ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 26, 2016

ರಾಜಕೀಯದಲ್ಲಿ ಚಾಣಾಕ್ಷರೂ ಸಹ ಅಪ್ರಸ್ತುತರಾಗಲು, ಒಂದು ತಲೆಕೆಟ್ಟ ನಿರ್ಧಾರ ಸಾಕು||

‍ನಿಲುಮೆ ಮೂಲಕ

– ರಾಘವೇಂದ್ರ ನಾವಡ
ki28lotus_jpg_g_ki_2599608fಏನೇ ಹೇಳಿ… ರಾಜ್ಯ ರಾಜಕೀಯದಲ್ಲಿ ದೇವೇಗೌಡರನ್ನು “ಫೀನಿಕ್ಸ್” ಅಂತ ಯಾಕೆ ಕರೀತಾರೆ? ಅನ್ನೋದಕ್ಕೆ ಮತ್ತೊಮ್ಮೆ ನಿದರ್ಶನ ದೊರಕಿತು! ತನ್ನ ಮುಂಪಡೆ ನಾಯಕರ ಸೋಮಾರಿತನ, ಅಂತಃಕಲಹ, ಅಹಂಕಾರ ಮುಂತಾದವುಗಳಿಂದ ಮಕಾಡೆ ಮಲಗಿದ್ದ ಜಾತ್ಯಾತೀತ ಜನತಾದಳ, ತನ್ನ ಮೇರು ಪ್ರಭೃತಿ ದೇವೇಗೌಡರು ತೆಗೆದುಕೊಂಡ ಒಂದು ಚಾಣಾಕ್ಷತನದ ನಿರ್ಧಾರದಿಂದ ಕುಂಭಕರ್ಣ ನಿದ್ರೆಯಿಂದ ದಢಾಲ್ಲನೆ ಎದ್ದರೆ, ಯಡಿಯೂರಪ್ಪನವರ ನಾಯಕತ್ವದಲ್ಲಿ ಸ್ವಲ್ಪ-ಸ್ವಲ್ಪವೇ ಮೇಲೇಳುತ್ತಿದ್ದ (ಇಲ್ಲಿಯೂ ಅಂತಃ ಕಲಹವಿದೆ. ಆದರೆ ನಾಯಕರು ಸ್ವಲ್ಪ ಚುರುಕಾಗಿದ್ದರು) ರಾಜ್ಯ ಭಾಜಪಾ, ಮುಖ್ಯಮಂತ್ರಿ ಸಿದ್ಧರಾಮಯ್ಯ ಕರೆದಿದ್ದ ಸರ್ವಪಕ್ಷ ಸಭೆಯನ್ನು ಬಹಿಷ್ಕರಿಸುವುದರ ಮೂಲಕ ಮಕಾಡೆ ಮಲಗಿತು!! ಒಬ್ಬರು ಫೀನಿಕ್ಸ್ ನಂತೆ ಎದ್ದರೆ ಮತ್ತೊಬ್ಬರು ಶವದಂತೆ ಬಿದ್ದರು!!

ಮುಂದಿನ ರಾಜ್ಯ ವಿಧಾನಸಭಾ ಚುನಾವಣಾ ಆಖಾಡದಲ್ಲಿ ಶಕ್ತಿ ಪ್ರದರ್ಶನಕ್ಕೆಂದು ದೊರೆತಿದ್ದ ಸುವರ್ಣ ಅವಕಾಶವನ್ನು ಕೈಯಾರೆ ಹಾಳು ಮಾಡಿಕೊಂಡ ಭಾಜಪಾ ಮುಂದಿನ ಚುನಾವಣಾ ನಂತರ “ಕೈ” ಮತ್ತು ಜಾತ್ಯಾತೀತ ದಳಗಳ ಪರಮ ಅಂತರ್ಮೈತ್ರಿಯೊಂದರ ಅವಕಾಶದ ಬಾಗಿಲನ್ನೂ ತೆರೆದರು! ಯುದ್ದವನ್ನೇ ಮಾಡದೇ ಎದುರಾಳಿಯನ್ನು ಗೆಲ್ಲಿಸೋದು ಹೇಗೆ ಎಂಬುದನ್ನು ರಾಜ್ಯ ಭಾಜಪಾ ನಾಯಕರನ್ನು ನೋಡಿ ಕಲಿಯಬೇಕು!! ಅದಕ್ಕೇ ಹೇಳಿದ್ದು ಮಕಾಡೆ ಮಲಗಲು ಒಂದು ತಲೆಕೆಟ್ಟ ನಿರ್ಧಾರ ಸಾಕು ಅಂತ.

ರಾಜ್ಯದ 17 ಜನ ಭಾಜಪಾ ಎಂ.ಪಿ.ಗಳು ಏನನ್ನು ಬೇಕಾದರೂ ಸಾಧಿಸಬಹುದಿತ್ತು! ಏಕೆಂದರೆ ಕೇಂದ್ರ ಸರ್ಕಾರ ಅವರದ್ದೇ. ಯಡಿಯೂರಪ್ಪ ಪ್ರಯತ್ನ ಮಾಡಿದ್ದರೆ ಅಥವಾ ಸಂದರ್ಭಕ್ಕೆ ತಕ್ಕ ನಡೆಯನ್ನು ಪ್ರದರ್ಶಿಸಿದ್ದರೆ, ಸಿಕ್ಕ ಭರಪೂರ ಅವಕಾಶವನ್ನು ಬಳಸಿಕೊಳ್ಳುವ ಚಾಣಾಕ್ಷರಾಗಿದ್ದರೆ, ತಾವೇ ಸಿದ್ಧರಾಮಯ್ಯ ಹಾಗೂ ಜಾತ್ಯಾತೀತ ದಳಗಳೆರಡನ್ನೂ ಲೀಡ್ ಮಾಡಿಕೊಡು ಪ್ರಧಾನಮಂತ್ರಿ ಮೋದಿಯವರೊಂದಿಗೆ ಕಾವೇರಿ ಸಮಸ್ಯೆಯನ್ನು ಚರ್ಚಿಸಬಹುದಿತ್ತು! ಆಗ ಅವರಿಗೆ ಹಾಗೂ ಅವರ ಪಕ್ಷಕ್ಕೆ ಮುಂದಿನ ವಿಧಾನ ಸಭಾ ಚುನಾವಣೆಯನ್ನು ಗೆಲ್ಲಲು ತನ್ನೆಲ್ಲಾ ಶಕ್ತಿಯನ್ನು ಪಣಕ್ಕಿಡುವುದು ತಪ್ಪುತ್ತಿತ್ತು!! ಅಧಿಕಾರಕ್ಕೆ ಬರುವ ಕನಸನ್ನು ಕಾಣಲು ಸಾಧ್ಯವಿತ್ತು!! ಆದರೆ ಭಾಜಪಾ ತೆಗೆದುಕೊಂಡ ನಿರ್ಧಾರ ಆ ಪಕ್ಷವನ್ನು ಪುನಃ ಐದು ವರ್ಷಗಳ ಹಿಂದಿನ ಸ್ಥಿತಿಗೆ ದೂಡಿತೆನ್ನಬಹುದು!! ಬಿಜೆಪಿ ಯವರು ಒಂಥರಾ “ತಮ್ಮ ಚಟ್ಟ ತಾವೇ ಕಟ್ಟಿಕೊಂಡರು” ಎನ್ನಬಹುದು!!

ಕಳೆದ 10 ವರುಷಗಳಿಂದ ದೇವೇಗೌಡರ ಮನೆಯ ಹೊಸಿಲನ್ನೇ ಕಾಣದಿದ್ದ ರಾಜ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯ ಮೊದಲ ಬಾರಿಗೆ ಮಾಜಿ ಪ್ರಧಾನಿಗಳ ಮನೆಯಲ್ಲಿ ಕಾವೇರಿ ನೀರಿನ ಸಮಸ್ಯೆಯ ಬಗ್ಗೆ ವಿಸ್ತೃತ ಚರ್ಚೆ ನಡೆಸಿದಾಗಲೇ ಭಾಜಪಾ ನಾಯಕರು ಬುದ್ಧಿವಂತರಾಗಬೇಕಿತ್ತು!! ಬುದ್ಧಿವಂತರಾಗೋದು ಬಿಡಿ… ಅಸಲಿ ಬುದ್ಧಿಯನ್ನೂ ತೋರಿಸಲಿಲ್ಲ.. ಸಮಸ್ಯೆ ಪರಿಹಾರವಾಗುತ್ತದೋ ಬಿಡುತ್ತದೋ ಬೇರೆಯ ಪ್ರಶ್ನೆ.. ಇಡೀ ರಾಜ್ಯ ಹಾಗೂ ಜನತೆ ಕಾವೇರಿ ಸಮಸ್ಯೆಯನ್ನು ಎದುರಿಸಲು ಟೊಂಕ ಕಟ್ಟಿ ನಿಂತಾಗ ಈ “ಬುದ್ಧಿವಂತರು” ತೋರಿಸಿದ ತಮ್ಮ ಅಸಲಿ “ಬುದ್ಧಿ” ಯಿಂದ  ಕಳೆದ ಎರಢ್ಮೂರು ವರ್ಷಗಳಿಂದ ಪ್ರಧಾನ ಮಂತ್ರಿ ಮೋದಿ ಪಡುತ್ತಿದ್ದ ಪ್ರಯತ್ನಗಳು ಹಾಗೂ ಜನರನ್ನು ತಲುಪಲು ಪಡುತ್ತಿರುವ ಪಾಡುಗಳೆಲ್ಲವೂ ಹೊಳೆಯಲ್ಲಿ ಹುಣಸೇಹಣ್ಣನ್ನು ತೊಳೆದಂತಾಯಿತಲ್ಲ!!

ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರನ್ನು ಇವತ್ತಿಗೂ ಕರ್ನಾಟಕದ ಜನತೆ ಏಕೆ ನೆನಪಿನಲ್ಲಿಟ್ಟುಕೊಂಡಿದ್ದಾರೆ ಅಂದರೆ 1990ರ ದಶಕದಲ್ಲಿ ಇದೇ  ಕಾವೇರಿ ನೀರಿನ ಸಮಸ್ಯೆ ಉಲ್ಭಣಗೊಂಡಾಗ ಅವರು ತೆಗೆದುಕೊಂಡ ದಿಟ್ಟ ನಿರ್ಧಾರದಿಂದ!! ತಮಿಳುನಾಡಿಗೆ ನೀರು ಬಿಡಬೇಕೆಂಬ ಸುಪ್ರೀಂ ಕೋರ್ಟಿನ ತೀರ್ಪನ್ನು ತಮ್ಮ ಕಛೇರಿಯ ಕಸದ ಬುಟ್ಟಿಗೆ ಹಾಕಿದ ಬಂಗಾರಪ್ಪ “ಕಾವೇರಿ ಕೊಳ್ಳದಲ್ಲಿ ಶೇಖರಣೆಗೊಂಡಿದ್ದ ನೀರನ್ನು ಜತನದಿಂದ ಕಾಪಾಡುವಂತೆ” ಸುಗ್ರೀವಾಜ್ಞೆ ಹೊರಡಿಸಿದರು! ಆನಂತರ ನ್ಯಾಯಾಂಗ ನಿಂದನೆಗಾಗಿ ಸುಪ್ರೀಂ ಕೋರ್ಟಿನ ಕ್ಷಮೆ ಕೇಳಿ ನೀರು ಬಿಟ್ಟರೂ ಅವರು ಹೊರಡಿಸಿದ ಆ ಕ್ಷಣದ ಸುಗ್ರೀವಾಜ್ಞೆ ಆಗಿನ ಕನ್ನಡಿಗರ ಮನಸ್ಸಿನ ಮಾತಂತಿತ್ತು! ತನ್ನನ್ನು ಆರಿಸಿ ಕಳಿಸಿದವರ ಮನಸ್ಸಿನ ಮಾತನ್ನು, ತಮ್ಮ ಅಂತರಂಗ ಹಾಗೂ ಬಹಿರಂಗದಲ್ಲಿ ಗುಸು-ಗುಸನೆ ಆಡುತ್ತಿದ್ದ ನುಡಿಯನ್ನು, ತಳೆದಿದ್ದ ನಿರ್ಧಾರವನ್ನು ಘಂಟಾಘೋಷವಾಗಿಸಿದರು! ಅದಕ್ಕೊಂದು ಲಿಖಿತ ರೂಪ ನೀಡಿದರು. ಆನಂತರ ಅವರು ಯಾವುದೇ ಪಕ್ಷದಲ್ಲಿದ್ದರೂ ನಿರಾಯಾಸವಾಗಿ ಗೆಲ್ಲುತ್ತಿದ್ದುದಕ್ಕೆ ರಾಜ್ಯದ ಜನತೆ ಎಂದೂ ಮರೆಯದ ಈ ದಿಟ್ಟ ನಡೆಯ ಕೊಡುಗೆಯೂ ಇದ್ದಿತ್ತು. ಇದೆಲ್ಲವೂ ರಾಜ್ಯದ ಎಲ್ಲಾ 18 ಜನ ಬಿಜೆ.ಪಿ. ಲೋಕಸಭಾ ಸದಸ್ಯರಿಗೆ ಅರಿವಿದ್ದರೆ, ಅವರಿಗಾಗಿಯೇ ದೊರೆತ ಒಂದು ಸುವರ್ಣ ಅವಕಾಶವನ್ನು ಹಾಳು ಮಾಡಿಕೊಳ್ಳುತ್ತಿರಲಿಲ್ಲ!!

ಸಿಕ್ಕ ಅವಕಾಶವನ್ನೆಲ್ಲಾ ಪರಸ್ಪರ ದೋಷಾರೋಪಣೆಗಳಿಗಾಗಿಯೇ ಬಳಸಿಕೊಳ್ಳುತ್ತ, ಪರಸ್ಪರ ಹಾವು-ಮುಂಗುಸಿಗಳಂತಾಗಿದ್ದ ಸಿದ್ಧರಾಮಯ್ಯ ಮತ್ತು ದೇವೇಗೌಡರು ರಾಜ್ಯಕ್ಕೆ ಒದಗಿದ್ದ ಸಂಕಷ್ಟ ಪರಿಸ್ಥಿತಿಯಲ್ಲಿ ಪರಸ್ಪರ ಒಮ್ಮತ ಮೆರೆದು – ತಮಿಳುನಾಡಿನತ್ತ ನಕಾರಾತ್ಮಕ ಧೋರಣೆ ಮೆರೆದು ಜನತಾ ಜನಾರ್ದನರ ಮನಸ್ಸಿನಲ್ಲಿ ಮನೆಮಾಡಿದರು! ಆದರೆ ಬಿ.ಜೆ.ಪಿ ಯವರು ಇದ್ದ ಸ್ಥಾನವನ್ನೂ ಕಳೆದುಕೊಂಡದ್ದಲ್ಲದೆ, ಸರ್ವಪಕ್ಷ ಸಭೆಯನ್ನು ಬಹಿಷ್ಕರಿಸಿದ ಅವರ ನಡೆಗೆ ಜನತೆ “ಛೀ.. ಇವರ ಹಣೆಬರಹವೇ ಇಷ್ಟು ” ಎಂದು ಕೈಕೊಡವುವಂತಾಗಿದ್ದು ಮಾತ್ರ ವಿಪರ್ಯಾಸ!! ಮನಮೋಹನ ಸಿಂಗ್ ಪ್ರಧಾನಿಯಾಗಿದ್ದಾಗ ಕರೆದಿದ್ದ ಮುಖ್ಯಮಂತ್ರಿಗಳ ಸಭೆಯಲ್ಲಿ ತಮಿಳುನಾಡಿಗೆ ನೀರು ಬಿಡುವಂತೆ ಆಗಿನ ರಾಜ್ಯದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ಗೆ ಸೂಚಿಸಿದಾಗ, ಶೆಟ್ಟರ್ ಅರ್ಧಕ್ಕೇ ಸಭೆಯಿಂದ ಎದ್ದು ಬರುವ ದಿಟ್ಟ ನಿರ್ಧಾರ ತಳೆದಿದ್ದರು! ಅದೇ ಇಂದು! ಅವರದೇ ಕೇಂದ್ರ ಸರ್ಕಾರವಾಗಿದ್ದರೂ ರಾಜ್ಯಕ್ಕೆ ಒಳ್ಲೆಯದಾಗುವ ನಡೆಯತ್ತ ಯೋಚಿಸುತ್ತಲೇ ಇಲ್ಲ!! ಹೋಗಲಿ ಬಿಡಿ.. ಅದೃಷ್ಟವಿಲ್ಲ ಎಂದುಕೊಳ್ಳುವ ಹಾಗೂ ಇಲ್ಲ.. ಏಕೆಂದರೆ ತಾನಾಗಿಯೇ ಒದಗಿ ಬಂದಿದ್ದ ಅವಕಾಶವನ್ನು ಕಾಲಿಂದ ಒದ್ದರಲ್ಲ!! “ಪ್ರತಿಪಕ್ಷವಿರುವುದೇ ವಿರೋಧಿಸುವುದಕ್ಕಾಗಿ” ಎಂಬ ಮಾತನ್ನು ಸಾಬೀತು ಪಡಿಸಿದರು. ಇನ್ನು ಎಚ್ಚೆತ್ತುಕೊಂಡರೂ ಪಕ್ಷದ ಇಮೇಜಿಗೆ ಬೀಳಬಹುದಾದ ಸಾಧಾರಣಕ್ಕೆ ಸರಿಪಡಿಸಲಾಗದ ಹೊಡೆತವಂತೂ ಬಿದ್ದಾಗಿದೆ!!

ಕೊನೇಮಾತು: ದೊಡ್ಡಗೌಡರು ಎಲ್ಲ ಪಕ್ಷದವರನ್ನೂ ಒಮ್ಮತಕ್ಕೆ ತರಲು ಶತ ಪ್ರಯತ್ನಪಡುವುದಾಗಿ ಹೇಳಿದ್ದಾರೆ. ಕುಟುಂಬ ರಾಜಕಾರಣವನ್ನೇ ಪೋಷಿಸುತ್ತಾ ಬಂದ ಅವರಿಗೂ ರಾಜ್ಯದ ಒಳಿತೇ ಮುಖ್ಯವೆನಿಸಿದೆ! (ಅವರದ್ದು ಕಾವೇರಿ ಸಮಸ್ಯೆಯಿಂದ ದೊರೆತ ಈ ಅವಕಾಶವನ್ನು ಜನತೆಯ ದೃಷ್ಟಿ ಹಾಗೂ ರಾಜ್ಯ ರಾಜಕಾರಣದಲ್ಲಿ ಪಕ್ಷವನ್ನು ಮೇಲೆತ್ತುವುದಕ್ಕಾಗಿ ಬಳಸುವ ಚಾಣಾಕ್ಷ ತಂತ್ರವೂ ಹೌದು!) ಅದಕ್ಕೇ ಅವರನ್ನು “24×7 ರಾಜಕಾರಣಿ ಎನ್ನುವುದು!”

ದಶಕಗಳ ಹಿಂದಿನ ಮಾತು – ಗುಜರಾತಿನಲ್ಲಿ ಮೋದಿ ಶಕೆ ಆರಂಭವಾಗಿದ್ದ ಕಾಲ. ಗೋಧ್ರಾ ಗಲಭೆಯಲ್ಲಿ ಉಭಯ ಕೋಮಿನವರೂ ಮಾರಣಾಂತಿಕ ದಾಳಿ ಎದುರಿಸಿದಾಗ, ಬರ್ಬರ ಮಾರಣ ಹೋಮ ನಡೆದಾಗ ಪ್ರಧಾನ ಮಂತ್ರಿಯಾಗಿದ್ದ ಅಟಲ ಬಿಹಾರಿ ವಾಜಪೇಯಿಯವರು ತನಗೆ ನೀಡಿದ್ದ “ರಾಜಧರ್ಮವನ್ನು ಪಾಲಿಸು” ಎಂಬ ಕಟ್ಟಾಜ್ಞೆಯನ್ನು ಶಿರಸಾವಹಿಸಿ ಪಾಲಿಸಿದ ನರೇಂದ್ರ ಮೋದಿಯವರೇ ಇಂದು ದೇಶದ ಪ್ರಧಾನ ಮಂತ್ರಿ! ಕಾವೇರಿ ಸಮಸ್ಯೆಯನ್ನು ಪರಿಹರಿಸುವಲ್ಲಿ ಆಡಳಿತ ಪಕ್ಷದೊಂದಿಗೆ ಕೈಜೋಡಿಸಿ ನಿಜವಾದ “ರಾಜಧರ್ಮ” ಪಾಲಿಸಲು ಆಜ್ಞೆ ನೀಡಬೇಕಿದ್ದ ಮೋದಿ ಈಗ್ಯಾಕೆ ಮೌನ ವಹಿಸಿದ್ದಾರೆ ? ಎನ್ನುವುದೇ ಅರ್ಥವಾಗುತ್ತಿಲ್ಲ! ಪದೇ ಪದೇ ತಮ್ಮ ಭಾಷಣದಲ್ಲಿ ರಾಜ್ಯಗಳತ್ತ “ಒಕ್ಕೂಟ ವ್ಯವಸ್ಥೆಯ” ಬಗ್ಗೆ ಪ್ರಸ್ತಾಪಿಸುವ ಮೋದಿ, ಅದೇ ಒಕ್ಕೂಟದ ಏಕಮೇವಾದ್ವಿತೀಯ ನಾಯಕನಾಗಿಯೂ ಎಡವುತ್ತಿರುವುದೇಕೆ? ರಾಜನಿಗೆ ತಕ್ಕ ಮಂತ್ರಿಯಾಗಿದ್ದ ಅಮಿತ್ ಷಾ ಸಹ ಒಂದೂ ಮಾತನ್ನಾಡುತ್ತಿಲ್ಲ! ಇದೇ ಪ್ರಶ್ನೆಯ ಬಗ್ಗೆಯೇ  ಯಡಿಯೂರಪ್ಪನವರನ್ನು ನಿಮ್ಮ ನಿರ್ಧಾರದ ಹಿಂದಿನ ಹಕೀಕತ್ತೇನು? ಎಂದು ಕೇಳಿದ್ದಕ್ಕೆ  “ಹಕೀಕತ್ತಲ್ಲರೀ.. ಸುಟ್ಟು ಹೋಗಿದ್ದು  ನಾನು ಕಣ್ರೀ.. ಮನೆ ಯಜಮಾನನೇ ಸುಮ್ಮನಿರಬೇಕಾದ್ರೆ ನಾನ್ಯಾಕೆ ಮಾತಾಡ್ಬೇಕು ಅಂತ ಸುಮ್ಮನಿದ್ದೆ.. ಎಡವಟ್ಟಾಗೋಯ್ತು ಕಣ್ರೀ.. ಎಡವಟ್ಟಾಗೋಯ್ತು .. ಸುಮ್ಮನಿದ್ದಿದ್ದು ಅವರು.. ಹೊಡೆತ ತಿಂದಿದ್ದು ನಾನ್ರೀ.. ” ಎಂದು ಧುಮುಗುಡುತ್ತಾ ಕೆಕ್ಕರಿಸಿ ನೋಡಬೇಕೆ?!

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments