ಭಾಮಿನಿ ಷಟ್ಪದಿಯಲ್ಲಿ ಭಗವಾನ್ ಶ್ರೀಧರ ಸ್ವಾಮಿಗಳ ಚರಿತ್ರೆ
– ಗುರುಪ್ರಸಾದ್ ಕೆ ಕೆ.
ಶ್ರೀಧರಭಾಮಿನಿಧಾರೆ ೨೧-೨೫
21)
ಒಂದು ವರ್ಷದ ಮೇಲೆ ವರ್ಷವು
ಸಂಧಿತಾಗಲೆ ನೋಡುನೋಡುತ
ಬಂದೆ ಬಿಟ್ಟಿತು ತಾಯಿಯಗಲುವ ಕಾಲ ಸಿರಿಧರಗೇ||
ಬಂಧು ಇರುವುದು ತಾಯಿ ಮಾತ್ರವೆ
ಚೆಂದದಿಂ ಸೇವೆಯನು ಮಾಡುತ
ದುಂದುಭಿ ಎಂಬ ನಾಮದಲ್ಲಿಯ ವರುಷ ಬಂದಿಹುದೂ||
ತಾತ್ಪರ್ಯ : ವರುಷಗಳು ಉರುಳುತ್ತಿರಲು, ಅನಾರೋಗ್ಯದಿಂದ ತಾಯಿಯ ಅನಾಸಕ್ತಿಯೂ ಹೆಚ್ಚುತ್ತಲೇ ಹೋಯಿತು. ಜೀವನದಲ್ಲಿ ಯಾವ ಸ್ವಾರಸ್ಯವೂ ಇಲ್ಲದೇ ಅನಾಸಕ್ತರಾದ ತಾಯಿಯನ್ನು, ಶ್ರೀಧರರು ಅಪಾರ ಮಾತೃಭಕ್ತಿಯಿಂದ ಸೇವೆಗೈಯ ತೊಡಗಿದರು. ಹೀಗಿರುವಾಗ ಸನ್ 1921 ನೇ ವರ್ಷದಲ್ಲಿ ದುಂದುಭಿ ನಾಮ ಸಂವತ್ಸರವು ಬಂದಿತು. ದುಂದುಭಿ ಸಂವತ್ಸರದ ಮಾರ್ಗಶಿರ ಮಾಸದ ತಿಂಗಳಲ್ಲಿ ಮಂಗಳವಾರ ಬಂದಿತು.
22)
ದಿನವು ಅದುವೇ ಶುದ್ಧ ಅಷ್ಟಮಿ
ದಿನದ ನಾಮವು ಕುಜನ ವಾರವು
ದಿನಕರನು ಉದಯಿಸಿಯೆ ಆಯಿತು ಎರಡು ಘಳಿಗೆಗಳೂ||
ದಿನದ ಆ ಸಮಯದಲಿ ತಾಯಿಯು
ಎನಗೆ ನೀಡೊಂದಾಣೆಯೆನ್ನಲು
ನನಗೆ ಇನ್ನು ಸ್ತ್ರೀಯರೆಲ್ಲರು ತಾಯಿ ಸಮನೆಂದೂ||
ತಾತ್ಪರ್ಯ : ಮಾರ್ಗಶಿರ ಶುದ್ಧ ಅಷ್ಟಮಿಯ ಮಂಗಳವಾರ, ರವಿಯು ಉದಯವಾದ ಎರಡು ಘಳಿಗೆಯ ಸಮಯದಲ್ಲಿ , ಅಂದರೆ ಸುಮಾರು ಹನ್ನೊಂದು ಗಂಟೆಯ ಸಮಯದಲ್ಲಿ, ತಾಯಿಯು ಹದಿನಾಲ್ಕರ ಹರೆಯದ ಬಾಲಕ ಶ್ರೀಧರರನ್ನು ಬಳಿಗೆ ಕರೆದಳು. ತಾಯ ಕರೆಗೆ ಬಳಿಗೆ ಬಂದ ಶ್ರೀಧರರನ್ನು ಉದ್ದೇಶಿಸಿ ತಾಯಿ ಕಮಲಾಬಾಯಿಯವರು “ವತ್ಸಾ ! ಇನ್ನೂ ನನ್ನ ಕಾಲ ಮುಗಿಯಿತು, ನೀನು ನನಗೆ ಒಂದು ಭಾಷೆ ಕೊಡು, ನೀನು ಇನ್ನು ಮುಂದೆ ಜಗತ್ತಿನ ಎಲ್ಲ ಸ್ತ್ರೀಯರನ್ನು ಮಾತೃಸ್ವರೂಪದಿಂದ ತಿಳಿಯಬೇಕು” ಎಂದು ಮಾತು ತೆಗೆದುಕೊಂಡಳು.
23)
ಪಡೆದು ತಾಯಿಯು ಭಾಷೆಯೊಂದನು
ನಡೆದಳಾಚಣ ಬಾರದೂರಿಗೆ
ಒಡೆಯ ರಾಯರು ಇರುವ ಅಂತಹ ನಾಕದಾ ಕಡೆಗೇ||
ಒಡನೆ ನಮ್ಮಯ ಬಾಲ ಶ್ರೀಧರ
ತಡವ ಮಾಡದೆ ಬಳಗ ಸೇರಿಸಿ
ಮಾಡುವಂತಹ ಕರ್ಮ ಎಲ್ಲವ ಮಾಡಿ ಮುಗಿಸಿಹರೂ||
ತಾತ್ಪರ್ಯ : ಸಮಸ್ತ ಸ್ತ್ರೀಸಂಕುಲವನ್ನೂ ತಾಯಿಯ ರೂಪವಾಗಿ ಕಾಣುವೆನು ಎಂದು ಶ್ರೀಧರರು ಮಾತು ಕೊಟ್ಟಾಕ್ಷಣ ಕಮಲಾಬಾಯಿಯವರು ತಮ್ಮ ಅಂತಿಮ ಉಸಿರನ್ನೆಳೆದು, ಪತಿದೇವರು ನಾರಾಯಣರಾಯರು ಇರುವೆಡೆಗೆ ಪಯಣಿಸಿದರು. ತಾಯಿಯ ಪಾರ್ಥಿವ ಶರೀರಕ್ಕೆ ಶ್ರೀಧರರು ಊರು-ಕೇರಿ, ನೆರೆ-ಹೊರೆ, ಬಂಧು-ಬಳಗಗಳನ್ನು ಕೂಡಿಕೊಂಡು ಆಚಾರ್ಯರ ಮುಖಾಂತರ ಅಂತ್ಯೇಷ್ಟಿ ಕಾರ್ಯವನ್ನು ವಿಧಿವತ್ತಾಗಿ ನೆರವೇರಿಸಿದರು.
24)
ಮೂರು ವರ್ಷದಿ ತಂದೆ ತೀರಿದ
ತೀರಿಕೊಂಡರು ಅನುಜ ಅನುಜೆಯು
ಪೋರ ಸಿರಿಧರರಿಂಗೆ ಏಕಾದಶವು ನಡೆವಾಗಾ||
ಚೋರಯಮನೂ ಕೊಂಡುಹೋದನು
ವಾರಕುಜದಲಿ ತಾಯಿಯನುಸಹ
ಪೋರನಿಗೆ ಆಗಿಹುದು ಚಾತುರ್ ದಶವು ವಯಸಾಗ||
ತಾತ್ಪರ್ಯ : ಮೂರನೆಯ ವಯಸ್ಸಿನಲ್ಲಿಯೇ ತಂದೆ ನಾರಾಯಣರಾಯರ ದೇಹಾಂತವಾಯಿತು. ಆರು ವರ್ಷದ ಮೇಲೆ ಎರಡು ವರ್ಷ ಕಳೆಯಲು ಅಂದರೆ ಎಂಟನೆಯ ವಯಸ್ಸಿಗೆ ಅಣ್ಣ ತ್ರ್ಯಂಬಕನೂ ಹಾಗೂ ಅಕ್ಕ ಗೋದಾವರಿಯ ನಿಧನವೂ ಆಗಿಹೋಯಿತು. ತಾಯಿಯೊಬ್ಬಳೇ ಬಂಧುವಾಗಿದ್ದಾಗ ಶ್ರೀಧರರು ಅಪಾರ ಮಾತೃಭಕ್ತಿಯಿಂದ ಸೇವೆ ನಡೆಸಿದರು. ಶ್ರೀಧರರ ಹದಿನಾಲ್ಕರ ಹರೆಯದಲ್ಲಿ ತಾಯಿ ಕೂಡಾ ಅನಾರೋಗ್ಯಪೀಡಿತರಾಗಿ ಈ ಭವಬಂಧನಗಳನ್ನು ಕಳೆದುಕೊಂಡರು. ಶ್ರೀಧರರಿಗೆ ಆ ಸಣ್ಣ ವಯಸ್ಸಿನಲ್ಲಿಯೇ ಸಮಸ್ತ ಬಂಧುಗಳನ್ನೂ ಕಳೆದುಕೊಂಡಂತಾಯಿತು.
25)
ಇಂಥ ಸಮಯದಿ ಕೂಡ ಬಾಲಕ
ಶಾಂತಿ ಯಿಂದಲಿ ಮುಂದೆ ನಡೆದನು
ಚಿಂತೆ ಮಾಡದೆ ಎಲ್ಲ ಭಾರವ ದೇವಗೊಪ್ಪಿಸುತಾ||
ಕಾಂತ ಲಕ್ಷ್ಮಿಗೆ ಆದಿ ಮೂರುತಿ
ಅಂತೆ ಗುರುವೂ ಶ್ರೀಸಮರ್ಥರು
ಎಂಥ ಸಮಯದಿ ಕೂಡ ಬಿಡದೆಯೆ ಮುಂದೆ ನಡೆಸುವರೂ||
ತಾತ್ಪರ್ಯ : “ಆತ್ಮಸ್ಥಿತಿಯಲ್ಲಿ ನಿಂತವನು ಎಂತಹ ದುಃಖವೊದಗಿದರೂ ಅದರಿಂದ ವಿಚಲಿತನಾಗುವುದಿಲ್ಲ “ಎಂದು ಯೋಗಿಯ, ಜ್ಞಾನಿಯ ಲಕ್ಷಣವನ್ನು ಗೀತೆಯಲ್ಲಿ ಹೇಳಿದಂತೆ, ಎಲ್ಲ ಪ್ರಿಯಜನರೂ ಇಲ್ಲದಂತೆ ಆಗಿಹೋದರೂ, ಶ್ರೀಧರರ ಚಿತ್ತಸ್ಥೈರ್ಯವು ಕದಲಲಿಲ್ಲ. ಸಮಸ್ತ ಭಾರವನ್ನೂ ಆದಿಮೂರುತಿ ಶ್ರೀಮನ್ನಾರಾಯಣನಿಗೆ ಒಪ್ಪಿಸಿ, ಗುರುಗಳಾದ ಶ್ರೀ ಸಮರ್ಥ ರಾಮದಾಸ ಸ್ವಾಮಿಗಳೇ ಎಲ್ಲವನ್ನೂ ನಡೆಸುತ್ತಾರೆಂಬ ಅಪಾರ ನಂಬಿಕೆಯಿಂದ ನಮ್ಮ ಕಥಾನಾಯಕ ಶ್ರೀಧರರು ಮುನ್ನಡೆದರು.