ಸಿದ್ಧಾಂತಗಳ ಚರಿತ್ರೆ – 3 ಕಮ್ಯುನಿಸಂ: ( ಅಪ್ರಸ್ತುತ ಸಿದ್ಧಾಂತ, ಅವಾಸ್ತವಿಕ ಪರಿಹಾರ )
– ರೋಹಿತ್ ಚಕ್ರತೀರ್ಥ
ಸಿದ್ಧಾಂತಗಳ ಚರಿತ್ರೆ – 1 (ಕಾರ್ಲ್ ಮಾರ್ಕ್ಸ್ ಕಟ್ಟಿಕೊಟ್ಟ ಕಲ್ಪನೆಯ ಸ್ವರ್ಗ)
ಸಿದ್ಧಾಂತಗಳ ಚರಿತ್ರೆ – 2 ( ಆತನ ಚಿಂತನೆ ಅರ್ಧ ಭೂಗೋಲವನ್ನು ನಿಯಂತ್ರಿಸಿತು! )
ಕಮ್ಯುನಿಸ್ಟ್ ಚಿಂತನೆಯನ್ನು ಕಾರ್ಲ್ ಮಾರ್ಕ್ಸ್ ಪ್ರಾರಂಭಿಸಿದವನಲ್ಲ; ಆದರೆ ಅದಕ್ಕೊಂದು ಸ್ಪಷ್ಟ ರೂಪ ಕೊಟ್ಟವನು ಆತ. ಮಾರ್ಕ್ಸ್ ತೀರಿಕೊಂಡ ಮೂವತ್ತು ವರ್ಷಗಳ ನಂತರ ರಷ್ಯದಲ್ಲಿ ಕ್ರಾಂತಿಯಾಗಿ ಲೆನಿನ್ ಅಧಿಪತ್ಯ ಬಂತು. ಮಾರ್ಕ್ಸ್ ನ ಅದುವರೆಗಿನ ಅಪ್ರಕಟಿತ ಕೃತಿಗಳೆಲ್ಲ ಒಂದರ ಮೇಲೊಂದರಂತೆ ಸಾಲಾಗಿ ಪ್ರಕಟವಾಗಿ ಜಗತ್ತಿನ ಹಲವು ದೇಶಗಳಲ್ಲಿ, ಹಲವು ಯುವಕರ ಕೈಗೆ ಬಂದು, ಅವರೆಲ್ಲ ತಮ್ಮ ಸುತ್ತಲಿನ ಹಳೆಯ ವ್ಯವಸ್ಥೆಯನ್ನು ಕಿತ್ತೊಗೆಯುವ ಸಂಕಲ್ಪ ತೊಡುವಂತಾಯಿತು. 1920ರಿಂದ 1960ರವರೆಗಿನ ಅವಧಿ ಕಮ್ಯುನಿಸಂ ಮತ್ತು ಮಾಕ್ರ್ಸಿಸಂಗಳ ಉಚ್ಛ್ರಾಯಕಾಲ. ರಷ್ಯ, ಚೀನಾ, ಕೊರಿಯ, ಕಾಂಬೋಡಿಯಾ, ಜರ್ಮನಿ, ಗ್ರೇಟ್ ಬ್ರಿಟನ್, ಫ್ರಾನ್ಸ್, ಕ್ಯೂಬಾದಂಥ ಹಲವು ದೇಶಗಳು ಮಾಕ್ರ್ಸ್ ಚಿಂತನೆಯ ಪ್ರಯೋಗ ಶಾಲೆಗಳಾದವು. ಸ್ವಾತಂತ್ರ್ಯಾ ನಂತರದ ಮೊದಲ ಮೂರು ದಶಕಗಳಲ್ಲಿ ಭಾರತ ಕೈಗೊಂಡ ಹತ್ತುಹಲವು ಯೋಜನೆಗಳಲ್ಲಿ ಸೋವಿಯೆಟ್ ರಷ್ಯಾ ಪ್ರಣೀತ ಕಮ್ಯುನಿಸಂನ ದಟ್ಟ ಛಾಯೆಯಿದ್ದದ್ದು ಸುಸ್ಪಷ್ಟ. ಆದರೆ 1970ರ ನಂತರ ರಷ್ಯಾ ಹಲವು ಹೋಳುಗಳಾಗಿ ಒಡೆದುಹೋಗಿ ಶೀತಲಸಮರ ಅಘೋಷಿತ ಅಂತ್ಯ ಕಂಡಿದ್ದರಿಂದ ಕಮ್ಯುನಿಸಂ ಹಿನ್ನಡೆಯನುಭವಿಸಿತು. ಅಲ್ಲದೆ ಕಮ್ಯುನಿಸಂನ್ನು ಅಪ್ಪಿಕೊಂಡ ದೇಶಗಳೆಲ್ಲ ಸರ್ವಾಧಿಕಾರಿಗಳ ನಿಯಂತ್ರಣಕ್ಕೊಳಪಟ್ಟು ಬೃಹತ್ ಪ್ರಮಾಣದ ಹತ್ಯಾಕಾಂಡಗಳಿಗೆ ಸಾಕ್ಷಿಯಾದ್ದರಿಂದ, ಮಾರ್ಕ್ಸ್ ನ ಚಿಂತನೆಗಳ ಮೇಲಿದ್ದ ಭರವಸೆಗಳೆಲ್ಲ ಕಮರಿಹೋದವು. ಕಮ್ಯುನಿಸಂನ ಮೆಕ್ಕಾ ಎಂದೇ ಕರೆಸಿಕೊಳ್ಳುತ್ತಿದ್ದ ರಷ್ಯಾದೊಳಗಿನ ಬಡತನ, ಶೋಷಣೆ, ಸ್ವಾತಂತ್ರ್ಯಹರಣ, ಹಿಂಸಾಚಾರಗಳ ಕಟು ಕತೆಗಳು ಹೊರಜಗತ್ತಿಗೆ ತಿಳಿಯತೊಡಗಿದ್ದು 70ರ ದಶಕದ ನಂತರ; ಅದೂ ತುಣುಕು ತುಣುಕಾಗಿ.
ಕಮ್ಯುನಿಸಂನ ಅವನತಿಗೆ ಕೆಲವು ಕಾರಣಗಳನ್ನು ಗುರುತಿಸಬಹುದು.
ಮೊದಲನೆಯದಾಗಿ ಮಾರ್ಕ್ಸ್ ಹೇಳಿದ ಬಂಡವಾಳಶಾಹಿ ಮತ್ತು ಕಾರ್ಮಿಕರ ಸಮಸ್ಯೆಗಳು ಇಡೀ ಸಮಾಜವನ್ನು ಪ್ರತಿನಿಧಿಸುವುದಿಲ್ಲ. ಆದರೆ ಸಮಾಜ, ದೇಶಗಳೆಲ್ಲ ಈ ಎರಡೇ ವರ್ಗಗಳಿಂದ ತುಂಬಿಹೋಗಿವೆಯೆಂದು ಮಾಕ್ರ್ಸ್ ಪ್ರತಿಪಾದಿಸಿದ, ನಂಬಿಸಿದ. ಆತನ ಪ್ರಕಾರ, ಬಂಡವಾಳಶಾಹಿಗಳು (ಅಥವಾ ಬೂಜ್ರ್ವಾಗಳು) ಸಿರಿವಂತರು, ಶೋಷಣೆ ಮಾಡುವವರು, ಲಾಭಾಂಶದಲ್ಲಿ ಯಾರಿಗೂ ಪಾಲುಕೊಡದ ಕೃಪಣರು, ಹಿಂಸಾಚಾರಿಗಳು, ದರ್ಪ ಪೊಗರು ಅಹಂಕಾರವೇ ಮೈವೆತ್ತವರು. ಅದಕ್ಕೆ ತದ್ವಿರುದ್ಧವೆನ್ನುವ ತಳಿ ಕಾರ್ಮಿಕರದ್ದು. ಬಡವರು, ಶೋಷಿತರು, ದನಿ ಇಲ್ಲದವರು, ಮೈಬಗ್ಗಿಸಿ ದುಡಿದರೂ ಶ್ರಮಕ್ಕೆ ತಕ್ಕ ಪ್ರತಿಫಲ ಪಡೆಯದ ಅಮಾಯಕರು. ಸಮಾಜವನ್ನು ಈ ಎರಡು ಕಪ್ಪು-ಬಿಳುಪಿನ ಛಾಯೆಗಳಲ್ಲಿ ಚಿತ್ರಿಸಿ ಅದೇ ಪರಮಸತ್ಯವೆಂಬಂತೆ ನಂಬಿಸಿದ ಮಾಕ್ರ್ಸ್ ಸಮಾಜದ ವೈವಿಧ್ಯಕ್ಕೆ ಪೂರ್ತಿಯಾಗಿ ಕುರುಡನಾಗಿದ್ದ ಎನ್ನಬೇಕಾಗುತ್ತದೆ. ಒಂದು ಸಮಸ್ಯೆಯನ್ನು ಚರ್ಚಿಸಬೇಕಾದರೆ ನಮ್ಮ ದೃಷ್ಟಿಯನ್ನು ಒಂದೆರಡು ಸಂಗತಿಗಳ ಮೇಲಷ್ಟೇ ಕೇಂದ್ರೀಕರಿಸುವುದು ಮುಖ್ಯವೇನೋ ಹೌದು, ಆದರೆ ಅವಷ್ಟೇ ಸಮಸ್ಯೆಗಳು; ಅವುಗಳ ಹೊರತಾಗಿ ಪ್ರಪಂಚದಲ್ಲಿ ಮತ್ತೇನೂ ಅಸ್ತಿತ್ವದಲ್ಲೇ ಇಲ್ಲ ಎಂಬುದು ಅಪಾಯಕಾರಿ. ಎಲ್ಲ ಕಾಲದಲ್ಲಿರುವ ಹಾಗೆ ಮಾರ್ಕ್ಸ್ ಕಾಲದಲ್ಲಿಯೂ ಈ ಶೋಷಕ-ಶೋಷಿತ ವರ್ಗಗಳಿಗೆ ಸೇರದ ಲಕ್ಷಾಂತರ ಶ್ರೀಸಾಮಾನ್ಯರಿದ್ದರು. ಮತ್ತು ಅವರಿಗೂ ಅವರದ್ದೇ ಆದ ಕಷ್ಟ-ಸುಖಗಳಿದ್ದವು. ಆದರೆ ಅವರನ್ನು ಪರಿಗಣಿಸದೆ ಸಮಸ್ಯೆಯ ಕೇಂದ್ರವನ್ನು ತನಗೆ ಬೇಕಾದಂತೆ ದುಡಿಸಿಕೊಂಡ ಮಾಕ್ರ್ಸ್, ತನ್ನ ಪೀಳಿಗೆಯ ದಾರಿ ತಪ್ಪಿಸಿದ ಎನ್ನಬಹುದು.
ಮಾಕ್ರ್ಸ್ “ಉತ್ಪನ್ನದ ವಿರೋಧಾಭಾಸ” ಎಂಬ ಪರಿಕಲ್ಪನೆಯನ್ನು ಚಲಾವಣೆಗೆ ತಂದ. ಅದರ ಪ್ರಕಾರ, ಕಾರ್ಮಿಕರು ಹೆಚ್ಚುಹೆಚ್ಚು ಉತ್ಪನ್ನಗಳು ತಯಾರಿಸಿದಂತೆಲ್ಲಾ ಕಡಿಮೆ ಸವಲತ್ತುಗಳೊಂದಿಗೆ ಬದುಕಬೇಕಾದ ಅನಿವಾರ್ಯತೆಗೆ ಸಿಲುಕುತ್ತಾರೆ. ಹೇಗೆ ಗೊತ್ತೆ? ಕಾರ್ಖಾನೆಗಳಲ್ಲಿ ಉತ್ಪನ್ನಗಳ ಉತ್ಪತ್ತಿ ಹೆಚ್ಚಾದರೆ ಮಾರುಕಟ್ಟೆಯಲ್ಲಿ ಅದರ ಮೌಲ್ಯ ಕುಸಿಯುತ್ತದೆ. ಇದು ಬಂಡವಾಳಶಾಹಿಗೆ ನೇರ ಹೊಡೆತ ಕೊಡುತ್ತದೆ. ಕಾರ್ಖಾನೆ ನಷ್ಟದಲ್ಲಿ ನಡೆಯಬೇಕಾಗುತ್ತದೆ. ಆದರೆ ಆ ನಷ್ಟವನ್ನು ತನ್ನ ತಲೆ ಮೇಲೆಳೆದುಕೊಳ್ಳಲು ಬಯಸದ ಮಾಲಿಕ, ಒಂದಷ್ಟು ಜನರನ್ನು ಕೆಲಸದಿಂದ ಕೈಬಿಡುತ್ತಾನೆ. ಸಮಾಜದಲ್ಲಿ ನಿರುದ್ಯೋಗಿಗಳ ಸಂಖ್ಯೆ ಜಾಸ್ತಿಯಾಗುತ್ತದೆ ಮತ್ತು ಅವರ ಕೊಳ್ಳುವ ಸಾಮರ್ಥ್ಯ ಕುಗ್ಗುತ್ತದೆ. ಹಾಗಾಗಿ ಮಾರುಕಟ್ಟೆಯಲ್ಲಿ ಉತ್ಪನ್ನಗಳು ಬೆಟ್ಟದಂತೆ ಬಂದು ರಾಶಿಬೀಳುತ್ತಿದ್ದರೂ ಅದನ್ನು ಕೊಳ್ಳುವ ಸಾಮರ್ಥ್ಯವಿಲ್ಲದೆ ಸಮಾಜದ ಕೆಳಸ್ತರದ ಜನ ಬವಣೆ ಪಡಬೇಕಾಗುತ್ತದೆ. ಲೆನಿನ್ ರಷ್ಯಾದಲ್ಲಿ ಅಧಿಕಾರಕ್ಕೇರಿದಾಗ ಮಾಡಿದ ಮೊದಲ ಕೆಲಸ ಉತ್ಪನ್ನಗಳ ನಿಯಂತ್ರಣ. ಆ ಮೂಲಕ ಮಾರುಕಟ್ಟೆಯಲ್ಲಿ ವಸ್ತುಗಳ ಬೆಲೆ ಹೆಚ್ಚುಕಡಿಮೆಯಾಗದಂತೆ ನೋಡಿಕೊಂಡದ್ದು. ಆದರೆ ಹೀಗೆ ಸರಕಾರ ಮಾರುಕಟ್ಟೆಯ ಮೇಲೆ ಸಂಪೂರ್ಣ ಅಧಿಕಾರ ಪಡೆಯುತ್ತಿದೆಯೆಂಬುದರ ಸೂಚನೆ ಸಿಕ್ಕಾಗ ಬಂಡವಾಳಶಾಹಿಗಳು ಸರಕಾರದ ಭಾಗವೇ ಆಗಿಹೋದರು! ಮತ್ತು ಆ ಮೂಲಕ ಸರಕಾರದ ನೀತಿನಿಯಮಗಳನ್ನು ತಾವೇ ನಿಯಂತ್ರಿಸುವ ಅಧಿಕಾರ ಸಂಪಾದಿಸಿಬಿಟ್ಟರು! ನಮ್ಮಲ್ಲಿ 80ರ ದಶಕದಲ್ಲಿ, ಇಂದಿರಾ ಗಾಂಧಿ, ಒಂದರ ಹಿಂದೊಂದು ಖಾಸಗಿ ಸಂಸ್ಥೆಯನ್ನು ರಾಷ್ಟ್ರೀಕರಣಗೊಳಿಸಿ ಆದೇಶ ಹೊರಡಿಸುತ್ತಿದ್ದಾಗ ಬಜಾಜ್, ಬಿರ್ಲಾ, ಜಿಂದಾಲ್ ಮುಂತಾದವರೆಲ್ಲ ದುಡ್ಡಿನ ಬಲದಿಂದ ರಾಜ್ಯಸಭೆ ಪ್ರವೇಶಿಸಿ ಸರಕಾರಕ್ಕೆ ಮೂಗುದಾರ ತೊಡಿಸಲು ಬಯಸಿದ್ದೂ ಅದೇ ಹಿನ್ನೆಲೆಯಲ್ಲೇ. ತನ್ನ ಮೇಲೆ ಸರಕಾರವಿರಲಿ ಇನ್ಯಾವುದೇ ವ್ಯವಸ್ಥೆ ಇರಲಿ, ಪರಮಾಧಿಕಾರ ಚಲಾಯಿಸುವುದನ್ನು ಬಂಡವಾಳಶಾಹಿ ಬಯಸುವುದಿಲ್ಲ, ಸಹಿಸುವುದೂ ಇಲ್ಲ. ಪರಿಸ್ಥಿತಿ ತೀರಾ ಹದಗೆಟ್ಟಾಗ ಅದು ತನ್ನ ವಿರೋಧಿ ವ್ಯವಸ್ಥೆಯನ್ನೇ ತನ್ನ ತೆಕ್ಕೆಗೆ ಸೇರಿಸಿಕೊಂಡು ಸ್ಪರ್ಧೆಯನ್ನು ಇನ್ನಿಲ್ಲವಾಗಿಸಿಬಿಡುತ್ತದೆ. ಮಾರ್ಕ್ಸ್ ಈ ಅಪಾಯವನ್ನು ಕಾಣುವುದರಲ್ಲಿ ವಿಫಲನಾದ.
ಉತ್ಪನ್ನಗಳ ಬಾಹುಳ್ಯವಾದಾಗ ಆರ್ಥಿಕ ವ್ಯವಸ್ಥೆ ಕುಸಿಯುತ್ತದೆ ಎಂಬ ಮಾರ್ಕ್ಸ್ ಸಿದ್ಧಾಂತವನ್ನು ಚೀನಾದ ಕಮ್ಯುನಿಸ್ಟ್ ಸರಕಾರ ತಲೆಕೆಳಗುಮಾಡಿತು. ಅದು ಇಡೀ ಜಗತ್ತೇ ತನ್ನ ಮಾರುಕಟ್ಟೆ ಎಂಬ ಹೊಸ ಪರಿಕಲ್ಪನೆಯನ್ನು ಆತುಕೊಂಡು ಜಗತ್ತಿನ ಎಲ್ಲ ದೇಶಗಳಿಗೆ ಸರಕುಗಳನ್ನು ರಫ್ತುಮಾಡುವ ಜವಾಬ್ದಾರಿಯನ್ನು ಹೊತ್ತುಕೊಂಡಿತು. ಇದರಿಂದಾಗಿ ಚೀನಾದ ಕಂಪೆನಿಗಳು ಜಗತ್ತಿನ ಎಲ್ಲಾ ಸಂಸ್ಥೆಗಳಿಗಿಂತಲೂ ಕಡಿಮೆ ದರಕ್ಕೆ ಸರಕು ಉತ್ಪಾದಿಸುವ ಬಲವಂತದ ಸ್ಪರ್ಧೆಗೆ ಬಿದ್ದವು. ಉತ್ಪನ್ನದ ಖರ್ಚು ತಗ್ಗಿಸುವುದು ಹೇಗೆ? ಕಚ್ಛಾ ಪದಾರ್ಥಗಳ ಬೆಲೆಯನ್ನಂತೂ ತಗ್ಗಿಸುವುದು ಸಾಧ್ಯವಿಲ್ಲ. ಆದ್ದರಿಂದ ಕಾರ್ಮಿಕರಿಗೆ ಕೊಡುವ ಸಂಬಳದಲ್ಲಿ ಕಡಿತ ಮಾಡೋಣ ಎಂದು ನಿರ್ಧರಿಸಿದವು ಕಾರ್ಖಾನೆಗಳು! ಕಳೆದ ಮೂರು ದಶಕಗಳಲ್ಲಿ ಚೀನಾ “ಚೀಪ್ ಲೇಬರ್” ಎಂಬ ಒಂದೇ ಸೂತ್ರವನ್ನಿಟ್ಟುಕೊಂಡು ಜಗತ್ತಿನ ಬಲಾಢ್ಯ ಆರ್ಥಿಕಶಕ್ತಿಯಾಗಿ ಬೆಳೆದಿದೆ. ಬಂಡವಾಳಶಾಹಿ ವ್ಯವಸ್ಥೆ ತಂದೊಡ್ಡುವ ಅಪಾಯ ಎಂದು ಯಾವುದನ್ನು ಮಾರ್ಕ್ಸ್ ಗುರುತಿಸಿದ್ದನೋ ಅದನ್ನು ಚೀನಾದಲ್ಲಿ ಕಮ್ಯುನಿಸ್ಟ್ ಸರಕಾರವೇ ಮುಂದೆನಿಂತು ಮಾಡುತ್ತಿದೆ!
ಮಾರ್ಕ್ಸ್ ನ ಸಿದ್ಧಾಂತದ ಮೂರನೆಯ ಅಂಶ ಸಮಾನತೆ. ಅಂದರೆ ಕಾರ್ಖಾನೆಯ ಮಾಲೀಕತ್ವ ಒಬ್ಬಿಬ್ಬರದಲ್ಲ; ಅಲ್ಲಿ ಕೆಲಸ ಮಾಡುವ ಎಲ್ಲರದ್ದು. ಹೀಗೆ ಮಾಲೀಕತ್ವದ ಜವಾಬ್ದಾರಿಯನ್ನು ಸಾಮೂಹಿಕವಾಗಿ ಹಂಚಿದಾಗ, ಅವರೆಲ್ಲರೂ ತಂತಮ್ಮ ಕರ್ತವ್ಯವನ್ನು ಶ್ರದ್ಧೆಯಿಂದ ನಿರ್ವಹಿಸುತ್ತಾರೆ ಎಂಬುದು ಮಾರ್ಕ್ಸ್ ವಾದವಾಗಿತ್ತು. ಆತ ಒಳ್ಳೆಯ ಅರ್ಥತಜ್ಞನಾಗಿದ್ದನೇನೋ ನಿಜ, ಆದರೆ ಮನಶಾಸ್ತ್ರಜ್ಞನಾಗಿರಲಿಲ್ಲ! ಯಾಕೆಂದರೆ ಜವಾಬ್ದಾರಿ ಹಂಚಿಹೋದಾಗ ಮನುಷ್ಯನ ಮನಸ್ಸು ಬೇರೆಯದೇ ರೀತಿಯಲ್ಲಿ ಯೋಚಿಸುತ್ತದೆ! ಅದು ಎಷ್ಟೆಂದರೂ ಕಳ್ಳಮನಸ್ಸು ನೋಡಿ! ಉದ್ಯಮದ ಹೊಣೆಯನ್ನು ಎಲ್ಲರೂ ಹೊತ್ತುಕೊಂಡಾಗ ಜನರಲ್ಲಿ ಕರ್ತವ್ಯಪ್ರಜ್ಞೆ ಇರುವುದಿಲ್ಲ; ತಮ್ಮ ಹೊಣೆಯಿಂದ ನುಣುಚಿಕೊಳ್ಳುವುದಕ್ಕೇ ಅವರು ಆಸೆ ಪಡುತ್ತಾರೆ. ಎಲ್ಲರಿಗೂ ಒಂದೇ ಬಗೆಯ ವೇತನ ಎಂದಾಗ ನಿಜವಾಗಿಯೂ ಚೆನ್ನಾಗಿ, ಕಷ್ಟಪಟ್ಟು ದುಡಿಯುತ್ತಿದ್ದವನು ಸುಮ್ಮನಾಗುತ್ತಾನೆ. ಕೆಲಸಗಾರನಿಗೂ ಸೋಮಾರಿಗೂ ಅಂತರವಿಲ್ಲದಾದಾಗ ಅವರಾದರೂ ಯಾವ ಸ್ಫೂರ್ತಿಗಾಗಿ ಕೆಲಸ ಮಾಡಬೇಕು? ಹೀಗೆ ಜನ ಆಸಕ್ತಿ ಕಳೆದುಕೊಂಡಾಗ ಅವರನ್ನು ಬಲವಂತವಾಗಿ ದುಡಿಸುವುದು ಅನಿವಾರ್ಯವಾಗುತ್ತದೆ; ಅದಕ್ಕೆ ತಕ್ಕಂತೆ ನೂರೆಂಟು ಕಾನೂನುಗಳನ್ನು ಹೇರುವುದು ಕೂಡ ಅವಶ್ಯವಾಗುತ್ತದೆ. ಮತ್ತು ಅವರನ್ನು ಆಳುವ ಸರಕಾರ ಹಿಂದೆಂದಿಗಿಂತ ಕಠಿಣವಾಗಿ ನಡೆದುಕೊಳ್ಳಬೇಕಾಗುತ್ತದೆ. ಕಮ್ಯುನಿಸಂನ ಭಜನೆ ಮಾಡುತ್ತ ಬಂದವರೆಲ್ಲ ಕೊನೆಗೆ ಸರ್ವಾಧಿಕಾರಿಗಳಾಗಿ ಯಾಕೆ ಬದಲಾದರು ಎಂಬುದಕ್ಕೆ ಉತ್ತರ ಇಲ್ಲಿದೆ.
ಮನುಷ್ಯ ಸಾಧನೆಗೈಯಲು ಮುಖ್ಯವಾಗಿ ಮೂರು ಪ್ರೇರಣೆಗಳು: ಹಣ, ಸನ್ಮಾನ ಮತ್ತು ಅಧಿಕಾರ. ತಮಾಷೆಯೆಂದರೆ ಕಮ್ಯುನಿಸಂ ಕಾರ್ಮಿಕ ವರ್ಗಕ್ಕೆ ಈ ಮೂರನ್ನೂ ನಿರಾಕರಿಸಿತು. ಎಲ್ಲರಿಗೂ ಸಮಾನ ವೇತನ ಎಂದು ಹೇಳುತ್ತ ಅದು ಉತ್ತಮ ಕೆಲಸಗಾರನಿಗೆ ಹೆಚ್ಚಿನ ವೇತನ ಕೊಟ್ಟು ಉಳಿಸಿಕೊಳ್ಳುವ ಅವಕಾಶವನ್ನು ಕೈಬಿಟ್ಟಿತು. ಮೊದಲೆಲ್ಲ ತಮ್ಮ ಮಾಲೀಕರೊಡನೆ ನೇರಾನೇರ ಮಾತುಕತೆ ನಡೆಸಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಲ್ಲವರಾಗಿದ್ದ ಕಾರ್ಮಿಕರು ಈಗ ತಮ್ಮ ಅಹವಾಲುಗಳನ್ನು ಇನ್ನೂ ಎತ್ತರದಲ್ಲಿದ್ದ ಸರಕಾರದ ಕಿವಿಗೆ ಹಾಕಲು ಪರದಾಡಬೇಕಾಯಿತು. ಮಾಕ್ರ್ಸ್ ಹೇಳುವ ಪ್ರಕಾರ, ಪ್ರತಿಯೊಂದು ವ್ಯವಸ್ಥೆಯೂ ಕುಸಿಯುವ ಹಂತಕ್ಕೆ ಬಂದಾಗ ಹೊಸತೊಂದು ಬದಲಾವಣೆಯ ಪರ್ವ ಸಾಧ್ಯವಾಗುತ್ತದೆ. ಹಾಗಾಗಿ ಬದಲಾವಣೆ ತರಬೇಕೆಂದಾಗೆಲ್ಲ ಕಾರ್ಮಿಕರು ಬಲವಂತವಾಗಿ ವ್ಯವಸ್ಥೆ ಕುಸಿಯುವಂತೆ ನೋಡಿಕೊಂಡರು! ಭಾರತದ ವಿಷಯದಲ್ಲಿ ನೋಡುವುದಾದರೆ, ಪ.ಬಂಗಾಳ ಮತ್ತು ಕೇರಳದಲ್ಲಿ ನಡೆದಷ್ಟು ಹರತಾಳಗಳು ಬೇರಾವ ರಾಜ್ಯದಲ್ಲೂ ನಡೆದಿಲ್ಲ. ಸಮಸ್ಯೆಗಳನ್ನು ಮಾತುಕತೆಗಳ ಮೂಲಕವೂ ಪರಿಹರಿಸಿಕೊಳ್ಳಬಹುದೆಂಬ ಸಾಧ್ಯತೆಯನ್ನೇ ಕಮ್ಯುನಿಸ್ಟರು ಒಪ್ಪಲಿಲ್ಲ. ಎಲ್ಲವನ್ನೂ ಕ್ರಾಂತಿಯ ಕಣ್ಣುಗಳಿಂದಲೇ ನೋಡಬಯಸಿದ ಪರಿಣಾಮವಾಗಿ ಆಡಳಿತವ್ಯವಸ್ಥೆ ಪದೇಪದೇ ಕುಸಿದುಕೂರುವುದು ಮಾಮೂಲಾಯಿತು. ಯಾವತ್ತೂ ಬಂಡವಾಳಶಾಹಿಗಳೇ ತಪ್ಪಿತಸ್ಥರು ಎಂಬ ಏಕಮುಖೀ ನ್ಯಾಯದಿಂದಾಗಿ ಕಾರ್ಮಿಕರಿಗೆ ಅಪರಾಧೀಪ್ರಜ್ಞೆ ಎಂದಿಗೂ ಕಾಡಲೇ ಇಲ್ಲ. ಪ್ರತಿ ಸಲ ಹೆಚ್ಚಿನ ಸಂಬಳಕ್ಕೆ ಒತ್ತಾಯಿಸುವುದು, ಹೆಚ್ಚಿನ ಸವಲತ್ತು ಕೇಳುವುದು ತಮ್ಮ ಮೂಲಭೂತ ಹಕ್ಕು ಎಂಬಂತೆ ಕಾರ್ಮಿಕರು ನಡೆದುಕೊಳ್ಳತೊಡಗಿದರು. ಕಂಪೆನಿಯ ಮಾಲೀಕರಿಗೆ ಅವರದ್ದೇ ಆದ ಸಮಸ್ಯೆಗಳಿರುತ್ತವೆ; ಎಲ್ಲ ವ್ಯವಹಾರಗಳೂ ಲಾಭವನ್ನೇ ತಂದುಕೊಡಬೇಕೆಂದಿಲ್ಲ; ನಷ್ಟವಾದಾಗಲೂ ಮಾಲೀಕನೇ ತಲೆ ಕೊಡಬೇಕಾಗುತ್ತದೆ ಎಂಬ ಅಂಶವನ್ನು ಕಾರ್ಮಿಕರಾಗಲೀ ಅವರ ಕಮ್ಯುನಿಸ್ಟ್ ನಾಯಕರಾಗಲೀ ಪರಿಗಣಿಸಲಿಲ್ಲ. ಒಂದು ರೀತಿಯಲ್ಲಿ ಕಮ್ಯುನಿಸಂ ಎಂಬುದು ಒಮ್ಮುಖದ ಚಳವಳಿಯಾಯಿತು.
ಉತ್ಪನ್ನವೊಂದನ್ನು ತಯಾರಿಸಲು ಎಷ್ಟು ಸಮಯ ತಗುಲಿತು ಮತ್ತು ಎಷ್ಟು ಜನ ಬೇಕಾದರು ಎಂಬ ಆಧಾರದ ಮೇಲೆ ಅದರ ಬೆಲೆಯನ್ನು ನಿಗದಿಪಡಿಸಬಹುದು ಎಂಬುದು ಮಾರ್ಕ್ಸ್ ನ ವಾದ. ಈ ಕಲ್ಪನೆಯನ್ನು ಅವನು ನೇರವಾಗಿ ಪಡೆದದ್ದು ಆಡಂ ಸ್ಮಿತ್ ಮತ್ತು ರಿಕಾರ್ಡೋ ಅವರಿಂದ. ಹತ್ತೊಂಬತ್ತನೇ ಶತಮಾನಕ್ಕೇನೋ ಅದು ಸರಿ ಇದ್ದೀತು. ಆದರೆ ಇಪ್ಪತ್ತು ಅಥವಾ ಇಪ್ಪತ್ತೊಂದನೇ ಶತಮಾನದಲ್ಲಿ ವಸ್ತುಗಳ ಬೆಲೆಯನ್ನು ನಿಗದಿಪಡಿಸುವ ಬಗೆ ಹೇಗೆ? ಇಂದು ಉತ್ಪಾದಿಸಲು ತಗುಲಿದ ಸಮಯವನ್ನು ಪರಿಗಣಿಸಿ ಉತ್ಪನ್ನಗಳ ಬೆಲೆ ನಿಗದಿ ಮಾಡುವುದಿಲ್ಲ. ಗೂಗಲ್ ಅಥವಾ ಮೈಕ್ರೋಸಾಫ್ಟ್ ಕಂಪೆನಿಗಳ ಉತ್ಪನ್ನಗಳ ದರವನ್ನು ಮಾರ್ಕ್ಸ್ ನ ವ್ಯಾಖ್ಯೆಯ ಮೂಲಕ ನಿರ್ದಿಷ್ಟಪಡಿಸಲು ಸಾಧ್ಯವಿಲ್ಲ. ವಾಟ್ಸಾಪ್ ಅನ್ನು ಫೇಸ್‍ಬುಕ್ ಸಂಸ್ಥೆ 19 ಬಿಲಿಯನ್ ಡಾಲರುಗಳ ಬೃಹತ್ ಮೊತ್ತಕ್ಕೆ ಖರೀದಿಸಿತು. ಆದರೆ ವಾಟ್ಸಾಪ್ ಇಂದಿಗೂ ಜನರಿಗೆ ಉಚಿತವಾಗಿ ಸಿಗುತ್ತಿದೆ! ಅಮೆಝಾನ್, ಫ್ಲಿಪ್‍ಕಾರ್ಟ್‍ನಂಥ ಕಂಪೆನಿಗಳು ಎಷ್ಟು ಹೆಚ್ಚು ವ್ಯವಹಾರ ಮಾಡುತ್ತವೋ ಅದರ ನೌಕರರಿಗೆ ಅಷ್ಟು ಹೆಚ್ಚಿನ ಭತ್ಯೆಗಳು ಸಿಗುತ್ತಿವೆ. ಹಾಗಾದರೆ ಸಂಪತ್ತನ್ನು ಕ್ರೋಡೀಕರಿಸುತ್ತಿರುವ ಅವನ್ನು ಬಂಡವಾಳಶಾಹಿ ಕಂಪೆನಿಗಳು ಎನ್ನಬೇಕೋ ಕಾರ್ಮಿಕ ಸ್ನೇಹಿಗಳು ಎನ್ನಬೇಕೋ? ಇಂದಿನ ಸಾವಿರಾರು ಐಟಿ, ಬಿಟಿ ಕಂಪೆನಿಗಳ ವ್ಯವಹಾರಗಳನ್ನು ಮಾರ್ಕ್ಸ್ ನ ಚಿಂತನೆಗಳಿಂದ ಅರ್ಥ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಈ ಗೊಂದಲದಿಂದಾಗಿಯೇ ಕಮ್ಯುನಿಸ್ಟರು ಯಾರನ್ನು ಕಾರ್ಮಿಕನೆಂದು ಗುರುತಿಸಬೇಕು, ಯಾರನ್ನು ಬಾರದು ಎಂಬ ಗೊಂದಲಕ್ಕೆ ಬಿದ್ದಿದ್ದಾರೆ. ಗಾರ್ಮೆಂಟ್ ಕಾರ್ಮಿಕರ ವಿಷಯದಲ್ಲಿ ಬೀದಿಗಿಳಿದು ಘೋಷಣೆ ಕೂಗುವ ಇದೇ ಕಮ್ಯುನಿಸ್ಟರು ಕಾಲ್ ಸೆಂಟರ್ ಉದ್ಯೋಗಿಗಳ ಬವಣೆಯ ಬಗ್ಗೆ ಕುರುಡಾಗುತ್ತಾರೆ.
ಹತ್ತೊಂಬತ್ತನೇ ಶತಮಾನದ ಉತ್ತರಾರ್ಧದಲ್ಲಿ ಕಂಪೆನಿಗಳಲ್ಲಿ ಆಧುನಿಕತೆ ಪ್ರವೇಶ ಪಡೆಯುತ್ತಿದ್ದುದನ್ನು ಕಾರ್ಲ್ ಮಾಕ್ರ್ಸ್ ಅರ್ಧ ಕುತೂಹಲದಿಂದ ಅರ್ಧ ಆತಂಕದಿಂದ ನೋಡಿದ್ದ. ವಿದ್ಯುಚ್ಛಕ್ತಿ ಆಗಷ್ಟೇ ಕಣ್ಣುಬಿಟ್ಟಿದ್ದ ಕಾಲ ಅದು. ನಮ್ಮ ಕಾರ್ಖಾನೆಗಳು ಒಂದೊಂದಾಗಿ ಆಧುನಿಕ ತಂತ್ರಗಳನ್ನು ಅಳವಡಿಸುತ್ತ ಹೋದರೆ ಜನರಿಗೆ ಕೆಲಸವಿಲ್ಲದಂತಾಗುತ್ತದೆ; ಅವರು ನಿರುದ್ಯೋಗಿಗಳಾಗಿ ಬೀದಿಗೆ ಬೀಳುತ್ತಾರೆ ಎಂಬ ದೊಡ್ಡ ಭಯವೊಂದು ಅವನಿಗೆ ಇದ್ದೇ ಇತ್ತು. 1950ರ ನಂತರ ಕಂಪ್ಯೂಟರ್‍ಗಳು ಎಲ್ಲೆಡೆ ಕಾಣಿಸಿಕೊಳ್ಳತೊಡಗಿದ ಮೇಲಂತೂ ಅಮೆರಿಕಾದಂತಹ ಬಂಡವಾಳಶಾಹಿ ದೇಶದಲ್ಲೂ ಕೂಡ ಕಂಪ್ಯೂಟರ್‍ಗಳಿಂದ ಸಾರ್ವತ್ರಿಕವಾಗಿ ನಿರುದ್ಯೋಗ ಭೂತ ಸೃಷ್ಟಿಯಾಗುತ್ತದೆಂಬ ಭಯ ಹೆಡೆಬಿಚ್ಚಿತ್ತು. ಆದರೆ ತಂತ್ರಜ್ಞಾನ ಅಥವಾ ಆಧುನಿಕತೆ ನಿರುದ್ಯೋಗವನ್ನು ಸೃಷ್ಟಿಸುತ್ತದೆಂಬ ಉಹಾಪೋಹಕ್ಕೆ ಆಧಾರವಿಲ್ಲ ಎಂಬುದು ಇತ್ತೀಚೆಗೆ ಗೊತ್ತಾಗಿದೆ. ಉದ್ಯೋಗ ಕಡಿತವಾಗುವ ಬದಲು ಹೆಚ್ಚಾಗಿದೆ. ತಂತ್ರಜ್ಞಾನದಿಂದಾಗಿ ಕಾರ್ಮಿಕರು ಬೀದಿಗೆ ಬೀಳುತ್ತಾರೆಂಬ ಮಾರ್ಕ್ಸ್ ನ ಭಯಕ್ಕೆ ಪರಿಹಾರವಾಗಿ ನಾವೊಂದು ಸಣ್ಣ ಉದಾಹರಣೆ ನೋಡಬಹುದು. ಬೆಂಗಳೂರಲ್ಲಿ ಇತ್ತೀಚೆಗೆ ಜಿಪಿಎಸ್ ತಂತ್ರಜ್ಞಾನ ಅಳವಡಿಸಿಕೊಂಡ ಆಟೋರಿಕ್ಷಗಳು ಬಳಕೆಗೆ ಬಂದಿವೆ. ಜನ ತಮ್ಮ ಮೊಬೈಲ್ ಫೋನ್‍ಗಳ ಮೂಲಕ ಆಟೋಗಳನ್ನು ಬುಕ್ ಮಾಡಬಹುದು. ಚಾಲಕರೂ ಜಿಪಿಎಸ್ ಬಳಸಿ ಕ್ಲುಪ್ತವಾಗಿ ಗಮ್ಯ ತಲುಪಬಹುದು. ಚಾಲಕ, ಪ್ರಯಾಣಿಕ ಮತ್ತು ತಂತ್ರಜ್ಞಾನ ಒದಗಿಸಿ ಚಾಲಕನನ್ನು ಕೆಲಸಕ್ಕೆ ನೇಮಿಸಿಕೊಂಡ ಕಂಪೆನಿ – ಮೂವರಿಗೂ ಇದೊಂದು ಲಾಭದಾಯಕ ವ್ಯವಹಾರ.
ತನ್ನ ಕಾಲದ ಉದ್ದಾಮ ಅರ್ಥಶಾಸ್ತ್ರಜ್ಞರನ್ನು ಓದಿ ಅರಗಿಸಿಕೊಂಡು ಸ್ವತಃ ತಾನೂ ಒಬ್ಬ ನಿಷ್ಣಾತ ಅರ್ಥತಜ್ಞನಾಗಿದ್ದ ಕಾರ್ಲ್ ಮಾರ್ಕ್ಸ್ ನ ತಪ್ಪು ಗ್ರಹಿಕೆಗಳನ್ನು ಹೀಗೆ ಕ್ರೋಡೀಕರಿಸಬಹುದು:
(1) ದುಡ್ಡಿನ ಏರುಪೇರಿಲ್ಲದ ಸಮಾಜ; ಸರ್ವರೂ ಸಮಾನರಾದ ಸಮಾಜ ಮಾರ್ಕ್ಸ್ ನ ಕನಸು. ಆದರೆ ಇದೊಂದು ಕಲ್ಪಿತ ಸ್ವರ್ಗವೇ ವಿನಾ ನಿಜಜೀವನದಲ್ಲಿ ಸಾಧ್ಯವಿಲ್ಲ. ಸಮಾಜದಲ್ಲಿ ಎಲ್ಲರೂ ಒಂದೇ ಅಂತಸ್ತಿನವರು; ಎಲ್ಲರ ಆರ್ಥಿಕಮಟ್ಟವೂ ಒಂದೇ ಎಂದಾದಾಗ ಸಮಾಜವ್ಯವಸ್ಥೆ ಕುಸಿಯುತ್ತದೆ. ಅಂಥ ಸಮಾಜದಲ್ಲಿ ಯಾವ ವ್ಯವಹಾರ (ಬ್ಯುಸಿನೆಸ್) ಗಳೂ ಸಾಧ್ಯವಿಲ್ಲ.
(2) ಸಮಾಜದಲ್ಲಿ ಬಂಡವಾಳಶಾಹಿ ಮತ್ತು ಕಾರ್ಮಿಕರನ್ನು ಹೊರತುಪಡಿಸಿ ಹತ್ತುಹಲವು ಸ್ತರದ ಜನರಿದ್ದಾರೆ. ಆದರೆ ಮಾರ್ಕ್ಸ್ ವಾದ ಅವರೆಲ್ಲರನ್ನೂ ಕಡೆಗಣಿಸಿ ತನ್ನ ದೃಷ್ಟಿಯನ್ನು ಎರಡೇ ವರ್ಗಗಳಿಗೆ ಸೀಮಿತಗೊಳಿಸಿಕೊಂಡಿತು.
(3) ಬಂಡವಾಳಶಾಹಿ ಕೆಟ್ಟದು; ಕಾರ್ಮಿಕರು ಪತಿತರು ಎಂಬ ಏಕಮುಖೀ ನಿರ್ಧಾರವನ್ನಿಟ್ಟುಕೊಂಡೇ ಹೊರಡುವುದರಿಂದ ಕಮ್ಯುನಿಸಂ ಕೊಡುವ ಅಂತಿಮ ನಿರ್ಣಯಗಳು ಪೂರ್ವಗ್ರಹದಿಂದ ಪೀಡಿತವಾಗಿವೆ. ಕಾರ್ಖಾನೆಗಳ ಲಾಭಾಂಶ ಎಲ್ಲರಿಗೂ ಸಮಾನವಾಗಿ ಹಂಚಿಕೆಯಾಗಬೇಕೆನ್ನುವ ಕಮ್ಯುನಿಸಂ, ನಷ್ಟದ ಸಂದರ್ಭದಲ್ಲಿ ಏನು ಮಾಡಬೇಕೆಂಬ ಬಗ್ಗೆ ಮೌನವಾಗುತ್ತದೆ.
(4) ಬಂಡವಾಳಶಾಹಿಗಳು ಸಂಗ್ರಹಿಸಿದ ಲಾಭವನ್ನು ಮತ್ತೊಂದು ಮಗದೊಂದು ವ್ಯವಹಾರಕ್ಕೆ ತೊಡಗಿಸಬಹುದು. ಆದರೆ ಪ್ರತಿ ಲಾಭವನ್ನೂ ಸಮಾನವಾಗಿ ಹಂಚುತ್ತಾಹೋದರೆ ಹೊಸ ಬ್ಯುಸಿನೆಸ್‍ಗಳಿಗೆ ಬೇಕಾದ ಬಂಡವಾಳವನ್ನು ತರುವುದೆಲ್ಲಿಂದ? ಮಾರ್ಕ್ಸ್ ನ ವಾದದಲ್ಲಿ ಇದಕ್ಕೆ ಉತ್ತರವಿಲ್ಲ.
(5) ಬಂಡವಾಳಶಾಹಿಗಳು ಬ್ಯಾಂಕ್, ವೃತ್ತಪತ್ರಿಕೆಯಂಥ ಮಾಧ್ಯಮ ಮತ್ತು ಸಾರಿಗೆ ಇತ್ಯಾದಿಯನ್ನು ನಿಯಂತ್ರಿಸಿ ಜನರ ಅಭಿಪ್ರಾಯಗಳನ್ನು ರೂಪಿಸುವ ಅಧಿಕಾರವನ್ನು ತಮ್ಮಲ್ಲಿ ಉಳಿಸಿಕೊಳ್ಳುತ್ತಾರೆ. ಹಾಗಾಗಿ ಆ ಎಲ್ಲಾ ವ್ಯವಸ್ಥೆಗಳನ್ನೂ ಸರಕಾರ ತಾನೇ ನಿರ್ವಹಿಸಬೇಕು ಎಂಬುದು ಮಾರ್ಕ್ಸ್ ನ ವಾದವಾಗಿತ್ತು. ಹೀಗೆ ಹೇಳುವಾಗ ಆತನಿಗೆ, ಸರಕಾರವೇ ಇನ್ನೊಂದು ಭಯಕಾರಕ ವ್ಯವಸ್ಥೆಯಾಗುವ ಅಂದಾಜು ಇರಲಿಲ್ಲವೇ? ಬಂಡವಾಳಶಾಹಿಗಳನ್ನು ಹದ್ದುಬಸ್ತಿನಲ್ಲಿಡುವ ನೆಪದಲ್ಲಿ ಚೀನಾ, ಕೊರಿಯಾ, ರಷ್ಯಗಳಲ್ಲಿ ಕಮ್ಯುನಿಸ್ಟ್ ಸರಕಾರಗಳು ತಾವೇ ನಿರಂಕುಶಪ್ರಭುತ್ವಗಳಾಗಿ ಮೆರೆದವು. ಜನರಿಗೆ, ಊದೋದನ್ನು ಕೊಟ್ಟು ಬಾರ್ಸೋದನ್ನು ತೆಗೆದುಕೊಂಡ ಹಾಗೆ ಆಯಿತು.
ಒಟ್ಟಿನಲ್ಲಿ ಮಾಕ್ರ್ಸ್ ಯಾವ ಭವ್ಯ ಸ್ವರ್ಗದ ಕನಸು ಕಂಡಿದ್ದನೋ ಅದಕ್ಕೆ ತದ್ವಿರುದ್ಧವಾದ ವ್ಯವಸ್ಥೆಯೊಂದು ಕಮ್ಯುನಿಸಂನ ಮುಖವಾಡ ತೊಟ್ಟು ಬಂತು. ಬೃಹತ್ ದೇಶಗಳನ್ನು ಆಳಿತು. ಬಂಡವಾಳಶಾಹಿಗಳೂ ನಾಚುವಂಥ ಬಂಡವಾಳಶಾಹಿ ವ್ಯವಸ್ಥೆಯನ್ನು ಚೀನಾ ಮೊದಲಾದ ದೇಶಗಳು ಅಳವಡಿಸಿಕೊಂಡವು. ಬಂಡವಾಳಶಾಹಿ ಮತ್ತು ಕಾರ್ಮಿಕರೆಂಬ ವರ್ಗವ್ಯವಸ್ಥೆಯೇ ಇಲ್ಲದಿದ್ದ ಭಾರತದಲ್ಲಿ ಕಮ್ಯುನಿಸ್ಟರು ಮಾಕ್ರ್ಸಿಸಂ ಅನ್ನು ಬಲವಂತವಾಗಿ ತುರುಕಿಸಲು ಪ್ರಯತ್ನಪಟ್ಟು ವಿಫಲರಾದರು. ಹಾಗಾಗಿ ನಮ್ಮ ದೇಶದಲ್ಲಿ ಅದು ಕಾಲೇಜು-ಯೂನಿವರ್ಸಿಟಿಗಳ ಬಿಸಿರಕ್ತದ ಮತ್ತು ಲೋಕವ್ಯವಹಾರ ಜ್ಞಾನವಿಲ್ಲದ ಯುವಕರ ತಲೆ ಕೆಡಿಸುವ ಸಿದ್ಧಾಂತವಾಗಿ ಉಳಿಯಿತೇ ವಿನಾ ಜನರನ್ನು ಸೆಳೆಯುವ ದೊಡ್ಡ ಪಕ್ಷವಾಗಿ ಬೆಳೆಯಲಿಲ್ಲ. ಸಾವಿರ ವರ್ಷಗಳ ಹಿಂದೆ ಬರೆಯಲ್ಪಟ್ಟ ಪವಿತ್ರಗ್ರಂಥಗಳಲ್ಲಿ ಒಂದಕ್ಷರವನ್ನೂ ಬದಲಿಸದೆ, ನಿಂತ ನೀರಿನಂತೆ ಕೊಳೆಯತೊಡಗಿರುವ ರಿಲಿಜನ್ನುಗಳಂತೆ ಕಮ್ಯುನಿಸಂ ಕೂಡ ಪಳೆಯುಳಿಕೆಯಾಗಿದೆ. ಒಂದರ್ಥದಲ್ಲಿ ಅದು ಕೂಡ ಒಂದು ರಿಲಿಜನ್ನೇ. ಕಾರ್ಲ್ ಮಾರ್ಕ್ಸ್ ನೇ ಅದರ ಪ್ರವಾದಿ; ಆತನ ಕಮ್ಯುನಿಸ್ಟ್ ಮ್ಯಾನಿಫೆಸ್ಟೋ ಕೃತಿಯೇ ಪವಿತ್ರಗ್ರಂಥ! ಅದರಲ್ಲಿ ಆತ ಹೇಳಿದ್ದೆಲ್ಲವೂ ಕಮ್ಯುನಿಸ್ಟರಿಗೆ ವೇದವಾಕ್ಯ! ಜಗತ್ತು ಆಧುನಿಕತೆಯ ದಾರಿಯಲ್ಲಿ ದಾಪುಗಾಲಿಡುತ್ತ ದೌಡಾಯಿಸಿದರೂ ಕಮ್ಯುನಿಸ್ಟರು ಮಾತ್ರ ಇನ್ನೂ ನೂರೈವತ್ತು ವರ್ಷಗಳ ಹಿಂದಿನ ಸಿದ್ಧಾಂತಗಳನ್ನು ಹಿಡಿದು ಕೂತಿದ್ದಾರೆ. ಮಾಕ್ರ್ಸ್ ಗತಕಾಲಕ್ಕೆ ಸಂದುಹೋಗಿದ್ದಾನೆಂಬ ಸತ್ಯವನ್ನು ಅರಗಿಸಿಕೊಳ್ಳಲು ಅವರು ಸುತಾರಾಂ ಸಿದ್ಧರಿಲ್ಲ. ಒಂದು ಸೀಮಿತ ದೃಷ್ಟಿಕೋನವನ್ನಿಟ್ಟುಕೊಂಡು ಹೊರಡುವ ಯಾವುದೇ ಸಿದ್ಧಾಂತ ಮತ್ತು ಚಳವಳಿ ಅದೆಷ್ಟೇ ವರ್ಣರಂಜಿತವಾಗಿದ್ದರೂ ಅದೆಷ್ಟೇ ಆಸೆ ಹುಟ್ಟಿಸಿ ಭ್ರಮೆಯಲ್ಲಿ ತೇಲಾಡಿಸಿದರೂ ದೀರ್ಘಕಾಲ ಬಾಳುವುದಿಲ್ಲ ಎಂಬುದಕ್ಕೆ ಕಮ್ಯುನಿಸಂ ಒಳ್ಳೆಯ ಉದಾಹರಣೆ ಆಗಬಲ್ಲುದು.
Does Rohit believe he’s much smarter than Carl Marx? Or is he trying to be a smart ass? This pedestrian criticism of Marxism is not even worth a laugh! Marxism has engaged some of the brightest intellects of 20th century. It surely doesn’t need a vernacular smart ass to critique it!
“ಸಮಸ್ಯೆಯ ಕೇಂದ್ರವನ್ನು ತನಗೆ ಬೇಕಾದಂತೆ ದುಡಿಸಿಕೊಂಡ ಮಾಕ್ರ್ಸ್, ತನ್ನ ಪೀಳಿಗೆಯ ದಾರಿ ತಪ್ಪಿಸಿದ ಎನ್ನಬಹುದು.”
On the contrary it is Rohit who’s misleading the readers with sweeping statements such as the above. Even the severest intellectual critic of Marx will not make frivolous allegations of this kind against Marx!
it is real fact