ಪ್ರೇತದ ಆತ್ಮ ಚರಿತೆ! (ಭಾಗ ೨)
– ಶ್ರೀಕಾಂತ್ ಶೆಟ್ಟಿ
ಪ್ರೇತದ ಆತ್ಮ ಚರಿತೆ! (ಭಾಗ ೧)
ಅದು ಮನುಕುಲ ಕಂಡ ಪರಮ ಪಾಪಿಗಳಲ್ಲೊಬ್ಬ ಔರಂಗಜೇಬ ದಿಲ್ಲಿಯ ಗದ್ದುಗೆಯಲ್ಲಿದ್ದ ಸಮಯ. ಪ್ರಜೆಗಳನ್ನು ಪರಿಪಾಲನೆ ಮಾಡಬೇಕಾದ ದೊರೆಯೇ ಜಿಸಿಯಾ ತಲೆಗಂದಾಯ ಹೇರಿ ಒಂದು ನಿರ್ದಿಷ್ಟ ಸಮಾಜದ ಸರ್ವನಾಶಕ್ಕೆ ಪಣತೊಟ್ಟು ಸಾವಿರಾರು ದೇವಾಲಯಗಳನ್ನು ದ್ವಂಸ ಮಾಡುತ್ತಿದ್ದ ಕಂಟಕಕಾಲ.. ಆ ಹೊತ್ತಿನಲ್ಲಿ ಸ್ವಾಭಿಮಾನಿ ಹಿಂದೂಗಳ ಪಾಲಿಗೆ ಆಪತ್ಭಾಂದವರಾಗಿ ಶಿವಾಜಿ ಮಹಾರಾಜರು ಉದಿಸಿದರು. ಸಹ್ಯಾದ್ರಿಯ ಸಿಂಹದ ಗುಡುಗಿಗೆ ದಿಲ್ಲಿಯ ಮೊಘಲರ ಮಯೂರ ಸಿಂಹಾಸನ ತಣ್ಣಗೆ ಕಂಪಿಸಿದ್ದಂತೂ ಸತ್ಯ. ಪ್ರವಾಹಕ್ಕೆ ವಿರುದ್ಧವಾಗಿ ಈಜಿ ತನ್ನ ಸದ್ಗುಣಗಳಿಂದ ಪ್ರಜೆಗಳ ಹೃದಯವನ್ನೂ… ಖಡ್ಗಪರಾಕ್ರಮದಿಂದ ಯವನರ ಸೈನ್ಯವನ್ನೂ ಗೆದ್ದ ಶಿವಾಜಿ, ಹಿಂದವೀ ಸ್ವಾರಾಜ್ಯವನ್ನು ಕಟ್ಟಿದರು. ಅಖಂಡ ಹಿಂದೂ ಸಾಮ್ರಾಜ್ಯಕ್ಕೆ ಬೀಜಾರೋಹಣ ಮಾಡಿದವರು ಶಿವಾಜಿ ಮಹಾರಾಜರಾದರೂ, ಅವರ ಕನಸನ್ನು ನನಸು ಮಾಡಿದವರು ಮಾತ್ರ ಪುಣೆಯ ಪೇಶ್ವಾಗಳು.
ಶಿವಾಜಿ ವಂಶಸ್ಥರಿಗೆ ಪ್ರಧಾನ ಮಂತ್ರಿಗಳಾಗಿದ್ದ ಈ ಪೇಶ್ವಾಗಳು ಜಾತಿಯಲ್ಲಿ ಚಿತ್ಪಾವನ ಬ್ರಾಹ್ಮಣರು. ಮಹತ್ವಾಕಾಂಕ್ಷೆಗೆ ಇನ್ನೊಂದು ಹೆಸರೇ ಚಿತ್ಪಾವನರು. ನೀಲಿ ಕಣ್ಣು ಗೌರ ವರ್ಣದ ತೆಳ್ಳಗಿನ ಬಳುಕು ದೇಹದ ಎತ್ತರದ ಸ್ಪುರದ್ರೂಪಿಗಳು ಚಿತ್ಪಾವನರು. ಕೊಂಕಣ ಸೀಮೆಯಲ್ಲಿ ಇವರ ಸಮಾಜ ಹರಡಿಕೊಂಡಿರುವ ಕಾರಣ ಇವರನ್ನು ಕೊಂಕಣಸ್ಥ ಬ್ರಾಹ್ಮಣರೆಂದೂ ಕರೆಯುತ್ತಾರೆ. ಅಧಮ್ಯ ಸ್ವಾತಂತ್ರಾಕಾಂಕ್ಷಿಗಳಾದ ಚಿತ್ಪಾವನರನ್ನು ಬ್ರಿಟೀಷ್ ದಾಖಲೆಗಳಲ್ಲಿ ಕೋಬ್ರಾಗಳೆಂದೇ ದಾಖಲಿಸಲಾಗಿದೆ. ಶಿವಾಜಿ ಮತ್ತು ಅವರ ಮಗ ಸಂಭಾಜಿಯ ಬಳಿಕ ಭೋಸ್ಲೆ ವಂಶದಲ್ಲಿ ಕತ್ತಿ ಹಿಡಿದು ಹೋರಾಡುವ ರಣ ಚತುರರು ಯಾರೂ ಹುಟ್ಟಲೇ ಇಲ್ಲ. ನಂತರ ಬಂದವರೆಲ್ಲಾ ಸತಾರದ ಅರಮನೆಯಲ್ಲೇ ಇದ್ದುಕೊಂಡು ತಮ್ಮ ಪ್ರಧಾನಮಂತ್ರಿಗಳಾದ ಪುಣೆಯ ಪೇಶ್ವಾಗಳಿಗೆ ಸಂಪೂರ್ಣ ಅಧಿಕಾರವನ್ನು ನೀಡಿ ಅವರ ಮೂಲಕ ರಾಜ್ಯವಿಸ್ತರಣೆ ಮಾಡಿಸಿದರು. ಪೇಶ್ವಾಗಳು ಮನಸ್ಸು ಮಾಡಿದ್ದರೆ ತಮ್ಮ ಪ್ರಚಂಡ ಸೈನ್ಯ ಬಲ ಮತ್ತು ಚಾಣಾಕ್ಷ ರಾಜನೀತಿಯನ್ನು ಬಳಸಿ ಶಿವಾಜಿ ವಂಶಸ್ಥರನ್ನು ರಾಜಗದ್ದುಗೆಯಿಂದ ಇಳಿಸಿ ತಾವೆ ದೊರೆಗಳಾಗಬಹುದಿತ್ತು. ಆದರೆ ಅವರು ಶಿವಾಜಿ ಕುಟುಂಬಕ್ಕೆ ನಿಷ್ಟರಾಗಿ ಪ್ರಧಾನಮಂತ್ರಿ ಸ್ಥಾನಕ್ಕೆ ಮಾತ್ರ ಅಪೇಕ್ಷೆ ಪಟ್ಟರು.
ಈ ಪ್ರಧಾನಮಂತ್ರಿ ಹುದ್ದೆಗೆ ನಡೆದ ಬೀಕರ ಕಾಳಗದ ಕತೆಯೇ ಈ ಒಟ್ಟು ಲೇಖನದ ಹೂರಣ.
ಇಂದಿಗೂ ಶನಿವಾರವಾಡೆಯ ಅರಮನೆಯಲ್ಲಿ ಅಮಾವಾಸ್ಯೆ ಮತ್ತು ಹುಣ್ಣಿಮೆಯ ರಾತ್ರಿ ಕೆಲ ಬೆಚ್ಚಿ ಬೀಳಿಸುವ ಘಟನೆಗಳು ನಡೆಯುತ್ತವೆ. ಈ ಘಟನೆಗಳ ಹಿಂದೆ ಒಂದು ರೋಚಕ ಕತೆ ಇದೆ. ಪೇಶ್ವಾಗಳ ಮೂಲ ಪುರುಷನ ಹೆಸರು ವಿಶ್ವನಾಥ ಪೇಶ್ವಾ. ವೇದಾದ್ಯಾಯನ ಪೂಜೆ ಪಾಠಗಳಿಗಷ್ಟೇ ಸೀಮಿತವಾಗಿದ್ದ ಚಿತ್ಪಾವನ ಬ್ರಾಹ್ಮಣರು ರಾಜನೀತಿಗೆ ಇಳಿದು ಮಹತ್ವದ ಅಧಿಕಾರ ವಹಿಸಿದ್ದು ಇವರ ಕಾಲದಲ್ಲೇ. ದರ್ಭೆ ಹಿಡಿಯಬೇಕಾದ ಕೈಗಳು ಕತ್ತಿ ಹಿಡಿದು, ಜ್ವಾಲಾಮುಖಿಯನ್ನೂ ನಾಚಿಸುವ ಆಕ್ರಮಣಶೀಲತೆಯಿಂದ ಮುನ್ನುಗ್ಗಿದವು. ಇದಂ ಬ್ರಹ್ಮಂ ಇದಂ ಕ್ಷಾತ್ರಂ.. ಶಾಪಾದಪಿ.. ಶರಾದಪಿ.. ಎಂಬ ಪರಶುರಾಮನ ಮಾತನ್ನು ಪೇಶ್ವಾಗಳು ಕಾರ್ಯಕ್ಕಿಳಿಸಿದರು. ಶಿವಾಜಿಯ ಮೊಮ್ಮಗನಾದ ಛತ್ರಪತಿ ಶಾಹು ಮಹಾರಾಜರ ಪ್ರಧಾನ ಮಂತ್ರಿಗಳಾಗಿ ವಿಶ್ವನಾಥ ಪೇಶ್ವಾ ಅಧಿಕಾರ ವಹಿಸಿಕೊಂಡರು. ಈ ಪ್ರಧಾನ ಮಂತ್ರಿ ಹುದ್ದೆಯನ್ನೇ ಪಂಥ ಪ್ರಧಾನ, ಪೇಶ್ವಾ, ಮೊದಲಾಗಿ ಸಂಭೊಧಿಸಲಾಗುತ್ತದೆ. ಮರಾಠರ ಸೇನೆಯ ಸಂಪೂರ್ಣ ಹಿಡಿತವೂ ಈ ಪ್ರಧಾನ ಮಂತ್ರಿಗಳ ಕೈಯಲ್ಲೇ ಇರುತ್ತಿತ್ತು. ವಿಶ್ವನಾಥ ಪೇಶ್ವಾ ತನ್ನ ಅಪ್ರತಿಮ ಪರಾಕ್ರಮದಿಂದ ಉತ್ತರದ ಹಲವಾರು ಪ್ರದೇಶಗಳನ್ನು ಗೆದ್ದು ಮರಾಠಾ ಸಾಮ್ರಾಜ್ಯವನ್ನು ವಿಸ್ತರಿಸಿದರು. ೧೯೨೦ರಲ್ಲಿ ವಿಶ್ವನಾಥ ಪೇಶ್ವಾ ಅನಾರೋಗ್ಯದಿಂದ ತೀರಿಕೊಂಡರು. ಅವರ ಜಾಗವನ್ನು ಅವರ ಮಗ ಬಾಜಿರಾವ್ ಪೇಶ್ವಾ ಅಲಂಕರಿಸಿದ. ಅವನೋ…. ಅವನನ್ನು ಶಬ್ದಗಳಲ್ಲಿ ಕಟ್ಟಿಕೊಡುವ ಪ್ರಯತ್ನ ವ್ಯರ್ಥ.. ಅವನ ರಣ ತಂತ್ರ, ಯುದ್ಧ ಕೌಶಲ್ಯ, ರಾಜನೀತಿ, ಧೈರ್ಯ, ಸಾಹಸ, ಮಹಾತ್ವಾಕಾಂಕ್ಷೆ ಅಜೇಯ ಗೆಲುವುಗಳು.. ಯಾವುದನ್ನೂ ಬೆಳಕಿಗೆ ಬಾರದಂತೆ ಕಮ್ಯುನಿಷ್ಟರು ಮತ್ತು ಬ್ರಿಟೀಷರು ಮುಚ್ಚಿ ಹಾಕಿದರು . ಆತ ಕೇವಲ ಮಸ್ತಾನಿಯೊಂದಿಗೆ ಪ್ರೀತಿ ಮಾಡಿ ಹಾಳಾಗಿ ಹೋದ ಎನ್ನುವುದನ್ನು ಮಾತ್ರ ಬರೆದಿಟ್ಟು ಕೃತಾರ್ಥರಾದರು ಪಾಪಿಗಳು..!! ಒಮ್ಮೆ ಬಾಜಿರಾವ್ ಪೇಶ್ವಾ ತನ್ನ ಸೈನ್ಯದೊಂದಿಗೆ ಪುಣೆಯಲ್ಲಿ ತಂಗಿದ್ದಾಗ ಒಂದು ವಿಚಿತ್ರ ಘಟನೆಯನ್ನು ಕಂಡ.
ಅತ್ಯಂತ ಸಾಧುಪ್ರಾಣಿಯಾದ ಮೊಲವೊಂದು ನಾಯಿಯನ್ನು ಎದುರು ಹಾಕಿಕೊಂಡು ಹೋರಾಡುತ್ತಾ ನಾಯಿಯನ್ನು ಅಟ್ಟಾಡಿಸುತ್ತಿರುವ ದೃಶ್ಯ ಪೇಶ್ವನನ್ನು ರೋಮಾಂಚಿತಗೊಳಿಸಿತು. ಪಾಠಪ್ರವಚನದಲ್ಲಿ ತೊಡಗಬೇಕಾಗಿದ್ದ ಬ್ರಾಹ್ಮಣ ಕುಲದವನಾದ ತಾನು ಮೊಗಲರ ವಿರುದ್ಧ ಯುದ್ಧ ಸಾರಿರುವುದಕ್ಕೂ, ಈ ಮೊಲ ನಾಯಿಯನ್ನು ಅಟ್ಟಾಡಿಸುತ್ತಿರುವುದನ್ನೂ ಪೇಶ್ವ ಸಮೀಕರಿಸಿ ನೋಡಿದ. ಆತನಿಗೆ ತನ್ನ ವಾಡೆ(ಅರಮನೆ) ಕಟ್ಟಲು ಇದಕ್ಕಿಂತ ಸೂಕ್ತ ಜಾಗ ಇನ್ನೊಂದು ಸಿಗಲಾರದು ಎಂದನಿಸಿತು. ಅದೇ ಜಾಗದಲ್ಲಿ ಶನಿವಾರ ವಾಡೆ ಕಟ್ಟಲಾಯಿತು. ಅವನ ಊಹೆ ಸತ್ಯವೇ ಆಯಿತು ಈ ವಾಡೆಯಿಂದ ಹೊರಟ ಬಾಜಿರಾಯನ ಸೈನ್ಯ ಬರಿಗೈಯಲ್ಲಿ ಮರಳಿದ್ದೇ ಇಲ್ಲ. ಬಾಜಿರಾವ್ ಪೇಶ್ವಾ ದಕ್ಷಿಣ ಏಶಿಯಾದ ಮೂರನೇ ಒಂದು ಭಾಗವನ್ನು ಆಕ್ರಮಿಸಿಕೊಂಡನು. ಸರಿಸುಮಾರು ಒಂದು ದಶಲಕ್ಷ ಚದರ ಕಿಮಿ ವ್ಯಾಪ್ತಿಯಲ್ಲಿ ಮರಾಠರ ಧರ್ಮದ್ವಜ ಪಟಪಟಿಸಿತು. ಬಾಜಿರಾವ್ ಪೇಶ್ವಾ ಕೇವಲ ೧೦ ವರ್ಷದ ಅವಧಿಯಲ್ಲಿ ಮರಾಠಾ ಸಾಮ್ರಾಜ್ಯವನ್ನು ಹತ್ತು ಪಟ್ಟು ವಿಸ್ತರಿಸಿದ. ವಿಜಯಲಕ್ಷ್ಮಿ ಶನಿವಾರವಾಡೆಯಲ್ಲಿ ಶಾಶ್ವತವಾಗಿ ನೆಲೆಸಿದ್ದಳು. ಶನಿವಾರ ವಾಡೆಯ ನಿರ್ಮಾಣ ಕಾರ್ಯ ಜನವರಿ 10 1730 ರಂದು ಆರಂಭವಾಯಿತು. ಹುಟ್ಟು ಯೋಧನಾಗಿದ್ದ ಬಾಜಿರಾವ್ ತನ್ನ ಇಡೀ ಜೀವನವನ್ನು ರಣರಂಗದಲ್ಲೇ ಕಳೆದವನು. ಹಾಗಾಗಿ ವಾಡೆಯ ಕೆಲಸದ ಉಸ್ತುವಾರಿಯನ್ನು ಬಾಜಿರಾವ್ ಪೇಶ್ವಾ ಪತ್ನಿ ಕಾಶಿಬಾಯಿ ಮತ್ತು ತಮ್ಮ ಚೀಮಾಜಿ ಅಪ್ಪಾ ನೋಡಿಕೊಂಡರು. ಶನಿವಾರ ವಾಡೆ ಏಳು ಅಂತಸ್ತಿನ ಭವ್ಯ ಕಟ್ಟಡ. ಜುನ್ನರ್ ಪ್ರದೇಶದಿಂದ ಕಡಿದು ತರಲಾಗಿದ್ದ ಸಾಗುವಾನಿಯ ಮರವನ್ನೇ ಬಳಸಿ ಕೆಲವು ಅಂತಸ್ತುಗಳನ್ನು ಕಟ್ಟಲಾಗಿತ್ತು. ಈ ಅರಮನೆಯ ಸೌಂದರ್ಯ ಇಂದ್ರನ ಆಸ್ಥಾನವನ್ನೂ ನಾಚಿಸುವಂತಿತ್ತು. 1732ರ ಜನವರಿ 22ರಂದು ಶನಿವಾರವಾಡೆಯ ಗ್ರಹಪ್ರವೇಶ ನಡೆಯಿತು. ಇದರ ನಿರ್ಮಾಣಕ್ಕೆ ಆ ಕಾಲದಲ್ಲೇ 16110ರುಪಾಯಿ ಖರ್ಚು ಮಾಡಲಾಗಿತ್ತು!!. ಸ್ವರ್ಗಕ್ಕೆ ಕಿಚ್ಚು ಹಚ್ಚುವಂತಿದ್ದ ಈ ಅರಮನೆಯಲ್ಲಿ ಆಗಬಾರದ ಘಟನೆಯೊಂದು ಆಗಷ್ಟ್ ೩೦ ೧೭೭೩ ರಲ್ಲಿ ನಡೆದು ಹೋಯಿತು. ಆಗ ಮರಾಠ ಸಾಮ್ರಾಜ್ಯದ ಪೇಶ್ವಾ ಆಗಿ ಅಧಿಕಾರ ನಡೆಸುತ್ತಿದ್ದವನು ಬಾಜಿರಾವ್ ಪೇಶ್ವಾನ ಮೊಮ್ಮಗ ನಾರಾಯಣ ರಾವ್ ಪೇಶ್ವಾ… ಈ ಘಟನೆ ಕೇವಲ ಮರಾಠ ಅಧಿಪತ್ಯಕ್ಕೆ ಮಾತ್ರವಲ್ಲ, ಇಡಿ ಭಾರತದ ಇತಿಹಾಸಕ್ಕೆ ಒಂದು ಹೊಸ ತಿರುವು ನೀಡಿತು.
ಬಾಜಿರಾವ್ ಪೇಶ್ವಾ ತನ್ನ ಒಂದು ಲಕ್ಷ ಸೇನೆಯನ್ನು ಕೂಡಿಕೊಂಡು ಇಂದೋರ್ ಸಮೀಪದ ಕೋರ್ ಗಾಂವ್ ಎಂಬಲ್ಲಿ ತಂಗಿದ್ದ ಸಂದರ್ಭದಲ್ಲಿ ಬಿಸಿಗಾಳಿಯ ಬಾಧೆಗೆ ಸಿಲುಕಿ ಅವನ ಆರೋಗ್ಯ ಕೆಟ್ಟಿತು. ೨೮ ಎಪ್ರಿಲ್ ೧೭೪೦ರಲ್ಲಿ ಬಾಜಿರಾವ್ ಉಸಿರು ಚೆಲ್ಲಿದರು. ಆ ವೀರ ಯೋಧನನ್ನು ರೇವರ್ ಖಿಂಡಿ ಎಂಬಲ್ಲಿ ದಹನ ಮಾಡಿ ಅಲ್ಲೇ ಆತನಿಗೊಂದು ಸ್ಮಾರಕ ನಿರ್ಮಿಸಲಾಯಿತು. ಮಹಾರಾಷ್ಟ್ರ ತನ್ನ ಐತಿಹಾಸಿಕ ವೀರನೊಬ್ಬನಿಗೆ ೩೯ರ ನಡುವಯಸ್ಸಲ್ಲೇ ವಿದಾಯ ಕೋರುವಂತಾಯಿತು. ಭಾರತದ ನೆಪೋಲಿಯನ್ ಎಂದೇ ಕರೆಸಿಕೊಂಡ ಅದ್ವಿತೀಯ ಯೋಧನೊಬ್ಬ ತನ್ನ ದಂಡಯಾತ್ರೆಯನ್ನು ರಣರಂಗದಲ್ಲೇ ಮೊಟುಕುಗೊಳಿಸಿದ. ಹತ್ತು ವರ್ಷ ಹೆಚ್ಚು ಬದುಕುತ್ತಿದ್ದರೆ ಭಾರತದ ಇತಿಹಾಸವೇ ಬೇರೆಯದಾಗುತ್ತಿತ್ತು. ಬಾಜಿರಾವ್ ಹಿರಿಯ ಮಗ ಬಾಲಾಜಿ ರಾವ್ ಪೇಶ್ವಾ ಗದ್ದುಗೆ ಏರಿದ ತಂದೆ ಹಿಡಿದ ಕೆಲಸವನ್ನು ಒಂದಿನಿತೂ ವಿರಾಮವಿಲ್ಲದೆ ಮುಂದುವರೆಸಿದ. ಮರಾಠ ಸೈನ್ಯ ಬಾಲಾಜಿ ರಾವ್ ಪೇಶ್ವಾ ಅವಧಿಯಲ್ಲಿ ಬಂಗಾಳ ಒರಿಸ್ಸಾ ಬಿಹಾರ ಮೊದಲಾದ ಪ್ರದೇಶಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು. ಬಾಲಾಜಿ ರಾವ್ ಪೇಶ್ವಾ ಕಾಲದಲ್ಲಿ ಮರಾಠರು ಭಾರತದ ಅತೀದೊಡ್ದ ಶಕ್ತಿಯಾಗಿ ಹೊರ ಹೊಮ್ಮಿದರು. ದಿಲ್ಲಿಯ ಮೊಘಲಿರಿಗೆ ಅದಾಗಲೇ ಸಂಸ್ಥಾನಿಕ ಅರಸರ ದಂಗೆಯ ಬಿಸಿ ತಟ್ಟಿತ್ತು. ಈ ದಂಗೆಯನ್ನು ತಡೆಯಬಲ್ಲ ಸಮರ್ಥ ಅರಸರು ದಿಲ್ಲಿಯಲ್ಲಿ ಯಾರೂ ಇರಲಿಲ್ಲ. ಮೊಘಲರು ದಿಲ್ಲಿಯ ರಕ್ಷಣೆಗೆ ಸಂಪೂರ್ಣವಾಗಿ ಮರಾಠರ ಮೇಲೆ ಅವಲಂಬಿತರಾಗಿದ್ದರು. ಔರಂಗಜೇಬನ ವಂಶಕ್ಕೆ ಅಂತಹ ದುರ್ಗತಿ ಬಂದಿತ್ತು!! ದಿಲ್ಲಿಯ ಗದ್ದುಗೆಯಿಂದ ಮೊಘಲರನ್ನು ಇಳಿಸಿ ತನ್ನ ಮಗನಾದ ವಿಶ್ವಾಸ್ ರಾವ್ ನನ್ನು ಕೂರಿಸುವ ಎಲ್ಲಾ ಸಿದ್ದತೆಗಳನ್ನು ಬಾಲಾಜಿ ರಾವ್ ಪೇಶ್ವಾ ಮಾಡಿದ್ದರು. ಎಲ್ಲಾ ಅಂದುಕೊಂಡಂತೆ ನಡೆಯುತ್ತಿತ್ತೋ ಏನೋ, ಆದರೆ ಅಷ್ಟರಲ್ಲೇ ಅಫ್ಘಾನಿನ ದೊರೆ ಅಹಮದ್ ಶಹ್ ದುರಾನಿ (ಅಬ್ದಾಲಿ) ಭಾರತದ ಮೇಲೆ ದಂಡೆತ್ತಿ ಬಂದ. ಈತನಿಗೆ ಅವಧದ ನವಾಬ ಶುಜಾದ್ದೌಲಾ ಮತ್ತು ರೋಹಿಲಾಖಂಡದ ನಜೀಬುದ್ದೌಲಾ ಬೆಂಬಲಕ್ಕೆ ನಿಂತರು. ಮೂರನೆ ಪಾಣಿಪತ್ ಯುದ್ದಕ್ಕೆ ವೇದಿಕೆ ಸಿದ್ದವಾಯಿತು. ಈ ಯುದ್ದ ಭಾರತದಲ್ಲಿ ಮುಸ್ಲಿಂ ಆಡಳಿತದ ಅಳಿವು ಉಳಿವನ್ನು ನಿರ್ಧರಿಸುವುದಿತ್ತು. ಈ ಕಾರಣದಿಂದಾಗಿ ಹೆಚ್ಚಿನ ಮುಸ್ಲಿಂ ದೊರೆಗಳು ಆಕ್ರಮಣಕೋರ ದುರಾನಿಯ ಜೊತೆ ಸೇರಿಕೊಂಡರು. ಪಾಣಿಪತ್ ಯುದ್ದದಲ್ಲಿ ಮರಾಠರಿಗೆ ಸೋಲಾಯಿತು. ಸದಾಶಿವ ಬಾವು, ಬಾಜಿರಾವ್ ಅವರಿಂದ ಮಸ್ತಾನಿಗೆ ಹುಟ್ಟಿದ ಸಂಶೇರ್ ಬಹಾದ್ದೂರ್ ಸೇರಿದಂತೆ ಬಹುತೇಕ ಮರಾಠಾ ವೀರರು ಈ ಯುದ್ದದಲ್ಲಿ ಹತರಾದರು.
ಬಾಲಾಜಿರಾವ್ ಪೇಶ್ವೆ ಅವರ ಮಗ ವಿಶ್ವಾಸ್ ರಾವ್ ಈ ಯುದ್ದದಲ್ಲಿ ಹೋರಾಡುತ್ತಾ ತೀರಿಕೊಂಡರು. ದಿಲ್ಲಿಯನ್ನು ಇತಿಹಾಸ ಎಂದಿಗೂ ಮರೆಯದಂತೆ ದುರಾನಿಯ ಸೈನ್ಯ ಲೂಟಿ ಮಾಡಿತು. ಚಿನ್ನ ಬೆಳ್ಲಿಯ ತಗಡು ಜಡಿದಿದ್ದ ಮೊಘಲರ ಅರಮನೆ ಮಹಲುಗಳು ಸರ್ವನಾಶವಾಯಿತು. ದಿಲ್ಲಿಯ ಮಹಿಳೆಯರನ್ನು ಬಲಾತ್ಕಾರದಿಂದ ಎಳೆದೊಯ್ದು ಕಾಮುಕರಿಗೆ ಹರಾಜು ಹಾಕಲಾಯಿತು. ಬೀದಿ ಬೀದಿಗಳಲ್ಲಿ ರಕ್ತದೋಕುಳಿ…. ಈ ಸುದ್ದಿ ಕೇಳಿ ಬಾಲಾಜಿ ರಾವ್ ಆಘಾತಕ್ಕೊಳಗಾದರು. ೧೭೬೧ರಲ್ಫ್ಲಿ ಅವರು ತೀರಿಕೊಂಡರು. ಬಳಿಕ ಅವರ ಇನ್ನೊಬ್ಬ ಮಗ ಮಾಧವ ರಾವ್ ಪೇಶ್ವಾ ಗದ್ದುಗೆಯನ್ನು ಅಲಂಕರಿಸಿದರು. ಬಾಲಾಜಿ ರಾವ್ ಪೇಶ್ವೆ ಅವರ ತಮ್ಮ ರಘುನಾಥ ರಾವ್ ಪೇಶ್ವಾ ಉತ್ತರಭಾರತದಲ್ಲಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಮುಸಲ್ಮಾನರ ವಶದಲ್ಲಿದ್ದ ಮಥುರಾ, ವ್ರಿಂದವನ, ಗಯಾ, ಕುರುಕ್ಷೇತ್ರ ಮೊದಲಾದ ಪುಣ್ಯಕ್ಷೇತ್ರಗಳನ್ನು ವಶಕ್ಕೆ ಪಡೆದುಕೊಂಡು ಜೀರ್ಣೋದ್ಧಾರ ಮಾಡಿದವರು ಇವರೇ.. ಬಾಲಾಜಿ ರಾವ್ ಪೇಶ್ವಾ ಬಳಿಕ ತನಗೆ ಪೇಶ್ವಾ ಪದವಿ ಸಿಗಬೇಕು ಎಂಬ ವಾದವನ್ನು ರಘುನಾಥರಾವ್ ಯಾವಾಗಲೂ ಮಂಡಿಸುತ್ತಿದ್ದರು. ಆದರೆ ಪೇಶ್ವಾ ಪದವಿ ಬಾಲಾಜಿ ರಾವ್ ಮಗ ಮಾಧವ್ ರಾವ್ ಪಾಲಾಯಿತು. ರಘುನಾಥ ರಾವ್ ಕ್ಷುದ್ರರಾದರು. ಮರಾಠರ ವಿರುದ್ಧ ಪಿತೂರಿ ಮಾಡಲು ಹೈದರಬಾದ್ ನಿಜಾಮನ ಜೊತೆ ಸೇರಿಕೊಂಡರು. ಮರಾಠರ ಪಾಲಿಗೆ ವಿಷಬೀಜವೊಂದು ಅಲ್ಲೆ ಮೊಳಕೆಯೊಡೆಯಿತು.
ಮಾಧವ ರಾವ್ ವಿರುದ್ಧ ಶತ್ರುಗಳನ್ನು ಒಂದುಗೂಡಿಸುವ ಕೆಲಸಕ್ಕೆ ಆತನ ಚಿಕ್ಕಪ್ಪ ರಘುನಾಥನೇ ಮುಂದಾಗಿದ್ದ. ಮಾಧವ್ ರಾವ್ ಗೂಡಾಚಾರರ ಮೂಲಕ ಈ ವಿಚಾರ ತಿಳಿದವನೇ ತಡ ಮಾಡದೇ ರಘುನಾಥ ರಾವ್ ಹೆಡೆಮುರಿ ಕಟ್ಟಲು ಎಲ್ಲಾ ಸಿದ್ಧತೆ ನಡೆಸಿದ. ೧೦ ಜೂನ್ ೧೭೬೮ರಂದು ಈತನನ್ನು ಬಂಧಿಸಲಾಯಿತು. ಶನಿವಾರ ವಾಡೆಯಲ್ಲಿ ರಘುನಾಥ್ ರಾವ್ ಮತ್ತು ಅವನ ಸಹಚರ ಸಖಾರಾಮ್ ಬಾಪುನನ್ನು ಗೃಹಬಂದನದಲ್ಲಿ ಇಡಲಾಯಿತು. ಭಾರತವನ್ನು ಪರಕೀಯರಿಂದ ಮುಕ್ತಗೊಳಿಸುವ ಕನಸು ಕಂಡಿದ್ದ ಶನಿವಾರ ವಾಡೆಯ ಒಳಗೋಡೆಯಲ್ಲೇ ಬಿರುಕು ಕಾಣಿಸಿಕೊಂಡಿತು
ಮುಂದುವರೆಯುತ್ತದೆ
ಜೈ ಮಹಾಕಾಲ್…
Trackbacks & Pingbacks