ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 27, 2016

6

ವೇದನೆಯೂ ವ್ಯಸನವಾಗಿಬಿಟ್ಟರೇನು ಫಲ…?

‍ನಿಲುಮೆ ಮೂಲಕ

– ಗುರುರಾಜ ಕೋಡ್ಕಣಿ. ಯಲ್ಲಾಪುರ

587666ಆಗಷ್ಟೇ ಮೊರೊಕ್ಕೊ ದೇಶದ ಮರಾಕ್ಕೇಶ್ ಪಟ್ಟಣಕ್ಕೆ ಬಂದಿಳಿದಿದ್ದ ಮತಪ್ರಚಾರಕನನ್ನು ತೀವ್ರವಾಗಿ ಆಕರ್ಷಿಸಿದ್ದು ಊರ ಹೊರಗಿನ ಮರುಭೂಮಿ. ತನ್ನನ್ನು ಸೂಜಿಗಲ್ಲಿನಂತೆ ಸೆಳೆದ ಮರಳುಗಾಡನ್ನು ಕಂಡ ಮರುಕ್ಷಣವೇ, ತನ್ನ ಪ್ರತಿನಿತ್ಯದ ಬೆಳಗಿನ ವಿಹಾರ ಆ ಮರಳುಗಾಡಿನಲ್ಲಿಯೇ ಎಂಬ ನಿರ್ಧಾರಕ್ಕೆ ಬಂದ ಪ್ರಚಾರಕ. ಹಾಗೊಂದು ನಿರ್ಧಾರದ ಮೊದಲ ದಿನವೇ ಮರುಭೂಮಿಯಲ್ಲಿ ಆತನಿಗೊಂದು ಅಚ್ಚರಿ ಕಾದಿತ್ತು. ಪ್ರಶಾಂತವಾದ ಮರಳುಗಾಡಿನ ನಡುವೆ ಮರಳಿನ ಮೇಲೆ ಅಡ್ಡವಾಗಿ ಮಲಗಿ ನೆಲಕ್ಕೆ ತನ್ನ ಕಿವಿಯಾನಿಸಿ, ಮರಳಿನ ಮೇಲೆ ಕೈಯಾಡಿಸುತ್ತ ಅಡ್ಡ ಮಲಗಿದ್ದ ವ್ಯಕ್ತಿಯೊಬ್ಬನ ವರ್ತನೆ ತನ್ನ ಪಾಡಿಗೆ ತಾನೆಂಬಂತೆ ನಡೆದು ಸಾಗುತ್ತಿದ್ದ ಪ್ರಚಾರಕನ ಗಮನ ಸೆಳೆದಿತ್ತು. ಮೊದಲ ದಿನ ಅದರೆಡೆಗೆ ತುಂಬ ಲಕ್ಷ್ಯ ಕೊಡದ ಪ್ರಚಾರಕ ‘ಹುಚ್ಚನಿರಬೇಕು ಪಾಪ..’ ಎಂದುಕೊಂಡು ಮುಂದೆ ಸಾಗಿದ. ಆದರೆ ಎರಡನೇ ದಿನವೂ ಘಟನೆಯ ಪುನರಾವರ್ತನೆ ಪ್ರಚಾರಕನ ಕುತೂಹಲವನ್ನು ಇನ್ನಷ್ಟು ಕೆರಳಿಸಿತ್ತು. ಅಷ್ಟಾಗಿಯೂ ಆ ವ್ಯಕ್ತಿಯನ್ನು ಮಾತನಾಡಿಸುವ ಗೋಜಿಗೆ ಹೋಗದ ಪ್ರಚಾರಕನ ಕುತೂಹಲ ಒಂದು ತಿಂಗಳ ನಂತರ ತನ್ನ ಸಹನೆಯ ಕಟ್ಟೆಯೊಡೆದಿತ್ತು. ಪ್ರತಿದಿನವೂ ನೆಲಕ್ಕೆ ಆತುಕೊಂಡು ವಿಚಿತ್ರವಾಗಿ ವರ್ತಿಸುವ ಆಗಂತುಕನ ಬಳಿ ತೆರಳಿದ ಪ್ರಚಾರಕ, ತನಗೆ ಬರುತ್ತಿದ್ದ ಅರೆಬರೆ ಅರೇಬಿಕ್ ಭಾಷೆಯಲ್ಲಿ, ‘ಗೆಳೆಯಾ, ನಾನು ಪ್ರತಿನಿತ್ಯವೂ ನೀನು ಹೀಗೆ ವರ್ತಿಸುವುದನ್ನು ಕಂಡಿದ್ದೇನೆ. ನೀನು ಹೀಗೆ ನೆಲಕ್ಕೆ ಆನಿಸಿಕೊಂಡು, ನೆಲವನ್ನು ಸವರುತ್ತ ಕುಳಿತುಕೊಳ್ಳಲು ಕಾರಣವೇನು ಎಂದು ತಿಳಿದುಕೊಳ್ಳಬಹುದೇ’? ಎಂದು ಪ್ರಶ್ನಿಸಿದ.

ಶಾಂತವಾದ ಮರಳುಗಾಡಿನಲ್ಲಿ ತನ್ನೆಡೆಗೆ ತೂರಿಬಂದ ಅನಿರೀಕ್ಷಿತ ಪ್ರಶ್ನೆಯನ್ನು ಕೇಳಿ ಕೊಂಚ ಗಲಿಬಿಲಿಗೊಳಗಾದ ಆಗಂತುಕ, ಕ್ಷಣಕಾಲ ಸಾವರಿಸಿಕೊಂಡು, “ನಾನು ಮರಳುಗಾಡನ್ನು ಸಮಾಧಾನಿಸುವ ಪ್ರಯತ್ನದಲ್ಲಿದ್ದೇನೆ. ನನ್ನ ಸಂತೈಸುವಿಕೆಯಿಂದಾದರೂ ಮರಳುಗಾಡಿನ ಏಕಾಂತ ಮತ್ತು ಕಣ್ಣೀರು ಕೊಂಚ ಶಮನವಾಗಲಿ ಎನ್ನುವ ಆಶಯ ನನ್ನದು’ ಎಂದು ನುಡಿದ. ‘ಓಹ್, ಮರಳುಗಾಡಿಗೂ ಕಣ್ಣೀರುಗರೆಯುವ ಸಾಮರ್ಥ್ಯವಿದೆ ಎಂದು ನನಗೆ ತಿಳಿದಿರಲಿಲ್ಲ’ ಎಂದು ನುಡಿದ ಪ್ರಚಾರಕನ ಮುಖದಲ್ಲೊಂದು ಅಚ್ಚರಿಯ ಭಾವ. ‘ಹೌದು, ತಾನೊಂದು ಅದ್ಭುತ ಉದ್ಯಾನವನವಾಗಬೇಕು ಎನ್ನುವ ಆಸೆ ಈ ಮರಭೂಮಿಯದ್ದು. ಸುಂದರ ಸುಗಂಧಭರಿತ ಪುಷ್ಪಗಳ ಜನ್ಮಭೂಮಿಯಾಗಬೇಕು, ಜೀವ ಸಂಕುಲಕ್ಕೆ ಉಪಯೋಗವಾಗುವ ದವಸಧಾನ್ಯಗಳು ತನ್ನ ಒಡಲೊಳಕ್ಕೂ ಜನ್ಮಿಸಬೇಕು, ಕುರಿಗಳು ಹಸುಗಳು ತನ್ನ ಎದೆಯ ಮೇಲೆ ಬೆಳೆಯುವ ಹುಲ್ಲನ್ನು ಗಿಡಗಂಟಿಗಳನ್ನು ಸಂತಸದಿಂದ ಮೇಯ್ಯಬೇಕು, ಹತ್ತಾರು ಜನಕ್ಕೆ ಉಪಯೋಗಿಯಾಗುವ ಫಲವತ್ತು ಭೂಮಿ ತಾನಾಗಬೇಕು ಎನ್ನುವ ಕನಸು ಈ ಮರಳುಗಾಡಿನದ್ದು. ಆದರೆ ತನ್ನ ಕನಸು ಎಂದಿಗೂ ನನಸಾಗಲಾರದು ಎಂಬ ಕಟು ಸತ್ಯವನ್ನರಿತಿರುವ ಈ ಬೆಂಗಾಡು ತನ್ನ ದುರದೃಷ್ಟವನ್ನು ನೆನೆದು ಪ್ರತಿನಿತ್ಯವೂ ಕಣ್ಣೀರಾಗುತ್ತದೆ’ ಎಂದ ಆಗಂತುಕ ಪುನಃ ಮರಭೂಮಿಯನ್ನು ಸಂತೈಸಲಾರಂಭಿಸಿದ.

‘ಓಹೋ..!! ಹೌದೇನು..? ಹಾಗಿದ್ದರೆ ಈ ಕೂಡಲೇ ತನ್ನ ದುಃಖವನ್ನು ನಿಲ್ಲಿಸುವಂತೆ ಮರುಭೂಮಿಗೆ ನೀನು ಹೇಳು, ಏಕೆಂದರೆ ತಾನು ನಿರುಪಯೋಗಿ ಎನ್ನುವ ಅದರ ಆಲೋಚನೆಯೇ ಅರ್ಥಹೀನ’ ಎಂದ ಪ್ರಚಾರಕನ ಮುಖದಲ್ಲಿ ಸಣ್ಣದ್ದೊಂದು ಮಂದಹಾಸ. ‘ಇಲ್ಲಿ ಕೇಳು, ಅಗಾಧವಾದ ಈ ಮರಳುಗಾಡಿನಲ್ಲಿ ನಡೆಯುತ್ತ ಸಾಗುವ ಪ್ರತಿಕ್ಷಣವೂ ಮನುಷ್ಯನೆಷ್ಟು ಚಿಕ್ಕವನು ಎನ್ನುವ ವಾಸ್ತವದ ಅರಿವು ನನಗಾಗುತ್ತದೆ. ಬರಿದಾದ ಮರಳುಭೂಮಿಯ ನೆಲದಿಂದ ಆಗಸದತ್ತ ನೋಡುವಾಗ ಅಪರಿಮಿತವಾದ ಆಗಸದ ಅನಂತತೆಯನ್ನು ಕಂಡು ಸೃಷ್ಟಿಕರ್ತನೆದುರು ಮಾನವನೆಷ್ಟು ಕುಬ್ಜ ಎನ್ನುವ ಸತ್ಯದರ್ಶನವಾಗುತ್ತದೆ. ಈ ಭೂಮಿಯ ತುಂಬೆಲ್ಲ ಹರಡಿರುವ ಅಗಣಿತ ಮರಳಿನ ಕಣಗಳನ್ನು ಗಮನಿಸಿದಾಗ ಪೃಥ್ವಿಯುದ್ದಕ್ಕೂ ಹರಡಿಕೊಂಡಿರುವ ಮನುಷ್ಯ ಸಂಕುಲದ ನೆನಪಾಗುತ್ತದೆ. ಮರಭೂಮಿಯಲ್ಲಿ ಹರಡಿಬಿದ್ದಿರುವ ಏಕರೂಪಿಯ ಮರಳಿನ ಕಣಗಳಂತೆ, ಜಗದಗಲಕ್ಕೂ ಹಾಸಿಕೊಂಡಿರುವ ಮನುಜರೂ ಸಹ ಪ್ರಕೃತಿಯೆದುರು ಸಮಾನರೇ ಎನ್ನುವ ನಿಜ ಅರ್ಥವಾಗುತ್ತದೆ. ಇಲ್ಲಿನ ಮರಳು ದಿಣ್ಣೆಗಳ ಸಹಜ ಸೌಂದರ್ಯ ನನ್ನನ್ನು ಧ್ಯಾನಕ್ಕೆ ಪ್ರೇರೇಪಿಸುತ್ತವೆ. ಮುಂಜಾನೆಯಲ್ಲಿ ನಿಧಾನವಾಗಿ ದಿಗಂತವನ್ನೇರುವ ಉದಯರವಿಯನ್ನು ಇಲ್ಲಿನ ಆಗಸದಲ್ಲಿ ಕಂಡಾಗಲಂತೂ ನನ್ನ ಮನಸ್ಸೆಂಬುದು ಸಂತಸದ ಊಟೆಯಾಗುತ್ತದೆ. ಈ ಮರಭೂಮಿಯ ನಿಸರ್ಗವನ್ನು ಆಸ್ವಾಧಿಸುವಾಗಲೆಲ್ಲ ನಾನು ಭಗವಂತನಿಗೆ ಇನ್ನಷ್ಟು ಹತ್ತಿರವಾದ ಭಾವ ನನ್ನದು. ಹೀಗೆ ಮನುಷ್ಯನಿಗೆ ತನ್ನ ಅಸ್ತಿತ್ವದ ನಿಜರೂಪದರ್ಶನ ಮಾಡಿಸುವ ಮರಳುಗಾಡನ್ನು ಬರಡು ಭೂಮಿ ಎನ್ನುವುದರಲ್ಲಿ ಅರ್ಥವಿದೆಯೇ..’? ’ಎಂದು ಕೇಳಿದ ಪ್ರಚಾರಕನ ದನಿಯಲ್ಲೊಂದು ಅವ್ಯಕ್ತ ಆರ್ದ್ರತೆ.

ಹಾಗೊಂದು ಚಿಕ್ಕ ಸಂವಾದ ಮುಗಿಸಿ ತನ್ನ ಮನೆಗೆ ತೆರಳಿದ್ದ ಪ್ರಚಾರಕನಿಗೆ ನಿಜಕ್ಕೂ ಆಶ್ಚರ್ಯವಾಗಿದ್ದು ಮರುದಿನವೂ ನೆಲಕ್ಕೆ ಕಿವಿಗೊಟ್ಟು ಬಾಗಿ ಕುಳಿತಿರುವ ಆಗಂತುಕನನ್ನು ಕಂಡಾಗ. ಮರುಭೂಮಿಯನ್ನು ಸಂತೈಸುತ್ತಿದ್ದ ಅಪರಿಚತನ ಭುಜ ತಟ್ಟಿದ ಪ್ರಚಾರಕ, ‘ನಿನ್ನೆ ನಾನು ನಿನಗೆ ಹೇಳಿದ್ದೆಲ್ಲವನ್ನೂ ನೀನು ಮರಭೂಮಿಗೆ ತಿಳಿಸಿದೆಯಾ’ ಎಂದು ಪ್ರಶ್ನಿಸಿದ. ಹೌದೆನ್ನುವಂತೆ ತಲೆಯಾಡಿಸಿದ ಆಗಂತುಕ. ‘ನೀನು ಎಲ್ಲವನ್ನು ವಿವರಿಸಿದ ನಂತರವೂ ಮರಭೂಮಿ ಅಳುತ್ತಿದೆಯಾ..’? ಎನ್ನುವ ಪ್ರಶ್ನೆ ಪ್ರಚಾರಕನದ್ದು. ‘ಹೌದು ಮರಭೂಮಿ ಈಗಲೂ ಅಳುತ್ತಿದೆ. ನನ್ನ ಕಿವಿಗಳಿಗೆ ಅದರ ಬಿಕ್ಕಳಿಕೆಗಳು ಸ್ಪಷ್ಟವಾಗಿ ಕೇಳಿಸುತ್ತಿವೆ. ಆದರೆ ಅದೀಗ ಮೊದಲಿನಂತೆ ನಿರಾಸೆಯಿಂದ ರೋಧಿಸುತ್ತಿಲ್ಲ. ಬದಲಾಗಿ ತನ್ನದೇ ಪೆದ್ದುತನವನ್ನು ನೆನೆದು ಅಳುತ್ತಿದೆ. ತಾನೊಂದು ನಿಷ್ಪ್ರಯೋಜಕ ಬಂಜರು ಭೂಮಿ ಎನ್ನುತ್ತ ತನ್ನನ್ನೇ ತಾನು ಹಳಿದುಕೊಳ್ಳುತ್ತ, ಸದಾಕಾಲ ತನ್ನ ಹಣೆಬರಹವನ್ನು ದೂಷಿಸುತ್ತ, ತನಗೆ ಇಂಥಹ ಕೆಟ್ಟ ವಿಧಿಲಿಖಿತವನ್ನು ದಯಪಾಲಿಸಿದ ಭಗವಂತನ ನಿಂದನೆ ಮಾಡುತ್ತ ಸಾವಿರಾರು ವರ್ಷಗಳಷ್ಟು ಕಾಲವನ್ನು ವ್ಯರ್ಥವಾಗಿ ಕಳೆದುಕೊಂಡ ತನ್ನ ದಡ್ಡತನದ ಬಗ್ಗೆ ಮರುಕಪಡುತ್ತಿದೆ’ ಎಂದು ನುಡಿದ ಆಗಂತುಕನ ಮುಖದಲ್ಲೀಗ ನಿರ್ಭಾವುಕ ಭಾವ.

ಅಪರಿಚಿತ ಮಾತುಗಳನ್ನು ಕೇಳಿದ ಪ್ರಚಾರಕದ ಮುಖದಲ್ಲೊಂದು ಕಿರಿದಾದ ಮುಗುಳ್ನಗೆ. ’ಮನುಷ್ಯರ ಕತೆಯೂ ಈ ಮರಳುಗಾಡಿನ ಕತೆಗಿಂತ ತೀರ ಭಿನ್ನವೇನಲ್ಲ ಮಿತ್ರ. ಮರಭೂಮಿಗೆ ಆಯಸ್ಸಿಗೆ ಹೋಲಿಸಿದರೆ ಮಾನವನ ಜೀವಿತಾವಧಿ ತೀರ ಚಿಕ್ಕದು. ಆದಾಗ್ಯೂ ಮನುಷ್ಯ ಸಹ ತನ್ನ ಜೀವಮಾನದ ಬಹುತೇಕ ಸಮಯವನ್ನು ಋಣಾತ್ಮಕ ಆಲೋಚನೆಗಳಲ್ಲಿಯೇ ಕಳೆಯುತ್ತಾನೆ. ತನ್ನ ಅಪ್ರಯೋಜಕತೆಯ ಬಗ್ಗೆ ದುಃಖಿಸುತ್ತ, ತನ್ನ ಹಣೆಬರಹದ ಬಗ್ಗೆ ಕಾಣದ ದೇವರನ್ನು ದೂಷಿಸುತ್ತ ಬಹುಪಾಲು ಆಯಸ್ಸನ್ನು ಕಳೆದು ಬಿಡುತ್ತಾನೆ. ತನ್ನ ಬದುಕಿನ ನಿಜವಾದ ಉದ್ದೇಶವನ್ನು ಕಂಡುಕೊಂಡು ಉದ್ದೇಶ ಸಾಧನೆಯತ್ತ ಸಾಗುವ ಮನುಷ್ಯರು ತೀರ ವಿರಳ. ಆದರೆ ಒಂದು ದಿವ್ಯ ಕ್ಷಣದಲ್ಲಿ ಪ್ರತಿಯೊಬ್ಬ ಮನುಷ್ಯನಿಗೂ ತನ್ನ ಜೀವನದ ಗುರಿಯ ದರ್ಶನವಾಗುವುದಂತೂ ಸತ್ಯ. ಗುರಿಯನ್ನು ಕಂಡುಕೊಂಡ ನಂತರವೂ ಅನೇಕರು ರೋಧಿಸುತ್ತಲೇ ಇರುತ್ತಾರೆ. ಅದಾಗಲೆ ಬದುಕಿನ ಸಾಕಷ್ಟು ಸಮಯ ಕಳೆದು ಹೋಗಿಬಿಟ್ಟಿದೆ, ಹಾಗಾಗಿ ಬಾಳಿನ ಗುರಿಯನ್ನು ಬೆನ್ನಟ್ಟುವುದರಲ್ಲಿ ಅರ್ಥವಿಲ್ಲ ಎನ್ನುವ ತರ್ಕ ಅವರದ್ದು. ಈ ಮರುಭೂಮಿಯಂತೆಯೇ ಅವರು ಸಹ ತಮ್ಮ ದಡ್ಡತನವನ್ನು ಶಪಿಸುತ್ತ ಬದುಕಿನಲ್ಲುಳಿದ ಕೊಂಚ ಸಮಯವನ್ನೂ ಸಹ ಅರ್ಥಹೀನರಾಗಿ ವ್ಯಯಿಸಿಬಿಡುತ್ತಾರೆ’ ಎಂದು ನುಡಿದ ಪ್ರಚಾರಕ ಕ್ಷಣಕಾಲ ಶಾಂತನಾದ. ಮಾತು ಮುಂದುವರೆಸುತ್ತ, ’ನಾನೀಗ ನುಡಿದ ಮಾತುಗಳು ಮರುಭೂಮಿ ಕೇಳಿಸಿತೋ ಇಲ್ಲವೋ ಎಂಬುದು ನನಗಂತೂ ತಿಳಿಯದು. ಆದರೆ ಮರುಭೂಮಿಗೂ ಸಹ ನೇತ್ಯಾತ್ಮಕ ಮನೋವೃತ್ತಿಯ ಮನುಷ್ಯರಂತೆ ವೇದನೆಯೂ ಸಹ ವ್ಯಸನದಂತಾಗಿಬಿಟ್ಟಿದೆ. ಚೇತನೆಯ ಅಲೋಚನಾ ಧಾಟಿ ಅದಕ್ಕೆ ಒಗ್ಗುತ್ತಿಲ್ಲ’ ಎಂದ ಪ್ರಚಾರಕ, ‘ಬದುಕಿನಲ್ಲಿ ಭರವಸೆಯನ್ನು ಕಳೆದುಕೊಂಡ ಜೀವಿಗಳಲ್ಲಿ ಹೊಸದೊಂದು ಆಶಾಕಿರಣವನ್ನು ಹುಟ್ಟಿಸುವುದಕ್ಕಾಗಿ ನಾನು ಮಾಡುವ ಕೊನೆಯ ಪ್ರಯತ್ನವೆಂದರೆ ಪ್ರಾರ್ಥನೆ. ಈ ಅಶಾಂತ, ದುಃಖಿ ಮರಳುಗಾಡಿಗೋಸ್ಕರ ನಾವಿಬ್ಬರೂ ಈಗ ಒಟ್ಟಾಗಿ ಕುಳಿತು ಪ್ರಾರ್ಥಿಸೋಣ ಬಾ’ ಎನ್ನುತ್ತ ಆಗುಂತಕನತ್ತ ನೋಡಿದ.

ಅವರಿಬ್ಬರೂ ಮರಭೂಮಿಯ ಮೇಲೆ ಮಂಡಿಯೂರಿ ಕುಳಿತುಕೊಂಡರು. ಮುಸ್ಲಿಮನಾಗಿದ್ದ ಆಗಂತುಕ ಮೆಕ್ಕಾದ ದಿಕ್ಕಿನೆಡೆಗೆ ಮುಖ ಮಾಡಿ ನಮಾಜು ಮಾಡಲಾರಂಭಿಸಿದರೆ, ಎದೆಯ ಮೇಲೆ ಶಿಲುಬೆಯಾಕಾರದ ಸಂಕೇತವನ್ನು ಮಾಡಿಕೊಳ್ಳುತ್ತ ಪ್ರಾರ್ಥಿಸತೊಡಗಿದ ಪ್ರಚಾರಕ. ಇಬ್ಬರೂ ಸಹ ತಮ್ಮ ತಮ್ಮ ದೇವರನ್ನೇ ಪ್ರಾರ್ಥಿಸಿದರಾದರೂ ಇಬ್ಬರ ಪ್ರಾರ್ಥನೆಯೂ ಬೇರೆ ಬೇರೆ ಹೆಸರುಗಳಿಂದ ಕರೆಯಲ್ಪಡುವ ಸರ್ವಶಕ್ತನಾದ ಸೃಷ್ಟಿಕರ್ತನನ್ನೇ ತಲುಪಿತು ಎನ್ನುವುದಂತೂ ಸತ್ಯ. ಎಂದಿನಂತೆ ಮರುದಿನ ತನ್ನ ಬೆಳಗಿನ ವಿಹಾರಕ್ಕೆ ಮರಭೂಮಿಯತ್ತ ತೆರಳಿದ್ದ ಪ್ರಚಾರಕನಿಗೆ ಅಲ್ಲಿ ಆಗಂತುಕ ಗೋಚರಿಸಲಿಲ್ಲ. ಆಗಂತುಕ ಮರಭೂಮಿಯನ್ನು ಸಂತೈಸುತ್ತಿದ್ದ ಸ್ಥಳದ ಮರಳು ಕೊಂಚ ತೇವವಾಗಿತ್ತು. ಅಲ್ಲಿ ಚಿಕ್ಕದ್ದೊಂದು ನೀರ ಬೊಬ್ಬುಳಿಯ ಉದ್ಭವವಾಗಿತ್ತು. ತಿಂಗಳೊಪ್ಪತ್ತಿನಲ್ಲಿ ಬೊಬ್ಬುಳಿಯು ನೀರಿನ ಬುಗ್ಗೆಯಾಗಿ ಬದಲಾಗಿತ್ತು. ಜಲದ ಚಿಲುಮೆಯಿಂದ ಸಂತಸಗೊಂಡ ಮರುಭೂಮಿಯ ನಿವಾಸಿಗಳು ಅಲ್ಲೊಂದು ಬಾವಿಯನ್ನು ಸಹ ನಿರ್ಮಿಸಿಕೊಂಡರು. ಅರಬ್ಬರು ಈ ಬಾವಿಯನ್ನು ‘ಮರಳುಗಾಡಿನ ಕಂಬನಿಯ ಬಾವಿ’ ಎಂದೇ ಕರೆಯುತ್ತಾರೆ. ಬಾವಿಯ ನೀರು ಕುಡಿದ ಪ್ರತಿಯೊಬ್ಬನು ತನ್ನ ದುಃಖವನ್ನು ಸಂತಸವನ್ನಾಗಿ ರೂಪಾಂತರಗೊಳಿಸಿಕೊಳ್ಳುತ್ತಾನೆ ಮತ್ತು ತನ್ನ ಬದುಕಿನ ನಿಜವಾದ ಉದ್ದೇಶವನ್ನು ಕಂಡುಕೊಳ್ಳುತ್ತಾನೆ ಎನ್ನುವುದು ಅರಬ್ಬರ ನಂಬಿಕೆ.

‘The alchemist’ ಎನ್ನುವ ಸಾರ್ವಕಾಲಿಕ ಶ್ರೇಷ್ಟ ಕಾದಂಬರಿಯನ್ನು ಬರೆದ ಬ್ರೆಜಿಲ್ ನ ಸಾಹಿತ್ಯ ಲೋಕದ ದಂತಕತೆ ಪೌಲೋ ಕೊಯೆಲೊನ ಕತೆಯೊಂದರ ಭಾವಾನುವಾದದ ಪ್ರಯತ್ನವಿದು. ‘Like a Flowing River’ ಎನ್ನುವ ಕೊಯೆಲೊನ ಕಥಾ ಸಂಕಲನದಿಂದ ಆಯ್ದುಕೊಳ್ಳಲಾಗಿರುವ ಈ ಕಥೆಯ ತುಣುಕಿನಲ್ಲಿ ಬರುವ ಕಂಬನಿಯ ಬಾವಿ ಕಾಲ್ಪನಿಕವೇ ಆಗಿದ್ದರೂ ಕತೆಯ ತಿರುಳು ಮಾತ್ರ ವಾಸ್ತವದ ಪ್ರತಿಬಿಂಬ ಎಂದರೆ ಅತಿಶಯೋಕ್ತಿಯಲ್ಲ. ನಮ್ಮಲ್ಲಿ ಬಹುತೇಕರು ಕತೆಯಲ್ಲಿ ಕಾಣಸಿಗುವ ಮರಳುಗಾಡಿನಂತವರೇ. ಗೊತ್ತು ಗುರಿಯಿಲ್ಲದೇ ಬದುಕ ಸಾಗಿಸುತ್ತ, ಕಾಣದ ದೇವರನ್ನು, ಓದಲಾಗದ ಹಣೆಬರಹವನ್ನು ದೂಷಿಸುತ್ತ ಕಾಲ ಕಳೆಯುವವರೇ ಇಲ್ಲಿ ಹೆಚ್ಚು. ಒಮ್ಮೆ ಗುರಿ ಕಂಡುಕೊಂಡವರು ಬದುಕಿನ ಓಟದಲ್ಲಿ ತೀವ್ರಗತಿಯನ್ನು ಪಡೆದುಕೊಳ್ಳುತ್ತರಾದರೂ ಅಂಥವರ ಸಂಖ್ಯೆಯೂ ತೀರ ಕಡಿಮೆ. ಕಂಡುಕೊಂಡ ಗುರಿಯನ್ನು ತಲುಪದಿರುವುದಕ್ಕೂ ಹತ್ತು ಹಲವು ಕಾರಣಗಳನ್ನು ಹುಡುಕಿಕೊಂಡು ಕೊನೆಗೂ ತಮ್ಮೆಲ್ಲ ರೋಧನೆಗಳಿಗೂ ಸೃಷ್ಟಿಕರ್ತನನ್ನೇ ಗುರಿಯಾಗಿಸುವ ವೇದನಾ ವ್ಯಸನಿಗಳಿಗಾಗಿಯೇ ಬರೆದಿರಬಹುದಾದ ಈ ಕತೆಯನ್ನು ನಿಮ್ಮೆದುರಿಗಿಡುತ್ತಿದ್ದೇನೆ. ಓದಿಕೊಳ್ಳುವ ಔದಾರ್ಯ ನಿಮ್ಮದಾಗಲಿ.

6 ಟಿಪ್ಪಣಿಗಳು Post a comment
  1. ಸ್ಪಂದನ ರಾಮ್
    ಸೆಪ್ಟೆಂ 27 2016

    ಎಂದಿನಂತೆ ಅಮೋಘ ಬರಹ ಗುರುರಾಜ್ ಸರ್

    ಉತ್ತರ
  2. Sangamesh Bevinagidad Koppal
    ಸೆಪ್ಟೆಂ 28 2016

    superb sir….namaste…

    ಉತ್ತರ
  3. ಸೆಪ್ಟೆಂ 28 2016

    ವಾಹ್,ಅತ್ಯಂತ ಸುಂದರ ಭಾವಾನುವಾದ. ನನ್ಎದೆಯ ಮರುಭೂಮಿಯಲ್ಲಿ “ತಣ್ಣೀರ” ಬುಗ್ಗೆ ಚಿಮ್ಮಿತು

    ಉತ್ತರ
    • ಶೆಟ್ಟಿನಾಗ ಶೇ.
      ಆಕ್ಟೋ 2 2016

      ” ನನ್ಎದೆಯ ಮರುಭೂಮಿ”

      ಕರೆಕ್ಟ್. ಅಲ್ಲೊಂದು ಪವಿತ್ರ ಮಕ್ಕಾ ಮದೀನಾ ನಿರ್ಮಾಣವಾಗಲಿ; ನಿಮ್ಮ ಭಾವನೆಗಳು ಹಜ್ ಯಾತ್ರೆ ಮಾಡಿ ಶುದ್ಧವಾಗಲಿ.

      ಉತ್ತರ
      • ರಂಜನಾ ರಾಮ್ ದುರ್ಗ
        ಆಕ್ಟೋ 3 2016

        ಅಲ್ಲೊಂದು ಆಳವಾದ ಬಾವಿಯಿದ್ದರೆ ನೀವು ಬೀಳುವಂತಾಗಲಿ!

        ಉತ್ತರ
        • ಶೆಟ್ಟಿನಾಗ ಶೇ.
          ಆಕ್ಟೋ 3 2016

          ತಂಗಿ ರಂಜನಾ, ನಿನ್ನಾಸೆ ಖಂಡಿತ ನೆರವೇರಿಸುತ್ತೇನೆ. ಮಾನ್ಯ ಸುದರ್ಶನರಾಯರ ಎದೆಯೊಳಗೆ ಪ್ರವೇಶ ಮಾಡಲು ದಾರಿ ಮಾಡಿಕೊಡು, ಒಂದು ಡ್ರಿಲ್ಲಿಂಗ್ ಮೆಶೀನಿನ ಸಹಾಯ ಪಡೆದಾದರೂ..

          ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments