ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 8, 2016

5

ಪ್ರೇತದ ಆತ್ಮ ಚರಿತೆ! (ಭಾಗ ೧)

‍ನಿಲುಮೆ ಮೂಲಕ

– ಶ್ರೀಕಾಂತ್ ಶೆಟ್ಟಿ

14141689_1078140602281548_6643720140016381041_nಒಂದು ಪ್ರೇತದ ಕತೆ. ಆ ಒಂದು ಪ್ರೇತ ಮಾಡಿದ ಆವಾಂತರಕ್ಕೆ ಇತಿಹಾಸವೇ ಹೊಸ ತಿರುವು ಪಡೆದುಕೊಂಡು ಬಿಟ್ಟಿತು. ಈ ಭೂತ ಪ್ರೇತ ಇದೆಲ್ಲಾ ಇದೆಯೋ ಇಲ್ಲವೋ, ಇದ್ದರೆ ವೈಜ್ಞಾನಿಕ ಕಾರಣ ಕೊಡಿ. ಅದರ ಇರುವನ್ನು ಸಾಬೀತು ಮಾಡಿ ಎನ್ನುವವರಿಗೆ ಈ ಕತೆ ಹೇಳಿ ಮಾಡಿಸಿದ್ದಲ್ಲ. ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದುಕೊಂಡು ಬಂದಿರುವ ದಂತಕತೆಯನ್ನು ಆಧಾರವಾಗಿಟ್ಟುಕೊಂಡು ಈ ಸರಣಿಯನ್ನು ಬರೆಯುತ್ತಿದ್ದೇನೆ. ಇದರಲ್ಲಿ ಕೇವಲ ಪ್ರೇತ ಮಾತ್ರ ಬಂದು ಹೋಗುವುದಿಲ್ಲ. ಹದಿನೆಂಟನೇ ಶತಮಾನದಲ್ಲಿ ಭೂಮಿ ನಡುಗಿಸುವಷ್ಟು ಸೇನೆ ಕಟ್ಟಿಕೊಂಡು, ಮೊಘಲರನ್ನು ಬೇರು ಸಮೇತ ಕಿತ್ತೊಗೆದ ಮರಾಟಾ ಪೇಶ್ವಾಗಳು ಬರುತ್ತಾರೆ. ಉತ್ತರದ ಹಿಮಾಲಯದಿಂದ ದಕ್ಷಿಣದ ಕೃಷ್ಣಾ ನದಿ ದಂಡೆಯವರೆಗೆ ಪೇಶ್ವಾಗಳ ಕತ್ತಿಯ ಅಬ್ಬರ, ಕುದುರೆಗಳ ಹೇಷಾರವ, ಮದೋನ್ಮತ್ತ ಆನೆಗಳ ಹೂಂಕಾರ.. ನಭವನ್ನೇ ನಡುಗಿಸುವ ಮರಾಠಾ ಮಾವಳಿಗಳ ಹರಹರಾ ಮಹಾದೇವ ರಣಘರ್ಜನೆ.. ಚಿತ್ಪಾವನ ಬ್ರಾಹ್ಮಣ ರಣಕಲಿಗಳ ಅಪ್ರತಿಮ ರಣತಂತ್ರ.. ಒಂದು ಶತಮಾನ ಕಾಲ ವಿಜೃಂಭಿಸಿದ ಮರಾಠ ಶಕ್ತಿಯ ವಿವಿಧ ಮುಖ ಪರಿಚಯ ಇಲ್ಲಿ ನಿಮಗಾಗಲಿದೆ.

ಭಾಗ ೧

ಈಟಿ, ಭರ್ಜಿಗಳ ಕಣಕಣ ನಾದ … ದಗ್ಗನೆ ಉರಿದ ಪಂಜುಗಳು.. ವೇಗವಾಗಿ ಯಾರನ್ನೋ ಗುಂಪೊಂದು ಅಟ್ಟಾಡಿಸುತ್ತಿರುವಂತೆ ಹೆಜ್ಜೆಯ ಸಪ್ಪಳ.. ಕೊರೆದಾಡೆ ಮಸೆಯುತ್ತಾ ಮೃತ್ಯು ದೇವತೆ ಬಾಯ್ದೆರೆದು ನಿಂತಾಗ, ಪಸೆ ಆರಿದ ಗಂಟಲಿನಿಂದ ಹೊರಡುವ ಅಸಹಾಯಕ ಕೂಗು…ಕಾಕಾ ಮಲಾ ವಾಜ್ವಾ… ಕಾಕಾ ಮಲಾ ವಾಜ್ವಾ…….ಕಾಕಾ….ಕಾಕಾ… ಅತ್ಯಂತ ಕೀರಲು ದನಿ… ಮತ್ತೆ ಮತ್ತೆ ಅದೇ ದನಿ ಪ್ರತಿಧ್ವನಿಸುತ್ತಿದೆ.. ಅಳು, ಮತ್ತೊಮ್ಮೆ ಗಹಗಹಿಸುವ ವಿಕೃತ ನಗು ಅರಮನೆಯ ಯಾವ ಮೂಲೆಯಿಂದ ಬರುತ್ತಿದೆ, ಗೊತ್ತಿಲ್ಲ. ಆದರೆ ಒಳಗಿದ್ದ ಮೂವರು ಪ್ರವಾಸಿಗರ ಎದೆ ಮಾತ್ರ ಝಲ್ಲೆಂದಿತು. ಸದ್ದು ನಿಲ್ಲುತ್ತಿಲ್ಲ. ಮತ್ತೆ ಮತ್ತೆ ಮರುಕಳಿಸುತ್ತಿದೆ. ಭಯದಿಂದ ಎದೆಯೊಳಗೆ ರಕ್ತ ಹೆಪ್ಪುಗಟ್ಟುತ್ತಿರುವ ಅನುಭವ… ಓಡಲು ಕಾಲುಗಳೇ ಬರುತ್ತಿಲ್ಲ. ಆ ಇಬ್ಬರು ಹುಡುಗರು ಮಾತ್ರ ಓಡಿ ಹೊರ ಬಂದರು. ಅವರೊಂದಿಗಿದ್ದ ಯುವತಿ ಮಾತ್ರ ಧೈರ್ಯಗೆಟ್ಟು ಅಲ್ಲೇ ಕುಸಿದು ಬಿದ್ದಳು. “ಬಚಾವೊ ಬಚಾವೊ…” ಜೋರಾಗಿ ಬೊಬ್ಬೆ ಹೊಡೆಯುತ್ತಾ ಯುವಕರು ಗೇಟಿನತ್ತ ಓಡಿಬಂದರು. ಅಪಾಯ ಅರಿತ ಅರಮನೆಯ ಕಾವಲುಗಾರ ಸದಾಶಿವ ಶಿಂಧೆ, ಹುಡುಗರನ್ನು ಹಿಡಿದು ನಿಲ್ಲಿಸಿ ಕೇಳಿದ

“ಏನಾಯ್ತು?”

“ದಯವಿಟ್ಟು ನಮ್ಮ ಗೆಳತಿಯನ್ನು ಉಳಿಸಿ ಆಕೆ ಒಳಗೆ ಸಿಕ್ಕಿ ಬಿದ್ದಿದ್ದಾಳೆ… ಅಲ್ಲಿ ಯಾರೋ ಇದ್ದಾರೆ. ಏನೋ ಆಗುತ್ತಿದೆ… ಅಲ್ಲಿ… ಪಂಜು… ಕತ್ತಿ… ಸಂಕೋಲೆಯ ಸದ್ದು…”

ಆತನ ಬಡಬಡಿಕೆ ಕೇಳಿ ಶಿಂಧೆಗೆ ಪರಿಸ್ಥಿತಿ ತಿಳಿಯಿತು. ಶಿಂಧೆ ಗಡಿಯಾರದ ಕಡೆಗೊಮ್ಮೆ ನೋಡಿದ ಗಂಟೆ ೭.೪೫… “ಆರು ಗಂಟೆ ದಾಟಿದ ಮೇಲೆ ಅರಮನೆ ಒಳಗೆ ನಿಲ್ಲಬೇಡಿ, ಕೂಡಲೆ ಹೊರಟು ಬನ್ನಿ” ಎಂದು ಕಾವಲುಗಾರ ಶಿಂಧೆ ಎಚ್ಚರಿಕೆ ನೀಡಿದ್ದರೂ ಈ ಹುಡುಗರು ಕಿವಿ ಮೇಲೆ ಹಾಕಿಕೊಂಡಿರಲಿಲ್ಲ. ಈಗ ಮೊಂಡು ಧೈರ್ಯ ಬೆವರಿಳಿಸಿದೆ.

ಶಿಂಧೆ ಟಾರ್ಚು ಕೈಗೆತ್ತಿಕೊಂಡು, ಆ ಯುವತಿಯನ್ನು ಹುಡುಕಲು ಅರಮನೆಯ ಒಳನಡೆದರು. ವಾಡೆಯಲ್ಲಿ ನೀರವ ಮೌನ, ಅಸಹನೀಯ ಮೌನ. ಖಿಡ್ಕಿ ದರವಾಜಾದ ಬಳಿ ಯುವತಿ ಬಿದ್ದಿದ್ದಳು. ಹೆದರಿ ನಡುಗುತ್ತಿದ್ದ ಆಕೆಗೆ ಎದ್ದು ನಿಲ್ಲಲೂ ಸಾಧ್ಯವಾಗಲಿಲ್ಲ. ಮುಖಕ್ಕೆ ನೀರು ಚಿಮುಕಿಸಿ ಧೈರ್ಯ ಹೇಳಿ ಆಕೆಯನ್ನು ಹೊರ ಕರೆತರಲಾಯಿತು. ಶಿಂಧೆ ಯುವಕರತ್ತ ತಿರುಗಿ ಕೆರಳಿ ನಿಂತ.

“ಸಾರಿ ಸಾರಿ ಹೇಳಿದೆ… ಕತ್ತಲಾದ ಮೇಲೆ ಒಳಗೆ ನಿಲ್ಲುವ ದುಸ್ಸಾಹಸ ಮಾಡಬೇಡಿ ಅಂತ, ಎಲ್ಲಿಂದ ಬರ್ತಿರಯ್ಯಾ ನಮ್ಮ ಹೊಟ್ಟೆಗೆ ಹೊಡೆಯೋಕೆ…? ದೇವರ ದಯದಿಂದ ಹೆಚ್ಚೇನೂ ಸಮಸ್ಯೆ ಆಗಲಿಲ್ಲ. ಬಿಡಿ. ಬೇಗ ಇಲ್ಲಿಂದ ಜಾಗ ಖಾಲಿ ಮಾಡಿ. ಅವನ ಕಾಟ! ಬೆಂಕಿ ಹಚ್ಚಿದ್ದ ಅವನು… ಯಾರನ್ನು ಬಿಡಲ್ಲ. ಯಾರನ್ನೂ ಬಿಡಲ್ಲ. ಹೋಗಿ, ಹೊರಟು ಹೋಗಿ…” ಕಾವಲುಗಾರ ಶಿಂಧೆ, ಆ ಪ್ರವಾಸಿಗರ ಮೇಲೆ ಹರಿಹಾಯುತ್ತಾ ಅವಸರವಸರವಾಗಿ ಅವರನ್ನು ಗೇಟಿನಿಂದ ಹೊರದಬ್ಬಿದ. ವಾಸ್ತವದಲ್ಲಿ ಶಿಂಧೆಯೂ ಬೆಚ್ಚಿ ಬಿದ್ದಿದ್ದ. ಇದು ಆತನಿಗೆ ಆದ ಇಪ್ಪತ್ತೆರಡನೆಯ ಅನುಭವ…!! ಆ ಅರಮನೆಯೊಳಗೆ ಏನೋ ನಡೆಯುತ್ತಿದೆ. ಪ್ರತಿ ಅಮವಾಸ್ಯೆಯ ದಿನ ಬೊಬ್ಬೆ ಹೊಡೆಯುವ ಆ ಕೀರಲು ದನಿ ಯಾರದ್ದು?

ಶನಿವಾರವಾಡೆಯ ಭವ್ಯ ಅರಮನೆ.. ಪುಣೆ ನಗರದ ನೆತ್ತಿಯಲ್ಲಿ ಪೇಶ್ವಾಗಳು ಕಟ್ಟಿ ನಿಲ್ಲಿಸಿದ ಅಜೇಯ ಕೋಟೆ ಸಹಿತ ಅರಮನೆ. ಇಡೀ ಭಾರತವನ್ನು ಬಿರುಗಾಳಿಯಂತೆ ಆಕ್ರಮಿಸಿ, ಸುರೆ ಮತ್ತು ಸುಂದರಿಯರ ನಶೆಯಲ್ಲಿ ಮುಳುಗೇಳುತ್ತಿದ್ದ ಮುಸ್ಲಿಂ ರಾಜ್ಯಗಳನ್ನು ತರಗಲೆಗಳಂತೆ ಚದುರಿಸಿ, ಉತ್ತರ ಭಾರತದಲ್ಲಿ ಮತ್ತೊಮ್ಮೆ ಹಿಂದೂ ಅಧಿಪತ್ಯವನ್ನು ಸ್ಥಾಪಿಸುವ ಮೂಲಕ, ಛತ್ರಪತಿ ಶಿವಾಜಿ ಮಹಾರಾಜರು ಕಂಡ ಕನಸನ್ನು ನನಸು ಮಾಡಿದ ಪೇಶ್ವಾಗಳ ಅಧಿಕಾರದ ಗದ್ದುಗೆ ಅಲ್ಲಿತ್ತು. ಜಾತಿಯಲ್ಲಿ ಬ್ರಾಹ್ಮಣರಾದರೂ, ನೀತಿಯಲ್ಲಿ ಮಹಾಕ್ಷತ್ರಿಯರಾಗಿ ಮೆರೆದ ಪೇಶ್ವಾ ದೊರೆಗಳು ತಮ್ಮ ವಾಸಕ್ಕಾಗಿ ಕಟ್ಟಿದ ಉತ್ಕೃಷ್ಟ ಸೌಧವದು. ದಿಲ್ಲಿಯ ಮೊಘಲ್ ದೊರೆಗಳನ್ನು ಕನಸಲ್ಲೂ ಬೆಚ್ಚಿ ಬೀಳಿಸುತ್ತಿದ್ದ ಮಹಾ ಸೇನಾನಿ, ಅರಿಧುರಂದರ ಕಲಿ ಕಾಲಭೈರವ, ಸತತ ನಲವತ್ತೊಂದು ಯುದ್ದ ಗೆದ್ದು, ಕೇಸರಿಪತಾಕೆಯನ್ನು ವಾಯುವ್ಯ ಸರಹದ್ದಿನ ಗಿರಿಶಿಖರಗಳಲ್ಲೂ ನೆಟ್ಟ ಅಪ್ರತಿಮ ಪರಾಕ್ರಮಿ, ಮರಾಠ ಪಂಥ ಪ್ರಧಾನ ಶ್ರೀಮಂತ್ ಬಾಜಿರಾವ್ ಬಲ್ಲಾಳ ಪೇಶ್ವಾ ಈ ಅರಮನೆಯನ್ನು ೧೭೩೯ರಲ್ಲಿ ಕಟ್ಟಿಸಿದ.

ಈ ಅರಮನೆಯೊಳಗೆ ಪೇಶ್ವಾಗಳ ಪರಾಕ್ರಮದ ಗಾಥೆ ಇದೆ. ತಮಿಳುನಾಡಿನಿಂದ ಪೇಶಾವರದವರೆಗೆ ಹರಡಿದ್ದ ಪ್ರಚಂಡ ಮರಾಠಾ ಸಾಮ್ರಾಜ್ಯದ ಕೇಂದ್ರಬಿಂದು ಈ ಅರಮನೆ. ಹಿಂದೂ ಸಾಮ್ರಾಜ್ಯ ನಿರ್ಮಾಣದ ನೂರಾರು ರಣತಂತ್ರಗಳನ್ನು ಈ ಅರಮನೆಯಲ್ಲೇ ಹೆಣೆಯಲಾಯಿತು. ಶತ್ರು ಸೈನ್ಯವನ್ನು ಧೂಳಿಪಟ ಮಾಡಿ, ಹಿಂದೂ ಸಮಾಜದ ಸ್ಥೈರ್ಯವನ್ನು ನೂರ್ಮಡಿಗೊಳಿಸುತ್ತಾ, ಯುದ್ಧ ವಿಜಯ ಸಾಧಿಸಿ ಬಂದ ಪೇಶ್ವಾಗಳ ಸೈನ್ಯವನ್ನು, ಶನಿವಾರ ವಾಡ ವಿಜಯ ದುಂದುಭಿ ಮೊಳಗಿಸಿ ಸ್ವಾಗತಿಸಿದೆ. ಪರ್ವತ ಗಾತ್ರದ ಆನೆಗಳು ಅಂಬಾರಿ ಹೊತ್ತು ಒಳ ಬರುವಷ್ಟು ವಿಶಾಲವಾದ ಕೋಟೆಯ ಆನೆ ಬಾಗಿಲುಗಳು ಇಲ್ಲಿವೆ. ಈ ರೀತಿಯ ಐದು ದ್ವಾರಗಳಲ್ಲಿ ದಿಲ್ಲಿ ದರವಾಜ ಅತ್ಯಂತ ಪ್ರಸಿದ್ಧ. ಈ ದರವಾಜಾವನ್ನು ಉತ್ತರಕ್ಕೆ ಮುಖಮಾಡಿ ಕಟ್ಟಲಾಗಿದೆ. ಉತ್ತರದ ದಿಲ್ಲಿಯ ಮೊಘಲರ ಹುಟ್ಟಡಗಿಸಿ ಇಂದ್ರಪ್ರಸ್ಥದ ಕೋಟೆಯಲ್ಲಿ ಮರಾಠಾ ಧ್ವಜ ಹಾರಿಸಬೇಕು ಎಂಬ ಪೇಶ್ವಾಗಳ ಮಹತ್ವಾಕಾಂಕ್ಷೆಯನ್ನು ಈ ಬಾಗಿಲು ಪ್ರತಿಬಿಂಬಿಸುತ್ತಿತ್ತು. ವಿಶ್ವನಾಥ ಪೇಶ್ವಾ ಮೊತ್ತಮೊದಲ ಬಾರಿಗೆ ದಿಲ್ಲಿಯ ಮೇಲೆ ದಂಡೆತ್ತುವ ಧೈರ್ಯ ತೋರಿದ. ಆತನ ಮಗ ಥೊರಲೆ (ಒಂದನೇ) ಬಾಜಿರಾವ್ ಪೇಶ್ವಾ ತನ್ನ ಗೆರಿಲ್ಲಾ ಮಾದರಿಯ ಯುದ್ಧ ತಂತ್ರದಿಂದ ಉತ್ತರದ ಬಹುತೇಕ ಭಾಗವನ್ನು ತನ್ನ ತೆಕ್ಕೆಗೆ ಪಡೆದುಕೊಂಡ. ೧೭೨೦ರಿಂದ ೧೭೪೦ರವರೆಗೆ ಮರಾಠಾ ದೊರೆ ನಾಲ್ಕನೇ ಛತ್ರಪತಿ ಸಾಹುಜಿ ಮಹಾರಾಜ್ ಭೋಸ್ಲೆ ಅವರ ಪಂಥ ಪ್ರಧಾನರಾಗಿದ್ದ ಬಾಜಿರಾವ್ ಪೇಶ್ವಾ, ದಿಲ್ಲಿಯ ಮೊಘಲ ದೊರೆಗಳಿಗೆ ಒಂದರ ಮೇಲೊಂದರಂತೆ ಹೊಡೆತಗಳನ್ನು ನೀಡುತ್ತಾ ಅವರನ್ನು ನಾಲ್ಕೂ ದಿಕ್ಕುಗಳಿಂದ ಅಟಕಾಯಿಸಿದರು. ಅವರ ರಣತಂತ್ರದ ಮುಂದೆ ಮೊಘಲರ ಯಾವ ಆಟವೂ ನಡೆಯುತ್ತಿರಲಿಲ್ಲ. ದಿಲ್ಲಿ ಅಕ್ಷರಶಃ ಕಂಗಾಲಾಗಿ ಹೋಗಿತ್ತು.

ಏಶಿಯಾ ಖಂಡದಲ್ಲೇ ಅತೀ ದೊಡ್ಡ ಸಾಮ್ರಾಜ್ಯ ಕಟ್ಟಿದ ಬಾಬರ ವಂಶಸ್ಥರು, ಈ ಪೇಶ್ವಾಗಳ ಆಕ್ರಮಣಕ್ಕೆ ಬೆದರಿ, ತಮ್ಮ ರಾಜಧಾನಿಯಾದ ದಿಲ್ಲಿಯಲ್ಲೇ ಭಯದಿಂದ ಬದುಕುವಂತಾಗಿತ್ತು. ತಮಗೇನೂ ಮಾಡಬೇಡಿ ಎಂದು ಪೇಶ್ವಾಗಳ ಪಾದಕ್ಕೆ ಬಿದ್ದು, ತಮ್ಮ ರಾಜಾದಾಯದ ನಾಲ್ಕನೇ ಒಂದು ಭಾಗವನ್ನು ಶನಿವಾರವಾಡೆಯ ಅರಮನೆಗೆ ಕಳುಹಿಸಿ ಕೊಡತೊಡಗಿದರು ಮೊಘಲರು. ಇದು ಪೇಶ್ವಾಗಳ ತಾಕತ್ತು! ಶನಿವಾರವಾಡೆಯ ಗತ್ತು ಗೈರತ್ತು!

ಮುಂದುವರೆಯುತ್ತದೆ….. ಜೈ ಮಹಾಕಾಲ್….

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments