ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 12, 2016

ಸ್ವಾತಂತ್ರ್ಯೋತ್ಸವ ವಿಶೇಷ ಸರಣಿ – ದಿನಕ್ಕೊಬ್ಬ ದೇಶಭಕ್ತರ ಸ್ಮರಣೆ

‍ನಿಲುಮೆ ಮೂಲಕ

ದಿನ – 26:
ಸರ್ದಾರ್ ಅಜಿತ್ ಸಿಂಗ್
– ರಾಮಚಂದ್ರ ಹೆಗಡೆ

ajitsinghಪಂಜಾಬ್ ಪ್ರಾಂತ್ಯದಲ್ಲಿ ಬ್ರಿಟಿಷ್ ಸರ್ಕಾರದ ದೌರ್ಜನ್ಯದ ವಿರುದ್ಧ ದನಿಯೆತ್ತಿದ, ಜನರನ್ನು ಸಂಘಟಿಸಿದ ಅಗ್ರಶ್ರೇಣಿಯ ಕ್ರಾಂತಿಕಾರಿ ಸರ್ದಾರ್ ಅಜಿತ್ ಸಿಂಗ್. ಇವರು ಕ್ರಾಂತಿಸಿಂಹ ಸರ್ದಾರ್ ಭಗತ್ ಸಿಂಗ್ ರ ಚಿಕ್ಕಪ್ಪ. 1947 ರ ಆಗಸ್ಟ್ 15 ರಂದು ಭಾರತ ಸ್ವತಂತ್ರವಾದಾಗ ‘ಥ್ಯಾಂಕ್ ಗಾಡ್, ನಮ್ಮ ಕೆಲಸ, ಹೋರಾಟ ಯಶಸ್ವಿಯಾಯಿತು’ ಎಂದು ಖುಷಿಯಿಂದ, ಸಂಭ್ರಮದಿಂದ ಆ ಕ್ಷಣಗಳನ್ನು ಕಂಡು ಅಂದೇ ‘ಧನ್ಯತೆಯ ಸಾವು’ ಕಂಡವರು ಅಜಿತ್ ಸಿಂಗರು. ಸ್ವತಂತ್ರ ಭಾರತದ ಕನಸು ಕಂಡು ಅದಕ್ಕಾಗಿ ತಮ್ಮ ಬದುಕನ್ನೇ ಸಮರ್ಪಿಸಿ ಆ ಕನಸು ನನಸಾಗುವ ಮುನ್ನವೇ ಮರೆಯಾದವರು ಕೋಟ್ಯಾಂತರ ಮಂದಿ. ಹಾಗೆ ಕನಸು ನನಸಾದ ಕ್ಷಣವನ್ನು ಕಣ್ತುಂಬಿಕೊಳ್ಳುವ ಭಾಗ್ಯ ಅನೇಕರಿಗೆ ಸಿಗಲೇ ಇಲ್ಲ. ಸರ್ದಾರ್ ಅಜಿತ್ ಸಿಂಗರು ಆ ವಿಷಯದಲ್ಲಿ ಅದೃಷ್ಟವಂತರು. ಹಾಗಾಗಿ ಅವರದು ಧನ್ಯತೆಯ ಸಾವು.

ಪಂಜಾಬಿನ ಆರಂಭದ ಹೋರಾಟಗಾರರಲ್ಲಿ ಇವರು ಪ್ರಮುಖರು. ಅವರು ತಾರುಣ್ಯದ ಕಾಲದಲ್ಲೇ ಸ್ವಾತಂತ್ರ್ಯ ಸಮರಕ್ಕೆ ಧುಮುಕಿದರು. ಪಂಜಾಬಿನ ರೈತರನ್ನು ಸಂಘಟಿಸಿ ಅವರು ಎಬ್ಬಿಸಿದ “ರೈತ ಕ್ರಾಂತಿ” ಬ್ರಿಟಿಷ್ ಸಾಮ್ರಾಜ್ಯದ ಎದೆನಡುಗಿಸಿತು. 1907 ರಲ್ಲಿ ಲಾಲಾ ಲಜಪತರಾಯರೊಂದಿಗೆ ಇವರನ್ನು ಮಾಂಡಲೆ ಜೈಲಿಗೆ ಗಡಿಪಾರು ಮಾಡಲಾಯಿತು. ಸಾರ್ವಜನಿಕರ ಒತ್ತಡಕ್ಕೆ ಮಣಿದು ಒಂದೇ ವರ್ಷದ ನಂತರ ಅವರನ್ನು ಬ್ರಿಟಿಷರು ಬಿಡುಗಡೆಗೊಳಿಸಿದರು. ಮತ್ತೆ ಕ್ರಾಂತಿ ಕಾರ್ಯ ಮುಂದುವರಿಸಿದ ಅಜಿತರು ಬ್ರಿಟಿಷ್ ವಿರೋಧಿ ಸಾಹಿತ್ಯ ಹಾಗೂ ಬರಹಗಳ ಮೂಲಕ ಅವರ ಕೆಂಗಣ್ಣಿಗೆ ಗುರಿಯಾದರು. ಬ್ರಿಟಿಷರ ಬಂಧನದಿಂದ ತಪ್ಪಿಸಿಕೊಳ್ಳಲು ಅವರು 1909 ರಲ್ಲಿ ಮತ್ತೊಬ್ಬ ಕ್ರಾಂತಿಕಾರಿ ಅಂಬಾಪ್ರಸಾದ ರೊಂದಿಗೆ ಇರಾನ್ ಗೆ ತೆರಳಿ ನಂತರ 38 ವರ್ಷಗಳ ಕಾಲ ವಿದೇಶದಲ್ಲೇ ಇದ್ದು ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಅಂತರರಾಷ್ಟ್ರೀಯ ಜನಾಭಿಪ್ರಾಯ ಮೂಡಿಸುವ ಪ್ರಯತ್ನ ಮಾಡಿದರು. ಫ್ರಾನ್ಸ್, ಟರ್ಕಿ ಹಲವೆಡೆಗಳಲ್ಲಿ ಸಂಚರಿಸಿ ಎರಡನೇ ಮಹಾಯುದ್ಧದ ಖೈದಿಗಳನ್ನು ಬಳಸಿಕೊಂಡು ‘ಆಜಾದ್ ಹಿಂದ್ ಲಷ್ಕರ್’ ಎಂಬ ಸೇನೆ ಕಟ್ಟಿದರು.

ಮೊದಲು ಗದರ್ ಪಾರ್ಟಿ ಸಂಪರ್ಕಕ್ಕೆ ಬಂದ ಅವರು ನಂತರ 1938 ರಲ್ಲಿ ಇಟಲಿಯಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸರಿಗೆ ನೆರವಾದರು. 1945 ರಲ್ಲಿ ಮತ್ತೆ ಅವರ ಬಂಧನವಾಯ್ತು. ಇಂಗ್ಲೆಂಡಿನ ಅಮಾನುಷವಾದ ಯಾತನಾಮಯ ಸೆರೆಮನೆಗೆ ಅವರನ್ನು ತಳ್ಳಲಾಯ್ತು. 1947 ರ ಮಾರ್ಚ್ ನಲ್ಲಿ ಪಂಜಾಬಿನ ಜನತೆ ಹಾಗೂ ಕಾಂಗ್ರೆಸ್ ನ ಒತ್ತಡದಿಂದಾಗಿ ಬ್ರಿಟಿಷರು ಅವರನ್ನು ಬಿಡುಗಡೆಗೊಳಿಸಿ ಪಂಜಾಬಿಗೆ ಕರೆತಂದರು. ಇಂಗ್ಲೆಂಡಿನ ಸೆರೆಮನೆಯ ಅಮಾನುಷ ಹಿಂಸೆಯಿಂದ ಅವರು ಆಗಲೇ ಜರ್ಜರಿತರಾಗಿದ್ದರು. ಆದರೂ ಅವರಿಗೆ ಸ್ವತಂತ್ರ ಭಾರತ ಕಾಣುವ ಕನಸು ಬತ್ತಿರಲಿಲ್ಲ. ಅಂತಹ ಮಹಾನ್ ದೇಶಭಕ್ತರೆಲ್ಲರ ಹೋರಾಟದ ಫಲವಾಗಿ 1947 ಆಗಸ್ಟ್ 14 ರ ಮಧ್ಯರಾತ್ರಿ ಭಾರತ ಸ್ವತಂತ್ರವಾಯಿತು. ಅಜಿತಸಿಂಗರ ಆನಂದಕ್ಕೆ ಪಾರವೇ ಇರಲಿಲ್ಲ. ತಾವು ಕಂಡ ಕನಸು ನನಸಾದ ಸಂಭ್ರಮದಲ್ಲಿ ಅವರು ಆನಂದದಿಂದ ಸಾವನ್ನಪ್ಪಿದರು. ಸರ್ದಾರ್ ಅಜಿತ್ ಸಿಂಗ್ ರ ಕೊನೆಯ ಮಾತು “ಥ್ಯಾಂಕ್ ಗಾಡ್, ನಮ್ಮ ಹೋರಾಟ ಯಶಸ್ವಿಯಾಯಿತು, ಸ್ವತಂತ್ರ ಭಾರತದ ಕನಸು ನನಸಾಯಿತು”. ತಾಯಿ ಭಾರತಿಯ ಈ ಹೆಮ್ಮೆಯ ಪುತ್ರನಿಗೆ ನಮಿಸೋಣ.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments