ಗುರು – ಶಿಷ್ಯ
– ಗೀತಾ ಹೆಗ್ಡೆ
ಅರಿವು ಅಂದರೆ ತಿಳುವಳಿಕೆ. ಇದು ನಮಗೆ ಹುಟ್ಟಿನಿಂದ ಬರಲು ಸಾಧ್ಯವಿಲ್ಲ. ಇದಕ್ಕೆ ಒಬ್ಬ ಗುರುವಿನ ಅಗತ್ಯ ಇದೆ. ಒಂಬತ್ತು ತಿಂಗಳು ಹೊತ್ತು ಹೆತ್ತು ಸಾಕಿದ ತಾಯಿ ಮೊದಲ ಗುರು. ಎಳೆ ಕಂದಮ್ಮನಿಗೆ ಹಾಲುಣಿಸುವ ತರಬೇತಿಯಿಂದ ಹಿಡಿದು ತನ್ನ ಜೀವಿತಾವಧಿಯ ಕೊನೆಯವರೆಗೂ ಒಂದಲ್ಲಾ ಒಂದು ಗಳಿಗೆಗಳ ಸಂದರ್ಭದಲ್ಲಿ ಜೊತೆಯಾಗಿ ನಿಂತು ಸಲಹುವ ಗುರು ರಕ್ಷೆ ಅವಳು. ಹಾಗಾದರೆ ತಂದೆ? ಮುದ್ದು ಮಾಡಿ ಎತ್ತಿ ಹಾರಿಸಿ ಕಂದನ ಲಾಲನೆ ಪಾಲನೆ ಕಡೆ ಕಣ್ಣಿಟ್ಟು ಬೇಕಾದ್ದೆಲ್ಲ ತನ್ನ ಶಕ್ತ್ಯಾನುಸಾರ ತಂದು ಕೊಡುವ; ತರಲಾರದ್ದಕ್ಕೆ ಸಂಕಟ ಪಡುತ್ತ ಹಪಹಪಿಸಿ ಮರೆಯಲ್ಲಿ ಕಣ್ಣೊರೆಸಿಕೊಂಡು ಜವಾಬ್ದಾರಿ ಹೊತ್ತು ಮಕ್ಕಳಿಗೆ ಶ್ರೀ ರಕ್ಷೆ ನೀಡಿ, ಬೆಳೆಯುವ ಮಕ್ಕಳ ಏಳಿಗೆಯ ನೋಡಿ ಬೀಗುವ ಕಣ್ಣಿಗೆ ಕಾಣದ ಗುರು ಎಂದರೂ ತಪ್ಪಾಗಲಾರದು. ಏಕೆಂದರೆ ಸಂಸಾರದಲ್ಲಿ ಮಕ್ಕಳಿಂದ ಏನೆ ತಪ್ಪು ಒಪ್ಪಿದ್ದರೂ ಸಾಮಾನ್ಯವಾಗಿ ತಾಯಿ ಕಲಿಸಿದ ಬುದ್ಧಿ ಹೇಳೋದೆ ಜಾಸ್ತಿ. ತಂದೆ, ತಾಯಿ ಕಲಿಸಿದ ಬುದ್ಧಿ ಹೇಳೋದು ಅಪರೂಪ. ತಂದೆ ತಾಯಿಯಾದವರೂ ಹೇಳುವುದೂ ಹಾಗೆ, ಒಳ್ಳೆದಾದರೆ ನಾ ಕಲಿಸಿದ್ದು ಅದೆ ತಪ್ಪಾದರೆ ಅವರಮ್ಮ ಕಲಿಸಿದ ಬುದ್ಧಿ. ಎಷ್ಟು ವಿಪರ್ಯಾಸ!
ಸಮಾಜದಲ್ಲಿ ಹಿಂದಿನಿಂದ ನಡೆದುಕೊಂಡು ಬಂದ ರೀತಿ, ಮಾತು ಸಮಾಜ ಎಷ್ಟೇ ಮುಂದುವರೆದರೂ ಕೆಲವು ನಡೆ ರಕ್ತಗತವಾಗಿ ಸೇರಿಕೊಂಡಿರುತ್ತದೆ. ಬಿಡೋದೇ ಇಲ್ಲ. ನಂತರದ ದಿನಗಳಲ್ಲಿ ಮಗುವಿನ ಬೆಳವಣಿಗೆ ಆದಂತೆಲ್ಲ ಸುತ್ತ ಮುತ್ತಲ ಮಕ್ಕಳ ಜೊತೆ ಸೇರಿ ಅನೇಕ ಬೇಕಾದ್ದು ಬೇಡಾದ್ದು ನಿಧಾನವಾಗಿ ಒಂದೊಂದೇ ಕಲಿಯುವ ಮಗು ಹೆತ್ತವರನ್ನೇ ಪ್ರಶ್ನೆ ಮಾಡುವ ಮಟ್ಟಕ್ಕೆ ಬೆಳೆದುಬಿಡುತ್ತವೆ. ಅದರಲ್ಲೂ ಈಗಿನ ಮಕ್ಕಳು ಅಸಾಧ್ಯ. ಅವುಗಳಿಗೆ ಉತ್ತರ ಕೊಡಲು ಕಲಿತ ವಿದ್ಯೆ ಎಲ್ಲ ಉಪಯೋಗಿಸಬೇಕು. ಸಮಯಕ್ಕೆ ತಕ್ಕಂತೆ ಮಾತಾಡುವ ಜಾಣ್ಮೆ ಈಗಿನ ಮಕ್ಕಳಲ್ಲಿ ಜಾಸ್ತಿ. ಅವರು ಹೇಳುವ ಸುಳ್ಳು ಸತ್ಯದ ಮೇಲೆ ಹೊಡೆದಂತಿರುತ್ತದೆ.
ಒಮ್ಮೆ ಬಸವನಗುಡಿಯಲ್ಲಿ ಒಬ್ಬ ಹುಡುಗ “ಆಂಟಿ ನನಗೆ ಬಸ್ಸಿಗೆ ಹೋಗಲು ಕಾಸಿಲ್ಲ; ನೀವು ಸಹಾಯ ಮಾಡ್ತೀರಾ?” ಅಂತ ಅಂದ. “ಯಾಕೋ ಮನೆಯಿಂದ ಬರುವಾಗ ತಂದಿಲ್ವಾ?” , “ಇಲ್ಲ ಆಂಟಿ ದಿನಾ ನನ್ನ ಅಂಕಲ್ ಬಂದು ಕರೆದುಕೊಂಡು ಹೋಗ್ತಾ ಇದ್ರು. ಇವತ್ತು ಬಂದಿಲ್ಲ. ಟ್ಯೂಷನ್ಗೆ ಹೋಗಬೇಕು” ಅವನ ನೋಟ ನನಗೆ ಪಾಪ ಅನ್ನಿಸಿ ಕಾಸು ಕೊಟ್ಟು ಮುನ್ನಡೆದೆ. ಸ್ವಲ್ಪ ದೂರ ಹೋಗುವಷ್ಟರಲ್ಲಿ ಯಾಕೆ ನನ್ನ ಸ್ಕೂಟಿಯಲ್ಲಿ ಇಲ್ಲೇ ಹತ್ತಿರ ಮನೆ ಇದ್ದರೆ ಬಿಡಬಾರದು? ಒಂದೊಮ್ಮೆ ನಾನು ಹೋಗುವ ದಾರಿಯಲ್ಲಿ ಅವನ ಮನೆ ಇದ್ದರೆ? ಅವನು ಸಿಕ್ಕಲ್ಲಿಗೆ ವಾಪಸ್ಸು ಬಂದರೆ ಪಕ್ಕದಲ್ಲಿರೊ ಪಾನಿ ಪುರಿ ಅಂಗಡಿಯಲ್ಲಿ ತಿನ್ನುತ್ತ ನಿಂತಿರೋದು ನೋಡಿ ದಂಗಾದೆ. ಕೋಪ ಬಂದರೂ ಛೆ! ಪಾಪ, ತಿನ್ನೊ ಆಸೆ ಅಂತ ಸುಮ್ಮನಾಗಿ ವಾಪಸ್ ಬಂದೆ. ಇಂತಹ ಬುದ್ಧಿ ಅದೇಗೆ ಕಲಿತಾರೆ ಮಕ್ಕಳು? ಇಂತವುಗಳನ್ನು ಕಲಿಯಲು ಯಾವ ಗುರುವೂ ಬೇಡ ಅಲ್ಲವೆ?
ಮುಂದಿನ ಮೆಟ್ಟಿಲು ಶಾಲೆ. ಹಲವಾರು ಶಿಕ್ಷಕರ ಹೆಣಗಾಟದಲ್ಲಿ ಒಂದೊಂದೇ ಮೆಟ್ಟಿಲು ಹತ್ತುತ್ತ ಶಿಕ್ಷಣ ಮುಗಿಸುವಾಗ ಮಕ್ಕಳಲ್ಲಿ ನೆನಪಿಗೆ ಇರುವ ಶಿಕ್ಷಕರು ಬೆರಳೆಣಿಕೆಯಷ್ಟು ಮಾತ್ರ. ಒಂದೋ ಆ ಮಾಸ್ತರು ಸ್ಟಿಕ್ಟು. ನನಗೆ ಅವರ ಕಂಡರೆ ಆಗ್ತಿರಲಿಲ್ಲ. ಬರೀ ಪಾಶಾ೯ಲಿಟಿ, ಹಾಗೆ ಹೀಗೆ ಅಂತ ಗುಣಗಾನ ಮಾಡುವ ನಡೆ ಮೊದಲಿಂದ ಇಂದಿನವರೆಗೂ ನಡೆದುಕೊಂಡು ಬಂದ ರೀತಿ. ಆದರೆ ಕಲಿಕೆಯ ದಿನಗಳಲ್ಲಿ ಕಳೆದ ದಿನಗಳನ್ನು ಯಾವ ವಿದ್ಯಾರ್ಥಿಯೂ ಮರೆಯಲಾರ. ದೊಡ್ಡವರಾಗಿ ಶಿಕ್ಷಣ ಮುಗಿಸಿ ಕೆಲಸಕ್ಕೆ ಸೇರಿ ದೇಶ ವಿದೇಶದಲ್ಲಿ ನೆಲೆಸಿದ್ದರೂ ತನ್ನ ಶಾಲೆ ತನ್ನ ಗುರು ಅನ್ನುವ ಅಭಿಮಾನ ಎಲ್ಲರಲ್ಲೂ ಉಳಿದಿರುತ್ತದೆ. ದಿನ ನಿತ್ಯ ನೆನೆಯದೇ ಇದ್ದರೂ ಮಹತ್ವದ ದಿನಗಳಲ್ಲಿ ನೆನಪಿಸಿಕೊಳ್ಳುವುದು ಗ್ಯಾರಂಟಿ.
ಮುಂದಿನ ಹಂತ ಸಂಸಾರ. ಇಲ್ಲಿ ಯಾರು ಗುರು, ಯಾರು ಶಿಷ್ಯ ಹೇಳುವುದು ಕಷ್ಟ. ಗಂಡನಿಗೆ ಗೊತ್ತಿಲ್ಲದ್ದು ಹೆಂಡತಿ ಕಲಿಸುತ್ತಾಳೆ. ಹೆಂಡತಿಗೆ ಗೊತ್ತಿಲ್ಲದ್ದು ಗಂಡ ಹೇಳಿಕೊಡುತ್ತಾನೆ. ಇಬ್ಬರಿಗೂ ಗೊತ್ತಿಲ್ಲದ್ದು ಮಕ್ಕಳಿಂದಲೂ ಅರಿತುಕೊಳ್ಳುತ್ತೇವೆ. ಏಕೆಂದರೆ ಇದು ತಂತ್ರಜ್ಞಾನ ಯುಗ. ಹೊಸ ಹೊಸ ಆವಿಷ್ಕಾರಗಳ ಅರಿವು ನಮಗಿಂತ ನಮ್ಮ ಮಕ್ಕಳಿಗೆ ಚೆನ್ನಾಗಿ ಗೊತ್ತಿರುತ್ತದೆ. ಏನಾದರೂ ತೆಗೆದುಕೊಳ್ಳಬೇಕೆಂದರೆ ಊರು ಸುತ್ತಿ ಶ್ರಮ ಪಟ್ಟು ತರೋ ರಿತಿ ನಮ್ಮದಾದರೆ, ಕ್ಷಣ ಮಾತ್ರದಲ್ಲಿ online ಮಾಯಾಂಗನೆ ಮೂಲಕ ತರಿಸುವ ಜಾಣ್ಣೆ ಈಗಿನವರದ್ದು. ಇವೆಲ್ಲದರ ಕುರಿತು ವಿವರಣೆ ನೀಡಿ ಹೆತ್ತವರಿಗೆ ಈಗಿನ ಮಕ್ಕಳೇ ಗುರುವಾಗುತ್ತಿದ್ದಾರೆ.
ಇವೆಲ್ಲವುಗಳ ಮದ್ಯ ಜೀವನದಲ್ಲಿ ಸಿಗುವ ಹಲವಾರು ಜನಗಳ ಒಡನಾಟದಲ್ಲಿ ನಮಗೆ ಅರಿವಿಲ್ಲದಂತೆ ಅನೇಕ ವಿಷಯಗಳ ಅರಿವು ನಮಗಾಗಿರುತ್ತದೆ. ಜೀವನದಲ್ಲಿ ಘಟಿಸುವ ಘಟನೆಗಳು ನಮ್ಮನ್ನೆ ನಾವು ಒರೆಗೆ ಹಚ್ಚಿ ಅನೇಕ ರೀತಿಯ ಪಾಠ ಕಲಿತು ನಮಗೆ ನಾವೇ ಗುರುವಾಗಿರುತ್ತೇವೆ. ನೆಂಟರು ಮತ್ತು ರಕ್ತ ಸಂಬಂಧಿಗಳಿಂದ ಕಷ್ಟದ ದಿನಗಳಲ್ಲಿ ಮನದಟ್ಟಾಗುವ ದೊಡ್ಡ ಪಾಠ. ಮುಖವಾಡ ಹೊತ್ತ ಎಷ್ಟೋ ಜನಗಳ ಒಳ ಮನಸ್ಸು ಇಂಥ ದಿನಗಳಲ್ಲಿ ಚೆನ್ನಾಗಿ ಅರಿವಾಗಿ ಜನರ ಮದ್ಯ ಹೇಗೆ ಬದುಕಬೇಕೆನ್ನುವ ಶಿಕ್ಷಣವದು. ಶಿಲ್ಪಿ ಶಿಲೆಯಲ್ಲೂ ಕಲೆ ಮೂಡಿಸಿ ಕಡೆದಿಟ್ಟ ಸುಂದರ ಮೂರ್ತಿ ಕೆತ್ತುವಂತೆ ಉಳಿಯ ಪೆಟ್ಟು ಬಿದ್ದಷ್ಟೂ ದೇಹ ಸೋತರೂ ಮನಸ್ಸು ಪಕ್ವವಾಗುವ ಹಂತ!
ಮನುಷ್ಯ ಹುಟ್ಟಿನಿಂದ ಸಾಯುವವರೆಗೂ ಏನಾದರೂ ಕಲಿತಾನೆ ಇರ್ತಾನೆ ಅದಕ್ಕೆ ಕೊನೆ ಇಲ್ಲ. ಯಾರು ಗುರು, ಯಾರು ಶಿಷ್ಯ ಅನ್ನುವುದಕ್ಕಿಂತ ಆಯಾ ಸಂದರ್ಭದಲ್ಲಿ ಕಲಿಯುವ ವಿಷಯಕ್ಕೆ ಸಂಬಂಧಪಟ್ಟಂತೆ ಗುರು ಶಿಷ್ಯರ ಸಮಾಗಮ ಜೀವನದ ಪ್ರತಿ ಕ್ಷಣ ನಡೆಯುತ್ತಲೆ ಇರುತ್ತದೆ ಅಲ್ಲವೆ? ಕಲಿತಷ್ಟೂ ಮುಗಿಯುವುದಿಲ್ಲ ಕಲಿಕೆ; ಕಲಿಕೆಗೆ ಕಾರಣರಾದ ಪ್ರತಿಯೊಬ್ಬರೂ ಗುರುವಿನ ಸ್ಥಾನಕ್ಕೆ ಅರ್ಹರಾಗಿರುತ್ತಾರೆ. ಜಗತ್ತೇ ಒಂದು ಪಾಠ ಶಾಲೆ ಇಲ್ಲಿ ಪ್ರತಿಯೊಬ್ಬರೂ ಗುರುಗಳು; ಪ್ರತಿಯೊಬ್ಬರೂ ವಿದ್ಯಾರ್ಥಿಗಳು. ವಯಸ್ಸಿನ ತಾರತಮ್ಯ ಇಲ್ಲ, ಜಾತಿ ಮತ ಭೇದವಿಲ್ಲ. ಕಲಿಕೆಗೆ ಎಲ್ಲರೂ ಒಂದೇ. ಗುರು ಸ್ಥಾನ ಶ್ರೇಷ್ಠ!
ಲೇಖನ ಮನಸ್ಸಿಗೆ ತುಂಬಾ ಹಿಡಿಸಿತು.
ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು ಸರ್