ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 13, 2016

ಪಕ್ಷ ರಾಜಕಾರಣದ ಮರ್ಮಗಳು

‍ನಿಲುಮೆ ಮೂಲಕ

ಡಾ. ಸಂತೋಷ್ ಕುಮಾರ್ ಪಿ.ಕೆ
ಶಿವಮೊಗ್ಗ

mar2214udupichik01ರಾಜಕಾರಣವೆಂಬುದು ಇಂದಿಗೆ ಪಕ್ಷಕ್ಕೆ ಮಾತ್ರ ಸೀಮಿತವಾಗಿ, ಪ್ರದೇಶಗಳು ಎರಡನೇ ಪ್ರಾಮುಖ್ಯತೆಯನ್ನು ಪಡೆಯುತ್ತಿವೆ. ಕರ್ನಾಟಕ ಸರ್ಕಾರವೆಂಬುದು ಕಾಂಗ್ರೆಸ್ ಸರ್ಕಾರ ಎಂಬ ಮಿತಿಯ ಒಳಗೆ ಕಾರ್ಯನಿರ್ವಹಿಸಲು ಇಚ್ಚಿಸುತ್ತದೆಯೇ ಹೊರತು ರಾಜ್ಯ ಸರ್ಕಾರವಾಗಿ ಅಲ್ಲ. ಇದು ಕಾಂಗ್ರೆಸ್‍ ಪಕ್ಷದ ಮಿತಿ ಎಂದು ಭಾವಿಸದೆ ಆಡಳಿತಕ್ಕೆ ಬರುವ ಬಹುತೇಕ ಪಕ್ಷಗಳ ಹಣೆಬರಹವಾಗಿದೆ. ಆದ್ದರಿಂದ ಸರ್ವತೋಮುಖ ಅಭಿವೃದ್ಧಿಯ ಬದಲು ಭಾಗಶಃ ಅಭಿವೃದ್ಧಿಯ ಕಾರ್ಯಚಟುವಟಿಕೆಗಳನ್ನು ಸರ್ಕಾರಗಳು ಕೈಗೆತ್ತಿಕೊಳ್ಳುತ್ತವೆ. ಹಾಗಾಗಿ ತುಷ್ಟೀಕರಣದ ರಾಜಕಾರಣ ಹೆಚ್ಚಾಗಿ ಇಂದು ಕಾಣಬಹುದಾಗಿದೆ.

ಕರ್ನಾಟಕದಲ್ಲಿ ಬಿಜೆಪಿ ಪಕ್ಷದ ಒಳಜಗಳದ ಆಡಳಿತ ಹಾಗೂ ರೇಸಾರ್ಟ್ ರೋಸಿ ಹೋಗಿದ್ದ ಜನತೆ ಪರ್ಯಾಯವಾಗಿ ಕಾಂಗ್ರೆಸ್ ಪಕ್ಷವನ್ನು ಗದ್ದುಗೆಗೆ ಏರಿಸಿದರು. ಆ ಹಿಂದ ಈ ಹಿಂದ ಎಂದು ಅಧಿಕಾರಕ್ಕೆ ಬಂದ ನಾಯಕರು ಹಲವಾರು ನಿಷ್ಪ್ರಯೋಜಕ ಯೋಜನೆಗಳನ್ನು ಜಾರಿಗೆ ತರುವಲ್ಲಿಯೇ ಹಲವು ವರ್ಷಗಳನ್ನು ಕಳೆದರು. ಆದರೆ, ಕರ್ನಾಟಕದ ಅಭಿವೃದ್ಧಿ ಮಾತ್ರ ನಿರೀಕ್ಷಿಸಿದ ಸೂಚ್ಯಾಂಕವನ್ನು ಮುಟ್ಟಲಿಲ್ಲ. ಇದರ ನಡುವೆ ಹಲವಾರು ಹಗರಣಗಳು ಹಳ್ಳ ಹಿಡಿದರೂ ಭಂಡತನದ ರಾಜಕಾರಣ ಆ ನಾಯಕರನ್ನು ಇನ್ನೂ ರಾಜಕೀಯವಾಗಿ ಜೀವಂತವಾಗಿರಿಸಿದೆ. ಒಟ್ಟಿನಲ್ಲಿ ಪರ್ಯಾಯವಾಗಿ ಅಸ್ತಿತ್ವಕ್ಕೆ ಬಂದಂತಹ ಸರ್ಕಾರ ಪಟ್ಟಭದ್ರ ಹಿತಾಸಕ್ತಿಗಳನ್ನು ಹಾಗೂ ಮತಬ್ಯಾಂಕ್ ನ್ನು ಕಾಪಿಟ್ಟುಕೊಳ್ಳುವಲ್ಲಿಯೇ ಹೆಚ್ಚು ಆಸ್ಥೆಯನ್ನು ಹೊಂದಿರುವುದು ನಮ್ಮ ಕಣ್ಣಮುಂದಿರುವ ಸತ್ಯ.

ಎಲ್ಲಾ ರಂಗದಲ್ಲಿಯೂ ಅದರದ್ದೇ ಆದ ಪರೀಕ್ಷೆ ಎಂಬುದಿರುತ್ತದೆ, ಅಂತೆಯೆ ಕಾವೇರಿ ವಿವಾದವೂ ಸಹ ಅಂತಹ ಒಂದು ಪರೀಕ್ಷೆಯಾಗಿ ಕರ್ನಾಟಕ ಸರ್ಕಾರದ ಮುಂದೆ ನಿಂತಿದೆ. ಅದರಲ್ಲಿ ಸೊನ್ನೆ ಅಂಕ ಪಡೆದು ಅನುತ್ತೀರ್ಣರಾದದೂ ಈ ಭಂಡತನದ ವರ್ಚಸ್ಸು ಅವರಿವರನ್ನು ಆರೋಪಿಸುವತ್ತ ಸಕ್ರೀಯವಾಗಿದೆ. ಇಷ್ಟೆಲ್ಲದಕ್ಕೂ ಕಾರಣ ಒಂದು ಕಾನೂನಿನ ಕುರಿತು ಇರುವ ಅಜ್ಞಾನ ಹಾಗೂ ಶಾಶ್ವತವಾಗಿ ಪರಿಹಾರದತ್ತ ಯೋಚನೆ ಮಾಡುವ ಬುದ್ದಿಶಕ್ತಿಯ ಕೊರತೆ. ಕಾನೂನಿನ ಕುರಿತು ಅಜ್ಞಾನವೇನಿದೆ ಎಂದರೆ, 1924 ರಲ್ಲಿ ಕಾವೇರಿ ನೀರಿನ ಹಂಚಿಕೆ ಕುರಿತು ಮದ್ರಾಸು ಮತ್ತು ಮೈಸೂರು ಪ್ರಾಂತ್ಯಗಳ ನಡುವೆ ಏರ್ಪಟ್ಟ ಒಪ್ಪಂದದ ಆಧಾರದ ಮೇಲೆ ತಮಿಳುನಾಡು ಆಟವಾಡುತ್ತಿದ್ದರೆ, ಸುಪ್ರಿಂ ಕೋರ್ಟಿನ ಮೂಲಕ ಮತ್ತೊಂದು ತೆರನಾದ ಆಟವಾಡುತ್ತಿದೆ. ಆದರೆ ಸಂವಿಧಾನದ 363ನೆ ಪರಿಚ್ಛೇದದ ಅನ್ವಯ ಭಾರತ ಸಂವಿಧಾನ ಅಸ್ತಿತ್ವಕ್ಕೆ ಬಂದ ನಂತರ ಅದರ ಹಿಂದೆ ರಾಜಾಡಳಿತ ಪ್ರದೇಶಗಳ ನಡುವೆ ಏರ್ಪಟ್ಟಿದ್ದ ಒಪ್ಪಂದಗಳನ್ನು ಪರಿಗಣಿಸುವಂತಿಲ್ಲ, ಹಾಗೂ 262 ನೆ ಪರಿಚ್ಛೇದದ ಪ್ರಕಾರ ಎರಡು ರಾಜ್ಯಗಳ ನದಿನೀರಿನ ವಿವಾದವನ್ನು ಸಂಸತ್ತು ಕಾನೂನನ್ನು ರೂಪಿಸುವ ಮೂಲಕ ಪರಿಹರಿಸಬೇಕೆ ಹೊರತು, ಯಾವುದೇ ನ್ಯಾಯಾಲಯವು ಮೊಕದ್ದಮೆಯನ್ನು ದಾಖಲಿಸಿಕೊಂಡು ಇತ್ಯರ್ಥಪಡಿಸುವಂತಿಲ್ಲ ಎನ್ನುವುದು. ಆದರೆ ಇವೆಲ್ಲವನ್ನೂ ಪರಿಗಣಿಸಿದೆ ಕಾವೇರಿಯನ್ನು ಭಾವನಾತ್ಮಕ ವಿಚಾರವನ್ನಾಗಿ ಪರಿವರ್ತಿಸಿ ಪರಿಹಾರಕ್ಕಿಂತ ಆರೋಪದಲ್ಲೇ ಸರ್ಕಾರ ಹಾಗೂ ವಿರೋಧ ಪಕ್ಷಗಳು ಮುಳುಗಿರುವುದು ಶೋಚನೀಯ.

ಇನ್ನು ಮುಂಗಾರು ಮಳೆ-2 ಮುಗ್ಗರಿಸಿರುವಂತೆ, ರಾಜ್ಯದ ಮುಂಗಾರು ಕೂಡ ಕೈಕೊಟ್ಟಿದೆ. ಇದರ ಪರಿಣಾಮ ಹಲವಾರು ಪ್ರದೇಶಗಳಲ್ಲಿ ಕೃಷಿಗೆ ಹಾಗೂ ಕುಡಿಯಲು ನೀರಿನ ಅಭಾವ ಉಲ್ಭಣಗೊಳ್ಳುತ್ತಿದೆ. ಆದರೆ ಇದ್ಯಾವುದಕ್ಕೂ ಗಮನ ಹರಿಸದೆ ಗೊರಕೆ ಹೊಡೆಯುತ್ತಿರುವ ಸರ್ಕಾರ, ರಚನಾತ್ಮಕ ಯೋಜನೆಗಳನ್ನು ರೂಪಿಸುವಲ್ಲಿ ಸಂಪೂರ್ಣವಾಗಿ ಸೋತಿದೆ. ರಾಜ್ಯದ ಹೊರಗೆ ನೀರು ಬಿಡುವುದರಲ್ಲಿ ಒಂದು ರೀತಿಯ ಸೋಲನ್ನು ಅನುಭವಿಸಿರೆ, ರಾಜ್ಯದ ಒಳಗೆ ನೀರನ್ನು ಉಳಿಸಿಕೊಳ್ಳುವಲ್ಲಿಯೂ ಸೋತಿದೆ. ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ, ಲಿಫ್ಟ್ ನಿರಾವರಿ ಪದ್ಧತಿಯನ್ನು ಹಿಂದಿದ್ದಂತಹ ಸರ್ಕಾರ ಅಸ್ತಿತ್ವಕ್ಕೆ ತಂದು ರೈತರಿಗೆ ಸ್ವಲ್ಪ ಮಟ್ಟಿಗಾದರೂ ಪುನಶ್ಚೇತನ ಮಾಡುವ ಕಾರ್ಯವನ್ನು ಮಾಡಿತ್ತು. ಅದಕ್ಕೂ ಮಿಗಿಲಾಗಿ ಈ ವರ್ಷ ಜನವರಿಯಲ್ಲಿ ಜಾರಿಗೆ ಬಂದಂತಹ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಸರಿಯಾಗಿ ಅನುಷ್ಠಾನ ಮಾಡದೆ, ಸಾರ್ವಜನಿಕರಲ್ಲಿ ಅದರ ಕುರಿತು ಜಾಗೃತಿ ಮೂಡಿಸದೆ ಆ ಯೋಜನೆಯನ್ನು ಮೂಲೆಗುಂಪು ಮಾಡಲಾಗುತ್ತಿದೆ. ರೈತರು ತಾವು ಬೆಳೆದ ಬೆಳೆಯಿಂದ ನಷ್ಟ ಅನುಭವಿಸುತ್ತಿದ್ದರೆ ಅವರಿಗೆ ಅನುಕೂಲವಾಗಲೆಂದು ಕೇಂದ್ರ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿತು. ಆದರೆ ಹಾವು ಸಾಯಬಾರದು ಕೋಲು ಮುರಿಯಬಾರದು ಎಂಬ ನವರಂಗಿ ಆಟದೊಂದಿಗೆ ಈ ಯೋಜನೆ ಹಳ್ಳಹಿಡಿಯುವ ಲಕ್ಷಣಗಳು ಕಾಣುತ್ತಿವೆ. ಹಾಗಾಗಿ ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಒತ್ತಟಿಗಿರಲಿ, ಅವರ ಸಮಸ್ಯೆಗಳನ್ನೇ ಆಲಿಸಲು ಸಮಯವಿಲ್ಲದ ರಾಜಕಾರಣವಿರುವುದು ದುರಂತ.

ಹೀಗೆಯೇ ಹಲವಾರು ಯೋಜನೆಗಳನ್ನು ತೆಗೆದುಕೊಂಡು ಪುಂಖಾನುಪುಂಖವಾಗಿ ನೋಡಿದರೆ, ಇಡೀ ರಾಜಕಾರಣದ ಕುರಿತೇ ಅಸಹ್ಯ ಮೂಡುತ್ತದೆ. ಆದರೆ ಈ ಎಲ್ಲಾ ಸಂಗತಿಗಳನ್ನು ಅರ್ಥಮಾಡಿಕೊಳ್ಳುವ ಇರಾದೆ ಇರುವುದರಿಂದ ಇಂತಹ ಅಸಮರ್ಥತೆ ಹಾಗೂ ದೌರ್ಬಲ್ಯಗಳ ಹಿಂದಿರುವ ಮರ್ಮವೇನು ಎಂದು ತಿಳಿದುಕೊಳ್ಳುವುದು ಅಗತ್ಯ. ಇದಕ್ಕೆ ನನ್ನ ಪ್ರಕಾರ ಎರಡು ಕಾರಣಗಳಿವೆ, (ಇದು ಯಾವುದೋ ಒಂದು ಸರ್ಕಾರಕ್ಕೆ ಮಾತ್ರ ಸೀಮಿತವಾದುದದಲ್ಲ), ಮೊದಲನೆಯದಾಗಿ, ಈ ಮೊದಲೇ ಹೇಳಿದಂತೆ ಪಕ್ಷ ರಾಜಕಾರಣ, ಮತ್ತೊಂದು ದೂರದೃಷ್ಟಿಯ ಕೊರತೆ. ಇನ್ನೂ ಹಲವಾರು ಕಾರಣಗಳಿದ್ದಿರಬಹುದು, ಆದರೆ ನನಗೆ ತಿಳಿದಿರುವಷ್ಟು ಮಟ್ಟಿಗೆ ಹೇಳಲು ಇಲ್ಲಿ ಇಚ್ಚಿಸುತ್ತೇನೆ.

ಭಾರತ ಜಾತಿಗಳ ನಾಡು, ರಿಲಿಜನ್ ಗಳ ಬೀಡು ಎಂಬಿತ್ಯಾದಿ ಹೇಳಿಕೆಗಳ ಮೂಲಕ ಅವೆಲ್ಲವೂ ರಾಜಕಾರಣದಲ್ಲಿ ಮಿಶ್ರಣಗೊಂಡಿವೆ ಎಂದು ಹೇಳಲಾಗುತ್ತದೆ. ಅದನ್ನು ಅಧ್ಯಯನ ಮಾಡಲೆಂದೇ ಸಾವಿರಾರು ಸಮಾಜಶಾಸ್ತ್ರಜ್ಞರು ತಮ್ಮ ಚಪ್ಪಲಿಗಳನ್ನು ಸವೆಸಿದ್ದಾರೆ. ಅವರೆಲ್ಲರ ಅಧ್ಯಯನದ ಫಲಿತಾಂಶವೆಂದರೆ, ಜಾತಿ ರಾಜಕಾರಣ ಇಲ್ಲಿ ತಾಂಡವವಾಡುತ್ತಿದೆ. ರಿಲಿಜನ್‍ಗಳನ್ನು ರಾಜಕಾರಣದಿಂದ ಬೆನ್ನಟ್ಟಲು ಸೆಕ್ಯುಲರಿಸಂ ಜಾರಿಗೆ ತಂದರೆ, ಜಾತಿಯನ್ನು ಅದರಿಂದ ಹೊರಗಿಡಲು ಯಾವುದೇ ಪರಿಹಾರವನ್ನು ವಿದ್ವಾಂಸರು ಹುಡುಕಿರುವಂತಿಲ್ಲ. ಜಾತಿ ರಾಜಕಾರಣದಿಂದಾಗಿ ಅಭಿವೃದ್ಧಿ ಕುಂಠಿತವಾಗಿ ಸ್ವಜನಪಕ್ಷಪಾತ, ಕೆಲವೇ ಸಮುದಾಯಗಳ ಹಿತಾಸಕ್ತಿಯ ರಕ್ಷಣೆ ಇತ್ಯಾದಿಗಳನ್ನು ಗುರುತಿಸುವ ವಿದ್ವಾಂಸರುಗಳು, ಇದರಿಂದಾಗಿ ನ್ಯೂಟ್ರಲ್ ಆಗಿರುವ ರಾಜಕಾರಣ ಅಂದರೆ ಎಲ್ಲರನ್ನೂ ಒಳಗೊಳ್ಳುವ ರಾಜಕೀಯ ವ್ಯವಸ್ಥೆ ರೂಪುಗೊಳ್ಳಲು ಸಾಧ್ಯವಿಲ್ಲ ಎನ್ನುತ್ತಾರೆ. ಅವೇ ಅಂಶಗಳನ್ನಿಟ್ಟುಕೊಂಡು ಪಕ್ಷ ರಾಜಕಾರಣದತ್ತ ನೋಡಿದರೆ, ಜಾತಿ ರಾಜಕಾರಣಕ್ಕಿಂತ ಅತ್ಯಂತ ಹೀನಾಯವಾಗಿ ಅದು ಗೋಚರಿಸುತ್ತದೆ. ಚುನಾವಣೆಯಲ್ಲಿ ಪ್ರಾತಿನಿಧ್ಯ ಪಡೆಯಲು ಅಥವಾ ಗೆದ್ದು ಬರಲು ಸಾಂಘಿಕ ತತ್ವಕ್ಕೆ ಕೇವಲ ಅದು ಸಂಕೇತವಾಗಿರದೆ, ಪ್ರತಿಯೊಂದು ಯೋಜನೆ, ಶಾಸನಗಳಲ್ಲಿಯೂ ಪಕ್ಷ ರಾಜಕಾರಣ ಕೈ ಆಡಿಸುತ್ತದೆ. ಇದರಿಂದ ತಮ್ಮ ಪಕ್ಷದ ಅಜೆಂಡಾಗಳು ಜಾರಿಗೆ ಬರಬಹುದೇ ಹೊರತು ಇಡೀ ಜನಾಂಗಕ್ಕೆ ಬೇಕಾದ ಯೋಜನೆಗಳು ಬರಲು ಸಾಧ್ಯವಿಲ್ಲ. ಇದು ಪಕ್ಷರಾಜಕಾರಣದ ದೊಡ್ಡ ಮಿತಿಯಾಗಿದೆ. ಯಾವುದೇ ಪಕ್ಷ ಅಧಿಕಾರಕ್ಕೆ ಬಂದ ನಂತರ ಸರ್ಕಾರಿ ಲೆಟರ್ ಹೆಡ್ ಪತ್ರಗಳಲ್ಲಿ ಮಾತ್ರ ರಾಜ್ಯ ಸರ್ಕಾರ ಎಂದು ಬರೆದುಕೊಳ್ಳುತ್ತದೆಯೇ ಹೊರತು ಆ ರಾಜಕಾರಣಿಗಳಾರೂ ರಾಜ್ಯ ಸರ್ಕಾರದ ಭಾಗವೆಂದು ಅವರು ಭಾವಿಸುವುದಿಲ್ಲ, ಬದಲಿಗೆ ಒಂದು ನಿರ್ಧಿಷ್ಟ ಪಕ್ಷದ ವಕ್ತಾರರು ಎಂಬಂತೆ ಭಾವಿಸುತ್ತಾರೆ. ಇದಕ್ಕೆ ಸ್ಪಷ್ಟವಾದ ಉದಾಹರಣೆ ಎಂದರೆ ಹಿಂದೊಮ್ಮೆ ಒಬ್ಬ ರಾಜಕಾರಣಿ ಹೇಳಿದ ಮಾತುಗಳು “ನೀವು ಪಕ್ಷಕ್ಕೆ ಮತ ಹಾಕದಿರುವ ಕಾರಣ ನಿಮ್ಮ ಅಭಿವೃದ್ಧಿ ನಮಗೆ ಸಂಬಂಧಿಸಿದ್ದಲ್ಲ”. ಒಟ್ಟಿನಲ್ಲಿ ರಾಜಕಾರಣ ಸಾಂಘಿಕ ಚಟುವಟಿಕೆಯಾಗಿದ್ದರೂ, ಅದು ಯಾವುದೋ ಒಂದು ಅಥವಾ ಅದಕ್ಕಿಂತ ಹೆಚ್ಚಿನ ಕೆಲವೇ ಕೆಲವು ಗುಂಪುಗಳ ಅಡಿಯಾಳಾಗಿರುತ್ತದೆ.

ಇನ್ನು ಎರಡನೆಯದಾಗಿ ಮೇಲಿನ ಅಂಶದ ಮುಂದುವರೆದ ಭಾಗವೆ, ದೂರದೃಷ್ಟಿಯ ಕೊರತೆ. ಇದುವರೆಗೂ ನನಗೆ ತಿಳಿದ ಮಟ್ಟಿಗೆ ಕರ್ನಾಟಕದಲ್ಲಿ ಅಸ್ತಿತ್ವಕ್ಕೆ ಬಂದಂತಹ ರಾಜಕೀಯ ನಾಯಕರುಗಳು ಇನ್ನೈದು ವರ್ಷಗಳಲಿ ಕರ್ನಾಟಕವನ್ನು ಇಂತಹ ಒಂದು ಮಟ್ಟಕ್ಕೆ ತರುತ್ತೇವೆ ಎಂದು ಹೇಳಿರುವ ನಿದರ್ಶನಗಳಿಲ್ಲ, ಹಾಗೂ ಹೀಗೂ ಕಷ್ಟಪಟ್ಟು ವಾಮಮಾರ್ಗಗಳ ಮೂಲಕ ಚುನಾವಣೆ ಗೆದ್ದರೆ, 5 ವರ್ಷ ಖಾಯಂ ಸಂಬಳ ಮತ್ತು ಗಿಂಬಳ ಎನ್ನುವ ಧೋರಣೆಯೇ ಹೆಚ್ಚಿರುವ ನಾಯಕರು ನಮ್ಮ ಮಧ್ಯೆ ಇದ್ದಾರೆ. ಸಮಾಜ ಸೇವೆ ಮಾಡಬೇಕೆಂಬ ಮನೋಭಿಲಾಷೆಯಿಂದ ರಾಜಕಾರಣಕ್ಕೆ ಬರುವ ನಾಯಕರು ಅತ್ಯಂತ ವಿರಳ, ಅವರೇನಿದ್ದರೂ ಬೆರಳೆಣಿಕೆಯಷ್ಟು ಮಾತ್ರ. ಇರಲಿ, ದೂರದೃಷ್ಟಿ ಎಂಬುದು ಕನಿಷ್ಟ ಪಕ್ಷ ತಾವು ಮಾಡುವ ನಿರ್ಧಾರ, ಜಾರಿಗೆ ಯೋಜನೆಗಳ ಕುರಿತಾಗಿಯಾದರೂ ಇರಬೇಕು, ಆದರೆ ಅಸ್ತಿತ್ವದಲ್ಲಿರುವ ಯೋಜನೆಗಳನ್ನು ನೋಡಿದರೆ, ಅವುಗಳು ಕೆಲವು ನಿರ್ದಿಷ್ಟ ಸಮುದಾಯಗಳಿಗೆ ಖುಷಿ ಕೊಡುವಂತವಹ ಹಾಗೂ ತಾತ್ಕಾಲಿಕ ಪರಿಹಾರದಂತೆ ಗೋಚರಿಸುವ ಸಂಗತಿಗಳಂತೆ ಕಾಣುತ್ತವೆ. ವರ್ಷಂಪ್ರತಿ ಬೇಸಿಗೆಯಲ್ಲಿ ವಿದ್ಯುತ್ ಕಡಿತ ಸಾಮಾನ್ಯ, ಇದಕ್ಕೆ ಶಾಶ್ವತವಾದ ಪರಿಹಾರ ಹುಡುಕಲು ಸಾಧ್ಯವಿಲ್ಲವೆ? ನೀರಿಲ್ಲ, ಇತರ ರಾಜ್ಯಗಳಿಂದ ಖರೀದಿಸಲು ದುಬಾರಿ ಎಂದು ಸಬೂಬು ಹೇಳುವ ಬದಲು ವ್ಯವಸ್ಥಿತವಾಗಿ ಸೋಲಾರ್ ಗಳನ್ನು ಬಳಸುವಂತೆ ಮಾಡಲು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲವೆ? ಕಾವೇರಿ ನದಿ ನೀರಿನ ಹಂಚಿಕೆಗಾಗಿ ಇಷ್ಟು ಹೊಡೆದಾಡುವ ಬದಲು ಬದಲೀ ನೀರಿನ ವ್ಯವಸ್ಥೆ ಮಾಡಲು ಸಾಧ್ಯವಿಲ್ಲವೆ? ಎಲ್ಲಾ ಸಮಸ್ಯೆಗಳಿಗೂ ಖಂಡಿತ ಪರಿಹಾರವಿದೆ, ಆದರೆ ಅವೆಲ್ಲವನ್ನೂ ಮಾಡಿದರೆ ರಾಜಕಾರಣಿಗಳಿಗೆ ಪ್ರಚಾರದಲ್ಲಿರಲು ಇಶ್ಯೂಗಳಿರುವುದಿಲ್ಲ, ಆದ್ದರಿಂದಲೆ ತಾತ್ಕಾಲಿಕವಾಗಿ ಒಂದಷ್ಟು ಸಗಣಿ ಒರಸಿ, ಸಮಸ್ಯೆಯನ್ನು ಶಾಶ್ವತವಾಗಿರಿಸುವಂತೆ ನೋಡಿಕೊಳ್ಳುತ್ತಾರೆ.

ಇಷ್ಟೆಲ್ಲಾ ಹೇಳಲು ನಾನು ಯಾವುದೇ ಪಕ್ಷದ ಪರ ಅಥವಾ ವಿರೋಧವನ್ನು ಹೊಂದಿರಬೇಕಾಗಿಲ್ಲ, ಸಾಮಾನ್ಯ ನಾಗರೀಕನಾಗಿ ಇದುವರೆಗಿನ ನಾಯಕರನ್ನು ರಾಜಕಾರಣವನ್ನು ಗಮನಿಸಿದರೆ ಅರ್ಥವಾಗುವ ಸಂಗತಿ.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments