ಪ್ರೇತದ ಆತ್ಮ ಚರಿತೆ! (ಭಾಗ ೫)
– ಶ್ರೀಕಾಂತ್ ಶೆಟ್ಟಿ
ಪ್ರೇತದ ಆತ್ಮ ಚರಿತೆ! (ಭಾಗ ೧)
ಪ್ರೇತದ ಆತ್ಮ ಚರಿತೆ! (ಭಾಗ ೨)
ಪ್ರೇತದ ಆತ್ಮ ಚರಿತೆ! (ಭಾಗ 3)
ಪ್ರೇತದ ಆತ್ಮ ಚರಿತೆ! (ಭಾಗ ೪)
ಛೇ ಏನಾಗಿ ಹೋಯಿತು. ದೇಶದ ಗಡಿಗಳನ್ನು ಕಾಯ ಬೇಕಿದ್ದ ಮರಾಠಾ ಖಡ್ಗಗಳು ತಮ್ಮತಮ್ಮೊಳಗೆ ಕಣಕಣಿಸತೊಡಗಿದವು. ಹೆಣ್ಣೊಬ್ಬಳ ದುಷ್ಟತನಕ್ಕೆ ಸಾಮ್ರಾಜ್ಯದ ಸ್ಥಂಭಗಳೇ ಬುಡ ಕಳಚಿಕೊಂಡವು. ತನ್ನ ನಿಷ್ಟಾವಂತ ಸೇನಾನಿಗಳನ್ನು ಕೂಡಿಕೊಂಡು ರಘುನಾಥ ರಾವ್ ಪೇಶ್ವಾ ಪಟ್ಟವನ್ನು ಅಲಂಕರಿಸಿಯೇ ಬಿಟ್ಟ.!! ನಾರಾಯಣ ರಾವ್ ರಕ್ತದಿಂದ ತೊಯ್ದು ಹೋಗಿದ್ದ ಪೇಶ್ವಾ ಕಿರೀಟ ರಘುನಾಥ ರಾವ್ ಪೇಶ್ವಾ ತಲೆಯಲ್ಲಿ ಘಟಸರ್ಪವೊಂದು ಮಡಿಕೆ ಹಾಕಿ ಕುಳಿತಂತೆ ಕಾಣುತ್ತಿತ್ತು. ಯಾವುದೇ ಕ್ಷಣದಲ್ಲಾದರೂ ಆ ಆತ್ಮ ಪ್ರತಿಕಾರಕ್ಕಿಳಿಯದೆ ಸುಮ್ಮನಿರುವುದಿಲ್ಲ. ಅಷ್ಟು ಭೀಕರವಾಗಿ ಆ ಬಾಲಕನನ್ನು ಕತ್ತರಿಸಿ ಕೊಲ್ಲಲಾಗಿತ್ತು. ನಾರಾಯಣನ ಕಣ್ಣೀರು ರಕ್ತ ಒಂದಾಗಿ ಬೆರೆತು ರಘುನಾಥನ ಪಾದ ತೊಯ್ದರೂ ಆತ ಆ ಮುಗ್ದ ಬಾಲಕನ ಮೇಲೆ ಕರುಣೆ ತೋರಿರಲಿಲ್ಲ.
ಅಧಿಕಾರದ ಗದ್ದುಗೆ ರಘುನಾಥನಿಗೆ ಲಭಿಸಿದರೂ ಅದರಲ್ಲಿ ನೆಮ್ಮದಿಯಿಂದ ಕುಳಿತುಕೊಳ್ಳುವ ಭಾಗ್ಯ ಅವನಿಗೆ ಸಿಗಲೇ ಇಲ್ಲ… ಪೇಶ್ವಾ ಗಾದಿ ಅವನಿಗೆ ಮುಳ್ಳಿನ ಮದೆಯಂತೆ ಭಾಸವಾಗತೊಡಗಿತು. ರಾತ್ರಿ ನಿದ್ದೆಯಲ್ಲೂ ಭಯಾನಕವಾಗಿ ಹತ್ಯೆಯಾದ ನಾರಾಯಣನ ಮುಖವೇ ಕಣ್ಣೆದುರಿಗೆ ಕಾಣ ತೊಡಗಿತು. ಕಿವಿಗಳಲ್ಲಿ ಕಾಕಾ… ಕಾಕಾ… ಎನ್ನುತ್ತಾ ಪ್ರಾಣ ಭಿಕ್ಷೆಯಾಚಿಸುತ್ತಾ ಅಂಗಲಾಚುವ ನಾರಾಯಣನ ನೆತ್ತರಿನಲ್ಲಿ ತೊಯ್ದುಹೋದ ರುದ್ರ ಭೀಕರ ಮುಖವೇ ಗೋಚರಿಸ ತೊಡಗಿತು. ರಘುನಾಥನಿಗೆ ನಿದ್ದೆಯೇ ಮರೀಚಿಕೆಯಾಯಿತು. ಯಾವ ಮಂತ್ರವಾದಕ್ಕೂ ಪೂಜೆ ಪುನಸ್ಕಾರಗಳಿಗೂ ರಘುನಾಥನ ಕಳೆದುಹೋದ ಮನಶಾಂತಿಯನ್ನು ಮತ್ತೆ ಮರಳಿಸುವುದು ಸಾಧ್ಯವಾಗಲಿಲ್ಲ. ಇತ್ತ ನಾರಾಯಣನ ಹತ್ಯೆಯಿಂದ ಚಿಂತಿತನಾದ ನಾನಾ ಫಡ್ನವೀಸ್, ಮರಾಠಾ ಸಾಮ್ರಾಜ್ಯವನ್ನು ಹೇಗೆ ಈ ಅಧಿಕಾರದಾಹಿಗಳ ಕೈಯಿಂದ ಉಳಿಸಿಕೊಳ್ಳುವ ಬಗ್ಗೆ ಯೋಚಿಸ ತೊಡಗಿದ. ಮೊದಲನೆಯದಾಗಿ ಪೇಶ್ವಾ ನಾರಾಯಣ ರಾವ್ ಕೊಲೆ ಸೈನಿಕರ ಆಕ್ರೋಶದಿಂದ ಆಗಿರುವುದಲ್ಲ. ಅದೊಂದು ಪೂರ್ವ ನಿಯೋಜಿತ ಸಂಚು, ಅದನ್ನು ರಘನಾಥನೇ ಮಾಡಿಸಿದ್ದಾನೆ ಎನ್ನುವುದನ್ನು ಸತಾರಾದಲ್ಲಿರುವ ಶಿವಾಜಿ ವಂಶಸ್ಥರಿಗೆ ಮನವರಿಕೆ ಮಾಡಬೇಕಿತ್ತು. ಆಗ ಮಾತ್ರ ರಘುನಾಥನ ಮೇಲೆ ಕಾನೂನು ಕ್ರಮ ಸಾಧ್ಯವಿತ್ತು. ಪಡ್ನವೀಸ್ ತಡಮಾಡಲಿಲ್ಲ. ಸತಾರಾದ ಅರಮನೆಗೆ ರಘುನಾಥ ಮಾಡಿರುವ ಪಿತೂರಿ ಮತ್ತು ನಾರಾಯಣನ ಕೊಲೆಯ ಹಿಂದಿನ ಸಂಚಿನ ಬಗ್ಗೆ ದೂರು ನೀಡಿದ. ರಾಜನಿಂದ ತನಿಖೆಗೆ ಆದೇಶ ಸಿಕ್ಕಿತು. ಮುಖ್ಯ ನ್ಯಾಯಮೂರ್ತಿಗಳಾಗಿದ್ದ ರಾಮಶಾಸ್ತ್ರಿ ಪ್ರಭುಣೆ ಅವರು ಪ್ರಕರಣದ ವಿಚಾರಣೆ ನಡೆಸಿದರು. ಕೊಲೆಗಡುಕ ಸುಮೇರ್ ಸಿಂಗ್ ತನಗೆ ಬಂದಿದ್ದ ಆದೇಶವನ್ನು ತಾನು ಪಾಲನೆ ಮಾಡಿದ್ದೇನೆ ಎಂದು ಆದೇಶ ಪತ್ರವನ್ನು ಮುಂದೆ ಮಾಡಿ ಬದುಕಿಕೊಂಡ. ರಘುನಾಥ ರಾವ್ ತಾನು ಕೇವಲ ಬಂಧಿಸುವಂತೆ ಆದೇಶ ನೀಡಿದ್ದೆ ಅದನ್ನು ತಿದ್ದಿರುವುದು ಆನಂದಿ ಬಾಯಿ ಎಂದು ಒಪ್ಪಿಕೊಂಡ. ಆನಂದಿ ಬಾಯಿ ಕೊಲೆಗಡುಕಿ ಎನ್ನುವುದು ಜಗಜ್ಜಾಹೀರಾಯ್ತು. ಆದರೆ ನಾನಾ ಫಡ್ನವೀಸ್ ವಲಯದಲ್ಲಿ ಒಂದು ಚರ್ಚೆ ಏರ್ಪಟ್ಟಿತು. ರಘುನಾಥನನ್ನು ಇಳಿಸಿ ಬಳಿಕ ಅಲ್ಲಿಗೆ ಕೂರಿಸುವುದಾದರೂ ಯಾರನ್ನು? ಪೇಶ್ವ ಗದ್ದುಗೆಗೆ ನಾರಾಯಣನ ಬಳಿಕ ಉತ್ತರಾಧಿಕಾರಿಗಳೇ ಇರಲಿಲ್ಲವೇ? ಶನಿವಾರವಾಡೆಯ ಈ ವೀರ ಸಿಂಹಾಸನಕ್ಕೆ ರಘುನಾಥ ಎಂಬ ಅಧಿಕಾರದಾಹಿ ಅಯೋಗ್ಯನೇ ಗತಿಯೇ? ಮರಾಠಾ ನಾಯಕರನ್ನು ಆವರಿಸಿದ್ದ ನಿರಾಶೆಯ ಕಾರ್ಮೋಡದ ನಡುವೆ ಭರವಸೆಯ ಕೋಲ್ಮಿಂಚೊಂದು ಗೋಚರಿಸಿತು. ಸತ್ತ ನಾರಾಯಣ ಪೇಶ್ವೆಯ ಮಡದಿ ಗಂಗಾಬಾಯಿ ಇನ್ನೂ ಶನಿವಾರ ವಾಡೆಯಲ್ಲೇ ಇದ್ದಳು. ಅಷ್ಟೇ ಅಲ್ಲ ಆಕೆ ಮೂರು ತಿಂಗಳ ಗರ್ಬಿಣಿ ಎಂಬ ಸುಳಿವು ಸಿಕ್ಕಿತು. ನಾನಾ ಫಡ್ನವೀಸ್ ತಡ ಮಾಡಲಿಲ್ಲ. ಹೇಗಾದರೂ ಮಾಡಿ ಈ ವಿಚಾರ ರಘುನಾಥ ರಾವ್ ಕಿವಿಗೆ ಬೀಳುವ ಮೊದಲೇ ಅವಳನ್ನು ಪುಣೆಯಿಂದ ಹೊರಗೆ ರವಾನಿಸಬೇಕು. ಇಲ್ಲದೇ ಹೋದರೆ ರಘುನಾಥ ಆ ಮಗುವನ್ನು ಗರ್ಭದಲ್ಲೇ ಹೊಸಕಿ ಹಾಕುವ ಸಾದ್ಯತೆ ಇತ್ತು. ನಾನಾ ಫಡ್ನವೀಸ್ ಆ ಮಗುವಿನ ರಕ್ಷಣೆಗಾಗಿ ಒಂದು ಉಪಾಯ ಮಾಡಿದ. ಪೇಶ್ವಾ ಗದ್ದುಗೆಗೆ ಕಡುನಿಷ್ಟರಾಗಿದ್ದ ಹನ್ನೊಂದು ಮಂದಿ ಮರಾಠಾ ಸರದಾರರನ್ನು ಒಗ್ಗೂಡಿಸಿದ. ಅವರ ಒಕ್ಕೂಟಕ್ಕೆ “ಬಾರಹ್ ಬಾಯಿ ಒಕ್ಕೂಟ” ಎಂದು ಹೆಸರು ಇಟ್ಟ ಮರಾಠರ ಆರಾಧ್ಯ ಮೂರ್ತಿಯಾಗಿದ್ದ ತ್ರ್ಯಂಭಕೇಶ್ವರನ ಮುಂದೆ ಇವರು ಕ್ಷೀರಾನ್ನವನ್ನು ಕೈಯಲ್ಲಿ ಹಿಡಿದು ಪ್ರತಿಜ್ನೆ ಮಾಡಿದರು. ನಾರಾಯಣ ಪೇಶ್ವೆಯ ಮಗುವನ್ನು ಪೇಶ್ವಾ ಗದ್ದುಗೆಯಲ್ಲಿ ಕೂರಿಸಿ ಆ ಮಗುವಿನ ಮೂಲಕ ಮರಾಠಾ ಸಾಮ್ರಾಜ್ಯವನ್ನು ಮತ್ತೆ ಬಲಿಷ್ಟವಾಗಿ ಕಟ್ಟುತ್ತೇವೆ.. ನಮ್ಮ ಈ ಪ್ರತಿಜ್ಞೆಗೆ ತ್ರ್ಯಂಭಕೇಶ್ವರನೇ ಸಾಕ್ಷಿ… ಬಾರಾ ಭಾಯಿಗಳ ಅದೃಷ್ಟ ಚೆನ್ನಾಗಿತ್ತು. ಗಂಗಾಬಾಯಿ ಗಂಡುಮಗುವಿಗೆ ಜನ್ಮ ನೀಡಿದಳು. ಮಗುವಿಗೆ ಮಾಧವರಾವ್ ನಾರಾಯಣ್ ಎಂದು ನಾಮಕರಣ ಮಾಡಲಾಯಿತು. ಪೇಶ್ವಾ ವಂಶದ ಉತ್ತರಾಧಿಕಾರಿ ಪುರಂದರಘಡ ಕೋಟೆಯಲ್ಲಿ ಭಾರಾಭಾಯಿಗಳ ಸರ್ಪಗಾವಲಿನಲ್ಲಿ ಬೆಳೆಯ ತೊಡಗಿತು. ಬಲಾತ್ಕಾರದಿಂದ ಗದ್ದುಗೆ ಹತ್ತಿ ಕುಳಿತಿದ್ದ ರಘುನಾಥನನ್ನು ಎಳೆದು ಹಾಕಲು ಎಲ್ಲಾ ಸಿದ್ಧತೆಗಳು ಭರ್ಜರಿಯಾಗಿಯೇ ನಡೆಯಿತು. ಪುಣೆಯ ಪೇಶ್ವಾಗಳಲ್ಲಿ ಸ್ವರಾಜ್ಯ ನಿಷ್ಟೆ ಇದ್ದಷ್ಟು ಕಾಲ ಬ್ರಿಟೀಷರಿಗೆ ಮದ್ಯ ಭಾರತದಲ್ಲಿ ಬೇರೂರಲು ಅರ್ದ ಅಂಗುಲ ಜಾಗವೂ ಲಭಿಸಿರಲಿಲ್ಲ. ಆದರೆ ಈ ಮನೆಹಾಳ ಅಧಿಕಾರಕ್ಕೆ ಬಂದಿದ್ದೇ ತಡ ವಿದೇಶಿ ಶಕ್ತಿಗಳಾದ ಬ್ರಿಟೀಷರೊಂದಿಗೆ ಕೈ ಜೋಡಿಸಿ, ರಾಷ್ಟ್ರದ್ರೋಹ ಬಗೆದುಬಿಟ್ಟ. ತನಗೆ ಅಗತ್ಯ ಬಿದ್ದಾಗ ಬಾರಾಹ್ ಭಾಯಿಗಳ ಒಕ್ಕೂಟದೊಂದಿಗೆ ಹೋರಾಡಲು ಸೈನಿಕ ಸಹಾಯ ಮಾಡಬೇಕು ಎಂಬ ಒಪ್ಪಂದದ ಮೇರೆಗೆ ರಘುನಾಥ ಬ್ರಿಟೀಷರ ಪಕ್ಷ ಸೇರಿಕೊಂಡು ಬಿಟ್ಟ!!
ಪತ್ನಿಯ ಬಂಧನ ಮತ್ತು ತನ್ನ ಪದಚ್ಯುತಿಗೆ ಕಾರಣರಾಗಿರುವ ನಾನಾ ಪಡ್ನವೀಸ್ ಮತ್ತು ಬಾರಹ ಭಾಯಿಗಳ ಒಕ್ಕೂಟದ ವಿರುದ್ಧ ರಘುನಾಥ ಕುದ್ದು ಹೋಗಿದ್ದ. ತನ್ನ ಒಂದಷ್ಟು ಸಂಪರ್ಕವನ್ನು ನಾನಾ ಪಡ್ನವೀಸ್ ಮೇಲೆ ಯುದ್ಧ ಸಾರಲು ರಘುನಾಥ ಸರ್ವ ಸಿದ್ಧತೆಯನ್ನೂ ನಡೆಸಿದ. ೧೭೭೪ರಲ್ಲಿ ಪಂಡರಾಪುರ ಸಮೀಪದ ಕಸೆಗಾಂವ್ ಬಳಿ ರಘುನಾಥ ರಾವ್ ಮತ್ತು ಬಾರಾಭಾಯಿ ಒಕ್ಕೂಟದ ನಡುವೆ ಸಣ್ಣ ಯುದ್ಧ ನಡೆಯಿತು. ಈ ಯುದ್ಧದಲ್ಲಿ ರಘುನಾಥ ರಾವ್ ಹೀನಾಯವಾಗಿ ಸೋತು ಹೋದ. ಬ್ರಿಟೀಷರ ನೆರವನ್ನು ಯಾಚಿಸಿ ರಘುನಾಥ ರಾವ್ ಗುಜರಾತಿನ ಕಾಂಬಾಟ್ ಗೆ ತೆರಳಿದ. ಆದರೆ ಬ್ರಿಟಿಷರು ಯಾವತ್ತೂ ಸೋಲುವವನ ಪಕ್ಷ ವಹಿಸಿದ ಉದಾಹರಣೆ ಇಲ್ಲ. ಅವರು ರಘುನಾಥನಿಂದ ಥಾಣೆ ಮತ್ತು ವಸಯಿ ಎರಡು ಪಟ್ಟಣಗಳನ್ನು ಪಡೆದುಕೊಂಡು ಆತನಿಗೆ ಸೂರತಿನಲ್ಲಿ ಜೀವ ಉಳಿಸಿಕೊಳ್ಳಲು ಆಶ್ರಯ ನೀಡಿದರು. ಅಧಿಕಾರದ ಆಸೆಗೆ ಬಿದ್ದು ತನ್ನವರ ರಕ್ತ ಚೆಲ್ಲಿದ ಪಾಪಿಗೆ ತಕ್ಕ ಶಾಸ್ತಿಯಾಯಿತು. ಬ್ರಿಟಿಷರು ಹಾಕುತ್ತಿದ್ದ ಎಂಜಲಿನಲ್ಲೇ ಬದುಕಿಕೊಂಡಿದ್ದ ರಘುನಾಥ ರಾವ್ ಸ್ವಲ್ಪ ಸಮಯದ ಬಳಿಕ ಮರಾಠರ ಸೇನೆಗೆ ಸೆರೆ ಸಿಕ್ಕಿದ. ಆತನನ್ನು ಮತ್ತು ಆತನ ಹೆಂಡತಿ ಆನಂದಿಯನ್ನು ಜೈಲಿನಲ್ಲಿಡಲಾಯಿತು. ೧೧ ಡಿಸೆಂಬರ್ ೧೭೮೩ರಲ್ಲಿ ಬೆನ್ನಿನಲ್ಲಿ ಹುಣ್ಣಾಗಿ, ರಘುನಾಥ ರಾವ್ ಸತ್ತು ಹೋದ. ನಾರಾಯಣನ ಶಾಪ ಆತನನ್ನು ಮತ್ತೆಂದೂ ಶನಿವಾರ ವಾಡೆಗೆ ಕಾಲಿಡದಂತೆ ಮಾಡಿತು. ಪುಣೆಯ ಪೇಶ್ವಾ ಗದ್ದುಗೆಯನ್ನು ನಲವತ್ತು ದಿನದ ಮಗು ಮಾಧವ ರಾವ್ ನಾರಾಯಣ್ ಪೇಶ್ವಾ ಅಲಂಕರಿಸಿದ. ನಾನಾ ಫಡ್ನವೀಸ್ ಮತ್ತು ದೌಲತ್ ರಾವ್ ಸಿಂಧಿಯಾ ಅವರ ಸಮರ್ಥ ಆಳ್ವಿಕೆಯಲ್ಲಿ ಶನಿವಾರ ವಾಡೆ ಅಲ್ಪ ಚೇತರಿಕೆ ಕಂಡಿತು. ಆದರೆ ನಾರಾಯಣ ರಾವ್ ಪೇಶ್ವಾನ ಪ್ರೇತ ಮಾತ್ರ ಯಾರನ್ನೂ ನೆಮ್ಮದಿಯ ನಿದ್ರೆ ಮಾಡಲು ಬಿಡಲಿಲ್ಲ. ಆ ಪ್ರೇತ ಅದೇನು ಭೀಷ್ಮ ಪ್ರತಿಜ್ನೆ ಮಾಡಿತ್ತೋ ಗೊತ್ತಿಲ್ಲ. ಒಂದರ ಹಿಂದೆ ಒಂದರಂತೆ ಆಘಾತಗಳು ಶನಿವಾರವಾಡೆಯ ಮೇಲೆ ಎರಗ ತೊಡಗಿತು. ನಾರಾಯಣ ಪೇಶ್ವೆಯ ಹಂತಕಿ ಆನಂದಿ ಬಾಯಿ ಬಗೆ ಬಗೆ ಪಂಡಿತರನ್ನು ಕರೆದು ಪ್ರಾಯಶ್ಚಿತ್ತ ಮಾಡಿಕೊಂಡರೂ ನಾರಾಯಣನ ಪ್ರೇತ ಮಾತ್ರ ಅವಳ ಬೆನ್ನು ಬಿಡಲಿಲ್ಲ. ಜೈಲಿನಲ್ಲೇ ಇದ್ದ ಆಕೆಗೆ ಪ್ರೇತ ಭಾಧೆಯಿಂದಲೇ ಸಾವಾಯಿತು ಎನ್ನುತ್ತಾರೆ ಪುಣೆಯ ಕೆಲ ಆಸ್ತಿಕರು.
ನಾರಾಯಣನ ಪ್ರೇತ ಶನಿವಾರವಾಡೆಯಲ್ಲಿ ಯಾರನ್ನೂ ಬದುಕಲು ಬಿಡಕೂಡದು ಎಂದು ನಿರ್ಧರಿಸಿತ್ತೇನೋ… ಪ್ರತಿ ಅಮವಾಸ್ಯೆಗೆ ನಾರಾಯಣನ ಪ್ರೇತ ವಿಕಾರವಾಗಿ ಅರಚುತ್ತಾ ಅಳುತ್ತಾ ರಂಪಾಟ ಮಾಡುತ್ತಿತ್ತು. ಈ ಭಾದೆಗೆ ಮದ್ದು ಅರೆಯಲು ಬಹಳಷ್ಟು ಮಾಂತ್ರಿಕರು ಪ್ರಯತ್ನಿಸಿ ಸೋತರು. ರಘುನಾಥನ ಕುಟುಂಬದ ಒಂದು ಕುಡಿಯೂ ಬದುಕದಂತೆ ಮಾಡುತ್ತೇನೆ ಎಂಬ ನಿರ್ಧಾರಕ್ಕೆ ನಾರಾಯಣನ ಪ್ರೇತ ಬಂದು ಬಿಟ್ಟಿತ್ತು. ಅದೊಂದು ದಿನ ಯಾರೂ ಊಹಿಸದ ಘಟನೆಯೊಂದು ನಡೆದು ಹೋಯಿತು. ಪೇಶ್ವಾ ಎರಡನೇ ಮಾಧವರಾವ್ ಶನಿವಾರವಾಡೆಯ ಮಹಡಿಯ ಮೇಲಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ. ಆತನ ಸಾವಿಗೆ ಕಾರಣ ಇಂದಿಗೂ ನಿಗೂಡ… ನಾರಾಯಣನ ಪ್ರೇತದ ಬಗ್ಗೆ ಪುಣೆಯಲ್ಲಿ ಹರಡಿದ್ದ ಪುಕಾರುಗಳಿಗೆ ಈ ಘಟನೆ ರೆಕ್ಕೆ ಪುಕ್ಕ ಜೋಡಿಸಿತು. ಉತ್ತರಾಧಿಕಾರಿ ಇಲ್ಲದೆ ಖಾಲಿ ಇದ್ದ ಪೇಶ್ವಾ ಪಟ್ಟಕ್ಕೆ ಕೂರಲು ಎಲ್ಲರೂ ಹಿಂಜರಿಯ ತೊಡಗಿದರು. ಕುಳಿತವರು ಸಾಯುತ್ತಾರೆ ಎಂಬ ಭಯ ಎಲ್ಲರಲ್ಲೂ ಇತ್ತು. ಆಗ ಪೇಶ್ವಾ ಪಟ್ಟಕ್ಕೆ ಒದಗಿ ಬಂದವನು ರಘುನಾಥ ರಾವ್ ಮಗ ಎರಡನೇ ಬಾಜಿರಾಯ ಶನಿವಾರವಾಡೆಯ ವೈಭವ ಸಂಪೂರ್ಣ ಮಣ್ಣುಪಾಲಾಗಿದ್ದು ಈತನ ಅವಧಿಯಲ್ಲೇ…. ಭಾರತದ ಒಂದೊಂದು ಪ್ರಾಂತ್ಯವನ್ನೂ ತಮ್ಮ ಕುಟಿಲ ತಂತ್ರಗಳಿಂದ ಕೈವಶ ಮಾಡಿಕೊಳ್ಳುತ್ತಿದ್ದ ಬ್ರಿಟೀಷರು ಪೇಶ್ವಾಗಳೆಂಬ ಪ್ರಚಂಡ ಶಕ್ತಿಯನ್ನು ಅರಗಿಸಲಾಗದೆ ಸುಮ್ಮನಿದ್ದರು. ನಾನಾ ಫಡ್ನವೀಸ್ ಇದ್ದಷ್ಟು ಕಾಲ ಆಂಗ್ಲರ ಆಟ ನಡೆಯಲಿಲ್ಲ. ೧೮೦೦ರಲ್ಲಿ ನಾನಾ ಫಡ್ನವೀಸ್ ರಾಜಕೀಯದಿಂದ ಮಾತ್ರವಲ್ಲ ಬದುಕಿನಿಂದಲೇ ನಿವೃತ್ತಿ ಹೊಂದಿದರು. ಶನಿವಾರವಾಡೆ ಒಬ್ಬ ನಿಷ್ಟಾವಂತ ಕಾವಲುಗಾರನನ್ನು ಕಳೆದುಕೊಂಡಿತು. ಮರಾಠರ ಮನೆಬಾಗಿಲಿಗೆ ಶ್ವೇತ ವಿಪತ್ತು ಲಗ್ಗೆ ಇಡಲು ಆರಂಭಿಸಿತು. ೧೮೦೩ರಲ್ಲಿ ಬ್ರಿಟೀಷರು ಮರಾಠರ ವಿರುದ್ಧ ಮತ್ತೆ ಹೋರಾಡುವ ಧೈರ್ಯ ತೋರಿದರು. ೧೭೭೯ರಲ್ಲಿ ಮಹಾದ್ ಜಿ ಶಿಂದೆ ನೇತೃತ್ವದ ಮರಾಠಾ ಸೈನ್ಯದ ಮುಂದೆ ನಿಲ್ಲಲಾಗದೆ ಕಾಲಿಗೆ ಬುದ್ದಿ ಹೇಳಿದ್ದ ಆಂಗ್ಲರು ಈಗ ಮತ್ತೆ ಯುದ್ಧಕ್ಕೆ ಬಂದಿದ್ದರು. ಆದರೆ ಮರಾಠರಲ್ಲಿ ಈಗ ಮಹಾದ್ ಜಿ ಶಿಂದೆಯಂತ ರಣಕಲಿಗಳು ಇರಲಿಲ್ಲ. ದೌಲತ್ ಸಿಂಧಿಯಾ, ರಂಗೊಜಿ ಭೊಸ್ಲೆ, ಯಶವಂತ ರಾವ್ ಹೋಳ್ಕರ್ ಮೊದಲಾದ ವೀರರು ಹೋರಾಟ ನಡೆಸಿದರು. ಆದರೆ ಮರಾಠಾ ಸಾಮ್ರಾಜ್ಯದ ಸರ್ವನಾಶ ವಿಧಿಲಿಖಿತವಾಗಿತ್ತು. ಭೀಕರ ಸೋಲಿಗೆ ತುತ್ತಾದ ಮರಾಠರು ಬ್ರಿಟೀಷರ ಮುಂದೆ ಮೊಣಕಾಲೂರಿ ಹೀನಾಯ ಒಪ್ಪಂದಕ್ಕೆ ಸಹಿ ಹಾಕಬೇಕಾಯಿತು. ೫ ಕೋಟಿ ಜನರನ್ನು ಆಳಿದ್ದ ಮರಾಠಪೇಶ್ವೆಗಳಿಗೆ, ಕಾನ್ಪುರ ಸಮೀಪದ ಬಿಟೂರ್ ಎಂಬ ಹದಿನೈದು ಸಾವಿರ ಜನರಿರುವ ಗ್ರಾಮವನ್ನು ಬಿಟ್ಟು ಕೊಡಲಾಯಿತು. ಶನಿವಾರವಾಡೆಯ ಮೇಲೆ ಬಾನೆತ್ತರಕ್ಕೆ ಹಾರಾಡುತ್ತಿದ್ದ ಮರಾಠ ದ್ವಜ ನೆಲಕ್ಕಿಳಿದು ಕಂಪನಿ ಸರಕಾರದ ಯೂನಿಯನ್ ಜಾಕ್ ಆಗಸಕ್ಕೇರಿತು. ಪೇಶ್ವಾಗಳು ತಮ್ಮ ರಕ್ತ ಬೆವರು ಒಂದು ಮಾಡಿ ಕಟ್ಟಿದ್ದ ಶನಿವಾರವಾಡೆಯನ್ನು ಬಿಳಿ ಮೂತಿಯ ಆಂಗ್ಲರಿಗೆ ಬಿಟ್ಟುಕೊಡಬೇಕಾಯಿತು. ಭಾರತವನ್ನಾಳಿದ ಪೇಶ್ವಾಗಳಿಗೆ ತಮ್ಮ ಅರಮನೆಯೂ ಉಳಿಯಲಿಲ್ಲ. ಈ ಸಾಲು ಸಾಲು ದುರಂತಗಳಿಗೆ ಆ ಒಂದು ಪ್ರೇತ ಎಷ್ಟು ಕಾರಣವೋ ಗೊತ್ತಿಲ್ಲ. ಆದರೆ ಪುಣೆ ಮಾತ್ರ ಈ ಮಾತನ್ನು ಕಟುವಾಗಿ ನಂಬುತ್ತದೆ. ಎಲ್ಲವೂ ನಾರಾಯಣನ ಪ್ರೇತದ ಶಾಪ.. ಈ ಪ್ರೇತ ಭಾದೆ ಇಲ್ಲಿಗೆ ನಿಲ್ಲುವುದಿಲ್ಲ. ೧೮೫೭ರ ಮೊದಲ ಸ್ವಾತಂತ್ರ್ಯ ಹೋರಾಟವನ್ನು ಹೆಣೆದ ಎರಡನೇ ಬಾಜಿ ರಾಯನ ದತ್ತುಮಗ ನಾನಾ ಸಾಹೇಬನನ್ನೂ ಅದು ಬಿಡದೆ ಕಾಡಿತು.
ಮುಂದುವರೆಯುತ್ತದೆ…
ಜೈ ಮಹಾಕಾಲ್…
EXCELLENT. pLEASE WRITE MORE