ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 9, 2016

ಸ್ವಾತಂತ್ರ್ಯೋತ್ಸವ ವಿಶೇಷ ಸರಣಿ – ದಿನಕ್ಕೊಬ್ಬ ದೇಶಭಕ್ತರ ಸ್ಮರಣೆ

‍ನಿಲುಮೆ ಮೂಲಕ

ದಿನ – 23:
ಮದನ್ ಲಾಲ್ ಧಿಂಗ್ರಾ
– ರಾಮಚಂದ್ರ ಹೆಗಡೆ

madan_lal_dhingraಪರದೇಶಿ ಬ್ರಿಟಿಷರು ಭಾರತದ ನೆಲಕ್ಕೆ ಬಂದು ದಬ್ಬಾಳಿಕೆ ನಡೆಸುತ್ತಿದ್ದ ಕಾಲದಲ್ಲಿ ಅವರ ನೆಲಕ್ಕೇ ಹೋಗಿ ಇಂಗ್ಲೆಂಡಿನಲ್ಲೇ ಕ್ರಾಂತಿ ಚಟುವಟಿಕೆ ನಡೆಸಿ ಬ್ರಿಟಿಷರನ್ನೇ ಬೆಚ್ಚಿಬೀಳಿಸಿದ, ವಿದೇಶಿ ನೆಲದಲ್ಲಿ ಭಾರತಕ್ಕಾಗಿ ಮೊದಲ ಬಲಿದಾನ ಮಾಡಿದ ಕೆಚ್ಚೆದೆಯ ವೀರ ಮದನ್ ಲಾಲ್ ಧಿಂಗ್ರಾ. ಪಂಜಾಬಿನ ಅಮೃತಸರದ ಶ್ರೀಮಂತ ಕುಟುಂಬದ ಮದನ್ ಲಾಲ್ ಇಂಜಿನೀಯರಿಂಗ್ ಓದಲಿಕ್ಕೆಂದು ಲಂಡನ್ ಗೆ ಹೋಗಿದ್ದವನು. ಸ್ವಭಾವತಃ ಶೋಕಿಲಾಲ. ಮನೆಯವರೆಲ್ಲ ಬ್ರಿಟಿಷರ ಪರಮ ಭಕ್ತರು. ಇಂಗ್ಲೆಂಡ್ ನ ವಿಲಾಸೀ ಸಂಸ್ಕೃತಿಗೆ ಮಾರುಹೋದ ಮದನ್ ಬೆಲೆಬಾಳುವ ಸೂಟು ಬೂಟುಗಳನ್ನು ಹಾಕಿಕೊಂಡು ಶೋಕಿಲಾಲನಾಗಿ ಇಂಗ್ಲೆಂಡಿನ ರಸ್ತೆಗಳಲ್ಲಿ ಹಾಡುತ್ತಾ, ಕುಣಿಯುತ್ತಾ ಯುವತಿಯರೊಂದಿಗೆ ಚಕ್ಕಂದವಾಡುತ್ತ ಕಾಲಕಳೆಯುತೊಡಗಿದ್ದ. ಆದರೆ ವರ್ಷವಿಡೀ ಹೊರಗೆ ಅಲೆದರೂ ಪರೀಕ್ಷೆಯಲ್ಲಿ ಮಾತ್ರ ಮೊದಲ ಸ್ಥಾನವನ್ನೇ ಗಳಿಸುತ್ತಿದ್ದ ಪ್ರತಿಭಾವಂತ ಆತ. ಅವನ ಬದುಕಿಗೆ ಮಹತ್ವದ ತಿರುವು ಸಿಕ್ಕಿದ್ದು ಸ್ವಾತಂತ್ರ್ಯವೀರ ವಿನಾಯಕ ದಾಮೋದರ ಸಾವರ್ಕರ್ ರ ಇಂಗ್ಲೆಂಡ್ ಭೇಟಿಯ ಮೂಲಕ. ಬ್ರಿಟಿಷರಿಗೆ ಅವರ ಭೂಮಿಯಲ್ಲೇ ಭಾರತೀಯರ ಸಂಘಟಿಸಿ ಉತ್ತರ ಕೊಡಬೇಕೆಂಬ ಸಂಕಲ್ಪದಿಂದ ಇಂಗ್ಲೆಂಡ್ ಗೆತೆರಳಿದ್ದ ಸಾವರ್ಕರ್ ಅಲ್ಲಿದ್ದ ‘ಭಾರತ ಭವನ’ದ ಮೂಲಕ ಇಂಗ್ಲೆಂಡಿನಲ್ಲಿದ್ದ ಭಾರತೀಯ ವಿದ್ಯಾರ್ಥಿಗಳಲ್ಲಿ ದೇಶ ಭಕ್ತಿಯನ್ನು ತುಂಬುತ್ತಿದ್ದರು. ಅವರ ಧೀಮಂತ ವ್ಯಕ್ತಿತ್ವ, ದೇಶಾಭಿಮಾನದಮಾತುಗಳನ್ನು ಕೇಳಿದ ಮದನ್ ಲಾಲ್ ಧಿಂಗ್ರಾ ಗೆ ಸಾವರ್ಕರ್ ಮೇಲೆ ಅಭಿಮಾನ ಉಂಟಾಯಿತು. ದೇಶಭಕ್ತಿಯ ಹೊಸ ವಿದ್ಯುತ್ ಅವನಲ್ಲಿ ಪ್ರವಹಿಸಿತು. ಶೋಕಿಲಾಲ ಮದನ್ ಲಾಲ್ ಮಹಾನ್ ದೇಶಪ್ರೇಮಿಯಾಗಿ ಬದಲಾದ.

ಆ ಹೊತ್ತಿಗೆ ಬ್ರಿಟಿಷರಿಗೆ ಕ್ರಾಂತಿಯ ಮೂಲಕ ಉತ್ತರ ಕೊಡುವ ಮಾತುಕತೆ ಸಾವರ್ಕರ್ ನೇತೃತ್ವದಲ್ಲಿ ಭಾರತ ಭವನ ದಲ್ಲಿ ನಡೆಯುತ್ತಿತ್ತು. ಬಂಗಾಳದ ವಿಭಜನೆಗೆ ಹೊಂಚು ಹಾಕಿದ್ದ ಬ್ರಿಟಿಷ್ ಅಧಿಕಾರಿ ಕರ್ಜನ್ ವಾಯ್ಲಿ ಆಗಷ್ಟೇ ಇಂಗ್ಲೆಂಡ್ ಗೆ ಮರಳಿದ್ದ. ಲಂಡನ್ನಿನಲ್ಲಿ ನ್ಯಾಷನಲ್ ಇಂಡಿಯನ್ ಅಸೋಸಿಯೇಷನ್ ಎಂಬ ಸಂಸ್ಥೆ ಇತ್ತು. ಇಂಗ್ಲೆಂಡ್ ಗೆ ಬಂದ ಭಾರತೀಯ ತರುಣರನ್ನು ಹಾಳು ಮಾಡಿ ಬ್ರಿಟಿಷರಿಗೆ ನಿಷ್ಠೆಯಾಗಿ ಮಾಡುವುದು ಈ ಸಂಸ್ಥೆಯ ಕೆಲಸವಾಗಿತ್ತು. ವಿಲಿಯಂ ಕರ್ಜನ್ ವಾಲಿ ಅದರ ಮುಖ್ಯಸ್ಥನಾಗಿ ಕೆಲಸ ಮಾಡುತ್ತಿದ್ದ. ಸಹಜವಾಗಿ ಕ್ರಾಂತಿಕಾರಿಗಳ ಸಿಟ್ಟು ಆತನೆಡೆ ತಿರುಗಿತು. ತನ್ನ ತಂದೆಯ ಮೂಲಕ ಅವನ ಪರಿಚಯ ಗಳಿಸಿಕೊಂಡ ಮದನ್ ಲಂಡನ್ನಿನ ಜಹಾಂಗೀರ್ ಹಾಲ್ ನ ತುಂಬಿದ ಸಭೆಯಲ್ಲಿ ಕರ್ಜನ್ ವ್ಯಾಲಿಗೆ ಗುಂಡಿಟ್ಟು ಕೊಂದು ಬ್ರಿಟಿಷರ ನೆಲದಲ್ಲೇ ಅವರನ್ನು ಬೆಚ್ಚಿಬೀಳಿಸಿದ. ಲಂಡನ್ ಒಮ್ಮೆಗೇ ನಡುಗಿಹೋಯಿತು. ಸ್ವಾತಂತ್ರ್ಯಕ್ರಾಂತಿಯ ಜ್ಯೋತಿ ಬ್ರಿಟಿಷ್ ನೆಲದಲ್ಲೇ ಮೊಳಗಿತ್ತು. ಘಟನೆಯ ನಂತರ ಧಿಂಗ್ರಾ ಪಲಾಯನ ಮಾಡಲಿಲ್ಲ. ತಾನೇ ಪೊಲೀಸರಿಗೆ ಶರಣಾದ.

ನ್ಯಾಯಾಲಯ ದಲ್ಲಿ ತನ್ನ ಪರವಾಗಿ ತಾನೇ ವಾದಮಾಡಿ ತಾನು ಮಾಡಿದ ಕೆಲಸ ಹೇಗೆ ಸರಿ ಎಂದು ಸಮರ್ಥಿಸಿಕೊಂಡ. ನ್ಯಾಯಾಲಯದಲ್ಲಿನ ಅವನ ವಾದವೇ ಒಂದು ಕ್ರಾಂತಿಕಾರಿಗಳ ಪಾಲಿನ ಮಹಾಕಾವ್ಯ. ತಾನು ಇದನ್ನು ಮಾಡಿರುವುದಕ್ಕೆ ಹೆಮ್ಮೆ ಪಡುವುದಾಗಿಯೂ ತನಗೆ ಮರಣದಂಡನೆಯೇ ಸೂಕ್ತ ಎಂದೂ ಧೀರ ಮದನ್ ಲಾಲ್ ಧಿಂಗ್ರಾ ಖುಷಿಯಿಂದ ಕೇಳಿದ. “ತಾಯಿ ಭಾರತಿಯ ಸೇವೆಯೆಂದರೆ ಪ್ರಭು ಶ್ರೀರಾಮನ ಸೇವೆ. ಆ ತಾಯಿಗೆ ಅಪಮಾನವಾದರೆ ಶ್ರೀ ರಾಮನಿಗೆ ಅಪಮಾನವಾದಂತೆ. ಆ ದೊಡ್ಡ ತಾಯಿಗೆ ಈ ದಡ್ಡ ಮಗ ತನ್ನ ರಕ್ತವನ್ನಲ್ಲದೆ ಇನ್ನೇನು ತಾನೇ ಕೊಡಲಿಕ್ಕೆ ಸಾಧ್ಯ?. ಆದ್ದರಿಂದ ನಾನು ಹೆಮ್ಮೆಯಿಂದ ಪ್ರಾಣ ಬಿಡುತ್ತಿದ್ದೇನೆ. ನನ್ನ ತಾಯಿ ನಾಡು ಸ್ವತಂತ್ರವಾಗುವ ವರೆಗೂ ಇದೇ ತಾಯಿಯ ಹೊಟ್ಟೆಯಲ್ಲಿ ಮತ್ತೆಮತ್ತೆ ಹುಟ್ಟಬೇಕು. ಇದೇ ಧ್ಯೇಯಕ್ಕಾಗಿ ಬಲಿದಾನ ನೀಡಬೇಕು. ಇದೊಂದೇ ನಾನು ದೇವರಲ್ಲಿ ಮಾಡುವ ಪ್ರಾರ್ಥನೆ” ಹಾಗಂತ ಬಲಿದಾನದ ಮುನ್ನ ಹೇಳಿದ್ದ ಧಿಂಗ್ರಾ. 1909 ಆಗಸ್ಟ್ 17 ರಂದು ಈ ಅಪ್ರತಿಮ ಕ್ರಾಂತಿಕಾರಿಗೆ ಮರಣದಂಡನೆಯ ಶಿಕ್ಷೆ ನೀಡಲಾಯಿತು. ವಿದೇಶಿ ನೆಲದಲ್ಲಿ ಮೊದಲ ಬಲಿದಾನ ಮಾಡಿದ ಧಿಂಗ್ರಾನ ಅಪ್ರತಿಮ ಶೌರ್ಯ ಮುಂದೆ ಭಾರತದಲ್ಲಿ ದೊಡ್ಡ ಕ್ರಾಂತಿಕಾರಿಪರಂಪರೆಗೆ ನಾಂದಿಯಾಯಿತು.

ಮಾಹಿತಿ ಕೃಪೆ: ವಿಕಿಪಿಡೀಯಾ ಇತರ ಮೂಲಗಳಿಂದ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments