ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 23, 2016

18

ಜಮ್ಮು-ಕಾಶ್ಮೀರ (ಐತಿಹಾಸಿಕ ಸತ್ಯಗಳು ಮತ್ತು ವರ್ತಮಾನದ ತಲ್ಲಣಗಳು)

‍ನಿಲುಮೆ ಮೂಲಕ

ನಿಲುಮೆ ತಂಡವು, ಮಂಗಳೂರಿನಲ್ಲಿ ( 18.09.2016 ) ರಂದು ನಡೆಸಿದ ‘ಕಾಶ್ಮೀರದ ಕುರಿತು ವಿಚಾರ ಸಂಕಿರಣ’  ಕಾರ್ಯಕ್ರಮದಲ್ಲಿ  ಚಕ್ರವರ್ತಿ ಸೂಲಿಬೆಲೆಯವರ ಮಾತುಗಳನ್ನು ರೂಪಲಕ್ಷ್ಮೀಯರವರು ಅಕ್ಷರ ರೂಪಕ್ಕಿಳಿಸಿದ್ದಾರೆ. ಅಂದಿನ ಕಾರ್ಯಕ್ರಮದ ವಿಚಾರಗಳು ಈಗ ನಿಲುಮೆಯ ಓದುಗರ ಮುಂದೆ..

ಚಕ್ರವರ್ತಿ ಸೂಲಿಬೆಲೆಯವರ ಭಾಷಣದ ಮುಖ್ಯಾಂಶಗಳು.

14088692_10154596775090649_5386569408904041755_nವರ್ಷಕೊಮ್ಮೆ ನಾನು ಜಮ್ಮು, ಕಾಶ್ಮೀರಕ್ಕೆ ಹೋಗೋದ್ರಿಂದ, ಅಲ್ಲಿ ನಾನು ನೋಡಿರುವ ಆಧಾರದ ಮೇಲೆ, ನನ್ನ ವಿಚಾರಗಳನ್ನು ಹೇಳ್ತೀನಿ. ಪ್ರೊಫೆಸರ್ ಪ್ರೇಮ್ ಶೇಖರ್ ಅವರು ಆಗಲೇ ಹೇಳಿದ ಪ್ರಕಾರ, ಕಾಶ್ಮೀರದಲ್ಲಿ ಮೂರು ತರಹದ ಜನಾಂಗಗಳಿವೆ. ೧. ಹಿಂದು, ೨. ಮುಸ್ಲಿಮ್ ಮತ್ತು ೩. ಬುದ್ದಿಸ್ಟ್ – ಲಡಾಕ್ ನಲ್ಲಿರುವಂತಹವರು. ಆದರೆ ಮುಸ್ಲಿಮರು ಹೇಳೋದು – ಕಾಶ್ಮೀರದಲ್ಲಿ ನಾಲ್ಕು ತರಹದ ಜನರಿದ್ದಾರೆ. ೧. ಹಿಂದೂ, ೨. ಮುಸ್ಲಿಮ್ – ಸುನ್ನಿ ಮತ್ತು ಶಿಯಾ ೩. ಲಡಾಕ್. ಪ್ರೇಮ್ ಶೇಖರ್ ಸರ್ ಹೇಳಿದ ಹಾಗೆಯೇ ಇನ್ನು ಮುಂದೆ ಕಾರ್ಗಿಲ್ ನ ಸುದ್ಧಿಗೆ ಪಾಕಿಸ್ತಾನ್ ಬರೋಲ್ಲ. ಯಾಕೆಂದರೆ ಕಾರ್ಗಿಲ್ ನಲ್ಲಿ ಹೆಚ್ಚಾಗಿರುವ ಮುಸ್ಲಿಮರು – ಶಿಯಾ ಪಂಗಡದವರು. ಪಾಕಿಸ್ತಾನದಲ್ಲಿರುವ ಮುಸ್ಲಿಮರು – ಸುನ್ನಿ ಪಂಗಡದವರು. ಕಾಶ್ಮೀರದ ಕಣಿವೆಯಲ್ಲಿರೋ ಮುಸ್ಲಿಮರು, ಪಾಕಿಸ್ತಾನದ ಮುಸ್ಲಿಮರನ್ನು ತಮ್ಮ ಮುಸಲ್ಮಾನರು ಅಂತಂದುಕೊಳ್ತಾರೆ. ಆದರೆ ಕಾರ್ಗಿಲ್ ನ ಶಿಯಾದವರಿಗೆ ಚೆನ್ನಾಗಿ ಗೊತ್ತು. ತಾವೇನಾದರೂ ಪಾಕಿಸ್ತಾನಕ್ಕೆ ಹೋದರೆ, ಇದುವರೆವಿಗೂ ಕಣಿವೆಯಲ್ಲಾದ ಅತ್ಯಾಚಾರಗಳು, ದೌರ್ಜನ್ಯಗಳನ್ನು, ಈ ಪಾಕಿಸ್ತಾನದ ಸುನ್ನಿಗಳು ತಮ್ಮ ಮೇಲೆಯೇ ನಡೆಸುತ್ತಾರೆ. ಆ ಭಯದಿಂದ ಕಾರ್ಗಿಲ್ ನ ಮುಸ್ಲಿಮರು, ಏನೇ ಆದರೂ ನಾವು ಭಾರತದಲ್ಲೇ ಇರ್ತೀವಿ. ಪಾಕಿಸ್ತಾನಕ್ಕೆ ಸೇರೋಲ್ಲ ಅಂತಾ ಹೇಳ್ತಾರೆ.

ನಾನು ಮತ್ತು ಯುವ ಬ್ರಿಗೇಡ್ ನ ಜೊತೆಗಾರರು ಕಾರ್ಗಿಲ್ ನ ಎಲ್ ಒ ಸಿ ಬಳಿ ಓಡಾಡ್ತಿರಬೇಕಾದರೆ, ಅಲ್ಲೊಂದು ಬೆಟ್ಟದ ಬುಡದಲ್ಲಿ ಒಂದು ಗ್ರೇವ್ ಯಾರ್ಡ್ ಇದೆ. ಯಾವ, ಯಾವ ಸೈನಿಕರು ತೀರಿಕೊಂಡಿದ್ದಾರೋ, ಒಂದು ಮಿನಿಯೇಚರ್ ಮಾಡಿದ್ದಾರೆ. ಅವರ ಹೆಸರುಗಳನ್ನು ಕೂಡ ಬರೆದಿಟ್ಟಿದ್ದಾರೆ. ಅಲ್ಲೊಂದು ಕಡೆ ಮುಸಲ್ಮಾನ ದಂಪತಿಗಳ ಹೆಸರು ಕೂಡ ಬರೆದಿತ್ತು. ನಮ್ಮೊಂದಿಗಿದ್ದ ಆರ್ಮಿ ಆಫೀಸರ್ ಅವರನ್ನು ಈ ಬಗ್ಗೆ ವಿಚಾರಿಸಿದಾಗ, ತಿಳಿದ ಸಂಗತಿ ಏನೆಂದರೆ, ಗುಡ್ಡದ ಮೇಲೆ ಹತ್ತಬೇಕಾದರೆ, ಅಲ್ಲಿ ಏನಿರುತ್ತದೆಯೋ? ಯಾವುದು ಕೂಡ ನಮಗೆ ತಿಳಿದಿರುವುದಿಲ್ಲ. ಅಗತ್ಯ ವಸ್ತುಗಳ ಪೂರೈಕೆಗೆ ನಮಗೆ ಸ್ಥಳೀಯ ಜನರ ಸಹಾಯದ ಅವಶ್ಯಕತೆ ಇತ್ತು. ಬಹಳಷ್ಟು ಜನರು ನಮಗೆ ಸಹಾಯ ಮಾಡುತ್ತಿದ್ದರು. ಹೀಗಿರುವಾಗ, ಒಮ್ಮೆ ನಮ್ಮೊಂದಿಗೆ ಸಹಾಯಕ್ಕೆಂದು ಬಂದಿದ್ದ ಈ ಮುಸಲ್ಮಾನ ದಂಪತಿಗಳು ಕೂಡ ಎದುರಾಳಿಗಳ ಗುಂಡಿಗೆ ಬಲಿಯಾದರು. ಅವರ ಶವ ಸಂಸ್ಕಾರ ಕೂಡ ನಾವೇ ಮಾಡಿ, ಅವರ ಗುರುತಾಗಿ ಇಲ್ಲಿ ಅವರ ಹೆಸರನ್ನು ಬರೆದಿದ್ದೇವೆ ಅಂದರು. ಹಾಗೆಯೇ, ಸ್ಥಳೀಯ ಮುಸಲ್ಮಾನರ ಸಹಕಾರ ನಮಗೆ ಬಹಳವಿತ್ತು. ಕೊನೆಗೆ ಅವರಿಗೆ ಹಣ ನೀಡಲು ಹೋದಾಗ, ನೀವೆಲ್ಲರೂ ನಮ್ಮ ರಕ್ಷಣೆಗಾಗಿ ಇಲ್ಲಿಗೆ ಬಂದಿದ್ದೀರಿ. ಅದಕ್ಕಾಗಿ ನಾವು ನಿಮಗೆ ಸಹಾಯ ಮಾಡುತ್ತಿದ್ದೇವೆಯೇ ಹೊರತು ಹಣ ಬೇಡ ಎಂದು ಅಲ್ಲಿಯ ಶಿಯಾ ಮುಸ್ಲಿಮರು ನಿರಾಕರಿಸಿದರು ಎಂದು ಆ ಆಫೀಸರ್ ಹೇಳಿದರು. ತುಂಬಾ ಗಂಭೀರವಾದ ಸಂಗತಿ ಇದು. ಇವೆಲ್ಲವನ್ನೂ ಯಾವ ಪತ್ರಿಕೆಗಳು ಪ್ರಕಟಿಸುವುದಿಲ್ಲ. ನಮಗೆ ಇಂತಹ ಸಂಗತಿಗಳು ತಿಳಿಯುವುದೇ ಇಲ್ಲ. ಕಾಶ್ಮೀರದ ಮಧ್ಯೆ ನಿಂತುಕೊಂಡು, ಅಲ್ಲಿನ ಮುಸ್ಲಿಮರ ಪರ ಮಾತಾಡುವ ಬರ್ಕಾದತ್ ಕೂಡ ಇವನೆಲ್ಲಾ ಹೇಳುವುದಿಲ್ಲ. ಇನ್ನೂ ಅಚ್ಚರಿಯ ಸಂಗತಿ ಎಂದರೆ, ಕಶ್ಮೀರದ ಕಣಿವೆಯ ನಟ್ಟ ನಡುವಿನ ಮುಸಲ್ಮಾನರು ಹೇಳಿದ್ದು ಅಕ್ಷರಶಃ ಸತ್ಯ. ಏನೆಂದರೆ, ಅವರ ಎಂಜಲು ಕಾಸಿಗೆ ಆಸೆ ಪಟ್ಟು, ಕೆಲಸ ಮಾಡುವವರು ೧೦ ರಿಂದ ೧೨% ಇರಬಹುದೇ ಹೊರತು ಉಳಿದ ೯೦% ಜನರಿಗೆ ಅದರ ಅವಶ್ಯಕತೆ ಇಲ್ಲ.

ಜಮ್ಮು ಮತ್ತು ಕಾಶ್ಮೀರದ ವಿಶೇಷತೆಯೇನಂದರೆ, ಅಲ್ಲಿಯ ಮಂತ್ರಿಮಂಡಲ ಆರು ತಿಂಗಳು ಜಮ್ಮು ಮತ್ತು ಆರು ತಿಂಗಳು ಕಾಶ್ಮೀರದಲ್ಲಿ ನಡೆಯುತ್ತವೆ. ಹಾಗೆಯೇ ಅಲ್ಲಿಯ ಶ್ರೀಮಂತರು ಕೂಡ ಜಮ್ಮುವಿನಲ್ಲಿ ಕೂಡ ಮನೆಗಳನ್ನು ಕಟ್ಟಿಕೊಂಡು ಆರು ತಿಂಗಳು ಕಶ್ಮೀರದಲ್ಲಿ, ಆರು ತಿಂಗಳು ಜಮ್ಮುವಿನಲ್ಲಿ ವಾಸವಾಗಿರುತ್ತಾರೆ. ನನ್ನ ಮಿತ್ರ ಸುಭಾಶ್ ಕೌಲ್ ಅವರು ಅಲ್ಲಿಯ ಸೆಕ್ರೆಟೇರಿಯೆಟ್ ನಲ್ಲಿ ಕೆಲಸ ಮಾಡುತ್ತಿದುದರಿಂದ ಇಲ್ಲಿ, ಅಲ್ಲಿ ಎರಡು ಕಡೆಯೂ ಆರಾರು ತಿಂಗಳು ಕೆಲ್ಸ ಮಾಡುತ್ತಿರುತ್ತಾರೆ. ಅವರು ಬೇಸಿಕಲಿ ಪಂಡಿತ್. ಒಬ್ಬ ಪಂಡಿತ್ ಕಾಶ್ಮೀರದಲ್ಲಿ ಹೇಗಿರಬಹುದು? ಎಂದು ನಾನು ಕೇಳಿದಾಗ, ಅವರು, “೯೫ ರಲ್ಲಿ ಪಂಡಿತ್ ರನ್ನು ಓಡಿಸಿದ್ದು ಗೊತ್ತು. ನಾನು ಆಗ ಬಹಳ ಚಿಕ್ಕವನಿದ್ದೆ. ಆದರೂ ನನಗೆಲ್ಲವೂ ನೆನಪಿದೆ. ಹೇಗೆ ಗಲಾಟೆ ಮಾಡಿದರು? ಹೇಗೆ ಓಡಿಸಿದರು? ಹೇಗೆ ಪಂಡಿತರ ಮೇಲೆ ಅತ್ಯಾಚಾರಗಳನ್ನು ಮಾಡಿದರು ಎಂಬುದೆಲ್ಲಾ ಗೊತ್ತು. ಆದರೆ ಈಗಲೂ ಕೂಡ ಇಲ್ಲಿಯ ಮುಸಲ್ಮಾನರು ನಮ್ಮೊಂದಿಗೆ ಚೆನ್ನಾಗಿಯೇ ಇದ್ದಾರೆ” ಎಂದರು! ಸೌಪುರದಲ್ಲಿ ಸುಭಾಷ್ ಕೌಲ್ ತಮ್ಮ ಮೂಲ ಜಮೀನನ್ನು ಈಗಲೂ ಕೂಡ ವಾಪಾಸು ಕೊಟ್ಟಿಲ್ಲ. ಅಲ್ಲಿರುವ ಮುಸಲ್ಮಾನರಿಗೆ ನೋಡಿಕೊಳ್ಳಲು ಕೊಟ್ಟಿದ್ದಾರೆ. ನನ್ನನ್ನು ಕೂಡ ಸೌಪುರಕ್ಕೆ, ಅವರ ಜಮೀನನ್ನು ನೋಡಲು ಕರೆದು ಕೊಂಡು ಹೋದರು. ಯಾವ ಸೌಪುರದಲ್ಲಿ ಸದಾಕಾಲ ಭಯೋತ್ಪಾದನೆ, ಉಗ್ರರ ಅಟ್ಟಹಾಸ ಆಗಾಗ ಕೇಳಿಬರುತ್ತೋ, ಆ ಊರಿಗೆ ಹೋಗಲು ಮೊದಲ ಬಾರಿಗೆ ನನಗೆ ಹೆದರಿಕೆ ಇತ್ತು. ಆದರೆ ಇವರು ಸೆಕ್ರೆಟೇರಿಯೆಟ್ ನಲ್ಲಿ ಇದ್ದುದ್ದರಿಂದ ಧೈರ್ಯ ಇತ್ತು. ಅಲ್ಲಿಗೆ ನನ್ನನ್ನು ಕರೆದು ಕೊಂಡು ಹೋದ ಅವರು, ಅವರ ಜಮೀನಿನ ತುಂಬಾ ತಿರುಗಾಡಿಸಿದರು. ಹಾಗೆಯೇ ನೀನು ಬೇಕಿದ್ದರೆ, ಅಲ್ಲಿಯ ಕೆಲಸಗಾರರನ್ನು ಮಾತಾಡಿಸಿಕೊಂಡು ಬಾ, ನಾನು ದೂರವಿರುತ್ತೇನೆ, ಎಂದು ಕೂಡ ಹೇಳಿದರು.

ಒಬ್ಬ ಹುಡುಗನ ಜೊತೆ ಮಾತಾಡುತ್ತಿರಬೇಕಾದರೆ, ಅವನು ಸುಂದರವಾದ ಮಾತುಗಳನ್ನು ಹೇಳಿದ. ನಮ್ಮನೆಗೆ ಬನ್ನಿ ಅಂತಾ ನನ್ನನ್ನು ಕರೆದ. ಅವನ ಮನೆಗೆ ಕರೆದುಕೊಂಡು ಹೋದ. ಇವರು `ನೀನಲ್ಲಿಯೇ ಉಳಿದುಕೊಂಡು ಬಿಡು’ ಎಂದು ಹೇಳಿ, ಕಾರ್ ತೊಗೊಂಡು ಹೊರಟೇ ಬಿಟ್ಟರು! ಹೋಗುವ ಮುನ್ನಾ ಪಕ್ಕಕ್ಕೆ ಕರೆದು “ಇವತ್ತು ರಾತ್ರಿ ನೀನು ಇಲ್ಲಿಯೇ ಇರಬೇಕು, ಈ ಮನೆಯ ಯಜಮಾನ ಯಾರು ಅಂತಾ ಹೇಳ್ತೀನಿ. ತನ್ನ ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟು ಶರಣಾಗತಿಯಾದ ಕುಟುಂಬವಿದು”, ಎಂದು ಹೇಳಿ, ಹೊರಟುಬಿಟ್ಟರು. ನನಗೂ ಬಹಳ ಕುತೂಹಲವಿತ್ತು. ನನ್ನನ್ನು ಆ ಕುಟುಂಬದವರು ಬಹಳ ಚೆನ್ನಾಗಿ ನೋಡಿಕೊಂಡರು. ರಾತ್ರಿ ಬಹಳ ಹೊತ್ತು ಅವರೊಡನೆ ಮಾತಾಡುತ್ತಿದ್ದೆ. ಹಾಗೆಯೇ ನಾನೊಂದು ಪ್ರಶ್ನೆ ಕೇಳಿದೆ. “ನೀವು ಸರ್ಕಾರದೊಡನೆ ಫೈಟ್ ಯಾಕೆ ಮಾಡಿದ್ರಿ? ಏನಾಗಬೇಕಿತ್ತು ನಿಮಗೆ ಒಟ್ಟಾರೆಯಾಗಿ? ಪಾಕಿಸ್ತಾನದ ಜೊತೆಗೆ ಸೇರಬೇಕು ಅಂತಾ ಆಸೆ ಇದೆಯಾ? ಅದಕ್ಕೆ ಅವರು ತುಂಬಾ ಸ್ಪಷ್ಟವಾಗಿ ಒಂದು ಮಾತು ಹೇಳಿದರು. ಪಾಕಿಸ್ತಾನಕ್ಕೆ ನಮ್ಮನ್ನು ಸಾಕುವಷ್ಟು ಯೋಗ್ಯತೆಯಿಲ್ಲ. ಕಾಶ್ಮೀರಿಗಳು ಪಾಕಿಸ್ತಾನಕ್ಕಿಂತ ಶ್ರೀಮಂತರು. ಶಸ್ತ್ರವನ್ನು ಕೆಳಗಿಟ್ಟ ಭಯೋತ್ಪಾದಕ ಶ್ರೀನಗರದ ಹತ್ತಿರವಿರುವವನ ಮಾತುಗಳಿವು. ನಾನು ಕೇಳಿದೆ “ಹಾಗಿದ್ದರೆ ಹೋರಾಟ ಯಾಕೆ? ಭಾರತದ ಜೊತೆಗಿರ್ತೀರಾ?” ಅದಕ್ಕೆ ಅವರು ಹೇಳಿದರು “ನಾವು ಯಾವ ಕಾರಣಕ್ಕೂ ಭಾರತವನ್ನು ಬಿಡೋಕೆ ಸಾಧ್ಯವಿಲ್ಲ”. ನಾನು ಕೇಳಿದೆ “ಹಾಗಿದ್ದರೆ ಪ್ರತ್ಯೇಕತಾವಾದ ಅಂತಾ ಯಾಕೆ ಗಲಾಟೆ ಮಾಡ್ತೀರಾ?”

ಆಗ ಅವರು ಹೇಳಿದ್ದು ನೋಡಿ! “ನಾನಾಗ ಬಹಳ ಚಿಕ್ಕವನಿದ್ದೆ. ರೇಷನ್ ಅಂಗಡಿಗೆ ಏನನ್ನೋ ತರಲು ಹೋದೆ. ಬಹಳ ಹೊತ್ತು ಅಂಗಡಿಯ ಬಾಗಿಲು ತೆರೆದೇ ಇರಲಿಲ್ಲ. ನಾವೆಲ್ಲರೂ ಲೈನಿನಲ್ಲಿ ನಿಂತಿದ್ದೆವು. ನಾನು ಸುಮ್ಮನಿರದೇ ‘ಪಾಕಿಸ್ತಾನ ಜಿಂದಾಬಾದ್’ ಎಂದು ಕೂಗಿದೆ. ಅಂಗಡಿಯವ ತಕ್ಷಣವೇ ಬಾಗಿಲು ತೆರೆದು, ಯಾರು ಘೋಷಣೆ ಕೂಗಿದ್ದು? ಎಂದು ವಿಚಾರಿಸಿ, ನನ್ನನ್ನು ಒಳಗೆ ಕರೆದು, ನನಗೇನೂ ಬೇಕೋ, ಅದನ್ನು ಕೊಟ್ಟು ಕಳುಹಿಸಿದ. ಯಾವಾಗ ನಾವು ಪ್ರತ್ಯೇಕತಾವಾದದ ಘೋಷಣೆಯನ್ನು ಜೋರಾಗಿ ಮೊಳಗಿಸುತ್ತೇವೆಯೋ, ಆಗ ಎಲ್ಲರೂ ನಮ್ಮ ದನಿಯನ್ನು ಕೇಳ್ತಾರೆ. ಅದಕೋಸ್ಕರ ಘೋಷಣೆ ಕೂಗ್ತೀವಿ” ಅಂತಂದ. ನನಗೆ ಅವನ ಮಾತು ಬಹಳ ವಿಚಿತ್ರವೆನಿಸಿತು. ನಂಬೋಕೆ ಆಗಲಿಲ್ಲ. ಆದರೆ ಅವನು ಹೇಳಿದ. ನನ್ನ ಮಗ ಬೆಂಗಳೂರಿನಲ್ಲಿ ಓದ್ತಿದ್ದಾನೆ. ನಾನು ಹೇಗೆ ಭಾರತವನ್ನು ಬಿಟ್ಟು ಹೋಗಲಿ? ಭಾರತವನ್ನು ಬಿಡೋದು ಕನಸಿನ ಮಾತು. ಭಾರತದೊಂದಿಗೆ ಇರ್ತೀವಿ. ಪ್ರತ್ಯೇಕತಾ ಘೋಷಣೆ ಕೂಗ್ತಾನೇ ಇರ್ತೀವಿ’ ಅಂದ. ಮೊದಲ ಬಾರಿಗೆ ನನಗೆ ನಂಬಲಾಗಲಿಲ್ಲ. ಆದರೆ ಅಲ್ಲಿದ್ದ ಎರಡು ದಿವಸಗಳಲ್ಲಿ ಆತ ಹೇಳಿದ್ದು ಸತ್ಯ ಎಂಬುದು ಗೊತ್ತಾಗಿಬಿಡ್ತು.

ನಾನು ಯಾವ ದಾರಿಯಲ್ಲಿ ಹೋಗಿದ್ದೇನೋ, ವಾಪಾಸ್ಸು ಬರುವಾಗ ದಾರಿಯುದ್ದಕ್ಕೂ ಪಾಕಿಸ್ತಾನದ ಧ್ವಜಗಳು ಹಾರಾಡುತ್ತಿದ್ದವು. ನಾನು ಕೌಲ್ ಸಾಹೇಬರನ್ನು ಈ ಬಗ್ಗೆ ವಿಚಾರಿಸಿದೆ. ಅದಕ್ಕೆ ಅವರು ಹೇಳಿದರು, “ಇಂದು ಮನಮೋಹನ್ ಸಿಂಗ್ ಬರುವವರಿದ್ದಾರೆ. ಅವರನ್ನು ಸ್ವಾಗತಿಸಲು ಈ ಧ್ವಜಗಳು!”. “ಯಾಕೆ ?” ಅಂತಾ ಕೇಳಿದರೆ, “ಈ ದೇಶದ ಪ್ರಧಾನಿಗೆ ಅನ್ನಿಸಬೇಕು, ನಾನೇನಾದರೂ ಇವರು ಕೇಳಿದನ್ನು ಕೊಡಲಿಲ್ಲ ಅಂದ್ರೆ, ಇವರು ಕಿತ್ತುಕೊಂಡು ಹೋಗಿ ಬಿಡ್ತಾರೆ ಅನ್ನೋ ಭಯಕ್ಕಾದರೂ ಅವರು ಏನಾದರೂ ಘೋಷಿಸುತ್ತಾರೆ, ನೋಡ್ತೀರಿ ಅಂದ್ರು”. ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು, ಅಂದು ತಮ್ಮ ಭಾಷಣದಲ್ಲಿ ೧೦೦೦ ಕೋಟಿ ರೂಪಾಯಿ ಪ್ಯಾಕೇಜ್ ಅನ್ನು ಘೋಷಿಸಿ ಹೊರಟರು. ಹೇಗೆ ರೇಷನ್ ಅಂಗಡಿ ಮುಂದೆ ಘೋಷಣೆ ಕೂಗಿದಾಗ, ರೇಷನ್ ಸಿಕ್ಕಿತೋ, ಹಾಗೆಯೇ ಪಾಕಿಸ್ತಾನದ ಧ್ವಜವನ್ನು ಹಾರಿಸಿದಕ್ಕೆ ಪ್ಯಾಕೇಜ್ ಸಿಕ್ಕಿತು. ಇದು ಅಲ್ಲಿಯ ಮಾನಸಿಕ ಸ್ಥಿತಿ!

ಇವೆಲ್ಲಾ ಎಲ್ಲಿಂದ ಶುರುವಾಯಿತು. ವಾಸ್ತವವಾಗಿ ಅಲ್ಲಿನ ಮುಸ್ಲಿಮರು ಹಾಗಿದ್ರಾ? ತುಂಬಾ ಒಳ್ಳೆಯ ಜನ ಕಶ್ಮೀರಿಯವರು. ಕಾಶ್ಮೀರಿಯ ಜನಾಂಗ ಮೂಲತಃ ಹೇಳಬೇಕೆಂದರೆ ಅಕ್ಷರಶಃ ಹಿಂದೂ ಜನಾಂಗವೇ. ಯಾವುದ್ಯಾವುದನ್ನು ಹಿಂದೂ ಜನರಲ್ಲಿರಬಹುದಾದ ಶ್ರೇಷ್ಠ ಗುಣಗಳು ಅಂತಾ ಅಂದುಕೊಳ್ತಿವೋ, ಅಷ್ಟೂ ಶ್ರೇಷ್ಠ ಗುಣಗಳು ಕಶ್ಮೀರಿಗಳಲ್ಲಿವೆ. ಅವರಷ್ಟು ಒಳ್ಳೆಯ ಹಾಸ್ಪಿಟಾಲಿಟಿ ಗುಣ ಇನ್ಯಾರಲ್ಲೂ ಇಲ್ಲ. ಎಂಟು ಬಾರಿ ಹೋಗಿದ್ದರ ಅಧಿಕೃತ ವಾಣಿಯಿಂದ ಹೇಳ್ತೀದ್ದೀನಿ. ಯಾರ ಮನೆಗಾದ್ರೂ ನೀವು ಹೋದರೆ ನಿಮಗೆ ಗೊತ್ತಾಗುತ್ತೆ. ಕಾಶ್ಮೀರಿ ಚಹಾ ಕುಡಿಯೋದೆ ನೀವು ವಾಪಾಸ್ ಬರೋ ಹಾಗೇ ಇಲ್ಲ. ಅಷ್ಟು ಚಂದದ ಹೃದಯ ಅವರದು. ಆದರೆ ಯಾವತ್ತಿಂದ ಈ ಹೃದಯ ಹಾಳಾಗೋಕೆ ಶುರುವಾಯಿತು ಅನ್ನೋದನ್ನು ಸ್ವಲ್ಪ ಆಳಕ್ಕಿಳಿದು ಗಮನಿಸಿದರೆ ಗೊತ್ತಾಗುತ್ತೆ. ಕಶ್ಮೀರದ ಪರಿಸ್ಥಿತಿಯೇ ಹಾಗಿದೆ. ನಾವು ಕಶ್ಮೀರವನ್ನು ನೋಡಬೇಕಿರೋದು ಯಾವುದೋ ರಾಷ್ಟ್ರ, ಅಲ್ಲಿ ಯಾವುದೋ ಒಂದು ಜನಾಂಗದವರು ಜಾಸ್ತಿ ಇದ್ದಾರೆ, ಹೋಗಿ ಬಿಡಲಿ ಅಂತಲ್ಲ. ಆ ರೀತಿ ಹೇಳೋ ಪರಿಸ್ಥಿತಿಯಲ್ಲಿ ನಾವಿಲ್ಲ.

ನಾನು ಪ್ರತಿನಿತ್ಯ ಪ್ರಾರ್ಥನೆ ಮಾಡಬೇಕಾದರೆ, ನಮಸ್ತೆ ಶಾರದಾದೇವಿ, ಕಾಶ್ಮೀರ ಪುರವಾಸಿನಿ ಅಂತಾ ಹೇಳಿಕೊಳ್ತೀನಿ. ಕಾಶ್ಮೀರ ನನ್ನ ಅವಿಭಾಜ್ಯ ಅಂಗ ಯಾಕೆ ಅಂದರೆ, ಪ್ರತಿನಿತ್ಯ ಪೂಜೆ ಮಾಡುವಂತಹ ಶಾರದಾ ದೇವಿ ಅಲ್ಲಿದ್ದವಳು ಅಂತಾ. ಈಗ ಆ ಮಂದಿರ ಅಲ್ಲಿಲ್ಲ. ಅದು POK ಯಲ್ಲಿದೆ. ನಾನು ಯಾವ ವೇದ ಮಂತ್ರವನ್ನು ಕಲಿತಿದ್ದೀನೋ, ಯಾವ ವೇದ ಮಂತ್ರದ ಆಧಾರದ ಮೇಲೆ ಭಾರತೀಯ ಚಿಂತನೆಗಳನ್ನು ನಡೆಸುತ್ತೇವೆಯೋ, ಅವೆಲ್ಲಾ ಹುಟ್ಟಿದ್ದು ಕಾಶ್ಮೀರದಲ್ಲಿ. ಯಾವ ಸರ್ವಜ್ಞ ಮಂಟಪವನ್ನು ಏರುವುದರಿಂದ, ಸರ್ವಜ್ಞ ಪೀಠದ ಮೇಲೆ ಕುಳಿತುಕೊಳ್ಳುವುದರಿಂದ, ಇಡಿಯ ದೇಶಕ್ಕೆ ಪಂಡಿತ ಎಂಬ ಗೌರವಕ್ಕೆ ಪಾತ್ರನಾಗ್ತಾನೋ, ಆ ಸರ್ವಜ್ಞ ಪೀಠ ಇದ್ದಿದ್ದು ಕಾಶ್ಮೀರದಲ್ಲಿ ಅಂತಾ ನಾವು ಓದಿದ್ದೀವಿ. ಕಶ್ಮೀರಕ್ಕೂ, ನಮಗೂ ಅವಿನಾಭಾವ ನಂಟು. ಕಾಶ್ಮೀರದ ಪಾಂಡಿತ್ಯ ಇವತ್ತಿನದಲ್ಲ. ಕಲ್ಹಣ ಕೂಡ ಕಶ್ಮೀರದವನು. ರಾಜತರಂಗಿಣಿ ಓದಿದ್ರೆ ಗೊತ್ತಾಗುತ್ತೆ. ಏನು ಅದ್ಭುತವಾದ ಕಲ್ಪನೆ ಕಲ್ಹಣನದ್ದು. ಶ್ರೇಷ್ಠ ಪಂಡಿತರನ್ನು ಹುಟ್ಟು ಹಾಕಿ, ಸಮಾಜಕ್ಕೆ ಕೊಟ್ಟಂಥ ಕೀರ್ತಿ ಕಾಶ್ಮೀರದ್ದು. ಶ್ರೇಷ್ಟ ರಾಜಕಾರಣಿಗಳನ್ನು, ರಾಜನೀತಿಜ್ಞರನ್ನು ಕೊಟ್ಟದ್ದು ಕಶ್ಮೀರ್. ಆದರೆ ಹದಿನಾಲ್ಕನೇ ಶತಮಾನದ ವೇಳೆಗೆ ಸುಲ್ತಾನ್ ಸಿಕಂದರ್ ನ ಆಕ್ರಮಣದೊಂದಿಗೆ ಶುರುವಾದ ಮುಸ್ಲಿಮ್ ಇನ್ವೇಷನ್, ಕಶ್ಮೀರದಲ್ಲಿದ್ದ ಪಂಡಿತರ ಮೇಲೆ ಬಹಳ ಘನವಾದ ಆಕ್ರಮಣವನ್ನು ಎಸಗಿತು.

ಬುದ್ಧನ ಕಾಲಕ್ಕೂ ಕಾಶ್ಮೀರ ಹೇಗಿತ್ತು ಅಂದರೆ ಪದ್ಮಸಂಭವವನ್ನು The other Buddha, ಅಂತಾ ಕರೀತಾರೆ. ಬುದ್ಧನ ಮತ್ತೊಬ್ಬ ಬುದ್ಧ ಅಂತಾ ಕರೆಯಬಹುದಾದ ಪದ್ಮಸಂಭವನನ್ನು, ಇವತ್ತಿಗೂ ಲಡಾಕನಲ್ಲಿ ರಿಂಪೋಚೆ ಎಂದು ಗೌರವಿಸಿ, ಗುರುತಿಸುತ್ತಾರೆ. ಆತ ಕೂಡ ಬೆಳೆದದ್ದು ಕಶ್ಮೀರದಲ್ಲಿಯೇ. ನೀವು ಇಡೀ ಕಶ್ಮೀರವನ್ನು ನೋಡಿದರೆ, ಪಂಡಿತರ ಕಾಲದಿಂದ, ಬುದ್ಧನ ಕಾಲದವರೆಗೂ ಶ್ರೇಷ್ಠ ಜ್ಝಾನದ ಆಗರವಾಗಿದ್ದ ಕಶ್ಮೀರ, ಪಂಡಿತರ ತಾಣವಾಗಿದ್ದ ಕಶ್ಮೀರ, ಪಂಡಿತರಿಗೆ ಭಟ್ಟ ಅನ್ನುವ ಗೌರವವನ್ನು ಟಿಬೆಟ್ ನಿಂದ ಬುದ್ಧನ ಕಾಲದಲ್ಲಿ ಪಡೆದುಕೊಂಡ ಕಶ್ಮೀರ, ಹೀಗೆ… ನಮ್ಮದು ಮತ್ತು ಕಶ್ಮೀರದ ಸಂಬಂಧ ಇವತ್ತು, ನಿನ್ನೆಯದಲ್ಲ. ನನ್ನ ಕೆಲವು ಮಿತ್ರರು ಹೇಳ್ತಾರೆ, ಹಿಸ್ಟರಿಯನ್ನು ಯಾಕೆ ಕೆದಕುತ್ತೀರಿ? ಅದನ್ನು ಮುಸ್ಲಿಮರಿಗೆ ಬಿಟ್ಟುಬಿಡೋಣ ಅಂತಾ. ನಾನು ಅದಕ್ಕೆ ಉತ್ತರ ಹೇಳ್ತೇನೆ. ಇನ್ನೂ ಇಪ್ಪತ್ತು ವರ್ಷಗಳು ಕಳೆದ ಮೇಲೆ, ನಾನು ಇದೇ ಮಾತನ್ನು ನಿಮಗೆ ಹೇಳ್ತೇನೆ. ನಿಮಗದು ಒಪ್ಪಿಗೆಯಾಗುತ್ತದೆಯೇ? ಅದಕ್ಕೆ ಅವರಲ್ಲಿ ಉತ್ತರವಿಲ್ಲ. ಇತಿಹಾಸದ ಗರ್ಭಕ್ಕೆ ಹೋಗಿ ನೋಡಿದರೆ, ಕಶ್ಮೀರದ ಮೇಲೆ ತನ್ನ ಅಧಿಕಾರವನ್ನು ಚಲಾಯಿಸುವ ಯಾವ ಹಕ್ಕೂ ಪಾಕಿಸ್ತಾನಕ್ಕಿಲ್ಲ, ಕಾಲಕ್ರಮೇಣವಾಗಿ ಆಗಿರುವಂತಹ ಬದಲಾವಣೆಗಳಷ್ಟೇ.

ಸುಲ್ತಾನ್ ಸಿಕಂದರ್ ಕಾಶ್ಮೀರದ ಮೇಲೆ ಆಕ್ರಮಣ ಮಾಡಿದಾಗ, ಪಂಡಿತರ ಮೇಲೆ ಭಯಾನಕ ಅತ್ಯಾಚಾರಗಳು ನಡೆದವು. ಪಂಡಿತರೆಲ್ಲಾ ಆ ಭಾಗವನ್ನು ಬಿಟ್ಟು ಹೋದರು. ನಿಧಾನವಾಗಿ ಕಳೆದು ಹೋದರು. ಎಲ್ಲಿಯವರೆಗೂ ಹೋದರು ಅಂದರೆ, ಕಶ್ಮೀರದ ಇತಿಹಾಸವನ್ನು ಬರೆದಿರುವಂತಹ ಇತಿಹಾಸಕಾರರು ಹೇಳ್ತಾರೆ – ಪಂಡಿತರ ಮೇಲೆ ಎಂತಹ ಅತ್ಯಾಚಾರಗಳು ನಡೆದವು ಅಂದರೆ, ಪಂಡಿತರ ಹನ್ನೆರಡು ಕುಟುಂಬಗಳು ಮಾತ್ರ ಉಳಿದಿರಬಹುದು, ಅದಕ್ಕಿಂತ ಹೆಚ್ಚಿರಲಿಲ್ಲ. ಸುಲ್ತಾನ್ ಸಿಕಂದರ್ ನ ಮೊಮ್ಮಗ ಜೈಲುಲಬ್ದೀನ್ ಅಂತಾ ಅಧಿಕಾರಕ್ಕೆ ಬಂದಾಗ, ಆತನ ಕಾಲ ಹೇಗಿತ್ತು ಅಂತಂದ್ರೆ ಮರುಭೂಮಿಯಲ್ಲಿ ತಂಪಾದ ಗಾಳಿ ಬೀಸಿದಂತಿತ್ತು ಅಂತಾ. ಆತನಿಗೊಂದು ವಿಚಿತ್ರ ಖಾಯಿಲೆ ಇತ್ತು. ಅದನ್ನು ಗುಣಪಡಿಸಿದ ಶ್ರೀಭಟ್ಟನಿಗೆ ಈತ ಏನು ಬೇಕು? ಎಂದು ಕೇಳಿದ. ಆಗ ಪಂಡಿತರ ಮೇಲಿನ ಅತ್ಯಾಚಾರವನ್ನು ನಿಲ್ಲಿಸಿ, ಅವರನ್ನು ವಾಪಸ್ಸು ಬರುವಂತೆ ಮಾಡಿ ಎಂದು ಶ್ರೀಭಟ್ಟ ಕೇಳಿಕೊಂಡ. ಮತ್ತೆ ಪಂಡಿತರು ಅಲ್ಲಿ ನೆಲೆಸಿ, ನಿಧಾನವಾಗಿ ಅವರ ಚಿಂತನೆಗಳು ಹರಡಲು ಶುರುವಾದಾಗ, ಮತ್ತೆ ಮೊಘಲರ ಆಳ್ವಿಕೆ ಶುರುವಾಯಿತು. ಜಹಾಂಗೀರನ ಕಾಲಕ್ಕಂತೂ ಅಲ್ಲಿ ಅತ್ಯದ್ಭುತ ಉದ್ಯಾನವನಗಳು ನಿರ್ಮಾಣಗೊಂಡವು. ಜಹಾಂಗೀರ್ ಸಾಯೋ ಕಾಲಕ್ಕೆ ನಿಂಗೇನು ಬೇಕು? ಅಂತಾ ಕೇಳಿದಾಗ, ಆತ ಹೇಳಿದ್ದನಂತೆ. ಕಾಶ್ಮೀರ ನನಗೆ ಕೊಟ್ಟುಬಿಡಿ, ಸಾಕು ಅಂತಾ. ಔರಂಗಜೇಬ್ ಬಂದ ಮೇಲೆ ಮತ್ತಷ್ಟು ಅತ್ಯಾಚಾರಗಳು ನಡೆದವು. ಇಷ್ಟೆಲ್ಲಾ ಆದ ನಂತರ ಕಾಶ್ಮೀರ ಡೋಗ್ರ ರಾಜರ ಕೈಗೆ ಬಂತು. ಕಾಶ್ಮೀರ ಭಾರತಕ್ಕೆ ಸೇರಿಕೊಂಡಾಗ ಅದು ಮುಸಲ್ಮಾನರ ಕೈಲಿರಲಿಲ್ಲ. ಡೋಗ್ರ ರಾಜರ ಆಡಳಿತದಲ್ಲಿತ್ತು. ಅಕಸ್ಮಾತ್ ಮುಸ್ಲಿಮ್ ರಾಜರ ಆಡಳಿತದಲ್ಲಿದಿದ್ದರೆ, ಬಹುಶಃ ಅವತ್ತೆ ಅದು ಪಾಕಿಸ್ತಾನದ ವಶವಾಗುತ್ತಿತ್ತು.

ಕಾಶ್ಮೀರ ಡೋಗ್ರ ರಾಜರ ವಶವಾದ ಮೇಲೆ, ಪಂಡಿತರ ಮೇಲಿನ ಅತ್ಯಾಚಾರಗಳು ನಿಂತು, ಅವೆಲ್ಲಾ ಮುಸ್ಲಿಮರ ಮೇಲಾಗತೊಡಗಿದವು. ಎಲ್ಲಾ ಸರ್ಕಾರೀ ಕೆಲ್ಸಗಳು ಪಂಡಿತರ ವಶವಾದವು. ಮುಸ್ಲಿಮರು ಅನಿವಾರ್ಯವಾಗಿ ಡೋಗ್ರ ರಾಜರ ವಿರುದ್ಧ ದಂಗೆಯೇಳುವಂತಾಗಿಬಿಟ್ಟಿತು. ಭಾರತಕ್ಕೆ ಸ್ವಾತಂತ್ರ್ಯ ಬರುವ ಸಮಯದಲ್ಲಿ, ಪಂಡಿತರ ಅತ್ಯಾಚಾರದ ವಿರುದ್ಧ ಮುಸ್ಲಿಮರು ಒಗ್ಗಟ್ಟಾಗಿದ್ದರು. ಸ್ವಾತಂತ್ರ್ಯ ಬಂದ ಸಮಯದಲ್ಲಿ ಎಲ್ಲಿಗೆ ಸೇರಬೇಕು ಎಂಬ ವಿಷಯವಾಗಿ ರಾಜಾ ಹರಿಸಿಂಗ್ ಗೂ ಕೂಡ ದ್ವಂದ್ವ ಇತ್ತು. ಪಾಕಿಸ್ತಾನ ಯಾವಾಗ ಕಾಶ್ಮೀರದ ಮೇಲೆ ಆಕ್ರಮಣ ಮಾಡ್ತೀವಿ ಅಂತಾ ಬಂದರೋ, ಆ ಕ್ಷಣದಲ್ಲಿ ರಾಜಾ ಹರಿಸಿಂಗ್, ತಾವು ಭಾರತಕ್ಕೆ ಸೇರಬೇಕೆಂದು ತೀರ್ಮಾನಿಸಿದರು. ಹಾಗೆಯೇ ಒಪ್ಪಂದ ಪತ್ರಕ್ಕೆ ಸಹಿ ಕೂಡ ಹಾಕಿದರು. ಕಾಶ್ಮೀರ ಭಾರತಕ್ಕೆ ಸೇರಿತು. ಆದರೆ ಸರ್ದಾರ್ ಪಟೇಲ್ ಅವರಿಗೆ ಕಾಶ್ಮೀರ ಭಾರತಕ್ಕೆ ಸೇರುವುದು ಬೇಡ ಎಂಬ ಅಭಿಪ್ರಾಯವಿತ್ತು. ಎಲ್ಲಿ ಮುಸ್ಲಿಮರು ಹೆಚ್ಚಿದ್ದಾರೋ, ಆ ಭಾಗವನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಡಬೇಕೆಂಬುದು ಅವರ ಅಭಿಪ್ರಾಯವಾಗಿತ್ತು. ಆದರೆ ಯಾವಾಗ ಮಹಮದ್ ಅಲೀ ಜಿನ್ನಾ ಅವರು ಜುನಾಗಡ್, ಹೈದರಾಬಾದ್ ನಮ್ಮದು ಅನ್ನೋಕೆ ಶುರು ಮಾಡಿದರೋ, ಆಗ ಸರ್ದಾರ್ ಪಟೇಲ್ ಅವರು ಕಾಶ್ಮೀರವನ್ನು ಬಿಟ್ಟು ಕೊಡದಿರಲು ನಿರ್ಧರಿಸಿದರು. ವಾಸ್ತವವಾಗಿ ಕಾಶ್ಮೀರವು ಭಾರತದಲ್ಲೇ ಇರಲೆಂಬ ಬಯಕೆ ಇದ್ದುದು ಪಂಡಿತ್ ನೆಹರೂ ಅವರಿಗೆ. ಅವರ ಹೆಸರಿನ ಮೂಲದಲ್ಲಿದ್ದ ಪಂಡಿತ್ ಇಂದಾಗಿ, ಅವರು ತಾನು ಕೂಡ ಕಾಶ್ಮೀರಿ ಮೂಲದ ಪಂಡಿತ್ ಎಂದುಕೊಳ್ಳುತ್ತಿದ್ದರು. ಶೇಕ್ ಅಬ್ದುಲ್ಲಾ ಜೊತೆ ಪ್ರೀತಿಯಿಂದ ನೆಹರೂ ಅವರು ನಡೆದುಕೊಳ್ಳುತ್ತಿದ್ದದು ಕೂಡ ಇದೆ ಕಾರಣಕ್ಕಾಗಿಯೇ.

೧೯೪೮, ೧೯೬೫ ಮತ್ತು ೧೯೭೧ ರ ಯುದ್ಧಗಳ ಸಮಯದಲ್ಲಿ ಕಾಶ್ಮೀರದ ಮುಸಲ್ಮಾನರು ಭಾರತದ ಪರವಾಗಿಯೇ ಇದ್ದರು. ನೇರ ಯುದ್ಧಕ್ಕೆ ವೆಚ್ಚವೂ ಹೆಚ್ಚು ಮತ್ತು ಪ್ರಪಂಚದ ಎಲ್ಲಾ ದೇಶಗಳನ್ನು ಒಪ್ಪಿಸಿ ಮಾಡಬೇಕಾದುದರಿಂದ, ೧೯೭೧ ರ ಯುದ್ಧವಾದ ಮೇಲೆ ಪಾಕಿಸ್ತಾನ, ಇನ್ನು ಮುಂದೆ ಭಾರತದೊಡನೆ ನೇರ ಯುದ್ಧ ಮಾಡಬಾರದು ಎಂದು ನಿರ್ಧರಿಸಿತು. ಹಾಗಾಗಿ, ತಾನೇ ಮೊದಲು ದಾಳಿ ಮಾಡುತ್ತಿದ್ದರೂ ಕೂಡ, ಪಾಕಿಸ್ತಾನ ಭಾರತದ ಮೇಲೆ ದಾಳಿಯಾಗುತ್ತಿರುವುದು ಭಯೋತ್ಪಾದಕರಿಂದ ಎಂದು ಹೇಳಿ ತಪ್ಪಿಸಿಕೊಳ್ಳೋಕೆ ಶುರು ಮಾಡಿತು. ಪ್ರಾಕ್ಸಿ ವಾರ್ ಗಿಂತ, ಭಯೋತ್ಪಾದನೆ ಬಹಳ ಸುಲಭದ ಕೆಲ್ಸವಾದುದರಿಂದ ಪಾಕಿಸ್ತಾನ ಅದನ್ನೇ ಮಾಡಲು ಶುರು ಮಾಡಿತು. ಕಾಶ್ಮೀರದ ಜನರನ್ನು ಕರೆದುಕೊಂಡು ಹೋಗಿ, ಅವರ ಬ್ರೈನ್ ವಾಶ್ ಮಾಡಿಸಿ, ವಾಪಾಸ್ಸು ಕರೆದುಕೊಂಡು ಬಿಡುವ ವ್ಯವಸ್ಥೆ ಮಾಡಿತು. ೧೯೭೧ ರಿಂದಲೇ ಪಾಕಿಸ್ತಾನದ ಐಎಸ್ ಐ ಪ್ರಪಂಚದಾದ್ಯಂತ ನಿಧಾನವಾಗಿ ತನ್ನ ಬೇಹುಗಾರಿಕೆಯನ್ನು ಹೆಚ್ಚಿಸಿತು. ರಷ್ಯಾದ ವಿರುದ್ಧ ಕಿತ್ತಾಡುತ್ತಿದ್ದ ಅಮೇರಿಕಾ, ಆ ಭಾಗದಲ್ಲಿದ್ದ ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನವನ್ನು ಬಳಸಿ ರಷ್ಯಾವನ್ನು ಎದುರಿಸಲು ಪ್ಲಾನ್ ಮಾಡಿತು. ಅಮೇರಿಕಾ ಐಎಸ್ ಐ ಅನ್ನು ಟ್ರೀನಿಂಗ್ ಮಾಡಿತು. ಅತ್ಯಾಧುನಿಕ ಶಸ್ತ್ರಾಸ್ತ್ರ ಬಳಸುವುದರಿಂದ ಹಿಡಿದು ಬೇಹುಗಾರಿಕೆ ನಡೆಸುವವರೆಗೂ, ಜೊತೆಗೆ ಹಣವನ್ನು ಕೂಡ ಕೊಟ್ಟಿದ್ದು ಅಮೇರಿಕಾ. ಇದರಿಂದಾಗಿ ಪಾಕಿಸ್ತಾನದ ಸರ್ಕಾರಕ್ಕಿಂತಲೂ, ಸೈನ್ಯಕ್ಕಿಂತಲೂ ಬಲಾಢ್ಯವಾಗಿ ಐ ಎಸ್ ಐ ಬೆಳೆದುಬಿಟ್ಟಿತು. ಎಷ್ಟರ ಮಟ್ಟಿಗೆ ಅಂದರೆ ಇಡೀ ಪ್ರಪಂಚದ ಪಾಕಿಸ್ತಾನದ ಎಂಬೆಸಿಗಳಲ್ಲಿ, ತನ್ನ ಜನರನ್ನು ಬೇಹುಗಾರಿಕೆಗೆ ಐ ಎಸ್ ಐ ಇಟ್ಟಿದೆ. ಯಾರು ರಾಜತಾಂತ್ರಿಕ ಕಛೇರಿಗಳಲ್ಲಿರ್ತಾರೋ, ಅವರ ವಿರುದ್ಧ ಸರ್ಕಾರ ಏನೂ ಮಾಡೋಕಾಗಲ್ಲ ಅನ್ನುವುದನ್ನು ಐ ಎಸ್ ಐ ಚೆನ್ನಾಗಿ ಬಳಸಿಕೊಂಡಿದ್ದಾರೆ. ಪಾಕಿಸ್ತಾನದ ಸೇನೆ ಅಲ್ಲಿನ ಧಾರ್ಮಿಕ ಮುಖಂಡರನ್ನು ಕೂಡ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

ಭಾರತದಲ್ಲಿ ಇದೇ ಸಮಸ್ಯೆ. ಈ ಐ ಎಸ್ ಐ ಭಾರತದಲ್ಲಿ ಎಷ್ಟು ಗಟ್ಟಿಯಾಗಿ ಬೇರೂರಿದೆ ಅಂದರೆ ಇವರು ಎಲ್ಲಿ, ಯಾವ ಸಮಯದಲ್ಲಿ, ಯಾರೊಂದಿಗೆ ಎಂತಹ ಕೆಲ್ಸವನ್ನಾದರೂ ಮಾಡಿಸುವ ಸಾಮರ್ಥ್ಯ ಹೊಂದಿದ್ದಾರೆ. ದುರಂತವೆಂದರೆ ಪಾಕಿಸ್ತಾನ ಮತ್ತು ಚೈನಾ ಗಳಸ್ಯ ಕಂಠಸ್ಯ ಆಗಿರುವುದರಿಂದ, ಈ ಐ ಎಸ್ ಐ ಅವರಿಗೆ ಭಾರತದ ಮಾವೋವಾದಿಗಳ ಬೆಂಬಲವೂ ಇದೆ. ಅ‍ಷ್ಟೇ ಅಲ್ಲ Evangelists ಗಳ ಸಪೋರ್ಟ್ ಕೂಡ ಇವರಿಗಿದೆ. ಆ ಮೂರು ಜನ ಒಟ್ಟಾಗಿ ನಿಂತು ಭಾರತವನ್ನು ತುಂಡರಿಸಬೇಕೆಂದಿದ್ದಾರೆ. ಭಾರತವನ್ನು ೩೦ ಭಾಗಗಳಾಗಿ ತುಂಡರಿಸಿಬಿಡಬೇಕೆಂಬ ಆಸೆ ಚೈನಾಗಿದೆ. ಅದಕ್ಕಾಗಿ ಕಳೆದ ಹತ್ತಾರು ವರ್ಷಗಳಿಂದ ಅನೇಕ ಪ್ಲಾನ್ ಗಳನ್ನು ಕೂಡ ಚೈನಾ ಮಾಡಿಕೊಂಡು ಬಂದಿದೆ.

ಕಳೆದ ೮೦ರ ದಶಕದ ನಂತರ ಪಾಕಿಸ್ತಾನ ಜನರನ್ನು ಕರೆದುಕೊಂಡು ಹೋಗಿ ಟ್ರೈನ್ ಮಾಡ್ತಿತಂತೆ. ಆದರೆ ಅವರು ವಾಪಾಸು ಬಂದೊಡನೆಯೇ, ಒಂದೆರಡು ಸಲ ಸೈನಿಕರೊಡನೆ ಫೈಟ್ ಮಾಡಿದಾಗ, ತಮ್ಮ ಸಂಸಾರ, ಹೆಂಡತಿ, ಮಕ್ಕಳನ್ನು ನೆನಪಾಗಿ, ಶಸ್ತ್ರಾಸ್ತ್ರ ತ್ಯಜಿಸಿ ಬಿಡುತ್ತಿದ್ದರಂತೆ. ಇದರಿಂದಾಗಿ ಪಾಕಿಸ್ತಾನಕ್ಕೆ ಬಹಳ ನಷ್ಟವಾಗ್ತಿತ್ತು. ಹಾಗಾಗಿ ಇಷ್ಟೆಲ್ಲಾ ಖರ್ಚು ಮಾಡಿದ್ದು ವೇಸ್ಟ್ ಆಗ್ತಿದೆಯೆಂದು ತಿಳಿದ ಪಾಕಿಸ್ತಾನ ಮತ್ತೊಂದು ಪ್ಲಾನ್ ಮಾಡಿದ್ದೇನೆಂದರೆ, ಕಾಶ್ಮೀರದಿಂದ ಮಕ್ಕಳನ್ನೇ ಅಪಹರಿಸಿಕೊಂಡು ಹೋಗಿ ಟ್ರೇನಿಂಗ್ ಮಾಡುವುದು. ಆ ಮಕ್ಕಳಿಗಾದರೆ ಹೆಂಡತಿಯಿಲ್ಲ, ಮಕ್ಕಳಿಲ್ಲ, ಈ ಮಕ್ಕಳಿಗೆ ಇದ್ದ ಗುರಿ ಒಂದೇ, ಏನೆಂದರೆ ಭಾರತವನ್ನು ಅಸ್ಥಿರಗೊಳಿಸುವುದು, ಭಾರತದ ಸೈನಿಕರನ್ನು ಬದುಕಲಿಕ್ಕೆ ಬಿಡಬಾರದು, ತನ್ಮೂಲಕ ತಾವು ಸ್ವರ್ಗಕ್ಕೆ ಹೋಗುವುದು ಎಂಬ ನಂಬಿಕೆ. ಭಾರತದ ಸೇನೆ ತುಂಬಾ ಯೋಚನೆ ಮಾಡಿ, ಹುಡುಕಿ, ಹುಡುಕಿ ಭಯೋತ್ಪಾದಕರನ್ನು ಕೊಲ್ಲುತ್ತಿತ್ತು. ಆದರೆ ತಮ್ಮ ಮಕ್ಕಳೇ ಸೈನಿಕರ ಗುಂಡಿಗೆ ಬಲಿಯಾದದನ್ನು ನೋಡುವಾಗ, ಅವರ ಮನೆಯವರು ಮತ್ತು ಇಡೀ ಊರಿಗೆ ಊರೇ ನೋವಿನಿಂದ ತೀವ್ರವಾಗಿ ಸ್ಪಂದಿಸುತ್ತಿದ್ದರು. ಹಾಗಾಗಿ ಇದು ಭಾರತಕ್ಕೆ ಕೇಡಾಗಿ ಪರಿಣಮಿಸಿತು.

ಅಫ್ಜಲ್ ಗುರು ತೀರಿಕೊಂಡ ನಂತರ ಎರಡು ದಿನಗಳ ಕಾಲ ಕಶ್ಮೀರದಲ್ಲಿ ಭಯಾನಕ ಗಲಾಟೆ ನಡೆದಿತ್ತು. ಅದಾದ ನಾಲ್ಕೈದು ತಿಂಗಳ ನಂತರ ನಾನು ಬಾರಾಮುಲ್ಲಕ್ಕೆ ಹೋಗಿದ್ದೆ. ಅಲ್ಲಿ ಒಬ್ಬ ಟೀಚರ್, ನನ್ನನ್ನು ಕರೆದುಕೊಂಡು ಒಂದು ಹೋಟೇಲಿಗೆ ಹೋಗಿ “ಇದು ಬಾರಾಮುಲ್ಲಾದ ಏಕೈಕ ಹಿಂದೂ ಹೋಟೇಲ್, ಧೈರ್ಯವಾಗಿ ಟೀ ಕುಡೀರಿ” ಎಂದರು. ಅವರು ಮತ್ತು ಅವರ ಪತ್ನಿ ಇಬ್ಬರು ಕೂಡ ಟೀಚರ್ಸ್. ಇಷ್ತೊಂದು ಭಯದಲ್ಲಿ ಇಲ್ಲಿ ಹೇಗಿರ್ತೀರಿ?” ಎಂದೆ. ಅದಕ್ಕೆ ಅವರು “ನಾನು ಇಲ್ಲಿ ಇರೋಲ್ಲ ಅಂದ್ರೆ ಹೇಗೆ? ನಾನೊಬ್ಬ ಹಿಂದೂ, ಆ ಕಾರಣಕೋಸ್ಕರ ಇದ್ದೀನಿ” ಅಂದ್ರು. ನಂತರ ಅಲ್ಲೊಂದು ದೇವಸ್ತಾನಕ್ಕೆ ಕರೆದುಕೊಂಡು ಹೋದರು. ಬಾಗಿಲು ಬಹಳ ಹೊತ್ತು ಬಡಿದ ನಂತರ, ಅಲ್ಲಿದ್ದ ಸೈನಿಕನೊಬ್ಬ ಬಂದು ಬಾಗಿಲು ತೆರೆದ. ಇವರು ಬಾಯಿಗೆ ಬಂದಂತೆ ಬೈಯಲು ಶುರು ಮಾಡಿದರು. ನಾನು ಸಹಜವಾಗಿ ಸೈನಿಕರ ಮೇಲೆ ಅಪರಿಮಿತ ಪ್ರೀತಿ ಇರುವ ಕಾರಣ, “ಯಾರಾದರೂ, ಸೈನಿಕರಿಗೆ ಹೀಗೆಲ್ಲಾ ಬೈತಾರಾ?” ಎಂದೆ. ಅದಕ್ಕೆ ಆ ಟೀಚರ್ ಉತ್ತರಿಸಿದರು – ” ಇದುವರೆವಿಗೂ ನಾನೊಬ್ಬ ಹಿಂದೂ ಎಂಬುದನ್ನು ತೋರಿಸಿಕೊಳ್ಳದೆ, ಈ ಜನರ ನಡುವೆ ಬದುಕಿದ್ದೀನಿ. ಯಾರಿಗಾದರೂ ನಾನು ದೇವಸ್ತಾನದ ಬಾಗಿಲು ಬಡಿದಿದ್ದು ಕಂಡಿದ್ರೆ, ಮರುಕ್ಷಣ ನಾನಿಲ್ಲಿ ಇರೋಕಾಗ್ತಿತ್ತಾ? ಹಾಗಾಗಿ ಇವರಿಗೆ ಬೈದೆ. ಇಡೀ ಬಾರಾಮುಲ್ಲದ ಜನಸಂಖ್ಯೆ ೧೫೦೦೦ ಇದ್ದರೆ ಹಿಂದೂಗಳ ಸಂಖ್ಯೆ ಸುಮಾರು ೫೦ ಜನರಿರಬಹುದು!” ಎಂದರು. ಇಂತಹ ಪರಿಸ್ಥಿತಿಯಲ್ಲಿ ನೀವು ಹೇಗಿರ್ತೀರಿ? ಎಂದೆ. ಅದಕ್ಕವರು “ಪಾಕಿಸ್ತಾನದಲ್ಲಿ ಕೋಟ್ಯಾಂತರ ಜನರ ನಡುವೆ ಕೇವಲ ಸಾವಿರಾರು ಹಿಂದೂಗಳಿದ್ದಾರಲ್ವಾ? ಅವರ ಪರಿಸ್ಥಿತಿ ಹೇಗಿರಬಹುದು?” ಆಫ್ಘಾನಿಸ್ತಾನದಲ್ಲಿ ನೂರಾರು ಹಿಂದೂಗಳು ಮಾತ್ರವಿದ್ದಾರೆ, ಅವರ ಪರಿಸ್ಥಿತಿ ಊಹಿಸಿ” ಎಂದರು.

ಪಕ್ಕದಲ್ಲೇ ಇದ್ದ ಅಫ್ಜಲ್ ಖಾನ್ ನ ಮಾವನ ಮನೆ ತೋರಿಸಿದರು. ಅಫ್ಜಲ್ ಖಾನ್ ತೀರಿಕೊಂಡ ಸಮಯದಲ್ಲಿ ಆ ಮನೆ ಕಡೆಯಿಂದ ಕಲ್ಲುಗಳು ಎಷ್ಟು ತೂರಿ ಬರುತ್ತಿದ್ದವು ಎಂದರೆ, ಸೈನ್ಯದ ವ್ಯಾನ್ ಹೋಗಲು ಜಾಗವೇ ಇರಲಿಲ್ಲ. ನಾವೆಲ್ಲಾ ಮನೆಯಿಂದ ಹೊರಬರಲು ಸಾಧ್ಯವೇ ಆಗಿರಲಿಲ್ಲ! ಎಂದರು. ಕಶ್ಮೀರದಲ್ಲಿ ಸೈನಿಕರೊಡನೆ ಹೋರಾಡಲು ಪಾಕಿಸ್ತಾನದಿಂದ ಭಯೋತ್ಪಾದಕರು ಬರಬೇಕಂತಿಲ್ಲ. ಕಶ್ಮೀರದ ಮಕ್ಕಳಿಗೆ ಕಲ್ಲು ಕೊಟ್ಟು ಹೊಡೆಯಲು ಹೇಳುತ್ತಾರೆ. ಮನಮೋಹನ್ ಸಿಂಗ್ ಅವರು ಕಶ್ಮೀರಕ್ಕೆ ಬಂದು ಹೋಗುವಾಗ ಶ್ರೀನಗರ ಬಂದ್ ಆಗಿತ್ತು. ಆ ಸಮಯದಲ್ಲಿ ನಾನು ಶ್ರೀನಗರದ ಲಾಲ್ ಚೌಕ್ ಬಳಿಯ ಯಾತ್ರಿನಿವಾಸ್ ದಲ್ಲಿದ್ದೆ. ಸಂಪೂರ್ಣ ಶ್ರೀನಗರ ಬಂದ್ ಆಗಿತ್ತು. ಅಲ್ಲಿನ ರಸ್ತೆಗಳ ಮೇಲೆ ಕಲ್ಲುಗಳು ಹೇಗಿದ್ದವು ಎಂದರೆ, ಅದರ ಅಡಿಯಲ್ಲಿ ರಸ್ತೆಗಳೇ ಕಾಣುತ್ತಿರಲಿಲ್ಲ! ಪಕ್ಕದಲ್ಲಿ ಯಾಸೀನ್ ಮಲ್ಲಿಕ್ ಮನೆ. ನೋಡಿಕೊಂಡು ಬರೋಣ ಎಂದು ಹೊರಟಾಗ ಸೈನಿಕರು ಎಚ್ಚರಿಸಿದರು. ಕಲ್ಲು ಬಿದ್ದು ನಿಮಗೇನಾದರೂ ಆದರೆ, ಆಸ್ಪತ್ರೆಗೆ ಕರೆದುಕೊಂಡು ಹೋಗಲು, ಯಾವ ಆಸ್ಪತ್ರೆಗಳು ಇಲ್ಲ. ಹಾಗಾಗಿ ನೀವು ಹೊರಗೆ ಬರಬೇಡಿ ಎಂದರು.

ಪಾಕಿಸ್ತಾನದ ಪರ ಮಾತಾಡುವ ಕಾಶ್ಮೀರಿಗಳಿಂದ, ಇಲ್ಲಿನ ಸ್ಥಳೀಯ ಜನರನ್ನು ದೂರ ಮಾಡಬೇಕಾದರೆ ಏನು ಮಾಡಬೇಕೆಂಬುದನ್ನು ಸೇನೆ ಯೋಚಿಸಿತು. ೧೯೯೮ ರಲ್ಲಿ ಅರ್ಜುನ್ ರೈ ಎಂಬ ಕರ್ನಲ್ ಒಬ್ಬರು ವಿದೇಶಗಳಲ್ಲಿ ಇದ್ದು ಬಂದಿದ್ದವರು, ಈ ಭಾಗದ ಜನತೆಗೆ ಸೈನ್ಯ ಎಂದರೆ ಬರೀ ಕಾದಾಟ ಮಾಡುವವರಲ್ಲ, ಹೃದಯವಂತರು ಎಂಬುದನ್ನು ತೋರಿಸಿಕೊಡಬೇಕು ಎಂದು ಯೋಚಿಸಿದರು. ಹಾಗಾಗಿ ಅವರು ಕಶ್ಮೀರದ ಯಾವ, ಯಾವ ಭಾಗಗಳಲ್ಲಿ ರಸ್ತೆಗಳಿರಲಿಲ್ಲವೋ, ಸರ್ಕಾರಿ ಸವಲತ್ತುಗಳಿರಲಿಲ್ಲವೋ, ಅಂತಹ ಕಡೆ ಸೈನ್ಯ, ಅಲ್ಲಿಯ ಜನರೊಡನೆ ಬಾಂಧವ್ಯವನ್ನು ಬೆಸೆಯಲು ಶುರು ಮಾಡಿತು. ೪,೫ ಕೋಟಿ ರೂಪಾಯಿಗಳಿಂದ ಮೊದಲಿಗೆ ಕೆಲಸ ಶುರುವಾಯಿತು. ಮೂಲ ಸೌಲಭ್ಯಗಳು, ಶಿಕ್ಷಣ, ಆರೋಗ್ಯ, ಉದ್ಯೋಗ, ಮಹಿಳಾ ಸಬಲೀಕರಣ ಹೀಗೆ ಅನೇಕ ಯೋಜನೆಗಳನ್ನು ಹಾಕಿಕೊಂಡರು. ಮತ್ತೊಂದು ಮುಖ್ಯ ಯೋಜನೆಯೆಂದರೆ, ಇಲ್ಲಿ ಓದುತ್ತಿರುವ ಮಕ್ಕಳನ್ನು ದೇಶದ ವಿವಿದೆಡೆ ಶೈಕ್ಷಣಿಕ ಪ್ರವಾಸ ಮಾಡಲು ಕರೆದುಕೊಂಡು ಹೋಗಬೇಕು ಎಂದು ಯೋಜಿಸಿದರು. ಇದೆಲ್ಲದರಿಂದ ಮೌಲ್ವಿಗಳು ಹೇಳಿದ್ದು ಮಾತ್ರ ಸತ್ಯವಲ್ಲ, ದೇಶದಲ್ಲಿನ ನೈಜ ಪರಿಸ್ಥಿತಿ ಅರ್ಥವಾಗುತ್ತೆ ಎಂದು ಅಂದುಕೊಂಡರು.

ಮೊದಲಿಗೆ ಭಯೋತ್ಪಾದಕರು ಅಟಾಕ್ ಮಾಡ್ತಾ ಇದ್ದದ್ದು ಕಶ್ಮೀರದ ಶಾಲೆಗಳನ್ನೇ. ಏಕೆಂದರೆ ಒಮ್ಮೆ ಈ ಮಕ್ಕಳು ವಿದ್ಯೆ ಕಲಿತರೆ, ಅದರಲ್ಲೂ ಮುಖ್ಯವಾಗಿ ಇಂಗ್ಲೀಷ್ ಕಲಿತರೆ, ಸುತ್ತ ಮುತ್ತ ಪ್ರಪಂಚದಲ್ಲಿ ಏನಾಗುತ್ತಿದೆಯೆಂಬುದು ಅವರ ಅರಿವಿಗೆ ತಿಳಿದುಬಿಡುತ್ತದೆ. ನಾವು ತುಂಬಾ ವೀಕ್ ಆಗಿಬಿಡ್ತೀವಿ ಅನ್ನೋ ಕಾರಣಕ್ಕೆ ಇವತ್ತಿಗೂ ಹೆಣ್ಣುಮಕ್ಕಳನ್ನು ಶಾಲೆಗೆ ಕಳಿಸಬಾರದು ಎಂಬ ಅಘೋಷಿತ ನಿಯಮ ಕಶ್ಮೀರದಲ್ಲಿದೆ. ಅದಕ್ಕೆ ಸೈನ್ಯ ಎಲ್ಲೆಲ್ಲಿ ರಿಮೋಟ್ ಏರಿಯಾಗಳಿವೆಯೋ, ಅಲ್ಲೆಲ್ಲಾ ಶಾಲೆಗಳನ್ನು ಶುರುಮಾಡಬೇಕೆಂದು ನಿಶ್ಚಯಿಸಿತು. ನಮ್ಮ ಸೈನ್ಯದ ಕಡೆಯಿಂದಲೇ ಆಪರೇಷನ್ ಸದ್ಭಾವನಾ ಎಂಬ ಹೆಸರಿನಲ್ಲಿ ಅವರು ಶುರು ಮಾಡಿದಂತಹ ಯೋಜನೆಯಿಂದಾಗಿ ೫೫ಕ್ಕೂ ಹೆಚ್ಚು ಶಾಲೆಗಳು ನಡೆಸಲ್ಪಡುತ್ತಿವೆ. ಅಲ್ಲಿನ ತರುಣರನ್ನು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ, ಅನೇಕ ಕುಶಲ ಕೆಲಸಗಳನ್ನು ಕಲಿಯಲು ದೇಶದ ಇನ್ನಿತರ ಕಡೆ ಹೋಗಿ ಓದುವಂತಹ ವ್ಯವಸ್ಥೆಯನ್ನು ನಮ್ಮ ಸೇನೆ ಮಾಡುತ್ತಿದೆ. ಕಾಶ್ಮೀರದ ಎಷ್ಟೋ ಗ್ರಾಮಗಳಲ್ಲಿ ವೈದ್ಯರೇ ಇಲ್ಲ. ಅಂತಹ ದುರ್ಗಮ ಪ್ರದೇಶಗಳಲ್ಲಿ, ಸೇನೆ ತಾವೇ ಆರೋಗ್ಯ ಶಿಬಿರಗಳನ್ನು ನಡೆಸಿ, ಯಾವ, ಯಾವ ತರುಣರೂ ಇದರಲ್ಲಿ ಆಸಕ್ತಿ ತೋರಿಸ್ತಾರೋ, ಅವರಿಗೆ ಟ್ರೇನಿಂಗ್ ಕೊಟ್ಟು, ಅವರೇ ಹೆಲ್ತ್ ಕ್ಯಾಂಪ್ ಗಳನ್ನು ನಡೆಸುವಂತೆ ವ್ಯವಸ್ಥೆ ಸೇನೆ ಮಾಡಿದೆ.

ಎಲ್ಲಕ್ಕಿಂತಲೂ ಮುಖ್ಯವಾಗಿ, ಅಲ್ಲಿನ ಮಕ್ಕಳನ್ನು, ತರುಣರನ್ನು ಮತ್ತು ಹಿರಿಯರನ್ನು ದೇಶದ ವಿವಿಧೆಡೆ ಕಳಿಸಿ, ದೇಶದ ಅಖಂಡತೆಯ ಪರಿಚಯವನ್ನು, ಆ ಪ್ರದೇಶಗಳ ಜನರಿಗೆ ದೇಶದ ಕಡೆಗಿರುವ ಪ್ರೀತಿಯನ್ನು ಪರಿಚಯಿಸಿ, ಕಾಶ್ಮೀರದ ಜೊತೆಗಿನ ಬಂಧವನ್ನು ಗಟ್ಟಿ ಮಾಡಿಸುತ್ತಿದೆ. ಈ ಹಿಂದೆ ಒಮ್ಮೆ ವಿ.ಕೆ.ಸಿಂಗ್ ಅವರ ಹೇಳಿಕೆಯೊಂದು ವಿವಾದವಾಗಿತ್ತು. ಏನೆಂದರೆ ವಿ.ಕೆ.ಸಿಂಗ್ ಅವರು ಸೈನ್ಯ ಕ್ಕೆ ಅಲಾಟ್ ಮಾಡಿದ ಹಣದಲ್ಲಿ ಸ್ವಲ್ಪ ಹಣವನ್ನು ಗೊತ್ತಾಗದಂತೆ ಬೇರೆ ಕಡೆಗೂ ಬಳಸುತ್ತಿದೆ ಎಂದು ಹೇಳಿದ್ದರು. ಅಂತಹ ಖರ್ಚುಗಳಲ್ಲಿ ಒಂದು ಯಾವುದೆಂದರೆ, ಸೈನ್ಯವೂ ಕಾಶ್ಮೀರದಲ್ಲಿ ಕ್ರಿಕೆಟ್ ಪಂದ್ಯಗಳನ್ನು ನಡೆಸುವುದು. ಜಮ್ಮುವಿನಿಂದ ಕಶ್ಮೀರಕ್ಕೆ ಹೋಗುವಾಗ ಮಧ್ಯೆ ಒಂದು ಜವಾಹರ್ ಟನೆಲ್ ಸಿಗುತ್ತದೆ. ಜಮ್ಮುವಿನಲ್ಲಿ ಅಷ್ಟೊಂದು ಕಾಣದ ಸೈನ್ಯ, ಈ ಟನೆಲ್ ದಾಟುತ್ತಿದ್ದಂತೆ ನೂರು ಮೀಟರ್ ಗೊಬ್ಬ ಸೈನಿಕ ಇರ್ತಾರೆ. ಹಾಗೆಯೇ ಶ್ರೀನಗರ ಹತ್ತಿರವಾಗುತ್ತಿದ್ದಂತೆ, ಬ್ಯಾಟ್ ಗಳ ಫ್ಯಾಕ್ಟರಿ ಕಾಣುತ್ತವೆ. ಏಕೆಂದರೆ ಕಾಶ್ಮೀರದ ಬ್ಯಾಟ್ ಗಳು ವಿಶ್ವ ಪ್ರಸಿದ್ಧ. ಗಲ್ಲಿ ಗಲ್ಲಿಯಲ್ಲೂ ಬ್ಯಾಟ್ ಗಳನ್ನು ತಯಾರಿಸಿ ಮಾರಲು ಜನರು ಕೂತಿರ್ತಾರೆ. ಹಾಗಾಗಿ ಅಲ್ಲಿನ ತರುಣರಿಗೆ ಕ್ರಿಕೆಟ್ ಹುಚ್ಚು ಇರಲೇಬೇಕೆಂದು ಖಾತ್ರಿ ಪಡಿಸಿಕೊಂಡ ನಮ್ಮ ಸೇನೆ ಗನ್ ಹಿಡಿಯುವ ಕೈಲಿ ಬ್ಯಾಟ್ ಬಂದರೆ, ಮಕ್ಕಳ ಭವಿಷ್ಯ ಉಜ್ವಲವಾಗುವುದು. ಅವರ ಗಮನ ಬೇರೆ ಕಡೆ ಹೋಗಬೇಕು ಎಂಬ ನಿಟ್ಟಿನಲ್ಲಿ ಸೇನೆ ಒಂದಷ್ಟು ಹಣವನ್ನು ಖರ್ಚು ಮಾಡುತ್ತಿದೆ.

ಜಮ್ಮು ಪ್ರೀಮಿಯರ್ ಲೀಗ್ ಮತ್ತು ಕಶ್ಮೀರ್ ಪ್ರೀಮಿಯರ್ ಲೀಗ್ ಅಂತಾ ಪ್ರತಿವರ್ಷ ಉತ್ಸವದಂತೆ ಪಂದ್ಯಗಳು ನಡೆಯುತ್ತವೆ. ಅನೇಕ ತರುಣರು ಭಾಗವಹಿಸುತ್ತಾರೆ. ಅಲ್ಲಿಂದ ಇವತ್ತು ಅನೇಕರು ಇಂಡಿಯನ್ ಟೀಮಿಗೆ ಸೆಲೆಕ್ಟ್ ಕೂಡ ಆಗ್ತಿದ್ದಾರೆ. ಇದರಿಂದಾದ ಪ್ರತಿಫಲನವೇನೆಂದರೆ, ಅನೇಕ ಅಲ್ಲಿನ ತರುಣರು ಆ ಜಾಗವನ್ನು ಬಿಟ್ಟು ಈ ಕಡೆ ಬರ್ತಿದ್ದಾರೆ. ಬುಲ್ಹನ್ ವನಿ ಬಗ್ಗೆ ಇತ್ತೀಚೆಗಷ್ಟೇ ಓದಿದ್ದೆ. ಆತನೊಬ್ಬ ಬಡ್ಡಿಂಗ್ ಕ್ರಿಕೆಟ್ ಸ್ಟಾರ್ ಆಗಿದ್ದನಂತೆ. ಆತ ಕ್ರಿಕೆಟ್ ಬಿಟ್ಟು, ಗನ್ ಹಿಡಿದದ್ದಕ್ಕೆ ಹೆಣವಾಗಿಬಿಟ್ಟ. ಕಾಶ್ಮೀರವನ್ನು ನಮ್ಮ ಭಾರತದೊಡನೆ ಗಟ್ಟಿಯಾಗಿ ಜೋಡಿಸಲು ನಮ್ಮ ಸೈನ್ಯ ಇವತ್ತು ಸ್ಪಷ್ಟವಾಗಿ ಅನೇಕ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿದೆ. ನಮ್ಮದು ಒಂದಿಷ್ಟು ಜವಾಬ್ದಾರಿಗಳಿವೆ. ಕಾಶ್ಮೀರದ ಪ್ರಾಂತ್ಯದೊಂದಿಗೆ ಒಂದು ಹೃದಯದ ಸಂಬಂಧ ಬೆಳೆಸಲು ಸಾಧ್ಯನಾ? ಎಂದು ನಾವು ಯೋಚಿಸಬೇಕಿದೆ. ನಾವೆಲ್ಲರೂ ಕಶ್ಮೀರವನ್ನು ನೋಡುವಾಗ ಎರಡು ರೀತಿಯಲ್ಲಿ ನೋಡುತ್ತೇವೆ. ಒಂದು ಕಶ್ಮೀರ ಭಾರತದಿಂದ ಪ್ರತ್ಯೇಕ ಎಂಬಂತೆ, ಮತ್ತೊಂದು ಪ್ರಾಣ ಬೇಕಿದ್ದರೆ ಕೊಡ್ತೀವಿ, ಜಮ್ಮು ಮತ್ತು ಕಶ್ಮೀರ ನಮ್ಮದೇ ಎಂಬಂತೆ. ಬಹಳಷ್ಟು ಜನರಿಗೆ ತಿಳಿದಿಲ್ಲದ ಸಂಗತಿ ಏನೆಂದರೆ, ಕಶ್ಮೀರದಲ್ಲಿ ೫, ೬ ಜಿಲ್ಲೆಗಳಲ್ಲಿ ಮಾತ್ರ ಭಯೋತ್ಪಾದಕರ ಗಲಾಟೆ ಇದೆಯೇ ಹೊರತು ಉಳಿದೆಡೆ ಶಾಂತವಾಗಿಯೇ ಇದೆ. ಇತ್ತೀಚೆಗೆ ಬುಲ್ಹನ್ ವನಿ ಸತ್ತ ನಂತರ ಅನಂತನಾಗ್ ನಲ್ಲಿ ಒಂದಿಷ್ಟು ಗಲಾಟೆಗಳಾದವು ಹೊರತು ಅಲ್ಲಿ ಕೂಡ ಅಂತಹ ತೊಂದರೆ ಇಲ್ಲ.

ಈ ೫, ೬ ಜಿಲ್ಲೆಗಳನ್ನು ಕಂಟ್ರೋಲ್ ಗೆ ತೆಗೆದುಕೊಂಡರೆ, ಕಶ್ಮಿರವನ್ನು ನಮ್ಮದಾಗಿಸಿಕೊಳ್ಳಬಹುದು. ಅದಕ್ಕೆ ಎರಡು ಮಾರ್ಗಗಳಿವೆ. ೧. ರಾಜ ತಾಂತ್ರಿಕ ಮಾರ್ಗ. ಪಾಕಿಸ್ತಾನವನ್ನು ತುಂಬಾ ಇಕ್ಕಟ್ಟಿನಲ್ಲಿ ಸಿಕ್ಕಿಸಿಬಿಟ್ಟರೆ, ಪಾಕಿಸ್ತಾನ ಆಗ ಕಾಶ್ಮಿರದ ಬಗ್ಗೆ ಮಾತಾಡೋಲ್ಲ. ೨. ಕಶ್ಮೀರದ ಜನರ ಪ್ರೀತಿಯನ್ನು ಗೆಲ್ಲುವುದು. ಸೈನ್ಯ ಪ್ರೀತಿಯನ್ನು ಗೆಲ್ಲುವುದನ್ನು ಮಾಡ್ತಿದೆ. ಈ ದೇಶದ ಪ್ರಧಾನ ಮಂತ್ರಿ ಒಂದು ಅದ್ಭುತವಾದ ಕಾಯಿನ್ `ಬಲೂಚಿಸ್ಥಾನ’ ವನ್ನು ಪಾಕಿಸ್ತಾನದ ಮುಂದಿಟ್ಟು ರಾಜ ತಾಂತ್ರಿಕವಾಗಿ ಪಾಕಿಸ್ತಾನವನ್ನು ಇಕ್ಕಟ್ಟಿಗೆ ಸಿಕ್ಕಿಸುತ್ತಿದ್ದಾರೆ. ನನಗೆ ೧೭ ಜನ ಸೈನಿಕರು ಮೊನ್ನೆ ತೀರಿಕೊಂಡರು ಎಂದು ಗೊತ್ತಾದಾಗ ಬಹಳ ಹಿಂಸೆಯಾದ ಕಾರಣವೇನೆಂದರೆ ಮೊನ್ನೆ ಸೈಲಾಲುದ್ದೀನ್ ಹೇಳಿಕೆ ಕೊಟ್ಟಿದ್ದ “ನೀವು ಬಲೂಚಿಸ್ತಾನ್ ಎಂದು ಹೇಳುತ್ತಿದ್ದೀರಿ. ನಾವು ನಿಮ್ಮ ಸೈನಿಕರ ಗ್ರೇವ್ ಯಾರ್ಡ್ ಮಾಡಿಬಿಡ್ತೀವಿ” ಎಂದಿದ್ದ. ಆತ ಹೇಳಿದ್ದು ಸತ್ಯ ಆಗಿಬಿಡುತ್ತಾ ಅನ್ನೋ ಕಾರಣಕ್ಕೆ ಸಂಕಟವಾಗಿಬಿಡ್ತು.

ಆದರೆ ನಮ್ಮ ಸೈನ್ಯ ೩ ಟೈರ್ ರಕ್ಷಣೆ ಮಾಡಿಕೊಂಡಿದೆ. ಒಂದು LOC ಬಳಿ, ಮತ್ತೊಂದು ಬಾರ್ಡರ್ ನಿಂದ ಒಬ್ಬನೇ ಒಬ್ಬ ಕೂಡ ನುಸುಳದಂತೆ, ಮೂರನೆಯದು ಒಳಗಿರುವ ಭಯೋತ್ಪಾದಕರನ್ನು ಪೂರ್ತಿ ನಾಶ ಮಾಡುವುದು.ಈ ಹಿಂದೆಯೆಲ್ಲಾ ಭಯೋತ್ಪಾದಕರನ್ನು ಕೊಂದಾಗ ಕಶ್ಮೀರದಲ್ಲಿ ಗಲಭೆಯಾಗುತ್ತಿತ್ತು. ಆಗೆಲ್ಲಾ ಸೈನ್ಯ ಸುಮ್ಮನಾಗಿಬಿಡುತ್ತಿತ್ತು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಈ ಪೂರ್ತಿ ನಾಶ ಮಾಡುವುದು ಎಂಬ ಹಿನ್ನೆಲೆಯಲ್ಲೇ ಬುಲ್ಹನ್ ವಾನಿ ಕೊಂದು, ಅಲ್ಲಿ ೨೦೦೦೦ ಜನ ಸೇರಿದ ನಂತರವೂ ಸೈನ್ಯ ೬೦, ೭೦ ದಿನಗಳ ಕಾಲ, ಯಾರ್ಯಾರು ಗಲಾಟೆ ಮಾಡ್ತಿದ್ದರೋ ಅವರನ್ನೆಲ್ಲಾ ಪೆಲೆಟ್ ಗನ್ ಗಳನ್ನು ಉಪಯೋಗಿಸಿ ಹಿಮ್ಮೆಟ್ಟಿಸಿದರು. ಈ ಮೂಲಕ ಭಾರತ ಪಾಕಿಸ್ತಾನಕ್ಕೆ ಇನ್ನು ಮುಂದೆ ತಾನು ಸುಮ್ಮನಿರೋಲ್ಲ ಎನ್ನುವ ಸ್ಪಷ್ಟ ಸಂದೇಶವನ್ನು ನೀಡಿತು. ಮತ್ತೆ ಇನ್ನೊಂದು ಯಾರ್ಯಾರು ಪ್ರತ್ಯೇಕತಾವಾದಿಗಳು ಇದ್ದಾರೋ, ಅವರಿಗೂ ಕೂಡ ಇನ್ನು ಮುಂದೆ ನಿಮಗೆ ಯಾವ ಸೌಲಭ್ಯಗಳನ್ನು ನೀಡುವುದಿಲ್ಲ ಎಂಬ ಸಂದೇಶ ನೀಡಿದೆ. ನೀವು ಸಾಮಾನ್ಯರಾಗಿ ಬದುಕಬೇಕಾದ ಅನಿವಾರ್ಯತೆ ಇದೆ ಅನ್ನೋದನ್ನು ಒತ್ತಿ ಹೇಳಿದೆ.

ಮೂರನೆಯದು, ಯಾವ ಮೆಹಬೂಬ ಮುಫ್ತಿ ಪ್ರತ್ಯೇಕತಾ ವಾದಿಗಳೊಡನೆ ನಿಂತು ಘೋಷಣೆ ಕೂಗ್ತಿದ್ದಳೋ, ಅವಳ ಮತ್ತು ರಾಜನಾಥ ಸಿಂಗ್ ಅವರ ಸಂದರ್ಶನ ಟಿವಿಯಲ್ಲಿ ಬರ್ತಿತ್ತು. ಇಬ್ಬರೂ ಅಕ್ಕ, ಪಕ್ಕ ಕುಳಿತಿದ್ದರು. ಪತ್ರಕರ್ತರು ಪೆಲೆಟ್ ಗನ್ ಉಪಯೋಗಿಸಿದರ ಬಗ್ಗೆ ಪ್ರಶ್ನೆ ಕೇಳ್ತಿದ್ದಾರೆ. ರಾಜನಾಥ ಸಿಂಗ್ ಪತ್ರಕರ್ತರನ್ನು ಸಮಾಧಾನ ಮಾಡ್ತಿದ್ದರು. ಮೆಹಬೂಬ ಮುಫ್ತಿಗೆ ತಡ್ಕೋಳ್ಳೋಕೆ ಆಗ್ತಿಲ್ಲ. ಆಕೆ ಹೇಳಿದಳು “ಸಾಯ್ತಿರೋದು ಹಾಲು ತರ್ಲಿಕ್ಕೆ, ಟೀ ತರ್ಲಿಕ್ಕೆ ಹೋದವರಲ್ಲ. ಕಲ್ಲೆಸೆಯಲಿಕ್ಕೆ ಬಂದ ತರುಣರು, ಅವರಿಗೆ ಏಟು ಬೀಳ್ತಿರೋದು ಸರಿಯಾಗಿಯೇ ಇದೆ” ಎಂದಳು. ಮೆಹಬೂಬ ಮುಫ್ತಿ ಆವೇಶದಿಂದ ಮಾತಾಡುತ್ತಿದ್ದರೆ, ಪಕ್ಕದಲ್ಲೇ ಕುಳಿತಿದ್ದ ರಾಜನಾಥ ಸಿಂಗ್, ಆಕೆಯ ಕೈಯನ್ನು ಮೆಲ್ಲಗೆ ತಟ್ಟುತ್ತಾ, ಸಮಾಧಾನದಿಂದಿರು ಎಂದು ಸೂಚಿಸುತ್ತಿದ್ದರು. ಯಾರೂ ಜೋರಾಗಿ ಮಾತಾಡಬೇಕೆಂದುಕೊಂಡಿದ್ದೇವೋ, ಅವರು ಸಮಾಧಾನವಾಗಿದ್ದರು, ಯಾರು ಸೈಲೆಂಟಾಗಿರಬೇಕಿತ್ತು ಅಂತಾ ಅಂದುಕೊಂಡಿದ್ದೇವೋ, ಆಕೆ ಜೋರಾಗಿ ಮಾತಾಡುತ್ತಿದ್ದಳು. ಈ ಈಕ್ವೇಷನ್ ಬದಲಾದದಕ್ಕೆ ಹಲವಾರು ಕಾರಣಗಳಿವೆ. ಮುಖ್ಯ ಕಾರಣ ಪಾಕಿಸ್ತಾನದಿಂದ ಹರಿದು ಬರುತ್ತಿದ್ದ ದೊಡ್ಡ ಮೊತ್ತದ ಹಣ ಕಡಿಮೆಯಾಗಿದೆ. ಅಮೇರಿಕಾದಿಂದ ಹೆಚ್ಚಿಗೆ ಪಾಕಿಸ್ತಾನಕ್ಕೆ ಬರುತ್ತಿದ್ದ ಹಣ ಈಗ ಕಡಿಮೆಯಾಗೋದರ ಹಿನ್ನೆಲೆಯಲ್ಲಿ ಭಾರತದ ಪ್ರಧಾನಿಯ ಕೈವಾಡವಿದೆ.

ಪಾಕಿಸ್ತಾನದ ಐಎಸ್ ಐ ಗೆ ಹಣ ಮತ್ತೊಂದು ಕಡೆಯಿಂದ ಬರೋದು ಖೋಟಾ ನೋಟುಗಳು ಮತ್ತು ನಾರ್ಕೋಟಿಕ್ಸ್ ಮಾರುವುದರಿಂದ. ಭಾರತದಲ್ಲಿ ಈಗಿನ ಪರಿಸ್ಥಿತಿ ಹೇಗಿದೆಯೆಂದರೆ ೩೦% ನೋಟುಗಳು ಖೋಟಾ ನೋಟುಗಳಿವೆ. ಆದರೆ ಸಮಾಧಾನದ ಸಂಗತಿಯೆಂದರೆ ಅವು ಅಷ್ಟಾಗಿ ಚಲಾವಣೆಯಲ್ಲಿಲ್ಲ. ಕಪ್ಪು ಹಣವಾಗಿ ರಾಜಕಾರಣಿಗಳ ಖಜಾನೆಯಲ್ಲಿವೆ. ಈಗಿನ ಪ್ರಧಾನಿ ಬಂದ ಮೇಲೆ ಈ ಖೋಟಾ ನೋಟುಗಳು ಚಲಾವಣೆಗೆ ಬರ್ತಾ ಇದ್ದ ಕಡೆ ಎಲ್ಲಾ ಬಿಗಿಗೊಳಿಸಿದ ಮೇಲೆ, ಪಾಕಿಸ್ತಾನಕ್ಕೆ ಸಂಕಟ ಶುರುವಾಗಿದೆ. ಮತ್ತೊಂದು ವಿಷಯವೇನೆಂದರೆ, ಈ ಬಾರಿಯ ಸ್ವಾತಂತ್ರೋತ್ಸವದ ಸಮಯದಲ್ಲಿ ಪ್ರಧಾನಿಯವರು ನಾವು ಬಲೂಚಿಸ್ತಾನಕ್ಕೆ ಸಪೋರ್ಟ್ ಮಾಡ್ತೀವಿ ಎಂದೊಡನೆ, ಬಲೂಚಿಸ್ತಾನದ ಅನೇಕ ಪ್ರದೇಶಗಳಲ್ಲಿ, ಮೋದಿಯವರ ಫೋಟೋ, ಭಾರತದ ಧ್ವಜ ಒಂದು ಕೈಯಲ್ಲಿ, ಮತ್ತೊಂದು ಕೈಯಲ್ಲಿ ಬಲೂಚಿಸ್ತಾನದ ಧ್ವಜ, ಬುಕ್ತಿಯ ಫೋಟೋ ಹಿಡಿದು ಅನೇಕರು ಪ್ರತಿಭಟನೆಗಳನ್ನು ಮಾಡಿದರಂತೆ. ಬಲೂಚಿಸ್ತಾನದ ಪೇಜ್ ಗಳು ಫೇಸ್ ಬುಕ್ಕಿನಲ್ಲಿವೆ. ದಯಮಾಡಿ ಎಲ್ಲರೂ ಆ ಪೇಜ್ ಅನ್ನು ಲೈಕ್ ಮಾಡಿ. ಅಲ್ಲಿನ ಪರಿಸ್ಥಿತಿ ಸಮಾಜದ ಪ್ರತಿಯೊಬ್ಬರಿಗೂ ಇದರಿಂದ ತಿಳಿಯುತ್ತದೆ. ಹಾಗೆಯೇ ಬಲೂಚಿಸ್ತಾನದಲ್ಲಾದ ಸಂಚಲನದ ಪರಿಣಾಮ ಮೊದಲೇ ಗಲಾಟೆ ಮಾಡ್ತಿದ್ದ ಗಿಲಿಗಿಟ್ ಬಾಲ್ಟಿಸ್ತಾನಕ್ಕೆ ಜೀವ ಬಂತು. ಅದಾದ ತಕ್ಷಣ POK ಹೇಳಿತು. ನಾವು ಕೂಡ ಪಾಕಿಸ್ತಾನಕ್ಕೆ ಹೋಗೋಲ್ಲ. ಯಾಕೆಂದರೆ ನಮ್ಮ ಪ್ರಧಾನಿ ಹೇಳಿದ್ದಾರೆ, ಇಲ್ಲಿಂದ ಒಬ್ಬ ಎಮ್ ಪಿ ಇನ್ನು ಮುಂದೆ ಭಾರತಕ್ಕೆ ಬರ್ತಾರೆ ಅಂತಾ. ಇಲ್ಲಿಂದ ನಾವು ಒಬ್ಬ ಎಮ್ ಪಿಯನ್ನು ಕೊಡ್ತೀವಿ ಅಂದ್ರು.

ಇವನೆಲ್ಲಾ ನೋಡಿದಾಗ ರಾಜತಾಂತ್ರಿಕ ನಡೆ ಹೇಗೆ ಪಾಕಿಸ್ತಾನದ ಮೇಲೆ ಪರಿಣಾಮ ಬೀರ್ತಿದೆ ಎಂದು ಅರ್ಥ ಮಾಡಿಕೊಳ್ಳಬಹುದು. ಪಾಕಿಸ್ತಾನ ಭಾರತವು ವಾಘಾ ಬಾರ್ಡರ್ ಮೂಲಕ ಆಫ್ಗಾನಿಸ್ತಾನದೊಡನೆ ವ್ಯಾವಹಾರಿಕ ಸಂಬಂಧ ಇಟ್ಟುಕೊಳ್ಳೋಕೆ ಆಗೋಲ್ಲ ಅಂತಾ ಹೇಳಿತು. ಆಗ ಅದಕ್ಕೆ ಆಫ್ಗಾನಿಸ್ತಾನ ಹಾಗಿದ್ದರೆ, ನಾವು ಪಾಕಿಸ್ತಾನದ ಸುತ್ತ ಇರುವ ನಮ್ಮ ಬಾರ್ಡರ್ ಗಳನ್ನು ಮುಚ್ಚಿಬಿಡ್ತೀವಿ ಅಂದರು. ಅದಕ್ಕೆ ಹೆದರಿದ ಪಾಕಿಸ್ತಾನ ತನ್ನ ಮಾತನ್ನು ವಾಪಾಸ್ಸು ತೆಗೆದುಕೊಳ್ತು. ಕಶ್ಮೀರಿಗಳು ಜಾಣರಾದ್ದರಿಂದ, ಎಲ್ಲಿ ಲಾಭವೋ, ಆ ಕಡೆಗೆ ಬಂದುಬಿಡುತ್ತಾರೆ. ಇ‍ಷ್ಟು ದಿವಸ ಜಗತ್ತು, ಪಾಕಿಸ್ತಾನದ ಮಾತು ಕೇಳುತ್ತಿದೆ ಎನ್ನುವ ಕಾರಣಕ್ಕೆ, ಅವರೊಂದಿಗಿದ್ದ ಕಶ್ಮೀರಿಗಳು, ಈಗ ನಿಧಾನವಾಗಿ ಭಾರತದ ಕಡೆಗೆ ಬರುತ್ತಿದ್ದಾರೆ. ಇದರಿಂದ ಅರ್ಥವಾಗುವುದೇನೆಂದರೆ, ನಾವು ಈಗಾಗಲೇ ಮಾನಸಿಕವಾಗಿ ಯುದ್ಧ ಗೆದ್ದಿದ್ದೇವೆ. ಕಶ್ಮೀರವನ್ನು ಪೂರ್ತಿಯಾಗಿ ಗೆಲ್ಲಲು ಇನ್ನೂ ಹೆಚ್ಚು ದಿನಗಳು ಬೇಕಾಗುವುದಿಲ್ಲ. ಅಂಥ ರಾಜ ತಾಂತ್ರಿಕ ನಡೆಯನ್ನು ಇಡುವಲ್ಲಿ ನಮ್ಮ ಪ್ರಧಾನಿಯವರು ಗೆದ್ದಿದ್ದಾರೆ.

ಹಾಗೆಯೇ ಸೇನೆ ಕೂಡ ಅಲ್ಲಿ ಆಪರೇಷನ್ ಸದ್ಭಾವನಾ ಮುಂತಾದ ಯೋಜನೆಗಳಿಂದ ಅಲ್ಲಿನ ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗುತ್ತಿದೆ. ೨೦೧೪ ರಲ್ಲಿ ಜವಾಹರ್ ಟನೆಲ್ ನಿಂದ ಮುಂದಕ್ಕೆ ಸ್ನೋ ಸುನಾಮಿಯಾಗಿ ಸುಮಾರು ೧.೫ ಲಕ್ಷ ಜನ ನಿರಾಶ್ರಿತರಾಗಿಬಿಟ್ಟಿದ್ದರು. ಆಗ ಅಲ್ಲಿದ್ದ ಸೇನಾಧಿಕಾರಿ, ಒಬ್ಬನೇ ಒಬ್ಬ ವ್ಯಕ್ತಿ ತನ್ನ ಮನೆಗೆ ವಾಪಾಸ್ಸು ಹೋಗುವವರೆಗೂ, ತನ್ನ ಸೈನಿಕರು ಡೇರೆಗೆ ವಾಪಾಸ್ಸಾಗಲ್ಲ ಅಂತಾ ಹೇಳಿದ್ದರು. ಇಡೀ ಪ್ರಪಂಚ, ಅಲ್ಲಿ ಫ್ಲಡ್ ಆದಾಗ, ಸೈನಿಕರು ಜನರಿಗೆ ಮಾಡಿದಂತಹ ಸಹಾಯವನ್ನು ಕಣ್ಣಾರೆ ನೋಡಿದ್ದಾರೆ. ಸೈನಿಕರ ಸಾಹಸಕ್ಕೆ ಹೆಮ್ಮೆ ಪಟ್ಟಿದ್ದಾರೆ. ಹಾಗಾಗಿ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಅದನ್ನು ಕಶ್ಮೀರಿಗಳು ಒಪ್ಪಿ, ಈ ಕಡೆ ಬರಲು ಇನ್ನೂ ಹೆಚ್ಚು ದಿನಗಳಿಲ್ಲ ಎಂದು ಹೇಳಬಹುದು.

18 ಟಿಪ್ಪಣಿಗಳು Post a comment
 1. Mohan
  ಸೆಪ್ಟೆಂ 23 2016

  ತುಂಬ ಚೆನ್ನಾಗಿದೆ

  ಉತ್ತರ
 2. nithish
  ಸೆಪ್ಟೆಂ 23 2016

  really thank you so much for information sir, & really proud to be indian & salute for modiji

  ಉತ್ತರ
 3. Veenayalamalli
  ಸೆಪ್ಟೆಂ 23 2016

  Hegondu lekhana namma Jana adrallu younger generation odle beku. BN Yalamalli yavaru anuvaada (eng) madi face booklli haakuttare.avaru nimma dodda fan. Jai hind.

  ಉತ್ತರ
 4. ಸೆಪ್ಟೆಂ 23 2016

  ಸಲಾಂ ಬಾವಾ,ನಾಗಶೆಟ್ಟಿಯೇ ಮೊದಲಾದ ಬುದ್ದಿವಂತರ ಬಾಯಿಗೆ ಬೆಣೆ ಹೊಡೆದಂತಹಾ ಲೇಖನ.

  ಉತ್ತರ
 5. ಸೆಪ್ಟೆಂ 23 2016

  siru..do we have the recording of the session please?

  ಉತ್ತರ
 6. Pradeep
  ಸೆಪ್ಟೆಂ 23 2016

  when this guy will become mature.. feels like school kid written on excursion. And any serious matter he narrates in Panchatantra Story style. He is just a story teller nothing more. People who love his speech actually enjoys stories and feel happy 🙂 i.e support behind him.

  His one of speech I saw in youtube: where he says:
  “ಒಬ್ಬ ಸ್ವಾಮೀಜಿ ಮೀಟ್ ಮಾಡಿ , ಭಾರತ ವಿಶ್ವ ಗುರು ಯಾವಾಗ ಆಗುತ್ತೆ ಅಂತ ಕೇಳ್ದೆ ?

  ಅದಕ್ಕೆ ಅವರು ಒಂದು ಕಾಲಿ ಪೇಪರ್ ಕೊಟ್ರು , ಹಾಗೆ ನೋಡ್ತಾ ಅದ್ರಲ್ಲಿ ಅಕ್ಷರ ಮೂಡಿತು.. etc etc”

  LOL,

  In Single sentence he downgraded some real Hindu represent to Magician.

  his comedies never end!

  but serious part is instead of strengthening, he will dilute the environment by his story telling habit.

  (This is my observation from many years, not to hate any one)

  ಉತ್ತರ
  • ಸಾಹಿತ್ಯ ಅಭಿಮಾನಿ
   ಸೆಪ್ಟೆಂ 26 2016

   “He is just a story teller nothing more. People who love his speech actually enjoys stories and feel happy🙂 i.e support behind him.”

   Well now think in this way. Doesn’t your observation on Mr.Chakravarti tells more about People’s mindset. That Indian people like Stories or they like to listen anything a story format. Probably that is the reason Ramayana,Mahabharatha still attracts this land.

   ಉತ್ತರ
   • Pradeep
    ಸೆಪ್ಟೆಂ 27 2016

    I Say the crowed following his speech as “Anything in Story Format”. And Another person Mr.Rohit Chakratheertha also spreading junk in same format. his articles can serve as source for people with low absorption capacity and kids. But I feel sorry for those young adults reading/following him.

    I believe in reading original content and having our own opinion, instead absorbing others stupid thoughts and spoiling originality within us.

    ಉತ್ತರ
    • ಸಾಹಿತ್ಯ ಅಭಿಮಾನಿ
     ಸೆಪ್ಟೆಂ 27 2016

     So you believe that, whatever your doing is matured and correct approach and everyone should follow that? Don’t you think life becomes too boring if everyone thinks and does things alike?

     And what do you mean by Original Content?

     ಉತ್ತರ
     • Pradeep
      ಸೆಪ್ಟೆಂ 28 2016

      What is said “Everyone think alike” will happen when ppl blindly absorb someone else opinion. That is what these Fans, followers do right.

      “Sahithya Abhimani” Right, I will ask you, there is a difference between Reading Karanth’s work and coming to conclusion and by hearing someone opinion and believing you also feel same. I said original content in this context.

      And

      I never said whatever I am doing is correct 🙂 and the discussion is deviated from what it was originally and lets stop.

      I never revisit article for comment alerts (b/c whenever I do, I see unhealthy comments), but your comments made me to re-comment. thx.

      ಉತ್ತರ
      • ಸಾಹಿತ್ಯ ಅಭಿಮಾನಿ
       ಸೆಪ್ಟೆಂ 28 2016

       I thought of stopping. But couldn’t stop myself. Sorry 🙂

       >> “Everyone think alike” will happen when ppl blindly absorb someone else opinion. That is what these Fans, followers do right.<<

       If we look things practically, Great leaders had thousands of Fan following. For example Sardar Patel was follower of Gandhiji. But he had his own working style. Netaji was follower of Gandhiji initially later he rose to almost equal to Ganhiji.

       What I am trying to say is, being of fan of someone isn't bad or being Leader isn't crime also. what matters is, we shouldn't loose our thinking capacity and take things ahead in our own way.

       I rest my case 🙂

       ಉತ್ತರ
       • Pradeep
        ಸೆಪ್ಟೆಂ 28 2016

        I agree to Last line. I felt that is what missing in that crowd and commented.
        connect if possible – twtr- @pradeeph

        ಉತ್ತರ
 7. Reblogged this on ಕಲ್ಲಾರೆಗುರುವಿನ ಮನದಾಳದಲ್ಲಿ… and commented:
  Beautiful Thoughts ಕಾಶ್ಮೀರದ ಬಗೆಗಿನ ನಮ್ಮ ಆಲೋಚನೆಗಳನ್ನು ಒಮ್ಮೆ ಪರಾಮರ್ಶಿಸುವಂತೆ ಮಾಡುವ ಬರಹ ಇದು.

  ಉತ್ತರ
 8. Jeevan Habbu
  ಸೆಪ್ಟೆಂ 25 2016

  Very nice.thanks

  ಉತ್ತರ
 9. ಆಕ್ಟೋ 19 2016

  whav great sir

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments