ಪ್ರತಿಭಟನೆಯನ್ನೂ ಅಪರಾಧವನ್ನೂ ಏಕೆ ಸಮೀಕರಿಸುತ್ತೀರಿ ಮಾಧ್ಯಮಗಳೇ?
– ವಿನಾಯಕ ಹಂಪಿಹೊಳಿ

ಮಾಧ್ಯಮಗಳು, ಕನ್ನಡಿಗರಿಗೆ ಇದ್ದ ಆಕ್ರೋಶಕ್ಕೂ, ಇಂಥ ಅನೈತಿಕ ಕ್ರಿಯೆಗಳಿಗೂ ಸಂಬಂಧವನ್ನು ಕಲ್ಪಿಸಿದರು. ಹಿಂಸೆಯನ್ನೇ, ಆಕ್ರೋಶದ ಅಭಿವ್ಯಕ್ತಿ ಎಂಬಂತೆ ಬಿಂಬಿಸಿದರು. ತೀರ್ಪಿನಿಂದ ದುಃಖತಪ್ತರಾದ ಪ್ರತಿಭಟನಾಕಾರರಿಗೂ, ಹಿಂಸೆಯಿಂದ ವಿಕೃತ ಸುಖ ಅನುಭವಿಸುತ್ತಿದ್ದ ಅಪರಾಧಿಗಳಿಗೂ ವ್ಯತ್ಯಾಸವೇ ಕಾಣಲಿಲ್ಲವೇ ನಮ್ಮ ಮಾಧ್ಯಮಗಳಿಗೆ? ಇದು ಪ್ರವಾಸಿಗರಿಗೆ ಮತ್ತು ಹೊರಗಿನವರಿಗೆ ಬೆಂಗಳೂರಿನ ಮತ್ತು ಕರ್ನಾಟಕದ ಜನರ ಬಗ್ಗೆ ತಪ್ಪು ಚಿತ್ರಣವನ್ನು ಕಟ್ಟಿ ಕೊಟ್ಟಿತು ಎಂದು ಹೇಳದೇ ವಿಧಿಯಿಲ್ಲ.
ಪ್ರತಿಭಟನೆಯ ಸಂದರ್ಭದಲ್ಲಿ ತಮಿಳು ಅಜ್ಜಿಯೊಂದನ್ನು ರಕ್ಷಿಸಿದ್ದು, ಕೆಲವು ಮಹಿಳೆಯರನ್ನು ಅಲ್ಲಿಂದ ಸುರಕ್ಷಿತ ಪ್ರದೇಶಕ್ಕೆ ಸಾಗಿಸಿದ್ದು, ಹೀಗೆ ಅನೇಕ ಪ್ರಕರಣಗಳು ಈ ಮಾಧ್ಯಮಗಳ ಕ್ರೌರ್ಯದ ವೈಭವೀಕರಣದಲ್ಲಿ ಸಮಾಧಿಯಾಗಿ ಹೋದವು. ಬಹುಶಃ ನೀವೂ ಕೂಡ ನಿಮ್ಮ ತಮಿಳು ಮಿತ್ರರ ಮತ್ತು ಸಹೋದ್ಯೋಗಿಗಳ ಸುರಕ್ಷತೆಯ ಕುರಿತು ಕಾಳಜಿ ಮಾಡಿಯೇ ಮಾಡಿರುತ್ತೀರಿ. ಅದೇ ನಮ್ಮೆಲ್ಲರ ನಿಜವಾದ ಗುಣ. ನಿಮ್ಮ ಪಕ್ಕದ ಮನೆಯ ತಮಿಳು ಆಂಟಿಗೆ ದಿನನಿತ್ಯದ ಅಗತ್ಯ ಸಾಮಾನುಗಳನ್ನು ತಂದು ಕೊಟ್ಟಿರಬಹುದು. ಅಥವಾ ನಿಮ್ಮ ಮಿತ್ರನಿಗೆ “ನಿನ್ನ TN ಗಾಡಿ ಒಳಗಿಡು. ನನ್ನ KA ಗಾಡಿ ತೊಗೊ” ಎಂದಿರಬಹುದು. ಇನ್ನೂ ಹಲವಾರು ರೀತಿಯಲ್ಲಿ ಸಹಾಯ ಮಾಡಿರಬಹುದು. ವಾಸ್ತವದಲ್ಲಿ, ಬೆಂಗಳೂರಿನಲ್ಲಿರುವ ಲಕ್ಷಗಟ್ಟಲೇ ಕನ್ನಡಿಗರು ತಮಿಳಿಗರ ಜೊತೆ ಕಳೆದೆರಡು ದಿನಗಳಲ್ಲಿ ವರ್ತಿಸಿದ್ದು ಹೀಗೆಯೇ. ಜಗತ್ತಿಗೂ ಅದೇ ಗುಣವೇ ಪರಿಚಯವಾಗಬೇಕಿತ್ತು. ಆದರೆ ಆದದ್ದೇನು?
ನನ್ನ ಅನಿಸಿಕೆ ಏನೆಂದರೆ ಪ್ರತಿಭಟನೆಯ ದಿನಗಳಲ್ಲಿ ಮಾಧ್ಯಮಗಳು ಮಾಡಿದ್ದು “ಅಪರಾಧದ ಐಡಿಯಾಲಜಿ“. ನಡೆಯುತ್ತಿರುವದು ಅನೈತಿಕ ಎಂಬುದರ ಪರಿಜ್ಞಾನವಿದ್ದರೂ, ಅಂತಹ ಕಾರ್ಯಕ್ಕೆ ಒಂದಾನೊಂದು ಐಡಿಯಾಲಜಿ ಹಚ್ಚಿ, ಅದನ್ನು ಸಮರ್ಥಿಸಿಕೊಳ್ಳಲು ಯೋಗ್ಯವಾಗಿಸುವ ಪ್ರಕ್ರಿಯೆಯೇ ಅಪರಾಧದ ಐಡಿಯಾಲಜಿ. ನಮ್ಮ ಬುದ್ಧಿಜೀವಿಗಳು ನಕ್ಸಲರ ಕ್ರೌರ್ಯಗಳನ್ನು ಹೀಗೆ ಶೋಷಣೆಯ ಐಡಿಯಾಲಜಿ ಹಿಡಿದುಕೊಂಡು ಸಮರ್ಥಿಸಿಕೊಳ್ಳುತ್ತಾರೆ. ಮುಸ್ಲಿಮರು ಇಸ್ಲಾಮಿನ ಐಡಿಯಾಲಜಿ ಇಟ್ಟುಕೊಂಡು ಭಯೋತ್ಪಾದಕರನ್ನು ಸಮರ್ಥಿಸಿಕೊಳ್ಳುತ್ತಾರೆ. ಅದೇ ಕೆಲಸ ನಮ್ಮ ಮಾಧ್ಯಮಗಳು, ಕಳೆದ ಎರಡು ದಿನಗಳಲ್ಲಿ ಮಾಡಿವೆ. ಎಲ್ಲಾ ಮಾಧ್ಯಮಗಳೂ ಮಾಡಿವೆ. ತಮಿಳುನಾಡಿನ ಲಾರಿಗೆ ಬೆಂಕಿ ಹಚ್ಚುವಂಥ ಅಪರಾಧಗಳನ್ನು “ತೀರ್ಪಿನ ವಿರುದ್ಧದ ಆಕ್ರೋಶ” ಎಂದು ಪುನರ್ವ್ಯಾಖ್ಯಾನ ಮಾಡಿದರು. ತನ್ಮೂಲಕ ಆ ಕ್ರಿಯೆಗಳು ಸಮರ್ಥನೀಯವಾಗಿ ಬಿಟ್ಟವು. ಅಷ್ಟೇ ಅಲ್ಲ ಪ್ರತಿಭಟನೆ ಎಂದ ಮೇಲೆ ಇವೆಲ್ಲ ಸಾಮಾನ್ಯ ಎಂಬ ಭಾವವನ್ನು ಬಿಂಬಿಸಿದವು. ಒಂದು ಅಪರಾಧವು ಸಮರ್ಥನೀಯವಾದ ಮೇಲೆ ಅದೇ ರೀತಿಯ ಉಳಿದ ಅಪರಾಧಗಳಿಗೂ ಅದು ಪ್ರಚೋದನೆಯಾಯಿತು. ಯಾರೆಲ್ಲ ನ್ಯಾಯಾಲಯದ ತೀರ್ಪಿನ ವಿರುದ್ಧ ಆಕ್ರೋಶಗೊಂಡಿದ್ದರೋ ಅವರಿಗೆಲ್ಲ ಇದು ಸಮರ್ಥನೀಯವೆನಿಸತೊಡಗಿದ್ದರಿಂದ ಹಿಂಸೆಯು ಕ್ಷಿಪ್ರವಾಗಿ ವ್ಯಾಪಿಸಿತು.
ಲಾರಿಗೆ ಕಲ್ಲು ಒಗೆಯುತ್ತಿರುವದನ್ನು ಪದೇ ಪದೇ ತೋರಿಸಿ “ಇಲ್ಲಿ ನೋಡಿ ಆಕ್ರೋಶ, ಇಗೋ ನೋಡಿ ಪ್ರತಿಭಟನೆ” ಎಂದು ಆರ್ಭಟಿಸುವ ಬದಲು ಅದನ್ನೊಂದು ಅನೈತಿಕ, ಸಮಾಜ ಘಾತುಕ ಹಿಂಸೆ ಎಂದು ನೋಡಿದ್ದರೆ, ಬಹುಶಃ ಗೃಹ ಇಲಾಖೆಯನ್ನು ಮುಂಚೆಯೇ ಕಾರ್ಯಪ್ರವೃತ್ತವಾಗುವಂತೆ ಪ್ರೇರೇಪಿಸಬಹುದಿತ್ತು. ಕನ್ನಡಿಗರ ಮತ್ತು ಇಲ್ಲಿನ ನಟರ ಬಗ್ಗೆ ಅವಹೇಳನವಾಗಿ ಬರೆದವನ ಕುರಿತು ಕಾನೂನಾತ್ಮಕವಾಗಿ ಹೋರಾಡುವ ಬದಲು, ಅವರೇ ಕಾನೂನನ್ನು ಕೈಗೆ ತೆಗೆದುಕೊಂಡಿದ್ದನ್ನು ಯಾವ ಮಾಧ್ಯಮವೂ ವಿರೋಧಿಸಲೇ ಇಲ್ಲವಲ್ಲ? ಎರಡೂ ಕ್ರಿಯೆಗಳನ್ನು `ಸಂವಿಧಾನ ಬಾಹಿರ’ ಎಂದು ತಟಸ್ಥವಾಗಿ ಕಾಣಬೇಕಿದ್ದ ನಮ್ಮ ಮಾಧ್ಯಮಗಳು ಮೊದಲನೇ ಕ್ರಿಯೆಯನ್ನು “ತಮಿಳು ಹುಡುಗನ ಉದ್ಧಟತನ” ಎಂದೂ ಮತ್ತು ಅದರ ಪ್ರತಿಕ್ರಿಯೆಯನ್ನು “ಆ ಉದ್ಧಟತನಕ್ಕೆ ಕನ್ನಡಿಗರ ತಕ್ಕ ಪಾಠ” ಎಂದು ಪುನರ್ವ್ಯಾಖ್ಯಾನ ಮಾಡಿದರು. ಕಾನೂನಾತ್ಮಕವಾಗಿ ಕಲಿಸುವ ಪಾಠವು, ಪಾಠವಲ್ಲವೇ? ಹೋಗಿ ತಲೆಗೆ ಹೊಡೆದು, ವಿಡಿಯೋ ತೆಗೆದು, ವೈಭವೀಕರಿಸಿಕೊಳ್ಳುವದಷ್ಟೇ ಪಾಠವಾಯಿತೇ ನಮ್ಮ ಮಾಧ್ಯಮಗಳಿಗೆ?
ಇವೆಲ್ಲ ಅಂಶಗಳು, ತಮಿಳುನಾಡಿನಲ್ಲಿ ನಡೆದ ಬೆಳವಣಿಗೆಗಳಿಗೂ ಅನ್ವಯಿಸುತ್ತದೆ. ಅಲ್ಲಿಯೂ ಸಹಸ್ರಾರು ಕನ್ನಡಿಗರಿದ್ದಾರೆ. ಅವರಿಗೆ ಅಲ್ಲಿರುವ ಲಕ್ಷಾಂತರ ತಮಿಳು ಮಿತ್ರರು ನಮ್ಮಂತೆಯೇ ಸಹಾಯ ಮಾಡಿ, ಅವರಿಗೆ ಸುರಕ್ಷಾ ಭಾವನೆಯನ್ನುಂಟು ಮಾಡುವಲ್ಲಿ ಶ್ರಮಿಸಿರುತ್ತಾರೆ. ಇವುಗಳೂ ಕೂಡ ಅಲ್ಲಿನ ಮಾಧ್ಯಮದ ಕಣ್ಣುಗಳಿಗೆ ಕಾಣುವದೇ ಇಲ್ಲ. ಅವುಗಳಿಗೂ ಕಾಣುವದು ಕನ್ನಡದ ಬಸ್ಸುಗಳ ಮೇಲೆ, ಕನ್ನಡಿಗರ ಮೇಲೆ ಅಲ್ಲಿನ ಅಪರಾಧಿಗಳು ನಡೆಸಿದ ಅಪರಾಧಗಳಷ್ಟೇ. ಆ ಮಾಧ್ಯಮಗಳೂ ಕೂಡ ಆ ಅಪರಾಧಗಳನ್ನು “ಆಕ್ರೋಶ” ಎಂದೇ ಪುನರ್ವ್ಯಾಖ್ಯಾನಿಸಿರುತ್ತಾರೆ. “ಬೆಂಗಳೂರಿನಲ್ಲಿ ತಮಿಳರ ಮೇಲೆ ಕನ್ನಡಿಗರು ಮಾಡಿರುವ ದೌರ್ಜನ್ಯದ ವಿರುದ್ಧದ ಆಕ್ರೋಶ” ಎಂದು ಆ ಘಟನೆಗಳನ್ನು ಅವರೂ ಸಮರ್ಥಿಸಿಕೊಂಡಿರುತ್ತಾರೆ. ಇದು ತಮಿಳಿಗರ ಕುರಿತು ತಪ್ಪು ಚಿತ್ರಣವನ್ನು, ನಮ್ಮಲ್ಲಿ ಮತ್ತು ಉಳಿದವರಲ್ಲಿ ಕಟ್ಟಿಕೊಡುತ್ತದೆ. ಅವರ ಅಪರಾಧಗಳನ್ನು ನೆಪ ಮಾಡಿಕೊಂಡು ,ಇಲ್ಲಿ ಅಪರಾಧ ನಡೆಸುತ್ತಾರೆ. ಇಲ್ಲಿನ ಅಪರಾಧಗಳನ್ನು ನೆಪಮಾಡಿಕೊಂಡು, ಅವರು ಅಪರಾಧಗಳನ್ನು ನಡೆಸುತ್ತಾರೆ. ಇಷ್ಟರ ಮೇಲೆ ಎರಡೂ ರಾಜ್ಯಗಳ ಮಾಧ್ಯಮಗಳು ಮಾಡಿರುವ “ಪರ ಭಾಷಿಕರ ಉದ್ಧಟತನ“, “ನಮ್ಮ ಜನರ ತಕ್ಕ ಪಾಠ” ಎಂಬ ಪುನರ್ವ್ಯಾಖ್ಯಾನಗಳು ಬೇರೆ. ಎರಡೂ ರಾಜ್ಯಗಳ ಮಾಧ್ಯಮಗಳಿಗೂ ಇದು ಅನ್ವಯ.
ಈ ಕಾರಣಕ್ಕಾಗಿಯೇ, ಅಹಿಂಸೆಯನ್ನು ಇಷ್ಟ ಪಡುವ ಎರಡೂ ರಾಜ್ಯಗಳ ಬಹುಪಾಲು ಜನರು, “ಈ ಮಾಧ್ಯಮಗಳಿಂದಲೇ ಹಿಂಸೆ ಹೆಚ್ಚಿತು“, “ಮಾಧ್ಯಮಗಳನ್ನು ಎರಡು ದಿನ ಸ್ಥಗಿತಗೊಳಿಸಬೇಕು“, “ಮಾಧ್ಯಮಗಳಿಲ್ಲದಿರುವ ಮನೆಯೇ, ಸದ್ಯಕ್ಕೆ ಹೆಚ್ಚು ಸುರಕ್ಷಿತ ಹಾಗೂ ನೆಮ್ಮದಿಯ ತಾಣ” ಎಂದೆಲ್ಲ ತಮ್ಮ ಅಭಿಪ್ರಾಯವನ್ನು, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರು. ಮೇಲ್ನೋಟಕ್ಕೆ ಇವರೆಲ್ಲ ಹೀಗೇಕೆ ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯದ ವಿರುದ್ಧವಾಗಿ ಮಾತಾಡುತ್ತಿದ್ದಾರೆ ಎನಿಸಬಹುದು. ಆದರೆ ಅವರು ವಾಸ್ತವವಾಗಿ ಮಾಧ್ಯಮಗಳ `ಅಭಿವ್ಯಕ್ತಿ ಸ್ವಾತಂತ್ರ್ಯದ’ ವಿರುದ್ಧ ಮಾತಾಡುತ್ತಿಲ್ಲ. ನನ್ನ ಅನಿಸಿಕೆ ಪ್ರಕಾರ ಅವರು ಈ ಅಪರಾಧಗಳನ್ನು ಪುನರ್ವ್ಯಾಖ್ಯಾನಿಸಿ ಅಂಥ ಕ್ರಿಯೆಗಳನ್ನು ಸಮರ್ಥನೀಯವನ್ನಾಗಿಸುವ ಪ್ರಕ್ರಿಯೆಯನ್ನು ವಿರೋಧಿಸಿರುತ್ತಾರೆ. ಏಕೆಂದರೆ ಈ ಪುನರ್ವ್ಯಾಖ್ಯಾನದ ಪ್ರಕ್ರಿಯೆ ಒಂದು ಜನ ಸಮುದಾಯದ ಕುರಿತು ತೀರ ತಪ್ಪು ಅಭಿಪ್ರಾಯವನ್ನು ಸೃಷ್ಟಿಸುತ್ತಿರುತ್ತದೆ. ಅದು ಆ ಸಮುದಾಯದ ಜನರ ಸಹಜ ಸ್ವಭಾವಕ್ಕೆ ಸಂಪೂರ್ಣ ವಿರುದ್ಧವಾಗಿರುತ್ತದೆ.
ಎರಡೂ ರಾಜ್ಯದ ರಾಜಕಾರಣಿಗಳು ತಮ್ಮದೇ ಅನುಯಾಯಿಗಳನ್ನು ಸಾಕಿಕೊಂಡಿರುತ್ತಾರೆ. ಇಂಥ ಪರಿಸ್ಥಿತಿಗಳಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಇಂಥವರನ್ನು ಹಿಂಸಾತ್ಮಕ ಕ್ರಿಯೆಗಳಲ್ಲಿ ತೊಡಗಿಸುತ್ತಾರೆ. ಭಾಷೆಯ ಐಡಿಯಾಲಜಿ ಹಿಡಿದುಕೊಂಡು “ಆ ಭಾಷಿಕರಿಂದ ಅನ್ಯಾಯವಾಗಿದೆ. ಅವರ ವಾಹನಗಳನ್ನು ಸುಟ್ಟು ಹಾಕಿ. ಆ ಭಾಷಿಕರನ್ನುಹೊಡೆಯಿರಿ” ಎಂದು ಅವರು ಮಾಡಬೇಕಾಗಿರುವ ಅಪರಾಧವನ್ನು ಸಮರ್ಥನೀಯವಾಗಿಸುತ್ತಾರೆ. ಇವರಿಗೆ ತೀರ್ಪಿನ ವಿರುದ್ಧದ ನೋವಾಗಲೀ, ದುಃಖವಾಗಲೀ ಇರುವದಿಲ್ಲ. ಅವರು ಒಗೆಯುವ ಕಲ್ಲು, ಹೊಡೆಯುವ ಕೋಲು, ಗೀರುವ ಕಡ್ಡಿಗಳ ಮೇಲೆ ಅವರಿಗೆ ಸಿಗುವ ಹಣವು ನಿರ್ಧಾರವಾಗಿರುತ್ತದೆ. ಹೀಗಾಗಿಯೇ ಅವರಿಗೆ ಇಂಥ ಕ್ರಿಯೆಗಳಲ್ಲಿ ವಿಕೃತ ಸುಖ ದೊರೆಯುತ್ತಿರುತ್ತದೆ. ಇವರೆಲ್ಲ ಸಿಕ್ಕಿಬಿದ್ದರೆ ಎರಡು ದಿನಗಳ ನಂತರ ತಮ್ಮ ಪ್ರಭಾವ ಬೀರಿ ಬಿಡಿಸಿಕೊಳ್ಳುತ್ತಾರೆ. ಆದರೆ ಇವರನ್ನು ನೋಡಿ ಅಮಾಯಕರು, ಜನಸಾಮಾನ್ಯರು ಅದೇ ಕೆಲಸದಲ್ಲಿ ತೊಡಗುತ್ತಾರೆ. ತಮ್ಮ ಭವಿಷ್ಯ ಹಾಳುಮಾಡಿಕೊಳ್ಳುತ್ತಾರೆ. ಮಾಧ್ಯಮದವರು ಈ ಸಮಾಜ ಘಾತುಕ ಅಪರಾಧಿಗಳ ಜಾಲವನ್ನು ಭೇದಿಸುವ ಬದಲು ಅವರ ಹಿಂಸೆಯನ್ನೇ ವೈಭವೀಕರಿಸಿ ಸಮರ್ಥನೀಯವಾಗುವಂತೆ ಪುನರ್ವ್ಯಾಖ್ಯಾನಿಸುತ್ತಾರೆ. ಹೀಗೆ ಸಮಾಜದ ಕುರಿತು ತಪ್ಪು ಅಭಿಪ್ರಾಯವನ್ನು ಮೂಡಿಸುತ್ತಾರೆ.
Dear Sri Hampiholi and my fellow readers, really an excellent article; an eye opener. But media and judiciary have no eyes. I want to add one more `interesting’ point here. Have you observed the banner heading in today’s newspapers? `Sahaja Stitige Bengaluru.’ `Bangalore back to Normalcy. In fact it may take another 200 years to mend the broken relations – thanks to barbaric governments, insensitive judiciary and media. What is normalcy? `Today there are no burning tyres on the road! No mutilated, bleeding, unclaimed human bodies on Bangalore road?!’ Is that all that go to make normalcy? Reporters need a brain-storming session. If anyone says Bangalore is normal today he must be rogue! Thank you.
ಸದಾಕಾಲ ‘ಒಂದುಕೋಮಿನ’ ಬಗ್ಗೆ ಬಹಳ ಸಹಾನುಭೂತಿ ತೋರಿಸುವ, ಏಕಮುಖಿ ಚಿಂತನೆಯನ್ನು ಪ್ರೋತ್ಸಾಹಿಸುವ ‘ಫೋಟೋ ಷಾಪ್’ ವಾಣಿಯಲ್ಲೂ ಕೂಡ ಸರಿಸುಮಾರು ಇದೇ ಅರ್ಥ ಬರುವ ಅಂಕಣವೊಂದು ಪ್ರಕಟವಾಗಿದೆ. ಇದೊಂದು ಆಹ್ಲಾದಕರ ಬದಲಾವಣೆ ಎನ್ನಬಹುದು.