ಸರ್ಜಿಕಲ್ ಆಪರೇಶನ್
– ವಿನಾಯಕ ಹಂಪಿಹೊಳಿ
ಸರ್ಜರಿ ಎಂದರೆ ಶಸ್ತ್ರಚಿಕಿತ್ಸೆ. ದೇಹದ ಒಂದು ಭಾಗಕ್ಕೆ ಚಿಕಿತ್ಸೆ ಅಗತ್ಯವಾದಲ್ಲಿ ಅಲ್ಲಷ್ಟೇ ದೇಹವನ್ನು ಕೊಯ್ಯುವಂತೆ, ಸೈನಿಕ ಕಾರ್ಯಾಚರಣೆಯಲ್ಲಿಯೂ ಒಂದಾನೊಂದು ಪ್ರದೇಶದಲ್ಲಷ್ಟೇ ನಡೆಸುವ ಸೀಮಿತ ಕಾರ್ಯಾಚರಣೆಯೇ ಸರ್ಜಿಕಲ್ ಆಪರೇಶನ್. ಅಮೇರಿಕದ ಸೈನ್ಯ ಒಸಾಮಾ ಬಿನ್ ಲಾಡೆನ್ ವಾಸವಾಗಿರುವ ಸ್ಥಳದ ಮಾಹಿತಿ ತಿಳಿದಾಗ ಹೀಗೆಯೇ ದಾಳಿ ಮಾಡಿತ್ತು. ಈ ಹಿಂದೆ ಇರಾಕಿನಲ್ಲಿ ನ್ಯೂಕ್ಲಿಯರ್ ಚಟುವಟಿಕೆಗಳು ನಡೆಯುತ್ತಿರುವ ಮಾಹಿತಿ ಸಿಕ್ಕಾಗ ಇಸ್ರೇಲ್ ದೇಶವು ಒಪೆರಾ ಕಾರ್ಯಾಚರಣೆಯನ್ನು ರೂಪಿಸಿ, ತನ್ನ ವಾಯುಸೇನೆಯನ್ನು ಉಪಯೋಗಿಸಿಕೊಂಡು ಆ ನ್ಯೂಕ್ಲಿಯರ್ ರಿಯಾಕ್ಟರನ್ನು ಧ್ವಂಸ ಮಾಡಿ ಬಂದಿತ್ತು. ಇಸ್ರೇಲಿನ ವಿಮಾನವೊಂದನ್ನು ಅಪಹರಿಸಿ ದೂರದ ಎಂಟೆಬ್ಬೆಯಲ್ಲಿ ಇಳಿಸಿದಾಗ ಆಪರೇಶನ್ ಥಂಡರ್ಬೋಲ್ಟ್ ಯೋಜಿಸಿ ಏಕಾಏಕಿ ಅಲ್ಲಿನ ಭಯೋತ್ಪಾದಕರ ಮೇಲೆ ದಾಳಿ ಮಾಡಿ ಬಂಧಿತರನ್ನು ಬಿಡುಗಡೆಗೊಳಿಸಿತು.
ಇಸ್ರೇಲಿನ ವಾಯುಪಡೆ ಜಗತ್ತಿನಲ್ಲಿಯೇ ಹೆಚ್ಚು ಚಾಕಚಕ್ಯತೆಯಿಂದ ವರ್ತಿಸುವ ಸೈನ್ಯ ಎಂದರೆ ತಪ್ಪಾಗಲಾರದು. ಅಮೇರಿಕವನ್ನೂ ಹಿಡಿದು ಜಗತ್ತಿನ ಅನೇಕ ದೇಶಗಳ ಸೈನಿಕರಿಗೆ ವಾಯುಸೇನೆಯ ತರಬೇತಿ ಕೊಡುವದೂ ಕೂಡ ಇದೇ ಇಸ್ರೇಲ್. ೧೯೬೭ರಲ್ಲಿ ಈಜಿಪ್ತ, ಸಿರಿಯಾ, ಇರಾಕ್, ಜೊರ್ಡಾನ್, ಲೆಬನಾನ್ ಗಳು ಒಮ್ಮೆಲೇ ಮಧ್ಯದಲ್ಲಿರುವ ಇಸ್ರೇಲಿಗೆ ದಾಳಿ ಮಾಡಿದಾಗ ಅವೆಲ್ಲವನ್ನೂ ಏಕಕಾಲಕ್ಕೆ ಸೋಲಿಸಿ, ಎಲ್ಲದೇಶಗಳಲ್ಲೂ ತನ್ನ ಸೈನ ನುಗ್ಗಿಸಿ, ಆ ಪ್ರದೇಶಗಳನ್ನು ತನ್ನ ಗಡಿಯೊಳಗೆ ತಂದುಕೊಂಡು ಆರೇ ದಿನದಲ್ಲಿ ಯುದ್ಧ ಮುಗಿಸಿದ ಕುಶಾಗ್ರಮತಿ ಇಸ್ರೇಲ್. ಈ ಇಸ್ರೇಲಿನ ಸೈನ್ಯದ ಸಾಧನೆಗಳನ್ನು ಬರೆಯಲು ಕೂತರೆ ಅದೆಂದೂ ಮುಗಿಯದ ಅಧ್ಯಾಯ. ಒಂದೇ ವಾಕ್ಯದಲ್ಲಿ ಹೇಳುವದಾದರೆ ಇಪ್ಪತ್ತಕ್ಕೂ ಹೆಚ್ಚು ಯುದ್ಧವಿಮಾನಗಳು ಎಪ್ಸ್ಟೀನ್ ಎಂಬ ಇಸ್ರೇಲೀ ವಾಯುಪಡೆಯ ಸೈನಿಕನ ವಿಮಾನವನ್ನು ಒಮ್ಮೆಲೇ ಸುತ್ತುವರಿದಿದ್ದಾಗ ಎಲ್ಲರಿಂದಲೂ ತಪ್ಪಿಸಿಕೊಂಡಿದ್ದಷ್ಟೇ ಅಲ್ಲದೇ, ಎಲ್ಲರನ್ನೂ ಒಬ್ಬೊಬ್ಬರನ್ನಾಗಿ ಮುಗಿಸಿ, ಸಂಜೆಯ ಹೊತ್ತಿಗೆ ಆರಾಮವಾಗಿ ಏರ್ ಬೇಸ್ ಗೆ ಬಂದಿಳಿದಿದ್ದ ಎಂದರೆ ಆತ ಎಂಥ ದೈತ್ಯಯೋಧ ಎನ್ನುವದನ್ನು ಊಹಿಸಿ.
ಭಾರತವು ಈ ಹಿಂದೆಯೇ ಅಮೇರಿಕದ ಮಾದರಿ ದಾಳಿಯನ್ನು ಮಯನ್ಮಾರಿನಲ್ಲಿ ಮಾಡಿತ್ತು. ಅದು ಅಮೇರಿಕದ ಮಾದರಿಯ ದಾಳಿ ಏಕೆಂದರೆ ಅಮೇರಿಕದ ಸೈನ್ಯಕ್ಕೆ ಪಾಕಿಸ್ತಾನದಲ್ಲಿ ಅಲ್ಪಪ್ರಮಾಣದ ಮುಕ್ತತೆಗೆ ಅವಕಾಶ ನೀಡಿದ್ದ ರೀತಿಯಲ್ಲಿ ಮಯನ್ಮಾರ್ ಕೂಡ ಭಾರತಕ್ಕೆ ಸ್ವಲ್ಪ ಸ್ವಾತಂತ್ರ್ಯ ಬಿಟ್ಟುಕೊಟ್ಟಿತ್ತು. ಆದರೆ ಈಗ ಪಾಕಿಸ್ತಾನದ ಮೇಲೆ ಭಾರತ ನಡೆಸಿದ ಸೀಮಿತ ಕಾರ್ಯಾಚರಣೆಯು ಇಸ್ರೇಲ್ ಮಾದರಿಯ ದಾಳಿ. ಏಕೆಂದರೆ ಇಸ್ರೇಲ್ ಎಲ್ಲೆಲ್ಲಿ ದಾಳಿ ಮಾಡಿತ್ತೋ ಆ ಪ್ರದೇಶಗಳು ಇಸ್ರೇಲಿನ ಸೈನಿಕರಿಗೆ ಒಂಚೂರು ಅನುಕೂಲಕರವಾಗಿರಲಿಲ್ಲ. ಈಗ ಭಾರತವೂ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಅಲ್ಲಿನ ಉಗ್ರರನ್ನು ಸದೆಬಡಿಯುವಾಗ ಅಲ್ಲಿ ಭಾರತೀಯ ಸೈನಿಕರಿಗೆ ಪ್ರತಿಕೂಲ ಪರಿಸ್ಥಿತಿಯಿತ್ತು. ಏಕೆಂದರೆ ಪಾಕಿಸ್ತಾನಕ್ಕೆ ಗೊತ್ತಾಗದಂತೆ ಅಲ್ಲಿ ನುಗ್ಗಿ ಕಾರ್ಯಾಚರಣೆ ಮಾಡಬೇಕಿತ್ತು.
ಸಾಂಪ್ರದಾಯಿಕ ಯುದ್ಧಗಳಂತೆ ಈ ಸೀಮಿತ ಕಾರ್ಯಾಚರಣೆಗಳನ್ನು ನಡೆಸಲು ಸಾಧ್ಯವಿಲ್ಲ. ಸಾಂಪ್ರದಾಯಿಕ ಯುದ್ಧದಲ್ಲಿ ಒಂದೋ ನೀವು ರಕ್ಷಣಾತ್ಮಕ ನಡೆಯನ್ನೋ ಇಲ್ಲವೇ ಆಕ್ರಾಮಕ ನಡೆಯನ್ನೋ ಅನುಸರಿಸುತ್ತೀರಿ. ಆದರೆ ಅಜಿತ್ ಡೋವಲ್ ಹೇಳುವಂತೆ ಈ ಸೀಮಿತ ಕಾರ್ಯಾಚರಣೆಯ ನಡೆ ಡಿಫೆನ್ಸಿವ್ ಒಫೆನ್ಸ್ ಅಂದರೆ ರಕ್ಷಣಾತ್ಮಕ ಆಕ್ರಮಣ. ಉಗ್ರರು ಗಡಿ ದಾಟಿ ನಿಮ್ಮ ಮೇಲೆ ಗುಂಡು ಹಾರಿಸುವ ತನಕ ಕಾಯುವದರ ಬದಲು ಆ ಉಗ್ರರು ಬರುವ ಮಾಹಿತಿ ಖಚಿತವಾಗುತ್ತಿದ್ದಂತೆಯೇ ನೇರವಾಗಿ ಅವರನ್ನು ಮುಗಿಸಿ ಬರುವಂತೆ ಯೋಜನೆ ರೂಪಿಸುವದು ಅಷ್ಟು ಸುಲಭವಲ್ಲ. ಮುಖ್ಯ ಯುದ್ಧ ನಡೆಯುತ್ತಿದ್ದರೆ ಸೈನಿಕರು ಅಮಾಯಕ ಜನರನ್ನು ಕೊಂದರೂ ಅವುಗಳನ್ನು ಮುಚ್ಚಿಹಾಕಬಹುದು. ಆದರೆ ಸೀಮಿತ ಕಾರ್ಯಾಚರಣೆಯಲ್ಲಿ ಅದು ಅನ್ವಯವಾಗುವದಿಲ್ಲ. ನೀವು ಕೊಂದಿದ್ದು ಅಮಾಯಕರನ್ನು ಅಂತ ನಿಮ್ಮ ಶತ್ರು ಸಾಧಿಸಿಬಿಟ್ಟಿತೋ ಅಲ್ಲಿಗೆ ನಿಮ್ಮ ಇಮೇಜ್ ಖಲಾಸ್.
ಭಾರತೀಯರು ಇಂದು ಸಂಭ್ರಮಿಸುತ್ತಿರುವದು ಕೇವಲ ಸೈನಿಕರ ಯೋಜನೆ ಸಫಲವಾಯಿತು ಎಂಬ ಕಾರಣಕ್ಕೆ ಮಾತ್ರವಲ್ಲ. ಪಾಕಿಸ್ತಾನದೊಂದಿಗೆ ಈಗಾಗಲೇ ಮಾಡಿರುವ ಎಲ್ಲ ಯುದ್ಧಗಳನ್ನೂ ಗೆದ್ದಿರುವ ಭಾರತಕ್ಕೆ ಈ ಚಿಕ್ಕ ಕಾರ್ಯಾಚರಣೆಯಲ್ಲಿ ಅಂಥದ್ದೇನು ಮಹತ್ವವಿದೆ ಎಂಬುದನ್ನು ನಾವಿಲ್ಲಿ ಅರಿಯಬೇಕು. ಬೇರೊಂದು ದೇಶಕ್ಕೆ ಹೋಗಿ ಇಂಥ ಸೀಮಿತ ಕಾರ್ಯಾಚರಣೆಯ ಯೋಜನೆಯಲ್ಲಿ ಸೈನಿಕರು ತಿರುಗಿ ಬರುವ ಸಾಧ್ಯತೆಗಳು ೨% ಅಥವಾ ೩% ಇರುತ್ತದೆ. ಏಕೆಂದರೆ ಇಂಥ ಯೋಜನೆಯಲ್ಲಿ ಇಪ್ಪತ್ತು ಹಂತಗಳಿದ್ದರೆ ಪ್ರತಿಯೊಂದು ಹಂತದಲ್ಲಿಯೂ ಅಪೇಕ್ಷಿತ ಯಶಸ್ಸು ಲಭಿಸಿದರೆ ಮಾತ್ರ ಇವರು ಹಿಂದಿರುಗುತ್ತಾರೆ. ಉಗ್ರರು ಎಲ್ಲೆಲ್ಲಿ ಇದ್ದಾರೆ, ಎಷ್ಟೊಂದು ಪ್ರಮಾಣದ ಶಸ್ತ್ರಾಸ್ತ್ರ ಹೊಂದಿದ್ದಾರೆ, ಎಲ್ಲಿಂದ ಆಕ್ರಮಣ ಮಾಡಿದರೆ ಹೆಚ್ಚು ಉಪಯುಕ್ತ, ಈ ಮಾಹಿತಿ ಆ ದೇಶಕ್ಕೆ ತಿಳಿಯದಂತೆ ನಿರ್ವಹಿಸುವದು ಹೇಗೆ ಇವೆಲ್ಲ ಊಹೆಗಳು ಅಂದುಕೊಂಡಂತೆಯೇ ಇದ್ದರೆ ಮಾತ್ರ ಈ ಕಾರ್ಯಾಚರಣೆ ವಿರೋಧಿಗಳಿಗೆ ಸರ್ಪ್ರೈಸ್ ನೀಡಲು ಸಾಧ್ಯ. ಅಲ್ಲದೇ ಉಗ್ರರನ್ನು ಸದೆಬಡಿದರೆ ಕೆಲಸ ಮುಗಿಯುವದಿಲ್ಲ. ಉಗ್ರರನ್ನು ಸದೆಬಡಿದು ತಿರುಗಿ ಸುರಕ್ಷಿತವಾಗಿ ಬರುವದೂ ಈ ಯೋಜನೆಯ ಒಂದು ಭಾಗವೇ. ಇಲ್ಲವಾದಲ್ಲಿ ಇವರಿಗೇ ಸರ್ಪ್ರೈಸ್ ಆಗಿ ಇಹಲೋಕ ತ್ಯಜಿಸುತ್ತಾರೆ ಇಲ್ಲವೇ ಯುದ್ಧಕೈದಿಗಳಾಗುತ್ತಾರೆ.
ಈ ಕಾರ್ಯಾಚರಣೆಯು ಅದ್ಭುತ ಯಶಸ್ಸನ್ನು ಕಾಣಲು ಮೊದಲ ಕಾರಣ ನಮ್ಮ ಗುಪ್ತಚರ ದಳವು ನೀಡಿದ ಮಾಹಿತಿ ಅಷ್ಟು ಕರಾರುವಾಕ್ಕಾಗಿತ್ತು. ಈ ಕಾರ್ಯಾಚರಣೆಯನ್ನು ನಡೆಸಿದವರು ೧೫೦ ಪ್ಯಾರಾ ಕಮಾಂಡೋಗಳು. ಒಂದು ವಿಷಯ ಇಲ್ಲಿ ಗಮನಾರ್ಹ. ನಮ್ಮ ದೇಶದ ಪ್ಯಾರಾ ಕಮಾಂಡೋ ಮತ್ತು ಮರೀನ್ ಕಮಾಂಡೋ ಟ್ರೇನಿಂಗ್ ಜಗತ್ತಿನಲ್ಲಿಯೇ ಅತ್ಯಂತ ಕಠಿಣಕರವಾದ ತರಬೇತಿಗಳು. ಇದನ್ನು ಸರಿಯಾಗಿ ಮುಗಿಸುವವರು ತೀರ ವಿರಳ. ಈ ತರಬೇತಿಯನ್ನು ಮುಗಿಸಲು ಕೇವಲ ದೈಹಿಕ ಸಾಮರ್ಥ್ಯವಷ್ಟೇ ಅಲ್ಲ, ನಿಮ್ಮ ಬೌದ್ಧಿಕ ಮತ್ತು ಮಾನಸಿಕ ಸಾಮರ್ಥ್ಯವೂ ಕೂಡ ನಿರ್ಣಾಯಕ. ಇಸ್ರೇಲಿನಲ್ಲಿ ವಾಯುಪಡೆಯ ಸೈನಿಕರು ಹೇಗೋ ಹಾಗೆ ಭಾರತದ ಪಡೆಯ ಮಾರ್ಕೋ(ಮರೀನ್ ಕಮಾಂಡೋ)ಗಳೂ ಎಂದರೂ ತಪ್ಪಾಗಲಾರದು. ಮರೀನ್ ಕಮಾಂಡೋಗಳ ಕುರಿತು ಇರುವ ವಿಡಿಯೋ ದಾಖಲೆಗಳನ್ನು ನೋಡಿ.
ಇನ್ನೊಂದು ವಿಷಯ ಹೇಳಬೇಕೆಂದರೆ ಇಸ್ರೇಲಿನಲ್ಲಿ ಒಂದಾನೊಂದು ಕಾಲದಲ್ಲಿದ್ದ ರಾಜಕೀಯ ದೌರ್ಬಲ್ಯ, ಭಾರತದಲ್ಲಿ ಇನ್ನೂ ಮನೆ ಮಾಡಿದೆ ಎಂದರೆ ಬಹುಶಃ ತಪ್ಪಾಗಲಾರದು. ೧೯೬೭ರಲ್ಲಿ ಇಸ್ರೇಲಿನ ಮೇಲೆ ಎಲ್ಲರೂ ಸೇರಿ ದಾಳಿ ಮಾಡಿದಾಗ ಅನೇಕ ಮುಸ್ಲಿಮ್ ರಾಷ್ಟ್ರಗಳು ಕುರಾನು ಹೇಳುವ ಇಸ್ರೇಲಿಗರ ಕೊನೆಯ ದಿನ ಬಂದೇ ಬಿಟ್ಟಿತು ಎಂದೇ ಭಾವಿಸಿದ್ದವು. ಹಾಗೆಯೇ ಇಸ್ರೇಲಿನ ರಾಜಕಾರಣಿಗಳೂ ಕೂಡ ನಮ್ಮ ಸ್ವಾತಂತ್ರ್ಯ ಮುಗಿಯುವ ದಿನ ಬಂತು ಎಂದೇ ಭಾವಿಸಿದ್ದರು. ಆದರೆ ಆರೇ ದಿನಗಳಲ್ಲಿ ಇಸ್ರೇಲ್ ಎಲ್ಲರನ್ನೂ ಏಕಕಾಲಕ್ಕೆ ಸೋಲಿಸಿ ಗೆಲುವಿನ ನಗೆ ಬೀರಿತ್ತು. ಅನಂತರ ಇಸ್ರೇಲಿನ ಸೈನ್ಯದ ಮೇಲಿನ ನಂಬಿಕೆ ಎಂದೆಂದೂ ಆರದ ದೀಪವಾಯಿತು. ಈ ನಂಬಿಕೆಯೇ ಮುಂದೆ ಎಂಟೆಬ್ಬೆಯಲ್ಲಿ ನೆರವಾಯಿತು. ವಾಜಪೇಯಿ ಸರಕಾರದ ಅವಧಿಯಲ್ಲಿ ಕಂದಹಾರನಲ್ಲಿ ವಿಮಾನವು ಅಪಹರಣವಾದಾಗ ಇಸ್ರೇಲ್ ಮಾಡಿದ ಎಂಟೆಬ್ಬೆ ಮಾದರಿಯಲ್ಲಿಯೇ ನಮ್ಮ ಪ್ಯಾರಾಕಮಾಂಡೋಗಳು ಅಲ್ಲಿ ಹೋಗಿ ವಿಮಾನವನ್ನು ಬಿಡಿಸಿಕೊಂಡು ಬರುವ ಎಲ್ಲ ದಕ್ಷತೆಯನ್ನೂ ಪಡೆದಿದ್ದರು. ಆದರೆ ರಾಜಕೀಯ ಇಚ್ಛಾಶಕ್ತಿ ಆ ರಿಸ್ಕನ್ನು ತೆಗೆದುಕೊಳ್ಳಲಿಲ್ಲ. ಏಕೆಂದರೆ ನಮ್ಮ ರಾಜತಂತ್ರಕ್ಕೆ ನಂಬಿಕೆಯೇ ಇರಲಿಲ್ಲ. ಸಂಸತ್ ಮೇಲೆ ಆಕ್ರಮಣ, ಮುಂಬೈ ದಾಳಿಯ ಸಂದರ್ಭದಲ್ಲೂ ನಾವು ನಮ್ಮ ಶಕ್ತಿಯನ್ನುಪಯೋಗಿಸಿ ಪ್ರತ್ಯುತ್ತರ ನೀಡುವ ಎಲ್ಲ ಸಾಮರ್ಥ್ಯವಿದ್ದರೂ ನಾವು ಯಾವ ಕಾರ್ಯಾಚರಣೆಯನ್ನೂ ಮಾಡಲೇ ಇಲ್ಲ. ಏಕೆಂದರೆ ನಾವು ಹನುಮಂತನಿಗಿದ್ದ ದೋಷವನ್ನು ಹೊಂದಿರುವವರು.
ಈ ಕಾರ್ಯಾಚರಣೆಯನ್ನು ಸಂಭ್ರಮಿಸಲು ಭಾರತೀಯರ ಬಳಿ ಇನ್ನೂ ಒಂದು ಕಾರಣವಿದೆ. ಇಷ್ಟು ದಿವಸ ಉಗ್ರರ ದಾಳಿ ನಡೆದಾಗ, ಪಾಕಿಸ್ತಾನಕ್ಕೆ ಏನೂ ಯೋಚಿಸುವ ಅಗತ್ಯವಿರಲಿಲ್ಲ. ಭಾರತದಲ್ಲಿ ಏನೇ ದಾಳಿ ನಡೆದರೂ “ವಿ ಹೈಲಿ ಕಂಡೆಮ್ನ್” ಅಂತಾ ಇರೋ ಹಳೇ ವಾಕ್ಯವನ್ನೇ ಕಾಪಿ ಪೇಸ್ಟ್ ಮಾಡಿದರೆ ಅದರ ಕೆಲಸ ಮುಗಿಯುತ್ತಿತ್ತು. ಆದರೆ ಈ ಘಟನೆಗಳು ಭಾರತವನ್ನು ಅಣಕಿಸುತ್ತಿತ್ತು. “ನಾವು ಪಾಕಿಸ್ತಾನದಿಂದ ಬಂದು ಹೀಗೆಯೇ ದೊಂಬಿ ಎಬ್ಬಿಸುತ್ತೇವೆ, ನೀವೇನು ಮಾಡುತ್ತೀರಿ?” ಎಂಬ ಪ್ರಶ್ನೆಯನ್ನು ಪದೇ ಪದೇ ಹಾಕುತ್ತಿದ್ದವು ಈ ಘಟನೆಗಳು. ಆದರೆ ಈಗ ಚೆಂಡು ಪಾಕಿಸ್ತಾನದ ಕೋರ್ಟಿನಲ್ಲಿದೆ. “ನೀವು ಉಗ್ರರನ್ನು ಕಳಿಸಿದಾಗಲೆಲ್ಲ ನಾವು ಕಮಾಂಡೋಗಳನ್ನು ಕಳಿಸುತ್ತೇವೆ, ನೀವು ಏನು ಮಾಡುತ್ತೀರಿ?” ಎಂದು ಭಾರವು ತಿರುಗಿ ಪ್ರಶ್ನೆ ಮಾಡಿದೆ. ಪಾಕಿಸ್ತಾನಕ್ಕೆ ಈ ಕಾರ್ಯಾಚರಣೆಗೆ ಹೇಗೆ ಪ್ರತಿಕ್ರಿಯಿಸಬೇಕು ಎಂಬುದೇ ತಿಳಿಯದಾಗಿದೆ. ಉಗ್ರರನ್ನು ನಾಶ ಮಾಡಿದ್ದಕ್ಕೆ ಅಭಿನಂದಿಸಿ ಪಾಕಿಸ್ತಾನಿ ಮಿಲಿಟರಿಯ ಕೋಪಕ್ಕೆ ತುತ್ತಾಗಬೇಕೆ ಇಲ್ಲವೇ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನುಗ್ಗಿದ್ದನ್ನು ಖಂಡಿಸಲು ಹೋಗಿ ಉಗ್ರದಮನದ ಕ್ರಿಯೆಯನ್ನು ವಿರೋಧಿಸಿ ವಿಶ್ವದ ದ್ವೇಷ ಕಟ್ಟಿಕೊಳ್ಳಬೇಕೇ ಎಂಬ ಗೊಂದಲದಲ್ಲಿ ಬಿದ್ದಿದೆ.
ಇಂದು ನಮ್ಮ ಸೈನಿಕರು ತೋರಿಸಿರುವ ಸಾಹಸ ಮತ್ತು ಗುಪ್ತಚರದ ಮಾಹಿತಿಯ ನಿಖರತೆ ಹೆಚ್ಚು ಮಹತ್ವದ್ದು ಎಂದು ಹೇಳಲು ಕಾರಣ ಈ ಯೋಜನೆ ಸೈನ್ಯದ ಮತ್ತು ಗುಪ್ತಚರದ ಕಾರ್ಯಪ್ರಖರತೆಯನ್ನಷ್ಟೇ ಅಲ್ಲ ರಾಜತಂತ್ರವು ಇವೆರಡನ್ನೂ ಸಂಪೂರ್ಣವಾಗಿ ಅರಿತಿರಲಿಲ್ಲ ಎಂಬುದನ್ನು ಸಾಧಿಸಿ ತೋರಿಸಿತು. ಇಂದು ಭಾರತೀಯರು ಸಂಭ್ರಮಿಸುತ್ತಿರುವದಕ್ಕೆ ಮುಖ್ಯ ಕಾರಣ ನಮ್ಮ ರಾಜತಾಂತ್ರವು ಈ ವ್ಯವಸ್ಥೆಗಳ ಸಾಮರ್ಥ್ಯವನ್ನು ಸರಿಯಾಗಿ ಅರಿತುಕೊಂಡಿತು. ಇಸ್ರೇಲ್, ಅಮೇರಿಕದ ಸೈನಿಕರ ಚಾಣಾಕ್ಷತೆಗೆ ನಮ್ಮ ಸೈನಿಕರು ಯಾವುದಕ್ಕೂ ಕಡಿಮೆಯಿಲ್ಲ ಎಂಬುದನ್ನು ನಮ್ಮ ರಾಜಕೀಯ ಶಕ್ತಿಗಳು ಅರಿತದ್ದೇ ದೊಡ್ಡ ಸಾಧನೆ. ನಾನೇನೂ ಇಲ್ಲಿ ಅಮೇರಿಕದ ಸೈನ್ಯಕ್ಕಿಂತ ನಮ್ಮದು ಬಲಿಷ್ಠ ಎಂದು ಹೇಳುತ್ತಿಲ್ಲ. ಕಾರಣ ಅವರ ತಂತ್ರಜ್ಞಾನ, ರಕ್ಷಣಾ ವ್ಯವಸ್ಥೆಯ ಬಜೆಟ್ ನಮಗಿಂತ ಹಲವು ಪಟ್ಟು ಹೆಚ್ಚು. ಆದರೆ ತರಬೇತಿ ಪಡೆದ ಕಮಾಂಡೋಗಳ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು ಹೇಳುವದಾದರೆ, ವಿಜಯಲಕ್ಷ್ಮಿಯು ಭಾರತದ ಕಮಾಂಡೋಗಳನ್ನು ಹುಡುಕಿಕೊಂಡು ಬಂದು ಒಲಿಯುತ್ತಾಳೆ ಎಂದರೆ ಅದು ಅತಿಶಯೋಕ್ತಿಯೇ ಅಲ್ಲ.
ಏಕೆಂದರೆ ನಾವು ಹನುಮಂತನಿಗಿದ್ದ ದೋಷವನ್ನು ಹೊಂದಿರುವವರು…………….!!!!!!!!!
ಎಂತಹ ವಾಕ್ಯ ಇದು ….ಸೂಪರ್.
ಅತ್ಯುತ್ತಮ ಲೇಖನ.
“ಏಕೆಂದರೆ ನಾವು ಹನುಮಂತನಿಗಿದ್ದ ದೋಷವನ್ನು ಹೊಂದಿರುವವರು…………….!!!!!!!!! ”
ದಯವಿಟ್ಟು ಈ ವಾಕ್ಯದ ವಿವರಣೆ ಕೊಡ್ತೀರಾ
ಹನುಮಂತ ಅಸಾಧಾರಣ ಶಕ್ತಿವಂತನಾದರೂ ಅವನ ಶಕ್ತಿ ಅವನಿಗೇ ನೆನಪಿರುವುದಿಲ್ಲ. ಬಾಲ್ಯದಲ್ಲಿ ಪಡೆದ ಶಾಪದ ಫಲ ಅದು. ಆದ್ದರಿಂದಲೇ , ಸಮುದ್ರೋಲ್ಲಂಘನದ ಕಾಲದಲ್ಲಿ, ಉಳಿದವರು (ಕಪಿ ಸೈನ್ಯ) ಹನುಮನ ಗುಣಗಾನ ಮಾಡಿ, ಅವನ ಶಕ್ತಿಯನ್ನು ಅವನಿಗೇ ತಿಳಿಸಿ ಹೇಳುತ್ತಾರೆ.
ತುಂಬಾ ಅರ್ಥಪೂರ್ಣವಾಗಿ ಸರ್ಜಿಕಲ್ ಕಾರ್ಯಾಚರಣೆಯನ್ನು ವಿವರಿಸಿದ್ದೀರಾ ,ನಮ್ಮ ಸೇನೆ ನಮ್ಮ ಹೆಮ್ಮೆ
Very Well Written. Kudos
2001ರಲ್ಲಿ ಒಪೆರೇಷನ್ ಪರಾಕ್ರಮವನ್ನು ನಮ್ಮ ಸರ್ಕಾರ ಜಾರಿ ಮಾಡಿತ್ತು, ನಂತರ ಅದರಿಂದ ಪಾಠ ಕಲಿತು cold start doctrine ಮಾಡಿದೆ. ದೇಶದ ಹಿತವನ್ನು ಲೆಕ್ಕ ಹಾಕಿದರೆ ವಾಜಪೇಯಿಯವರು ಹಿಂದೆ ಸರಿದಿಲ್ಲ, ಆಗ op orchard ತರಹ ಮಾಡಿದ್ದಿದ್ದರೆ ಶತ್ರು ಸೈನ್ಯದ ರಡಾರ್ ಗೆ ನಮ್ಮ ವಿಮಾನವು ಗೋಚರಿಸುತ್ತಿತ್ತು, 1976 ತಂತ್ರಜ್ಯಾನಕ್ಕೂ 2000 ತಂತ್ರಜ್ಯಾನಕ್ಕೂ ಎಲ್ಲಿಯ ಹೋಲಿಕೆ