ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 3, 2016

2

ಮಾದರೀ ಹೋರಾಟಗಾರರ ಮುಂದಾಳತ್ವದಲ್ಲಿ ಪ್ರಾಯೋಜಿತ ಪ್ರತಿಭಟನೆಗಳು

‍ನಿಲುಮೆ ಮೂಲಕ

– ಎಸ್. ಎನ್. ಭಾಸ್ಕರ್‍

dr-br-ambedkarದಲಿತಪರ ಹೋರಾಟ, ಚಳುವಳಿಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ದಲಿತ ಸಂಬಂಧಿ ಸಂಘಟನೆಯ ಮುಖಂಡರೊಬ್ಬರು ತಮ್ಮ ಚಳುವಳಿ, ಧ್ಯೇಯ ಗಳ ಬಗ್ಗೆ ಮಾತನಾಡುತ್ತಾ, ಈ ಹಿಂದೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್‍. ಅಂಬೇಡ್ಕರ್‍ ರವರು ಹೇಳಿದ್ದ ಈ ಮಾತುಗಳನ್ನು ಉಲ್ಲೇಖಿಸುತ್ತಾರೆ.

“ಹಿಂದೂ ಧರ್ಮವೆಂಬುದು ಬಹು ಮಹಡಿಗಳನ್ನು ಹೊಂದಿರುವ ಒಂದು ಕಟ್ಟಡವಿರುವ ಹಾಗೆ. ವಿಪರ್ಯಾಸವೆಂದರೆ ಇಲ್ಲಿ ಒಂದು ಮಹಡಿಯಿಂದ ಮತ್ತೊಂದು ಮಹಡಿಗೆ ಹೋಗಲು ಯಾವುದೇ ಮೆಟ್ಟಿಲುಗಳಿಲ್ಲ. ನೆಲಮಹಡಿಯಲ್ಲಿರುವವನು ಕೊನೆಯ ತನಕ ಅಲ್ಲೇ ಇರಬೇಕಾಗುತ್ತದೆ. ಮೇಲ್ಮಹಡಿಯಲ್ಲಿರುವವನು ಕೊನೆಯವರೆಗೂ ಮೇಲ್ಮಟ್ಟದಲ್ಲಿಯೇ ಇರುವಂತೆ ನೋಡಿಕೊಳ್ಳಲಾಗುತ್ತದೆ”

ಡಾ.ಬಿ.ಆರ್‍.ಅಂಬೇಡ್ಕರ್‍ ರವರ ಈ ಮಾತುಗಳು ಈಗಲೂ ಎಷ್ಟು ಪ್ರಸ್ತುತವೆನಿಸಿದೆ ಎಂಬುದನ್ನು ವಿಮರ್ಷಿಸೋಣ..

ಹಿಂದೂ ಸಮಾಜದ ಶ್ರೇಣೀಕೃತ ವ್ಯವಸ್ಥೆಯನ್ನು ಉಲ್ಲೇಖಿಸುತ್ತಾ ಮೇಲ್ಕಂಡ ಮಾತುಗಳನ್ನು ಅಂಬೇಡ್ಕರ್‍ ರವರು ಹೇಳಿದ್ದಾರೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಪರಿಪೂರ್ಣತೆಯ ನಿಟ್ಟಿನಲ್ಲಿ ವಿಕಾಸದ ಹಾದಿಯಲ್ಲಿ ಪ್ರಪಂಚದ ಯಾವುದೇ ನಾಗರೀಕ ಸಮಾಜಗಳು ಕಾಲಾಂತರದಲ್ಲಿ ಏಳು ಬೀಳುಗಳನ್ನು ಕಂಡಿವೆ. ಸಾಮಾಜಿಕ ವ್ಯವಸ್ಥೆಯೊಂದು ವಿಕಸಿತವಾಗಲು, ಪ್ರಬುದ್ದವಾಗಲು ಇರುವ ಅಡ್ಡಿಗಳಲ್ಲಿ ಅತ್ಯಂತ ಪ್ರಮುಖವಾದ ಸಮಸ್ಯೆ ಅಸಮಾನತೆ, ಧರ್ಮದ ಆಧಾರಲ್ಲಿಯಾಗಲೀ, ಜಾತಿಯ ಆಧಾರದಲ್ಲಿಯೇ ಆಗಲೀ, ವರ್ಣದ ಆಧಾರದಲ್ಲಿಯೇ ಆಗಲೀ ಸಂಪತ್ತಿನ ಆಧಾರದಲ್ಲಿಯೇ ಆಗಲಿ ಮೇಲು-ಕೀಳು ಎಂಬ ಜನಾಂಗೀಯ ತಾರತಮ್ಯ ಸಮಾಜದಲ್ಲಿ ವ್ಯಾಪಿಸಿದಾಗ ಅಸಮಾನತೆ ಉದ್ಭವಿಸುತ್ತದೆ. ಅಸಮಾನತೆಯು ಅತಿರೇಕಕ್ಕೆ ಹೋಗಿ ಅಸ್ಪೃಶ್ಯತೆಯಂತಹ ಅತ್ಯಂತ ಹೇಯ ಪದ್ದತಿಗೆ ಕಾರಣವಾಗುತ್ತದೆ.

ನಿರಂತರ ಚಲನಶೀಲವಾದ ಸಾಮಾಜಿಕ ವ್ಯವಸ್ಥೆಯಲ್ಲಿ ಕಾಲಾಂತರದಲ್ಲಿ ಈ ಸಾಮಾಜಿಕ ಪಿಡುಗುಗಳ  ದುಷ್ಪರಿಣಾಮಗಳನ್ನು ಅರ್ಥೈಸಿಕೊಂಡ ನಾಗರೀಕ ಸಮೂಹ ತನ್ನ ನಿಲುವುಗಳಲ್ಲಿ, ನೀತಿಗಳಲ್ಲಿ, ಬದಲಾವಣೆಯನ್ನು ಮಾಡಿಕೊಳ್ಳುವ ಮೂಲಕ ಸುಧಾರಣೆಯೆಡೆಗೆ ಸಾಗಿವೆ. ಆದರೆ ಇಂತಹ ಸುಧಾರಣೆಗಳು ತನ್ನ ಪಾಡಿಗೆ ತಾನು ಆಗುವುದಿಲ್ಲ. ಅಸ್ಪೃಶ್ಯತೆಯಂತಹ ಸಾಮಾಜಿಕ ಪಿಡುಗಿನಿಂದ ನೊಂದ ಜನಾಂಗಗಳು ಇದರ ವಿರುದ್ದ ಎಚ್ಚೆತ್ತು, ಚಳುವಳಿಗಳು, ಹೋರಾಟಗಳು, ಪ್ರತಿಭಟನೆಗಳನ್ನು ಮಾಡಿಕೊಂಡು ಬಂದ ಪರಿಣಾಮ ಇದಾಗಿದೆ. ಇತಿಹಾಸದ ವಿವಿಧ ಘಟ್ಟಗಳಲ್ಲಿ ಹುಟ್ಟಿ ಬಂದ ಹಲವಾರು ಮಹನೀಯರು ಇಂತಹ ಪಿಡುಗುಗಳ ವಿರುದ್ದ ನಡೆದ ಹೋರಾಟದ ಮಂಚೂಣಿಯಲ್ಲಿದ್ದುಕೊಂಡು ಹೋರಾಟಕ್ಕೆ ನಿರ್ಣಾಯಕ ಯಶಸ್ಸನ್ನು ತಂದುಕೊಟ್ಟಿದ್ದಾರೆ. ಇವರ ಹೋರಾಟದ ಕಿಚ್ಚಿಗೆ ಆಡಳಿತ ವ್ಯವಸ್ಥೆಗಳೇ ಮಣಿದಿವೆ. ತತ್ಪರಿಣಾಮ ಇಂತಹ ಸಾಮಾಜಿಕ ಸಮಸ್ಯೆಗಳು ಸಾಕಷ್ಟು ಮಟ್ಟಿಗೆ ತಹಬದಿಗೂ ಬಂದಿವೆ.

ಇಂತಹ ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಒಂದು ಸಮಾಜ ತಾನು ಅಳವಡಿಸಿಕೊಂಡು ಬಂದಿರುವ ನೀತಿಯಲ್ಲಿ ಬದಲಾವಣೆ ತಂದುಕೊಳ್ಳಬೇಕಾಗುತ್ತದೆ. ಆದರೆ ಈ ಸಾಮಾಜಿಕ ನೀತಿಯ ಬದಲಾವಣೆ ಥಟ್ಟನೇ ಆಗುವಂತದ್ದಲ್ಲ. ಇದಕ್ಕೆ ಸಾಕಷ್ಟು ಸಮಯ ಹಿಡಿಸುತ್ತದೆ. ಸಾಮಾಜಿಕ ನೀತಿಗಳಲ್ಲಿ ಬದಲಾವಣೆ ತರುವ ಸಲುವಾಗಿ ಆಡಳಿತ ವ್ಯವಸ್ಥೆಯ ಪಾತ್ರ ಸಹಾ ನಿರ್ಣಾಯಕವೆನಿಸುತ್ತದೆ. ಸೂಕ್ತ ಕಾನೂನಿನ ನೆರವಿಲ್ಲದೇ ಯಾವುದೇ ಸಮಾಜದ ಸುಧಾರಣೆ ಸಾಧ್ಯವಿಲ್ಲ. ಅಂತಹ ಜವಾಬ್ದಾರಿಯನ್ನು ಆಡಳಿತ ವ್ಯವಸ್ಥೆಯೊಂದು ತೋರಬೇಕಾಗುತ್ತದೆ. ಇವೆಲ್ಲದರ ಪರಿಣಾಮವಾಗಿ ಸಾಮಾಜಿಕ ವ್ಯವಸ್ಥೆಯೊಂದು ಸುಧಾರಣೆಯ ಹಾದಿಯಲ್ಲಿ ಬದಲಾವಣೆಗಳಿಗೆ ತನ್ನನ್ನು ತಾನು ತೆರೆದುಕೊಳ್ಳುತ್ತದೆ.

ಮೇಲೆ ಹೇಳಲಾದ ಮೂರು ಅಂಶಗಳನ್ನು ಅತ್ಯಂತ ಸಂಕ್ಷಿಪ್ತವಾಗಿ ಹೀಗೆ ಹೇಳಬಬಹುದು. ಪ್ರತಿಯೊಂದು ಸಾಮಾಜಿಕ ವ್ಯವಸ್ಥೆಯಲ್ಲಿ ಜನಾಂಗೀಯ ಅಸಮಾನತೆಯೆಂಬ ಪಿಡುಗು ಸಾಮಾನ್ಯವಾಗಿದೆ. ಪರಿಪೂರ್ಣತೆಯ ಹಾದಿಯಲ್ಲಿ ಇಂತಹ ಪಿಡುಗುಗಳ ದುಷ್ಪರಿಣಾಮಗಳನ್ನು ಅರಿತುಕೊಂಡ ಸಮಾಜ ಇದರ ವಿರುದ್ದ ನಡೆದ ಹೋರಾಟಗಳಿಗೆ, ಚಳುವಳಿಗಳಿಗೆ ಸಾಕ್ಷಿಯಾಗಿದೆ. ಹೋರಾಟ , ಚಳುವಳಿಗಳು ಸಾಮಾಜಿಕ ನೀತಿಯನ್ನು ಬದಲಾಯಿಸುವಲ್ಲಿ ಯಶಸ್ವಿಯಾಗುವುದರ ಮೂಲಕ ಸಾಮಾಜಿಕ ಸುಧಾರಣೆಗಳು ಘಟಿಸಿವೆ. ಇಷ್ಟೂ ಹಿನ್ನಲೆಯ ನಂತರ ನೇರ ವಿಷಯಕ್ಕೆ ಬರುತ್ತೇನೆ.

ನಮ್ಮ ದೇಶವೂ ಸಹಾ ಇಂತಹ ಘೋರ ಸಾಮಾಜಿಕ ಪಿಡುಗಿಗೆ ಸಾಕ್ಷಿಯಾಗಿದೆ. ಹಿಂದೂ ಸಮಾಜದಲ್ಲಿ ಅಸ್ಪೃಶ್ಯತೆ, ಅಸಮಾನತೆಯ ವಿರುದ್ದ ಹೋರಾಟಗಳು, ಚಳುವಳಿಗಳು ಘಟಿಸಿವೆ. ನಮ್ಮ ಸಮಾಜದಲ್ಲಿ ಜಾರಿಯಲ್ಲಿದ್ದ ಅಸ್ಪೃಶ್ಯತೆಯನ್ನು ಪ್ರತಿನಿಧಿಸಿಸುವ ಹಲವಾರು ಆಚರಣೆಗಳು ಇದರ ಕರಾಳಮುಖವನ್ನು ತೋರಿಸುತ್ತದೆ. ಇಂತಹ ಜನಾಂಗೀಯ ತಾರತಮ್ಯ ವಿದ್ದುದನ್ನು ನಿರಾಕರಿಸಲು ಬಹುಷಃ ಯಾರಿಗೂ ಸಾಧ್ಯವಿಲ್ಲ. ಇಂತಹ ತಾರತಮ್ಯದ ವಿರುದ್ದ ಸೆಣಸಾಡಿದ ಸುಮಾರು ಒಂದು ಶತಮಾನಕ್ಕೂ ಮೀರಿದ ಇತಿಹಾಸವಿರುವ ದಲಿತ ಹೋರಾಟಗಳು, ಚಳುವಳಿಗಳು ಹಲವಾರು ಏಳು-ಬೀಳುಗಳನ್ನು ಕಂಡಿವೆ, ಸಾಕಷ್ಟು ಹೋರಾಟಗಾರರು ತಮ್ಮ ಜೀವವನ್ನೇ ಮುಡುಪಾಗಿಟ್ಟು ಹೋರಾಡಿದ್ದಾರೆ.

ದಲಿತಪರ ಹೋರಾಟ, ಚಳುವಳಿಗಳು ಸಾಗಿ ಬಂದ ಹಾದಿಯಲ್ಲಿ ನಿರ್ಣಾಯಕ ಕಾಲಘಟ್ಟವೆಂದು ಭಾರತ ಸ್ವತಂತ್ರವಾದ ಸಮಯವನ್ನು ಉಲ್ಲೇಖಿಸಬಹುದು. ಈ ಸಂದರ್ಭದಲ್ಲಿ ಡಾ.ಬಿ.ಆರ್‍. ಅಂಬೇಡ್ಕರ್‍ ರವರ ಅವಿರತ ಶ್ರಮದಿಂದ, ಕಿಚ್ಚಿನ ಹೋರಾಟದಿಂದ ದಲಿತರ, ದಮನಿತ ಜನಾಂಗದವರಿಗೆ ಸಂವಿಧಾನದಲ್ಲಿ ಸಾಕಷ್ಟು ಸೌಲಭ್ಯಗಳನ್ನು ಕಲ್ಪಿಸಲಾಯಿತು. ಮೀಸಲಾತಿಯನ್ನು ಜಾರಿತರಲಾಯಿತು. ಅಲ್ಲದೇ ಸಂವಿಧಾನಾತ್ಮಕವಾದ ವಿಶೇಷ ಸೌಲಭ್ಯಗಳನ್ನು ಕೊಡಲಾಯಿತು. ಇಷ್ಟೇ ಅಲ್ಲದೇ ಅಸ್ಪೃಶ್ಯತೆಯನ್ನು ಕಾನೂನಿನ ಅಡಿಯಲ್ಲಿ ನಿಶೇಧಿಸಿಲಾಯಿತು. ಅಸ್ಪೃಶ್ಯತಾ ಆಚರಣೆಯನ್ನು ಅಪರಾಧ ಎಂದು ಪರಿಗಣಿಸಿ ಇದರಲ್ಲಿ ತೊಡಗುವವರ ವಿರುದ್ದ ಕಠಿಣ ಶಿಕ್ಷೆಗಳನ್ನು ವಿಧಿಸಲಾಯಿತು. ಸಂವಿಧಾನಾತ್ಮಕ ವ್ಯವಸ್ಥೆಯಲ್ಲಿ ನಾಗರೀಕರೆಲ್ಲರೂ ಸಮಾನರು ಎಂದು ಪರಿಗಣಿಸಿದ ಆಡಳಿತಾತ್ಮಕ ವ್ಯವಸ್ಥೆಯು ತನ್ನಿಂದಾಗುವ ಎಲ್ಲಾ ಸುಧಾರಣ ಕ್ರಮಗಳನ್ನು ಜಾರಿಗೆ ತಂದಿತು.

ಸ್ವತಂತ್ರ ಭಾರತ ಸರ್ಕಾರ ಜಾರಿಗೆ ತಂದ ಈ ಎಲ್ಲಾ ಅಂಶಗಳನ್ನು ನಮ್ಮ ಸಮಾಜ ಸ್ವೀಕರಿಸಿತು. ಇದರ ಪರಿಣಾಮ ಒಂದು ಸಾಮಾಜಿಕ ಬದಲಾವಣೆ ಕ್ರಮೇಣ ಪ್ರಾರಂಭವಾಯಿತು. ಈ ಬದಲಾವಣೆ ಪ್ರಾರಂಭವಾಗಿ ಇಂದಿಗೆ ಆರೇಳು ದಶಕಗಳು ಕಳೆದಿವೆ ಎಂಬುದನ್ನು ನಾವು ಮರೆಯಬಾರದು. ಇಂದೂ ಸಹಾ ಅಸಮಾನತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ನಮ್ಮ ದೇಶದಲ್ಲಿ ಜಾರಿಗೆ ತಂದ ಸುಧಾರಣ ಕ್ರಮಗಳನ್ನು ಮುಂದುವರೆಸಿಕೊಂಡು, ಮತ್ತಷ್ಟು ವಿಸ್ತರಿಸಿಕೊಂಡು ಬರಲಾಗುತ್ತಿದೆ. ಆದಾಗ್ಯೂ ಈ ವಿಶೇಷ ಸೌಲಭ್ಯಗಳನ್ನು ಕಡಿತಗೊಳಿಸುವಂತೆ ಅಥವಾ ನಿಲ್ಲಿಸುವಂತೆ ಸಾರ್ವಜನಿಕವಾಗಿ ಯಾವುದೇ ಒತ್ತಡವಾಗಲೀ, ಪ್ರತಿಭಟನೆಯಾಗಲ್ಲಿ ನಡೆದಿಲ್ಲ, ಇಂದಿಗೂ ಇಂತಹ ಪ್ರತಿಭಟನೆಗಳು ನಡೆಯುತ್ತಿಲ್ಲ. ಕಲ್ಪಿಸಲಾಗಿರುವ ವಿಶೇಷ ಸೌಲಭ್ಯಗಳು, ಕಾನೂನಿನ ಅಂಶಗಳು ದಲಿತರ ಹಕ್ಕುಗಳಾಗಿ ಮಾರ್ಪಾಟಾಗಿದ್ದು ಪ್ರಶ್ನಾತೀತವಾಗಿದೆ. ನೆನಪಿರಲಿ ಇಲ್ಲಿ ಈ ಸೌಲಭ್ಯಗಳ ಪ್ರಸ್ತುತತೆಯ ಬಗ್ಗೆ ಚರ್ಚೆ ಮಾಡುತ್ತಿಲ್ಲ ಹಾಗೆ ಮಾಡುವುದು ಈ ಲೇಖನದ ಉದ್ದೇಶವೂ ಅಲ್ಲ, ವ್ಯಾಪ್ತಿಯೂ ಅಲ್ಲ. ಆದರೆ ಇವುಗಳನ್ನು ಹಿಂಪಡೆಯುವಂತೆ ಯಾವುದೇ ಸಾಮಾಜಿಕ ಚಳುವಳಿಗಳಾಗಲೀ, ಪ್ರತಿಭಟನೆಗಳಾಗಲೀ ಅಸ್ಥಿತ್ವದಲ್ಲಿಲ್ಲ ಎಂಬುದನ್ನಷ್ಟೇ ತಿಳಿಸುತ್ತಿದ್ದೇನೆ.

ಇಷ್ಟೆಲ್ಲಾ ಇತಿಹಾಸವಿರುವ ದಲಿತಪರ ಹೋರಾಟವು ಇಂದಿಗೆ ಎಷ್ಟರ ಮಟ್ಟಿಗೆ ಯಶಸ್ಸನ್ನು ಗಳಿಸಿವೆ  ಎಂಬುದು ಪ್ರಶ್ನೆ. ದಲಿತ ಹೋರಾಟದ ಏಕೈಕಗುರಿ ಅಸ್ಪೃಶ್ಯತೆಯ ನಿವಾರಣೆ ಹಾಗೂ ಸಾಮಾಜಿಕ ಸಮಾನತೆಯಾಗಿರುವುದರಿಂದ ಈ ಹೋರಾಟದ ಯಶಸ್ಸು ನೇರವಾಗಿ ಅಸ್ಪೃಶ್ಯತೆಯ ಪ್ರಸ್ತುತ ಪರಿಸ್ಥಿತಿಯ ಮೇಲೆ ಅವಲಂಬಿತವಾಗಿರುತ್ತದೆ.

ಡಾ.ಅಂಬೇಡ್ಕರ್‍ ರವರು ಹೇಳಿರುವ ಮೇಲ್ಕಂಡ ಮಾತುಗಳು ಈಗಲೂ ಅನ್ವಯಿಸುತ್ತದೆ. ಎಂಬುದು ಅಭಿಪ್ರಾಯವಾದರೆ ಈ ಕೆಳಕಂಡ ಅಂಶಗಳು ನಿಜವೆಂದು ಒಪ್ಪಬೇಕಾಗುತ್ತದೆ

(ಅ) ಇಷ್ಟೆಲ್ಲಾ ಇತಿಹಾಸವಿರುವ ದಲಿತ ಹೋರಾಟಗಳು ಯಾವುದೇ ಯಶಸ್ಸನ್ನು ಪಡೆದಿಲ್ಲ

(ಆ) ದಲಿತ ಪರ ಹೋರಾಟದಲ್ಲಿ ಮಂಚೂಣಿಯಲ್ಲಿದ್ದ ಡಾ.ಅಂಬೇಡ್ಕರ್‍ ರವರ ಹೋರಾಟವೂ ಯಾವುದೇ ಪ್ರಯೋಜನವನ್ನು ತರಲಿಲ್ಲ.

(ಇ) ಅಥವಾ ಹೋರಾಟದ ಹಾದಿಯೇ ಸರಿಯಿಲ್ಲ

ಆದರೆ ನಿಜಸ್ಥಿತಿಯೆಂದರೆ ಮೇಲೆ ತಿಳಿಸಿದ ಯಾವುದೇ ಅಂಶಗಳೂ ನಿಜವಲ್ಲ. ನಮ್ಮ ದೇಶ ಕಂಡ ದಲಿತ ಹೋರಾಟಗಳು ಯಾವುದೇ ಯಶಸ್ಸು ಪಡೆದಿಲ್ಲ ಎಂದರೆ ಹೋರಾಟ, ಚಳುವಳಗಳು ತಮ್ಮ ಅಸ್ಥಿತ್ವವನ್ನೇ ಕಳೆದುಕೊಳ್ಳುತ್ತವೆ.

ದಲಿತಪರ ಹೋರಾಟ, ಚಳುವಳಿಗಳ ಯಶಸ್ಸಿನ ಪರಿಣಾಮಗಳ ಬಗ್ಗೆ ಇನ್ನೂ ಹೇಳುವುದಾದರೆ ಈ ಕೆಳಕಂಡ ಸಾಧ್ಯತೆಗಳು ಕಂಡುಬರುತ್ತವೆ. ಮೊದಲನೆಯದಾಗಿ, ಅಸ್ಪೃಶ್ಯತೆಯೆಂಬ ಪಿಡುಗು ಹಿಂದೆಂದಿಗಿಂತ ಈಗ ಹೆಚ್ಚಾಗಿದೆ ಅಥವಾ ಅದು ಹೇಗಿತ್ತೊ ಈಗಲೂ ಹಾಗೆಯೇ ಇದೆ ಯಾವುದೇ ರೀತಿಯ ಸುಧಾರಣೆಗಳಾಗಲೀ ಬದಲಾವಣೆಗಳಾಗಲೀ ಘಟಿಸಿಲ್ಲ ಎಂದಲ್ಲಿ ನಡೆಸಿಕೊಂಡು ಬಂದಿರುವ ಹೋರಾಟಗಳು ವೃಥಾ ಆಗಿವೆ, ಅಥವಾ ಹೋರಾಟಗಳ ಹಾದಿಯೇ ಸರಿಯಿಲ್ಲ ಎಂಬ ಅರ್ಥವನ್ನು ಕೊಡುತ್ತದೆ, ಇಲ್ಲವೇ ಈ ಸಾಮಾಜಿಕ ಸಮಸ್ಯೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ ಬಹುಪಾಲು ಹಾಗೇ ಇದೆ ಎಂದರೂ ದಶಕಗಳ ಕಾಲದಿಂದ ನಡೆದುಕೊಂಡು ಬಂದ ಹೊರಾಟಗಳು ನಿರೀಕ್ಷಿತ ಯಶಸ್ಸು ಗಳಿಸಿಲ್ಲ ಎಂದಾಗುತ್ತದೆ, ಸೌಲಭ್ಯಗಳು ನಿಜವಾಗಿಯೂ ನೊಂದ ಜನಾಗದವರಿಗೆ ತಲುಪಿದೆಯೇ ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಆಥವಾ ಅಸ್ಪೃಶ್ಯತೆ ಇಂದಿಗೆ ಬಹುಪಾಲು ಕಡಿಮೆಯಾಗಿದೆ ಎಂದರೆ ಹೋರಾಟಗಳು, ಚಳುವಳಿಗಳು, ಸರಿಯಾದ ಹಾದಿಯಲ್ಲಿ ನಡೆದುಬಂದಿವೆ, ಆಡಳಿತಾತ್ಮಕ ಕ್ರಮಗಳು, ಕಾನೂನು-ಸೌಲಭ್ಯಗಳೂ ಸಹಾ ಸಾಮಾಜಿಕ ಸುಧಾರಣೆಗೆ ನೆರವಾಗಿದೆ ಎಂದು ಹೇಳಬಹುದು. ಈ ಮೂರು ಸಾಧ್ಯತೆಗಳಲ್ಲಿ ಯಾವುದು ಪ್ರಸ್ತುತ ಹಂತಕ್ಕೆ ಹೊಂದುತ್ತದೆ ಎಂಬುದು ಅವರವರ ವಿವೇಚನೆಗೆ ಬಿಡುವುದು ಉತ್ತಮ ಎಂದು ನನ್ನ ಅಭಿಪ್ರಾಯ.

ಡಾ. ಅಂಬೇಡ್ಕರ್‍ ರವರು ಹೇಳಿದ ಮಾತುಗಳನ್ನು ಅರ್ಥೈಸಿಕೊಳ್ಳುವ ಮುನ್ನ ಅಂದಿನ ಸಾಮಾಜಿಕ ಸ್ಥಿತಿ ಗತಿಗಳು ಹೇಗಿತ್ತು, ಆ ಸಂದರ್ಭದಲ್ಲಿ ದಲಿತ ಜನಾಂಗದ ಸ್ಥಾನ ಮಾನಗಳು ಯಾವ ಮಟ್ಟದಲ್ಲಿತ್ತು. ಆಗ ಜಾರಿಯಲ್ಲಿದ್ದ ಅಸ್ಪೃಶ್ಯತೆಯ ಆಚರಣೆಗಳು ಎಂತಹುವುವಾಗಿದ್ದವು ಎಂಬುದನ್ನು ಪರಿಗಣನೆಗೆ ತಗೆದುಕೊಳ್ಳಬೇಕಾಗುತ್ತದೆ,  ಇವಿಷ್ಟೂ ಸಾಮಾಜಿಕ ಅಂಶಗಳ ಹಿನ್ನಲೆಯಲ್ಲಿ ಮಾತ್ರ ಡಾ.ಅಂಬೇಡ್ಕರ್‍ ರವರು ಹೇಳಿರುವ ಮಾತುಗಳು ನೈಜ ಅರ್ಥವನ್ನು ಪಡೆದುಕೊಳ್ಳುತ್ತದೆ. ಇದೇ ಮಾತುಗಳನ್ನು ಪ್ರಸ್ತುತ ಸನ್ನಿವೇಶದಲ್ಲಿ ಹೇಳಿದಾಗ, ಈಗಿನ ಪರಿಸ್ಥಿತಿಗೆ ಈ ನಿಲುವನ್ನು ಅನ್ವಯಿಸ ಬೇಕಾದರೆ ನಾವು ಪ್ರಸ್ತುತ ಸಾಮಾಜಿಕ ಪರಿಸ್ಥಿತಿಯನ್ನು ಆಧಾರವಾಗಿಟ್ಟುಕೊಳ್ಳಬೇಕಾ ? ಅಥವಾ ಡಾ.ಅಂಬೇಡ್ಕರ್‍ ರವರು ಉಚ್ಚರಿಸಿದ ಆ ದಿನಗಳ  ಸಾಮಾಜಿಕ ಪರಿಸ್ಥಿತಿಯನ್ನು ಆಧಾರವಾಗಿಟ್ಟುಕೊಳ್ಳಬೇಕಾ ?

ಮೇಲ್ಕಂಡ ಡಾ.ಅಂಬೇಡ್ಕರ್‍ ರವರ ಮಾತುಗಳನ್ನು ಉಲ್ಲೇಖಸಿದ ದಲಿತ ಮುಖಂಡರು ಈ ನಿಲುವನ್ನು ಪ್ರಸ್ತುತಕ್ಕೆ ಅನ್ವಯಿಸುವ ಪ್ರಯತ್ನ ಮಾಡುತ್ತಾರೆ. ಇದು ಎಷ್ಟರ ಮಟ್ಟಿಗೆ ನ್ಯಾಯಯುತವೆನಿಸುತ್ತದೆ ಎಂಬುದು ಎಲ್ಲರೂ ಊಹಿಸತಕ್ಕ ವಿಚಾರವೇ ಆಗಿದೆ. ಆದರೂ ಸಹಾ ಈ ನಿಲುವು ಇಂದಿಗೂ ಪ್ರಸ್ತುತವೆಂದೇ ಪರಿಗಣಿಸುವುದಾದರೆ ಈ ಬಗ್ಗೆ ನನ್ನದೊಂದು ಪ್ರಶ್ನೆಯಿದೆ. ಸರಿ; ಸುಧಾರಣೆಯ ನಿಟ್ಟಿನಲ್ಲಿ ಬಹುಮಹಡಿಗಳ ಕಟ್ಟಡಕ್ಕೆ ರಿಪೇರಿ ಮಾಡುವ ಯೋಜನೆಯನ್ನು ಹಾಕಿ ಕೊಳ್ಳೋಣ. ಮೊದಲಿಗೆ ಸುಧಾರಣೆ ಹೇಗೆ ಆರಂಭವಾಗಬೇಕಿದೆ ? ನಮಗಿರುವ ಆಯ್ಕೆಗಳು ಯಾವುವು ಎಂದು ಪರಿಶೀಲಿಸೋಣ, ಎಲ್ಲಾ ಬಹು ಮಹಡಿಗಳನ್ನು ತೆಗೆದುಹಾಕಿ ಒಂದೇ ಮಹಡಿಯ ಕಟ್ಟಡವನ್ನು ಮಾಡುವುದು ಒಂದು ಆಯ್ಕೆ. ಮಹಡಿಯಿಂದ ಮಹಡಿಗೆ ಮೆಟ್ಟಿಲುಗಳನ್ನು ನಿರ್ಮಿಸುವುದು ಎರಡನೇ ಆಯ್ಕೆ. ಇನ್ನೂ ಮುಂದುವರೆದು ಮಹಡಿಯಿಂದ ಮಹಡಿಗೆ ಲಿಫ್ಟ್ ನಿರ್ಮಿಸುವುದು ಮೂರನೇ ಆಯ್ಕೆ. ಎರಡನೇ ಮತ್ತು ಮೂರನೇ ಆಯ್ಕೆಯನ್ನು ಪರಿಗಣಿಸಿದರೆ ಆಗಲೂ ಕಟ್ಟಡದಲ್ಲಿ ಮಹಡಿಗಳಿರುತ್ತವೆ ಅಂದರೆ ಮೇಲೆ-ಕೆಳಗೆ, ಉನ್ನತ-ಮದ್ಯಮ-ಅದಮ ಎಂಬ ಶ್ರೇಣಿ ಇರುತ್ತದೆ. ಆದರೆ ಇಲ್ಲಿ ಆಯ್ಕೆ ಮುಕ್ತವಾಗಿರುತ್ತದೆ. ಎರಡನೆಯ ಆಯ್ಕೆಯ ಮೂಲಕ ಒಂದೊಂದೇ ಮೆಟ್ಟಿಲು ಹತ್ತಿ ಬೇಕಾದ ಸ್ಥಾನಕ್ಕೆ ತಲುಪುವ ಅವಕಾಶವಿರುತ್ತದೆ. ಮೂರನೇ ಆಯ್ಕೆಯಾದರೋ ಯಾವುದೇ ಪರಿಶ್ರಮವಿಲ್ಲದೇ ಮೇಲಿನ ಸ್ಥರಕ್ಕೆ ಹೋಗಲು ಅವಕಾಶವಿರುತ್ತದೆ.

ಮೀಸಲಾತಿ ಹಾಗೂ ಇನ್ನಿತರ ಸಂವಿಧಾನಾತ್ಮಕವಾದ ಸೌಲಭ್ಯಗಳ ಮೂಲಕ ಸಾಮಾಜಿಕ ವ್ಯವಸ್ಥೆಯಲ್ಲಿ ತುಳಿತಕ್ಕೆ ಈಡಾಗಿರುವ ಜನಾಂಗಕ್ಕೆ ಮೇಲೇರುವ ಸೌಲಭ್ಯವನ್ನು ನೀಡಲಾಗಿದೆ. ಮೇಲೆ ನಮೂದಿಸಲಾಗಿರುವ ಆಯ್ಕೆಗಳಲ್ಲಿ ಮೂರನೇ ಆಯ್ಕೆಯನ್ನು ನಾವು ಇದಕ್ಕೆ ಅನ್ವಯಿಸಬಹುದು. ಸ್ವಲ್ಪ ಪರಿಶ್ರಮದಿಂದ, ನೀಡಲಾದ ಸೌಲಭ್ಯಗಳನ್ನು ಬಳಸಿಕೊಂಡು ಮೇಲೆ ಬರಲು ಅವಕಾಶವಿದೆ. ಅಸ್ಪೃಶ್ಯತೆಯಂತಹ ಕೆಟ್ಟ ಪದ್ದತಿಗಳ ನಿರ್ಮೂಲನೆಗೆ ಇದು ಅನಿವಾರ್ಯವಾಗಿತ್ತು ಎಂಬುದು ಹಗಲಿನಷ್ಟೇ ಸತ್ಯ.

ಹಲವಾರು ದಶಕಗಳು ಕಳೆದ ಮೇಲೂ ಒಂದು ಸಮುದಾಯವನ್ನು ಪ್ರತಿನಿಧಿಸುತ್ತಾ ಮುಖಂಡನೆನೆಸಿಕೊಂಡ ವ್ಯಕ್ತಿ ಮೇಲ್ಕಂಡ ಮಾತುಗಳನ್ನು ಪದೇ ಪದೇ ಉಲ್ಲೇಖಿಸುತ್ತಿದ್ದಾನೆಂದರೆ, ಇದರ ಔಚಿತ್ಯವನ್ನು ಪ್ರಶ್ನಿಸಲೇ ಬೇಕಾಗುತ್ತದೆ. ಈ ರೀತಿ ಹೇಳುವ ಮುಖಂಡ ಖಂಡಿತವಾಗಿಯೂ ಹಲವು ವರ್ಷಗಳ ಇತಿಹಾಸವಿರುವ ದಲಿತ ಹೋರಾಟದಲ್ಲಿ ಹಿಮ್ಮುಖವಾಗಿ ಸಾಗುತ್ತಿದ್ದಾನೆ ಎಂದಾಗುತ್ತದೆ. ಅಂದಿನ ಸನ್ನಿವೇಶದಲ್ಲಿ ಆಡಿದ ಮಾತುಗಳನ್ನು ಇಂದಿಗೂ ಇವರು ಅನ್ವಯಿಸುತ್ತಾರೆ, , ಬ್ರಾಹ್ಮಣ ಸಮುದಾಯವನ್ನು ಗುರಿಯಾಗಿಸಿಕೊಂಡು ಇಂದಿಗೆ ಪ್ರಸ್ತುತವೇ ಅಲ್ಲದ ಮನುಸ್ಮೃತಿಯಂತಹ ವಿಚಾರವನ್ನು ಪದೇ ಪದೇ ಉಲ್ಲೇಖಿಸುವ ಮೂಲಕ ಪ್ರತೀ ಬ್ರಾಹ್ಮಣರ ಮನೆಯಲ್ಲಿ ಮನುಸ್ಮೃತಿಯನ್ನು ಇಟ್ಟು ಪೂಜಿಸಲಾಗುತ್ತಿದೆಯೋ ಎಂಬಂತೆ ಭಾವಾವೇಶದಿಂದ ಮಾತನಾಡುತ್ತಾರೆ. ಅಸಲಿಗೆ ೯೯% ರಷ್ಟು ಬ್ರಾಹ್ಮಣರಿಗೆ ಮನುಸ್ಮೃತಿಯಲ್ಲಿ ಏನಿದೆ ಎಂಬುದೇ ತಿಳಿದಿರುವುದಿಲ್ಲ. ಯಾವ ದೇವಾಲಯದಲ್ಲಾಗಲೀ, ಮಠ, ಮಂದಿರಗಳಲ್ಲಾಗಲೀ ಮನುಸ್ಪೃತಿಯನ್ನು ಪಠಿಸುವುದಿಲ್ಲ. ಆದರೂ ಎಲ್ಲಾ ಬ್ರಾಹ್ಮಣರನ್ನು ಉಲ್ಲೇಖಿಸುತ್ತಾ ಮನುವಾದಿಗಳು ಎಂದು ಕರೆಯುವುದು ಇವರ ಪೂರ್ವಗ್ರಹವಲ್ಲದೇ ಮತ್ತೇನು ಅಲ್ಲ.  ಈ ರೀತಿಯ ಪೂರ್ವಗ್ರಹಗಳನ್ನು ತಾವು ಪ್ರತಿನಿಧಿಸುವ ಸಮುದಾಯದ ಯುವಕರಲ್ಲಿ ತುಂಬುವುದರ ಮೂಲಕ ಅಸಮಾನತೆಯನ್ನು ಎಂದಿಗೂ ಜೀವಂತವಾಗಿರುವಂತೆ ಇವರೇ ನೋಡಿಕೊಳ್ಳುತ್ತಿರುವುದು ಸೋಜಿಗದ ಸಂಗತಿಯಾಗಿದೆ.

ಸಾಮಾಜಿಕ ಸಮಾತನೆಗಾಗಿ ಜಾರಿ ತರಲಾದ ಸುಧಾರಣಾ ಕ್ರಮಗಳನ್ನು ರಾಜಕೀಯ ಲಾಭಗಳಿಗಾಗಿ, ವೈಯಕ್ತಿಕ ಹಿತಾಸಕ್ತಿಗಳಿಗಾಗಿ, ಬಳಸಿಕೊಳ್ಳತೊಡಗಿರುವ ಪ್ರಕ್ರಿಯೆಯು ನಿಜಕ್ಕು ನಮ್ಮ ಸಮಾಜಕ್ಕೆ ಶಾಪವಾಗಿ ಪರಿಣಮಿಸಿದೆ, ಒಂದಿಡೀ ಸಮುದಾಯವನ್ನು ಶೋಷಿತರನ್ನಾಗಿಯೇ ಇರಿಸುವುದರಲ್ಲಿ ಇಂತಹವರ ರಾಜಕೀಯ, ಆರ್ಥಿಕ, ಸಾಮಾಜಿಕ ಅಸ್ಥಿತ್ವ ಅಡಗಿರುತ್ತದೆ. ಪೂರ್ವಗ್ರಹಗಳನ್ನು ತುಂಬುವುದರ ಮೂಲಕ ಸಮುದಾಯದ ದಿಕ್ಕು ತಪ್ಪಿಸುವ ಕಾರ್ಯ ನಿರಂತರವಾಗಿ ಸಾಗುವಂತೆ ನೋಡಿಕೊಳ್ಳಲಾಗುತ್ತದೆ. ಆಯೋಜಿಸುವ ಚಳುವಳಿಗಳು, ಹೋರಾಟಗಳು, ಪ್ರತಿಭಟನೆಗಳು ತಮ್ಮ ಅರ್ಥವನ್ನೇ ಕಳೆದುಕೊಳ್ಳತೊಡಗಿರುವುದು ವಿಪರ್ಯಾಸವಾಗಿದೆ.

ಶೋಷಣೆಗೆ ಒಳಗಾದ ಜನಾಂಗದ ವ್ಯಕ್ತಿಯೊಬ್ಬ ಸಾಮಾಜಿಕವಾಗಿ ಮೇಲೇರಲು ಸಂವಿಧಾನಾತ್ಮಕ ಸೌಲಭ್ಯಗಳನ್ನು ಮುಕ್ತವಾಗಿ ಬಳಸಿಕೊಳ್ಳಬಹುದು. ತನ್ನ ಹಕ್ಕುಗಳಿಗೆ ಚ್ಯುತಿ ಉಂಟಾದಲ್ಲಿ ಕಾನೂನಿನ ನೆರವನ್ನೂ ಪಡೆಯ ಬಹುದು. ಆದ್ಯಾತ್ಮಿಕ ವಿಕಸನಕ್ಕೂ ಈಗ ಯಾವುದೇ ಅಡ್ಡಿಯಿಲ್ಲ. ಇಂತಹ ಸಂದರ್ಭದಲ್ಲಿ ಈಗ ನಡೆಯುತ್ತಿರುವ ಚಳುವಳಿ , ಹೋರಾಟಗಳಲ್ಲಿ ಬಹುಪಾಲು ರಾಜಕೀಯ ಅಸ್ಥಿತ್ವಕ್ಕಾಗಿ, ವೈಯಕ್ತಿಕ ಹಿತಾಸಕ್ತಿಗಳಿಗಾಗಿ ಆಯೋಜಿಸಲಾಗುತ್ತಿವೆ ಎಂಬುದು ನಿಸ್ಸಂಶಯ. ಹೀಗೆಂದ ಮಾತ್ರಕ್ಕೆ ಹೋರಾಟ, ಚಳುವಳಿಗಳ ಅಗತ್ಯವೇ ಇಲ್ಲ ಎಂದು ಹೇಳುವುದೂ ತಪ್ಪಾಗುತ್ತದೆ. ಆದರೆ ಹೋರಾಟ, ಚಳುವಳಿಗಳು ಕಾಲ ಕಾಲಕ್ಕೆ ತಮ್ಮ ಆದ್ಯತೆ, ಧ್ಯೇಯ, ಔಚಿತ್ಯಗಳನ್ನು ಪ್ರಾಮಾಣಿಕವಾಗಿ ಪರಿಶೀಲಿಸಿ ಮುನ್ನಡೆಯಬೇಕಾಗಿರುತ್ತದೆ. ವಿಚಾರಗಳನ್ನು, ನಿಲುವುಗಳನ್ನು ಕಾಲಕಾಲಕ್ಕೆ ಪ್ರಸ್ತುತತೆಯ ಜರಡಿಗೆ ಹಾಕಿ ಶೋಧಿಸಬೇಕಾಗುತ್ತದೆ. ಇಂತಹ ಪ್ರಾಮಾಣಿಕ ಪ್ರಯತ್ನವಾಗಬೇಕಾದರೆ ಪೂರ್ವಾಗ್ರಹಗಳನ್ನು ತೊರೆದು ಮುಕ್ತವಾಗಿ ಚಿಂತಿಸಬೇಕಾಗುತ್ತದೆ. ಭವಿಷ್ಯದಲ್ಲಿ ಒಂದು ಪ್ರಬುದ್ದ ನಾಗರೀಕ ಸಮಾಜವನ್ನು ನಿರ್ಮಿಸುವ ನಿಟ್ಟಿನಲ್ಲಿ ಇಂತಹ ಚಿಂತನಾ ಕ್ರಮವನ್ನು ಯುವಕರಲ್ಲಿ ಬೆಳೆಸುವುದು ಇಂದಿನ ಆದ್ಯತೆ ಹಾಗೂ ಅನಿವಾರ್ಯವಾಗಬೇಕಾಗಿದೆ.

2 ಟಿಪ್ಪಣಿಗಳು Post a comment
  1. ಆಕ್ಟೋ 3 2016

    ಉತ್ತಮ ಲೇಖನ

    ಉತ್ತರ
  2. ಆಕ್ಟೋ 6 2016

    very nice Article sir

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments