ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 25, 2016

ಮದ್ದರೆಯದಿದ್ದರೆ ಈ ಮಾವೋವ್ಯಾಧಿ ನಿದ್ದೆಗೆಡಿಸಲಿದೆ ಎಚ್ಚರ!

‍ನಿಲುಮೆ ಮೂಲಕ

– ರೋಹಿತ್ ಚಕ್ರತೀರ್ಥ

naxals-1457757541ಎರಡು ಸುದ್ದಿಗಳಿವೆ. ಒಂದು – ಉರಿ ಸೇನಾನೆಲೆಯ ಮೇಲೆ ನಾಲ್ಕು ಮಂದಿ ಮುಸ್ಲಿಂ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 17 ಸೈನಿಕರು ಹತರಾಗಿದ್ದಾರೆ. ಎರಡು – ಭಾರತದ ನಕ್ಸಲ್ ಉಗ್ರರು ಜಗತ್ತಿನ ಭಯೋತ್ಪಾದನೆಯ ಪಟ್ಟಿಯಲ್ಲಿ ಕಂಚಿನ ಪದಕವನ್ನು ಜಸ್ಟ್ ಮಿಸ್ ಮಾಡಿಕೊಂಡು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಇವೆರಡರಲ್ಲಿ, ನಕ್ಸಲರ ಸಮಸ್ಯೆಯೇ ದೊಡ್ಡದು ಅನಿಸಿದ್ದರಿಂದ ಅದನ್ನು ಈ ವಾರದ ಅಂಕಣಕ್ಕೆ ಆಯ್ದುಕೊಂಡಿದ್ದೇನೆ. ಯಾಕೆಂದರೆ ಹೊರಗಿನ ಶತ್ರುಗಳನ್ನು ಪ್ರತಿದಾಳಿ ಮಾಡಿಯೋ ಯುದ್ಧ ಘೊಷಿಸಿಯೋ ತಹಬದಿಗೆ ತರಬಹುದೆನ್ನೋಣ; ಆದರೆ, ತಾಯ್ನಾಡಿನ ಒಳಗೇ ಇದ್ದುಕೊಂಡು ಒರಲೆಯಂತೆ ದೇಶವನ್ನು ಕೊರೆದು ಪುಡಿಗುಟ್ಟುವ ಆಂತರಿಕ ಶತ್ರುಗಳನ್ನು ಬಗ್ಗುಬಡಿಯುವುದು ಹೇಗೆ? 2015ರಲ್ಲಿ ಭಾರತದಲ್ಲಿ ನಡೆದ 791 ಭಯೋತ್ಪಾದನಾ ಕೃತ್ಯಗಳಲ್ಲಿ 43% ಅನ್ನು ನಕ್ಸಲೈಟ್ ಸಂಘಟನೆಗಳೇ ಮಾಡಿವೆ ಎಂದು ಅಂತಾರಾಷ್ಟ್ರೀಯ ವರದಿಯೊಂದು ಹೇಳುತ್ತಿದೆ. ಒಂದೇ ವರ್ಷದಲ್ಲಿ ಇವರು ನಡೆಸಿರುವ ದಾಳಿಗಳು 343; ಇವರ ಅಟ್ಟಹಾಸಕ್ಕೆ ಬಲಿಯಾಗಿ ಶವವಾಗಿ ಮಲಗಿದ ಅಮಾಯಕರ ಸಂಖ್ಯೆ 176. 2010ರಿಂದ 2015ರವರೆಗಿನ ಅವಧಿಯಲ್ಲಿ ದೇಶದೊಳಗೆ ನಡೆದ ಭಯೋತ್ಪಾದನಾ ಕೃತ್ಯಗಳಲ್ಲಿ 2162 ನಾಗರಿಕರು, 802 ಭದ್ರತಾ ಸಿಬ್ಬಂದಿ ಹತರಾಗಿದ್ದಾರೆಂದು ಕೇಂದ್ರದ ಗೃಹಸಚಿವಾಲಯದ ವರದಿ ಹೇಳುತ್ತಿದೆ. ಜಗತ್ತಿನಲ್ಲಿ ತಾಲಿಬಾನ್, ಐಸಿಸ್ ಮತ್ತು ಬೊಕೋ ಹರಾಮ್ ಎಂಬ ಉಗ್ರಗಾಮಿ ಸಂಘಟನೆಗಳ ನಂತರದ ಸ್ಥಾನವನ್ನು ಭಾರತದ ನಕ್ಸಲ್ ಚಳವಳಿ ತನ್ನ ಮುಡಿಗೇರಿಸಿಕೊಂಡಿದೆ. ಭಾರತ ಪ್ರಪಂಚದೆದುರು ತಲೆ ತಗ್ಗಿಸುವಂಥ ವಿಚಾರವಿದು. ಕರ್ನಾಟಕದ ಸಂದರ್ಭದಲ್ಲಿ ನಕ್ಸಲೈಟ್ ಚಳವಳಿಯ ನೆಲೆ-ಬೆಲೆಗಳೇನು ಎಂಬುದನ್ನು ವಿಮರ್ಶಿಸುವುದೇ ಪ್ರಸ್ತುತ ಲೇಖನದ ಉದ್ದೇಶ.

ಕರ್ನಾಟಕದಲ್ಲಿ ನಕ್ಸಲ್ ಚಳವಳಿಗೆ 32 ವರ್ಷಗಳ ದೀರ್ಘ ಇತಿಹಾಸವಿದೆ. 1984-85ರ ಸುಮಾರಿಗೆ ಪ್ರಗತಿಪರ ವಿದ್ಯಾರ್ಥಿ ಕೇಂದ್ರ, ಪ್ರಗತಿಪರ ಯುವ ಕೇಂದ್ರ ಎಂಬ ಹೆಸರಿನಲ್ಲಿ ಬೀಜಾಂಕುರವಾದ ಈ ಕಳೆ 1989ರ ಹೊತ್ತಿಗೆ ಹುಲುಸಾಗಿ ಬೆಳೆಯಿತು. ರಾಜ್ಯದ ಕೆಲವು ಕಾಲೇಜು, ಯೂನಿವರ್ಸಿಟಿಗಳಲ್ಲಿ ಬೇರುಬಿಟ್ಟು ಕೂತಿದ್ದ ಪಟ್ಟಭದ್ರ ಹಿತಾಸಕ್ತಿಗಳು ಸಾಮಾಜಿಕ ನ್ಯಾಯದ ಹೆಸರಲ್ಲಿ ನಕ್ಸಲ್ ಹೋರಾಟದ ಕೆಂಬಾವುಟವನ್ನು ಈ ರಾಜ್ಯದ ನೆಲಕ್ಕೆ ತಂದು ನೆಟ್ಟವು. ಅದೇ ಹೊತ್ತಿನಲ್ಲಿ ಬಂಜಗರೆ ಜಯಪ್ರಕಾಶ್ ಎಂಬ ಬುದ್ಧಿಜೀವಿ, ಸಿರಿಮನೆ ನಾಗರಾಜ್ ಎಂಬ ಉಗ್ರವಾದಿ ಹೋರಾಟಗಾರನ ಜೊತೆಗೂಡಿ ಕರ್ನಾಟಕ ವಿಮೋಚನಾ ರಂಗ (ಕವಿರಂ) ಎಂಬ ವೇದಿಕೆಯನ್ನು ಸೃಷ್ಟಿಸಿಕೊಂಡರು. ಮಹಿಳಾ ಜಾಗೃತಿ ಎಂದು ಅದಕ್ಕೊಂದು ಬಾಲಂಗೋಚಿಯೂ ಹುಟ್ಟಿಕೊಂಡಿತು. ಬಡವರ ಹೊಟ್ಟೆಗೆ ಬೆಂಕಿ ಸುರಿಯುತ್ತಿದೆಯೆಂಬ ಕಾರಣ ಮುಂದಿಟ್ಟು ಬೀದರ್ ಜಿಲ್ಲೆಯಲ್ಲಿ ಒಂದು ಕಂಪೆನಿಯನ್ನು ಮುಚ್ಚಿಸುವುದರಲ್ಲಿ ಯಶಸ್ವಿಯಾದ್ದರಿಂದ ಕವಿರಂ, ಆಂಧ್ರದ ಪೀಪಲ್ಸ್ ವಾರ್ ಗ್ರೂಪ್ ಎಂಬ ಮಾವೋವಾದಿ ಭಯೋತ್ಪಾದಕರ ಸಂಪರ್ಕಕ್ಕೆ ಬಂತು. ಹೋರಾಟದ ಬಾವುಟ, ಬ್ಯಾನರ್‍ಗಳನ್ನು ಬಿಟ್ಟು ಕವಿರಂ ಹೋರಾಟಗಾರರು ಕೈಗೆ ಕತ್ತಿ, ಬಂದೂಕುಗಳನ್ನು ಎತ್ತಿಕೊಂಡರು. ಸಹಜವಾಗಿಯೇ ಪೊಲೀಸ್ ದಫ್ತರಗಳ “ಬೇಕಾಗಿದ್ದಾರೆ” ಪಟ್ಟಿಯಲ್ಲಿ ಕಾಣಿಸಿಕೊಂಡರು. ಅದಾದ ಮೇಲೆ ಆ ಹೋರಾಟಗಾರರಿಗೆ ಕವಿರಂ ಬ್ಯಾನರಿನಡಿಯಲ್ಲಿ ಮಿಕ್ಕುಳಿದ ಹೋರಾಟಗಳನ್ನು ರೂಪಿಸುವುದು ಕಷ್ಟವಾಯಿತು. ಆಗುವುದಿದ್ದರೆ ರಕ್ತಕ್ರಾಂತಿಯೇ ಆಗಬೇಕೆಂದು ಬಿಸಿಯುಸಿರು ಬಿಡುತ್ತ ಓಡಾಡುತ್ತಿದ್ದ; ಸಿದ್ಧಾಂತಗಳ ಅಫೀಮು ಕುಡಿದಿದ್ದ ತಲೆತಿರುಕ ಚಳವಳಿಗಾರರೆಲ್ಲ ಬಾಬಾಬುಡನ್‍ಗಿರಿಯ ದತ್ತಪೀಠದ ವಿವಾದವನ್ನು ಮುಂದಿಟ್ಟುಕೊಂಡು ಹೊಸದಾಗಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಹುಟ್ಟುಹಾಕಿದರು. ಹೆಸರಲ್ಲಿ ಸೌಹಾರ್ದವಿದೆ ಎನ್ನುವುದೊಂದು ಬಿಟ್ಟರೆ ಈ ಸಂಘಟನೆ ಇದುವರೆಗೆ ನಡೆಸಿರುವುದೆಲ್ಲ ಕೋಮುಸೌಹಾರ್ದ ಕದಡುವ ಕಾರ್ಯಕ್ರಮಗಳನ್ನೇ!

1994-95ರ ಸುಮಾರಿಗೆ ಕರ್ನಾಟಕದಲ್ಲಿ ನಕ್ಸಲ್ ಚಳವಳಿ ಲಾರ್ವಾ ಸ್ಥಿತಿಯಿಂದ ಮುಂದುವರೆದು ಸ್ಪಷ್ಟವಾದ ಕೈಕಾಲು-ರೆಕ್ಕೆಗಳನ್ನು ಮೂಡಿಸಿಕೊಂಡಿತು. ಕಲ್ಕುಳಿ ವಿಠಲ ಹೆಗ್ಡೆ ಮತ್ತು ಸಿರಿಮನೆ ನಾಗರಾಜ ಕೊಪ್ಪ ತಾಲೂಕಿನಲ್ಲಿ ಶುರುವಾಗಬೇಕಿದ್ದ ಮಿನಿ ಡ್ಯಾಂ ಒಂದಕ್ಕೆ ಕಲ್ಲುಹಾಕುವ ಮೂಲಕ ಚಳವಳಿಗೆ ಮಲೆನಾಡಿನಲ್ಲಿ ಅಧಿಕೃತ ಚಾಲನೆ ಕೊಟ್ಟರು. ಮುಂದೆ ಅದು ತುಂಗಾಮೂಲ ಉಳಿಸಿ ಎಂದೂ ಕುದುರೆಮುಖ ರಾಷ್ಟ್ರೀಯ ಉದ್ಯಾನ ವಿರೋಧಿ ಸಮಿತಿ ಎಂದೂ ನಾನಾ ಮುಖವಾಡಗಳನ್ನು ತೊಡುತ್ತಾ ಮುಂದುವರಿಯಿತು. ಹಳ್ಳಿಯ ಜನರಿಗೆ ತಮ್ಮ ಸಂಸ್ಕೃತಿ-ಆಚರಣೆಗಳ ಬಗ್ಗೆ ಹೇವರಿಕೆ ಹುಟ್ಟುವಂತೆ ಮಾಡುವುದು, ತಾವು ಜೀತದಾಳುಗಳಾಗಿ ಬದುಕುತ್ತಿದ್ದೇವೆಂದು ನಂಬಿಸಿ ಊರಿನ ಜನರನ್ನು ತಕ್ಕಮಟ್ಟಿಗೆ ಆರ್ಥಿಕ ಸ್ಥಿತಿವಂತರಾದವರ ವಿರುದ್ಧ ಎತ್ತಿಕಟ್ಟುವುದು, ಸಾಮಾಜಿಕ ನ್ಯಾಯದ ಹುಯಿಲೆಬ್ಬಿಸುವುದು, ಯಾವುದೇ ಸರಕಾರೀ ಒತ್ತುವರಿಯನ್ನು ವಿರೋಧಿಸುವುದು, ಸರಕಾರೀ ಕಚೇರಿಗಳಿಗೆ ಬಾಂಬಿಡುವುದು ಅಥವಾ ಅಧಿಕಾರಿಗಳನ್ನು ಕೊಲ್ಲುವ ಮೂಲಕ ಭೀತಿ ಸೃಷ್ಟಿಸಿ ಕೆಲಸ ಪೂರೈಸಿಕೊಳ್ಳುವುದು – ಹೀಗೆ ನಕ್ಸಲ್ ಚಳವಳಿ ಪ್ರಾರಂಭವಾದದ್ದೇ ಹಿಂಸಾ ಮಾರ್ಗದ ಮೂಲಕ. ಗಾಂಧಿಯ ಸೌಮ್ಯವಾದೀ ಹೋರಾಟಗಳಾಗಲೀ ಸ್ವತಂತ್ರ ಭಾರತದ ಪ್ರಜಾಸತ್ತಾತ್ಮಕ ವಿಧಾನಗಳಾಗಲೀ ನಕ್ಸಲ್ ಚಳವಳಿಗೆ ಸಮ್ಮತವಾಗಿರಲಿಲ್ಲ. ದೆಹಲಿಯ ಜವಹರ್‍ಲಾಲ್ ನೆಹರೂ ವಿವಿಯಲ್ಲಿ ಕಮ್ಯುನಿಸ್ಟ್ ಚಿಂತನೆಗಳ ಮೂಲಕ ಭಾರತವನ್ನು ಅರೆಬರೆಯಾಗಿ ಅರ್ಥ ಮಾಡಿಕೊಂಡು, ಆಂಧ್ರದ ಸುಡುಸುಡು ನೆಲದಲ್ಲಿ ಬಂದೂಕಿನ ತರಬೇತಿ ಪಡೆದು, ಕರ್ನಾಟಕದ ಮಲೆನಾಡನ್ನು ತಮ್ಮ ಕಾರ್ಯಕ್ಷೇತ್ರ ಮಾಡಿಕೊಂಡು, ತಾವೇ ರಾಬಿನ್ ಹುಡ್ಡುಗಳೆಂಬ ಭ್ರಮೆಯಲ್ಲಿದ್ದ ಸಾಕೇತ್ ರಾಜನಂಥ ನಕ್ಸಲೈಟುಗಳು ರಾಜ್ಯದಲ್ಲಿ ಅರಾಜಕತೆಯನ್ನು ಹರಡಲು ಇನ್ನಿಲ್ಲದ ಪ್ರಯತ್ನ ಪಟ್ಟರು. 2005ರ ಫೆಬ್ರವರಿಯಲ್ಲಿ ಚಿಕ್ಕಮಗಳೂರಿನ ಕಾನನದೊಳಗೆ ಪೊಲೀಸರು ಸಾಕೇತ್‍ನನ್ನು ಹೊಡೆದುರುಳಿಸುವ ಮೂಲಕ ನಕ್ಸಲ್ ಚಳವಳಿಯ ಒಂದು ಅಧ್ಯಾಯ ಮುಕ್ತಾಯವಾಯಿತು.

ಎಲ್ಲರೂ ಮರೆಯುವ ಅಂಶವೊಂದಿದೆ. ನಕ್ಸಲೈಟ್ ಚಳವಳಿ ಎಂಬುದು ಅರಣ್ಯದಲ್ಲಿ ಬಂದೂಕು ಹೊತ್ತು ತಿರುಗುವ, ಆಹಾರಕ್ಕಾಗಿ ಪರದಾಡುವ ಮೂರ್ಖ ಆದರ್ಶವಾದಿಗಳ ಕತೆ ಮಾತ್ರ ಅಲ್ಲ; ಅದಕ್ಕೆ ಇನ್ನೊಂದು ಮುಖವೂ ಇದೆ. ನಗರದಲ್ಲಿ ರಾಜಮಹಾರಾಜರ ವೈಭೋಗದಲ್ಲಿ ಬದುಕುವ, ಕಾಲೇಜುಗಳಲ್ಲಿ ತಲೆಬುಡವಿಲ್ಲದ ಸಿದ್ಧಾಂತಗಳನ್ನು ಮಕ್ಕಳ ತಲೆಯಲ್ಲಿ ತುಂಬುತ್ತ ಅವರ ಬದುಕಿನ ಕೀಲಿ ತಪ್ಪಿಸಿ ವಿಕೃತಾನಂದ ಅನುಭವಿಸುವ ಬುದ್ಧಿಜೀವಿಗಳು ಮತ್ತು ಪತ್ರಕರ್ತರು ನಕ್ಸಲಿಸಂನ ಇನ್ನರ್ಧ ಮುಖ. ಕಾಡಿನ ಹೋರಾಟಗಾರರು ಮತ್ತು ನಾಡಿನ ಈ ಬುದ್ಧಿವಂತರು ಜೊತೆಯಾದಾಗಲೇ ನಕ್ಸಲ್ ಎಂಬ ಚಿತ್ರ ಸಂಪೂರ್ಣ. ಈ ಪ್ರಾಧ್ಯಾಪಕರು ಮತ್ತು ಪತ್ರಕರ್ತರು ನಾಡಿನಲ್ಲಿ ನಿರಂತರವಾಗಿ ಬರೆಯುತ್ತ, ಮಾತಾಡುತ್ತ, ನಕ್ಸಲ್ ಉಗ್ರರಿಗೆ ಹೋರಾಟಗಾರರ ಇಮೇಜ್ ಕೊಡುವ ಪ್ರಯತ್ನ ಮಾಡಿದರು. ಅವರೆಲ್ಲ ಸ್ವಾತಂತ್ರ್ಯಕ್ಕಾಗಿ ಕಾದಾಡುವವರು, ಸಾಮಾಜಿಕ ನ್ಯಾಯಕ್ಕಾಗಿ ಬಲಿದಾನಕ್ಕೂ ಸಿದ್ದವಿರುವ ತ್ಯಾಗಜೀವಿಗಳು, ಜೀವನದಲ್ಲಿ ಮಹತ್ತರವಾದದ್ದೇನನ್ನೋ ಸಾಧಿಸಲು ಹೊರಟ ಛಲದಂಕಮಲ್ಲರು ಎಂಬ ಗುಣಗಳನ್ನು ಆರೋಪಿಸಿ ಉಗ್ರರನ್ನು ಹೀರೋಗಳಾಗಿ ಬಿಂಬಿಸುವ ಯತ್ನ ನಡೆಯಿತು. ಈ ಪ್ರಯತ್ನಕ್ಕೆ ಕ್ಲೈಮಾಕ್ಸ್ ಎಂಬಂತೆ 2013ರಲ್ಲಿ ರಾಜ್ಯ ಸರಕಾರವೇ ಮುಂದಾಗಿ ನಕ್ಸಲೈಟುಗಳು ಶಸ್ತ್ರಸಂನ್ಯಾಸ ಮಾಡಿ ಶರಣಾಗತರಾದರೆ ಅವರಿಗೆಲ್ಲ ಮೂರು ಲಕ್ಷ ರುಪಾಯಿ ಕೊಡುವ ಪ್ಯಾಕೇಜ್ ಡೀಲ್‍ಗೆ ಇಳಿಯಿತು! ಯೋಜನೆಯತ್ತ ನಕ್ಸಲರು ಆಕರ್ಷಿತರಾಗಲಿಲ್ಲ ಎಂಬ ಕಾರಣಕ್ಕೆ ಮರುವರ್ಷ ಗೃಹಮಂತ್ರಿ ಜಾರ್ಜ್, ಸಂಭಾವನೆಯನ್ನು ಐದು ಲಕ್ಷ ರುಪಾಯಿಗೆ ಹೆಚ್ಚಿಸಿದರು! ಒಬ್ಬೊಬ್ಬ ನಕ್ಸಲೈಟು ಕೊಡುವ ಎಕೆ-47 ಬಂದೂಕಿಗೂ 15,000ದ ಬದಲು ದುಪ್ಪಟ್ಟು – 30,000 ರುಪಾಯಿ ಕೊಡುತ್ತೇನೆಂದು ವಾಗ್ದಾನ ಮಾಡಿದರು! ಪಾತಕಿಗಳನ್ನು ಹಿಡಿದು ಜೈಲಿಗಟ್ಟುವ ಬದಲು ದುಡ್ಡು ಕೊಟ್ಟು ಸಾಕುವ “ನಕ್ಸಲ್ ಭಾಗ್ಯ” ಯೋಜನೆಯನ್ನು ಸರಕಾರ ರೂಪಿಸಿಬಿಟ್ಟಿತ್ತು.

ಇದಕ್ಕೊಂದು ಕುತೂಹಲಕಾರಿ ಹಿನ್ನೆಲೆ ಕತೆಯಿದೆ. ಹಿಂದಿನ ಸರಕಾರದಲ್ಲಿ ಮುಖ್ಯಮಂತ್ರಿಗಳಾಗಿದ್ದ ಸದಾನಂದ ಗೌಡರು 2011ರ ಸೆಪ್ಟೆಂಬರ್‍ನಲ್ಲಿ ಖಡಕ್ ಪೊಲೀಸ್ ಅಧಿಕಾರಿಯೆಂದೇ ಹೆಸರಾಗಿದ್ದ ಆಲೋಕ್ ಕುಮಾರ್‍ರನ್ನು ರಾಜ್ಯದ ನಕ್ಸಲ್ ನಿಗ್ರಹ ಪಡೆಯ ಆಯುಕ್ತರಾಗಿ ನಿಯೋಜಿಸಿದರು. ಈ ಹೊಸ ಜವಾಬ್ದಾರಿಯನ್ನು ವಹಿಸಿಕೊಂಡ ಕೆಲವೇ ವಾರಗಳಲ್ಲಿ ಆಲೋಕರ ಚಾಕಚಕ್ಯತೆಯ ಅನುಭವ ಮಲೆನಾಡಿನ ನಕ್ಸಲರಿಗಾಗಿಬಿಟ್ಟಿತ್ತು. ಅದುವರೆಗೆ ಹೆಬ್ರಿ, ಕಾರ್ಕಳ, ಶಂಕರನಾರಾಯಣ, ಅಮಾಸೆಬೈಲು, ಮಡಿಕೇರಿ, ಸಕಲೇಶಪುರ, ಸುಳ್ಯ ಮೊದಲಾದ ನಕ್ಸಲ್‍ಪೀಡಿತ ಪ್ರದೇಶಗಳಲ್ಲಿ ರಾತ್ರಿ ಕೂಂಬಿಂಗ್ ಪದ್ಧತಿಯಿರಲಿಲ್ಲ. ಬೆಳಗ್ಗೆ ಹೊರಟರೆ ಕಾಡೆಲ್ಲ ಅಲೆದಾಡಿಕೊಂಡು ಸಂಜೆ ಹೊತ್ತಿಗೆ ವಾಪಸು ಹೋಗುವ ಮೂಲಕ ಕೂಂಬಿಂಗ್‍ ಅನ್ನು ಕಾಟಾಚಾರಕ್ಕಷ್ಟೇ ನಡೆಸಲಾಗುತ್ತಿತ್ತು. ಆದರೆ ಆಲೋಕ್ ಕುಮಾರ್ ಅಧಿಕಾರ ವಹಿಸಿಕೊಂಡಮೇಲೆ ರಾತ್ರಿಪಾಳಿಯಲ್ಲಿ ಪೊಲೀಸರು ಕಾಡಿನಲ್ಲಿ ನಕ್ಸಲರನ್ನು ಬೇಟೆಯಾಡುವ ಕಾರ್ಯಾಚರಣೆ ಶುರುವಾಯಿತು. ಅಧಿಕಾರ ವಹಿಸಿಕೊಂಡ ಒಂದೇ ವರ್ಷದಲ್ಲಿ ಆಲೋಕ್‍ರು ನಕ್ಸಲೈಟುಗಳನ್ನು ಹೇಗೆ ಹೆಡೆಮುರಿಕಟ್ಟಿ ಕೂರಿಸಿದ್ದರೆಂದರೆ 2012ರ ಸೆಪ್ಟೆಂಬರ್‍ನಲ್ಲಿ ಇನ್ನೇನು ಬಹುತೇಕ ಎಲ್ಲ ನಕ್ಸಲೈಟುಗಳು ಬಲೆಗೆ ಬಿದ್ದೇಬಿಟ್ಟರೆನ್ನುವ ವಾತಾವರಣ ಸೃಷ್ಟಿಯಾಯಿತು. ಇನ್ನೊಂದು ವಾರದಲ್ಲಿ ಕರ್ನಾಟಕದಲ್ಲಿ ನಕ್ಸಲಿಸಂ ಇತಿಹಾಸ ಅಟ್ಟ ಸೇರುತ್ತದೆನ್ನುವಾಗ ಬೆಂಗಳೂರಿನ ಪ್ರಧಾನ ಕಚೇರಿಯಿಂದ ಒಂದು ಸೂಚನೆ ಬಂತು: “ನಕ್ಸಲರನ್ನು ಹಿಡಿಯಹೋಗುವ ಕಾರ್ಯಾಚರಣೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಲ್ಲಿಸಲಾಗಿದೆ. ಶರಣಾಗತರಾಗುವಂತೆ ಅವರ ಮನವೊಲಿಸುವುದಕ್ಕೆ ನಿರ್ಧರಿಸಲಾಗಿದೆ”! ಮೀನು ಬಲೆಗೆ ಬಿದ್ದೇಬಿತ್ತೆನ್ನುವಾಗ, ಅದನ್ನು ನೀರಿಗೆ ಬಿಟ್ಟು ತಾನಾಗಿ ಬುಟ್ಟಿಗೆ ಬಂದುಬೀಳಲಿ ಎಂದಂತೆ ಇತ್ತು. ಜೀವದ ಹಂಗು ತೊರೆದು ಮುನ್ನುಗ್ಗುತ್ತಿದ್ದ ಆಲೋಕ್ ಕುಮಾರ್ ಸಹಜವಾಗಿಯೇ ಈ ಬೆಳವಣಿಗೆಯಿಂದ ನಕ್ಸಲ್ ಕಾರ್ಯಾಚರಣೆಯಲ್ಲಿ ಆಸಕ್ತಿ ಕಳೆದುಕೊಂಡುಬಿಟ್ಟರು.

ತಮಾಷೆ ನೋಡಿ: ಸರಕಾರ ರಚಿಸಿದ “ಕರ್ನಾಟಕದ ಎಡಪಂಥೀಯ ಆತಂಕವಾದಿಗಳಿಗೆ ಶರಣಾಗತಿ ಮತ್ತು ಪುನರ್ವಸತಿ ಯೋಜನೆ” ಎಂಬ ಈ ವೇದಿಕೆಗೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಯೇ ಮುಖ್ಯಸ್ಥ. ಅವರ ಕೈಕೆಳಗೆ ಪೊಲೀಸ್ ಮತ್ತು ಸಮಾಜ ಕಲ್ಯಾಣ ಇಲಾಖೆಯ ಹತ್ತಾರು ಅಧಿಕಾರಿಗಳು ಸದಸ್ಯರು. ಸಾರ್ವಜನಿಕ ರಂಗದ ಪ್ರತಿನಿಧಿಗಳೂ ಇರಬೇಕೆಂದು ಆರಿಸಿದ್ದು ಎ.ಕೆ. ಸುಬ್ಬಯ್ಯ, ಎಚ್.ಎಸ್. ದೊರೆಸ್ವಾಮಿ ಮತ್ತು ಗೌರಿ ಲಂಕೇಶ್‍ರನ್ನು! ಗಾಂಧೀವಾದಿಯಾಗಿ ಅಹಿಂಸಾತ್ಮಕ ಸ್ವಾತಂತ್ರ್ಯಹೋರಾಟದಲ್ಲಿ ಪಾಲ್ಗೊಂಡೆ ಎನ್ನುವ ದೊರೆಸ್ವಾಮಿ ಹಾಗೂ ಸ್ವತಃ ನಕ್ಸಲ್‍ಗಳೊಂದಿಗೆ ಗುರುತಿಸಿಕೊಂಡ ಗೌರಿ ಲಂಕೇಶ್ ಈ ಸಮಿತಿಯಲ್ಲಿ ಸೇರಿಕೊಂಡಿರುವುದೇ ಒಂದು ದೊಡ್ಡ ವ್ಯಂಗ್ಯ! ಇವರೆಲ್ಲ ಕಾಡು ಸೇರಿದ್ದ ನಕ್ಸಲ್ ಕ್ರಾಂತಿಕಾರಿಗಳನ್ನು ಮತ್ತೆ ನಾಡಿಗೆ ಕರೆತರುವ ಘನಂದಾರೀ ಕೆಲಸದ ಜವಾಬ್ದಾರಿ ವಹಿಸಿಕೊಂಡರು. ಶರಣಾಗುವ ನಕ್ಸಲರು ಮುಂದೆಂದೂ ಮತ್ತೆ ಆ ಚಳವಳಿಯ ಭಾಗವಾಗಬಾರದು; ಕಾಡಿನ ತಮ್ಮ ಸಹಹೋರಾಟಗಾರರ ಕೈಯಲ್ಲಿರುವ ಮಾರಕಾಸ್ತ್ರಗಳ ಮಾಹಿತಿಯನ್ನು ಪೊಲೀಸರಿಗೆ ಕೊಡಬೇಕು; ರಾಜ್ಯದಲ್ಲಿ ಪೊಲೀಸರ ಕೈಗೆ ಸಿಕ್ಕಿ ಬೀಳದ ನಕ್ಸಲರ ಮಾಹಿತಿ ಕೊಡಬೇಕು – ಈ ಮೂರು ಷರತ್ತುಗಳನ್ನು ಶರಣಾಗುವವರ ಮೇಲೆ ಹೇರಬೇಕೆಂದು ನಿಯಮ. ಆದರೆ ಸರಕಾರದ ಆಹ್ವಾನ ಮನ್ನಿಸಿ ಶರಣಾಗಿ, ಕಾನೂನಿನ ದೊಣ್ಣೆಯಿಂದ ತಪ್ಪಿಸಿಕೊಂಡಿರುವ ಸಿರಿಮನೆ ನಾಗರಾಜ್ ಮತ್ತು ನೂರ್ ಜುಲ್ಫಿಕರ್ ಆ ನಿಯಮಗಳನ್ನು ಪಾಲನೆ ಮಾಡಿದ್ದಾರೆಯೇ? ಉಳಿದ ನಕ್ಸಲರ ಬಗ್ಗೆ, ಅವರ ಬಳಿ ಇರುವ ಶಸ್ತ್ರಾಸ್ತ್ರಗಳ ಬಗ್ಗೆ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆಯೇ? ಇವರಿಬ್ಬರ ನಂತರ ಪೊಲೀಸರು ಇನ್ನುಳಿದ ಯಾವ ನಕ್ಸಲೈಟುಗಳನ್ನೂ ಹಿಡಿದಿಲ್ಲ; ಹಿಡಿಯಲಾಗಿಲ್ಲ ಎಂಬುದನ್ನು ಗಮನಿಸಬೇಕು. ನೂರಾರು ಅಪರಾಧಗಳಲ್ಲಿ ಭಾಗಿಯಾದ ಮೇಲೂ ಸರಕಾರದೆದುರು ಶರಣಾದರೆ ಕಾನೂನಿನ ಹಿಡಿತದಿಂದ ಪಾರಾಗಬಹುದು, ಮಾತ್ರವಲ್ಲ; ಪ್ಯಾಕೇಜ್‍ಅನ್ನೂ ಜೇಬಿಗಿಳಿಸಬಹುದೆಂಬ ಹೊಸ ಉದಾಹರಣೆಯನ್ನು ಇವರು ಅವಕಾಶವಾದಿಗಳಿಗೆ ತಿಳಿಸಿಕೊಟ್ಟಂತಾಗಿದೆ.

ಕರ್ನಾಟಕದಲ್ಲಿ ಕಳೆದೆರಡು ವರ್ಷಗಳಿಂದ ನಕ್ಸಲರ ಚಟುವಟಿಕೆ ಅಷ್ಟಾಗಿ ಕಂಡುಬರುತ್ತಿಲ್ಲ. ಆದರೆ ವೃಥಾ ಕತ್ತಿ-ಕುಡಾರಿ ಹಿಡಿದು ಸಾರ್ವಜನಿಕ ಚರ್ಚೆಗೆ ಆಹಾರವಾಗುವ ಬದಲು ಮೌನವಾಗಿದ್ದೇ ತಮ್ಮ ಕೆಲಸ ಮಾಡಿಕೊಳ್ಳೋಣ, ಪ್ರಭಾವ ವಲಯ ವಿಸ್ತರಿಸಿಕೊಳ್ಳೋಣ ಎಂದು ಇವರು ಭೂಗತರಾಗಿರುವ ಸಾಧ್ಯತೆಯೇ ಹೆಚ್ಚು. ಅದೂ ಅಲ್ಲದೆ ನಕ್ಸಲ್ ಚಳವಳಿಯ ಒಂದು ಮುಖವಾದ ಬುದ್ಧಿಜೀವಿಗಳು ಈಗ ಸರಕಾರದ ಭಾಗವಾಗಿದ್ದಾರೆ. ಶರಣಾಗತ ನಕ್ಸಲರಾದ ಜಯ, ಮಲ್ಲಿಕಾ, ಕೋಮಲಾ, ವೆಂಕಟೇಶ್ ಮುಂತಾದವರಿಗೆ ಹಲವು ಎಕರೆಗಳ ಜಮೀನೂ ಅಜಮಾಸು 5000 ರುಪಾಯಿಯಷ್ಟು ಮಾಸಾಶನವೂ ನಿಗದಿಯಾಗಿದೆ. ನಿಷ್ಠಾವಂತ ಐಎಎಸ್ ಅಧಿಕಾರಿ ಡಿ.ಕೆ. ರವಿಯವರ ಕುಟುಂಬಕ್ಕೆ ಮಾಸಾಶನ ಕೊಡಲು ಪರದಾಡಿಸುವ ಸಿದ್ದರಾಮಯ್ಯನವರ ಸರಕಾರ ಮಾಜಿ ಮಾವೋವಾದಿಗಳಿಗೆ ತಿಂಗಳ ಸಂಬಳದಂತೆ ದುಡ್ಡು ಹಂಚುತ್ತಿದೆ! ನಕ್ಸಲರ ಜತೆ ಗುರುತಿಸಿಕೊಂಡಿದ್ದ ಕಬೀರ್‍ನನ್ನು ಎನ್‍ಕೌಂಟರ್‍ನಲ್ಲಿ ಮುಗಿಸಿದ್ದಕ್ಕೆ ಸರಕಾರ, ಪೊಲೀಸರನ್ನು ತನಿಖೆಗೆ ಗುರಿಪಡಿಸಿ ಉಗ್ರನ ಮನೆಯವರಿಗೆ 10 ಲಕ್ಷ ರುಪಾಯಿ ಪರಿಹಾರ ಕೊಟ್ಟಿದೆಯೆಂದರೆ ಅಚ್ಚರಿಯಾಗದ ಜಡಸ್ಥಿತಿಗೆ ನಾವು ಸಾರ್ವಜನಿಕರು ಬಂದಿದ್ದೇವೆ. “ನಕ್ಸಲರಿಗೆ ದುಡ್ಡು ಯಾಕ್ರೀ ಕೊಡ್ತೀರಿ? ಸಾಧ್ಯವಿದ್ದರೆ ಆ ಹಳ್ಳಿಗಾಡು ಪ್ರದೇಶಗಳಿಗೆ ಮೂಲಭೂತ ಸೌಲಭ್ಯ ಒದಗಿಸಿ. ಜನರಿಗೆ ಉದ್ಯೋಗ ಸಿಗುವ ಹಾಗೆ ಮಾಡಿ. ನೆಮ್ಮದಿಯಿಂದ ಬದುಕುವ ವಾತಾವರಣವಿದ್ದರೆ ಅವರೆಲ್ಲ ಯಾಕೆ ನಕ್ಸಲರಾಗಿ ಸಾಯಬೇಕು?” ಎಂದು ಸರಕಾರ ಮುಖ ಒರೆಸಿಕೊಳ್ಳುವಂತೆ ಉಗಿದು ಉಪ್ಪಿನಕಾಯಿ ಹಾಕುತ್ತಿದ್ದ ಕಾಗೋಡು ತಿಮ್ಮಪ್ಪ, ಈಗ ಮೀಸೆ ಕಿತ್ತ ಬೆಕ್ಕು; ಸರಕಾರದಲ್ಲೇ ಮಂತ್ರಿ! ಅಳಿಯ ಅಲ್ಲ ಮಗಳ ಗಂಡ ಎಂಬಂತೆ, ನಕ್ಸಲ್ ಚಿಂತನೆ ಈಗ ಕೋಮು ಸೌಹಾರ್ದ ವೇದಿಕೆ, ಶಾಂತಿಗಾಗಿ ನಾಗರಿಕರ ವೇದಿಕೆ ಮುಂತಾದ ಹಲವು ಬೇನಾಮಗಳ ಮೂಲಕ ಸಾರ್ವಜನಿಕರಿಗೆ ಸಿಕ್ಕುತ್ತಿದೆ. ದಕ್ಷಿಣ ಭಾರತದಲ್ಲಿ ಹೊಸದಾಗಿ 24ಕ್ಕೂ ಹೆಚ್ಚು ಹೊಸ ಜಾಗಗಳಲ್ಲಿ ನಕ್ಸಲಿಸಂ ಚಿಗುರೊಡೆಯುತ್ತಿದೆ ಎಂದು ಕಳೆದ ವರ್ಷ ಗುಪ್ತಚರ ಇಲಾಖೆ ಕೇಂದ್ರ ಗೃಹ ಸಚಿವಾಲಯಕ್ಕೆ ವರದಿ ಸಲ್ಲಿಸಿತ್ತು. ಕರ್ನಾಟಕದಲ್ಲಿ ಹೊಸದಾಗಿ ಮೈಸೂರು, ಚಾಮರಾಜನಗರ ಮತ್ತು ಕೊಡಗು – ಈ ಮೂರು ಜಿಲ್ಲೆಗಳಲ್ಲಿ ನಕ್ಸಲಿಸಂ ಮೌನವಾಗಿ ಟಿಸಿಲೊಡೆಯುತ್ತಿದೆ ಎಂದೂ ಆ ವರದಿ ಹೇಳಿತ್ತು. ನಕ್ಸಲ್ ಚರಿತ್ರೆಯನ್ನು ನೋಡಿದರೆ ಇನ್ನು ಕೆಲ ವಾರ-ತಿಂಗಳುಗಳಲ್ಲೇ ಅದು ತನ್ನ ಪ್ರತಾಪವನ್ನು ತೋರಿಸಲು ಎದ್ದೇಳಬಹುದು. ನೆತ್ತರ ರುಚಿ ಹತ್ತಿದ ಸೀಳುನಾಯಿ ಎಷ್ಟು ದಿನ ತಡೆದೀತು?

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments