ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 8, 2016

ಸ್ವಾತಂತ್ರ್ಯೋತ್ಸವ ವಿಶೇಷ ಸರಣಿ – ದಿನಕ್ಕೊಬ್ಬ ದೇಶಭಕ್ತರ ಸ್ಮರಣೆ

‍ನಿಲುಮೆ ಮೂಲಕ

ದಿನ – 22
ಚಿದಂಬರಂ ಪಿಳ್ಳೈ
– ರಾಮಚಂದ್ರ ಹೆಗಡೆ

downloadಭಾರತ-ಶ್ರೀಲಂಕಾ ನಡುವಿನ ಸಮುದ್ರದಲ್ಲಿ ನೌಕಾಯಾನದ ಹೆಸರಿನಲ್ಲಿ ಜನರ ಸುಲಿಗೆ ಮಾಡುತ್ತಿದ್ದ ಬ್ರಿಟಿಷರ ಆಟಾಟೋಪಕ್ಕೆ ಉತ್ತರವಾಗಿ ‘ಸ್ವದೇಶಿ ನ್ಯಾವಿಗೇಷನ್ ಕಂಪೆನಿ’ ಹುಟ್ಟುಹಾಕಿದ ಧೀರ ಸಾಹಸಿ ತಮಿಳುನಾಡಿನ ಚಿದಂಬರಂ ಪಿಳ್ಳೈ. ತಮ್ಮದೇ ಆದ ಸಂಪೂರ್ಣ ಸ್ವದೇಶಿ ನೌಕಾಯಾನ ಸಂಸ್ಥೆಯನ್ನು 1906 ರ ಸಮಯದಲ್ಲೇ ಹುಟ್ಟುಹಾಕಿ ಈಸ್ಟ್ ಇಂಡಿಯಾ ಕಂಪನಿಯೇ ಪತರಗುಟ್ಟುವಂತೆ ಮಾಡಿದ, ಭಾರತೀಯರ ಪ್ರತಿರೋಧ ಕೇವಲ ಯುದ್ಧ ಬಲಿದಾನಗಳಲ್ಲಷ್ಟೇ ಅಲ್ಲ ಎಂದು ನಿರೂಪಿಸಿದ ಅಪ್ರತಿಮ ದೇಶಭಕ್ತ ಪಿಳ್ಳೈ. ಆಗಿನ ಕಾಲದಲ್ಲಿ ತಮಿಳುನಾಡಿನಲ್ಲಿ ಸ್ವರಾಜ್ಯ ಎಂಬ ಶಬ್ದವನ್ನು ಉಚ್ಚಾರ ಮಾಡಲೂ ಜನರು ಹೆದರುತ್ತಿದ್ದರು. ‘ಸ್ವಾತಂತ್ಯ್ರ’ ಎಂದು ಅಪ್ಪಿ ತಪ್ಪಿ ಹೇಳಿದರೆ ಅದು ರಾಜದ್ರೋಹವಾಗುತ್ತದೆ ಎಂದು ಜನರಿಗೆ ಅಂಜಿಕೆ. ಅಂಥ ಒಂದು ಕಾಲದಲ್ಲಿ ಚಿದಂಬರಂ ಪಿಳ್ಳೈಯವರು ತಮಿಳುನಾಡಿನಲ್ಲಿ ‘ವಂದೇ ಮಾತರಂ’ ಎಂದು ಘೋಷಣೆ ಕೂಗಿದರು. ಬ್ರಿಟಿಷರ ಚಕ್ರಾಧಿಪತ್ಯದ ವಿರುದ್ಧ ಜನರನ್ನು ಎತ್ತಿಕಟ್ಟಿದರು. ಸಹಸ್ರಾರು ಸ್ವಾತಂತ್ಯ್ರ ವೀರರನ್ನು ಹುರಿಗೊಳಿಸಿದ ಚಿದಂಬರಂ ಪಿಳ್ಳೈಯವರು ರಾಜದ್ರೋಹದ ಆಪಾದನೆ ಹೊತ್ತು ಆರು ವರ್ಷಗಳ ಕಾಲ ಸೆರೆಮನೆಯಲ್ಲಿ ಕಷ್ಟಪಟ್ಟರು.

ತಂದೆಯಂತೆ ತಾನೂ ವಕೀಲಿ ವೃತ್ತಿ ಆರಂಭಿಸಿದ ಪಿಳ್ಳೈ ಮೊಕದ್ದಮೆಯೊಂದರಲ್ಲಿ ಪಡೆದ ಗೆಲುವು, ತಮ್ಮ ನಿರರ್ಗಳ, ನಿರ್ಭೀತ ವಾದ ಶೈಲಿಯಿಂದಾಗಿ ತಿರುನಲ್ವೇಲಿ ಜಿಲ್ಲೆಯಲ್ಲೇ ಹೆಸರುವಾಸಿಯಾಗಿದ್ದರು. ಅಷ್ಟೇ ಅಲ್ಲ ಪಿಳ್ಳೈ ಅವರು ವಿದ್ಯಾರ್ಥಿ ನಾಯಕರಾಗಿಯೂ ಜನ ಮೆಚ್ಚುಗೆ ಪಡೆದಿದ್ದರು. ಅದು ಬಂಗಾಳ ವಿಭಜನೆಯ ಬ್ರಿಟಿಷ್ ಕುತಂತ್ರದ ವಿರುದ್ಧ ಇಡೀ ದೇಶವೇ ಸಿಡಿದೆದ್ದು ಸ್ವದೇಶಿ ಆಂದೋಲನದ ಕಾವು ಏರಿದ್ದ ಕಾಲ. ಚಿದಂಬರ್ ಪಿಳ್ಳೈ ಅವರು ತಮಿಳುನಾಡಿನಲ್ಲಿ ಸ್ವದೇಶಿ ಆಂದೋಲನದ ನೇತೃತ್ವ ವಹಿಸಿದರು. ಹೆಚ್ಚು ಕಡಿಮೆ ಬ್ರಿಟಿಷ್ ಸರ್ಕಾರದ ವಿರುದ್ಧ ಅವರು ಯುದ್ಧವನ್ನೇ ಸಾರಿದರು. ಆಗಲೇ ಚಿದಂಬರಂ ಪಿಳ್ಳೈಯವರನ್ನು ಜನ ದಳಪತಿ ಚಿದಂಬರಂ ಪಿಳ್ಳೈ ಎಂದು ಪ್ರೀತಿಯಿಂದ ಕರೆಯಲು ಪ್ರಾರಂಭಿಸಿದ್ದು. ತಮಿಳುನಾಡು ಸಹಜವಾಗಿ ಸಮುದ್ರಪ್ರದೇಶಕ್ಕೆ ಸನಿಹವಾದ್ದರಿಂದ ತಮಿಳುನಾಡಿನಲ್ಲಿ ಸಿಕ್ಕುತ್ತಿದ್ದ ಅನೇಕ ಪದಾರ್ಥಗಳು ವಿದೇಶಗಳಿಗೆ ರಫ್ತಾಗುತ್ತಿದ್ದವು.

ಬ್ರಿಟಿಷ್ ನ್ಯಾವಿಗೇಷನ್ ಕಂಪೆನಿಯ ಹಡಗುಗಳು ಶ್ರೀಲಂಕಾ ಮತ್ತು ತಮಿಳುನಾಡಿನ ಮಧ್ಯೆ ಸಂಚರಿಸುತ್ತಿದ್ದವು. ಆಗ ಹಡಗಿನ ವ್ಯಾಪಾರ, ಪ್ರಯಾಣಗಳೆಲ್ಲ ಇಂಗ್ಲಿಷರ ವಶದಲ್ಲಿತ್ತು. ಬ್ರಿಟಿಷರು ತಮಗೆ ಆಗುತ್ತಿದ್ದ ಖರ್ಚಿನ ನಾಲ್ಕು ಪಟ್ಟು ಸುಂಕ ವಿಧಿಸಿ ಜನರ ಸುಲಿಗೆ ಮಾಡುತ್ತಿದ್ದರು. ಇದನ್ನು ಅರಿತ ಪಿಳ್ಳೈ ಬ್ರಿಟಿಷರ ಕೈಲಿದ್ದ ಹಡಗಿನ ವ್ಯಾಪಾರವನ್ನು ತಾವು ಕಸಿದುಕೊಳ್ಳಬೇಕೆಂದು ನಿರ್ಧರಿಸಿದರು. ೧೯೦೬ರಲ್ಲಿ ಚಿದಂಬರಂ ಪಿಳ್ಳೈಯವರು “ಸ್ವದೇಶಿ ನೌಕಾ ಸಂಸ್ಥೆ” ಎಂಬ ಖಾಸಗಿ ಕಂಪನಿಯನ್ನು ಪ್ರಾರಂಭಿಸಿದರು. 10 ರೂಪಾಯಿ ಮುಖಬೆಲೆಯ 40 ಸಾವಿರ ಷೇರುಗಳು ತಲಾ 25 ರೂ.ಗಳಿಗೆ ಮಾರಾಟವಾಗಿ, ಕೇವಲ ನಾಲ್ಕಾಣೆ ಶುಲ್ಕದ ‘ವಂದೇಮಾತರಂ’ ಹೆಸರಿನ ಸ್ವದೇಶಿ ಹಡಗುಗಳು ಕಾರ್ಯಾರಂಭ ಮಾಡಿದವು. ಇದರಿಂದ ಬ್ರಿಟಿಷ್ ಕಂಪೆನಿಗೆ ಹೊಡೆತ ಬಿತ್ತು. ಇದರಿಂದ ವಿಚಲಿತರಾದ ಬ್ರಿಟಿಷರು ಕಂಪೆನಿಯನ್ನು ವಿಲೀನಗೊಳಿಸಬೇಕೆಂಬ ಪ್ರಸ್ತಾಪವನ್ನು ಪಿಳ್ಳೆಯವರ ಮುಂದೆ ಇಟ್ಟರು. ಅದಕ್ಕೆ ಪಿಳ್ಳೈ ಒಪ್ಪದಿದ್ದಾಗ, ಹಲವು ಆರೋಪಗಳನ್ನು ಹೇರಿ, ರಾಜದ್ರೋಹದ ಕಾರಣ ನೀಡಿ, ಬ್ರಿಟಿಷರು ಅವರನ್ನು ಅಂಡಮಾನ್ ಜೈಲಿಗೆ ಅಟ್ಟಿದರು.

ಜೈಲಿನಲ್ಲಿ ಅವರನ್ನು ಅತ್ಯಂತ ಹೀನಾಯವಾಗಿ ನಡೆಸಿಕೊಂಡು, ಅತಿ ಕೆಟ್ಟ ಕಿರುಕುಳ, ಹಿಂಸೆ ನೀಡಲಾಯಿತು. ಅದಕ್ಕೆ ಧೃತಿಗೆಡದ ಪಿಳ್ಳೈ ಜೈಲಿನಲ್ಲೇ ಅನೇಕ ಪುಸ್ತಕ ಬರೆದರು. ಆರು ವರ್ಷಗಳ ಕಠಿಣ ಶಿಕ್ಷೆಯ ನಂತರ ಬಿಡುಗಡೆಗೊಂಡ ಈ ಅಪ್ರತಿಮ ದೇಶಭಕ್ತ 1936 ರಲ್ಲಿ ವಿಧಿವಶರಾಗುವವರೆಗೂ, ತಮ್ಮ ‘ದೇಶಾಭಿಮಾನಿಗಳ ಸಂಘ’ ದ ಮೂಲಕ, ನಿರಂತರ ದೇಶಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಭಾರತೀಯರ ಪರಾಕ್ರಮ, ಕೆಚ್ಚು, ಧೈರ್ಯ, ಸಾಹಸಗಳ ಅಪ್ರತಿಮ ಉದಾಹರಣೆಯಾಗಿ ಚಿದಂಬರ್ ಪಿಳ್ಳೈ ಇತಿಹಾಸದಲ್ಲಿ ಅಮರರಾಗಿದ್ದಾರೆ.

ಮಾಹಿತಿ ಕೃಪೆ : ಕಣಜ.ಇನ್ , ವಿಕಿಪೀಡಿಯಾ ಇತರ ಮೂಲಗಳಿಂದ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments