ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 9, 2016

1

ತಮಿಳುನಾಡು, ಕಾವೇರಿ, ಜಯಲಲಿತ, ದೇವೇಗೌಡರು ಮತ್ತು ನಾನು

‍ನಿಲುಮೆ ಮೂಲಕ

– ಪ್ರೇಮಶೇಖರ

jayನೆರೆಯ ತಮಿಳುನಾಡಿನಲ್ಲಿ ಹಲವು ಅಚ್ಚರಿ ಹುಟ್ಟಿಸುವ ವಿರೋಧಾಭಾಸಗಳು ಕಾಣಸಿಗುತ್ತವೆ. ತಮಿಳರು ಮಹಾ ಭಾಷಾಭಿಮಾನಿಗಳು. ತಮ್ಮ ನಾಡು ನುಡಿಯ ಬಗ್ಗೆ ಅವರ ಪ್ರೀತಿ, ಅಭಿಮಾನ, ಕಾಳಜಿಗೆ ಸಮಕಾಲೀನ ಭಾರತೀಯ ಇತಿಹಾಸದಲ್ಲಿ ದಂತಕತೆಯ ಆಯಾಮವೊದಗಿಬಿಟ್ಟಿದೆ. ಆದರೆ, ಇಂತಹ ಸ್ವಾಭಿಮಾನಿ ತಮಿಳರು ಕಳೆದ ನಲವತ್ತು-ನಲವತ್ತೈದು ವರ್ಷಗಳಿಂದಲೂ ತಮಿಳೇತರರನ್ನು ತಮ್ಮ ರಾಜಕೀಯ ನಾಯಕರನ್ನಾಗಿ ಒಪ್ಪಿಕೊಂಡು ಅವರ ಕೈಯಲ್ಲಿ ತಮ್ಮ ರಾಜ್ಯವನ್ನಿಟ್ಟುಬಿಟ್ಟಿದ್ದಾರೆ. ಕರುಣಾನಿಧಿ ಕಳೆದ ನಾಲ್ಕು ದಶಕಗಳಿಂದಲೂ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷದ ಅನಭಿಷಿಕ್ತ ಸಾಮ್ರಾಟರಾಗಿ ಮೆರೆಯುತ್ತಿದ್ದಾರೆ, ನಾಲ್ಕು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದಾರೆ. ಈ ಕರುಣಾನಿಧಿ ತೆಲುಗು ಮೂಲದವರು. ಡಿಎಂಕೆ ಪಕ್ಷವನ್ನು ಒಡೆದು ಅದಕ್ಕೆ ಪರ್ಯಾಯವಾಗಿ “ಆಲ್ ಇಂಡಿಯಾ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ” (ಎಐಎಡಿಎಂಕೆ) ಪಕ್ಷ ಕಟ್ಟಿ ಸತತ ಹತ್ತು ವರ್ಷಗಳವರೆಗೆ ತಮಿಳುನಾಡನ್ನು ಆಳಿದ ಎಂ. ಜಿ. ರಾಮಚಂದ್ರನ್ (ಎಂಜಿಆರ್) ಒಬ್ಬ ಮಲೆಯಾಳಿ. ಅವರ ಸಹವರ್ತಿ ಮತ್ತು ಉತ್ತರಾಧಿಕಾರಿ, ಕೋಟ್ಯಂತರ ತಮಿಳರ ಪ್ರೀತಿಯ “ಅಮ್ಮ” ಜಯಲಲಿತಾರ ಮೂಲ ಕರ್ನಾಟಕದಲ್ಲಿ. ಅದಕ್ಕೂ ಹಿಂದೆ ಹೋಗುವುದಾದರೆ ದ್ರಾವಿಡ ಚಳುವಳಿಯ ಅಧ್ವರ್ಯು, ತಮಿಳುನಾಡಿನ ಇತಿಹಾಸದ ದಿಕ್ಕನ್ನೇ ಬದಲಿಸಿದ “ಪೆರಿಯಾರ್” ಬಿರುದಾಂಕಿತ ಇ. ವಿ. ರಾಮಸ್ವಾಮಿ ನಾಯಕರ್ ಕನ್ನಡಿಗರಂತೆ. ಇವರೆಲ್ಲರೂ ತಮಿಳನ್ನು ತಮ್ಮದಾಗಿಸಿಕೊಂಡು, ತಮಿಳುನಾಡಿಗೆ ತಮ್ಮನ್ನರ್ಪಿಸಿಕೊಂಡು ತಮಿಳರ ಹೃದಯಗಳಲ್ಲಿ ಸ್ಥಾನ ಗಳಿಸಿಕೊಂಡುಬಿಟ್ಟರು.

ಇವರೆಲ್ಲರಲ್ಲಿ ಜಯಲಲಿತಾ ಅತ್ಯಂತ ವರ್ಣರಂಜಿತ ವ್ಯಕ್ತಿತ್ವದವರು. ತಮಿಳು ಚಿತ್ರರಸಿಕರ ಆರಾಧ್ಯದೈವ ಎಂಜಿಆರ್ ಸಹವರ್ತಿ, ತೆರೆಯ ಮೇಲೆ ಮತ್ತು ತೆರೆಯ ಹೊರಗೆ ಅವರ ಸಂಗಾತಿಯಾಗುವುದರ ಮೂಲಕ ತಮಿಳರ ಪ್ರೀತಿ ಗಳಿಸಿದ ಜಯಲಲಿತಾ ಎಂಜಿಆರ್ ನಿಧನಾ ನಂತರ ಎಐಎಡಿಎಂಕೆ ಪಕ್ಷದ ಸೂತ್ರಗಳನ್ನು ತನ್ನ ಕೈಗೆ ತೆಗೆದುಕೊಳ್ಳಲು ಹೆಚ್ಚು ಶ್ರಮಪಡಬೇಕಾಗಲಿಲ್ಲ. “ಅಣ್ಣಿ” (ಅತ್ತಿಗೆ) ಆಗಿ ಎಂಜಿಆರ್ ಅಭಿಮಾನಿಗಳ ಮನಗೆದ್ದ ಜಯಲಲಿತಾ ಕೆಲವೇ ದಿನಗಳಲ್ಲಿ “ಅಮ್ಮ”ನಾಗಿ ಬೆಳೆದುನಿಂತರು. ಈ ಬೆಳವಣಿಗೆಯಲ್ಲಿ ಅವರು ಪ್ರದರ್ಶಿಸಿದ್ದು ಅತೀವ ಮಹತ್ವಾಕಾಂಕ್ಷೆ ಮತ್ತು ಎಲ್ಲ ಬಗೆಯ ಅವಕಾಶಗಳನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳಬಲ್ಲ ಜಾಣ್ಮೆ. ಈ ಹಾದಿಯಲ್ಲಿ ಅವರು ಯಾರ ಹಿತವನ್ನಾದರೂ ಬಲಿಗೊಡಲು ಸಿದ್ದರಾಗಿದ್ದರು. ಅವರ ಈ ಸ್ವಭಾವ ಹಾಗೂ ವ್ಯಕ್ತಿತ್ವ ಕಾವೇರಿ ಜಲವಿವಾದಕ್ಕೆ ಸಂಬಂಧಿಸಿದಂತೆ ಅನಾವರಣಗೊಂಡ ಬಗೆಯನ್ನು ಇಲ್ಲಿ ಸಂಕ್ಷಿಪ್ತವಾಗಿ ನಿಮಗೆ ಹೇಳುತ್ತೇನೆ.

೧೯೯೧ರ ಮೇ-ಜೂನ್ನಲ್ಲಿ ನಡೆದ ಚುನಾವಣೆಗಳಲ್ಲಿ ಜಯಲಲಿತಾ ಕಾಂಗ್ರೆಸ್ ಜತೆ ಮೈತ್ರಿ ಸ್ಥಾಪಿಸಿಕೊಂಡು ಕಣಕ್ಕಿಳಿದರು. ಚುನಾವಣೆಗಳ ಮಧ್ಯದಲ್ಲಿ ಘಟಿಸಿದ ರಾಜೀವ್ ಗಾಂಧಿ ಹತ್ಯೆ, ಅದು ತಂದ ಸಂತಾಪದ ಮತಗಳು ಜಯಲಲಿತಾರ ವಿಜಯವನ್ನು ಸುಲಭವಾಗಿಸಿದವು. ಅಲ್ಲಿಂದಾಚೆಗೆ ಜಯಲಲಿತಾ ಹಿಂದೆ ತಿರುಗಿ ನೋಡಲಿಲ್ಲ. ಕೇಂದ್ರದಲ್ಲಿ ನರಸಿಂಹರಾವ್ ನೇತೃತ್ವದ ಕಾಂಗ್ರೆಸ್ ಸರಕಾರ ರಚನೆಯಾದದ್ದು, ಆರೇ ತಿಂಗಳಲ್ಲಿ ಕಾವೇರಿ ಟ್ರಿಬ್ಯೂನಲ್ ತನ್ನ ಮಧ್ಯಂತರ ತೀರ್ಪು ನೀಡಿದ್ದು- ಈ ಬೆಳವಣಿಗೆಗಳು ಜಯಲಲಿತಾರಿಗೆ ಹೊಸ ಅವಕಾಶಗಳ ಬಾಗಿಲು ತೆರೆದವು. ತನ್ನ ಮಹತ್ವಾಕಾಂಕ್ಷೆಯ ಹಾದಿಯಲ್ಲಿ ಎರಡು ರಾಜ್ಯಗಳ ಜನತೆಯ ನಡುವಿನ ಸಾಮರಸ್ಯವೇ ಬಲಿಯಾಗ ಹೊರಟಿರುವುದು ಅವರ ಅರಿವಿಗೆ ಬಂದರೂ ಅವರಿಗದು ಸಮ್ಮತವಾಗಿತ್ತು. ಈ ಅವಲೋಕನಕ್ಕೆ ಪೀಠಿಕೆಯಾಗಿ, ಲೇಖನದ ತಾರ್ಕಿಕ ಮುಂದುವರಿಕೆಗೆ ಸಹಾಯಕವಾಗಿ, ಈ ಹಂತದಲ್ಲಿ ಕಾವೇರಿ ಜಲವಿವಾದದ ಕೆಲವು ಪ್ರಮುಖ ವಿವರಗಳನ್ನು ಉಲ್ಲೇಖಿಸುವುದು ಅಗತ್ಯ.

ಕಾವೇರಿ ಜಲವಿವಾದಕ್ಕೆ ಶತಮಾನದ ಇತಿಹಾಸವಿದೆ. ಈ ಇತಿಹಾಸದುದ್ದಕ್ಕೂ ಕಾಣುವುದು ಸತ್ಯದ ವಿರೂಪ, ಸುಳ್ಳಿನ ಸುಗ್ಗಿಕುಣಿತ, ಬಲಹೀನರ ಮೇಲೆ ಬಲಿಷ್ಟರ ಸವಾರಿ. ತಮಿಳುನಾಡಿನ (ಅಂದಿನ ಮದ್ರಾಸ್ ಪ್ರೆಸಿಡೆನ್ಸಿಯ) ಕಾವೇರಿ ಜಲಾನಯನ ಪ್ರದೇಶದ ೧೫.೨೪ ಲಕ್ಷ ಏಕರೆ ಪ್ರದೇಶದ ಬೇಸಾಯಕ್ಕೆ ನೀರಿನ ಅಗತ್ಯವೆಷ್ಟು ಎಂದು ಪರಿಶೀಲಿಸಲು ಬ್ರಿಟಿಷರ ನೇರ ಆಡಳಿತದಲ್ಲಿದ್ದ ಮದ್ರಾಸ್ ಸರಕಾರ ೧೯೨೧ರಲ್ಲಿ ಕರ್ನಲ್ ಎಲ್ಲಿಸ್ ನೇತೃತ್ವದಲ್ಲಿ ಆಯೋಗವೊಂದನ್ನು ರಚಿಸಿತು. ತಮಿಳುನಾಡಿನ ಅಗತ್ಯ ಪೂರೈಸಲು ಕಾವೇರಿಯಿಂದ ಕೇವಲ ೨೪೨ ಟಿಎಂಸಿ ನೀರು ಸಾಕು ಎಂದು ಕರ್ನಲ್ ಎಲ್ಲಿಸ್ ವರದಿ ಹೇಳಿತು. ಇಷ್ಟು ನೀರು ಕಾವೇರಿ ತಮಿಳುನಾಡಿನಲ್ಲಿ ಹರಿಯುವ ಭಾಗದಲ್ಲೇ ಲಭ್ಯವಿದ್ದ ಕಾರಣ ಎಲ್ಲಿಸ್ ವರದಿ ಪ್ರಕಾರ ಮೈಸೂರು ತಮಿಳುನಾಡಿಗೆ ಹರಿಸಬೇಕಾದ ನೀರಿನ ಪ್ರಮಾಣ ನಗಣ್ಯವೆನ್ನುವಷ್ಟು ಕಡಿಮೆಯಾಗಬೇಕಾಗಿತ್ತು. ಸಾಂಬಾ ಬೆಳೆಯ ಮೂರನೇ ಎರಡರಷ್ಟು ಅಗತ್ಯವನ್ನು ಹಿಂಗಾರು ಮಳೆಯೇ ಪೂರೈಸುತ್ತದೆ ಎಂಬ ಮಹತ್ವದ ವಿವರವನ್ನು ಆ ವರದಿ ಹೊರಗೆಡಹಿತು. ಆದರೆ ತಾನೇ ನೇಮಿಸಿದ್ದ ಕರ್ನಲ್ ಎಲ್ಲಿಸ್ ಆಯೋಗದ ತೀರ್ಮಾನವನ್ನು ಮದ್ರಾಸ್ ಸರಕಾರ ಧಿಕ್ಕರಿಸಿ ೧೯೨೪ರಲ್ಲಿ ಮೈಸೂರು ಸಂಸ್ಥಾನದ ಮೇಲೆ ಒಪ್ಪಂದವೊಂದನ್ನು ಹೇರಿತು. ಬ್ರಿಟಿಷ್ ಸಾಮ್ರಾಜ್ಯಶಾಹಿಯ ನೇರ ಆಡಳಿತದಲ್ಲಿದ್ದ ಮದ್ರಾಸ್ ದುರ್ಬಲ ದೇಶೀಯ ಸಂಸ್ಥಾನವಾದ ಮೈಸೂರಿನ ಮೇಲೆ ಹೇರಿದ ಈ ಒಪ್ಪಂದದ ಪ್ರಕಾರ ಮೈಸೂರು ವರ್ಷವೊಂದಕ್ಕೆ ೩೮೦ ಟಿಎಂಸಿ ನೀರನ್ನು ಮದ್ರಾಸಿಗೆ (ತಮಿಳುನಾಡಿಗೆ) ಬಿಡಬೇಕಾಗಿತ್ತು! ಮೈಸೂರು ಸಂಸ್ಥಾನ (ನಂತರ ಕರ್ನಾಟಕ ರಾಜ್ಯ) ಈ ಒಪ್ಪಂದವನ್ನು ೧೯೭೪ರವರೆಗೆ ಸರಿಯಾಗಿ ಪಾಲಿಸಿ ಅಷ್ಟು ನೀರನ್ನು ತಮಿಳುನಾಡಿಗೆ ಬಿಡುತ್ತಿತ್ತು! ಐವತ್ತು ವರ್ಷಗಳ ನಂತರ ನೀರು ಹಂಚಿಕೆಯ ಪರಿಮಾಣವನ್ನು ಪರಿಶೀಲಿಸಬೇಕೆಂದು ೧೯೨೪ರ ಒಪ್ಪಂದವೇ ಹೇಳಿದ್ದುದರಿಂದ ಕರ್ನಾಟಕ ಅದನ್ನೇ ಪಟ್ಟಾಗಿ ಹಿಡಿದು ಮರುಪರಿಶೀಲನೆಗೆ ಒತ್ತಾಯ ಹಾಕಿತು. ಸಮಸ್ಯೆಯ ಪರಿಹಾರಕ್ಕೆ ಟ್ರಿಬ್ಯೂನಲ್ ಸ್ಥಾಪನೆಯ ಬೇಡಿಕೆಯನ್ನು ತಮಿಳುನಾಡು ಮುಂದಿಟ್ಟರೂ ಅದರ ಬಗ್ಗೆ ಹೆಚ್ಚೇನೂ ಗದ್ದಲವೆಬ್ಬಿಸಲಿಲ್ಲ. ನೀರು ಬೇಕಾದಾಗಲೆಲ್ಲಾ ಎಂಜಿಆರ್ ಸದ್ದಿಲ್ಲದೇ ಬೆಂಗಳೂರಿಗೆ ಬಂದು ದೇವರಾಜ ಅರಸರ ಜತೆ ಮಾತಾಡಿ ನೀರು ಬಿಡಿಸಿಕೊಳ್ಳುತ್ತಿದ್ದರು. ಎರಡು ರಾಜ್ಯಗಳ ಜನತೆಯ ನಡುವೆ ವೈಷಮ್ಯ ಸೃಷ್ಟಿಸಲು ಅವರು ಕಾವೇರಿಯನ್ನೆಂದೂ ಬಳಸಿಕೊಳ್ಳಲಿಲ್ಲ. ನಂತರ ೧೯೯೦ರಲ್ಲಿ ಕೇಂದ್ರದಲ್ಲಿ ಡಿಎಂಕೆ ಭಾಗಿಯಾಗಿದ್ದ ಸಂಮಿಶ್ರ ಸರ್ಕಾರವಿದ್ದಾಗ ತೆರೆಯ ಹಿಂದಿನ ಯಾವುದೋ ಆಟದಿಂದಾಗಿ ಟ್ರಿಬ್ಯೂನಲ್ ಸ್ಥಾಪನೆಗೊಂಡಿತು. ನಂತರ ಒಂದೇ ವರ್ಷದಲ್ಲಿ ಟ್ರಿಬ್ಯೂನಲ್ ಕರ್ನಾಟಕ ವರ್ಷಕ್ಕೆ ೨೦೫ ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡಬೇಕೆಂಬ ತನ್ನ ಮಧ್ಯಂತರ ತೀರ್ಪನ್ನೂ ನೀಡಿದ್ದು ಕೇಂದ್ರದಲ್ಲಿ ಎಐಎಡಿಎಂಕೆ ಸಹಭಾಗಿಯಾಗಿದ್ದ ಕಾಂಗ್ರೆಸ್ ಸರ್ಕಾರವಿದ್ದಾಗ. ಈ ಕೇಂದ್ರ ಸರಕಾರ ಆರು ತಿಂಗಳ ಒಳಗೇ ಆ ಮಧ್ಯಂತರ ತೀರ್ಪನ್ನು ಗೆಜೆಟ್ನಲ್ಲೂ ಪ್ರಕಟಿಸಿ ಅದಕ್ಕೆ ಅಧಿಕೃತತೆಯ ಮುದ್ರೆಯೊತ್ತಿಬಿಟ್ಟಿತು.

ಕರ್ನಾಟಕಕ್ಕೆ ಅನ್ಯಾಯವೆಸಗುವ, ತಮಿಳುನಾಡಿಗೆ ಅನುಕೂಲವಾಗುವ ಘಟನೆಗಳು ಎಷ್ಟೋಂದು ತ್ವರಿತಗತಿಯಲ್ಲಿ ಜರುಗಿವೆ ನೋಡಿ! ಇದೆಲ್ಲ ಆದದ್ದು ತಮಿಳುನಾಡಿನಲ್ಲಿ ಅಧಿಕಾರದಲ್ಲಿದ್ದ ಪಕ್ಷಗಳು ಕೇಂದ್ರ ಸರ್ಕಾರದಲ್ಲೂ ಸಹಭಾಗಿಯಾಗಿದ್ದಾಗ ಎಂಬ ‘ರಹಸ್ಯ’ವನ್ನು ಗಮನಿಸಿ.

ಟ್ರಿಬ್ಯೂನಲ್ನ ಮಧ್ಯಂತರ ತೀರ್ಪಿನಿಂದ ಕರ್ನಾಟಕಕ್ಕೆ ಅನಾನುಕೂಲವಾಗುವುದು ಸಹಜವೇ ಆಗಿತ್ತು. ಹೀಗಾಗಿ ತೀರ್ಪಿನ ಬಗ್ಗೆ ಇಲ್ಲಿ ಅಸಮಾಧಾನ, ತೀರ್ಪು ಪಾಲಿಸಲಾಗದೆಂಬ ಮಾತುಗಳು ಹೊರಟಿದ್ದು ಸಹಜವೇ. ಇದನ್ನೇ ಒಂದು ಅಸ್ತ್ರವಾಗಿ ಉಪಯೋಗಿಸಿಕೊಂಡ ಜಯಲಲಿತಾ ತಮಿಳರನ್ನು ಉದ್ರೇಕಿಸುವಂತಹ, ಕರ್ನಾಟಕವನ್ನು ಇಕ್ಕಟ್ಟಿಗೆ ಸಿಕ್ಕಿಸುವಂತಹ ಜಾಣ ಹೇಳಿಕೆಗಳನ್ನು ನೀಡತೊಡಗಿದರು. ಟ್ರಿಬ್ಯೂನಲ್ನ ತೀರ್ಪು ನೀರಿನ ನ್ಯಾಯಯುತ ಹಂಚಿಕೆಗೆ ಅವಕಾಶ ಮಾಡಿಕೊಡುವುದಿಲ್ಲ ಎನ್ನುವ ವಾಸ್ತವದ ಅರಿವು ತಮಿಳುನಾಡಿನ ಜನತೆಗೆ ಇದ್ದೇ ಇತ್ತು. ಆದಾಗ್ಯೂ, ಆ ಅನ್ಯಾಯದ ತೀರ್ಪನ್ನೇ ಸರಿ ಎನ್ನುವ ತೀರ್ಮಾನಕ್ಕೆ ಅವರು ಬರಲು ಬಲು ಮುಖ್ಯ ಕಾರಣ ಆ ದಿನಗಳಲ್ಲಿ ಜಯಲಲಿತಾ ನೀಡುತ್ತಿದ್ದ ಹೇಳಿಕೆಗಳು. ಇದಕ್ಕೆ ನಾನು ನೇರವಾಗಿ ಸಾಕ್ಷಿಯಾಗಿದ್ದೇನೆ.

ಜಯಲಲಿತಾರ ಹೇಳಿಕೆಗಳಿಂದಾಗಿ ಮೊದಲೇ ವಿಷಮಯವಾಗಿದ್ದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟು ಡಿಸೆಂಬರ್ ೧೯೯೧ರಲ್ಲಿ ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ, ಕರ್ನಾಟಕದಲ್ಲಿ ತಮಿಳರ ಮೇಲೆ ಹಲ್ಲೆಗಳು ನಡೆಯತೊಡಗಿದವು. ಗಡಿಯಲ್ಲೂ ಹಿಂಸಾಚಾರ ಭುಗಿಲೆದ್ದು ಎರಡೂ ರಾಜ್ಯಗಳ ನಡುವೆ ವಾಹನ ಸಂಚಾರ ಬಂದ್ ಆಯಿತು. ನಾನಾಗ ಪಾಂಡಿಚೆರಿಯಲ್ಲಿದ್ದೆ. ಆಗೊಂದು ಮಳೆಯ ಸಂಜೆ, (ಮುಂದೆ ನನ್ನ ಪತ್ನಿಯಾದ) ಅರುಂಧತಿಯ ತಂದೆ ಮೈಸೂರಿನಲ್ಲಿ ನಿಧನರಾದರೆಂದೂ, ಅರುಂಧತಿ ದೆಹಲಿಯಿಂದ ಬೆಂಗಳೂರಿಗೆ ಫ್ಲೈಟ್ನಲ್ಲಿ ಹೊರಟಿರುವುದಾಗಿಯೂ, ನಾನು ಅದಷ್ಟು ಬೇಗನೆ ಮೈಸೂರು ತಲುಪಬೇಕೆಂದೂ ದೆಹಲಿಯಿಂದ ಗೆಳತಿ ಸುನೀತಾಳ ಟೆಲಿಗ್ರಾಂ ಬಂತು. ಗಡಿಬಿಡಿಯಲ್ಲಿ ಬಸ್ ಸ್ಟಾಂಡ್ಗೆ ಓಡಿ ಸಿಕ್ಕಿದ ಚೈನ್ನೈ ಬಸ್ ಹತ್ತಿದೆ. ಅಲ್ಲಿಂದ ಆಂಧ್ರದ ತಿರುಪತಿಗೋ, ಚಿತ್ತೂರಿಗೋ ತಲುಪಿದರೆ ಅಲ್ಲಿ ಬೆಂಗಳೂರಿನ ಬಸ್ ಹಿಡಿಯಬಹುದು ಎನ್ನುವುದು ನನ್ನ ಉದ್ದೇಶ. ಬಸ್ನಲ್ಲಿ ಪಕ್ಕ ಕುಳಿತ ವಿದ್ಯಾವಂತನಂತೆಯೇ ಕಾಣುತ್ತಿದ್ದ ತಮಿಳು ಯುವಕ ನಾನು ಎಲ್ಲಿಯವನೆಂದು ಪ್ರಶ್ನಿಸಿದ. ಕಾವೇರಿ ಗಲಾಟೆಯಿಂದಾಗಿ ನನಗೆ ಯಾವ ತೊಂದರೆಯೂ ಆಗಬಾರದೆಂದು ನನ್ನ ಅಟೆಂಡರ್ ಯೂಸುಫ್ ಯಾರಾದರೂ ಕೇಳಿದರೆ ದೆಹಲಿಯವನೆಂದು ಹೇಳಬೇಕೆಂದು ಹೇಳಿಕೊಟ್ಟಿದ್ದ. ಯುವಕನಿಗೆ ನಾನು ದೆಹಲಿಯವನೆಂದು ಉತ್ತರಿಸಿದೆ. ಎಲ್ಲೆಲ್ಲೂ ಕಾವೇರಿಯ ಸುದ್ದಿಯೇ ಇದ್ದದ್ದರಿಂದ ಯುವಕ ನನ್ನೊಡನೆ ಅದೇ ಮಾತೆತ್ತಿದ. “ಕಾವೇರಿ ಬಂಗಾರಪ್ಪನ ಅಪ್ಪನದಾ ಸರ್? ನೀರು ಕೊಡುವುದಿಲ್ಲ ಅಂದರೇನರ್ಥ?” ಅಂದ. ನಾನು ತಣ್ಣಗೆ “ಕಾವೇರಿ ಬಂಗಾರಪ್ಪನವರ ಅಪ್ಪನದೂ ಅಲ್ಲ, ಜಯಲಲಿತಾರ ಅಪ್ಪನದೂ ಅಲ್ಲ. ಅದು ಎರಡೂ ರಾಜ್ಯಗಳ ಜನರಿಗೆ ಸೇರಿದ್ದು. ಇಬ್ಬರೂ ಸಮನಾಗಿ ಹಂಚಿಕೊಳ್ಳಬೇಕು. ಒಬ್ಬರಿಗೆ ಹೆಚ್ಚು, ಇನ್ನೊಬ್ಬರಿಗೆ ಕಡಿಮೆ ಆಗುವಂತಹ ಅನ್ಯಾಯ ನಡೆಯಬಾರದು” ಎಂದುತ್ತರಿಸಿದೆ. ಅವನ ಮುಖದಲ್ಲಿ ಹಠಾತ್ ಬದಲಾವಣೆ. “ನೀವು ಬೆಂಗಳೂರಿನವರಾ ಸರ್?” ಒಂದು ಬಗೆಯ ಗಾಬರಿಯಲ್ಲಿ ಪ್ರಶ್ನಿಸಿದ. “ಹೌದು, ನಾನು ಬೆಂಗಳೂರಿನವನೇ” ಅಂದೆ ಸ್ಪಷ್ಟವಾಗಿ. ಅತ್ತ ಮುಖ ತಿರುಗಿಸಿದವನು ಪ್ರಯಾಣದುದ್ದಕ್ಕೂ ನನ್ನತ್ತ ತಿರುಗಲಿಲ್ಲ. ನ್ಯಾಯದ ಮಾತಾಡುವವರು ಬೆಂಗಳೂರಿನವರು ಎಂದಾತ ಅರಿತಿದ್ದ. ಅವನ ಅರಿವು ಕೋಟ್ಯಂತರ ತಮಿಳರ ಅರಿವೂ ಆಗಿತ್ತು. ಆದರೆ ಜಯಲಲಿತಾರಂತಹ ಸ್ವಾರ್ಥಿ ರಾಜಕಾರಣಿಗಳಿಂದಾಗಿ ಆ ಅರಿವು ಹೊರಬರದೇ ಅಡಗಿ ಕೂತಿತ್ತು.

ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಜಯಲಲಿತಾರಿಗೆ ಪಾಠ ಕಲಿಸಿದ ನಮ್ಮ ಏಕೈಕ ನಾಯಕರೆಂದರೆ ದೇವೇಗೌಡರು. ೧೯೯೧ರಲ್ಲಿ ಬಂಗಾರಪ್ಪ ಸಂವಿಧಾನವನ್ನು ಧಿಕ್ಕರಿಸುವ ಬಗೆಯಲ್ಲಿ “ಕಾವೇರಿ ಕಣಿವೆ ಪ್ರಾಧಿಕಾರ”ವನ್ನು ಹುಟ್ಟುಹಾಕಿದಾಗ ಸುಪ್ರೀಂ ಕೋರ್ಟ್ ಅದನ್ನು ಸಂವಿಧಾನಬಾಹಿರವೆಂದು ರದ್ದುಪಡಿಸಿ ಛೀಮಾರಿ ಹಾಕಿತ್ತು. ಆಮೇಲೆ ೨೦೦೩ರಲ್ಲಿ ಕೃಷ್ಣ ಅವರು ನೀರು ಬಿಡುವುದಿಲ್ಲ ಬಿಡುವುದಿಲ್ಲ ಬಿಡುವುದಿಲ್ಲಾ ಅನ್ನುತ್ತಲೇ ಒಳಗೊಳಗೇ ನೀರು ಬಿಟ್ಟರು. ಅಷ್ಟೇ ಅಲ್ಲ, ಕರ್ನಾಟಕ ತನ್ನ ತವರು ಎನ್ನುವುದನ್ನು ಜಯಲಲಿತಾ ಮರೆಯಬಾರದೆಂದು ಕೋಣನ ಮುಂದೆ ಕಿನ್ನರಿ ಬಾರಿಸಿದರು. ಅದಕ್ಕೆ “ತವರಿನಿಂದ ನನಗೇನೂ ಬೇಡ, ನೀರು ಸಾಕು” ಎಂದುತ್ತರಿಸಿದ ಜಯಲಲಿತಾ ಮಾತಿನಲ್ಲಿ ಕೃಷ್ಣರನ್ನು ಸೋಲಿಸಿದರು. ೧೯೯೫ರಲ್ಲಿ ತಮಿಳುನಾಡಿನಲ್ಲಿ ಭತ್ತದ ಗದ್ದೆಗಳಿಗೆ ನೀರಿಲ್ಲಾ ಎಂದು ಜಯಲಲಿತಾ ಸರ್ಕಾರ ಟ್ರಿಬ್ಯೂನಲ್ ಮುಂದೆ ಗೋಳಾಡಿದಾಗ ನಿಜವನ್ನು ಅರಿಯಲು ವೈ ಕೆ ಅಲಘ್ ಸಮಿತಿ ತಂಜಾವೂರಿಗೆ ಹೋಯಿತು. ಬಾಡಿದ್ದ ಬತ್ತದ ಗದ್ದೆಗಳನ್ನು ತೋರಿಸಿ ಜಯಲಲಿತಾ ಸರ್ಕಾರ ಸಮಿತಿಯನ್ನು ಅಡ್ಡದಾರಿಗೆಳೆಯುವ ಕುತಂತ್ರ ತೋರಿತು. ಆಗ ಮುಖ್ಯಮಂತ್ರಿಗಳಾಗಿದ್ದ ದೇವೇಗೌಡರು ನೀರಾವರಿ ಇಲಾಖೆಯ ಇಂಜಿನೀಯರುಗಳನ್ನು ಗುಟ್ಟಾಗಿ ತಂಜಾವೂರಿಗೆ ಕಳಿಸಿದರು. ಅವರು ಅಯ್ಯಪ್ಪನ ಭಕ್ತರಂತೆ ವೇಷ ಧರಿಸಿ ತಮಿಳುನಾಡು ಎಲ್ಲೆಲ್ಲಿ ನೀರಿಲ್ಲ ಎಂದು ಗೋಳಿಡುತ್ತಿತ್ತೋ ಅಲ್ಲೆಲ್ಲಾ ಹೋಗಿ ಅಲ್ಲಿ ಸಾಕಷ್ಟು ನೀರಿರುವುದನ್ನು ಪತ್ತೆಹಚ್ಚಿದರು. ಅಷ್ಟೇ ಅಲ್ಲ, ಬತ್ತದ ಸಸಿಗಳು ಸೊಂಪಾಗಿ ನಳನಳಿಸುತ್ತಿರುವ ದೃಶ್ಯವನ್ನು ಚಿತ್ರೀಕರಿಸಿ ಗೌಡರಿಗೆ ತಂದೊಪ್ಪಿಸಿದರು. ಗೌಡರು ಅವನ್ನು ಆಯೋಗದ ಮುಂದಿರಿಸಿದಾಗ ಇಡೀ ದೇಶ ಬೆರಗಾಯಿತು. ಜಯಲಲಿತಮ್ಮ ಗಪ್ಚಿಪ್! ಆ ಅವಧಿಯಲ್ಲಿ ಮುಖ್ಯಮಂತ್ರಿಯಾಗಿರುವವರೆಗೆ ಕಾವೇರಿ ಸುದ್ದಿಯನ್ನೇ ಅವರು ಎತ್ತಲಿಲ್ಲ.

ನನಗಾಗ ಅದೆಷ್ಟು ನೆಮ್ಮದಿಯೆನಿಸಿತ್ತು!

1 ಟಿಪ್ಪಣಿ Post a comment
  1. Narendra
    ಸೆಪ್ಟೆಂ 10 2016

    Devegowdra tara buddi upayogisoke yarigu indu thale ilwa antha ..

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments