಚೌದರಿ ರೆಹಮತ್ ಆಲಿ ಮತ್ತು ಪ್ರಕಟಿಸಿದ್ದು ೨೮ ಜನವರಿ ೧೯೩೩ರಂದು ನೌ ಆರ್ ನೆವರ್ ಎಂಬ ಪತ್ರಿಕೆಯಲ್ಲಿ, ಆತನ ಪ್ರಕಾರ ವಾಯುವ್ಯ ಭಾರತವು ಸಾಮಾಜಿಕವಾಗಿ ಮತ್ತು ಧಾರ್ಮಿಕವಾಗಿ ಭಿನ್ನವಾಗಿದೆ ಮತ್ತು ಧಾರ್ಮಿಕವಾಗಿ ಮಧ್ಯ ಏಷಿಯಾಕ್ಕೆ ಮತ್ತು ಪಶ್ಚಿಮ ಏಷಿಯ ಹತ್ತಿರವಾಗಿದೆ, ಆದ ಕಾರಣ ಈ ಭಾಗವನ್ನು ಭಾರತದಿಂದ ಪ್ರತ್ಯೇಕಿಸಿ ಮಧ್ಯ ಏಷಿಯಾದೊಂದಿಗೆ ಸೇರಿಸಿ ಹೊಸತೊಂದು ರಾಷ್ಟ್ರವನ್ನು ಮಾಡಬೇಕು ಎಂಬುದು. ಆತ ಸೇರಿಸಿದ ಪ್ರಾಂತ್ಯಗಳು ಈ ಕೆಳಗಿನಂತಿವೆ.

P Punjab
A Afghania (North west places)
K Kashmir
I Iran
S Sindh
T Tokhranisthan
A Afghanistan
N Baluchistan (ಇಲ್ಲಿ ಆತ ಬಿ ಅಕ್ಷರವನ್ನು ತೆಗೆದುಕೊಳ್ಳಲಿಲ್ಲ ತೆಗೆದುಕೊಂಡಿದ್ದರೆ ಪಾಕೀಸ್ಟಾಬ್(PAK I STAB) ಎಂದಾಗಿರುತ್ತಿತ್ತು)

ಸಂಸ್ಕೃತ ಮತ್ತು ಅರಾಬಿಕ್ ಸಂಯೋಗದಿಂದ ಇದೊಂದು ಸುಂದರ ಹೆಸರಾಗಿಬಿಟ್ಟಿತು. ಅರೆಬಿಕ್ ಭಾಷೆಯಲ್ಲಿ ಪಾಕ್ ಎಂದರೆ ಪವಿತ್ರ ಎಂಬರ್ಥವಿದೆ. ಅಲ್ಲಿಗೆ ಇದು ಪವಿತ್ರ ದೇಶ ಎಂಬ ಅರ್ಥ ಪಡೆದುಕೊಂಡುಬಿಟ್ಟಿತು. (ಪಾಕ್ ಈ ಸ್ತಾನ್) ಮತ್ತು ಈ ಹೆಸರು ಮುಸ್ಲಿಂ ಲೀಗಿಗೆ ಬಹಳ ಇಷ್ಟವಾಯ್ತು. ಮೊದಲು ಮುಸ್ಲಿಂ ಲೀಗ್ ಕೇಳಿದ್ದ ಹೆಸರು ‘ಇಂಡಿಯಾ’ ಎಂದು, ಆದರೆ ಪಾಕೀಸ್ತಾನ ಹೆಸರು ಸೃಷ್ಟಿಯಾದಾಗ ಇಂಡಿಯಾ ಹೆಸರನ್ನು ಮರೆತು ಪಾಕೀಸ್ತಾನ್ ಹೆಸರನ್ನು ಗಟ್ಟಿಯಾಗಿ ಅಪ್ಪಿಕೊಂಡರು. ಮುಸ್ಲಿಂ ಲೀಗಿನ ನಾಯಕರಿಗೆ ಕಾಶ್ಮೀರ ಪಾಕಿಸ್ತಾನದ ಭಾಗವಾಗುವುದರಲ್ಲಿ ಯಾವುದೇ ಅನುಮಾನವಿರಲಿಲ್ಲ. ಕಾರಣ ಅಲ್ಲಿನ ಬಹುಸಂಖ್ಯಾತ ಮುಸ್ಲಿಮರು. ಮತ್ತೊಂದು ವಿಷಯವೆಂದರೆ ಮಹಮ್ಮದ್ ಆಲಿ ಜಿನ್ನಾ ಶ್ರೀನಗರದ ದಾಲ್ ನದಿಯಲ್ಲಿ ವಿಹರಿಸಲು ಹೌಸ್ ಬೋಟನ್ನು ಕೊಂಡುಕೊಂಡಿದ್ದ ಎಂದರೆ ಅವರಿಗಿದ್ದ ನಂಬಿಕೆಯನ್ನು ಕಾಣಬಹುದು. ಆದರೆ ಕಾಶ್ಮೀರವನ್ನು ಆಳುತ್ತಿದ್ದ ರಾಜ ಹರಿಸಿಂಗ್ ಕಾಶ್ಮೀರವನ್ನು ಸ್ವತಂತ್ರ್ಯವಾಗುಳಿಸಿಕೊಂಡ. ಆಗ ಪಾಕೀಸ್ತಾನ್ ಕಾಶ್ಮೀರದ ಮೇಲೆ ಒತ್ತಡವನ್ನು ಹಾಕಲಾರಂಭಿಸಿತು. ಹೇಗೆಂದರೆ ಕಾಶ್ಮೀರಕ್ಕೆ ಅಕ್ಕಿ ಗೋದಿ ಪೆಟ್ರೋಲ್ ಮತ್ತಿತರ ಅಗತ್ಯ ವಸ್ತುಗಳು ಸರಬರಾಜಾಗುತ್ತಿದ್ದದು ರಾವಲ್ಪಿಂಡಿ ಮತ್ತು ಸಿಯಾಲ್ ಕೋಟ್ ಗಳಿಂದ. ಹಾಗಾಗಿ ಪಾಕೀಸ್ತಾನ ಆ ವ್ಯವಸ್ಥೆಯನ್ನು ನಿಲ್ಲಿಸಿತು (ರಾವಲ್ಪಿಂಡಿ ಮತ್ತು ಸಿಯಾಲ್ ಕೋಟ್ ಗಳು ಪಾಕೀಸ್ಥಾನ ಪಾಲಾದ್ದರಿಂದ) ಮತ್ತು ಆರ್ಥಿಕ ದಿಗ್ಬಂಧನವನ್ನು ಹೇರಿತು. ಆಗ ಹರಿಸಿಂಗ್ ಭಾರತವನ್ನು ಅಗತ್ಯ ವಸ್ತುಗಳ ಪೂರೈಕೆಗೆ ಬೇಡಿಕೆ ಸಲ್ಲಿಸಿದ. ಆಗಿನ ನೆಹರು ಮತ್ತು ಮೌಂಟ್ ಬ್ಯಾಟನ್ ಸರಕಾರ್ ೫೦೦೦ ಗ್ಯಾಲನ್ ಡೀಸಲ್/ಪೆಟ್ರೋಲ್ ಮತ್ತು ನಿರ್ದಿಷ್ಟ ಅಳತೆಯ ಗೋಧಿಯನ್ನು ಮಾತ್ರ ಕೊಡಲಾಗುವುದೆಂದು ಹೇಳಿಬಿಟ್ಟಿತು. ಹೀಗೆ ಪಾಕೀಸ್ತಾನದ ಆರ್ಥಿಕ ದಿಗ್ಬಂಧನ ವಿಫಲವಾದಾಗ ಮೇಜರ್ ಜನರಲ್ ಅಕ್ಬರ್ ಖಾನನ ನೇತೃತ್ವದಲ್ಲಿ ಮಿಲಿಟರಿ ನಡೆಯನ್ನು ನಡೆಸಲಾಯ್ತು. (ಅಕ್ಬರ್ ಖಾನ್ ತನ್ನನ್ನು ಜನರಲ್ ಥಾರಿಖ್ ಎಂದು ಕರೆದುಕೊಳ್ಳುತ್ತಾನೆ, ಕಾರಣ ಸ್ಪೇನ್ ಅನ್ನು ವಶಪಡಿಸಿಕೊಂಡದ್ದು ಜನರಲ್ ಥಾರಿಖ್, ಅದೂ ತನ್ನ ಸೈನಿಕರ ದೋಣಿಗಳನ್ನು ಸುಟ್ಟು ಅವರಿಗೆ ಬೇರೆ ದಾರಿಯಿಲ್ಲದಂತೆ ಮಾಡಿ ಕಡೆಗೆ ಯುದ್ದ ಮಾಡಲೇಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿ. ಅದೇ ರೀತಿಯಲ್ಲಿ ತಾನೂ ಕಾಶ್ಮೀರವನ್ನು ವಶಪಡಿಸಿಕೊಳ್ಳುತ್ತೇನೆ ಎಂದು). ೨೨ ಅಕ್ಟೋಬರ್ ೧೯೪೭ ರ ರಾತ್ರಿ ೫,೦೦೦ ಪಠಾಣರ ತಂಡದೊಡನೆ ಜನರಲ್ ಥಾರಿಕ್ ಪಾಕೀಸ್ತಾನದ ಗಡಿಯನ್ನು ದಾಟಿ ಮುಜಾಫರಾಬಾದನ್ನು ಆಕ್ರಮಿಸಿಕೊಳ್ಳುತ್ತಾನೆ. ಮತ್ತು ಆತನ ಪುಸ್ತಕದಲ್ಲಿ (Raiders in Kashmir) ನಮೂದಿಸಿದ್ದಾನೆ.

ಪಾಕೀಸ್ತಾನದ ರಾಜಧಾನಿ ಕರಾಚಿಯಾದರೂ ಸೇನೆಯಿದ್ದದು ರಾವಲ್ಪಿಂಡಿಯಲ್ಲಿ. ಹಾಗಾಗಿ ಪಾಕೀಸ್ತಾನದ ಶಕ್ತಿ ಕೇಂದ್ರ ರಾವಲ್ಪಿಂಡಿ. ರಾವಲ್ಪಿಂಡಿಯಿಂದ ಭಾರತದ ಗಡಿ ಕೇವಲ ೮೦-೯೦ ಕಿಲೋಮೀಟರ್ ಗಳು. ಈ ಕಾರಣದಿಂದ ಪಾಕೀಸ್ತಾನದ ರಾಜಧಾನಿ ಅಪಾಯದಲ್ಲಿರುತ್ತದೆ. ಹಾಗಾಗಿ ಅಖ್ಬರ್ ಖಾನನ ಪ್ರಕಾರ ಭಾರತದ ಗಡಿಯನ್ನು ರಾವಲ್ಪಿಂಡಿಯಿಂದ ದೂರ ತಳ್ಳಬೇಕು ಮತ್ತು ಕರಾಚಿಯನ್ನು ಅಪಾಯದಿಂದ ದೂರವಿಡಬೇಕು. ಇಲ್ಲೊಂದು ಗಮ್ಮತ್ತಿನ ವಿಷಯವಿದೆ. ಬ್ರಿಟೀಷರ ಒಂದು ಸೇನೆ ಗಿಲ್ಗಿಟ್ ನಲ್ಲಿತ್ತು (ಇದನ್ನು ಗಿಲ್ಗಿಟ್ ಸ್ಕೌಟ್ಸ್ ಎಂದು ಕರೆಯಲಾಗುತ್ತಿತ್ತು) ೨೭ ಅಕ್ಟೋಬರ್ ೧೯೪೭ ನಲ್ಲಿ ಅಲೆಕ್ಸಾಂಡರ್ ಬ್ರೌನ್ ಆ ಪ್ರದೇಶದಲ್ಲಿ ಪಾಕೀಸ್ತಾನದ ಧ್ವಜವನ್ನು ಹಾರಿಸಿ ಅದನ್ನು ಪಾಕೀಸ್ತಾನಕ್ಕೆ ಸೇರಿಸಿದ.

ಇರಲಿ ಮುಂದೆ ಸಾಗೋಣ. ಮುಜಾಫರಾಬಾದಿನ ರಸ್ತೆಗಳಲ್ಲಿ ಮೇಜರ್ ಜನರಲ್ ಅಖ್ಬರ್ ಖಾನ್ ತನ್ನ ಸೇನೆಯನ್ನು ನಡೆಸತೊಡಗಿದ ಮತ್ತು ಒಂದು ಭಯಂಕರವಾದ ಸೂಚನೆಯನ್ನು ಕೊಟ್ಟ ಅದು ಹೀಗಿದೆ “ಶ್ರೀನಗದರವರೆಗೂ ಸೇನೆ ಎಲ್ಲೂ ನಿಲ್ಲುವ ಹಾಗಿಲ್ಲ ಮತ್ತು ಶ್ರೀನಗರದ ಮೇಲೆ ಪಾಕೀಸ್ತಾನದ ಧ್ವಜ ಹಾರಾಡಿದ ತಕ್ಷಣ ಅದು ಪಾಕೀಸ್ತಾನಕ್ಕೆ ಸೇರಿದ್ದು ಮತ್ತು ಅಲ್ಲಿನ ಸಂಪತ್ತು ಮತ್ತು ಹೆಣ್ಣುಗಳು ನಿಮ್ಮವು”. ಈ ಸೂಚನೆಯನ್ನು ಅನುಸರಿಸಿದ ಸೇನೆ ಇಪ್ಪತ್ನಾಲ್ಕರ ಸಂಜೆ ಬಾರಮುಲ್ಲ ತಲುಪಿತು ಮತ್ತು ಅತ್ಯಾಚಾರಕ್ಕೆ ಲೂಟಿಗೆ ಆರಂಭಿಸಿಬಿಟ್ಟಿತು. ಅಖ್ಬರ್ ಖಾನನ ನಿರ್ದೇಶನವನ್ನು ಮರೆತುಬಿಟ್ಟಿತು. ಅಲ್ಲಿನ ಚರ್ಚ್ ಗಳಲ್ಲಿದ್ದ ಯುರೋಪಿಯನ್ ನನ್ ಗಳನ್ನೂ ಬಿಡದೆ ಅತ್ಯಾಚಾರ ಮಾಡಲಾಯ್ತು. (ಸೇನೆ ಅಲ್ಲಿಗೆ ಬಂದಾಗ ಇದ್ದ ಜನಸಂಖ್ಯೆ ೪೫೦೦೦ ವಾದರೆ ಇದೆಲ್ಲ ಮುಗಿದು ಭಾರತೀಯ ಸೇನೆ ಬಾರಮುಲ್ಲವನ್ನು ವಿಮೋಚನೆ ಗೊಳಿಸಿದಾಗ ಇದ್ದ ಜನಸಂಖ್ಯೆ ೪೨೦೦ ಎಂದರೆ ಅಲ್ಲಿ ನಡೆದಿರಬಹುದಾದ ಹಿಂಸೆಯ ಪ್ರಮಾಣವನ್ನು ನೀವು ಅಂದಾಜಿಸಬಹುದು ). ಕಾಶ್ಮೀರದ ರಾಜ ಹರಿಸಿಂಗ್ ಸಹಾಯಕ್ಕಾಗಿ ಭಾರತದ ಪ್ರಧಾನಿ ಮತ್ತು ಉನ್ನತ ಅಧಿಕಾರಿಗಳ ಬಳಿ ಕೈ ಚಾಚಿದಾಗ ಸಿಕ್ಕ ಉತ್ತರ ‘ಕಾಶ್ಮೀರ ಭಾರತದ ಭಾಗವಲ್ಲವಾದ್ದರಿಂದ ಅಲ್ಲಿಗೆ ಸೇನೆಯನ್ನು ಕಳುಹಿಸಲಾಗದು’ ಎಂಬುದು. ಈ ಸೂಚನೆಯನ್ನು ವಿ ಪಿ ಮೆನನ್ ಹರಿಸಿಂಗನಿಗೆ ತಲುಪಿಸುತ್ತಾರೆ. ಕಾಶ್ಮೀರವನ್ನು ಉಳಿಸಿಕೊಳ್ಳುವ ಸಲುವಾಗಿ ಹರಿಸಿಂಗ್ instrument of accession ಗೆ ಸಹಿ ಹಾಕುತ್ತಾರೆ. ದಿನಾಂಕ ೨೬ ಅಕ್ಟೋಬರ್ ೧೯೪೭ ಹತ್ತೂವರೆ ಸಮಯಕ್ಕೆ ಕಾಶ್ಮೀರ ಅಧಿಕೃತವಾಗಿ ಭಾರತಕ್ಕೆ ಸೇರ್ಪಡೆಯಾಯ್ತು. ಕಾಶ್ಮೀರದ ಪ್ರಧಾನ ಮಂತ್ರಿ ಮೆಹರ್ಚಂದ್ ಮಹಾಜನ್ ನೆಹರೂರವರನ್ನು ಭೇಟಿ ಮಾಡಿ ಸೇನೆಯನ್ನು ತಕ್ಷಣ ಕಳುಹಿಸಿಕೊಡುವಂತೆ ವಿನಂತಿಸುತ್ತಾರೆ. ಆದರೆ ನೆಹರು ಅದನ್ನು ತಳ್ಳಿಹಾಕುತ್ತಾರೆ ಮತ್ತು ಸೇನೆ ಕಳುಹಿಸಲು ಸಾಧ್ಯವಿಲ್ಲ ಎನ್ನುತ್ತಾರೆ. ಕಡೆಗೆ ಮಹಾಜನ್ ರು ಸೇನೆ ಕಳುಹಿಸದಿದ್ದರೆ ಇಡಿ ಶ್ರೀನಗರ ಅವರ ವಶವಾಗಿಬಿಡುತ್ತದೆ ಮತ್ತು ಈಗಾಗಲೆ ಬಾರಮುಲ್ಲದಿಂದ ಹಿಂಸೆಯ ಸುದ್ದಿಗಳು ಬರುತ್ತಿವೆ ಎಂಬುದಾಗಿ ಪ್ರಾರ್ಥಿಸುತ್ತಾರೆ. ಇದಕ್ಕೆ ನೆಹರೂ ಉತ್ತರ “ವಶಪಡಿಸಿಕೊಳ್ಳಲಿ ಬಿಡಿ ನಾವು ಮತ್ತೆ ಅದನ್ನು ಗೆದ್ದು ಕೊಡುತ್ತೇವೆ” ಎಂದು.

ನೆಹರೂ ಮತ್ತೆ ಕಾಶ್ಮೀರವನ್ನು ಗೆಲ್ಲಬಹುದು ಆದರೆ ಯಾವ ಸ್ಥಿತಿಯಲ್ಲಿ? ಹಾಳಾದ, ಜೀರ್ಣವಾದ ಸ್ಥಿತಿಯಲ್ಲಿ. ಕಡೆಗೆ ಮೆಹರ್ಚಂದ್ ಮಹಾಜನ್ ಸೇನೆ ಬಾರದಿದ್ದರೆ ಮುಂದಿನ ವಿಮಾನದಲ್ಲಿ ಕರಾಚಿ ತಲುಪಿ ಪಾಕೀಸ್ತಾನವನ್ನು ಕೇಳುತ್ತೇನೆ ಮತ್ತು ನನ್ನ ಸುಂದರ ರಾಜಧಾನಿ ಶ್ರೀನಗರವನ್ನು ಉಳಿಸಿಕೊಳ್ಳುತ್ತೇನೆ ಎಂದಾಗ ನೆಹರೂ ಆತನ ಮೇಲೆ ಸಿಟ್ಟಿಗೆದ್ದು ‘ಗೆಟ್ ಔಟ್’ ಎಂದು ಕೂಗಾಡಿಬಿಡುತ್ತಾರೆ. ಇದೆಲ್ಲ ನಡೆಯುತ್ತಿರಬೇಕಾದರೆ ಶೇಕ್ ಅಬ್ದುಲ್ಲ ಅಲ್ಲೇ ಪಕ್ಕದ ಕೋಣೆಯಲ್ಲಿ ಕುಳಿರುತ್ತಾರೆ ಮತ್ತು ಇವೆಲ್ಲವನ್ನೂ ಕೇಳಿಸಿಕೊಳ್ಳುತ್ತಿರುತ್ತಾರೆ. ತಕ್ಷಣ ಶೇಕ್ ಅಬ್ದುಲ್ಲ ನೆಹರೂ ಗೆ ಚೀಟಿಯೊಂದನ್ನು ಕಳುಹಿಸಿ ‘ಸೇನೆಯನ್ನು ಕಳುಹಿಸಲು ನನ್ನದಾವ ತಕರಾರಿಲ್ಲ ಅವರ ಮಾತುಗಳಿವೆ ನನ್ನ ಸಹಮತವಿದೆ’ ಎನ್ನುತ್ತಾರೆ. ರಾಜಾ ಹರಿಸಿಂಗರ ಮಾತಿಗೆ ಬೆಲೆ ಕೊಡದ, ಅಲ್ಲಿನ ಪ್ರದಾನ ಮಂತ್ರಿಗೆ ಬೆಲೆ ಕೊಡದ ನೆಹರೂ ಶೇಕ್ ಅಬ್ದುಲ್ಲರ ಮಾತಿಗೆ ಬೆಲೆ ಕೊಡುತ್ತಾರೆ ಮತ್ತು ಸೇನೆಯನ್ನು ಕಳುಹಿಸಲು ಒಪ್ಪಿಕೊಳ್ಳುತ್ತಾರೆ. ಯುದ್ಧದ ರೂಪು ರೇಷೆಯನ್ನು ನಿರ್ಧರಿಸಿ ೨೭ ಅಕ್ಟೋಬರರ ಬೆಳಿಗ್ಗೆ ಭಾರತದ ಸೈನ್ಯ ವಿಮಾನಯಾನ ಆರಂಭಿಸಿತು. (ರಸ್ತೆಗಳಲ್ಲಿ ಹೊರಟಿದ್ದರೆ ಐದುದಿನಗಳು ಬೇಕಾಗಿದ್ದವು) ಶ್ರೀನಗರವನ್ನು ಕಾಪಾಡಿಕೊಂಡಿತು. ಇದರರ್ಥ ಬಾರಾಮುಲ್ಲ ಜನರ ಮಾನ ಪ್ರಾಣವನ್ನು ಕೊಟ್ಟು ಶ್ರೀನಗರವನ್ನು ಉಳಿಸಿಕೊಂಡೆವು ಎನ್ನುವುದು ನೋವಿನ ವಿಷಯವಾದರೂ ಸತ್ಯ.

ಇದಾದ ನಂತರ ೧ ಜನವರಿ ೧೯೪೮ ಈ ವಿಷಯವನ್ನು ನೆಹರೂ ಯು ಎನ್ ಓ ಮುಂದೆ ಪ್ರಸ್ತಾಪಿಸುತ್ತಾರೆ. ಸೋಜಿಗದ ಮತ್ತು ಅಚ್ಚರಿಯ ವಿಷಯವೆಂದರೆ ನೆಹರು ತಮ್ಮ ಪ್ರಸ್ತಾವನೆಯಲ್ಲಿ ಎಲ್ಲೂ ಪಾಕೀಸ್ತಾನದ ಆಕ್ರಮಣವನ್ನು ಹೇಳದೆ ಕಾಶ್ಮೀರದ ವಿಷಯವನ್ನು ವಿವಾದಿತ ಪ್ರದೇಶದ ಇತ್ಯರ್ಥ ಮಾಡಬೇಕೆಂದು ಹೇಳುತ್ತಾರೆ. ಅಲ್ಲಿಗೆ ಪಾಕೀಸ್ತಾನದ ಆಕ್ರಮಣ ಹೈ ಲೈಟ್ ಆಗಲೇ ಇಲ್ಲ. ಆಗಿದ್ದಿದ್ದರೆ ಯು ಎನ್ ಒ ದ ನಿರ್ಧಾರ ಮತ್ತು ನಡೆ ಬೇರೆಯಾಗುತ್ತಿತ್ತು. ಇದನ್ನು ಕೇಳಿದ ಪಾಕೀಸ್ತಾನ ಕಾಶ್ಮೀರವೊಂದೇ ಅಲ್ಲ ಜುನಾಗಡ್ ಮತ್ತು ಹೈದರಾಬಾದ್ ಕೂಡ ವಿವಾದಿತ ಪ್ರದೇಶಗಳು ಎಂದುಬಿಟ್ಟವು. ಯು ಎನ್ ಓ ಮೂರು ಅಂಶಗಳನ್ನು ಎರಡೂ ದೇಶಗಳ ಮುಂದೆ ಇಟ್ಟಿತು, ಮೊದಲನೆಯದು ಯುದ್ಧವಿರಾಮ, ಎರಡನೆಯದು ಪಾಕೀಸ್ತಾನ ಸೇನೆಯನ್ನು ಹಿಂತೆಗೆಯುವುದು. ಮೂರನೆಯದು ಜನಮತಗಣನೆ ನಡೆಯಬೇಕು ಎನ್ನುವುದು. (ನೆಹರೂವಿನ ಅಲಿಪ್ತ ನೀತಿಯಿಂದಾಗಿ ಯು ಎನ್ ಒ ದಲ್ಲಿದ್ದ ಪಶ್ಚಿಮ ರಾಷ್ಟ್ರಗಳು ಸಹಜವಾಗಿ ಪಾಕೀಸ್ತಾನದತ್ತ ಮುಖ ಮಾಡಿದವು) ಸೇನಾಯುದ್ದದಿಂದ ಸರಳವಾಗಿ ಪರಿಹಾರವಾಗಬಹುದಾಗಿದ್ದ ಸಮಸ್ಯೆಯನ್ನು ನಮ್ಮ ಶತ್ರು ದೇಶಗಳ(ಯು ಎನ್ ಓ) ಉಡಿಯಲ್ಲಿ ಹಾಕಿದ್ದು ಪಂಡಿತ್ ನೆಹರು. ಈಗ ನೋಡಿ ಯು ಎನ್ ಓ ದ ಮೂರು ನಿರ್ಣಯಗಳಲ್ಲಿ ಎರಡನೆಯ ನಿರ್ಣಯವಾದ ‘ಪಾಕೀಸ್ತಾನ ಸೇನೆಯನ್ನು ಹಿಂದೆಗೆಯುವುದು’ ನಡೆಯದೇ ಮೂರನೆಯ ನಿರ್ಣಯವನ್ನು ಪಾಸು ಮಾಡಲು ಕೇಳುತ್ತಿದ್ದಾರೆ. ಇದಕ್ಕಿಂತ ಮೂರ್ಖತನದ ಮಾತು ಬೇರಿಲ್ಲ.

ಕಾಶ್ಮೀರ ವಿಲೀನವಾದಾಗ ಮಾಡಿದ ಪತ್ರಗಳಲ್ಲಿ ಕೊನೆಯ ಸಾಲೊಂದನ್ನು ಭಾರತದ ಪ್ರಧಾನ ಕಾರ್ಯಾಲಯ ಉಲ್ಲೇಖ ಮಾಡುತ್ತದೆ ಮತ್ತದು ಹೀಗಿದೆ. ಕಾಶ್ಮೀರದಲ್ಲಿ ಎಲ್ಲವೂ ಶಾಂತವಾದಾಗ ಅಲ್ಲಿನ ಜನಮತಕ್ಕನುಗುಣವಾಗಿ ನಡೆಯತಕ್ಕದ್ದು’. ಇದು ಬರೀ ಹಾಳೆಯಲ್ಲಿ ಮಾತ್ರವೇ ಇತ್ತು, ಆದರೆ ನಮ್ಮ ಪಂಡಿತರು ಇದೇ ಮಾತನ್ನು ಪುನರುಚ್ಚರಿಸಿದ್ದು ೪ ನವೆಂಬರ್ ೧೯೪೭ ರಲ್ಲಿ ಆಲ್ ಇಂಡಿಯ ರೇಡಿಯೋ ದ ಭಾಷಣದಲ್ಲಿ. ಹೀಗಾಗಿ ಯು ಎನ್ ಓ ಪಂಡಿತರ ಮಾತನ್ನೇ ಮತ್ತೆ ಮತ್ತೆ ಉಲ್ಲೇಖಿಸಿತು. ಕಡೆಗೂ ವಿವಾದಿತವಾಗಿಯೇ ಉಳಿದದ್ದು ದುರಂತವೇ ಸರಿ. ಇದಾದ ನಂತರ ಅಯೂಬ್ ಖಾನನ ಸಂಯುಕ್ತ ರಕ್ಷಣಾ ವ್ಯವಸ್ಥೆಯ ಪ್ರಸ್ಥಾವನೆಯನ್ನು ನೆಹರೂ ತಿರಸ್ಕರಿಸದೇ ಇದ್ದಿದ್ದರೆ ಇಂದು ಚೀನ ಬಹು ದೊಡ್ಡ ತಲೆ ನೋವಾಗುತ್ತಿರಲಿಲ್ಲ. ಒಂದು ಸಂಗತಿಯನ್ನು ಉಲ್ಲೇಖಿಸದೇ ಮುಂದೆ ಸಾಗುವಂತಿಲ್ಲ. ಬಾರಮುಲ್ಲದ ಜನತೆಯನ್ನು ಅಂದಿನ ಕಾಲದಲ್ಲಿ ಯಾರದರೂ ‘ನಿಮ್ಮನ್ನು ಯಾರು ಆಳಬೇಕು’ ಎಂದು ಕೇಳಿದರೆ ಅವರ ಒಕ್ಕೊರಲಿನ ಉತ್ತರ ‘ಜನರಲ್ ತಿಮ್ಮಯ್ಯ’ ಎಂಬುದಾಗಿತ್ತು.

ಇಂಡಸ್ ಝೀಲಮ್ ಚೀನಾಬ್ ನದಿಗಳಿಗಾಗಿ ಪಾಕೀಸ್ತಾನಕ್ಕೆ ಕಾಶ್ಮೀರ ಬೇಕಾಗಿತ್ತು ವಿನಃ ಮುಸ್ಲಿಮರಿಗಾಗಿಯಲ್ಲ. ಅವರಿಗಿದ್ದದ್ದು ಆರ್ಥಿಕ ಹಿತಾಸಕ್ತಿಯೇ ಹೊರತು ಬೇರೇನಲ್ಲ. ಹಾಗಿದ್ದಿದ್ದರೆ ಮಹಮ್ಮದ್ ಆಲಿ ಜಿನ್ನ ಪೂರ್ವ ಪಾಕೀಸ್ತಾನವನ್ನು ಬಿಟ್ಟು ಕಾಶ್ಮೀರವನ್ನು ಕೇಳುತ್ತಿರಲಿಲ್ಲ. ಪೂರ್ವ ಪಾಕೀಸ್ತಾನ ಬಹುಸಂಖ್ಯಾತ ಮುಸ್ಲಿಮರ ಪ್ರದೇಶವಾಗಿದ್ದರೂ ಅದನ್ನು ಭಾರತಕ್ಕೆ ಕೊಟ್ಟು ಕಾಶ್ಮೀರವನ್ನು ಪಡೆಯುವ ಮಾತನ್ನು ಆಡಿದ್ದರು ಎಂದರೆ ಊಹಿಸಬಹುದು ಅವರ ಅಸ್ಥೆ ಎಲ್ಲಿದೆ ಎಂದು.

ಕಾಶ್ಮೀರ ಅವರಿಗೇಕೆ ಬೇಕಿತ್ತು ಎನ್ನುವುದನ್ನು ಹೇಳಿದ್ದೇವೆ, ಮೊದಲನೆಯದಾಗಿ ಭಾರತದ ಗಡಿಯನ್ನು ದೂರ ತಳ್ಳಿ ಕರಾಚಿಯನ್ನು ಉಳಿಸಿಕೊಳ್ಳುವುದು ಮತ್ತು ರಾವಲ್ಪಿಂಡಿಯನ್ನು ಅಪಾಯದಿಂದ ಕಾಪಾಡಲು. ಎರಡನೆಯದಾಗಿ ಜಮ್ಮು ಲದಾಕ್ ನಲ್ಲಿನ ನದಿಗಳಿಗಾಗಿ (ಆರ್ಥಿಕ ಹಿತಾಸಕ್ತಿ)

ಮುಂದಿನ ಹಂತದಲ್ಲಿ ಕಾಶ್ಮೀರ ಪಾಕಿಸ್ತಾನಕ್ಕೆ ಬೇಕೇ ಬೇಡವೇ?…

ಸ್ವಲ್ಪ ಇತಿಹಾಸವನ್ನು ಅವಲೋಕಿಸಿ ಪಾಕಿಸ್ತಾನಕ್ಕೆ ಕಾಶ್ಮೀರ ಬೇಕೇ ಬೇಡವೇಯತ್ತ ಹೊರಳೋಣ. ಜನರಲ್ ಇಸ್ಕಂದರ್ ಮಿರ್ಜ ೧೯೫೬ ರಲ್ಲಿ ಮುಸ್ಲಿಂ ಕಾಶ್ಮೀರವನ್ನು ಪಡೆಯಲು ಪ್ರಯತ್ನಿಸಿದ ಮೊದಲ ಜನರಲ್, ಸತ್ಯವೇನೆಂದರೆ ಈ ಬಗ್ಗೆ ನೆಹರೂ ಮತ್ತು ಇಸ್ಕಂದರ್ ಮಿರ್ಜಾಗೂ ಒಪ್ಪಂದದ ತನಕ ಎಲ್ಲವೂ ನಡೆದಿದ್ದವು. ಅದರ ಪ್ರಕಾರ ಗುಲಾಲ್ ಸರೋವರ್ ಮತ್ತು ಶ್ರೀನಗರದ ಮಧ್ಯೆ ಗಡಿಯಾಗಬೇಕು, ಶ್ರೀನಗರ ಭಾರತದಲ್ಲಿರಬೇಕು, ಮುಸ್ಲಿಂ ಕಾಶ್ಮೀರ ಪಾಕೀಸ್ತಾನಕ್ಕೆ ಸೇರಬೇಕು ಎನ್ನುವುದು. ಆದರೆ ಸೈನಿಕ ಕ್ರಾಂತಿಯಾಗಿ ಮಿರ್ಜಾರನ್ನು ಲಂಡನ್ನಿಗೆ ಓಡಿಸಲಾಯ್ತು. ಇಡೀ ಜೀವನವನ್ನೇ ಭಾರತದ ದ್ವೇಶಕ್ಕಾಗಿ ಸವೆಸಿದ ಜಿಯಾ ಉಲ್ ಹಕ್ ಗೆ ಅರ್ಥವಾದ ವಿಷಯವೆಂದರೆ ಜಮ್ಮು ಕಾಶ್ಮೀರದ ವಶ ನಡೆಯಲಾರದ್ದು ಎಂದು. ಆಗ ಸಂಧಿಗೆ ಬಂದ. ರಾಜೀವ್ ಗಾಂಧಿ ಮತ್ತು ಜಿಯ ಉಲ್ ಹಕ್ ನಡುವೆ ಗುಪ್ತ ಮಾತುಕತೆಗಳಾದವು. ಆದರೆ ಇದು ಸಹಿಯಾಗುವ ಮೊದಲೇ ಜಿಯಾ ಉಲ್ ಹಕ್ ವಿಮಾನಾಪಘಾತದಲ್ಲಿ ಸಾವನಪ್ಪಿದ. ಅದು ಕೊಲೆಯೆಂದೂ ಹೇಳುತ್ತಾರೆ. ಅಲ್ಲಿಗೆ ಕಾಶ್ಮೀರ ಸಮಸ್ಯೆ ಉಳಿದುಹೋಯ್ತು. ಮತ್ತು ಜಿಯಾ ಉಲ್ ಹಕ್ ನ ಕೊಲೆ ರಹಸ್ಯವಾಗೇ ಉಳಿದುಹೋಯ್ತು. ಕೊಲೆಯ ಹಿಂದೆ ಯಾರಿದ್ದರು ಮತ್ತು ಯಾಕಾಗಿ ಕೊಲೆ ಇವೆಲ್ಲಕ್ಕೂ ಉತ್ತರವೇ ಇಲ್ಲದಂತಾಯ್ತು. ಕಾಶ್ಮೀರ ಸಮಸ್ಯೆ ಬರಿ ಹಿಂದು ಮುಸ್ಲಿಂ ಸಮಸ್ಯೆಯೇ? ಅಥವಾ ದೇಶ ದೇಶಗಳ ಸಮಸ್ಯೆಯೇ ಅಥವಾ ಗಡಿಗಾಗಿ ಹೋರಾಟವೇ? ಇವೆಲ್ಲಕ್ಕೂ ಹೌದೆಂಬ ಉತ್ತರದ ಜೊತೆ ಮತ್ತೊಂದು ಅಚ್ಚರಿಯಿದೆ. ಈ ಸಮಸ್ಯೆಯ ಹಿಂದೆ ಇವಿಷ್ಟೇ ಅಲ್ಲ ಮತ್ತೊಂದು ಕಾಣದ ಕೈ ನ ಕೆಲಸವಿದೆ! ಅದಾವುದು? ಒಂದು ವಿಚಿತ್ರವಾದ ವಿಷಯವನ್ನ ತಿಳಿದುಕೊಳ್ಳೋಣ ನಂತರ ಅದಕ್ಕೆ ಕಾಶ್ಮೀರದ ವಿಷಯವನ್ನು ಜೋಡಿಸೋಣ. (ಕನೆಕ್ಟಿಂಗ್ ಡಾಟ್ಸ್).

ಬೈಬಲ್ ನಲ್ಲಿ ಕ್ರಿಸ್ತನ ೧೩ ವಯಸ್ಸಿನಿಂದ ೨೫ ವಯಸ್ಸಿನವರೆಗಿನ ಯಾವ ವಿಷಯಗಳೂ ಇಲ್ಲ. ಆದರೆ ಲಡಾಕಿನ ಬುದ್ದದೇಗುಲದಲ್ಲಿನ ಕಡತಗಳಲ್ಲಿ ಒಂದು ಉಲ್ಲೇಖವಿದೆ. ಅದರ ಪ್ರಕಾರ ಪಶ್ಮಿಮ ಏಷಿಯಾದಿಂದ ಒಬ್ಬ ಸೆಮೆಟಿಕ್ ವ್ಯಕ್ತಿ ಬಂದಿದ್ದ ಮತ್ತು ಹದಿನೈದು ವರ್ಷಗಳು ನಮ್ಮೊಂದಿಗಿದ್ದು ತನ್ನ ದೇಶಕ್ಕೆ ಮರಳಿದ. ನಂತರ ನಾಲ್ಕೈದು ವರ್ಷಗಳಾದ ಮೇಲೆ ಆತ ಮತ್ತೆ ಬಂದ. ಆಗ ಆತನ ಕೈಗಳಲ್ಲಿ ಮತ್ತು ಹಣೆಯ ಮೇಲೆ ಗಾಯದ ಗುರುತುಗಳಿದ್ದವು . ಆತ ಇಲ್ಲೇ ಉಳಿದು ಸ್ಥಳೀಯ ಹುಡುಗಿಯನ್ನು ಮದುವೆಯಗಿ ಮಕ್ಕಳನ್ನೂ ಪಡೆದ ಮತ್ತು ಇಲ್ಲೇ ಅವಸಾನ ಹೊಂದಿದೆ. (ಇದು ಜೀಸಸ್ ಇರಬಹುದೇ ಎನ್ನುದುವುದು ಊಹೆಗೆ ಬಿಟ್ಟ ವಿಷಯ). ಕ್ರಾಸ್ ನಲ್ಲಿ ನೇತು ಹಾಕಿದ ತಕ್ಷಣ ಸಾಯುವುದಿಲ್ಲ ರಕ್ತ ಹೆಪ್ಪುಗಟ್ಟಿರುತ್ತದೆಯಷ್ಟೆ. ಮತ್ತು ರಕ್ತನಾಳಗಳಿಗೆ ಪೆಟ್ಟಾಗಿರುವುದಿಲ್ಲ. ಹಾಗಾಗಿ ಆತ ಉಳಿದಿರುವ ಸಾಧ್ಯತೆ ಹೆಚ್ಚು. ಶ್ರೀನಗರದಲ್ಲಿ ಡೌನ್ ಟೌನ್ ಎಂಬ ಪ್ರದೇಶವಿದೆ ಅಲ್ಲಿ ಎಲ್ಲ ಸಮಾಧಿಗಳೂ ಪೂರ್ವ ಪಶ್ಚಿಮಕ್ಕೆ ಇದ್ದರೆ ಒಂದು ಸಮಾಧಿ ಮಾತ್ರ ಉತ್ತರ ದಕ್ಷಿಣಕ್ಕಿದೆ (ಜ್ಯುವಿಷ್ ಸಮಾಧಿಗಳ ಹಾಗೆ). ೧೯೮೪ ಅಕ್ಟೋಬರ್ ಇಪ್ಪತ್ಮೂರರಂದು ಆ ಸಮಾಧಿಯನ್ನು ತೆಗೆದು ಪರೀಕ್ಷೆ ಮಾಡಬೇಕೆಂದು ನಿರ್ಧರಿಸಲಾಯ್ತು ಆದರೆ ಪರೀಕ್ಷಿಸುವ ಹಿಂದಿನ ದಿನ ಶ್ರೀನಗರದಲ್ಲಿ ಗಲಭೆ ಆರಂಭವಾಯ್ತು. ಅಲ್ಲಿಗೆ ಆ ಸಮಾಧಿಯ ಬಗ್ಗೆ ಪರೀಕ್ಷಿಸುವುದು ಯಾರಿಗೋ ಬೇಡವಾಗಿದೆ. ಅದಾದ ಕೆಲವೇ ದಿನಗಳಲ್ಲಿ (ಅಕ್ಟೋಬರ್ ೩೧ ೧೯೮೪) ಇಂದಿರಾ ಗಾಂಧಿಯವರ ಹತ್ಯೆಯಾಗುತ್ತದೆ. ಜೀಸಸ್, ಸಮಾಧಿ ಮತ್ತು ಸತ್ಯ ಶೋಧನೆಯನ್ನು ಜನ ಮರೆತುಬಿಟ್ಟರು. ಅಲ್ಲಿಗೆ ಕಾಶ್ಮೀರ ಸಮಸ್ಯೆ ಬರಿಯ ಹಿಂದು ಮುಸ್ಲಿಂ, ಭಾರತ ಪಾಕ್ ಇಷ್ಟೇ ಇಲ್ಲ ಇನ್ನೂ ಒಂದು ಕೈ ಅದನ್ನು ಜೀವಂತವಾಗಿಡಲು ಕಾರ್ಯ ನಿರ್ವಹಿಸುತ್ತಿದೆ. ಅದು ವ್ಯಾಟಿಕನ್ ಇರಬಹುದಾ? ಅದರ ಸಂಬಂಧಿ ಇರಬಹುದಾ? ಗೊತ್ತಿಲ್ಲ.

ಕಾಶ್ಮೀರ ಪಾಕೀಸ್ತಾನಕ್ಕೆ ನಿಜವಾಗಲೂ ಬೇಕಿದ್ದರೆ ಅದು ಪ್ರತ್ಯೇಕತಾ ವಾದಿಗಳ ಮೂಲಕ ಮಕ್ಕಳನ್ನು ಮುಂದಿಟ್ಟುಕೊಂಡು ಹೋರಾಡಬೇಕಿರಲಿಲ್ಲ. ಪಾಕ್ ಗೆ ಬೇಕಿರುವುದು ಭಾರತಕ್ಕೆ ಗಾಯ ಮಾಡುವುದಷ್ಟೆ. ಅಲ್ಲಿನ ಪ್ರತ್ಯೇಕತಾವಾದಿಗಳಿಗೆ ಮಿಲಿಟರಿ ಮತ್ತು ಭಾರತದ ವಿರುದ್ದ ಘೋಷಣೆ ಕೂಗುವುದು ಜೀವನೋಪಾಯವಷ್ಟೆ. ಅವರಿಗೆ ಕಾಶ್ಮೀರ ಸ್ವತಂತ್ರ್ಯವಾಗುವುದು ಬೇಕಿಲ್ಲ. ಹಾಗಾಗಿ ಅವರು ಪಾಕೀಸ್ತಾನಕ್ಕೆ ಬೆಂಬಲ ಸೂಚಿಸುತ್ತಾ ಅವರಿಂದ ಕಾಣಿಕೆಗಳನ್ನು ತೆಗೆದುಕೊಳ್ಳುತ್ತಾ ಬದುಕುತ್ತಿದ್ದಾರೆ. ಗಿಲಾನಿಗೆ ಪಾಕೀಸ್ತಾನದಿಂದ ೧.೫ ಕೋಟಿಯಷ್ಟು ಮೌಲ್ಯದ ವಾಚ್ ಸಿಕ್ಕಿದೆ ಎಂದರೆ ಅವರ ಹೋರಾಟ ತೀವ್ರತೆ(?)ಯನ್ನು ಅರ್ಥೈಸಿಕೊಳ್ಳಬಹುದು. ಅಮಾಯಕ ಮಕ್ಕಳ ಕೈಲಿ ಕಲ್ಲನ್ನು ಕೊಟ್ಟು ತಾವು ಕಾಶ್ಮೀರದ ಸ್ವತಂತ್ರ್ಯಕ್ಕಾಗಿ ಹೋರಾಡುತ್ತಿದ್ದೇವೆ ಎಂದು ಹೇಳುವ ಪ್ರತ್ಯೇಕತಾವಾದಿಗಳ ಮಕ್ಕಳು ಎಲ್ಲಿದ್ದಾರೆಂದು ನೋಡೋಣ.. ಗಿಲಾನಿಯ ಮೊದಲನೆಯ ಮಗ ನಯೀಮ್ ರಾವಲ್ಪಿಂಡಿಯಲ್ಲಿ ವೈದ್ಯ. ಎರಡನೆಯ ಮಗ ದೆಹಲಿಯ ಮಾಲವೀಯ ನಗರದಲ್ಲಿದ್ದಾನೆ. ಮಗಳು ಜೆಡ್ಡಾದಲ್ಲಿ ಶಿಕ್ಷಕಿಯಗಿದ್ದಾಳೆ ಹಾಗು ಅಳಿಯ ಇಂಜಿನಿಯರ್. ಅಂದ್ರಾನಿ ತನ್ನ ಮಗನನ್ನ ಮಲೇಶಿಯದಲ್ಲಿ ಐಟಿ ವಿದ್ಯಾಭ್ಯಾಸ ಕೊಡಿಸುತ್ತಿದ್ದಾನೆ. ಈಗ ಹೇಳಿ ಇವರ ಪ್ರತ್ಯೇಕತವಾದದ ದಾಳಗಳು ಯಾರು. ಈ ಕಲ್ಲೆಸೆಯುವ ಕಾರ್ಯಕ್ರಮವು ಐದರಿಂದ ಆರು ಕೋಟಿಯ ವ್ಯವಹಾರ ಮತ್ತು ಅದು ಸಂದಾಯವಾಗುವುದು ಪ್ರತ್ಯೇಕತಾವಾದಿಗಳ ಜೇಬಿಗೆ. ಇಷ್ಟಕ್ಕೂ ಸೇನೆ ಇರುವುದಾದರೂ ಏಕೆ ಎಂಬ ಪ್ರಶ್ನೆಗೆ ಉತ್ತರ ಅಲ್ಲಿನ ಹಿಂಸಾಚಾರ, ಶಾಂತವಾಗಿದ್ದರೆ ಸೇನೆಯ ಅವಶ್ಯಕತೆಯಿರುವುದಿಲ್ಲ (ಮಿಜೋರಾಮ್ ನಲ್ಲಾದಂತೆ). ಒಂದು ವೇಳೆ ಸೇನೆ ಹಿಂತೆಗೆದುಗೊಂಡು ಕಾಶ್ಮೀರ ಕಣಿವೆಯನ್ನು ಮುಕ್ತಿಗೊಳಿಸಿದರೆ ಪಾಕೀಸ್ತಾನ ಕಣಿವೆಯನ್ನು ಮುಕ್ತವಾಗಿಸುತ್ತದೆಯೇ ಎಂದರೆ ಇಲ್ಲ. ಅದೇ ಕಾಶ್ಮೀರ ಕಣಿವೆಯಲ್ಲಿ ಪಾಕೀಸ್ತಾನ ತನ್ನ ಸೇನೆಯನ್ನು ನಿಯಮಿಸುತ್ತದೆ. ಇದರಿಂದ ಚೀನ ಮತ್ತಷ್ಟು ಪಾಕ್ ಗೆ ಹತ್ತಿರವಾಗುತ್ತದೆ ಇದು ನಮ್ಮ ಭದ್ರತೆಗೆ ದೊಡ್ಡ ಅಪಾಯ. ಒಂದು ವೇಳೆ ಮುಸ್ಲಿಂ ಸಂಖ್ಯೆಯನ್ನು ಆಧರಿಸಿ ಕಣಿವೆಯನ್ನು ಮುಕ್ತವಾಗಿಸಿದರೆ, ಮಿಕ್ಕ ಧರ್ಮೀಯರು ಸುಮ್ಮನಿರುತ್ತಾರ? (ಪಂಜಾಬ್ ನಾಗಾಲ್ಯಾಂಡ್ ಉದಾಹರಣೆಗಳಿವೆ)

ಹಿಂದೂಗಳ ಹಾಗೆ ಎಲ್ಲ ಧರ್ಮದವನ್ನು ಸೇರಿಸಿಕೊಂಡು ಬದುಕುವುದು ಕಷ್ಟ, ಜೀಸಸ್ ನ ಶಿಶ್ಯ ಸೇಂಟ್ ಥಾಮಸ್ ಕೋರಮಂಡಲದಲ್ಲಿ ಕ್ರಿಷ್ಚಿಯಾನಿಟಿಯನ್ನು ಒಂದನೆ ಶತಮಾನ್ದಲ್ಲಿಯೇ ಬೋಧಿಸಿದ. ಸಂತ ಮೊಹಮ್ದ್ ಬದುಕಿದ್ದ ಕಾಲದಲ್ಲೇ ೬೨೮ ರಲ್ಲಿಯೇ ಕೇರಳದ ಕೋಡಂಗಲ್ಲೂರ್ ನಲ್ಲಿ ಅರಬ್ ವರ್ತಕರು ಮಸೀದಿಯನ್ನು ಸ್ಥಾಪಿಸಿದರು. ಅದೇ ಇತರೆ ಧರ್ಮದವರು ಬಹುಸಂಖ್ಯಾತರಾದ ಕೂಡಲೆ ಹಿಂದೂ ಗಳ ಜೊತೆ ರಾಜಕೀಯ ಸ್ಥಾನವನ್ನು ಹಂಚಿಕೊಳ್ಳಲು ಇಷ್ಟಪಡರು. ಅಲ್ಲಿಗೆ ಹಿಂದೂಗಳಿಗೆ ಇರುವಷ್ಟು ಹೃದಯ ವೈಶಾಲ್ಯ ಮತ್ಯಾವ ಮತದವರಿಗೂ ಇಲ್ಲ. ೨೧ ಅಕ್ತೋಬರ್ ೨೦೧೫ ದೆಹಲಿಯಲ್ಲಿ ನಡೆದ ಅಜಾದಿ ದ್ ಓನ್ಲಿ ವೇ ಎಂಬ ಸಮಾವೇಶದಲ್ಲಿ ಗಿಲಾನಿ ಮತ್ತಿತರು ಹೇಳಿದ ಮಾತುಗಳನ್ನು ಗಮನಿಸಿ. “ಮುಸ್ಲಿಮನಿಗೆ ಇತರ ಧರ್ಮೀಯನ ಆಡಳಿತದಲ್ಲಿ ಬದುಕುವುದು ಎಂದರೆ ಮೀನಿಗೆ ನೀರಿನಿಂದ ಹೊರಬಂದಷ್ಟೆ ಕಷ್ಟ’ ಇದರರ್ಥ ರಾಜಕೀಯವಾಗಿ ಇತರ ಧರ್ಮದವರ ಜೊತೆ ಸಹಬಾಳ್ವೆ ಅವರಿಗೆ ಅಸಾಧ್ಯ. ಮತ್ತೂ ಮುಂದುವರೆದು ಒಂದು ವೇಳೆ ಕಾಶ್ಮೀರ ಸ್ವತಂತ್ರ್ಯವಾದರೆ, ಅಲ್ಲಿನ(ಕಾಶ್ಮೀರದಲ್ಲಿನ) ಅಲ್ಪಸಂಖ್ಯಾತರಿಗೆ ನಾವು ಸ್ವತಂತ್ರ್ಯವನ್ನು ಕೊಡುತ್ತೇವೆ, ಅದು ಯಾವ ಬಗೆಯದು ಎಂದರೆ ಪಾನ ನಿಷೇಧ ಎಲ್ಲರಿಗೂ ಇರುತ್ತದೆ ಆದರೆ ಅಲ್ಪಸಂಖ್ಯಾತರಿಗೆ ಇರುವುದಿಲ್ಲ. ಒಂದು ವೇಳೆ ಹಿಂದೂ ಒಬ್ಬನ ಕೈಯಲ್ಲಿನ ಹೆಂಡದ ಬಾಟಲಿಯನ್ನು ಮುಸ್ಲಿಮನೊಬ್ಬ ಒಡೆದು ಹಾಕಿದರೆ ಅದಕ್ಕೆ ಪರಿಹಾರ ಕೊಡಬೇಕಾಗುತ್ತದೆ”. ವಿಚಿತ್ರ ಎಂದರೆ ಜೀವಿಸುವುದಕ್ಕೇ ಅಲ್ಲಿ ಹಕ್ಕಿಲ್ಲದೆ ಇರುವಂಥ ಸ್ಥಿತಿ ಹಿಂದೂಗಳಿಗೆ ಇದೆ ಅಂಥಹುದರಲ್ಲಿ ಪಾನನಿರೋಧ ಸ್ವತಂತ್ರ್ಯ ಎನ್ನುವುದು ಮೂರ್ಖತನ. ಅಲ್ಲಿನ ಹಿಂದೂಗಳನ್ನು ಜಮ್ಮುವಿಗೆ ಅಟ್ಟಿಯಾಗಿದೆ. ಇನ್ಯಾರಿಗೆ ಈ ಸ್ವಾತಂತ್ರ್ಯ?.

4 ಟಿಪ್ಪಣಿಗಳು Post a comment
  1. vasu
    ಆಗಸ್ಟ್ 31 2016

    ಕಶ್ಯಪ ಮುನಿಯ ಕ್ಷೇತ್ರವಾದ ಕಾಶ್ಮೀರ ಎಂದು ಮುಸ್ಲಿಂ ಬಾಹುಳ್ಯವಾಯಿತೋ ಅಂದಿನಿಂದಲೇ ಅದು ಭಾರತದ ವಿರೋಧಿ ನೀತಿಯನ್ನು ಅನುಸರಿಸಲು ಪ್ರಾರಂಭಿಸಿತು. ಮತಾಂತರ ರಾಷ್ಟ್ರಾಂತರ ಎಂಬುದು ಒಂದು ಐತಿಹಾಸಿಕ ಸತ್ಯ. ಬೌದ್ಧ ಮತವನ್ನು ಅಪ್ಪಿಕೊಂಡ ಬರ್ಮಾ, ಶ್ರೀಲಂಕಾ ಭಾರತದಿಂದ ದೂರವಾಯಿತು. ಗಾಂಧಾರ ದೇಶವಾದ ಇಂದಿನ ಅಪಘಾನಿಸ್ತಾನ್ ಎಂದು ಇಸ್ಲಾಂ ನ್ನು ಸ್ವೀಕರಿಸಿತೋ ಅಂದೇ ಅದು ಭಾರತದಿಂದ ದೂರವಾಯಿತು. ಇಂದಿನ ಪಾಕೀಸ್ಥಾನವೂ ಅಷ್ಟೇ. ಈ ಹಿನ್ನೆಲೆಯಲ್ಲಿ ರಾಜಾ ಹರಿಸಿಂಗ್ ಅವರ ತಂದೆ ಒಮ್ಮೆ ಆರ್ಯಸಮಾಜದ ಸಂಸ್ಥಾಪಕರಾದ ಸ್ವಾಮಿ ದಯಾನಂದರನ್ನು ತಮ್ಮ ಪ್ರಜೆಗಳನ್ನು ಮತ್ತೊಮ್ಮೆ ಸನಾತನ ಧರ್ಮಕ್ಕೆ ವಾಪಸು ತರುವಂತೆ ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿದ. ಸ್ವಾಮಿ ದಯಾನಂದರೂ ಒಪ್ಪಿದರು. ಆದರೆ ದಯಾನಂದರ ಅಕಾಲಿಕ ಮರಣದಿಂದ ಈ ಐತಿಹಾಸಿಕ ಘಟನೆ ಸಂಭವಿಸಲಿಲ್ಲ. ಕಾಶ್ಮೀರದ ಪಂಡಿತರೂ ಇಂದಿನ ಮುಸ್ಲಿಂ ಬಾಹುಳ್ಯತೆ ಒಂದು ರೀತಿಯಲ್ಲಿ ಕಾರಣ ಕರ್ತರು. ತಮ್ಮ ಮುಸ್ಲಿಂ ಪ್ರಜೆಗಳನ್ನು ಸನಾತನ ಧರ್ಮಕ್ಕೆ ವಾಪಸು ತರುವ ಪ್ರಯತ್ನ ಮಾಡಿದಾಗಲೆಲ್ಲಾ ಈ ಪಂಡಿತರು ಇದೇ ಘಟಿಸಿದ್ದೇ ಆದಲ್ಲಿ ತಾವೆಲ್ಲರೂ ಪ್ರಾಣ ಹತ್ಯೆ ಮಾಡಿಕೊಳ್ಳುವ ಬೆದರಿಕೆಯನ್ನು ಒಡ್ಡುತ್ತಿದ್ದರು. ಬ್ರಾಹ್ಮಣರ ಹತ್ಯೆಯ ಶಾಪಕ್ಕೆ ಗುರಿಯಾಗಲು ಅಲ್ಲಿನ ರಾಜನು ಸಹ ಹಿಂಜರಿಯುತ್ತಿದ್ದ. ಹೀಗಾಗಿ ಕಾಶ್ಮೀರ ಮತ್ತೊಮ್ಮೆ ಹಿಂದೂ ತೆಕ್ಕೆಗೆ ಬರಲು ಸಾಧ್ಯವಾಗಲಿಲ್ಲ.

    ಈಗ ಕಾಶ್ಮೀರದಲ್ಲಿ ಪ್ರತ್ಯೇಕತಾ ಚಳುವಳಿಯ ನೇತಾರರೆಲ್ಲಾ ಒಂದು ಕಾಲದಲ್ಲಿ ಕಾಶ್ಮೀರಿ ಪಂಡಿತರಾಗಿದ್ದವರೇ. ಶೇಖ್ ಅಬ್ದುಲ್ಲಾ ಅವರ ಮೂರನೇಯ ಹಿಂದಿನ ತಲೆಮಾರಿನವರು ಕಾಶ್ಮೀರದ ಪಂಡಿತರಾಗಿದ್ದರು. ಹುರಿಯತ್ ನಾಯಕ ಗನಿ, ಈಗ ಸೈನಿಕರ ಹತ್ಯೆಗೆ ಒಳಗಾದ ಬನಿ, ಧರ್, ಭಟ್ ಮುಂತಾದ ಹೆಸರುಗಳನ್ನು ಹೊತ್ತಿರುವ ಪ್ರತ್ಯೇಕತಾ ಮುಸ್ಲಿಂ ನಾಯಕರೆಲ್ಲರ ಪೂರ್ವಿಕರೆಲ್ಲರೂ ಕಾಶ್ಮೀರ ಪಂಡಿತರಾಗಿದ್ದವರೇ. ಅವರು ಇಸ್ಲಾಂ ಮತ ಸೇರಿದ ಮೇಲೆ ಕಾಶ್ಮೀರದ ಸಮಸ್ಯೆ ಉಂಟಾಗಿದೆ. ಪಾಕೀಸ್ಥಾನದ ಜನಕ ಮೊಹಮದ ಇಕ್ಬಾಲ್ ಸಹ ಕಾಶ್ಮೀರೀ ಪಂಡಿತ ಮನೆತನಕ್ಕೆ ಸೇರಿದವನೇ
    ಸರಿ, ಇದೆಲ್ಲಾ ಇತಿಹಾಸ. ಇದಕ್ಕೆ ಪರಿಹಾರವಿಲ್ಲವೇ? ಇದೆ, ರಾಜಕೀಯ ದೊಂಬರಾಟಗಳೇನೇ ಇರಲಿ, ಇಂದಿಗೂ ಕಾಶ್ಮೀರದ ಸಮಸ್ಯೆಯನ್ನು ಇಂದಿನ ಕಾಶ್ಮೀರಿ ಪಂಡಿತರೇ ಬಗೆಹರಿಸಬಹುದೆಂದು ನನ್ನ ವೈಯುಕ್ಕಕ ಻ಅಭಿಪ್ರಾಯ. ಅದೆಂದರೆ ಇಂದಿನ ಕಾಶ್ಮೀರೀ ಪಂಡಿತರು ತನ್ನ ಻ಅಹಮಹಿಕೆಯನ್ನು ಬಿಟ್ಟು ಒಂದಾನೊಂದು ಕಾಲದಲ್ಲಿ ತಮ್ಮವರೇ ಆಗಿದ್ದು ಈಗ ಮುಸಲ್ಮಾನರಾಗಿರುವವರನ್ನು ಗೌರವ, ಆದರ, ಸಮ್ಮಾನಗಳೊಂದಿಗೆ ತಮ್ಮ ಸಮಾಜಕ್ಕೆ ಸ್ವೀಕರಿಸಿಕೊಳ್ಳಬೇಕು, ಎಂದರೆ ಅವರ ” ಶುದ್ಧೀಕರಣ” ಕ್ಕೆ ಇವರು ಮುಂದಾಗಬೇಕು. ಒಮ್ಮೆ ಈ ಕಾಶ್ಮೀರಿ ಪಂಡಿತರ ಹಿನ್ನೆಲೆಯುಳ್ಲ ಇಂದಿನ ಪ್ರತ್ಯೇಕತಾವಾದಿ ಮುಸಲ್ಮಾನರು ಮತ್ತೊಮ್ಮೆ ಹಿಂದೂಗಳಾಗಿ ಕಾಶ್ಮೀರಿ ಪಂಡಿತರಾದರೆ ಅಲ್ಲಿ ನಾಯಕತ್ವ ಶೂನ್ಯವಾಗುತ್ತದೆ. ಉಳಿದ ಮುಸಲ್ಮಾನರೂ ಕೂಡ ಹಿಂದೂಗಳಾಗಲೂ ಕೂಡಲೇ ಸಮ್ಮತಿಸುತ್ತಾರೆ. ಅಲ್ಲಿಗೆ ಇಸ್ಲಾಂ ಕೊನೆಯಾಗಿ ಮತ್ತೊಮ್ಮೆ ಕಾಶ್ಮೀರ ಕಾಶ್ಯಪ ನಾಡಾಗಿ ಪರಿಣಮಿಸುತ್ತದೆ.
    ಇದಾಗಬೇಕಾದರೆ, ಕಾಶ್ಮೀರ ಪಂಡಿತರು ತಮ್ಮ ಸಮುದಾಯದ ಸಭೆಯಲ್ಲಿ ಈ ಕುರಿತಂತೆ ನಿರ್ಣಯವನ್ನು ಕೈಗೊಂಡು ಸ್ವಾಮಿ ರಾಮದೇವ್ ಅಂತಹ ಮುಖಂಡರನನ್ನು ಸಂಪರ್ಕಿಸಿ ಶುದ್ಧಿ ಕ್ರಿಯೆಗೆ ಪ್ರಯತ್ನಿಸಿದರೆ ಈ ಸಮಸ್ಯೆ ಶಾಶ್ವತವಾಗಿ ಪರಿಹಾರವಾಗುತ್ತದೆ. ಇದರ ಬದಲಾಗಿ ಕಾಶ್ಮೀರವನ್ನು ಮುಸ್ಲಿಂ ಬಾಹುಳ್ಯ ಪ್ರದೇಶವೆಂದು ಒಪ್ಪಿ ಅದರಂತೆ ವ್ಯವಹರಿಸಿದಲ್ಲಿ ಭಾರತ ಗೆಲುವುದು ಅಸಾಧ್ಯ.

    ಉತ್ತರ
    • Mallappa
      ಸೆಪ್ಟೆಂ 1 2016

      ಇಡೀ ಮೇಲೆ ಹೇಳಿರುವ ವಿಚಾರಗಳನ್ನು ನಾನು ಸಮ್ಮತಿಸುತ್ತೆನೆ. ಕಾಶ್ಮೀರದ ಪಂಡಿತರು ಮಾತ್ರವಲ್ಲ ಭಾರತದಲ್ಲಿನ ಪಂಡಿತರೂ ತಮ್ಮ ಸುತ್ತಲೂ ಇರುವ ಮುಸ್ಲಿಂ ಬಾಂಧವರು ಒಂದು ಕಾಲದ ನಮ್ಮವರೇ ಎಂದು ನಮ್ಮ ಅಹಂನ್ನು ಬಿಟ್ಟು ಅವರನ್ನು ವಾಪಸ್ ಕರೆಸಿಕೊಳ್ಳುವ ಬಗ್ಗೆ ವಿಚಾರ ಮಾಡಬೇಕು. ಇದರ ಜೊತೆಗೆ ಸರಕಾರವೂ ಅವರನ್ನು ಪ್ರತ್ಯೇಕವಾಗಿ ಸಲುಹದೇ ಅವರಿಗೆ ನೀಡುವ ಸವಲತ್ತು ತೆಗೆದುಹಾಕಿದರೆ ಸವಲತ್ತಿಗಾಗಿ ಅಲ್ಲಿ ಉಳಿದ ಮುಸ್ಲಿಂ ಬಂಧುಗಳು ವಾಪಸ್ ಬಂದಾರು, ಮುಖ್ಯವಾಹುನಿಯಲ್ಲಿ ಸೇರುತ್ತಾರೆ.

      ಉತ್ತರ
    • Harish athreya
      ಸೆಪ್ಟೆಂ 2 2016

      ಆತ್ಮೀಯರೇ,
      ವಾಪಾಸ್ ಕರೆಸಿಕೊಳ್ಳುವುದು ನಂತರದ ಮಾತು, ಮರಳಿ ಬರಲು ಮುಸ್ಲಿಂ ಸಮುದಾಯ ಬಿಡುವುದಿಲ್ಲ ಮತ್ತು ಅವರು ಬರುವುದೂ ಇಲ್ಲ. The Muslim sunrise ಎನ್ನುವ ಪತ್ರಿಕೆಯ ಬಗ್ಗೆ ಕೇಳಿರುತ್ತೀರಿ. ೨೦೦೩ರ ೮೩ನೆಯ ವರ್ಷದ ಪಬ್ಲಿಕೇಶನ್ಸ್ ನೋಡಿ.ಜೀಸಸ್ ಇನ್ ಇಂಡಿಯ ಎಂಬುದರ ಬಗ್ಗೆ ಬರೆದಿದ್ದಾರೆ. ಇದು ಬರಿ ಮುಸ್ಲಿಂ ಹಿಂದೂ ಸಮಸ್ಯೆಯಲ್ಕ ,ಪ್ರೊ ಪ್ರೇಮಶೇಖರ ಸರ್ ಹೇಳಿದಂತೆ ಇನ್ನೊಂಇನ್ನೊಂದು ಕೈ ಇದೆ ಇದರ ಹಿಂಹಿಂದೆ
      ಹರಿ

      ಉತ್ತರ
      • vasu
        ಸೆಪ್ಟೆಂ 2 2016

        ನೀವು ಹೇಳುವುದು ಸರಿ. ಆದರೆ ಈ ಬಗ್ಗೆ ಸರಕಾರ ಇದರ ಬಗ್ಗೆ ಸಕಾರಾತ್ಮಕ ನಿಲುವನ್ನು ಹೊಂದಬೇಕು.ಮುಸ್ಲಿಂ ರು ಹಿಂದುಗಳಾಗಲು ಆ ಸಮಾಜದ ಮುಸ್ಲಿಂ ಮುಲ್ಲಾ, ಮೌಲ್ವಿಗಳು ಬಿಡದಿರಬಹುದು. ಆದರೆ ಅವರ ಯೋಜನೆ ಯನ್ನು ಯಶಸ್ವಿಯಾಗಲು ಸರಕಾರಗಳು ಬಿಡಬಾರದು. ಪರಸ್ಪರ ಒಪ್ಪಿಗೆಯಿಂದ ಹಿಂದೂಧರ್ಮಕ್ಕೆ ವಾಪಸು ಬರುವುದಾದರೆ ಅಂತಹವರಿಗೆ ಸೂಕ್ತ ರಕ್ಷಣೆ ಒದಗಿಸಬೇಕಾದದು ಸರಕಾರಗಳ ಕರ್ತವ್ಯ. ಇದು ಈಗಲೂ ಸಾಧ್ಯ. ಎಂದು ನನ್ನ ನಂಬಿಕೆ.

        ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments