ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 22, 2016

2

ಭಾಮಿನಿ ಷಟ್ಪದಿಯಲ್ಲಿ ಭಗವಾನ್ ಶ್ರೀಧರ ಸ್ವಾಮಿಗಳ ಚರಿತ್ರೆ

‍ನಿಲುಮೆ ಮೂಲಕ

– ಗುರುಪ್ರಸಾದ್ ಕೆ ಕೆ.

ಶ್ರೀಧರಭಾಮಿನಿಧಾರೆ ೧-೫
ಶ್ರೀಧರಭಾಮಿನಿಧಾರೆ ೬-೧೦

ಶ್ರೀಧರಭಾಮಿನಿಧಾರೆ ೧೧-೧೫

shreedhar_swami11)
ತಾಯ ದುಃಖವ ಮರೆಸಲಿಕೆ ತಾ
ಜೀಯ ಸಿರಿಧರ ಮರುಳು ಮಾಡುವ
ರಾಯರಳಿದಾ ದುಃಖಮರೆಸಲು ಆಡಿ ನಲಿಸುವನೂ||
ಆಯುಕಳೆಯೇ ಸಕಲರಿಂಗು ವಿ-
ಧಾಯ ಮರಣವು ಖಚಿತವಯ್ಯಾ
ಒಯ್ಯುವನು ಆ ನಿಯಮಪಾಲಕ ಯಮನು ಎಲ್ಲರನೂ||

ತಾತ್ಪರ್ಯ : ಶ್ರೀಧರರು ತಾಯಿಗೆ ಪತಿವಿಯೋಗದ ಸ್ಮರಣೆಯಿಂದ ಅಥವಾ ಇನ್ಯಾವುದೇ ಕಾರಣದಿಂದ ವಿಷಾದ ಭಾವ ಮೂಡಿದಾಗಲೆಲ್ಲ ತನ್ನ ನಾನಾ ವಿಧದ ಬಾಲಲೀಲೆಗಳಿಂದ ಸಮಾಧಾನಗೊಳಿಸುತ್ತಿದ್ದರು. ನಿಯಮಪಾಲಕ ಯಮಧರ್ಮರಾಜನ ಎದುರು ಮಾನವಮಾತ್ರರು ಏನು ತಾನೇ ಮಾಡಲು ಸಾಧ್ಯ. ಆಯಸ್ಸು ಕಳೆದಿರುವ ಎಲ್ಲ ಜೀವಜಂತುಗಳನ್ನೂ ಅವನು ಕರೆದೊಯ್ಯುತ್ತಾನೆ.

12)
ಬಾಲಸಿರಿಧರ ಮನೆಯ ಹತ್ತಿರ
ಸಾಲಿನಲ್ಲಿಯೆ ಇರುವ ಮಠದಲಿ
ತೈಲಚಿತ್ರವ ನೋಡಿ ಹರುಷದಿ ಜಪವ ಮಾಡುತಿಹಾ||
ತೈಲಚಿತ್ರದಿ ಗುರು ಸಮರ್ಥರ
ನೀಳಕಾಯದ ಚೆಲುವಿನಾಕೃತಿ
ಮಾಲೆಯನುಧರಿಸಿಯೇ ನಿಂತಂತಿತ್ತು ಅಂದದಲೀ||

ತಾತ್ಪರ್ಯ : ಕಮಲಾಬಾಯಿಯವರು ವಾಸವಾಗಿದ್ದ ಮನೆಗೆ ಸಮೀಪದಲ್ಲಿಯೇ ಶ್ರೀನಾರಾಯಣ ಮಹಾರಾಜರೆಂಬ ಶ್ರೀಸಮರ್ಥ ಸಂಪ್ರದಾಯಿಗಳಾದ ಸಾಧುಗಳ ಮಠವಿತ್ತು. ಈ ಮಠದಲ್ಲಿ ಶ್ರೀಸಮರ್ಥರ ಒಂದು ತೈಲಚಿತ್ರವಿತ್ತು. ಈ ತೈಲಚಿತ್ರವನ್ನು ಕಂಡು ಆನಂದಿತರಾದ ಬಾಲ ಶ್ರೀಧರರು ತೈಲಚಿತ್ರದ ಎದುರು ಕುಳಿತು ಪ್ರತಿದಿನವೂ ಜಪ, ರಾಮಧ್ಯಾನ ಮಾಡತೊಡಗಿದರು.

13)
ರಾಮನಾಮವ ಭಕ್ತಿಯಿಂದಲಿ
ಕೋಮಲಾಂಗನು ಮನದಿ ಭಜಿಸುತ
ನಾಮದೊಂದಿಗೆ ಕರುಣೆ ಮಮತೆಯ ಭರದಿ ಮೈಗೊಂಡಾ||
ರಾಮಲೀಲೆಯು ದೇವ ಉತ್ಸವ
ಧರ್ಮಕಾರ್ಯಗಳಿರುವ ತಾಣಕೆ
ನಮ್ಮ ನಾಯಕ ಬಾಲ ಸೇವಕ ಮೊದಲು ನಡೆಯುವನೂ||

ತಾತ್ಪರ್ಯ : ರಾಮಾಯಣಾದಿ ಪುರಾಣಕೀರ್ತನೆಗಳಲ್ಲಿ ಬಾಲಕ ಶ್ರೀಧರರಿಗೆ ಬಹಳ ಆಸಕ್ತಿ ಇತ್ತು. ಕಥಾ ಕೀರ್ತನಾದಿಸತ್ಸಂಗವನ್ನು ಮುಗಿಸಿ ಮನೆಗೆ ಬರುವಾಗ ಅವುಗಳನ್ನೇ ವಿಚಾರ ಮಾಡುತ್ತಾ ಬರುತ್ತಿದ್ದರು. ಕ್ರಮೇಣ ಸತ್ಯ, ಹಿತ, ಪ್ರಿಯ, ಮಧುರಭಾಷಿಯಾಗಿ ಸದ್ಗುಣಗಳನ್ನು ಇನ್ನಷ್ಟು ಮೈಗೂಡಿಸಿಕೊಳ್ಳತೊಡಗಿದರು. ದಾಸನವಮಿ ರಾಮನವಮಿಯಂತಹ ಉತ್ಸವಾದಿಗಳಲ್ಲಿ ಬಾಲಶ್ರೀಧರರು ತಯಾರಿಗೆ, ಸೇವಾಕಾರ್ಯಗಳಿಗೆ ಸದಾ ಮುಂದಾಳುವಾಗಿರುತ್ತಿದ್ದರು.

14)
ಆಟಪಾಠದಿ ಬಾಲ ಸಿರಿಧರ
ಕೂಟದೊಂದಿಗೆ ಸೇರಿಕೊಳುತಲಿ
ತುಂಟತನವೂ ಕೂಡಿದಂತೆಯೆ ಸೇರಿ ಮುನ್ನಡೆವಾ||
ದುಷ್ಟ ಮರ್ದನೆ ಶಿಷ್ಟ ಪಾಲನೆ
ಕೆಟ್ಟ ಜನರನು ತಿದ್ದುವಾಸೆಯು
ಒಟ್ಟು ಮಾಡುತ ಸರಿಕರನು ಜೊತೆ ಕೊಂಡು ಒಯ್ಯುವನೂ||

ತಾತ್ಪರ್ಯ : ಹೈದರಾಬಾದಿನ “ವಿವೇಕವರ್ಧಿನೀ” ಶಾಲೆಗೆ ಶ್ರೀಧರರನ್ನು ಸೇರಿಸಲಾಯಿತು. ಪ್ರತಿದಿನವೂ ತಪ್ಪಿಸದೇ ಶಾಲೆಗೆ ಹೋದ ಶ್ರೀಧರರು, ಆಟೋಟಗಳಲ್ಲಿ ಸದಾ ಮುಂದಿರುವುದಲ್ಲದೇ, ಪಾಠ ಪಠಣ ಗಳಲ್ಲಿ ಕೂಡಾ ಮುಂದಿದ್ದರು. ಸದ್ಗುಣಗಳೇ ತುಂಬಿದ್ದರೂ ಕೂಡಾ, ಮೃಷ್ಟಾನ್ನ ಭೋಜನದ ಎಲೆತುದಿಯಲ್ಲಿ ಉಪ್ಪಿನಕಾಯಿ ಇರುವಂತೆ, ಸ್ವಲ್ಪ ತುಂಟತನವೂ ಇತ್ತು. ಶಾಲೆಗೆ ಹೋಗುವ ಹಾದಿಯಲ್ಲಿ ಇದ್ದ, ಕೆಲವು ಕಿಡಿಗೇಡಿ ಹುಡುಗರಿಂದ ಉಂಟಾಗುತ್ತಿದ್ದ ಉಪಟಳವನ್ನು ಬಾಲಶ್ರೀಧರರು ನಿಲ್ಲಿಸಿ, ಸಹಪಾಠಿಗಳನ್ನೆಲ್ಲಾ ಒಟ್ಟಾಗಿಸಿಕೊಂಡು ಶಾಲೆಗೆ ಹೋಗುತ್ತಿದ್ದರು.

15)
ಆರು ವರ್ಷಕೆ ತಪವ ಮಾಡುವ
ಜೋರು ಆಸೆಯು ಮನದಿ ಮೂಡಲು
ಬೇರೆ ಲೌಕಿಕ ಭಾವವೆಲ್ಲವು ಹಿಂದೆ ಸರಿದಾಯ್ತೂ||
ಸಾರುತಿರುವನು ರಾಮನಾಮದ
ಭಾರಿ ಶಕ್ತಿಯ ಸೊಗಸುಗಳನೂ
ಪೋರ ಸಿರಿಧರ ಸುತ್ತ ನೆರೆವ ಸಮೂಹಗಳಿಗೆಲ್ಲಾ||

ತಾತ್ಪರ್ಯ : ಚಿಕ್ಕವಯಸ್ಸಿನಲ್ಲಿಯೇ ಬಾಲಶ್ರೀಧರರಿಗೆ ವೈರಾಗ್ಯ, ತಪಶ್ಚರ್ಯ, ಜಪಾನುಷ್ಠಾನ, ಮುಂತಾದವುಗಳತ್ತ ಪ್ರಭಲ ಆಕರ್ಷಣೆ ಇತ್ತು. ಲೌಕಿಕ ವಿಷಯಗಳ ಕಡೆಗೆ ನಿರ್ಮೋಹವೂ ತುಂಬಿತ್ತು. ಸದಾ ರಾಮಧ್ಯಾನದಲ್ಲಿರುತ್ತ ಆ ರಾಮನಾಮದ ಶಕ್ತಿಯನ್ನೂ, ಸೊಗಸುಗಳನ್ನೂ ಹೊಗಳುತ್ತಾ ಇರುವ ಇವರೆಡೆಗೆ, ದೊಡ್ಡ ಹುಡುಗರು ಅಷ್ಟೇ ಅಲ್ಲದೇ ವಯಸ್ಸಾದವರೂ ಕೂಡಾ ಆಕರ್ಷಿತರಾಗುತ್ತಿದ್ದರು.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments