ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 9, 2016

6

ಕಾಶ್ಮೀರ ಸಮಸ್ಯೆಯ ವರ್ತಮಾನ

‍ನಿಲುಮೆ ಮೂಲಕ

– ಪ್ರೊ. ರಾಜಾರಾಮ ಹೆಗಡೆ

12-kashmir-protest-2ಕಾಶ್ಮೀರವು ಇಂದು ಕೇವಲ ಭಾರತ ಪಾಕಿಸ್ತಾನ ಎಂಬ ಎರಡು ರಾಷ್ಟ್ರಗಳ ನಡುವಿನ ಹಗೆಯ ಕಾರಣವಷ್ಟೇ ಅಲ್ಲ, ಭಾರತದಲ್ಲೇ ಆಂತರಿಕ ಹಗೆಯ ಹೊಗೆಯೆಬ್ಬಿಸುತ್ತಿರುವ ಒಂದು ವರ್ತಮಾನದ ಸಮಸ್ಯೆಯಾಗಿದೆ. ಹಾಗಾಗಿ ಕಾಶ್ಮೀರ ವಿವಾದವು ಹೇಗೆ ಪ್ರಾರಂಭವಾಯಿತು, ನಮ್ಮ ಮುತ್ಸದ್ದಿಗಳು ಎಲ್ಲಿ ಎಡವಿದರು ಎಂಬ ಹಿಸ್ಟರಿಗಿಂತ ಅದರ ತೆಕ್ಕೆಯೊಳಗೆ ಬರಲು ಸೋಲುವ ಅಥವಾ ನಿರಾಕರಿಸುವ ವರ್ತಮಾನದ ಆಯಾಮಗಳು ನನಗೆ ಸೋಜಿಗ ಹುಟ್ಟಿಸುತ್ತಿವೆ. ಇಂದು ಕಾಶ್ಮೀರವು ಭಾರತ ಪಾಕಿಸ್ತಾನಗಳ ಗಡಿ ಸಮಸ್ಯೆಯಾಗಿ ಉಳಿದಿಲ್ಲ, ಬದಲಾಗಿ ಅದು ದೇಶದ ಸಮಸ್ತ ಪ್ರಗತಿಪರ ಹೋರಾಟಗಾರರಿಗೂ, ಆಜಾದಿಯ ಕರೆಯಾಗಿ ಕಾಣಿಸುತ್ತಿದೆ ಎಂಬುದನ್ನು ಗಮನಿಸುವುದು ಅಗತ್ಯ. ಕೇವಲ ಮುಸ್ಲಿಂ ಸಂಘಟನೆಗಳೊಂದೇ ಅಲ್ಲ ಭಾರತದ ಪ್ರಗತಿಪರ ಸಂಘಟನೆಗಳೂ, ಕಾಶ್ಮೀರಿ ಮುಸ್ಲಿಂ ಹೋರಾಟಗಾರರ ಜೊತೆಗೆ ಆಜಾದಿಯ ಘೋಷಣೆ ಕೂಗುತ್ತಿವೆ. ದೇಶದ ಬರ್ಬಾದಿಯ ಕುರಿತು ಮಾತನಾಡುವುದು ಈ ಸಂಘಟನೆಗಳಿಗೆ ರಾಷ್ಟ್ರೀಯತೆಯ ಸಮಸ್ಯೆಯಾಗಿ ಕಾಣಿಸುತ್ತಿಲ್ಲ. ಬದಲಾಗಿ ಬಿಡುಗಡೆಯ ಕರೆಯಾಗಿ ಕಾಣಿಸುತ್ತಿದೆ. ಇಂಥ ಚಳವಳಿಗಳನ್ನು ಬೆಂಬಲಿಸುವ ಬುದ್ಧಿಜೀವಿಗಳಿಗೆ ಇಂಥ ಘೋಷಣೆಗಳು ನ್ಯಾಯಯುತವೆನಿಸತೊಡಗಿವೆ. ಈ ಪರಿಸ್ಥಿತಿಯು ನಮಗೆ ಎರಡು ಸವಾಲುಗಳನ್ನು ಸೃಷ್ಟಿಸಿದೆ:

1) ಇದನ್ನು ಅರ್ಥ ಮಾಡಿಕೊಳ್ಳುವುದು ಹೇಗೆ ಎಂಬುದು.
2) ಇಂಥ ಚಳವಳಿಗಳ ನೈತಿಕ ಸ್ಥಾನಮಾನವೇನು ಎಂಬುದು.

ಮೊದಲನೆಯ ಪ್ರಶ್ನೆಯನ್ನು ಕುರಿತು ಪರಿಶೀಲಿಸುವುದಾದರೆ, ಅದನ್ನು ಎರಡು ಮಜಲುಗಳಲ್ಲಿ ಅರ್ಥೈಸುವ ಸಾಧ್ಯತೆಯಿದೆ:

ಅ) ಇದಕ್ಕೊಂದು ಪಕ್ಷ ರಾಜಕೀಯದ ಹಿನ್ನೆಲೆಯನ್ನೊದಗಿಸಿ ಅರ್ಥೈಸುವುದು: ಅಂದರೆ ಬಿಜೆಪಿ ಮೊತ್ತಮೊದಲ ಬಾರಿಗೆ ಸಂಪೂರ್ಣ ಬಹುಮತದೊಂದಿಗೆ ದೇಶದ ಅಧಿಕಾರವನ್ನು ಹಿಡಿದದ್ದು. “ನರಹಂತಕ” ಎಂದು ಬಿಂಬಿಸಲ್ಪಟ್ಟ ನರೇಂದ್ರ ಮೋದಿಯವರು ಜನಮತದ ಮೂಲಕ ಪ್ರಧಾನಿಯಾಗಿ ಆಳ್ವಿಕೆಗೆ ಬಂದ ವಾಸ್ತವವನ್ನು ಅರಗಿಸಿಕೊಳ್ಳಲಾಗದ ಸ್ಥಿತಿಗೆ ಇಂಥವರು ತಳ್ಳಲ್ಪಟ್ಟಿದ್ದಾರೆ. ಈ ಥರದ ಮಾನಸಿಕ ಸ್ಥಿತಿ ನಾಟಕವಂತೂ ಅಲ್ಲ. ಇವರು ಈ ರಾಜಕೀಯ ಬೆಳವಣಿಗೆಯಿಂದಾಗಿ ನಿಜವಾಗಿಯೂ ಆತಂಕಕ್ಕೆ ಒಳಗಾಗಿದ್ದಾರೆ. ಮೋದಿಯನ್ನು ಹಿಟ್ಲರನಿಗೆ ಹಾಗೂ ಹಿಂದುತ್ವವನ್ನು ನಾಝಿಸಂಗೆ ಸಮೀಕರಿಸಿಕೊಂಡು ಜರ್ಮನಿಯಲ್ಲಿ ಅಲ್ಪಸಂಖ್ಯಾತರ ಕರಾಳ ದಮನದ ಇತಿಹಾಸವು ಭಾರತದಲ್ಲೂ ಮರುಕಳಿಸಬಹುದು ಎಂಬ ಕಾಳಜಿ ಇವರಲ್ಲಿ ಮುಖ್ಯವಾಗಿ ಕೆಲಸಮಾಡುತ್ತಿದೆ. ಕಾಶ್ಮೀರದ ಮುಸ್ಲಿಮ ಗಲಭೆಕೋರರನ್ನು ನಿಗ್ರಹಿಸುವ ಪ್ರಯತ್ನವನ್ನು ಇವರು ಅಲ್ಪಸಂಖ್ಯಾತರ ದಮನದ ಹುನ್ನಾರ ಎಂಬಂತೆ ಚಿತ್ರಿಸುತ್ತಿದ್ದಾರೆ. ಇತ್ತೀಚೆಗೆ ದೇಶಾದ್ಯಂತ ಭುಗಿಲೆದ್ದ ಅಸಹಿಷ್ಣುತೆಯ ಘೋಷಣೆಗಳು ಇದೇ ಸೈಕಾಲಜಿಯಿಂದ ಹುಟ್ಟಿವೆ. ಇಂಥ ಘಟನೆಗಳು ಹಿಂದಿನ ಸರ್ಕಾರಗಳಲ್ಲೂ ನಡೆದಿದ್ದರೂ ಅದು ಅಸಹಿಷ್ಣುತೆಯ ಸಮಸ್ಯೆಯಾಗಿ ಅವರಿಗೆ ತೋರಿರಲಿಲ್ಲ ಎಂಬುದು ಗಮನಾರ್ಹ. ಅಂದರೆ ಮೋದಿ ಸರ್ಕಾರದ ಕುರಿತು ಬುದ್ಧಿಜೀವಿಗಳು ತಾವೇ ಸೃಷ್ಟಿಸಿಕೊಂಡ ಅವ್ಯಕ್ತ ಭಯದ ಉರುಳಿಗೆ ತಾವೇ ಬಲಿಯಾಗಿದ್ದಾರೆ.

ಆ) ಈ ಮೇಲಿನ ರಾಜಕೀಯಕ್ಕೆ ನೇರವಾಗಿ ನೆಲೆಯನ್ನೊದಗಿಸುವ ವಸಾಹತುಕಾಲದ ಚಿಂತನೆಗಳ ಜಗತ್ತೊಂದಿದೆ. ಅದೇ ನಮ್ಮ ಆಧುನಿಕ ರಾಜಕೀಯವನ್ನು ರೂಪಿಸಿದಂಥದ್ದು. ಅಂದರೆ ಪ್ರಜಾಪ್ರಭುತ್ವದಲ್ಲಿ ಸಮುದಾಯದ ಹಿತಾಸಕ್ತಿ (ಇಂಟರೆಸ್ಟ್)ಯನ್ನು ರಕ್ಷಿಸುವ ಪ್ರಾತಿನಿಧಿಕ (ರಿಪ್ರೆಸೆಂಟೇಟಿವ್) ರಾಜಕೀಯವನ್ನು ಅಳವಡಿಸಿಕೊಂಡಿದ್ದೇವೆ. ಈ ರಾಜಕೀಯದ ಮೂಲಭೂತ ಪರಿಕಲ್ಪನೆಗಳು ನಮಗೆಷ್ಟು ಪರಕೀಯವೆಂದರೆ ಅದನ್ನು ಅರ್ಥಮಾಡಿಕೊಂಡು ಆಚರಿಸುವುದು ಗಗನ ಕುಸುಮವೇ ಸೈ. ಹಾಗಾಗಿ ನಮ್ಮ ಜನನಾಯಕರುಗಳು ವಸಾಹತು ಕಾಲದ ಚಿಂತನೆಗಳನ್ನಾಧರಿಸಿ ತಮ್ಮದೇ ಪ್ರಯೋಗಗಳನ್ನು ನಡೆಸತೊಡಗಿದರು. ಭಾರತಕ್ಕೆ ಆರ್ಯರೆಂಬವರು ಹೊರಗಿನಿಂದ ಬಂದು ಇಲ್ಲಿನ ದ್ರಾವಿಡರನ್ನು ಹಾಗೂ ಅನಾರ್ಯರನ್ನು ಜಾತಿ ವ್ಯವಸ್ಥೆಗೆ ಒಳಪಡಿಸಿದ್ದಾರೆ ಎಂಬುದು ಅಂಥ ಒಂದು ಸಿದ್ಧಾಂತ. ಭಾರತದ ಅಬ್ರಾಹ್ಮಣ ಜಾತಿಗಳು ಆರ್ಯಮೂಲದ ಬ್ರಾಹ್ಮಣ ಪುರೋಹಿತಶಾಹಿಗಳಿಂದಾಗಿ ಇತಿಹಾಸ ಕಾಲದುದ್ದಕ್ಕೂ ಒಂದಿಲ್ಲೊಂದು ರೀತಿಯಲ್ಲಿ ವಂಚಿತರಾಗಿದ್ದಾರೆ ಎಂಬುದು ಈ ಸಿದ್ಧಾಂತದ ಮುಂದುವರಿದ ಭಾಗ. ಇಂಥ ವಂಚನೆಗಳ ಪಟ್ಟಿಯು ಅಕ್ಷರ, ವಿದ್ಯಾಭ್ಯಾಸ, ಸಾಮಾಜಿಕ ಸ್ಥಾನಮಾನ, ಭೂಮಿ, ಸಂಪತ್ತು, ನೌಕರಿ, ಅಧಿಕಾರ, ಹೆಣ್ಣು, ಹೀಗೆ ಯಾವ್ಯಾವ ಸವಲತ್ತುಗಳು ಕಾಲದಿಂದ ಕಾಲಕ್ಕೆ ಸಂಶೋಧನೆಯಾಗುತ್ತವೆಯೋ ಅವೆಲ್ಲವುಗಳನ್ನೂ ಒಳಗೊಳ್ಳಬಲ್ಲ ಶಕ್ತಿ ಸಾಮರ್ಥ್ಯವನ್ನು ಹೊಂದಿದೆ. ಇಂಥ ನಿರೂಪಣೆಗಳನ್ನು ಆಧರಿಸಿಕೊಂಡ ಭಾರತೀಯ ರಾಜಕೀಯವು ಜಾತಿ ಗುಂಪುಗಳನ್ನು ಧೃವೀಕರಿಸಿ ಅವು ಸಮಾನ ಹಿತಾಸಕ್ತಿಯ ಗುಂಪುಗಳೋ ಎಂಬಂತೆ ಅದನ್ನು ತನ್ನ ಕಾರ್ಯಕ್ರಮದ ಗುರಿಯನ್ನಾಗಿಸಿಕೊಂಡಿತು. ಈ ಜಾತಿ ರಾಜಕೀಯದ ಜೊತೆಗೆ ಒಂದು ಮತೀಯ ರಾಜಕೀಯವೂ ವಸಾಹತು ಕಾಲದಲ್ಲಿ ಪ್ರಾರಂಭವಾಯಿತು. ಭಾರತದಲ್ಲಿ ಬಹುಸಂಖ್ಯಾತ ಹಾಗೂ ಅಲ್ಪಸಂಖ್ಯಾತ ರಿಲಿಜನ್ನುಗಳಿವೆ ಎಂಬ ಪಾಶ್ಚಾತ್ಯರ ಸಿದ್ಧಾಂತವನ್ನು ಆಧರಿಸಿ ಸ್ವತಂತ್ರ ಭಾರತದಲ್ಲಿ ಮತೀಯ ರಾಜಕೀಯ ಶುರುವಾಯಿತು. ಬಹುಸಂಖ್ಯಾತರ ಹಾಗೂ ಅಲ್ಪಸಂಖ್ಯಾತರ ಹಿತಾಸಕ್ತಿಗಳ ಪರವಾಗಿ ವಾದಿಸುವ ಪಕ್ಷಗಳು ಹುಟ್ಟಿಕೊಂಡವು. ಬಹುಸಂಖ್ಯಾತರು ಅಲ್ಪಸಂಖ್ಯಾತರ ಹಿತಾಸಕ್ತಿಗೆ ಮಾರಕ ಎಂಬ ತರ್ಕವನ್ನಾದರಿಸಿ ಸೆಕ್ಯುಲರ್ ರಾಜಕೀಯದ ನೆಲೆಗಳನ್ನು ಶೋಧಿಸಲಾಯಿತು. ಆಯಾ ಜಾತಿ, ಮತಗಳಿಗೇ ಈ ವಸಾಹತು ಸಿದ್ಧಾಂತವನ್ನು ಪರಿಚಯಿಸಿ ಅದರ ಸದಸ್ಯರನ್ನು ಈ ರಾಜಕೀಯಕ್ಕೆ ನೆಲೆಯಾಗಿಸಿಕೊಳ್ಳುವ ಕಾರ್ಯಕ್ರಮದಲ್ಲಿ ಬುದ್ಧಿಜೀವಿಗಳು ಅದಕ್ಕೆ ನಿರ್ಣಾಯಕರಾಗಿದ್ದಾರೆ.

ಈ ಮೇಲಿನ ಎರಡೂ ಹಿತಾಸಕ್ತಿ ರಾಜಕೀಯಗಳು ಒಂದೆಡೆ ಸೇರಿವೆ ಎಂಬುದು ಕುತೂಹಲಕಾರಿಯಾಗಿದೆ. ಅಂದರೆ ಒಂದೆಡೆ ಜಾತಿಯ ಹಿತಾಸಕ್ತಿ ರಾಜಕೀಯ ಮತ್ತೊಂದೆಡೆ ಮತೀಯ ಹಿತಾಸಕ್ತಿ ರಾಜಕೀಯ. ಈ ರಾಜಕೀಯದಲ್ಲಿ ಅಲ್ಪಸಂಖ್ಯಾತರು ಬ್ರಾಹ್ಮಣೇತರ ಜಾತಿಗಳ ಹಿತಾಸಕ್ತಿಯ ಜೊತೆಗೆ ಸೇರಿಕೊಳ್ಳುತ್ತಾರೆ ಹಾಗೂ ಇವರಿಬ್ಬರ ಹಿತಾಸಕ್ತಿಗೂ ಸಾಮಾನ್ಯ ಶತ್ರುವಾಗಿ ಬ್ರಾಹ್ಮಣ ಮತ್ತೊಂದೆಡೆ ನಿಲ್ಲುತ್ತಾನೆ. 80ರ ದಶಕದಲ್ಲಿ ತುರ್ತು ಪರಿಸ್ಥಿತಿಯ ನಂತರ ಹಿಂದುತ್ವವು ರಾಜಕೀಯ ಪಕ್ಷವಾಗಿ ಅಧಿಕಾರದ ಭಾಗವಾಯಿತು. ನಂತರ ಕಾಂಗ್ರೆಸ್ ಪಾಳಯವನ್ನು ಶಿಥಿಲಗೊಳಿಸುತ್ತ ಹಿಂದುತ್ವವು ಮುನ್ನೆಲೆಗೆ ಬರತೊಡಗಿತು. ಈ ಸಂದರ್ಭದಲ್ಲಿ ಇದನ್ನು ಫ್ಯಾಸಿಸ್ಟ್ ಧೋರಣೆಯೆಂಬುದಾಗಿ ವರ್ಣಿಸಿ ಅದನ್ನು ರಾಜಕೀಯ ಅಧಿಕಾರದಿಂದ ದೂರವಿಡುವ ತಂತ್ರಗಾರಿಕೆಯ ಶೋಧನೆಗಳು ನಡೆದವು. ಆಗ ಹಿಂದುತ್ವವು ಬ್ರಾಹ್ಮಣರ ಪಕ್ಷ, ಅದು ಕೇವಲ ಅಲ್ಪ ಸಂಖ್ಯಾತರಿಗೆ ಮಾತ್ರವಲ್ಲ ಹಿಂದೂಗಳಲ್ಲೇ ಬ್ರಾಹ್ಮಣೇತರರಿಗೆ ಕೂಡ ಮಾರಕ ಎಂಬ ನಿರೂಪಣೆಗಳನ್ನು ಸಾಧಿಸಲಿಕ್ಕಾಗಿ ಜಾತಿ ವ್ಯವಸ್ಥೆಯ ಕಥೆಗೆ ರೆಕ್ಕೆ ಪುಕ್ಕಗಳು ಬಂದವು. ನಂತರ ಹಿಂದುತ್ವವನ್ನು ಹಿಮ್ಮೆಟ್ಟಿಸಲಿಕ್ಕಾಗಿ ಬ್ರಾಹ್ಮಣೇತರರು ಹಾಗೂ ಅಲ್ಪಸಂಖ್ಯಾತರನ್ನು ಸೇರಿಸಿ ಒಂದು ಕೂಟವನ್ನು ರಚಿಸುವ ತಂತ್ರವನ್ನು ಹೆಣೆಯಲಾಯಿತು. ಈ ರಾಜಕೀಯ ಧೃವೀಕರಣವನ್ನು ಸಾಧಿಸುವಲ್ಲಿ ಸೆಕ್ಯುಲರ್ ಐಡಿಯಾಲಜಿಯಿಂದ ಪ್ರೇರಿತರಾದ ಸಮಾಜ ಶಾಸ್ತ್ರಜ್ಞರ ಕೊಡುಗೆಯೂ ನಿರ್ಣಾಯಕವಾಗಿದೆ. ಭಾರತೀಯ ಬ್ರಾಹ್ಮಣೇತರ ಚಳವಳಿಗಳಿಗಳು ಹೇಗೆ ಬ್ರಾಹ್ಮಣರನ್ನು ವಿರೋಧಿಸಿ ಕೆಳಜಾತಿಗಳ ಹಿತಾಸಕ್ತಿಯ ರಕ್ಷಣೆ ಮಾಡಿದವು ಎಂಬುದರ ಜೊತೆಗೇ ಇಸ್ಲಾಂ ಕ್ರಿಶ್ಚಿಯಾನಿಟಿಗಳು ಮತಾಂತರದ ಮೂಲಕ ಭಾರತದಲ್ಲಿ ಜಾತಿ ತರತಮಗಳನ್ನು ನಿವಾರಣೆ ಮಾಡಲು ಕೊಡುಗೆ ಕೊಟ್ಟಿವೆ ಎಂಬುದನ್ನು ಅವರು ಕಟ್ಟಿಕೊಟ್ಟರು. ಒಟ್ಟಿನಲ್ಲಿ ಮುಸ್ಲಿಂ ಹಾಗೂ ಕ್ರೈಸ್ತರು ಜಾತಿ ವ್ಯವಸ್ಥೆಯಿಂದ ನಲುಗಿದ ಭಾರತೀಯ ಕೆಳಜಾತಿಗಳ ಉದ್ಧಾರಕರಾಗಿ ಚಿತ್ರಿತರಾದರು. ಹೀಗೆ ಬ್ರಾಹ್ಮಣೇತರರು ಹಾಗೂ ಅಲ್ಪಸಂಖ್ಯಾತರ ಒಂದು ಸಾಮಾನ್ಯ ಹಿತಾಸಕ್ತಿಯ ಗುಂಪು ಕಲ್ಪಿತವಾಯಿತು.

ಈ ಮೇಲಿನ ಅಲ್ಪಸಂಖ್ಯಾತ ಹಾಗೂ ಜಾತಿ ರಾಜಕಾರಣಗಳ ಧೃವೀಕರಣದಲ್ಲಿ ಹಿಂದೂಗಳೆಂದರೆ ಬ್ರಾಹ್ಮಣ ಶಾಹಿಗಳು ಅಥವಾ ಅದನ್ನು ಸಮರ್ಥಿಸುವವರು. ಅವರು ಅಲ್ಪ ಸಂಖ್ಯಾತರು ಹಾಗೂ ಕೆಳಜಾತಿಗಳ ಹಿತಾಸಕ್ತಿಗೆ ಮಾರಕ ಎಂಬ ಸಮೀಕರಣಗಳು ಇಂದು ಬೆಳೆದಿವೆ. ಇದರ ಜೊತೆಗೆ ರಾಷ್ಟ್ರೀಯತಾ ಯುಗದಿಂದಲೂ ರೂಪಿತಗೊಂಡು ಬಂದ ರಾಷ್ಟ್ರ ಕಲ್ಪನೆಯನ್ನೂ ಆರ್ಯ, ಬ್ರಾಹ್ಮಣ ಹಾಗೂ ಹಿಂದುತ್ವದ ಜೊತೆಗೆ ಸಮೀಕರಿಸಿ ಅದು ತಮಗೆ ಪರಕೀಯ ಹಾಗೂ ತಮ್ಮ ಹಿತಕ್ಕೆ ಮಾರಕ ಎಂಬಂತೆ ಭಾವಿಸಲಾಗುತ್ತಿದೆ. ಪ್ರಚಲಿತದಲ್ಲಿರುವ ರಾಷ್ಟ್ರೀಯ ವ್ಯಾಖ್ಯಾನಗಳು ಪುರೋಹಿತ ಶಾಹಿಯ ಹುನ್ನಾರವಾಗಿ, ಕೆಳಜಾತಿಗಳು ಹಾಗೂ ಅಲ್ಪ ಸಂಖ್ಯಾತರ ಹಿತಾಸಕ್ತಿಗೆ ಮಾರಕವಾಗಿವೆ ಎಂಬ ನಿರೂಪಣೆ ಕೂಡ ಹುಟ್ಟಿಕೊಂಡಿದ್ದು ಇತ್ತೀಚಿನ ಘಟನೆಗಳಲ್ಲಿ ಸ್ಪಷ್ಟವಾಗಿದೆ. ಇವರ ನಿರೂಪಣೆಗಳಿಗೆ ಈ ವಿಚಾರಗಳೆಲ್ಲ ಒಂದಕ್ಕೊಂದು ಸಂಬಂಧಿಸಿ ತರ್ಕಬದ್ಧವಾಗಿ ಜೋಡಣೆಗೊಳ್ಳುತ್ತಿರುವಂತೆ ಕಾಣಿಸುವುದರಿಂದ ತಮ್ಮ ಅನ್ನಿಸಿಕೆಗಳೇ ಸತ್ಯ ಎಂದು ಇವರು ಭದ್ರವಾಗಿ ನಂಬಿದ್ದಾರೆ. ಆದರೆ ಈ ತರ್ಕಗಳೆಲ್ಲ ‘ಹಿಂದೂಯಿಸಂ ಎಂಬುದು ರಿಲಿಜನ್ನು, ಆರ್ಯ ಎಂಬುದೊಂದು ಬ್ರಾಹ್ಮಣೇತರರಿಗೆ ಪರಕೀಯ ಜನಾಂಗ, ಹಾಗೂ ಬ್ರಾಹ್ಮಣರು ಅದರ ಪುರೋಹಿತಶಾಹಿಗಳು’, ಎಂಬ ವಸಾಹತು ಕಾಲದ ಮರಳಿನ ಮೇಲೆ ನಿಂತ ಮನೆಗಳಾಗಿವೆ.

2) ನೈತಿಕ ಆಯಾಮಗಳು:
ಈ ಹಿತಾಸಕ್ತಿ ರಾಜಕೀಯವು ನಮ್ಮ ಸಮಾಜದ ಕುರಿತು ವಸಾಹತು ಕಾಲದ ಒಪ್ಪಿತ ಸತ್ಯಗಳನ್ನು ಪ್ರಶ್ನಿಸುವವರಿಗೆ ಹಾಗೂ ಹೊಸ ನಿರೂಪಣೆಗಳನ್ನು ಬೆಳೆಸುವವರಿಗೆ ಒಂದು ವಿಚಿತ್ರವಾದ ನೈತಿಕ ಒತ್ತಡವನ್ನು ಸೃಷ್ಟಿಸಿದೆ. ನೀವು ಬ್ರಾಹ್ಮಣೇತರರ ಕುರಿತು ನಕಾರಾತ್ಮಕವಾಗಿ ಮಾತನಾಡಲೇಬೇಕೆಂದಿಲ್ಲ, ಇಂದಿನ ರಾಜಕೀಯಕ್ಕೆ ಆಧಾರವಾದ ತಥಾಕಥಿತ ಸತ್ಯಗಳನ್ನು ಪ್ರಶ್ನಿಸಿದರೆ ಅದು ಶೋಷಣೆಯ ಸಮರ್ಥನೆ ಹಾಗೂ ಅದರ ಮುಂದುವರಿಕೆಯ ಹುನ್ನಾರವಾಗುತ್ತದೆ. ಅಂಥವರು ಈ ಎಲ್ಲ ಬ್ರಾಹ್ಮಣೇತರರ ಹಿತಾಸಕ್ತಿಗೆ ಮಾರಕ ಎಂದು ಬಿಂಬಿಸಲಾಗುತ್ತದೆ. ಅಂಥವರನ್ನು ಹೇಗೆ ಹತ್ತಿಕ್ಕಿದರೂ, ಅದು ನೈತಿಕ ಕೆಲಸವೇ ಎಂಬುದು ಇವರ ರಾಜಕೀಯ ಸಿದ್ಧಾಂತ. ಇಂಥ ರಾಜಕೀಯದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಎಂದರೆ ಈ ನೈತಿಕ ರಾಜಕೀಯದ ಮಾತುಗಳನ್ನಾಡುವುದು ಮಾತ್ರ. ಅದನ್ನು ಪ್ರಶ್ನಿಸುವುದು ಅದರಲ್ಲಿ ಬರುವುದಿಲ್ಲ. ಅಷ್ಟೇ ಅಲ್ಲ, ಬ್ರಾಹ್ಮಣರ ಕುರಿತ ದ್ವೇಷದ ಮಾತುಗಳೂ ಈ ರಾಜಕೀಯದಲ್ಲಿ ನೈತಿಕವೇ ಅಗುತ್ತವೆ, ಹಾಗಾಗಿ ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿಯೇ ಬರುತ್ತವೆ. ಬ್ರಾಹ್ಮಣರ ಕುರಿತು ಯಾವ ಯಾವ ದ್ವೇಷದ ಮಾತುಗಳನ್ನು ಆಡಬಹುದೆಂಬುದರ ನಿರಂತರ ಪ್ರಯೋಗವನ್ನು ಸ್ವಾತಂತ್ರ್ಯೋತ್ತರ ಕಾಲದ ಬರವಣಿಗೆಗಳಲ್ಲಿ ನೋಡಬಹುದು. ಈ ರಾಜಕೀಯದ ಬ್ರಾಹ್ಮಣೇತರ ಪ್ರತಿಪಾದಕರು ಬ್ರಾಹ್ಮಣರನ್ನು ಹೇಸಿಗೆ ಹುಟ್ಟಿಸುವಷ್ಟು ನಿಂದಿಸುವುದೂ, ಬ್ರಾಹ್ಮಣ ಪ್ರತಿಪಾದಕರು ತಾವು ಆ ಜಾತಿಯಲ್ಲಿ ಹುಟ್ಟಿದ್ದಕ್ಕೆ ನಾಚಿಕೆಯನ್ನೂ, ಪಶ್ಚಾತ್ತಾಪವನ್ನೂ ಪಡುತ್ತ, ತಾವು ಜಾತಿಯನ್ನು ಮೀರಿದ್ದೇವೆ ಎಂದು ಭ್ರಮಿಸುತ್ತ ಅಂಥ ನಿಂದನೆಗಳನ್ನು ‘ಪ್ರಸಾದ’ ಎಂಬಂತೆ ಸ್ವೀಕರಿಸುವುದೂ ಕೂಡ ನಮ್ಮ ಬೌದ್ಧಿಕ ಜಗತ್ತಿನ ವಾಸ್ತವಗಳೇ ಆಗಿವೆ. ನಮ್ಮ ಸಮಾಜಿಕ ವಾಸ್ತವವು ಈ ಗ್ರಹಿಕೆಗೆ ವಿರುದ್ಧವಾಗಿದ್ದುದು ಕಂಡುಬಂದಾಗಲೆಲ್ಲ ಅದು ಪುರೋಹಿತಶಾಹಿಯದೇ ಹುನ್ನಾರ ಎಂಬ ನಿರೂಪಣೆಯನ್ನು ಶತಾಯಗತಾಯ ಮುಂದೊತ್ತಿ ಈ ರಾಜಕೀಯವನ್ನು ರಕ್ಷಿಸಿಕೊಳ್ಳಲಾಗುತ್ತದೆ.

ಇದರ ಜೊತೆಗೆ ಸೆಕ್ಯುಲರಿಸಂ ನಮ್ಮ ಆದರ್ಶವಾದ ನಂತರ ಅಲ್ಪಸಂಖ್ಯಾತರ ಹಿತಾಸಕ್ತಿಯನ್ನು ಪ್ರತಿಪಾದಿಸುವುದು ನೈತಿಕವಾಗಿಯೂ ಬಹುಸಂಖ್ಯಾತರ ಹಿತಾಸಕ್ತಿಯ ಕುರಿತು ಮಾತನಾಡುವುದು ಅನೈತಿಕವಾಗಿಯೂ ಮಾರ್ಪಟ್ಟಿತು. ಹಾಗಾಗಿ ನೀವು ಅಲ್ಪ ಸಂಖ್ಯಾತರ ವಿರುದ್ಧವಾಗಿ ಮಾತನಾಡಲೇಬೇಕೆಂದಿಲ್ಲ, ಹಿಂದುತ್ವದ ಕುರಿತು ಒಳ್ಳೆಯ ಮಾತುಗಳನ್ನು ಹೇಳಿದರೆ ಸಾಕು, ಇಲ್ಲ ಹಿಂದೂ ಸಂಪ್ರದಾಯಗಳ ಕುರಿತು ಸಕಾರಾತ್ಮಕವಾಗಿ ಮಾತನಾಡಿದರಾಯಿತು, ಅದು ಬಹುಸಂಖ್ಯಾತರ ಸಮರ್ಥನೆಯಾಗುವುದರಿಂದ ಅಲ್ಪಸಂಖ್ಯಾತರಿಗೆ ಮಾರಕ ಎಂಬುದಾಗಿ ತಿಳಿಯುವುದರಿಂದ ಅದು ಅನೈತಿಕವಾಗುತ್ತದೆ. ಹೀಗೆ ಭಾರತದಲ್ಲಿ ಸೆಕ್ಯುಲರ್ ವಾದದ ಪ್ರಕಾರ ನೀವು ನೈತಿಕವಾಗಿ ಇರಬೇಕಾದರೆ ಬ್ರಾಹ್ಮಣರ ಹಾಗೂ ಹಿಂದೂಗಳ ಕುರಿತು ಕಹಿಯಾಗಿ, ನಕಾರಾತ್ಮಕವಾಗಿ ಮಾತನಾಡಬೇಕು, ಎಂಬ ತರ್ಕ ಚಾಲ್ತಿಯಲ್ಲಿರುವುದು ಸರ್ವವಿದಿತವಾಗಿದೆ.

ಇವರ ತರ್ಕ ಇವರನ್ನು ಎಲ್ಲಿಗೆ ಒಯ್ದಿದೆ ಎಂಬುದನ್ನು ನೋಡೋಣ. ಕಾಶ್ಮೀರದಲ್ಲಿ ಭಾರತೀಯ ಪ್ರಭುತ್ವದ ವಿರುದ್ಧ ಹೋರಾಡುತ್ತಿರುವವರ ಉದ್ದೇಶವೇನು? ಕಾಶ್ಮೀರದ ಕುರಿತು ಇರುವ ಮೂಲ ಸಮಸ್ಯೆ ಅದು ಭಾರತಕ್ಕೆ ಸೇರಬೇಕೋ ಪಾಕಿಸ್ತಾನಕ್ಕೋ ಎಂಬುದು. ಪಾಕ್, ಕಾಶ್ಮೀರದ ಒಂದು ಭಾಗವನ್ನು ಬಲವಂತವಾಗಿ ಆಕ್ರಮಿಸಿಕೊಂಡು ಉಳಿದ ಭಾಗವೂ ತನಗೇ ಸೇರಬೇಕು ಎನ್ನುತ್ತಿದೆ. ಆದರೆ ಅದು ಭಾರತೀಯ ಮುಸ್ಲಿಮರ ಬೇಡಿಕೆ ಹೇಗಾಗಬಲ್ಲದು? ಭಾರತದ ಪ್ರಜೆಗಳ ಮಾನವಹಕ್ಕುಗಳ ಹೋರಾಟದ ಪ್ರಶ್ನೆ ಹೇಗಾಗಬಲ್ಲದು? ಪಾಕಿಸ್ತಾನದಂತೆ ಭಾರತವೂ ಒಂದು ರಿಲಿಜನ್ನಿನ ರಾಷ್ಟ್ರವಾಗಿದ್ದ ಪಕ್ಷದಲ್ಲಿ ಕಾಶ್ಮೀರದ ಮುಸ್ಲಿಮರಿಗೆ ಆತಂಕ ಹುಟ್ಟಬೇಕಾದದ್ದು ಸಹಜ. ಆದರೆ ಭಾರತವು ಸೆಕ್ಯುಲರ್ ರಾಷ್ಟ್ರವೊಂದೇ ಅಲ್ಲ, ಅಲ್ಪಸಂಖ್ಯಾತರ ಕುರಿತು ವಿಶೇಷ ಕಾಳಜಿಯನ್ನು ಪ್ರಕಟಿಸುವ, ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ ಕಾಂಗ್ರೆಸ್ಸಿನ ಆಳ್ವಿಕೆಯಲ್ಲೇ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಇತ್ತು. ಬಿಜೆಪಿಯನ್ನು ಪಕ್ಕಕ್ಕಿಡೋಣ. ಕಾಶ್ಮೀರದ ಭಯೋತ್ಪಾದಕ ಸಂಘಟನೆಗಳೆಲ್ಲ ಹುಟ್ಟಿ ಭಾರತೀಯ ಪ್ರಭುತ್ವಕ್ಕೆ ಕಂಟಕವಾಗಿದ್ದೇ ಕಾಂಗ್ರೆಸ್ ಅವಧಿಯಲ್ಲಿ. ಇಂಥ ಸಂಘಟನೆಗಳು ಹಿಂದೂಗಳ ಮೇಲೆ ಬರ್ಬರ ಹಲ್ಲೆ ನಡೆಸಿ ಅವರನ್ನು ಕಾಶ್ಮೀರದಿಂದ ಓಡಿಸುವ ಪ್ರಯತ್ನಗಳನ್ನೂ ನಡೆಸಿವೆ. ಇಂದಿಗೂ ಈ ಹೋರಾಟದಲ್ಲಿ ತೊಡಗಿಸಿಕೊಂಡವರ ಭಾಷೆಯನ್ನು ಗಮನಿಸಿದರೆ ಅವರಿಗೆ ಸೆಕ್ಯುಲರ್ ಆದರ್ಶಗಳಾಗಲೀ ಮಾನವ ಹಕ್ಕುಗಳ ಕಾಳಜಿಗಳಾಗಲೀ ಇದ್ದಂತೆ ಕಾಣುವುದಿಲ್ಲ. ಭಾರತದ ಉಳಿದ ಭಾಗವನ್ನು ಬಿಡಿ, ಕಾಶ್ಮೀರದ ಹಿಂದೂಗಳೂ ಕೂಡ ತಮ್ಮವರೆಂದು ಅವರು ಭಾವಿಸಿದಂತೆ ಕಾಣುವುದಿಲ್ಲ. ಅವರೊಂದು ಸಂಕುಚಿತ ಇಸ್ಲಾಂ ಜಗತ್ತಿನೊಳಗೆ ಇದ್ದಾರೆ ಅಷ್ಟೆ. ಇದು ಕಾಶ್ಮೀರದ ಪ್ರಜೆಗಳ ಮಾನವ ಹಕ್ಕುಗಳ ದಮನದ ಪ್ರಶ್ನೆಯಾಗಿದ್ದರೆ, ಏಕೆ ಈ ಹೋರಾಟದಲ್ಲಿ ಕಾಶ್ಮೀರದ ಮುಸ್ಲಿಮೇತರ ಪ್ರಜೆಗಳು ಇಲ್ಲ? ಹಿಂದೂಗಳು ಇಲ್ಲ? ಭಾರತದಲ್ಲಿ ಅವರ ಪರವಾಗಿ ಆಜಾದಿ ಘೋಷಣೆಯನ್ನು ಕೂಗುವವರಲ್ಲಿ ಬ್ರಾಹ್ಮಣರಾದಿಯಾಗಿ, ಹಿಂದೂಗಳಾದಿಯಾಗಿ ಎಲ್ಲ ಜಾತಿ ಮತಗಳೂ ಇಲ್ಲವೆ?

ಅಂದರೆ ಮೇಲಿಂದ ಮೇಲೆ ಕಾಣಿಸುವುದೆಂದರೆ ಕಾಶ್ಮೀರ ವಿಮೋಚನಾ ಹೋರಾಟಗಾರರು ತಾವು ಮುಸ್ಲಿಮರಾಗಿರುವ ಕಾರಣ ಭಾರತಕ್ಕೆ ಸೇರಿಲ್ಲ ಅಂದುಕೊಳ್ಳುತ್ತಿದ್ದಾರೆ ಹಾಗೂ ಅವರು ಇಸ್ಲಾಮಿಕ್ ರಾಷ್ಟ್ರವಾದ ಪಾಕಿಸ್ತಾನಕ್ಕೆ ಸೇರಲು ಹೋರಾಡುತ್ತಿದ್ದಾರೆ ಅಥವಾ ಪ್ರತ್ಯೇಕ ಇಸ್ಲಾಮಿಕ್ ರಾಷ್ಟ್ರಕ್ಕಾಗಿ ಪ್ರಯತ್ನಿಸುತ್ತಿದ್ದಾರೆ ಅಷ್ಟೆ. ಅಂದರೆ ಭಾರತೀಯ ಪ್ರಭುತ್ವದೊಳಗೆ ಸಂಪೂರ್ಣವಾಗಿ ಬರಲು ನಿರಾಕರಿಸುತ್ತಿದ್ದಾರೆ. ನಾನು 1970ರ ದಶಕದಲ್ಲಿ ಪೂನಾದಲ್ಲಿ ಸಂಶೋಧನೆ ನಡೆಸುತ್ತಿದ್ದಾಗ ಅಲ್ಲಿಗೆ ಕಾಶ್ಮೀರದ ಹೋರಾಟವನ್ನು ಬೆಂಬಲಿಸುವ ಮುಸ್ಲಿಂ ವಿದ್ಯಾರ್ಥಿಗಳು ಓದಲು ಬರುತ್ತಿದ್ದರು. ಅವರು ಸದಾ ಉಳಿದ ಮುಸ್ಲಿಂ ವಿದ್ಯಾರ್ಥಿಗಳನ್ನು ಸಂಘಟಿಸುವ ಕೆಲಸವನ್ನೇ ಮಾಡಿಕೊಂಡಿರುತ್ತಿದ್ದರು. ಅವರ ಜೊತೆಗೆ ಒಡನಾಡಿದಾಗ ಅವರಿಗೆ ಇಸ್ಲಾಮನ್ನು ಬಿಟ್ಟು ಬೇರೇನೂ ಆದರ್ಶಗಳಿದ್ದಂತೆ ಕಾಣಲಿಲ್ಲ. ಕಾಶ್ಮೀರದ ಸಾಮಾನ್ಯ ಮುಸ್ಲಿಮ/ಹಿಂದೂ ಪ್ರಜೆಗಳು ಸೆಕ್ಯುಲರ್ ಆಳ್ವಿಕೆಯನ್ನು, ಸ್ವಾತಂತ್ರ್ಯವನ್ನು ಬಯಸುತ್ತಾರೆ ಅಂತಾದಲ್ಲಿ ಮಾನವ ಹಕ್ಕುಗಳು ಹಾಗೂ ಸೆಕ್ಯುಲರಿಸಂ ವಕ್ತಾರರು ಮೊದಲು ಇಂಥ ಹೋರಾಟಗರರ ವಿರುದ್ಧ ದನಿಯೆತ್ತಬೇಕು. ಏಕೆಂದರೆ ಈ ಹೋರಾಟಗಾರರು ಸೃಷ್ಟಿಸ ಬಯಸುವ ಕಾಶ್ಮೀರದಲ್ಲಿ ಹಿಂದೂಗಳಿಗಾಗಲೀ, ತಮ್ಮಷ್ಟಕ್ಕೆ ಸ್ವತಂತ್ರವಾಗಿ ಜೀವನ ನಡೆಸ ಬಯಸುವ ಮುಸ್ಲಿಮರಿಗೇ ಆಗಲೀ ರಕ್ಷಣೆ ಇದೆ ಎಂಬುದಕ್ಕೆ ಇನ್ನೂ ಸಾಕ್ಷಿ ಪುರಾವೆಗಳು ಸೃಷ್ಟಿಯಾಗಿಲ್ಲ. ಇದೊಂದು ಅಪ್ಪಟ ಸೆಕ್ಯುಲರ್ ವಿರೋಧಿ ಇಸ್ಲಾಮಿಕ್ ಗುಂಪಿನ ಹೋರಾಟ ಎಂಬುದರಲ್ಲಿ ಸಂದೇಹವುಳಿದಿಲ್ಲ. ಅವರು ಕಾಶ್ಮೀರದ ಮುಸ್ಲಿಮ್ ಪ್ರಜೆಗಳ ಹಿತಾಸಕ್ತಿಯನ್ನು ಕೂಡ ಪ್ರತಿನಿಧಿಸುತ್ತಿಲ್ಲ. ಸೆಕ್ಯುಲರಿಸಂ ಬಗ್ಗೆ ಹಾಗೂ ಮಾನವ ಹಕ್ಕುಗಳ ಬಗ್ಗೆ ಕಾಳಜಿ ಇರುವವರು ಅಂಥ ತತ್ವಗಳನ್ನು ಕಡೇ ಪಕ್ಷ ಆದರ್ಶವಾಗಿ ಒಪ್ಪಿಕೊಂಡ ರಾಷ್ಟ್ರವನ್ನೇ ಬಿಟ್ಟು ಅದನ್ನು ದಮನಿಸುವ ಆಳ್ವಿಕೆಗೆ ಈ ಭೂಭಾಗವನ್ನು ಸೇರಿಸಲಿಕ್ಕೆ ಏಕೆ ಪ್ರಯತ್ನಿಸುತ್ತಾರೆ?

ಈಗ ಬರುವ ಪ್ರಶ್ನೆ ಎಂದರೆ ಮೇಲ್ನೋಟಕ್ಕೇ ಕಾಣಿಸುವ ಇಂತಹ ಸತ್ಯಗಳು ಆಜಾದಿಯ ವಕ್ತಾರರಿಗೆ ಕಾಣದಂತೆ ಆದದ್ದು ಹೇಗೆ? ಹಾಗಾದರೆ ಇವರೂ ಕೂಡ ಪ್ರತ್ಯೇಕ ಇಸ್ಲಾಮಿಕ್ ರಾಷ್ಟ್ರದ ಆಜಾದಿಗಾಗಿ ಹೋರಾಡುತ್ತಿದ್ದಾರೆಯೆ? ಇವರ್ಯಾರೂ ಹಾಗೆ ತಿಳಿದಿರಲು ಸಾಧ್ಯವಿಲ್ಲ. ಆದರೆ ಇವರೆಲ್ಲರೂ ಕಾಶ್ಮೀರಿ ಹೋರಾಟಗಾರರ ಹಾಗೂ ತಮ್ಮ ಹಿತಾಸಕ್ತಿಗಳು ಒಂದೇ ಎಂಬುದಾಗಿ ಭ್ರಮಿಸಿದ್ದಾರೆ ಎಂಬುದು ನಿಶ್ಚಿತ. ಇವರೆಲ್ಲರ ಘೋಷಣೆಗಳು ಸೂಚಿಸುವಂತೆ ಭಾರತದಲ್ಲಿ ಅನಾದಿ ಕಾಲದಿಂದ 2016ನೆಯ ಇಸವಿಯವರೆಗೂ ಆರ್ಯ ಜನಾಂಗದ ಪುರೋಹಿತಶಾಹಿಗಳಿಂದ ಮಾನವ ಹಕ್ಕುಗಳ ದಮನವಾಗುತ್ತ ಬಂದಿದೆ. ಆಶ್ಚರ್ಯವೆಂದರೆ ಇಂದು ಸಂವಿಧಾನ, ಕಾನೂನು ವ್ಯವಸ್ಥೆ, ಇವೆಲ್ಲವುಗಳ ಮೂಲಕ ಅಲ್ಪಸಂಖ್ಯಾತ ಹಾಗೂ ಕೆಳಜಾತಿಗಳ ಹಿತಾಸಕ್ತಿಯ ರಕ್ಷಣೆಯ ಕಾರ್ಯಕ್ರಮವನ್ನೇ ದಿನನಿತ್ಯ ಜಾರಿಗೊಳಿಸುತ್ತಿರುವಾಗ ಕೂಡ ಈ ರಾಷ್ಟ್ರದಲ್ಲಿ ಪುರೋಹಿತಶಾಹಿಯ ಆಳ್ವಿಕೆಯೇ ಇದೆ ಎಂದು ನಂಬಿದ್ದಾರಲ್ಲ ಎಂಬುದು! ಅಂದರೆ ಇದೊಂದು ರಾಜಕೀಯ ಎಂಬುದು ಮೇಲಿಂದ ಮೇಲೆ ಕಾಣಿಸುತ್ತಿದೆ ಹಾಗೂ ಈ ರಾಜಕೀಯಕ್ಕೆ ಇಂದು ನಿರ್ದಿಷ್ಟವಾಗಿ ಮೋದಿ ಹಾಗೂ ಬಿಜೆಪಿ ಆಳ್ವಿಕೆಗಳು ಸಂದರ್ಭವನ್ನು ಸೃಷ್ಟಿಸಿವೆ. ಅದರಲ್ಲೂ ಹಿಂದುತ್ವದ ಗುಂಪುಗಳು ಬಿಜೆಪಿ ಆಳ್ವಿಕೆ ಬಂದ ನಂತರ ಗೋಹತ್ಯೆ ನಿಷೇಧ, ಘರ್‍ವಾಪಸಿ, ರಾಷ್ಟ್ರಭಕ್ತಿ, ವಂದೇ ಮಾತರಂ, ಇತ್ಯಾದಿ ಕಾರ್ಯಕ್ರಮಗಳನ್ನು ಮುಂದೊತ್ತತೊಡಗಿವೆ. ಜಾಗತೀಕರಣಗೊಳ್ಳುತ್ತಿರುವ ಶಿಕ್ಷಿತ ಸಮುದಾಯಗಳಲ್ಲಿ ಪೂಜೆ, ಹೋಮಹವನ, ಬ್ರಾಹ್ಮಣ ವಿಧಿವಿಧಾನಗಳು, ಜ್ಯೋತಿಷ, ಇತ್ಯಾದಿಗಳು ಹಿಂದೆಂದೂ ಇಲ್ಲದಂತೆ ವಿಜೃಂಭಿಸತೊಡಗಿವೆ. ಹಾಗಾಗಿ ಆರ್ಯ ಪುರೋಹಿತಶಾಹಿಯು ತಮ್ಮನ್ನು ಆವರಿಸಿಕೊಳ್ಳುತ್ತಿದೆ ಎಂಬ ಆತಂಕದಲ್ಲಿ ಈ ಹೋರಾಟಗಾರರು ಇದ್ದಾರೆ.

ಆದರೆ ಇಂಥ ರಾಜಕೀಯ ಇವರನ್ನೆಲ್ಲ ಎತ್ತ ತೆಗೆದುಕೊಂಡು ಹೋಗುತ್ತಿದೆ? ತಾವು ಹುಟ್ಟಿ ಪ್ರಜ್ಞಾವಂತ ನಾಗರಿಕರಾಗಿ ಬೆಳೆದು ಸಕಲ ಸವಲತ್ತುಗಳನ್ನು ಹಾಗೂ ಕಾನೂನಿನ ರಕ್ಷಣೆಯನ್ನು ನೀಡುತ್ತಿರುವ ದೇಶದ ಕುರಿತೇ ಹಗೆತನ ಬೆಳೆದಿದೆ. ಇಂದು ಭಾರತದಲ್ಲಿ ಒಂದು ಅಪರಾಧ ನಡೆಯುವಂತಿಲ್ಲ, ಅನ್ಯಾಯ ನಡೆಯುವಂತಿಲ್ಲ ಅದು ಈ ದೇಶದ್ದೇ ದೋಷ ಎಂಬಂತೆ ಅದರ ಲೇವಡಿ ಪ್ರಾರಂಭವಾಗುತ್ತದೆ. ಈ ದೇಶದ ದೇಶೀ ಪರಂಪರೆಗಳನ್ನು ಪರಕೀಯ ಎಂದು ಬಿಂಬಿಸಿ ನಿಜವಾಗಿಯೂ ಪರಕೀಯರಿಂದ ಎರವಲು ಪಡೆದವುಗಳನ್ನು ಪ್ರತಿಷ್ಠಾಪಿಸುವುದೇ ಸ್ವಾತಂತ್ರ್ಯ ಎಂದು ಬಿಂಬಿಸಲಾಗುತ್ತಿದೆ. ಬಹುಶಃ ಈ ಮಟ್ಟಿಗೆ ಪ್ರಪಂಚದ ಯಾವ ದೇಶದ ಪರಿಸ್ಥಿತಿಯೂ ಇಷ್ಟು ಶೋಚನೀಯವಾಗಿಲ್ಲ. ಹಿಂದುತ್ವದವರಿಂದ ತಮ್ಮ ಸ್ವಾತಂತ್ರ್ಯ ಹರಣವಾಗಿದೆ ಎನ್ನುವ ಇವರಿಗೆ ಒಂದೆಡೆ ಚೀನಾದ ನಂಟುಳ್ಳ ನಕ್ಸಲ್‍ವಾದಿ ಸಂಘಟನೆಗಳು, ಮತ್ತೊಂದೆಡೆ ಪಾಕಿಸ್ತಾನದ ನಂಟುಳ್ಳ ಉಗ್ರಗಾಮಿಗಳು ತಮ್ಮ ಬಿಡುಗಡೆಯ ವಕ್ತಾರರೆಂಬಂತೆ ಕಾಣಿಸತೊಡಗಿದ್ದಾರೆ. ‘ಭಾರತದ ಬರ್ಬಾದಿಯ ತನಕ ಹೋರಾಡುತ್ತೇವೆ’ ಎಂಬ ಘೋಷಣೆಯಿಂದ ಇವರು ವಿಚಲಿತರಾಗುವುದಿಲ್ಲ, ಬದಲಾಗಿ ಅದೊಂದು ಹಕ್ಕು ಪ್ರತಿಪಾದನೆಯ ಆಶಾಕಿರಣವಾಗಿ ಕಾಣಿಸುತ್ತದೆ. ಇವರು ಪಾಕಿಸ್ತಾನದ ಕುರಿತು, ಭಾರತ ವಿರೋಧೀ ಉಗ್ರಗಾಮಿಗಳ ಕುರಿತು, ಧಾರಾಳಿಗಳಾಗುವುದು ಹೃದಯವಂತಿಕೆ ಅಂದುಕೊಳ್ಳುತ್ತಾರೆ ಆದರೆ ತಮ್ಮದೇ ದೇಶದ ತಮ್ಮದೇ ಒಂದು ಭಾಗವಾದ ಪರಂಪರೆಗಳು, ತಮ್ಮ ಜೊತೆಗೇ ಇರುವ ಹಿಂದುತ್ವ ಸಂಘಟನೆ ಹಾಗೂ ಬ್ರಾಹ್ಮಣ ಜಾತಿಗಳ ಕುರಿತು ಒಂದು ಸಮರ್ಥನೆಯ ಮಾತನ್ನಾಡಿದವರನ್ನೂ ಅವರು ಸಹಿಸುವುದಿಲ್ಲ! ಹೇಗಿದೆ? ತಮ್ಮನ್ನು ಗಮನಿಸುತ್ತಿರುವ ಇತರ ಭಾರತೀಯ ಪ್ರಜೆಗಳಿಗೆ ತಾವೆಷ್ಟು ಅಸಂಗತವಾಗಿ, ಅಪಾಯಕಾರಿಗಳಾಗಿ ಕಾಣುತ್ತಿದ್ದೇವೆ ಎನ್ನುವುದರ ಪರಿವೆಯೂ ಇವರಿಗೆಲ್ಲ ಇದ್ದಂತಿಲ್ಲ.

ಬಿಜೆಪಿಗೆ ಹಿಂದೂ ರಾಷ್ಟ್ರವೆಂಬುದು ಒಂದು ರಾಜಕೀಯ ವಿಷಯ ಅಷ್ಟೆ, ಹಿಂದುತ್ವದ ಸಂಘಟನೆಗಳು ತಮ್ಮ ಹಿಂದೂ ರಾಷ್ಟ್ರ ಕಲ್ಪನೆಯನ್ನು ಭಾವನಾತ್ಮಕವಾಗಿ ನಿರೂಪಿಸುವುದು ಕೆಳಜಾತಿಗಳಲ್ಲಿ ಹಾಗೂ ಅಲ್ಪಸಂಖ್ಯಾತರಲ್ಲಿ ಅಸ್ಥಿರತೆ ಹುಟ್ಟಿಸುತ್ತದೆ ಎಂಬುದು ಇವರ ಆಕ್ಷೇಪಣೆ. ಆದರೆ ಅದಕ್ಕೆ ಬದಲಾಗಿ ಇವರ ರಾಜಕೀಯ ಹೇಗಿದೆ? ಹಿಂದುತ್ವದ ರಾಜಕೀಯಕ್ಕೆ ಪ್ರತಿಯಾಗಿ ಇವರಿಗೆ ತಮ್ಮ ರಾಜಕೀಯವನ್ನು ‘ದೇಶವಿರೋಧಿ’ ಮಟ್ಟಕ್ಕೆ ಮುಂದೊತ್ತುವ ಅನಿವಾರ್ಯತೆ ಬಂದಿದೆಯೆ? ಹಿಂದೂ ರಾಷ್ಟ್ರವನ್ನು ಭಾವನಾತ್ಮಕವಾಗಿ ನಿರೂಪಿಸುವುದು ಹೆಚ್ಚೆಂದರೆ ಸೆಕ್ಯುಲರ್ ಸಮಸ್ಯೆಯಾಗಬಹುದು, ಅದಕ್ಕೆ ಬದಲಾಗಿ ಅಲ್ಪಸಂಖ್ಯಾತರನ್ನು ಹಾಗೂ ಕೆಳಜಾತಿಯ ಹಿಂದೂಗಳನ್ನೇ ಶೋಷಣೆಗೆ ಒಳಪಡಿಸುವ, ಅವರ ಮಾನವ ಹಕ್ಕುಗಳ ದಮನ ಮಾಡುವ ಹುನ್ನಾರ ಹೇಗಾಗುತ್ತದೆ? ಅದಕ್ಕೇನಾದರೂ ಆಧಾರಗಳಿವೆಯೆ? ಅದಕ್ಕೆ ಆಧಾರವೆಂದರೆ ಆರ್ಯಪುರೋಹಿತಶಾಹಿಯ ಕಥೆಯೊಂದೇ. ಅಂದರೆ ಆಜಾದಿಯ ಘೋಷಣೆ ಕೂಗುವವರು ತಾವೆಲ್ಲ ಇನ್ನೂ ಆರ್ಯರ ಹಾಗೂ ಬ್ರಾಹ್ಮಣ ಪುರೋಹಿತಶಾಹಿಯ ಆಳ್ವಿಕೆಗೊಳಪಟ್ಟಿದ್ದೇವೆ ಎಂದು ಹೇಳುತ್ತಿದ್ದಾರೆ. ಎಲ್ಲೋ ನಡೆಯುವ ಅಮಾನುಷ ಕೃತ್ಯಗಳನ್ನು ಗಪ್ಪೆಂದು ಹಿಡಿದು ಅವೇ ದೃಷ್ಟಾಂತಗಳು ಎಂಬಂತೆ ಮಾತನಾಡುತ್ತಾರೆ. ಇವರಿಗೆ ಸಂವಿಧಾನ, ಕಾನೂನು ವ್ಯವಸ್ಥೆ, ಪ್ರಜಾಪ್ರಭುತ್ವ ಇವು ಯಾವವೂ ಕಾಣುತ್ತಿಲ್ಲ. ತಾವೂ ಕೂಡ ಈ ಆಳ್ವಿಕೆಯ ಒಂದು ಭಾಗ ಎಂಬುದಾಗಿ ಇವರಿಗೆ ಅನ್ನಿಸುತ್ತಿಲ್ಲ. ಬ್ರಾಹ್ಮಣರಾದಿಯಾಗಿ ಮೇಲ್ಜಾತಿಯದೇ ಬಹುಸಂಖ್ಯಾತರಿದ್ದ ಇದೇ ರಾಷ್ಟ್ರವೇ ಅಲ್ಪಸಂಖ್ಯಾತರು, ಕೆಳಜಾತಿಗಳು ಹಾಗೂ ಸ್ತ್ರೀಯರ ರಕ್ಷಣೆಯ ಕುರಿತು ವಿಶೇಷ ತಾರತಮ್ಯದ ಕಾನೂನುಗಳನ್ನು ಮಾಡಿದೆ ಎಂಬುದು ಮುಖ್ಯವೆನ್ನಿಸುತ್ತಿಲ್ಲ. ಇದೇ ಭಾರತವೇ ಕಳೆದ ನೂರು ವರ್ಷಗಳಲ್ಲಿ ಸಾಮಾಜಿಕ ಬದಲಾವಣೆಗಾಗಿ ಅಗತ್ಯವಿರುವ ಯಾವ ಕಾನೂನಿನ ಕ್ರಮಗಳನ್ನೂ ಶೋಧಿಸದೇ ಬಿಟ್ಟಿಲ್ಲ ಎಂಬುದೂ ಇವರ ಗಮನದಲ್ಲಿಲ್ಲ. ಬ್ರಾಹ್ಮಣರಾದಿಯಾಗಿ ಹಿಂದುತ್ವದಾದಿಯಾಗಿ, ಎಲ್ಲರೂ ಇಂಥ ಬದಲಾವಣೆಗೆ ತಮ್ಮನ್ನು ಶಾಂತವಾಗಿ ಕೊಟ್ಟುಕೊಂಡಿದ್ದಾರೆ ಎಂಬುದೂ ವಿಶೇಷ ಅನ್ನಿಸುತ್ತಿಲ್ಲ. ಅಂದರೆ ಇವರು ನಿದ್ರೆ ಬಂದವರೋ, ಬಂದಂತೆ ನಟಿಸುವವರೊ? ಒಂದಂತೂ ನಿಜ, ವಸಾಹತುಶಾಹಿಯ ನಿರೂಪಣೆಗಳು ಹುಟ್ಟುಹಾಕಿದ ಈ ಮಾನಸಿಕ ರೋಗಕ್ಕೆ ಬಲಿಯಾದವರಿಗೆ, ವಾಸ್ತವದ ಕುರಿತು ಚಿಂತಿಸುವ ಶಕ್ತಿ ಅಥವಾ ಇಚ್ಛೆ ಕೂಡ ಹೊರಟುಹೋಗಿದೆ ಎಂಬುದು ‘ಕಾಶ್ಮೀರಕ್ಕೆ ಸಂಬಂಧಿಸಿದಂತೆ’ ಇವರೆಲ್ಲ ಯೋಚನೆ ಮಾಡುವ ವೈಖರಿಯಿಂದ ತಿಳಿದುಬರುವ ವಿಷಯ.

6 ಟಿಪ್ಪಣಿಗಳು Post a comment
 1. PURUSHOTTAM BHAT
  ಸೆಪ್ಟೆಂ 9 2016

  Pleased to read the article.

  ಉತ್ತರ
 2. WITIAN
  ಸೆಪ್ಟೆಂ 9 2016

  ಇಂಗ್ಲಿಷಿನಲ್ಲಿ ಯೋಚಿಸಿ, ಕನ್ನಡಕ್ಕೆ ಅನುವಾದಿಸಿದ ಲೇಖನ ಇದು! ‘ತಮ್ಮ ವೈಚಾರಿಕ ಪ್ರಖರತೆಯಿಂದ ಪ್ರಭಾವಿತಗೊಳ್ಳುವ ವಶೀಕೃತ ಶ್ರೋತೃವೃಂದ ಇರುವಾಗ, ಸರಳ, ಸುಲಲಿತ ಭಾಷಾ ಪ್ರಯೋಗವನ್ನು ಅವಗಣಿಸಿ, ಅತ್ಯಂತ ಸಂಕೀರ್ಣವಾದ ಪದಪುಂಜಗಳಿಂದ ಕೂಡಿದ, ಅತಿ ಉದ್ದದ ವಾಕ್ಯಪ್ರಯೋಗಗಳನ್ನು ಒಳಗೊಂಡ, ಓದಿದ ನಂತರ ಕಡಿದಾದ ಪರ್ವತಶ್ರೇಣಿಯನ್ನು ಹತ್ತಿದ ಆಯಾಸವನ್ನು ಮಾತ್ರ ಕೊಡುವ, ಆನಂದದ ವಿಷಯದಲ್ಲಿ ಅತಿ ಬಿಗಿಹಿಡಿತದ ಮುಷ್ಟಿಯ, ಹಾಗೂ ವೈಚಾರಿಕವಾಗಿ ಲೇಖಕದ ಸಿದ್ಧ ಅಭಿಪ್ರಾಯವನ್ನು ಬಿಂಬಿಸುವ, ಭಿನ್ನಾಭಿಪ್ರಾಯಕ್ಕೆ ಎಡೆಗೊಡದ, ಮತ್ತು ಯಾವುದೇ ಪರಿಹಾರಗಳನ್ನು ಸೂಚಿಸದ ಶಾಬ್ದಿಕ ಕಸರತ್ತಷ್ಟೇ!’ ಸರಿಯೇ ಪ್ರೊ. ಹೆಗಡೆಯವರೇ?

  ಉತ್ತರ
  • ಸೆಪ್ಟೆಂ 10 2016

   ಇದೊಂದು ಸಂಕೀರ್ಣ ಸಮಸ್ಯೆಯ ವ್ಯವಸ್ಥಿತ ವಿಶ್ಲೇಷಣೆ. ಏಕಮುಖವಾಗಿದೆ ಎಂದೆನ್ನಿಸಿದರೂ,ಎತ್ತಿದ ವಿಚಾರಗಳು ಅಪ್ರಸ್ತುತವಲ್ಲ. “ಆಜಾದಿ” ಘೋಷಣೆಯ ಮನಸ್ಥಿತಿ ಬೆಳೆಸಿಕೊಂಡವರ ಮನೋಧರ್ಮ ಲೇಖಕರು ವಿವಿರಿಸಿದ್ದಕ್ಕಿಂತ ಭಿನ್ನವಾಗಿರಲು ಸಾಧ್ಯ ಇದ್ದರೆ ಅದನ್ನು ಪಟ್ಟಿಮಾಡಿ ನೀವೂ ಬರೆಯಿರಿ.
   ಪರಿಹಾರೋಪಾಯಗಳನ್ನು ಅಷ್ಟು ಸುಲಭವಾಗಿ ಸೂಚಿಸಬಹುದೇ? ನೀವೇ ಯೋಚಿಸಿ. ದಶಕಗಳಿಂದ ಆಯಕಟ್ಟಿನ ಜಾಗಗಳಲ್ಲಿ ಕುಳಿತು ಅವ್ಯವಸ್ಥೆ ಯನ್ನು ಬೆಳೆಸಿ , ನಾಗಶೆಟ್ಟಿ,ಸಲಾಂ ಬಾವಾ,ದರ್ಗಾ, ಕಾರ್ನಾಡು,ಅನಂತಮೂರ್ತಿ,ಲಂಕಿಣಿ, ಇತ್ಯಾದಿಗಳಂತಹ ಪ್ರಜಾಸಮೂಹವನ್ನು ಸೃಷ್ಟಿಸಿರುವ ವ್ಯವಸ್ಥೆಯನ್ನು ಆಮೂಲಾಗ್ರ ಪರೀಕ್ಷಿಸದೆ ಮುಂದೊಡ್ಡುವ ಯಾವುದೇ ಸುಧಾರಣೆ ಯಶ ಕಾಣದು. ಈ ಲೇಖನ ,ಆ ನಿಟ್ಟಿನಲ್ಲಿ ಒಂದು ಹೆಜ್ಜೆ ಎನ್ನಬಹುದು.

   ಉತ್ತರ
   • Salam Bava
    ಸೆಪ್ಟೆಂ 11 2016

    “ನಾಗಶೆಟ್ಟಿ,ಸಲಾಂ ಬಾವಾ,ದರ್ಗಾ, ಕಾರ್ನಾಡು,ಅನಂತಮೂರ್ತಿ,ಲಂಕಿಣಿ,”

    All of these are critical insiders of Indian society Mr. Sudharshna Rao. Unlike you who is a self righteous outsider pontificating in London.

    ಉತ್ತರ
  • Salam Bava
   ಸೆಪ್ಟೆಂ 11 2016

   Witian, I agree with you! sante mola neyda haagide ee lekhana.

   ಉತ್ತರ
 3. ಸೆಪ್ಟೆಂ 10 2016

  ಕಾಶ್ಮೀರ ಸಮಸ್ಯೆಯ ಸರಿಯಾದ ವಿವರಣೆ. ಆದರೆ ನಿದ್ದೆಯಲ್ಲಿ ಇರುವವರನ್ನು ಎಚ್ಚರಿಸಬಹುದು. ನಿದ್ದೆ ಬಂದಂತೆ ನಟಿಸುವವರನ್ನು ಎಚ್ಚರಗೊಳಿಸಲು ಸಾಧ್ಯವಿಲ್ಲ ಅಲ್ಲವೆ?

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments