ಸ್ವಾತಂತ್ರ್ಯೋತ್ಸವ ವಿಶೇಷ ಸರಣಿ – ದಿನಕ್ಕೊಬ್ಬ ದೇಶಭಕ್ತರ ಸ್ಮರಣೆ
ದಿನ – 19:
ಸುಬ್ರಮಣ್ಯ ಭಾರತಿ
– ರಾಮಚಂದ್ರ ಹೆಗಡೆ
ಮಹಾಕವಿ ಭಾರತಿಯಾರ್ ಎಂದೇ ಪ್ರಸಿದ್ಧರಾದ, ಭಾರತದ ಅತ್ಯುತ್ತಮ ಕವಿಗಳಲ್ಲಿ ಒಬ್ಬರು ಎಂಬ ಖ್ಯಾತಿಗೆ ಪಾತ್ರರಾದ ತಮಿಳುನಾಡಿನ ಕವಿ, ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸುಧಾರಕರು ಶ್ರೀ ಸುಬ್ರಮಣ್ಯ ಭಾರತಿ. ತಮ್ಮ ರಾಷ್ಟ್ರೀಯವಾದಿ ಸಾಹಿತ್ಯದ ಮೂಲಕ ಭಾರತೀಯ ಸ್ವಾತಂತ್ರ್ಯ ಸಂಗ್ರಾಮಕ್ಕೆ ದಕ್ಷಿಣ ಭಾರತದಲ್ಲಿ ಜನಸಮೂಹವನ್ನು ಸಂಘಟಿಸುವಲ್ಲಿ ಸುಬ್ರಮಣ್ಯ ಭಾರತಿಯವರ ಪಾತ್ರ ಬಲು ದೊಡ್ಡದು. ಆವರ ಹಲವಾರು ಕೃತಿಗಳು ಭಾರತೀಯ ಸ್ವಾತಂತ್ಯ ಆಂದೋಲನದ ಕಾಲದಲ್ಲಿ ದೇಶಭಕ್ತಿ ಮತ್ತು ರಾಷ್ಟ್ರೀಯತೆಯ ಜ್ವಾಲೆಯನ್ನು ಪ್ರಖರಗೊಳಿಸುವಲ್ಲಿ ನೆರವಾದವು ಹಾಗೂ ದೇಶಪ್ರೇಮವನ್ನು ಬಡಿದೆಬ್ಬಿಸಿದವು. 1882ರಲ್ಲಿ ತಮಿಳುನಾಡಿನ ಎತ್ತಯಾಪುರಂ ಎಂಬ ಗ್ರಾಮದಲ್ಲಿ ಜನಿಸಿದ ಸುಬ್ರಮಣ್ಯ ಭಾರತಿ ತಿರುನಲ್ವೇಲಿಯಲ್ಲಿ ಆರಂಭಿಕ ಶಿಕ್ಷಣ ನಂತರ ವಾರಣಾಸಿ ಯಲ್ಲಿ ಪ್ರೌಢ ಹಾಗೂ ಪದವಿ ಶಿಕ್ಷಣ ಪಡೆದರು. ಬಾಲ್ಯದಿಂದಲೇ ಅತ್ಯಂತ ಪ್ರತಿಭಾಶಾಲಿ ಕವಿಯಾಗಿದ್ದ ಭಾರತಿ ತಮ್ಮ 11ನೇ ವಯಸ್ಸಿನಲ್ಲೆ ಎತ್ತಯಾಪುರಂನ ಆಸ್ಥಾನ ಕವಿಗಳು ಹಾಗು ಸಂಗೀತಗಾರರ ಸಮ್ಮೇಳನಕ್ಕೆ ಆಹ್ವಾನಿತರಾಗಿದ್ದರು. ವಾರಣಾಸಿ ಯಲ್ಲಿ ನೆಲಸಿದ್ದ ಅವಧಿಯಲ್ಲಿ ಭಾರತಿಯವರು ಹಿಂದೂ ಆಧ್ಯಾತ್ಮಿಕತೆ ಹಾಗು ರಾಷ್ಟ್ರೀಯತೆಯ ಪ್ರಭಾವಕ್ಕೆ ಒಳಗಾದರು. ಜೊತೆಗೆ ಅವರು ಸಂಸ್ಕೃತ, ಹಿಂದಿ ಹಾಗು ಆಂಗ್ಲ ಭಾಷೆಗಳಲ್ಲಿ ಪರಿಣತಿಯನ್ನು ಹೊಂದಿದರು. ಡಿಸೆಂಬರ್ 1905ರಲ್ಲಿ, ಬನಾರಸ್ ನಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದಲ್ಲಿ ಭಾರತಿ ಪಾಲ್ಗೊಂಡರು. ನಂತರ ಅವರು ವಿವೇಕಾನಂದರ ಮಾನಸ ಪುತ್ರಿ ಸೋದರಿ ನಿವೇದಿತಾರನ್ನು ಸಂಧಿಸಿದರು.
ನಿವೇದಿತಾರ ಭೇಟಿ ಭಾರತಿಯವರಲ್ಲಿ ಹೊಸ ಚಿಂತನೆಯನ್ನು ಹುಟ್ಟುಹಾಕಿತು ಮತ್ತು ಭಾರತೀಯ ಸಮಾಜದ ಏಳಿಗೆಯ ಕಾರ್ಯದಲ್ಲಿ ಮತ್ತಷ್ಟು ತಮ್ಮನ್ನು ತೊಡಗಿಸಿಕೊಳ್ಳಲು ಕಾರಣವಾಯಿತು. ಸಶಸ್ತ್ರ ಕ್ರಾಂತಿ ಹಾಗೂ ಅಹಿಂಸಾತ್ಮಕ ಹೋರಾಟಗಳ ಕವಲುಗಳ ಮಧ್ಯೆ ಜನರನ್ನು ಸ್ವಾತಂತ್ರ್ಯಾಂದೋಲನದಲ್ಲಿ ಜಾಗೃತಗೊಳಿಸಲು ಸಾಹಿತ್ಯದ ಮಹತ್ವವನ್ನು ಭಾರತಿ ಮನಗಂಡರು. ಈ ಉದ್ದೇಶ ಸಾಧನೆಗಾಗಿ ಭಾರತಿ 1904ರಲ್ಲಿ ತಮಿಳು ದಿನಪತ್ರಿಕೆ ಸ್ವದೇಶಮಿತ್ರನ್ ನಲ್ಲಿ ಸಹಾಯಕ ಸಂಪಾದಕರಾಗಿ ಕಾರ್ಯ ಆರಂಭಿಸಿದರು. ಏಪ್ರಿಲ್ 1907ರಲ್ಲಿ ತಮಿಳು ವಾರಪತ್ರಿಕೆ ಇಂಡಿಯಾ ಹಾಗು ಆಂಗ್ಲ ದಿನಪತ್ರಿಕೆ ಬಾಲ ಭಾರತಮ್ ನಲ್ಲಿ ಸಹ ಸಂಪಾದಕತ್ವ ದಲ್ಲಿ ರಾಷ್ಟ್ರೀಯ ವಿಚಾರಗಳನ್ನು ಪ್ರಕಟಿಸತೊಡಗಿದರು. ಈ ಪತ್ರಿಕೆಗಳಲ್ಲಿನ ಭಾರತಿಯವರ ಕವಿತೆಗಳು, ಲೇಖನಗಳು ರಾಷ್ಟ್ರೀಯತೆಯನ್ನು ಬಡಿದೆಬ್ಬಿಸಿದ್ದು ಮಾತ್ರವಲ್ಲ ಬ್ರಿಟಿಷರ ವಿರುದ್ಧ ಜನಜಾಗೃತಿಯಲ್ಲಿ ಮಹತ್ವದ ಪಾತ್ರ ವಹಿಸಿದವು. 1908 ರಲ್ಲಿ ಮದರಾಸಿನಲ್ಲಿ ಸ್ವರಾಜ್ (ಸ್ವಾತಂತ್ರ್ಯ) ದಿವಸವನ್ನು ಆಚರಿಸುವ ಸಲುವಾಗಿ ಸಾರ್ವಜನಿಕ ಸಭೆಯನ್ನು ಅವರು ಆಯೋಜಿಸಿದರು. ಅಲ್ಲಿ ಭಾರತಿಯವರ ವಂದೇ ಮಾತರಂ, ಎಂಥಯುಂ ಥಾಯುಂ ಹಾಗು ಜಯ ಭಾರತ್ ಎಂಬ ರಾಷ್ಟ್ರೀಯತಾವಾದಿ ಕವಿತೆಗಳನ್ನು ಮುದ್ರಿಸಿ ಪ್ರೇಕ್ಷಕರಿಗೆ ಉಚಿತವಾಗಿ ವಿತರಣೆ ಮಾಡಲಾಯಿತು. ಅದು ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಯಿತು. ಭಾರತಿಯವರ ಬರಹಗಳ ಪ್ರಖರತೆ ಹೇಗಿತ್ತೆಂದರೆ ಅದೇ ವರ್ಷ ಇಂಡಿಯಾ ಪತ್ರಿಕೆಯ ಸಂಪಾದಕರನ್ನು ಬ್ರಿಟಿಷರು ಬಂಧಿಸಿದರು. ಬಂಧನವಾಗುವುದನ್ನು ತಪ್ಪಿಸಿಕೊಳ್ಳಲು ಭಾರತಿ ಫ್ರೆಂಚರ ಆಳ್ವಿಕೆಯ ಪಾಂಡಿಚೇರಿಗೆ ತಪ್ಪಿಸಿಕೊಂಡು ಹೋಗಿ ಅಲ್ಲಿಂದ ಮತ್ತೆ ತಮ್ಮ ಪತ್ರಿಕೆಗಳನ್ನು ಮುದ್ರಿಸಿ ಬ್ರಿಟಿಷರಿಗೆ ಬಿಸಿ ಮುಟ್ಟಿಸಲಾರಂಭಿಸಿದರು.
ಪಾಂಡಿಚೇರಿಯಿಂದ ಅವರು ಇಂಡಿಯಾ, ವಿಜಯಾ, ಬಾಲ ಭಾರತ, ಸೂರ್ಯೋದಯಂ ಎಂಬ ಹಲವು ಪತ್ರಿಕೆಗಳನ್ನು ಪ್ರಕಟಿಸಿದರು. ಭಾರತಿಯವರ ಲೇಖನಗಳನ್ನು ನಿಗ್ರಹಿಸುವ ದೃಷ್ಟಿಯಿಂದ ಬ್ರಿಟಿಷರು ಹಣವನ್ನು ರವಾನಿಸುವುದನ್ನು ನಿಲ್ಲಿಸುವುದರ ಜೊತೆಗೆ ಪತ್ರಿಕೆಗಳಿಗೆ ಪತ್ರಗಳು ತಲುಪದಂತೆ ಮಾಡುವ ಪ್ರಯತ್ನ ಮಾಡಿದರು. ಭಾರತಿಯವರು ಹೊರತರುತ್ತಿದ್ದ ಇಂಡಿಯಾ, ವಿಜಯಾ ಪತ್ರಿಕೆಗಳನ್ನು ಬ್ರಿಟಿಷರು ನಿಷೇಧಿಸಿದರು. ತಮ್ಮ ಗಡಿಪಾರಿನ ಅವಧಿಯಲ್ಲಿ ಭಾರತಿಯವರಿಗೆ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿ ಗುಂಪಿನ ನಾಯಕರುಗಳಾದ ಶ್ರೀ ಅರಬಿಂದೊ, ಲಾಲಾ ಲಜಪತ್ ರಾಯ್ ಹಾಗು ವಿ.ವಿ. ಎಸ್ ಅಯ್ಯರ್ ಮುಂತಾದವರ ನಿಕಟ ಸಂಪರ್ಕ ಅವರಿಗೆ ದೊರಕಿತು. ಬ್ರಿಟಿಷರು ಬಂಗಾಳ ವಿಭಜನೆಗೆ ಪ್ರಯತ್ನಿಸಿದ ಸಂದರ್ಭದಲ್ಲಿ ಅದಕ್ಕೆ ಪ್ರತಿರೋಧವಾಗಿ ಎದ್ದ ‘ಸ್ವದೇಶಿ ಆಂದೋಲನ’ ಹಿರಿಕಿರಿಯರೆನ್ನದೇ ಎಲ್ಲರನ್ನೂ ಒಳಗೊಂಡು ಪ್ರಖರವಾಗಿ ಹಬ್ಬಿ ಲಾಲಾ ಲಜಪತರಾಯರಿಂದ ಪಂಜಾಬಿಗೆ, ತಿಲಕರಿಂದ ಮಹಾರಾಷ್ಟ್ರಕ್ಕೆ, ಸುಬ್ರಮಣ್ಯ ಭಾರತಿ ಅವರಿಂದ ತಮಿಳುನಾಡಿಗೆ ಪಸರಿಸಿತು.
ಭಾರತಿಯವರು ರಾಷ್ಟ್ರೀಯವಾದಿ ಸಾಹಿತ್ಯ ಅಷ್ಟೇ ಅಲ್ಲದೆ ಧಾರ್ಮಿಕ ಹಾಗು ದಾರ್ಶನಿಕ ಸಾಹಿತ್ಯ, ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಸಂಬಂಧಿಸಿದ ಸಾಹಿತ್ಯ, ಹಲವಾರು ಗದ್ಯ ಪದ್ಯ ಕಾದಂಬರಿಗಳನ್ನೂ ರಚಿಸಿದ್ದಾರೆ. ಅವರು ತಮಿಳು, ತೆಲುಗು, ಬೆಂಗಾಲಿ, ಹಿಂದಿ, ಸಂಸ್ಕೃತ, ಫ್ರೆಂಚ್ ಹಾಗು ಆಂಗ್ಲ ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದರು. ನವೆಂಬರ್ 1918ರಲ್ಲಿ ಕಡಲೋರ್ ಸಮೀಪ ಬ್ರಿಟಿಷ್ ಇಂಡಿಯಾ ನೆಲೆಯನ್ನು ಪ್ರವೇಶಿಸಿದ್ದಕ್ಕಾಗಿ ಬ್ರಿಟಿಷರು ಭಾರತಿಯವರನ್ನು ಬಂಧಿಸಿ ಸೆರೆಮನೆಗೆ ತಳ್ಳಿದರು. ಸ್ವಾತಂತ್ರ್ಯೋತ್ತರ ಭಾರತದ ಬಗ್ಗೆ ಸುಬ್ರಮಣ್ಯ ಭಾರತಿ ಅವರಿಗೆ ಬಹಳವಾದ ಕನಸುಗಳಿದ್ದವು. ಭಾರತವು ಖಚಿತವಾಗಿ ಯಾವುದೋ ಒಂದು ಹಂತದಲ್ಲಿ ಸ್ವಾತಂತ್ರ್ಯ ಗಳಿಸುತ್ತದೆಂಬ ಭರವಸೆ ಹೊಂದಿದ್ದರು. ಸ್ವಾತಂತ್ರ್ಯ ಆಚರಿಸಲು ಬಳಸಿಕೊಳ್ಳಬಹುದಾದ ಹಾಡನ್ನು ಮೊದಲ ಬಾರಿಗೆ ಅವರು ಬರೆದರು. ಆದರೆ ಭಾರತವು ಸ್ವಾತಂತ್ರ್ಯ ಗಳಿಸುವ ಮೊದಲೇ ನಿಧನರಾದರು. ದುರದೃಷ್ಟವಶಾತ್ ತಮ್ಮ ಬಿಡುವಿಲ್ಲದ ಹೋರಾಟದ ಫಲವಾಗಿ ಕೇವಲ 38 ನೇ ವಯಸ್ಸಿಗೆ 1921 ಸೆಪ್ಟೆಂಬರ್ 11ರಂದು ಈ ಮಹಾಕವಿ, ಶ್ರೇಷ್ಠ ರಾಷ್ಟ್ರಾಭಿಮಾನಿ ವಿಧಿವಶರಾದರು. ಇಂದಿಗೂ ಅವರ ಸಾಹಿತ್ಯ ರಾಷ್ಟ್ರಪ್ರೇಮಿಗಳಿಗೆ ನವ ಚೈತನ್ಯ ತುಂಬುತ್ತಲೇ ಇದೆ.