ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 12, 2016

5

ಭವಿಷ್ಯದ ಅರಮನೆಯ ಕನಸೇನೋ ಚಂದ, ಆದರೆ….

‍ನಿಲುಮೆ ಮೂಲಕ

– ಗುರುರಾಜ ಕೋಡ್ಕಣಿ. ಯಲ್ಲಾಪುರ

images‘ಕಂಗ್ರಾಟ್ಸ್ ಅನಿತಾ.. ನೀನು ಸಾಧಿಸಿಬಿಟ್ಟೆ ಮಗಳೇ, ನೀನು ಸಾಧಿಸಿ ಬಿಟ್ಟೆ. ನಿನಗೀಗ ಕ್ಯಾಂಪಸ್ ಸಂದರ್ಶನದಲ್ಲಿ ಕೆಲಸ ಸಿಕ್ಕಿರುವ ಕಂಪನಿ ಎಂಥಹ ಅದ್ಭುತ ಸಂಸ್ಥೆ ಗೊತ್ತೆ..?? ಈ ಒಂದು ವರ್ಷದ ಅವಧಿಯಲ್ಲೇ ಅದು ಸಾವಿರಾರು ಕೋಟಿಗಳಷ್ಟು ಲಾಭ ಪಡೆದುಕೊಂಡಿದೆ. ನಿನ್ನ ಶ್ರಮ ಸಾರ್ಥಕವಾಯಿತು ಮಗು. ದೀಪಾ, ಎಲ್ಲರಿಗೂ ಐಸ್ ಕ್ರೀಮ್ ತರಿಸು, ನಮ್ಮ ಮಗಳ ಈ ಯಶಸ್ಸನ್ನು ಖುಷಿಯಾಗಿ ಆಚರಿಸೋಣ’ ಎಂದು ಕೈಯಲ್ಲಿದ್ದ ಪತ್ರವನ್ನು ಅಪ್ಪ ಸಂತಸದಿಂದ ಓದುತ್ತಿದ್ದಾಗ ಅನಿತಾಳದ್ದು ನಿರ್ವಿಕಾರ ಮುಖಭಾವ. ಪದವಿ ಮುಗಿಯುವ ಮುನ್ನವೇ ಆಕೆಯ ಪ್ರತಿಭೆಯನ್ನು ಗಮನಿಸಿದ್ದ ಪ್ರತಿಷ್ಟಿತ ಕಂಪನಿಯೊಂದು ಆಕೆಗೆ ಉದ್ಯೋಗವನ್ನು ನೀಡಿತ್ತು. ಉದ್ಯೋಗ ಖಾತ್ರಿಯ ಪತ್ರವನ್ನೋದುತ್ತಿದ್ದ ಅಪ್ಪನಿಗೆ ಹೆಮ್ಮೆಯಿಂದ ಕೊರಳುಬ್ಬಿದ ಅನುಭವ. ಸಂತಸದ ಹಿಂದೆಯೇ ಅಮ್ಮನದ್ದೊಂದು ಸಣ್ಣ ಎಚ್ಚರಿಕೆ,’ಈಗ ಕೇವಲ ಐಸ್ ಕ್ರೀಮ್ ತಿಂದು ಸಂಭ್ರಮಿಸೋಣ ಮಗಳೇ, ನೀನು ಇನ್ನಷ್ಟು ಶ್ರಮಪಡು. ಹೆಚ್ಚು ಹೆಚ್ಚು ಏಕಾಗ್ರತೆಯಿಂದ ಓದು. ಕಡಿಮೆಯೆಂದರೂ ತೊಂಬತ್ತೈದು ಪ್ರತಿಶತ ಅಂಕಗಳನ್ನು ನೀನು ಗಳಿಸಬೇಕು. ನಿನ್ನ ಅಂಕಗಳನ್ನು, ಪ್ರತಿಭೆಯನ್ನು ನೋಡಿ ಕಂಪನಿ ನಿನಗೆ ಒಂದೇ ವರ್ಷದಲ್ಲಿ ಡಬ್ಬಲ್ ಪ್ರಮೋಷನ್ ಕೊಟ್ಟು ಬಿಡಬೇಕು. ಹಾಗೆ ಅಭ್ಯಾಸದಲ್ಲಿ ನಿನ್ನನ್ನು ನೀನು ತೊಡಗಿಸಿಕೊ ಮಗಳೇ, ಓದುವುದೊಂದೇ ನಿನ್ನ ಗುರಿಯಾಗಬೇಕು ಈಗ. ಇದು ಕಷ್ಟಪಡುವ ಕಾಲ. ಮುಂದೆ ಭವಿಷ್ಯದಲ್ಲಿ ನೀನು ಸಾಧನೆಯ ಶಿಖರದೆತ್ತರಕ್ಕೆ ನಿಂತಾಗ ಈಗ ಪಟ್ಟ ಶ್ರಮವೂ ನಿನಗೆ ಸಿಹಿಯಾದ ಅನುಭವವಾಗಿ ಭಾಸವಾಗುತ್ತದೆ ಮಗು. ಈಗ ಕೇವಲ ಓದುವುದೊಂದೇ ನಿನ್ನ ಗಮ್ಯ, ಶ್ರಮಪಡು ಅಷ್ಟೇ’ ಎನ್ನುವ ಅಮ್ಮನ ಮಾತುಗಳನ್ನು ಕೇಳಿದ ಅನಿತಾಳ ಮುಖದಲ್ಲಿ ಭಾವಹೀನ ಶುಷ್ಕನಗೆಯೊಂದು ಮೂಡಿದ್ದನ್ನು ಆಕೆಯ ಸಾಧನೆಯನ್ನು ಆಸ್ವಾಧಿಸುವ ಸಂಭ್ರಮದಲ್ಲಿದ್ದ ಪೋಷಕರು ಗಮನಿಸಲೇ ಇಲ್ಲ.

ಅನಿತಾ ಇಂಜಿನೀಯರಿಂಗ್ ನ ಕೊನೆಯ ವರ್ಷದ ವಿದ್ಯಾರ್ಥಿ. ಮೊದಲನೇ ವರ್ಷದಿಂದಲೂ ತರಗತಿಯಲ್ಲಿ ಅಗ್ರಸ್ಥಾನವನ್ನೇ ಗಳಿಸಿಕೊಂಡಿದ್ದ ಅನಿತಾ ಕೆಲವು ದಿನಗಳಿಂದ ಅದೇಕೋ ಮಂಕಾಗಿರುತಿದ್ದಳು. ಮುಂಚಿನಿಂದಲೂ ಆಕೆಗೆ ಸ್ನೇಹಿತರಿದ್ದದ್ದು ಬೆರಳೆಣಿಕೆಯಷ್ಟು ಮಾತ್ರ. ಆಕೆಯ ನಿರ್ಭಾವುಕ ಮನಸ್ಥಿತಿ ಆಕೆಯ ವಿದ್ಯಾಭ್ಯಾಸದ ಮೇಲಿನ ಏಕಾಗ್ರತೆಯನ್ನೇನೂ ಕಡಿಮೆ ಮಾಡಿರಲಿಲ್ಲ. ಆಕೆ ಮೊದಲಿನಷ್ಟು ಲವಲವಿಕೆಯಿಂದಿಲ್ಲ ಎನ್ನುವುದನ್ನು ಆಕೆಯ ಸಖಿಯರು ಗಮನಿಸಿದ್ದರು. ಆದರೆ ಅನಿತಾಳ ಅನ್ಯಮನಸ್ಕತೆಯ ಹಿಂದಿನ ರಹಸ್ಯ ಮಾತ್ರ ಅವಳ ಸ್ನೇಹಿತೆಯರಿಗೂ ಅರ್ಥವಾಗಿರಲಿಲ್ಲ. ಕಾಲೇಜಿನ ಆರುನೂರು ವಿದ್ಯಾರ್ಥಿಗಳ ಪೈಕಿ ತಿಂಗಳಿಗೆ ಐವತ್ತು ಸಾವಿರಗಳಷ್ಟು ಸಂಬಳವಿರುವ ಕಂಪನಿಗೆ ಆಯ್ಕೆಯಾಗಿರುವ ಹನ್ನೆರಡೇ ವಿದ್ಯಾರ್ಥಿನಿಯರ ಪೈಕಿ ಒಬ್ಬಳಾಗಿದ್ದ ಅನಿತಾಳ ವಿಲಕ್ಷಣ ವರ್ತನೆ ಆಕೆಯ ಸಹಪಾಠಿಗಳಿಗೊಂದು ಯಕ್ಷಪ್ರಶ್ನೆಯಾಗಿತ್ತು. ದುರಂತವೆಂದರೆ ಆಕೆಯ ಖಿನ್ನಭಾವ, ಆಕೆಯ ತಂಗಿಯನ್ನು ಸೇರಿದಂತೆ ಎಲ್ಲರ ಗಮನಕ್ಕೂ ಬಂದಿತ್ತಾದರೂ ಆಕೆಯ ಪಾಲಕರಿಗೆ ಮಾತ್ರ ಅದರ ಅರಿವಾಗಿರಲೇ ಇಲ್ಲ.

ಅದು 24 ಮಾರ್ಚ್ 2016. ಅಂದು ಸಂಬಂಧಿಯೊಬ್ಬರ ಮದುವೆಗಾಗಿ ಅನಿತಾ ಮುಂಬಯಿ ನಗರದಿಂದ ನಾಸಿಕ್ ಪಟ್ಟಣಕ್ಕೆ ತೆರಳಬೇಕಿತ್ತು. ಉದ್ಯೋಗಕ್ಕೆ ಆಯ್ಕೆಯಾಗಿದ್ದ ಕಂಪನಿಯಿಂದ ಪ್ರೋತ್ಸಾಹ ಧನವಾಗಿ ಸಿಕ್ಕಿದ್ದ ಚೆಕ್ಕನ್ನು ಬ್ಯಾಂಕಿಗೆ ಜಮಾ ಮಾಡಿ ಮಧ್ಯಾಹ್ನದ ಹನ್ನೆರಡರ ಬಸ್ಸಿನಲ್ಲಿ ನಾಸಿಕ್ ಪಟ್ಟಣಕ್ಕೆ ತೆರಳುವುದಾಗಿ ಅಪ್ಪನಿಗೆ ತಿಳಿಸಿ ಮನೆಯಿಂದ ಹೊರಬೀಳುತ್ತಾಳೆ ಅನಿತಾ. ಹಾಗೆ ಮನೆಬಿಟ್ಟು ಹೊರಬರುವ ಅನಿತಾ, ರಾತ್ರಿ ಎಂಟು ಗಂಟೆಯಾದರೂ ನಾಸಿಕ್ನ ಗರವನ್ನು ತಲುಪದಿದ್ದಾಗ ಆಕೆಯ ಪೋಷಕರು ದಿಕ್ಕು ತೋಚದಂತಾಗುತ್ತಾರೆ. ಆಕೆಯ ಅಪ್ಪ ಆಕೆಯ ಮೊಬೈಲಿಗೆ ಸತತವಾಗಿ ಕರೆ ಮಾಡುತ್ತಿದ್ದರೂ, ಮೊಬೈಲ್ ಸ್ವಿಚ್ ಆಫ್ ಎನ್ನುವ ಸಂದೇಶವೇ ಅವರಿಗೆ ಉತ್ತರವಾಗುತ್ತದೆ. ಅಪರಾಹ್ನ ಮನೆಬಿಟ್ಟ ಹುಡುಗಿ ಇರುಳಾದರೂ ಸುದ್ದಿಯಿಲ್ಲದೇ ನಾಪತ್ತೆಯಾದಾಗ ಆಕೆಯ ಹೆತ್ತವರಿಗೊಂದು ಅವ್ಯಕ್ತ ಭಯ. ಗಾಬರಿಯಿಂದ ಕಚೇರಿ ಬಿಟ್ಟು ಮನೆ ತಲುಪಿಕೊಂಡ ಅನಿತಾಳ ಅಪ್ಪನಿಗೆ ಮತ್ತೊಂದು ಆಘಾತ ಮನೆಯಲ್ಲಿ ಕಾದಿತ್ತು. ಆಕೆಯ ಎರಡೂ ಮೊಬೈಲ್ ಫೋನುಗಳು ಆಕೆಯ ಕೋಣೆಯ ಟೇಬಲ್ಲಿನ ಮೇಲೆಯೇ ಜೀವಹೀನವಾಗಿ ಮಲಗಿದ್ದವು. ಅವುಗಳ ಜೊತೆಗೆ, ‘ಪ್ರೀತಿಯ ಅಪ್ಪ ಅಮ್ಮ, ನಾನು ನನ್ನ ಸ್ವಯಿಚ್ಛೆಯಿಂದಲೇ ಮನೆ ಬಿಟ್ಟು ಹೋಗುತ್ತಿದ್ದೇನೆ. ನಾನು ತುಂಬ ದಣಿದಿದ್ದೇನೆ. ಈ ಒತ್ತಡವನ್ನು ನಾನು ತಡೆಯಲಾಗಿದ್ದೇನೆ. ನನ್ನನ್ನು ಕ್ಷಮಿಸಿ. ನನ್ನನ್ನು ಹುಡುಕುವ ವ್ಯರ್ಥ ಪ್ರಯತ್ನ ಮಾಡಬೇಡಿ’ ಎನ್ನುವ ಒಕ್ಕೂರಣೆಯುಳ್ಳ ಪತ್ರ ಬೇರೆ. ಪತ್ರವನ್ನೋದಿ ಅಕ್ಷರಶಃ ಹಾವು ತುಳಿದಂತಾಗುವ ಅನಿತಾಳ ಪೋಷಕರು
ತಕ್ಷಣವೇ ಪೋಲಿಸರನ್ನು ಸಂಪರ್ಕಿಸುತ್ತಾರೆ.

ಇಪ್ಪತ್ತೆರಡು ವರ್ಷದ ಹದಿಹರೆಯದ ಯುವತಿಯೊಬ್ಬಳು ಏಕಾಏಕಿ ಮಾಯವಾದಾಗ ಪೋಲಿಸರನ್ನು ಕಾಡುವ ಮೊಟ್ಟ ಮೊದಲ ಅನುಮಾನ ಪ್ರೇಮ ಪ್ರಕರಣದ್ದು. ಆದರೆ ಪೋಲಿಸರಿಂದ ಇಂಥದ್ದೊಂದು ಪ್ರಶ್ನೆ ಎದುರಾಗುವ ಮುನ್ನವೇ ತಮ್ಮ ಮಗಳು ಅತ್ಯಂತ ಬುದ್ಧಿವಂತ ವಿದ್ಯಾರ್ಥಿನಿಯಾಗಿದ್ದು, ತರಗತಿಯಲ್ಲಿ ಅಗ್ರಸ್ಥಾನಿಯಾಗಿ ನಿಲ್ಲುವ ಆಕೆಗೆ ಇಂಥಹ ಅಪಕ್ವ ವಿಷಯಗಳಿಗೆಲ್ಲ ತಲೆ ಹಾಕುವಷ್ಟು ಸಮಯವೇ ಇರಲಿಲ್ಲವೆನ್ನುತ್ತ ಪೋಲಿಸರ ಮೇಲೆಯೇ ಕೋಪೋದ್ರಿಕ್ತರಾಗುತ್ತಾರೆ ಆಕೆಯ ಹೆತ್ತವರು. ಅನಿತಾಳ ಪೋಷಕರ ಮಾತನ್ನು ಬೆಂಬಲಿಸುವ ಆಕೆಯ ಸ್ನೇಹಿತರು, ಅನಿತಾ ಖಂಡಿತವಾಗಿಯೂ ಆ ಬಗೆಯ ಹುಡುಗಿಯಲ್ಲವೆಂದು ಖಚಿತಪಡಿಸುತ್ತಾರೆ. ಪೋಲಿಸರಲ್ಲಿ ಇನ್ನಷ್ಟು ನಂಬಿಕೆ ಮೂಡಿಸುವುದಕ್ಕಾಗಿ ಮಾತನಾಡುವ ಆಕೆಯ ತಾಯಿ, ‘ಸರ್, ನನ್ನ ಮಗಳು ಉಳಿದವರಂತೆ ದುರ್ಬಲ ಹೆಣ್ಣುಮಗಳಲ್ಲ. ತನ್ನ ತರಗತಿಯಲ್ಲಿ ಆಕೆ ಯಾವಾಗಲೂ ಅಗ್ರಸ್ಥಾನಿ. ಆಕೆಗೆ ಅದ್ಭುತವಾದ ಕಂಪನಿಯೊಂದರಲ್ಲಿ ಕೆಲಸ ಸಿಕ್ಕಿದೆ. ಆಕೆಯ ಭವಿಷ್ಯವನ್ನು ನಾವಾಗಲೇ ನಿರ್ಧರಿಸಿದ್ದೆವು ಕೂಡ. ಎರಡು ವರ್ಷಗಳ ಕೆಲಸದ ಅನುಭವ, ಆನಂತರ ಪ್ರತಿಷ್ಟಿತ ಕಾಲೇಜೊಂದರಲ್ಲಿ ಎಮ್.ಬಿ.ಎ,ನಂತರ ನಾಲ್ಕು ವರ್ಷಗಳಲ್ಲಿ ಆಕೆಯ ಮದುವೆ ಎನ್ನುವುದು ನಮ್ಮ ಯೋಜನೆಯಾಗಿತ್ತು’ ಎನ್ನುತ್ತ ಪೋಲಿಸ್ ಅಧಿಕಾರಿಯೆದುರು ಕಣ್ಣೀರಾಗುತ್ತಾರೆ. ಮನೆ ಬಿಟ್ಟು ಹೋಗಲು ಕಾರಣವೇ ಇಲ್ಲದ ಸುಸಂಸ್ಕೃತ ಮನೆತನದ ಹುಡುಗಿಯೊಂದು ಹೀಗೆ ತಪ್ಪಿಸಿಕೊಂಡ ಹೋದ ಕಾರಣ ತಿಳಿಯದೇ ಪೋಲಿಸರು ಸಹ ಪೇಚಾಡತೊಡಗುತ್ತಾರೆ. ಆದರೆ ಕಾರಣವನ್ನರಿಯುವ ಬಗ್ಗೆ ತುಂಬ ತಲೆಕೆಡಿಸಿಕೊಳ್ಳದ ಪೋಲಿಸರು ತೀವ್ರಗತಿಯಲ್ಲಿ ಅನಿತಾಳ ಶೋಧಕಾರ್ಯದಲ್ಲಿ ತೊಡಗುತ್ತಾರೆ.

ಒಂದೆಡೆ ಪೋಲಿಸರು ಅನಿತಾಳನ್ನು ಹುಡುಕುವ ಪ್ರಯತ್ನದಲ್ಲಿದ್ದರೇ, ಮತ್ತೊಂದೆಡೆ ಇದ್ಯಾವುದರ ಪರಿವೆಯೂ ಇಲ್ಲದ ಅನಿತಾ ಗುಜರಾತಿನ ಅಹ್ಮದಾಬಾದ್ ನಗರದ ಸಣ್ಣದ್ದೊಂದು ಪಿಜ್ಜಾ ಅಂಗಡಿಯಲ್ಲಿ ಕೇವಲ ಆರು ಸಾವಿರ ರೂಪಾಯಿಗಳಷ್ಟು ಸಂಬಳವಿರುವ ಪರಿಚಾರಿಕೆಯ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ. ತನ್ನಲ್ಲಿದ ಅಲ್ಪ ಸ್ವಲ್ಪ ಹಣದಲ್ಲಿ, ದುಬಾರಿಯಲ್ಲದ ದುಡಿಯುವ ಮಹಿಳೆಯರ ವಸತಿಗೃಹದಲ್ಲೊಂದು ಕೊಠಡಿಯನ್ನು ಬಾಡಿಗೆಗೆ ಪಡೆದುಕೊಂಡು ವಾಸಿಸಲಾರಂಭಿಸುವ ಅನಿತಾ ಗುಜರಾತಿನ ಅಪರಿಚಿತರ ನಡುವೆ ಬದುಕು ಆರಂಭಿಸುತ್ತಾಳೆ. ಅದೊಮ್ಮೆ ತನ್ನ ಬ್ಯಾಂಕಿನ ಖಾತೆಯಿಂದ ಒಂದೂವರೆ ಸಾವಿರಗಳಷ್ಟು ಹಣವನ್ನು ತೆಗೆದುಕೊಳ್ಳುವ ಅನಿತಾ, ಅಗ್ಗದ ಮೊಬೈಲ್ ಫೋನೊಂದನ್ನು ಖರೀದಿಸುತ್ತಾಳೆ. ಆ ಮೂಲಕ ತನಗರಿವಿಲ್ಲದಂತೆಯೇ ತನ್ನ ಗುಪ್ತ ವಾಸಸ್ಥಾನದ ಬಗ್ಗೆ ಪೋಲಿಸರಿಗೊಂದು ಸುಳಿವು ನೀಡಿಬಿಡುತ್ತಾಳೆ. ಅಹ್ಮದಾಬಾದಿನ ಎಟಿಎಮ್ ಒಂದರಿಂದ ಆಕೆಯ ಖಾತೆಯಿಂದ ಹಣದ ವಹಿವಾಟು ನಡೆದಿದೆಯೆನ್ನುವುದನ್ನು ಖಚಿತಪಡಿಸಿಕೊಳ್ಳುವ ಪೋಲಿಸರು, ಆಕೆಯ ಬಳಿ ತುಂಬ ಹಣವಿರದ ಕಾರಣ ಆಕೆ, ಅಗ್ಗದ ಹೊಟೆಲ್ಲೊಂದರಲ್ಲಿ ವಾಸವಿರಬಹುದಾಗಿ ಊಹಿಸಿಕೊಂಡು ಅಹ್ಮದಾಬಾದಿನ ಸಣ್ಣ ಪುಟ್ಟ ಹೊಟೆಲ್ಲುಗಳಲ್ಲಿ, ವಸತಿ ಗೃಹಗಳಲ್ಲಿ ಹುಡುಕಾಟವನ್ನಾರಂಭಿಸುತ್ತಾರೆ. ಅದೃಷ್ಟವೆನ್ನುವಂತೆ ಹಾಗೊಂದು ಹುಡುಕಾಟದ ವೇಳೆ ಅನಿತಾಳ ಭಾವಚಿತ್ರವನ್ನು ಗುರುತಿಸಿಬಿಡುವ ಮೊಬೈಲ್ ಅಂಗಡಿಯ ಮಾಲೀಕ ತನ್ನ ಅಂಗಡಿಯ ಪ್ರವೇಶ ದ್ವಾರದ ಬಳಿ ತಾನು ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಸಿರುವುದಾಗಿ ತಿಳಿಸುತ್ತಾನೆ. ಸಿಸಿಟಿವಿಯ ತುಣುಕೊಂದರಲ್ಲಿ ಯುವಕನೊಬ್ಬನ ಬೈಕಿನ ಮೇಲೆ ಕುಳಿತು ಸಾಗುವ ಅನಿತಾಳನ್ನು ಕಂಡ ಪೋಲಿಸರಿಗೆ ಮತ್ತೊಮ್ಮೆ ಪ್ರೇಮ ಪ್ರಕರಣದ ಅನುಮಾನ ಶುರುವಾಗುತ್ತದೆ. ಅದೇ ವಿಡಿಯೋದ ತುಣುಕಿನಲ್ಲಿ ಯುವಕನ ವಾಹನದ ನೋಂದಣಿ ಸಂಖ್ಯೆಯನ್ನು ಗಮನಿಸುವ ಪೋಲಿಸರು ಆ ಯುವಕನನ್ನು ಠಾಣೆಗೆ ಕರೆಸುತ್ತಾರೆ. ಪೋಲಿಸರ ಅಂಥದ್ದೊಂದು ಕರೆಗೆ ಓಗೊಟ್ಟು ಠಾಣೆಗೆ ಬರುವ ಮಹೇಶ್ ಬನ್ಸಾಲಿ ನಿಜಕ್ಕೂ ಒಬ್ಬ ಸನ್ನಡತೆಯ ಯುವಕ. ಮೊಬೈಲ್ ಅಂಗಡಿಯ ಮುಂಬದಿಯ ರಸ್ತೆಯಲ್ಲಿ ಅಪರಿಚಿತಳಾಗಿದ್ದ ಅನಿತಾಳನ್ನು ಭೇಟಿಯಾಗುವ ಮಹೇಶ್, ಆಕೆಯ ವಿನಂತಿಯ ಮೇರೆಗೆ ತನ್ನ ಪರಿಚಯದ ಮಹಿಳಾ ವಸತಿಗೃಹವೊಂದಕ್ಕೆ ಸೇರಿಸುವಲ್ಲಿ ಆಕೆಗೆ ನೆರವಾಗುತ್ತಾನೆ. ಅಷ್ಟೇ ಅಲ್ಲದೇ ಆಕೆಯ ಬಾಡಿಗೆಯ ಕೊಣೆಗೆ ಬೇಕಾಗುವ ಐದು ಸಾವಿರ ರೂಪಾಯಿಗಳ ಮುಂಗಡ ಧನವನ್ನೂ ಸಹ ಸಾಲವಾಗಿ ಕೊಟ್ಟಿರುತ್ತಾನೆ. ಕೊನೆಗೂ ಆತನಿಂದ ಆಕೆ ವಾಸವಾಗಿರುವ ವಸತಿ ಗೃಹದ ವಿಳಾಸವನ್ನು ಪಡೆದುಕೊಳ್ಳುವ ಪೋಲಿಸರು ಅನಿತಾಳನ್ನು ಹುಡುಕುವಲ್ಲಿ ಯಶಸ್ವಿಯಾಗುತ್ತಾರೆ.

ಆದರೆ ಅನಿತಾ ಹಾಗೆ ಏಕಾಏಕಿ ಓಡಿ ಹೋಗಲು ಕಾರಣವೇನು ಎನ್ನುವ ಪ್ರಶ್ನೆಗೆ ಉತ್ತರವಾಗಿ ನಿಲ್ಲುವುದು ಪೋಲಿಸ್ ಠಾಣೆಯಲ್ಲಿ ಅಧಿಕಾರಿಯೆದುರು ಆಕೆಯಾಡುವ ಮಾತುಗಳು. ‘ಹೀಗೇಕೆ ಹೇಳದೇ ಕೇಳದೆ ಮನೆಬಿಟ್ಟೆಯಮ್ಮಾ’ ಎಂಬ ಪೋಲಿಸರ ಪ್ರಶ್ನೆಗೆ ಉತ್ತರಿಸುವ ಅನಿತಾ, ‘ನನ್ನನ್ನು ಕ್ಷಮಿಸಿ ಸರ್, ನಾನು ಮನೆ ತೊರೆಯುವುದರಿಂದ ನಿಮಗೆಲ್ಲ ಇಷ್ಟು ಕಷ್ಟ ಎದುರಾಗಬಹುದೆನ್ನುವುದನ್ನು ನಾನು ಊಹಿಸಿರಲಿಲ್ಲ. ಆದರೆ ನಾನೇನು ಮಾಡಲಿ ಸರ್..? ನನಗೆ ನನ್ನ ಪಂಜರದ ಬದುಕು ಸಾಕಾಗಿತ್ತು. ಹುಟ್ಟಿದಾರಭ್ಯ ಸ್ವಾತಂತ್ರ್ಯ ಎಂದರೇನು ಎಂಬುದನ್ನೇ ಅರಿಯದ ಹುಡುಗಿ ನಾನು. ನನ್ನ ಹೆತ್ತವರ ಪ್ರಕಾರ ನಾನೊಂದು ಅಂಕಗಳಿಸುವ ಯಂತ್ರವಷ್ಟೇ. ಓದುವುದು ಬರೆಯುವುದು, ಪರೀಕ್ಷೆಗಳಲ್ಲಿ ಮೊದಲ ಸ್ಥಾನ ಗಳಿಸಿಕೊಳ್ಳುವುದಷ್ಟೇ ನನ್ನ ಕೆಲಸ. ನಾನು ಆಟವಾಡುವಂತಿರಲಿಲ್ಲ, ತಿರುಗಾಡುವಂತಿರಲಿಲ್ಲ. ಭವಿಷ್ಯವನ್ನು ಭದ್ರವಾಗಿಸುವುದೊಂದೇ ನನ್ನ ಆದ್ಯತೆಯಾಗಬೇಕೆನ್ನುವುದು ನನ್ನ ಹೆತ್ತವರ ಅನಿಸಿಕೆ. ಪಾಲಕರ ಒತ್ತಡದಿಂದಾಗಿ ನಾನು ಅಭದ್ರಳಾದಂತಾಗಿದ್ದೆ. ಅಂತಿಮ ವರ್ಷದ ಪರೀಕ್ಷೆಗಳಲ್ಲಿ ಕಡಿಮೆ ಅಂಕಗಳನ್ನು ಪಡೆದುಕೊಳ್ಳುವ ವಿನಾಕಾರಣ ಭಯವೊಂದು ನನ್ನನ್ನು ಕಾಡಲಾರಂಭಿಸಿತ್ತು. ಪೋಷಕರ ಒತ್ತಡದಡಿಯಲ್ಲಿ ನಾನು ಹೈರಾಣಾಗಿದ್ದೆ. ನಿಜ ಹೇಳಬೇಕೆಂದರೆ ನನಗೆ ಅನುದಿನವೂ ಭವಿಷ್ಯದ ಕುರಿತು ಚಿಂತಿಸುವುದೆಂದರೆ ಉಸಿರುಕಟ್ಟುವ ಅನುಭವದಂತಿರುತ್ತಿತ್ತು. ನನಗೆ ವರ್ತಮಾನದಲ್ಲಿ ಬದುಕಬೇಕಿತ್ತು. ಅಸಲಿಗೆ ನಾನು ಬದುಕಬೇಕಿತ್ತು. ಸ್ವಚ್ಛಂದವಾಗಿ ಎಲ್ಲ ಯುವಕ ಯುವತಿಯರಂತೆ. ನನಗೆ ಸಿನಿಮಾ ನೋಡಬೇಕಿತ್ತು, ಬೀಚಿಗೆ ತೆರಳಿ ಪಾನಿಪೂರಿ ತಿನ್ನಬೇಕಿತ್ತು. ಸಾಮಾನ್ಯರಂತೆ ಸಣ್ಣದ್ದೊಂದು ಉಳಿತಾಯ ಮಾಡಬೇಕಿತ್ತು. ಸುಮ್ಮನೇ ರಸ್ತೆಯುದ್ದಕ್ಕೂ ಮೌನವಾಗಿ ನಡೆದು ಹೋಗಬೇಕಿತ್ತು. ಸಣ್ಣದ್ದೊಂದು ಜೋಕಿಗೂ ಬಿದ್ದು ಬಿದ್ದು ನಗಬೇಕಿತ್ತು, ಯಾರನ್ನೋ ನೆನೆಸಿಕೊಂಡು ಅಳಬೇಕಿತ್ತು. ನನ್ನ ಬದುಕಿನ ಈ ಕ್ಷಣದ ಪ್ರತಿಯೊಂದು ಸಣ್ಣಸಣ್ಣ ಸಂತಸಗಳನ್ನು ಅನುಭವಿಸಬೇಕಿತ್ತು. ಹಾಗಾಗಿಯೇ ನಾನು ಮನೆಬಿಟ್ಟು ತೆರಳಿದ್ದೆ’ ಎಂದು ನುಡಿದಿದ್ದಳು.

ಭವಿಷ್ಯವೆನ್ನುವ ಕಾಣದ ಸ್ವರ್ಗಕ್ಕಾಗಿ ಮಕ್ಕಳ ವರ್ತಮಾನದ ಸಂತಸಗಳ ಬಲಿ ಪಡೆಯುವ ಪ್ರತಿಯೊಬ್ಬ ಪೋಷಕನೂ ಅನಿತಾಳ ಮಾತುಗಳನ್ನೊಮ್ಮೆ ಕೇಳಿಸಿಕೊಳ್ಳಬೇಕು. ಮಕ್ಕಳ ಭವಿಷ್ಯದ ಬಗ್ಗೆ ಕಾಳಜಿಯಿರುವುದು ತಪ್ಪೇನಲ್ಲ. ಆದರೆ ಭವಿಷ್ಯಕ್ಕಾಗಿ ಮಕ್ಕಳ ಮನಸ್ಸನ್ನೂ ಸಹ ಅರಿಯದೇ ಅವುಗಳನ್ನು ಯಂತ್ರಗಳಂತೆ ಕಾಣುವ ಮನೋಭಾವ ಮಾತ್ರ ಅಕ್ಷಮ್ಯ. ಒಂದು ವರದಿಯ ಪ್ರಕಾರ ವರ್ಷವೊಂದಕ್ಕೆ ಮನೆಬಿಟ್ಟು ಓಡಿಹೋಗುವ ಸರಾಸರಿ ಐದು ಸಾವಿರ ಎಳೆಯರ ಪೈಕಿ ಪೋಷಕರಿಂದಾಗುವ ಶೈಕ್ಷಣಿಕ ಪ್ರಗತಿಯ ಒತ್ತಡವನ್ನು ತಾಳಲಾಗದೇ ಓಡಿಹೋಗುವವರ ಸಂಖ್ಯೆ ಸುಮಾರು ಸಾವಿರದಷ್ಟು. ತಮ್ಮ ಪ್ರತಿಷ್ಟೆಗಾಗಿಯೋ, ಮಕ್ಕಳ ಭವಿಷ್ಯದ ಅತಿಯಾದ ಭಯದಿಂದಲೋ ಮಕ್ಕಳನ್ನು ಪುಸ್ತಕಗಳ ಗುಲಾಮರಂತಾಗಿಸುವ ಪೋಷಕರು ನಿಜಕ್ಕೂ ಮಕ್ಕಳ ಸೂಕ್ಷ್ಮ ಮನಸ್ಸುಗಳನ್ನರಿತುಕೊಳ್ಳುವ ಅನಿವಾರ್ಯತೆ ನಮಗಿಂದು ಎದುರಾಗಿದೆಯೆಂದರೆ ತಪ್ಪಾಗಲಾರದು. ಗಣಿತ ವಿಷಯಕ್ಕೆ ಕಡಿಮೆ ಅಂಕಗಳನ್ನು ಗಳಿಸಿದ್ದಳೆನ್ನುವ ಕಾರಣಕ್ಕೇ ಅಮ್ಮನಿಂದ ಬೈಯಿಸಿಕೊಂಡು ಮನನೊಂದು ಮೊನ್ನೆಯಷ್ಟೇ ಬೆಂಗಳೂರಿನಿಂದ ಓಡಿ ಹೋಗಿದ್ದ ಪೂಜಿತಾ ಎನ್ನುವ ಎಂಟನೇಯ ತರಗತಿಯ ಬಾಲಕಿಯೊಬ್ಬಳು, ಮಾಧ್ಯಮಗಳೆದುರು ‘ನನಗೊಂದು ಬ್ರೇಕ್ ಬೇಕಿತ್ತು’ ಎಂಬಂಥಹ ಮಾತುಗಳನಾಡಿದಾಗ ನನಗೆ ಇದೇ ವರ್ಷ ಮುಂಬೈಯಲ್ಲಿ ನಡೆದ ಘಟನೆ ನೆನಪಾಯಿತು. ನಿಮ್ಮ ಮಗುವಿನ ಭವಿಷ್ಯದ ಕಾಳಜಿ, ಅದರ ಕಡಿಮೆ ಅಂಕಗಳ ಕುರಿತಾದ ಕೋಪ, ಮಕ್ಕಳಿಗೆ ಸರಿಯಾಗಿ ಸಮಯ ನೀಡಲಾಗುತ್ತಿಲ್ಲವೆನ್ನುವ ನಿಮ್ಮೊಳಗಿನ ಅಸಹನೆಯಂತಹ ಭಾವಗಳನ್ನು ಮೀರಿ ನಿಮ್ಮ ಮಕ್ಕಳೆಡೆಗೆ ಇರಬಹುದಾದ ಅನಂತ ಪ್ರೀತಿಗಾಗಿಯೇ ಈ ಬರಹವನ್ನೊಮ್ಮೆ ಓದಿಕೊಳ್ಳಿ.

5 ಟಿಪ್ಪಣಿಗಳು Post a comment
 1. satish
  ಸೆಪ್ಟೆಂ 12 2016

  ಬಹಳಾ ಒಳ್ಳೆಯ ವಿಷಯವನ್ನು ತಿಳಿಸಿರುವಿರಿ ಗುರುರಾಜ್ ರವರೆ ..
  ಧನ್ಯವಾದಗಳು .

  ಉತ್ತರ
 2. subrahmanya
  ಸೆಪ್ಟೆಂ 12 2016

  chennagide…..!!

  ಉತ್ತರ
 3. ಸೆಪ್ಟೆಂ 12 2016

  ಪೋಷಕರು ಓದಬೇಕಾದ ಅಪರೂಪದ ಲೇಖನ

  ಉತ್ತರ
 4. K.Sreepathybhat
  ಸೆಪ್ಟೆಂ 14 2016

  All parents must read this article, followed by mutual dissemination of the information.

  ಉತ್ತರ
 5. ಸೆಪ್ಟೆಂ 22 2016

  Its a an meaning full article

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments