ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 9, 2016

16

ದಲಿತರ ‘ದೇಗುಲದ ಪ್ರವೇಶ’ದ ಸುತ್ತಾಮುತ್ತ… ( ಭಾಗ ೧ )

‍ನಿಲುಮೆ ಮೂಲಕ

– ಡಾ. ಮಾಧವ ಪೆರಾಜೆ

tirumala‘ದೇವಾಲಯ ಪ್ರವೇಶ’ ಎನ್ನುವ ಸಂಗತಿಯು ಈಗ ಒಂದು ಜ್ವಲಂತ ಸಮಸ್ಯೆ ಎನ್ನುವ ಹಾಗೆ ಪ್ರತಿಬಿಂಬಿತವಾಗುತ್ತಿದೆ. ಕನ್ನಡದ ಜನಪ್ರಿಯ ದಿನಪತ್ರಿಕೆಯಾದ ಪ್ರಜಾವಾಣಿಯಲ್ಲಿ ‘ದೇಗುಲ ಪ್ರವೇಶವೂ ಶುದ್ಧೀಕರಣವೂ’ ಎನ್ನುವ ಲೇಖನ (ಲೇ: ಹೊಸಕೆರೆ ನಂಜುಂಡೇಗೌಡ, ದಿ.6.10.14) ಪ್ರಕಟವಾಗಿದೆ. ಈ ಹಿನ್ನೆಲೆಯಲ್ಲಿ ಇದು ಅತ್ಯಂತ ಸಮಕಾಲೀನ ಸಂಗತಿಯಾಗಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಈ ಉಪನ್ಯಾಸಕ್ಕೆ ಸಂಬಂಧಿಸಿದ ಹಾಗೆ ಶೀರ್ಷಿಕೆಯ ಹಾಗಿರುವ ‘ಬಾಗಿಲನು ತೆರೆದು’ ಎನ್ನುವ ಕೀರ್ತನೆಯ ಸಾಲೊಂದು, ಈ ಉಪನ್ಯಾಸಕ್ಕೆ ಬಾಗಿಲೇ ಆಗುತ್ತದೆ ಎನ್ನುವ ಹಿನ್ನೆಲೆಯಲ್ಲಿ ಆ ಕೀರ್ತನೆಯನ್ನು ಪೂರ್ಣವಾಗಿ ಇಲ್ಲಿ ಉದ್ಧರಿಸಲಾಗಿದೆ.

ಬಾಗಿಲನು ತೆರೆದು ಸೇವೆಯನು ಕೊಡು ಹರಿಯೇ|
ಕೂಗಿದರು ದನಿ ಕೇಳದೇ ನರಹರಿಯೇ||ಪ||
ಪರಮ ಪದದೊಳಗೆ ವಿಷಧರನ ತಲ್ಪದಲಿ ನೀ|
ಸಿರಿ ಸಹಿತ ಕ್ಷೀರವಾರಿಧಿಯೊಳಿರಲು||
ಕರಿರಾಜ ಕಷ್ಟದಲಿ ಆದಿಮೂಲ ಎಂದು|
ಕರೆಯಲಾಕ್ಷಣ ಬಂದು ಒದಗಿದೆಯೋ ನರಹರಿಯೇ||

ಖಡು ಕೋಪದಿಂ ಖಳನು ಖಡುಗವನೆ ಪಿಡಿದು ನಿ
ನ್ನೊಡನೆಲ್ಲಿಹನೆಂದು ನುಡಿಯೆ||
ದೃಢಭಕುತಿಯಲಿ ಶಿಶುವು ಬಿಡದೆ ಎನ್ನು ಭಜಿಸೆ
ಸಡಗರದಿ ಕಂಭದಿಂದೊಡೆದೆ ನರಹರಿಯೇ||2||

ಯಮಸುತನ ರಾಣಿಗೆ ಅಕ್ಷಯ ವಚನವನ್ನಿತ್ತೆ
ಸಮಯದಲಿ ಅಜಮಿಳನ ತೊರೆದೆ||
ಸಮಯಾಸಮಯವೊಂಟೆ ಭಕ್ತವತ್ಸಲ ನಿನಗೆ
ಕಮಲಾಕ್ಷ ಕಾಗಿನೆಲೆಯಾದಿಕೇಶವನೆ||3||

ಕನಕದಾಸರಿಗೆ – ಅವರು ಕುರುಬರಾಗಿದ್ದ ಕಾರಣಕ್ಕೆ- ಉಡುಪಿಯ ಕೃಷ್ಣದೇವಾಲಯದಲ್ಲಿ ಪ್ರವೇಶ ನಿರಾಕರಿಸಲಾಯಿತೆನ್ನುವ ಒಂದು ಐತಿಹ್ಯವಿದೆಯಷ್ಟೇ. ಆ ಸಂದರ್ಭಕ್ಕೆ ಸಂಬಂಧಿಸಿದ್ದು ಎಂದು ಪಾರಂಪರಿಕವಾಗಿ ಹೇಳುವ ಕೀರ್ತನೆ ಮಾತ್ರ ಇದಲ್ಲ ಎನ್ನುವುದನ್ನು ನಾವಿಲ್ಲಿ ತಪ್ಪದೇ ಗಮನಿಸಬೇಕು. ಪಾರಂಪರಿಕವಾಗಿ ನಮಗೆ ತಿಳಿದು ಬರುವಂತೆ ಬ್ರಾಹ್ಮಣರು ಕುರುಬರಾದ ಕನಕದಾಸರಿಗೆ ಪ್ರವೇಶ ನಿರಾಕರಿಸಿದಾಗ ಕನಕದಾಸರು ಅಲ್ಲಿಯೇ ಹಾಡಿದ ಕೀರ್ತನೆ ಇದು:

ಪೂರ್ವ ಜನ್ಮದಲಿ ನಾ ಮಾಡಿದಾ ಭವದಿಂದ
ಊರ್ವಿಯೊಳು ಜನಿಸಿದೆನೋ ಕೃಷ್ಣಾ
ಕಾರುಣ್ಯನಿಧಿಯೆನ್ನ ಕಾಯಬೇಕಯ್ಯಾ ಹರಿ ||ಪ||
ವಾರಿಜನಾಭನೇ ಮುದ್ದು ಕೃಷ್ಣ ||ಅ.ಪ||

ಹುಟ್ಟಿದಂದಿಂದಿಗೂ ಸುಖವ ನಾ ಕಾಣದಲೆ
ಕಷ್ಟನಾದೆನು ಕೇಳೋ ಕೃಷ್ಣಾ||
ತೊಟ್ಟಲಿನ ಶಿಶು ತಾಯ ಬಿಟ್ಟತೆರನಂತೆ ಕಂ|
ಗೆಟ್ಟು ಸೊರಗಿದೆನಯ್ಯ ಕೃಷ್ಣಾ||
ಮುಟ್ಟಲವi್ಮರು ಎನ್ನ ಸತಿಸುತರು ಬಾಂಧವರು
ಅಟ್ಟಿ ಎಳೆಯುತ್ತಿಹರೊ ಕೃಷ್ಣಾ||
ಕಷ್ಟ ದಾರಿದ್ರ್ಯವನು ಪರಿಹರಿಸಿದರೆ ದೂರು
ಮುಟ್ಟುವುದು ನಿನಗಯ್ಯ ಕೃಷ್ಣ||1||

ಕಾಶಿಯಾ ವಾಸವನು ಬಯಸಿ ಬಹುದಿನದಿಂದ
ಆಸೆಯೊಳಗಿದ್ದೆನಯ್ಯಾ ಕೃಷ್ಣಾ
ಗಾಸಿಯನು ಮಾಡದಲೆ ದೋಷವನು ಪರಿಹರಿಸೊ
ಸಾಸಿರದ ನಾಮದಾ ಕೃಷ್ಣ||
ಹೇಸಿಕೆಯೊಳಿರ್ದ ಸಂಸಾರವೆಂಬುದು ಮಾಯ
ಪಾಶದಿಂದಲಿ ಬಿಗಿವರೆ ಕೃಷ್ಣಾ
ಕಂಸಮರ್ಧನ ನೀ ಕಾಯಬೇಕಯ್ಯ ಹರಿ
ವಾಸುದೇವನೆ ಮುದ್ದು ಕೃಷ್ಣಾ||ಪ||

ಲೋಕದೊಳಗೆನ್ನನ್ನು ಪೋಲ್ವ ಪಾಪಿಗಳನ್ನು
ನೀ ಕಂಡುಬಲ್ಲೆಯಾ ಕೃಷ್ಣಾ||
ಸಾಕಿನ್ನು ಎನಗೊಂದು ಗತಿಯ ತೋರಿಸು ಸದ್ವಿ
ವೇಕಿಯನೆ ಮಾಡಯ್ಯ ಕೃಷ್ಣಾ||
ರಾಕೇಂದುಮುಖಿಯ ದ್ರೌಪದಿಯ ಮಾನವ ಕಾಯ್ದೆ
ಆಕೆಗಕ್ಷಯವಿತ್ತೆ ಕೃಷ್ಣಾ ಪಿ
ನಾಕಿಸಖನಾದಿಕೇಶವನೆ ಉಡುಪಿಯ ವಾಸ
ಸಾಕಿ ಸಲಹೈ ಎನ್ನ ಕೃಷ್ಣಾ||3||

ಶ್ರೀ ಕೃಷ್ಣ ಶರ್ಮ ಬೆಟಗೇರಿ ಅವರ ‘ಕನಕದಾಸರ ಹಾಡುಗಳು’ (ಸಮಾಜ ಪುಸ್ತಕಾಲಯ ಧಾರವಾಡ , 1998), ಎಂ.ಜೆ.ಪ್ರಶಾಂತ ಅವರ ‘ಭಕ್ತ ಕನಕದಾಸರ ಪದಗಳು’ (ಪಿ.ಸಿ.ಶಾಬಾರಿ ಮಠ ಬುಕ್ ಡಿಪೋ, ಗದಗ) ಮೊದಲಾದ ಪುಸ್ತಕಗಳಲ್ಲಿ ಈ ಕೀರ್ತನೆಯನ್ನು ಅಂತಹ ಮಹತ್ವದ ಸಂದರ್ಭಕ್ಕೆ ಸಂಬಂಧಿಸಿದುದೆಂದು ಉಲ್ಲೇಖಿಸಿದ್ದಾರೆ. ಅಷ್ಟು ಮಾತ್ರವಲ್ಲದೇ, ‘ಭಕ್ತಿ ವಿಜಯ’ ಎಂಬ ಸಾಧು ಸಂತರ ಕಥೆಗಳು ಎನ್ನುವ ಇನ್ನೊಂದು ಪುಸ್ತಕದಲ್ಲಿ (ಲೇ. ಗಿರಿಜಾ-ಶಂಕರ, ಸಂಕೇಶ್ವರ ಪ್ರಿಂಟರ್ಸ್, ಗದಗ-1996) ಈ ಸಂದರ್ಭವನ್ನು ಉಲ್ಲೇಖಿಸುತ್ತಾ ‘ತೊರೆದು ಜೀವಿಸುವುದೆ ಹರಿ ನಿನ್ನ ಚರಣವನು’ ಎನ್ನುವ ಕೀರ್ತನವನ್ನು ಕನಕದಾಸರು ಹಾಡಿದರು ಎಂದು ಉಲ್ಲೇಖೀಸಿದ್ದಾರೆ. ಅದೇನಿದ್ದರೂ ಬಾಗಿಲನು ತೆರೆದು ಸೇವೆಯನು ಕೊಡು ಹರಿಯೆ ಎನ್ನುವ ಕೀರ್ತನೆಯು ಕನಕದಾಸರ ದೇವಾಲಯ ಪ್ರವೇಶಕ್ಕೆ ಸಂಬಂಧಿಸಿದ ಘಟನೆಗೆ ಹೊಂದಿಕೆಯಾಗುವ ಕೀರ್ತನೆ ಎನ್ನುವುದಕ್ಕೆ ನಮಗೆ ಆಧಾರಗಳಿಲ್ಲ. ಅಂದರೆ ಪಾರಂಪರಿಕವಾಗಿ ಈಗ ಉಲ್ಲೇಖಿಸಿದ ಎರಡು ಕೀರ್ತನೆಗಳನ್ನು ಹಾಗೆಂದು ನಂಬಲಾಗುತ್ತಿದೆ ಎಂದು ಹೇಳಬಹುದೆನಿಸುತ್ತದೆ. ಹಾಗೆಂದರೆ  ಈ ಕೀರ್ತನೆಯನ್ನು ಹಾಗೆಂದು ಈಗ ಭಾವಿಸುತ್ತಿರುವುದು ಏಕೆ?

ಉತ್ತರ ಸುಲಭ; ದೇವಾಲಯಕ್ಕೆ ಪ್ರವೇಶ ಮಾಡಬೇಕಾದರೆ ಬಾಗಿಲು ತೆರೆದಿರಬೇಕು ಎಂದು ನಾವು ಭಾವಿಸುತ್ತೇವೆ, ಅಷ್ಟೇ! ಎರಡನೆಯದು ಕನಕದಾಸರ ಕುರಿತು ತೆಗೆದಿರುವ ಸಿನಿಮಾವೊಂದರಲ್ಲಿ ಕನಕದಾಸರಿಗೆ ಉಡುಪಿಯ ಬ್ರಾಹ್ಮಣರು ದೇವಾಲಯ ಪ್ರವೇಶವನ್ನು ನಿರಾಕರಿಸಿದ ಸನ್ನಿವೇಶ ಬಂದಾಗ ಈ ಗೀತೆಯನ್ನು- ಕನಕದಾಸರ ಪಾತ್ರವನ್ನು ಅಭಿನಯಿಸಿದ- ನಟನು ಹಾಡುತ್ತಾನೆ! ಅಲ್ಲಿಂದ ಮೇಲೆ ಕನಕದಾಸರು ಇದೇ ಹಾಡನ್ನು ಉಡುಪಿಯಲ್ಲಿ ಹಾಡಿದರು ಎಂದು ನಾವು ನಂಬುತ್ತಿದ್ದೇವೆ! ಹೀಗೆ ದೇವಾಲಯ ಪ್ರವೇಶ ಎನ್ನುವ ವಿಷಯವನ್ನು ಸಾಮಾನ್ಯ ಜ್ಞಾನದ ಹಿನ್ನೆಲೆಯಲ್ಲಿ ನೋಡಿದಾಗ ದೊರಕುವ ವಿವರಗಳಿಗಿಂತ ಭಿನ್ನವಾಗಿ ಸಂಶೋಧನೆಯ ಹಿನ್ನೆಲೆಯಲ್ಲಿ ನೋಡಿದಾಗ ಮೇಲ್ನೋಟಕ್ಕೆ ನಮಗೆ ಒಂದಕ್ಕೊಂದು ಸಂಬಂಧವಿಲ್ಲದ ಅನೇಕ ಸಂಗತಿಗಳು ಗಮನ ಸೆಳೆಯುತ್ತವೆ. ಹಾಗಾದುದರಿಂದ ಈ ವಿಷಯವನ್ನು ಪಾರಂಪರಿಕ, ಐತಿಹಾಸಿಕ, ಸಾಮಾಜಿಕ  ಮತ್ತು ನನ್ನ ವೈಯಕ್ತಿಕ ಹಿನ್ನೆಲೆಯಲ್ಲಿ ವಿವರಿಸಿವ ಪ್ರಯತ್ನವನ್ನು ನಾನು ಮಾಡುತ್ತೇನೆ. ಆದುದರಿಂದ ಆರಂಭದಲ್ಲಿ ನೇರವಾಗಿ ಉಡುಪಿಯ ಮಠಕ್ಕೆ ಸಂಬಂಧಿಸಿದ ಒಂದು ಚಾರಿತ್ರಿಕ ಸಂಗತಿಯನ್ನು ಇಲ್ಲಿ ಉಲ್ಲೇಖಿಸ ಬಯಸುತ್ತೇನೆ:

ಉಡುಪಿಯ ಕೃಷ್ಣಮಠದ ಗೋಡೆಯಲ್ಲಿರುವ ಪ್ರೌಢದೇವರಾಯ ನ ಕಾಲದ ಒಂದು ಶಾಸನ ಹೀಗಿದೆ:

ಸ್ವಸ್ತಿ ಶ್ರೀ| ಗಣಾಧಿಪತೆಯೇ ನಮಃ || ಪಾಂತು ವೋ ಜಲದಶ್ಯಾ
ಮಶಾಙ್ರ್ಗ ಜಾನತಕರ್ಕಶಃ || ತ್ರಯಿಲೋಕ್ಯಮಂಟಪಸ್ತಂ
ಭಚತ್ಪಾರೋ ಹರಿಬಾಹವಃ || ಸ್ವಸ್ತಿ || ಜಯಾಭ್ಯುದಯ ಸಖ
ವರುಷ 1359 ನೆಯ ವರ್ತಮಾನ|| ನಳ ಸಂವಶ್ಚರದ ಚಯಿ
ತ್ರ ಶುಭ ಶುಕ್ರವಾರದಲ್ಲು ಶ್ರೀಮನ್ಮಹಾರಾಜಾಧಿರಾಜ ರಾಜಪರ
ಮೇಶ್ವರ ಶ್ರೀವೀರಪ್ರತಾಪ ದೇವರಾಯ ಮಹಾರಾಯರು ವಿಜಯಾ
ನಗರದಲ್ಲು ಸಕಲವರ್ಣಾಶ್ರಮಧರ್ಮಂಗಳನು ಸುಖಸಂಕಥಾ
ವಿನೋದದಿಂ ಸಮಸ್ತ ರಾಜ್ಯವನು ಪರಿಪಾಲಿಸುತ್ತಿಹ ಕಾಲದ
ಲ್ಲು ಆ ದೇವರಾಯ ಮಹಾರಾಯರ ನಿರೂಪದಿಂದ ಸಿಂಗಣ
ದಣಯಕರು ಸಮಸ್ತರಾಜ್ಯವ ಪಾರಿಪತ್ಯದಿಂದ ಪಾಲಿ
ಸುವಲ್ಲಿ ಆ ದೇವರಾಯಮಹಾರಾಯರು ಸಿಂಗಣದಣನಾ
ಯಕರು ನಿರೂಪದಿಂದ ಬಾರ್ಕೂರರಾಜ್ಯವನು ಅಂಣಪ
ನಿರೂಪದಿಂದ ಬಾರ್ಕೂರ ರಾಜ್ಯವನು ಅಂಣಪವೊ
ಡೆಯರು ಪಾಲಿಸುತ್ತಹಾ ಕಾಲದಲ್ಲಿ  ಸಿಂಗರಸರು ಬರೆಸಿಕೊ
ಟ್ಟ ಸಿಲಶಾಸನದ ಕ್ರಮವೆಂತೆಂದರೆ|| ಪ್ರಕು ಆನಂದ
ಸಂವತ್ಸರದಲ್ಲು ಅಂಣಪವೊಡೆಯರು ಶಿವಳಿಯ ಗ್ರಾ
ಮಕ್ಕೆ ದಾಳಿಯ ಮಾಡಿ ನಾಡವಿರಿಂತವಾದಲ್ಲಿ ಬಾರ್ಕೂರ ಹ
ತ್ತು ಕೇರಿಮೊದಲಾದ ಕಟ್ಟಳೆಯವರು ಕೂಡಿ ಶಿವಳ್ಳಿಯ ಗ್ರಾ
ಮ ಸಂತೈಸುವಲ್ಲಿ ಅಲ್ಲಿಯ ದೇವಸ್ತನದ ಆನ್ಯಮನ್ಯಂಗಳು
ತಪ್ಪಿದಲ್ಲಿ ಉಡುಪಿನ ಶ್ರೀಕ್ರುಷ್ಣದೇವರ ಪ್ರತಿಮಾಛಲನವಾದ
ಲ್ಲಿ  ಶ್ರೀಕ್ರುಷ್ಣದೇವರ ಕಟ್ಟಳೆಯವರು ಅರಸಿಗೆ ಬಿಂನಾ
ಹ ಮಾಡಿದಲ್ಲಿ ಅಂಣಪ್ಪವೊಡೆಯರ ನಿರೂಪದಿಂ ಸಿಂಗರಸ
ವೊಡೆಯರು ಕೊಟದು ಸಗುರಿಯ ಅಧಿವಾಸದೊಳಗೆ
ಕೊಡುವ ಶಗುರಿಯ ವೈಕದಿಂಬಂಞ ನೋಡಿಯರಾಮ
ಕುಂಜತನನು ಮೂಲವಾಗಿ ದೇವರಿಗೆ ಮೂಲವಾಗಿ ಕೊಟ ಬಾ
ಳು ಕಂಬಳ ಗದೆ ಕೊಯಿಲ್ಲು ಹದಿನಾರು ಅಲ್ಲಿಂದ ತೆಂಕ
ಪಡುವಗಾಳಿ ಗದೆವೊಂದಕೆ ಹತ್ತು ತೆಂಕ
ಮೇಲೆ ಬಾಗಿಲಗದೆವೊಂದಕೆ ಅದ್ದೆ ಯೆರಡಕೆ ಕೊಯಿಲು ಹ
ದಿನಾರು ಆ ತೆಂಕಮೇಲೆ ಹಳಿಗಳು ಯೆರಡು ಆಮೇಲೆ ಮನೆ ಅಲ್ಲಿಂ
ತೆಂಕ ಕಾಡು ಸಹವಾಗಿ ಯೀ ಬಾಳ ಸಿದೆಯರ ವೈಕದಿಂ ಮೊ
ದಲಕುಳದ ಸಿದ್ಧಯದ ಮೊದಲ ತಾರಕೊರಕೆ ವೊಂಬತ್ತು
ಹಣವಿಗೆ ಬಹ ಸಿದ್ಧಯದ ಸರ್ವಮಾನ್ಯವಾಗಿ ಅಕರಂ
ನ್ಯಾಯ ಆನಯಕವಿಲ್ಲದೆ ನಡದು ಬಹುದು ಕಾಟಿ ಹತ್ತು ಹೊ
ಂನ್ನು ಅಕ್ಷರದಲ್ಲು ಹತ್ತು ಹೊಂಣು ಮೇಲಾದ ಹೊಂನ್ನಿಗೆ
ಶಗುರಿಯ ಮಧ್ಯಸ್ತನು ದೇವರಿಗೆ ಆ ರೊಕ್ಕಲಲ್ಲಿ ಯೆರಡು
ಹೊನ್ನನು ಕಾಲಕಾಲಕ್ಕೆ ಅಪ್ಪಿಸಿಕೊಟು ಬಹನು ಉಭ
ಯಂ ಹಂನೆರಡು ಹೊಂನು ಅಕ್ಷರದಲು ಕಾಟೆ ಗದ್ಯಣ ಹಂ
ನೆರಡು ಹೊಂನು ಸಹಿರಂಣ್ಯೋದಕ ದಾನಧಾರಾಪುರ್ವ
ಕವಾಗಿ ಆಚಂದ್ರಾರ್ಕಸ್ತಯಿಯಾಗಿ ಶ್ರೀಕೃಷ್ಣದೇವರ ಅ
ಮ್ರುತಪಡಿ ನಂದಾದೀಪ್ತಿಗೆ ಆಗಿ ನಡದು ಬಹಂತಾಗಿ ಸಿಂ
ಹರಸರು ಧಾರೆಯನೆರೆದು ಕೊಟದು| ಯೀ ಬಾಳ ಜನನಿಗ
ಳು ಮದ್ಯ್ಯಸ್ತನು ಕಾಲಕಾಲಕೆ ನಡೆಸಿ ಬಾಹಿರಿ ಎಂದು ಸಿಂ
ಗರಸರು ತಂಮ ಸ್ವರೂಪನುಡಬಟು ಪೊಡವಟು ಕೊ
ಟ ಧರ್ಮಶಾಸನ ಪಟೆ| ಯೀ ಧರ್ಮವನು ಅಳಿಸಿದವರಿಗೆ
ವಾರಣಾಶಿಯಲು ಸಹಸ್ರ ಕಪಿಲೆ ಸಾವಿರ ಬ್ರಂಹಣರ ತ
ನು ವಧಿಸ್ತ ದೋಷದಲಿ ಹೋಹರು| ಅಂಣಪವೊಡೆಯರ
ವೊಪ್ಪಕರುಣಿಕ ಪುರುಷೋತಮ ಬರಹ ಮುಡಿಲ ನಿಡುಂ
ಬೂರವರ ಗ್ರಾಮದವರ ವೊಪ್ಪು|| ಸ್ವದತ್ತಂ ಪರದತ್ತಂ ವಾ
ಯೋ ಹರೇತ ವಸುಂಧರ| ಶಷ್ಟರ್ವರುಷಸಹಸ್ರಾಣಿ ವಿಷ್ಟ
ಯಾಂ ಚಾಯತೇ ಕ್ರಿಮಿಃ| ದಾನಪಾಲನಯೋರ್ಮಧ್ಯೇಪಾ
ಲನಂ ಶ್ರಯ ಉಚ್ಯತೇ| ದಾನಾದಾಯ ಸ್ವಗ್ರ್ಗಮಾಪ್ನೋ
ತಿ ಪಾಲನಾದಚ್ಚತಂ ಪದಂ || ಶ್ರೀಶ್ರೀಶ್ರೀ

ಅಂದರೆ ಕ್ರಿ.ಶ.1436 ಮಾರ್ಚ್ 30 ಶುಕ್ರವಾರದಂದು ಈ ಶಾಸನವನ್ನು ಬರೆಯಲಾಯಿತು. ಬಾರಕೂರು ರಾಜ್ಯವನ್ನು ಅಣ್ಣಪ್ಪ ಒಡೆಯರು ಆಳುತ್ತಿರುವಾಗ, ಆನಂದ ಸಂವತ್ಸರದಲ್ಲಿ ಅವರು ಶಿವಳ್ಳಿ ಗ್ರಾಮಕ್ಕೆ ಧಾಳಿಯನ್ನು ಮಾಡಿದ್ದರು. ಆಗ ಅಲ್ಲಿ ಬಹಳ ಅಸ್ತವ್ಯಸ್ತತೆಯುಂಟಾಯಿತು. ಆಗ ಬಾಕೂರಿನ ಹತ್ತುಕೇರಿ ಮೊದಲಾದವರು ಸೇರಿ, ಶಿವಳ್ಳಿ ಗ್ರಾಮದವರನ್ನು ಸಂತೈಸುತ್ತಾರೆ. ಅಲ್ಲಿನ ಅಸ್ತವ್ಯಸ್ತವನ್ನು ಸರಿಪಡಿಸಿ ಅಲ್ಲಿನ ದೇವಾಲಯಗಳಿಗೆ ದಾನ-ಧರ್ಮಗಳನ್ನು ನೀಡಿದರು. ಈ ದಾಳೀಯ ಅವಧಿಯಲ್ಲಿ ಉಡುಪಿಯ ದೇವಾಲಯದ ಶ್ರೀಕೃಷ್ಣ ಮೂರ್ತಿಯು ‘ಚಲನ’ವಾಯಿತೆಂದು ಶಾಸನದಲ್ಲಿ ತಿಳಿಸಲಾಯಿತು. ಅಂದರೆ ಆಗ ಈ ಮೂರ್ತಿಯನ್ನು ಗರ್ಭಗುಡಿಯಿಂದ ಬೇರೆ ಕಡೆಗೆ ಸ್ಥಳಾಂತರಿಸಲಾಯಿತೆಂದು ನಾವು ತಿಳಿಯಬಹುದು. ಇದನ್ನು ಅರಸರಿಗೆ ತಿಳಿಸಿ ಸರಿಪಡಿಸಲು ಕೋರಿದಾಗ, ಅರಸನು ಹಾಳಾಗಿದ್ದ ಗುಡಿಯನ್ನು ಸರಿಪಡಿಸಿ, ಮತ್ತೆ ಎಂದಿನಂತೆ ಪೂಜಾದಿ ಕಾರ್ಯಗಳು ನೆರೆವೇರುವಂತೆ ಮಾಡಿದನು ಎಂದರ್ಥ.(ಎಪಿಗ್ರಫಿಯಾ ಇಂಡಿಕಾ,ಸಂ.7. ಶಿಕಾರಿಪುರ ಶಾ.ಸಂ. 36.)

ಬೇರೆ ಏನನ್ನು ನಾವು ಈಗ ಖಚಿತವಾಗಿ ಹೇಳಲಾರೆವಾದರೂ ಕನಕದಾಸನ ಭಕ್ತಿಗೆ ಒಲಿದು ತಿರುಗಿತೆಂದು ಹೇಳಲಾಗುವ ಐತಿಹ್ಯವು ಕ್ರಿ.ಶ.1436ರಲ್ಲಿ ಪುನರ್ ಪ್ರತಿಷ್ಠಾಪಿಸಿದ ಮೂರ್ತಿಗೆ ಸಂಬಂಧಿಸಿದುದು ಎನ್ನುವುದನ್ನು ಮಾತ್ರ ಅಲ್ಲಗಳೆಯಲಾಗುವುದಿಲ್ಲ. ಏಕೆಂದರೆ ಕನಕದಾಸರು ಉಡುಪಿಗೆ ಬರುವುದು ಈ ಘಟನೆಯ ಅನಂತರವಷ್ಟೇ. ಹಾಗೆಯೇ ಈ ಐತಿಹ್ಯಕ್ಕೂ ಈ ಐತಿಹಾಸಿಕ ಘಟನೆಗೂ ಒಂದಲ್ಲ ಒಂದು ಸಂಬಂಧವಿರುವುದನ್ನು ಅಲ್ಲಗಳೆಯಲಾಗದು. ಏಕೆಂದರೆ ಕನಕದಾಸರ ಕಾಲ ಕ್ರಿ.ಶ.1491-1580 ಎಂದು ತಿಳಿದುಬಂದಿದೆ.

ಅದೇನೇ ಇರಲಿ, ಮೇಲಿನ ಎರಡು ನಿದರ್ಶನಗಳಲ್ಲಿ ನಮಗೆ ಮೇಲ್ನೋಟಕ್ಕೆ ಕೇಳಿಬರುವ ಸಂಗತಿಗಳಿಗಿಂತಲೂ ಆಚೆಗಿನ- ಅಂದರೆ ದೇವಾಲಯಕ್ಕೆ ಪ್ರವೇಶ ಬೇಕೇ ಬೇಡವೇ ಎನ್ನುವುದಕ್ಕಿಂತಲೂ- ವಿಶಿಷ್ಟವಾದ ಕೆಲವು ತಥ್ಯಗಳಿವೆ. ಆದರೆ ನನ್ನ ಈ ಪ್ರಬಂಧವು ಕನಕದಾಸರ ಈ ಕೀರ್ತನೆಯ ಬಗೆಗಾಗಲೀ, ಇಂತಹ ಐತಿಹಾಸಿಕ ವಿಚಾರಗಳ ಪರಿಶೀಲನೆಗಾಗಲೀ ಸೀಮಿತವಾದುದಲ್ಲ. ಈ ಹಾಡು  ಕನಕದಾಸರ ರಚನೆಯಾಗಿರುವುದರಿಂದ ಇದನ್ನು ಪೀಠಿಕೆಯಾಗಿ ಮಾತ್ರ ಇಲ್ಲಿಯವರೆಗೆ ಹೇಳಿದ್ದೇನೆ. ಈಗ ದೇವಾಲಯ ಪ್ರವೇಶ ಎನ್ನುವ ವಿಷಯಕ್ಕೆ ನೇರವಾಗಿ ಪ್ರವೇಶ ಮಾಡಬಹುದು.

ದೇವಾಲಯ: ಒಂದು ಐತಿಹಾಸಿಕ ಹಿನ್ನೆಲೆ:

ಪುರಾತನ ಕಾಲದಲ್ಲಿ ಮನುಷ್ಯನು ಸತ್ತಾಗ ಹೆಣವನ್ನು ಹೂತು, ಅದರ ಮೇಲೆ ದೊಡ್ಡದೊಂದು ಕಲ್ಲನ್ನು ಹಾಸುತ್ತಿದ್ದದ್ದರು. ಇಲ್ಲವೇ ಅಲ್ಲೊಂದು ಹರಳು ಕಲ್ಲುಗಳ ರಾಶಿಯನ್ನು ಸೇರಿಸಿ, ಅದರ ಸುತ್ತ ವೃತ್ತಾಕಾರದಲ್ಲಿ ಕಲ್ಲುಗಳನ್ನು ಇರಿಸುತ್ತಿಸುತ್ತಿದ್ದರು. ಕೆಲವು ಜನರು ಹೆಣವನ್ನು ಮಲಗಿಸಿ ಹೂತು, ಅದರ ಹೃದಯದ ಭಾಗದಲ್ಲಿ ದೊಡ್ಡ ಕಲ್ಲೊಂದನ್ನು ಇಡುತ್ತದ್ದರು. ಅನಂತರ ತಲೆಯ ಕಡೆ ಮತ್ತು ಕಾಲಿನ ಕಡೆ ಇನ್ನೆರಡು ಕಲ್ಲನ್ನು ಇಡುತ್ತದ್ದರು. ಹೀಗೆ ಇಡುವ ಮೂರು ಕಲ್ಲುಗಳಲ್ಲಿ ನಡುವಣ ಕಲ್ಲು ಪ್ರಧಾನವಾಯಿತು. ಆಮೇಲೆ ನಿಧಾನವಾಗಿ ಇದುವೇ ಲಿಂಗದ ಆಕಾರವನ್ನು ಪಡೆಯಿತು. ಅಕ್ಕಪಕ್ಕದ ಕಲ್ಲುಗಳು ಕಂಬಗಳ ರೂಪವನ್ನು ಪಡೆದವು. ಈ ಕಂಬಗಳ ಮೇಲೆ ಸೂರನ್ನು ಮಾಡಿದಾಗ ಅವು ಸಮಾಧಿಗಳಾದವು. ನಮ್ಮ ಹಳೆಯ ಗುಡಿಸಲುಗಳು ಈ ಸಮಾಧಿಗಳ ರೂಪದಲ್ಲಿಯೇ ಇವೆ. ಇಂತಹ ಸಮಾಧಿಗಳ ತಳಾಕೃತಿಯು ಚೌಕಾಕೃತಿಯ ಚೌಕಾಕಾರವಾಗಿರಬಹುದು ಅಥವ ವೃತ್ತಾಕಾರವಾಗಿಯೂ ಇರಬಹುದು. ಮೇಲ್ಭಾಗವು ಮಾತ್ರ ಚೂಪಾಗಿರುತ್ತಿತ್ತು. ತುಂಬ ಪ್ರಾಚೀನ ಗುಡಿಗಳು ಇದೇ ಮಾದರಿಯಲ್ಲಿವೆ. ಸಮಾಧಿಯಲ್ಲಿನ ಸುತ್ತಲೂ ಕಟ್ಟುವ ಕಲ್ಲಿನ ವೃತ್ತಗಳಿಗೆ ಬದಲಾಗಿ, ಕಲ್ಲುಬೆರೆತ ಮಣ್ಣಿನ ರಚನೆಯನ್ನು ಮಾಡಿದಾಗ ಅದು ಸ್ತೂಪವಾಗುತ್ತದೆ. ಇದನ್ನು ನಾವು ಬೌದ್ಧರ ರಚನೆಗಳೆಂದು ಕರೆಯುತ್ತೇವೆ. ಈ ಸ್ತೂಪಗಳೇ ದೇವಾಲಯಗಳ ಮೇಲೆ ಇರುವ ವಿಮಾನಗಳು. ಹೀಗೆ ದೇವಾಲಯದ ರಚನೆಯಲ್ಲಿ ಸ್ತೂಪಗಳ ಪ್ರಭಾವವಿರುವುದಾದರೂ, ಸ್ತೂಪಗಳಿಗೆ ವೈದಿಕಯುಗದ ಅಗ್ನಿದ್ರಿಯಗಳೇ ಹಿನ್ನೆಲೆಯಾಗಿವೆ. ಅಗ್ನಿದ್ರಿಯವು ಗುಂಭಾಕಾರವಾದ ಒಂದು ರಚನೆಯಾಗಿದ್ದು, ಅದು ಒಳಭಾಗದಲ್ಲಿ ಟೊಳ್ಳಾಗಿರುತ್ತಿತ್ತು. ಅದರ ನಡುವೆ ಎರಡು ನಾಳವಿರುವ ಕುಂಭವಿರುತ್ತಿತ್ತು. ಅದರ ಎರಡೂ ಪಕ್ಕದಲ್ಲಿ ಕಲ್ಲು ಮತ್ತು ಕಟ್ಟೆಗಳಿದ್ದು, ಇವುಗಳ ಮೇಲೆ ಅಗ್ನಿ ಮತ್ತು ಸೋಮ ಎನ್ನುವ ಎರಡು ಹೋಮಗಳನ್ನು ನಡೆಸುತ್ತಿದ್ದರು. ಗುಂಭವನ್ನು ಮರದ ಹಲಗೆಗಳಿಂದ ಮಾಡಿ, ಮೇಲ್ಭಾಗವನ್ನು ಮಣ್ಣಿನಿಂದ ಮುಚ್ಚಿದಾಗ, ಇಡೀ ರಚನೆ ಪ್ರಾಚೀನ ಗುಡಿಸಲನ್ನು ಹೋಲುತ್ತಿತ್ತು. ಇದುವೇ ವೈದಿಕ ಸ್ಥೂಪದ ಕಲ್ಪನೆ.  ಆದರೆ ಸ್ತೂಪದ ರಚನೆಯ ಖ್ಯಾತಿಗೆ ಬೌದ್ಧಧರ್ಮ ಪ್ರೇರಣೆಯಾಯಿತು. ಏಕೆಂದರೆ ಬೌದ್ಧಧರ್ಮೀಯನಾದ ಅಶೋಕನು 84000 ಸ್ತೂಪಗಳನ್ನು ರಚಿಸಿದನು. ಇದರಲ್ಲಿ ಬುದ್ಧನ ಅಥವ ಅವನ ಶಿಷ್ಯರ ಪಾರ್ಥಿವ ಶರೀರದ ಅವಶೇಷಗಳನ್ನು ಇಡುವ ಮತ್ತು ಅದನ್ನು ಆರಾಧನೆ ಮಾಡುವ ಪದ್ಧತಿ ಬೆಳೆಯಿತು. ಹೀಗೆ ದೇವಾಲಯದ ರಚನೆಯ ಹಿನ್ನೆಲೆಯಲ್ಲಿ ಸ್ತೂಪಗಳ ಅದರಲ್ಲೂ ಬೌದ್ಧಸ್ತೂಪಗಳ ರಚನೆಯ ಪ್ರೇರಣೆಯಿದೆ. ಸತ್ತವರನ್ನು ಹುಗಿದ ಸ್ಥಳಗಳಲ್ಲಿ ಕಟ್ಟೆ ಕಟ್ಟುವುದು, ಲಿಂಗವನ್ನು ಕೂರಿಸುವುದು, ಮಂಟಪಗಳನ್ನು ರಚಿಸುವುದು ಮೊದಲಾದವು ಇಂದಿಗೂ ಉಳಿದಿರುವ ಪದ್ಧತಿಗಳು. ಹಿರಿಯರ , ಯತಿಗಳ ಸಮಾಧಿ ಸ್ಥಳದಲ್ಲಿ ಬೃಂದಾವನಗಳನ್ನು ನಿರ್ಮಿಸಿ ಪೂಜಿಸುವ ಪದ್ಧತಿಯೂ ನಮಗೆ ಹೊಸದಲ್ಲ. ಹೀಗೆ ಸಮಾಧಿಗಳ ಕಲ್ಪನೆಗೂ ದೇವಾಲಯದ ನಿರ್ಮಾಣಕ್ಕೂ ನೇರ ಸಂಬಂಧವಿದೆ. ಬೇರೆ ಮಾತಿನಲ್ಲಿ ಹೇಳುವುದಾದರೆ ಸಮಾಧಿಗಳೇ ಅತ್ಯಂತ ಪ್ರಾಚೀನ ದೇವಾಲಯಗಳು.

ಬಳ್ಳಾರಿ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಚಿಕ್ಕಬೆಣಗಲ್ ಗ್ರಾಮದ ಬೆಟ್ಟಗಳ ಮೇಲೆ ‘ಮರ್ಯರ ಓಣಿ’ ಎಂದು ಕರೆಯಲಾಗುವ ಕೆಲವು ಬೃಹತ್ ಶಿಲಾಯುಗದ ರಚನೆಗಳಿವೆ. ಅವುಗಳನ್ನು ಮೌರ್ಯರ ಓಣಿ ಎಂದು ಗ್ರಾಂಥಿಕ ಭಾಷೆಯಲ್ಲಿ ಹೇಳಿ ಅದರ ಪ್ರಾಚೀನತೆಯನ್ನು ವಿರೂಪಗೊಳಿಸುತ್ತಾರೆ. ನಿಜವಾಗಿಯೂ ಅವು ಮರ್ಯರ ಎಂದರೆ ಮತ್ರ್ಯರ ಅಂದರೆ ಸತ್ತವರ ಸಮಾಧಿಗಳು. ಇಡೀ ದಕ್ಷಿಣಭಾರತದಲ್ಲೇ ಅಪರೂಪವಾದ ಈ ಸ್ಥಳವು ಪ್ರಾಚೀನ ಸಮಾಧಿಗೊಂದು ಸ್ಪಷ್ಟ ನಿದರ್ಶನವಾಗಿದೆ. ಈಗ ಅವುಗಳನ್ನು ನೋಡಿದಾಗ ಹಾಳಾದ ಗುಡಿಗಳ ಹಾಗೆಯೇ ಕಂಡುಬರುತ್ತವೆ.

ಪ್ರಾಚೀನ ಗುಡಿಗಳು:

ajanta-ellora1ನಮ್ಮಲ್ಲಿ ತುಂಬ ಪ್ರಾಚೀನ ದೇವಾಲಯಗಳು ಗುಹೆಗಳೇ ಆಗಿವೆ. ಹಂಪಿಯಲ್ಲಿ ಸುಗ್ರೀವ ಗುಹೆ ಎಂಬ ಗುಹೆ ಇದೆ. ಅದರಲ್ಲಿ ಕಲ್ಲಿನಿಂದ ಕೆತ್ತಿದ ದೇವರ ಮೂರ್ತಿಗಳಿವೆ. ಅದರಲ್ಲಿ ಈಗಲೂ ಪೂಜೆ ನಡೆಯುತ್ತಿದೆ. ಇದು ಪ್ರಾಚೀನ ಗುಹಾಂತರ್ದೇವಾಲಯಗಳಿಗೆ ನಮ್ಮಲ್ಲಿಯೇ ಇರುವ ತೀರಾ ಪ್ರಾಚೀನ ನಿದರ್ಶನವಾಗಿದೆ. ಇಂದು ಕರಾವಳಿಯಲ್ಲಿರುವ ಪ್ರಾಚೀನ ದೇವಾಲಯಗಳು ಈ ಗುಹೆಯ ಮಾದರಿಗಳೇ ಆಗಿರುವುದರೊಂದಿಗೆ ಗುಹೆಗಳೇ ಪ್ರಾಚೀನ ದೇವಾಲಯಗಳು ಎನ್ನುವುದನ್ನೂ ಸಾರುತ್ತಿವೆ. ಜುನ್ನಾರ್, ಕನ್ಹೆರಿ(ಕೃಷ್ಣಗಿರಿ), ಅಜಂತ, ಎಲ್ಲೋರ ಇವೆಲ್ಲ ಕ್ರಿಸ್ತಶಕದ ಆರಂಭದ ದೇವಾಲಯಗಳಾಗಿವೆ. ಮುಂಬಾಯಿಗೆ ಸಮೀಪದ ಕನ್ಹೇರಿಯಲ್ಲಿ ಕ್ರಿ.ಶ. 150-159 ರ ಕಾಲದ ಎಂಟು ಗುಹೆಗಳಿವೆ. ಅಜಂತಾದ 27 ಗುಹೆಗಳು ಪ್ರಸಿದ್ಧವಾಗಿಯೇ ಇವೆ. ಎಲ್ಲೋರದ ಗುಹಾಂತರ್ದೇವಾಲಯಗಳು ಕ್ರಿ.ಶ. 580-750ರಲ್ಲಿ ನಿರ್ಮಾಣವಾಗಿವೆ.

ನಮಗೆ ಗೊತ್ತಿರುವ ಹಾಗೆ ಕ್ರಿ.ಶ.600-630ರಲ್ಲಿ ಪಲ್ಲವರ ರಾಜ ಮಹೇಂದ್ರವರ್ಮನು ಕಲ್ಲುಗಳನ್ನು ಕಡೆದು ಗುಹಾಂತರ್ದೇವಾಲಯಗಳನ್ನು ನಿರ್ಮಿಸಿದವರಲ್ಲಿ ಮೊದಲಿಗನಾಗಿದ್ದಾನೆ. ದಕ್ಷಿಣ ಅರ್ಕಾಡು ಪ್ರದೇಶದಲ್ಲಿ ಇವನಿಗೆ ಸಂಬಂಧಿಸಿದ ಶಾಪವೊಂದು ದೊರೆಯುತ್ತದೆ. ಅದರಲ್ಲಿ ಹೀಗೆ ಹೇಳಲಾಗಿದೆ:

ಏತದನಿಷ್ಟಕಮದ್ರುಮತಲೋ
ಹಮಸುಭಂ ವಿಚಿತ್ರಚಿತ್ತೇನ
ನಿರ್ಮಾಪಿತನೃಪೇಣ ಬ್ರಹ್ಮೇ
ಶ್ವರವಿಷ್ಣುಲಕ್ಷ್ಮಿತಾಯತನಂ||

ಅಂದರೆ ವಿಚಿತ್ರಚಿತ್ತನಾದ ಈ ರಾಜನು ಇಟ್ಟಿಗೆ,ಮರ, ಗಾರೆ, ಲೋಹ ಯಾವುದನ್ನೂ ಬಳಸದೆ ಬ್ರಹ್ಮ, ವಿಷ್ಣು ಮತ್ತು ಶಿವರಿಗೆ ದೇವಾಲಯಗಳನ್ನು ಕಟ್ಟಿದ ಎಂದರ್ಥ.

ರಥಗಳು:

ದೇವಾಲಯಗಳನ್ನು ರಥಗಳೆಂದು ಕರೆಯುವ ಕ್ರಮವೂ ಇದೆ. ಮಾವುಲ್ಲಪುರಂ (ಅಥವ ಮಹಾಬಲಿಪುರಂ) ಶಿಲಾರಥಗಳೂ ಈ ಮಾದರಿಯ ಪ್ರಸಿದ್ಧ ದೇವಾಲಯಗಳು. ಇದನ್ನು ದೇವಮಯರಥ ಅಂದರೆ ದೇವರು ವಾಸಿಸುವ ಕಟ್ಟಡ ಎಂದು ಕರೆಯಲಾಗುತ್ತದೆ. ಇಲ್ಲಿರುವ ಕಟ್ಟಡಗಳೂ ಸುಂದರವಾಗಿದ್ದು ಒಂದೇ ಕೋಣೆಯನ್ನೊಳಗೊಂಡಿದೆ. ಗರ್ಭ ಗೃಹದಲ್ಲಿರುವ ಶಿಲ್ಪಿಯು ಕಡೆದ ಮೂರ್ತಿ ಮಾತ್ರವೇ ಇದೆ. ಪ್ರತಿಮೆ ಇರುವ ಕೋಣೆಗೆ ದ್ವಾರವಿದ್ದು, ಅದನ್ನು ಮುಚ್ಚುವ ವ್ಯವಸ್ಥೆ ಇಲ್ಲ. ಭಕ್ತರು ನೇರವಾಗಿ ಕೊಣೆಗೆ ಹೋಗಿ ಬರಬಹುದು. ಚೌಕಾಕಾರದ ತಳವಿನ್ಯಾಸ, ನಾಲ್ಕು ಮೂಲೆಗೂ ಇಳಿಬಿಟ್ಟಿರುವ ಸೂರು, ಇದು ಸ್ತೂಪದ ಮುಂದುವರೆದ ರೂಪವಾಗಿದೆ. ಸ್ತೂಪದ ನಾಲ್ಕೂ ತೋರಣಗಳು ಇಲ್ಲಿ ನಾಲ್ಕು ದ್ವಾರಗಳಾಗಿವೆ. ದೇವಾಲಯದ ಕಲ್ಪನೆಯಲ್ಲಿ ಈ ರಥಗಳು ಒಂದು ಹೆಜ್ಜೆ ಮುಂದುವರೆದಿವೆ. ಈ ದೇವಾಲಯಗಳು ಸಣ್ಣವಿದ್ದು ಒಂದು ಸಲಕ್ಕೆ ಒಬ್ಬನು ಮಾತ್ರ ಅರ್ಚನೆಗೆ ಹೋಗಬಹುದಾಗಿದೆ. ಅಂದರೆ ದೇವಾಲಯಗಳ ಮುಂದೆ ಜನ ಸಾಲುಗಟ್ಟಿ ನಿಲ್ಲುವ ಕ್ರಮ ಇನ್ನೂ ಬೆಳೆದಿರಲಿಲ್ಲವೆಂದು ಇದರರ್ಥವಾಗಿದೆ. ಹಾಗೆ ನೋಡಿದರೆ ಶಾಸ್ತ್ರಗಳ ಪ್ರಕಾರ ಗರ್ಭಗುಡಿಯೇ ನಿಜವಾದ ದೇವಾಲಯವಾಗಿದೆ.

ಮುಂದುವರೆಯುತ್ತದೆ…..

16 ಟಿಪ್ಪಣಿಗಳು Post a comment
 1. ವಲವಿ
  ಆಕ್ಟೋ 9 2016

  ಮಾಧವ ಸರ್ ಪ್ರೌಢದೇವರಾಯ ಅಥವಾ ಕೃಷ್ಣದೇವರಾಯ ಇವರಾರೂ ಮೇಲ್ಜಾತಿಯವರಲ್ಲ. ಆದರೂ ಇವರಿಗೆ ಉಡುಪಿಯ ಅಥವಾ ತಿರುಪತಿಯ ದೇವಸ್ಥಾನ ಪ್ರವೇಶ ನಿಷೇಧಿಸಿದ್ದು ನಮಗೆ ಕಾಣುವದಿಲ್ಲ. ಎಲ್ಲಿಯೂ ಈ ಬಗ್ಗೆ ಉಲ್ಲೇಖವನ್ನೂ ಮಾಡಿಲ್ಲ. ಆದರೆ ಅದೇ ಜಾತಿಯವರಾದ ಕನಕರಿಗೆ ಯಾಕೆ ನಿಷೇಧಿಸುತ್ತಾರೆ?? ಮೇಲಿನವರು ಪ್ರಭುಗಳಾದ್ದರಿಂದ ಪ್ರವೇಶ ಪಡೆದರೆಂದುಕೊಂಡರೂ ಕೂಡ ಕನಕರೂ ಪಾಳೇಗಾರರಾಗಿದ್ದರಲ್ಲಾ?? ಅವರೂ ಪ್ರಭುತ್ವದ ಒಂದಂಗವೇ ಆಗಿರುವಾಗ ಅವರನ್ನಷ್ಟೇ ಏಕೆ ದೇವಸ್ಥಾನಕ್ಕೆ ನಿಷೇಧಿಸಲಾಯಿತು??

  ಉತ್ತರ
  • Shripad
   ಆಕ್ಟೋ 9 2016

   ವಲವಿಯವರೇ ಇದಿನ್ನೂ ಭಾಗ ಒಂದು. ತಾಳಿ…ಇನ್ನೂ ಇದೆ. ಪೂರ್ತಿ ಓದಿ ಆಮೇಲೆ ಪ್ರಶ್ನೆ ಕೇಳುವಿರಂತೆ…ಮುಂದೆ ಏನೇನು ಸಮರ್ಥನೆಗಳಿವೆಯೋ?!

   ಉತ್ತರ
   • Sheshagiri
    ಆಕ್ಟೋ 10 2016

    ಇಂದಿಗೂ ಮಹಾಪೂಜೆಯ ಕಾಲದಲ್ಲಿ ಮಾತ್ರ ಪುರುಷರು ಅಂಗಿಧರಿಸಿ ಒಳಗೆ ಬರಬಾರದೆಂಬ ನಿಯಮವನ್ನು ಅಲ್ಲಿ ಪಾಲಿಸಲಾಗುತ್ತದೆ. 1950 ರ ಸುಮಾರಿನವರೆಗೆ ಮಹಾಪೂಜೆಯ ಸಮಯದಲ್ಲಿ ಬ್ರಾಹ್ಮಣೇತರರನ್ನು ಒಳಗೆ ಬಿಡುತ್ತಿರಲಿಲ್ಲ. ಈಗಿನ ಪೇಜಾವರಶ್ರೀಗಳು ಆ ಸಮಯದಲ್ಲೂ ಎಲ್ಲರೂ ಮಠವನ್ನು ಪ್ರವೇಶಿಸಬಹುದೆಂಬ ನಿಯಮ ಜಾರಿಗೆತಂದದ್ದು. ಈ ಮಹಾಪೂಜೆ ನಡೆಯುವುದು ಸುಮಾರು ಐವತ್ತು ನಿಮಿಷದಿಂದ ಒಂದುವರೆ ಗಂಟೆಯ ಅವಧಿಯವರೆಗೆ ಮಾತ್ರ. ಉಳಿದಂತೆ ಬೆಳಿಗ್ಗೆ ಬಾಗಿಲು ತೆರೆದ ಕಾಲದಿಂದ ಮಹಾಪೂಜೆಯವರೆಗೆ, ಮತ್ತು ಮಹಾಪೂಜೆಯ ನಂತರ ರಾತ್ರಿಯ ಆರತಿಯು ಮುಗಿಯುವವರೆಗೆ, ಎಲ್ಲರಿಗೂ ಪ್ರವೇಶವಿತ್ತು. ಇಂದಿಗೂ ಉಡುಪಿಯಲ್ಲಿರುವ ಹಳೆಯ ತಲೆಮಾರಿನವರಿಂದ ಇದನ್ನು ಖಚಿತಪಡಿಸಿಕೊಳ್ಳಬಹುದು. ಪ್ರಾಯ: ಮಧ್ಯಾಹ್ನದ ಸಮಯದಲ್ಲಿ ಕನಕದಾಸರಿಗೆ ಪ್ರವೇಶವನ್ನು ತಡೆದಿರುವ ಸಾಧ್ಯತೆ ಇರಬಹುದು. ಪರಸ್ಥಳದವರಾದ ಕನಕರಿಗೆ ಅಲ್ಲಿನ ವ್ಯವಸ್ಥೆಗಳ ಪರಿಚಯ ಇಲ್ಲದಿರಲೂ ಬಹುದು. ಹಾಗೆಂದು ಮಹಾಪೂಜೆಯ ಹೊರತು ಇನ್ನುಳಿದ ಸಮಯದಲ್ಲಿ ಪ್ರವೇಶ ಇರಲಿಲ್ಲ ಎಂಬುದಕ್ಕೆ ಯಾವ ಪುರಾವೆಯೂ ಸಿಗುವುದಿಲ್ಲ. ಮಠದ ಮಹಾಪೂಜೆ ಅವರ ಖಾಸಗೀ ಕಾರ್ಯಕ್ರಮ. ಅಂದಿಗೂ ಇಂದಿಗೂ ದೇವರ ಬೃಹತ್ ರಥವನ್ನು ಜಾತಿಭೇದವಿಲ್ಲದೇ ಎಲ್ಲರೂ ಎಳೆಯುತ್ತಿದ್ದಾರೆ.

    ಇನ್ನು ಕೃಷ್ಣಪ್ರತಿಮೆಯ ಸ್ಥಳಾಂತರ ವಿಷಯದ ಕುರಿತು ಹೇಳುವುದಾದರೆ, ಮೇಲೆ ನಿಮ್ಮ ಲೇಖನದಲ್ಲಿ ಉಲ್ಲೇಖಿಸಿದಂತೆ ನಡೆದಿರುವುದೂ ಸೇರಿ ೫-೬ ಬಾರಿ ತೆಗೆದು ಮತ್ತೆ ಅದೇ ಜಾಗದಲ್ಲಿ ಪ್ರತಿಷ್ಠಾಪಿಸಲಾಗಿದೆ. ಆದರೆ ಮಠದ ವಾಸ್ತುವನ್ನು ಮಾತ್ರ ಬದಲಿಸಿಲ್ಲ. ಇದಕ್ಕೂ ಸಾಕಷ್ಟು ದಾಖಲೆಗಳಿವೆ. ದಾಖಲೆಗಳ ಪ್ರಕಾರ ಕೃಷ್ಣವಿಗ್ರಹ ಪ್ರತಿಷ್ಠಾಪಿತವಾಗಿರುವುದೇ ಪಶ್ಚಿಮಕ್ಕೆ. ಕನಕರ ಭಕ್ತಿಗೆ ಮೆಚ್ಚಿ ಎದುರಿನ ಗೊಡೆಯಲ್ಲಿ ಬಿರುಕು ಕಂಡು ಅದರಲ್ಲಿ ಕನಕದಾಸರಿಗೆ ಮಹಾಪೂಜೆಯ ಕಾಲದಲ್ಲಿ ದರ್ಶನವಾಗಿತ್ತೆಂಬುದು ಐತಿಹ್ಯ. ಸಿನೆಮಾದಲ್ಲೂ ಮಹಾಪೂಜೆಯ ಸಮಯವನ್ನೇ ಉಲ್ಲೇಖಿಸಿದರೂ ನೋಡುಗರಲ್ಲಿ ಥ್ರಿಲ್ ಉಂಟುಮಾಡುವ ಹಾಗೆ ಪ್ರತಿಮೆಯನ್ನು ತಿರುಗಿಸಿದರು. ಮಹಾಪೂಜೆಯ ಹೊರತು ಉಳಿದ ಕಾಲದಲ್ಲಿ ಎಲ್ಲರಿಗೂ ಇದ್ದ ಪ್ರವೇಶದ ಬಗ್ಗೆ ದಿವ್ಯ ಮೌನ ವಹಿಸಿದರು. ಅದ್ಯಾರು ಕೃಷ್ಣ ತಿರುಗಿದನೆಂಬ ಕಥೆಯನ್ನು ಹುಟ್ಟಿಸಿದರೋ ಗೊತ್ತಿಲ್ಲ. ಸಿನೆಮಾ ಬರುವ ವರೆಗೆ ಉಡುಪಿಯ ಹಿರಿಯ ಊರಿನವರಿಗೇ ಅಂಥದ್ದೊಂದು ಘಟನೆನಡೆದ ಬಗ್ಗೆ ಪರಿಚಯವಿರಲಿಲ್ಲ. 1948 ರ ಸುಮಾರಿನಲ್ಲಿ ಘಟ್ಟದ ಮೇಲಿನ ಮುದ್ರಕರು ಯಾರೋ ಮುದ್ರಿಸಿದ್ದ ಕಿರುಹೊತ್ತಿಗೆ ಪ್ರಮಾಣವಾಗುವುದಾದರೆ ಇತಿಹಾಸ ಸಂಶೋಧನೆಗಳಿಗೆ ಬೆಲೆಇಲ್ಲವಾಗುತ್ತದೆ. ಇನ್ನು ಸಿನೆಮಾವನ್ನೇ ಇತಿಹಾಸವೆಂದು ನಂಬಿ ಮಾತನಾಡುವ ಮೇಧಾವಿಗಳಿಗೆ ಏನು ಹೇಳಿದರೂ ಅರ್ಥವಾಗುವುದಿಲ್ಲ.

    ಕೆಲವರು ವಾಮಪಂಥೀಯರಿಗೆ ಬ್ರಾಹ್ಮಣರವಿರುದ್ಧ ದಲಿತರನ್ನು ಎತ್ತಿಕಟ್ಟಲು ಈ ಸಿನೆಮಾದ ದೃಶ್ಯವೇ ಪ್ರಧಾನವಾಯಿತು. ಇನ್ನು ಕೆಲವರು ಇದನ್ನು ರಾಜಕೀಯಕ್ಕಾಗಿ ಬಳಸಿಕೊಂಡು ತಮ್ಮ ಬೇಳೆಬೇಯಿಸಿಕೊಳ್ಳಲು ಸಾಕಷ್ಟು ಇಲ್ಲಸಲ್ಲದ್ದನ್ನು ಹೇಳಿ-ಹೇಳಿಸಿ ತಮಗಾಗಬೇಕಾದ ಲಾಭವನ್ನು ಪಡೆದುಕೊಂಡರು. ಇವತ್ತಿಗೂ ಈ ವಿಷಯ ಅವರ ರಾಜಕೀಯ ಸಾಧನೆಗೆ ಮೆಟ್ಟಿಲು ಅನ್ನುವ ಭಾವ ಗಟ್ಟಿಯಾಗಿರುವುದರಿಂದಲೇ ಮತ್ತೆ ಮತ್ತೆ ಇದನ್ನು ಕೆದಕಿದಂತೆ ಮಾಡಿ ತಮ್ಮ ಸ್ವಾರ್ಥಕ್ಕೆ ಉಪಯೋಗಿಸಿಕೊಂಡು ಅಮಾಯಕರ ಹಾದಿತಪ್ಪಿಸುತ್ತಿದ್ದಾರೆ. ಅದಕ್ಕಾಗಿಯೇ ಉಡುಪಿ ಚಲೋ ಇತ್ಯಾದಿಗಳು ನಡೆಯುತ್ತಿರುವುದು…. ಅಮಾಯಕರು ಪಾಪ ಇವರ ಮಾತನ್ನು ನಂಬಿ ಸುಮ್ಮನೇ ಬ್ರಾಹ್ಮಣ ಜನಾಂಗವನ್ನೇ ದ್ವೇಷಿಸುತ್ತಾರೆ. ಸತ್ಯ-ಸಂಶೋಧನೆಗಳು ಇವರ್ಯಾರಿಗೂ ಬೇಡ. ಸಂಶೋಧನೆಗಳು ನಡೆದರೆ ಇವರ ಬುಡಕ್ಕೇ ಕೊಡಲಿ ಬೀಳುತ್ತದೆಂಬುದು ಸುಳ್ಳರಿಗೆ ಗೊತ್ತು, ಹಾಗಾಗಿ ಮತ್ತೊಂದು ಮಗದೊಂದು ಸುಳ್ಳನ್ನು ಬಿತ್ತುತ್ತಿರುತ್ತಾರೆ; ಸತ್ಯವನ್ನೇ ಸುಳ್ಳೆಂದು ಜರಿಯುತ್ತಾರೆ. ನಿದ್ರೆ ಬಂದಂತೆ ನಟಿಸುವವರನ್ನು ಎಬ್ಬಿಸಲು ಸಾಧ್ಯವಿಲ್ಲ.

    ಉತ್ತರ
 2. ಶೆಟ್ಟಿನಾಗ ಶೇ.
  ಆಕ್ಟೋ 9 2016

  ಉಡುಪಿ ಕೃಷ್ಣ ಮಠದವರು ಮಹಾಭಕ್ತ ಕನಕದಾಸಜಿ ಅವರಿಗೆ ಮಾಡಿದ ಐತಿಹಾಸಿಕ ಶೋಷಣೆ ಹಾಗೂ ಅಪಚಾರಕ್ಕೆ ಪ್ರಾಯಶ್ಚಿತ್ತವಾಗಿ ಸಾರ್ವಜನಿಕವಾಗಿ ಕ್ಷಮೆಯನ್ನು ಯಾಚಿಸತಕ್ಕದ್ದು. ಹಾಗೂ ಮಠದ ನಿರ್ವಾಹಕರನ್ನಾಗಿ ಕುರುಬ ಜಾತಿಗೆ ಸೇರಿದ ಜಾತ್ಯತೀತರನ್ನು ನೇಮಿಸತಕ್ಕದ್ದು. ಪರ್ಯಾಯದ ಸಮಯದಲ್ಲಿ ಕುರುಬ ಜಾತಿಯ ಬಡವರನ್ನು ಕರೆದು ಮಠದ ಒಳಗೆ ಅವರಿಗೆ ಭೋಜನವನ್ನು ಬಡಿಸಿ ಅವರ ಎಂಜಲೆಲೆಗಳ ಮೇಲೆ ಗಿಂಡಿಮಾಣಿಗಳು ಮಡೆಸ್ನಾನ ಮಾಡಿದರೂ ಅಡ್ಡಿಲ್ಲ.

  ಉತ್ತರ
  • ಆಕ್ಟೋ 11 2016

   ಬಂದ ಮತ್ತೆ ಕಡ್ಡಿನಾಗ,ಬಿಟ್ಟಿ ಸಲಹೆ ಕೊಡಕ್ಕೆ. ಉಡುಪಿ ಮಠ ಗಂಜಿಗಿರಾಕಿಗಳಿಗೆ ಕೊಟ್ಟ ಭಾಗ್ಯಗಳಂತಲ್ಲ. ಅದಕ್ಕೆ ಯೋಗ್ಯತೆ ಬೇಕು- ವಿದ್ಯೆ,ಸಂಸ್ಕಾರ,ವಿನಯ, ಪಾಂಡಿತ್ಯ,ಎಲ್ಲಾ ಇರಬೇಕು.ತರಕಲಾಂಡಿ ಪತ್ರಿಕೋದ್ಯಮ ಮಾಡಿ ಪಡಪೋಷಿ ಪೇಪರ್ಗಳಲ್ಲಿ ಯಾವುದೋಚಾಡ್ಡಕಸುಬಿ ಲೇಖನ ಗೀಚಿದವರಿಗೆ ಇದೆಲ್ಲಾ ತಿಳಿಯೋಲ್ಲ. ತಾವು ಬಾಯಿಬಿಟ್ಟು ಬಣ್ಣಗೇಡು ಮಾಡಿಸಿಕೊಳ್ಳದೇ ಇರತಕ್ಕದ್ದು.

   ಉತ್ತರ
   • ಶೆಟ್ಟಿನಾಗ ಶೇ.
    ಆಕ್ಟೋ 11 2016

    ಕನಕದಾಸಜಿ ಅವರ ಶೋಷಣೆ ಅಪಮಾನ ಮಾಡಿದವರ ಯೋಗ್ಯತೆ, ಸಂಸ್ಕಾರ, ವಿನಯ ಎಲ್ಲರಿಗೂ ಗೊತ್ತೇ ಇದೆ. ವಿದ್ಯೆ ಹಾಗೂ ಪಾಂಡಿತ್ಯವನ್ನು ದೀನದಲಿತರ ಸಾಮಾಜಿಕ ಶೋಷಣೆಗೆ ದುಡಿಸಿಕೊಂಡವರ ಬಗ್ಗೆ ಹೇಸಿಗೆ ರೇಜಿಗೆ ಆಗುತ್ತದೆ. ಮಿ. ಸುದರ್ಶನ ರಾವ್, ಶೂದ್ರ/ದಲಿತ/ಸ್ತ್ರೀ ವರ್ಗದವರಿಂದ ಅಕ್ಷರಜ್ಞಾನವನ್ನು ಸಹಸ್ರಮಾನಗಳಿಂದ ಮುಚ್ಚಿಟ್ಟವರ ಹುನ್ನಾರ ಬಯಲಾಗಿ ಸಾಕಷ್ಟು ಸಮಯವಾಗಿದೆ. ಪತ್ರಿಕೋದ್ಯಮವನ್ನು ಬ್ರಾಹ್ಮಣ್ಯಮುಕ್ತವಾಗಿಸುವ ಹೋರಾಟ ಯಶಸ್ವಿಯಾಗಿದ್ದರೂ ನವಮಾಧ್ಯಮಗಳ ಮೂಲಕ ಶಿಲಾಯುಗದ ಸಂಸ್ಕೃತಿಯ ಪ್ರಸರಣ ಮಾಡುತ್ತಿರುವವರಿಗೆ ಮದ್ದು ನೀಡಬೇಕಾಗಿದೆ.

    ಉತ್ತರ
    • ಆಕ್ಟೋ 11 2016

     ಅಯ್ಯೋ ಜಂತು ಹುಳವೇ,ಒಂದೇ ಒಂದು ತೂಕದ ಲೇಖನ ಬರೆಯದ ಬರೀ ಬಿಟ್ಟಿ ಸಲಹೆ ನೀಡುವ ಪಡಪೋಷಿ ಪತ್ರಕರ್ತನೆಂದು ಬೀಗುವ ಅಯೋಗ್ಯ,. ನೀನು ವಿದ್ಯೆ ಕಲಿತು ಆದ ಸಾರ್ಥಕತೆಯಾದರೂ ಏನು. ಸಿನಿಮಾದಲ್ಲಿ ತೋರಿಸಿದ್ದನ್ನು ನಂಬುವ ಹುಂಬನಾಗನೇ, ಅದೇ ಸಿನಿಮಾದಲ್ಲಿ ವ್ಯಾಸರಾಯರು ಕನಕನಿಗೆ ಕೊಡುವ ಪ್ರಾಶಸ್ತ್ಯ ನಿನ್ನ ಕುರುಡುಗಣ್ಣಿಗೆ ಕಾಣಲಿಲ್ಲವೇ? ಕೊಚ್ಚೆಯ ಹುಳುವಾದ ನಿನಗೆಚಾವೆಲ್ಲಾ ಪಥ್ಯವಾಗದು. ಅಷ್ಟಕ್ಕೂ ಕನಕದಾಸರ ಹೆಸರನ್ನು ಸಾಹಿತ್ಯಕವಾಗಿ,ಧಾರ್ಮಿಕವಾಗಿ,ಪಾರಮಾರ್ಥಿಕವಾಗಿ ಜೀವಂತವಾಗಿ ಇಟ್ಟಿರುವವರೇ ಬ್ರಾಹ್ಮಣರು. ನಿನ್ನಂತೆ ಗಂಜಿ ಗುಂಜಲು ಅವರ ಹೆಸರು ಬಳಕೆ ಮಾಡಲಿಲ್ಲ. ಅವರ ಕೃತಿಗಳನ್ನು ಹಾಡಿ,ಪ್ರಚಾರ ಮಾಡಿ ಅವರ ಹೆಸರನ್ನು ಅಜರಾಮರ ಮಾಡಿದವರು ಬ್ರಾಹ್ಮಣರು. ಅದೆಲ್ಲಾ ನಿನಗೆಲ್ಲಿ ತಿಳಿಯಬೇಕು,ಹೋಗು ಬಿಟ್ಟಿ ಗಂಜಿ ಸಿಗಬಹುದು.

     ಉತ್ತರ
     • ಶೆಟ್ಟಿನಾಗ ಶೇ.
      ಆಕ್ಟೋ 12 2016

      “ವ್ಯಾಸರಾಯರು ಕನಕನಿಗೆ ಕೊಡುವ ಪ್ರಾಶಸ್ತ್ಯ”

      ಬ್ರಾಹ್ಮಣರು ಭಿಕ್ಷೆ ಕೊಟ್ಟದ್ದನ್ನು ಶೂದ್ರರು ಸ್ವೀಕರಿಸಬೇಕು ಎಂಬ ನಿಮ್ಮ ಧೋರಣೆ ಖಂಡನೀಯ.

      ಉತ್ತರ
     • ಶೆಟ್ಟಿನಾಗ ಶೇ.
      ಆಕ್ಟೋ 12 2016

      “ಅಯ್ಯೋ ಜಂತು ಹುಳವೇ”

      ಬ್ರಾಹ್ಮಣೇತರರ ಬಗ್ಗೆ ವೈದಿಕರಿಗೆ ಎಂತಹ ಭಾವನೆ ಇದೆ ಎಂದು ಸುದರ್ಶನ ರಾಯರು ಸಾರಿ ಹೇಳಿದ್ದಾರೆ! ನೋ ವಂಡರ್ ಕನಕದಾಸಜಿ ಅವರು ಇಂತಹ ಮನೋಭೂಮಿಕೆ ಇರುವ ಕೃಷ್ಣಮಠದಲ್ಲಿ ಅವಮಾನಿತರಾಗಿದ್ದು.

      ಉತ್ತರ
    • ಆಕ್ಟೋ 11 2016

     ಅಕ್ಷರ ಜ್ಞಾನ ಸಿಕ್ಕ ನಿನ್ನಂಥ ಅಪಾತ್ರರು ಕಡಿದು ಕಟ್ಟೆಹಾಕುತ್ತಿರುವುದು ಅಷ್ಟರಲ್ಲೇ ಇದೆ ಬಿಡಯ್ಯಾ.

     ಉತ್ತರ
     • ಶೆಟ್ಟಿನಾಗ ಶೇ.
      ಆಕ್ಟೋ 12 2016

      ನಿಮ್ಮ ಮಾತಿನ ಅರ್ಥ ಶೂದ್ರರು ಅಕ್ಷರ ಜ್ಞಾನವನ್ನು ಪಡೆಯಲು ಅಪಾತ್ರರು ಅಂತಲ್ಲವೇ!

      ಉತ್ತರ
    • Goutham
     ಆಕ್ಟೋ 11 2016

     what Mr.ಶೆಟ್ಟಿನಾಗ ಶೇ. said is correct

     ಉತ್ತರ
  • shripad
   ಆಕ್ಟೋ 12 2016

   “ಕುರುಬ ಜಾತಿಗೆ ಸೇರಿದ ಜಾತ್ಯತೀತರನ್ನು ನೇಮಿಸತಕ್ಕದ್ದು” ಅಂದರೇನು ಎಂಬುದನ್ನು ಹೇಳತಕ್ಕದ್ದು! ಈತ/ಆತ ಕುರುಬ ಜಾತಿಗೆ ಸೇರಿದವನು ಎಂದ ಮೇಲೆ ‘ಜಾತ್ಯತೀತ’ ಹೇಗಾಗುತ್ತಾನೆ? ಜಾತ್ಯತೀತ ಲಿಂಗಾಯತ ಜಾತಿಗೆ ಸೇರಿದ ಜಾತ್ಯತೀತರೆ?

   ಉತ್ತರ
 3. Shripad
  ಆಕ್ಟೋ 10 2016

  ಈ ಲೇಖನ ಪೂರ್ಣವಾಗುವವರೆಗೂ ಸಲಹೆ ಕೊಡತಕ್ಕದ್ದಲ್ಲ. ದರ್ಗಾಗಳಲ್ಲಿ ದಲಿತ ಮುಲ್ಲಾಗಳನ್ನು, ಶರಣ ಮಠಗಳಲ್ಲಿ ದಲಿತ ಬುದ್ಧಿಯವರನ್ನು ಎಲ್ಲ ಕಡೆ ನೇಮಿಸಿ ಆ ಮೇಲೆ ಉಡುಪಿಗೆ ಬರತಕ್ಕದ್ದು!

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments