ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 14, 2016

ಸಾಧಕರ ಹೆಸರಲ್ಲಿ ಅಸ್ಮಿತೆಯ ಹುಡುಕಾಟ

‍ನಿಲುಮೆ ಮೂಲಕ

– ಡಾ.ಬಿ.ವಿ.ವಸಂತ ಕುಮಾರ್

basavannaಭಾರತ ದೇಶ ಪ್ರಪಂಚದ ಒಂದು ವಿಶಿಷ್ಟ ದೇಶ. ಭಾರತದ ಬದುಕಿನ ದಾರಿಗಳನ್ನು ಇಲ್ಲಿನ ಮಹಾತ್ಮರು ನಿರ್ಮಿಸಿದ್ದಾರೆ. ಕಾಡಿನಿಂದ ಒಡಮೂಡಿದ ಈ ದಾರಿಗಳೆಡೆಗೆ ನಗರ ಮಹಾನಗರಗಳ ಜನರು ಮುಖಮಾಡಿದ್ದನ್ನೂ, ಮಾಡುತ್ತಾ ಇರುವುದನ್ನೂ, ಮುಂದೆ ಮಾಡುವುದನ್ನೂ ನೋಡಬಹುದು. ಇವರೇ ನಿಜವಾದ ರಾಷ್ಟ್ರ ನಿರ್ಮಾಪಕರು, ಸಂಸ್ಕೃತಿ ಸೃಷ್ಟಿಕರ್ತರು, ಕಲ್ಯಾಣದ ಮಹಾಕನಸುಗಾರರು. ಇಂಥವರನ್ನು ಸಂತರು, ಮಹಂತರು, ಶರಣರು, ಋಷಿಮುನಿಗಳು, ದಾರ್ಶನಿಕರು ಎಂದೆಲ್ಲ ಕರೆಯುತ್ತಾರೆ. ಅವರನ್ನು ಸಮಾಜದ ಜನ ಸದಾ ತಮ್ಮ ಬಾಳಿಗೆ ಆದರ್ಶದ ನಂದಾದೀವಿಗೆಯನ್ನಾಗಿಸಿಕೊಂಡಿದ್ದಾರೆ. ಅವರನ್ನು ಗುರುವೆಂದು ಸ್ವೀಕರಿಸಿ ತಾವು ಭಕ್ತರಾಗಿ ಗುರು-ಶಿಷ್ಯ ಪರಂಪರೆಯ ಆಧ್ಯಾತ್ಮಕ್ಕೂ ಅನುಭವಕ್ಕೂ ಕಾರಣರಾಗಿದ್ದಾರೆ.

ಇಂಥ ಸಂತ-ಮಹಂತರಿಗೆ ಜಾತಿಯಿಲ್ಲ, ಮತವಿಲ್ಲ, ಯಾವುದೇ ಭೇದ-ಭಾವಗಳ ಹಂಗಿಲ್ಲ. ಅಪ್ಪಟ ಮನುಷ್ಯನಾಗಲು ಹಂಬಲಿಸಿದವರು ಸಾಕಷ್ಟು ದುಃಖ ದುಮ್ಮಾನ ಅವಮಾನಗಳನ್ನು ಅನುಭವಿಸಿ ಸಂಕಟಗಳ ನಡುವೆಯೇ ಋಷಿಗಣದವರು, ರಾಜಋಷಿಗಣದವರು ಭಾರತೀಯಸಮಾಜದ ಜನಮಾನಸದ ಅಧಿದೈವಗಳಾಗಿದ್ದಾರೆ. ‘ಅರಮನೆಯ ಮೇಲೆ ಗುರುಮನೆ ರಾಜದಂಡದ ಮೇಲೆ ಗುರು ಕೂಡ’ ಎಂಬುದು ನಮ್ಮ ರಾಷ್ಟ್ರದ ಆದರ್ಶ ಪರಂಪರೆ. ಗುರುವೆಂದರೆ ಬ್ರಾಹ್ಮಣ, ಬ್ರಾಹ್ಮಣನೆಂದರೆ ಬ್ರಹ್ಮಜ್ಞಾನವನ್ನು ಅರಿತವ. ಅವನು ದ್ವಿಜನೇ ಹೊರತು ಏಕಜ ಅಲ್ಲ. ದ್ವಿಜ ಎಂದರೆ ಎರಡು ಬಾರಿ ಹುಟ್ಟಿರುವವನು ಎಂದರ್ಥ. ಮೊದಲ ಜನ್ಮ ತಾಯಿಯ ಗರ್ಭದಿಂದ ಆದದ್ದು, ಎರಡನೆಯ ಜನ್ಮ ಗುರುವಿನ ಕರಕಮಲದಿಂದ ಆದದ್ದು. ಆದ್ದರಿಂದ ಭಾರತದಲ್ಲಿ ಅಸ್ಪೃಶ್ಯರು, ಶೂದ್ರರು, ವೈಶ್ಯರು, ಕ್ಷತ್ರಿಯರು, ಬ್ರಾಹ್ಮಣರು ಮೊದಲಾದವರಲ್ಲಿ ಹುಟ್ಟಿಬಂದವರು ಬ್ರಾಹ್ಮಣರಾಗಿದ್ದಾರೆ, ಗುರುಗಳಾಗಿದ್ದಾರೆ, ಭಾರತದ ಬ್ರಹ್ಮಜ್ಞಾನದ ವಾರಸುದಾರರಾಗಿದ್ದಾರೆ. ಸ್ವಾರ್ಥವನ್ನು ಮೀರಿ, ಪ್ರಾಮಾಣಿಕತೆಯನ್ನು ಏರಿ ನಡೆನುಡಿಗಳಲ್ಲೊಂದಾಗಿ ಬದುಕಿ ಮಾನವನ ಕತ್ತಲೆಯನ್ನು ದೂರಗೊಳಿಸುತ್ತಾ ಬಂದಿದ್ದಾರೆ. ತ್ಯಾಗ, ಬಲಿದಾನಗಳಿಂದ ಮಹಾತ್ಮರೆನಿಸಿದ್ದಾರೆ. ಹಾಗಾಗಿ ಅವರ ಜಯಂತಿ, ಜಾತ್ರೆ, ಹಬ್ಬ  ಹರಿದಿನಗಳ ಮೂಲಕ ಅವರು ಸಾರಿದ ತತ್ತ್ವವನ್ನು ಗೌರವಿಸಲಾಗುತ್ತದೆ.

ಸಂತರು, ಮಹಂತರು, ಶರಣರು, ದಾಸರು, ರಾಜರ್ಷಿ, ಮಂತ್ರರ್ಷಿಗಳಿಗೆ ಯಾವುದೇ  ಜಾತಿ, ಮತ, ಲಿಂಗ, ವಯಸ್ಸು, ಬಣ್ಣ, ಭಾಷೆ, ಅಂತಸ್ತುಗಳ ಹಂಗಿಲ್ಲ. ಹಂಗಿಲ್ಲದ ಅರಮನೆಯ ಚಿರಂತನ ಬೆಳಕಿನ ಅರಸುಗಳು ಅವರು. ಹಾಗಾಗಿಯೇ ‘‘ಋಷಿ ಮೂಲ, ನದಿಮೂಲ ಹುಡುಕಬೇಡ’’ ಎಂಬ ಗಾದೆ ಮಾತಿದೆ. ಹುಡುಕಬಾರದೆಂದರೂ ಕೆಲವೊಮ್ಮೆ ಹುಡುಕುವ ಸಾಮಾಜಿಕ ಅನಿವಾರ್ಯತೆಗಳೂ ಇವೆ. ಋಷಿಮೂಲವನ್ನು ನಾವು ಹುಡುಕಬೇಕಾದದ್ದು ನಾವು ಋಷಿಗಳಾಗಬೇಕೆಂದೇ ಹೊರತು, ಋಷಿಗಳನ್ನು ನಾವು ನಮ್ಮ ಮಟ್ಟಕ್ಕೆ ಇಳಿಸುವುದಕ್ಕಾಗಿ ಅಲ್ಲ. ಋಷಿಗಳ ಮೂಲವನ್ನು ಹುಡುಕಬೇಕಾದದ್ದು ನಮ್ಮ ನಮ್ಮ ಒಳಗಿರುವ ಮೇಲರಿಮೆ ಕೀಳರಿಮೆಗಳನ್ನು ದೂರಗೊಳಿಸಿ ಸೋದರತ್ವ, ಸ್ವಾತಂತ್ರ್ಯ, ಸಮಾನತೆಗಳ ಶಿವಭಾವ ಮೇಳೈಸುವುದಕ್ಕಾಗಿ! ಅದಕ್ಕಾಗಿಯೇ 12ನೆಯ ಶತಮಾನದ ಜಗಜ್ಯೋತಿ ಬಸವೇಶ್ವರರು ತಮ್ಮ ವಚನವೊಂದರಲ್ಲಿ :

‘‘ವ್ಯಾಸ ಬೋವಿತಯ ಮಗ, ಮಾರ್ಕಂಡೇಯ ಮಾತಂಗಿಯ ಮಗ,
ಮಂಡೋದರಿ ಕಪ್ಪೆಯ ಮಗಳು.
ಕುಲವನರಸದಿರಿಂ ಭೋ! ಕುಲದಿಂದ ಮುನ್ನೇನಾದಿರಿಂ ಭೋ!
ಸಾಕ್ಷಾತ್ ಅಗಸ್ತ್ಯ ಕಬ್ಬಿಲ, ದೂರ್ವಾಸ ಮುಚ್ಚಿಗ, ಕಶ್ಯಪ ಕಮ್ಮಾರ,
ಕೌಂಡಿನ್ಯನೆಂಬ ಋಷಿ ಮೂರು ಭುವನರಿಯದೆ ನಾವಿದ ಕಾಣಿ ಭೋ!
ನಮ್ಮ ಕೂಡಲ ಸಂಗನ ವಚನವಿಂತೆಂದರು:
ಶ್ವಪಚೋಪಿಯಾದಡೇನು, ಶಿವಭಕ್ತನೆ ಕುಲಜಂ ಭೋ!’’

ವ್ಯಾಸ ಬೆಸ್ತರ ಜಾತಿಯ ಸತ್ಯವತಿಯ ಮಗ, ಮಹಾಭಾರತವನ್ನು ಬರೆದ ಮಹರ್ಷಿ ವೇದಗಳನ್ನೂ ವಿಂಗಡಿಸಿದ ವೇದವ್ಯಾಸ. ಅವನು ಭಾರತೀಯರೆಲ್ಲರ ಗುರು. ವ್ಯಾಸ ಪೂಣಿರ್ಮೆಯನ್ನು ಗುರುಪೂರ್ಣಿಮೆಯೆಂದು ಆಚರಿಸಲಾಗುತ್ತದೆ. ಮಾರ್ಕಂಡೇಯ ಮಾದಿಗ ಜಾತಿಯ ಮಾತಂಗಿಯ ಮಗ. ಆತನೊಬ್ಬ ಮಹರ್ಷಿ. ಅಗಸ್ತ್ಯಮುನಿ ಕಬ್ಬಿಲನಂತೆ. ಕಬ್ಬಿಲ ಎಂದರೆ ಬೇಡ, ಬೆಸ್ತ ಎಂಬರ್ಥಗಳಿವೆ. ಆ ಹೆಸರಿನ ಜಾತಿಗಳೂ ನಮ್ಮಲ್ಲಿವೆ. ದೂರ್ವಾಸ ಮಹರ್ಷಿಯು ಮುಚ್ಚಿಗ. ಮುಚ್ಚಿಗ ಎಂಬ ಪದಕ್ಕೆ ‘‘ 1.ಇಟ್ಟಿಗೆ ಅಥವಾ ಗಾರೆಕೆಲಸ ಮಾಡುವವನು: ಉಪ್ಪಾರ. 2.ಕಲ್ಲು ಕೆಲಸ ಮಾಡುವವನು: ಕಲ್ಲು ಕುಟಿಗ 3.ಮೋಚಿ: ಚಮ್ಮಾರ’’ ಎಂಬ  ಅರ್ಥಗಳಿವೆ. ಕಶ್ಯಪನು ಕಮ್ಮಾರ, ಕೌಂಡಿನ್ಯ ಋಷಿಯು ಕ್ಷೌರಿಕ ಎಂದು ಬಸವಣ್ಣನವರು ಗುರುತಿಸಿರುವುದು ಜಾತೀಯತೆ, ಮೇಲು-ಕೀಳು ಎಂಬ ಭಾವ ಹೋಗಿ ಯಾರು ಬೇಕಾದರೂ ಮಹರ್ಷಿಯಾಗಬಹುದು, ಹುಟ್ಟಿನಿಂದ ಯಾರೂ ಕೀಳಲ್ಲ ಎಂಬುದನ್ನು ಸಾರುವುದಕ್ಕಾಗಿ. ಹೀಗೆ ಮೇಲು-ಕೀಳು ಎಂಬ ಭೇದಭಾವವನ್ನು ಅಳಿಸಲು ಪ್ರಾರಂಭವಾದ ಹುಡುಕಾಟ ಇಂದು ಪರಾಕಾಷ್ಠೆಗೆ ತಲುಪಿದೆ. ಪ್ರತಿಯೊಂದು ಸಣ್ಣಪುಟ್ಟ ಜಾತಿಗಳೂ ತಮ್ಮ ತಮ್ಮ ಅಸ್ಮಿತೆಗಾಗಿ ಹುಡುಕಾಡುತ್ತಿವೆ. ಅಂಥ ಹುಡುಕಾಟದ ಫಲವೇ ಇಂದು ಜಯಂತಿಗಳ ಸಂಖ್ಯೆದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆೆ.

12ನೆಯ ಶತಮಾನದ ವಚನಕಾರರನ್ನು ಆಯಾಯ ಜಾತಿಯವರು ತಮ್ಮ ಸಾಂಸ್ಕೃತಿಕ ನಾಯಕನನ್ನಾಗಿಸಿಕೊಂಡು ಜಯಂತಿಗಳನ್ನು ಆಚರಿಸುತ್ತಿದ್ದಾರೆ. ಉದಾಹರಣೆಗೆ ನೇಕಾರರು ‘ದೇವರದಾಸಿಮಯ್ಯನ’ ಜಯಂತಿಯನ್ನೂ, ಮಡಿವಾಳರು ‘ಮಡಿವಾಳ ಮಾಚಿದೇವನ’ ಜಯಂತಿಯನ್ನೂ, ಮಾದಾರರು ‘ಮಾದಾರ ಹರಳಯ್ಯನ’ ಜಯಂತಿಯನ್ನೂ ಆಚರಿಸುತ್ತಿದ್ದಾರೆ. ಅಂತೆಯೇ ಯಾದವರು ಶ್ರೀಕೃಷ್ಣನನ್ನೂ, ತಳವಾರರು ಅಥವಾ ಬೇಡರು ವಾಲ್ಮೀಕಿಯನ್ನೂ, ಕುರುಬರು ಕನಕದಾಸನನ್ನೂ, ವೀರಶೈವರು ಅಥವಾ ಲಿಂಗಾಯತರು ಬಸವಣ್ಣನನ್ನೂ ತಮ್ಮ ಸಾಂಸ್ಕೃತಿಕ ಮಹಾಪುರುಷರೆಂದು ಸ್ವೀಕರಿಸಿ ಜಯಂತಿಗಳನ್ನಾಚರಿಸುತ್ತಿದ್ದಾರೆ. ದಲಿತರಲ್ಲಿ ಬಲಗೈನವರು ಅಂಬೇಡ್ಕರ್ ಜಯಂತಿಯನ್ನೂ, ಎಡಗೈನವರು ಬಾಬು ಜಗಜೀವನರಾಂ ಜಯಂತಿಯನ್ನೂ, ಒಕ್ಕಲಿಗರು ಕೆಂಪೇಗೌಡ ಜಯಂತಿಯನ್ನೂ, ಮುಸ್ಲಿಮರು ಟಿಪ್ಪು ಜಯಂತಿಯನ್ನೂ, ಬ್ರಾಹ್ಮಣರು ಶಂಕರ ಜಯಂತಿಯನ್ನೂ, ಕುರುಬರು ಸಂಗೊಳ್ಳಿ ರಾಯಣ್ಣ ಜಯಂತಿಯನ್ನೂ ಆಚರಿಸುತ್ತಿದ್ದಾರೆ. ಉಳಿದ ಜಾತಿ ಜನರು ಆ ಜಯಂತಿಗಳಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ ಆ ಜಯಂತಿಗಳನ್ನು ಸರ್ಕಾರವೇ ಮಾಡಿದ್ದರೂ ಅಲ್ಲಿನ ಆಯಾ ಜಾತೀಯ ಜನರೇ ಪ್ರಧಾನ ಸಂಘಟಕರಾಗಿರುತ್ತಾರೆನ್ನುವುದೂ ಅಷ್ಟೇ ಸತ್ಯ. ಈ ರೀತಿಯ ಜಯಂತಿಗಳಿಗೆ ಪ್ರಮುಖವಾಗಿ ಎರಡು ಮುಖಗಳಿವೆ. 1.ಸಾಂಸ್ಕೃತಿಕ ಮುಖ. 2. ರಾಜಕೀಯ ಮುಖ. ಎರಡೂ ಮುಖಗಳಲ್ಲಿಯೂ ಶಕ್ತಿ-ದೌರ್ಬಲ್ಯಗಳು ಕೂಡಿಕೊಂಡಿವೆ.

ಈ ಜಯಂತಿಗಳ ಸಾಂಸ್ಕೃತಿಕ ಆಯಾಮ

ಯಾವುದೇ ಜಾತಿ, ಜನಾಂಗ, ಸಮಾಜ, ಧರ್ಮ, ದೇಶ ಅಲ್ಲಿನ ಮಹಾಚೇತನಗಳನ್ನು ಆರಾಧಿಸುತ್ತಾರೆ ಎಂಬುದು ಅತ್ಯಂತ ಧನಾತ್ಮಕ ಸಂಗತಿ. ಉತ್ತಮವಾದ ಭಾವನೆಗಳು ಹಾಗೂ ಆಲೋಚನೆಗಳು ಉತ್ತಮವಾದ ಬದುಕನ್ನೂ, ಕಾಲವನ್ನೂ ನಿರ್ಮಿಸುತ್ತವೆ. ಈ ಶತಮಾನದ ಆರಂಭ ಕಾಲಘಟ್ಟದಲ್ಲಿ ಕರ್ನಾಟಕದಲ್ಲಿ ನಡೆಯುತ್ತಾ ಬಂದ ಬಸವ ಜಯಂತಿ ವೀರಶೈವ ಮಠಮಾನ್ಯಗಳ ಪ್ರಾಮಾಣಿಕ ಪ್ರಯತ್ನ; ಶಿಕ್ಷಣ-ಜಾಗೃತಿ, ಅನ್ನ-ಅಕ್ಷರ ದಾಸೋಹಗಳಿಂದಾಗಿ ಇಂದು ಬಸವೇಶ್ವರರು ವೀರಶೈವರ ಸಾಂಸ್ಕೃತಿಕ ನಾಯಕರಾಗಿ ಉಳಿದಿಲ್ಲ. ಅವರಿಂದು ಕರ್ನಾಟಕದ ಮಾತ್ರವಲ್ಲ ಭಾರತದ ಎಲ್ಲ ಜಾತಿ, ಮತ, ಪಂಥಗಳ ಸಾಂಸ್ಕೃತಿಕ ನಾಯಕರಾಗಿ ಹೊರಹೊಮ್ಮಿದ್ದಾರೆ. ಹಾಗಾಗಿಸುವಲ್ಲಿ ನಾಡಿನಾದ್ಯಂತ ಇರುವ ಮಠಗಳು, ಗುರುಗಳು, ಸಂಘ ಸಂಸ್ಥೆಗಳು, ಗಣ್ಯರು ಕಾರಣಕರ್ತರಾಗಿದ್ದಾರೆ. ಬಸವಣ್ಣ ಅಮೆರಿಕ, ಲಂಡನ್ ಮೊದಲಾದ ಜಗತ್ತಿನ ಹತ್ತಾರು ದೇಶಗಳಿಗೆ ಭಾರತೀಯ ಮಹಾಪುರುಷರಾಗಿ ನಿಂತಿದ್ದಾರೆ. ಅವರನ್ನು ಜಾತಿಯ ದೃಷ್ಟಿಯಿಂದ ಯಾರೇ ನೋಡಿದರೂ ಅವರೇ ಸಣ್ಣವರಾಗುತ್ತಾರೆಯೇ ವಿನಃ ಬಸವಣ್ಣನವರಲ್ಲ.

ಅಂತೆಯೇ ಕನಕದಾಸರು ದಾಸಸಾಹಿತ್ಯದಲ್ಲಿ ಮಾತ್ರವಲ್ಲ ಮನುಕುಲದ ಬಾಳಲ್ಲಿ ಹೊಂಬೆಳಕನ್ನು ತರಲು ಪ್ರಯತ್ನಿಸಿದವರು. ಪುರಂದರದಾಸರು ಕನಕದಾಸರು ಅಶ್ವಿನೀ ದೇವತೆಗಳಂತೆ ಇದ್ದವರು. ಇತ್ತೀಚೆಗೆ ಕನಕದಾಸರ ಜಯಂತಿಯ ಮೂಲಕ ಅವರ ವೈಚಾರಿಕತೆ, ಧಾರ್ಮಿಕತೆಗಳನ್ನು ಜನಮಾನಸದಲ್ಲಿ ಬಿತ್ತುತ್ತಿರುವುದೂ ಕೂಡ ಸಮಾಜದ ಬಲವರ್ಧನೆಗೆ ಕಾರಣವಾಗಿದೆ. ತದನಂತರದ ಬೆಳವಣಿಗೆಯಾಗಿ ‘ವಾಲ್ಮೀಕಿ ಜಯಂತಿ’ಯ ಮೂಲಕ ಭಾರತದ ಮಹಾಕಾವ್ಯ ರಾಮಾಯಣವು ಜನರ ಬಳಿಗೆ ತೆರಳುತ್ತಿದೆ. ‘ಭಗೀರಥ’ ಜಯಂತಿಯು ನೆಲದ ಬೇಗೆಯನು ಪರಿಹರಿಸಿದಾತನನ್ನು ಸ್ಮರಿಸುತ್ತಿದೆ. ಮಾದಾರ ಚೆನ್ನಯ್ಯ ಬಸವಣ್ಣನಿಗೂ ಆತ್ಮಶಕ್ತಿಯ ತುಂಬಿದ ಶಕ್ತಿಜೀವ. ಆದರೆ ಬಸವಣ್ಣನವರಂತೆ, ಕನಕದಾಸರಂತೆ, ವಾಲ್ಮೀಕಿಯಂತೆ ವಿಜೃಂಭಣೆಯಿಂದ ಲೋಕದ ಜನರ ಮನಸೆಳೆಯುವಂತೆ ಜಯಂತ್ಸೋತ್ಸವದ ಭಾಗ್ಯ ಚೆನ್ನಯ್ಯನಿಗೆ ಸಿಕ್ಕಿಲ್ಲ. ಬಸವಣ್ಣನಿಗೇ ಪ್ರೇರಕ ಶಕ್ತಿಯಾಗಿರುವಾಗ ಹೊಸಕಾಲದ ಜನರೇಕೆ ತಮ್ಮ ಮನೆ-ಮನದೊಳಗೆ ಚೆನ್ನಯ್ಯನಿಗೆ ಮಾನ್ಯತೆ ನೀಡುತ್ತಿಲ್ಲವೋ ಅರ್ಥವಾಗುತ್ತಿಲ್ಲ. ಅದೇ ಸ್ಥಿತಿಯೇ ಡಾ ಬಿ.ಆರ್.ಅಂಬೇಡ್ಕರ್, ಬಾಬು ಜಗಜೀವನರಾಂ ಜಯಂತಿಯಲ್ಲಿಯೂ ಕಂಡುಬರುತ್ತದೆ. ಅಂದರೆ ಯಾವ ಬಸವಣ್ಣ ಜಾತೀಯತೆ, ಅಸ್ಪೃಶ್ಯತೆ, ಮೇಲು, ಕೀಳು ತೊಲಗಬೇಕೆಂದು ಬಯಸಿದ್ದರೋ ಅವು ತೊಲಗಲು ಜಯಂತಿಗಳು ನೆರವಾಗುತ್ತವೆ ಎಂದು ಯಾರು ಬಯಸಿದ್ದರೋ ಆ ನಿರೀಕ್ಷೆಗಳು ನಿಜವಾಗುತ್ತಿವೆಯೋ ಅಥವಾ ಹುಸಿಯಾಗುತ್ತಿವೆಯೋ ಎಂದೂ ಒರೆಹಚ್ಚಿ ನೋಡಬೇಕಾಗಿದೆ. ಜಾತಿಯನ್ನು ಮೀರುವುದು ಅರಿವಿನಿಂದ ಮಾತ್ರ ಸಾಧ್ಯ. ಅದೇ ಜಯಂತಿಗಳ ಉಸಿರಾಗಬೇಕು.

ರಾಜಕೀಯದ ಆಯಾಮ:

ಜಾತೀಯ ಮತ ಬ್ಯಾಂಕುಗಳು
ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್, ಡಾಕ್ಟರ್‌ಜಿ, ಗುರೂಜಿ ಮೊದಲಾದವರೆಲ್ಲ ಭಾರತದ ಆಧ್ಯಾತ್ಮದಿಂದ, ಏಕಾತ್ಮತಾವಾದದಿಂದ ಜಾತೀಯತೆ ಅಳಿದು ವಿಶ್ವಮಾನವತೆಯು ಬೆಳೆಯುತ್ತದೆ ಎಂದೇ ಹಂಬಲಿಸಿದ್ದರು. ಅದಕ್ಕಾಗಿಯೇ ಹೋರಾಡುತ್ತಾ, ಮಡಿಯುತ್ತಾ ಬಂದರೂ ಆಧುನಿಕ ಕಾಲದಲ್ಲಿಯೂ ‘ಜಾತ್ಯತೀತತೆ’ಯನ್ನು ‘ಧರ್ಮನಿರಪೇಕ್ಷ’ ‘ಜಾತಿ ನಿರ್ಮೂಲನೆ’ ಎಂಬ ಅರ್ಥದಲ್ಲಿಯೇ ಅತಿಯಾಗಿ ಗ್ರಹಿಸಲಾಗಿದೆ.

ಹಿಂದೂ ಧರ್ಮದ ಬೇರು ‘ಜಾತಿ’ ಎಂದು ಹಲವರು ಹೇಳಿದ್ದಾರೆ. ಈ ಜಾತಿಯಿಂದಾಗಿಯೇ ಭಾರತದಲ್ಲಿ ಬದಲಾವಣೆಗಳು ಸಾಧ್ಯವಾಗುತ್ತಿಲ್ಲವೆಂಬುದು ಕಾರ್ಲ್‌ಮಾರ್ಕ್ಸ್‌ನ ವಾದವಾಗಿದೆ. ಜಾತಿ ಅಳಿಯಬೇಕು ಎಂದು ಸಾರಿದವರೂ ಇಂದು ಜಾತಿಯನ್ನು ಪ್ರಬಲಗೊಳಿಸುತ್ತಿದ್ದಾರೆ. ‘ಜಾತಿ’ ತೊಲಗಬೇಕು, ಆದರೆ ಬ್ರಾಹ್ಮಣರಿಂದ ಹರಿಜನರವರೆಗೂ ‘ಜಾತಿ’ ಬಿಡಲು ಯಾರೂ ತಯಾರಿಲ್ಲ. ಜಾತೀಯ ಮಠಗಳು ಹುಟ್ಟಿಕೊಂಡಿವೆ. ಜಾತೀಯ ನೌಕರರ ಸಂಘಗಳು ಹೆಚ್ಚು ಕ್ರಿಯಾಶೀಲವಾಗಿವೆ. ಅವು ಶಾಲೆ, ಕಾಲೇಜು, ವಿದ್ಯಾರ್ಥಿನಿಲಯ, ಸಹಕಾರಿ ಬ್ಯಾಂಕ್, ರಿಯಲ್ ಎಸ್ಟೇಟು ಮೊದಲಾದ ಆಯಾಮದಲ್ಲಿ ಕಾರ್ಯ ಪ್ರವೃತ್ತವಾಗಿವೆ. ಜಾತಿಮಠಗಳಿಗೆ, ನೌಕರರ ಸಂಘಗಳಿಗೆ ಆಯಾ ಜಾತೀಯ ರಾಜಕಾರಣಿಗಳು ತನು, ಮನ, ಧನ ನೀಡಿ ಬೆಂಗಾವಲಾಗಿದ್ದಾರೆ. ಮಠಗಳು, ನೌಕರರು, ರಾಜಕಾರಣಿಗಳು ಆಯಾ ಜಾತಿಯ ಜನರನ್ನೂ, ಜಯಂತಿಗಳನ್ನೂ ಗುತ್ತಿಗೆ ಹಿಡಿದುಕೊಂಡವರಂತೆ ಮೆಟ್ಟಿಲುಗಳನ್ನಾಗಿಸಿಕೊಳ್ಳುತ್ತಿದ್ದಾರೆ. ಅವರ ಹೆಸರು ಹೇಳಿ ಮತ ಕೇಳುವ ಮುಖ ಕಳೆದುಕೊಳ್ಳುತ್ತಿರುವುದೂ ಈ ಬೆಳವಣಿಗೆಯ ಕಾರಣಗಳಲ್ಲೊಂದಾಗಿದೆ. ಮಹಾಪುರುಷರೂ ಮತಬ್ಯಾಂಕ್‌ನ ರಾಜಕಾರಣಕ್ಕೆ ಹುತಾತ್ಮರಾಗುತ್ತಿದ್ದಾರೆ.

ಕರ್ನಾಟಕದ ಅಧಿಕಾರದ ಹಾವು ಏಣಿಯಾಟದಲ್ಲಿ ಲಿಂಗಾಯತರು ಹಾಗೂ ಒಕ್ಕಲಿಗರು ಈ ಜಾತಿಯ ಸಂಘಟನೆ ಹಾಗೂ ಬಲಾಢ್ಯತೆಯ ಕಾರಣದಿಂದ ಅಧಿಕಾರದ ಗದ್ದುಗೆಯೇರಿದ್ದಾರೆ. ಈ ಅರಿವು ಹಿಂದುಳಿದ ಜಾತಿ ನಾಯಕರಿಗೂ ಅರ್ಥವಾಗಿದೆ. ಹಾಗಾಗಿ ಅವರು ತಮ್ಮ ಜಾತಿಯೊಂದರಿಂದಲೇ ಅಧಿಕಾರಕ್ಕೇರುವುದು ಸಾಧ್ಯವಿಲ್ಲ, ಆದ್ದರಿಂದ ಅಳಿದುಳಿದ ಸಣ್ಣಪುಟ್ಟ ಜಾತಿಗಳನ್ನೂ ಬುಟ್ಟಿಯಲ್ಲಿ ಪೇರಿಸಿಕೊಳ್ಳಲು ದಾರಿ ಹುಡುಕುತ್ತಾರೆ. ಆ ಹುಡುಕಾಟದ ಹೊಸ ಪ್ರಯೋಗ ‘ಅಹಿಂದ’ ರಾಜನೀತಿ. ಅದರ ಫಲ ಟಿಪ್ಪು ಜಯಂತಿ. ಈ ಸಂದರ್ಭದಲ್ಲಿ ಉಂಟಾದ ಸಂಘರ್ಷದ ಮಹತ್ವಪೂರ್ಣ ಪರಿಣಾಮ ‘ಕೆಂಪೇಗೌಡ ಜಯಂತಿ!’.. ಅದಕ್ಕೆ ಕೌಂಟರ್ ‘ಸಂಗೊಳ್ಳಿ ರಾಯಣ್ಣ ಜಯಂತಿ!!’

ವೀರಶೈವರನ್ನು ಒಟ್ಟುಗೂಡಿಸುವುದಕ್ಕಾಗಿ ಬಸವ ಜಯಂತಿ; ಒಕ್ಕಲಿಗರನ್ನು ಒಟ್ಟುಗೂಡಿಸುವುದಕ್ಕಾಗಿ ಕೆಂಪೇಗೌಡ ಜಯಂತಿ; ಕುರುಬರನ್ನು ಒಟ್ಟುಗೂಡಿಸುವುದಕ್ಕಾಗಿ ಸಂಗೊಳ್ಳಿ ರಾಯಣ್ಣ ಜಯಂತಿ; ಪರಿವಾರ, ತಳವಾರ, ವಾಲ್ಮೀಕಿ, ಬೇಡ ಮೊದಲಾದ ಹೆಸರುಗಳಲ್ಲಿರುವ ಪರಿಶಿಷ್ಟ ಪಂಗಡದವರನ್ನು ಒಟ್ಟುಗೂಡಿಸುವುದಕ್ಕಾಗಿ ವಾಲ್ಮೀಕಿ ಜಯಂತಿ, ದೇವಾಂಗ, ಪದ್ಮಸಾಲಿ, ಕುರುವಿನ ಶೆಟ್ಟಿ ಮೊದಲದ ಹೆಸರುಗಳಲ್ಲಿರುವ ನೇಕಾರರನ್ನು ಒಟುಗೂಡಿಸುವುದಕ್ಕಾಗಿ ದೇವರದಾಸಿಮಯ್ಯ ಜಯಂತಿ; ಬೆಸ್ತರನ್ನು ಒಟ್ಟುಗೂಡಿಸಲು ಭಾಗೀರಥಿ ಜಯಂತಿ; ಮುಸ್ಲಿಮರನ್ನು ಒಟ್ಟುಗೂಡಿಸಲು ಟಿಪ್ಪು ಜಯಂತಿ ಅದಕ್ಕೊಬ್ಬೊಬ್ಬ ರಾಜಕಾರಣಿ, ಹಣವಂತ, ನೆಣವಂತರ ಮೈತ್ರಿಕೂಟ ಇದರಿಂದಾಗಿ ಬಸ್ಸು ಲಾರಿಗಳಲ್ಲಿ ಜನ ಜಯಂತಿಗೆ ಬರುತ್ತಾರೆ. ಬಿಸಿಯೂಟ ಮಾಡಿ ಮನೆಗೆ ತೆರಳುತ್ತಾರೆ. ಬಸವ, ಕೆಂಪೇಗೌಡ, ಸಂಗೊಳ್ಳಿ ರಾಯಣ್ಣ, ವಾಲ್ಮೀಕಿ, ದಾಸಿಮಯ್ಯ, ಭಾಗೀರಥಿಯರ ಪ್ರೀತಿ ಮತ್ತು ನೀತಿ ನಿಜಾರ್ಥದಲ್ಲಿ ನಮ್ಮ ಮನೆ, ಮನಗಳಿಗೆ ತಲುಪುತ್ತಿಲ್ಲ. ಹಾಗಾಗಿ ಜಯಂತಿಗಳ ಬಗ್ಗೆಯೇ ಆಗಾಗ ಅಪಸ್ವರಗಳು, ವಿರೋಧಗಳು ಕಂಡುಬರುತ್ತವೆ. ಇನ್ನೂ ಮುಂದುವರೆದ ದುರಂತವೆಂದರೆ ಒಂದೇ ರಾಜಕೀಯ ಪಕ್ಷದೊಳಗಡೆಯೇ ಜಾತಿವಾರು ಶಕ್ತಿಕೇಂದ್ರಗಳು ಬರ್ಲಿನ್ ಗೋಡೆಯಂತೆ ನಿರ್ಮಾಣಗೊಳ್ಳುತ್ತಿರುವುದು. ಬಹಳ ಹಿಂದೆಯೇ ಕಾಂಗ್ರೆಸ್‌ನಲ್ಲಿ ಈ ಲಕ್ಷಣ ಕಂಡುಬಂದು ಅದರ ಉಲ್ಬಣಾವಸ್ಥೆ ತಲುಪಿದೆ. ಇತ್ತೀಚೆಗೆ ಬಿಜೆಪಿಗೂ ಅದು ತಗಲುತ್ತಿರುವ ಲಕ್ಷಣಗಳು ಹಾಗೂ ಪರಿಣಾಮಗಳು ಗೋಚರಿಸುತ್ತಿವೆ. ತುಂಬಿದ ಮನೆಯೊಳಗೆ ಅಡ್ಡಗೋಡೆ ಕಟ್ಟುವುದೂ ಒಂದೇ-ತುಂಬಿದ ರಾಜಕೀಯ ಪಕ್ಷದೊಳಗೆ ಜಾತೀಗೋಡೆ ಕಟ್ಟುವುದೂ ಒಂದೇ! ಜಯಂತಿಗಳು ಬೇಡವೇ? ಅಧಿಕಾರದ ಸಮಾನ ಹಂಚಿಕೆ ಬೇಡವೇ? ಸ್ವಾಭಿಮಾನ ಸೃಷ್ಟಿಸುವ ಜನಾಂಗೀಯ ಅಸ್ಮಿತೆಗಳು ಬೇಡವೇ? ಎಂಬ ಪ್ರಶ್ನೆಗಳೂ ಉದ್ಭವಿಸುತ್ತಿವೆ. ಕಳೆದ ಎರಡಕ್ಕೂ ಹೆಚ್ಚು ಸಾವಿರ ವರ್ಷಗಳ ಭಾರತದ ಇತಿಹಾಸವನ್ನು ನೋಡಿದರೆ ಯಾರೂ ಬೇಡ ಎನ್ನಲ್ಲ. ಜಾತಿ ಎಂಬುದು ಆದರ್ಶವಲ್ಲ ಆದರೆ ವಾಸ್ತವ ! -‘ಜಾತೀಯತೆ’ ಎಂಬುದು ವಾಸ್ತವವಲ್ಲ ಕೃತಕ ಹಾಗೂ ಆತ್ಮಘಾತುಕ ! ‘ಅಧಿಕಾರ’ ಎಂಬುದು ಅನುಭವವಲ್ಲ  ಅಮಲು. ಇವುಗಳನ್ನೆಲ್ಲ ಸಮನ್ವಯಗೊಳಿಸಬೇಕಾದ ನಿಜವಾದ ಸವಾಲು ದೇಶದ ಮುಂದಿದೆ. ಅದನ್ನು ಉಪೇಕ್ಷೆ ಮಾಡಿದರೆ ಸರಿಹೋಗುವುದಿಲ್ಲ. ಅಪೇಕ್ಷೆ ಮಾಡಿದರೂ ಬಿಡುಗಡೆ ಸಾಧ್ಯವಿಲ್ಲ. ಇಂಥ ಸ್ಥಿತಿಯಲ್ಲಿ ‘ಮರುಚಿಂತನೆ’ ಒಂದೇ ಸಂಜೀವಿನಿ ! ಮರುಜೀವಂತಿಕೆೆ !

ನೆಗಡಿಯಾದರೆ ಮೂಗು ಕತ್ತರಿಸುವುದು ಪರಿಹಾರವಲ್ಲ
‘ಜಯಂತಿ’ ಆಚರಣೆಗಳಿಂದ ‘ಜಾತಿ’ ಸಂಘಟನೆಗೊಳ್ಳುತ್ತವೆ ಎಂದು ಜಯಂತಿಗಳನ್ನು ರದ್ದುಪಡಿಸುವುದು ಬುದ್ಧಿವಂತಿಕೆಯಲ್ಲ. ಅದು ಬುದ್ಧಿವಿಕೃತಿ. ಆತ್ಮವಿನಾಶಕಾರಿಯಾದುದು. ‘ಜಯಂತಿ’ಗಳೂ ಕೇವಲ ಮೆರವಣಿಗೆ, ಉತ್ಸವ, ಕುಣಿತ ಭಜನೆಗಳಾಗದೆ ಆಯಾ ಮಹಾಪುರುಷರು ಬದುಕಿ ತೋರಿದ ಜೀವನ ಮೌಲ್ಯಗಳನ್ನು ಮನೆ, ಮನದ ದೀಪಗಳಾಗಿ ಹಚ್ಚಿಡಬೇಕಾಗಿದೆ. ಅಧಿಕಾರದಿಂದ ವಂಚಿತರಾದ ಕೆಲ ಸಮುದಾಯಗಳನ್ನು ಗುರುತಿಸಿ ಅಧಿಕಾರ ನೀಡಿ ಮೇಲೆತ್ತಬೇಕಾಗಿದೆ. ಇಲ್ಲವಾದಲ್ಲಿ ಅವರೇ ನಮ್ಮ ಮೇಲೆ ಬಿದ್ದು ನಾವು ಸರ್ವನಾಶವಾಗಬೇಕಾಗುತ್ತದೆ. ಜಾತಿ ಎಂಬುದು ನಾವು ನಾಶಮಾಡಲು ಸಾಧ್ಯವಿಲ್ಲ ಎಂಬ ವಾಸ್ತವವನ್ನೂ ಒಪ್ಪಿಕೊಳ್ಳಬೇಕಾಗಿದೆ. ಜಾತೀಯತೆ ಎಂದರೆ ಮೇಲು, ಕೀಳು ಎಂಬುದನ್ನು ಸರ್ವನಾಶ ಪಡಿಸಲು ಕ್ಷಣಾರ್ಧದಲ್ಲಿ ಸಾಧ್ಯ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕು. ಹಾಗೂ ಜಾತೀಯತೆಯನ್ನು ಕೂಡಲೇ ಸರ್ವನಾಶ ಮಾಡಬೇಕು. ಇಲ್ಲವಾದಲ್ಲಿ ಇದೇ ಕಾರಣದಿಂದ ನಾವು ವಾಸಿಸುವ ಮನೆ ಒಡೆದುಹೋದೀತು! ಒಡೆದ ಬೀಜ ಮೊಳೆಯದು. ಮೊಳೆಯಬೇಕಾದರೆ ಒಡೆಯದಂತೆ, ಉರಿಯದಂತೆ, ಇಡಿಯ ಬೀಜವನ್ನು ಮೊಳಕೆಯೊಡೆವಂತೆ ಬಿತ್ತಬೇಕು. ಸರ್ಕಾರ ಎಲ್ಲ ಜಾತಿಯ ಜನರೂ ಭಾಗವಹಿಸಿ ಜಯಂತಿಗಳನ್ನು ಆಚರಿಸುವಂತೆ ಮಾಡಬೇಕು. ಜನಕ್ಕೆ ಸರ್ಕಾರದ ಹಂಗಿಲ್ಲದಂತೆ ಹಬ್ಬ-ಹರಿದಿನ ಜಾತ್ರೆ ಮಹೋತ್ಸವಗಳನ್ನಾಚರಿಸುವಂತೆ ನಮ್ಮ ಮಹಾತ್ಮರ ಜಯಂತಿಗಳನ್ನಾಚರಿಸಬೇಕು. ರಾಜಕೀಯ ಸಂಸ್ಕೃತಿಗೆ ಆಹಾರವಾಗಲಿ.

ಹಿಂದುತ್ವದ ಬೇರು ಜಾತಿಯಲ್ಲ

ವಿಶ್ವಮಾನವತೆಯ ಪ್ರೀತಿ ಮತ್ತು ನೀತಿ, ಜಾತಿ ಎಂಬುದನ್ನು ಮೀರುವುದಕ್ಕಿರುವ ಏಕೈಕ ದಾರಿ ಹಿಂದುತ್ವ. ಹಿಂದು, ಒಂದು, ಬಂಧು ಮಾತಲ್ಲ ಮಂತ್ರವಾಗಬೇಕು. ಬ್ರಾಹ್ಮಣ ಹುಟ್ಟಿನಿಂದಲೂ ಸರ್ವಶ್ರೇಷ್ಠ, ಹೊಲೆಯ ಮಾದಿಗರು ಹುಟ್ಟಿನಿಂದಲೇ ಕನಿಷ್ಠ ಎಂಬ ದುಷ್ಟ, ಸ್ವಾರ್ಥ. ಕುತಂತ್ರ ನೀತಿ ಯಾವುದೇ ಜಾತಿಯ ನಾಯಕನ ತಲೆಯೊಳಗೆ ನುಸುಳಿದರೂ ಅದು ಇಂಥ ಸಂಘರ್ಷಕ್ಕೆ ದಾರಿ ಮಾಡಿಕೊಡುತ್ತದೆ. ಹಿಂದೂ ಸಮಾಜದ ಅವನತಿಗೆ ಅಂಥವರೇ ಕಾರಣ. ಅದಕ್ಕೆ ಸಾಮರಸ್ಯವೇ ಪರಿಹಾರ. ಎಲ್ಲಾ ಮಹಾತ್ಮರ ಜಯಂತಿಗಳನ್ನು ಸಾಮಾಜಿಕ ಸಾಮರಸ್ಯ ನಿರ್ಮಾಣದ ತೊಟ್ಟಿಲುಗಳನ್ನಾಗಿಸಬೇಕು. ಈ ರೀತಿಯ ಜಯಂತಿಗಳಿಗೆ ಶಾಲಾ ಕಾಲೇಜುಗಳಿಗೆ ರಜೆ ಕೊಡದೇ ಮಹಾತ್ಮರ ಜೀವನ ಮೌಲ್ಯಗಳನ್ನು ತಿಳಿಸಬೇಕು. ಮಕ್ಕಳ ಮನಸ್ಸಿನಲ್ಲಿ ಜೀವನ ಮೌಲ್ಯಗಳ ಜೀವನಾದರ್ಶದ ಹೊಳೆ ಹರಿಯಲಿ.

ಆಗುವುದೆಲ್ಲಾ ಒಳ್ಳೆಯದಕ್ಕೇ ಆಗುತ್ತದೆ.
ಕೆಲವು ದಶಕಗಳ ಹಿಂದೆ ಚಿತ್ರದುರ್ಗದ ಮುರುಘಾಶರಣರು ಒಂದೊಂದು ಜಾತಿಗೆ ಒಬ್ಬೊಬ್ಬ ಶರಣ ಹಾಗೂ ಅವರಿಗೊಂದು ಮಠ ಕಟ್ಟಿ ಕೊಡುವಾಗ ಸಮಾಜವು ಆತಂಕಕ್ಕೆ ಒಳಗಾಗಿ ಟೀಕೆ ಮಾಡಿತ್ತು. ಆದರೆ ಇಂದು ಅವೇ ಮಠಗಳು ಆಯಾಯ ಜಾತಿಯ ಜನರು ಮತಾಂತರವಾಗದಂತೆ ತಡೆಯುತ್ತಿವೆ. ತಮ್ಮ ಜಾತಿಯ ಯುವ ಜನರಲ್ಲಿ ಜಾಗೃತಿ-ಸಂಘಟನೆ-ಹೋರಾಟದ ಕಿಚ್ಚು ತುಂಬುತ್ತಿದ್ದಾರೆ. ಶಾಲೆ-ಕಾಲೇಜು-ವಿದ್ಯಾರ್ಥಿನಿಲಯ-ಅನಾಥಾಶ್ರಮ, ಶಿವಾನುಭವ ಶಿಬಿರ, ಧರ್ಮಪ್ರಸಾರ, ಅನ್ನದಾಸೋಹ ಮಾಡುತ್ತಿದ್ದಾರೆ. ಆಸಕ್ತರು, ಉಳ್ಳವರು, ದಾನಿಗಳು ಬಲ ತುಂಬುತ್ತಿದ್ದಾರೆ. ಅವುಗಳೂ ಇಲ್ಲವಾಗಿದ್ದರೆ ಆ ಮೂಕ ಜನತೆ ರೋದನೆಯಿಂದ ದೇಶವಿರೋಧಿಗಳು ಸಮಾಜ ವಿರೋಧಿಗಳು ಆಗಿರುತ್ತಿದ್ದರು-ಸಂನ್ಯಾಸಿ ಕ್ರಾಂತಿಯಿಂದ ಭಾರತದ ಬೆಳವಣಿಗೆ. ಅಂತೆಯೇ ಸಂತರ ಮಹಂತರ ಸ್ಮರಣೆಯಿಂದ ಭಾರತದ ಮೆರವಣಿಗೆ.

ಯಾರು ಮಾಡುತ್ತಿದ್ದಾರೆ ಮುಖ್ಯವಲ್ಲ, ಏನು ಮಾಡುತ್ತಿದ್ದಾರೆ ಎಂಬುದು ಮುಖ್ಯವಾಗಲಿ

ಹೌದು, ಬಸವಣ್ಣನವರ ಜಯಂತಿಯಲ್ಲಿ ಬಹುಪಾಲು ವೀರಶೈವರೇ ಇರುತ್ತಾರೆ. ಕೆಂಪೇಗೌಡ ಜಯಂತಿಯಲ್ಲಿ ಒಕ್ಕಲಿಗರೇ ಇರುತ್ತಾರೆ. ಟಿಪ್ಪು ಜಯಂತಿಯಲ್ಲಿ ಮುಸ್ಲಿಮರೇ ಇರುತ್ತಾರೆ. (ಶಿಶುನಾಳ ಶರೀಫರ ಜಯಂತಿ  ಮಾಡಿದ್ದರೆ ಆ ಪರಿಣಾಮ ಬೇರೆಯಿರುತ್ತಿತ್ತು). ಕನಕದಾಸ ಜಯಂತಿಯಲ್ಲಿ ಕುರುಬರಿರುತ್ತಾರೆ. ವಿಶ್ವಕರ್ಮ ಜಯಂತಿಯಲ್ಲಿ ಅಂಬೇಡ್ಕರ್ ಜಯಂತಿಯಲ್ಲಿ ಆಯಾ ಜಾತಿಯವರೇ ಹೆಚ್ಚಿರುತ್ತಾರೆ. ಹಾಗಾಗಿ ನಮಗೆ ಜಾತಿ, ಜಾತಿವಾದ ಎದ್ದು ಕಾಣುತ್ತದೆ ನಿಜ. ಆದರೆ ಆ ಜಯಂತಿಗಳಿಗೆ ಆಯಾ ಜಾತಿಯ ಜನ ಬರದೇ ಹೋಗಿದ್ದರೆ ಈ ಮಹಾತ್ಮರ ಜಯಂತಿಗಳು ಕೇವಲ ಹಾಳೆಯ ಮೇಲಿರುತ್ತಿದ್ದವು ಎಂಬುದನ್ನು ಮರೆಯಬಾರದು. ‘‘ಯಾತರ ಹೂವಾದರೇನು ನಾತರದು ಸಾಲದೇ ಜಾತಿಮತವೆನಬೇಡ ದೇವನರಿದಾತನೆ ಜಾತ ಸರ್ವಜ್ಞ’’ಎಂಬ ಮಾತು ಮನನೀಯ-ನಮ್ಮ ಸಂತರ, ಮಹಂತರ ಜಯಂತಿಯನ್ನು ಯಾವುದೇ ಜಾತಿಯವರು ಮಾಡಲಿ, ಅವರ ಹೆಸರಲ್ಲಿ ಏನೇ ಮಾಡಿದರೂ ಆ ಮಹಾತ್ಮರ ಮಟ್ಟಕ್ಕೆ ನಾವೇರಬೇಕು ನಮ್ಮ ಸಮಾಜವೇರಬೇಕು. ಆಗ ಮಾತ್ರ ಒಳಿತಾಗುತ್ತದೆ. ಆ ಮಹಾತ್ಮರನ್ನು ನಾವು ನಮ್ಮ ಮಟ್ಟಕ್ಕೆ ಇಳಿಸಿ ಒಂದು ಟ್ರಂಪ್ ಕಾರ್ಡ್ ಅಥವಾ ಎಂಬ್ಲಂ ಮಾಡುವುದರಿಂದ ಯಾರಿಗೂ ಒಳಿತಾಗುವುದಿಲ್ಲ. ಕಲ್ಲು ನೀರಲ್ಲಿದ್ದು ನೆನೆಯದಂತೆ, ಇದ್ದಿಲು ಹಾಲಲಿದ್ದು ಬಿಳಿಯಾಗದಂತೆ, ಭಾರತದೊಳಿದ್ದು ಭಾರತೀಯರಾಗದಂತೆ, ಹಿಂದುತ್ವದೊಳಗಿದ್ದೂ ಹಿಂದುವಾಗದಂತೆ ಸಾಯುವುದಕ್ಕೆ ಕಾರಣವಾಗುತ್ತದೆ. ಹಾಗಾಗದಿರಲಿ ಎಂಬುದು ಮಹಾತ್ಮರ ಆಶೀರ್ವಾದವೂ ಆಗಿದೆ. ಹಾಗಾಗಲಿ.

ಒಬ್ಬ ಜಂಗಮನ ಅಭಿಮಾನದಿಂದ ಕಲ್ಯಾಣ ಕೆಟ್ಟಿತ್ತು ಎಂಬಂತಾಗದಿರಲಿ

12ನೆಯ ಶತಮಾನ ಜಾತಿಗಳಲ್ಲಿದ್ದು ಜಾತಿಮೀರಿ ನೀತಿಗೇರಿದ ಮಹಾ ಮಾನವತೆಯ ಶತಮಾನ. ಅಂದು ರೂಪುಗೊಂಡ ಒಬ್ಬೊಬ್ಬ ಶರಣನು ಒಬ್ಬೊಬ್ಬ ಸಾಂಸ್ಕೃತಿಕ ನಾಯಕನಾಗಿ ಹೊರಹೊಮ್ಮಿದ್ದಾನೆ. ನಮ್ಮ ನಡುವೆ ಎರಡು ರೀತಿಯ ಜನರಿರುತ್ತಾರೆ. ಒಂದು-ವ್ಯಕ್ತಿ ತನ್ನ ಸ್ವಾರ್ಥಕ್ಕಾಗಿ ಜಾತಿಯನ್ನು ಹಿಡಿದುಕೊಂಡು ಬದುಕುವವರು. ಮತ್ತೊಂದು – ಆ ವ್ಯಕ್ತಿ ಶಕ್ತಿವಂತನೂ, ಸುಸಂಸ್ಕೃತನೂ, ಜನಪ್ರಿಯನೂ ಆಗಿ ಬೆಳೆದಾಗ ಜಾತಿಯೇ ವ್ಯಕ್ತಿಯನ್ನು ಪ್ರಬಲವಾಗಿ ಹಿಡಿದುಕೊಳ್ಳುತ್ತದೆ. ಶರಣರು ಒಂದನೆಯ ಗುಂಪಿಗೆ ಸೇರಿದವರಲ್ಲ ಎರಡನೇ ಗುಂಪಿಗೆ ಸೇರಿದವರು. ಹಾಗಾಗಿಯೇ ಇಂದಿಗೂ ಮಾದಾರ, ಹೊಲೆಯ, ಡೋಹಾರ, ನೇಕಾರ, ಬೋವಿ, ಅಂಬಿಗ, ಒಕ್ಕಲಿಗ, ಮಡಿವಾಳ, ಮೊದಲಾದ ಸಣ್ಣ ಸಣ್ಣ ಜಾತಿಗಳ ಜನರು ತಮ್ಮ ಮೇಲೆ ಹೇರಲ್ಪಟ್ಟಿರುವ ಕೀಳರಿಮೆಯ ಭಾರವನ್ನು ಕಿತ್ತೆಸೆಯಲು ಕ್ರಮವಾಗಿ ಚೆನ್ನಯ್ಯ, ಹರಳಯ್ಯ, ಕಕ್ಕಯ್ಯ, ದಾಸಿಮಯ್ಯ, ಸಿದ್ಧರಾಮ, ಚೌಡಯ್ಯ, ಮುದ್ದಣ್ಣ, ಮಾಚಿದೇವ ಮೊದಲಾದ ಮಹಾತ್ಮರನ್ನು ತಮ್ಮ ಜನಾಂಗದ ಶ್ರೇಷ್ಠತೆಯ ಸಂಕೇತಗಳನ್ನಾಗಿಸಿಕೊಂಡು ಬಿಡುಗಡೆಯ ಬೆಳಕಿಗಾಗಿ ಹಂಬಲಿಸುತ್ತಿದ್ದಾರೆ. ಜನ ಹೀಗೆ ಆದರ್ಶಕ್ಕಾಗಿ ಹಂಬಲಿಸುತ್ತಿದ್ದಾರೆ. ಮಹಾತ್ಮರ ಹೆಸರಲ್ಲಿ ಒಂದಾಗುತ್ತಾರೆ ಎಂಬುದು ಸ್ವಾತಂತ್ರ್ಯ ಹೋರಾಟದಿಂದಲೂ ಅನುಭವಕ್ಕೆ ಬಂದಿರುವ ಸಂಗತಿ. ಸಾರ್ವಜನಿಕ ಗಣೇಶೋತ್ಸವ ಅದಕ್ಕೊಂದು ಉದಾಹರಣೆ. ಜಲಿಯನ್‌ವಾಲಾ ಬಾಗ್ ಘಟನೆಯೂ ಅಂಥದೇ ಸಂದರ್ಭದಲ್ಲಾದದ್ದು. ಬಸವಣ್ಣ ನಲುವರ ಜಾತಿಯ ಜ್ಞಾನಯೋಗಿ ಅಲ್ಲಮನು ಶೂನ್ಯಸಿಂಹಾಸನದ ಪೀಠಾಧ್ಯಕ್ಷನಾಗಿ ಬೆಳೆದದ್ದನ್ನು ಕಂಡು ಸಂಭ್ರಮಿಸಿದ. ಇಂದು ದಲಿತ ಮುಖ್ಯಮಂತ್ರಿಯಾಗಬಾರದೆಂದು ತಡೆದು ಸಂಭ್ರಮಿಸುವ ಅಹಿಂದ ರಾಜನೀತಿಯನ್ನೂ ನೋಡುತ್ತಿದ್ದೇವೆ. ವ್ಯಕ್ತಿ ಸ್ವಾರ್ಥಕ್ಕಾಗಿ ಜಾತಿ, ಜಾತಿ ಸಂಘಟನೆ, ಜಯಂತಿ, ಮೌಲ್ಯ, ಆದರ್ಶಗಳನ್ನು ದುರ್ಬಳಕೆ ಮಾಡಿಕೊಂಡಾಗ, ಕಾರ್ಯಕರ್ತರನ್ನೂ, ಚಳವಳಿಯನ್ನೂ ದಿಕ್ಕು ತಪ್ಪಿಸಿ ದುರ್ಬಲಗೊಳಿಸಿದಾಗ ಯಾರ ಕಲ್ಯಾಣವೂ ಸಾಧ್ಯವಾಗಿಲ್ಲ. ಹಿಂದೂಗಳ ಜಾತಿಯ ಜಗಳಗಳ ಕಾರಣದಿಂದ ಮೊಗಲರು, ಬ್ರಿಟಿಷರು ಆಳಿದ್ದಾರೆ. ಹಿಂದೂಗಳು ಗುಲಾಮರಾಗಿ ನಿಜವಾಗಿಯೂ ಅಹಿಂದುಗಳಾಗಿದ್ದಾರೆ. ಒಗ್ಗಟ್ಟಿನಲ್ಲಿ ಬಲವಿದೆ ಎಂಬುದು ಕೇವಲ ಘೋಷಣೆಗಾಗಿರುವ ಮಾತಲ್ಲ. ದೇಶದ ಏಳಿಗೆಗೆ ಕಾರಣವಾಗಲಿ.

ಅಂದಿನ ಸಾರ್ವಜನಿಕ ಗಣೇಶೋತ್ಸವ ಜಾತಿ ಮೀರಿ ಭಾರತೀಯರು ನಾವು ಎಂಬ ಪ್ರಜ್ಞೆಯನ್ನು ನಿರ್ಮಿಸಿತ್ತು. ಸೋತಾಗಲೂ ದೇಶದ ಬಲವರ್ಧನೆಗೆ ಅತ್ಯಗತ್ಯವೆಂದು ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ದೇಶ ತನ್ನ ಮೊದಲ ಕಾನೂನು ಸಚಿವರನ್ನಾಗಿ ಸ್ವೀಕರಿಸಿತ್ತು. ಆದರೆ ಅವರು ‘ಹಿಂದೂಗಳ ಏಕತೆ’ಗಾಗಿ ಮಂಡಿಸಿದ ‘ಹಿಂದೂಗಳ ಕಲ್ಯಾಣ’ಕ್ಕಾಗಿ ಮಂಡಿಸಿದ ಹಿಂದೂ ಕೋಡ್‌ಬಿಲ್‌ನ್ನು ಒಪ್ಪದ ಜಾತಿಮತದ ಮನಸುಗಳಿಂದಾಗಿ ಅಂಬೇಡ್ಕರ್ ಹೊರನಡೆದರು. ಭಾರತ ಬಡವಾಯಿತು. ಅಂತೆಯೇ 12ನೆಯ ಶತಮಾನದ ಮಹಾಕ್ರಾಂತಿಯ ರೂವಾರಿ ಬಸವಣ್ಣನವರೂ ತಮ್ಮ ವಚನವೊಂದರಲ್ಲಿ  :

‘‘ಅರಸು ವಿಚಾರ, ಸಿರಿಯು, ಶೃಂಗಾರ, ಸ್ಥಿರವಲ್ಲ ಮಾನವಾ
ಕೆಟ್ಟಿತ್ತು ಕಲ್ಯಾಣ, ಹಾಳಾಯ್ತು ನೋಡಾ.
ಒಬ್ಬ  ಜಂಗಮನ ಅಭಿಮಾನದಿಂದ
ಚಾಳುಕ್ಯರಾಯನ ಆಳಿಕೆ ತೆಗೆಯಿತ್ತು
ಸಂದಿತ್ತು, ಕೂಡಲ ಸಂಗಮದೇವಾ ನಿಮ್ಮ ಕವಳಿಗೆಗೆ’’

ಎಂದಿದ್ದಾರೆ. ಅಭಿಮಾನವಿರಬೇಕು ಆದರದು ಕಲ್ಯಾಣದ ಕೇಡಿಗೆ ಕಾರಣವಾಗುವಂಥದ್ದಾಗಬಾರದು. ಇಂದು ಜಾತಿಯ ಅಭಿಮಾನದಿಂದ ಸ್ವತಂತ್ರ ಭಾರತದ ಆಳಿಕೆ ತೆಗೆಯಿತ್ತು ಕಲ್ಯಾಣ ಕೆಟ್ಟಿತ್ತು ಹಾಳಾಯಿತ್ತು ಎಂದು ಹೇಳಬಹುದಾದಷ್ಟು ವಚನ ಅನ್ವರ್ಥವುಳ್ಳದ್ದೆನಿಸುತ್ತದೆ. ಇಂದೂ ಒಬ್ಬೊಬ್ಬ ನಾಯಕರ ಜಾತಿಯ ಅಭಿಮಾನದಿಂದ ದೇಶ, ಧರ್ಮ, ಪಕ್ಷಗಳು ಹಾಳಾಗುತ್ತಿರುವುದು ವಿಪರ್ಯಾಸ ‘ಅರಸು ವಿಚಾರ, ಸಿರಿಯು, ಶೃಂಗಾರ ಸ್ಥಿರವಲ್ಲ ಮಾನವಾ’ ಎಂಬ ಸಂತ ಮಹಂತರ ಋಷಿ ಮುನಿ ದಾರ್ಶನಿಕರ ಅನುಭವದ ನುಡಿ ಅರ್ಥವಾದರೆ ಎಲ್ಲ ಜಯಂತಿಗಳೂ ಸಾರ್ಥಕ. ಅರ್ಥವಾಗದಿದ್ದಿರೆ ನಿರರ್ಥಕ. ‘ಜಯಂತಿ’ ಎಂದರೆ ಹುಟ್ಟುಹಬ್ಬ ಅದು ಸಂಭ್ರಮಕ್ಕೆ ಕಾರಣವಾಗಬೇಕು. ಎದುರಾಳಿಯನ್ನು ನೋಯಿಸುವ ಸಾಯಿಸುವ ‘ಕಲ್ಯಾಣ ಕೆಟ್ಟಿತ್ತು ಹಾಳಾಯಿತು’ ಎಂಬ ಸಾವಿನ ಮನೆಯ ಶೋಕಕ್ಕೆ ಕಾರಣವಾಗಬಾರದು. ಗುರುಹಿರಿಯರು, ಬಂಧುಮಿತ್ರರು ಎಲ್ಲಾ ಜಯಂತಿಗಳಲ್ಲಿಯೂ ಇರಲಿ. ಸೋದರತ್ವ, ಸ್ವಾತಂತ್ರ್ಯ, ಸಮಾನತೆಗಳ ಆಧಾರದ ಮೇಲೆ ನಮ್ಮ ನಾಡಿನ ಕಲ್ಯಾಣವಾಗಲಿ. ಬಸವ, ಕನಕ, ವ್ಯಾಸ, ವಾಲ್ಮೀಕಿ, ಭಗೀರಥರೆಲ್ಲರೂ ಒಡಗೂಡಿ ಕಟ್ಟಿದ ನಾಡನ್ನು ಅವರ ಹೆಸರಲ್ಲಿ ನಾವು ನಮ್ಮ ಸ್ವಾರ್ಥಕ್ಕಾಗಿ ದೇಶವನ್ನು ಒಡೆಯದಿರೋಣ, ಸಮರಸದಿ ಬಲಗೊಳಿಸೋಣ.

ರಾಷ್ಟ್ರ ವಿರೋಧಿಗಳಿಗೆ ವೇದಿಕೆ ಒದಗಿಸಿದ ಆಮ್ನೆಸ್ಟಿ

niwj1nydಆಮ್ನೆಸ್ಟಿ ಇಂಟರ್ ನ್ಯಾಷನಲ್ ಸಂಸ್ಥೆಯು (Amnesty International) ಇದೇ ಆಗಸ್ಟ್ 13 ರಂದು ಬೆಂಗಳೂರಿನ ಯುನೈಟೆಡ್ ಥಿಯೋಲಜಿಕಲ್ ಕಾಲೇಜಿನಲ್ಲಿ ‘ಮುರಿದ ಮನೆಗಳು-ನ್ಯಾಯದತ್ತ ಪಯಣ’ (Broken of families-journey) ಎನ್ನುವ ಒಂದು ಕಾರ್ಯಕ್ರಮವನ್ನು ಏರ್ಪಡಿಸಿತ್ತು. ಸಂಜೆ 7 ರಿಂದ ರಾತ್ರಿ 8-30 ರವರೆಗೆ ಅದು ಜರುಗಿತು. ಮೂರು ಕಾಶ್ಮೀರಿ ಕುಟುಂಬಗಳೊಂದಿಗೆ ಸಂವಾದ ನಡೆಸುವುದು ಕಾರ್ಯಕ್ರಮದ ಉದ್ದೇಶವಾಗಿತ್ತು. ಈ ಮೂರು ಕುಟುಂಬಗಳನ್ನು (ಅವೆಲ್ಲ ಮುಸ್ಲಿಂ ಕುಟುಂಬಗಳು) ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಭಾರತೀಯ ಸೇನೆಯಿಂದ ಮಾನವ ಹಕ್ಕುಗಳ ಉಲ್ಲಂಘನೆಗೊಳಗಾದವರು ಎಂದು ಬಣ್ಣಿಸಿತ್ತು. ಇಸ್ಲಾಮಿಕ್ ಉಗ್ರಗಾಮಿಗಳಿಂದ ಮಾನವ ಹಕ್ಕುಗಳ ಉಲ್ಲಂಘನೆಗೆ ಗುರಿಯಾದ ಕಾಶ್ಮೀರಿ ಪಂಡಿತ ಕುಟುಂಬಗಳು ಕಾರ್ಯಕ್ರಮದಲ್ಲಿ ಒಳಗೊಂಡಿರಲಿಲ್ಲ.

ಬೆಂಗಳೂರಿನ ಕೆಲವು ಜಾಗೃತ ನಾಗರಿಕರು ಸಂಘಟಕರನ್ನು ಸಂಪರ್ಕಿಸಿ, ಕಾರ್ಯಕ್ರಮವು ಪಕ್ಷಪಾತದಿಂದ ಕೂಡಿದೆ ಮತ್ತು ನ್ಯಾಯಸಮ್ಮತವಾಗಿಲ್ಲ ಎಂದು ಗಮನ ಸೆಳೆದರು. ಆಗ ಆಮ್ನೆಸ್ಟಿಯವರು ಒಂದು ಕಾಶ್ಮೀರಿ ಪಂಡಿತ ಕುಟುಂಬವನ್ನು ಸೇರಿಸಿಕೊಳ್ಳಲು ಸಮ್ಮತಿಸಿದರು.

ಸ್ವಾಗತ ಭಾಷಣ ಮಾಡಿದ ಆಮ್ನೆಸ್ಟಿಯ ಕಾರ್ಯಕ್ರಮ ನಿರ್ದೇಶಕಿ ತಾರಾರಾವ್ ಅವರು ಕಾಶ್ಮೀರಿ ಪಂಡಿತರಿಗಾದ ಸಾವು-ನೋವುಗಳ ಬಗ್ಗೆ ತಪ್ಪು ಮಾಹಿತಿ ನೀಡಿದಾಗ ಸಭೆಯಲ್ಲಿದ್ದ ಜಾಗೃತ ನಾಗರಿಕರು ಸರಿಪಡಿಸಿದರು. ಸಭೆಯಲ್ಲಿದ್ದ ಕೆಲವರು ಸರಿಪಡಿಸುವುದನ್ನು ಆಕ್ಷೇಪಿಸಿದರಾದರೂ ತಾರಾರಾವ್ ತಮ್ಮ ಹೇಳಿಕೆಯನ್ನು ಸರಿಪಡಿಸಿಕೊಳ್ಳಲು ಸಮ್ಮತಿಸಿದರು.

ಅದಾದ ಬಳಿಕ ಮೂರು ಕಾಶ್ಮೀರಿ ಮುಸ್ಲಿಂ ಕುಟುಂಬಗಳ ಅಭಿಪ್ರಾಯವನ್ನು ಒಳಗೊಂಡ ಮೂರು ವಿಡಿಯೋಗಳನ್ನು ಪ್ರದರ್ಶಿಸಲಾಯಿತು; ಆ ಕುಟುಂಬಗಳ ಸದಸ್ಯರಿಗೆ ಮಾತನಾಡಲು ಅವಕಾಶ ನೀಡಲಾಯಿತು. ಮತ್ತು ಜಗತ್ತು ಮೌನ ಮುರಿಯಲಿಲ್ಲ (And the world remained silent) ಎನ್ನುವ ಎಂಟು ನಿಮಿಷಗಳ ಒಂದು ವಿಡಿಯೋ ಪ್ರದರ್ಶಿಸಬೇಕೆಂದು ಕಾಶ್ಮೀರಿ ಪಂಡಿತರು ಅಪೇಕ್ಷಿಸಿದಾಗ ಸಂಘಟಕರು ಅವಕಾಶ ಕೊಡಲಿಲ್ಲ.

ಇಸ್ಲಾಮಿಕ್ ಭಯೋತ್ಪಾದನೆಯಿಂದ ಉಂಟಾದ ಪರಿಸ್ಥಿತಿಯ ದುರ್ಬಳಕೆ ಮಾಡಲು ವಿದೇಶೀ ಶಕ್ತಿಗಳು ಹವಣಿಸುತ್ತಿದ್ದು ಸಾವಿರಾರು ಯುವಜನರು ಉದ್ರಿಕ್ತರಾಗಿ ಬೀದಿಗಿಳಿದಿದ್ದಾರೆ; ಅಂತಹ ಕಠಿಣ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಭಾರತೀಯ ಸೇನಾ ಸಿಬ್ಬಂದಿ ಶಿಸ್ತು ಮತ್ತು ಸ್ಪಂದನಶೀಲರಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿ ಕಾಶ್ಮೀರಿ ಪಂಡಿತರ ಪ್ರತಿನಿಧಿ ಮಟ್ಟೂ ಅವರು ಚರ್ಚೆಯ ವೇಳೆ ಗಮನ ಸೆಳೆದರು. ಸಭೆಯಲ್ಲಿದ್ದ, ಈಗಾಗಲೆ ಹೇಳಿದ ಕೆಲವರು ಸೇನೆಯ ಬಗೆಗಿನ ಗುಣಾತ್ಮಕ ಮಾತುಗಳನ್ನು ತೀವ್ರವಾಗಿ ಆಕ್ಷೇಪಿಸಿದರು. ಸಭೆಯಲ್ಲಿದ್ದ ಇತರರು ಇದನ್ನು ವಿರೋಧಿಸಿದಾಗ ಗೊಂದಲ ಉಂಟಾಯಿತು. ಮಟ್ಟೂ ಅವರ ಭಾಷಣಕ್ಕೆ ತಡೆ ಒಡ್ಡಲಾಯಿತು. ಜವಾಬ್ದಾರಿಯುತ ನಾಗರಿಕರು ಮತ್ತು ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು; ಕಾರ್ಯಕ್ರಮ ಮುಂದುವರಿಯಿತು. ಮಟ್ಟೂ ಭಾಷಣವನ್ನು ಮುಂದುವರಿಸಿ ಕಾಶ್ಮೀರದ ಅಶಾಂತಿಯನ್ನು ಕೊನೆಗೊಳಿಸಿ ಎಂದು ಮನವಿ ಮಾಡಿದಾಗ ಸಭೆ ಅನುಮೋದಿಸಿತು.

ಮುಗಿಯುವ ಹೊತ್ತಿಗೆ ಕಾಶ್ಮೀರಿ ಪಂಡಿತರು ಸೇರಿದಂತೆ ಕೆಲವರು ಸಭೆಯಿಂದ ಹೊರಡಲು ಅಣಿಯಾದರು. ಸಭಾಂಗಣದಲ್ಲಿ ಉಳಿದುಕೊಂಡ ಒಂದು ಗುಂಪು ಸ್ವಾತಂತ್ರ್ಯಪರ ಘೋಷಣೆಗಳನ್ನು ಕೂಗಲಾರಂಭಿಸಿತು. ಆ್ಯಮ್ನೆಸ್ಟಿಯವರು ಅವರನ್ನು ತಡೆಯಲಿಲ್ಲ. ಹೊರಗೆ ಹೋಗುತ್ತಿದ್ದವರು ಇದನ್ನು ಗಮನಿಸಿ, ಪೊಲೀಸರಿಗೆ ತಿಳಿಸಿದರು; ಹಾಗೂ ರಾಷ್ಟ್ರವಿರೋಧಿ ಘೋಷಣೆಗಳನ್ನು ವಿರೋಧಿಸಿದರು.

ಆ್ಯಮ್ನೆಸ್ಟಿ ಇಂಟರ್‌ನ್ಯಾಷನಲ್ 2015ರಲ್ಲಿ (Denied-Failures in accountability for human right violations by security force personnel in Jammu and Kashmir) ನಿರಾಕರಣೆ-ಜಮ್ಮು-ಕಾಶ್ಮೀರದಲ್ಲಿ ಸೇನಾ ಸಿಬ್ಬಂದಿ ನಡೆಸಿದ ಮಾನವ ಹಕ್ಕುಗಳ ಉಲ್ಲಂಘನೆಗೆ ಉತ್ತರದಾಯಿತ್ವ ಇಲ್ಲ ಎನ್ನುವ ಒಂದು ವರದಿಯನ್ನು ಪ್ರಕಟಿಸಿದ್ದು, ಅದರ ಆಧಾರದಲ್ಲಿ ಪ್ರಸ್ತುತ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಆ ವರದಿ ಪೂರ್ತಿಯಾಗಿ ಭಾರತ ಸರ್ಕಾರದ ಸಂಸ್ಥೆಗಳು, ವಿಶೇಷವಾಗಿ ಭಾರತೀಯ ಸೇನೆಯ ವಿರುದ್ಧ ಇದೆ. ದುರದೃಷ್ಟವೆಂದರೆ, ವರದಿಯು ಮಾನವ ಹಕ್ಕುಗಳಿಗೆ ಗುಣಾತ್ಮಕ ಕೊಡುಗೆ ನೀಡುವ ರೀತಿಯಲ್ಲಿಲ್ಲ. ಕಾರ್ಯಕ್ರಮದಲ್ಲಿ ಆ್ಯಮ್ನೆಸ್ಟಿಯ ಪದಾಧಿಕಾರಿಗಳು ರಾಷ್ಟ್ರವಿರೋಧಿ ಶಕ್ತಿಗಳೊಂದಿಗೆ ಕೈ ಜೋಡಿಸಿದ್ದರು. ಮತ್ತು ತಮ್ಮ ವೇದಿಕೆಯಲ್ಲಿ ಭಾರತ-ವಿರೋಧಿ ಘೋಷಣೆಗಳನ್ನು ಕೂಗುವುದಕ್ಕೆ ಅವಕಾಶ ನೀಡಿದರು; ಇದು ಭಾರತ ಸರ್ಕಾರ ಮತ್ತು ಸರ್ಕಾರಿ ಸಂಸ್ಥೆಗಳ ವಿರುದ್ಧ ಜನರನ್ನು ಎತ್ತಿಕಟ್ಟುವಂತಿತ್ತು.

ಆ್ಯಮ್ನೆಸ್ಟಿ ಇಂಟರ್‌ನ್ಯಾಷನಲ್‌ನಂತಹ ಒಂದು ಸಂಸ್ಥೆಗೆ ಪ್ರಸ್ತುತ ಸೂಕ್ಷ್ಮ ಸನ್ನಿವೇಶದಲ್ಲಿ ಯಾವ ರೀತಿ ನಡೆದುಕೊಳ್ಳಬೇಕೆಂದು ಕೆಲವು ಸಲಹೆಗಳನ್ನು ನೀಡುವುದು ಉಚಿತವೆನಿಸುತ್ತದೆ. ಮೇಲೆ ಹೇಳಿದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜವಾಬ್ದಾರಿಯುತ ನಾಗರಿಕರು ಈ ನಿಟ್ಟಿನಲ್ಲಿ ಒಂದು ಅಭಿಪ್ರಾಯಕ್ಕೆ ಬಂದಿದ್ದು ಅವುಗಳನ್ನಿಲ್ಲಿ ದಾಖಲಿಸಲಾಗಿದೆ.

ಮಾನವ ಹಕ್ಕುಗಳ ರಕ್ಷಣೆಗೆ ಆ್ಯಮ್ನೆಸ್ಟಿ ಇಂಟರ್‌ನ್ಯಾಷನಲ್ ಏನು ಮಾಡಬೇಕು?
*ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಪ್ರಕಟಿಸಿದ ಮೇಲೆ ಹೇಳಿದ ವರದಿಯು (Denied-Failures in accountability…) ಪಕ್ಷಪಾತದಿಂದ ಕೂಡಿದ್ದು, ಕಾಶ್ಮೀರ ಮತ್ತಿತರ ಕಡೆ ಮಾನವ ಹಕ್ಕು ರಕ್ಷಣೆಗೆ ಪ್ರತಿಕೂಲವಾದ ವಾತಾವರಣವನ್ನು ನಿರ್ಮಿಸುತ್ತಿದೆ. ಸಂಸ್ಥೆ ಕೂಡಲೆ ತನ್ನ ವರದಿ ತಯಾರಿ ಬಗೆಗೆ ಆತ್ಮ ನಿರೀಕ್ಷಣೆ ಮಾಡಿಕೊಂಡು ದೋಷವನ್ನು ಸರಿಪಡಿಸಿಕೊಳ್ಳಬೇಕು.

*ಶಿಫಾರಸುಗಳನ್ನು ಮಾಡುವಲ್ಲಿ ಆ್ಯಮ್ನೆಸ್ಟಿಯ ಈ ವರದಿ ವಿಫಲವಾಗಿದೆ. ಶಿಫಾರಸು ವಿಭಾಗದ ಎಲ್ಲ ಸಲಹೆಗಳು ಭಾರತ ಸರ್ಕಾರ ಮತ್ತು ಸ್ಥಳೀಯ ಜಮ್ಮು-ಕಾಶ್ಮೀರ ಸರ್ಕಾರಕ್ಕೆ ಉಪದೇಶ ಮಾಡುವ ದಾಟಿಯಲ್ಲಿವೆ. ಪಾಕಿಸ್ತಾನದ ಸರ್ಕಾರ, ಸೇನೆ ಮತ್ತು ಕಾಶ್ಮೀರದ ಸಶಸ್ತ್ರ ಉಗ್ರಗಾಮಿ ಗುಂಪುಗಳಿಗೆ ಯಾವುದೇ ಸಲಹೆ, ಶಿಫಾರಸ್ಸುಗಳನ್ನು ನೀಡಲಾಗಿಲ್ಲ. ನಿಜವೆಂದರೆ, ಕಾಶ್ಮೀರದಲ್ಲಿ ಕಳೆದ ಮೂರು ದಶಕಗಳಲ್ಲಿ ರಕ್ತಪಾತ ನಡೆಸುತ್ತಿರುವವರು ಮತ್ತು ಗೊಂದಲ ಹಬ್ಬಿಸುತ್ತಿರುವವರು ಅವರು.

*ಬ್ರಿಟನ್‌ನಿಂದ ಆರ್ಥಿಕ ಸಹಾಯವನ್ನು ಪಡೆದು ಬ್ರಿಟನ್‌ನಲ್ಲೇ ತನ್ನ ವರದಿಯನ್ನು ಪ್ರಕಟಿಸುತ್ತಿರುವ ಆ್ಯಮ್ನೆಸ್ಟಿ ಇಂಟರ್‌ನ್ಯಾಷನಲ್ ತಾನು ನಿರ್ಲಿಪ್ತನೆಂದು ಹೇಳಿಕೊಳ್ಳುವುದು ಸರಿಯೆನಿಸದು. ಆದ್ದರಿಂದ ಇನ್ನು ಕಾಶ್ಮೀರದ ಬಗೆಗೆ ಯಾವುದೇ ಶಿಫಾರಸುಗಳನ್ನು ಮಾಡುವ ಮುನ್ನ ಆ್ಯಮ್ನೆಸ್ಟಿ ಬ್ರಿಟನ್ ಹಾಗೂ ಇತರ ದೇಶಗಳ ಜೊತೆಗಿನ ತನ್ನ ಸಂಬಂಧವನ್ನು ಸ್ಪಷ್ಟವಾಗಿ ಹೇಳಕೊಳ್ಳಬೇಕು.

*ಈಗಲೂ ನಡೆಯುತ್ತಿರುವ ಇಸ್ಲಾಮಿಕ್ ಭಯೋತ್ಪಾದನೆಯಿಂದ ಜಮ್ಮು-ಕಾಶ್ಮೀರದಲ್ಲಿ ಅದೆಷ್ಟೋ ಕುಟುಂಬಗಳು ನಿರಂತರವಾಗಿ ಕಷ್ಟದಲ್ಲಿ ಸಿಲುಕಿವೆ. ಬಹಳಷ್ಟು ಯುವಜನರು ದಾರಿತಪ್ಪಿದವರಾಗಿ, ಇಂತಹ ಸನ್ನಿವೇಶ ಮತ್ತು ಘಟನೆಗಳನ್ನು ವರದಿ ಮಾಡುವಾಗ ತುಂಬ ಪಕ್ವತೆ ಬೇಕಾಗುತ್ತದೆ; ಆ್ಯಮ್ನೆಸ್ಟಿ ಅದಕ್ಕೆ ಗಮನ ಕೊಡುತ್ತಿಲ್ಲ. ಆದ್ದರಿಂದ ಪ್ರತ್ಯೇಕತಾವಾದಿಗಳು ಹಿಂಸಾಚಾರವನ್ನು ಹಬ್ಬಿಸಿರುವ ಪ್ರಸ್ತುತ ವಾತಾವರಣದಲ್ಲಿ ಆ್ಯಮ್ನೆಸ್ಟಿ ಇಂಟರ್‌ನ್ಯಾಷನಲ್ ಭಾರತದ ವ್ಯವಸ್ಥೆಯ ವಿರುದ್ಧ ಜನರನ್ನು ಪ್ರಚೋದಿಸುವ ಕೆಲಸವನ್ನು ತಕ್ಷಣ ನಿಲ್ಲಿಸಬೇಕು.

ಲಷ್ಕೆರ್-ಎ-ತೋಯಬಾ, ಹಿಜ್ಜುಲ್ ಮುಜಾಹಿದೀನ್ ಹಾಗೂ ಬುರ್ಹಾನ್‌ವನಿಯಂತಹ ಅವುಗಳ ಹಿಂಬಾಲಕರ ಚಟುವಟಿಕೆಗಳೂ ಹಾಗೂ ಅವರು ನಡೆಸುತ್ತಿರುವ ಮಾನವ ಹಕ್ಕು ಉಲ್ಲಂಘನೆಗಳ ಕುರಿತು ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಒಂದು ವರದಿಯನ್ನು ಪ್ರಕಟಿಸಬೇಕು.

*ಸೋಷಿಯಾನ್ ಜಿಲ್ಲೆಯ ಹಾಲ್ ಎಂಬಲ್ಲಿ ನಡೆದ ಘಟನೆಯಲ್ಲಿ 3,000ಕ್ಕೂ ಹೆಚ್ಚು ಅಧಿಕ ಕಾಶ್ಮೀರಿ ಪಂಡಿತ ನೌಕರರಿಗೆ ಚಿತ್ರಹಿಂಸೆ ನೀಡಿ ಕಾಶ್ಮೀರ ಕಣಿವೆಯಿಂದ ಅವರನ್ನು ಹೊರಹಾಕಲಾಯಿತು. ಅವರೀಗ ಜಮ್ಮುವಿನ ನಿರಾಶ್ರಿತರ ಶಿಬಿರಗಳಲ್ಲಿ ಕಾಲ ಕಳೆಯುತ್ತಿದ್ದಾರೆ. ಇದು ಆಮ್ನೆಸ್ಟಿಯ ಗಮನಕ್ಕೆ ಬಂದಿಲ್ಲವೆ? ಅದರ ಬಗ್ಗೆ ಒಂದು ವರದಿಯನ್ನು ಪ್ರಕಟಿಸಬಹುದಲ್ಲವೆ?

*ಅದೇ ರೀತಿ ಕಾಶ್ಮೀರದಲ್ಲಿ ಕಳೆದ 26 ವರ್ಷಗಳಲ್ಲಿ ಐದು ಲಕ್ಷ ಹಿಂದುಗಳ ಮಾನವ ಹಕ್ಕುಗಳ ಉಲ್ಲಂಘನೆ ನಡೆಯಿತು; ಅದರಿಂದ ಏನೇನೋ ಪರಿಣಾಮಗಳಾದವು. ಅವರನ್ನು ಅವರ ಮೂಲಸ್ಥಳ-ಮನೆಗಳಿಗೆ ಮರಳಿಸಲು, ಪುನರ್ವಸತಿ ಕಲ್ಪಿಸಲು ಭಾರತ ಸರ್ಕಾರ ತುಂಬ ಶ್ರಮಪಟ್ಟಿದೆ. ಇದು ಆ್ಯಮ್ನೆಸ್ಟಿ ಇಂಟರ್‌ನ್ಯಾಷನಲ್‌ನ ವರದಿಗೆ ವಸ್ತು ಆಗುವುದಿಲ್ಲವೆ? ಬೇಗ ಆಗಲಿ.

*ತಮ್ಮ ಪ್ರತಿಭಟನೆಗೆ ಸೇರಿಕೊಳ್ಳಿ ಅಥವಾ ಸಾಯಲು ಸಿದ್ಧರಾಗಿ ಎಂದು ಮೂರು ಲಕ್ಷ ಸಿಕ್ಖರಿಗೆ ಕಾಶ್ಮೀರದ ಪ್ರತ್ಯೇಕತಾವಾದಿಗಳು ಜೀವಬೆದರಿಕೆ ಒಡ್ಡುತ್ತಿದ್ದಾರೆ. ಆ ಬಗ್ಗೆ ಆಮ್ನೆಸ್ಟಿಯವರು ಜಗತ್ತಿನ ಗಮನ ಸೆಳೆಯಬೇಕಾಗಿದೆ.

*ಕಾಶ್ಮೀರದಲ್ಲಿ 300ಕ್ಕೂ ಅಧಿಕ ದೇವಾಲಯಗಳನ್ನು ನಾಶಗೊಳಿಸಲಾಗಿದೆ. ಭದ್ರತೆಯ ಅಡಿಯಲ್ಲಿರುವ ದೇವಾಲಯಗಳ ಮೇಲೆ ಕೂಡ ಪ್ರತ್ಯೇಕತಾವಾದಿಗಳು ವ್ಯವಸ್ಥಿತ ದಾಳಿ ನಡೆಸುತ್ತಿದ್ದಾರೆ. ಪಾಕಿಸ್ತಾನ ಮತ್ತು ಜಿಹಾದಿ ಶಕ್ತಿಗಳು ಇಸ್ಲಾಮಿನ ಹೆಸರಿನಲ್ಲಿ ಕಾಶ್ಮೀರಿಗಳಿಗೆ ತಪ್ಪು ಮಾಹಿತಿಯನ್ನು ನೀಡುತ್ತಿವೆ; ಮತ್ತವರ ಮನಃಪರಿವರ್ತನೆ (ಬ್ರೈನ್‌ವಾಶ್) ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಮಾಮೂಲಾದ ವರದಿಗಳನ್ನು ತಯಾರಿಸುವುದನ್ನು ಬಿಟ್ಟು ಸಮಸ್ಯೆಯ ಮೂಲಕ್ಕೆ ಹೋಗಬೇಕು; ಮಾನವ ಹಕ್ಕಿನ ಬದ್ಧತೆ ನೈಜವಾಗಿರಬೇಕು.

*ಭಾರತೀಯ ಸೇನೆಯನ್ನು ತನ್ನ ಟೀಕೆಯ ಗುರಿ ಮಾಡಿಕೊಳ್ಳುವುದನ್ನು ಆಮ್ನೆಸ್ಟಿ ಕೂಡಲೆ ನಿಲ್ಲಿಸಬೇಕು. ಸೇನೆಯ ಯುವ ಸಿಬ್ಬಂದಿ ಕಾಶ್ಮೀರದಲ್ಲಿ ಅತ್ಯಂತ ಸಂಯಮದಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರತಿಭಟನೆಯ ಅಂಗವಾಗಿ ಭದ್ರತಾ ಸಿಬ್ಬಂದಿ ಮೇಲೆ ಕಲ್ಲೆಸೆಯುವುದನ್ನು ಮಾನವ ಹಕ್ಕು ಉಲ್ಲಂಘನೆಯೆಂದು ಘೋಷಿಸಬೇಕು.

*ಭಯೋತ್ಪಾದನೆಯ ಸಂತ್ರಸ್ತರ ಪುನರ್ವಸತಿಗಾಗಿ ಭಾರತೀಯ ಸೇನೆ ಕೈಗೊಂಡ ‘ಉಡಾನ್’ನಂತಹ ಕ್ರಮಗಳನ್ನು ಆಮ್ನೆಸ್ಟಿ ಅರ್ಥೈಸಿಕೊಳ್ಳಬೇಕು.

*ವಿಶ್ವಸಂಸ್ಥೆಯ ಮಾರ್ಗದರ್ಶಿ ಸೂತ್ರಗಳಿಗೆ ಏನೋ ವ್ಯಾಖ್ಯಾನಮಾಡಿ ಭಾರತದ ಕಾನೂನುಗಳು ಮತ್ತು ಕಾರ್ಯನಿರ್ವಹಣೆ ಅದಕ್ಕನುಗುಣವಾಗಿ ಇರಬೇಕೆಂದು ಹೇಳುವುದನ್ನು ಆಮ್ನೆಸ್ಟಿ ತಕ್ಷಣವೇ ನಿಲ್ಲಿಸಬೇಕು.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments