ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 19, 2016

2

ಪ್ರೇತದ ಆತ್ಮ ಚರಿತೆ! (ಭಾಗ 3)

‍ನಿಲುಮೆ ಮೂಲಕ

– ಶ್ರೀಕಾಂತ್ ಶೆಟ್ಟಿ
ಪ್ರೇತದ ಆತ್ಮ ಚರಿತೆ! (ಭಾಗ ೧)
ಪ್ರೇತದ ಆತ್ಮ ಚರಿತೆ! (ಭಾಗ ೨)
14095896_1079496802145928_6391696631532931089_nಶನಿವಾರವಾಡೆಗೆ ಶನಿ ಎಡಗಾಲಿಟ್ಟು ವಕ್ಕರಿಸಿದ್ದ. ರಘುನಾಥನನ್ನು ಗೃಹಬಂಧನದಲ್ಲಿ ಇಢಲಾಗಿದ್ದರೂ, ಆತನ ದುಷ್ಟಕೂಟ ಮಾತ್ರ ಸುಮ್ಮನೆ ಕೂತಿರಲಿಲ್ಲ. ಅದು ಒಂದಲ್ಲಾ ಒಂದು ಸಂಚನ್ನು ಹೆಣೆಯುತ್ತಲೇ ಇತ್ತು. ರಘುನಾಥನ ಬಂಧನವಾದ ಕೆಲವೇ ದಿನದಲ್ಲಿ ಪೇಶ್ವಾ ಮಾಧವ ರಾವ್ ಮೇಲೆ ಮಾರಣಾಂತಿಕ ದಾಳಿ ನಡೆಯಿತು. ಮಾಧವ ರಾವ್ ಬೆಂಗಾವಲಿಗನಾಗಿದ್ದ ರಾಮಸಿಂಗ್ ಎಂಬಾತ ಮಾಧವ್ ರಾವ್ ಮೇಲೆ ಅನಿರೀಕ್ಷಿತವಾಗಿ ತಲವಾರು ಝಳಪಿಸಿದ. ಕುತ್ತಿಗೆಗೆ ಬೀಳಬೇಕಿದ್ದ ಪೆಟ್ಟು ತೋಳಿಗೆ ಬಿತ್ತು ಬದುಕಿಕೊಂಡ, ಇದರ ಹಿಂದೆ ರಘುನಾಥ ರಾವ್ ಕೈವಾಡ ಇತ್ತು ಎಂದು ಬಳಿಕ ತಿಳಿದು ಬಂತು. ಹೈದರ್ ಆಲಿಯ ವಿರುದ್ಧ ಮೂರನೇ ಯುದ್ಧಕ್ಕೆ ಮಾಧವ್ ರಾವ್ ಪೇಶ್ವಾ ಸಿದ್ಧತೆ ನಡೆಸುತ್ತಿರುವ ಸಂದರ್ಭದಲ್ಲಿ ಪೇಶ್ವಾ ಆರೋಗ್ಯದಲ್ಲಿ ಏರುಪೇರು ಉಂಟಾಯಿತು. ಭಯಾನಕ ಟಿಬಿ ಖಾಯಿಲೆ ಪೇಶ್ವಾನಿಗೆ ತಟ್ಟಿತ್ತು. ಅಂದಿನ ಕಾಲಕ್ಕೆ ಅದು ಬ್ರಿಟಿಷರು ತಂದು ಬಿಟ್ಟಿದ್ದ ಹೊಸ ಖಾಯಿಲೆಯಾದ ಕಾರಣ ಇಲ್ಲಿ ಟಿಬಿಗೆ ಸರಿಯಾದ ಚಿಕಿತ್ಸೆ ಇರಲಿಲ್ಲ. ಥೇವೂರು ಚಂತಾಮಣಿ ದೇವಾಲಯದಲ್ಲಿ ಪೇಶ್ವಾ ಮಾಧವ ರಾವ ಕೊನೆಯುಸಿರೆಳೆದ. ಅಲ್ಲೇ ಆತನ ಅಂತ್ಯಸಂಸ್ಕಾರ ನಡೆಸಲಾಯಿತು. ಆತನ ಪ್ರಿಯ ಪತ್ನಿ ರಾಮಾಬಾಯಿ ಗಂಡನ ಚಿತೆಗೆ ಹಾರಿ ಪ್ರಾಣ ಬಿಟ್ಟಳು. ಮಾಧವ ರಾವ್, ಶನಿವಾರವಾಡೆಯ ಪೇಶ್ವಾ ಗದ್ದುಗೆ ಅಲಂಕರಿಸಿದ ಕೊನೆಯ ಸಮರ್ಥ ಪೇಶ್ವಾ. ಈತ ಹಲವಾರು ಸಮರ್ಥ ಸೇನಾನಿಗಳನ್ನು ಗುರುತಿಸಿ ಅವರಿಗೆ ಬೇರೆ ಬೇರೆ ವಲಯಗಳ ಅಧಿಕಾರ ನೀಡಿದ. ಇಂದು ನಾವು ರಾಜಸ್ಥಾನದಲ್ಲಿ ಕಾಣುತ್ತಿರುವ ಸಿಂಧ್ಯಾ ಮನೆತನದ ಮೂಲ ಪುರುಷ ಮಹಾದ್ ಜಿ ಸಿಂಧ್ಯಾನನ್ನು ಬೆಳೆಸಿದ್ದು ಮಾಧವರಾವ್ ಪೇಶ್ವಾ. ಕೊಲ್ಹಾಪುರದ ಭೋಸ್ಲೆಗಳು, ಬರೋಡಾದ ಗಾಯಕ್ವಾಡರು, ಉತ್ತರಭಾರತದಲ್ಲಿ ಹೋಳ್ಕರ್‌ಗಳು ಇವರೆಲ್ಲಾ ಮಾಧವರಾವ್ ಪೇಶ್ವಾನ ಗರಡಿಯಲ್ಲೇ ಪಳಗಿ ಪುಣೆಗೆ ನಿಷ್ಟರಾಗಿ ಆಡಳಿತ ನಡೆಸಿದರು. ಮಾಧವರಾವ್ ಪೇಶ್ವೆ ತೀರಿಕೊಳ್ಳುತ್ತಿದ್ದಂತೆ ಈ ರಾಜ್ಯಗಳ ಹಿಡಿತ ಪುಣೆಯಿಂದ ಕೈ ತಪ್ಪಿತು. ಎಲ್ಲರೂ ಸ್ವತಂತ್ರರಾಗಿ ಆಳ್ವಿಕೆ ಮಾಡಲು ಆರಂಭಿಸಿದರು. ಮಾಧವ ರಾವ್ ಬಳಿಕ ಪುಣೆಯಲ್ಲಿ ನಾಲಾಯಕ್ಕುಗಳ ಸರದಿ ಆರಂಭ ವಾಯಿತು. ಪೇಶ್ವಾಯಿಯ ರಕ್ತ ಎಲ್ಲಿ ಕಳಪೆಯಾಯಿತೋ ಗೊತ್ತಿಲ್ಲ, ಒಬ್ಬರಿಗಿಂತ ಒಬ್ಬರು ಅಯೋಗ್ಯರೇ ಬರಲಾರಂಭಿಸಿದರು. ಶನಿವಾರ ವಾಡೆಯನ್ನು ಇಂದಿಗೂ ಕಾಡುತ್ತಿರುವ ಪ್ರೇತದ ಕತೆ ಇಲ್ಲಿ ಆರಂಭವಾಗುತ್ತದೆ.

ಮಾಧವ್ ರಾವ್ ನಿರ್ಗಮನದಿಂದ ಶನಿವಾರ ವಾಡೆಯ ಪೇಶ್ವಾ ಗದ್ದುಗೆ ಮತ್ತೆ ಅನಾಥವಾಯಿತು. ಅದಕ್ಕಾಗಿ ಹೊಂಚು ಹಾಕಿ ಕುಳಿತಿದ್ದ ರಘುನಾಥ ರಾವ್ ಅದೇ ಶನಿವಾರವಾಡೆಯ ಕತ್ತಲಕೋಣೆಯಲ್ಲಿದ್ದ. ಮುಂದೇನಾಗುವುದೋ ಎಂಬ ಆತಂಕ ಎಲ್ಲರಲ್ಲೂ ಮನೆ ಮಾಡಿತ್ತು. ರಘುನಾಥ ರಾವ್ ತಡ ಮಾಡಲಿಲ್ಲ. ಪೇಶ್ವಾ ಗದ್ದುಗೆಯ ಮೇಲೆ ತನ್ನ ಹಕ್ಕು ಸಾಧಿಸಲು ಆರಂಭಿಸಿದ. ತಯಾರಿ ಜೋರಾಗಿಯೇ ನಡೆಯಿತು. ಶನಿವಾರವಾಡೆಯ ಗೃಹಬಂಧನದಿಂದ ತಪ್ಪಿಸಿಕೊಂಡು ತನ್ನ ಬೆಂಬಲಿಗರನ್ನು ಸೇರಿಕೊಂಡು ನಿಜಾಮನೊಂದಿಗೆ ಸೇರಿ ಪುಣೆಯ ಮೇಲೆ ದಾಳಿ ಮಾಡುವ ಉದ್ದೇಶ ರಘುನಾಥನಿಗಿತ್ತು. ಆದರೆ ಸೆರೆಯಿಂದ ತಪ್ಪಿಸಿಕೊಳ್ಳುವ ರಘುನಾಥನ ಯತ್ನ ವಿಫಲವಾಯಿತು. ಆತನ ಎಲ್ಲಾ ಉಪಾಯಗಳು ಬಯಲಾದವು. ಮರಾಠಾ ಸಾಮ್ರಾಜ್ಯ ಭಿಮಸ್ಥಂಬಗಳಾದ ಸಾಮಂತರಸರು, ಸೇನಾ ಪ್ರಮುಖರು, ಸ್ಥಾನೀಯ ಪ್ರಮುಖರು ದಿಗಿಲುಗೊಂಡರು. ಈ ಸೆರಗ ಕೆಂಡದಿಂದ ಮುಕ್ತಿಯಾದರೂ ಹೇಗೆ. ಹಿಂದೂ ಪದಪಾದ್ಯಶಾಹಿಗೆ ನಮ್ಮೊಳಗಿನಿಂದಲೇ ಒಬ್ಬ ಶತ್ರು ಹುಟ್ಟಿಕೊಂಡುಬಿಟ್ಟಿದ್ದಾನೆ. ಅಧಿಕಾರಕ್ಕಾಗಿ ಎಂತಹ ಹೀನ ಕೆಲಸಕ್ಕೂ ಹೇಸುವವನಲ್ಲ ರಘೋಬಾ… ಪೇಶ್ವಾಗಳ ರಕ್ತದಲ್ಲೇ ಬಂದಿದ್ದ ಹಿಂದೂ ಪದಪಾದ್ಯಶಾಹಿಯ ಗಮ್ಯಗುರಿಯನ್ನು ದಿಕ್ಕರಿಸಿ ನಿಜಾಮನೊಂದಿಗೆ ಕೈ ಜೋಡಿಸಿದವನನ್ನು ನಂಬುವುದಾದರೂ ಹೇಗೆ ? ಶತಮಾನದಿಂದ ಸಹಸ್ರಾರು ರಣಕಲಿಗಳ ರಕ್ತದಿಂದ ಅರ್ಜಿತವಾದ ಸಾಮ್ರಾಜ್ಯವನ್ನು, ಪ್ರಜೆಗಳ ಬದುಕನ್ನು, ಹಿರಿಯರು ಕಂಡ ಕನಸನ್ನು ಈತನ ಕೈಗಿತ್ತು ಕತ್ತು ಹಿಸುಕಲು ಕೊಡುವುದೆಂತು ? ಪಾರುಪತ್ಯರು, ಆಸ್ಥಾನ ಪ್ರಮುಖರು, ಸಂಸ್ಥಾನಿಕರು ಚಿಂತೆಗೆ ಬಿದ್ದರು. ಮರಾಠಾ ಅಸ್ಮಿತೆಗೆ ಅಪಾಯದ ಅರಿವಾಯಿತು. ರಘುನಾಥನನ್ನು ಅಧಿಕಾರದಿಂದ ದೂರವಿಡಲು ಮಾಧವ ರಾವ್ ಪೇಶ್ವೆಯ ತಮ್ಮ ನಾರಾಯಣ ಪೇಶ್ವೆಯನ್ನು ಪೇಶ್ವಾನಾಗಿ ಘೋಷಿಸಿದರು. ಆಗ ನಾರಾಯಣನ ವಯಸ್ಸು ೧೭ ವರ್ಷ.. ಎರಡು ವರ್ಷಗಳ ಕಾಲ ಪೇಶ್ವಾ ಮಾಧವರಾವ್ ದೀವಾನನಾಗಿ ಸೇವೆ ಸಲ್ಲಿಸಿದ ಅನುಭವ ಬಿಟ್ಟರೆ ಆತನ ಬಳಿ ಮತ್ತೇನೂ ಅರ್ಹತೆ ಇರಲಿಲ್ಲ. ಆದರೆ ಆತನನ್ನು ಬಿಟ್ಟರೆ ಪೇಶ್ವಾ ಸ್ಥಾನಕ್ಕೆ ಬೇರೆ ಯಾರೂ ಗತಿ ಇರಲಿಲ್ಲ.

ದೀವಾನರಾದ ಸಖಾರಾಮ್ ಬಾಪು, ನಾನಾ ಫಡ್ನವೀಸ್, ಮೋರೋಬ ಫಡ್ನವೀಸ್, ಸೇನಾ ದಂಡನಾಯಕರಾಗಭರಿ ಬಲ್ಲಾಳ್ ಫಡ್ಕೆ, ಬಾಬಾಜಿ ಭರ್ವೆ ಅವರ ನೇತೃತ್ವದಲ್ಲಿ ಎಳೆಯ ನಾರಾಯಣ ರಾವ್ ಪೇಶ್ವಾ ಆಡಳಿತಕ್ಕೆ ಹೆಗಲು ಕೊಟ್ಟ. ಕೆಲವು ಎಚ್ಚರಿಕೆಗಳನ್ನು ನೀಡಿ ಚಿಕ್ಕಪ್ಪ ರಘುನಾಥರಾವ್ ನನ್ನು ನಾರಾಯಣ ಪೇಶ್ವಾ ಗೃಹಬಂಧನದಿಂದ ಬಿಡುಗಡೆ ಮಾಡಿದ.. ನಾರಾಯಣ ರಾವ್ ಗೆ ಪೂರಕವಾಗಿ ಸೇನಾ ಚಟುವಟಿಕೆಗಳನ್ನು ನೋಡುತ್ತಾ ಸಹಕಾರ ಮಾಡಬೇಕು ಎಂಬ ಒಪ್ಪಂದದ ಮೇರೆಗೆ ಬಿಡುಗಡೆ ಮಾಡಲಾಯಿತು. ಮುಕ್ಕಾಲು ಭಾರತವನ್ನು ಗೆದ್ದ ಶನಿವಾರವಾಡೆಯ ರಾಜ ತಾಂತ್ರಿಕರು ಇಲ್ಲಿ ಎಡವಿದರು. ಆರಂಭದಲ್ಲಿ ತಲೆ ಅಲ್ಲಾಡಿಸಿದ ರಘೊಬಾ ದಿನಗಳೆದಂತೆ ತನ್ನ ಜಾಲವನ್ನು ಪೇಶ್ವಾ ಪದವಿಯ ಸುತ್ತಲೂ ಹೆಣೆಯ ತೊಡಗಿದ. ಸ್ವಭಾವತಃ ನಾರಾಯಣನೂ ಮಹಾ ಸಿಡುಕ… ಈ ಇಬ್ಬರ ಸುತ್ತಲೂ ಭಟ್ಟಂಗಿಗಳ ಗುಂಪು ನೆರೆಯ ತೊಡಗಿತು. ಚಿಕ್ಕಪ್ಪನ ಮೇಲೆ ಒಂದು ಕಣ್ಣು ಇಟ್ಟುಕೊಂಡಿದ್ದ ನಾರಾಯಣ ಪೇಶ್ವೆ ಅಧಿಕಾರ ನಡೆಸಲು ರಾಜ ನಾನಾ ಫಡ್ನವೀಸ್ ಅವನನ್ನೇ ಹೆಚ್ಚು ನಂಬಿಕೊಂಡಿದ್ದ..

ರಘುನಾಥನ ಹೆಂಡತಿ ಆನಂದಿ ಬಾಯಿ ಮಹಾ ಆಸೆ ಬುರುಕಿ ಹೆಂಗಸು. ವಾಸ್ತವದಲ್ಲಿ ರಘುನಾಥನಿಗಿಂತ ಹೆಚ್ಚು ಪೇಶ್ವಾ ಪಟ್ಟಕ್ಕೆ ಆಸೆಪಟ್ಟವಳು ಆನಂದಿ ಬಾಯಿ. ರಘುನಾಥನಿಗೆ ಬಂಡೇಳುವಂತೆ ಪ್ರಚೋದನೆ ನೀಡುತ್ತಿದ್ದವಳೂ ಇವಳೇ ಎನ್ನುತ್ತವೆ ಐತಿಹಾಸಿಕ ತಥ್ಯಗಳು.. ನಾರಾಯಣನನ್ನು ಹುದ್ದೆಯಿಂದ ಹೇಗೆ ಕೆಳಗಿಳಿಸುವುದು ಎಂದು ಹೊಂಚು ಹಾಕುತ್ತಿದ್ದ ರಘುನಾಥ ರಾವ್ ತಲೆಯಲ್ಲಿ ಒಂದು ಉತ್ತಮ ಉಪಾಯ ಹೊಳೆಯಿತು. ಅದಾಗಲೇ ಸೈನಿಕರಿಗೆ ಸಂಬಳವಾಗದೆ ಕೆಲವೇ ತಿಂಗಳುಗಳು ಕಳೆದಿದ್ದವು. ಸೈನ್ಯದ ಒಂದು ತುಕುಡಿಯನ್ನು ಬಂಡೆಬ್ಬಿಸಿ ನಾರಾಯಣನನ ಮೇಲೆ ದಾಳಿ ನಡೆಸಿ ಆತನನ್ನು ಬಂಧಿಸಬೇಕು.. ಒಮ್ಮೆ ಸೈನ್ಯದಲ್ಲಿ ನಾರಾಯಣನ ವಿರುದ್ಧ ಅಸಂತು‍ಷ್ಟತೆಯನ್ನು ಹರಡಿದರೆ ಮುಂದಿನ ಕೆಲಸ ತನ್ನಿಂದ ತಾನೇ ನಡೆದುಕೊಂಡು ಹೋಗುತ್ತದೆ. ಕೂಡಲೆ ತನ್ನ ನಿಷ್ಟಾವಂತ ಬಂಟ ಸುಮೇರು ಸಿಂಗ್ ಗರ್ಡಿಯನ್ನು ಕರೆಸಿ ಆತನಿಗೆ ಮೂರು ಲಕ್ಷ ಜಹಗೀರಿನ ಆಮೀಷವನ್ನು ಒಡ್ಡಿದ. ಇದಕ್ಕೆ ಬದಲಾಗಿ ಆತ ಪೇಶ್ವೆಯನ್ನೇ ಬಂದಿಸಬೇಕಿತ್ತು. ಸುಮೇರು ಸಿಂಗ್ ಒಮ್ಮೆಗೇ ದಿಗಿಲುಗೊಂಡ, ಆದರೂ ಸಾವರಿಸಿಕೊಂಡು ಕೆಲಸಕ್ಕೆ ಒಪ್ಪಿಕೊಂಡ. ಪೇಶ್ವಾನನ್ನ ಬಂಧಿಸಲು ನಾನು ಸಿದ್ಧ, ಅದರೆ ನೀವು ನನಗೆ ಈ ಬಗ್ಗೆ ಆಜ್ನಾಪತ್ರ ನೀಡಬೇಕು ಎಂದು ಸುಮೇರು ಸಿಂಗ್ ಬೇಡಿಕೆ ಇಟ್ಟ. ಮರುದಿನವೇ ಬಂದು ಪತ್ರ ಪಡೆದುಕೊಂಡು ಹೋಗಲು ರಘುನಾಥ ರಾವ್ ತಿಳಿಸಿದ್ದಾಯಿತು.

ಹಲವಾರು ಸಾಮ್ರಾಜ್ಯಗಳ ಹುಟ್ಟು ಸಾವುಗಳಿಗೆ ಮಹಿಳೆಯರೇ ಮೂಲ ಕಾರಣ ಎಂಬ ಮಾತು ಮತ್ತೊಮ್ಮೆ ಆನಂದಿಬಾಯಿಯ ಮೂಲಕ ಸತ್ಯವಾಗುವುದರಲ್ಲಿತ್ತು. ಮರಾಠಾ ಸಾಮ್ರಾಜ್ಯದ ಮಹಾವಿನಾಶಕ್ಕೆ ಮುಹೂರ್ತ ನಿಗದಿಯಾಯಿತು. ರಾತ್ರಿ ಪೇಶ್ವಾ ನಾರಾಯಣ ರಾವ್ ಬಂಧನಕ್ಕೆ ಪತ್ರ ಸಿದ್ದವಾಯಿತು. ನಾರಾಯಣ ರಾವ್ ಲಾ ಧರಾ… ನಾರಾಯಣ ರಾವನನ್ನು ಹಿಡಿಯಿರಿ ಎಂದು ಮರಾಠಿಯಲ್ಲಿ ಬರೆದು ಪತ್ರವನ್ನು ಸಿದ್ದಪಡಿಸಿದ. ಅದಕ್ಕೆ ಸೇನಾ ಪ್ರಮುಖನಾಗಿದ್ದ ರಘುನಾಥ ತನ್ನ ಮೊಹರನ್ನೂ ಒತ್ತಿದ. ಎಷ್ಟೆಂದರೂ ರಘುನಾಥ ರಾವ್ ತನ್ನ ತಮ್ಮನ ಮಗನ ರಕ್ತ ಚೆಲ್ಲಬೇಕೆಂದು ಬಯಸಿದವನಲ್ಲ. ಇಬ್ಬರ ಮೈಯಲ್ಲೂ ಪೇಶ್ವಾಯಿ ರಕ್ತವೇ ಹರಿದಾಡುತ್ತಿತ್ತು. ಅದಲ್ಲದೆ ನಾರಾಯಣನ ಕೊಲೆ ಏನಾದರೂ ನಡೆದು ಹೋದರೆ ಇಡೀ ಶನಿವಾರವಾಡೆ ಆತನ ವಿರುದ್ಧ ತಿರುಗಿ ಬೀಳುವ ಅಪಾಯವಿತ್ತು. ಆದ್ದರಿಂದ ಕೇವಲ ನಾರಾಯಣನನ್ನು ಬಂಧಿಸಿ ತರುವಂತೆ ಸುಮೇರು ಸಿಂಗ್ ತಂಡಕ್ಕೆ ಅಪ್ಪಣೆ ಮಾಡಿದ್ದ. ಪೇಶ್ವಾಗಳ ಇತಿಹಾಸದಲ್ಲೇ ಇಂತಹ ಪ್ರಯತ್ನ ನಡೆದಿರಲಿಲ್ಲ, ರಘುನಾಥನಲ್ಲಿ ಅಷ್ಟೊಂದು ಧೈರ್ಯವಿತ್ತೇ ? ಖಂಡಿತಾ ಇರಲಿಲ್ಲ ಆದರೆ ಆತನ ಹೆಂಡತಿಗಿತ್ತು. ಅವಳ ಕುಮ್ಮಕ್ಕು ರಘುನಾಥನಲ್ಲಿ ಈ ಭಂಡ ಧೈರ್ಯ ತುಂಬಿತು.

ಮುಂದುವರೆಯುತ್ತದೆ…….
ಜೈ ಮಹಾಕಾಲ್

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments