ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 5, 2016

2

ಒಂದು ಪ್ರೇತದ ಕತೆ! (ಭಾಗ 6)

‍ನಿಲುಮೆ ಮೂಲಕ

– ಶ್ರೀಕಾಂತ್ ಶೆಟ್ಟಿ
ಪ್ರೇತದ ಆತ್ಮ ಚರಿತೆ! (ಭಾಗ ೧)
ಪ್ರೇತದ ಆತ್ಮ ಚರಿತೆ! (ಭಾಗ ೨)
ಪ್ರೇತದ ಆತ್ಮ ಚರಿತೆ! (ಭಾಗ 3)
ಪ್ರೇತದ ಆತ್ಮ ಚರಿತೆ! (ಭಾಗ ೪)
ಪ್ರೇತದ ಆತ್ಮ ಚರಿತೆ! (ಭಾಗ ೫)

14195962_1082397995189142_6175616879255697664_oಒಂದೆಡೆ ಕುಸಿಯುತ್ತಿರುವ ಆಡಳಿತ ವ್ಯವಸ್ಥೆ, ಬಂಡೇಳುತ್ತಿರುವ ಪಾಳೇಗಾರರು, ಪ್ರಧಾನರ ಒಳಜಗಳ… ನಾಲ್ದಿಕ್ಕುಗಳಲ್ಲೂ ಮರಾಠಾ ಸಾಮ್ರಾಜ್ಯವನ್ನು ಕುಟಿಲನೀತಿಯ ಮೂಲಕ ಆಕ್ರಮಿಸಿಕೊಳ್ಳಲು ಹವಣಿಸುತ್ತಿರುವ ಕೆಂಪು ಮುಸುಡಿಗಳ ಈಸ್ಟ್ ಇಂಡಿಯಾ ಕಂಪನಿ. ಅದರಿಂದ ಬಿಡಿಸಿಕೊಳ್ಳಲು ಬಾಜಿರಾವ್ ಪಂಡರಾಪುರದಲ್ಲಿ ಸಾಕಷ್ಟು ಧರ್ಮ ಕಾರ್ಯಗಳನ್ನು ನಡೆಸಿದ. ಭೀಮಾ ನದಿಯ ತೀರದಲ್ಲಿ ಭಾರಿ ಹೋಮಗಳನ್ನಿಟ್ಟು ನಾರಾಯಣನ ಪ್ರೇತವನ್ನು ಉಚ್ಛಾಟನೆ ಮಾಡಲಾಯಿತು. ಆದರೆ ಯಾವುದೂ ಉಪಯೋಗವಾಗಲಿಲ್ಲ. ಕೇವಲ ಪೇಶ್ವಾಗಳ ಸಾಮ್ರಾಜ್ಯ ನಾಶವಾಗಲಿ… ಪೇಶ್ವಾಗಳಿಗೆ ಸಂತಾನವಿಲ್ಲದೆ ಹೋಗಲಿ… ಪೇಶ್ವಾಗಳು ಕೈ ಹಿಡಿದ ಮಡದಿಯರನ್ನು ಮುಟ್ಟಿದರೆ ಸಾಕು ಅವರು ಸತ್ತು ಹೋಗುವಂತಾಗಲಿ… ಪೇಶ್ವಾಗಳ ಅರಮನೆಗೆ ಬೆಂಕಿ ಬೀಳಲಿ. ಇದು ನಾರಾಯಣನ ಪ್ರೇತ ಬಾಜಿರಾಯನ ಕಿವಿಯಲ್ಲಿ ಪ್ರತೀ ದಿನ ಉಸುರುತ್ತಿದ್ದ ಮಾತುಗಳು.. ಬಾಜಿರಾಯ ಮದುವೆಯಾದ. ಮಕ್ಕಳನ್ನು ಪಡೆಯಬೇಕು ಎಂದು ಪ್ರಯತ್ನ ಪಟ್ಟ ಕೆಲವೇ ದಿನದಲ್ಲಿ ಪತ್ನಿ ನಿಗೂಡವಾಗಿ ಸಾವನ್ನಪ್ಪಿದಳು.!! ಮತ್ತೊಬ್ಬಳನ್ನು ಮದುವೆಯಾದ ಅವಳೂ ಇದೇ ರೀತಿ ನಿಗೂಢವಾಗಿ ಸತ್ತು ಹೋದಳು. ಹೀಗೆ ನಾಲ್ಕು ಜನರನ್ನು, ನಾರಾಯಣ ಪೇಶ್ವೆಯ ಪ್ರೇತ ಬಲಿ ಪಡೆದುಕೊಂಡಿತು. ಬಾಜಿರಾಯನಿಗೆ ಹೆಣ್ಣು ಕೊಡಲು ಜನ ಹಿಂದೇಟು ಹಾಕತೊಡಗಿದರು. ಕೊನೆಗೆ ಒಬ್ಬಳನ್ನು ಮದುವೆಯಾಗಿ ಆಕೆಯ ಮೈ ಮುಟ್ಟ ಬಾರದು ಎಂದು ತೀರ್ಮಾನಿಸಿದ. ಪುಣ್ಯಕ್ಕೆ ಅವಳು ಬದುಕಿಕೊಂಡಳು. ಬಾಜಿರಾಯ ಕೊನೆಯವರೆಗೂ ಅವಳ ಮೈ ಮುಟ್ಟಲಿಲ್ಲ. ಐದು ಮಡದಿಯರನ್ನು ಕಟ್ಟಿಕೊಂಡರೂ ಅವನಿಗೆ ಒಂದು ಮಗು ಪಡೆಯುವ ಭಾಗ್ಯ ಬರಲಿಲ್ಲ!! ಬಾಜಿರಾವ್ ಖಿನ್ನನಾಗಿ ಹೋದ. ಪಂಡರಾಪುರಕ್ಕೆ ತೆರಳಿ ಮತ್ತೊಮ್ಮೆ ಬ್ರಾಹ್ಮಣರನ್ನು ಹಿಡಿದು ಆ ಪ್ರೇತಕ್ಕೆ ಮದ್ದು ಅರೆಯೋಣವೆಂದರೆ ಮಹಾರಾಷ್ಟ್ರಕ್ಕೆ ಕಾಲಿಡದಂತೆ ಬ್ರಿಟೀಷರು ಬಾಜಿರಾಯನಿಗೆ ನಿಷೇಧ ಹೇರಿದ್ದರು. ಯಾವ ನೆಲದಲ್ಲಿ ಬಾಜಿರಾಯನ ಹಿರಿಯರ ಪೌರುಷ ಮೆರೆದಿತ್ತೋ, ಎಲ್ಲಿ ಪೇಶ್ವಾಗಳ ಹೆಸರಿಗೆ ಇಂದ್ರಸಮಾನ ಗೌರವವಿತ್ತೋ, ಆ ಮಣ್ಣಿಗೆ ಪೇಶ್ವಾ ವಂಶಸ್ಥರು ಕಾಲಿಡುವಂತಿರಲಿಲ್ಲ !! ಶನಿವಾರವಾಡೆಯ ಅರಮನೆ ಬ್ರಿಟೀಷ್ ಅಧಿಕಾರಿಗಳ ಮೋಜು ಮಸ್ತಿ ಮತ್ತು ದಫ್ತರವಾಗಿ ಬದಲಾಗಿಬಿಟ್ಟಿತ್ತು. ಅಲ್ಲಿನ ಅಮೂಲ್ಯ ಕಲಾಕೃತಿಗಳನ್ನು ಉನ್ನತ ರಚನೆಗಳನ್ನು, ಚಿನ್ನಾಭರಣ ವಜ್ರ ವೈಡೂರ್ಯ, ಕಲಾತ್ಮಕ ಬಟ್ಟೆಗಳು, ಅಪ್ರತಿಮ ಯುದ್ಧ ಸಾಮಾಗ್ರಿಗಳನ್ನು ಹಡಗಿಗೆ ತುಂಬಿಸಿ ಇಂಗ್ಲೆಂಡಿಗೆ ಕಳುಹಿಸಿದರು. ಶನಿವಾರವಾಡೆ ಗಂಡ ಸತ್ತ ಸುಂದರಿಯಂತೆ ಕಳೆಗುಂದಿ ಹೋಯಿತು. ಮಹಾರಾಷ್ಟ್ರಕ್ಕೆ ಕಾಲಿಡದಂತೆ ಬ್ರಿಟೀಷರು ತಾಕೀತು ಮಾಡಿದ ಕಾರಣ ವಾರಣಾಸಿಗೆ ತೆರಳಿ ಅಲ್ಲಿನ ಬ್ರಾಹ್ಮಣರಿಗೆ ದಾನಧರ್ಮ ಮಾಡಿ ಅದರಿಂದಾದರೂ ಬಂದ ಸಂಕಷ್ಟ ಪರಿಹಾರವಾಗಬಹುದೇನೋ ಎಂದು ಬಾಜಿರಾಯ ಉತ್ತರಭಾರತಕ್ಕೆ ತೆರಳಿದ. ಸಾಕಷ್ಟು ಗುಡಿಗೋಪುರಗಳನ್ನು ಕಟ್ಟಿದ. ಕಠಿಣ ವೃತಗಳನ್ನು ಮಾಡಿದ. ಆದರೆ ಯಾವುದೂ ಫಲ ನೀಡಲಿಲ್ಲ. ನಾರಾಯಣನ ಪ್ರೇತ ಇಮ್ಮಡಿ ಉತ್ಸಾಹದಿಂದ ಬಾಜಿರಾಯನ ಬೆನ್ನುಬಿತ್ತು.

ನೂರಾರು ಯುದ್ಧಗಳನ್ನು ಲೀಲಾಜಾಲವಾಗಿ ಗೆದ್ದು ಇತಿಹಾಸ ಎಂದೂ ಮರೆಯದ ಸಮರಸೇನಾನಿಗಳನ್ನು ನೀಡಿದ ಶನಿವಾರಾವಾಡೆಯ ಮುಖದಲ್ಲಿ ಪ್ರೇತಕಳೆ ಎದ್ದು ಕಾಣತೊಡಗಿತು. ಶರವೇಗದಿಂದ ರಣಾಂಗಣಕ್ಕೆ ನುಗ್ಗಿ ಶತ್ರುಗಳು ಕಣ್ಣು ತೆರೆಯುವ ಮೊದಲೇ ಅರ್ದ ಸೇನೆಯನ್ನು ಮಕಾಡೆ ಮಲಗಿಸಿ ಬಿಡುವ ಪೇಶ್ವಾಗಳ ರಣತಂತ್ರ, ಪರ್ವತದಂತೆ ಅಪ್ಪಳಿಸುವ ಅಫ್ಘಾನ್ ಕುದುರೆಗಳ ತುಕುಡಿಗಳನ್ನು ಲೀಲಾಜಾಲವಾಗಿ ಕೊಚ್ಚಿ ಹಾಕುತ್ತಿದ್ದ ಮರಾಠರ ಪರಾಕ್ರಮ.. ಬೆಂಕಿಯುಂಡೆ ಸಿಡಿಸುವ ಫಿರಂಗಿಗಳ ಸಾಲು ಸಾಲನ್ನೂ ಲೆಕ್ಕಿಸದೆ ರಣಹೂಂಕಾರ ಮಾಡುತ್ತಾ ಅರಿಗಳ ಎದೆಬಿರಿಯುವಂತೆ ಮುಂದಡಿ ಇಡುವ ಅಸಾಮಾನ್ಯ ಧೈರ್ಯ…. ಶತ್ರುಗಳ ನೆತ್ತರೋಕುಳಿಯ ಹೆದ್ದೆರೆಯನ್ನೇ ನುಗ್ಗಿಸಿ ವಾಯುವ್ಯ ಸರಹದ್ದಿನವರೆಗೆ ಹಿಡಿತ ಸಾಧಿಸಿದ ಪೇಶ್ವಾಗಳ ತಾಕತ್ತು, ನಾರಾಯಣನ ಪ್ರೇತದ ಮುಂದೆ ನಡೆಯಲಿಲ್ಲ. ಯಾಕೆಂದರೆ ಇವರು ಹುಟ್ಟಿದ ಆ ಮಹಾತ್ವಾಕಾಂಕ್ಷಿ ಚಿತ್ಪಾವನ ಮನೆತನದಲ್ಲೇ ನಾರಾಯಣನೂ ಹುಟ್ಟಿದ್ದ. ಇವರಿಗಿದ್ದಷ್ಟೆ, ಹಠ, ಛಲ, ಪ್ರತಿಕಾರದ ಬೆಂಕಿ ಅವನೊಳಗೂ ಉಳಿದುಕೊಂಡಿತ್ತು. ತನಗೆ ಸಿಕ್ಕದ ಅಧಿಕಾರ ಯಾರಿಗೂ ದಕ್ಕಬಾರದೆಂದು ನಾರಾಯಣನ ಪ್ರೇತ ಅಚಲ ನಿರ್ಧಾರ ಮಾಡಿತ್ತೆಂದು ಕಾಣುತ್ತದೆ. ಶನಿವಾರ ವಾಡೆ ಬ್ರಿಟೀಷರ ವಶವಾದ ಬಳಿಕ ಅಲ್ಲಿ ಲೆಕ್ಕಪತ್ರ ವಿಭಾಗವನ್ನು ಬ್ರಿಟೀಷರು ತೆರೆದರು. ಆ ವಾಡೆಯ ಒಳಗೆ ಯಾವುದೋ ಅವ್ಯಕ್ತ ಶಕ್ತಿಯೊಂದು ಓಡಾಡುತ್ತಿರುವ ಅನುಭವ ಅಲ್ಲಿನ ಹಲವಾರು ಅಧಿಕಾರಿಗಳ ಗಮನಕ್ಕೂ ಬಂದಿತ್ತು. ಆದರೆ ಸ್ಥಳಿಯರ ಮಾತನ್ನು ಅಷ್ಟಾಗಿ ಗಮನಕ್ಕೆ ತೆಗೆದುಕೊಳ್ಳದ ಕುಡುಕ ಆಂಗ್ಲರ ಚಲ್ಲಣ ಒದ್ದೆ ಮಾಡುವಂತ ಒಂದು ಘಟನೆ ನಡೆದೇ ಹೋಯ್ತು.

ಫೆಬ್ರವರಿ ೨೭, ೧೮೨೮ ಪುಣೆ ನೆಮ್ಮದಿಯ ನಿದ್ರೆಗೆ ಜಾರಿತ್ತು. ಇದ್ದಕ್ಕಿದ್ದಂತೆ ಶನಿವಾರವಾಡೆಯಲ್ಲಿ ಭೀಕರ ಬೆಂಕಿ ಕಾಣಿಸಿಕೊಂಡಿತು. ಅದು ಆವರಿಸಿದ ವೇಗ ಎಲ್ಲರನ್ನೂ ಬೆಚ್ಚಿ ಬೀಳಿಸಿತು. ಅರಮನೆಯ ಒಳಭಾಗದಿಂದಲೇ ಕಾಣಿಸಿಕೊಂಡ ಬೆಂಕಿ ನಿಮಿಷಾರ್ದದಲ್ಲಿ ಹೊರ ಆವರಣಗಳಿಗೂ ಹರಡಿತು. ಒಳಗಿದ್ದ ಮರದ ಕೆತ್ತನೆಗಳು, ಅಮೂಲ್ಯ ಪೀಠೋಪಕರಣಗಳು, ದಾಖಲೆಗಳು, ಎಲ್ಲವೂ ಬೆಂಕಿಗಾಹುತಿಯಾದವು. ಪೇಶ್ವಾಗಳ ಕೊನೆಯ ಕುರುಹು ದಗದಗನೇ ಹೊತ್ತಿ ಉರಿಯಿತು. ಜುನ್ನರ್ ಪ್ರಾಂತ್ಯದಿಂದ ದಂಡಿಯಾಗಿ ತರಲಾಗಿದ್ದ ತೇಗದ ಮರಗಳ ಕಂಬಗಳು ತೊಲೆಗಳು, ಬಾಗಿಲುಗಳು ಹೊತ್ತಿ ಉರಿದವು. ಕಭ್ಬಿಣಕ್ಕೂ ನೀರು ಕೊಡಬಲ್ಲ ತೇಗದ ರಕ್ಕಸಗಾತ್ರದ ಅಂತಸ್ತುಗಳು ಕುಸಿದವು. ಬೆಂಕಿ ನಂದಿಸಲು ಬ್ರಿಟೀಷರು ಹರಸಾಹಸ ಪಟ್ಟರು. ಆದರೆ ಏಳು ದಿನಗಳ ಕಾಲ ಶನಿವಾರವಾಡೆಯ ಮೇಲೆ ಬೆಂಕಿಯ ಕೆನ್ನಾಲಗೆ ಹಗಲುರಾತ್ರಿ ವಿಜ್ರಂಭಿಸಿತು. ಎರಡು ಶತಮಾನಗಳ ಕಾಲ ಅಜೇಯವಾಗಿ ಮೆರೆದ ಶನಿವಾರವಾಡೆ ಕಾಡ್ಗಿಚ್ಚಿಗೆ ಸಿಲುಕಿದ ಮಹಾವೃಕ್ಷದಂತೆ ದಹಿಸಿಹೋಯಿತು. ಬ್ರಿಟೀಷರು ಬರೆದಿಟ್ಟಿದ್ದ ಭಾರತದ ಲೂಟಿಯ ಲೆಕ್ಕಪತ್ರಗಳ ರಾಶಿ ಹಿಡಿ ಬೂದಿಯಾಗಿ ಬದಲಾಯಿತು. ಒಳಗಿದ್ದ ಒಂದೆರಡು ಅಧಿಕಾರಿಗಳು ಅದು ಹೇಗೋ ಜೀವ ಉಳಿಸಿಕೊಂಡರು. ಎಲ್ಲರ ಬಾಯಲ್ಲೂ ಒಂದೇ ಉದ್ಘಾರ.. ನಾರಾಯಣನ ಪ್ರೇತದ ಪ್ರತಿಕಾರ ಸಾಮಾನ್ಯದ್ದಲ್ಲ.. ಇದು ಯಾರನ್ನೂ ಬಿಡುವುದಿಲ್ಲ.. ಅದು ಎಲ್ಲಾ ಸರ್ವನಾಶ ಮಾಡುತ್ತದೆ.. ಈ ಘಟನೆ ಬ್ರಿಟೀಷರನ್ನು ತಣ್ಣಗೆ ಬೆವರುವಂತೆ ಮಾಡಿತು. ಈ ಪ್ರೇತದ ಸಹವಾಸ ಬೇಡ, ಕೂಡಲೆ ನಮ್ಮ ನೆಲೆಯನ್ನು ಪುಣೆಯಿಂದ ಮುಂಭೈಗೆ ಬದಲಾಯಿಸೋಣ ಎಂದು ಬ್ರಿಟೀಷರು ನಿರ್ಧರಿಸಿದರು. ಅಂದು ಹೊತ್ತಿ ಉರಿದ ಬೆಂಕಿ ಚರಿತ್ರೆಯ ಪುಟದಲ್ಲಿ ಪುಣೆಯ ರಾಜಕೀಯ ಕಾರ್ಯಕಲಾಪಗಳಿಗೆ ಪೂರ್ಣವಿರಾಮ ಇಟ್ಟು ಬಿಟ್ಟಿತು. ಒಂದಷ್ಟು ಕ್ರಾಂತಿಕಾರಿಗಳು ಪುಣೆಯಲ್ಲಿ ಆ ಬಳಿಕ ಓಡಾಡಿದರೇ ಹೊರತು, ಪುಣೆ ರಾಜಕೀಯ ಶಕ್ತಿ ಕೇಂದ್ರವಾಗಿ ಮತ್ತೆ ಪುಟಿದೇಳಲೇ ಇಲ್ಲ.

ಅದಾಗಲೇ ಭಿಟೂರಿಗೆ ಬಂದು ನೆಲೆಸಿದ್ದ ಬಾಜಿರಾಯನಿಗೆ ಈ ಬೆಂಕಿಯ ಸುದ್ದಿ ಕೇಳಿ ನಿಂತ ನೆಲ ಬಿರಿದ ಅನುಭವವಾಯಿತು. ಆದರೆ ಮಾಡಲು ಇನ್ನೇನೂ ಉಳಿದಿರಲಿಲ್ಲ. ತನ್ನ ಅಪ್ಪ ಮಾಡಿದ ಒಂದು ತಪ್ಪು ಇಷ್ಟೊಂದು ದೊಡ್ಡ ಅನಾಹುತಗಳ ಸರಮಾಲೆಯನ್ನು ಸೃಷ್ಟಿಸಿ ಹಾಕಬಹುದು ಎನ್ನುವುದನ್ನು ಬಾಜಿರಾವ್ ಕನಸಲ್ಲೂ ಯೋಚಿಸಿರಲಿಲ್ಲ. ಈ ಪ್ರೇತದ ದೆಸೆಯಿಂದಾಗಿ ಬಾಜಿರಾಯನಿಗೆ ಉತ್ತರಾಧಿಕಾರಿಯೂ ಇರಲಿಲ್ಲ. ಉತ್ತರಾಧಿಕಾರಿಯಾದರೂ ಏತಕ್ಕೆ ? ಆತನಿಗೆ ಕೊಡಲು ಬಾಜಿರಾಯನ ಬಳಿ ಮಣ್ಣು ಇರಲಿಲ್ಲ. ಬ್ರಿಟೀಷರು ಭಿಕ್ಷೆಯಂತೆ ಕೊಟ್ಟಿದ್ದ ಭಿಟೂರ್ ಎಂಬ ಸಣ್ಣ ಜಹಗೀರನ್ನು ಬಿಟ್ಟರೆ ಬೇರೇನೂ ಆತನ ಬಳಿ ಇರಲಿಲ್ಲ. ಚಾಲಾಕಿ ಬ್ರಿಟೀಷರು ಬಾಜಿರಾವನ ಬಳಿ ಒಪ್ಪಂದಪತ್ರಕ್ಕೆ ಸಹಿ ಮಾಡಿಸಿಕೊಳ್ಳುವಾಗ ಒಂದು ಅಂಶವನ್ನು ಸೇರಿಸಿದ್ದರು. ದತ್ತು ಮಕ್ಕಳಿಗೆ ಹಕ್ಕಿಲ್ಲ. ಬಾಜಿರಾವನಿಗೆ ಸ್ವಂತ ಮಗು ಇದ್ದರೆ ಸರಿ. ಒಂದು ವೇಳೆ ಮಗುವನ್ನು ದತ್ತು ಪಡೆದರೆ ಆ ಮಗುವಿಗೆ ಯಾವುದೇ ಅಧಿಕಾರವನ್ನು ಕೊಡಲಾಗುವುದಿಲ್ಲ. ಇದು ಬ್ರಿಟೀಷರು ಒಪ್ಪಂದದಲ್ಲಿ ಸೇರಿಸಿದ್ದ ಮುಖ್ಯ ಅಂಶ. ಮಕ್ಕಳಿಲ್ಲದ ಬಾಜಿರಾವ್ ಭಿಟೂರಿನಲ್ಲೇ ಇದ್ದ, ನಾರಾಯಣ ಭಟ್ಟ ಮತ್ತು ಗಂಗಾಬಾಯಿ ದಂಪತಿಗಳ ಮಗುವನ್ನು ದತ್ತು ಪಡೆದ. ಆ ಮಗುವಿನ ಹೆಸರು ದೋಂಡು ಪಂಥ್.. ಆ ಮಗು ಮತ್ತಾರೂ ಅಲ್ಲ ೧೮೫೭ರ ಕ್ರಾಂತಿಯನ್ನು ನಡೆಸಿ ೩.೫ ಲಕ್ಷ ಬ್ರಿಟೀಷರನ್ನು ಸಾವಿನ ಬಾಯಿಗೊಡ್ಡಿದ ಅಮರ ಕ್ರಾಂತಿಕಾರಿ ನಾನಾ ಸಾಹೇಬ್ ಪೇಶ್ವಾ… ಚಿತ್ಪಾವನ ವಿಧಿವಿಧಾನಗಳ ಪ್ರಕಾರ ಬಾಜಿರಾಯ ನಾನಾ ಸಾಹೇಬಬನನ್ನು ಮಗನಾಗಿ ಸ್ವೀಕಾರ ಮಾಡಿದ. ತನ್ನ ಎಲ್ಲಾ ಅಪರ ಕರ್ಮಗಳನ್ನು ಪೂರೈಸುವ ಮತ್ತು ಪೇಶ್ವಾ ಪಟ್ಟವನ್ನು ಅಲಂಕರಿಸುವ ಹಕ್ಕನ್ನು ನಾನಾ ಸಾಹೇಬನಿಗೆ ನೀಡಿದ. ಇದರೊಂದಿಗೆ ನಾರಾಯಣನ ಪ್ರೇತಭಾದೆಯೂ ನಾನಾ ಸಾಹೇಬನಿಗೆ ಉಚಿತವಾಗಿ ವಗಾಘವಣೆಯಾಯಿತು.

ಮೊದಲ ಸ್ವಾತಂತ್ರ ಸಂಗ್ರಾಮದಲ್ಲಿ ರಣ ರಾಗಿಣಿಯಾಗಿ ವಿಜ್ರಂಭಿಸಿದ ಝಾನ್ಸಿ ರಾಣಿ ಲಕ್ಷ್ಮಿಬಾಯಿ ಕೂಡ ಇದೇ ಭಿಟೂರಿನಲ್ಲಿ ಹುಟ್ಟಿ ಬೆಳೆದವಳು. ಬಾಜಿರಾಯನ ಆಶ್ರಯದಲ್ಲಿದ್ದ ಹಲವಾರು ಬ್ರಾಹ್ಮಣ ಕುಟುಂಬಗಳ ಪೈಕಿ ಇವಳ ಕುಟುಂಬವೂ ಸೇರಿತ್ತು. ಈಕೆಯ ಬಾಲ್ಯದ ಹೆಸರು ಮಣಿಕರ್ಣಿಕಾ ತಾಂಬೆ. ನಾನಾ ಮತ್ತು ಮಣಿ ಬಾಲ್ಯದಿಂದಲೂ ಒಬ್ಬರನೊಬ್ಬರು ಇಷ್ಟಪಟ್ಟಿದ್ದರು. ಇಬ್ಬರೂ ಒಟ್ಟಿಗೆ ಆಡಿ ಬೆಳೆದವರು. ಆದರೆ ಈ ಹಾಳು ಪ್ರೇತದ ದೆಸೆಯಿಂದಾಗಿ ನಾನಾ ಸಾಹೇಬ ಮಣಿ ಕರ್ಣಿಕೆಯನ್ನು ಮದುವೆಯಾಗಲಿಲ್ಲ. ನಾರಾಯಣ ರಾವ್ ಪ್ರೇತದ ಶಾಪದಿಂದಾಗಿ ಪೇಶ್ವಾಗಳು ತಮ್ಮ ಪತ್ನಿಯರಿಂದ ಸಂತಾನ ಪಡೆಯಲು ಪ್ರಯತ್ನ ಪಟ್ಟ ಕೆಲವೇ ದಿನದಲ್ಲಿ ಪತ್ನಿಯರು ಸತ್ತು ಹೋಗುತ್ತಿದ್ದರು. ಲಕ್ಷ್ಮಿಯನ್ನು ನಾರಾಯಣನ ಪ್ರೇತಕ್ಕೆ ಬಲಿಕೊಡಲು ನಾನಾ ಸಾಹೇಬನಿಗೆ ಮನಸ್ಸು ಒಪ್ಪಲಿಲ್ಲ. ನಾನಾ ಸಾಹೇಬ ಬೇರೆ ಮದುವೆಯಾದ. ಅವನ ಊಹೆ ನಿಜವಾಯಿತು. ತನ್ನ ತಂದೆಯಂತೆ ಈತನೂ ಒಂದು ಹೆಂಡತಿಯನ್ನು ಕಳೆದುಕೊಂಡ. ಎರಡನೇ ಹೆಂಡತಿ ಕಾಶಿಬಾಯಿ ಕೊನೆಯವರೆಗೂ ಗಂಡ ನಾನಾ ಸಾಹೇಬನ ಸಂಗ ಮಾಡಲಿಲ್ಲ. ಹಾಗಾಗಿ ಬದುಕಿಕೊಂಡಳು.

ಮುಂದುವರೆಯುತ್ತದೆ…
ಜೈ ಮಹಾಕಾಲ್…

2 ಟಿಪ್ಪಣಿಗಳು Post a comment
 1. Guru
  ಆಕ್ಟೋ 17 2016

  ಒಂದು ಪ್ರೇತದ ಕತೆ!
  ಸರಣಿ ತುಂಬಾ ಚೆನ್ನಾಗಿ ಬರುತ್ತಿದೆ.
  ದಯವಿಟ್ಟು ಮುಂದಿನ ಭಾಗ ಬೇಗ ಬರೆಯಿರಿ

  ಉತ್ತರ
 2. prithvi
  ಡಿಸೆ 14 2016

  Please write next part

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments