ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 17, 2016

2

ಸಿದ್ಧಾಂತಗಳ ಚರಿತ್ರೆ – 2 ( ಆತನ ಚಿಂತನೆ ಅರ್ಧ ಭೂಗೋಲವನ್ನು ನಿಯಂತ್ರಿಸಿತು! )

‍ನಿಲುಮೆ ಮೂಲಕ

– ರೋಹಿತ್ ಚಕ್ರತೀರ್ಥ
ಸಿದ್ಧಾಂತಗಳ ಚರಿತ್ರೆ – 1 (ಕಾರ್ಲ್ ಮಾರ್ಕ್ಸ್ ಕಟ್ಟಿಕೊಟ್ಟ ಕಲ್ಪನೆಯ ಸ್ವರ್ಗ)
karl-marx-wikimedia-commonsಕಾರ್ಲ್ ಮಾರ್ಕ್ಸ್ ನ ಒಟ್ಟು ಚಿಂತನೆಯನ್ನು ಹೀಗೆ ಸಂಗ್ರಹಿಸಬಹುದು: ಕೈಗಾರಿಕೆಗಳು ಬೆಳೆದು, ಯಂತ್ರ ಸಂಸ್ಕೃತಿಯ ಮೂಲಕ ಆಧುನಿಕತೆಯು ಸಮಾಜವನ್ನು ಪ್ರವೇಶಿಸಿರುವುದರಿಂದ ಮನುಷ್ಯ ಜಾಗೃತನಾಗಬೇಕು. ಯಂತ್ರಗಳು ಮನುಷ್ಯನ ಉದ್ಯೋಗವನ್ನು ಕಸಿಯುವುದು ಮಾತ್ರವಲ್ಲ; ಸಮಾಜದಲ್ಲಿ ಬಹು ದೊಡ್ಡ ಆರ್ಥಿಕ ಅಸಮತೋಲನವನ್ನು ಸೃಷ್ಟಿಸುತ್ತವೆ. ಯಂತ್ರಗಳಿಂದ ಮನುಷ್ಯ ತನ್ನ ಅಸ್ಮಿತೆಯನ್ನು ಕಳೆದುಕೊಳ್ಳುತ್ತಾನೆ. ಯಾವ ಕೆಲಸವನ್ನು ಯಾರೂ ಮಾಡಬಹುದೆಂಬ ಸನ್ನಿವೇಶ ಸೃಷ್ಟಿಯಾಗುತ್ತದೆ. ಇದರಿಂದಾಗಿ ಪ್ರತಿಯೊಬ್ಬರಿಗೂ ಕೆಲಸದಲ್ಲಿದ್ದ ಶ್ರದ್ಧೆ, ಪ್ರೀತಿ, ಆತ್ಮೀಯತೆಗಳು ಕಾಣೆಯಾಗುತ್ತವೆ. ತಾವು ಬಯಸಿದಂತೆ ಕೆಲಸಗಾರರನ್ನು ಬಳಸಿಕೊಳ್ಳುವ ಸ್ವಾತಂತ್ರ್ಯವನ್ನು ಬಂಡವಾಳಶಾಹಿಗಳು ಪಡೆಯುತ್ತಾರೆ. ಇದರಿಂದಾಗಿ ಕಾರ್ಮಿಕರನ್ನು ಅತಿ ಕಡಿಮೆ ಸಂಬಳಕ್ಕೆ ದುಡಿಸಿಕೊಂಡು ಹೊಸ ಬಗೆಯ ಗುಲಾಮಗಿರಿ ನಡೆಸಲು ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಬಂಡವಾಳಶಾಹಿಗಳು ಲಾಭ ಎಂದು ಏನನ್ನು ಕರೆಯುತ್ತಾರೋ ಅದು ಶೋಷಣೆಯ ಮೂರ್ತ ಮೊತ್ತ.

ಮಾರ್ಕ್ಸ್ ಬಂಡವಾಳಶಾಹಿ ಮಂದಿಯನ್ನು ಬೂಜ್ರ್ವಾ ಎಂದು ಕರೆದ. ತಮ್ಮ ಕೈ ಕೆಳಗಿನ ಕಾರ್ಮಿಕರನ್ನು ನಿರಂತರವಾಗಿ ಶೋಷಿಸಿ ಲಾಭ ಎಣಿಸುವ ಬೂಜ್ರ್ವಾಗಳು ಸುಖದ ಸುಪ್ಪತ್ತಿಗೆಯಲ್ಲಿ ತೇಲಾಡುತ್ತಿರುತ್ತಾರೆ; ಬಹಳ ಆನಂದದಿಂದ ಬಾಳುತ್ತಾರೆ ಎಂದೇನೂ ಹೇಳುವಂತಿಲ್ಲ. ದುಡ್ಡೇ ದೊಡ್ಡಪ್ಪನಾದ್ದರಿಂದ ಅವರ ಬದುಕು ಕೂಡ ನಾಜೂಕಾಗಿಬಿಟ್ಟಿರುತ್ತದೆ. ಬೂಜ್ರ್ವಾಗಳ ನಡುವೆ ನಡೆವ ಮದುವೆಗಳು ಕೇವಲ ವ್ಯವಹಾರ ಅಥವಾ ಬ್ಯುಸಿನೆಸ್ಸಿನ ಮುಂದುವರಿಕೆ ಆಗಿರುತ್ತವೆಯೇ ಹೊರತು ಅಲ್ಲಿ ನೈಜ ಪ್ರೀತಿ-ಪ್ರೇಮಗಳೇನೂ ಇರುವುದಿಲ್ಲ. ಅವರು ಪ್ರೀತಿಯ ನಾಟಕವಾಡುತ್ತ ಕೃತಕ ಬಾಳು ಬದುಕುತ್ತಿರುತ್ತಾರೆ. ಪ್ರತಿಯೊಂದನ್ನೂ ಅಂತಸ್ತಿನಿಂದ ಅಳೆಯುವ ಕೆಟ್ಟ ಪರಂಪರೆಯೊಂದು ಪ್ರಾರಂಭವಾಗಬಹುದು. ಪ್ರೀತಿ ಕಾಳಜಿಯಂಥ ಪರಿಶುದ್ಧ ಭಾವನೆಗಳು ಕೂಡ ಶ್ರೀಮಂತಿಕೆ ತಂದುಕೊಡುವ ಪ್ರಾಪಂಚಿಕ ವಸ್ತುಗಳ ನೆಲೆಯಿಂದ ಅಳತೆಗೊಳಪಡಬಹುದು. ಮನುಷ್ಯ ಮೆಟೀರಿಯಲಿಸ್ಟಿಕ್ ಆಗುತ್ತಾನೆ. “ಕಾಮೊಡಿಟಿ ಫೆಟಿಷಿಸಂ” (ಲೌಕಿಕ ಸುಖಸಂಪತ್ತನ್ನು ಅತಿಯಾಗಿ ಮೋಹಿಸುವುದು) ಮನೋಭಾವನೆ ಹೆಚ್ಚಾಗುತ್ತದೆ. ಹಾಗಾಗಿ ಸಿರಿವಂತಿಕೆಯ ಸಮುದ್ರದಲ್ಲಿ ಮುಳುಗಿದ್ದರೂ ಬೂಜ್ರ್ವಾಗಳಿಗೂ ಅಂತಿಮವಾಗಿ ದುಃಖ, ಭ್ರಮನಿರಸನಗಳು ತಪ್ಪಿದ್ದಲ್ಲ. ಹಾಗೆಂದು ಯೋಚಿಸಿದ ಮಾಕ್ರ್ಸ್.

ಒಂದು ರೀತಿಯಲ್ಲಿ ನೋಡಿದರೆ ಕಾರ್ಲ್ ಮಾರ್ಕ್ಸ್ ಹೇಳಿದ್ದಕ್ಕೂ ನಮ್ಮ ಭಾರತೀಯ ಋಷಿಪರಂಪರೆಯ ಯಾಜ್ಞವಲ್ಕ್ಯ ಮುಂತಾದ ಸಂನ್ಯಾಸಿಗಳು ಹೇಳಿದ ಮಾತುಗಳಿಗೂ ತುಸು ಸಾಮ್ಯವಿದೆ. ಯಾಜ್ಞವಲ್ಕ್ಯರು, ಮನುಷ್ಯ ಮೂಲತಃ ಆತ್ಮರತ; ಆತ ಯಾವುದನ್ನೂ ಇನ್ನೊಬ್ಬನಿಗಾಗಿ ಮಾಡುವುದಿಲ್ಲ; ಆತ ತನ್ನ ತಂದೆತಾಯಿ ಹೆಂಡತಿ ಬಂಧುಬಳಗ ಮಕ್ಕಳು ಈ ಎಲ್ಲರನ್ನೂ ಪ್ರೀತಿಸುವುದು ಅಂತಿಮವಾಗಿ ಅವರಿಂದ ತನಗೆ ಲಾಭವಾಗುತ್ತದೆಂಬ ಕಾರಣಕ್ಕೆ ಮಾತ್ರವೇ; ಮನುಷ್ಯ ಮೂಲಭೂತವಾಗಿ ಪರಮ ಸ್ವಾರ್ಥಿ – ಎಂದು ಹೇಳಿದ್ದಾರಲ್ಲ? ಅದೇ ತತ್ತ್ವವನ್ನು ಮಾರ್ಕ್ಸ್ ಬೂಜ್ರ್ವಾಗಳಿಗೆ ಆರೋಪಿಸಿದ. ಭಾರತದ ಆರ್ಷೇಯ ಮುನಿಗಳು ಮನುಷ್ಯನ ಮನೋವ್ಯಾಪಾರವೆಂದು ಏನನ್ನು ಹೇಳಿದ್ದರೋ ಅದನ್ನು ಮಾರ್ಕ್ಸ್ ಧನಿಕರಿಗೆ ಮಾತ್ರ ಸಮೀಕರಿಸಿದ. ಮನುಷ್ಯನ ಈ ಎಲ್ಲ ದುಃಖಗಳಿಗೂ ಸಂಪತ್ತಿನ ಕ್ರೋಡೀಕರಣವೇ ಪ್ರಮುಖ ಕಾರಣ ಎಂದು ಅವನ ಅನಿಸಿಕೆಯಾಗಿತ್ತು. ಹಾಗಾಗಿ ಬೂಜ್ರ್ವಾಗಳು ಸಂಪತ್ತನ್ನು ತಮಗಾಗಿ ಕೂಡಿಡದೆ ಸಮಾನವಾಗಿ ಸಮಾಜದಲ್ಲಿ ಹಂಚಿಬಿಟ್ಟರೆ ಆಗ ದುಃಖ ಕ್ಲೇಶಗಳಿಗೆ ಕಾರಣವೇ ಇಲ್ಲ; ಇಡೀ ಸಮಾಜ ಸುಖಸಂತೋಷದಿಂದ ಬಾಳುವಂತಾಗುತ್ತದೆ ಎಂಬುದು ಮಾರ್ಕ್ಸ್ ನಂಬಿಕೆಯಾಗಿತ್ತು. ಬಂಡವಾಳಶಾಹಿ ವ್ಯವಸ್ಥೆಗಳು ಲಾಭಕ್ಕಾಗಿ ಕೆಲಸ ಮಾಡಬಾರದು. ಒಂದು ವೇಳೆ ಲಾಭ ಬಂದರೂ ಅದನ್ನು ತನ್ನ ಕಾರ್ಮಿಕರ ನಡುವೆ ಹಂಚಿಕೊಳ್ಳಬೇಕು. ಇದುವೇ ಕನಸಿನ ರಾಜ್ಯ ಎಂದನಾತ. ಎರಡು ಸಾವಿರ ವರ್ಷಗಳ ಹಿಂದೆ ಯೇಸು ಕನಸಿದ ದೇವರ ರಾಜ್ಯ ಕೂಡ ಇದೇ ಆಗಿತ್ತಲ್ಲ?

ಮಾರ್ಕ್ಸ್ ಹೇಳುವಂತೆ, ನಾವು ಬಂಡವಾಳಶಾಹಿ ವ್ಯವಸ್ಥೆಗೆ ಎಷ್ಟೊಂದು ತೆರೆದುಕೊಂಡಿದ್ದೇವೆಂದರೆ ಕೆಲವೊಂದು ಪದಗಳಿಗೆ ನಾವಾಗಿಯೇ ಅರ್ಥಗಳನ್ನು ಆರೋಪಿಸಿ ಅವು ನಿಜ ಎಂದು ನಮ್ಮನ್ನು ಭ್ರಮಿಸಿಕೊಂಡಿದ್ದೇವೆ. ಉದಾಹರಣೆಗೆ ಸಮಾಜದಲ್ಲಿ ಯಾರು ನೌಕರಿ ಮಾಡುತ್ತಿಲ್ಲವೋ ಅವನು ಅಪ್ರಯೋಜಕನೆಂದು ಗುರುತಿಸಲ್ಪಡುತ್ತಾನೆ. ಒಂದೆರಡು ವಾರಗಳಿಗಿಂತ ಹೆಚ್ಚು ಕಾಲ ನಿರುದ್ಯೋಗಿಯಾಗಿರುವುದು ಮಹಾಪಾಪವೆಂದೇ ಕರೆಸಿಕೊಳ್ಳುತ್ತದೆ. ಹಾಗಾಗಿ ಕೆಲಸ ಕಳೆದುಕೊಂಡವನಿಗೆ ಆದಷ್ಟು ಬೇಗ ಇನ್ನೊಂದು ನೌಕರಿ ಹುಡುಕಿಕೊಳ್ಳುವ ಅನಿವಾರ್ಯತೆ, ಒತ್ತಡ ಸೃಷ್ಟಿಯಾಗುತ್ತದೆ. ಯಾರು ಕೂಡ ನಿರುದ್ಯೋಗಿಯೆಂಬ ಪಟ್ಟವನ್ನು ದೀರ್ಘಕಾಲ ಧರಿಸಲು ಇಷ್ಟಪಡುವುದಿಲ್ಲ. ಅಲ್ಲದೆ, ನಿರುದ್ಯೋಗಿ ಎಂಬ ಪದವೇ ಋಣಾತ್ಮಕವಾಗಿದೆ. ಯಾವನಾದರೂ ತನ್ನನ್ನು ನಿರುದ್ಯೋಗಿ ಎಂದು ಯಾಕೆ ಕರೆದುಕೊಳ್ಳಬೇಕು? ಸಂಬಳ ತರುವ ಉದ್ಯೋಗ ಮಾತ್ರ ಉದ್ಯೋಗವೇ? ಯಾರಾದರೂ ಪದ್ಯ ಬರೆಯುತ್ತ, ಚಿತ್ರ ಬಿಡಿಸುತ್ತ, ತನ್ನ ಮನಮೆಚ್ಚಿನ ಬಡಗಿ ಕೆಲಸ ಮಾಡುತ್ತ, ಹಳ್ಳಿಯ ಕಡೆ ಹೊಳೆಯಲ್ಲಿ ಮೀನು ಹಿಡಿಯುತ್ತ ದಿನಗಳೆದಿದ್ದರೆ ಆತನನ್ನು ನಿರುದ್ಯೋಗಿ ಎಂದು ಕರೆದು ಅಪಮಾನ ಮಾಡುವುದು ಸಮಾಜದ ಕ್ರೂರತನವಲ್ಲವೆ? ಇನ್ನು, ಹೆಚ್ಚು ಹೆಚ್ಚು ಭೋಗಭಾಗ್ಯಗಳನ್ನು ಕೊಂಡು ಮನೆ ತುಂಬಿಸಿಕೊಳ್ಳುವುದು ಸುಖದ ಮಾಪನವೆಂದು ನಾವು ತಿಳಿದಿದ್ದೇವೆ. ಹೆಚ್ಚು ವಸ್ತುಗಳನ್ನು ಕೊಂಡುತಂದು ಮನೆಯಲ್ಲಿ ರಾಶಿ ಹಾಕಿಕೊಂಡವನು ಹೆಚ್ಚು ಸುಖಿ ಎಂಬ ಕಲ್ಪನೆ ಇದೆ. ದುಬಾರಿ ಸಾಮಾನುಗಳು ನಮ್ಮನ್ನು ಹೆಚ್ಚು ಸುಖಿಯಾಗಿಸುತ್ತವೆ ಎಂಬುದೂ ನಮ್ಮದೇ ಪರಿಕಲ್ಪನೆ ಮತ್ತು ಭ್ರಮೆ. ಹಾಗಾಗಿ ಬಂಡವಾಳಶಾಹಿ ಪ್ರಪಂಚದಲ್ಲಿ ನಾವು ಹೆಚ್ಚು ಅಸುಖಿಗಳೂ, ಸುಖವನ್ನು ಬೆನ್ನುಹತ್ತಿ ಹೋಗುವವರೂ, ಸುಖಲೋಲುಪರೂ, ಭ್ರಮಾದೀನರೂ, ಮಾನಸಿಕವಾಗಿ ಬಡವರೂ ಆಗಿದ್ದೇವೆ. ಸಂಪತ್ತು ನಮ್ಮನ್ನು ಖುಷಿಯಾಗಿಡುವ ಬದಲು ಹೆಚ್ಚು ಮಾನಸಿಕ ಕ್ಷೋಭೆಗೆ ಒಳಪಡಿಸಿದೆ ಎಂಬುದು ಮಾರ್ಕ್ಸ್ ವಾದ.

ಈ ಎಲ್ಲ ಸಮಸ್ಯೆಗಳಿಗೆ ಪರಿಹಾರವೆಂದರೆ ಬಂಡವಾಳಶಾಹಿ ವ್ಯವಸ್ಥೆ ಇರಬಾರದು. ಕಾರ್ಮಿಕರನ್ನು ಕಡಿಮೆ ಸಂಬಳಕ್ಕೆ ದುಡಿಸಿಕೊಂಡು ಲಾಭ ತೆಗೆಯುವ ವ್ಯವಸ್ಥೆಯನ್ನು ಸಮಾಜದಿಂದ ಕಿತ್ತೊಗೆಯಬೇಕು. ಬಂಡವಾಳಶಾಹಿಗಳನ್ನು ಮೂಗುದಾರ ಹಿಡಿದು ನಿಯಂತ್ರಿಸುವ ದೊಡ್ಡ ವ್ಯವಸ್ಥೆ ಸೃಷ್ಟಿಯಾಗಬೇಕು. ಮಾರ್ಕ್ಸ್ ಈ ಎಲ್ಲ ಚಿಂತನೆಗಳನ್ನು ಸೂತ್ರೀಕರಿಸುವಂತೆ ತನ್ನ “ಕಮ್ಯುನಿಸ್ಟ್ ಮ್ಯಾನಿಫೆಸ್ಟೋ”ದಲ್ಲಿ ಈ ಕೆಳಗಿನ ನಿರ್ದೇಶನಗಳನ್ನು ಕೊಟ್ಟ:

(1) ದೇಶದಲ್ಲಿ (ಅಥವಾ ರಾಜ್ಯ ವ್ಯವಸ್ಥೆಯಲ್ಲಿ) ಖಾಸಗಿ ಜಮೀನುದಾರಿಕೆಗೆ ಅವಕಾಶವಿರಕೂಡದು. ಯಾರಿಗೂ ತಮ್ಮದೆಂಬ ಜಾಗವನ್ನು ದುಡ್ಡು ಕೊಟ್ಟು ಖರೀದಿಸಿ ಆಳುವ ಅವಕಾಶವನ್ನು ರಾಜ್ಯ ಕೊಡಬಾರದು. ರಾಜ್ಯದೊಳಗಿನ ಎಲ್ಲಾ ಜಮೀನುಗಳೂ ನೇರವಾಗಿ ಸರಕಾರದ್ದೇ ಸೊತ್ತಾಗಿರಬೇಕು.
(2) ವ್ಯವಸ್ಥೆಯೊಳಗೆ ಯಾರೂ ದೊಡ್ಡವರಲ್ಲ, ಯಾರೂ ಬಡವರಲ್ಲ. ಸಂಪತ್ತನ್ನು ಕೂಡಿಹಾಕುವ ಹಕ್ಕು ಯಾರಿಗೂ ಇಲ್ಲ. ಎಲ್ಲರಿಗೂ ಒಂದೇ ಬಗೆಯ ಸಂಪಾದನೆ, ಒಂದೇ ಬಗೆಯ ತೆರಿಗೆ.
(3) ಬ್ಯಾಂಕ್, ಸುದ್ದಿ ಪ್ರಸಾರ ಮತ್ತು ಸಾರಿಗೆ – ಈ ಮೂರು ಪ್ರಮುಖ ಸಂಗತಿಗಳು ಸರಕಾರದ ನಿಯಂತ್ರಣದಲ್ಲಿರಬೇಕು.
(4) ರಾಜ್ಯದ ಎಲ್ಲರಿಗೂ ಸರಕಾರವೇ ಉಚಿತವಾಗಿ ಶಿಕ್ಷಣ ಕೊಡಬೇಕು.

ಕೈಗಾರಿಕೆಗಳಲ್ಲಿ ಆಧುನಿಕ ಯಂತ್ರೋಪಕರಣಗಳನ್ನು ಬಳಸುವುದರಿಂದ ಮೊದಲಿನಂತೆ ಹೆಚ್ಚು ಕಾರ್ಮಿಕರು ದುಡಿಯಬೇಕಿಲ್ಲ. ಕಾರ್ಮಿಕನಾಗಿ ದುಡಿಯದೆ ಹೋದರೂ ತನ್ನ ಆಸಕ್ತಿಯ ಬೇರೆ ಕೆಲಸಗಳನ್ನು ಮಾಡಿಕೊಂಡು ಸಂತೋಷವಾಗಿರುವ ಆಯ್ಕೆ ಮತ್ತು ಸ್ವಾತಂತ್ರ್ಯ ಪ್ರತಿಯೊಬ್ಬ ಪ್ರಜೆಗೂ ಇರಬೇಕೆಂದು ಮಾರ್ಕ್ಸ್ ಪ್ರತಿಪಾದಿಸಿದ. “ಕಮ್ಯುನಿಸ್ಟ್ ವ್ಯವಸ್ಥೆಯಲ್ಲಿ ಪ್ರಜೆಗೆ ಪ್ರತಿದಿನವೂ ಹೊಸ ಹೊಸ ಸಂಗತಿಗಳನ್ನು ಪರೀಕ್ಷಿಸಿ ನೋಡುವ ಅವಕಾಶವಿರಲಿ. ಮುಂಜಾನೆ ಬೇಟೆಗೆ ಹೋಗುವ, ಅಪರಾಹ್ನ ಹೊಳೆ ಬದಿ ಮೀನು ಹಿಡಿಯುವ, ಸಂಜೆ ಹಸುವಿನ ಹಾಲು ಕರೆಯುವ, ರಾತ್ರಿ ಊಟದ ಬಳಿಕ ಯಾವುದೋ ಸಾಹಿತ್ಯಭಾಗ ಓದಿ ವಿಮರ್ಶಿಸುವ ಅವಕಾಶ ಇರಲಿ. ಮತ್ತು ಈ ಎಲ್ಲ ಕೆಲಸಗಳನ್ನು ಆ ಪ್ರಜೆ ಬೇಟೆಗಾರ, ಮೀನುಗಾರ, ಗೌಳಿಗ ಮತ್ತು ವಿಮರ್ಶಕನಾಗಿ ಗುರುತಿಸಿಕೊಳ್ಳದೆಹೋದರೂ ಮಾಡಲು ಸಾಧ್ಯವಾಗುವಂಥ ವಾತಾವರಣ ಇರಲಿ” ಎಂದ ಮಾರ್ಕ್ಸ್. ತಾನು ಕನಸುಕಂಡ ಕಮ್ಯುನಿಸ್ಟ್ ವ್ಯವಸ್ಥೆಯಲ್ಲಿ ಇವೆಲ್ಲ ಸಾಧ್ಯ ಎಂಬ ಭದ್ರವಾದ ನಂಬಿಕೆ ಅವನದಾಗಿತ್ತು.

ಮಾರ್ಕ್ಸ್ ಚಿಂತನೆಗಳನ್ನು ನಾವು ಕಮ್ಯುನಿಸ್ಟ್ ಮ್ಯಾನಿಫೆಸ್ಟೋ ಮತ್ತು ದಾಸ್ ಕ್ಯಾಪಿಟಲ್ ಕೃತಿಗಳಲ್ಲಿ ನೋಡಬಹುದು. ಅತ್ಯಂತ ಉನ್ನತಮಟ್ಟದ ಚಿಂತಕನಾಗಿದ್ದರೂ ಮಾರ್ಕ್ಸ್ ನಿಜಜೀವನದಲ್ಲಿ ದೈನೇಸಿಯಾದ ಬಾಳನ್ನು ಬದುಕಬೇಕಾಯಿತು. ಹುಟ್ಟೂರು ಜರ್ಮನಿಯಿಂದ ಹೊರಹಾಕಿಸಿಕೊಂಡವನು ಫ್ರಾನ್ಸ್, ಬೆಲ್ಜಿಯಂ ಮತ್ತು ಇಂಗ್ಲೆಂಡ್ ದೇಶಗಳಲ್ಲಿ ಆಶ್ರಯ ಪಡೆಯಬೇಕಾಯಿತು. ಆತ ತೀರಿಕೊಳ್ಳುವವರೆಗೂ ಇಂಗ್ಲೆಂಡ್ ಆತನಿಗೆ ಪೌರತ್ವ ನೀಡಲಿಲ್ಲ. ಬದುಕಿನ ಬಹುಭಾಗವನ್ನು ಆತ ಹೆಂಡತಿ ಮಕ್ಕಳೊಡನೆ ಮೂರು ಕೋಣೆಗಳ ಪುಟ್ಟ ಮನೆಯಲ್ಲಿ, ಉದರಂಭರಣೆಗೆ ಸರಿಯಾದ ಉದ್ಯೋಗವಿಲ್ಲದೆ ಕಡುಕಷ್ಟದಿಂದ ಕಳೆಯಬೇಕಾಯಿತು. ಕೊನೆಯವರೆಗೆ ಅವನ ಖರ್ಚುವೆಚ್ಚಗಳನ್ನೆಲ್ಲ ನೋಡಿಕೊಂಡವನು ಆಪ್ತ ಫ್ರೆಡರಿಕ್ ಏಂಗೆಲ್ಸ್. ಮಾರ್ಕ್ಸ್ ಚಿಂತನೆಗಳನ್ನು ಸಂಪೂರ್ಣವಾಗಿ ಅನುಮೋದಿಸಿದ್ದ ಏಂಗೆಲ್ಸ್ ಕೂಡ ಕಮ್ಯುನಿಸ್ಟ್ ವ್ಯವಸ್ಥೆಯ ಬಹುದೊಡ್ಡ ಬೆಂಬಲಿಗ. ಮ್ಯಾನಿಫೆಸ್ಟೋ ಕೃತಿಯನ್ನು ಇವರಿಬ್ಬರೂ ಕೂಡಿಯೇ ಬರೆದರು. ತಮಾಷೆಯೆಂದರೆ, ತನ್ನ ಕೃತಿಗಳನ್ನು ಪ್ರಕಟಪಡಿಸಲು ಮಾಕ್ರ್ಸ್ ಏಂಗೆಲ್ಸ್‍ನ ಸಹಾಯ ಪಡೆಯಬೇಕಾಗಿಬಂತು. ಏಂಗೆಲ್ಸ್‍ನ ತಂದೆ ಮ್ಯಾಂಚೆಸ್ಟರ್‍ನಲ್ಲಿ ಬಹಳ ದೊಡ್ಡ ಜವಳಿ ಕಾರ್ಖಾನೆಯನ್ನು ನಡೆಸುತ್ತಿದ್ದುದರಿಂದ ಅಲ್ಲಿನ ಆರ್ಥಿಕ ಸಹಾಯ ಬಳಸಿಕೊಂಡು ಮಾರ್ಕ್ಸ್, ಮ್ಯಾನಿಫೆಸ್ಟೋ ಪುಸ್ತಕವನ್ನು ಅಚ್ಚು ಹಾಕಿ ಬೆಳಕಿಗೆ ತರಲು ಸಾಧ್ಯವಾಯಿತು. ಅಂದರೆ ಬಂಡವಾಳಶಾಹಿ ವ್ಯವಸ್ಥೆಯನ್ನು ಅತ್ಯುಗ್ರವಾಗಿ ವಿರೋಧಿಸುವ ಕೃತಿಯನ್ನು ಅದೇ ಬಂಡವಾಳಶಾಹಿಯ ದುಡ್ಡಿನಲ್ಲೇ ಪ್ರಕಟಪಡಿಸಬೇಕಾಗಿ ಬಂತು! ಮಾರ್ಕ್ಸ್ ನ ಬಹಳಷ್ಟು ಕೃತಿಗಳು (ದಾಸ್ ಕ್ಯಾಪಿಟಲ್‍ನ ಎರಡು ಸಂಪುಟಗಳೂ ಸೇರಿದಂತೆ) ಪ್ರಕಟಣೆಯ ಭಾಗ್ಯ ಕಂಡದ್ದು ಆತ ತೀರಿಕೊಂಡ ಬಹಳ ವರ್ಷಗಳ ನಂತರವೇ ಆದ್ದರಿಂದ, ಅವನ ಚಿಂತನೆಗಳು ಆತ ಬದುಕಿದ್ದಷ್ಟು ಕಾಲ ಯಾರ ಗಮನವನ್ನೂ ಅಷ್ಟಾಗಿ ಸೆಳೆಯಲಿಲ್ಲ. ಅಷ್ಟೋ ಇಷ್ಟೋ ಓದಿದ್ದವರು ಕೂಡ, “ಇದೊಂದು ಮಾದರಿ ಸ್ವರ್ಗದ ಕಲ್ಪನೆ; ಇವೆಲ್ಲ ಕತೆ ಕಾದಂಬರಿಗಳಲ್ಲಿ ಬರೆಯಲು ಮಜ ಕೊಡುತ್ತವೆ, ಆದರೆ ನಿಜಜೀವನದಲ್ಲಿ ಇಂಥದೊಂದು ಯುಟೋಪಿಯಾವನ್ನು ಕಾಣಲು ಸಾಧ್ಯವೇ ಇಲ್ಲ” ಎಂದು ಪ್ರತಿಕ್ರಿಯಿಸಿದ್ದರು.

1883ರಲ್ಲಿ, ತನ್ನ 65ನೇ ವಯಸ್ಸಿನಲ್ಲಿ ಮಾರ್ಕ್ಸ್ ತೀರಿಕೊಂಡ. ಆತ ತೀರಿಕೊಂಡು ಒಂದೆರಡು ದಶಕಗಳು ಕಳೆಯುವಷ್ಟರಲ್ಲಿ ಯುರೋಪ್, ಮುಖ್ಯವಾಗಿ ರಷ್ಯಾದಲ್ಲಿ ರಾಜಕೀಯ ಅಸ್ಥಿರತೆ ತಾರಕಕ್ಕೇರಿತು. ಬಂಡವಾಳಶಾಹಿಗಳನ್ನು ಅತಿಯಾಗಿ ಓಲೈಸುತ್ತಿದ್ದ ಸರಕಾರಗಳನ್ನೂ ರಾಜರನ್ನೂ ಎದುರು ಹಾಕಿಕೊಳ್ಳಲು ಜನರ ನಡುವಿಂದ ಎದ್ದುಬಂದ ಹೊಸ ಪೀಳಿಗೆಯ ನಾಯಕರು ಕಾರ್ಮಿಕರನ್ನು ಒಗ್ಗೂಡಿಸುವುದು ಅನಿವಾರ್ಯವಾಯಿತು. ಕಾರ್ಲ್ ಮಾರ್ಕ್ಸ್ ಬರೆದ ಕೃತಿಗಳು ಆಗ ಅವರಿಗೆ ಹೊಸಯುಗದ ಬೈಬಲ್‍ನಂತೆಯೇ ಕಂಡವು. ಮಾರ್ಕ್ಸ್ ನ ಚಿಂತನೆಯನ್ನು ವ್ಯಾಪಕವಾಗಿ ಪ್ರಚಾರಪಡಿಸಲಾಯಿತು. ಬಂಡವಾಳಶಾಹಿಯ ದುರಂತವನ್ನೂ ಅಪಾಯವನ್ನೂ ಆತನಷ್ಟು ಸ್ಪಷ್ಟವಾಗಿ ಊಹಿಸಿದ್ದ ಬೇರಾವ ಚಿಂತಕನೂ ಆ ಕಾಲದಲ್ಲಿರಲಿಲ್ಲ. ಮುಂದಿನ ಶತಮಾನದಲ್ಲಾಗಲಿದ್ದ ಎಲ್ಲ ರಾಜಕೀಯ ಸ್ಥಿತ್ಯಂತರಗಳನ್ನೂ ಮುಂದಾಗಿ ಗ್ರಹಿಸಿದ್ದ ಬುದ್ಧಿಜೀವಿಯೆಂಬ ಕಾರಣಕ್ಕೆ ಮಾರ್ಕ್ಸ್ ವಿಶೇಷ ಪ್ರೀತ್ಯಾದರಗಳನ್ನು ಸತ್ತ ನಂತರ ಸಂಪಾದಿಸಿದ. ಇಪ್ಪತ್ತನೇ ಶತಮಾನದಲ್ಲಿ ನಡೆದ ಹಲವು ಪ್ರಮುಖ ರಾಜಕೀಯ ಕ್ರಾಂತಿಗಳಿಗೆ ಆತನ ಕೃತಿಗಳೇ ಪ್ರೇರಣೆಯಾಗಿ ಒದಗಿಬಂದವು. ರಷ್ಯಾ, ಕೊರಿಯಾ, ಚೀನಾ, ಕ್ಯೂಬಾ ಮುಂತಾದ ಹಲವು ದೇಶಗಳ ಹಣೆಬರಹವನ್ನು ಕಾರ್ಲ್ ಮಾರ್ಕ್ಸ್ ಬದಲಿಸಿ ಹಾಕಿದ. ಆರ್ಥಿಕತೆ ಮತ್ತು ರಾಜಕೀಯದ ಸಂಬಂಧ ಸೂಕ್ಷ್ಮವನ್ನು ಗ್ರಹಿಸಿದ ಮೊದಲ ಪೀಳಿಗೆಯ ಚಿಂತಕರಲ್ಲಿ ಪ್ರಮುಖನಾದವನು ಮಾರ್ಕ್ಸ್. ಜೀವನಪೂರ್ತಿ ನಿರಂತರವಾಗಿ ಬರೆಯುತ್ತಲೇ ಹೋದ ಮತ್ತು ಆ ಮೂಲಕ ಜಗತ್ತಿನ ಹಲವು ದೇಶಗಳಲ್ಲಿ ಕ್ರಾಂತಿಕಾರಕ ಚಳುವಳಿಗಳನ್ನು ಬಡಿದೆಬ್ಬಿಸಿ ಭವಿಷ್ಯವನ್ನು ತನ್ನಿಚ್ಛೆಯಂತೆ ರೂಪಿಸಿ ನಿರೂಪಿಸಿದ ಈ ಚಿಂತಕ ಖಡ್ಗಕ್ಕಿಂತ ಲೇಖನಿ ಹರಿತ ಎಂಬುದನ್ನೂ ತೋರಿಸಿಕೊಟ್ಟವನು!

(ಮುಂದುವರಿಯುತ್ತದೆ)

2 ಟಿಪ್ಪಣಿಗಳು Post a comment
  1. ಸೆಪ್ಟೆಂ 20 2016

    “ಪರಾಜಿತ” ಎಂಬ ಜಾದಂಬರಿಯಲ್ಲಿ ನಾಯಕ ತಾನು ತಿರಸ್ಕರಿಸಿದ ವ್ಯವಸ್ಥೆಯ ( ಬ್ರಾಹ್ಮಣ್ಯ/ಸನಾತನ ಸಂಪ್ರದಾಯ) ಆಧಾರವನ್ನು ಪಡೆದು ಬಾಳುಕಟ್ಟಿಕೊಂಡು,ಅವನನ್ನು ಬಂಡೇಳಲು ಪ್ರೇರೇಪಿಸಿದ ಅವನ ಕ್ರಿಶ್ಚಿಯನ್ ಪತ್ನಿ ಸನಾತನಿಯಾಗಿ ಬದಲಾದಾಗ ಅನುಭವಿಸುವ ದ್ವಙದ್ವ, ಹತಾಶೆಯನ್ನು ಚೆನ್ನಾಗಿ ಚಿತ್ರಿಸಲಾಗಿದೆ.
    ಕಾರ್ಲ್ ಮಾರ್ಕ್ಸ್ ನ ಕೃತಿಯೊಂದು ವಂಡವಾಳಶಾಹಿಯ ದುಡ್ಡಿನಿಂದ ಪ್ರಕಟವಾದಾಗಲೇ ಆ ತತ್ವದ ಪರಾಜಯ ಕಟ್ಟಿಟ್ಟ ಬುತ್ತಿಯಾಯ್ತೇನೋ!

    ಉತ್ತರ

Trackbacks & Pingbacks

  1. ಸಿದ್ಧಾಂತಗಳ ಚರಿತ್ರೆ – 3 ಕಮ್ಯುನಿಸಂ: ( ಅಪ್ರಸ್ತುತ ಸಿದ್ಧಾಂತ, ಅವಾಸ್ತವಿಕ ಪರಿಹಾರ ) | ನಿಲುಮೆ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments