ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 10, 2016

ದಲಿತರ ‘ದೇಗುಲದ ಪ್ರವೇಶ’ದ ಸುತ್ತಾಮುತ್ತ… ( ಭಾಗ ೨ )

‍ನಿಲುಮೆ ಮೂಲಕ

– ಡಾ. ಮಾಧವ ಪೆರಾಜೆ

ಮಧ್ಯಕಾಲದಲ್ಲಿ ಗುಡಿಗಳು:

tirumalaದೇವಾಲಯಗಳಿಗೆ ಇದ್ದಕ್ಕಿದ್ದಂತೆ ಪ್ರಸಿದ್ಧಿ ಬಂದಿರುವುದೇ ಮಧ್ಯಯುಗದಲ್ಲಿ ಎನ್ನುವುದು ಇನ್ನೊಂದು ಗಮನಾರ್ಹ ಅಂಶವಾಗಿದೆ. ಪುರಾಣಗಳು ಕಾವ್ಯಗಳು ದೇವಾಲಯಗಳ ಕುರಿತು ಹಾಡಿಹೊಗಳುವುದಕ್ಕೆ ಈ ಕಾಲದಲ್ಲಿ ಪ್ರಾರಂಭ ಮಾಡುತ್ತವೆ. ಅಗ್ನಿಪುರಾಣದ ಪ್ರಕಾರ ದೇವಾಲಯಗಳನ್ನು ಕಟ್ಟಿಸುವ ಬಯಕೆ ಬಂತೆಂದರೆ ಸಾಕು – ಅವರ  ಪಾಪ ಪರಿಹಾರವಾಗುತ್ತದೆಯಂತೆ. ದೇವಾಲಯಕ್ಕೆ ಒಂದು ಇಟ್ಟಿಗೆಯನ್ನು ಇಟ್ಟರೆ ಅದು ಅವನಿಗೆ ಸಾಯುವಾಗ ಒಂದು ಯಜ್ಞವನ್ನು ಮಾಡಿದ ಪುಣ್ಯವನ್ನು ಕೊಡುತ್ತದೆಯಂತೆ – ಹಾಗೆಂದು ಹಯಶೀರ್ಷ ಸಂಹಿತೆ ಹೇಳುತ್ತದೆ. ಯಾವುದಾದರೊಂದು ಮಗು ಆಟದ ನೆಪದಲ್ಲಿ ಮರಳಿನಲ್ಲಿ ಗುಡಿ ಕಟ್ಟಿದರೂ ಆ ಮಗುವಿಗೆ ಸ್ವರ್ಗ ಲಭಿಸುತ್ತದೆ ಎಂದು ವಿಷ್ಣು ರಹಸ್ಯವು ತಿಳಿಸುತ್ತದೆ. ಹೀಗೆ ಇಲ್ಲಿಂದ ದೇವಾಲಯಗಳಿಗೆ ಮಹತ್ವವೂ ಪ್ರಸಿದ್ಧಿಯೂ ದೊರೆಯುತ್ತದೆ. ಶ್ರೀಮಂತರು,ಚಕ್ರವರ್ತಿಗಳು, ದಂಡನಾಯಕರು ದೇವಾಲಯಗಳನ್ನು ಕಟ್ಟಿಸುತ್ತಾರೆ. ದೇವಾಲಯಗಳನ್ನು ಕಟ್ಟಿಸುವುದು, ಅಂತಹ ದೇವಾಲಯಗಳಿಗೆ ಪೂಜಾರಿಗಳನ್ನು ನೇಮಕ ಮಾಡುವುದು, ದೇವಾಲಯಗಳ ಸಂದರ್ಶನಕ್ಕಾಗಿ ಹೋಗುವುದು, ಅಲ್ಲಿ ಪ್ರಾರ್ಥನೆ ಮಾಡುವುದು, ಯಾರು ಪೂಜೆ ಮಾಡಬಹುದು, ಮಾಡಬಾರದು ಎನ್ನುವುದು ಮೊದಲಾದವುಗಳೆಲ್ಲ ಈ ಕಾಲದಿಂದಲೇ ಆರಂಭವಾಗುತ್ತವೆ. ನಮ್ಮ ಕನಕದಾಸರು ಈ ಕಾಲದವರೆಂಬುದನ್ನು ಇಲ್ಲಿ ನೆನಪಿಸಿಕೊಳ್ಳೋಣ. ಹೀಗಾಗಿ ಮಧ್ಯಕಾಲೀನ ವಿಷಯಗಳಿಗೆ ಸಂಬಂಧಿಸಿದ ಈಗ ನಾವು ನಿರ್ದಿಷ್ಟವಾಗಿ ಕರ್ನಾಟಕಕ್ಕೆ ಮಾತ್ರ ಸೀಮಿತಗೊಳಿಸಿರುವುದರಿಂದ, ಈ ವಿವರಗಳು ಇನ್ನಷ್ಟು ಸ್ಪಷ್ಟವಾಗಬಲ್ಲವು. ಹಾಗಾದುದರಿಂದ ನಿರ್ದಿಷ್ಟವಾಗಿ ದೇವಾಲಯಕ್ಕೆ ಸಂಬಂಧಿಸಿದಂತೆ ಕರ್ನಾಟಕವನ್ನೇ ಲಕ್ಷಿಸಿ ಇನ್ನು ಮುಂದೆ ಈ ವಿಷಯವನ್ನು ಇನ್ನಷ್ಟು ವಿಸ್ತರಿಸೋಣ.

ದೇವಾಲಯಗಳು – ಕರ್ನಾಟಕದ ಸಂದರ್ಭ :

ದೇವಾಲಯಗಳ ಚರಿತ್ರೆ ಏನೇ ಇರಲಿ ಕರ್ನಾಟಕದಲ್ಲಿ ತಾಳಗುಂದದ ಪ್ರಣವೇಶ್ವರ ದೇವಾಲಯಕ್ಕಿಂತ ಹಿಂದಿನ ದೇವಾಲಯಗಳು  ಇದ್ದ ಕುರಿತು ದಾಖಲೆಗಳಿಲ್ಲ. ಅದರ ಕಾಲ ಕ್ರಿ.ಶ. 450 ಎಂದು ತಿಳಿಯಲಾಗಿದೆ. ಇದು ಶಾತಕರ್ಣಿಗಳ ಕಾಲದ್ದು. ಅನಂತರ ಧರ್ಮವೊಳಲಿನ ಅಜ್ಜಮಯ್ಯ ಕಟ್ಟಿಸಿದ ಅಜ್ಜಮೇಶ್ವರ ಶಿವದೇವಾಲಯ(ಕ್ರಿ.ಶ.1124), ಆಯಿಕಜೀಯ ಕಟ್ಟಿಸಿದ ದೇವಾಲಯ (ಕ್ರಿ.ಶ. 1141), ಬಸವಾಚಾರಿ ಕಟ್ಟಿಸಿದ ದೇವಾಲಯ(ಕ್ರಿ.ಶ. 1138), ಹೆಬ್ಬೆಯ ನಾಯಕ ಕಟ್ಟಿಸಿದ ಹೆಬ್ಬೇಶ್ವರ ದೇವಾಲಯ(ಕ್ರಿ.ಶ. 1186) ಮೊದಲಾದವು ಪ್ರಾಚೀನ ದೇವಾಲಯಗಳು. ಇವುಗಳ ಉಲ್ಲೇಖ ಶಾಸನಗಳಲ್ಲಿದೆ. ಅಷ್ಟು ಮಾತ್ರವಲ್ಲದೇ, ವಿಜಯಾದಿತ್ಯ ಸತ್ಯಾಶ್ರಯನುಕಟ್ಟಿಸಿದ ವಿಜಯಾದಿತ್ಯ ಭಟ್ಟಾರಕ (ಕ್ರಿ.ಶ.754) ದೇವಾಲಯ, ಲೋಕ ಮಹಾದೇವಿಯು ಕಟ್ಟಿಸಿದ ಲೋಕೇಶ್ವರ ಭಟ್ಟಾರ ದೇವಸ್ಥಾನ(ಕ್ರಿ.ಶ. 754), ಕೋಟೆ ಗಾವುಂಡ ಮಾಡಿಸಿದ ಕೋಟೇಶ್ವರ ದೇವಸ್ಥಾನ (ಕ್ರಿ.ಶ. 1073), ಸಿಡಿಲಂಕರಾಮ ಸ್ಥಾಪಿಸಿದ ಸಿಡಿಲೇಶ್ವರ ದೇವಾಲಯ(ಕ್ರಿ.ಶ. 967), ಒದ್ದಿರಾಜನು ಕಟ್ಟಿಸಿದ ಒದ್ದೇಶ್ವರ ದೇವಾಲಯ(ಕ್ರಿ.ಶ. 1136) ಮೊದಲಾದವು ಪ್ರಮುಖ ದೇವಾಲಯಗಳು. ಇಲ್ಲಿ ವ್ಯಕ್ತಿಗಳು ತಮ್ಮ ಹೆಸರಿನೊಂದಿಗೆ ಈಶ್ವರನನ್ನು ಸೇರಿಸಿ ಒಂದು ದೇವಾಲಯವನ್ನು ಕಟ್ಟಿಸಿರುವುದು ಗಮನಾರ್ಹವಾದುದು. ದೇವರ ಹೆಸರು ತನ್ನ ಹೆಸರಿನೊಂದಿಗೆ ಸೇರಿ ತಾನೂ ದೇವರಾಗುತ್ತಿದ್ದೇನೆ ಎನ್ನುವ ನಂಬಿಕೆಯೇ ಇದಕ್ಕೆ ಕಾರಣವಾಗಿತ್ತು. ಇದರೊಂದಿಗೆ ಧನವಂತರು ದೇವಾಲಯ ಕಟ್ಟುವುದಕ್ಕೆ ಯಾವ ನಿರ್ಬಂಧಗಳೂ ಇರಲಿಲ್ಲ ಎನ್ನುವುದನ್ನು ಗಮನಿಸಬೇಕು. ಕುಂಭಾರ ಜಾತಿಯವನಾದ ಬೊಮ್ಮಣ್ಣನು ತಲೆಯನ್ನು ತೊಳೆಯದ, ಅನ್ನವನ್ನು ಉಣದ ಪ್ರತಿಜ್ಞೆಯನ್ನು ಮಾಡಿ ಕುಂಭೇಶ್ವರ ದೇವಾಲಯವನ್ನು(ಕ್ರಿ.ಶ.1073) ಕಟ್ಟಿಸುತ್ತಾನೆ. ಲಿಂಗಶಿವಜೀಯ ಎಂಬುವನು ಭಿಕ್ಷಾಟನೆ ಮಾಡಿ, ಇಟ್ಟಿಗೆಯ ಜಟಿಂಗ ರಾಮೇಶ್ವರ ದೇವಾಲಯವನ್ನು ಶಿಲೆಯ ದೇವಾಲಯವಾಗಿ ಪರಿವರ್ತಿಸಿದನು (ಕ್ರಿ.ಶ.962).ಅದೇ ರೀತಿ ಶ್ರೀಮಂತರ ಮನೆಗಳಲ್ಲಿ ಅಡಿಗೆ ಮಾಡುತ್ತಿದ್ದವರು(ಕ್ರಿ.ಶ.1095), ದೇವಾಲಯದ ಪೂಜಾರಿಗಳು (ಕ್ರಿ.ಶ.1095) ಮೊದಲಾದವರು ದೇವಾಲಯ ಕಟ್ಟಿಸಿದರು. ಇದರಿಂದ ಕೆಳಜಾತಿಯವರು , ಬಡವರು ಮೊದಲಾದವರು ಕೂಡ ಮಧ್ಯಕಾಲದಲ್ಲಿ ದೇವಾಲಯಗಳನ್ನು ಕಟ್ಟುತ್ತಿದ್ದರೆಂಬುದು ಸ್ಪಷ್ಟ. ಕೆಳಜಾತಿಯವರು, ಬಡವರು ದೇವಾಲಯಗಳನ್ನು ಕಟ್ಟುತ್ತಿದ್ದರೆಂದಮೇಲೆ ಅಂತಹ ದೇವಲಯಗಳಿಗೆ ಮುಕ್ತ ಪ್ರವೇಶವೂ ಇರುತ್ತಿತ್ತು ಎಂದು ಅರ್ಥ ತಾನೆ ?

ದೇವಾಲಯಗಳಲ್ಲಿ ಯಾರಾರಿಗೆ ? ಎಲ್ಲೆಲ್ಲಿಗೆ ಪ್ರವೇಶ? :

ಈಗ ನಾವು ದೇವಾಲಯ ಪ್ರವೇಶ ಎನ್ನುವ ವಿಷಯವನ್ನು ಚಾರಿತ್ರಿಕವಾಗಿ ಅಧ್ಯಯನ ಮಾಡುವ ಸಂದರ್ಭದಲ್ಲಿ ಬಂದು ನಿಂತಿದ್ದೇವೆ. ಈ ವಿಷಯವನ್ನು ನೇರವಾಗಿ ಎತ್ತಿಕೊಳ್ಳುವ ಮೊದಲು ಅದಕ್ಕೆ ಹಿನ್ನೆಲೆಯಾಗಿ ಕೆಲವು ವಿವರಗಳನ್ನು ಗಮನಿಸಬೇಕು. ಮೊದಲನೆಯದಾಗಿ ದೇವಾಲಯಗಳಲ್ಲಿ ಕ್ರಿ.ಶ. 10ನೆಯ ಶತಮಾನಕ್ಕಿಂತ ಮೊದಲು  ದೇವಲಯಗಳಲ್ಲಿ ‘ಅಂಗಭೋಗ’ ಮಾತ್ರವೇ ನಡೆಯುತ್ತಿತ್ತು. ಅಂದರೆ ದೇವಾಲಯದ ಗರ್ಭಗುಡಿಯಲ್ಲಿ ದೇವರ ಮೂರ್ತಿಯ ಅಲಂಕಾರ, ಪೂಜೆ, ಮಂತ್ರಪಠಣ ಇತ್ಯಾದಿ ಮಾತ್ರವೇ ಆಗ ಪ್ರಚಲಿತದಲ್ಲಿತ್ತು. ಏಕೆಂದರೆ ಆಗ ದೇವಾಲಯಗಳ ರಚನೆಗಳು (ಆಗಲೇ ಹೇಳಿದಂತೆ) ತುಂಬ ಸರಳವಾಗಿದ್ದವು. ಕೇವಲ ಗರ್ಭಗುಡಿಗಳಷ್ಟೇ ಇರುತ್ತಿತ್ತು. ಹಾಗೂ ಅದನ್ನೇ ದೇವಾಲಯ ಎಂದು ತಿಳಿಯಲಾಗುತ್ತಿತ್ತು.  ಗರ್ಭಗುಡಿಯಲ್ಲಿ ಪೂಜಾರಿಗಷ್ಟೇ ಕೆಲಸವಿರುತ್ತಿದ್ದರಿಂದ  – ಬೇರೆಯವರಿಗೆ ಅಲ್ಲಿ ಪ್ರವೇಶ ಮಾಡುವ ಸಾಧ್ಯತೆಯಾಗಲೀ, ಅವಶ್ಯಕತೆಯಾಗಲೀ ಇರುತ್ತಿರಲಿಲ್ಲ. ಸಾರ್ವಜನಿಕರು ಹೊರಗಿನಿಂದಲೇ ದೇವರ ದರ್ಶನ ಮಾಡುತ್ತಿದ್ದರು. ಆದುದರಿಂದ ಅಂಗಭೋಗ ಮಾತ್ರವೇ ಇರುತ್ತಿದ್ದ ಕಾಲದಲ್ಲಿ ಸಾರ್ವಜನಿಕರು ದೇವಾಲಯವನ್ನು ಪ್ರವೇಶ ಮಾಡುವ ಬಿಡುವ ಪ್ರಶ್ನೆಯೇ ಇರುತ್ತಿರಲಿಲ್ಲ. ಪೂಜಾರಿಯ ಹೊರತು ಸಾರ್ವಜನಿಕರಾರೂ ದೇವಾಲಯಗಳಿಗೆ ಪ್ರವೇಶಿಸುವಂತಿಲ್ಲ. ಅದು ಈಗಲೂ ಹಳ್ಳಿಗಳಲ್ಲಿರುವ ಸಣ್ಣ ಗುಡಿಗಳಲ್ಲಿರುವ ಪದ್ಧತಿಯಾಗಿದೆ ಎನ್ನುವುದನ್ನು ಈ ಸಂದರ್ಭದಲ್ಲಿ ನೆನಪು ಮಾಡಬಹುದು.

ಅಂಗಭೋಗಕ್ಕಿಂತ ಭಿನ್ನವಾದ, ರಂಗಭೋಗ ಎನ್ನುವ ಸಂಪ್ರದಾಯವು ಕ್ರಿ.ಶ. 10ನೆಯ ಶತಮಾನದ ಅನಂತರ ವಿಶೇಷವಾಗಿ ಬೆಳೆದು ಬಂದಿರುವುದನ್ನು ನಾವು ಗಮನಿಸಬಹುದು. ದೇವಾಲಯಗಳು ಗರ್ಭಗುಡಿಯಿಂದ ವಿಸ್ತರಿಸಿ ಸುಖನಾಸಿ, ನವರಂಗ, ಈ ನವರಂಗಗಳಿಗೆ ಮತ್ತೆ ಏಕದ್ವಾರ, ದ್ವಿದ್ವಾರ, ತ್ರಿದ್ವಾರ, ಗೋಪುರ, ಪ್ರಾಕಾರ, ಗರುಡಗಂಭ, ಧ್ವಜಸ್ಥಂಭ ಹೀಗೆ ಬೆಳೆಯುತ್ತಾ ಬಂದಂತೆ ರಂಗಭೋಗ ಎನ್ನುವ ಪದ್ಧತಿ ಬೆಳೆಯುತ್ತಾ ಬಂದಿತು. ರಂಗಭೋಗವೆಂದರೆ ದೇವತಾ ಮೂರ್ತಿಯ ಮುಂದೆ ಸೇವಾರ್ಥವಾಗಿ  ನಡೆಯುವ ಗೀತ ಮತ್ತು ನರ್ತನಗಳಾಗಿವೆ. ದೇವಾಲಯಗಳು ಹೀಗೆ ಬೆಳೆಯುತ್ತಾ ಹೋದಂತೆ ಬೃಹದಾಕಾರವಾಗಿ ಗರ್ಭಗುಡಿಯು ಸಾರ್ವಜನಿಕರಿಂದ ದೂರವಾಗತೊಡಗಿತು. ಈ ಉಪನ್ಯಾಸದ ವಿಷಯಕ್ಕೆ ಸಂಬಂಧಿಸಿದಂತೆ ರಂಗಭೋಗ – ಅಂದರೆ ದೇವಾಲಯಕ್ಕೆ ಸಂಬಂಧಿಸಿದ  – ನವರಂಗದಿಂದ ಸಮಸ್ಯೆ ಬಿಗಡಾಯಿಸುತ್ತದೆ ಎಂದೆನಿಸುತ್ತದೆ. ಆ ವಿಷಯವನ್ನು ನಾನು ಇನ್ನಷ್ಟು ವಿಸ್ತರಿಸುವುದರಿಂದ ನವರಂಗದ ಕಲ್ಪನೆ ಬಂದ ಬಳಿಕ ದೇವಾಲಯದೊಂದಿಗೆ ಕೆಳಜಾತಿಯವರ ಹಾಗೂ ಸಾರ್ವಜನಿಕರ ಸಂಬಂಧ ಹೇಗಿತ್ತೆಂಬುದನ್ನು ಈಗ ನಿರ್ದಿಷ್ಟವಾಗಿ ಚರ್ಚೆಗೆ ಎತ್ತಿಕೊಳ್ಳೋಣ:

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಶಾಸನವೊಂದು ಹೀಗೆ ಸಾರುತ್ತದೆ :
ಸ್ವಸ್ತಿಶ್ರೀ ಶ್ರೀಮದ್ರಾಜಗುರು ವಾಮಶಕ್ತಿ ದೇವರುಂ ತಚ್ಛಿಶ್ಯ ಜ್ಞಾನಶಕ್ತಿ ದೇವರುಂ ಪ್ಲವ ಸಂವತ್ಸರ ಮಾರ್ಗಶಿರ ಬಂ ಸೋ| ಪಾತ್ರದ……. ಮಲ್ಲವೆಗವಾ ಮದ್ದಳೆ ಮಾದಿಗಂ ದೇವುತ ವೃತ್ತಿಯಾಗಿ ಸ್ಥಳ ವೃತ್ತಿ ಹಕ್ಕಳೆಯೊಲ್ಕೊಟ್ಟ ಗದ್ದೆ ಮತ್ತೆರಡು ರೊಕ್ಕ ಪುರದೊಳ್ಮನೆ ಮೂರಕವಾ ಚಂದ್ರಾರ್ಕನ್ನಡವರ್

ಈ ಶಾಸನದ ಕಾಲ ಕ್ರಿ.ಶ. 12ನೇ ಶತಮಾನ. ದೇವಾಲಯದಲ್ಲಿ ರಂಗಭೋಗದ ಕಲ್ಪನೆ ಸದೃಢವಾಗಿದ್ದ ಕಾಲವಿದು. ದೇವಾಲಯದಲ್ಲಿ ರಂಗಭೋಗ ನಡೆಯುವಾಗ ಮದ್ದಳೆ ಬಾರಿಸುತ್ತದ್ದ ಮಾದಿಗ ಜಾತಿಯ ವೃತ್ತಿಯೊಬ್ಬನಿಗೆ ದಾನವಾಗಿ ಗದ್ದೆಯನ್ನು ದಾನ ಮಾಡಿರುವುದನ್ನು ಈ ಶಾಸನವು ಉಲ್ಲೇಖಿಸುತ್ತದೆ. ಉತ್ತರ ಕರ್ನಾಟಕದ ದೇವಾಲಯಗಳಲ್ಲಿ ವಾದ್ಯ-ಮದ್ದಳೆ ನುಡಿಸುವವರು ಇಂದಿಗೂ ಮಾದಿಗ, ಕೊರವ, ಹೊಲೆಯ ಮೊದಲಾದ ದಲಿತರೇ ಆಗಿದ್ದಾರೆ. ಈ ಸಂಪ್ರದಾಯ ಹಿಂದಿನಿಂದಲೂ ನಡೆದು ಬಂದಿದೆ ಎನ್ನುವುದನ್ನು ಈಗ ಉಲ್ಲೇಖಿಸಿದ ಶಾಸನ ತಿಳಿಯ ಪಡಿಸುತ್ತದೆ. ಹಾಗೆಯೇ ದೇವಾಲಯದ ಪ್ರಮುಖ ಭಾಗವಾದ ನವರಂಗಕ್ಕೆ ಅವರಿಗೆ ಅವಕಾಶವಿತ್ತೆಂದು ಇದರಿಂದ ಸ್ಪಷ್ಟವಾಗುತ್ತದೆ. ಅದೂ ಅಲ್ಲದೇ ಸೂಂಡಿಯ ಶಾಸನವೊಂದು (ಈಗಿನ ಸೂಡಿ, ಗದುಗ ಜಿಲ್ಲೆ) ಪ್ರಸಿದ್ಧ ಶಾಸನವೊಂದು (ಕ್ರಿ.ಶ. 1054) ಹೀಗೆ ಹೇಳುತ್ತದೆ.(ಎಪಿಗ್ರಫಿಯಾ ಇಂಡಿಕಾ,ಸಂ.16 .ಶಾ.ಸಂ.6.)

… ಎಡವಕ್ಕದ ಕೇರಿಯ ಮೊದಲ ದೆಸೆಯ ಬಿಟ್ಟಿಯ ಚಾಮರದ ಸೂಳೆಬ್ಬೆಗೆ ಮತ್ತರು 11 ಪೆರ್ಗಡೆ ಬಳ ಮುಖ್ಯಂಗೆ ಮತ್ತರು 15 ಬಲದ ದೆಸೆಯ ಮೊದಲ ಕಂಭದ ಸೂಳೆ ರೇವಕಬ್ಬೆಗೆ ಮತ್ತರು 15 ಅಲ್ಲಿಯ ಸೂಳೆ ಗುಬ್ಬಿಯ ಚಾವುಂಡಬ್ಬೆಗೆ ಮತ್ತರ್ 15 ಬಲದ ದೆಸೆಯ ಬಿಟ್ಟಿಯ ಚಾಮರದ ಸೂಳೆ……ಬ್ಬೆಗೆ ಮತ್ತರ್ 12 ಎಡÀ ದೆಸೆಯ ಕೇರಿಯ ಚಾಮರದ ಸೂಳೆ ಗುಬ್ಬಿಯ ಕೇತಬ್ಬೆಗೆ ಮತ್ತರ್ 12 ಬಲ ದೆಸೆಯ ಪಾತ್ರಂ ಸೂಳೆ…..ಬ್ಬೆಗೆ ಮತ್ತರ್ 13 ಎಡದ ದಸೆಯ ಪಾತ್ರಂ ಸೂಳೆ ಮತ್ತರ್ 12 ಎಡ ಪಕ್ಕದ ಕೇರಿಯ ಸೂಳೆ ಮೈಲಬ್ಬೆಗೆ ಮತ್ತರ್ 1(2) ಬಲಪಕ್ಕದ ಕೇರಿಯ ಸೂಳೆ ಜಾಕಬ್ಬೆಗೆ ಮತ್ತರ್ 12 ……..ಇಂತೀ ಮರ್ಯಾದೆಯಂ ತಪ್ಪದೇ ಪ್ರತಿಪಾಳಿ………….

ಇಲ್ಲಿ ಕಂಭ ಎನ್ನುವ ಪದವನ್ನು ಗಮನಿಸಬೇಕು. ಅದು ಗರ್ಭಗುಡಿಯ ಮುಂದಿನ ಮಂಟಪವನ್ನು ಅಂದರೆ ನವರಂಗವನ್ನು ಸೂಚಿಸುತ್ತದೆ. ಸೂಳೆಯರಿಗೆ ಈಗಿನ ಹಾಗೆ ಕಡಿಮೆ ಸ್ಥಾನಮಾನ ಇರದ, ಗೌರವಯುತವಾದ ಸ್ಥಾನಮಾನಗಳಿದ್ದ ಕಾಲದ ಶಾಸನವಿದು. ಬಹುಮಟ್ಟಿಗೆ ಸೂಳೆಯರಾಗಿ ಕೆಳಜಾತಿಯವರು ಮತ್ತು ದಲಿತರೇ ಇರುತ್ತಿದ್ದರು ಎನ್ನುವುದು ಒಂದು ಒಪ್ಪಿತವಾದ ವಿಷಯವಾದುದರಿಂದ  ಮೇಲೆ ಹೇಳಿದ ಕಂಭದ ಸೂಳೆಯರು ಆ ಆ ಸ್ಥಳಗಳಲ್ಲಿ ನಿಲ್ಲುತ್ತಿದ್ದವರಾಗಿರುತ್ತಿದ್ದರು. ಅವರು ಕೆಳಜಾತಿಯವರಾಗಿದ್ದರು ಎನ್ನುವುದರೊಂದಿಗೆ, ಅವರಿಗೆ ಅಲ್ಲಿಗೆ ಎಂದರೆ ನವರಂಗಕ್ಕೆ ಪ್ರವೇಶ ಇರುತ್ತಿತ್ತು ಎನ್ನುವುದನ್ನು ಗಮನಿಸಬಹುದು. ಹಾಗೆಯೇ ಆಗಿನ ಕಾಲದಲ್ಲಿ ಸಾರ್ವಜನಿಕರಿಗೆ ನವರಂಗಕ್ಕೆ ಮಾತ್ರವೇ ಪ್ರವೇಶವಿರುತ್ತಿತ್ತು ಎನ್ನುವುದನ್ನು ಇಲ್ಲಿ ವಿಶೇಷವಾಗಿ ನೆನಪಿಸುತ್ತೇನೆ.

ಹೀಗೆ ನವರಂಗದಲ್ಲಿ ಬಡಗಿಗಳು, ಅಬಜಿಗಳು, ಮಾಕರಿಗಳು, ಮೊದಲಾದ  ಕೆಳಜಾತಿಯವರು, ಮಧ್ಯಮ ಜಾತಿಯವರು ಮೊದಲಾದವರು ಇರುತ್ತಿದ್ದ ಅನೇಕ ಉಲ್ಲೇಖಗಳು ಶಾಸನಗಳಲ್ಲಿವೆ. ನವರಂಗದಲ್ಲಿ ನೃತ್ಯವೇ ಮೊದಲಾದ ಕಲೆಗಳ ಪ್ರದರ್ಶನವಿರುತ್ತದ್ದರಿಂದ ಅನಿವಾರ್ಯವಾಗಿ ಇವರು ಅಲ್ಲಿಗೆ ಬರಲೇಬೇಕಾಗಿತ್ತು. ಆಗಲೂ ದೇವಾಲಯ ಪ್ರವೇಶ ಎನ್ನುವುದು ಒಂದು ಸಮಸ್ಯೆಯಾಗಿರಲಿಲ್ಲ.

ಕೋಡಿಮಠದ ಶಾಸನ (ಕ್ರಿ.ಶ.1962) : ಈ ಪರಂಪರೆಯಲ್ಲಿ ಕೋಡಿ ಮಠದ ಶಾಸನಕ್ಕೆ ಮತ್ತು ಕೋಡಿ ಮಠಕ್ಕೆ ವಿಶಿಷ್ಟ ಸ್ಥಾನವಿದೆ. ಅದು ಸಮಸ್ತ ಮಾನವವರ್ಗವೆಲ್ಲವನ್ನೂ ಸಮಾನವೆಂದು ಪರಿಗಣಿಸುವ ಮಠವಾಗಿತ್ತು. ದೀರ್ಘವಾದ ಆ ಶಾಸನ ಹಾಗೆಯೇ ಉಲ್ಲೇಖಿಸದೇ ಉಚಿತಕ್ಕೆ ತಕ್ಕಷ್ಟು ಮಾತ್ರವೇ ಉದ್ಧರಿಸುತ್ತೇನೆ.

…. ವೈಷ್ಠಿಕ ಬ್ರಹ್ಮಚರ್ಯ ಶಿವಮುನಿ ಜನಾನುಷ್ಠಾನನಿಷ್ಠಿತ ಸ್ಥಾನಮುಂಸಾಂಗಮಗೃಜ ಸ್ಸಾಮಾಥರ್ವ ಚತುರ್ವೇದ ಸ್ವಾಧ್ಯಾಯ ಸ್ಥಾನಮುಂ ಕೌಮಾರ ಪಾಣನೀಯ ಶಾಕಟಾಯನ ಶಬ್ದಾನುಶಾಸನಾದಿ ವ್ಯಾಕರಣ ಷಡುದರ್ಶನಬ್ಯಾಖ್ಯಾನ ಸ್ಥಾನಮುಂ ನ್ಯಾಯ ವೈಶೇಷಿಕ ಮೀಮಾಂಸಾಂಖ್ಯ ಬೌದ್ಧಾದಿ ಷಡುದರ್ಶನವ್ಯಾಖ್ಯಾನ ಸ್ಥಾನಮುಂ ಅಷ್ಟಾದಶ ಪುರಾಣ ಧರ್ಮ ಶಾಸ್ತ್ರ ಸಕಳ ಕಾವ್ಯ ನಾಟಕಾದಿ ವಿವಿಧ ವಿದ್ಯುಸ್ಥಾನಮುಂ ದೀನಾನಾಥಸಂಗ್ವಂಧ ಬಧಿರ ಕಥಕ ನಾಯಕ ವಾದಕವಾಂಶಿಕನರ್ತಕ ವೈಕಾಳಿಕ ನಗ್ನ ಭಗ್ನ ಕ್ಷಪಣ ಕೈಕ ದಂಡಿ ತ್ರಿದಂಡಿ ಹಂಸ ಪರಮ ಹಂಸಾದಿ ನಾನಾ ದೇಶ ಭಿಕ್ಷುಕ ಜನಾನಿನಾರ್ಯಂನದಾನಸ್ಥಾನಮುಂ ನಾಥಾನಾಥ ರೋಗಿ ಜನರೋಗ ಭೈಷಜ್ಯಸ್ಥಾನಮುಂ ಸಕಲ ಭೂತಾಭಯಪ್ರಧಾನ ಸ್ಥಾನಮುಮಾಗಿ ಕೋಡಿಯ ಮಠವಿರ್ಪುದಾ………(ಎಪಿಗ್ರಫಿಯಾ ಇಂಡಿಕಾ,ಸಂ.8.ಶಿಕಾರಿಪುರ,ಶಾ.ಸಂ.98.)

ಇದು ಕೋಡಿಮಠದ ಹೆಗ್ಗಳಿಕೆ! ಇದು ಎಪ್ಪತ್ತುಮೂರು ಕುಲಗಳನ್ನು ಪವಿತ್ರವೆಂದು ಬಗೆಯುತ್ತಿತ್ತು. ಹಾಗೆಯೇ ಇಲ್ಲಿ ಮುಖ್ಯವಾಗಿ ದೇವಾಲಯಗಳಿಗೂ ಮಠಗಳಿಗೂ ವ್ಯತ್ಯಾಸಗಳೂ ಇರಲಿಲ್ಲ ಎನ್ನುವುದನ್ನು ಗಮನಿಸಬೇಕು. ಈ ಮಠಕ್ಕೆ ಎಲ್ಲರಿಗೂ ಮುಕ್ತ ಪ್ರವೇಶ ಇತ್ತು ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ತಾನೇ?

ಮುಂದುವರೆಯುತ್ತದೆ…..

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments