ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 1, 2016

ಆಗಬೇಕಿದೆ ಸರಸ್ವತಿ ಮಂದಿರಗಳ ಜೀರ್ಣೋದ್ಧಾರ

‍ನಿಲುಮೆ ಮೂಲಕ

– ಮುರಳಿ ಕೃಷ್ಣ ಕಡವ

ಒಂದೂರಿನ ಒಂದಷ್ಟು ಜನ ತಮ್ಮ ಮಕ್ಕಳ ವಿದ್ಯಾಭ್ಯಾಸ ಸರಿಯಾಗಿ ನಡೆಯುತ್ತಿಲ್ಲಾ ಅಂತ ಒಬ್ಬ ಜ್ಯೋತಿಷಿಯ ಬಳಿ ಸಲಹೆಗಾಗಿ ಹೋದರು. ಜ್ಯೋತಿಷಿಯು ತನ್ನೆಲ್ಲಾ ಲೆಕ್ಕಚಾರಗಳನ್ನು ಮಾಡಿ, “ನಿಮ್ಮೂರಿನ ಮಧ್ಯದಲ್ಲಿ ದೇವರ ಸಾನ್ನಿಧ್ಯವಿದೆ, ಅಲ್ಲಿ ಒಂದು ದೇವಸ್ಥಾನದ ನಿರ್ಮಾಣವಾಗಬೇಕು” ಎಂಬ ಪರಿಹಾರವನ್ನು ನೀಡಿದರು. ದೇವರ ಮೇಲಿನ ಭಕ್ತಿಗಿಂತ ಭಯವೇ ಜಾಸ್ತಿ ನೋಡಿ ಜನರಿಗೆ. ಸರಿ ಎಂದು ಒಂದೇ ವರ್ಷದಲ್ಲಿ ಲಕ್ಷಗಟ್ಟಲೇ ದುಡ್ಡು ಸಂಗ್ರಹಿಸಿ, ಒಂದು ಗುಡಿಯನ್ನ ಎದ್ದು ನಿಲ್ಲಿಸಿ, ದೇವರ ಮೂರ್ತಿಯನ್ನ ಪ್ರತಿಷ್ಟಾಪಿಸಿಯೇ ಬಿಟ್ಟರು. ಅದಕ್ಕೊಬ್ಬ ಪೂಜಾರಿಯನ್ನೂ ನೇಮಿಸಿ ಪೂಜೆ, ಹೋಮ ಹವನಗಳನ್ನೂ ನಡೆಸಲಾಯಿತು. ಆದರೆ ಅವರು ಎದುರಿಸುತ್ತಿದ್ದ ಸಮಸ್ಯೆಗೆ ಪರಿಹಾರ ಸಿಗಲೇ ಇಲ್ಲ. ಕೇಳಿದರೆ ಆ ಜನರ ಉತ್ತರ ಏನು ಗೊತ್ತಾ “ನಮ್ಮ ಕೆಲಸ ನಾವು ಮಾಡಿದ್ದೇವೆ ಫಲಾಫಲಗಳೆಲ್ಲಾ ದೇವರಿಗೆ ಬಿಟ್ಟದ್ದು” ಅಂತ.

ಆದರೆ ಮುಖ್ಯವಾದ ಸಮಸ್ಯೆ ಇದ್ದದ್ದೇ ಅವರ ಮಕ್ಕಳು ಕಲಿಯುತ್ತಿದ್ದ ಸರ್ಕಾರಿ ಶಾಲೆಯಲ್ಲಿ. ಬಿರುಕು ಬಿದ್ದು ಸೋರುವ ಶಾಲಾ ಕಟ್ಟಡ, ಬರೆಯಲು ಪೆನ್ನು ಪುಸ್ತಕಗಳೇ ಇಲ್ಲದ ವಿದ್ಯಾರ್ಥಿಗಳು, ಕಾಲಕ್ಕೆ ತಕ್ಕಂತೆ ಬದಲಾಗದ ಅನನುಭವಿ ಶಿಕ್ಷಕರು, ಧೂಳು ಹಿಡಿದು ಇದ್ದೂ ಇಲ್ಲದಂತಿರುವ ಗ್ರಂಥಾಲಯ, ಎಲ್ಲವನ್ನೂ ಸರ್ಕಾರವೇ ಮಾಡಲಿ ಎಂದು ಕಣ್ಮುಚ್ಚಿ ಕುಳಿತ ಊರ ಜನರು. ಇಂತಹ ವಾತಾವರಣದಲ್ಲಿ ಕಲಿಯುವ ವಿದ್ಯಾರ್ಥಿಗಳ ಮನಸ್ಥಿತಿ ಹೇಗಿದ್ದೀತು ಹೇಳಿ? ಮನದಲ್ಲಿ ನೂರಾರು ಕನಸುಗಳನ್ನು ಹೊತ್ತು ಶಾಲೆಗೆ ಸೇರಿದ ಮಗು, ಈ ಭೂತ ಬಂಗಲೆಯಿಂದ ಒಮ್ಮೆ ಹೊರಬಿದ್ದರೆ ಸಾಕಪ್ಪಾ ಅಂತ ಬಯಸುತ್ತಿರುತ್ತದೆ.

ಅಲ್ಲಿ ಖರ್ಚು ಮಾಡಿದ ಒಂದಂಶವನ್ನಾದರೂ ಶಾಲೆಯ ಏಳಿಗೆಗೆ ಮೀಸಲಿಟ್ಟಿದ್ದರೆ, ಆ ಮಕ್ಕಳ ಮುಖದಲ್ಲಿ ಒಂದಷ್ಟು ಮಂದಹಾಸ ಕಾಣಬಹುದು. ಬೇರೆಲ್ಲಾ ಕೆಲಸಗಳನ್ನು ತಮ್ಮೂರ ಏಳಿಗೆಗಾಗಿ ಮಾಡುವ ಜನ, ಶಾಲೆಯ ವಿಷಯ ಬಂದಾಗ ಸರ್ಕಾರದ ಮರ್ಜಿಗೆ ಕಾಯುತ್ತಿರುತ್ತಾರೆ. ಇನ್ನು ಕೆಲವು ಶಾಲೆಗಳ ಶಿಕ್ಷಕರ ಮನಸ್ಥಿತಿ ಅಂದ್ರೆ, “ನೀವು ಬೇಕಾದ್ರೆ ಕಲೀಬೇಕು, ನಮಗೆ ಪಾಠ ಮಾಡದೇ ಇದ್ರೂ ತಿಂಗಳ ಕೊನೆಗೆ ಸಂಬಳ ಬರುತ್ತೆ” ಅಂತ ವಿದ್ಯಾರ್ಥಿಗಳ ಬಳಿ ಹೇಳೋದು. ಹೊರ ಜಗತ್ತಿನ ರೀತಿ ನೀತಿಯ ಅರಿವಿಲ್ಲದ ಮಗು ಅದನ್ನು ಹೇಗೆ ಅರ್ಥೈಸೀತು ಹೇಳಿ?

ಕೆಲವು ಶಾಲೆಗಳಲ್ಲಂತೂ ಇರುವ ಸಂಪನ್ಮೂಲಗಳನ್ನು ಬಳಸುವ ವಿಧಾನವೇ ತಿಳಿದಿಲ್ಲ. ನನಗೆ ತಿಳಿದಂತಹಾ ಒಂದು ಸರ್ಕಾರಿ ಶಾಲೆಗೆ ಒಬ್ಬ ದಾನಿಗಳು ಮೂರು ಕಂಪ್ಯೂಟರ್ಗಳನ್ನು ನೀಡಿದ್ದರು. ವಿದ್ಯಾರ್ಥಿಗಳಿಗೆ ಅದರ ಬಳಕೆನ್ನು ಕಲಿಸುವುದು ಬಿಡಿ, ಅವುಗಳ ನಿರ್ವಹಣೆಯೇ ಇಲ್ಲದೆ ಒಂದೇ ವರ್ಷದಲ್ಲಿ ಅವೆಲ್ಲಾ ಕೆಟ್ಟು ಮೂಲೆ ಸೇರಿದ್ದವು. ಊರಿನ ಜನರಲ್ಲಿ, ಶಿಕ್ಷಕರಲ್ಲಿ ಇದು ನಮ್ಮ ಶಾಲೆ ಅನ್ನುವ ಭಾವನೆ ಮರೆಯಾಗುತ್ತಿರುವುದೇ ಇದಕ್ಕೆಲ್ಲ ಪ್ರಮುಖ ಕಾರಣ.

ಇನ್ನು ಸಾರ್ವಜನಿಕ ಸಂಘ ಸಂಸ್ಥೆಗಳಂತೂ ಮಹಾನ್ ರಾಷ್ಟ್ರನಾಯಕರ ಹೆಸರಿನಲ್ಲಿ ಖಾಸಗಿ ಶಾಲೆಗಳನ್ನು ಸ್ಥಾಪಿಸಿ, ಅದನ್ನು ಸಂಪಾದನೆಯ ದಾರಿಯಾಗಿಸಿ, ಬಹುಮಹಡಿ ಕಟ್ಟಡಗಳನ್ನು ಕಟ್ಟುವುದರಲ್ಲೇ ಮಗ್ನವಾಗಿದೆ. ನಿಜಕ್ಕೂ ಆ ಸಂಸ್ಥೆಗಳಿಗೆ ಸಮಾಜದ ಕಾಳಜಿ ಇದೆಯೆಂದಾದರೆ ತಮ್ಮೂರ ಸರ್ಕಾರಿ ಶಾಲೆಯನ್ನು ದತ್ತು ತೆಗೆದುಕೊಂಡು, ಅದನ್ನು ಮಾದರಿ ಶಾಲೆಯಾಗಿಸಿ, ತಮ್ಮ ಮಕ್ಕಳ ಏಳಿಗೆಗೆ ಓಂಚೂರು ಕೊಡುಗೆಯನ್ನ ನೀಡಬಹುದಿತ್ತು. ಅದು ಬಿಟ್ಟು ಸರ್ಕಾರಿ ಶಾಲೆಗಳ ಬಾಗಿಲಿಗೆ ತಮ್ಮ ಖಾಸಗಿ ಶಾಲೆಗಳ ಬಸ್ಸುಗಳನ್ನು ತಂದು ನಿಲ್ಲಿಸಿ ಹಣ ಮಾಡುವ ದಂಧೆ ನಡೆಸುತ್ತಿರಲಿಲ್ಲ.

ಇದೆಲ್ಲಾ ಎಲ್ಲೋ ನಡೆಯುತ್ತಿರುವ ಘಟನೆಗಳಲ್ಲ. ನಮ್ಮ ನಿಮ್ಮೆಲ್ಲರ ಮನೆ ಬಾಗಿಲಲ್ಲಿ ನಡೆಯುತ್ತಿದೆ. ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದರೆ ನಾವೆಲ್ಲಾ ಕಲಿತ ನಮ್ಮೂರ ಶಾಲೆ ಮುಚ್ಚುವಂತಾ ಪರಿಸ್ಥಿತಿ ಬರಬಹುದು. ನಮ್ಮೂರ ದೇವಾಲಯಗಳ ಜೀರ್ಣೋದ್ಧಾರ ಮಾಡಿದಂತೆ, ನಮ್ಮ ಮಕ್ಕಳು ಕಲಿಯುವ ಸರಸ್ವತಿ ಮಂದಿರದ ಜೀರ್ಣೋದ್ಧಾರ ಮಾಡೋಣ. ನಮ್ಮ ಗಳಿಕೆಯ ಒಂದಂಶವನ್ನು ಈ ಕಾರ್ಯಕ್ಕೆ ಬಳಸಿ, ಪುಟ್ಟ ಮಕ್ಕಳ ಮನದಲ್ಲಿ ಮಂದಹಾಸ ಮೂಡಿಸೋಣ.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments