ಇಂಡೋನೇಷ್ಯದ ನೋಟಿನಲ್ಲೂ ಈತನದೊಂದು ಫೋಟೋ ಇದೆ!
– ರೋಹಿತ್ ಚಕ್ರತೀರ್ಥ
ಗಿರೀಶ ಕಾರ್ನಾಡರ ಹಯವದನ ನಾಟಕ ಗೊತ್ತಲ್ಲ? ಪದ್ಮಿನಿ ಎಂಬ ಸುರಸುಂದರ ಹೆಣ್ಣನ್ನು ಮೋಹಿಸಿ ತಲೆ ಕಡಿದುಕೊಳ್ಳುವ ಮತ್ತು ಇದ್ದ (ಮತ್ತು ಬಿದ್ದ) ತಲೆಯ ಬದಲಾಗಿನ್ನೊಂದು ತಲೆ ಅಂಟಿಸಿಕೊಂಡು ಪೇಚಾಡುವ ಇಬ್ಬರು ಜೀವದ ಗೆಳೆಯರ ಕತೆ ಅದು. ಆ ನಾಟಕದ ಪ್ರಾರಂಭದಲ್ಲಿ ಭಾಗವತ ಹೇಳುತ್ತಾನೆ: “ಸರ್ವ ವಿಘ್ನಗಳನ್ನೂ ನಿರ್ಮೂಲನಗೊಳಿಸಿ ಸಕಲ ಈಪ್ಸಿತಗಳಲ್ಲಿ ಸಿದ್ಧಿಯನ್ನು ನೀಡುವ ಆ ವಿಘ್ನೇಶ್ವರನೇ ಇಂದಿನ ನಮ್ಮ ನಾಟಕಕ್ಕೆ ಯಶಸ್ಸನ್ನು ನೀಡಲಿ. ಆತನ ಮಹಾತ್ಮ್ಯವನ್ನಾದರೂ ವರ್ಣಿಸುವುದು ಹೇಗೆ? ಆನೆಯ ಮುಖ, ಮನುಷ್ಯನ ದೇಹ, ಮುಖದಲ್ಲಿ ಮುರುಕು ದಂತ, ದೇಹದಲ್ಲಿ ಬಿರುಕು ಬಿಟ್ಟ ಉದರ – ಹೇಗೆ ನೋಡಿದರೂ ಅಪೂರ್ಣತೆಗೇ ಸಾಕ್ಷಿಯಾಗಿರುವಂತೆ ಕಾಣುವ ಈ ವಕ್ರತುಂಡನೇ ವಿಘ್ನಹರ್ತನೂ ಆಗಿರಬೇಕು ಎಂಬುದರ ರಹಸ್ಯವನ್ನಾದರೂ ಹೇಗೆ ಬಿಡಿಸೋಣ? ಬಹುಶಃ ದೇವರ ಪೂರ್ಣತ್ವ ಮನುಷ್ಯ ಕಲ್ಪನೆಗೇ ಒಗ್ಗಲಾರದಂಥಾದ್ದು ಎಂಬುದನ್ನೇ ಈ ಮಂಗಳಮೂರ್ತಿಯ ರೂಪ ಸಂಕೇತಿಸುತ್ತಿರಬಹುದು”
ಹೌದು, ಈ ಗಣೇಶ, ವಿನಾಯಕ, ಏಕದಂತ ವಿಚಿತ್ರ ದೇವತೆ. ಮನುಷ್ಯರಾಗಿಯೂ ಸೊಟ್ಟ ಮೂಗೋ ಬಟ್ಟಲು ಕಿವಿಯೋ ಕೋರೆ ಹಲ್ಲೋ ಪುಟ್ಟ ಕಣ್ಣೋ ಇದ್ದವರನ್ನು ಎರಡೆರಡು ಸಲ ಅಚ್ಚರಿ, ಅಸಹ್ಯಗಳಿಂದ ನೋಡಿ ನಗುವ ನಾವು ಗಣೇಶನೆಂಬ ಗಜಮುಖನನ್ನು ಮಾತ್ರ ಯಾವ ತಕರಾರಿಲ್ಲದೆ ಒಪ್ಪಿಕೊಂಡುಬಿಟ್ಟಿದ್ದೇವೆ! ಮಾತ್ರವಲ್ಲ ದೇವರ ಪಟ್ಟ ಕಟ್ಟಿ ಪೂಜಿಸಿಯೂ ಇದ್ದೇವೆ. ಬುದ್ಧಿಜೀವಿಗಳಿಗಂತೂ ಈತನ ರೂಪವಿಶೇಷಗಳಲ್ಲಿ, ಜೀವನ ಕಥಾವಳಿಯಲ್ಲಿ ಬೇಕುಬೇಕಾದಷ್ಟು ನ್ಯೂನಗಳು ಕಾಣುತ್ತವೆ. ಗಣೇಶನನ್ನು ತಾಯಿ ಪಾರ್ವತಿ ತನ್ನದೇ ಶರೀರದ ಮಣ್ಣಿನಿಂದ ಮಾಡಿದಳಂತೆ. ಅವಳ ಮೈಯಲ್ಲಿ ಅಷ್ಟೊಂದು ಕೊಳಕು ತುಂಬಿತ್ತೇ? ಹೌದಾದರೆ ದೇವರ ಮೈ ಕೊಳಕಿನ ಮುದ್ದೆ ಎಂದಾಯಿತಲ್ಲ? ಇನ್ನು ಆ ಮಣ್ಣಿನ ರೂಪಕ್ಕೆ ಜೀವ ಕೊಟ್ಟ ಮೇಲೆ ಪಾರ್ವತಿ ಏಕೆ ಸ್ನಾನ ಮಾಡಲು ಹೋದಳು? ಅವಳ ಸ್ನಾನದ ಮನೆಗೆ ಬಾಗಿಲು, ಬಾಗಿಲಿಗೆ ಅಗುಳಿ ಇರಲಿಲ್ಲವೇ? ಆಕೆ ಅತ್ತ ಸ್ನಾನದ ಮನೆಗಿಳಿದ ಮೇಲೆ ಇತ್ತ ವಾಕಿಂಗ್ ಮುಗಿಸಿ ಬಂದ ಶಿವ ನೋಡುತ್ತಾನೆ, ತನ್ನ ಮನೆಯೆದುರಿಗೇ ಅಪರಿಚಿತನೊಬ್ಬ ಕಾವಲು ನಿಂತಿದ್ದಾನೆ! ತನ್ನದೇ ಮನೆಯೆಂದು ಸಾರಿ ಹೇಳಿದರೂ ಹೋಗಲು ಬಿಡದೆ ತಡೆದಿದ್ದಾನೆ! ಕೋಪಾವಿಷ್ಟನಾದ ಪರಮೇಶ್ವರ ಕತ್ತಿಯೋ ಕುಡಗೋಲೋ ತೆಗೆದು ರಪ್ಪೆಂದು ಬೀಸಿ ರುಂಡವನ್ನು ಹಾರಿಸಿದ. ದೇವಾದಿದೇವತೆಯಾದ ಪರಶಿವನಿಗೆ ತನ್ನ ಮನೆಯಲ್ಲಿ ಕಾವಲು ಕಾಯುತ್ತಿರುವ ಹುಡುಗ ತನ್ನ ಹೆಂಡತಿಯ ಕೈಯ ಸೃಷ್ಟಿ ಎಂದು ಏಕೆ ಗೊತ್ತಾಗಲಿಲ್ಲ? ಗೊತ್ತಾಗಲಿಲ್ಲ ಎಂದ ಮೇಲೆ ಅವನೇತರ ದೇವರು? ಸರಿ, ಹುಡುಗ ತಡೆದ ಎಂದೇ ಇಟ್ಟುಕೊಳ್ಳೋಣ; ಅಷ್ಟಕ್ಕೇ ಕೋಪ ಬರುವುದೇ? ಬಂದ ಕೋಪದಲ್ಲಿ ಹುಡುಗನ ತಲೆಯನ್ನೇ ಕಡಿದುಹಾಕುವುದೇ? ಹೀಗೆ ತಲೆ ಕಡಿದ ಮೇಲೆ ಮತ್ತೆ ಅದನ್ನೇ ವಾಪಸ್ ಇಟ್ಟು ಜೀವ ಕೊಡುವ ಬದಲು ಇನ್ಯಾವುದೋ ಪಾಪದ ಆನೆಯ ತಲೆ ಕಡಿದು ತರಲು ಹೇಳಿದನಲ್ಲ, ಏತರ ನ್ಯಾಯ ಇದು? ಹೀಗೆ ಪ್ರಶ್ನಿಸುತ್ತ ಹೋದರೆ ಒಂದಲ್ಲ ನೂರಾರು ಸವಾಲುಗಳು!
ತನ್ನ ಪಾಪಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳುವಂತೆ ಶಿವ, ಸತ್ತ ಹುಡುಗನನ್ನೇನೋ ಬದುಕಿಸಿದ. ಆದರೆ ಆ ಹುಡುಗನಿಗೆ ಮುಂದೆ ಒದಗಲಿದ್ದ ಕಷ್ಟಗಳ ಚಿಂತೆಯನ್ನೇನೂ ಮಾಡಿದ ಹಾಗೆ ಕಾಣುವುದಿಲ್ಲ. ಮೊದಲನೆಯದಾಗಿ ತನ್ನ ಮನುಷ್ಯ ದೇಹದ ಮೇಲೆ ಆನೆಯ ತಲೆ ಹೊತ್ತ ಹುಡುಗನ ಅವಸ್ಥೆ ಎಂಥದಿರಬೇಕು? ಬ್ಯಾಲೆನ್ಸ್ ಮಾಡಿಕೊಂಡು ನಡೆಯುವುದಕ್ಕೇ ಆ ಬಾಲಕನಿಗೆ ಹಲವು ದಿನಗಳು ತಗುಲಿರಬಹುದು. ಇನ್ನು ಇಂಥ ವಿಚಿತ್ರದೇಹಿಯನ್ನು ಮದುವೆಯಾಗುವವರು ಯಾರು, ಆನೆಯೋ ಮನುಷ್ಯರೋ ಎಂಬ ಯೋಚನೆಯನ್ನಾದರೂ ತಂದೆಯಾದ ಶಿವ ಮಾಡಬೇಕಾಗಿತ್ತು. ಅದನ್ನೂ ಮಾಡದೆ ಬೇಜವಾಬ್ದಾರಿ ಮೆರೆದುಬಿಟ್ಟ! ಯೋಚಿಸುತ್ತ ಹೋದಂತೆಲ್ಲ ಗಣೇಶನ ಲೈಫ್ ಹಿಸ್ಟರಿ ದೊಡ್ಡದೊಂದು ಮಿಸ್ಟರಿಯಾಗಿ ಕಾಡುತ್ತದೆ. ಉಳಿದೆಲ್ಲ ದೇವರಿಗಿದ್ದ ಸಾಮಾನ್ಯತೆ ಈತನಿಗೇಕಿಲ್ಲ? ಯಾಕೆ ಈತನೊಬ್ಬನನ್ನು ಆಡ್ ಮ್ಯಾನ್ ಔಟ್ ಎಂಬಂತೆ ವಿಚಿತ್ರವಾಗಿ ಸೃಷ್ಟಿಸಿಬಿಟ್ಟರು? ಗಣೇಶನಿಗೆ ಗಜಭಾರದ ಆನೆತಲೆಯನ್ನು ಕಳಚಿಟ್ಟು ತನ್ನ ಹಳೆಯ ಸುಂದರವಾದ ಮಾನವತಲೆಯನ್ನು ಧರಿಸಬೇಕು ಎಂದು ಎಂದೂ ಅನಿಸಲೇ ಇಲ್ಲವೇ? ಶಿವ ಕಡಿದುಹಾಕಿದ ಆ ಮೊದಲ ತಲೆಯನ್ನು ಯಾವ ಮ್ಯೂಸಿಯಮ್‍ನಲ್ಲಿ ಇಡಲಾಯಿತು? ಅದೆಲ್ಲ ಹೋಗಲಿ ಮಾರಾಯರೇ, ಈ ಕರಿವದನನ ವಾಹನವಾದರೂ ಯಾವುದು ಎನ್ನುತ್ತೀರಿ? ಹೇಳಿಕೇಳಿ ನೂರಿನ್ನೂರು ಗ್ರಾಂ ತೂಗುವ ಇಲಿ! ತಮಾಷೆಗೂ ಒಂದು ಮಿತಿ ಬೇಕೋ ಬೇಡವೋ?
ಇಷ್ಟೆಲ್ಲ ವಿಪರ್ಯಾಸಗಳನ್ನು ಬೆನ್ನಿಗೆ ಕಟ್ಟಿಕೊಂಡರೂ ಪಾರ್ವತೀಸುತ ಗಣೇಶ ಜಗದ್ವಂದ್ಯನಾಗಿ ಬೆಳೆದು ನಿಂತ ಪರಿ ಅಚ್ಚರಿ ಹುಟ್ಟಿಸುವಂಥಾದ್ದು. ಗಣೇಶ ಆದಿಪೂಜಿತ. ಕರ್ನಾಟಕ ಸಂಗೀತ ಕಲಿಯುವವರು ಮೊದಲು ಹಾಡುವುದೇ ಲಂಬೋದರ ಲಕುಮಿಕರ ಎಂದು. ಹೋಮಗಳಲ್ಲಿ ಮೊದಲನೆಯದ್ದು ಗಣಹೋಮ. ಗಣನಾಯಕನ ಕೃಪೆ ಇಲ್ಲದೆ ಯಾವ ಮಹತ್ಕಾರ್ಯಕ್ಕೆ ಇಳಿಯುವುದಕ್ಕೂ ಭಾರತೀಯ ಮನಸ್ಸು ಕೊಂಚ ಹಿಂದೇಟು ಹಾಕುತ್ತದೆ. ಹೇರಂಭನ ಪೂಜೆ ಮುಗಿಸಿಬಿಟ್ಟರೆ ಮಿಕ್ಕ ಕೆಲಸಗಳನ್ನು ಆರಂಭ ಮಾಡಲು ಗ್ರೀನ್ ಸಿಗ್ನಲ್ ಸಿಕ್ಕಹಾಗೆ. ಈ ಗಜಕರ್ಣ ಭಾರತಕ್ಕೆ ಮಾತ್ರ ಸೀಮಿತನಲ್ಲ. ಬಾಲಿ, ಸುಮಾತ್ರ, ಇಂಡೋನೇಷ್ಯ, ಕಾಂಬೋಡಿಯವೆನ್ನುತ್ತ ಆಗ್ನೇಯ ಏಷ್ಯದ ದೇಶಗಳಿಗೂ ವಲಸೆ ಹೋಗಿದ್ದಾನೆ. ಇಂಡೋನೇಷ್ಯದ ಪ್ರಮುಖ ವಿದ್ಯಾಸಂಸ್ಥೆಗಳಿಗೆಲ್ಲ ಗಣಪತಿಯದ್ದೇ ಮುದ್ರೆ. ಆತ ವಿದ್ಯಾದೇವತೆ; ಚುರುಕು ಬುದ್ಧಿಯವನು; ಕುಶಾಗ್ರಮತಿ ಎಂದು ಅವರು ನಂಬುತ್ತಾರೆ. ಜಗತ್ತಿನ ಅತಿ ದೊಡ್ಡ ಮುಸ್ಲಿಂ ದೇಶವಾದ ಇಂಡೋನೇಷ್ಯದ ರಾಷ್ಟ್ರೀಯ ತಂತ್ರಜ್ಞಾನ ವಿದ್ಯಾಲಯವಾದ ಇನ್ಸ್ಟಿಟ್ಯೂಟ್ ಟೆಕ್ನಾಲಜಿ ಬ್ಯಾಂಡಂಗ್‍ನ ಅಧಿಕೃತ ಮುದ್ರೆ ಎಡಮುರಿ ಗಣಪತಿ. ಈ ಸಂಸ್ಥೆಯ ಮುಖ್ಯಕಚೇರಿ ಇರುವುದು ಗಣೇಶ ರಸ್ತೆಯಲ್ಲಿ. 1998ರಲ್ಲಿ ಚಲಾವಣೆಗೆ ಬಂದ 20,000 ರುಪೇಗಳ ನೋಟಿನಲ್ಲಿ ಇಂಡೋನೇಷ್ಯ ಬೆನಕನ ಚಿತ್ರ ಮುದ್ರಿಸಿದೆ!
ಗಣೇಶ ಇಷ್ಟಪ್ರದಾಯಕ ಮಾತ್ರವಲ್ಲ, ಮಕ್ಕಳ ಇಷ್ಟದ ದೇವತೆಯೂ ಹೌದು. ನಾವು ಚಿಕ್ಕವರಿದ್ದಾಗ ಬೆನಕ ಬೆನಕಾ ಏಕದಂತ ಪಚ್ಚೆಕಲ್ಲು ಪಾಣಿಪೀಠ ಮುತ್ತಿನುಂಡೆ ಹೊನ್ನಗಂಟೆ ಎನ್ನುತ್ತ ರಾಗಬದ್ಧವಾಗಿ ಹಾಡಿ ಗಲಾಟೆ ಎಬ್ಬಿಸುವುದಿತ್ತು. ಈಗ ನಮ್ಮ ಮಕ್ಕಳಿಗೆ ಇವನ್ನೆಲ್ಲ ಕಲಿಸಲು ಸಾಧ್ಯವಿಲ್ಲ. ಒಂದು ಕಾರಣ, ಹಾಡಿನ ಉಳಿದೆಲ್ಲ ಚರಣಗಳು ತೆರೆಯ ಹೊಡೆತಕ್ಕೆ ಅಳಿಸಿದ ಮರಳಿನ ಬರಹದಂತೆ ಮನಸಿನಿಂದ ಮಾಸಿಹೋಗಿ ಬೆನಕ ಬೆನಕಾ ಏಕದಂತ ಎಂಬ ಮೂರ್ನಾಲ್ಕು ಪದಗಳಷ್ಟೇ ಮರೆಯದೆ ಉಳಿದಿವೆ. ಎರಡನೇ ಕಾರಣ, ಈಗಿನ ಮಕ್ಕಳು ಪ್ರತಿಯೊಂದು ಮಾತಿಗೂ ಪ್ರಶ್ನೆ ಹಾಕಿ ಕಾರಣ ಕೇಳಿ ನಮ್ಮನ್ನು ಕಟಕಟೆಯಲ್ಲಿ ನಿಲ್ಲಿಸಿಬಿಡುತ್ತಾರೆ. ಉದಾಹರಣೆಗೆ, ಏಕದಂತ ಅಂದೊಡನೆ, “ಅದ್ಯಾಕೆ ಅವನಿಗೆ ಒಂದೇ ದಂತ? ಇನ್ನೊಂದು ಎಲ್ಲಿ ಹೋಯಿತು? ಶಿವನ ಗಣಗಳು ಕಡಿದು ತರುವಾಗಲೇ ಒಂದೇ ಇತ್ತಾ ಅಥವಾ ತಲೆ ಜೋಡಿಸಿದ ಮೇಲೆ ಈ ಗಣಪತಿ ನಡೆಯುತ್ತ ಬಿದ್ದು ಮುರಿದುಕೊಂಡದ್ದೋ?” ಎಂದು ಪ್ರಶ್ನೆಗಳ ಸುಂಟರಗಾಳಿಯೇ ಶುರುವಾಗಬಹುದು. ನಾನು ಬಹಳ ವರ್ಷಗಳವರೆಗೆ, ಗಣಪ ಯಾರಿಗೋ ಮುತ್ತಿಕ್ಕಲು ಹೋಗಿ ದಂತ ಮುರಿದುಕೊಂಡ ಎಂದೇ ಭಾವಿಸಿದ್ದೆ! ಪ್ರಥಮ ಚುಂಬನಂ ದಂತಭಗ್ನಂ ಎಂಬ ಮಾತೇ ಉಂಟಲ್ಲ! ಆದರೆ ಕೊನೆಗೊಂದು ದಿನ ನಿಜ ಕತೆ ತಿಳಿಯಿತು. ಶಿವಪಾರ್ವತಿಯರು ಪ್ರೇಮಸಲ್ಲಾಪದಲ್ಲಿ ತೊಡಗಿದ್ದಾಗೊಮ್ಮೆ ಗಣೇಶನನ್ನು, ಪಾಪ, ಮನೆಯ ಬಾಗಿಲಲ್ಲಿ ಕಾವಲಿಗೆ ನಿಲ್ಲಿಸಿದ್ದರಂತೆ. ಆಗ ಶಿವದರ್ಶನಕ್ಕಾಗಿ ಅಲ್ಲಿಗೆ ಬಂದ ಪರಶುರಾಮನನ್ನು ಗಣೇಶ ತಡೆದುನಿಲ್ಲಿಸಿ, ಸ್ವಲ್ಪ ಹೊತ್ತು ಕಾಯಿರಿ ಎಂದನಂತೆ. ಪರಶುರಾಮ ಮೊದಲೇ ಕೋಪಿಷ್ಟ; ಕೈಯಲ್ಲಿ ಸದಾ ಬೀಸಾಡುವ ಕೊಡಲಿ ಬೇರೆ! ಕೇಳಬೇಕೆ? ಮುಸುಡಿಗೆ ಹೊಡೆಯುತ್ತೇನೆಂದು ನುಗ್ಗಿದ. ಹಾಗೆ ಮೇಲೇರಿ ಬಂದವನನ್ನು ಗಣಾಧ್ಯಕ್ಷನಾದ ಗಜಾನನ ಸೊಂಡಿಲಲ್ಲೆತ್ತಿ ಮೇಲಿನ ಏಳು ಸ್ವರ್ಗಗಳನ್ನೂ ಕೆಳಗಿನ ಏಳು ನರಕಗಳನ್ನೂ ತೋರಿಸಿ ತಂದು ನೆಲದ ಮೇಲೆ ಕುಕ್ಕಿದ. ಇದರಿಂದ ಮತ್ತಷ್ಟು ಕೆರಳಿದ ಪರಶುರಾಮ ಕೊಡಲಿಯನ್ನು ಬೀಸಿಯೇಬಿಟ್ಟ. ಅದು ಹೋಗಿ ಗಣಮುಖನ ದವಡೆಗೆ ಬಡಿದು ಅಲ್ಲಿನ ದಂತ ಪೂರ್ತಿಯಾಗಿ ಛಿನ್ನವಾಗಿ ನೆಲಕ್ಕೆ ಬಿತ್ತಂತೆ. ಬಹುಶಃ ಲೋಕದಲ್ಲಿ ಆಗಿಹೋದ ಸೆಕ್ಯುರಿಟಿ ಗಾರ್ಡುಗಳ ಪೈಕಿ ಹೀಗೆ ಎರಡೆರಡು ಬಾರಿ ಜೀವಕ್ಕೆ ಅಪಾಯ ತಂದುಕೊಂಡ ವ್ಯಕ್ತಿ ವಕ್ರತುಂಡನೊಬ್ಬನೇ ಅಂತ ಕಾಣುತ್ತದೆ.
ಎಲ್ಲ ಚಿಕ್ಕ ಮಕ್ಕಳೂ ದೇವರ ಚಿತ್ರ ಬರಿ ಎಂದರೆ ಗಣೇಶನನ್ನೇ ಮೊದಲು ಬರೆಯುವುದೆಂದು ಕಾಣುತ್ತದೆ. ಯಾಕೆಂದರೆ ಆತನದ್ದು ಸುಲಭಾಕಾರ. ದೊಡ್ಡ ವೃತ್ತ ಬರೆದರೆ ಅದೇ ಹೊಟ್ಟೆ. ಅದರ ಮೇಲಿನ್ನೊಂದು ಚಿಕ್ಕ ವೃತ್ತ ಎಳೆದರೆ ಅದೇ ಮುಖಾರವಿಂದ. ಮುಖದ ನಡುವಲ್ಲಿ ಸೊಂಡಿಲು ಸಿಕ್ಕಿಸಿ ಅತ್ತಿತ್ತ ಎರಡು ಮೊರದಂಥ ಕಿವಿಗಳನ್ನು ಅಂಟಿಸಿಬಿಟ್ಟರೆ ಗಣೇಶನ ಚಿತ್ರಪಟ ಸಿದ್ಧ! ಗಣೇಶ ಕಾವ್ಯನಾಟಕಾದಿ ಪ್ರಿಯನಾದ್ದರಿಂದ ನಾಟಕಗಳ ನಾಂದಿಯಲ್ಲಿ ಅವನಿಗೇ ಅಗ್ರಪೂಜೆ. ಚಂದ್ರಶೇಖರ ಕಂಬಾರರ “ಸಾಂಬಶಿವ ಪ್ರಹಸನ” ಎಂಬ ನಗೆನಾಟಕದಲ್ಲಿ ಒಂದು ಪ್ರಸಂಗ ಬರುತ್ತದೆ. ಅಪ್ಪ-ಮಗ ಊರ ಹೊರಗಿನ ಗಣೇಶನ ಗುಡಿಯೊಂದಕ್ಕೆ ಬಂದಿದ್ದಾರೆ. ಮಗ ನೇಣು ಹಾಕಿಕೊಳ್ಳುತ್ತೇನೆಂದು ಗುಡಿಯೊಳಗೆ ಹೋಗಿದ್ದಾನೆ. ನೇಣಿಗೆ ಕಾರಣ ಪ್ರೇಮವೈಫಲ್ಯ. ಅಷ್ಟರಲ್ಲಿ ಅಲ್ಲಿಗೆ ಗಣೇಶ ಬಂದಿದ್ದಾನೆ. ಇದ್ಯಾವುದೋ ಹಗಲುವೇಷ ಎಂದು ಹುಡುಗನ ಅಪ್ಪನಾದ ಸಾಂಬನಿಗೆ ಸಂಶಯ. ತನ್ನ ಗುಡಿಯೊಳಗೆ ಮಗನನ್ನು ನೇಣು ಹಾಕಿಕೊಳ್ಳಲು ಕಳಿಸಿ ಹೊರಗೆ ಕೂತು ಚಳಿ ಕಾಯಿಸಿಕೊಳ್ಳುತ್ತಿದ್ದಾನಲ್ಲ ಈ ಬಡ್ಡೀಮಗ ಎಂದು ಗಣೇಶನಿಗೆ ಸಾಂಬನ ಮೇಲೆ ಸಿಟ್ಟು. “ಛೀ ಸಾಯೋದಕ್ಕೆ ನಿಮಗಿದೊಂದೇ ಜಾಗ ಇತ್ತೇನ್ರೀ? ಕರೀರಿ ಅವನ್ನ ಹೊರಕ್ಕೆ” ಎಂದು ಗದರುತ್ತಾನೆ. “ಕರೀತೀನಿ, ಮೇಕಪ್ ತಗೀರಿ ಸ್ವಾಮಿ ಅಂದರೆ…” ಎಂದು ಸಾಂಬನದ್ದು ಒಂದೇ ವರಾತ. ಗಣೇಶನಿಗೆ ಸುಸ್ತಾಗುತ್ತದೆ. “ನೋಡಪ್ಪ, ನಾನು ಮೇಕಪ್ಪಿನಲ್ಲಿರೋ ಗಣೇಶ ಅಲ್ಲ. ನಿಜವಾದ ಗಣೇಶ. ಇದು ನನ್ನ ದೇವಸ್ಥಾನ. ಪೀಠದಲ್ಲಿ ಕೂತು ಕೂತು ಬೋರಾಯ್ತು, ತುಸು ಅಡ್ಡಾಡಿ ಬರೋಣ ಅಂತ ಹೋಗಿದ್ದೆ. ಈಗ ಬಾಗಿಲು ತೆಗೆಸ್ತೀಯಪ?” ಎಂದು ಕೇಳುತ್ತಾನೆ. ಆಗ ಸಾಂಬ ಸ್ವಗತದಲ್ಲಿ ಅಂದುಕೊಳ್ಳುತ್ತಾನೆ: ಓಹೋ, ಇವನು ಕಂಪೆನಿ ನಾಟಕದೋನಲ್ಲ, ಹುಚ್ಚಾಸ್ಪತ್ರೆ ಗಿರಾಕಿ!
ಈ ಸೀನು ಓದುವಾಗ ನನಗೆ ನೆನಪಿಗೆ ಬಂದದ್ದು ಬಿ.ವಿ. ಕಾರಂತರು. ಅವರೊಂದು ಕಡೆ ಹೇಳುತ್ತಾರೆ: ನಾವು ನಮ್ಮ ದೇವರನ್ನು ಎಲ್ಲಿ ಹೇಗೆ ಬೇಕಾದರೂ ಒಯ್ಯುತ್ತೇವೆ, ಏರಿಸುತ್ತೇವೆ, ಇಳಿಸುತ್ತೇವೆ. ಅದು ಲೀಲೆ. ದೇವರ ಲೀಲೆ. ನಮ್ಮದೂ ಲೀಲೆ. ನಮ್ಮ ಮಟ್ಟದಲ್ಲಿ ಆಟ. ಮೇಲ್ಮಟ್ಟಕ್ಕೆ ಹೋದರೆ “ಲೀಲೆ”. ನಮ್ಮಲ್ಲಿ ಮೊದಲಿಂದಲೂ “ಲೀಲಾ” ಎಂಬ ಶಬ್ದ ರೂಢಿಯಲ್ಲಿ ಸಾಗಿಕೊಂಡು ಬಂದಿದೆ. ರಾಮಲೀಲಾ, ಕೃಷ್ಣಲೀಲಾ – ಮುಂತಾಗಿ. ನಾಟಕ ಅಂದರೇನೇ ಲೀಲೆ. ಆಟ, ಪ್ಲೇ, ಗೇಮ್. ಇನ್ನು ಯಾವ ದೇಶದಲ್ಲೂ ಹೀಗಿಲ್ಲ. ದೇವರು ಎಂಬ ಕಲ್ಪನೆಯೊಂದಿಗೆ ಹೇಗೆ ಹೇಗೆಲ್ಲ ಆಟ ಆಡುವ ನಮ್ಮಂಥವರಿಗೆ ಮೂಲಭೂತವಾದಿಗಳಾಗೋದು ಸಾಧ್ಯವೇ ಇಲ್ಲ!”
ಇರಬಹುದೇನೋ. ದೇವರ ದೂತನ ಚಿತ್ರ ಬರೆದದ್ದಕ್ಕೇ ಪತ್ರಿಕಾ ಕಚೇರಿಗೇ ಬೆಂಕಿ ಹಚ್ಚಿದ, ಯುದ್ಧ ಘೋಷಿಸಿದ ಜನರಿರುವಾಗ ನಮ್ಮಲ್ಲಿ ಮಾತ್ರ ದೇವರನ್ನೂ ನಮ್ಮ ಅಕ್ಕಪಕ್ಕದಲ್ಲಿರುವ ಎಂಕ ನಾಣಿಗಳೋ ಎಂಬಂತೆ ನಡೆಸಿಕೊಳ್ಳುತ್ತೇವೆ. ದೇವರಿಗೇ ಬಯ್ದು ಮಂಗಳಾರತಿ ಮಾಡುತ್ತೇವೆ. ವಶೀಲಿ ತೋರಿಸುತ್ತೇವೆ. ಚೌಕಾಶಿಗಿಳಿಯುತ್ತೇವೆ. ನಮ್ಮ ದೇವರೂ ಅಷ್ಟೆ, ನಮ್ಮ ಹುಚ್ಚಾಟಗಳನ್ನೆಲ್ಲ ಸಹಿಸಿಕೊಳ್ಳುವ ಕಾರುಣ್ಯಸಿಂಧು ಜಗದೇಕಬಂಧುಗಳು. ನೋಡಿ ಬೇಕಾದರೆ, ಸಾರ್ವಜನಿಕ ಗಣೇಶೋತ್ಸವಗಳಲ್ಲಿ ಚಾಮರಕರ್ಣ ತನ್ನನ್ನು ಹೇಗೆಲ್ಲ ಚಿತ್ರಿಸಿ ಪೂಜಿಸುವ ಸ್ವಾತಂತ್ರ್ಯವನ್ನು ಕೊಟ್ಟುಬಿಟ್ಟಿದ್ದಾನೆ! ಹಾಗಾಗಿಯೇ ಆತನನ್ನು ನಾವು ಶಿವಲಿಂಗ ಹೊತ್ತ ಬಾಹುಬಲಿಯಾಗಿ, ಗಡಿ ಕಾಯುವ ಸೇನಾನಿಯಾಗಿ, ದುಷ್ಟರಿಗೆ ಸಿಂಹಸ್ವಪ್ನನಾದ ಸಾಂಗ್ಲಿಯಾನ ಆಗಿ, ಕ್ರಿಕೆಟ್ ಕಲಿಯಾಗಿ ಚಿತ್ರಿಸಿದ್ದೇವೆ. ಉಳಿದವರು ಹೂಹಾರಗಳನ್ನು ಕೇಳುವಾಗ ತನಗೆ ನೆಲದಲ್ಲಿ ಯಥೇಚ್ಛವಾಗಿ ಬೆಳೆಯುವ ಗರಿಕೆಯನ್ನೇ ಆಯ್ದು ಕಟ್ಟಿದ ಮಾಲೆ ಹಾಕಿದರೂ ಆದೀತೆನ್ನುವ ಮಹಾ ಉದಾರಿ ಈತ! ಗಣೇಶ ಸೋಮಾರಿಗಳ ದೇವತೆ. ಮೂರು ಲೋಕ ಸುತ್ತುವ ಕಷ್ಟ ತೆಗೆದುಕೊಳ್ಳದೆ ಹೆತ್ತವರಿಗೇ ಸುತ್ತು ಬಂದು ಯಾಮಾರಿಸಿದವನು. ಹಾಗೆಯೇ ಮಹಾ ಕೆಲಸಗಳ್ಳ. ರಾವಣ ಕೊಟ್ಟ ಇಷ್ಟಲಿಂಗವನ್ನು ಹೊರಲು ನೂರೆಂಟು ನೆಪ ಒಡ್ಡಿ ಭಕ್ತರಿಗೆ ಗೋಕರ್ಣವೆಂಬ ಹೊಸ ಕ್ಷೇತ್ರವನ್ನೇ ಸೃಷ್ಟಿಸಿಕೊಟ್ಟವನು! ಈತ ಸ್ವಲ್ಪ ಮುಂಗೋಪಿ ಕೂಡ. ತನ್ನನ್ನು ಕಂಡು ಕಿಸಕ್ಕೆಂದ ಚಂದ್ರನಿಗೆ ಭೂಮಿಯಲ್ಲೇ ನಿಂತು ಶಾಪ ಕೊಟ್ಟು ಸೇಡು ತೀರಿಸಿಕೊಂಡವನು. ಆದರೆ ಕೆಲಸಕ್ಕೆ ಕೂರುವುದೇ ಆದರೆ ರಾಕ್ಷಸನಂತೆ ಹಗಲಿರುಳು ದುಡಿಯುವ ಕಷ್ಟಸಹಿಷ್ಣು ಕೂಡ. ಒಂದು ಲಕ್ಷ ಪದ್ಯಗಳಿರುವ ಮಹಾಭಾರತವನ್ನು ಈತನಿಲ್ಲದೇ ಹೋಗಿದ್ದರೆ ವ್ಯಾಸರು ಬರೆದು ಮುಗಿಸುವುದಿತ್ತೆ?
ಲಿಪಿಕಾರ ಗಣೇಶನ ಮಾತು ಬಂದಾಗ ಮತ್ತೆ ಬಾಬುಕೋಡಿ ಕಾರಂತರ ನೆನಪಾಗುತ್ತದೆ. ಅವರೊಂದು ಕಡೆ ಹೇಳಿದ್ದುಂಟು: “ನನ್ನ ಮಟ್ಟಿಗೆ ಗಣಪತಿ ಮುಂತಾದ ಕಲ್ಪನೆಗಳೆಲ್ಲಾ ಧಾರ್ಮಿಕ ಅಲ್ಲ. ಥಿಯಟ್ರಿಕಲ್. ನಮಗೆ ನಾಟಕದವರಿಗೆ ಥಿಯಟ್ರಿಕಲ್ ಡಿವೈಸ್‍ಗಳೇ ಮುಖ್ಯ. ಇದಕ್ಕೆ ನಮ್ಮ ಹಿಂದೂ ದೇವರುಗಳು ಕೊಡುವ ಅವಕಾಶ ಅಷ್ಟಿಷ್ಟಲ್ಲ. ನನ್ನ ಪ್ರಿಯ ಮೇಷ್ಟ್ರು ಪಿ.ಕೆ. ನಾರಾಯಣ ಗಣಪತಿಯ ಬಗ್ಗೆ ಅನೇಕ ಕತೆಗಳನ್ನು ಹೇಳುತ್ತಿದ್ದರು. ಅದರಲ್ಲೊಂದು ಮಹಾಭಾರತದ ರಚನೆಯಲ್ಲಿ ಗಣಪತಿ. ಮಹಾಭಾರತ ಬರೆಸುವಾಗ ವ್ಯಾಸ ಮಹರ್ಷಿಗಳು ಗಣಪತಿಗೆ ಮಧ್ಯೆ ಎಲ್ಲಿಯೂ ಬರೆಯುವುದನ್ನು ನಿಲ್ಲಿಸಬಾರದೆಂದು ಹೇಳಿದರಂತೆ. ಗಣಪತಿ ಒಪ್ಪಿದನಾದರೂ ಅವನದೂ ಕಂಡೀಶನ್ – “ನಿಲ್ಲಿಸದೇ ಬರೀತೀನಿ ಬೇಕಾದರೆ, ಆದರೆ ನೀನೂ ಹೇಳೋದನ್ನು ಮಧ್ಯೆ ನಿಲ್ಲಿಸಬಾರದು”. ಆಗ ವ್ಯಾಸರು “ಆಯಿತು ನಾನು ನಿಲ್ಲಿಸೋದಿಲ್ಲ. ಆದರೆ ನೀನು ಅರ್ಥ ಮಾಡಿಕೊಳ್ಳದೆ ಬರೆಯಬಾರದು!” ಎಂದರು. ಗಣಪತಿ ಒಪ್ಪಿಕೊಂಡ. ಸಾವಿರ ಶ್ಲೋಕಗಳಾದ ಮೇಲೆ ಒಂದು ಕ್ಲಿಷ್ಟವಾದ ಶ್ಲೋಕ ಹೇಳುತ್ತಿದ್ದರಂತೆ ವ್ಯಾಸರು. ಅಕ್ಷರಗಳನ್ನು ಆ ಕಡೆಯಿಂದ ಈ ಕಡೆ ಹಾಕಿದರೆ ಅಥವಾ ಈ ಕಡೆಯಿಂದ ಆ ಕಡೆ ಹಾಕಿದರೆ ಅರ್ಥವೇ ಬೇರೆ ಆಗಿಬಿಡುವಂಥದ್ದು. ಅಂತಹ ಸಂದರ್ಭದಲ್ಲಿ ಗಣಪತಿ ತನ್ನ ಸೊಂಡಿಲಿನಿಂದ ತಲೆ ತುರಿಸಿಕೊಳ್ಳುತ್ತಾ ಯೋಚಿಸುತ್ತಿದ್ದನಂತೆ! ಎಂತಹ ನಾಟಕೀಯ ಕ್ರಿಯೆ ಇದು! ಸೊಂಡಿಲಿನಿಂದ ತಲೆ ತುರಿಸಿಕೊಳ್ಳೋದು!”
ಬಹುಶಃ ಇದೇ ಕಾರಣಕ್ಕಾಗಿ ಈತ ಜನರ ದೇವತೆ. ಯಾಕೆಂದರೆ ಗಣೇಶ ಉಳಿದವರಂತೆ ಕಟ್ಟುನಿಟ್ಟಿನ ಬೆಂಕಿಕೋಳಿಯಲ್ಲ. ನಿಯಮಗಳನ್ನು ವಿಧಿಸುವವನಲ್ಲ. ಮಂತ್ರ-ವೇದಘೋಷಗಳನ್ನು ಹೇಳಿಸುವವನಲ್ಲ. ಚಂದ್ರನೊಬ್ಬನನ್ನು ಬಿಟ್ಟರೆ ಗಣೇಶ ಯಾರಿಗೂ ಶಾಪ ಕೊಟ್ಟ ಉದಾಹರಣೆ ಕೂಡ ಇಲ್ಲ. ಅವನಿದ್ದಲ್ಲಿ ಗಾನ, ನೃತ್ಯ, ಸಾಹಿತ್ಯ, ಮನರಂಜನೆಗಳ ಮೃಷ್ಟಾನ್ನವೇ ಇರುತ್ತದೆ. ಹುಟ್ಟಿ ಬಂದ ಮೇಲೆ ನಾಲ್ಕು ದಿನ ಖುಷಿಖುಷಿಯಾಗಿ ಇದ್ದು ಸಂಭ್ರಮಿಸಿ ಹೋಗಬೇಕೆನ್ನುವವರಿಗೆ ಈತ ಹೇಳಿಮಾಡಿಸಿದ ದೇವರು. ಅದಕ್ಕೇ ನೋಡಿ, ಗಣೇಶ ಚತುರ್ಥಿಯ ಆಚೀಚಿನ ಹತ್ತುದಿನ ಊರೆಲ್ಲ ಒಂದಿಲ್ಲೊಂದು ಸಂಭ್ರಮ. ಮುಂಬಯಿ ನಗರಿಯಲ್ಲಂತೂ ಗಣೇಶೋತ್ಸವದ ಸಿದ್ಧತೆ ತಿಂಗಳ ಮೊದಲೇ ಶುರುವಾಗಿಬಿಡುತ್ತದೆ. ಘನಗಂಭೀರವಾದ ಸುಡುಮೋರೆಯ ದೇವಗಣದ ಪೈಕಿ ಇಂಥ ಒಬ್ಬ ನಗೆಗಾರನೂ ಇರಲಿ ಎಂದೇ ಯಾರೋ ಕಿಲಾಡಿಗಳು ಗಣೇಶನನ್ನು ಅಂಥ ವಿಚಿತ್ರ ಬಗೆಯಲ್ಲಿ ಸೃಷ್ಟಿಸಿ ಇಂಥ ನಮಗೆ ಕೊಟ್ಟಿರಬಹುದೆ? ಆ ಗಣನಾಥ ವಕ್ರತುಂಡ ವಿಘ್ನೇಶ್ವರನಿಗೇ ಗೊತ್ತು!
ತಂಬಾ ಸುಂದರವಾದ ವಿವರಣೆ.
ಬರಹ ಓದುತ್ತ ಹೋದಂತೆ ಅರಿವಿಲ್ಲದೆ ನಗು ಉಕ್ಕಿಸುವ ಬರಹ ತುಂಬಾ ಚೆನ್ನಾಗಿದೆ ಬರೆದಿದ್ದೀರಾ ಗಣೇಶನ ಪುರಾಣ
saakshaat eda pantheeyara thara bareda lEkhanavaagide 🙂 🙂 😉