ಫ್ರಾನ್ಸಿನ ಸೆಕ್ಯುಲರಿಸಂ ಮತ್ತು ಇಸ್ಲಾಮಿನ ಜಗಳದಲ್ಲಿ ಭಾರತಕ್ಕೇನು ಪಾಠ?
– ವಿನಾಯಕ ಹಂಪಿಹೊಳಿ
ಸದ್ಯಕ್ಕೆ ಫ್ರಾನ್ಸಿನಲ್ಲಿ ಬುರ್ಕ ಬ್ಯಾನ್ ಕುರಿತು ಚರ್ಚೆ ನಡೆಯುತ್ತಿದೆ. ಬುರ್ಕಾ ಬ್ಯಾನ್ ತುಂಬಾ ಹಿಂದೆಯೇ ಆಗಿದೆ. ಈ ರೀತಿಯ ನಿಷೇಧಗಳಿಗೆ ಫ್ರಾನ್ಸ್ ಕೊಡುತ್ತಿರುವ ಕಾರಣ ರಿಲಿಜನ್ನುಗಳು ಪ್ರತಿಪಾದಿಸುವ ವಸ್ತ್ರಸಂಹಿತೆಯನ್ನು ಪಬ್ಲಿಕ್ ವಲಯದಲ್ಲಿ ಪಾಲಿಸುವುದು ಅಲ್ಲಿನ ಸೆಕ್ಯುಲರಿಸಂ ಐಡಿಯಾಲಜಿಯೊಂದಿಗೆ ಸರಿಹೊಂದದಿರುವದು. ಫ್ರಾನ್ಸಿನಲ್ಲಿ ಪ್ರಜಾಪ್ರಭುತ್ವದ ಆಡಳಿತವನ್ನು ಚರ್ಚಿನಿಂದ ಪ್ರತ್ಯೇಕಿಸುವ ಪ್ರಕ್ರಿಯೆ ತುಂಬ ಕಟ್ಟುನಿಟ್ಟಾಗಿತ್ತು. ಫ್ರಾನ್ಸಿನ ಸೆಕ್ಯುಲರಿಸಂ ರಿಲಿಜನ್ನನ್ನು ಕೇವಲ ರಾಜಕೀಯದಿಂದಷ್ಟೇ ಪ್ರತ್ಯೇಕಿಸುವದಷ್ಟೇ ಅಲ್ಲ, ಫ್ರಾನ್ಸ್ ದೇಶವು ಯಾವ ರಿಲಿಜನ್ನಿನೊಂದಿಗೂ ಗುರುತಿಸಿಕೊಳ್ಳಬಾರದು ಎನ್ನುವದು ಅದರ ಆಶಯ. ಆದ್ದರಿಂದ ಫ್ರಾನ್ಸ್ ದೇಶವು ತನ್ನನ್ನು ತಾನು ರಿಪಬ್ಲಿಕ್ ಮತ್ತು ಸೆಕ್ಯುಲರ್ ದೇಶವೆಂದು ಘೋಷಿಸಿಕೊಂಡಿತ್ತು. ಈ ರೀತಿಯ ಲಿಬರಲ್ ಸೆಕ್ಯುಲರಿಸಂ ಅನ್ನು ಬರೀ ಕ್ರಿಶ್ಚಿಯನ್ನರೇ ತುಂಬಿಕೊಂಡಿದ್ದ ದೇಶದಲ್ಲಿ ಈ ರೀತಿಯ ಸೆಕ್ಯುಲರಿಸಂ ಅನ್ನು ಜಾರಿಗೆ ತರುವದು ಅಷ್ಟು ಕಷ್ಟವಾಗಿರಲಿಲ್ಲ.
ಆದರೆ ೨೦ನೇ ಶತಮಾನದ ಅಂತ್ಯದಲ್ಲಿ ಇಸ್ಲಾಮಿನ ಜನರು ಫ್ರಾನ್ಸಿಗೆ ಬಂದಂತೆ ಅವರ ನಂಬಿಕೆಗಳನ್ನು ಲಿಬರಲ್ ಸೆಕ್ಯುಲರಿಸಮ್ಮಿನ ಚೌಕಟ್ಟಿನಲ್ಲಿ ಸೇರಿಸಲು ಸಾಧ್ಯವಾಗಲಿಲ್ಲ. ಅವರ ಆಚರಣೆಗಳಲ್ಲಿ ರಿಲಿಜಿಯಸ್ ಯಾವುದು ಎಂದು ಗುರುತಿಸಿ ಅವನ್ನು ಪಬ್ಲಿಕ್ಕಿನಲ್ಲಿ ನಿಷೇಧಿಸುವ ಪ್ರಕ್ರಿಯೆಯಲ್ಲಿ ಸಾಕಷ್ಟು ತೊಡಕುಗಳು ಕಂಡವು. ಮುಸ್ಲಿಂ ಮಕ್ಕಳು ಬುರ್ಕಾ ಧರಿಸಿ ಶಾಲೆಗೆ ಬರಲಾರಂಭಿಸಿದ್ದರಿಂದ ಅಲ್ಲಿನ ಶಾಲೆಗಳು ಕಲಿಸಬೇಕಿದ್ದ ಸಮಾನತೆಯ ಪರಿಕಲ್ಪನೆಯು ಹಳ್ಳ ಹಿಡಿಯಿತು. ಸಾರ್ವಜನಿಕ ಪ್ರದೇಶಗಳಲ್ಲಿ ಮುಸ್ಲಿಮರು ಧರಿಸುತ್ತಿದ್ದ ಟೋಪಿ, ವಸ್ತ್ರಸಂಹಿತೆಗಳು ಬ್ಯಾನ್ ಆಗುತ್ತ ಬಂದವು. ಇವೆಲ್ಲ ಬ್ಯಾನ್ ಗಳು ಬಹುತೇಕ ಮುಸ್ಲಿಮರ ಆಚರಣೆಗಳನ್ನೇ ನಿಷೇಧಿಸುತ್ತ ಬಂದಿದ್ದರಿಂದ ಅಲ್ಲಿನ ಮುಸ್ಲಿಮರಿಂದ ಸಾಕಷ್ಟು ವಿರೋಧವೂ ವ್ಯಕ್ತವಾಯಿತು. ಅದು ಇಸ್ಲಾಮಿಕ್ ತೀವ್ರಗಾಮಿಗಳನ್ನು ಹುಟ್ಟುಹಾಕಿತು. ಹೀಗೆ ಮುಂದುವರಿದರೆ ಅಲ್ಲಿನ ನ್ಯಾಯಾಲಯಗಳು ಮುಸ್ಲಿಮರ ಗಡ್ಡವನ್ನು ನಿಷೇಧಿಸಲು ಗಡ್ಡದಲ್ಲಿಯೂ ಸೆಕ್ಯುಲರ್ ಗಡ್ಡ ಮತ್ತು ರಿಲಿಜಿಯಸ್ ಗಡ್ಡ ಎಂಬ ಭೇದವನ್ನು ಹುಟ್ಟುಹಾಕಬೇಕಾಗಿ ಬರಬಹುದು.
ಅಲ್ಲಿನ ಲಿಬರಲ್ ಸೆಕ್ಯುಲರಿಸಂ ಚೌಕಟ್ಟಿನಲ್ಲಿ ಇಸ್ಲಾಂ ಸರಿಯಾಗಿ ಒಳಗೊಳ್ಳಲಾಗದೇ ಇರುವುದನ್ನು ಅಲ್ಲಿನ ಸೆಕ್ಯುಲರಿಸ್ಟ್ ಬುದ್ಧಿಜೀವಿಗಳು ಇಸ್ಲಾಂ ಮೇಲೆಯೇ ಆರೋಪಿಸುತ್ತಾರೆ. ಇಸ್ಲಾಮಿನಲ್ಲೂ ಪ್ರೊಟೆಸ್ಟಂಟ್ ಮಾದರಿಯಲ್ಲಿ ಸುಧಾರಣೆಗಳಾಗಬೇಕು ಅದೂ ಕೂಡ ಸೆಕ್ಯುಲರಿಸಂನಲ್ಲಿ ಒಳಗೊಳ್ಳುವಂತೆ ಪ್ರೈವೇಟ್ ಮತ್ತು ಪಬ್ಲಿಕ್ ವಲಯಗಳನ್ನು ಗುರುತಿಸಿಕೊಳ್ಳಬೇಕು ಎಂದು ಆ ಬುದ್ಧಿಜೀವಿಗಳು ಭಾವಿಸುತ್ತಾರೆ. ಅಯಾನ್ ಅಲಿ ಎಂಬ ಎಕ್ಸ್-ಮುಸ್ಲಿಮ್ ಯುವತಿ ಇದರ ಬಗ್ಗೆ “Why Islam needs a reformation now” ಎಂಬ ಪುಸ್ತಕವೊಂದನ್ನೇ ಬರೆದಿದ್ದಾರೆ. ಆದರೆ ಕೆಲವರನ್ನು ಹೊರತುಪಡಿಸಿದರೆ ಯಾರೂ ಕೂಡ ಲಿಬರಲ್ ಸೆಕ್ಯುಲರಿಸಂ ಚೌಕಟ್ಟಿಗೆ ಪರ್ಯಾಯವನ್ನು ಹುಡುಕುತ್ತಿಲ್ಲ. ಈಗಿನ ಬದಲಾದ ಸನ್ನಿವೇಶಕ್ಕೆ ಅನುಕೂಲವಾಗುವಂತಹ ಚೌಕಟ್ಟಿನ ರಚನೆಯಲ್ಲಿ ತೊಡಗುತ್ತಿಲ್ಲ ಹಾಗೂ ಹೆಚ್ಚುತ್ತಿರುವ ಇಸ್ಲಾಮಿಕ್ ಕಟ್ಟವಾದಕ್ಕೆ ಈಗಿರುವ ಸೆಕ್ಯುಲರಿಸಂ ಚೌಕಟ್ಟೇ ಕಾರಣವಾಗುತ್ತಿರಬಹುದು ಎಂಬುದರ ಕುರಿತು ಯೋಚಿಸುತ್ತಲೂ ಇಲ್ಲ.
ಫ್ರಾನ್ಸಿನ ಆಂತರಿಕ ಸಮಸ್ಯೆಯಿಂದ ಭಾರತ ಕಲಿಯಬೇಕಾಗಿರುವದು ಬಹಳಷ್ಟಿದೆ. ಭಾರತದಲ್ಲಿ ಸೆಕ್ಯುಲರಿಸಂನ ಅನುಷ್ಠಾನದಲ್ಲಿ ಫ್ರಾನ್ಸಿನಷ್ಟು ತೀವ್ರತೆ ಇಲ್ಲವೆನ್ನುವದು ನಿಜವಾದರೂ, ಭಾರತವು ಸೆಕ್ಯುಲರಿಸಂ ಚೌಕಟ್ಟಿನಲ್ಲಿಯೇ ಬೆಳೆಯಬೇಕೇ ಹೊರತು ಒಂದಾನೊಂದು ರಿಲಿಜನ್ನಿನೊಂದಿಗೆ ಗುರುತಿಸಿಕೊಳ್ಳಬಾರದು ಎಂಬ ಭಾವನೆಯಂತೂ ನಮ್ಮ ಬುದ್ಧಿಜೀವಿಗಳಲ್ಲಿ ಇದ್ದೇ ಇದೆ. ಆದರೆ ಫ್ರಾನ್ಸಿನ ಸೆಕ್ಯುಲರ್ ಪಂಡಿತರು ಪರಕೀಯ ರಿಲಿಜನ್ನುಗಳನ್ನು ತಮ್ಮ ಸೆಕ್ಯುಲರ್ ಚೌಕಟ್ಟಿನೊಳಗೆ ಹಿಡಿಸಲು ನಿಷೇಧಗಳನ್ನು ಹೇರುತ್ತಿದ್ದರೆ, ನಮ್ಮ ಸಕಲ ಶಾಸ್ತ್ರಶೂನ್ಯಪಂಡಿತರಾದ ಬುದ್ಧಿಜೀವಿಗಳು ನಮ್ಮದೇ ಜನರ ಪರಂಪರೆಗಳ ಆಚರಣೆಗಳನ್ನೇ ಹಿಂದೂಯಿಸಂನ ಆಚರಣೆಗಳೆಂದು ಭಾವಿಸಿ ಅವುಗಳಲ್ಲಿ ಲಿಬರಲ್ ಸೆಕ್ಯುಲರಿಸಂ ಚೌಕಟ್ಟಿನೊಳಗೆ ತೂರದ ಆಚರಣೆಗಳನ್ನು ನಿಷೇಧಿಸಬೇಕೆಂದು ಹೊರಟಿದ್ದಾರೆ. ಬುರ್ಕಾ ಬ್ಯಾನ್ ಮಾಡುವ ಫ್ರಾನ್ಸ್ ಸೆಕ್ಯುಲರ್ ಮನಸ್ಥಿತಿಗೂ, ಭಾರತೀಯ ಆಚರಣೆಗಳಲ್ಲಿ ಮೂಢನಂಬಿಕೆಗಳನ್ನು ಗುರುತಿಸಿ ನಿಷೇಧಿಸುವ ಕಾಯ್ದೆಗಳನ್ನು ಹೊರಡಿಸುವ ಭಾರತೀಯ ಸೆಕ್ಯುಲರ್ ಮನಸ್ಥಿತಿಗೂ ಹೆಚ್ಚು ವ್ಯತ್ಯಾಸವಿಲ್ಲ.
ಈ ರೀತಿಯ ನಿಷೇಧಗಳು ಹೆಚ್ಚುತ್ತಾ ಹೋದಂತೆ, ನಮ್ಮ ಆಚರಣೆಗಳನ್ನು ಪಾಲಿಸಿಕೊಂಡು ಬಂದಿರುವ ಜನರಲ್ಲಿಯೂ ಪ್ರತಿರೋಧವನ್ನು ಸೃಷ್ಟಿಸುತ್ತದೆ. ಕೇವಲ ಹಿಂದೂಗಳ ಆಚರಣೆಗಳನ್ನೇ ನಿಷೇಧಿಸುವ ಪ್ರವೃತ್ತಿಯು ಅಸುರಕ್ಷತೆಯ ಭಾವನೆ ಬೆಳೆಸುತ್ತದೆ. ಇದೇ ಹಿಂದೂ ಮೂಲಭೂತವಾದಕ್ಕೆ ಗೊಬ್ಬರ. ಹಿಂದೂ ಮೂಲಭೂತವಾದವು ದೇಶವನ್ನು ಉಳಿಸಲು ಹಿಂದೂದೇಶವನ್ನಾಗಿ ಘೋಷಿಸುವದೇ ಪರಿಹಾರ ಎನ್ನುತ್ತವೆ. ಇದು ಉಳಿದ ರಿಲಿಜನ್ನುಗಳಲ್ಲಿ ಅಸುರಕ್ಷತೆಯನ್ನು ಸೃಷ್ಟಿಸುತ್ತದೆ. ಹೀಗೆ ಎಲ್ಲ ರಿಲಿಜನ್ನುಗಳೂ ಮೂಲಭೂತವಾದದತ್ತ ಸಾಗುತ್ತದೆ. ಭಾರತದಲ್ಲಿಯೂ ಮುಸ್ಲಿಮರ ಜನಸಂಖ್ಯೆ ಗಣನೀಯವಾಗಿ ಹೆಚ್ಚಿರುವ ಪ್ರದೇಶಗಳಲ್ಲಿ ಇಸ್ಲಾಂ ಮೂಲಭೂತವಾದವು ಬೆಳೆಯುವದಕ್ಕೂ ಲಿಬರಲ್ ಸೆಕ್ಯುಲರಿಸಂನ ವೈಫಲ್ಯಗಳೇ ಕಾರಣ. ನಿಜ ಹೇಳಬೇಕೆಂದರೆ ಬ್ರಿಟಿಷರಿಂದ ಬಂದ ಈ ಸೆಕ್ಯುಲರಿಸಂ ನೀತಿ ತಪ್ಪು ಎಂದು ಸಾರಲು ೧೯೭೧ರ ಯುದ್ಧವೇ ಸಾಕ್ಷಿ. ಬ್ರಿಟಿಷರು ಹಿಂದೂ-ಮುಸ್ಲಿಂ ರಿಲಿಜನ್ನುಗಳ ಆಧಾರದ ಮೇಲೆ ೨ ರಾಷ್ಟ್ರಗಳ ಸಿದ್ಧಾಂತವನ್ನು ಪ್ರತಿಪಾದಿಸಿದ್ದೇ ಈ ಸೆಕ್ಯುಲರಿಸಂನ ಚೌಕಟ್ಟಿನ ಆಧಾರದಲ್ಲಿ. ಬಂಗಾಳಿಯರ ವಿದ್ರೋಹ ಮತ್ತು ಬಾಂಗ್ಲಾದೇಶದ ಸ್ವಾತಂತ್ರ್ಯ ಬ್ರಿಟಿಷರ ೨ ರಾಷ್ಟ್ರದ ನೀತಿಯು ತಪ್ಪಾಗಿತ್ತು ಎಂದು ಸಾರುತ್ತಿರುವ ಜ್ವಲಂತ ಸಾಕ್ಷಿ.
ನಮ್ಮ ಸರ್ಕಾರಗಳು ಅನುಸರಿಸುತ್ತಿರುವ ಸೆಕ್ಯುಲರ್ ನೀತಿಗಳು ಇಲ್ಲಿನ ಸ್ಥಳೀಯ ಹಿಂದೂ ಹಾಗೂ ಮುಸ್ಲಿಮರಲ್ಲಿ ಅಸುರಕ್ಷತೆಯ ಭಾವವನ್ನು ಸೃಷ್ಟಿಸುತ್ತಿವೆ ಎಂಬುದಕ್ಕೆ ನಾವು ಹಲವಾರು ಉದಾಹರಣೆಗಳನ್ನು ನೋಡಬಹುದು. ಮೊಸರು-ಕುಡಿಕೆ ಒಡೆಯುವ ಆಚರಣೆಯಲ್ಲಿ, ಗಣಪತಿ ಕೂಡಿಸುವ ಆಚರಣೆಯಲ್ಲಿ, ದೇವಸ್ಥಾನದಲ್ಲಿ ಸಿಡಿ ಹಾಕಿ ಪ್ರಾರ್ಥನೆಯನ್ನು ಕೇರಿಗೆಲ್ಲ ಕೇಳಿಸುವ ವಿಷಯದಲ್ಲಿ, ದೇವಸ್ಥಾನಗಳನ್ನು ಸರಕಾರದ ಮುಜರಾಯಿ ಇಲಾಖೆಯಲ್ಲಿ ಸೇರಿಸುವ ವಿಷಯದಲ್ಲಿ, ನ್ಯಾಯಾಲಯಗಳು ಮೂಗು ತೂರಿಸಿದಂತೆಲ್ಲ ಹಿಂದೂಮೂಲಭೂತವಾದವು ಬಲವಾಗುತ್ತ ನಡೆದಿದೆ. ಹಾಗೆಯೇ ದರ್ಗಾ ಪರಂಪರೆಗಳಲ್ಲಿ, ಆಜಾನ್ ವಿಷಯದಲ್ಲಿ, ತಲಾಕ್ ವಿಷಯದಲ್ಲಿ ನ್ಯಾಯಾಲಯಗಳು ಮೂಗು ತೂರಿಸಿದಂತೆ ಇಸ್ಲಾಂ ಮೂಲಭೂತವಾದವು ವೃದ್ಧಿಸಿದೆ. ಹೀಗಾಗಿಯೇ ಸರ್ಕಾರದ ಪಾಲಿಗೆ ಸಮಾನ ನಾಗರಿಕ ಸಂಹಿತೆ ಇನ್ನೂ ಗಗನಕುಸುಮವಾಗಿಯೇ ಉಳಿದಿದೆ.
ಲಿಬರಲ್ ಸೆಕ್ಯುಲರಿಸಂ ಸಾರ್ವಜನಿಕ ಜೀವನದಲ್ಲಿ ರಿಲಿಜನ್ನುಗಳ ಅತಿಕ್ರಮಣವನ್ನು ಎಂದಿಗೂ ಒಪ್ಪದು. ಹೀಗಾಗಿಯೇ ನಮ್ಮ ದೇಶದಲ್ಲಿ ಸೆಕ್ಯುಲರಿಸಂ ಕೇವಲ ರಾಜಕಾರಣಿಗಳ ಭಾಷಣಗಳಿಗೆ ಮಾತ್ರ ಸೀಮಿತವಾಗಿದೆ. ಆದರೆ ಅನುಷ್ಠಾನದ ವಿಷಯದಲ್ಲಿ ಅಧ್ವಾನವೆದ್ದಿದೆ. ಸಂವಿಧಾನವು ಸರ್ಕಾರವನ್ನು ರಿಲಿಜನ್ನಿನಿಂದ ಹೊರಗಿಡಲು ಆದೇಶಿಸುತ್ತದೆ. ಆದರೆ ಅದೇ ಸರ್ಕಾರದ ಮಂತ್ರಿಗಳು ಸ್ಕಲ್ ಟೋಪಿ ಹಾಕಿಕೊಂಡು ಇಫ್ತಿಹಾರ್ ಆಯೋಜಿಸುತ್ತಾರೆ, ಪೇಟ ತೊಟ್ಟುಕೊಂಡು ದಸರಾವನ್ನೂ ಉದ್ಘಾಟಿಸುತ್ತಾರೆ ಅದೂ ಸಾರ್ವಜನಿಕ ತೆರಿಗೆಯ ದುಡ್ಡಿನಲ್ಲಿ. ರಿಲಿಜನ್ನಿನ ನಂಬಿಕೆಗಳು ಕೇವಲ ನಿಮ್ಮ ಖಾಸಗೀ ಜೀವನಕ್ಕೆ ಮಾತ್ರ ಸೀಮಿತವಾಗಿರಬೇಕೆಂದು ಸಾರುವ ಸೆಕ್ಯುಲರಿಸಂ ನಮ್ಮ ರಾಜಕಾರಣಿಗಳಿಗೆ ಅರ್ಥವೇ ಆಗಿಲ್ಲ. ಆಚರಣೆಯಲ್ಲಂತೂ ಅಸಂಭವ. ಸೆಕ್ಯುಲರ್ ಸರ್ಕಾರವು ರಿಲಿಜಿಯಸ್ ಸ್ಥಳಗಳನ್ನು ಹಿಂದೂ-ಮುಸ್ಲಿಂ ರಿಲಿಜನ್ನಿನ ಆಧಾರದಲ್ಲಿ ವಿಭಾಗಿಸಿದಾಗಿಂದ ಅಯೋಧ್ಯೆ, ಕಾಶಿ, ಬಾಬಾ ಬುಡನ್ ಗಿರಿಗಳು ಹಿಂಸೆಗೆ ಆಸ್ಪದ ನೀಡುವ ಪ್ರದೇಶಗಳಾಗಿವೆ ಎಂಬುದನ್ನು ಗಮನಿಸಿದ್ದಾರಾ ನಮ್ಮ ಬುದ್ಧಿಜೀವಿಗಳು?
ನಮ್ಮ ದೇಶದಲ್ಲಿ ಹಿಂದೂಯಿಸಂ ಒಂದು ರಿಲಿಜನ್ನೂ ಅಲ್ಲ ಮತ್ತು ನಮ್ಮ ಪರಂಪರೆಯ ಆಚರಣೆಗಳನ್ನು ಖಾಸಗಿ ಮತ್ತು ಸಾರ್ವಜನಿಕ ಎಂದು ಪ್ರತ್ಯೇಕಿಸಲೂ ಸಾಧ್ಯವಿಲ್ಲ. ಸರ್ಕಾರದ ಪಾಲಿಗೆ ಒಂದು ಟ್ಯಾಕ್ಸಿ ಸೆಕ್ಯುಲರ್ ವಸ್ತು. ಆದರೆ ಬೆಳಗ್ಗೆದ್ದು ಅದನ್ನು ಪೂಜಿಸಿ ಅದರಲ್ಲಿ ಚಿಕ್ಕ ಮೂರ್ತಿಯನ್ನು ಅಂಟಿಸಿ, ಅದನ್ನು ಓಡಿಸುವ ಚಾಲಕನಿಗೆ ಅದು ರಿಲಿಜಿಯಸ್. ಪರಿಸ್ಥಿತಿ ಹೀಗಿರುವಾಗ ಏನೇನನ್ನು ನಿಷೇಧಿಸುತ್ತೀರಿ? ಸೂರ್ಯೋದಯದ ಸಮಯದಲ್ಲಿ ನದಿಯಲ್ಲಿ ಅರ್ಘ್ಯ ನೀಡುವುದನ್ನು? ಕಚೇರಿಯ ಲ್ಯಾಪ್-ಟಾಪಿನ ವಾಲ್-ಪೇಪರಿನಲ್ಲಿ ಕೃಷ್ಣನ ಫೋಟೋ ಹಾಕುವುದನ್ನು? ಶಾಲೆಗಳಲ್ಲಿ ಸರಸ್ವತಿ ಪೂಜೆಗಳನ್ನು? ಈ ಹುಚ್ಚು ಎಷ್ಟರ ಮಟ್ಟಿಗಿದೆಯೆಂದರೆ ಜನಪದದಿಂದ ಪುರಾಣಗಳನ್ನು ಪ್ರತ್ಯೇಕಿಸುವ, ನೃತ್ಯ-ಸಂಗೀತಗಳಿಂದ ಭಕ್ತಿಯನ್ನು ಪ್ರತ್ಯೇಕಿಸುವ ಪ್ರಯತ್ನಗಳು ಸಾಗುತ್ತಿವೆ. ಲಿಬರಲ್ ಸೆಕ್ಯುಲರಿಸಂನ ವಿಧಿ-ನಿಷೇಧಗಳು ಸರ್ಕಾರದ ತಲೆಗೇರಿದಂತೆಲ್ಲ ಮೂಲಭೂತವಾದಗಳು ಸಮಾಜದಲ್ಲಿ ತಲೆಯೆತ್ತುತ್ತವೆ. ಹೀಗಾಗಿ ಸೆಕ್ಯುಲರ್ ಸರ್ಕಾರಗಳು ಎಲ್ಲ ಸಾರ್ವಜನಿಕ ರಿಲಿಜಿಯಸ್ ಆಚರಣೆಗಳನ್ನು ನಿಷೇಧಿಸಲು ಸಾಧ್ಯವಾಗದೇ ಕೇವಲ ಹಿಂಸಾತ್ಮಕವಾದ, ಶೋಷಣೆಯೆಂದು ಗುರುತಿಸಲ್ಪಡುವ ಆಚರಣೆಗಳನ್ನು ಮಾತ್ರ ಮೂಢನಂಬಿಕೆಯ ಅಡಿಯಲ್ಲಿ ನಿಷೇಧಿಸುವಲ್ಲಿ ಮಾತ್ರ ಸಫಲವಾಗಿದೆ.
ಸೆಕ್ಯುಲರಿಸಂನ ಲಾಭಗಳನ್ನೆಲ್ಲ ಪಡೆದು, ಸೂಕ್ತ ಶಿಕ್ಷಣದಿಂದ ಉನ್ನತ ಹುದ್ದೆಯಲ್ಲಿ ಇರುವವರೂ ಕೂಡ ಈ ರಿಲಿಜಿಯಸ್ ಮೂಲಭೂತವಾದದತ್ತ ಆಕರ್ಷಿತರಾಗುತ್ತಿದ್ದಾರೆ. ಇಂಥದೇ ಮೂಲಭೂತವಾದಕ್ಕೆ ಲೆಬನಾನ್ ಈಗಾಗಲೇ ಬಲಿಯಾಗಿದೆ. ಸೆಕ್ಯುಲರಿಸಂ ಸೋತಾಗ ಆ ದೇಶದ ವ್ಯವಸ್ಥೆ ಏನಾಗುತ್ತದೆ ಎನ್ನುವದಕ್ಕೆ ಲೆಬನಾನ್ ಕ್ರೂರ ಸಾಕ್ಷಿ. ಕ್ರಿಶ್ಚಿಯನ್ನರು ಹೆಚ್ಚಿದ್ದಾಗ ಯಶಸ್ವೀ ಸೆಕ್ಯುಲರ್ ದೇಶವಾಗಿ ಘಮಘಮಿಸುತ್ತಿದ್ದ ಲೆಬನಾನ್, ಪ್ಯಾಲೆಸ್ತೀನಿನ ವಲಸಿಗ ಮುಸ್ಲಿಮರಿಂದ ಇಸ್ಲಾಂ ವೃದ್ಧಿಸಿದಾಗ ಆಂತರಿಕ ಘರ್ಷಣೆಗಳು ನಡೆದು ಇಸ್ಲಾಂ ಮೂಲಭೂತವಾದಕ್ಕೆ ಬಲಿಯಾಗಿ ಗಬ್ಬು ನಾರುತ್ತಿದೆ. ಕಾಶ್ಮೀರದಲ್ಲಿ ನಡೆದ ಪಂಡಿತರ ವಲಸೆ ಇಂಥದೇ ಮೂಲಭೂತವಾದವು ಅಲ್ಲಿಯೂ ಆಕ್ರಮಿಸಿರುವದಕ್ಕೆ ಸಾಕ್ಷಿ. ಬ್ರಿಗೆಟ್ ಗೆಬ್ರಿಯಲ್ ಮುಂತಾದ ಲೆಬನಾನ್ ನಿರಾಶ್ರಿತರು ಇಸ್ಲಾಮನ್ನೇ ನೇರವಾಗಿ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವದಕ್ಕೂ ಮುಖ್ಯ ಕಾರಣ ಇಸ್ಲಾಂ ಲಿಬರಲ್ ಸೆಕ್ಯುಲರಿಸಂ ಚೌಕಟ್ಟಿನೊಳಗೆ ಸೇರಿಕೊಳ್ಳದಿರುವದು. ನಮ್ಮ ದೇಶದ ಅಸಂಖ್ಯಾತ ಪರಂಪರೆಗಳೂ ಕೂಡ ಈ ಚೌಕಟ್ಟಿನೊಳಗೆ ಸೇರಿಕೊಳ್ಳಲಾರವು. ಹೀಗಾಗಿ ನಾವೊಂದು ಪರ್ಯಾಯ ವ್ಯವಸ್ಥೆಯೊಂದನ್ನು ರೂಪಿಸಿಕೊಳ್ಳುವದು ಇಂದಿನ ಅಗತ್ಯವಾಗಿದೆ. ಇಲ್ಲವಾದಲ್ಲಿ ಹಿಂದೂ-ಮುಸ್ಲಿಂ ಮೂಲಭೂತವಾದಿಗಳು ಹೊಡೆದಾಡಿಕೊಂಡು ಭಾರತವು ಇನ್ನೊಂದು ಲೆಬನಾನ್ ಆಗುವದರಲ್ಲಿ ಸಂಶಯವಿಲ್ಲ.
ಗ್ರಂಥ ಋಣ: Europe, India and The Limits of Secularism by Jakob De Roover
ಹಿಂದೂ ಮೂಲಭೂತವಾದ ? ನಿಜವೇ ? ಹಾಗೆಂದರೇನು ? ನೈಜ ಸಮಸ್ಯೆಯಾದ ಇಸ್ಲಾಮಿ ಭಯೋತ್ಪಾದನೆಯೊಂದಿಗೆ ಕಲ್ಪಿತ ಹಿಂದೂ ಮೂಲಭೂತವಾದ ಎಂಬ ಭ್ರಮೆಯನ್ನು ಸೃಷ್ಟಿಸಿಕೊಂಡು ಇಲ್ಲದ ಸಮಸ್ಯೆಗೆ ಕುಂಚ ಕುಲಾವಿ ಹೊಲಿಸುವ ಹುಚ್ಚುತನ ಯಾಕ್ ಬೇಕಾಯ್ತು ?
ನಮ್ಮಲ್ಲಿ ಯಾರಾದರೂ ಈ ದೇಶವನ್ನು ಹಿಂದೂ ದೇಶವನ್ನಾಗಿ ಘೋಷಿಸಬೇಕೆಂದು ಅಪೇಕ್ಷಿಸುತ್ತಿದ್ದಾರೆಯೇ? ಹೌದು ಎಂದಾದಲ್ಲಿ ಆ ಜನರು ಹಿಂದೂ ಮೂಲಭೂತವಾದಕ್ಕೆ ಬಲಿಯಾಗಿದ್ದಾರೆ ಎಂದೇ ಅರ್ಥ.
ಯಾರೋ ಮೂರು ಮುಕ್ಕಾಲು ಜನರ ಮನಸ್ಸಿನಲ್ಲಿ ಇರಬಹುದಾದ ಭಾವನೆಗಳಿಗೆ ನೀವು ಮೂಲಭೂತವಾದದ ಬಣ್ಣ ಬಳಿಯಬಹುದಾದರೆ ನಮ್ಮ ದೇಶದ ಅನ್ಯಾನ್ಯ ಮತಗಳಲ್ಲಿ ನಂಬಿಕೆ ಇಟ್ಟ ಆಸ್ತಿಕರು ಧಾರ್ಮಿಕರೆಲ್ಲಾ ಮೂಲಭೂತವಾದಿಗಳೇ . ಕಾರಣ, ಸಹಜವಾಗಿಯೇ ಈ ಎಲ್ಲರಿಗೂ ತಮ್ಮ ಮತ ಅಥವಾ ನಂಬಿಕೆಗಳೇ ಇತರರಿಗಿಂತ ಶ್ರೇಷ್ಠ ವೆನಿಸುತ್ತವೆ . ಹಾಗಾದರೆ ಇವರೆಲ್ಲಾ ಮೂಲಭೂತವಾದಿಗಳೇ ಎಂದು ಸಾರಾಸಗಟಾಗಿ ಘೋಷಿಸಿಬಿಡೋದೇ ?
ಹಿಂದೂದೇಶದ ಅಸ್ತಿತ್ವದಲ್ಲಿ ನಂಬಿಕೆ ಇರುವವರೆಲ್ಲ ಅವನ್ನು ಕಾರ್ಯಗತಗೊಳಿಸಲು ಮುಸ್ಲಿಂ ಉಗ್ರರ ಮಾದರಿಯಲ್ಲಿ ಯಾವ ಯಾವ ರೀತಿಯ ಯತ್ನ ಮಾಡುತ್ತಿದ್ದಾರೆ, ಮುಸ್ಲಿಂ ಉಗ್ರರ ಜಿಹಾದ್ಗೆ moderate ಮುಸ್ಲಿಮರ ಮೌನ ಸಮ್ಮತಿ ಇರುವಂತೆ ನೀವು ಹೇಳಿರುವ ಹಿಂದೂ ಮೂಲಭೂತವಾದಿಗಳಿಗೆ ಮಿಕ್ಕ ಹಿಂದುಗಳ ತಾತ್ವಿಕ ಒಪ್ಪಿಗೆಯೂ ಇದೆಯೇ ಎಂದು ಎಲ್ಲಿಯೂ ವಿವರಿಸುವ ಗೋಜಿಗೆ ಹೋಗದೇ ಅನುಕೂಲಸಿಂಧುವಾಗಿ ಮುಸ್ಲಿಮರ ಮತ್ತು ತಥಾಕಥಿತ ಹಿಂದೂ ಮೂಲಭೂತವಾದಿಗಳ ಹೋಲಿಕೆಗೆ ನಿಂತಿದ್ದೀರಿ.
ಬಹುಶಃ ಇಂತಹ ಅವಘಡ ನಾವು ಮತ್ತೊಂದು ದೇಶದ ಸಮಾಜದ ಪರಿವೇಷವನ್ನು ನಮ್ಮ ದೇಶದ ಸಂದರ್ಭಕ್ಕೆ ತಾಳೆಹಾಕುವ ಭರದಲ್ಲಿ ಮಾಡುವದು ನೋಡುತ್ತಲೇ ಇರುತ್ತೇವೆ. ಇದು ನಿಶ್ಚಿತವಾಗಿಯೂ ಒಳ್ಳೆಯ ಬೆಳವಣಿಗೆ ಅಲ್ಲ.
ನಾನು ನಂಬಿರುವ ಮತವೇ ಸರಿಯಾದದ್ದು ಎನ್ನುವದು ಮೂಲಭೂತವಾದವಲ್ಲ. ನಮ್ಮಲ್ಲಿ ಅನೇಕ ಮತಗಳು ಇವೆ. ಅವುಗಳಲ್ಲಿ ಬೌದ್ಧಿಕ ಚರ್ಚೆಗಳೂ ನಡೆದಿವೆ. ಪ್ರತಿಯೊಂದು ಮತವೂ ಉಳಿದ ಮತಗಳಲ್ಲಿರುವ ತಾರ್ಕಿಕ ದೋಷಗಳನ್ನು, ತನ್ನ ಮತದಲ್ಲಿರುವ ತಾರ್ಕಿಕ ಸುಸಂಬದ್ಧತೆಯನ್ನೂ ವಿವರಿಸಿ ತನ್ನ ಮತವೇ ಶ್ರೇಷ್ಠ ಎಂದು ಸಾಬೀತುಪಡಿಸುವದು ಭಾರತದಲ್ಲಿ ಮುಂಚಿನಿಂದಲೂ ಇದೆ. ಹಾಗೆಯೇ ಪ್ರತಿಯೊಬ್ಬನೂ ತನ್ನ ನಂಬಿಕೆಗಳನ್ನು ಚೂರೂ ತಪ್ಪದೇ ಅನೂಚಾನವಾಗಿ ಪಾಲಿಸುತ್ತಾನೆ. ಆದರೆ ಇದ್ಯಾವದೂ ಮೂಲಭೂತವಾದವಲ್ಲ. ಕಾರಣ ಒಂದು ಮತವನ್ನು ಆಚರಿಸುವ ೯೯ ಜನರ ಮಧ್ಯೆ ಬೇರೊಂದು ಮತಕ್ಕೆ ಸೇರಿದ ಒಬ್ಬನು ಆರಾಮವಾಗಿ ಬದುಕಬಹುದು. ಅದಕ್ಕೆ ಯಾವುದೇ ಅಡಚಣೆಯಿಲ್ಲ. ಕ್ರಿ.ಶ.೪ರಲ್ಲಿಯೇ ಕೇರಳದಲ್ಲಿ ಚರ್ಚು ಬಂದು ಕ್ರಿಶ್ಚಿಯನ್ನರು ಸೇರಿಕೊಂಡರು, ಕ್ರಿ.ಶ. ೮ರಲ್ಲಿಯೇ ಮುಸ್ಲಿಮರೂ ಕೇರಳಕ್ಕೆ ಬಂದರು. ೧೦೦೦ ವರ್ಷಗಳ ಕಾಲ ಯಾವ ಗಲಭೆಯೂ ಇಲ್ಲದೇ, ಯಾವ ಮೂಲಭೂತವಾದವೂ ಇಲ್ಲದೇ ಎಲ್ಲರೂ ಒಟ್ಟಿಗೆ ಬಾಳಿದರು. ಹೇಗೆ ಸಾಧ್ಯವಾಯಿತು? ಕಾರಣ ಆಗ ಲಿಬರಲ್ ಸೆಕ್ಯುಲರಿಸಂ ಇರಲಿಲ್ಲ. ಬೇರೇನೋ ವ್ಯವಸ್ಥೆ ಇತ್ತು.
ತಾನು ನಂಬಿರುವ ರಿಲಿಜನ್ನೇ ಸಮಾಜದಲ್ಲಿರಬೇಕು. ಶಾಸನವು ಅದನ್ನೇ ಅನುಮೋದಿಸಬೇಕು. ಇಡೀ ಸಮಾಜವು ಅದನ್ನೇ ಒಪ್ಪಿಕೊಳ್ಳಬೇಕು ಎನ್ನುವದು ರಿಲಿಜಿಯಸ್ ಫಂಡಮೆಂಟಲಿಸಂ ಎಂದು ಕರೆಯಿಸಿಕೊಳ್ಳುತ್ತದೆ. ಇದನ್ನೇ ಕನ್ನಡದಲ್ಲಿ ಮೂಲಭೂತವಾದವೆಂದು ಅನುವಾದಿಸಿಕೊಳ್ಳಲಾಗಿದೆ. ಆದರೆ ಈ ರೀತಿಯ ವಿಚಾರಧಾರೆ ಭಾರತೀಯರಿಗೆ ಮುಂಚಿನಿಂದಲೂ ಅಪರಿಚಿತ. ಶಂಕರಾಚಾರ್ಯರು ಎಲ್ಲಿಯೂ ಇಡೀ ದೇಶ ಅದ್ವೈತಮತವನ್ನು ಒಪ್ಪಬೇಕು ಎಂದು ಪಟ್ಟು ಹಿಡಿಯಲಿಲ್ಲ. ಮಧ್ವಾಚಾರ್ಯರು ಎಲ್ಲಿಯೂ ಇಡೀ ದೇಶವೇ ತತ್ತ್ವಮತವನ್ನು ಸ್ವೀಕರಿಸಬೇಕು ಎಂದು ಕರೆಕೊಡಲಿಲ್ಲ. ಹಾಗಿದ್ದರೆ ಈಗೇಕೆ ಏಕಾ ಏಕೀ ಇಡೀ ದೇಶ ಹಿಂದೂದೇಶವಾಗಬೇಕು ಎಂಬ ಕೂಗು ಬರುತ್ತಿದೆ? ಕಾರಣ ಅಸ್ತಿತ್ವವೇ ಇಲ್ಲದಂಥ ಹಿಂದೂ ಎಂಬ ರಿಲಿಜನ್ನನ್ನು ಇದೆ ಎಂದು ಕಲ್ಪಿಸಿಕೊಂಡು ಅದನ್ನು ಇಡೀ ದೇಶವು ಒಪ್ಪಬೇಕು ಎನ್ನುವ ಭಾವನೆ ಇತ್ತೀಚೆಗೆ ಕೆಲವರಲ್ಲಿ ಬರುತ್ತಿದೆ. ಮೂಲಭೂತವಾದ ಎನ್ನುವದು ನಮ್ಮ ದೇಶದ ಮೂಲ ಪರಿಕಲ್ಪನೆಯೇ ಅಲ್ಲ.
ಇಸ್ಲಾಂ ರಿಲಿಜನ್ನಿನ ವಹಾಬೀ ಪಂಗಡವು ಇಡೀ ಪ್ರಪಂಚವು ಇಸ್ಲಾಂಮಯವನ್ನಾಗಿಸಬೇಕು ಎಂದು ಭಾವಿಸುತ್ತಾರೆ. ಹೀಗಾಗಿ ಶತಮಾನಗಳಿಂದ ಅವರಿಂದ ಎಲ್ಲೆಡೆ ದಾಳಿ ನಡೆದಿದೆ. ಎಲ್ಲೆಡೆ ಕನ್ವರ್ಷನ್ ನಡೆದಿದೆ. ಕನ್ವರ್ಟ್ ಆಗದವರನ್ನು ಕೊಲೆಗೈದಿದ್ದಿದೆ. ಕ್ರಿಶ್ಚಿಯಾನಿಟಿ ಕೂಡ ಇದೇ ಮೂಲಭೂತವಾದವನ್ನು ಉಪಯೋಗಿಸಿಕೊಂಡು ಯುರೋಪಿನ ಹೀದನ್ನರನ್ನೆಲ್ಲ ಬಲಿಕೊಟ್ಟಿದ್ದಾರೆ. ಆದರೆ ಪ್ರೊಟೆಸ್ಟಂಟ್ ಚಳುವಳಿಯ ನಂತರ ಸೆಕ್ಯುಲರಿಸಂ ಪರಿಕಲ್ಪನೆ ಬೆಳೆದು ಅಲ್ಲಿನ ಕ್ರಿಶ್ಚಿಯಾನಿಟಿ ಪಂಗಡಗಳು ರಿಲಿಜಿಯಸ್ ಟಾಲೆರನ್ಸ್ ಅನ್ನು ರೂಢಿಸಿಕೊಂಡವು. ಆದರೆ ಆ ಸೆಕ್ಯುಲರಿಸಂ ಚೌಕಟ್ಟು ಕ್ರಿಶ್ಚಿಯಾನಿಟಿಯ ಮೂಲಭೂತವಾದವನ್ನಷ್ಟೇ ನಿಗ್ರಹಿಸಲು ಸಫಲವಾಗಿದೆ. ಆದರೆ ಇಸ್ಲಾಂ ಮೂಲಭೂತವಾದವನ್ನು ನಿಗ್ರಹಿಸುವಲ್ಲಿ ವಿಫಲವಾಗಿದೆ.
ಇಸ್ಲಾಮಿಕ್ ಮೂಲಭೂತವಾದವನ್ನು ಹಿಮ್ಮೆಟ್ಟಿಸಲು ಸೆಕ್ಯುಲರ್ ಚೌಕಟ್ಟಿನಿಂದ ಸಾಧ್ಯವಿಲ್ಲ. ಹಾಗಿದ್ದರೆ ಯಾವುದರಿಂದ ಸಾಧ್ಯ? ಇದಕ್ಕೆ ಭಾರತವೇ ಉತ್ತರ. ಭಾರತದಲ್ಲಿ ೧೦೦೦ ವರ್ಷಗಳ ಕಾಲ ಮೂಲ ಭಾರತೀಯರೊಂದಿಗೆ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರು ಹಲವು ಪ್ರದೇಶಗಳಲ್ಲಿ ಹಿಂಸೆಯಿಲ್ಲದೇ ಬಾಳಿದ್ದಾರೆ. ಯಾವ ವ್ಯವಸ್ಥೆಯಲ್ಲಿ ಇವರೆಲ್ಲರೂ ಅನ್ಯೋನ್ಯವಾಗಿ ಬಾಳಲು ಸಾಧ್ಯವಾಯಿತು? ಇದನ್ನು ಅರಿತರೆ ಶಾಂತಿಯುತ ಪ್ರಪಂಚವನ್ನು ಕಟ್ಟಲು ಸಹಾಯಕವಾದೀತು.