ಸ್ವಾತಂತ್ರ್ಯೋತ್ಸವ ವಿಶೇಷ ಸರಣಿ – ದಿನಕ್ಕೊಬ್ಬ ದೇಶಭಕ್ತರ ಸ್ಮರಣೆ
ದಿನ – 27:
‘ಮಾಸ್ಟರ್ ದಾ’ ಸೂರ್ಯ ಸೇನ್
– ರಾಮಚಂದ್ರ ಹೆಗಡೆ
ಬಂಗಾಳದ ಮತ್ತೊಬ್ಬ ಕ್ರಾಂತಿಕಿಡಿ, ಬ್ರಿಟಿಷರ ಎದೆ ನಡುಗಿಸಿದ ‘ಚಿತ್ತಗಾಂಗ್ ಶಸ್ತ್ರಾಗಾರ ದಾಳಿ’ ಯ ರೂವಾರಿ ಸೂರ್ಯ ಸೇನ್. ಜನರು, ಕ್ರಾಂತಿಕಾರಿ ಸಹವರ್ತಿಗಳು ಪ್ರೀತಿಯಿಂದ ಕರೆಯುತ್ತಿದ್ದ ಹೆಸರು ಮಾಸ್ಟರ್ ದಾ. ಪ್ರಸ್ತುತ ಬಾಂಗ್ಲಾದೇಶದಲ್ಲಿರುವ ಚಿತ್ತಗಾಂಗ್ ನ ಸುತ್ತಮುತ್ತಲಿನ ಪ್ರದೇಶದಲ್ಲಿ ಬ್ರಿಟಿಷರ ವಿರುದ್ಧ ದೊಡ್ಡಮಟ್ಟದ ಹೋರಾಟವನ್ನು ರೂಪಿಸುವಲ್ಲಿ ಸೂರ್ಯ ಸೇನ್ ರ ಪಾತ್ರ ಪ್ರಮುಖವಾದದ್ದು. ಬಿಎ ವಿದ್ಯಾರ್ಥಿಯಾಗಿದ್ದಾಗ ಭಾರತ ಸ್ವಾತಂತ್ರ್ಯ ಸಮರದ ಕುರಿತು ಅರಿತ ಸೇನ್, ಕ್ರಾಂತಿಕಾರಿ ಸಂಘಟನೆ ಅನುಶೀಲನ ಸಮಿತಿಯೆಡೆಗೆ ಆಕರ್ಷಿತರಾದರು. ೧೯೧೮ ರಲ್ಲಿ ಚಿತ್ತಗಾಂಗ್ ನಲ್ಲಿ ಶಿಕ್ಷಕನಾಗಿ ವೃತ್ತಿ ಆರಂಭಿಸಿದ ಸೇನ್ ಆರಂಭದಲ್ಲಿ ಗಾಂಧೀಜಿಯವರ ಅಸಹಕಾರ ಚಳುವಳಿಯ ಭಾಗವಾಗಿದ್ದರು. ಆದರೆ ಅದು ಮಧ್ಯದಲ್ಲೇ ಸ್ಥಗಿತವಾದಾಗ ಬೇಸರಗೊಂಡ ಸೇನ್ ಭಾರತದ ಸ್ವಾತಂತ್ರ್ಯಕ್ಕೆ ಕ್ರಾಂತಿಮಾರ್ಗವೇ ಸರಿ ಎಂದು ನಿಶ್ಚಯಿಸಿದರು. ಕ್ರಾಂತಿಕಾರಿ ಸಂಘಟನೆ ಯುಗಾಂತರದ ಕಾರ್ಯಕರ್ತನಾಗಿ ಕ್ರಾಂತಿಕಾರ್ಯದಲ್ಲಿ ತೊಡಗಿಸಿಕೊಂಡ ಅವರು ಚಿತ್ತಗಾಂಗ್ ಜಿಲ್ಲೆಯಾದ್ಯಂತ ಕ್ರಾಂತಿ ಚಟುವಟಿಕೆ ಪಸರಿಸುವಲ್ಲಿ ಹಾಗೂ ಕ್ರಾಂತಿಕಾರಿಗಳ ಬಹುದೊಡ್ಡ ಯುವಪಡೆಯನ್ನು ಕಟ್ಟುವಲ್ಲಿ ಅವಿರತವಾಗಿ ದುಡಿದರು.
೧೯೩೦ ರ ಹೊತ್ತಿಗೆ ಅವರ ಕ್ರಾಂತಿಪಡೆಯಲ್ಲಿ ದೇಶಕ್ಕಾಗಿ ಜೀವ ನೀಡಲಿಕ್ಕೆ ಸಿದ್ಧರಾದ ೭೫ಕ್ಕೂ ಹೆಚ್ಚು ತರುಣ ತರುಣಿಯರಿದ್ದರು. ಸೇನ್ ತಂಡದ ಗಣೇಶ್ ಘೋಷ್, ಅನಂತ ಸಿಂಹ, ನಿರ್ಮಲ್ ಸೇನ್, ಲೋಕನಾಥ ಬಲ್, ಅಂಬಿಕಾ ಚಕ್ರವರ್ತಿ, ಪ್ರೀತಿಲತಾ ವಡ್ಡೆದಾರ್, ಕಲ್ಪನಾ ದತ್ತ ಒಬ್ಬೊಬ್ಬರೂ ಕ್ರಾಂತಿಸಿಂಹಗಳೇ. ಸೂರ್ಯ ಸೇನ್ ಮತ್ತವರ ಕ್ರಾಂತಿ ಸೇನೆ ಗೆರಿಲ್ಲಾ ಯುದ್ಧದಲ್ಲಿ ಪರಿಣತವಾಗಿತ್ತು. ಬ್ರಿಟಿಷರನ್ನು ಬಗ್ಗುಬಡಿಯಲು ಅವರಿಗೆ ಅನುಕೂಲಕರವಾಗಿರುವ ಸಂಪರ್ಕ ಸಾಧನಗಳನ್ನೆಲ್ಲಾ ಕಡಿದುಹಾಕಬೇಕು ಎಂಬುದು ಅವರ ಮೊದಲ ಯೋಜನೆಯಾಗಿತ್ತು. ಆ ಹೊತ್ತಿಗಾಗಲೇ ಭಗತ್ ಸಿಂಗ್ ಸುಖದೇವ್ ರಾಜಗುರು ಅವರ ಬಲಿದಾನ ದೇಶದ ಕ್ರಾಂತಿಕಾರಿಗಳಿಗೆ ಹೊಸ ಸ್ಪೂರ್ತಿ ನೀಡಿತ್ತಲ್ಲದೇ, ದೇಶವನ್ನು ಬ್ರಿಟಿಷರ ಕಪಿಮುಷ್ಟಿಯಿಂದ ಬಿಡಿಸುವ ಕನಸನ್ನು ಉದ್ದೀಪನಗೊಳಿಸಿತ್ತು.
ಸೂರ್ಯ ಸೇನ್ ಅವರ ಕ್ರಾಂತಿಪಡೆ ಬ್ರಿಟಿಷರ ಮುಖ್ಯ ಆಯುಧ ಖಜಾನೆಯಾಗಿದ್ದ ಚಿತ್ತಗಾಂಗ್ ಶಸ್ತ್ರಾಗಾರವನ್ನು ಲೂಟಿ ಮಾಡುವ ಸಾಹಸಕ್ಕೆ ಕೈಹಾಕಿತು. ಅಂದು ಏಪ್ರಿಲ್ ೧೮, ೧೯೩೦. ಚಿತ್ತಗಾಂಗ್ ಶಸ್ತ್ರಾಗಾರಕ್ಕೆ ಮುತ್ತಿಗೆ ಹಾಕಿದ ಕ್ರಾಂತಿಕಾರಿಗಳು ಅದನ್ನು ತಮ ವಶಕ್ಕೆ ತೆಗೆದುಕೊಂಡರು. ಅಷ್ಟೇ ಅಲ್ಲ ರೈಲ್ವೆ, ಟೆಲಿಗ್ರಾಫ್, ಟೆಲಿಫೋನ್ ನೆಲೆಗಳ ಮೇಲೆ ದಾಳಿಮಾಡಿ ಅವನ್ನು ನಿಷ್ಕ್ರಿಯಗೊಳಿಸಿ ಜಗತ್ತಿನ ಸಂಪರ್ಕವನ್ನೇ ತಪ್ಪಿಸಿದರು. ಸೂರ್ಯಸೇನರ ನೇತೃತ್ವದಲ್ಲಿ ಶಸ್ತ್ರಾಗಾರದ ಮುಂದೆ ಕ್ರಾಂತಿಕಾರಿಗಳೆಲ್ಲರೂ ಸೇರಿ ಅಲ್ಲೇ ಭಾರತದ ರಾಷ್ಟ್ರಧ್ವಜ ಹಾರಿಸಿ ಚಿತ್ತಗಾಂಗ್ ಸ್ವತಂತ್ರ ಎಂದು ಘೋಷಿಸಲಾಯಿತು. ಇನ್ನೂ ಮೀಸೆ ಸರಿಯಾಗಿ ಮೂಡದ ತರುಣರ ಪಡೆ ಬ್ರಿಟಿಷ್ ಶಸ್ತ್ರಾಗಾರವನ್ನೇ ತಮ್ಮ ವಶಕ್ಕೆ ತೆಗೆದುಕೊಂಡಿದ್ದು ಬ್ರಿಟಿಷರಿಗೆ ದೊಡ್ಡ ಮುಖಭಂಗವಾಯಿತು ಹಾಗೂ ಈ ಸುದ್ದಿ ಲಂಡನ್ನಿನವರೆಗೆ ಸದ್ದು ಮಾಡಿತು. ನಂತರ ಜಲಾಲಾಬಾದ್ ಬೆಟ್ಟಗಳಲ್ಲಿ ನಡೆದ ಬ್ರಿಟಿಷರ ಎದುರಿನ ಹೋರಾಟಗಳಲ್ಲಿ ಅನೇಕ ಕ್ರಾಂತಿಕಾರಿಗಳು ಪ್ರಾಣಾರ್ಪಣೆ ಮಾಡಿದರು.
ಸೇನ್ ತಂಡದ ಪ್ರೀತಿಲತಾ ವಡ್ಡೆದಾರ್ ಯೂರೋಪಿಯನ್ ಕ್ಲಬ್ ಗೆ ದಾಳಿ ಮಾಡಿ ಮೃತ್ಯವಶಳಾದಳು. ಸೂರ್ಯ ಸೇನ್ ಮಾರುವೇಷಗಳಲ್ಲಿ ಅಲೆದಾಡುತ್ತಾ ಕ್ರಾಂತಿ ಚಟುವಟಿಕೆ ಮುಂದುವರೆಸಿದ್ದರು. ಅವರಿಗಾಗಿ ಭಾರಿ ಹುಡುಕಾಟ ನಡೆದಿತ್ತು. ಬ್ರಿಟಿಷರು ನೀಡಿದ ದುಡ್ಡಿನ ಆಸೆಗೆ ಬಿದ್ದ ‘ನೇತ್ರ ಸೇನ್’ ಮಾಸ್ಟರ್ ದಾ ಅವರ ಸುಳಿವು ನೀಡಿ ಬಂಧನಕ್ಕೆ ಕಾರಣವಾದ. ಅವರನ್ನು ಗಲ್ಲಿಗೇರಿಸುವ ಮುನ್ನ ಸೂರ್ಯ ಸೇನರನ್ನು ಅಮಾನುಷವಾಗಿ ಹಿಂಸಿಸಲಾಯಿತು. ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಸೇನರ ಹಲ್ಲುಗಳನ್ನು ಹ್ಯಾಮರ್ ನಿಂದ ಹೊಡೆದು ಉಗುರುಗಳನ್ನು ಕಿತ್ತು ಕೈಕಾಲುಗಳ ಕೀಲುಗಳನ್ನು ಮುರಿದು ಅತ್ಯಂತ ಪೈಶಾಚಿಕವಾಗಿ ಅವರನ್ನು ೧೨ ಜನವರಿ ೧೯೩೪ ರಂದು ಗಲ್ಲಿಗೇರಿಸಲಾಯಿತು. ಅವರು ಸತ್ತಮೇಲೂ ಸುಮ್ಮನಾಗದ ನೀಚ ಬ್ರಿಟಿಷರು ಅವರ ಶವವನ್ನು ಸಮುದ್ರಕ್ಕೆ ಎಸೆದು ಸೇಡು ತೀರಿಕೊಂಡಿತು.
ಸಾವಿಗೂ ಮುಂಚೆ, ಸೂರ್ಯ ಸೇನ್ ತನ್ನ ತಂಡದ ಯುವಕರಿಗೆ ಪತ್ರವೊಂದನ್ನು ಬರೆದಿದ್ದರು..”ಸಾವು ನನ್ನನ್ನು ಆಲಂಗಿಸುತ್ತಿದೆ, ನಾನು ಅನಂತದೆಡೆಗೆ ಹೊರಟಿದ್ದೇನೆ. ಮಾತೃಭೂಮಿಗಾಗಿ ಪ್ರಾಣ ನೀಡುತ್ತಿರುವ ಈ ಸೌಭಾಗ್ಯದ ಸಂದರ್ಭದಲ್ಲಿ ನಾನು ನಿಮಗೆ ಕೊಡಬಹುದಾದ್ದು ‘ಸ್ವತಂತ್ರ ಭಾರತ’ ಕಾಣುವ ಬಂಗಾರದಂತಹ ಕನಸನ್ನು ಮಾತ್ರ. ಗುಲಾಮಿ ದಿನಗಳು ಕೊನೆಯಾಗುವ ಹೊತ್ತು ಹತ್ತಿರದಲ್ಲೇ ಇದೆ, ಅದೋ ಅಲ್ಲಿ ಸ್ವಾತಂತ್ರ್ಯದ ಬೆಳಕು ಕಾಣುತ್ತಿದೆ, ಹಿಂದಡಿಯಿಡದೆ ಮುನ್ನುಗ್ಗಿ, ಸ್ವತಂತ್ರ ಭಾರತದ ಕನಸು ನನಸಾಗಲಿ”. ಸೂರ್ಯ ಸೇನ್ ರ ಬಲಿದಾನ ಮುಂದೆ ಸ್ವಾತಂತ್ರ್ಯ ಸೂರ್ಯನ ಉದಯಕ್ಕೆ ನಾಂದಿ ಹಾಡಿತು. ಅವರು ಕಂಡ ಸ್ವಾತಂತ್ರ್ಯದ ಕನಸು ೧೩ ವರ್ಷಗಳ ನಂತರ ನನಸಾಯಿತು.