ಪ್ರೇತದ ಆತ್ಮ ಚರಿತೆ! (ಭಾಗ ೪)
– ಶ್ರೀಕಾಂತ್ ಶೆಟ್ಟಿ
ಪ್ರೇತದ ಆತ್ಮ ಚರಿತೆ! (ಭಾಗ ೧)
ಪ್ರೇತದ ಆತ್ಮ ಚರಿತೆ! (ಭಾಗ ೨)
ಪ್ರೇತದ ಆತ್ಮ ಚರಿತೆ! (ಭಾಗ 3)
ಆಗಷ್ಟ್ ೩೦ ೧೭೭೩ ಇಡಿ ಪುಣೆ ಗಣೇಶ ಉತ್ಸವದ ಸಂಭ್ರಮದಲ್ಲಿ ಮುಳುಗೇಳುತ್ತಿದೆ. ಕೇಸರಿ ಗುಲಾಬಿ ರಂಗಿನೋಕುಳಿಗೆ ನಗರ ನವಶೃಂಗಾರಗೊಂಡಿದೆ. ಶನಿವಾರವಾಡೆಯಲ್ಲೂ ಉತ್ಸವ ಕಳೆಗಟ್ಟಿತ್ತು. ಹಾಡು, ಕುಣಿತ, ಕೀರ್ತನೆ,ಆರತಿ, ಸಂತರ್ಪಣೆ ಭರ್ಜರಿಯಾಗಿ ನಡೆದಿತ್ತು. ಪೇಶ್ವಾಗಳ ಆರಾಧ್ಯಮೂರ್ತಿ ಚಿಂತಾಮಣಿ ಗಣಪತಿಯ ಪೂಜೆ ಆಗಷ್ಟೆ ಮುಗಿದು ಎಲ್ಲರೂ ವರ್ಷಕ್ಕಾಗುವಷ್ಟು ಸಂಭ್ರಮವನ್ನು ಮನದಲ್ಲಿ ತುಂಬಿಕೊಂಡು ಮರಳಿದರು. ವಾಡೆಯಲ್ಲಿ ಕಾವಲು ಭಟರು ಮತ್ತು ಪರಿಚಾರಕ ವರ್ಗವನ್ನು ಬಿಟ್ಟು ಉಳಿದವರೆಲ್ಲರೂ ತಮ್ಮ ತಮ್ಮ ಸ್ವಸ್ಥಾನ ಸೇರಿಕೊಂಡಿದ್ದರು. ಮಹಾ ದುರಂತವೊಂದು ನಡೆಯುವ ಮೊದಲು ಆವರಿಸುವ ಅಸಾದ್ಯ ನೀರವತೆ ವಾಡೆಯನ್ನು ಆವರಿಸಿಕೊಂಡಿತ್ತು. ರಂಗ ಮಹಲ್ ಕಡೆಯಿಂದ ಐದಾರು ದೀವಟಿಕೆಗಳು ಒಳಪ್ರವೇಶಿಸಿದವು. ಖಿಡ್ಕಿ ದರವಾಜಾ ಬಳಿ ಎರಡು ಬಟ್ಟೆ ಸುತ್ತಿದ ಮುಖಗಳು ಗೋಚರಿಸಿದವು. ಕ್ಷಣಮಾತ್ರದಲ್ಲೇ ಶನಿವಾರವಾಡೆಯ ಹಜಾರಗಳಲ್ಲಿ ಹತ್ತಾರು ಗುಂಪುಗಳ ಹೆಜ್ಜೆಯ ಸಪ್ಪಳ ಮೊಳಗಿತು. ವಾಡೆಯ ಮುಖ್ಯದ್ವಾರದ ಬಳಿ ಐವತ್ತು ಜನರಿದ್ದ ಸೇನಾ ತುಕುಡಿಯೊಂದು ಬಂದು ನಿಂತಿತು. ಗುಂಪಿನ ನಾಯಕ ಸುಮೇರು ಸಿಂಗ್ ಕಾವಲುಗಾರನ ಬಳಿ ಬಂದು ಕೂಡಲೆ ಪೇಶ್ವಾ ಅವರನ್ನು ಕಾಣಬೇಕು ತುರ್ತು ಕೆಲಸವಿದೆ ಎಂದ. ಈಗ ಪೇಶ್ವಾ ಅವರು ನಿದ್ದೆಯಲ್ಲಿದ್ದಾರೆ. ನಾಳೆ ಬಂದು ಭೇಟಿಯಾಗಿ ಎಂದ ಮುಖ್ಯದ್ವಾರದ ರಕ್ಷಣೆಯಲ್ಲಿದ್ದ ಮಹಾದಜಿ ಗೋರೆ… ಮಾತು ಪೂರ್ಣಗೊಳ್ಳುವ ಮೊದಲೇ ಸುಮೇರು ಸಿಂಗ್ ಓರೆಯಿಂದ ಕತ್ತಿ ಹೊರಬಂದು ಗೋರೆಯ ಹೊಟ್ಟೆ ಸೀಳಿ ಹಾಕಿತು. ತುಕುಡಿಯನ್ನು ಒಳನುಗ್ಗುವಂತೆ ಸುಮೇರ್ ಆದೇಶಿಸಿದ ಕೇವಲ ಹತ್ತು ನಿಮಿಷದಲ್ಲೇ ವಾಡೆ ಸುಮೇರು ಸಿಂಗ್ ಕೈವಶವಾಯಿತು. ಆ ವಾಡೆಯ ಕೆಳ ಅಂತಸ್ತಿನಲ್ಲೇ ರಘುನಾಥ ರಾವ್, ಆನಂದಿ ಬಾಯಿ ವಾಸವಾಗಿದ್ದರು. ಸುಮೇರು ಸಿಂಗ್ ಹಿಂಬಾಲಕರು ವಾಡೆಯ ಕಾವಲಿಗಿದ್ದವರನ್ನು ತರಿದು ಹಾಕಿದರು. ಘನಘೊರ ರಕ್ತಪಾತ ನಡೆಯಿತು. ಕೆಲವೇ ಗಂಟೆಗಳ ಮೊದಲು ಚೌತಿಯ ಸಡಗರದಲ್ಲಿ ಗಿಜಿಗುಟ್ಟುತ್ತಿದ್ದ ಶನಿವಾರವಾಡೆ ಈಗ ಅಕ್ಷರಶಃ ಸ್ಮಶಾನವಾಗಿ ಮಾರ್ಪಟ್ಟಿತ್ತು. ವಾಡೆಯ ಮೊದಲ ಅಂತಸ್ತಿನ ತೇಗದ ಮುಚ್ಚಿಗೆಗಳಿಂದ ರಕ್ತ ಒಸರ ತೊಡಗಿತು. ಸುಮೇರು ಸಿಂಗ್ ನಾರಾಯಣ ಪೇಶ್ವಾ ಮಲಗಿದ್ದ ಕೋಣೆಗೆ ನುಗ್ಗಿದ. ವಾಡೆಯಲ್ಲಿ ಆಹಾಕಾರ ಚೀತ್ಕಾರಗಳು ಎದ್ದಿರುವುದನ್ನು ಕಂಡು ನಾರಾಯಣನಿಗೆ ಪರಿಸ್ಥಿತಿಯ ಅರಿವಾಯಿತು.
ಅಪ್ರಾಪ್ತ ಬಾಲಕ ನಾರಾಯಣನನ್ನು ಕಾಯಬೇಕಿದ್ದ ಚಿಕ್ಕಪ್ಪನೇ ಹೊಸಕಿ ಹಾಕಲು ಮುಂದಾಗಿದ್ದಾನೆ. ಬಾಗಿಲು ಬಡಬಡಿಸಿತು. ತೆರೆದರೆ ಸಾವು ಹೊರಗೆ ನಿಂತಿದೆ. ಗಂಟಲಿನ ಪಸೆ ಆರುತ್ತಿದೆ. ದೇಹ ಪತರಗುಟ್ಟುತ್ತಿದೆ. ಭಯದಿಂದ ಕಂಪಿಸುತ್ತಿದ್ದ ನಾರಾಯಣನಿಗೆ ಮುಂದೇನು ಎಂದು ತೋಚಲಿಲ್ಲ. ಅಷ್ಟರಲ್ಲಿ ಭಾರಿ ಸದ್ದಿನೊಂದಿಗೆ ಬಾಗಿಲು ಮುರಿದು ಬಿತ್ತು. ನಾರಾಯಣ ಕೋಣೆಯ ಕಳ್ಳ ಕಿಂಡಿಯಿಂದ ಜಿಗಿದು ಹಜಾರದ ಮೂಲಕ ದರ್ಬಾರ್ ಸಭಾಂಗಣದತ್ತ ಓಡಿದ. ಸುಮೇರು ಸಿಂಗ್ ಮತ್ತು ಸಂಗಡಿಗರು ಈ ಬಾಲಕನ ಬೆನ್ನು ಬಿದ್ದರು. ದರ್ಬಾರ್ ಸಭಾಂಗಣದ ಹೊರ ಆವರಣಕ್ಕೆ ಬಂದವನಿಗೆ ಅಲ್ಲಿಂದ ಇಡೀ ಶನಿವಾರವಾಡೆಯೇ ತನ್ನ ಪಾಲಿಗೆ ಒಂದು ಸಾವಿನ ಮನೆಯಾಗಿ ಮಾರ್ಪಟ್ಟಿರುವುದು ಅರಿವಾಯಿತು. ಎಲ್ಲಾ ಆಯಕಟ್ಟಿನ ಪ್ರದೇಶವನ್ನೂ ಶತ್ರುಗಳು ಆವರಿಸಿಕೊಂಡಿದ್ದರು. ಉಳಿದಿರುವುದು ಒಂದೇ ದಾರಿ ಚಿಕ್ಕಪ್ಪನ ಕಾಲಿಗೆ ಬಿದ್ದು ಪ್ರಾಣ ಉಳಿಸಿಕೊಳ್ಳುವುದು. ನಾರಾಯಣ ತಡ ಮಾಡಲಿಲ್ಲ. ಕೂಡಲೆ ಮೆಟ್ಟಿಲುಗಳತ್ತ ಜಿಗಿದು ಕೆಳ ಅಂತಸ್ತಿನತ್ತ ಓಡಿದ. ಅಷ್ಟರಲ್ಲೇ ಮಿಂಚಿನ ವೇಗದಲ್ಲಿ ತಲವಾರಿನ ಪೆಟ್ಟೊಂದು ನಾರಾಯಣನ ಬಲ ತೊಡೆಗೆ ಬಿತ್ತು. ನಾರಾಯಣ ಕುಸಿದು ಬಿದ್ದ… ಕಾಕಾ ಮಲಾ ವಾಜ್ವಾ…..ಕಾಕಾ… ಕಾಕಾ…ನಾರಾಯಣ ಗಂಟಲು ಹರಿದು ಚೀರಿದ.. ಶನಿವಾರವಾಡೆಯ ಮೂಲೆ ಮೂಲೆಯಿಂದಲೂ ನಾರಾಯಣನ ವಿಕಾರ ಕೂಗು ಪ್ರತಿಧ್ವನಿಸಿತು. ಕತ್ತರಿಸಲ್ಪಟ್ಟ ಕಾಲನ್ನೇ ಎಳೆಯುತ್ತಾ ನಾರಾಯಣ ಮೆಟ್ಟಿಲು ಇಳಿಯತೊಡಗಿದ.. ಮತ್ತೊಂದು ಕತ್ತಿ ಏಟು ನಾರಾಯಣನ ಕೈಯನ್ನು ಬೇರ್ಪಡಿಸಿತು. ಮೃತ್ಯು ಬಾಯ್ದೆರೆದು ನಿಂತಿದೆ. ನಾರಾಯಣ ಒಂದೇ ಸಮನೆ ಬೊಬ್ಬೆ ಹೊಡೆಯುತ್ತಿದ್ದಾನೆ, ಅಂಗಲಾಚುತ್ತಿದ್ದಾನೆ. ರಘುನಾಥನಿಗೆ ಏನೋ ಎಡವಟ್ಟಾದಂತೆ ಕಂಡುಬಂತು. ಕೂಡಲೆ ಧಾವಿಸಿ ಬಂದ. ರಕ್ತದ ಮಡುವಿನಲ್ಲಿ ನಾರಾಯಣ ವಿಲ ವಿಲ ಒದ್ದಾಡುತ್ತಿದ್ದಾನೆ. ಸುಮೇರು ಸಿಂಗ್ ಮತ್ತು ತಂಡ ನಾರಾಯಣನನ್ನು ನಾಲ್ಕೂ ಸುತ್ತಲಿನಿಂದಲೂ ಕೋಟೆಗಟ್ಟಿದೆ. ರಘುನಾಥರಾವ್ ಹತ್ತಿರ ಬರುತ್ತಿದ್ದಂತೆ ನಾರಾಯಣ ಇದ್ದ ಒಂದು ಕೈಯಿಂದ ಆತನ ಕಾಲನ್ನು ಗಟ್ಟಿಯಾಗಿ ಹಿಡಿದ ಕಾಕಾ…ಕಾಕಾ…. ನನ್ನನ್ನೇನೂ ಮಾಡಬೇಡಿ ಈ ಪೇಶ್ವ ಹುದ್ದೆ ನೀವೇ ಇಟ್ಟುಕೊಳ್ಳಿ ನನಗೇನೂ ಬೇಡ ನನ್ನನ್ನು ಬಿಟ್ಟುಬಿಡಿ… ಮಾತು ಪೂರ್ಣಗೊಳ್ಳುವ ಮೊದಲೇ ನಾರಾಯಣನ ರುಂಡವನ್ನು ಸುಮೇರು ಸಿಂಗ್ ಹಾರಿಸಿ ಬಿಟ್ಟ.. ಶನಿವಾರವಾಡೆಯ ವಿನಾಶಕ್ಕೆ ನಾರಾಯಣ ರಾವ್ ಪೇಶ್ವೆಯ ಸಾವು ರಕ್ತರಂಜಿತ ಮುನ್ನುಡಿ ಬರೆಯಿತು. ಸುಮೇರು ಸಿಂಗ್ ತನ್ನ ಹುರಿ ಮೀಸೆಗೆ ಚಿಮ್ಮಿದ ಪೇಶ್ವಾ ನಾರಾಯಣ ರಾವ್ ರಕ್ತವನ್ನು ಒರೆಸಿ ಬಂದಷ್ಟೇ ವೇಗದಲ್ಲಿ ಕತ್ತಲೆಯಲ್ಲಿ ಕರಗಿ ಹೋದ. ಘಟನೆಗೆ ಮೂಕಪ್ರೇಕ್ಷಕನಾಗಿದ್ದ ರಘುನಾಥರಾವ್ ಮುಂದೆ ಛಿದ್ರಛಿದ್ರವಾದ ನಾರಾಯಣನ ಹೆಣ ಮತ್ತು ರಕ್ತದಲ್ಲಿ ತೊಯ್ದು ಹೋದ ಪೇಶ್ವಾಪಗಡಿ ಬಿದ್ದಿತ್ತು.
ಸುದ್ದಿ ಕಾಡ್ಗಿಚ್ಚಿನಂತೆ ಚುತುಸ್ಸೀಮೆಗಳಿಗೂ ಹಬ್ಬಿತು. ಪಶ್ಚಾತಾಪದ ಬೆಂಕಿಯಲ್ಲಿ ರಘುನಾಥ ಬೆಂದು ಹೋದ . ಸುಮೇರು ಸಿಂಗ್ ಇಂಥ ನೀಚ ಕೆಲಸ ಯಾಕೆ ಮಾಡಿದ ಎನ್ನುವುದೇ ಆತನಿಗೆ ಹೊಳೆಯಲಿಲ್ಲ. ನನ್ನ ಆದೇಶವಿದ್ದಿದ್ದು ಕೇವಲ ನಾರಾಯಣನನ್ನು ಬಂಧಿಸಿ ಗ್ರಹಬಂಧನದಲ್ಲಿಡಲಷ್ಟೇ.. ಆದರೆ ಆ ಪಾಪಿ ನಾರಾಯಣನನ್ನು ಅಷ್ಟೊಂದು ಭೀಕರವಾಗಿ ಕೊಲೆ ಮಾಡಿದ್ದಾದರೂ ಯಾಕೆ ? ಚಿಂತಾ ಮಗ್ನನಾಗಿದ್ದ ರಘುನಾಥರಾವ್ ಕೂಡಲೇ ಸುಮೇರು ಸಿಂಗ್ ನನ್ನು ಬರಹೇಳಿದ. ನನ್ನ ಆದೇಶವನ್ನು ಉಲ್ಲಂಘಿಸಿ ಆ ಬಾಲಕನನ್ನು ಕೊಲ್ಲುವ ಅಗತ್ಯವಾದರೂ ನಿನಗೆ ಏನಿತ್ತು ? ರಘುನಾಥನ ದನಿಯಲ್ಲಿ ಭಯಮಿಶ್ರಿತ ಆಕ್ರೋಶವಿತ್ತು. ನಾನು ನಿಮ್ಮ ಆದೇಶವನ್ನು ಎಲ್ಲಿ ಉಲ್ಲಂಘಿಸಿದ್ದೇನೆ ರಾವ್ ಸಾಬ್ ? ಈ ಪತ್ರದಲ್ಲಿ ಏನಿದೆಯೋ ಅದನ್ನೇ ಮಾಡಿದ್ದೇನೆ. ನಿಮ್ಮ ಆದೇಶವೇನಿತ್ತು ನೀವೇ ನೋಡಿ ಎಂದು ಆದೇಶದ ಓಲೆಯನ್ನು ಮುಂದೆ ಮಾಡಿದ. ಓಲೆಯನ್ನು ಕಿತ್ತುಕೊಂಡು ಓದಲು ಮುಂದಾದ ರಘುನಾಥನಿಗೆ ನಿಂತ ನೆಲವೇ ಕುಸಿದ ಅನುಭವವಾಯಿತು.
“ನಾರಾಯಣ ರಾವ್ ಲಾ ಧರಾ” ಎಂದು ಬರೆದಿದ್ದ ಆದೇಶ “ನಾರಾಯಣ ರಾವ್ ಲಾ ಮಾರಾ” ಎಂದಾಗಿದೆ. ರಘುನಾಥನಿಗೆ ತನ್ನ ಕಣ್ಣನ್ನೇ ನಂಬಲಾಗಲಿಲ್ಲ. ಮತ್ತೊಮ್ಮೆ ಕಣ್ಣರಳಿಸಿ ನೋಡಿದ. ಕೆಳಗೆ ರಘುನಾಥ ರಾವ್ ಒತ್ತಿದ ಮುದ್ರೆಯೂ ಇದೆ. ಇದೆಂಥಾ ವಿಚಿತ್ರ ಹೀಗಾಗಲು ಹೇಗೆ ಸಾಧ್ಯ ? ಆದೇಶದ ಒಂದು ಅಕ್ಷರ ಬದಲಾಗಿದ್ದಾದರೂ ಹೇಗೆ.? ಯೋಚಿಸುತ್ತಿರಬೇಕಾದರೆ ಹಿಂದಿನಿಂದ ಒಂದು ದನಿ ತೇಲಿ ಬಂತು. ಆ ಅಕ್ಷರವನ್ನು ತಿದ್ದಿದವಳು ನಾನೇ.. ಹಿಂದಿನಿಂದ ಹೆಣ್ಣಿನ ದನಿ. ರಘುನಾಥ ರಾವ್ ಹಿಂದೆ ಕವಳೆ ತುಂಬಿಕೊಂಡ ಬಾಯಿಯಿಂದ ವಿಕೃತ ನಗು ಸೂಸುತ್ತಾ ಆನಂದಿ ಬಾಯಿ ನಿಂತಿದ್ದಳು.
ನಾರಾಯಣನನ್ನು ಬಂಧಿಸಿ ಇಟ್ಟು ಆಡಳಿತ ಮಾಡುತ್ತೇನೆ ಅನ್ನುತ್ತಿಯಲ್ಲಾ… ನಿನ್ನ ಪರವಾಗಿ ಈ ವಾಡೆಯಲ್ಲಿ ಎಷ್ಟು ಜನರಿದ್ದಾರೆ ? ನಿನಗೆ ಪೂರಕವಾಗಿ ಒಬ್ಬನೇ ಒಬ್ಬ ಸಾಮಂತನೂ ಇಲ್ಲ. ಇರೋರು ಎಲ್ಲಾ ಆ ನಾನಾ ಫಡ್ನವೀಸ್ ಹೇಳಿದಂತೆ ಕೇಳುವ ಬಾಲಬಡುಕರೇ. ನಾರಾಯಣನನ್ನು ಮುಗಿಸದೇ ನೀನು ಪೇಶ್ವಾ ಪದವಿ ಅಲಂಕರಿಸಿದರೆ ಇಂದಲ್ಲ ನಾಳೆ ಸಾಮಂತರೆಲ್ಲಾ ಅವನ ಬೆನ್ನಿಗೆ ನಿಂತು ಮತ್ತೆ ಅವನನ್ನು ಅಧಿಕಾರಕ್ಕೆ ತಂದೇ ತರುತ್ತಾರೆ. ದಾರಿಯಲ್ಲಿದ್ದ ಮುಳ್ಳನ್ನು ಬುಡದಿಂದಲೇ ಕೀಳಬೇಕು. ಬಿಟ್ಟರೆ ಮುಂದೊಂದು ದಿನ ಅಪಾಯ ಖಂಡಿತ… ಆನಂದಿಯ ಮಾತಲ್ಲಿ ಅದೆಂತಾ ದ್ವೇಷ..!! ಅಧಿಕಾರದ ಹಪಹಪಿ ಅವಳ ಮಾನವೀಯ ಅಂತಃಕರಣವನ್ನೇ ಬರಡು ಮಾಡಿ ಹಾಕಿತ್ತು. ಅವಳ ಮಾತಿಗೆ ಎದುರಾಡುವ ಸಾಹಸವನ್ನು ರಘುನಾಥನೂ ತೋರಲಿಲ್ಲ. ರಘುನಾಥ ನೂತನ ಪೇಶ್ವಾನಾಗಿ ಆಯ್ಕೆಯಾದ. ನಾರಾಯಣ ರಾವ್ ಪೇಶ್ವಾನ ಅತೃಪ್ತ ಆತ್ಮ ಶನಿವಾರವಾಡೆಯ ಸರ್ವನಾಶಕ್ಕೆ ಪ್ರತಿಜ್ನೆ ಮಾಡಿತ್ತು ಎಂದು ಕಾಣುತ್ತದೆ. ಶನಿವಾರವಾಡೆಯ ಕೆಟ್ಟ ದಿನಗಳು ಆರಂಭವಾದವು.
ಮುಂದುವರೆಯುತ್ತದೆ. ಜೈ ಮಹಾಕಾಲ್…..
ಇತಿಹಾಸದ ಪ್ರತೀ ಪುಟದಲ್ಲೂ ರಕ್ತದೋಕುಳಿ ಹಾಸುಹೊಕ್ತ್ಕಾಗಿರುತ್ತದೆ ಅಂತ ಕೇಳಿದ್ದೆ ಪರಾಕ್ರಮಿ ಪೇಶ್ವೆಗಳೂ ಇದಕ್ಕೆ ಹೊರತಾಗಲಿಲ್ಲ ಅಂತ ಓದಲಿಕ್ಕೆ ಮನಸ್ಸಿಗೆ ಹಿಂಸೆಯಾಗುತ್ತದೆ.
ಈ ವೃತ್ತಾಂತ ನಿಮ್ಮ ಊಹೆಯೋ ಇಲ್ಲಾ ಇತಿಹಾಸದ ಮಜಲೋ?