ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 1, 2016

ಭಾಮಿನಿ ಷಟ್ಪದಿಯಲ್ಲಿ ಭಗವಾನ್ ಶ್ರೀಧರ ಸ್ವಾಮಿಗಳ ಚರಿತ್ರೆ

‍ನಿಲುಮೆ ಮೂಲಕ

– ಗುರುಪ್ರಸಾದ್ ಕೆ ಕೆ.

ಶ್ರೀಧರಭಾಮಿನಿಧಾರೆ ೧-೫
ಶ್ರೀಧರಭಾಮಿನಿಧಾರೆ ೬-೧೦
ಶ್ರೀಧರಭಾಮಿನಿಧಾರೆ ೧೧-೧೫

ಶ್ರೀಧರಭಾಮಿನಿಧಾರೆ ೧೬-೨೦

shreedhar_swami16)
ಶಾಂತಿ ಸಾಗರನಾದ ಸಿರಿಧರ
ಕಾಂತಿಯದು ವೃದ್ಧಿಸುವ ತೆರದಿ
ಸಂತಸಾಧುಗಳಿಂದ ಕಲಿಯುವ ಹಲವು ವಿಷಯಗಳಾ||
ಶಾಂತಮೂರುತಿ ರಾಮದೇವನ
ಚಿಂತೆ ಇಲ್ಲದ ಮನದಿ ನೆನೆಯುತ
ಸಂತಸದಲೀ ಕಾಲ ಕಳೆಯುತಲಿರುವ ಪುರದಲ್ಲೀ||

ತಾತ್ಪರ್ಯ : ಸದಾ ಶಾಂತಿಭಾವವನ್ನೇ ಹೊಂದಿದ ಶ್ರೀಧರರು, ತಮ್ಮ ತೇಜಸ್ಸು ವೃದ್ಧಿಯಾಗುವಂತೆ, ಸಾಧು ಸಂತರ, ಸಜ್ಜನರ ಜೊತೆಗೆ ಮಾತಾಡುತ್ತಾ ಹಲವಾರು ಆಧ್ಯಾತ್ಮಿಕ ವಿಷಯಗಳನ್ನು ತಿಳಿದುಕೊಳ್ಳುತ್ತಾ ಇದ್ದರು. ಸದಾ ನಿಶ್ಚಿಂತ ಮನೋಭಾವನೆಯಲ್ಲಿ ರಾಮನಾಮವ ಜಪಿಸುತ್ತಾ ಸಂತಸದಲ್ಲಿ ಕಾಲಕಳೆಯುತ್ತಿರುವ ಇವರನ್ನು ನೋಡುವುದೇ ಸುತ್ತಲಿನ ಜನರಿಗೆ ಒಂದು ಸೊಗಸಾಗಿತ್ತು.

17)
ಎಂಟು ವಯಸದು ಬಾಲ ವಟುವಿಗೆ
ನಂಟು ಕಳೆವುದು ಬಾಲ್ಯ ತನವೂ
ಬಂಟನಿಗೆ ಮುಂಜಿಯಾ ಮಾಡುತ ಹರುಷಪಟ್ಟಿಹರೂ||
ತುಂಟ ತನವದು ಕಳೆದು ಹೋಯಿತ
ನಂತ ಗಾಂಭೀರ್ಯವದು ಬಂತೂ
ಸಂತನಂತೆಯೆ ಬಾಳುವಾಸೆಯು ವಟುವ ಮನಕಾಯ್ತೂ||

ತಾತ್ಪರ್ಯ : ಎಂಟನೆಯ ವಯಸ್ಸಿನಲ್ಲಿ ಶ್ರೀಧರರ ಉಪನಯನವು, ಒಂದು ಶಂಕರ ದೇವಾಲಯದಲ್ಲಿ, ವಿಜೃಂಭಣೆಯಿಂದ ನಡೆಯಿತು. ಅಣ್ಣ ತ್ರ್ಯಂಬಕ, ಅಕ್ಕ ಗೋದಾವರಿ, ಹಾಗೂ ತಾಯಿ ಕಮಲಾಬಾಯಿಯವರು ಬಹಳ ಸಂತಸಪಟ್ಟರು. ಮುಂಜಿಯಾದ ನಂತರ ಬಾಲಶ್ರೀಧರರ ತುಂಟತನದ ಬಾಲಭಾವನೆಗಳು ನಶಿಸುತ್ತಾ, ಆ ಜಾಗದಲ್ಲಿ ಫ್ರೌಢಿಮೆ, ಗಾಂಭೀರ್ಯಗಳು ಬರಲಾರಂಬಿಸಿದವು. ಸಾಧು ಸಂತರ ಒಡನಾಟದಿಂದ ಅವರಂತೆಯೇ ಜೀವನ ನಡೆಸುವ ಆಸೆ ಗುರುಗಳಿಗೆ ಬಲಿಯುತ್ತಾ ಬಂತು.

18)
ಅಣ್ಣನೂತ್ರ್ಯಂಬಕನು ರುಜಿನದಿ
ಹಣ್ಣು ಮರದಿಂ ಕಳಚುವಂತೆಯೆ
ಸಣ್ಣ ವಯಸಿಗೆ ನಿಧನ ಹೊಂದಿದ ಬಂಧುಗಳನಗಲೀ||
ಎಣ್ಣೆ ಬರುವಾ ಸಮಯದಲ್ಲಿಯೆ
ಗಾಣ ಮುರಿಯಿತು ಎಂಬ ತೆರದಲಿ
ಹೆಣ್ಣು ಜೀವವು ಹಣ್ಣು ಆಯಿತು ದುಃಖ ಭಾರದಲೀ||

ತಾತ್ಪರ್ಯ : 24-25 ವರ್ಷದ ತರುಣ ತ್ರ್ಯಂಬಕರಾಯರು 1918 ರಲ್ಲಿ ಬಂದ ಫ್ಲ್ಯೂ ಕಾಯಿಲೆಗೆ ತುತ್ತಾಗಿ ನಿಧನರಾದರು. ಬದುಕೆಂಬ ಮಹಾವೃಕ್ಷದಲ್ಲಿ, ಪೂರ್ಣವಾಗಿ ಪಕ್ವವಾಗದ ಹಣ್ಣೊಂದು ಕಳಚಿ ಬಿದ್ದಂತಾಯಿತು. ಕಮಲಾಬಾಯಿಯವರಿಗೆ, ಪ್ರಾಯಕ್ಕೆ ಬಂದು ಸಂಸಾರದ ಜವಾಬ್ಧಾರಿ ಎಲ್ಲವನ್ನೂ ಹೊತ್ತಿದ್ದ ಮಗನ ನಿಧನದಿಂದಾಗಿ, ಆಕಾಶವೇ ಕಳಚಿ ಬಿದ್ದಂತಾಯಿತು. ಪತಿವಿಯೋಗವೊಂದು ಕಡೆ, ಈಗ ಸುತನೂ ಅಗಲಿಹೋದುದು ಎಣ್ಣೆಬರುವ ಸಮಯದಲ್ಲಿ ಗಾಣ ಮುರಿಯಿತು ಎಂಬ ಗಾದೆ ಮಾತಿನಂತೆ ಆಘಾತವುಂಟಾಯಿತು.

19)
ಪತಿವಿಯೋಗವ ಮರೆಯುವಾಗಲೆ
ಮತಿಯ ಕಲಕುವ ತೆರದಿ ತನುಜನು
ಗತಿಸಿದುದ ಕಂಡಂತ ಮಾತೆಗೆ ಶೋಕವತಿಯಾಯ್ತೂ||
ಅತಿಯು ಆಗಿಹ ಶೋಕ ಕಂಡೂ
ಯತಿವರೇಣ್ಯರು ತತ್ವಭೋದೆಯ
ಹಿತದಿ ಅರುಹುವ ಮನಕೆ ತಂಪನು ತರುವ ತೆರದೊಳಗೇ||

ತಾತ್ಪರ್ಯ : ಪತಿಯ ಅಕಾಲಿಕ ನಿಧನದಿಂದಾಗಿ ಚೇತರಿಸಿಕೊಳ್ಳುವುದರ ಒಳಗಾಗಿ ಈಗ ಸುತನೂ ವಿಧಿವಶನಾಗಿದ್ದನ್ನು ಕಂಡು, ಮಾತೆಯ ಶೋಕಕ್ಕೆ ಪಾರವೇ ಇರಲಿಲ್ಲ. ಮಕ್ಕಳನ್ನು ಕಳೆದುಕೊಂಡ ತಾಯಿಯ ದುಃಖವು ವರ್ಣಿಸಲಾರದಷ್ಟು ಘೋರ. ಆದರೆ ತಾಯಿಯ ನಿರಂತರ ಶೋಕ ಹೆಚ್ಚಾಗುತ್ತಿರುವುದನ್ನು ಕಂಡಂತಹ ಶ್ರೀಧರರು, ಅವಳಿಗೆ ಸಮಾಧಾನ ಮಾಡುತ್ತ, ಜೀವನದ ನಶ್ವರತೆಯ ಬಗೆಗೆ ಭೋಧನೆಯನ್ನು ಮಾಡುತ್ತಾ, ಅವಳ ಮನವು ಶಾಂತವಾಗುವಂತೆ ಮಾಡುತ್ತಿದ್ದರು.

20)
ಮಗಳು ಗೋದಾವರಿಯು ಕೂಡಾ
ಜಗದ ಋಣವನು ಕಡಿದು ಕೊಂಡಳು
ಮಗನ ಪ್ರೀತಿಯು ಒಂದೆಉಳಿಯಿತು ತಾಯಿಜೀವನದೀ||
ಸೊಗಸುಅಳಿಯಿತು ತಾಯಕಷ್ಟದ
ಬಗೆಯ ನಾ ಪೇಳುವುದುಕಠಿಣವು
ಲಘುವಿನಲಿ ಆ ತಾಯಿ ಕೂಡಾ ಹೊರಟು ನಿಂತಿಹರೂ||

ತಾತ್ಪರ್ಯ : ತ್ರ್ಯಂಬಕರು ನಿಧನರಾಗಿ ಆರು ತಿಂಗಳ ಒಳಗೇ ಮಗಳು ಗೋದಾವರಿಯು ಕೂಡಾ ಭಗವಂತನ ಪಾದ ಸೇರಿದಳೆಂಬ ಸುದ್ದಿಯು ಬರಸಿಡಿಲಿನಂತೆ ಬಂದೆರಗಲು, ಆ ತಾಯಿಯ ದುಃಖವು ನೂರ್ಮಡಿಯಾಯಿತು. ಆ ತಾಯಿಯು ಅನುಭವಿಸಿದ ಸಂಕಟವನ್ನು ವರ್ಣಿಸಲಾಗಲೀ, ಬರೆಯಲಾಗಲೀ ಸಾಧ್ಯವಿಲ್ಲ. ಅದೇ ಚಿಂತೆಯಲ್ಲಿ ಕಮಲಾಬಾಯಿಯವರು ದಿನದಿಂದ ದಿನಕ್ಕೆ ಕೃಶರಾಗತೊಡಗಿದರು, ಅವರ ಅನಾರೋಗ್ಯವೂ ಹೆಚ್ಚಾಗತೊಡಗಿತು.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments