ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 2, 2016

ಸ್ವಾತಂತ್ರ್ಯೋತ್ಸವ ವಿಶೇಷ ಸರಣಿ – ದಿನಕ್ಕೊಬ್ಬ ದೇಶಭಕ್ತರ ಸ್ಮರಣೆ

‍ನಿಲುಮೆ ಮೂಲಕ

ದಿನ – 17:
ಧೋಂಡಿಯ ವಾಘ್
– ರಾಮಚಂದ್ರ ಹೆಗಡೆ

14054142_567988006738362_7112786577959153087_nಮಲೆನಾಡು ಪ್ರದೇಶದಲ್ಲಿ ಬ್ರಿಟಿಷರ ನಿದ್ದೆಗೆಡಿಸಿ ಸಹ್ಯಾದ್ರಿಯ ಹುಲಿ ಎಂಬ ಖ್ಯಾತಿಗೆ ಪಾತ್ರನಾದ ವೀರ ಧೋಂಡಿಯ ವಾಘ್. ಹುಟ್ಟಿನಿಂದ ಮರಾಠಾ ಆಗಿದ್ದ ದೋಂಡಿಯಾ ವಾಘ್ ಶಿವಮೊಗ್ಗ ಜಿಲ್ಲೆಯ ಚನ್ನಗಿರಿ ತಾಲೂಕಿನಿಂದ ಬಂದ ಒಬ್ಬ ಕೂಲಿ ಸೈನಿಕ. ಮೊದಲು ಕೊಲ್ಹಾಪುರ, ಧಾರವಾಡ ಮುಂತಾದ ಕಡೆ ಸಂಸ್ಥಾನಗಳಲ್ಲಿ ದುಡಿದು ನಂತರ ಹೈದರಾಲಿ ಸೈನ್ಯದಲ್ಲಿ ಸೇರಿಕೊಂಡಿದ್ದ. ನಂತರ ಸೈನ್ಯದಿಂದ ಓಡಿಹೋದ ವಾಘ್ ತನಗೆ ಬೇಕಾದ ಜನರ ಒಂದು ತಂಡವನ್ನು ಖಾಸಗಿ ಸೈನ್ಯವಾಗಿ ಕಟ್ಟಿದ. ಕೆಲಕಾಲ ಸೆರೆಯಲ್ಲಿದ್ದ ವಾಘ್ ಬ್ರಿಟಿಷ್ ಸಾಮ್ರಾಜ್ಯಕ್ಕೆ ಸವಾಲೆಸೆಯುವ ತೀರ್ಮಾನ ಕೈಗೊಂಡ. ಅಲ್ಲಿಂದ ಬಿಡುಗಡೆಯಾಗಿ ಬ್ರಿಟಿಷರ ವಿರೋಧಿಯಾಗಿ ಬೆಳೆದ. ಮೈಸೂರು ಸಂಸ್ಥಾನವು ಬ್ರಿಟಿಷರಿಗೆ ವಾರ್ಷಿಕ ಕಾಣಿಕೆಯನ್ನು ಒಪ್ಪಿಸುವ ಸಲುವಾಗಿ ರೈತರ ಮೇಲೆ ಕರ ಹೇರಿದಾಗ ವಾಘ್ ಅದರ ವಿರುದ್ಧ ದನಿಯೆತ್ತಿದ. ರೈತರು ದೋಂಡಿಯಾ ವಾಘನನ್ನು ಬೆಂಬಲಿಸಿದರು. ಆರಂಭದಲ್ಲಿ ಅವನ ಸಂಘಟನೆ ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿದ್ದು, ಬ್ರಿಟಿಷರು ಬಿನ್ನುಹತ್ತಿದಾಗ ಹೈದರಾಬಾದ್ ಕರ್ನಾಟಕ ಪ್ರಾಂತಕ್ಕೆ ಬಂದು ಸೇರಿದ.

ಪರಕೀಯರಾದ ಬ್ರಿಟಿಷರ ಆಳ್ವಿಕೆಯನ್ನು ಕೊನೆಗೊಳಿಸಬೇಕೆಂಬ ಛಲವಿದ್ದ ಸಮೂಹವನ್ನು ಒಗ್ಗೂಡಿಸಿ ವಾಘ್ ಕಟ್ಟಿದ ಸೈನ್ಯ ಬ್ರಿಟಿಷರ ವಿರುದ್ಧ ಕ್ರಾಂತಿಯ ಕಹಳೆ ಮೊಳಗಿಸಲಾರಂಭಿಸಿತು. ೧೭೯೯ ರಲ್ಲಿ ಬ್ರಿಟಿಷರ ವಿರುದ್ಧ ಕ್ರಾಂತಿಯ ಬಾವುಟ ಹಾರಿಸಿದ ದೋಂಡಿಯಾ ವಾಘ್ ನ ಸೇನೆಗೆ ಬಿದನೂರು – ಶಿಕಾರಿಪುರ ಸುತ್ತಮುತ್ತಲಿನ ಪಾಳೆಯಗಾರರು ಕೈಜೋಡಿಸಿದ್ದರು. ಕುತಂತ್ರಗಳಿಂದಲೇ ಸಾಮ್ರಾಜ್ಯ ವಿಸ್ತರಣೆ ಮಾಡುತ್ತಿದ್ದ ಶತ್ರುಗಳನ್ನು ಎದುರಿಸಲು ಅವರ ಮಾರ್ಗವನ್ನೇ ಅನುಸರಿಸಬೇಕೆಂಬುದನ್ನು ಹಿಂದಿನ ಅನುಭವಗಳಿಂದ ಪಾಠ ಕಲಿತಿದ್ದ ದೊಂಡಿಯ ತನ್ನ ಪಡೆಗೆ ಗೆರಿಲ್ಲಾ ಮಾದರಿಯ ಯುದ್ಧತಂತ್ರಗಳಲ್ಲಿ ತರಬೇತಿ ನೀಡಿ ಸಜ್ಜುಗೊಳಿಸಿದ. ಮೊದಲಿಗೆ ಶಿವಮೊಗ್ಗವನ್ನು ಬ್ರಿಟಿಷ್ ಮುಕ್ತಗೊಳಿಸಿದ ವಾಘ್ ತನ್ನ ಬ್ರಿಟಿಷ್ ವಿರೋಧಿ ಕಾರ್ಯ ಚಟುವಟಿಕೆಗಳಿಗೆ ಅಲ್ಲಿ ಕೇಂದ್ರವನ್ನು ಸ್ಥಾಪಿಸಿಕೊಂಡನು. ಅಲ್ಲಿಂದ ಅವನು ಮೈಸೂರಿನ ವಾಯುವ್ಯಕ್ಕಿದ್ದ ಬ್ರಿಟಿಷರ ಯುದ್ಧ ಸಾಮಗ್ರಿಗಳನ್ನು ಅವರ ಉಗ್ರಾಣಗಳನ್ನೂ ಲೂಟಿ ಮಾಡತೊಡಗಿದನು. ಮೈಸೂರಿನಲ್ಲಿ ಹೆಚ್ಚಿನ ಬೆಂಬಲವು ದೊರಕಿದ ಮೇಲೆ ದೋಂಡಿಯಾನು ನಗರ ವಿಭಾಗದಲ್ಲಿ ಮತ್ತು ಕರಾವಳಿಯಲ್ಲಿ ಮುಖ್ಯವಾದ ಬಂದರುಗಳನ್ನು ಆಕ್ರಮಿಸಿಕೊಂಡನು. ಕರಾವಳಿ ಪ್ರದೇಶದಲ್ಲಿ ಜಮಾಲಾಬಾದ್‌ನಿಂದ ಸೋದೆಯವರೆಗೆ ಮತ್ತು ಘಟ್ಟ ಪ್ರದೇಶದ ಮೇಲೆ ಬೆಳಗಾಮ್, ರಾಯಚೂರಿನವರೆಗೆ ಸಹ ಆತನ ಕ್ರಾಂತಿಯ ವ್ಯಾಪ್ತಿ ವಿಸ್ತರಿಸಿತ್ತು.

ಗೆರಿಲ್ಲಾ ಮಾದರಿಯಲ್ಲಿ ಹೊಂಚುಹಾಕಿ ಆಂಗ್ಲ ಸೈನಿಕರ ಮೇಲೆ ದಾಳಿ ಮಾಡಿ ಸಾಕಷ್ಟು ಕಷ್ಟ-ನಷ್ಟ ಉಂಟುಮಾಡಿ ಅವರು ಎಚ್ಚೆತ್ತು ತಿರುಗಿ ಬೀಳುವ ವೇಳೆಗೆ ಕಣ್ಮರೆಯಾಗುತ್ತಿದ್ದ ದೋಂಡಿಯಾ ವಾಘ್ ನ ಪಡೆಯನ್ನು ಹಿಡಿಯುವುದು ಬ್ರಿಟಿಷರಿಗೆ ಸುಲಭವಾಗಿರಲಿಲ್ಲ. ಬ್ರಿಟಿಷ್ ಸೇನಾ ತುಕಡಿಗಳ ಮೇಲೆ ಆಯಕಟ್ಟಿನ ಸ್ಥಳಗಳಲ್ಲಿ ಹೊಂಚು ಹಾಕಿ ಅನಿರೀಕ್ಷಿತ ದಾಳಿ ನಡೆಸಿ ಅಪಾರ ಹಾನಿ ಉಂಟು ಮಾಡುತ್ತಿದ್ದುದಲ್ಲದೆ ಅವರ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯುತ್ತಿದ್ದುದನ್ನು ತಪ್ಪಿಸಲು ಆಂಗ್ಲರು ಹೆಣಗಾಡಬೇಕಾಯಿತು. ಅವನನ್ನು ಹಿಡಿಯುವ ಸಲುವಾಗಿಯೇ ಬ್ರಿಟಿಷ್ ಅಧಿಕಾರಿ ಲಾರ್ಡ್ ವೆಲ್ಲೆಸ್ಲಿ ಸೈನಿಕರ ಒಂದು ಪ್ರತ್ಯೇಕ ತಂಡವನ್ನೇ ನಿಯೋಜಿಸಿದ್ದ. ಒಂದು ಬಾರಿ ಬ್ರಿಟಿಷರಿಂದ ತಪ್ಪಿಸಿಕೊಳ್ಳುವಾಗ ದೋಂಡಿಯಾ ಶಿಕಾರಿಪುರದ ಹುಚ್ಚರಾಯಸ್ವಾಮಿ ದೇವಾಲಯದಲ್ಲಿ ಅಡಗಿ ರಕ್ಷಣೆ ಪಡೆದಿದ್ದ. ತನ್ನನ್ನು ರಕ್ಷಿಸಿದ್ದಕ್ಕೆ ಕೃತಜ್ಞತೆಯಾಗಿ ತನ್ನ ಖಡ್ಗವನ್ನು ದೇವರಿಗೆ ಸಮರ್ಪಿಸಿದ್ದ ವಾಘ್. ಈ ಖಡ್ಗ ಈಗಲೂ ಆ ದೇವಸ್ಥಾನದಲ್ಲಿದ್ದು, ಆಸಕ್ತರು ನೋಡಬಹುದಾಗಿದೆ. ವಿಶೇಷವೆಂದರೆ ದೋಂಡಿಯಾನಿಗೆ ಕೊಯಮತ್ತೂರು, ಸೇಲಂ, ಮಲಬಾರ್ ಮೊದಲಾದ ದಕ್ಷಿಣ ಭಾರತದ ಇತರ ರಾಜ್ಯಗಳಿಂದಲೂ ಪ್ರೋತ್ಸಾಹ ಮತ್ತು ಬೆಂಬಲ ದೊರಕಿತು. ಅವನು ೧೭೯೯ರಷ್ಟು ಮೊದಲೇ ಫ್ರೆಂಚ್ ಅಧಿಕಾರಿಗಳೊಂದಿಗೆ ಸಂಪರ್ಕವನ್ನಿಟ್ಟುಕೊಂಡಿದ್ದನೆಂದು ಹೇಳಲಾಗಿದೆ.

ಕೊಯಮತ್ತೂರು ಮತ್ತು ಸೇಲಂಗಳ ರೈತರು ಬ್ರಿಟಿಷರ ವಿರುದ್ಧ ತೀವ್ರ ಅಸಂತುಷ್ಟರಾಗಿದ್ದು ಅವರು ದೋಂಡಿಯನಿಗೆ ಬೆಂಬಲವಾಗಲು ಪ್ರಯತ್ನಿಸಿದರು. ಪೆರಿಂತುಲೈ ಗ್ರಾಮದ ಮುಖಂಡನಾಗಿದ್ದ ಚಿನ್ನಗೌರ್ ಎನ್ನುವವನು (ಚಿನ್ನ ಗೌಡರ್) ತನ್ನ ಸಹಚರರೊಂದಿಗೆ ೧೭೯೯ರ ಮಧ್ಯಭಾಗದಲ್ಲಿ ಸೋಂದಾದ ಬಳಿ ದೊಂಡಿಯನನ್ನು ಭೇಟಿ ಮಾಡಿದನು. ಬ್ರಿಟಿಷರ ಎದುರಿನ ಹಲವು ಯುದ್ಧಗಳಲ್ಲಿ ದೋಂಡಿಯಾ ತನ್ನ ಸಾವಿರಾರು ಸಹಚರರನ್ನು ಕಳೆದುಕೊಂಡರೂ ಆತ ತನ್ನ ಆತ್ಮವಿಶ್ವಾಸವನ್ನು ಕಳೆದುಕೊಳ್ಳಲಿಲ್ಲ. ಬ್ರಿಟಿಷರಿಗೂ ಅಷ್ಟೇ ಪ್ರಮಾಣದ ನಷ್ಟ ಉಂಟುಮಾಡುತ್ತಾ ಅವರ ನಿದ್ದೆಗೆಡಿಸುತ್ತಲೇ ಇದ್ದ. ಶಿವಮೊಗ್ಗದ ಸಮೀಪ ಬ್ರಿಟಿಷರು ಸುತ್ತುವರೆದಾಗ ಆತ ಅಲ್ಲಿಂದ ತಪ್ಪಿಸಿಕೊಂಡು ಉತ್ತರ ಕರ್ನಾಟಕ ತಲುಪಿದ. ಆ ಕಾಲದಲ್ಲೇ ವಾಘ್ ನ ಸೈನ್ಯದಲ್ಲಿದ್ದ ಯೋಧರ ಸಂಖ್ಯೆ ಒಂದು ಲಕ್ಷ ದಾಟಿತ್ತು. ವಾಘ್ ತನ್ನ ಪರಾಕ್ರಮಗಳಿಂದ ಉತ್ತರ ಕರ್ನಾಟಕದ ಹಲವು ಭಾಗಗಳನ್ನು ಗೆಲ್ಲುತ್ತಾ ಹೋದ. ಕೊನೆಗೆ ವಾಘ್ ನನ್ನ ಸೋಲಿಸಲು ಬ್ರಿಟಿಷರು ಬೃಹತ್ ಸೈನ್ಯವನ್ನೇ ಕರೆಸಬೇಕಾಯಿತು. ಸೆಪ್ಟೆಂಬರ್ ೧೦, ೧೮೦೦ ರಲ್ಲಿ ಶಿರಹಟ್ಟಿ ಸಮೀಪದ ಕೋನಗಲ್ ನಲ್ಲಿ ಬ್ರಿಟಿಷರ ಎದುರು ವೀರಾವೇಶದಿಂದ ಹೋರಾಡಿದ ದೋಂಡಿಯಾ ವಾಘ್ ಬ್ರಿಟಿಷ್ ಸೇನೆಗೆ ಸಾಕಷ್ಟು ಹಾನಿಮಾಡಿದರೂ ವೀರಮರಣ ಹೊಂದಿದ. ೧೮೫೭ ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮುನ್ನವೇ ಮಲೆನಾಡಿನ ಮಡಿಲಿಂದ ಹೈದರಾಬಾದ್ ಕರ್ನಾಟಕದ ತುದಿಯವರೆಗೆ ತನ್ನ ಅಪ್ರತಿಮ ಶೌರ್ಯ ಹಾಗೂ ಪರಾಕ್ರಮಗಳಿಂದ ಬ್ರಿಟಿಷರ ಬೆನ್ನೆಲುಬು ಮುರಿದ ಸಹ್ಯಾದ್ರಿಯ ಹುಲಿ ದೋಂಡಿಯಾ ವಾಘ್ ನ ಸಾಹಸಗಾಥೆ ಚಿರಸ್ಮರಣೀಯ.

ಮಾಹಿತಿ ಕೃಪೆ: ಕಣಜ.ಇನ್ , ಕವಿಮನ.ಬ್ಲಾಗ್ , ಇತರ ಮೂಲಗಳಿಂದ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments