ಅಂತ್ಯದ ಬೆನ್ನೇರಿ…!
-ವಿನಾಯಕ ಪೈ ಬಿ
ಒಂದು ಸುಸಂಸ್ಕೃತ ಸಮಾಜ ಎಂದರೆ ವ್ಯಕ್ತಿಗತ ಚಿಂತನೆಗಳ, ಸಾಮಾಜಿಕ ಸ್ಥಿತ್ಯಂತರಗಳ, ಧಾರ್ಮಿಕ ಆಚರಣೆ, ಆಧ್ಯಾತ್ಮಿಕ ನಂಬಿಕೆಗಳ ಮತ್ತು ಅದರ ಕಾಲಾಂತರ್ಗತ ಪರಿಷ್ಕರಣೆಗಳ ಸಮ್ಮಿಲನವೇ ಆಗಿದೆ. ಈ ಸಮ್ಮಿಲನದಲ್ಲಿ ಯಾವುದಾದರು ಒಂದನ್ನು ನಿರ್ಲಕ್ಷಿಸಿದರು, ಸುಜ್ಞಾನದ ಕೊರತೆ ಸಮಾಜದ ಬೆಳವಣಿಗೆಯ ಮೇಲೆ ತೀವ್ರವಾಗಿ ಪ್ರತಿಫಲಿಸುತ್ತದೆ. ಮಾನವೀಯ ಮೌಲ್ಯಗಳು, ಸದ್ವಿಚಾರಗಳ ಸಾಂಗತ್ಯವೇ ನಮ್ಮ ಸಮೂಹದ ಅಂತಃಸತ್ವ. ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಿಂತನೆಗಳೇ ಸಮಾಜಕ್ಕೆ ಭದ್ರಬುನಾಧಿಯನ್ನು ಒದಗಿಸಿ, ಸಾಮಾಜಿಕ ಚಿಂತನೆಗಳು ಸದ್ಭಾವನೆಯ ಮೆಟ್ಟಿಲುಗಳಾಗಿ, ಮನುಕುಲವನ್ನು ಏಳಿಗೆಯತ್ತ ಕೊಂಡೊಯ್ಯುತ್ತದೆ .
ಈ ಮೇಲ್ಕಾಣಿಸಿದ ಸದ್ವಿಚಾರಗಳೆಲ್ಲದರ ದ್ಯೋತಕದಂತಿದೆ ನಮ್ಮ ಈ ಸಾರಸ್ವತ ಸಮಾಜ. ಈ ಸಮಾಜದ ಹಿನ್ನೆಲೆ ವಿಭಿನ್ನ, ಐತಿಹಾಸಿಕ . ವಿಶ್ವ ಮಾನವತಾವಾದದ, “ವಸುದೈವ ಕುಟುಂಬಕಂ” ಧ್ಯೇಯವಾಕ್ಯದ ಪರಿಪಾಲಕರು ಈ ಸಾರಸ್ವತರು. ಶಂಕರ, ರಾಮಾನುಜ, ಮಧ್ವರ ಸಂದೇಶಗಳನ್ನು ಜಗತ್ತಿಗೆ ಸಾರಿದವರು ಈ ಸಾರಸ್ವತರು. ಕಾಲಕಾಲಕ್ಕೆ ಬಂದೊದಗಿದ ಕಷ್ಟ ಕಾರ್ಪಣ್ಯಗಳ ಮೆಟ್ಟಿ ನಿಂತವರು ಈ ಸಾರಸ್ವತರು. ವಿದ್ಯೆಯ ಅಧಿದೇವತೆ ಸರಸ್ವತಿಯ ಪೂಜಕರು ಈ ಸಾರಸ್ವತರು. ಈ ಸಮಾಜ ಪ್ರಾಕೃತಿಕವಾಗಿ, ಸಾಮಾಜಿಕವಾಗಿ ಹಲವಾರು ಏರುಪೇರುಗಳನ್ನು, ಏರಿಳಿತಗಳನ್ನು ಕಂಡರೂ, ಅದರ ಧಾರ್ಮಿಕ ಪ್ರವೃತ್ತಿ ಮತ್ತು ಆಧ್ಯಾತ್ಮಿಕ ಚಿಂತನೆಗಳಿಂದ ನೆಲೆಯನ್ನು ಮತ್ತೊಮ್ಮೆ ಭದ್ರಗೊಳಿಸಿಕೊಂಡಿದೆ. ದೇಶದ 450 ವರ್ಷಗಳ ದಾಸ್ಯದ ಕರಿಛಾಯೆಯಲ್ಲಿ ಸಿಲುಕಿದವರಲ್ಲಿ ಈ ಸಾರಸ್ವತ ಸಮಾಜವು ಒಂದು. ಜಾತಿ, ಮತ, ಧರ್ಮ, ಭಾಷೆಗಳೆಂದು ವಿಭಜಿಸಲ್ಪಟ್ಟಾಗ ಛಿದ್ರರಾದರೂ ಕಾಲಾಂತರದಲ್ಲಿ ಬೆಸೆಯಲ್ಪಟ್ಟವರು ಈ ಸಾರಸ್ವತರು.
ವೇದ, ಉಪನಿಷತಗಳ ಅಧ್ಯಯನ, ಪೂಜಾ ಕೈಂಕರ್ಯವೇ ಶ್ರೇಷ್ಠವೆಂದು , ಜೀವನೋತ್ಪತ್ತಿಗಾಗಿ ಸರಸ್ವತಿ ನದಿ ತಟದಲ್ಲಿ ಕೃಷಿಯನ್ನು ದೇವರೆಂದು ನಂಬಿ ಜೀವಿಸುತ್ತಿದ್ದ ಈ ಜನಾಂಗ, ಕ್ರಮೇಣ ಸರಸ್ವತಿಯ ಸೊರಗುವಿಕೆಯಿಂದ ಸಾವಿರಾರು ವರ್ಷಗಳಿಂದ ವಲಸಿಗರಾಗಿ, ಅತಂತ್ರರಾಗಿಬಿಟ್ಟರು. ಸರಸ್ವತಿಯನ್ನು ನಂಬಿ, ಅಧ್ಯಾತ್ಮವನ್ನೇ ಉಸಿರನ್ನಾಗಿಸಿಕೊಂಡಿದ್ದ ಈ ಸಾರಸ್ವತರು ಅತಂತ್ರದೆಡೆಗೆ ನೂಕಲ್ಪಟ್ಟು ಎಷ್ಟೋ ಶತಮಾನಗಳು ಕಳೆದವು. ಸಂಸ್ಕೃತ ಮಾತೃಭಾಷೆಯ ಈ ಸಮಾಜ, ಜೀವನೋಪಾಯಕ್ಕಾಗಿ ಹಲವು ಭಾಷೆಗಳನ್ನು ತನ್ನ ಒಡಲಲ್ಲಿ ಸೇರಿಸಿಕೊಳ್ಳುತ್ತ ಅವಕಾಶಗಳ ಬೆನ್ನೇರಿ ಹೊರಟರು. ಅಖಂಡ ಭಾರತದಾದ್ಯಂತ ಸಂಚರಿಸಿ, ದಕ್ಷಿಣ ಭಾರತದಲ್ಲಿ ನೆಲೆಯನ್ನು ಸೃಷ್ಟಿಸಿ, ಧಾರ್ಮಿಕ ನೆಲೆಯಲ್ಲಿ ಮತ್ತೊಮ್ಮೆ ಸರಸ್ವತಿ ಮತ್ತು ಲಕ್ಷ್ಮೀಯ ಆರಾಧಕರಾಗಿ ನೆಲೆಯೂರಿದರು. ಲಕ್ಷ್ಮಿಯ ಅತ್ಯಂತ ಚಂಚಲ ಸ್ವಭಾವ, ಅವಳ ಆರಾಧಕರಿಗೂ ಪ್ರಾಪ್ತಿಯಾಗುತ್ತ ಹೋಯಿತು. ಭಾರತದ ಪಶ್ಚಿಮ ಕರಾವಳಿಯ, ಕೊಂಕಣ ಪ್ರಾಂತ್ಯದಲ್ಲಿ ಹಲವಾರು ವರ್ಷಗಳ ಕಾಲ ವ್ಯವಸಾಯ ಮಾಡುತ್ತ, ಉದ್ಯಮಗಳನ್ನು ನಿರ್ಮಿಸುತ್ತಾ ನೆಲೆನಿಂತ ಈ ಸಾರಸ್ವತರಲ್ಲಿ ಚುರುಕುತನ, ಬುದ್ದಿವಂತಿಕೆ, ಉದ್ಯಮಶೀಲತೆ, ಧಾರ್ಮಿಕ ಮತ್ತು ಸಾಮಾಜಿಕ ಪ್ರಜ್ಞೆಯು ಕಾಣಸಿಗುತ್ತಿತ್ತು. ಗೋಮಾಂತಕದಲ್ಲಿ ನೆಲೆನಿಂತ ಈ ಸಮಾಜ, ನಾಗರಿಕತೆಯನ್ನು ಸೃಷ್ಟಿಸಿ, ಬೆಳೆಸಿ, ಪೋಷಿಸುತ್ತಾ, ನಂಬಿದ ಕುಲದೇವರುಗಳ ಆರಾಧನೆಯನ್ನು ಅತ್ಯಂತ ಶ್ರದ್ದೆಯಿಂದ ನೆರವೇರಿಸುತ್ತಿರಲು, ವಿಧಿ ಮತ್ತೊಮ್ಮೆ ತನ್ನ ಘೋರ ನರ್ತನ ಆರಂಭಿಸಿತ್ತು. 15 ನೇ ಶತಮಾನದ ಆರಂಭದಲ್ಲಿ ವ್ಯಾಪಾರದ ದೃಷ್ಟಿಯಿಂದ ಭಾರತಕ್ಕೆ ಬಂದ ಮತಾಂಧ ಪೋರ್ಚುಗೀಸ್ ರಿಂದ ಛಿದ್ರಗೊಂಡಿತು ಸಾರಸ್ವತ ಸಮಾಜ. ಪ್ರಪಂಚದ ಹಾಗುಹೋಗುಗಳ ಪರಿವೆ ಇಲ್ಲದೆ, ತಮ್ಮ ಧಾರ್ಮಿಕ ನಂಬಿಕೆಯ ನೆರಳಲ್ಲಿ ವಿಸ್ತಾರವಾಗಿ ಬೆಳೆದಿದ್ದ ಗೌಡ ಸಾರಸ್ವತ ಸಮಾಜಕ್ಕೆ ಅಂತ್ಯದ ಕರಾಳ ಮುಖವನ್ನು ತೋರಿಸಿದವರಲ್ಲಿ ಪೋರ್ಚುಗೀಸರು ಪ್ರಮುಖರು. ಮನೆಮನೆಯಲ್ಲಿ ಮತಾಂತರದ ಹಾವಳಿ, ದೇವಾಲಯಗಳನ್ನು ಕೆಡವಿ, ಚರ್ಚ್ ಗಳ ನಿರ್ಮಾಣ ಗೋವಾ ಪ್ರಾಂತ್ಯದಲ್ಲಿ ಸರ್ವೇಸಾಮಾನ್ಯವಾಗಿ ಬಿಟ್ಟಿತು. ಶತ್ರುಗಳು ಯುದ್ಧಕ್ಕೆಂದು ಬಂದರೂ, ಹೋರಾಟದ ಹಿನ್ನೆಲೆಯೇ ಇಲ್ಲದ ಈ ಸಮಾಜಕ್ಕೆ ತಮ್ಮತನವನ್ನು ಮನಸಿಲ್ಲದ ಮನಸ್ಸಿಂದ ತೊರೆಯಬೇಕಾದ ಅತ್ಯಂತ ಭಯಾನಕ, ಕ್ರೂರ ಸಂದರ್ಭ ಉಂಟಾಗಿತ್ತು.
ಸಮಾಜದ ಬಡವರ್ಗ ಪೋರ್ಚುಗೀಸ್ ರ ಮತಾಂತರದ ಅಸ್ತ್ರಕ್ಕೆ ಸುಲಭದ ತುತ್ತಾದರು. ಪ್ರಾಣಪಕ್ಷಿಯ ಭಯ ಮಧ್ಯಮವರ್ಗದವರನ್ನು ಕ್ರೈಸ್ತನನ್ನಾಗಿಸಿತು. ಎಷ್ಟು ಘೋರವಾಗಿ ಈ ಮತಾಂತರ ನಡೆಯಿತೆಂದರೆ, ಮತಾಂತರಗೊಂಡ ಬ್ರಾಹ್ಮಣರು ದೇವರ ವಿಗ್ರಹ, ಸಾಲಿಗ್ರಾಮಗಳನ್ನು ದಿನಸಿ ಪದಾರ್ಥಗಳನ್ನು ಸಂಗ್ರಹಿಸಿಡುತ್ತಿದ್ದ ಡಬ್ಬಿಯೊಳಗೆ ಇಟ್ಟು ಮತಾಂಧ ಮಿಷನರಿಗಳಿಗೆ ತಿಳಿಯದಂತೆ ಪೂಜಿಸಬೇಕಾಯಿತು. ಮತಾಂತರಗೊಂಡವರನ್ನು ಅಳಿದುಳಿದ ಸಾರಸ್ವತರು ತಿರಸ್ಕರಿಸುವಂತಹ ಶೋಚನೀಯ ಪರಿಸ್ಥಿತಿ ಅಂದಿನ ದಿನಗಳಲ್ಲಿ ಗೋಚರಿಸುತ್ತಿತ್ತು. ಕೆಲವರು ಜೀವದ ಭಯಕ್ಕೆ, ಇನ್ನು ಕೆಲವರು ಹೆಣ್ಣು, ಹೊನ್ನಿನ ಆಸೆಗೆ ಮತಾಂತರಗೊಂಡದ್ದು ಸಾರಸ್ವತ ಸಮಾಜದ ದುರಂತವೇ ಹೌದು. ಪೋರ್ಚುಗೀಸ್ ರ ಅಟ್ಟಹಾಸ ಸಾರಸ್ವತ ಸಮಾಜದ ದೇವಸ್ಥಾನಗಳ ಮೇಲೂ ಸರಾಗವಾಗಿ ಅಡೆತಡೆಯಿಲ್ಲದೆ ನಡೆಯುತ್ತಾ ಹೋದಂತೆ ಜೀವನ ನಡೆಸಲು ಸಾಧ್ಯವಾಗದ ಪರಿಸ್ಥಿತಿಗೆ ಸಾರಸ್ವತ ಸಮಾಜ ಬಂದುಬಿಟ್ಟಿತು. ಗೋವಾ ಪ್ರಾಂತ್ಯದಲ್ಲಿ ನಡೆದ ಈ ಮತಾಂತರದ ತೀವ್ರತೆಯನ್ನು ನೆನಪಿಸಿಕೊಂಡಾಗಲೆಲ್ಲ ಕಣ್ಣೀರಿಗೆ ತಡೆಯಿಲ್ಲದಂತಾಗುತ್ತದೆ. ತಮ್ಮದೇ ವಿಶೇಷ ಆಚರಣೆ, ಪರಂಪರೆಗಳಿಂದ ಗೋವಾದಲ್ಲಿ ನೆಲೆನಿಂತ ಸಾರಸ್ವತರ ಮೇಲೆ ನಡೆದ ದೌರ್ಜನ್ಯವನ್ನು ಪ್ರಶ್ನಿಸಲು ಆ ಪರಮಾತ್ಮನೂ ಇಲ್ಲವೇ ? ಅನಿಸುವಂತಾಯಿತು. ಇವೆಲ್ಲದರ ನಡುವೆ ಧರ್ಮರಕ್ಷಣೆಗೆ ನಿಂತ ಬ್ರಾಹ್ಮಣರು ಗೋವಾವನ್ನು ಬಿಟ್ಟು ಮತ್ತೊಮ್ಮೆ ವಲಸೆಹೋಗುವ ನಿರ್ಧಾರಕ್ಕೆ ಬಂದರು. ಗೋವಾ ದಿಂದ ಆರಂಭಗೊಂಡ ಆ ವಲಸೆಯ ತೀವ್ರತೆಯನ್ನ ಅಂತರಾಳದಿಂದ ನಾವೆಲ್ಲ ಅವಲೋಕಿಸಬೇಕಿದೆ. ಇಂದು ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ ,ಕಾಸರಗೋಡು, ಕೊಚ್ಚಿ ಪ್ರಾಂತ್ಯದಲ್ಲಿ ಕಾಣಸಿಗುವ ಗೌಡ ಸಾರಸ್ವತರ ಇತಿಹಾಸ ಅತ್ಯಂತ ಭಯಾನಕ. ತಮ್ಮದೆಲ್ಲವನು ಬಿಟ್ಟು ಆಶ್ರಯ ಹುಡುಕಿ ಬಂದ ಈ ಸಮಾಜ ಅನುಭವಿಸಿದ ಸಾವು ನೋವುಗಳು ಬಹಳಷ್ಟು. ಅದೆಷ್ಟು ವರ್ಷಗಳ ಜೀವನ್ಮರಣ ಹೋರಾಟವೋ ದೇವನೇ ಬಲ್ಲ.
ಶ್ರೀ ಗೋಪಾಲಕೃಷ್ಣ ಪೈಯವರು ಬರೆದ “ಸ್ವಪ್ನ ಸಾರಸ್ವತ ” ಕಾದಂಬರಿ ಸಾರಸ್ವತ ಸಮಾಜದ ಹೋರಾಟದ ಕೈಗನ್ನಡಿ. ತಾವು ಪೂಜಿಸುತ್ತಿದ್ದ ಮನೆದೇವರ ವಿಗ್ರಹ, ಸಾಲಿಗ್ರಾಮವನ್ನು, ಒಂದೆರಡು ದಿನಗಳಿಗೆ ಬೇಕಾದ ಆಹಾರ ಪದಾರ್ಥಗಳನ್ನಷ್ಟೇ ಹೊತ್ತು ಸಾಗಿದ ವಲಸಿಗ ಸಾರಸ್ವತರು ದೇವರ ಆರಾಧನೆಯಲ್ಲೇ ಸಾವು ನೋವುಗಳನ್ನು ಮರೆತು ಧರ್ಮರಕ್ಷಣೆಯ ಮಹಾಕಾರ್ಯಕ್ಕೆ ಮುನ್ನುಡಿ ಬರೆದರು. ಸುಮಾರು ದಶಕಗಳ ಕಾಲದ ವಲಸೆ ಪ್ರಕ್ರಿಯೆಯಲ್ಲಿ ಆ ದೇವರನ್ನು ಬಿಟ್ಟರೆ ಯಾರು ಯಾರ ನೆರವಿಗೆ ಇದ್ದಿಲ್ಲ. ನಿರ್ಲಕ್ಷಿತರಾಗಿ, ಕಾಡುಜನರಂತೆ ಅಲೆದಾಡಿ ಮಳೆ-ಬಿಸಿಲು, ಕಲ್ಲು-ಮುಳ್ಳು ಎಂಬ ಪರಿವಿಲ್ಲದೆ ಸಾಮ್ರಾಜ್ಯಹೀನರಾದ ಧರ್ಮರಕ್ಷಕರು ನಮ್ಮ ಹಿರಿಯರು. ಇವರೆಲ್ಲರ ಹೋರಾಟ ನಿಜಕ್ಕೂ ವಂದನಾರ್ಹ .
ಸಾರಸ್ವತ ಸಮಾಜ ನಿಜಕ್ಕೂ ಕರ್ನಾಟಕದ ಮಣ್ಣಿಗೆ ಋಣಿಗಳು. ಹಸಿವಿನಿಂದ, ನೆಲೆಯರಸಿ ಬಂದ ಎಲ್ಲ ಸಾರಸ್ವತರನ್ನು ತನ್ನ ಮಡಿಲಲ್ಲಿ ಜೋಪಾನ ಮಾಡಿದ್ದು ಈ ಕನ್ನಡಾಂಬೆ. ಸರಸ್ವತಿ ನದಿಯಿಂದ ಹೊರಟು, ದೇಶದ ಉದ್ದಗಲಕ್ಕೆ ಸಂಚರಿಸಿ , ಗೋವಾ ದಿಂದಲೂ ನೆಲೆಕಳೆದುಕೊಂಡ ಸಾರಸ್ವತರು, ಸದೃಢ ಸಮಾಜವನ್ನು ಮತ್ತೊಮ್ಮೆ ಕಟ್ಟಿಕೊಂಡಿದ್ದು ಮಾತ್ರ ದಕ್ಷಿಣ ಕನ್ನಡ, ಉಡುಪಿ ಪ್ರಾಂತ್ಯದಲ್ಲಿ. ದೈವಾರಾಧನೆ, ನಾಗಾರಾಧನೆಯ ಈ ಮಣ್ಣಲ್ಲಿ ದೇವಾರಾಧನೆಯ ಕಂಪನ್ನು ಬಹಳಷ್ಟು ಪಸರಿಸಿದ್ದು ಕೂಡ ಈ ಗೌಡ ಸಾರಸ್ವತರೆ. ಈ ಸಮಾಜಕ್ಕೆ ಸಂಕಟ ಹರಣ ವೆಂಕಟರಮಣ ಮಾರ್ಗದರ್ಶಿಯಾದ. ಅವನ ಪತ್ನಿ ಲಕ್ಷ್ಮಿ ಪೂಜ್ಯತಾಯಿಯಾದಳು. ಈ ಲಕ್ಷ್ಮಿ ಪುತ್ರರು ಉದ್ಯಮ ಶೀಲರಾಗಿ ಬೆಳೆದು ಹಲವಾರು ಸಂಘ ಸಂಸ್ಥೆ, ಬ್ಯಾಂಕು, ವಿದ್ಯಾಸಂಸ್ಥೆಗಳ ನಿರ್ಮಾಣದ ರೂವಾರಿಗಳಾದರು. ಮಂಗಳೂರು ನಮ್ಮ ಮೂಲಸ್ಥಳವೆನ್ನುವಷ್ಟು ಮಟ್ಟಕ್ಕೆ ನಾವಿಲ್ಲಿ ಬೇರೂರಿಬಿಟ್ಟೆವು. ಮೂಲ ಮಂಗಳೂರಿಗರು, ಜೈನರು, ಬಂಟರು, ಬಿಲ್ಲವರು ಮತ್ತು ಇತರ ದ್ರಾವಿಡ ಜನಾಂಗಗಳೊಡನೆ ನಾವು ಬೆರೆತು ಸುಂದರ ಸಮಾಜದಲ್ಲಿ ಒಂದಾದೆವು. ವ್ಯಾಪಾರ ಮನೋಭಾವ ನಮ್ಮ ರಕ್ತದಲ್ಲೇ ಒಂದಾಗಿ, ಇಂದು ಈ ಸಮಾಜದ ಕೀರ್ತಿ ದೇಶ ವಿದೇಶಗಳಲ್ಲಿ ಗೌರವಕ್ಕೆ ಪಾತ್ರವಾಗಿದೆ.
ಇಷ್ಟೆಲ್ಲ ಸಮಾಜದ ಒಂದು ಮುಖವಾದರೆ ಇನ್ನೊಂದು ಮುಖ ದುರಂತವನ್ನು ಬಿಂಬಿಸುತ್ತದೆ. ಲಕ್ಷ್ಮಿಯ ಬೆನ್ನೇರಿದ ಸಾರಸ್ವತರಿಗೆ ಅವಳ ಚಂಚಲತೆಯ ಪ್ರಭಾವ ಆವರಿಸಿದ್ದು ಸುಳ್ಳಲ್ಲ. ಕ್ರಮೇಣ ಈ ಸಮಾಜ ಧಾರ್ಮಿಕ, ಆಧ್ಯಾತ್ಮಿಕ ಮತ್ತು ಸಾಮಾಜಿಕ ಪ್ರಜ್ಞೆಯನ್ನು ಮರೆತು ಹೋಗಿದ್ದು ವಿಪರ್ಯಾಸ . ನನ್ನ ಈ ಮೇಲಿನ ಮಾತುಗಳು ಹೆಚ್ಚಿನವರಲ್ಲಿ ವಿರೋಧಾಭಾಸವನ್ನು ತರುತ್ತಿರುವುದು ಸಾಮಾನ್ಯ. ಧರ್ಮ ರಕ್ಷಣೆಯ ಶಪಥಗೈದು ವಲಸೆ ಬಂದ ಈ ಸಮಾಜದಲ್ಲಿ ಅಧರ್ಮ ನೆಲೆಯೂರಿದ್ದಾದರೂ ಹೇಗೆ ? ಮಠ ಮಂದಿರಗಳಿಂದ ಸಮರ್ಥ ಮಾರ್ಗದರ್ಶನ ದೊರೆತರು ಕಳೆದ ಎರಡು ದಶಕಗಳಲ್ಲಿ ನಡೆದ ಅಚಾತುರ್ಯಗಳು ಬಹಳಷ್ಟು. ನಮ್ಮ ಸಮಾಜದ ಕೆಲವರು ದುಡ್ಡಿನ ದಾಸರಾಗಿ, ಕೊಲೆ ಸುಲಿಗೆಯೆನ್ನದೆ ಅಧರ್ಮದ ದಾರಿ ತುಳಿದದ್ದು ಆಘಾತಕಾರಿ ಬೆಳವಣಿಗೆಯೆ ಹೌದು.
ದೇವರ ಶ್ರೀಗಂಧ, ತೀರ್ಥ ಪ್ರಸಾದದಲ್ಲಿ ಪರಿಮಳವನ್ನು ಕಾಣುತಿದ್ದ ನಮ್ಮ ಸಮಾಜಕ್ಕೆ ರಕ್ತದ ವಾಸನೆಯು ಸಾಮಾನ್ಯವಾಯಿತು. ದೇವರ ನಾಮಕೀರ್ತನೆಯ ಬದಲು ದುಡ್ಡಿನ ಮಂತ್ರವೇ ಶ್ರೇಷ್ಠವಾಯಿತು. ದೇವತಾ ಹರಿಗುರು ಸೇವೆ ಕೇವಲ ಆಡಂಬರದ ಆಚರಣೆಗೆ ಸೀಮಿತವಾಯಿತು. “ದುಡ್ಡೇ ದೊಡ್ಡಪ್ಪ” ಸಮಾಜದ ಧ್ಯೇಯವಾಯಿತು. ಸಮಾಜದಲ್ಲಿ ಇಂದು ಸಹಬಾಳ್ವೆ ಮಾಯವಾಗಿದೆ. ದಾಯಾದಿಗಳ ಕದನಕ್ಕೆ ಮತ್ತೊಂದು ಕುರುಕ್ಷೇತ್ರಗಳಂತಾಗಿವೆ ಮನೆಗಳು. ಆಡಳಿತಾತ್ಮಕವಾಗಿ ದೇವಳ, ಮಠ, ವಿದ್ಯಾ ಸಂಸ್ಥೆಗಳಲ್ಲಿ ರಾಜಕಾರಣ. ಯುವ ಜನಾಂಗ ಸಂಪೂರ್ಣ ದಾರಿ ತಪ್ಪಿ ಮಾಧಕ ವ್ಯಸನಿಗಳಾಗಿ ಸದೃಢ ಸಮಾಜಕ್ಕೆ ಹೊರೆಯಾಗಿ ಪರಿವರ್ತನೆಯಾಗುತ್ತಿದರೆ. ಫೇಸ್ ಬುಕ್, ಟ್ವಿಟ್ಟರ್, ವಾಟ್ಸಪ್ಪ್ ಗಳು ಜೀವನ ಶೈಲಿಯಲ್ಲಿ ಬೆರೆತು, Apartment ಜೀವನ ಕ್ರಮ ನಮ್ಮದಾಗಿದೆ. ಜೀವನದಲ್ಲಿ ಗುರಿ ಇಲ್ಲದೆ, ಗುರು ಇಲ್ಲದೆ ಮನೆ ಮನೆಯಲ್ಲೂ ಕಲಹ, ವಿಚ್ಛೇದನ ಫ್ಯಾಷನ್ ಆಗಿಬಿಟ್ಟಿದೆ. ಸಂಘ ಜೀವಿ ಮಾನವ ಈ ಫ್ಯಾಷನ್ ನ ಬಲಿಪಶು . ಮನೆಯ ಹಿರಿಯರಿಗೆ ವೃದ್ದಾಶ್ರಮ ಕಾಯಂ ಆಯಿತು. ಸಾವಿರಾರು ಬೆಲೆಯ ನಾಯಿಗಳನ್ನು ಸಾಕುವ ನಮಗೆ ತಂದೆ ತಾಯಿ ಹೊರೆಯಾದರು. ಪ್ರತಿಯೊಂದು ಸಮಾಜದದ ವಾಸ್ತವ ಇದಾಗಿದ್ದರೂ, ಸುಸಂಸ್ಕೃತ ಸಾರಸ್ವತರಲ್ಲಿ ಬಲಿಯಾಗುವ ತವಕ ಸ್ವಲ್ಪ ಜಾಸ್ತಿಯಾಗಿದೆ. ಜೀವನ ಶೈಲಿ, ಅಂತಸ್ತು ಐಶ್ವರ್ಯ ಎನ್ನುವ ಅಣೆಕಟ್ಟಲ್ಲಿ ಮುಳುಗಿ ಸಾಯುತ್ತಿದೆ ಸಾರಸ್ವತ ಸಮಾಜ. ಏನೇಯಾದರು ಸಮಾಜದ ಮಾರ್ಗದರ್ಶಕರ ದಾರಿಯನ್ನೇ ತಪ್ಪಿಸಿದವರಲ್ಲವೇ ನಾವು? ಅದರ ಕರ್ಮದ ಫಲವೇ ಇರಬಹುದು ಇವೆಲ್ಲ .
A horse can pull a cart, but it cannot push a cart. ಎಂದರೆ ಕುದುರೆ ರಥವನ್ನು ಏಳೆಯಲು ಸಮರ್ಥವೇ ಹೊರತು ತಳ್ಳಲು ಅಲ್ಲ. ದುರದೃಷ್ಟವಶಾತ್ ಯುವ ಜನಾಂಗ ಸಾರಸ್ವತ ಸಮಾಜವೆಂಬ ರಥವನ್ನು ಅಜ್ಞಾನಕ್ಕೆ ತಳ್ಳುತಿದೆ. ಅಂತ್ಯದ ಪಥದಲ್ಲಿ ಪ್ರಯಾಣ ಆರಂಭಿಸಿ ಬಹಳಷ್ಟು ಕ್ರಮಿಸಿ ಆಗಿದೆ. ಈ ಅಂತ್ಯದ ಬೆನ್ನೇರಿ ಆರಂಭವಾದ ಓಟ ಸ್ವಲ್ಪವೇ ಸಮಯದಲ್ಲಿ ಗುರಿ ತಲುಪಲು ಹಾತೊರೆಯುತ್ತಿದೆ. ಈ ಸಮಾಜದ ಅಂತ್ಯ ಇನ್ನು 2 ದಶಕಗಳಲ್ಲಿ ಬಂದೊದಗಿದರು ಆಶ್ಚರ್ಯವಿಲ್ಲ. ಈ ದುಸ್ಥಿತಿಗೆ ಕಾರಣವೇನೆಂದು ಅವಲೋಕಿಸಿ, ಪರಿಹಾರ ಸೂಚಿಸುವವರಾದರು ಯಾರು ಈ ಸಮಾಜದೊಳು? ಜೀರ್ಣಾವಸ್ಥೆಯಲ್ಲಿರುವ ಸಮಾಜದ ಜೀರ್ಣೋದ್ದಾರ ಮಾಡುವವರಾರು? ದೇವಾಲಯಗಳ ಜೀರ್ಣೋದ್ಧಾರದಲ್ಲಿ ತೊಡಗಿರುವ ನಮ್ಮ ಸಾರಸ್ವತರಿಗೆ ಸಮಾಜದ ಜೀರ್ಣಾವಸ್ಥೆ ಕಂಡಿತಾದರೂ ಎಲ್ಲಿಂದ? ಸ್ನೇಹಿತರೆ ಇವತ್ತಿನ ಈ ಪರಿಸ್ಥಿತಿಗೆ ನೆಪಮಾಡಲು ಪೋರ್ಚುಗೀಸ್ ರಿಲ್ಲ. ಸರಸ್ವತಿ ನದಿಯ ಬರದ ಛಾಯೆ ನೇತ್ರಾವತಿಯಲ್ಲಿಲ್ಲ. ನಮ್ಮ ಅಂತ್ಯಕ್ಕೆ ನಾವೇ ಕಾರಣರಾಗುತ್ತಿದೇವೆಯೇ?
ಅಂತ್ಯವು ನಮ್ಮ ಬೆನ್ನೇರಿದೆಯೋ , ಇಲ್ಲ ನಾವೇ ಅಂತ್ಯದ ಬೆನ್ನೆರಿದ್ದೆವೊ ಉತ್ತರ ನಮ್ಮ ಅಂತರಾತ್ಮಕ್ಕೆ ತಿಳಿದಿದೆ. ನನ್ನ ಉಸಿರಿನ ಸದ್ದಲ್ಲು ಕೇಳುತಿದೆ ಗೌಡ ಸಾರಸ್ವತರ ಅಂತ್ಯದ ಸದ್ದು. ನೆರಳಲ್ಲೂ ಗೋಚರಿಸುತ್ತಿದೆ ಅಂತ್ಯದ ಘೋರ ಮುಖ. ಸಂಕಟದಿಂದ ರಕ್ಷಿಸಲಾಗದಷ್ಟು ದೂರ ತಲುಪಿದ್ದಾನೆಯೇ ವೆಂಕಟರಮಣ? ಸರಸ್ವತಿ ಪುತ್ರರಿಗಿದೋ ಅಂತ್ಯದ ದರ್ಶನ. ಅಂತ್ಯದ ಬೆನ್ನೇರಿ ನಡೆದಿದೆ ಕೊನೆಯ ಪಯಣ.
“ಸರಸ್ವತಿಯ ಮರೆತ ಸಮಾಜ, ಹೊನ್ನಿನ ಆಸೆಗೆ ಬಲಿಬಿದ್ದು ಮಾಡಿದೆವು ದೇವರಿಗೆ ಆಡಂಬರದ ಸನ್ಮಾನ, ಧರ್ಮಕ್ಕೆ ಅಪಮಾನ, ಗುರುಗಳಿಗೆ ಇಲ್ಲದಂತೆ ತುತ್ತನ್ನ. ಗಣನೆಗೆ ಸಿಗದಷ್ಟು ಎಲ್ಲವೂ ಒಂದೆಡೆ ಸೇರುತ್ತಿದೆ.ಅಂತ್ಯದ ಬೆನ್ನೇರಿದ ಓಟ, ಎಲ್ಲರ ಅಂತ್ಯದ ಓಟ”.