ದೇವರ ಪಟದ ಹಿಂದಿನ ಸೈಟು ಮಾರಾಟಕ್ಕಿದೆ!
– ರೋಹಿತ್ ಚಕ್ರತೀರ್ಥ
ನಮ್ಮ ಹಳ್ಳಿಮನೆಗಳ ಪಡಸಾಲೆಗಳ ನಾಲ್ಕೂ ಸುತ್ತು ಗೋಡೆಗಳಲ್ಲಿ ಚೌಕಟ್ಟಿನ ಪಟಗಳು ತೂಗಾಡುತ್ತಿದ್ದವು. ಧ್ಯಾನಾಸಕ್ತನಾಗಿ ಉನ್ಮೀಲಿತ ನೇತ್ರನಾದ ನೀಲಕಂಠ ಶಿವ, ಸಿಂಹವಾಹಿನಿ ದುರ್ಗೆ, ಸ್ಟುಡಿಯೋದಲ್ಲಿ ಫ್ಯಾಮಿಲಿ ಫೋಟೋಗೆ ಪೋಸ್ ಕೊಟ್ಟಂತಿರುವ ರಾಮಭದ್ರ ಮತ್ತವನ ಅವಿಭಕ್ತ ಸಂಸಾರ, ಹೆಂಡತಿಯಿಂದ ಕಾಲೊತ್ತಿಸಿಕೊಂಡು ಹಾವಿನ ಮೇಲೆ ಸುಖಾಸೀನನಾಗಿರುವ ಮಹಾವಿಷ್ಣು – ಹೀಗೆ ಒಂದು ರೀತಿಯಲ್ಲಿ ಜಗತ್ತಿನ ಮುಕ್ಕೋಟಿ ದೇವತೆಗಳೆಲ್ಲ ಈ ಮನೆಯಲ್ಲೇ ಝಂಡಾ ಹೂಡಿದ್ದಾರೆಂಬ ಭಾವನೆ ತರಿಸುವ ಪಟಗಳ ಚಿತ್ರಶಾಲೆಯಾಗಿತ್ತು ನಮ್ಮ ಪಡಸಾಲೆ. ದೇವರ ಭಯ ಮತ್ತು ಅದಕ್ಕಿಂತ ಮಿಗಿಲಾಗಿ, ಕೈ ಜಾರಿ ಬಿದ್ದು ಫಳಾರನೆ ಒಡೆದೇ ಹೋದರೆ ಬೆನ್ನು ಮುರಿಯಲಿದ್ದ ಅಜ್ಜನ ಭಯದಿಂದಾಗಿ ನಾವು ಈ ದೇವರ ಸಹವಾಸಕ್ಕೇ ಹೋಗುತ್ತಿರಲಿಲ್ಲ. ಆದರೆ ಆಗೀಗ ಆ ಪಟಗಳೆಡೆಯಲ್ಲಿ ಚಿಕ್ಚಿಕ್ ಚೀಂವ್ ಎಂಬ ದನಿ ಬಂದಾಗ ಮಾತ್ರ ಸ್ಟೂಲ್ ಹತ್ತಿ ಅಲ್ಲೇನಿದೆ ಎಂದು ಇಣುಕುವ ಕುತೂಹಲ ಚಿಗುರುತ್ತಿತ್ತು. ಅಲ್ಲಿ ನಮಗೆ ಕಾಣಿಸುತ್ತಿದ್ದುದು ಪುಟಾಣಿ ಗುಬ್ಬಚ್ಚಿಗಳ ಸಂಸಾರ. ದೇವರ ಪಟವನ್ನು ನಲವತ್ತೈದು ಡಿಗ್ರಿ ವಾರೆಯಾಗಿ ನೇತಾಡಿಸುತ್ತಿದ್ದುದರಿಂದ ಆ ಸಂದಿ ತಮ್ಮ ಮನೆ ಕಟ್ಟಲಿಕ್ಕೆಂದೇ ಮನುಷ್ಯ ಮಾಡಿಟ್ಟ ಏರ್ಪಾಟು ಎಂದು ಗುಬ್ಬಚ್ಚಿಗಳು ಬಗೆಯುತ್ತಿದ್ದವೋ ಏನೋ. ಉಗ್ರ ನರಸಿಂಹನಂಥ ಕಡುಕೋಪಿಷ್ಠ ದೇವರ ಪಟದ ಹಿಂದೆಯೂ ಅವು ನಿರಾತಂಕವಾಗಿ ತಮ್ಮ ಸಂಸಾರದ ಗುಡಾರ ಬಿಚ್ಚಿಕೊಳ್ಳುತ್ತಿದ್ದವು.
ಒಂದಾನೊಂದು ಕಾಲದಲ್ಲಿ ನಮ್ಮೂರಲ್ಲಿ ಗುಬ್ಬಿಗಳು ಎಷ್ಟೊಂದಿದ್ದವೆಂದರೆ ಅವು ಇವೆ ಎಂದೇ ಯಾರೂ ಪರಿಗಣಿಸುತ್ತಿರಲಿಲ್ಲ. ಕಮ್ತಿಯರು ಕಿರಾಣಿ ಅಂಗಡಿಯನ್ನು ಮುಚ್ಚಲಿ ತೆರೆಯಲಿ ಅವುಗಳ ಓಡಾಟಕ್ಕೇನೂ ಫರಕಾಗುತ್ತಿರಲಿಲ್ಲ. ಅವು ಅಂಗಡಿಯಲ್ಲಿ ತುಸುವಾದರೂ ಗಾಳಿಯಾಡಿಕೊಂಡಿರಲಿ ಎಂದು ಅರೆತೆರೆದಿಟ್ಟ ಪುಟಾಣಿ ಕಿಟಕಿಯಿಂದ, ಇಲ್ಲವೇ ಎದುರಿನ ದಳಿಗಳಿಂದ ಅಥವಾ ಮೇಲೆ ಗೋಡೆಗೂ ಮಾಡಿಗೂ ಇರುವ ಅಂತರದಲ್ಲಿ ಹೇಗೋ ಒಳ-ಹೊರ ಹಾರಾಡಿಕೊಂಡು ಆರಾಮಾಗಿದ್ದವು. ಕಮ್ತಿಗಳು ಬೆಲ್ಲ, ಜೀರಿಗೆ, ಮೆಣಸು ಎಲ್ಲವನ್ನೂ ಪೇಪರಿನಲ್ಲೇ ಪೊಟ್ಟಣ ಕಟ್ಟಿ ಅಗ್ಗದ ಸಪೂರ ಗೋಣಿನಾರಿನಿಂದ ಬಿಗಿದುಕೊಡುತ್ತಿದ್ದುದು ಪದ್ಧತಿ. ಆ ಗೋಣಿನಾರಿನ ಉಂಡೆಯಿಂದ ಇಳಿಬಿಟ್ಟ ಒಂದಷ್ಟು ಉದ್ದದ ಹಗ್ಗದ ಮೇಲೆ ಈ ಗುಬ್ಬಚ್ಚಿಗಳು ಹಾರಿಬಂದು ಕೂತು ಸರ್ವಪಕ್ಷ ಸಭೆ ನಡೆಸುವುದೇ ಒಂದು ಚಂದ. ಒಂದೊಂದು ಪೈಸೆಯನ್ನೂ ಲೆಕ್ಕಾಚಾರದಿಂದ ಖರ್ಚು ಮಾಡುವ ಕಮ್ತಿಗಳು ಈ ಪಾಪಚ್ಚಿ ಬಳಗದ ಧಾನ್ಯದಾಳಿಯ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ ಎಂದರೆ, ಅವು ಎಷ್ಟು ತಿಂದು ಕೆಡಿಸಿಯಾವು ನೀವೇ ಲೆಕ್ಕ ಹಾಕಿ. ಧಾನ್ಯಕ್ಕಿಂತಲೂ ಆ ಮೂಟೆಗಳಲ್ಲಿ ಆಗೀಗ ತೇವಾಂಶಕ್ಕೆ ಹುಟ್ಟುತ್ತಿದ್ದ ಹುಳುಹುಪ್ಪಟೆಗಳನ್ನು ಗೊಟಕಾಯಿಸುತ್ತಿದ್ದುದರಿಂದ ಅವು ಒಂದು ರೀತಿಯಲ್ಲಿ ಕಮ್ತಿಯವರಿಗೆ ಸಂಬಳವಿಲ್ಲದ ಸಹಾಯಕರೇ ಆಗಿದ್ದವೆನ್ನಬೇಕು.
ನಾವು ಚಿಕ್ಕವರಿದ್ದಾಗ ಕತೆ ಹೇಳಜ್ಜಾ ಕತೆ ಹೇಳು ಎಂದರೆ ಅಜ್ಜ ಹೇಳುತ್ತಿದ್ದ ಒಂದೇ ಕತೆ ಕಾಗಕ್ಕ ಗುಬ್ಬಕ್ಕನದ್ದು. ಗುಬ್ಬಕ್ಕನ ಮೊಟ್ಟೆ ಕದಿಯುವ ಕಾಗಕ್ಕ; ಕಾಗಕ್ಕನ ಕೋಕಾಯಿಗೆ ಬಿಸಿ ಬಿಸಿ ಸರಳಿನ ಬರೆ ಹಾಕಿ ಬುದ್ಧಿ ಕಲಿಸುವ ಗುಬ್ಬಕ್ಕ – ಇದೊಂದನ್ನು ಅದೆಷ್ಟು ಬಾರಿ ಕೇಳಿ ಅಜ್ಜನ ಚಾಪೆಯಲ್ಲಿ ಕಣ್ಮುಚ್ಚಿ ನಿದ್ದೆ ಹೋಗುತ್ತಿದ್ದೆವೋ! ಅದು ಬೇಡಜ್ಜಾ ಬೇರೆ ಹೇಳು ಎಂದರೆ ಆತ ಹೇಳುತ್ತಿದ್ದದ್ದು ರಾಜನ ಉಗ್ರಾಣಕ್ಕೆ ಕಳ್ಳತನದಿಂದ ನುಗ್ಗಿ ಧಾನ್ಯ ಕದಿಯುತ್ತಿದ್ದ ಗುಬ್ಬಚ್ಚಿ ಕತೆ. ನೂರೆಂಟು ಚಾನೆಲುಗಳೂ ಅವುಗಳ ನೂರೆಂಟು ಧಾರಾವಾಹಿಗಳೂ ಇಲ್ಲದ ಆ ಬಾಲ್ಯದಲ್ಲಿ ನಾವು ಕೇಳಿದ್ದ ಎಂದೆಂದೂ ಮುಗಿಯದ ಕತೆ ಅದೊಂದೇ! ಮಕ್ಕಳ ಬಾಯಲ್ಲಿ ನಾಲ್ಕು ಪದ ಹೇಳಿಸಲು ಸಾಧ್ಯವಾದರೆ ಸಾಕು, ಹೆತ್ತವರಿಗೆ ಬೇಗ ಬೇಗನೆ ಮಗುವಿನ ಸಿರಿಕಂಠದಲ್ಲಿ ಒಂದೆರಡು ಶಿಶುಗೀತೆ ಹಾಡಿಸಿ ಕೇಳುವ ಧಾವಂತ ಇರುತ್ತದೆ. ಅಂಥ ನಿರೀಕ್ಷೆಯಲ್ಲಿ ನಮ್ಮ ಮನೆಗೊಂದು ಪುಸ್ತಕ ಬಂತು. ಅದರಲ್ಲಿದ್ದ ಸರಳ ಪದ್ಯಗಳಲ್ಲಿ ಸರಳವಾಗಿದ್ದದ್ದು ಗುಬ್ಬಿಯ ಮೇಲಿನದ್ದೇ.
ಗುಬ್ಬಿ ಗುಬ್ಬಿ
ಚಿಂವ್ ಚಿಂವ್ ಎಂದು
ಕರೆಯುವೆ ಯಾರನ್ನು?
ಆಚೆ ಈಚೆ
ಹೊರಳಿಸಿ ಕಣ್ಣು
ನೋಡುವೆ ಏನನ್ನು?
ಮೇಲೆ ಕೆಳಗೆ
ಕೊಂಕಿಸಿ ಕೊರಳನು
ಹುಡುಕುವೆ ಏನಲ್ಲಿ?
ಕಾಳನು ಹುಡುಕುತ
ನೀರನು ನೋಡುತ
ಅಲೆಯುವೆ ಯಾಕಲ್ಲಿ?
ಕಾಳನು ಕೊಟ್ಟು
ನೀರನು ಕುಡಿಸುವೆ
ಆಡಲು ಬಾ ಇಲ್ಲಿ
ಹಣ್ಣು ಕೊಟ್ಟು
ಹಾಲನು ನೀಡುವೆ
ನಲಿಯಲು ಬಾ ಇಲ್ಲಿ
– ಎನ್ನುತ್ತ ಗುಬ್ಬಚ್ಚಿಯ ಪುತುಕ್ ಪುತುಕ್ ಜಿಗಿತಗಳಂತೆಯೇ ಒಂದೆರಡು ಶಬ್ದಗಳಲ್ಲಿ ಸಾಲು ಮುಗಿಯುತ್ತ ಜಿಗಿಜಿಗಿದು ಕೆಳಗಿಳಿದು ಮುಗಿದೇಹೋಗುವ ಆ ಕವಿತೆಯನ್ನು ಬರೆದವರು ಎ.ಕೆ. ರಾಮೇಶ್ವರ ಎಂಬವರಂತೆ ಎಂದು ತಿಳಿದದ್ದು ಬಹಳ ಕಾಲದ ಮೇಲೆ. ವಿಜಯಪುರದಲ್ಲಿ ಹುಟ್ಟಿ ಬದುಕಿನ ಬಹುಕಾಲವನ್ನು ಗುಲಬರ್ಗಾದಲ್ಲಿ ಕಳೆದ ರಾಮೇಶ್ವರ ಶಾಲಾಮಾಸ್ತರರಾಗಿದ್ದುದರಿಂದ ಸಹಜವಾಗಿಯೇ ಹಲವಾರು ಮಕ್ಕಳ ಪದ್ಯಗಳನ್ನೂ ಬರೆದು ಹಾಡಿ ಮಕ್ಕಳನ್ನು ಕುಣಿಸಿದರಂತೆ. ಸ್ವಲ್ಪ ದೊಡ್ಡವರಾದ ಮೇಲೆ ನಮಗೆ ಎಚ್.ಎಸ್. ವೆಂಕಟೇಶಮೂರ್ತಿಯವರ ಪದ್ಯ “ಹಾವು ಅಂದ್ರೆ ಮರಿಗುಬ್ಬಿಗೆ ಭಾರಿ ದಿಗಿಲೇನೇ, ನೆನೆಸಿಕೊಂಡ್ರೆ ಮೈ ನಡುಗುತ್ತೆ ಹಾಡೇ ಹಗಲೇನೇ”, ಬಿ.ಆರ್. ಛಾಯಾ ಅವರ ಕಿಶೋರಿಕಂಠದಲ್ಲಿ ಕೇಳಲು ಸಿಕ್ಕಿತು. ಗುಬ್ಬಿಯ ಅಸಹಾಯಕ ಸಂಸಾರ, ಅದನ್ನು ಕಬಳಿಸಲು ಬರುವ ಹಾವು, ಗುಬ್ಬಿಯ ಮೊಟ್ಟೆಯನ್ನು ನುಂಗಿದ ಮೇಲೆ ಅದು ಹಾವಿನ ಮೊಟ್ಟೆಯಾಗಿ ಬದಲಾಗುವ ಪರಿ, ಇವೆಲ್ಲ ನಮ್ಮನ್ನು ರೋಮಾಂಚನಗೊಳಿಸುತ್ತಿದ್ದವು. ಆ ಪದ್ಯ ಬಡವರ, ಉಳ್ಳವರ ನಡುವಿನ ಸಂಘರ್ಷದ ರೂಪಕವೂ ಆಗಬಹುದೆಂಬ ತಿಳಿವಳಿಕೆಯೆಲ್ಲ ಆಗ ಇರಲಿಲ್ಲ ಬಿಡಿ.
ಗುಬ್ಬಿ ಹೇಳಿಕೇಳಿ ಪುಟಾಣಿ ಪಕ್ಷಿ. ಇದು ನಮ್ಮ ದೇಶದ್ದಲ್ಲ; ಗದ್ದೆಗಳಲ್ಲಿ ಹಾವಳಿ ಕೊಡುತ್ತಿದ್ದ ಪುಟ್ಟ ಹುಳುಗಳನ್ನು ಹುಡುಕಿ ತಿನ್ನಲೆಂದೇ ಇದನ್ನು ಆಮದು ಮಾಡಿಕೊಂಡರು ಎಂದೂ ಹೇಳುತ್ತಾರೆ. ಹಾಗೆ ಬ್ರಿಟನ್ ಅಥವಾ ಆಫ್ರಿಕದಿಂದ ನೂರು ಗುಬ್ಬಿಗಳನ್ನು ಪ್ರಾಯೋಗಿಕವಾಗಿ ತರಿಸಲಾಯಿತಂತೆ. ವರ್ಷದಲ್ಲಿ ಮೂರ್ನಾಲ್ಕು ಸಲ ಮೊಟ್ಟೆ ಇಡಬಲ್ಲ ಗುಬ್ಬಿಗಳು ನೋಡನೋಡುತ್ತಿದ್ದಂತೆ ಭರತಖಂಡದಲ್ಲಿ ಗುಬ್ಬಿಸಂಖ್ಯಾಸ್ಫೋಟ ಮಾಡಿಬಿಟ್ಟವಂತೆ. ಅಮೆರಿಕಾದಲ್ಲಿ ಕೂಡ ಗುಬ್ಬಚ್ಚಿ ಮೊದಲು ಇರಲಿಲ್ಲ. 1870ರ ನಂತರ ಅಲ್ಲಿನ ಮೂರ್ನಾಲ್ಕು ಊರುಗಳಲ್ಲಿ ಗುಬ್ಬಚ್ಚಿಗಳನ್ನು ತಂದು ಬಿಟ್ಟರು. ಕೇವಲ ಹತ್ತು ವರ್ಷಗಳ ಅವಧಿಯಲ್ಲಿ ಗುಬ್ಬಿಗಳು ಇಡೀ ಅಮೆರಿಕಾದಲ್ಲಿ ತಮ್ಮ ವಸಾಹತು ನೆಲೆಗಳನ್ನು ಸ್ಥಾಪಿಸಿಕೊಂಡುಬಿಟ್ಟವು. ಸಾಧಾರಣವಾಗಿ ಹುಟ್ಟಿ ಬೆಳೆದ ಪರಿಸರದ ಆಚೀಚಿನ ಮುನ್ನೂರು ಕಿಲೋಮೀಟರ್ ಬಿಟ್ಟು ಜಾಸ್ತಿ ದೂರವನ್ನು ಕ್ರಮಿಸದ ಗುಬ್ಬಿಗಳು ಮೊದಲ ಬಾರಿಗೆ ಉತ್ತರ ಆಫ್ರಿಕಾದಲ್ಲಿ ಕಂಡುಬಂದರೂ ಪೂರ್ವ ಮತ್ತು ದಕ್ಷಿಣ ಆಫ್ರಿಕಾಗಳಿಗೆ ಭೇಟಿ ಕೊಟ್ಟಿರಲಿಲ್ಲ. ಅವನ್ನು ಉತ್ತರದಿಂದ ಗೂಡುಗಳಲ್ಲಿ ತಂದು ಆಫ್ರಿಕಾದ ಉಳಿದ ಭಾಗಗಳಲ್ಲಿ ಹರಡಬೇಕಾಯಿತು ಎಂದರೆ ಆಶ್ಚರ್ಯ ಆಗುತ್ತಲ್ಲವೆ? ಮುಂದೆ ಅಲ್ಲಿಂದ ಭಾರತ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ದೇಶಗಳಿಗೂ ಗುಬ್ಬಿಗಳನ್ನು ಪಾರ್ಸೆಲ್ ಮಾಡಿದರು. ಹೀಗೆ ಬ್ರಿಟಿಷರ ಗುಬ್ಬಿ ಪ್ರೀತಿಯಿಂದಾಗಿ ಅವರ ವಸಾಹತುಗಳು ಎಲ್ಲೆಲ್ಲಿದ್ದವೋ ಅಲ್ಲೆಲ್ಲ ಗುಬ್ಬಿಗಳೂ ತಮ್ಮ ಯೂನಿಯನ್ ಜ್ಯಾಕ್ ಬಾವುಟ ಹಿಡಿದು ಹಾರಾಡಿದವು.
ಪ್ರಾಚೀನ ಕಾಲದಲ್ಲಾದರೂ ಈ ಹಕ್ಕಿ ನಮ್ಮ ದೇಶದಲ್ಲಿತ್ತೇ? ಜನರ ಸಖ್ಯವನ್ನು ತುಂಬ ಇಷ್ಟಪಡುವ ಈ ವಿಚಿತ್ರ ಖಗ ಜನರಿಂದ ತುಂಬಿತುಳುಕುತ್ತಿದ್ದ ಭರತಖಂಡದಲ್ಲಿ ಇದ್ದಿರುವ ಸಾಧ್ಯತೆಯೇನೋ ಇದೆಯೆನ್ನೋಣ. ಆದರೆ, ಗುಬ್ಬಿ ಹತ್ತೊಂಬತ್ತನೇ ಶತಮಾನದಿಂದೀಚೆಗೆ ಭಾರತಕ್ಕೆ ಬಂದದ್ದರಿಂದಲೇ ಅದರ ಪ್ರಸ್ತಾಪ ನಮ್ಮ ಪ್ರಾಚೀನ ಕಾವ್ಯ-ಪುರಾಣಗಳಲ್ಲಿ ಇಲ್ಲ ಎನ್ನುತ್ತಾರೆ ಓದಿಕೊಂಡವರು. ಅದೂ ಇರಬಹುದೇನೋ. ಮಹಾಭಾರತದ ಕೊನೆಯಲ್ಲಿ ಖಾಂಡವವನ ದಹಿಸಿದಾಗ ಯಾವ್ಯಾವ ಪಕ್ಷಿಗಳು ಸುಟ್ಟವೆಂದು ಲೆಕ್ಕ ಕೊಡುವಾಗಲೂ ಕುಮಾರವ್ಯಾಸ ಗುಬ್ಬಿಯನ್ನು ಬಿಟ್ಟಿದ್ದಾನೆ. ಅದು ಆಗ ನಿಜಕ್ಕೂ ಈ ದೇಶದಲ್ಲಿ ಇರಲಿಲ್ಲವೋ ಅಥವಾ ಆಗಲೂ ಈಗಿನಂತೆ ಕಾಡು ತೊರೆದು ಮನುಷ್ಯರ ಅಕ್ಕಪಕ್ಕದಲ್ಲೇ ಓಡಾಡುತ್ತ ನಗರವಾಸಿಯಾಗಿತ್ತೋ ಯಾರು ಬಲ್ಲರು! ಕಾವ್ಯಗಳಲ್ಲಿ ಇಲ್ಲದೆ ಹೋದರೂ ಗಾದೆಮಾತುಗಳಲ್ಲಿ ಗುಬ್ಬಿ ಇದೆ. ಗುಬ್ಬಿ ಮೇಲೆ ಬ್ರಹ್ಮಾಸ್ತ್ರವೇ ಎಂಬುದನ್ನು ಕೇಳಿಯೇ ಇದ್ದೇವಲ್ಲ. “ಗುಬ್ಬಿಯ ಹಾಗೆ ಆಯ್ಕೊಂಡ್ ತಿನ್ನೋರಿಗೆ ಅಹಂಕಾರ ಇರಬಾರದು” ಅಂತ ಬಯಲುಸೀಮೆಯಲ್ಲಿ ಗಾದೆಯುಂಟಂತೆ. ಒಂದೊಂದು ನಕ್ಷತ್ರದ ಮಳೆಯ ಬಗ್ಗೆಯೂ ಒಂದೊಂದು ಬಗೆಯ ವರ್ಣನೆ ಮಾಡುವ ಹಳ್ಳಿಗರು ಹುಬ್ಬಾ ನಕ್ಷತ್ರದ ಮಳೆ ಬಗ್ಗೆ ಹೇಳುವಾಗ “ಹುಬ್ಬಿ ಮಳೆಗೆ ಗುಬ್ಬಿ ಪುಚ್ಛ ತೊಯ್ಯೋದಿಲ್ಲ” ಎನ್ನುವುದನ್ನು ಕೇಳಿದ್ದೇನೆ.
ಇನ್ನು, ಆಡುಮಾತಿನಲ್ಲೂ ಗುಬ್ಬಿಯ ಪ್ರಸ್ತಾಪ ಆಗೀಗ ಬಂದೇ ಬರುವುದುಂಟು. ನಾವು ಶಾಲೆ ಕಲಿಯುತ್ತಿದ್ದಾಗ ಇಪ್ಪತ್ತು ಪೈಸೆಗೊಂದರಂತೆ ಅಂಗೈ ತುಂಬುವಷ್ಟು ದೊಡ್ಡ ಕಿತ್ತಳೆ ಮಿಠಾಯಿ ಸಿಗುತ್ತಿತ್ತು. ಅದನ್ನು ನುಂಗಲು ನಮಗೆ ಭಯ ಮತ್ತು ನಾಚಿಕೆ. ಒಬ್ಬರೇ ಬಾಯಿಗೆ ಹಾಕಿಕೊಂಡು ಕರಗಿಸುವ ಭರದಲ್ಲಿ ಅದು ಜಾರಿ ಗಂಟಲಿಗೆ ಹೋಗಿ ಸಿಕ್ಕಿಕೊಂಡರೇನು ಗತಿ ಎಂದು ಭಯ. ಮೂತಿಯನ್ನು ಕೋತಿಯಂತೆ ಉಬ್ಬಿಸಿಕೊಳ್ಳದೆ ಆ ರಾಕ್ಷಸ ಮಿಠಾಯಿಯನ್ನು ಅಡಗಿಸಲು ಸಾಧ್ಯವಿಲ್ಲದ ಕಾರಣ ಗೆಳೆಯರ ಮುಂದೆ ಕಾಣಿಸಿಕೊಳ್ಳಲು ನಾಚಿಕೆ. ಹೀಗಾಗಿ ಮಿಠಾಯಿಯನ್ನು ಅಂಗಿಯ ತುದಿಯಲ್ಲಿ ಸುತ್ತಿ ಕಚಕ್ಕೆಂದು ಕಚ್ಚಿ ತುಂಡಾಗಿಸಿ, ಅದರಲ್ಲೊಂದು ಭಾಗವನ್ನು ಗೆಳೆಯರಿಗೆ ಕೊಟ್ಟು ನಮ್ಮ ಪಾಪದಲ್ಲಿ ಸಹಭಾಗಿಗಳನ್ನಾಗಿ ಮಾಡಿಕೊಳ್ಳುತ್ತಿದ್ದೆವು. ಹೀಗೆ ಕೊಟ್ಟರೂ ತೆಗೆದುಕೊಳ್ಳುವವರ ಧಿಮಾಕೇನು ಕಮ್ಮಿಯೇ? ಅಯ್ಯೋ ಕಚ್ಚಿಬಿಟ್ಟಿಯಲ್ಲೋ! ಮೊನ್ನೆಯಷ್ಟೇ ಉಪನಯನ ಆಗಿದೆ ನನಗೆ, ಎಂಜಲು ತಿನ್ನಬಾರದು ಅಂತ ಹೇಳಿದ್ದಾರಲ್ಲೋ ಎಂಬ ಧರ್ಮಸಂಕಟ ಕೈಯೊಡ್ಡಿದವನಿಗೆ. ಪರವಾಗಿಲ್ಲ ತಗೊಳ್ಳೋ. ಬಟ್ಟೆ ಸುತ್ತಿ ಕಚ್ಚಿದೀನಿ. ಇದು ಗುಬ್ಬಿ ಎಂಜಲು ಎಂಬ ಧರ್ಮಪರಿಹಾರ ದಾನ ಕೊಟ್ಟವನದ್ದು! ಮನೆಯ ಒಳಹೊರಗೆ ಓಡಾಡುತ್ತಲೇ ಇರುವುದರಿಂದ ಸಿಕ್ಕಿದ್ದಕ್ಕೆಲ್ಲ ಬಾಯಿ ಹಾಕಿರಬಹುದಾದ ಗುಬ್ಬಿ ಹೀಗೆ ಯಾವುದೋ ಸಮಯದಲ್ಲಿ ತನ್ನ ಇಷ್ಟದ ಹೋಳಿಗೆಯ ರುಚಿ ಸವಿದದ್ದನ್ನು ಕಂಡ ಮಡಿವಂತನೊಬ್ಬ, ಗುಬ್ಬಿಯ ಎಂಜಲಿಗೆ ನಿಷೇಧವಿಲ್ಲ ಎಂಬ ಸ್ವಯಂಶಾಸ್ತ್ರ ಮಾಡಿಕೊಂಡು ಹೋಳಿಗೆ ಮೆದ್ದು ಈ ಪದಪುಂಜ ಹುಟ್ಟಿಸಿರಬೇಕು! ಹಾಗೆಯೇ, ನಡೆಯುವುದನ್ನು ಮರೆತವರಂತೆ ಸದಾ ಜಿಗಿದಾಡುತ್ತಲೇ ಇದ್ದರೆ ಗುಬ್ಬಿನಡಿಗೆ ಎನ್ನುತ್ತಾರೆ. ಅದಕ್ಕೆ ಕಾರಣ ಗುಬ್ಬಿ ನಡೆಯುವುದನ್ನು ನಾವ್ಯಾರೂ ನೋಡಿಲ್ಲ ಎಂಬುದೇ. ಹೆಚ್ಚೆಂದರೆ 40 ಗ್ರಾಂ ತೂಗುವ ಗುಬ್ಬಿಯ ತೃಣಭಾರವನ್ನೂ ಅದರ ಕಡ್ಡಿಯಂತಹ ಕಾಲುಗಳು ತಾಳಿಕೊಳ್ಳಲಾರವು. ಹಾಗಾಗಿ ನಡೆಯಹೋದರೆ ಕೀಲು ಮುರಿಯುವ ಸಂಭವವಿರುವುದರಿಂದ ಗುಬ್ಬಿ ಜಿಗಿಯುತ್ತದೆ. ಎರಡಡಿಗಿಂತ ಹೆಚ್ಚು ದೂರಕ್ಕೆ ಹೋಗಬೇಕಾದರಂತೂ ಹಾರಿಯೇ ಬಿಡುತ್ತದೆ! ಕಾಂಗರೂಗಳಂತೆ ದೇವರು ಈ ಗುಬ್ಬಿಗಳಿಗೂ ನಡೆಯುವ ಸುಖ ಕಸಿದುಕೊಂಡುಬಿಟ್ಟಿರುವುದು ಒಂದು ದುರಂತ.
ಒಮ್ಮೆ ಸಲೀಂ ಎಂಬ ಚಿಕ್ಕ ಹುಡುಗ ತನ್ನ ಮನೆಯ ಹಿತ್ತಲಿನ ಕುದುರೆ ಲಾಯದಲ್ಲಿ ಗುಬ್ಬಿ ಸಂಸಾರವೊಂದನ್ನು ಕಂಡು ಅವುಗಳಲ್ಲೊಂದು ಹಕ್ಕಿಯನ್ನು ಆಟಿಕೆಯ ಗನ್ನಿನಿಂದ ಕೊಂದೇ ಬಿಟ್ಟನಂತೆ. ಗಂಡಿನ ಜೊತೆಯಿಲ್ಲದೆ ಹೆಣ್ಣು ಗುಬ್ಬಿ ಜಾಗ ಖಾಲಿ ಮಾಡುತ್ತದೆ ಎಂದು ಬಗೆದಿದ್ದನಾತ. ಆದರೆ ಮರುದಿನ ಅಲ್ಲಿಗೆ ಬಂದರೆ, ಹೆಣ್ಣು ಮತ್ಯಾವುದೋ ಹೊಸ ಗಂಡನನ್ನು ಮನೆಗೆ ಕರೆದು ತನ್ನ ಮರಿಗಳ ರಕ್ಷಣೆಗಾಗಿ ಕವಾಯತು ಮಾಡಿಸುತ್ತಿತ್ತಂತೆ. ಎಲಾ ಅಂದುಕೊಂಡ ಬಾಲಕ ಅದನ್ನೂ ಮುಗಿಸಿಬಿಟ್ಟ. ಹೀಗೆ ಏಳು ದಿನ ನಿರಂತರವಾಗಿ ಏಳು ಹಕ್ಕಿಗಳನ್ನು ಕೊಂದರೂ ಪ್ರತಿದಿನ ಹೆಣ್ಣುಗುಬ್ಬಿ ಒಂದಿಲ್ಲೊಂದು ಹೊಸಬನನ್ನು ವರಿಸಿಕೊಂಡು ಬಂದು ತನ್ನ ವಂಶದ ರಕ್ಷಣೆಗೆ ನಿಂತುಬಿಟ್ಟಿತ್ತು. ಬೊಗಸೆಯಷ್ಟಿರುವ ಪುಟ್ಟ ಹಕ್ಕಿಯ ಜೀವದಲ್ಲೇ ಇಷ್ಟೊಂದು ಜೀವನಾಸಕ್ತಿ ಇರಬಹುದಾದರೆ ಇನ್ನುಳಿದ ಹಕ್ಕಿಗಳ ಬದುಕು ಅದೆಷ್ಟು ರೋಚಕವಾಗಿರಬಹುದೆಂದು ಭಾವಿಸಿದ ಹುಡುಗ ಪಕ್ಷಿಗಳನ್ನೇ ಅಧ್ಯಯನ ಮಾಡುವ ನಿರ್ಧಾರ ಮಾಡಿಬಿಟ್ಟನಂತೆ. ಸಲೀಂ ಹೋಗಿ ಮುಂದೆ ಭಾರತದ ಹಕ್ಕಿಮನುಷ್ಯ ಎಂದೇ ಗುರುತಿಸಿಕೊಂಡ ಪದ್ಮವಿಭೂಷಣ ಸಲೀಂ ಅಲಿ ಆದ್ದದ್ದಕ್ಕೆ ಸ್ಪೂರ್ತಿ ಆ ಛಲದಂಕ ಹೆಣ್ಣು ಮತ್ತು ಬಲಿಯಾದ ಆಕೆಯ ಅಮಾಯಕ ಏಳು ಗಂಡಂದಿರು. ಆದರೂ ಒಂದಲ್ಲ ಎರಡಲ್ಲ ಏಳು ಪಕ್ಷಿಗಳನ್ನು ಸಾಲಾಗಿ ಹೆಣ ಮಲಗಿಸಬೇಕಾದರೆ ಸಲೀಮರ ಮನಸ್ಸು ಅದೆಷ್ಟು ಕಟುವಾಗಿತ್ತಪ್ಪಾ ಎಂದು ನನಗೆ ಅನ್ನಿಸಿದೆ. ಸಲೀಂ ಅಲಿಯವರು ತನ್ನ ಜೀವನದ ಎಪ್ಪತ್ತಕ್ಕೂ ಹೆಚ್ಚು ವರ್ಷಗಳನ್ನು ಪಕ್ಷಿಗಳೊಂದಿಗೆ ಕಳೆದರು. ಸಾವಿರಾರು ಪಕ್ಷಿಗಳ ಜೀವನ ವಿಧಾನ ಅಭ್ಯಾಸ ಮಾಡಿದರು. ಅದೆಷ್ಟೋ ನೂರು ಪಕ್ಷಿಗಳನ್ನು ಹೊಸದಾಗಿ ಜಗತ್ತಿಗೆ ಪರಿಚಯಿಸಿ ಜನರಲ್ಲಿ ಕುತೂಹಲಪ್ರವೃತ್ತಿ ಬೆಳೆಸಿದರು. ಅಷ್ಟೆಲ್ಲ ಆದರೂ ಅವರಿಗೆ ತಾನು ಬಾಲ್ಯದಲ್ಲಿ ಹೊಡೆದು ಕೊಂದ ಗುಬ್ಬಚ್ಚಿಗಳ ನೆನಪು ಮಾತ್ರ ಅಳಿಸಿಹೋಗಲೇ ಇಲ್ಲವೆಂದು ಕಾಣುತ್ತದೆ. ಸಲೀಂ ಅಲಿಯವರು ತನ್ನ ದೀರ್ಘ ಪಕ್ಷಿಜೀವನದ ಅಂತ್ಯಕ್ಕೆ ಬರೆದ ಆತ್ಮಕತೆಯ ಹೆಸರು – “ದ ಫಾಲ್ ಆಫ್ ಎ ಸ್ಪ್ಯಾರೋ”!
ಡೋಡೋ ಹಕ್ಕಿಗಳಂತೆ ಗುಬ್ಬಿಗೂ ಮನುಷ್ಯನೆಂದರೆ ಭಯವಿಲ್ಲ. ಆತನ ಅಕ್ಕಪಕ್ಕದಲ್ಲೇ ಆರಾಮಾಗಿ ಓಡಾಡಿಕೊಂಡಿರುವ ಅದ್ಯಾವ ಧೈರ್ಯವನ್ನು ಪ್ರಕೃತಿ ಈ ಪುಟ್ಟಪಕ್ಷಿಯ ಎದೆಯೊಳಗೆ ನೆಟ್ಟಿದೆಯೋ ತಿಳಿಯದು. ಹೀಗೆ ಮನುಷ್ಯನ ತೀರ ಸನಿಹದಲ್ಲಿ ಓಡಾಡಿಕೊಂಡಿರುವುದಕ್ಕೇ ಅದರ ಮೇಲೆ 5000ಕ್ಕೂ ಹೆಚ್ಚು ಸಂಶೋಧನಾ ಲೇಖನಗಳು ಬರೆಯಲ್ಪಟ್ಟಿವೆಯಂತೆ! ಇಂದಿಗೂ ಹಳ್ಳಿಗಳಲ್ಲಿ ಬಾವಲಿಯೊಂದು ಅಪ್ಪೀತಪ್ಪಿ ಮನೆಯೊಳಗೆ ಹಾರಿಕೊಂಡು ಬಂದರೂ ಹಾವು ಮೆಟ್ಟಿದಂತಾಡುವ ಜನ ಗುಬ್ಬಿಗಳಿಗೆ ಮಾತ್ರ ನಿರಾತಂಕವಾದ ಪ್ರವೇಶಾನುಮತಿ ಕೊಟ್ಟಿದ್ದಾರೆ. ಅದಕ್ಕೆ ಸರಿಯಾಗಿ ಗುಬ್ಬಿಗಳಿಗೂ ತಮ್ಮ ಸಂಸಾರ ಹೂಡಲು ಮನೆಯೊಳಗಿನ ನಾಗೊಂದಿಗೆಯೋ ಕೆಟ್ಟು ಕೂತ ಗಡಿಯಾರದ ಹಿಂಭಾಗವೋ ದೇವರ ಪಟದ ಸಂದಿಯೋ – ಇಂಥವೇ ಆಗಬೇಕು! ಗುಬ್ಬಿಯ ಗೂಡು ಕಿತ್ತರೆ ಏಳೇಳು ಜನ್ಮಗಳಲ್ಲಿ ಅಂತರಪಿಶಾಚಿಯಾಗಿ ಅಲೆಯಬೇಕೆಂಬ ದೇವರ ಶಾಪದ ರಕ್ಷೆ ಇರುವದರಿಂದಲೇ ಅವಕ್ಕೆ ಸದರ ಇರಬೇಕು! ತೀರಾ ಸಲಿಗೆ ಬೆಳೆದರೆ ಹಳ್ಳಿಮನೆಗಳಲ್ಲಿ ಗುಬ್ಬಿಗಳು ಊಟದ ತಟ್ಟೆಗೇ ಬಾಯಿ ಹಾಕುವುದೂ ಉಂಟು! ಒಂದಾನೊಂದು ಕಾಲದಲ್ಲಿ, ಅಂದರೆ ಸಾವಿರ ವರ್ಷಗಳ ಹಿಂದೆ, ಮನುಷ್ಯನ ಸಂಪರ್ಕಕ್ಕೆ ಬರುವುದಕ್ಕಿಂತ ಮುಂಚೆ, ಹುಳುಹುಪ್ಪಟೆ ತಿಂದು ಹೊಟ್ಟೆ ಹೊರೆಯುತ್ತ ಅರಣ್ಯವಾಸಿಗಳಾಗಿದ್ದ ಗುಬ್ಬಿಗಳು ಮನುಷ್ಯನ ಸಹವಾಸ ಬೆಳೆದ ಮೇಲೆ ಅವನೊಡನೆ ಸೇರಿ ಅಕ್ಕಿ, ಧಾನ್ಯ, ಬಿಸ್ಕೇಟು, ಪಾಯಸ ಎಲ್ಲದರ ರುಚಿಯನ್ನೂ ನೋಡತೊಡಗಿದವು. ಇಂಗ್ಲೆಂಡಿನಲ್ಲಿ ಕಳೆದ ಶತಮಾನದ ಪ್ರಾರಂಭದಲ್ಲಿ ಯಥೇಚ್ಛವಾಗಿದ್ದ ಗುಬ್ಬಚ್ಚಿ ಸಂತಾನ ಶತಮಾನಾಂತ್ಯಕ್ಕೆ ಮಾತ್ರ ಗಣನೀಯ ಪ್ರಮಾಣದಲ್ಲಿ ಕುಸಿಯಿತು. 1994ರಿಂದ 2000ನೇ ಇಸವಿಯ ಹದಿನಾರು ವರ್ಷಗಳಲ್ಲಿ ಅಲ್ಲಿ, ಗುಬ್ಬಚ್ಚಿಗಳ ಸಂಖ್ಯೆ 75%ರಷ್ಟು ಕಣ್ಮರೆಯಾಯಿತು! ಅಲ್ಲಿ ಮಾತ್ರವಲ್ಲ, ಇಡೀ ಪ್ರಪಂಚದಲ್ಲಿ ಕಳೆದೆರಡು ದಶಕಗಳಲ್ಲಿ ಗುಬ್ಬಿಗಳ ಸಂಖ್ಯೆ ಗಣನೀಯವಾಗಿ ಇಳಿದಿದೆ. ಮೊಬೈಲ್ ತರಂಗಗಳಿಂದ ಹಿಡಿದು ವಿಕಿರಣಶೀಲ ವಸ್ತುಗಳವರೆಗೆ ನೂರಾರು ಕಾರಣಗಳನ್ನು ವಿಜ್ಞಾನಿಗಳು ಮುಂದು ಮಾಡಿದರೂ ಯಾವುದೂ ಸಮರ್ಪಕವಾಗಿ ಗುಬ್ಬಿಗಳ ವಿನಾಶವನ್ನು ವಿವರಿಸಲು ಸಾಧ್ಯವಾಗಿಲ್ಲ.
ಮನುಷ್ಯನ ಸಾಮೀಪ್ಯವನ್ನು ಬಹಳಷ್ಟು ಇಷ್ಟ ಪಡುತ್ತಿದ್ದ ಗುಬ್ಬಿಗಳು ಲಕ್ಷಲಕ್ಷ ಸಂಖ್ಯೆಯಲ್ಲಿ ಮನುಷ್ಯನಿರುವ ನಗರಾರಣ್ಯಗಳನ್ನೇ ತೊರೆದುಹೋಗಿರುವುದು ನಿಜಕ್ಕೂ ಕಳವಳಕಾರಿ. ನಗರಗಳನ್ನು ಬೆಳೆಸಿದ ಮೇಲೆ ನಾವು ಕಳೆದುಕೊಂಡಿರುವ ಬಹುಮುಖ್ಯ ಸಂಗತಿಗಳು ಎಷ್ಟೆಷ್ಟು! ಹಸಿರು ಹಾದಿ, ತೋಟ ಗದ್ದೆ, ಮಳೆಗಾಲಕ್ಕೆ ಪಾಚಿಗಟ್ಟುತ್ತಿದ್ದ ಅಂಗಳ, ವಿಶಾಲ ಕೆರೆಗಳಲ್ಲಿ ಕಂಠಮಟ್ಟ ಮುಳುಗಿ ನಿಲ್ಲುತ್ತಿದ್ದ ಸೋಮಾರಿ ಎಮ್ಮೆಗಳು, ರಾತ್ರಿಯಿಡೀ ಕುರ್ರೋಬರ್ರೋ ಎನ್ನುತ್ತಿದ್ದ ಜೀರುಂಡೆಗಳು, ಹಳ್ಳಿ ಮನಸ್ಸುಗಳಲ್ಲಿ ಸದಾ ಜೀವಂತವಿದ್ದ ಅಮವಾಸ್ಯೆಯ ಬಿಳೀ ದೆವ್ವಗಳು ಮತ್ತು ಜೀವನವೆಂಬ ಸಂಗೀತಕ್ಕೆ ಹಿಮ್ಮೇಳದವರಾಗಿ ಚೀಂವ್ ಚೀಂವ್ ಎನ್ನುತ್ತ ಸದಾ ಬಳಿಯಲ್ಲಿದ್ದ ಗುಬ್ಬಚ್ಚಿಗಳು – ಈ ಎಲ್ಲವನ್ನೂ ಬಲಿಗೊಟ್ಟಿದ್ದೇವೆ ನಗರವೆಂಬ ನರಕವನ್ನು ಎಬ್ಬಿಸಲಿಕ್ಕಾಗಿ! ಹೌದು, ನಗರಗಳಲ್ಲಿ ಇತ್ತೀಚೆಗೆ ಗುಬ್ಬಿಗಳ ಸಂಖ್ಯೆ ಇಳಿಮುಖವಲ್ಲ, ಸೊನ್ನೆಯೇ ಆಗಿದೆ. ಯಾಕೆಂದರೆ, ಯಾವ ಮನೆಯಲ್ಲಿ ಈಗ ದೇವರ ಪಟಗಳನ್ನು ತೂಗುಹಾಕುತ್ತಾರೆ? ಯಾವ ಮನೆಗಳಲ್ಲಿ ಹಗಲುರಾತ್ರಿ ಗಾಳಿಯಾಡುವ ಮರದ ದಳಿಗಳ ದೊಡ್ಡ ಕಿಟಕಿಗಳಿವೆ? ಯಾವ ಮನೆಯಲ್ಲಿ ಬಾಗಿಲು, ಕಿಟಕಿ, ನಾಗೊಂದಿಗೆಗಳಿಗೆ ಹೊಸ ಪೈರಿನ ತೆನೆ ಕಟ್ಟುತ್ತಾರೆ? ಯಾವ ಮನೆಗಳಲ್ಲಿ ಅಂಗಳ ತೊಳೆದು ಅಕ್ಕಿ ಹಿಟ್ಟಿನ ರಂಗೋಲಿ ಇಡುತ್ತಾರೆ? ನಗರಗಳ ಕಸದ ತೊಟ್ಟಿಯಲ್ಲೂ ಗುಬ್ಬಿಗಳಿಗೆ ಸಿಗುವುದು ಪುಟಾಣಿ ಕೊಕ್ಕಿಗೆ ಅಂಟಿಕೊಂಡು ಯಾತನೆ ಕೊಡುವ ಗೋಂದುರೊಟ್ಟಿ ಪಿಜ್ಜಾಗಳೇ ಅಲ್ಲವೆ? ಹಾಗಾಗಿ ಗುಬ್ಬಿಗಳು ಈ ನಗರದ ಜನರ ಸಹವಾಸವೇ ಸಾಕೆಂದು ರೈಟ್ ಎಂದಿವೆ. ಗಲಭೆ ಗೊಂದಲಗಳಿಂದ ದೂರವಾದ ಪ್ರಶಾಂತ ಹಳ್ಳಿಗಳನ್ನು ಆಯ್ದುಕೊಂಡು ನಿವೃತ್ತಿಜೀವನ ನಡೆಸುತ್ತಿವೆ. ಮೊನ್ನೆ ಒಬ್ಬ ಗೆಳೆಯರು ದಾಂಡೇಲಿಯ ಮೈಯೆಲ್ಲ ಚಿಗುರೆಲೆಗಳನ್ನು ತೊಟ್ಟು ಮೈಚಳಿ ಬಿಟ್ಟು ನಿಂತ ಮರದ ಚಿತ್ರ ಕಳಿಸಿದ್ದರು. ಕಣ್ಣಗಲಿಸಿ ನೋಡಿದರೆ ಎಲೆಗಳೇ ಅವು? ಒಂದೊಂದು ಗೆಲ್ಲಿಗೂ ಜೋತುಬಿದ್ದು ತೊನೆದಾಡುವ ಗುಬ್ಬಚ್ಚಿಗಳು! ಆಹಾ! ಇಲ್ಲಾದರೂ ಚೆನ್ನಾಗಿರಲಿ ಎಂದು ಮನಸು ಹಾರೈಸಿತು.
Super bro.
ಅದ್ಬುತ ಲೇಖನ, ಧನ್ಯವಾದ ನಿಲುಮೆಗೆ
ಗುಬ್ಬಚ್ಚಿಗಳ ಬಗ್ಗೆ ಬರೆದ ಲೇಖನ ತುಂಬಾ ಚೆನ್ನಾಗಿದೆ… ಬದಲಿದ ಮನೆಗಳ ವಿನ್ಯಾಸ, ನಮ್ಮ ಆಹಾರ ಶೇಖರಿಸುವ ಕ್ರಮ, ವ್ಯವಸಾಯ ಪದ್ದತಿ, ಮೊಬೈಲ್ ಸಿಗ್ನಲ್ ಗಳೂ….ಹೀಗೆ ಆಧುನಿಕತೆಯೇ ಗುಬ್ಬಚ್ಚಿಗಳ ನಾಶಕ್ಕೆ ಪ್ರತ್ಯಕ್ಷ ಯ ಪರೋಕ್ಷ ಕಾರಣ…… http://kannada.readoo.in/2016/05/%e0%b2%97%e0%b3%81%e0%b2%ac%e0%b3%8d%e0%b2%ac%e0%b2%9a%e0%b3%8d%e0%b2%9a%e0%b2%bf-%e0%b2%97%e0%b3%82%e0%b2%a1%e0%b2%bf%e0%b2%a8%e0%b2%b2%e0%b3%8d%e0%b2%b2%e0%b2%bf