ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 18, 2016

ದೇವಾಲಯಗಳ ಮೇಲೆ ಸರಕಾರದ ವಕ್ರದೃಷ್ಟಿ

‍ನಿಲುಮೆ ಮೂಲಕ

ಡಾ. ಸಂತೋಷ್ ಕುಮಾರ್ ಪಿ.ಕೆ
ಶಿವಮೊಗ್ಗ

tirumalaಕಳೆದ ಹಲವಾರು ದಶಕಗಳಿಂದ ಭಾರತದಲ್ಲಿ ಒಂದು ವಿಚಾರ ಚಾಲ್ತಿಯಲ್ಲಿದೆ, ಅದೆಂದರೆ ಸರ್ಕಾರವು ದೇವಾಲಯಗಳನ್ನು ತನ್ನ ಅಧೀನಕ್ಕೆ ತೆಗೆದುಕೊಳ್ಳುವುದು. ಇದರ ಕುರಿತು ವ್ಯಾಪಕವಾದ ಚರ್ಚೆಯಾಗಲಿ ಅಥವಾ ವಿರೋಧವಾಗಲಿ ಆಗಿಲ್ಲವಾದ್ದರಿಂದ ಸರ್ಕಾರಗಳು ಕಾನೂನಿನ ಹೆಸರಲ್ಲಿ ಸ್ವೇಚ್ಚಾಚಾರವಾಗಿ ದೇವಾಲಯಗಳ ಮೇಲೆ ಆಕ್ರಮಣ ಮಾಡುತ್ತಾ ಬಂದಿವೆ. ಮಹಮದ್ ಘೋರಿ, ಘಜ್ನಿ ಇವರುಗಳ ದಾಳಿಯಲ್ಲಿ ಭಾರತದ ದೇವಾಲಯಗಳು ಭೌತಿಕವಾಗಿ ನಾಶವಾದರೆ, ಆಧುನಿಕ ಕಾಲಘಟ್ಟದಲ್ಲಿ ಬಂದ ಸರ್ಕಾರಗಳಿಂದ ಇಡೀ ದೇವಾಲಯದ ಪರಂಪರೆ ನಾಶ ಹೊಂದುತ್ತಿರುವುದು ಖಚಿತ. ಇತ್ತೀಚೆಗಷ್ಟೆ ಗೋಕರ್ಣ ದೇವಾಲಯವನ್ನು ಮಠದ ಸುಪರ್ದಿಯಿಂದ ಬಿಡುಗಡೆಗೊಳಿಸಿ ಸರ್ಕಾರ ತನ್ನ ವಶಕ್ಕೆ ತೆಗೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅದರ ಕುರಿತು ಚರ್ಚಿಸಲು ಸಕಾಲ ಒದಗಿದೆ.

ಮಗ ಎಲ್ಲಾ ಬಿಟ್ಟ ಭಂಗಿ ನೆಟ್ಟ ಎನ್ನುವ ಹಾಗೆ, ಸರ್ಕಾರಗಳಿಗೆ ಕೆರೆದುಕೊಳ್ಳಲು ಪುರುಸೊತ್ತು ಇಲ್ಲದಿರುವಾಗ ದಿಡೀರನೆ ದೇವಾಲಯಗಳನ್ನು ವಶಪಡಿಸಿಕೊಳ್ಳುವ ಕಾರ್ಯಕ್ಕೆ ಏಕೆ ಚಾಲನೆ ನೀಡುತ್ತವೆ? ಎನ್ನುವ ಪ್ರಶ್ನೆ ಏಳುತ್ತದೆ. ಇದಕ್ಕಿರುವ ಸಾಮಾನ್ಯ ಉತ್ತರವೆಂದರೆ, ದೇವಾಲಯಗಳು ವರಮಾನದ ಸ್ಥಳಗಳಾಗಿರುವುದರಿಂದ ಸರ್ಕಾರದ ಬೊಕ್ಕಸಕ್ಕೂ ಆದಾಯ ಹೆಚ್ಚುತ್ತದೆ ಎನ್ನಲಾಗುತ್ತದೆ, ಅದಕ್ಕೆ ಸಾಕಷ್ಟು ಪುರಾವೆಗಳನ್ನು ಸಹ ಅಮೇರಿಕಾದ ಸ್ಟಿಫನ್ ನ್ಯಾಪ್ ಎಂಬಾತನ ಪುಸ್ತಕದಲ್ಲಿ ದೊರಕುತ್ತದೆ. ಆತನೇ ಹೇಳುವ ಪ್ರಕಾರ ಕರ್ನಾಟಕ ಒಂದರಲ್ಲೆ ಸುಮಾರು 2 ಲಕ್ಷ ದೇವಾಲಗಳಿಂದ 79 ಕೋಟಿ ರೂಗಳಷ್ಟು ಆದಾಯ ಬರುತ್ತದೆ, ಹಾಗೂ ಅದರಲ್ಲಿ ಕೇವಲ 7 ಕೋಟಿಗಳನ್ನು ದೇವಾಲಯಗಳ ನಿರ್ವಹಣೆಗೆ ನೀಡಲಾಗುತ್ತದೆ, ಹಾಗೂ ಉಳಿದ ಹಣವು ರಾಮಕೃಷ್ಣ ಲೆಕ್ಕ ಎನ್ನುವುದು ಅವರ ವಾದವಾಗಿದೆ, ಹಾಗೂ ಅದು ಸತ್ಯಕ್ಕೆ ಹತ್ತಿರವಾದ ಸಂಗತಿಯೂ ಆಗಿರಬಹುದು. ಆದರೆ ಆ ಅಧ್ಯಯನಕಾರನಿಗೆ ಹೆಚ್ಚಿನ ಬೇಸರವಾಗಿರುವುದು, ಹಿಂದೂ ದೇವಾಲಯದ ಆದಾಯವನ್ನು ತೆಗೆದುಕೊಂಡು ಚರ್ಚು ಹಾಗೂ ಮಸೀದಿಗಳ ನಿರ್ವಹಣೆಗೆ ಹೆಚ್ಚಿನ ಹಣವನ್ನು ನೀಡಲಾಗುತ್ತಿದೆ ಎನ್ನುವುದೇ ಆಗಿದೆ. ಆತನ ಪ್ರಕಾರ ಸುಮಾರು 59 ಕೋಟಿ ರೂಗಳನ್ನು ಹಜ್ ಯಾತ್ರೆಗೆ ರಿಯಾಯತಿ ಹಾಗೂ ಮಸೀದಿಗಳ ನಿರ್ವಹಣೆಗೆ ನೀಡಿದರೆ, 13 ಕೋಟಿ ರೂಗಳನ್ನು ಚರ್ಚುಗಳಿಗೆ ನೀಡಲಾಗುತ್ತದೆ ಎನ್ನುವುದಾಗಿದೆ. ಒಟ್ಟಿನಲ್ಲಿ ಸರ್ಕಾರಗಳ ಓಲೈಕೆಯ ರಾಜಕಾರಣದಲ್ಲಿ ಸಿಕ್ಕಿ ನಲುಗುತ್ತಿರುವ ಸ್ಥಿತಿ ಹಿಂದೂ ದೇವಾಲಯಗಳದ್ದು ಎನ್ನುವುದಂತೂ ಸುಳ್ಳಲ್ಲ.

ಮೇಲ್ನೋಟಕ್ಕೆ ಸರ್ಕಾರಗಳು ದೇವಾಲಯಗಳ ಮೂಲಕ ಹಿಂದೂಗಳಿಗೆ ಅನ್ಯಾಯ ಮಾಡುತ್ತಿದೆ ಎಂದು ಸುಮ್ಮನಾದರೆ, ನಮ್ಮ ಅರಿವಿನ ಮಟ್ಟವೂ ಅಲ್ಲಿಗೆ ನಿಂತು ಹೋಗುತ್ತದೆ, ಆದ್ದರಿಂದ ಎರಡು ಆಯಾಮಗಳಲ್ಲಿ ಈ ವಿಷಯವನ್ನು ಒರೆಗೆ ಹಚ್ಚಬೇಕಾಗಿದೆ. ಮೊದಲನೆಯದಾಗಿ, ಹಿಂದೂಗಳ ದೇವಾಲಯಗಳನ್ನು ಮಾತ್ರ ಏಕೆ ವಶಪಡಿಸಿಕೊಳ್ಳಲು ಸರ್ಕಾರ ಕಾತುರದಿಂದ ಇರುತ್ತದೆ ಮತ್ತದರ ಇತಿಹಾಸವೇನು? ಹಾಗೂ ದೇವಾಲಯಗಳು ಕೇವಲ ಆದಾಯದ ಮೂಲಗಳಾಗಿ ಯಾವುದೋ ಸಮುದಾಯವನ್ನು ಉದ್ದಾರ ಮಾಡುವಂತಹ ಕಾರ್ಯವನ್ನು ಭಾರತದಲ್ಲಿ ಮಾಡುತ್ತಿದ್ದವೆ? ಈ ಪ್ರಶ್ನೆಗಳಿ ಸಮಗ್ರವಾಗಿ ಅಲ್ಲವಾದರೂ ನನಗೆ ತಿಳಿದ ಮಟ್ಟಿಗೆ ಭಾಗಶಃ ಉತ್ತರ ನೀಡುವ ಪ್ರಯತ್ನ ಮಾಡುತ್ತೇನೆ. ಬ್ರಿಟೀಷರು ಭಾರತಕ್ಕೆ ಬಂದ ನಂತರ ನಮ್ಮ ಸಮಾಜವನ್ನು ನಾಶ ಮಾಡಲು ಯಾವ ಕಾನೂನುಗಳು, ಯೋಜನೆಗಳು, ನಿಯಾಮವಳಿಗಳು ಬೇಕೋ ಅವೆಲ್ಲವನ್ನೂ ಜಾರಿಗೊಳಿಸಿದರು. ಶಿಕ್ಷಣದಿಂದ ಹಿಡಿದು, ನಾಗರೀಕರನ್ನು ಆಳುವ ಕಾನೂನುಗಳವರೆಗೂ ಭಾರತೀಯವಲ್ಲದ ಮತ್ತು ಭಾರತೀಯರನ್ನು ವಿಕೃತಗೊಳಿಸುವಂತಹ ನೀತಿ ನಿಯಮಗಳನ್ನು ಜಾರಿಗೆ ತಂದರು. ಆದ್ದರಿಂದರೆ ಇಂದಿಗೂ ನಾವೆಲ್ಲ ಮೆಕಾಲೆ ಮಕ್ಕಳು ಎಂದು ಒಬ್ಬ ವಿದ್ವಾಂಸರು ಹೇಳುತ್ತಾರೆ. ನಾವು ಬದುಕುತ್ತಿದ್ದ ವಿಧಾನವನ್ನೇ ಬದಲಾಯಿಸಿ, ನಮ್ಮ ವಿರುದ್ಧ ನಾವೇ ಸೆಟೆದು ನಿಲ್ಲುವಂತೆ ಮಾಡಿದ ಕೀರ್ತಿ ಬ್ರಿಟೀಷರಿಗೆ ನೇರವಾಗಿ ಸಲ್ಲುತ್ತದೆ. ಅವರ ಸಂತಾನಗಳು ಇನ್ನೂ ಟೌನ್ ಹಾಲ್‍ನಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ ಎನ್ನುವುದು ಬೇರೆಯದೆ ವಿಷಯ. ಅವರು ತಂದಂತಹ ಬಹುತೇಕ ಕಾನೂನುಗಳು ಇಂದಿಗೂ ಮಾನ್ಯವಾಗಿವೆ, ಅವು ಭಾರತೀಯವಾದದ್ದೂ ಅಲ್ಲ ಜೊತೆಗೆ ಅದರಿಂದ ಆಳಿಸಿಕೊಳ್ಳಲು ಬ್ರಿಟೀಷರು ಇಲ್ಲಿಲ್ಲ, ಇಂತಹ ತ್ರಶಂಕು ಸ್ಥಿತಿಯಲ್ಲಿ ಒಂದೆಡೆ ಕಾನೂನುಗಳು ಹಾಗೂ ಜನಸಾಮಾನ್ಯರು ಇದ್ದಾರೆ ಎಂದರೆ ತಪ್ಪಾಗಲಾರದು. ಅಂತಹ ಕಾನೂನುಗಳ ಸರದಿಯಲ್ಲಿಯೇ ಈ ದೇವಾಲಯಗಳ ವಶಪಡಿಸಿಕೊಳ್ಳುವಿಕೆ ಸೇರಿಕೊಳ್ಳುತ್ತದೆ.

1923 ರಲ್ಲಿ ಹಿಂದೂ ಟೆಂಪಲ್ ಚಾರಿಟಬಲ್ ಎಂಡೋವ್‍ಮೆಂಟ್ ಎಂಬ ಹೊಸ ಶಾಸನವನ್ನು ಮದ್ರಾಸು ಪ್ರಾಂತ್ಯ ಜಾರಿಗೆ ತಂದಿತು. ನಂತರ 1925 ರಲ್ಲಿ ಅದಕ್ಕೆ ಒಂದು ಸಮಿತಿಯನ್ನು ರಚಿಸಿ ಹಲವಾರು ಹಂತದ ಅಧಿಕಾರಿಗಳನ್ನು ನೇಮಿಸಿತು. ಅವರ ಕೆಲಸ ದೇವಾಲಯಗಳ ಆಡಳಿತವನ್ನು ವಹಿಸಿಕೊಂಡು ಕೆಲವಾರು ಮಠಗಳ ಸುಪರ್ದಿಗೆ ನೀಡುವುದೇ ಆಗಿತ್ತು. ದೇವಾಲಯಗಳ ನಿರ್ವಹಣೆ ನೇರವಾಗಿ ಸರ್ಕಾರದ ಅಧೀನದಲ್ಲಿ ಇರಬೇಕೆಂಬುದು ಅವರ ಹೆಬ್ಬಯಕೆಯಾಗಿತ್ತು. ಅದಕ್ಕೆ ಸಾಮಾನ್ಯವಾದ ಕಾರಣ ಆರ್ಥಿಕ ಹಿನ್ನೆಲೆ ಅಲ್ಲ ಎಂಬುದು ನಾವು ತಿಳಿದುಕೊಳ್ಳಬೇಕಾದ ಸಂಗತಿ. ಇದಕ್ಕೆ ನಿಜವಾಗಿಯೂ ರಿಲಿಜನ್ನಿನ ಹಿನ್ನೆಲೆ ಹಾಗೂ ಬ್ರಾಹ್ಮಣ ದ್ವೇಷ ಕಾಣಸಿಗುತ್ತದೆ. ರಿಲಿಜನ್ನಿನ ಕಾರಣವೆಂದರೆ, ಅವರು ನೋಡಿದ ಸಮಾಜದಲ್ಲಿ ಹಿಂದೂಗಳನ್ನು ಹತೋಟಿಗೆ ತೆಗೆದುಕೊಳ್ಳಲು ರಿಲಿಜನ್ ಗಳನ್ನು ಹುಡುಕಬೇಕಿತ್ತು. ಆದರೆ ಎಲ್ಲವೂ ಅಸ್ಪಷ್ಟವಾಗಿದ್ದ ಈ ಸಮಾಜದಲ್ಲಿ ಕೆಲವಾರು ಗ್ರಂಥಗಳು ಹಾಗೂ ದೇವಾಲಯಗಳು ಕಂಡಿವೆ. ಆದರೆ, ಇಸ್ಲಾಂ ಸಹ ಇದ್ದಂತಹ ಕಾಲದಲ್ಲಿ ಅವರ ಮಸೀದಿಗಳನ್ನು, ಜೈನ ಬೌದ್ದ ಮಂದಿರಗಳನ್ನು ಹೊರತು ಪಡಿಸಿ ಕೇವಲ ಹಿಂದೂಗಳ ದೇವಾಲಯಗಳನ್ನು ಟಾರ್ಗೆಟ್ ಮಾಡಿ ಕಾನೂನುಗಳನ್ನು ರಚಿಸುವ ಹುನ್ನಾರದ ಹಿಂದೆ ಅವರ ತಿಳುವಳಿಕೆ ಎದ್ದುಕಾಣುತ್ತದೆ.

ಇದರ ಜೊತೆಗೆ, ಕ್ರಿಶ್ಚಿಯಾನಿಟಿಗೆ ಮತಾಂತರ ಮಾಡಲು ಇಲ್ಲಿರುವ ಬ್ರಾಹ್ಮಣತೆ ಅಡ್ಡಿ ಎಂಬುದು ಅವರ ಮತ್ತೊಂದು ತಿಳುವಳಿಕೆಯಾಗಿತ್ತು. ಆ ಕಾರಣದಿಂದಲೆ, ಬ್ರಾಹ್ಮಣರ ಕುರಿತಂತೆ ಪ್ರೀಸ್ಟ್ ಹುಡ್ ನ ಕತೆಕಟ್ಟಿ ನಂತರ ಅವರ ವಿರುದ್ಧ ದ್ವೇಷದ ಭಾವನೆಯನ್ನು ಎಲ್ಲರಲ್ಲಿಯೂ ಬಿತ್ತಲು ಯಶಸ್ವಿಯಾದರು. ಬ್ರಾಹ್ಮಣರು ಪ್ರೀಸ್ಟ್ ಗಳಾದ್ದರಿಂದ, ಅವರ ಹತೋಟಿಯಲ್ಲಿರುವ ದೇವಾಲಯಗಳನ್ನು ವಶಪಡಿಸಿಕೊಂಡರೆ, ಅವರ ಪಕ್ಕೆಲುಬು ಮುರಿದಂತೆ ಎಂಬುದು ಬ್ರಿಟೀಷರ ಲೆಕ್ಕಚಾರವಾಗಿತ್ತು. ಆದ್ದರಿಂದಲೇ ಅವರ ತಿಳುವಳಿಕೆ ಮತ್ತು ಮತಾಂತರಕ್ಕೆ ಅಡ್ಡಿಯಾಗಿದ್ದ ಬ್ರಾಹ್ಮಣರ ವಿರುದ್ಧ ಇಂತಹ ಒಂದು ಶಾಸನವನ್ನು ಜಾರಿಗೆ ತಂದರು. ಧಾರ್ಮಿಕ ಸ್ಥಳಗಳಿಗೆ ಸಂಬಂಧಪಟ್ಟಂತೆ ಯಾವುದೋ ಒಳ್ಳೆಯ ಉದ್ದೇಶವಿದ್ದಿದ್ದರೆ, ಎಲ್ಲಾ ಧರ್ಮಿಯರಿಗೂ ಅನ್ವಯವಾಗುವಂತೆ ಶಾಸನವನ್ನು ಬ್ರಿಟೀಷರು ಮಾಡಿರುತ್ತಿದ್ದರು, ಆದ್ದರಿಂದಲೆ ಸುಧಾರಣೆ ಅಥವಾ ಮೇಲ್ವಿಚಾರಣೆ ಮಾತ್ರವೇ ಆ ಶಾಸನದ ಹಿಂದಿರುವ ಉದ್ದೇಶವಾಗಿರಲಿಲ್ಲ ಎಂಬುದು ಸತ್ಯ.

ಇನ್ನೂ ಹಿಂದೂ ದೇವಾಲಯಗಳು ಕೇವಲ ಶ್ರದ್ಧಾ ಕೇಂದ್ರ ಅಥವಾ ಆದಾಯದ ಮೂಲಗಳಾಗಿದ್ದವೆ ಎನ್ನುವುದನ್ನು ನೋಡಿದರೆ, ನಕಾರಾತ್ಮಕವಾದ ಉತ್ತರ ಸಿಗುತ್ತದೆ. ಪ್ರಾಚೀನ ಭಾರತದ ಇತಿಹಾಸವನ್ನು ಅಧ್ಯಯನ ನಡೆಸಿರುವ ಕೆಲವು ವಿದ್ವಾಂಸರು ಹೇಳುವಂತೆ, ದೇವಾಲಯಗಳು ಕೇವಲ ಧಾರ್ಮಿಕ ಕೇಂದ್ರಗಳಾಗಿರದೆ, ಆಯಾ ಪ್ರದೇಶಗಳ ಅಭಿವೃದ್ದಿಗೆ ಪೂರಕವಾದ ಕಾರ್ಯವನ್ನು ಮಾಡುತ್ತಿದ್ದವು. ವಿಜಯನಗರ ಅರಸರ ಕಾಲದಲ್ಲಿದ್ದ ವಿಧಾನದಂತೆ, ಆಳ್ವಿಕೆ ನಡೆಸುತ್ತಿದ್ದಂತಹ ರಾಜರುಗಳಿಗೂ ಜನರಿಗೂ ಯಾವುದೇ ನೇರವಾದ ಸಂಪರ್ಕಗಳಿರಲಿಲ್ಲ, ಬದಲಿಗೆ ಪ್ರತಿಯೊಂದು ಪ್ರದೇಶಗಳ ಮುಖ್ಯ ದೇವಾಲಯಗಳ ಮೂಲಕ ಅಂತಹ ಸಂವಹನ ಏರ್ಪಡುತ್ತಿತ್ತು. ಪ್ರತೀ ದೇವಾಲಯಗಳಿಗೂ ಒಂದಿಷ್ಟು ಹಳ್ಳಿಗಳನ್ನು ದತ್ತಿರೂಪದಲ್ಲಿ ನೀಡುವ ಮೂಲಕ ಹಳ್ಳಿಗಳಿಗೆ ಬೇಕಾದ ವ್ಯವಸ್ಥೆಗಳನ್ನು ನಿರ್ವಹಣೆ ಮಾಡುವ ಹೊಣೆ ದೇವಾಲಯಗಳದ್ದಾಗಿತ್ತು ಎನ್ನುವುದು ಇತಿಹಾಸಕಾರನಾದ ರಸೆಲ್‍ನ ವಾದವಾಗಿದೆ. ಅಂದರೆ, ದೇವಾಲಯಗಳಿಗೂ ಸಮುದಾಯಗಳಿಗೂ ಗ್ರಾಮಗಳಿಗೂ ಅನ್ಯೋನ್ಯವಾದ ಸಂಬಂಧವಿದ್ದು, ಒಂದರ ಬೆಳವಣಿಗೆ ಮತ್ತೊಂದು ಪೂರಕವಾಗಿ ಕಾರ್ಯನಿರ್ವಹಿಸತ್ತಿದ್ದವು ಎನ್ನುವುದು ಭಾರತೀಯ ಸಮಾಜದಲ್ಲಿ ದೇವಾಲಯಗಳ ಇತಿಹಾಸ ಅಧ್ಯಯನ ಮಾಡುವವರಿಗೆ ತಿಳಿದುಬರುವ ಆಶ್ಚರ್ಯಕರ ಸತ್ಯ. ದಸರಾ ಹಬ್ಬವೂ ಸಹ ಅದರದ್ದೇ ಒಂದು ಆಚರಣೆಯಾಗಿದ್ದು, ದಶಮಿಯಂದು ಎಲ್ಲಾ ಪ್ರದೇಶಗಳ ದೇವರುಗಳನ್ನು ರಾಜರ ಮುಂದೆ ತಂದು ಮೆರವಣಿಗೆ ಮಾಡಿ ಅಲ್ಲಿಂದ ಕೊಡುಕೊಳೆ ನಡೆದು ನಡೆಯುತ್ತಿತ್ತು. ಆದರೆ, ಅವೆಲ್ಲವೂ ಈಗ ರಿಚುವಲಿಸ್ಟಿಕ್ ಆಗಿದ್ದರೂ ಸಹ ದಸರಾದಲ್ಲಿ ಎಲ್ಲಾ ದೇವರುಗಳ ಸಮ್ಮುಖದಲ್ಲಿ ತಹಶೀಲ್ದಾರರು ಬನ್ನಿ ಕಡಿಯುವ ಸಂಪ್ರದಾಯ ಈಗಲೂ ಮುಂದುವರೆದಿದೆ.

ಇದರಿಂದ ನಮಗೆ ತಿಳಿದುಬರುವ ಸಂಗತಿ ಎಂದರೆ, ದೇವಾಲಯಗಳನ್ನು ವಶಪಡಿಸಕೊಳ್ಳಲು ಹಪಹಪಿಸುವ ಸರ್ಕಾರಗಳು ಬ್ರಿಟೀಷರು ತಂದಂತಹ ಕಾನೂನುಗಳನ್ನೇ ಮುಂದುವರೆಸುತ್ತಿದ್ದು, ಆ ಕಾನೂನುಗಳ ಬಗ್ಗೆ ಹಾಗೂ ನಮ್ಮ ಸಮಾಜದಲ್ಲಿ ದೇವಾಲಯಗಳ ಪಾತ್ರಗಳ ಬಗ್ಗೆ ಆಳವಾದ ಅಜ್ಞಾನವನ್ನು ತೋರ್ಪಡಿಸುತ್ತಿವೆ. ಭಾರತೀಯರಿಗೆ ತಮ್ಮ ನೆಲದಲ್ಲಿಯೇ ಇಂತಹ ನಿರುಪಯುಕ್ತ ಕಾನೂನುಗಳನ್ನು ಹೇರುವ ಮೂಲಕ ಸಂವಿಧಾನದ ಆಶಯಕ್ಕೆ ನೀರುಬಿಡುವಂತಹ ಕಾರ್ಯ ಎಗ್ಗಿಲ್ಲದೆ ಸಾಗುತ್ತಿದೆ. ಇನ್ನಾದರೂ ಇಂತಹ ಅಜ್ಞಾನದಿಂದ ಹೊರಬಂದು, ಭಾರತವನ್ನು ಸರಿಯಾದ ಕ್ರಮದಲ್ಲಿ ಅರ್ಥೈಸಿಕೊಳ್ಳಬೇಕಾದ ಜರೂರು ನಮ್ಮ ಮುಂದಿದೆ.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments