ಅಂಬೇಡ್ಕರ್, ಮಾರ್ಕ್ಸ್ ಮತ್ತು ಬುದ್ಧ…..
– ಗುರುರಾಜ ಕೋಡ್ಕಣಿ. ಯಲ್ಲಾಪುರ
“ಅದೊಮ್ಮೆ ಬುದ್ಧನ ಅಗ್ರಗಣ್ಯ ಶಿಷ್ಯರಲ್ಲಿ ಒಬ್ಬನಾದ ಅನಾಥಪಿಂಡಿಕನು ಬುದ್ದನಿರುವಲ್ಲಿಗೆ ಆಗಮಿಸುತ್ತಾನೆ. ಹಾಗೆ ಬಂದವನೇ ಬುದ್ಧನಿಗೆ ವಂದಿಸಿ, ಪಕ್ಕದಲ್ಲಿದ್ದ ಆಸನದಲ್ಲಿ ಕುಳಿತುಕೊಳ್ಳುತ್ತ ‘ಹೇ ಮಹಾಜ್ಞಾನಿಯೇ, ಗೃಹಸ್ತನೆನಿಸಿಕೊಂಡವನಿಗೆ ತುಂಬ ಆಸಕ್ತಿದಾಯವೆನ್ನಿಸುವ ಹಿತನೀಡುವ, ಆದರೆ ಅಷ್ಟೇ ಕಷ್ಟವೆನಿಸುವ ಕಾರ್ಯ ಯಾವುದೆಂದು ನಿನಗನ್ನಿಸುತ್ತದೆ .’? ಎಂದು ಪ್ರಶ್ನಿಸುತ್ತಾನೆ. ಹೀಗೊಂದು ಪ್ರಶ್ನೆಯನ್ನು ಕೇಳಿ ಮುಗುಳ್ನಕ್ಕ ಗೌತಮ, ‘ಅಂತಹ ಹಲವಾರು ಕೆಲಸಗಳಿವೆ ಶಿಷ್ಯೋತ್ತಮನೇ. ನ್ಯಾಯಬದ್ಧವಾಗಿ ಸಂಪತ್ತನ್ನು ಗಳಿಸುವುದು ಅಂಥದ್ದೊಂದು ಬಹುಮುಖ್ಯ ಕಾರ್ಯ. ಮೊದಲು ವ್ಯಕ್ತಿ ತಾನು ಧರ್ಮಯುತವಾಗಿ ಸಂಪತ್ತನ್ನು ಗಳಿಸಿಕೊಳ್ಳಬೇಕು. ನಂತರ ತನ್ನ ಹತ್ತಿರದ ಬಂಧುಗಳೂ ಸಹ ನ್ಯಾಯಸಮ್ಮತವಾಗಿಯೇ ಸಂಪತ್ತಿನ ಗಳಿಕೆ ಮಾಡುವಂತೆ ನೋಡಿಕೊಳ್ಳಬೇಕು. ಮೂರನೆಯದ್ದಾಗಿ ವ್ಯಕ್ತಿಯೊಬ್ಬ ತುಂಬ ಕಾಲ ಬದುಕಿ ದೀರ್ಘಾಯುಷಿಯೆನ್ನಿಸಿಕೊಳ್ಳಬೇಕು. ಇವೆಲ್ಲವೂ ಮನುಷ್ಯನಿಗೆ ಇಷ್ಟವಾಗುವ, ಹಿತವೆನಿಸುವ ಕಾರ್ಯಗಳೇ. ಆದರೆ ಅವುಗಳ ಸಾಧನೆ ಸುಲಭಸಾಧ್ಯವಲ್ಲ. ಇಂಥಹ ಐಹಿಕ ಭೋಗಗಳ ಗಳಿಕೆಗೂ ನಂಬಿಕೆ, ಸಚ್ಚಾರಿತ್ರ್ಯ, ಉದಾರತೆ ಮತ್ತು ವಿವೇಕವೆನ್ನುವ ನಾಲ್ಕು ಮೌಲ್ಯಗಳ ಆಶೀರ್ವಾದ ಬೇಕು. ಸಚ್ಚಾರಿತ್ರ್ಯವೆನ್ನುವುದು ಮನುಷ್ಯನ ಮನಸ್ಸು ಚಂಚಲವಾಗದೇ ಕುಡಿತ, ಕಳ್ಳತನ ಕೊಲೆಗಳಂತಹ ಕೆಟ್ಟ ಕಾರ್ಯಗಳನ್ನು ಮಾಡದಂತೆ ಆತನನ್ನು ತಡೆಯುತ್ತದೆ. ಉದಾರತೆಯ ಭಾವವು ಮನುಷ್ಯನನ್ನು ದುರಾಸೆಯಂತಹ ದುರ್ಗುಣಗಳಿಂದ ಮುಕ್ತವಾಗಿಸಿ ತೆರೆದ ಮನಸ್ಸಿನಿಂದ ದಾನಧರ್ಮಗಳನ್ನು ಮಾಡುವಂತೆ ಪ್ರೋತ್ಸಾಹಿಸುತ್ತದೆ. ವಿವೇಕವೆನ್ನುವುದು ಮನುಷ್ಯನನ್ನು ವಿಮೋಚನೆಯತ್ತ ಕರೆದೊಯ್ಯುವ ಮಾರ್ಗ. ವಿವೇಕವೆನ್ನುವ ಹಾರೈಕೆ, ಮನುಷ್ಯನನ್ನು ಜಡತ್ವ, ಕುಯುಕ್ತಿ, ಆಲಸ್ಯ ಅನುಮಾನದಂತಹ ಅವಗುಣಗಳಿಂದ ದೂರವಿರಿಸುತ್ತದೆ. ಹಾಗಾಗಿ ನೈತಿಕತೆಯಿಂದ, ನ್ಯಾಯಸಮ್ಮತ ದುಡಿಮೆಯಿಂದ ಬೆವರು ಸುರಿಸಿ ಗಳಿಸಿದ ಆಸ್ತಿಯೂ ಸಾಮಾನ್ಯ ಮನುಷ್ಯನಿಗೆ ಒಂದು ವರದಾನವಿದ್ದಂತೆಯೇ ಸರಿ. ಹೀಗೆ ಸಿರಿವಂತನಾಗುವ ಗೃಹಸ್ತ, ಬದುಕಿನುದ್ದಕ್ಕೂ ತಾನು ಸಂತಸವಾಗಿರುವುದಲ್ಲದೇ, ಸದಾಕಾಲ ತನ್ನ ಹೆತ್ತವರು, ಮಡದಿ ಮಕ್ಕಳು ಮತ್ತು ಸ್ನೇಹಿತರನ್ನೂ ಸಹ ಸಂತೋಷವಾಗಿರಸಬಲ್ಲ. ಸಂತಸವೇ ಸಾಮಾನ್ಯನೊಬ್ಬನ ಬದುಕಿನ ಸಾರ್ಥಕತೆ ‘ಎನ್ನುತ್ತ ಉತ್ತರಿಸುತ್ತಾನೆ’ ಎಂದು ಬರೆಯುತ್ತಾರೆ, ಸಂವಿಧಾನ ಶಿಲ್ಪಿ ಡಾ.ಭೀಮರಾವ್ ಅಂಬೇಡ್ಕರ್ ತಮ್ಮ ‘Buddha Or Karl Marx’ಎನ್ನುವ ಕೃತಿಯಲ್ಲಿ.
ಕೆಲವು ದಿನಗಳ ಹಿಂದೆ ಸುವರ್ಣ ಟಿವಿಯಲ್ಲಿ ನಡೆದ ಚರ್ಚೆಯೊಂದು ಭಯಂಕರ ವಿವಾದಕ್ಕೀಡಾಗಿದ್ದು ನಿಮಗೆ ನೆನಪಿರಬಹುದು. ‘ಆಝಾದಿ ವರ್ಸಸ್ ಸ್ವಾತಂತ್ರ್ಯ’ ಎನ್ನುವ ಹೆಸರಿನ ಚರ್ಚೆಯಲ್ಲಿ ಭಾಗವಹಿಸಿದ್ದ ಎಡಪಂಥೀಯವಾದಿಗಳು, ಚರ್ಚೆಯನ್ನು ನಿರೂಪಕ ಅಜಿತ್ ಹನುಮಕ್ಕನವರ್ ಕೆಡಿಸಿಬಿಟ್ಟರು ಎಂಬುದಾಗಿ ಅರೋಪಿಸಿದ್ದರು. ಬಲಪಂಥೀಯರ ಹಿಂಬಾಲಕರಂತೆ ವರ್ತಿಸಿದ ಅಜಿತ್ ಚರ್ಚೆಯ ಸಂಕಲಿತ ರೂಪದಲ್ಲಿ ಬಲಪಂಥೀಯರ ವಾದದೆದುರು ವಾಮಪಂಥೀಯರ ವಾದ ತೀರ ದುರ್ಬಲವಾಗಿ ಗೋಚರಿಸುವಂತೆ ನೋಡಿಕೊಂಡರು ಎಂಬುದು ಅವರ ವಾದ. ಆನಂತರ ಚರ್ಚೆಯ ಸಂಪೂರ್ಣ ಆವೃತ್ತಿ ಮತ್ತೊಮ್ಮೆ ಬಿತ್ತರವಾಗಿ ವಿವಾದ ಶಾಂತವಾಗಿದ್ದು ಈಗ ಹಳೆಯ ವಿಷಯ. ಚರ್ಚೆಯನ್ನು ವೀಕ್ಷಿಸಿದ್ದ ನನ್ನನ್ನು ತುಂಬ ಆಕರ್ಷಿಸಿದ್ದು ತೇಜಸ್ವಿ ಸೂರ್ಯರವರ ಒಂದು ಮಾತು. ಅಂಬೇಡ್ಕರ್ ಸಮಾಜವಾದದ ಸಿದ್ಧಾಂತವನ್ನು ವಿರೋಧಿಸುತ್ತಿದ್ದರು ಎನ್ನುವುದು ತೇಜಸ್ವಿಯವರ ವಾದವಾಗಿತ್ತು. ಅವರ ವಾದಕ್ಕೊ೦ದು ಸರಿಯಾದ ಪ್ರತ್ಯುತ್ತರ ನೀಡಲಾಗದೇ ಎಡಪಂಥೀಯ ಪಟಾಲಂ ತಿಣುಕುತ್ತಿದ್ದದ್ದು ಚರ್ಚೆಯಲ್ಲಿ ಸ್ಪಷ್ಟವಾಗಿ ಕಂಡು ಬಂದಿತು. ತೇಜಸ್ವಿ ಸೂರ್ಯರವರ ಮಾತುಗಳು ನಿಜಕ್ಕೂ ಸತ್ಯವೇ..? ಬಾಬಾ ಸಾಹೇಬರಿಗೆ ಕಮ್ಯುನಿಸಮ್ಮಿನೆಡೆಗೊಂದು ವಿರೋಧವಿತ್ತೇ? ಎನ್ನುವ ಪ್ರಶ್ನೆಗೆ ಉತ್ತರ ಹುಡುಕುತ್ತ ಹೊರಟಾಗ ನನ್ನ ಕೈಗೆ ಸಿಕ್ಕ ಬಾಬಾಸಾಹೇಬರ ಕಿರುಹೊತ್ತಗೆಯ ಹೆಸರೇ ‘Buddha Or Karl Marx’
ಪುಸ್ತಕದ ಪರಿಚಯದಲ್ಲಿ ತಮ್ಮ ಕೃತಿಯ ಬಗ್ಗೆ ವಿವರಿಸುವ ಅಂಬೇಡ್ಕರ್, ‘ಕಾರ್ಲ್ ಮಾರ್ಕ್ಸ್ ಮತ್ತು ಗೌತಮ ಬುದ್ಧನ ನಡುವಿನ ಹೋಲಿಕೆಯೇ ಅನೇಕರಿಗೆ ತಮಾಷೆಯಾಗಿ ಗೋಚರಿಸಬಹುದು. ಈ ಎರಡೂ ವ್ಯಕ್ತಿತ್ವಗಳ ನಡುವೆ ಕಡಿಮೆಯೆಂದರೂ ಎರಡು ಸಾವಿರ ವರ್ಷಗಳಷ್ಟು ಕಾಲದ ಅಂತರವಿದೆ ಎಂಬುದನ್ನು ನಾವು ಬಲ್ಲೆವು. ಬುದ್ಧ ಮತ್ತು ಮಾರ್ಕ್ಸ್ ನನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗುವುದು ಸಹ ಮಾರ್ಕ್ಸವಾದಿಗಳಿಗೆ ಹಾಸ್ಯಾಸ್ಪದವೆನ್ನಿಸಬಹುದು. ಮಾರ್ಕ್ಸ್ ಒಬ್ಬ ಆಧುನಿಕವಾದಿ ಮತ್ತು ಬುದ್ಧನೊಬ್ಬ ಅನುಭಾವಿ ಎಂಬುದು ಅವರ ಮಾತಾಗಬಹುದು. ಆದರೆ ತಮ್ಮ ತಮ್ಮ ಪೂರ್ವಾಗ್ರಹಗಳನ್ನು ಪಕ್ಕಕ್ಕಿಟ್ಟು ಅಲೋಚಿಸಿದರೆ ಮಾರ್ಕ್ಸವಾದಿಗಳೂ ಸಹ ಗೌತಮನಿಂದ ಕಲಿಯುವುದು ಸಾಕಷ್ಟಿದೆ ಎಂದು ಅಭಿಪ್ರಾಯಪಡುತ್ತಾರೆ. ಮಾರ್ಕ್ಸನ ಸಿದ್ಧಾಂತ ಮತ್ತು ಬುದ್ಧನ ಸಿದ್ಧಾಂತಗಳ ಸಂಕ್ಷಿಪ್ತ ಪರಿಚಯವನ್ನು ಮಾಡಿಕೊಡುವ ಬಾಬಾಸಾಹೇಬರು, ಎರಡೂ ವ್ಯಕ್ತಿತ್ವಗಳ ವಿಮರ್ಶಾತ್ಮಕ ತುಲನೆಯನ್ನು ಮಾಡುತ್ತ ಮಾರ್ಕ್ಸನ ಸಿದ್ಧಾಂತಗಳು ವಿಫಲವಾಗುವುದೆಲ್ಲಿ ಎಂಬುದನ್ನು ಸ್ಥೂಲವಾಗಿ ವಿವರಿಸುತ್ತಾರೆ. ಬೌದ್ಧ ಮತ್ತು ಮಾರ್ಕ್ಸ್ ಸಿದ್ಧಾಂತಗಳಲ್ಲಿನ ಸಾಮ್ಯತೆಗಳು, ವ್ಯತ್ಯಾಸಗಳನ್ನು ವಿವರಿಸುತ್ತ, ಕೊನೆಯದ್ದೊಂದು ನಿರ್ಣಾಯಕ ಗೋಷ್ವಾರೆಯನ್ನು ಬರೆಯುವ ಅಂಬೇಡ್ಕರು, ‘ರಷ್ಯಿಯನ್ನರಿಗೆ ತಮ್ಮ ಸಮತಾವಾದದ ಬಗ್ಗೆ ಅತೀವ ಹೆಮ್ಮೆಯಿದೆ. ಆದರೆ ಸಮತಾವಾದವನ್ನು ಬುದ್ಧ ಸಾವಿರಾರು ವರ್ಷಗಳ ಹಿಂದೆಯೇ ಪ್ರತಿಪಾದಿಸಿದ್ದ ಎಂಬುದನ್ನು ರಷ್ಯನ್ನರು ಅರಿಯರು. ಬುದ್ಧನ ಸಮತಾವಾದವೇ ಸಮಕಾಲೀನ ಕಮ್ಯುನಿಸಮ್ಮಿನ ಮೂಲರೂಪವಾಗಿದ್ದರೂ ಗೌತಮನದ್ದು ಸರ್ವಾಧಿಕಾರರಹಿತ ಸಮಾಜವಾದವಾಗಿತ್ತೆನ್ನುವುದು ನನ್ನ ಅಭಿಪ್ರಾಯ. ಸ್ವತಃ ಲೆನಿನ್ನನಿಗೂ ಸಹ ಬುದ್ಧನ ಸಮಾಜವಾದದಂತಹ ಸಶಕ್ತ ಸಮತಾವಾದವನ್ನು ಸಾಧಿಸುವುದು ಶಕ್ಯವಾಗಲಿಲ್ಲ. ಏಕೆಂದರೆ ಬುದ್ಧನ ವಿಧಾನದ ವೈಶಿಷ್ಟ್ಯವೇ ಅಂಥದ್ದು. ಗೌತಮ ಯಾವುದನ್ನೂ ತನ್ನ ಹಿಂಬಾಲಕರ ಮೇಲೆ ಬಲವಂತವಾಗಿ ಹೇರುತ್ತಿರಲಿಲ್ಲ. ಬದಲಾಗಿ ತನ್ನ ಧಮ್ಮಪದಗಳಿಂದ ಮಾನವನ ಮನಸ್ಥಿತಿಯನ್ನು ಬದಲಿಸುತ್ತಿದ್ದ. ಹಾಗಾಗಿ ಯಾವುದಾದರೊಂದು ಕಾರ್ಯಸಾಧನೆಗೆ ಜನರನ್ನು ಒತ್ತಾಯಿಸುವ ಪ್ರಮೇಯ ಅವನಿಗೆದುರಾಗುತ್ತಿರಲಿಲ್ಲ. ಜನರು ತಮಗಿಷ್ಟವಲ್ಲದಿದ್ದರೂ ತಮ್ಮ ಒಳಿತಿಗಾಗಿ ಜರುಗುವ ಕಾರ್ಯಗಳನ್ನು ಮುಕ್ತಮನಸ್ಸಿನಿಂದಲೇ ಒಪ್ಪಿಗೆ ಸೂಚಿಸುವಂತೆ ಮಾಡುತ್ತಿದ್ದದ್ದು ಬುದ್ಧನ ಅದ್ಭುತ ಪ್ರವಚನಗಳು. ಹಾಗಾಗಿ ಬುದ್ಧನ ಸಮಾಜವಾದವೇ ಶ್ರೇಷ್ಟವೆನ್ನುವುದು ನನ್ನ ತರ್ಕ. ಸರ್ವಾಧಿಕಾರವುಳ್ಳ ರಷ್ಯಾದ ಸಮಾಜವಾದ ಸಾಕಷ್ಟು ಸಾಧನೆಗಳನ್ನು ಕಂಡಿದೆ ಎನ್ನುವುದು ರಷ್ಯನ್ನರ ಅಭಿಮತ. ಅವರ ಮಾತುಗಳನ್ನೂ ಸಹ ಸಂಪೂರ್ಣವಾಗಿ ಅಲ್ಲಗಳೆಯುವಂತಿಲ್ಲ. ಹಾಗಾಗಿ ಎಲ್ಲ ಹಿಂದುಳಿದ ರಾಷ್ಟ್ರಗಳಿಗೂ ಸರ್ವಾಧಿಕಾರವುಳ್ಳ ಆಡಳಿತದಿಂದ ಒಳಿತಾಗಬಹುದೆನ್ನುವುದು ನನ್ನ ಅಭಿಪ್ರಾಯ. ಹಾಗೆಂದ ಮಾತ್ರಕ್ಕೆ ಶಾಶ್ವತ ಸರ್ವಾಧಿಕಾರದ ಆಡಳಿತಕ್ಕೆ ನನ್ನ ಸಮರ್ಥನೆಯಿಲ್ಲ. ಏಕೆಂದರೆ ಮನುಕುಲದ ಏಳ್ಗೆಗೆ ಕೇವಲ ಆರ್ಥಿಕ ಮೌಲ್ಯಗಳು ಮಾತ್ರವಲ್ಲ, ಆಧ್ಯಾತ್ಮಿಕ ಮೌಲ್ಯಗಳೂ ಬೇಕು. ಶಾಶ್ವತ ಸರ್ವಾಧಿಕಾರ ಎಂದಿಗೂ ಆಧ್ಯಾತ್ಮಿಕ ಮೌಲ್ಯಗಳ ಕುರಿತಾಗಿ ಗಂಭೀರವಾಗಿ ಚಿಂತಿಸಿಲ್ಲ ಮತ್ತು ಆಧ್ಯಾತ್ಮಿಕತೆಯ ಬಗ್ಗೆ ತಲೆ ಕೆಡಿಸಿಕೊಳ್ಳುವ ಯಾವ ಉದ್ದೇಶವೂ ಅದಕ್ಕಿದ್ದಂತಿಲ್ಲ. ಆಂಗ್ಲ ತತ್ವಜ್ನಾನಿ ಕಾರ್ಲೈಲ್, ಅರ್ಥಶಾಸ್ತ್ರವನ್ನು ‘ಹಂದಿಗಳ ವೇದಾಂತ’ಎಂದು ಮೂದಲಿಸುತ್ತಾನೆ. ಕಾರ್ಲೈಲನ ಮಾತುಗಳು ಅರ್ಥಹೀನ. ಏಕೆಂದರೆ ಮನುಷ್ಯನಿಗೆ ಆರ್ಥಿಕ ಸಂತಸಗಳ ಅಗತ್ಯ ಖಂಡಿತವಾಗಿಯೂ ಇದೆ. ಆದರೆ ಕೇವಲ ಆರ್ಥಿಕ ಪ್ರಗತಿಯನ್ನೇ ಪ್ರೋತ್ಸಾಹಿಸುವ ಮತ್ತು ಅದನ್ನೇ ಅಂತಿಮ ಸತ್ಯದಂತೆ ಬಿಂಬಿಸುವ ಕಮ್ಯುನಿಸ್ಂ ನ ಸಿದ್ಧಾಂತಗಳು ಕೂಡ ಕಾರ್ಲೈಲ್ ನ ಮಾತುಗಳಷ್ಟೇ ಅರ್ಥಹೀನ. ಆರ್ಥಿಕ ಕ್ಷೇತ್ರದಲ್ಲಿ ಕಂಡುಕೊಂಡಷ್ಟೇ ಪ್ರಗತಿಯನ್ನು ಮನುಷ್ಯ ಆಧ್ಯಾತ್ಮಿಕ ಕ್ಷೇತ್ರದಲ್ಲೂ ಕಂಡುಕೊಳ್ಳಬೇಕು. ಭ್ರಾತೃತ್ವ, ಸಮಾನತೆ ಮತ್ತು ಸ್ವಾತಂತ್ರ್ಯವೆನ್ನುವ ಮೂರು ತತ್ವಗಳನ್ನು ಧ್ಯೇಯವಾಗಿಟ್ಟುಕೊಂಡು ಸಮಾಜವನ್ನು ಕಟ್ಟಬೇಕೆನ್ನುವುದು ಫ್ರೆಂಚ್ ಕ್ರಾಂತಿಯ ಉದ್ದೇಶವಾಗಿತ್ತು. ಅದೊಂದೇ ಕಾರಣಕ್ಕೆ ಫ್ರೆಂಚ್ ಕ್ರಾಂತಿಯನ್ನು ಅಲ್ಲಿನ ನಾಗರೀಕರು ಸ್ವಾಗತಿಸಿದರು. ದುರದೃಷ್ಟವೆಂದರೆ ಇಂಥದ್ದೊಂದು ಕ್ರಾಂತಿ ಸಮಾನತೆಯನ್ನು ತಂದುಕೊಡುವಲ್ಲಿ ವಿಫಲವಾಯಿತು. ರಷ್ಯನ್ ಕ್ರಾಂತಿಯೂ ಸಮಾನತೆಯನ್ನೇ ಪ್ರತಿಪಾದಿಸಿತು. ಆದರೆ ಸಮಾನತೆಯನ್ನುವ ಸಾಧಿಸುವ ಭರದಲ್ಲಿ ಭ್ರಾತೃತ್ವ ಮತ್ತು ಸ್ವಾತಂತ್ರ್ಯಗಳ ನಿರಾಕರಣೆಯೂ ಸಲ್ಲದು. ಸ್ವಾತಂತ್ರ್ಯ ಮತ್ತು ಸೋದರತ್ವಗಳ ಸಾಂಗತ್ಯವಿಲ್ಲದ ಸಮಾನತೆಯೂ ಅರ್ಥಹೀನವೇ. ಮೂರು ತತ್ವಗಳ ಸಮಷ್ಟಿಯೆನ್ನುವುದು ಬುದ್ಧ ತತ್ವಗಳ ಪರಿಪಾಲನೆಯಿಂದ ಮಾತ್ರ ಸಾಧ್ಯ. ಸಮಾಜವಾದ ಮೇಲ್ಕಂಡ ಮೂರು ತತ್ವಗಳಲ್ಲಿ ಯಾವುದಾದರೊಂದು ತತ್ವವನ್ನು ದೊರಕಿಸಿಕೊಡಬಹುದೇ ಹೊರತು ಮೂರರಲ್ಲಿಯೂ ಯಶಸ್ಸು ಸಾಧಿಸುವುದು ಕಮ್ಯುನಿಸ್ಂನಿಂದ ಸಾಧ್ಯವಿಲ್ಲ’ ಎಂದು ಸಾದ್ಯಂತವಾಗಿ ವಿವರಿಸುತ್ತಾರೆ.
ಬಾಬಾ ಸಾಹೇಬರ ಇಂಥಹ ಅದ್ಭುತ ಬರಹವನ್ನು ಓದಿ ಮುಗಿಸುವ ಹೊತ್ತಿಗೆ ಅವರ ವಿಚಾರಗಳಲ್ಲಿನ ಔನ್ನತ್ಯವನ್ನು ಕಂಡು ನಾನು ನಿಜಕ್ಕೂ ಮೂಕವಿಸ್ಮಿತನಾಗಿದ್ದೆ. ನಾನು ಲೇಖನದಲ್ಲಿ ಈ ಮೊದಲೇ ಪ್ರಸ್ತಾಪಿಸಿದ ಚರ್ಚೆಯಲ್ಲಿ ಬಲಪಂಥೀಯವಾದಿಗಳು ಅಂಬೇಡ್ಕರ್ ಸರ್ವಾಧಿಕಾರವನ್ನು ತೀವ್ರವಾಗಿ ವಿರೋಧಿಸುತ್ತಿದ್ದರು ಎಂದು ತೀವ್ರವಾಗಿ ವಾದಿಸಿದರು. ಅದಕ್ಕೊಂದು ಸಮರ್ಪಕ ಉತ್ತರ ನೀಡಲು ಎಡಪಂಥೀಯರು ಪರದಾಡುತ್ತಿದ್ದರು. ಮೇಲಿನ ಪುಸ್ತಕವನ್ನು ಆಧಾರವಾಗಿಟ್ಟುಕೊಂಡರೆ, ಅಂಬೇಡ್ಕರ್ ಸಮಾಜವಾದವನ್ನು ಸಂಪೂರ್ಣವಾಗಿ ವಿರೋಧಿಸಿದರು ಎನ್ನುವುದು ಅರ್ಧ ಸತ್ಯ ಮಾತ್ರವೆನ್ನುವುದು ಮೇಲಿನ ಸಾರಾಂಶವನ್ನು ಓದಿದ ಯಾರಿಗಾದರೂ ಅರ್ಥವಾಗುತ್ತದೆ. ಬಾಬಾ ಸಾಹೇಬರು ಸಮತಾವಾದವನ್ನಾಗಲಿ, ಸರ್ವಾಧಿಕಾರವನ್ನಾಗಲಿ ಸಾರಾಸಗಟಾಗಿ ತಿರಸ್ಕರಿಸಲಿಲ್ಲ. ಅವರು ಸಮತಾವಾದದ ಸಮಕಾಲೀನ ಸ್ವರೂಪವನ್ನು ವಿರೋಧಿಸುತ್ತಲೇ ಅದರಲ್ಲೊಂದು ಮೂಲಭೂತ ಬದಲಾವಣೆಯನ್ನು ಬಯಸಿದರು. ತಾತ್ಕಾಲಿಕ ಸರ್ವಾಧಿಕಾರವೂ ಹಿಂದುಳಿದ ವರ್ಗಗಳ ಏಳ್ಗೆಗೆ ಕಾರಣವಾಗಬಹುದೆಂದು ಪ್ರತಿಪಾದಿಸಿದರು. ಬುದ್ಧ ತತ್ವಗಳ ಅಳವಡಿಕೆಯೊಂದಿಗಿನ ಸರ್ವಾಧಿಕಾರರಾಹಿತ್ಯ ಸಮಾಜವಾದವೇ ಸರ್ವಶ್ರೇಷ್ಟವೆಂಬುದಾಗಿ ಅಭಿಪ್ರಾಯಪಟ್ಟರು. ಅಂಬೇಡ್ಕರ್ ಅಸಮಾನತೆಯ ಬೆಂಕಿಯಲ್ಲಿ ಅರಳಿದ ಕ್ರಾಂತಿಯ ಹೂವಿನಂಥವರು. ಅವರು ದಮನಿತರ ಏಳ್ಗೆಗಾಗಿ ಹೋರಾಡಿದವರೇ ಹೊರತು ಪ್ರಖ್ಯಾತಿಗಾಗಿ ಒಣ ಸಿದ್ಧಾಂತಗಳ ಬೆನ್ನುಹತ್ತಿದವರಲ್ಲ. ಹಾಗಾಗಿಯೇ ಅಂಬೇಡ್ಕರರ್ ಪುಸ್ತಕಗಳು ಒಂದು ಆದರ್ಶ ಸಮಾಜದ ಕಟ್ಟುವಿಕೆಗೆ ಬೇಕಾಗುವ ತತ್ವಗಳ ಹುಡುಕಾಟವಾಗಿ ಗೋಚರಿಸುತ್ತವೆ. ಕನಿಷ್ಟ ಇಷ್ಟಾದರೂ ಅರಿತುಕೊಳ್ಳದಿದ್ದರೆ ಸದಾಕಾಲ ಅಂಬೇಡ್ಕರ್ ನಾಮ ಜಪಿಸುವ ಎಡಪಂಥೀಯರಯ ಮೇಲ್ನೋಟಕ್ಕಾದರೂ ಅವಕಾಶವಾದಿಗಳಾಗಿ ಗೋಚರಿಸುತ್ತಾರೆ ಎನ್ನುವುದಂತೂ ಸತ್ಯ.
ಅಂಬೇಡ್ಕರ್ ದೇವರಿಗೆ ಉಧೋಉಧೋ…
ಲೊ ಮಗ, ನನ್ ಬೇಳೆ ಇಟ್ಟಿದ್ದೆ ಸ್ಟವ್ ಮ್ಯಾಗೆ, ಬೆಂತ ನೋಡೊ…