ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 28, 2016

ವೈಟ್ ಕಾಲರ್ಡ್ ಕಾರ್ಮಿಕರ ಸಂಕಟ ಕೇಳುವವರ್ಯಾರು?

‍ನಿಲುಮೆ ಮೂಲಕ

– ರಾಕೇಶ್ ಶೆಟ್ಟಿ
196qih4eoemsejpgಸೆಪ್ಟಂಬರ್ ೨ರಂದು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಭಾರತ್ ಬಂದ್’ಗೆ ಕರೆ ಕೊಟ್ಟಿದ್ದವು, ಕಾರ್ಮಿಕರು ತಮ್ಮ ತಮ್ಮ ಸಂಘಟನೆಗಳೊಂದಿಗೆ ಬೀದಿಗಿಳಿದಿದ್ದರೇ, ಬಹಳಷ್ಟು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಐಟಿಯಂತಹ ಇನ್ನಿತರ ‘ವೈಟ್ ಕಾಲರ್’ ಕಾರ್ಮಿಕರಿಗೆ ಅವತ್ತು ಕೆಲಸದ ದಿನವೇ ಆಗಿತ್ತು. ಅಂದು ಬೆಳಗ್ಗೆ ಸುದ್ದಿವಾಹಿನಿಯಲ್ಲಿ ಕೆಲಸ ಮಾಡುತ್ತಿರುವ ಮಿತ್ರರೊಬ್ಬರಿಗೆ ಕಾರ್ಯನಿಮಿತ್ತವಾಗಿ ಕರೆ ಮಾಡಿ, ಎಲ್ಲಿದ್ದೀರಿ? ಎಂದೆ. ಇಲ್ಲೇ ಮೆಜಿಸ್ಟಿಕ್ ಸುತ್ತ-ಮುತ್ತ ತಿರುಗಾಡ್ತ ಇದ್ದೀನಿ, ಭಾರತ್ ಬಂದ್ ಎಫೆಕ್ಟ್ ಜನ ಸಾಮಾನ್ಯರಿಗೆ ಹೇಗೆ ಆಗುತ್ತಿದೆ ಅಂತ ತೋರಿಸಬೇಕಲ್ಲ ಎಂದರು. ವಿಚಿತ್ರ ನೋಡಿ ಬ್ಲ್ಯೂ-ವೈಟ್ ಇತ್ಯಾದಿ ಎಲ್ಲಾ ಬಣ್ಣದ ಕಾರ್ಮಿಕರ ಬವಣೆಗಳ ಬಗ್ಗೆ ವರದಿ ಮಾಡುವ ಮಾಧ್ಯಮದ ಗೆಳೆಯರಿಗೆ ತಮ್ಮದೇ ಪತ್ರಿಕೋದ್ಯಮದ ಸಮಸ್ಯೆಗಳನ್ನು ಬಹಿರಂಗವಾಗಿ ಹೇಳಿಕೊಳ್ಳಲು, ಪ್ರತಿಭಟಿಸಲೂ ಆಗುವುದಿಲ್ಲ. ಇಂತ ಸಮಸ್ಯೆಗಳ ಬಗ್ಗೆ ಏನಿದ್ದರೂ ಅವರು ಖಾಸಗಿಯಾಗಿ ಮಾತನಾಡಬಲ್ಲರೇ ಹೊರತು ಸಾರ್ವಜನಿಕವಾಗಿಯಲ್ಲ. ಯಾಕೆಂದರೆ ಮಾಧ್ಯಮಗಳಲ್ಲಿ ಕೆಲಸ ಮಾಡುವವರು Blue Collar Worker ಗಳಲ್ಲ ಅವರ ಕಾರ್ಮಿಕ ಹಕ್ಕುಗಳಿಗಾಗಿ ಒಂದು ಕಾರ್ಮಿಕ ಸಂಘಟನೆಯೂ ಇಲ್ಲ. ಇದು ಕೇವಲ ಮಾಧ್ಯಮದಲ್ಲಿರುವ White Collar Worker ಗಳಿಗೆ ಸಂಬಂಧಿಸಿದ ಸಮಸ್ಯೆಯಲ್ಲ. ಸಿಲಿಕಾನ್ ಸಿಟಿಯೆಂದು ಕರೆಯಲ್ಪಡುವ ಬೆಂಗಳೂರಿನ ಸಾಫ್ಟ್’ವೇರ್ ರಂಗದಂತಹ ಖಾಸಗಿ ಕಚೇರಿಗಳಲ್ಲಿ ಕೆಲಸ ಮಾಡುವವರ ಕತೆಯೂ ಇದೇ.

ಬಂದ್ ನಡೆಯುವ ಕೆಲವು ದಿನಗಳ ಹಿಂದೆ, ಗೆಳೆಯನೊಬ್ಬನ ಜೊತೆಗೆ ಮಾತಿಗಿಳಿದಿದ್ದೆ. ಅಂದು ಅವನು ಯಾಕೋ ಸಪ್ಪಗಿದ್ದ. ಏನಾಯ್ತಪ್ಪ ಅಂತ ಕೇಳಿದೆ.’ನನ್ನ ತಮ್ಮನಿಗೊಂದು ಕೆಲಸ ಹುಡುಕ್ತಾ ಇದ್ದೀನಪ್ಪ, ನಿಂಗೆಲ್ಲಾದ್ರೂ ಗೊತ್ತಿದ್ರೆ ಹೇಳು. ಅವನಂತೂ ಮಾನಸಿಕವಾಗಿ ಕುಗ್ಗಿ ಹೋಗಿದ್ದಾನೆ’ ಎಂದ. ವಿಷಯ ಏನೆಂದರೇ, ನಾಯಿ ಕೊಡೆಗಳಂತೆ ರಾಜ್ಯದ ತುಂಬೆಲ್ಲಾ ಬೆಳೆದು ನಿಂತಿರುವ ಇಂಜೀನಿಯರಿಂಗ್ ಕಾಲೇಜುಗಳಿಂದ ವರ್ಷಕ್ಕೆ ಸಾವಿರಾರು ಇಂಜಿನಿಯರ್ರುಗಳು ಹೊರಬರುತ್ತಾರೆ. ಹೀಗೆ ಬಂದವರಿಗೆಲ್ಲ ಸಿಗುವಷ್ಟು ಹುದ್ದೆಗಳು ಸೃಷ್ಟಿಯಾಗುತ್ತಿಲ್ಲ. ಅದರಲ್ಲೂ ಆಗಷ್ಟೇ ಕಾಲೇಜಿನಿಂದ ಹೊರಬಂದ ಅನನುಭವಿಗಳ ಪಾಡು ದೇವರಿಗೇ ಪ್ರೀತಿ. ಹೀಗೆ ಕೆಲಸ ಹುಡುಕಿಕೊಂಡು ಅಡ್ಡಾಡುವ ಹುಡುಗರನ್ನು ಹಳ್ಳಕ್ಕೆ ತಳ್ಳಿ, ಅವರ ತಲೆ ಮೇಲೆ ನಿಂತು ದುಡ್ಡು ಮಾಡಿಕೊಳ್ಳುವ ದಂಧೆಯೊಂದು ಬೆಂಗಳೂರಿನಲ್ಲಿ ಅವ್ಯಾಹತವಾಗಿದೆ.

ಯಾವುದೋ ಒಂದು ಹೆಸರಿನಲ್ಲಿ ಪುಟ್ಟ ಸಾಫ್ಟ್ವೇರ್ ಕಂಪೆನಿಯನ್ನೋ, ಟ್ರೈನಿಂಗ್ ಸೆಂಟರನ್ನೋ ಈ ವಂಚಕರು ತೆರೆಯುತ್ತಾರೆ. ಕೆಲಸ ಹುಡುಕಿಕೊಂಡು ಅಲೆದಾಡುವ ಹುಡುಗರನ್ನು ಹಿಡಿದು, ಐವತ್ತು ಸಾವಿರದಿಂದ ಶುರುಮಾಡಿ 1 ಲಕ್ಷದವರೆಗೂ ಹಣದ ಬೇಡಿಕೆ ಇಡುತ್ತಾರಲ್ಲದೇ, ಜೊತೆಗೆ ಒರಿಜಿನಲ್ ಅಂಕಪಟ್ಟಿ, ಡಿಗ್ರಿ ಸರ್ಟಿಫಿಕೇಟುಗಳನ್ನು ತೆಗೆದುಕೊಂಡು ಒಂದೆರಡು ವರ್ಷದ ಬಾಂಡ್ ಬರೆಸಿಕೊಳ್ಳುತ್ತಾರೆ. ಕೊಟ್ಟ ಹಣಕ್ಕೆ ನಿಮಗೆ Work Experience Certificate ಕೊಡುತ್ತೇವೆ ಅಂತಲೂ, ತಿಂಗಳಿಗೆ ಐದು ಸಾವಿರವೋ-ಆರು ಸಾವಿರವೋ ಕೊಡುತ್ತೇವೆ ಎಂದು ಹೇಳಿ ಸೇರಿಸಿಕೊಳ್ಳುತ್ತಾರೆ. ಮೊದಲೆರಡು ತಿಂಗಳು ಸರಿಯಾಗಿ ಸಂಬಳ ಕೊಟ್ಟು ಆ ನಂತರ ಕೊಡುವುದಿಲ್ಲ. ಹೋಗಿ ಕೇಳಿದರೆ ಪ್ರಾಜೆಕ್ಟ್ ಬಂದಿಲ್ಲ, ಕೈಂಟ್ ದುಡ್ಡು ಕೊಟ್ಟಿಲ್ಲ ಅಂತೆಲ್ಲ ಸಬೂಬು ಕೊಡುತ್ತಾರೆ. ಬೇಸತ್ತು ಒಂದಷ್ಟು ಜನ ಕೆಲಸ ಬಿಟ್ಟು ಬೇರೆ ಹುಡುಕಿಕೊಂಡು ಹೊರಟರೇ, ಇನ್ನೊಂದಷ್ಟು ಜನ ಇವರ ಕಪಿಮುಷ್ಟಿಯಲ್ಲಿ ಸಿಲುಕಿಕೊಳ್ಳುತ್ತಾರೆ. ಯಾವುದೋ ಒಂದು ಕಾಳ ರಾತ್ರಿಯಲ್ಲಿ ಈ ವಂಚಕರು ತಮ್ಮ ಲಗ್ಗೇಜ್ ಸಮೇತ ಬೀಗ ಹಾಕಿಕೊಂಡು ಜಾಗ ಖಾಲಿ ಮಾಡುತ್ತಾರೆ. ಇತ್ತ ಉದ್ಯೋಗದ ಆಕಾಂಕ್ಷಿ ಯುವಕರ ಹಣವೂ ಹೋಗುತ್ತದೆ, ಕೆಲವೊಮ್ಮೆ ಒರಿಜಿನಲ್ ಸರ್ಟಿಫಿಕೇಟುಗಳನ್ನು ಕಳೆದುಕೊಳ್ಳುತ್ತಾರೆ. ಹೀಗೆ ಮೋಸ ಹೋಗುವವರಲ್ಲಿ ಕೆಲವೇ ಜನರು ಪೋಲಿಸ್ ಠಾಣೆಯ ಮೆಟ್ಟಿಲು ಹತ್ತುವ ಧೈರ್ಯ ತೋರಿದರೆ, ಬಹಳಷ್ಟು ಜನ ಕೋರ್ಟು-ಕೇಸಿನ ರಗಳೆ ಬೇಡವೆಂದು ಸುಮ್ಮನಾಗುತ್ತಾರೆ. ಎಷ್ಟೋ ಜನರು ಐಟಿ ರಂಗಕ್ಕೆ ಕೈ ಮುಗಿದು ಬೇರೆ ಹಾದಿ ಹಿಡಿದರೆ, ಇನ್ನೊಂದಿಷ್ಟು ಜನ ವಿಧಿಯಿಲ್ಲದೇ ಇಲ್ಲೇ ಅದೃಷ್ಟದ ಹುಡುಕಾಟದಲ್ಲಿ ನಿರತರಾಗುತ್ತಾರೆ. ಈ ವೈಟ್ ಕಾಲರ್ಡ್ ಕಾರ್ಮಿಕರಿಗಾಗಿ ಯಾವುದೇ ಸಂಘಟನೆಗಳು ಇಲ್ಲದಿರುವುದರಿಂದ ಈ ಶೋಷಣೆ ಪ್ರತಿವರ್ಷ ನಡೆಯುತ್ತಲೇ ಇರುತ್ತದೆ. ಇಂತಹದ್ದೇ ಪ್ರಕರಣವೊಂದು ದೊಡ್ಡ ಸುದ್ದಿಯಾಗಿ ಬೆಂಗಳೂರು ಪೋಲಿಸರು ಇಂತಹ ವಂಚಕ ಕಂಪೆನಿಗಳ ಪಟ್ಟಿ ಬಿಡುಗಡೆ ಮಾಡಿದ್ದರು. ಆದರೇನು? ಈ ವಂಚಕರ ಆಟಗಳು ನಡೆಯುತ್ತಲೇ ಇರುತ್ತವೆ. ಮೋಸ ಹೋಗುವವರಿದ್ದಾಗ ಮೋಸ ಮಾಡುವವರಿರುವುದಿಲ್ಲವೇ? ಕಾರ್ಮಿಕ ಹಕ್ಕುಗಳು ಹೀಗೆ ಬೀದಿಯಲ್ಲಿ ಹರಾಜಾಗುತ್ತಿದ್ದರು ಸರ್ಕಾರಗಳು ತೆಪ್ಪಗಿವೆಯೇ ಹೊರತು, ಇದಕ್ಕೊಂದು ಪರಿಹಾರ ನೀಡುವ ಕಾನೂನಿನ ಬಗ್ಗೆ ಯೋಚಿಸಿಲ್ಲ.

ಅದೊಂದು ಸಾಫ್ಟ್ವೇರ್ ಕಂಪೆನಿ. ತೀರಾ ಹೆಸರಾಂತ ಅಂತ ಹೇಳಲಾಗದಿದ್ದರೂ ಇಂಡಸ್ಟ್ರಿಯಲ್ಲಿರುವವರಿಗೆ ಒಂದು ಹಂತಕ್ಕೆ ಪರಿಚಿತವಿರೋ ಕಂಪೆನಿ. Global Recession ಶುರುವಾಗುವ ಮೊದಲೇ, ಈ ಕಂಪೆನಿಯಲ್ಲಿ ಶುಕ್ರವಾರಗಳೆಂದರೆ ಉದ್ಯೋಗಿಗಳು ಭಯಮಿಶ್ರಿತ ಕುತೂಹಲದಲ್ಲಿರುತಿದ್ದರು. ಯಾವುದೋ ಮೂರು ತಿಂಗಳಿಗೋ ಆರು ತಿಂಗಳಿಗೋ ಹೀಗೆ ಯಾವುದೋ ಒಂದು ಶುಕ್ರವಾರ ಇದ್ದಕ್ಕಿದ್ದಂತೆ ಒಂದಿಬ್ಬರು ಉದ್ಯೋಗಿಗಳಿಗೆ HR ಡಿಪಾರ್ಟ್ಮೆಂಟಿನಿಂದ, ನಮ್ಮನ್ನು ಬಂದು ಭೇಟಿಯಾಗಿ ಎಂದು ಇಮೇಲ್’ಗಳು ಬರುತಿದ್ದವು. ನೆಲಮಹಡಿಯಲ್ಲಿದ್ದ HR ಕ್ಯಾಬಿನ್ನೊಳಗೆ ಹೋದಾಗ, ತಣ್ಣಗೇ ಪಿಂಕ್ ಸ್ಲಿಪ್ ಕೊಟ್ಟು ಕಳುಹಿಸಲಾಗುತ್ತಿತ್ತು. ಹೀಗೆ ಮಾಡುವಾಗ, ಅವರಿಗೆ ಮತ್ತೊಮ್ಮೆ ತಮ್ಮ ಜಾಗಕ್ಕೆ ಹೋಗಲೂ ಬಿಡುತ್ತಿರಲಿಲ್ಲ. ಅವರ ಬ್ಯಾಗು ಇತ್ಯಾದಿಗಳನ್ನು ಸೆಕ್ಯುರಿಟಿಗಳು ತಂದುಕೊಟ್ಟು ಅವರನ್ನು ಕ್ಯಾಂಪಸ್ಸಿನಿಂದ ಹೊರ ಕಳುಹಿಸುತಿದ್ದರು. ಹೀಗೆ ಕಳುಹಿಸುವಾಗ ಕೆಲವರಿಗೆ ನಿಬಂಧನೆಯಂತೆ ಎರಡು ತಿಂಗಳ ಸಂಬಳವನ್ನು ಕೊಟ್ಟು ಕಳುಹಿಸಲಾಗುತಿತ್ತು. ಇನ್ನು ಕೆಲವರಿಗೆ ಅದೂ ಇಲ್ಲ.

ಅಲ್ಲಿನ ಕಾಯ್ದೆಯ ಪ್ರಕಾರವೇ ನೋಡಿದರೂ ಯಾವುದೇ ವ್ಯಕ್ತಿಯನ್ನು ಕೆಲಸದಿಂದ ತೆಗೆಯುವ ಮುನ್ನ ಎರಡರಿಂದ-ಮೂರು, ಕಡೇಪಕ್ಷ ಒಂದಾದರೂ ಎಚ್ಚರಿಕೆ ಪತ್ರವನ್ನು ಕೊಡಬೇಕಾಗುತ್ತದೆ, ತಿದ್ದಿಕೊಳ್ಳಲು ಸಮಯವನ್ನಾದರೂ ಕೊಡಬೇಕಾಗುತ್ತದೆ. ಆದರೆ ಬಹುತೇಕ ಕಂಪೆನಿಗಳಲ್ಲಿ ಇದ್ಯಾವುದನ್ನು ಪಾಲಿಸುವುದಿಲ್ಲ. ಧಿಡೀರ್ ಪಿಂಕ್ ಸ್ಲಿಪ್ ಕೊಟ್ಟು ಓಡಿಸುತ್ತಾರೆ. ಧೈರ್ಯವಿರುವ ಒಂದಿಬ್ಬರು ತಿರುಗಿ ನಿಂತರೆ, ಇನ್ನೊಂದೆರಡು ತಿಂಗಳ ಸಂಬಳವನ್ನು ಕೊಟ್ಟು ಬಾಯಿ ಮುಚ್ಛಿಸುತ್ತಾರೆ. ಕಾರ್ಮಿಕ ನ್ಯಾಯಾಲಯದ ಕದ ತಟ್ಟಿದವರನ್ನು ನನ್ನ ಅನುಭವದಲ್ಲಿ ನೋಡಿಲ್ಲ. ಇವರ ಪರವಾಗಿಯೂ ದನಿಯೆತ್ತಲು ಯಾವುದೇ ಸಂಘಟನೆಗಳೂ ಇಲ್ಲ. ಬ್ಲ್ಯೂ ಕಾಲರ್ಡ್ ಕಾರ್ಮಿಕರನ್ನು ಕೆಲಸದಿಂದ ತೆಗೆಯುವಾಗಲಾದರೂ ಯುನಿಯನ್ ಭಯದಿಂದ ಮ್ಯಾನೇಜ್ಮೆಂಟ್ ಎಂಬುದು ಹಿಂದೆ ಮುಂದೆ ನೋಡುತ್ತದೆಯಾದರೂ, ಈ ವೈಟ್ ಕಾಲರ್ಡ್ ಕಾರ್ಮಿಕರ ವಿಷಯದಲ್ಲಿ ಯಾರಿಗೂ ಹೆದರಬೇಕಿಲ್ಲ. ಯಾಕೆಂದರೆ ಇಲ್ಲಿರುವುದು ಮ್ಯಾನೇಜ್ಮೆಂಟ್ ವರ್ಸಸ್ ಕಾರ್ಮಿಕ ಅಷ್ಟೇ. ಆತನದು ಅರಣ್ಯರೋದನವಷ್ಟೇ!

ಇವು ಕೆಲಸಕ್ಕೆ ಸೇರುವ, ಕೆಲಸ ಕಳೆದುಕೊಳ್ಳುವ ವೈಟ್ ಕಾಲರ್ಡ್ ಕಾರ್ಮಿಕರ ಬವಣೆಯ ಉದಾಹರಣೆಯಾದರೇ, ಕೆಲಸದಲ್ಲಿ ಇದ್ದುಕೊಂಡು ದೌರ್ಜನ್ಯ ಎದುರಿಸಬೇಕಾದ ಇನ್ನೊಂದು ಉದಾಹರಣೆಯಿದೆ. ಸಾಫ್ಟ್ವೇರ್ ಕಂಪೆನಿಗಳಲ್ಲಿ, ಪ್ರತಿವರ್ಷ Year End Performance Appraisal ಎಂಬ ಪ್ರಹಸನವೊಂದು ನಡೆಯುತ್ತದೆ. ಒಂದು ವರ್ಷದಲ್ಲಿ ತಾನು ಏನೆಲ್ಲಾ ಮಾಡಿದ್ದೇನೆ ಎಂಬುದನ್ನು ಉದ್ಯೋಗಿಯೂ ನಿಗದಿತ ನಮೂನೆಯ ಅರ್ಜಿಯಲ್ಲಿ ದಾಖಲಿಸಬೇಕು. ಮ್ಯಾನೇಜರ್ ಮತ್ತು ಅವರಿಗಿಂತ ಮೇಲಿರುವ ಮ್ಯಾನೇಜ್ಮೆಂಟಿನವರು ಇದನ್ನು ಪರಿಶೀಲಿಸಿ ತಮ್ಮ ಅಭಿಪ್ರಾಯವನ್ನು ದಾಖಲಿಸಿ, ಒಂದರಿಂದ-ಐದರೊಳಗಿನ ಸಂಖ್ಯೆಯಲ್ಲಿ ಯಾವುದೋ ಒಂದು ಸಂಖ್ಯೆಯನ್ನು ನೀಡುವ ಮೂಲಕ ಉದ್ಯೋಗಿಯ ಕಾರ್ಯಕ್ಷಮತೆಯನ್ನು ಅಳೆಯಲಾಗುತ್ತದೆ. ನಾಲ್ಕು-ಐದು ಸಂಖ್ಯೆಗಳೆಂದರೆ ಉದ್ಯೋಗಕ್ಕೆ ಕುತ್ತು ಎಂದರ್ಥ! ಐದು ಬಂದರೆ ಮೇಲೆ ಹೇಳಿದಂತೆ ಓಡಿಸಿಬಿಡುತ್ತಾರೆ. ನಾಲ್ಕು ಬಂದರೆ ಆ ವರ್ಷದ ಬೋನಸ್ ಕಟ್. ಬೋನಸ್ ಹಣದಲ್ಲಿ ನೀವು ಹಾಕಿಕೊಂಡಿದ್ದ ಯೋಜನೆಗಳಿಗೂ ಮಣ್ಣು. ಯಾರನ್ನೂ ಕೇಳುವಂತಿಲ್ಲ. ಕೇಳಲು ಹೋದರೆ ನಾಲ್ಕರಿಂದ ಐದಕ್ಕೇರಿಸಿ ಮನೆಗೇ ಕಳುಹಿಸುವ ಸಾಧ್ಯತೆಗಳೂ ಇರುತ್ತವೆ. ಬಹಳಷ್ಟು ಬಾರಿ ಈ ಅಂಕಗಳನ್ನು ನೀಡುವ ವಿಧಾನವನ್ನು ವೈಜ್ನಾನಿಕವಾಗಿಯೇನು ಇರುವುದಿಲ್ಲ (ಇರುತ್ತದೆ ಎಂದು ಮ್ಯಾನೇಜ್ಮೆಂಟ್ ಹೇಳಿಕೊಂಡರೂ). ಇಷ್ಟಿಷ್ಟು ಅಂಕಗಳು ಇಂತಿಷ್ಟೇ % ಜನರಿಗೆ ಮಾತ್ರ ಅಂತ ಮೀಸಲಾಗಿರುತ್ತದೆ. ಕಂಪೆನಿಯ ದೆಸೆ ಕೆಟ್ಟಿದೆಯೆಂದರೇ, ನಾಲ್ಕು-ಐದು ಅಂಕಗಳು ಕಡ್ಡಾಯವಾಗಿ ಕೊಡಲೇಬೇಕಾಗುತ್ತದೆ. ಕೊಡದಿದ್ದರೂ ಕೊಡಿಸಲಾಗುತ್ತದೆ. ಹೀಗೆ ಮಾನಸಿಕವಾಗಿ ತೊಳಲಾಡುವ ಐಟಿ ಉದ್ಯೋಗಿಗಳ ಸಹಾಯಕ್ಕೆಂದು ಯಾವುದೇ ಸಂಘಟನೆಗಳು ಇಲ್ಲ, ಪ್ರತ್ಯೇಕ ಕಾನೂನುಗಳೂ ಇಲ್ಲ. ಇದನ್ನು ಕಂಪೆನಿಗಳು ಮನಸೋ ಇಚ್ಚೆ ಬಳಸಿಕೊಳ್ಳುತ್ತಿದ್ದರೇ, ಹೆಚ್ಚು ಸಂಬಳ ಪಡೆಯುವವರು ಎಂಬ ಹಣೆಪಟ್ಟಿ ಕಟ್ಟಿಕೊಂಡ ಈ ವೈಟ್ ಕಾಲರ್ಡ್ ಉದ್ಯೋಗಿಗಳ ಪಾಡು ಅವರಿಗೇ ಗೊತ್ತು.

ಭಾರತೀಯ ಕಾರ್ಮಿಕ ಕಾನೂನಿನ ಪ್ರಕಾರ Standard work/day ಯನ್ನು ೮ ಗಂಟೆಗಳೆಂದು ಗುರುತಿಸಲಾಗಿದೆ. ಈ ಸಾಫ್ಟ್ವೇರ್ ರಂಗದಲ್ಲಿ ಕೆಲವು ಪ್ರಾಜೆಕ್ಟುಗಳ ಪ್ಲಾನಿಂಗ್ ಎಷ್ಟು ಕೆಟ್ಟದಾಗಿರುತ್ತವೆಂದರೆ, ಖುದ್ದು ನನ್ನದೇ ಅನುಭವವನ್ನು ದಾಖಲಿಸುವುದಾದರೇ, ಪ್ರಾಜೆಕ್ಟ್ ಒಂದರಲ್ಲಿ ಕೆಲಸ ಮಾಡುವಾಗ ಸತತ ಒಂದು ತಿಂಗಳುಗಳ ಕಾಲ ಸೂರ್ಯೋದಯಕ್ಕೆಲ್ಲ ಆಫೀಸು ಸೇರಿಕೊಂಡರೆ ಮತ್ತೆ ಹೊರಬರುತಿದ್ದಿದ್ದು ರಸ್ತೆಯಲ್ಲಿ ದೆವ್ವಗಳು ಓಡಾಡುವ ಸಮಯಕ್ಕೆ. ಆ ಒಂದು ತಿಂಗಳು ಸೂರ್ಯನ ಬೆಳಕನ್ನೂ ನೋಡಿರಲಿಲ್ಲ, ಚಂದಿರನನ್ನು ನೋಡಲಿಕ್ಕೆ ನಿದ್ದೆರಾಯ ಬಿಡಬೇಕಲ್ಲ! ಹೀಗೆ ಹೊತ್ತು-ಗೊತ್ತು ಇಲ್ಲದೇ ದುಡಿದರೆ Overtime Pay ಎಂಬುದು ಇಲ್ಲಿ ಅಪ್ಲೈ ಆಗುವುದಿಲ್ಲ. ತಿಂಗಳಿಗೆ ಕೊಡುವ ಸಂಬಳದಲ್ಲೇನು ವ್ಯತ್ಯಾಸವಾಗುವುದಿಲ್ಲ. ಪ್ರಾಜೆಕ್ಟ್ ಮ್ಯಾನೇಜರ್ ಉದಾರಿಯಾಗಿದ್ದರೆ, ಊಟ ಕೊಡಿಸಬಹುದಷ್ಟೇ. ಬಹುತೇಕ ಕೇಸುಗಳಲ್ಲಿ ಅದೂ ಸಿಗುವುದಿಲ್ಲ. ಇನ್ನು ಕೆಲವು ಪ್ರಾಜೆಕ್ಟುಗಳಲ್ಲಿ ವಾರಾಂತ್ಯದ ದಿನಗಳಲ್ಲೂ ಕಡ್ಡಾಯ ಕೆಲಸ ಮಾಡಲೇಬೇಕು ಎಂದು ತಾಖೀತು ಮಾಡುತ್ತಾರೆ. ಹೀಗೆ ಕೆಲಸ ಮಾಡಿದರೆ, ಮುಂದೆ ಸಮಯ ನೋಡಿಕೊಂಡು Comp Off ಕೊಡಬೇಕಾಗುತ್ತದೆ. ಆದರೆ, ಈ Comp Off ಕೂಡ ಮತ್ತೆ ಮ್ಯಾನೇಜರ್ ಮರ್ಜಿಯಲ್ಲೇ ಇರುತ್ತದೆ. ಓವರ್ ಟೈಮ್ ಕೆಲಸಕ್ಕೆ ಹಣವೂ ಇಲ್ಲ, ರಜೆಯೂ ಇಲ್ಲ. ಇದನ್ನೆಲ್ಲ ಉದ್ಯೋಗಿಗಳು ಪ್ರಶ್ನಿಸುವಂತಿಲ್ಲ. ತೀರಾ ಪ್ರಶ್ನಿಸಲು ನಿಂತರೆ, ಮೇಲೆ ಹೇಳಿದಂತೆ ವರ್ಷಾಂತ್ಯದಲ್ಲಿ ಬರುವ Performance Appraisal Cycleನಲ್ಲಿ ಬುದ್ಧಿ ಕಲಿಸಲಾಗುತ್ತದೆ. ಕಾರ್ಮಿಕ ಕಾನೂನುಗಳೆಲ್ಲೋ ಮೂಲೆಯಲ್ಲಿ ಬಿದ್ದು ನಗುತ್ತಿರುತ್ತವೆ!

ಇಷ್ಟೆಲ್ಲಾ ಬರೆದು, ಕೇವಲ ವೈಟ್ ಕಾಲರ್ಡ್ ಕಾರ್ಮಿಕರೆಂದು ಕರೆಸಿಕೊಳ್ಳುವವರ ಮೇಲೆ ಮಾತ್ರ ದೌರ್ಜನ್ಯಗಳಾಗುತ್ತಿವೆ ಎಂದು ಹೇಳುವುದು ಲೇಖನದ ಉದ್ದೇಶವಲ್ಲ. ಬ್ಲ್ಯೂ ಕಾಲರ್ಡ್ ಕಾರ್ಮಿಕರೆಂದು ಕರೆಯಲಾಗುವವರ ಮೇಲೂ ದೌರ್ಜನ್ಯಗಳು ಆಗುತ್ತವೆಯಾದರೂ, ಅವರ ಪರವಾಗಿ ದನಿಯೆತ್ತಲು ಯೂನಿಯನ್ ಗಳಿರುತ್ತವೆ. ಆ ಭಯದಿಂದಲಾದರೂ ಮ್ಯಾನೇಜ್ಮೆಂಟಿನವರು ಸವಾರಿ ಮಾಡುವ ಮೊದಲು ಯೋಚಿಸಿ ಹೆಜ್ಜೆಯಿಡುತ್ತಾರೆ. ಅಲ್ಲಾದರೇ ಮ್ಯಾನೇಜ್ಮೆಂಟ್ ಎದುರಿಸಬೇಕಾದದ್ದು ಒಂದು ಸಂಘಟನೆಯನ್ನು. ಆದರೆ, ವೈಟ್ ಕಾಲರ್ಡ್ ಕಾರ್ಮಿಕರ ವಿಷಯದಲ್ಲಾದರೇ, ಮ್ಯಾನೇಜ್ಮೆಂಟ್ ಅನ್ನು ಎದುರಿಸಬೇಕಾದವ ಒಬ್ಬಂಟಿ ಕಾರ್ಮಿಕನಷ್ಟೇ. ಎಷ್ಟೋ ಬಾರಿ ಕಂಪೆನಿಯಿಂದ ಸಿಗಬೇಕಾದ ಉಳಿದ ಹಣಕಾಸು, ಸೌಲಭ್ಯ, ಕೆಲಸದ ಅನುಭವ ಪತ್ರ ಪಡೆಯುವುದೇ ಭಿಕ್ಷೆಯಂತಾಗಿರುತ್ತದೆ ಸ್ಥಿತಿ. ಹೀಗಿದ್ದಾಗ ಸಂಸ್ಥೆಯ ವಿರುದ್ಧ ನಿಂತು ಬಡಿದಾಡುವವರು ಸಾವಿರದಲ್ಲಿ ಒಬ್ಬರಿದ್ದಿರಬಹುದು.

ಮಾಧ್ಯಮಗಳಲ್ಲೇನೋ ಸಾಫ್ಟ್ವೇರ್ ಇಂಜಿನೀಯರ್ರುಗಳೆಂದರೆ ಅತಿ ಹೆಚ್ಚು ಸಂಭಾವನೆ ಪಡೆಯುವವರು, ದುಂದು ವೆಚ್ಚ ಮಾಡುವವರು, ಮೋಜು-ಮಸ್ತಿ ಮಾಡುವವರು ಎಂಬ ಚಿತ್ರಣ ಕಟ್ಟಿಕೊಡಲಾಗಿದೆ. ಆದರೆ ಇದು ಸಂಪೂರ್ಣ ಸತ್ಯವಲ್ಲ. ಹುಡುಕುವ ಮನಸ್ಸಿದ್ದರೇ, ಕನಿಷ್ಟ ಸಂಬಳವೂ ಸಿಗದೇ ಸಾಫ್ಟ್ವೇರ್ ಇಂಜಿನಿಯರುಗಳೆನಿಸಿಕೊಂಡವರೂ ನಿಮಗೆ ಬೆಂಗಳೂರಿನಲ್ಲಿ ಸಾವಿರಗಟ್ಟಲೇ ಸಿಗಬಲ್ಲರು. ಇವತ್ತಿಗೆ ಸಾಫ್ಟ್ವೇರ್ ರಂಗಕ್ಕಿಂತ ಹೆಚ್ಚು ದುಡ್ಡು ಸಿಗುವ ಹಲವು ಕ್ಷೇತ್ರಗಳಿವೆ. ಅದಕ್ಕಿಂತಲೂ ಹೆಚ್ಚಾಗಿ ಈ ಐಟಿ ರಂಗದಲ್ಲಿರುವವರು ಮಧ್ಯಮ ವರ್ಗದವರು ಹೆಚ್ಚಿದ್ದಾರೆ. ಬಾಯಿಗೆ ಬೆಳ್ಳಿ ಚಮಚವನ್ನಿಟ್ಟುಕೊಂಡು ಹುಟ್ಟಿದವರ ಜೊತೆ ಜೊತೆಯಲ್ಲೇ ರೈತರ, ಕಾರ್ಮಿಕರ, ಬಡವರ ಮಕ್ಕಳು ಪರಿಶ್ರಮದಿಂದ ತಮ್ಮದೇ ಆದ ಸ್ಥಾನಗಳನ್ನು ಕಟ್ಟಿಕೊಂಡಿದ್ದಾರೆ. ವಾರಾಂತ್ಯಕ್ಕೆ ಮೋಜು-ಮಸ್ತಿಗಿಳಿಯುವ ಮಂದಿಗಳ ನಡುವೆಯೇ, ವಾರಾಂತ್ಯಕ್ಕೆ ದೂರದ ಊರಿನ ಹಳ್ಳಿ ಶಾಲೆಗಳಿಗೆ ಹೋಗಿ ಪಾಠ ಮಾಡುವ, ಶಾಲಾ ಸಲಕರಣೆಗಳನ್ನು ಹಂಚುವ, ತಮ್ಮದೇ ನೆಲೆಯಲ್ಲಿ ಸಮಾಜ-ದೇಶದ ಸೇವೆ ಮಾಡುತ್ತಿರುವವರು ಇದ್ದಾರೆ. ಹೀಗಿದ್ದಾಗ ‘ವೈಟ್ ಕಾಲರ್ಡ್ ಕಾರ್ಮಿಕರು’ ಎಂದರೆ ಶ್ರೀಮಂತರು ಎಂದುಕೊಳ್ಳಬೇಕಿಲ್ಲ. ಅವರೂ ಕಾರ್ಮಿಕ ವರ್ಗಕ್ಕೆ ಸೇರುತ್ತಾರೆ. Ofcourse ಅವರ ಶ್ರಮ ದೈಹಿಕವಾದದ್ದಲ್ಲದ್ದಿರಬಹುದು. ಆದರೆ, ಅವರ ಶ್ರಮವೆಂಬುದು ಮಾನಸಿಕವಾದದ್ದು. ತಲೆ ಖರ್ಚು ಮಾಡುವುದರ ಜೊತೆಗೆ, ದೌರ್ಜ್ಯನ್ಯ್ಗಗಳನ್ನು ಎದುರಿಸಿ ಹೈರಾಣಾಗುವುದರಿಂದಲೇ ಇಂದು ಎಳೆ ವಯಸ್ಸಿಗೆ ಡಾಕ್ಟರ್ರುಗಳ ಬಾಗಿಲು ತಟ್ಟುವ, ಆಶ್ರಮಗಳತ್ತ ಶಾಂತಿ ಅರಸಿ ಹೊರಡುವ ಯುವಕರ ಸಂಖ್ಯೆ ಹೆಚ್ಚಾಗುತ್ತಿರುವುದರ ಮೂಲವನ್ನು ನಾವು ಗಂಭೀರವಾಗಿ ನೋಡಬೇಕಿದೆ.

ಸರ್ಕಾರಗಳು ಕಾರ್ಪೋರೇಟುಗಳನ್ನು ಎದುರು ಹಾಕಿಕೊಂಡು ವೈಟ್ ಕಾಲರ್ಡ್ ಕಾರ್ಮಿಕರಿಗಾಗಿಯೇ ಪ್ರತ್ಯೇಕ ಕಾನೂನುಗಳನ್ನು ತರುವುದು ಕಷ್ಟಸಾಧ್ಯ. ಮುಖ್ಯವಾಗಿ ಯಾವುದೇ ಸರ್ಕಾರಗಳು ಇಂತ ಕೆಲಸವನ್ನು ತಾವಾಗಿಯೇ ಮಾಡುವುದಿಲ್ಲ. ಮಾಡುವಂತೆ ಜನಾಭಿಪ್ರಾಯಗಳು ರೂಪು ತಳೆಯಬೇಕು. ಒಂದಂತೂ ಸತ್ಯ. ಇಷ್ಟು ದಿನ ಆಗಿ ಹೋಗಿರುವ ಸರ್ಕಾರಗಳಿಗೆ ಹೋಲಿಸಿದರೇ, ಮೋದಿಯವರ ಸರ್ಕಾರ ಜನಾಭಿಪ್ರಾಯಗಳನ್ನು ಗೌರವಿಸಿ ಜಾರಿಗೆ ತರುವಲ್ಲಿ ಮುತುವರ್ಜಿ ತೋರುತ್ತಿದೆ ಎಂಬುದಕ್ಕೆ ಹಲವು ನಿದರ್ಶನಗಳಿವೆ. ಇಂತಹ ಸಮಯದಲ್ಲಿ ವೈಟ್ ಕಾಲರ್ಡ್ ಕಾರ್ಮಿಕರು ತಮ್ಮದೇ ಆದ ಸಂಘಟನೆಯನ್ನು ಮಾಡಿಕೊಂಡು, ಪುರಾತನ ಕಾಲದ ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿಗಳನ್ನು ತರುವಂತೆ ಸರ್ಕಾರದ ಮುಂದೆ ಹಕ್ಕೊತ್ತಾಯ ಮಾಡಲು ಇದು ಸುಸಮಯ.

(ಕಡೆಯದಾಗಿ ಒಂದು ಮಾತು. ನಾನೊಬ್ಬ ಸಾಫ್ಟ್ವೇರ್ ಇಂಜಿನಿಯರ್ ಆಗಿರುವುದರಿಂದ ನನ್ನದೇ ಕ್ಷೇತ್ರದ ಸಮಸ್ಯೆಗಳನ್ನು ಅನುಭವದ ಆಧಾರದ ಮೇಲೆ ದಾಖಲಿಸಿದ್ದೇನೆ. ಈ ಸಮಸ್ಯೆ ಎನ್ನುವುದು ‘ವೈಟ್ ಕಾಲರ್ಡ್ ಕಾರ್ಮಿಕರು’ ಎಂದು ಗುರುತಿಸಲಾಗುವ ಎಲ್ಲಾ ರಂಗದ ಉದ್ಯೋಗಿಗಳೂ ಸಂಬಂಧಿಸಿದ್ದು ಎನ್ನುವುದು ನನ್ನ ನಿಲುವು)

 ಚಿತ್ರ ಕೃಪೆ:- lifehacker.com

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments