ಭಾಮಿನಿ ಷಟ್ಪದಿಯಲ್ಲಿ ಭಗವಾನ್ ಶ್ರೀಧರ ಸ್ವಾಮಿಗಳ ಚರಿತ್ರೆ
– ಗುರುಪ್ರಸಾದ್ ಕೆ ಕೆ.
ಶ್ರೀಧರಭಾಮಿನಿಧಾರೆ ೧-೫
ಶ್ರೀಧರಭಾಮಿನಿಧಾರೆ ೬-೧೦
6)
ವೆಂಕಟಾಚಲ ಗಿರಿಯ ಅಧಿಪತಿ
ವೆಂಕಟೇಶನು ಕುಲದ ದೈವನು
ಸುಂಕಸಂಗ್ರಹ ಮಾಡುವಂತಹ ವಂಶ ಇವರದ್ದೂ||
ಸಂಕ ಇಹಕೂ ಪರಕು ಬೆಸೆಯುವ
ಸಂಕಟವ ಬಹುದೂರ ಸರಿಸುವ
ಪಂಕಜಾತ್ಮನು ಕರುಣೆ ತೋರಿಹ ವಂಶ ಇವರದ್ದೂ||
ತಾತ್ಪರ್ಯ : ಸಪ್ತಗಿರಿವಾಸ ಶ್ರೀನಿವಾಸನು ಇವರ ಕುಲದೇವರಾಗಿದ್ದಾನೆ. ಈ ‘ಪತಕಿ’ ಎಂಬ ಶಬ್ಧವು ‘ಫಸಕೀ’ ಎಂಬ ಶಬ್ದದ ಅಪಭ್ರಂಶವಾಗಿದ್ದು, ಸುಂಕವಸೂಲಿ ಮಾಡುವ ಅಧಿಕಾರಿಗೆ ಈ ಹೆಸರು ಹೇಳುವ ವಾಡಿಕೆ ಇತ್ತು. ಈ ವಂಶದಲ್ಲಿ ಹಿಂದೆ ಯಾರೋ ಸುಂಕವಸೂಲಿ ಮಾಡುವ ಅಧಿಕಾರದಲ್ಲಿ ಇದ್ದುದರಿಂದ ಈ ಮನೆತನಕ್ಕೆ ಪತಕಿ ಎಂಬ ಹೆಸರು ಬಂತು. ಬಹಳ ಧರ್ಮಿಷ್ಟರಾದ ಇವರ ವಂಶದ ಮೇಲೆ, ಸಂಕಟನಾಶಕ, ಇಹ-ಪರಗಳ ಸೇತುವೆಯಾದ ವೆಂಕಟೇಶ್ವರನ ಪೂರ್ಣಾನುಗ್ರಹ ಇತ್ತು.
7)
ತಾಯಿ ಕಮಲಾಬಾಯಿಯವರೂ
ರಾಯ ನಾರಾಯಣರು ತಂದೆಯು
ಕಾಯಪಡೆದರು ಗುರುವು ತಂದೇತಾಯಿ ಉದರದಲೀ||
ನಾಯಕರು ಆ ದತ್ತ ರೂಪಿಯು
ರಾಯರೂ ಗುರು ಸಿರಿಧರರು ತಾ
ಕಾಯಬೇಕೆಂದನುತ ಬೇಡುವೆ ನಮ್ಮನನವರತಾ||
ತಾತ್ಪರ್ಯ : ಪತಕಿ ವಂಶದ ಶ್ರೀ ನಾರಾಯಣರಾಯರು ಹಾಗೂ ಅವರ ಧರ್ಮಪತ್ನಿಯಾದ ಕಮಲಾಬಾಯಿಯವರ ಹೊಟ್ಟೆಯಲ್ಲಿ, ನಮ್ಮ ಕಥಾನಾಯಕರು, ಗುರುದತ್ತಾತ್ರೇಯರ ಅನುಗ್ರಹದಿಂದ ದತ್ತರೂಪಿಗಳಾದ ಶ್ರೀಧರಸ್ವಾಮಿಗಳ ಜನನವಾಯಿತು. ಪರಮಗುರು ಶ್ರೀಧರರು ನಮ್ಮನ್ನು ಸದಾಕಾಲವೂ ಕಾಪಾಡಲಿ.
8)
ದತ್ತ ಮೂರುತಿ ಜನಿಸಿದಂದೇ
ಸತ್ಯಮೂರುತಿ ಜನಿಸಿದನು ತಾ
ಸುತ್ತ ಲೋಕವ ಬೆಳಗಲೆಂದೇ ಭುವಿಗೆ ಬಂದಂತೇ||
ಪುತ್ರ ಸಿರಿಧರ ಬಾಲ ಚಂದಿರ
ಉತ್ಸವದ ಶುಭ ಸಮಯದಲಿಯೆ ನಿ-
ಮಿತ್ತವಾಗಿರುವಂತೆ ಜನಿಸಿದ ಸಂಜೆವೇಳೆಯಲೀ||
ತಾತ್ಪರ್ಯ : ಭಾಗ್ಯನಗರಿ ಹೈದರಾಬಾದಿನಿಂದ ಕಮಲಾಬಾಯಿಯವರನ್ನು, ಅವರ ತಾಯಿಯಾದ ಬಯಾಬಾಯಿಯವರು, ಗುಲ್ಬರ್ಗಾದ ಸಮೀಪವಿರುವ ಲಾಡಚಿಂಚೋಳಿಗೆ, ತಮ್ಮ ಹಿರಿಮಗಳ ಮನೆಗೆ ಬಾಣಂತನಕ್ಕಾಗಿ ಕರೆದುಕೊಂಡು ಬಂದಿದ್ದರು. ಶ್ರೀಗುರು ದತ್ತಜಯಂತಿಯ ಉತ್ಸವ ಲಾಡಚಿಂಚೋಳಿಯಲ್ಲಿ ವಿಜೃಂಭಣೆಯಿಂದ ಪ್ರತಿವರುಷವೂ ನಡೆಯುತ್ತಿತ್ತು. ಇಂತಹವುತ್ಸವದ ದಿನ, ಸಂಜೆ ವೇಳೆಗೆ ಶ್ರೀಗಳವರು ಜನಿಸಿದರು.
( ನೃಪಶಾಲಿವಾಹನ ಪ್ರವರ್ತಮಾನಶಕ 1830, ಪ್ಲವಂಗನಾಮ ಸಂವತ್ಸರದ ಮಾರ್ಗಶಿರ್ಷ ಶುಕ್ಲಪಕ್ಷ ಪೌರ್ಣಮಿ ತಿಥಿಯ ಗುರುವಾರ ಅಂದರೆ ತಾ|19/12/1907 ಗುರುವಾರ ಸಾಯಂಕಾಲ 7-23 ಗಂಟೆಗೆ ಶ್ರೀಗಳು ಜನಿಸಿದರು )
9)
ಆರುತಿಂಗಳ ಬಳಿಕ ತಾಯಿಯು
ಪೋರ ಸಿರಿಧರರಿಂಗೆ ಶುಭವನು
ಕೋರುತಲಿಸಂಸ್ಕಾರಮಾಡಿದಳನ್ನ ಉಣಿಸುವುದಾ||
ಊರುಕೇರಿಯ ಕರೆದು ಎಲ್ಲರು
ಆರತಕ್ಷತೆ ಮಾಡಿ ಕುವರಗೆ
ಸಾರಿದರು ಆ ವರುಷತುಂಬಿದ ಹರುಷಘಳಿಗೆಯನೂ||
ತಾತ್ಪರ್ಯ : ಬಾಲಶ್ರೀಧರರಿಗೆ ಆರನೇ ತಿಂಗಳಲ್ಲಿ ಕಮಲಾಬಾಯಿಯವರು ಅನ್ನಪ್ರಾಶನ ಮಾಡಿಸಿದರು. ನಂತರ ದತ್ತಜಯಂತಿಯ ಉತ್ಸವದ ದಿನ, ಬಾಲಶ್ರೀಧರರಿಗೆ ಒಂದುವರ್ಷ ತುಂಬುತ್ತದೆ ಎಂದು, ಊರು-ಕೇರಿ, ಇಷ್ಟ-ಮಿತ್ರ, ಬಂಧು-ಬಳಗದವರೆಲ್ಲರನ್ನೂ ಕರೆದು ಆನಂದದಿಂದ ಶ್ರೀಧರರಿಗೆ ವರುಷ ತುಂಬಿದ ಹರುಷ ದಿನವನ್ನು ಆಚರಿಸಿದರು.
10)
ಸಿರಿಧರರ ಆ ಮೂರು ವರ್ಷಕೆ
ಪರದ ಲೋಕಕೆ ಪಿತನು ಹೋದನು
ಹರನ ನಿಯಮವ ಮೀರುವವರಾರಿಹರು ಜಗದೊಳಗೇ||
ಸರುವವೂ ಕಳೆದಂತೆನಿಸಿದಂ-
ತಿರುವ ಕಾಲವದಾಯ್ತು ತಾಯಿಗೆ
ಹಿರಿಯ ಅಣ್ಣನು ಹೊತ್ತ ಭಾರವ ಬದುಕ ನಡೆಸಲಿಕೇ||
ತಾತ್ಪರ್ಯ : ಶ್ರೀಧರರ ಬಾಲ್ಯದಲ್ಲಿಯೇ, ಅವರ ಮೂರನೆಯ ವರ್ಷದಲ್ಲಿಯೇ ಅವರಿಗೆ ಪಿತೃವಿಯೋಗವುಂಟಾಯಿತು. ಈ ಜಗತ್ತಿನಲ್ಲಿ ಮೃತ್ಯುಂಜಯನ ನಿಯಮವನ್ನು ಮೀರಲು ಯಾರಿಗೂ ಸಾಧ್ಯವಿಲ್ಲ. “ಜಾತಸ್ಯ ಮರಣಂ ದ್ರುವಂ”. ಆದರೆ ಮೂರು ಜನ ಮಕ್ಕಳೊಂದಿಗೆ ತಾಯಿಗೆ ಆದ ಆ ದುಃಖವನ್ನು ಏನೆಂದು ಬಣ್ಣಸೋಣ. ಜಗತ್ತಿನ ಸರ್ವಸ್ವವನ್ನೂ ಒಮ್ಮೆಗೆ ಕಳೆದುಕೊಂಡಂತಾಯಿತು ಅವರ ಪಾಡು. ಜ್ಯೇಷ್ಠಪುತ್ರ ತ್ರ್ಯಂಬಕರಿಗೆ ಅವರ ಹದಿನಾರರ ಪ್ರಾಯದಲ್ಲಿಯೇ ಸಂಸಾರದ ಸಂಪೂರ್ಣ ಜವಾಬ್ದಾರಿ ಬಿದ್ದಂತಾಯಿತು.
Reblogged this on ಕಲ್ಲಾರೆಗುರುವಿನ ಮನದಾಳದಲ್ಲಿ… and commented:
೬-೧೦