ಚಿನ್ನ ತರಬಲ್ಲ ಚಿಗರೆಗಳು ನಮ್ಮಲ್ಲೇ ಇರುವಾಗ…
– ರೋಹಿತ್ ಚಕ್ರತೀರ್ಥ
ತನ್ನ ಏಳು ವರ್ಷದ ಮಗನನ್ನು ಮಡಿಲಲ್ಲಿ ಕೂರಿಸಿಕೊಂಡು ಆಕೆ ಪ್ರಾಣಿಪಕ್ಷಿಗಳನ್ನು ಪರಿಚಯಿಸುವ ಚಿತ್ರಪುಸ್ತಕವನ್ನು ಹರವಿದ್ದಳು. “ಇದು ಅಳಿಲು, ಅ-ಳಿ-ಲು. ಇದು ಆನೆ. ಇದು ಚಿರತೆ, ಮತ್ತೆ ಓ ಇದು ಜಿರಾಫೆ” ಎಂದೆಲ್ಲ ಹೇಳಿಕೊಡುತ್ತ “ಇದು ಚಿಂಪಾಂಜಿ” ಎಂದು ಮುಂದಿನ ಚಿತ್ರದತ್ತ ತೋರಿಸಿದಾಗ ಅದುವರೆಗೆ ಅಕ್ಷರಗಳನ್ನು ಉರು ಹೊಡೆಯುತ್ತಿದ್ದ ಹುಡುಗ ಥಟ್ಟನೆ “ಓ! ಇದು ಗೊತ್ತು!” ಎಂದುಬಿಟ್ಟ. “ಹೌದಾ? ನೀನ್ಯಾವತ್ತೋ ಈ ಪ್ರಾಣೀನ ನೋಡಿದ್ದು?” ಎಂದು ಆಕೆ ಕೇಳಿದಾಗ ಹುಡುಗ ಮುಗ್ಧವಾಗಿ “ನಮ್ಮ ಶಾಲೆ ಪಕ್ಕದ ಕಿರಾಣಿ ಅಂಗಡಿ ಮಾಮ ಹಾಗೇ ಕರೆಯೋದು ನನ್ನ” ಎಂದುಬಿಟ್ಟ. ಅದುವರೆಗೆ ಮಗುವನ್ನು ತೊಡೆಯಲ್ಲಿಟ್ಟುಕೊಂಡು ಅಕ್ಷರಾಭ್ಯಾಸ ಮಾಡಿಸುತ್ತಿದ್ದ ಆಕೆಗೆ ಎದೆ ಮೇಲೆ ಯಾರೋ ಬಿಸಿ ಎಣ್ಣೆ ಹುಯ್ದಂತಾಯಿತು. ಕಣ್ಣುಗಳು ಮನಸ್ಸಿನ ನಿಯಂತ್ರಣಕ್ಕೆ ಕ್ಯಾರೆನ್ನದೆ ಅಶ್ರುಧಾರೆ ತುಂಬಿಕೊಂಡುಬಿಟ್ಟವು. ಬೆಳಕು ಬೀರುತ್ತಿದ್ದ ಎದುರಿನ ಕಿಟಕಿ ಧಡಾರನೆ ಮುಚ್ಚಿಹೋಗಿ ಕೋಣೆಯೆಲ್ಲ ಕತ್ತಲುಗಟ್ಟಿದಂತೆ ಭಾಸವಾಯಿತು. ಮೈ ಸೆಟೆದುಕೊಂಡಿತು.
ಅದು ಬಹುಶಃ ಸಿದ್ದಿ ಜನಾಂಗದ ವ್ಯಕ್ತಿಗಳಿಗೆ ಜೀವನದ ಒಂದಿಲ್ಲೊಂದು ಕ್ಷಣದಲ್ಲಿ ಎದುರಾಗೇ ಆಗುವ ವರ್ಣದ್ವೇಷದ ಒಂದು ಮುಖ. ಸಿದ್ದಿ ಬುಡಕಟ್ಟಿನ ಹುಡುಗನೋ ಯುವತಿಯೋ ಪಕ್ಕದೂರಿನ ಪೇಟೆಗಳಲ್ಲಿ ಅಡ್ಡಾಡಿದರೆ ಸುತ್ತಲಿನ ಹತ್ತು ಕಣ್ಣೋಟಗಳು ಅವರನ್ನು ಕ್ಷಕಿರಣಗಳಂತೆ ಇರಿಯುತ್ತವೆ. ಬಸ್ಸುಗಳಲ್ಲಿ ಅವರು ಕೂತಿದ್ದರೆ ಬೆನ್ನ ಹಿಂದೆ ಮುಸಿಮುಸಿ ನಗು ಅನುರಣಿಸುತ್ತದೆ. ಭಾಷೆ ಗೊತ್ತಾಗಲಿಕ್ಕಿಲ್ಲವೆಂಬ ಭಂಡತನದಿಂದ ಲಗಾಮಿಲ್ಲದ ನಾಲಗೆಗಳು ಆಡಿಕೊಂಡು ನಕ್ಕು ತೀಟೆ ತೀರಿಸಿಕೊಳ್ಳುತ್ತವೆ. ಬೆಂಗಳೂರಂಥ ನಗರಗಳಲ್ಲಂತೂ ಬದುಕು ಇನ್ನೂ ದುರ್ಭರ. ಸುಳ್ಳು ಹೇಳಿ ಅವಿವಾಹಿತರು ಬಾಡಿಗೆ ಮನೆ ಪಡೆದಾರೇನೋ. ಲತೀಫ್, ರಫೀಕರು ರಾಮ, ಕೃಷ್ಣರಾಗಿ ಬಾಡಿಗೆಮನೆ ಹಿಡಿದಾರೇನೋ. ಆದರೆ ಯಾವ ಬಗೆಯಲ್ಲೂ ಬಚ್ಚಿಡಲಾಗದ ದೇಹಸೌಷ್ಟವವನ್ನು ಹೊತ್ತು ನಡೆಯಬೇಕಾದ ಸಿದ್ದಿಗಳು ನಗರಗಳಲ್ಲಿ ಬಾಡಿಗೆ ಮನೆ ಹಿಡಿಯಲು ಪಡುವ ಪಾಡೇ ಬಾಲಿವುಡ್ ಚಿತ್ರಗಳಿಗೆ ಸ್ಫೂರ್ತಿಯಾಗಬಹುದೇನೋ! ಶ್ಯಾಮಶರೀರಿ ಎಂದರೆ ಸಾಕು, ಆತ ಆಫ್ರಿಕಾದವನು; ಲಾಟರಿ ಡ್ರಗ್ಸ್ ವೇಶ್ಯಾವಾಟಿಕೆಯಂಥ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾನೆ; ಒರಟ; ಅಸಂಸ್ಕೃತ; ರಾಕ್ಷಸ ಎಂಬ ಸರಳ ಸಮೀಕರಣವನ್ನು ಸಮಾಜ ಬರೆದುಬಿಡುತ್ತದೆ. ಕೃಷ್ಣವರ್ಣೆಯೊಬ್ಬಳು ದಾರಿಯಲ್ಲಿ ನಡೆದುಹೋಗುತ್ತಿದ್ದರೆ ಸಾಕು ನೂರು ಲೋಕಲ್ ಧ್ವನಿಗಳು “ಎಷ್ಟಕ್ಕೆ ಬರ್ತೀಯ?” ಎಂದು ಕೇಳುತ್ತವೆ. ಇಷ್ಟೆಲ್ಲ ಹುಳುಕುಗಳಿದ್ದೂ ನಮ್ಮನ್ನು ನಾವು ಭವ್ಯ ಸಂಸ್ಕೃತಿಯ ವಾರಸುದಾರರು ಎಂದು ಕರೆದುಕೊಂಡು ಲಜ್ಜೆಗೆಟ್ಟು ಸುಳ್ಳೇ ಬೀಗುತ್ತೇವೆ. ಕೆಟ್ಟತನಗಳನ್ನೆಲ್ಲ ನೀಗ್ರೋಗಳಿಗೆ ಕಟ್ಟಿ ನಿರಾಳವಾಗುತ್ತೇವೆ.
ಇದೀಗ ಅಮೆರಿಕಾದಲ್ಲಿ ಅಧ್ಯಕ್ಷೀಯ ಚುನಾವಣೆಯ ಗದ್ದಲ. ಎಂಟು ವರ್ಷಗಳ ಹಿಂದೆ ಅಲ್ಲಿ ಬರಾಕ್ ಒಬಾಮ ಅಧ್ಯಕ್ಷರಾಗಿ ಆಯ್ಕೆಯಾದಾಗ ಎಂಟು ಸಾವಿರ ಮೈಲಿ ದೂರದಲ್ಲಿದ್ದ ಭಾರತದ ಕರ್ನಾಟಕದ ಉತ್ತರ ಕನ್ನಡವೆಂಬ ಜಿಲ್ಲೆಯಲ್ಲಿ ಸಂಭ್ರಮಾಚರಣೆಗಳಾಗಿದ್ದವು. ಅರರೆ ಎತ್ತಣ ಮಾಮರ ಎತ್ತಣ ಕೋಗಿಲೆ ಎಂದು ಅಚ್ಚರಿಪಟ್ಟವರಿಗೆ ಅನಂತರವೇ ತಿಳಿದದ್ದು ಭಾರತದ ಈ ಪುಟ್ಟ ಪ್ರಾಂತ್ಯದಲ್ಲಿ ಆಫ್ರಿಕಾದ ಕಪ್ಪುವರ್ಣದ ಜನ ಸ್ಥಳೀಯರಾಗಿ ವಾಸಿಸುತ್ತಿದ್ದಾರೆಂದು! ಹದಿನೈದನೇ ಶತಮಾನದಲ್ಲಿ ಮನುಷ್ಯರನ್ನು ನರಿನಾಯಿಗಳಂತೆ ನಡೆಸಿಕೊಳ್ಳುತ್ತಿದ್ದ ಗುಲಾಮಪದ್ಧತಿ ಜೀವಂತವಿದ್ದಾಗ ಪೋರ್ಚುಗೀಸರ ಜೊತೆ ಭಾರತಕ್ಕೆ ಬಂದಿಳಿದವರು ಈ ಕಪ್ಪುಜನ. ಭಾರತಕ್ಕೆ ಮಾತ್ರವಲ್ಲ, ಐರೋಪ್ಯರ ಅಡಿಯಾಳುಗಳಾಗಿ ಆಫ್ರಿಕಾದ ನೀಗ್ರೋ ಜನಾಂಗದ ಗಟ್ಟಿಮುಟ್ಟಾಗಿದ್ದ ಯುವಕರು ಅತ್ತ ಅಮೆರಿಕಾ ಖಂಡಕ್ಕೂ ಹೋದರು. ಅಮೆರಿಕಾ ಖಂಡಕ್ಕೆ ರಫ್ತಾದ ಗುಲಾಮರಲ್ಲಿ ಅರ್ಧಕ್ಕರ್ಧ ಜನರನ್ನು ಬ್ರೆಜಿಲ್‍ನಲ್ಲಿ ಇಳಿಸಿಕೊಂಡು ಗಣಿಗೆಲಸ, ಕಟ್ಟಡಗಳ ನಿರ್ಮಾಣ, ಸಿರಿವಂತರ ಜೀತ ಮುಂತಾದವಕ್ಕೆ ಸಜ್ಜುಗೊಳಿಸಲಾಯಿತು. ಬಂಡಿಗಳಿಗೆ ಕುದುರೆಗಳನ್ನು ಕಟ್ಟುವುದು ದುಬಾರಿಯಾಗುವುದೆಂದು ಇವರನ್ನೇ ಕಟ್ಟಿ ಎಳೆಸುತ್ತಿದ್ದರಂತೆ. ಮೋಜು ಬೇಕೆಂದಾಗೆಲ್ಲ ಇಬ್ಬರು ಕಪ್ಪು ಯುವಕರನ್ನು ಕುಸ್ತಿಗಿಳಿಸಿ ಒಬ್ಬ ಇನ್ನೊಬ್ಬನನ್ನು ಸೋಲಿಸಿ ಸಾಯಿಸುವ ಆಟವಾಡಿಸಿ ಮಜಾ ತೆಗೆದುಕೊಳ್ಳುತ್ತಿದ್ದರಂತೆ. ವಿಪರ್ಯಾಸವೆಂದರೆ, ತನ್ನ ಬಲಾಢ್ಯತೆ ಮರೆತು ಅಂಕುಶಕ್ಕೆ ಹೆದರುವ ಆನೆಯಂತೆ ಈ ಜನರೂ ತಮ್ಮ ದೈಹಿಕ ದಾಢ್ರ್ಯವನ್ನು ಮರೆತೇಬಿಟ್ಟು ಬಿಳಿಯರ ದಾಸಾನುದಾಸರಾಗಿ ದುಡಿದರು. ಬೃಹದಾರಣ್ಯಗಳನ್ನು ಕಡಿದು ರಸ್ತೆ, ಮನೆ ಕಟ್ಟಿಕೊಟ್ಟರು. ಸೇತುವೆಗಳ ನಿರ್ಮಾಣಕ್ಕಾಗಿ ಕಲ್ಲು-ಮರಳು ಹೊತ್ತರು. ಬೆಟ್ಟಗುಡ್ಡಗಳಿಗೆ ಬಿಳಿಯರನ್ನು ಹೊತ್ತು ಸಾಗಿಸಿದರು. ಹೀಗೆ ಶತಮಾನಗಳ ಕಾಲ ಶಿಕ್ಷಣದಿಂದ ವಂಚಿತರಾಗಿ ಗುಲಾಮರಾಗಿ ಬದುಕಿದ ಪರಿಣಾಮವೋ ಏನೋ, ಕಪ್ಪುವರ್ಣೀಯರು ಅಪ್ರತಿಮ ವಿಧೇಯ, ನಂಬಿಕಸ್ಥ ಸೇವಕರಾಗಿ ಒದಗಿಬಂದರು. ಪೋರ್ಚುಗೀಸರಿಂದ ಕೈಕೋಳ ತೊಡಿಸಿಕೊಂಡು ಗೋವಾಕ್ಕೆ ಬಂದಿಳಿದ ಕಪ್ಪುಜನ, ಆ ಪರಂಗಿಗಳ ಮೇಲೆ ಭಾರತದ ರಾಜರು ಯುದ್ಧ ಹೂಡಿದಾಗ ಮಾತ್ರ ತಮ್ಮ ಸೆರೆಯಿಂದ ತಪ್ಪಿಸಿಕೊಂಡು ದಿಕ್ಕಾಪಾಲಾಗಿ ಚದುರಿಹೋದರು. ಅರ್ಧ ಜನ ಅತ್ತ ಗುಜರಾತಿನತ್ತ ಪಲಾಯನ ಮಾಡಿದರೆ ಇನ್ನರ್ಧ ಇತ್ತ ಕರ್ನಾಟಕದ ಕಾಡುಗಳಲ್ಲಿ ಆಶ್ರಯ ಪಡೆದರು. ಗೋವಾದಿಂದ ಓಡಿಬಂದವರಿಗೆ ಉತ್ತರ ಕನ್ನಡದ ದಾಂಡೇಲಿ ಪ್ರದೇಶದ ಅರಣ್ಯವೇ ಆಸರೆಯಾಯಿತು. ಕಾಡು ಸೇರಿದ ಈ ಬಡಪಾಯಿಗಳು ರಾಬಿನ್ ಹುಡ್ಡುಗಳಾಗಲಿಲ್ಲ; ಬದಲಾಗಿ ಪ್ರಕೃತಿಯ ಜೊತೆ ಅವಿನಾಭಾವದಿಂದ ಬದುಕತೊಡಗಿದರು. ಕಾಡಿನೊಳಗೇ ತಮ್ಮ ಬದುಕು ಕಟ್ಟಿಕೊಂಡರು.
1984ರಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಇತಿಹಾಸವೊಂದು ಸೃಷ್ಟಿಯಾಯಿತು. ಕಾರ್ಲ್ ಲೂಯಿಸ್ ಎಂಬ ಆಫ್ರಿಕ ಮೂಲದ ಅಮೆರಿಕನ್ ಆಟಗಾರ ಓಟದ ಬಯಲಿನಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಗೆದ್ದು ಜಗದ್ವಿಖ್ಯಾತನಾಗಿಬಿಟ್ಟ. ಐವತ್ತು ವರ್ಷಗಳಲ್ಲಿ ಅಂತಹ ಸಾಧನೆಯನ್ನು ಬೇರ್ಯಾರೂ ಮಾಡಿರಲಿಲ್ಲವಾದ್ದರಿಂದ ಕಾರ್ಲ್ ಒಬ್ಬ ಅವತಾರ ಪುರುಷ ಎಂಬಂತೆಯೇ ಪತ್ರಿಕೆಗಳು ಪ್ರಚಾರ ಕೊಟ್ಟವು. ಅದುವರೆಗೆ ಕರಿಯರನ್ನು ಗುಲಾಮರಾಗಿ ನಡೆಸಿಕೊಂಡು ಹೆಸರು ಕೆಡಿಸಿಕೊಂಡಿದ್ದ ಅಮೆರಿಕಾ, ಅವರ ದೈಹಿಕ ಕ್ಷಮತೆಯನ್ನು ಗಮನಿಸಿ ಒಲಿಂಪಿಕ್ಸ್‍ನಲ್ಲಿ ಹೆಚ್ಚುಹೆಚ್ಚಾಗಿ ತೊಡಗಿಸಿ ಪದಕಗಳನ್ನು ಬಾಚಿಕೊಳ್ಳಲು ಶುರು ಮಾಡಿದ್ದ ಸಮಯ ಅದು. ಸಹಜವಾಗಿಯೇ ಈ ತಂತ್ರ ಉಳಿದ ದೇಶಗಳ ಕಣ್ಣು ತೆರೆಸಿತು. ತುರುಸಿನ ಕ್ರೀಡೆಗಳಲ್ಲಿ ಕರಿಯರನ್ನು ಮುಂದಿಟ್ಟು ಪದಕ ಪಡೆಯುವ ಚಾಲಾಕಿತನವನ್ನು ಉಳಿದವರೂ ಒಬ್ಬೊಬ್ಬರಾಗಿ ಅಳವಡಿಸಿಕೊಳ್ಳತೊಡಗಿದರು. ಇಷ್ಟೆಲ್ಲ ಆಗುವಾಗ ಭಾರತ ಕೂಡ ಎಚ್ಚೆತ್ತು ಕಣ್ಣುಜ್ಜಿಕೊಂಡಿತು. ಅದರ ಪರಿಣಾಮವಾಗಿ 1987ರಲ್ಲಿ ಭಾರತ ಸರ್ಕಾರ ಒಂದು ಮಹತ್ವಾಕಾಂಕ್ಷೆಯ ಯೋಜನೆಯನ್ನು ಜಾರಿಗೆ ತಂದಿತು. ಅದರ ಹೆಸರೇ ವಿಶೇಷ ಪ್ರಾಂತ್ಯ ಕ್ರೀಡಾ ಯೋಜನೆ (ಸ್ಪೆಷಲ್ ಏರಿಯಾ ಗೇಮ್ಸ್ ಪ್ರಾಜೆಕ್ಟ್ – ಎಸ್.ಎ.ಜಿ.ಪಿ.). ಈ ಯೋಜನೆಯನ್ನು ಮೊದಲಾಗಿ ಯೋಚಿಸಿ, ಕಾರ್ಯರೂಪಕ್ಕಿಳಿಸಿ, ಅದಕ್ಕೊಂದು ಸಮಿತಿ ರೂಪಿಸಿ ಮುನ್ನಡೆಸಿದವರು ಕೆನರಾ ಕ್ಷೇತ್ರದಿಂದ ಸಂಸದೆಯಾಗಿ ಆಯ್ಕೆಯಾಗಿ ಹೋಗಿದ್ದ ಮಾರ್ಗರೆಟ್ ಆಳ್ವ. ಕೇರಳದ ಸರ್ಕಸ್ ಕುಟುಂಬಗಳ ಮಕ್ಕಳನ್ನು ಜಿಮ್ನಾಸ್ಟಿಕ್ಸ್‍ಗೆ, ಅಂಡಮಾನ್ ನಿಕೋಬಾರ್ ದ್ವೀಪಗಳ ಮೀನುಗಾರ ಕುಟುಂಬಗಳ ಯುವಕರನ್ನು ದೋಣಿಸ್ಪರ್ಧೆಗೆ, ಕೈಕಾಲುಗಳಲ್ಲಿ ತೀರಾ ಚುರುಕಾಗಿದ್ದ ರಾಂಚಿಯ ಹುಡುಗರನ್ನು ಸೇರಿಸಿ ಹಾಕಿ ತಂಡಕ್ಕೆ ಆರಿಸುವ ಹಾಗೂ ಬೇಕಾದ ಸರ್ವಸಕಲ ತರಬೇತಿಯನ್ನೂ ಕೊಡಿಸುವ ಯೋಜನೆ ಅದಾಗಿತ್ತು. ಆಯಾ ಪ್ರದೇಶಗಳಲ್ಲಿರುವ ಬುಡಕಟ್ಟು ಅಥವಾ ಸ್ಥಳೀಯ ಪ್ರತಿಭೆಗಳಲ್ಲಿರುವ ಗುಣವಿಶೇಷಗಳನ್ನು ಪತ್ತೆಹಚ್ಚಿ ಅದಕ್ಕೆ ತಕ್ಕ ಕ್ರೀಡೆಯಲ್ಲಿ ಅವರನ್ನು ಸಜ್ಜುಗೊಳಿಸುವುದೇ ಯೋಜನೆಯ ಮೂಲ ಉದ್ದೇಶ.
ಆಗಲೇ ಹೇಳಿದಂತೆ, ಒಲಿಂಪಿಕ್ಸ್‍ನಲ್ಲಿ ಸತತವಾಗಿ ಓಟದ ಸ್ಪರ್ಧೆಗಳಲ್ಲಿ ಪದಕಗಳ ಕೊಳ್ಳೆ ಹೊಡೆಯುತ್ತಿದ್ದವರೆಲ್ಲ ಆಫ್ರಿಕನ್ ಮೂಲದವರು. ಭೌಗೋಳಿಕ ವೈವಿಧ್ಯವೋ ಬದುಕುವ ಅನಿವಾರ್ಯತೆಯೋ ದೈಹಿಕ ಅನುಕೂಲವೋ – ಒಟ್ಟಲ್ಲಿ ಆಫ್ರಿಕವೆಂದರೆ ಬೇಟೆ-ಓಟಗಳದ್ದೇ ಪಾರಮ್ಯ. ಹಾಗಾಗಿ ಓಟ ಕರಿಯರ ರಕ್ತದಲ್ಲೇ ಬೆರೆತುಹೋಗಿರುವ ಗುಣ. ನಮ್ಮಲ್ಲೂ ಅಂಥ ಆಫ್ರಿಕನ್ ರಕ್ತದ ಜನರಿರುವಾಗ ಅವರನ್ನು ತರಬೇತಿಗೊಳಿಸಬಾರದೇಕೆ? ಸರಿ, ವಿಶೇಷ ಪ್ರಾಂತ್ಯ ಕ್ರೀಡಾ ಯೋಜನೆಯಲ್ಲಿ ಸಿದ್ದಿ ಜನಾಂಗವನ್ನೂ ಸೇರಿಸಿಕೊಳ್ಳಲಾಯಿತು. ಅಥವಾ ಹೀಗೆ ಹೇಳಬಹುದು: ಸಿದ್ದಿಗಳ ತರಬೇತಿಗಾಗಿಯೇ ರೂಪಿಸಿದ ಆ ಯೋಜನೆಯಲ್ಲಿ ಸಿದ್ದಿಗಳೊಂದಿಗೆ ಬೇರೆ ಊರುಗಳ ಬೇರೆ ಬುಡಕಟ್ಟುಗಳ ಯುವಕ ಯುವತಿಯರಿಗೆ ಕೂಡ ಅವಕಾಶ ಕಲ್ಪಿಸಲಾಯಿತು. ಯೋಜನೆಯ ಮುಂದಿನ ಹಂತವಾಗಿ ಒಂದಷ್ಟು ಸರಕಾರೀ ಅಧಿಕಾರಿಗಳು ಉತ್ತರ ಕನ್ನಡದ ಕಾಡುಗಳಿಗೆ ಬಂದರು. ಸಿದ್ದಿ ಜನಾಂಗದ ಯುವಕ-ಯುವತಿಯರನ್ನು ಒಟ್ಟು ಸೇರಿಸಿದರು. ಓಡುವ, ಜಿಗಿವ, ಎಸೆವ ಪರೀಕ್ಷೆ ನಡೆಸಿ ಅವರ ಸಾಮರ್ಥ್ಯ ಪರೀಕ್ಷಿಸಿದರು. ತರಬೇತಿ ಪಡೆದ ಕ್ರೀಡಾಳುಗಳಿಂತಲೂ ಉತ್ತಮ ಪ್ರದರ್ಶನ ತೋರಿದ್ದ ಈ ಕಾಡುಕುಸುಮಗಳನ್ನು ಕಂಡು ರೋಮಾಂಚಿತರಾದ ಅವರು ಒಂದಷ್ಟು ಜನರನ್ನು ಆರಿಸಿ, ಹುಬ್ಬಳ್ಳಿಯಿಂದ ರೈಲು ಹತ್ತಿಸಿ ಅತ್ತ ದೆಹಲಿಗೂ ಇತ್ತ ಬೆಂಗಳೂರಿಗೂ ವರ್ಗಾಯಿಸಿದರು. ಸಮರ್ಥ ತರಬೇತುದಾರರನ್ನು ನಿಯೋಜಿಸಿ ಸಿದ್ದಿ ಪ್ರತಿಭೆಗಳ ಅನಾವರಣಕ್ಕೆ ಅವಕಾಶ ಮಾಡಿಕೊಟ್ಟರು. ಹೀಗೆ ಸರಕಾರ ಜಾರಿಗೆ ತಂದ ಎಸ್.ಎ.ಜಿ. ಯೋಜನೆ ಕಮಲಾ ಸಿದ್ದಿ, ಫಿಲಿಪ್ ಅಂಥೋನಿ ಸಿದ್ದಿಯಂತಹ ಹಲವು ಪ್ರತಿಭೆಗಳನ್ನು ಬೆಳಕಿಗೆ ತಂದಿತು. ಅವರೆಲ್ಲ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕಗಳ ಕೊಳ್ಳೆ ಹೊಡೆಯುವಂತಾಯಿತು. ಭಾರತ ಒಲಿಂಪಿಕ್ಸ್‍ನ ಓಟದ ಅಂಗಣದಲ್ಲಿ ತನ್ನ ಸ್ಪರ್ಧಾಳುಗಳನ್ನಿಳಿಸಿ ಚಿನ್ನದ ಬೇಟೆಯಾಡುವುದು ಇನ್ನೇನು ಖಚಿತ ಎನ್ನುವಂತಾಯಿತು.
ಈ ಯೋಜನೆ ಪ್ರಾರಂಭವಾದಾಗ ಕಾಡಿನಿಂದ ಆರಿಸಿಬಂದು ನಗರದ ಆಧುನಿಕ ತರಬೇತಿಗೆ ಹೊರಟುನಿಂತಿದ್ದ ಸಿದ್ದಿ ಯುವಕರಿಗೆ ಕಾಲಿಗೆ ಚಪ್ಪಲಿಯೂ ಇರಲಿಲ್ಲ. ರೈಲಿನಲ್ಲಿ ತಂಡೋಪತಂಡವಾಗಿ ಮೊದಲ ಬ್ಯಾಚು ಹೊರಟಾಗ ಡಿಸೆಂಬರಿನ ಕೆಟ್ಟ ಚಳಿಗಾಲ. ಈ ಹುಡುಗರೋ ಮೈಗೆ ತೆಳು ಅಂಗಿ ಹಾಕಿ ಕೂತಿದ್ದರಷ್ಟೆ. ಇಂಥ ಚಳಿಯಲ್ಲಿ ಪ್ರಾಣಿಗಳಂತೆ ತೊಗಲು ಮುಚ್ಚದೆ ಕೂತಿದ್ದಾರಲ್ಲಾ ಎಂದು ರೈಲಿನಲ್ಲಿದ್ದ ಉಳಿದ ಪ್ರಯಾಣಿಕರು ಬೆಕ್ಕಸಬೆರಗಾಗಿ ನೋಡುತ್ತಿದ್ದರಂತೆ! ಭಾರತದ ಉಳಿದ ಭಾಗದ ಬುಡಕಟ್ಟು ಜನರಿಗೆ ಹೋಲಿಸಿದರೆ ಸಿದ್ದಿಗಳಿಗಿದ್ದ ಸಮಸ್ಯೆ ಭಿನ್ನ ರೀತಿಯದ್ದು. ಉಳಿದವರಿಗಿಲ್ಲದ ವಿಶೇಷ ರೂಪ ಸಿದ್ದಿಗಳಿಗಿತ್ತು. ಭಾರತದ ಜೀತವ್ಯಾಪಾರದ ಇತಿಹಾಸ ಗೊತ್ತಿಲ್ಲದ ಎಷ್ಟೋ ಜನರಿಗೆ ಇವರೂ ನಮ್ಮ ನೆಲದವರೇ, ಭಾರತೀಯರೇ ಎಂಬುದನ್ನು ಒಪ್ಪಿಕೊಳ್ಳುವುದು ಬಹಳ ಕಷ್ಟವಾಗಿತ್ತು. ಕೆನ್ಯಾ, ಸೋಮಾಲಿಯಾ, ತಾಂಜಾನಿಯಾ, ಇಥಿಯೋಪಿಯಾ, ಉಗಾಂಡ, ಕಾಂಗೋ, ಲಿಬಿಯ, ಈಜಿಪ್ಟ್, ಸುಡಾನ್ ಮುಂತಾದ ದೇಶಗಳಿಂದ ಬಂದ ಪೂರ್ವಜರಿಂದಾಗಿ ಸಿದ್ದಿಗಳ ಮೈಕಟ್ಟು ನೂರಕ್ಕೆ ನೂರು ಆಫ್ರಿಕನ್ ಆಗಿತ್ತು. ಅಲ್ಲಿನ ಬಂಟು ಜನಾಂಗಕ್ಕೆ ಸೇರಿದವರು ಎಂದು ಮಾನವಶಾಸ್ತ್ರಜ್ಞರು ಸಿದ್ದಿಗಳನ್ನು ಗುರುತಿಸಿದ್ದರು. ಪೋರ್ಚುಗೀಸರು ಇವರನ್ನು ಭಾರತದ ರಾಜ-ಮಹಾರಾಜರಿಗೂ ದುಡ್ಡಿಗೆ ಮಾರಿದ್ದರಂತೆ. ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರಗಳನ್ನು ಆಳಿದ ನವಾಬರು, ದೆಹಲಿಯ ಮುಘಲರು ಮತ್ತು ಮರಾಠವಾಡದ ಛತ್ರಪತಿ ಶಿವಾಜಿಯ ಸೇನೆಗಳಲ್ಲಿ ಈ ಕರಿಯರು ಸೈನಿಕರಿಂದ ಹಿಡಿದು ಸೇನಾ ದಂಡನಾಯಕನ ಸ್ಥಾನದವರೆಗೆ ವಿವಿಧ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದರು. ಸಿದ್ದಿ ಎಂಬ ಹೆಸರು ಸಯ್ಯದ್ ಎಂಬುದರಿಂದ ಬಂದಿದೆ ಎಂದೂ ಸಯ್ಯದ್ ಎಂಬುದು ಶಹೀದ್ (ಗೌರವಾನ್ವಿತ) ಎಂಬ ಪದದ ಅಪಭ್ರಂಶವೆಂದೂ ಒಂದು ತರ್ಕವಿದೆ. ಏನೇ ಇರಲಿ, ಐರೋಪ್ಯರ ಕೈಯಲ್ಲಿ ಜೀತ ಮಾಡುವುದಕ್ಕಿಂತ ಅತ್ಯಂತ ಗೌರವದ ಬದುಕನ್ನು ಸಿದ್ದಿಗಳು ಭಾರತೀಯ ಅರಸರ ಕೈಕೆಳಗೆ ಬಾಳಿದರೆಂಬುದು ಮಾತ್ರ ಸುಳ್ಳಲ್ಲ. ಅಂತಹ ವೈಭವ ಕಳೆದು ಇದೀಗ ಅವರೆಲ್ಲ ಕಾಡುಪಾಲಾಗಿ ದಾರಿದ್ರ್ಯಕ್ಕೆ ಹತ್ತಿರದ ಬಾಳನ್ನು ಸವೆಯುತ್ತಿದ್ದದ್ದು, ಕೇಂದ್ರ ಸರಕಾರದ ಯೋಜನೆಯಲ್ಲಿ ಸೇರ್ಪಡೆಯಾಗಿ ಚಪ್ಪಲಿಯಿಲ್ಲದ ಕಾಲಿನಲ್ಲಿ ಮಹಾನಗರಗಳಿಗೆ ಹೊರಟಿದ್ದದ್ದು ಕಾಲನ ಕ್ರೂರ ವ್ಯಂಗ್ಯ ಅಷ್ಟೆ.
ಆರಂಭಶೂರ ಸರಕಾರಗಳು ಶುರು ಮಾಡುವ ಎಲ್ಲ ಕಾರ್ಯಕ್ರಮಗಳಂತೆ ಸಿದ್ದಿಗಳನ್ನು ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಸಜ್ಜುಗೊಳಿಸುವ ಯೋಜನೆಯೂ ಅದ್ದೂರಿಯಾಗಿಯೇ ಆರಂಭವಾಯಿತು. ಆದರೆ ಬರಬರುತ್ತ ನಿಂತ ನೀರಲ್ಲಿ ಹುಟ್ಟುವ ಹುಳುಗಳಂತೆ ಅದರಲ್ಲಿ ನೂರೆಂಟು ತಾಪತ್ರಯಗಳು ಕಾಣಿಸಿಕೊಳ್ಳತೊಡಗಿದವು. ಓಡುವ, ಜಿಗಿಯುವ ಎಂತಹ ಕ್ರೀಡೆ ಇದ್ದರೂ ಅದರಲ್ಲಿ ದಾಖಲೆ ಮುರಿವಂಥ ಸಾಧನೆ ಮೆರೆಯುತ್ತಿದ್ದ ಸಿದ್ದಿ ಕ್ರೀಡಾಳುಗಳು ಸಹಜವಾಗಿಯೇ ಉಳಿದವರ ಕೆಂಗಣ್ಣಿಗೆ ಗುರಿಯಾದರು. ಇವರನ್ನು ಹೊರಗಿಟ್ಟು ನಮಗೆ ಬೇರೆ ಸ್ಪರ್ಧೆ ನಡೆಸಿ ಎಂಬ ಆಂತರಿಕ ಬೇಡಿಕೆ ಬೇರೆ ಗುಂಪುಗಳಿಂದ ಬರತೊಡಗಿತು. ಪದಕ ಗೆಲ್ಲುವ ಆಸೆಗಾಗಿ ಮೂಲತಃ ಭಾರತೀಯರೇ ಅಲ್ಲದ ವ್ಯಕ್ತಿಗಳನ್ನು ಸರಕಾರ ದುಡ್ಡು ಕೊಟ್ಟು ಸಾಕುತ್ತಿದೆ ಎಂಬಲ್ಲಿಯವರೆಗೂ ದೂರುಗಳು ಬೆಳೆಯುತ್ತಹೋದವು. ಕ್ರೀಡಾರಂಗದೊಳಗಿನ ರಾಜಕೀಯ ಅದೆಂಥ ವ್ರಣವಾಗಿ ವ್ಯಾಪಿಸಿತೆಂದರೆ 1992ರಲ್ಲಿ ಸಿದ್ದಿ ಕ್ರೀಡಾಪಟುಗಳನ್ನು ಪ್ರತ್ಯೇಕವಾಗಿ ಬೆಂಗಳೂರಿನ ಹೊರವಲಯದ ಆವಾಸಕ್ಕೆ ಸ್ಥಳಾಂತರಿಸಲಾಯಿತು. ಮೊದಲಿಗೆ ಸಿಕ್ಕಿದ್ದ ಸವಲತ್ತುಗಳಿಗೆಲ್ಲ ಕೊಕ್ಕೆ ಹಾಕಲಾಯಿತು. ತಿಂಗಳಿಗೆ 200 ರುಪಾಯಿ ಸ್ಟೈಪೆಂಡ್ ಸಿಗುತ್ತಿದ್ದದ್ದು ಈಗ 50 ರುಪಾಯಿಗೆ ಇಳಿಯಿತು. ಹೀಗೆ ಮಾಡಿದರೆ ಊಟವಾದರೂ ಹೇಗೆ ಮಾಡೋಣ ಸ್ವಾಮಿ, ಅರೆಹೊಟ್ಟೆ ಉಂಡು ಓಡಬೇಕೇ ಎಂದು ಕೇಳಿದವರಿಗೆ, “ಸಾಧ್ಯವಿಲ್ಲವಾದರೆ ವಾಪಸ್ ಹೋಗಿ” ಎಂಬ ಉದಾಸೀನ ಉತ್ತರ ಯೋಜನಾ ಅಧಿಕಾರಿಗಳಿಂದ ಬಂತು. ಅಂತೂ ಶುರುವಾದ ಆರೇ ವರ್ಷಗಳಲ್ಲಿ ಯೋಜನೆ ನೆಗೆದುಬಿತ್ತು. 1993ರಲ್ಲಿ ವಿಶೇಷ ಪ್ರಾಂತ್ಯ ಕ್ರೀಡಾ ಯೋಜನೆಗೆ ಕೊನೆಯ ಮೊಳೆ ಹೊಡೆಯಲಾಯಿತು. ಆರು ವರ್ಷ ತರಬೇತುಗೊಳಿಸಿದ್ದ ಕ್ರೀಡಾಳುಗಳನ್ನು ಮತ್ತೆ ಕಾಡಿಗೆ, ಅವರವರ ಹಾಡಿಗೆ ತಂದು ಬಿಡಲಾಯಿತು. ಅರ್ಧದಾರಿ ಕ್ರಮಿಸಿದ್ದೇವೆ; ಕನಿಷ್ಠ ಸೌಲಭ್ಯ ಒದಗಿಸಿದರೂ ಸಾಕು, ಇನ್ನೊಂದಿಷ್ಟು ಸ್ಪರ್ಧೆಗಳಲ್ಲಿ ಭಾಗವಹಿಸಿ ಮತ್ತೊಂದಿಷ್ಟು ಪದಕ ತಂದು ದೇಶಕ್ಕೆ ಕೀರ್ತಿ ತರುತ್ತೇವೆ ಎಂದರೂ ಕುರುಡು-ಕಿವುಡ ಸರಕಾರಕ್ಕೆ ಅದ್ಯಾವುದೂ ಬೇಕಿರಲಿಲ್ಲ. ಒಟ್ಟಿನಲ್ಲಿ ಸಿದ್ದಿಗಳು ಒಲಿಂಪಿಕ್ಸ್ ಕಣದಲ್ಲಿ ಮಿಂಚುವ ಸುವರ್ಣ ಅವಕಾಶವನ್ನು ಕಳೆದುಕೊಂಡು ನತದೃಷ್ಟರಾಗಿ ಕಾಡು ಸೇರಿದರು. ಅದೆಷ್ಟು ಕೋಟಿಗಳನ್ನು ಯೋಜನೆಯ ವಿವಿಧ ಹಂತಗಳಲ್ಲಿ ಯಾರ್ಯಾರು ಹೊಡೆದರೋ ದೇವರೊಬ್ಬನೇ ಬಲ್ಲವನು.
ಅಂದು ನಗರಗಳಲ್ಲಿ ತರಬೇತಿ ಪಡೆದು ಕಾಡಿನ ಸಂಬಂಧ ಕಡಿದುಕೊಂಡ; ಅತ್ತ ಅದೂ ಅಲ್ಲದೆ ಇತ್ತ ಇದೂ ಇಲ್ಲದೆ ತ್ರಿಶಂಕುವಾಸಿಗಳಂತಾದ ಸಿದ್ದಿಗಳು ಹೇಗೋ ಬದುಕು ನೂಕುತ್ತಿದ್ದಾರೆ. ಕೆಲ ವರ್ಷಗಳ ಹಿಂದೆ ಎಂಟಿವಿ ಎಂಬ ಮ್ಯೂಸಿಕ್ ಚಾನೆಲ್ ಸಿದ್ದಿಗಳ ಹಾಡೊಂದಕ್ಕೆ ಆಧುನಿಕ ಸಂಗೀತದ ಟಚ್ ಕೊಟ್ಟು ಪ್ರಸಾರ ಮಾಡಿತ್ತು. ಕನ್ನಡದ ಕೆಲ ಚಾನೆಲ್‍ಗಳಲ್ಲಿ ಸಿದ್ದಿ ಜನಾಂಗದ ಕೆಲ ಯುವಕರನ್ನು ಕರೆತಂದು ರಿಯಾಲಿಟಿ ಷೋ ಹೆಸರಲ್ಲಿ ಕೋಡಂಗಿಗಳಂತೆ ನಡೆಸಿಕೊಂಡದ್ದೂ ಆಯಿತು. ಆದರೆ ಕಿರುತೆರೆಯ ಪ್ರಭೃತಿಗಳಿಗೆ ಈ ಜನಾಂಗದ ಕುರಿತು ನಿಜವಾದ ಕಾಳಜಿ ಇದ್ದಂತೇನೂ ಕಾಣುವುದಿಲ್ಲ. ದೇಶದಲ್ಲಿ ಒಟ್ಟು 50,000 ಸಿದ್ದಿಗಳಿದ್ದಾರೆಂದು ಅಂದಾಜು. ಅವರಲ್ಲಿ 60% ಕರ್ನಾಟಕದಲ್ಲೇ ಇದ್ದಾರೆ. ಪೂರ್ವಜರ ಮನೆಯಾದ ಆಫ್ರಿಕವನ್ನು ಎಂದೂ ಕಾಣದ; ನೆಲೆ ನಿಂತ ದೇಶದಲ್ಲಿ ಜನರ ಕಣ್ಣಿಗಿನ್ನೂ ಪರಕೀಯರಾಗೇ ಬದುಕುತ್ತಿರುವ ಸಿದ್ದಿಗಳದ್ದು ನಿಜಕ್ಕೂ ಕರುಣೆಯುಕ್ಕಿಸುವ ಕತೆ. ಸಮಾಜದ ಉಳಿದ ಶೋಷಿತರಂತೆ ಸರಕಾರದ ಸವಲತ್ತುಗಳಿಗೆ ಕಾಯದೆ, ತಮ್ಮ ಸ್ವಂತ ಕಾಲ ಮೇಲೆ ಬದುಕು ಕಟ್ಟಿಕೊಂಡ ಅವರದ್ದು ಸ್ವಾಭಿಮಾನದ ಗಾಥೆಯೂ ಹೌದು. “ಮತ್ತೊಮ್ಮೆ ಎಸ್.ಎ.ಜಿ ಕಾರ್ಯಕ್ರಮವನ್ನು ಪ್ರಾರಂಭಿಸಿ; ಅದರಲ್ಲಿ ನಮ್ಮನ್ನೂ ಸೇರಿಸಿಕೊಂಡು ಸರಿಯಾದ ತರಬೇತಿ ಕೊಡಿ. 2024ರ ಒಲಿಂಪಿಕ್ಸ್ ನಲ್ಲಿ ಓಟದ ಟ್ರ್ಯಾಕ್ ಅನ್ನು ನಾವು ಆಳುತ್ತೇವೆ. ತಾಯಿ ಭಾರತಿಯ ಉಡಿಗೆ ಬೊಗಸೆತುಂಬ ಪದಕಗಳನ್ನು ತಂದು ಸುರಿಯುತ್ತೇವೆ” ಎಂದು ಆತ್ಮವಿಶ್ವಾಸದಿಂದ ಗಟ್ಟಿದನಿಯಲ್ಲಿ ಆಗ್ರಹಿಸುತ್ತಿದ್ದಾರೆ ಸಿದ್ದಿಗಳು. ದೇಶದ ತುಂಬ ಹರಡಿರುವ ಬುಡಕಟ್ಟು ಪ್ರತಿಭೆಗಳನ್ನು “ಚೆರ್ರಿ ಪಿಕ್” ಎಂಬಂತೆ ಆರಿಸಿತಂದು ಹತ್ತು ಹದಿನೈದು ವರ್ಷಗಳ ಕಾಲ ಅತ್ಯಾಧುನಿಕವೆನ್ನಿಸುವ ತರಬೇತಿ ಸೌಲಭ್ಯ ಒದಗಿಸಿ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಮಿಂಚುವಂತೆ ಮಾಡುವುದು – ಸಮರ್ಪಕವಾಗಿ ಮಾಡಿದ್ದೇ ಆದರೆ ಎಂಥ ಅದ್ಭುತ ಯೋಚನೆ ಮತ್ತು ಯೋಜನೆ! ಕೇಂದ್ರ ಸರಕಾರ ಕಣ್ಣು ತೆರೆದು ಈ ಅವಕಾಶವನ್ನು ಬಾಚಿಕೊಳ್ಳಬೇಕು, ಅಷ್ಟೆ.
ಚಿತ್ರ ಕೃಪೆ:-www.thehindu.com/
ತುಂಬಾ ಅದುಬತವಾಗಿದೆಈ ಲೆಖನ..ಸಕಾ೯ರ ಇಗಾದರು ಏಚೆತು ಸಿದಿ ಜನಾಂಗಗಳಿಗೆ ಕ್ರಿಡಾ ಚಟುವಟಿಕೆಗಳಿಗೆ ಪ್ರೋತಸಾಹಿಸಲಿ
Very nice article , it has covered reality life of siddis