ಸ್ವಾತಂತ್ರ್ಯೋತ್ಸವ ವಿಶೇಷ ಸರಣಿ – ದಿನಕ್ಕೊಬ್ಬ ದೇಶಭಕ್ತರ ಸ್ಮರಣೆ
ದಿನ – 21:
ಲಾಲಾ ಹರದಯಾಳ್
– ರಾಮಚಂದ್ರ ಹೆಗಡೆ
‘ಬೇಕಾಗಿದ್ದಾರೆ – ಭಾರತದಲ್ಲಿ ಬಂಡಾಯವೆಬ್ಬಿಸಲು ಸೈನಿಕರು.
ವೇತನ – ಸಾವು
ಬಹುಮಾನ – ಹುತಾತ್ಮತೆ
ಪೆನ್ಷನ್ – ಸ್ವಾತಂತ್ರ್ಯ
ಯುದ್ಧ ಕ್ಷೇತ್ರ – ಭಾರತ’
ಹೀಗೆ ದಪ್ಪ ದಪ್ಪ ಅಕ್ಷರಗಳಲ್ಲಿ ಈ ಜಾಹೀರಾತು, 1914ರ ಸೆಪ್ಟೆಂಬರ್ ತಿಂಗಳಲ್ಲಿ ಹೊರಬಿದ್ದ “ಗದರ್” ಪತ್ರಿಕೆಯ ಮುಖಪುಟದಲ್ಲಿ ಅಚ್ಚಾಗಿತ್ತು. ಗದರ್ (ಬಂಡಾಯ) ಪಕ್ಷ, ಗದರ್ ಪತ್ರಿಕೆ – ಮೊದಲನೆಯ ಮಹಾಯುದ್ಧ ಆರಂಭವಾಗುವುದಕ್ಕೆ ಸ್ವಲ್ಪ ಮುಂಚೆ ಸ್ಥಾಪಿತವಾಗಿ, ಸಶಸ್ತ್ರ ಬಂಡಾಯವೆಬ್ಬಿಸಿ ಭಾರತವನ್ನು ಸ್ವತಂತ್ರಗೊಳಿಸಲು ಮಹಾನ್ ಪ್ರಯತ್ನ ನಡೆಸಿದವು. ಈ ಕ್ರಾಂತಿಯ ಉರಿಯೆಬ್ಬಿಸಿದ ಸಾಹಸಿ ಲಾಲಾ ಹರದಯಾಳ್. ವಿದೇಶದಲ್ಲಿರುವ ಭಾರತೀಯರನ್ನು ಸಂಘಟಿಸಿ ಅವರಲ್ಲಿ ತಾಯ್ನಾಡಿನ ಸ್ವಾತಂತ್ರ್ಯ ಭಾವನೆ ಅರಳಿಸಿ ಅವರೆಲ್ಲರೂ ಸ್ವದೇಶಕ್ಕೆ ತೆರಳಿ ದಂಗೆಯೇಳುವಂತೆ ಮಾಡಬೇಕು ಎಂಬುದು ಲಾಲನ ಅಪೇಕ್ಷೆಯಾಗಿತ್ತು. 1884 ರಲ್ಲಿ ಜನಿಸಿದ ಹರದಯಾಳ್ ಚಿಕ್ಕಂದಿನಲ್ಲೇ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ತಮ್ಮ ತಂದೆ ತಾಯಿಯಿಂದ ಕೇಳಿ ತಿಳಿದಿದ್ದರು. ಬ್ರಿಟಿಷ್ ಸರ್ಕಾರದಿಂದಲೇ ವಿದ್ಯಾರ್ಥಿ ವೇತನ ಪಡೆದು ಉನ್ನತ ವ್ಯಾಸಂಗಕ್ಕಾಗಿ ಆಕ್ಸ್ಫರ್ಡ್ ಗೆ ತೆರಳಿದ ಲಾಲಾ ಅಲ್ಲಿ ಸಾವರ್ಕರ್, ಶ್ಯಾಮಜಿ ಕೃಷ್ಣವರ್ಮ, ಭಾಯಿ ಪರಮಾನಂದರ ಸಂಪರ್ಕಕ್ಕೆ ಬಂದು ಭಾರತ ಭಕ್ತರಾಗಿ ಬದಲಾದರು.
ಬ್ರಿಟಿಷರ ದಬ್ಬಾಳಿಕೆ, ಶೋಷಣೆ, ದೌರ್ಜನ್ಯಗಳ ಕುರಿತು ತಿಳಿದುಕೊಂಡ ಅವರು ಬ್ರಿಟಿಷ್ ಸರ್ಕಾರ ನೀಡುತ್ತಿದ್ದ ವಿದ್ಯಾರ್ಥಿವೇತನವನ್ನು ಹಿಂತಿರುಗಿಸಿ ವಿದ್ಯಾಭ್ಯಾಸವನ್ನು ಅರ್ಧಕ್ಕೇ ನಿಲ್ಲಿಸಿದರು. ತಮಗೆ ದೊರೆತ ವಿದ್ಯಾರ್ಥಿ ವೇತನವನ್ನು ರಾಷ್ಟ್ರಭಕ್ತಿಯ, ದೇಶದ ಸ್ವಾತಂತ್ರ್ಯ ಹೋರಾಟದ ಕಾರಣದಿಂದ ಹಿಂತಿರುಗಿಸಿದವರಲ್ಲಿ ಹರದಯಾಳರು ಮೊದಲಿಗರು. ವಿದೇಶದಲ್ಲಿ ಭಾರತೀಯ ಕ್ರಾಂತಿಕಾರರು ಭಾರತದ ಸ್ವಾತಂತ್ರ್ಯಕ್ಕಾಗಿ ನಡೆಸಿದ ಹೋರಾಟಗಳಲ್ಲೂ ಅಗ್ರಗಣ್ಯವಾದದ್ದು ಲಾಲಾ ಹರದಯಾಳ್‌ರ ಹೋರಾಟ. ಮುಂದೆ ರಾಸ್ ಬಿಹಾರಿ ಬೋಸರು, ನೇತಾಜಿ ಸುಭಾಷರ ಹೋರಾಟಕ್ಕೆ ಮುಖ್ಯ ಭೂಮಿಕೆ ಒದಗಿಸಿದವರು ಹರದಯಾಳರು. ವಿಷ್ಣು ಪಿಂಗಳೆ ಹಾಗೂ ಹರನಾಮ್ ಸಿಂಗರೊಂದಿಗೆ ಸೇರಿ ಅವರು ಆರಂಭಿಸಿದ ‘ಗದರ್’ ಸಂಸ್ಥೆ ಹಾಗೂ ಗದರ್ ಪತ್ರಿಕೆ ವಿದೇಶಗಳಲ್ಲಿದ್ದ ಭಾರತೀಯರ ಮಧ್ಯೆ ಹೊಸ ಸಂಚಲನ ಸೃಷ್ಟಿಸಿತು.
ಬ್ರಿಟಿಷ್ ವಿರೋಧಿ ದೇಶಗಳ ಸರ್ಕಾರಗಳನ್ನು ಅವರು ಸಂಪರ್ಕಿಸಿ ತಮ್ಮ ಹೋರಾಟಕ್ಕೆ ಬೆಂಬಲ ಪಡೆದರು. ಮಧ್ಯೆ ಭಾರತಕ್ಕೆ ಮರಳಿದರೂ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿ ದೇಶ ಬಿಡಬೇಕಾಯಿತು. 1908 ರಲ್ಲಿ ಲಂಡನ್ ಗೆ ತೆರಳಿದ ಹರದಯಾಳ್ ಗೆ ಮತ್ತೆಂದೂ ಭಾರತಕ್ಕೆ ವಾಪಸ್ ಬರಲಾಗಲಿಲ್ಲ, ತಮ್ಮ ಪತ್ನಿಯನ್ನು ಮತ್ತೆಂದೂ ನೋಡಲಾಗಲಿಲ್ಲ ಮತ್ತು ಲಂಡನ್ನಿಗೆ ತೆರಳಿದ ಸ್ವಲ್ಪ ದಿನದ ನಂತರ ಜನಿಸಿದ ತಮ್ಮ ಒಬ್ಬಳೇ ಮಗಳು ಶಾಂತಿಯನ್ನು ಒಮ್ಮೆಯೂ ಪ್ರತ್ಯಕ್ಷ ನೋಡಲಾಗಲಿಲ್ಲ. ವಿದೇಶಗಳಲ್ಲಿದ್ದ ಸಾವಿರಾರು ಭಾರತೀಯರು ಅಪಾರ ಹಣ ಹಾಗೂ ಶಸ್ತ್ರಾಸ್ತ್ರಗಳೊಂದಿಗೆ ಭಾರತಕ್ಕೆ ಮರಳಿ ದೇಶಾದ್ಯಂತ ಏಕಕಾಲಕ್ಕೆ ದಂಗೆ ಎಬ್ಬಿಸುವ ಯೋಜನೆ ಹರದಯಾಳ್ ಹಾಗೂ ಗದರ್ ನದ್ದಾಗಿತ್ತು. ವಿಶ್ವಾಸದ್ರೋಹಿಗಳ ಸಂಚಿನಿಂದ ಕ್ರಾಂತಿ ವಿಫಲವಾಯಿತು. ‘ಲಾಹೋರ್ ಪಿತೂರಿ’ ಎಂಬ ಚರಿತ್ರಾರ್ಹ ಪ್ರಕರಣದಲ್ಲಿ ಒಂಭತ್ತು ದೇಶಭಕ್ತರಿಗೆ ಗಲ್ಲು ಶಿಕ್ಷೆಯಾಯಿತು. ವಿದೇಶಗಳಲ್ಲೇ ಭಾರತದ ಸ್ವಾತಂತ್ರ್ಯಕ್ಕಾಗಿ ಅವಿರತ ಪ್ರಯತ್ನ ಮಾಡಿದ ಹರದಯಾಳರು ಮಾರ್ಚ್ 4, 1939 ರಲ್ಲಿ ಅಮೇರಿಕಾದ ಫಿಲಿಡೆಲ್ಫಿಯಾ ದಲ್ಲಿ ವಿಧಿವಶರಾದರು. ಲಾಲಾ ಹರದಯಾಳರ ‘ಗದರ್ ಕ್ರಾಂತಿ’ ಇತಿಹಾಸದ ಪುಟಗಳಲ್ಲಿ ಒಂದು ರೋಮಾಂಚಕ ಅಧ್ಯಾಯ ಎಂಬುದು ನಿಸ್ಸಂಶಯ.