ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 23, 2016

7

ಜಗಳಕ್ಕೆ ಬುಡ ಯಾವುದು?

‍ನಿಲುಮೆ ಮೂಲಕ

– ರೋಹಿತ್ ಚಕ್ರತೀರ್ಥ

rtnregnec“ಜಗಳಕ್ಕೆ ಬುಡ ಯಾವುದೋ ಬೋಳೀಮಗನೆ” ಅಂತ ನಮ್ಮ ಕಡೆ ಒಂದು ಗಾದೆ. ಚಿಕ್ಕವನಿರುವಾಗ ಕೇಳಿದ್ದು (ಪಾವೆಂ ಆಚಾರ್ಯರು ಇದನ್ನು ಒಮ್ಮೆ ಬರೆದೂ ಇದ್ದರು ಎನ್ನುವುದನ್ನು ಕೇಳಿದ್ದೇನೆ). ಒಗೆದ ಕಲ್ಲನ್ನು ಕಚ್ಚಿ ಹಿಡಿವ ಹಸಿಮಣ್ಣಿನ ಹಾಗೆ ಮನಸ್ಸು ಇಂಥ ಮಾತುಗಳನ್ನು ಬೇಗನೆ ಗ್ರಹಿಸಿ ಹಿಡಿದಿಟ್ಟುಕೊಂಡು ಬಿಡುತ್ತದೆ! ಈಗ ಕೂತು ಯೋಚನೆ ಮಾಡಿದರೆ ಇದಕ್ಕೆ ಎರಡು ಅರ್ಥ ಪದರಗಳಿರುವುದು ಹೊಳೆಯುತ್ತಿದೆ. ಒಂದು, ಜಗಳಕ್ಕೆ ಕಾರಣವೇ ಬೇಕಾಗಿಲ್ಲ; ಯಾವ ಕ್ಷುಲ್ಲಕ ವಿಚಾರವನ್ನು ಹಿಡಿದುಕೊಂಡೂ ಜಗಳವಾಡಬಹುದು ಎನ್ನುವುದು. ಇನ್ನೊಂದು, ನಮ್ಮಲ್ಲಿ ‘ಬೋಳೀಮಗ’ ಎಂಬ ಶಬ್ದಪ್ರಯೋಗ ಆದೊಡನೆ ಅದುವರೆಗೆ ನಡೆಯುತ್ತಿದ್ದ ಮಾತಿನ ಚಕಮಕಿಗೆ ಹೊಸ ರೂಪ, ಬಣ್ಣ, ವೇಗ ಸಿಗುತ್ತದೆ. ಉರಿಯಲೋ ಆರಲೋ ಎನ್ನುತ್ತ ಓಲಾಡುವ ಬಡಕಲು ಬೆಂಕಿಗೆ ಸೀಮೆಎಣ್ಣೆ ಸುರಿವಂತಹ ಪರಿಣಾಮವನ್ನು ಈ ಶಬ್ದ ಮಾಡುತ್ತದೆ – ಎನ್ನುವುದು.

ಪ್ರತಿಯೊಂದು ಭಾಷೆಗೂ ಅದರದ್ದೇ ಆದ ಬಯ್ಗುಳದ ಪದಸಂಪತ್ತು ಇರುತ್ತದೆ. ಹಾಗೊಂದು ವೇಳೆ ಬಯ್ಗುಳದ ಪದಗಳೇ ಇಲ್ಲ ಅಂದರೆ ಅದು ಭಾಷೆಯೇ ಅಲ್ಲ ಎನ್ನಬೇಕು! ಒಂದು ಪಕ್ಷ ಅಂಥದೊಂದು ವಿಚಿತ್ರ ಮಡಿವಂತಿಕೆಯ ಭಾಷೆ ಇದ್ದರೆ, ಅದು ಅಷ್ಟರಮಟ್ಟಿಗೆ ಬಡವಾಗಿದೆ ಎಂದು ವಿಷಾದ ಪಡಬೇಕು! ಸಾಂಬಾರಿಗೆ ಮಸಾಲೆ ಇದ್ದಹಾಗೆ ಭಾಷೆಗೆ ಬಯ್ಗುಳಭಂಡಾರ. ಅದಿಲ್ಲದೆ ವ್ಯವಹಾರ ಸಪ್ಪೆ ಸಪ್ಪೆ! ಕನ್ನಡದಲ್ಲಿ ಬಡ್ಡೀಮಗ ಎಂಬೊಂದು ಮಗ ಇದ್ದಾನೆ. ಎಲ್ಲ ‘ಮಗ’ರೂಪೀ ಬಯ್ಗುಳಗಳ ಹಿಂದೆ ಸ್ತ್ರೀಯನ್ನು ದೂಷಿಸುವ ಮನಸ್ಸು ಇದೆ ಎನ್ನುವುದಕ್ಕೆ ಬಡ್ಡೀಮಗ ಒಂದು ಅಪವಾದ. ಏಕೆಂದರೆ, ಇದು ತಾಯಿಯ ಬದಲು ತಂದೆಯನ್ನು ಚುಚ್ಚುವ, ತುಚ್ಛವಾಗಿ ದೂಷಿಸುವ ಪದ!

ರಾಮರಾಜ್ಯವಾದರೇನು ರಾಗಿ ಬೀಸೋದು ತಪ್ಪಲಿಲ್ಲ ಅನ್ನುವಂತೆ ಕಾಲ ಯಾವುದಾದರೂ ಬಡವರು ಇದ್ದೇ ಇರುತ್ತಾರೆ. ಅವರು ಅಷ್ಟೋ ಇಷ್ಟೋ ಸಂಪಾದಿಸಿ ಬಂದ ಚಿಕ್ಕಾಸಿನಲ್ಲೇ ಉಪ್ಪು ಮೆಣಸು ಕೊಂಡು ಗಂಜಿಯೂಟ ಮಾಡಿ ದಿನಗಳೆಯುತ್ತಿದ್ದ ಕಾಲವೊಂದಿತ್ತು (ಈಗ ಇಲ್ಲ ಅಂದಿಲ್ಲ!) ಆಗೆಲ್ಲ ಬಡವನಿಗೆ ಯಾವುದೋ ಆಪತ್ತಿನ ಕಾಲದಲ್ಲಿ ದುಡ್ಡು ಬೇಕೆಂದರೆ ಸಾಲ ಕೊಡಲು ಬ್ಯಾಂಕುಗಳಿರಲಿಲ್ಲ. ಸರಕಾರದ ಸಾಲಮೇಳಗಳು ನಡೆಯುವ ಪದ್ಧತಿಯೂ ಇರಲಿಲ್ಲ. ಸಾಲ ಬೇಕೆಂದಾಗೆಲ್ಲ ಅವರಿಗೆ ನೆನಪಾಗುತ್ತಿದ್ದದ್ದು ಊರ ಪಟೇಲನೋ, ಶಾನುಭೋಗನೋ – ಹೀಗೆ, ದೊಡ್ಡ ಜಮೀನ್ದಾರರು ಮಾತ್ರ. ಸಾಲ ಗಿಟ್ಟುತ್ತಿದ್ದದ್ದು ಕೂಡ ಇಂತಹ ಸಿರಿವಂತರ ಕೈಯಲ್ಲಿ ಮಾತ್ರ. ಸಾವ್ಕಾರ ಪುಗಸಟ್ಟೆ ಸಾಲ ಕೊಟ್ಟಾನೇ? “ಬಡ್ಡಿ ಮಡಗು” ಎಂದು ಶುರುವಾತಿನಲ್ಲೇ ಕರಾರು ಹಾಕುತ್ತಾನೆ. ಬಡ ರೈತ ಸಾಲದ ಪೂರ್ತಿ ಹಣ ಸಂದಾಯ ಮಾಡುವವರೆಗೂ, ಪಟೇಲನಿಗೆ ಪ್ರತಿ ತಿಂಗಳು ಬಡ್ಡಿ ಬರಲೇಬೇಕು. “ಈಟೊಂದು ಬಡ್ಡಿ ಬೇಕೆಂದರೆ ಎಲ್ಲಿಗೆ ಹೋಗಲಿ ಬುದ್ದಿ?” ಎಂದೇನಾದರೂ ರೈತ ಕಂಗಾಲಾಗಿ ಅಂಗಲಾಚಿದರೆ ಪಟೇಲನ ಬಳಿ ಪರಿಹಾರ ಸಿದ್ಧ. “ಹಾಗಾದರೆ ನಿನ್ನ ಮಗನ್ನ ಬಡ್ಡಿಗೆ ಮಡಗು” ಎಂದು! ರೈತ ಪೂರ್ತಿ ಹಣ ತಂದು ಕಾಲ ಬಳಿ ಇಟ್ಟು ಅಡ್ಡ ಬೀಳುವವರೆಗೂ ಅವನ ಮಗ ತನ್ನಲ್ಲಿ ಜೀತಕ್ಕಿರಲಿ ಎನ್ನುವುದೇ ಜಮೀನ್ದಾರನ ಮಾತಿನ ಅಂತರಾರ್ಥ!

ಮಕ್ಕಳಿಗೇನು – ಕೈಗೊಂದು ಕಾಲಿಗೆರಡು ಸುತ್ತಿಕೊಳ್ಳುತ್ತಿದ್ದ ಕಾಲ ಅದು. ಅವರಲ್ಲೇ ಹದಿಮೂರು ಹದಿನಾಕು ವರ್ಷ ತುಂಬಿದ, ಕೆಲಸ ಮಾಡಲು ದೈಹಿಕವಾಗಿ ಗಟ್ಟಿ ಇರುವ ಒಬ್ಬನನ್ನು ಎಳೆದು ತಂದು ಜಮೀನ್ದಾರನ ಕಾಲಲ್ಲಿ ಚೆಲ್ಲುತ್ತಿದ್ದ ರೈತ. ಅಂದಿನಿಂದ ಆ ಹುಡುಗ ಸಾವ್ಕಾರನ ಆಳು, ಜೀತ; ಸಾವ್ಕಾರನ ಮನೆಮಕ್ಕಳು ಕಾಲಲ್ಲಿ ಹೇಳಿದ ಕೆಲಸವನ್ನು ತಲೆ ಮೇಲೆ ಹೊತ್ತು ಪೂರೈಸುವ ಗುಲಾಮ. ನೆಣ ಇಳಿದು ಕಣ್ಣುಕತ್ತಲೆ ಬರುವವರೆಗೂ ಅವನಿಗೆ ಪಟೇಲನ ಮನೆಯಲ್ಲಿ ಮೈಮುರಿಯ ಕೆಲಸ. ಸಾಲದ್ದಕ್ಕೆ “ಉಂಡು ತಿಂದು ಆಡಿಕೊಂಡಿರೋದಕ್ಕೆ ನೀನೇನು ಸಾವ್ಕಾರನ ಮಗನ? ಹೇಳಿಕೇಳಿ ಬಡ್ಡೀಮಗ! ಅಪ್ಪ ಒಯ್ದ ಸಾಲಕ್ಕೆ ಪ್ರತಿಯಾಗಿ ಕೊಡಬೇಕಾದ ಬಡ್ಡಿಯನ್ನು ನಿನ್ನಿಂದ ವಸೂಲಿ ಮಾಡುತ್ತಿದ್ದೇವೆ ಅಷ್ಟೆ. ನೀನು ಮಾಡುವ ಕೆಲಸವನ್ನು ಸೇವೆ ಎಂದು ತಿಳಿಯಬೇಕಿಲ್ಲ!” ಎಂಬ ಮೂದಲಿಕೆಯ ಮಾತುಗಳು ಹೆಜ್ಜೆಹೆಜ್ಜೆಗೆ. ಅತ್ತ ಸಾಲ ಕೊಂಡುಹೋದ ಅವನಪ್ಪನೂ ಊರವರು ವಿಚಾರಿಸಿದಾಗ, “ಈರನನ್ನ ಪಟೇಲರ ಮನೇಲಿ ಬಡ್ಡೀಮಗನಾಗಿ ಬಿಟ್ಟೀವ್ನಿ” ಎಂದು ಸಹಜವಾಗಿಯೇ ಹೇಳುತ್ತಿದ್ದ. ಬಡ್ಡೀಮಗನನ್ನು ಎಷ್ಟೊಂದು ನಿಕೃಷ್ಟವಾಗಿ ನಡೆಸಿಕೊಳ್ಳಲಾಗುತ್ತಿತ್ತು ಎಂದರೆ, ಜೀತಕ್ಕಿಟ್ಟ ಮನೆಗಳಲ್ಲಿ ಅವನ ಹೆಸರೇ ಗೊತ್ತಿರುತ್ತಿರಲಿಲ್ಲ. “ಲೇ ಬಡ್ಡೀಮಗ ಇಲ್ಬಾರೋ” ಅಂತಲೋ “ಎಷ್ಟು ಹೊತ್ತು ಮಾಡ್ತೀಯೋ ಬಡ್ಡೀಮಗನೆ” ಎಂದೋ ಬಯ್ದು ಕೆಲಸ ತೆಗೆಯುವ ಪರಿಪಾಠ ಬೆಳೆಯಿತು. ಹೇಳಿದ ಕೆಲಸಕ್ಕೆ ಎದುರಾಡದೆ, ನಡು ಬಗ್ಗಿಸಿ ತಲೆ ತಗ್ಗಿಸಿ ವಿಧೇಯನಾಗಿ ದುಡಿಯಬೇಕಾದವನು ಬಡ್ಡೀಮಗ ಎಂಬ ಅನ್ನಿಸಿಕೆ ಬೆಳೆಯಿತು.

ಇಂದು ಜೀತಪದ್ಧತಿ ಇಲ್ಲ. ಗುಲಾಮಗಿರಿ ತೊಲಗಿದೆ. ಆದರೆ, ಆ ಕರಾಳ ಇತಿಹಾಸದ ಸುಟ್ಟ ಪಳೆಯುಳಿಕೆಯಾಗಿ ‘ಬಡ್ಡೀಮಗ’ ಮಾತ್ರ ಇನ್ನೂ ಬಾಯ್ಮಾತಿನಲ್ಲಿ ನಿಂತಿದೆ! ಬಡ್ಡೀಮಗನಿಗೆ ಜೀತದ ವಾಸನೆಯಿದ್ದರೆ, ಬೋಳೀಮಗನಿಗೆ ಇತಿಹಾಸದಲ್ಲಿ ನಡೆದುಹೋದ ಮುಸ್ಲಿಮರ ದಾಳಿಗಳ ಕಹಿ ನೆನಪುಗಳ ಕಮಟು ಘಾಟು ಅಂಟಿದೆ. ಮಹಮ್ಮದ್ ಘೋರಿ, ಘಜ್ನಿಗಳು ಭಾರತದ ಮೇಲೆ ಆಕ್ರಮಣ ಮಾಡಿದಾಗ, ಅದುವರೆಗೆ ಭಾರತದಲ್ಲಿ ನಡೆದಿರದಿದ್ದ ಒಂದು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರು. ಅದೇನೆಂದರೆ, ಒಂದು ಊರಿಗೆ ದಾಳಿ ಮಾಡಿ ಸಿಕ್ಕಿದ್ದನ್ನೆಲ್ಲ ಕೊಳ್ಳೆ ಹೊಡೆದ ಮೇಲೆ ಅವರ ಸೈನಿಕರು ಊರಿನ ಎಲ್ಲ ಮನೆಗಳಿಗೆ ನುಗ್ಗಿ ಅಲ್ಲಿದ್ದ ಹೆಂಗಸರನ್ನು ಹೊರಗೆಳೆದು ಮನಃಸ್ವೇಚ್ಛೆಯಿಂದ ಭೋಗಿಸಿ ಕೊಲ್ಲುತ್ತಿದ್ದರು. ಇನ್ನು ಕೆಲವರನ್ನು ತಮ್ಮ ದಾಸಿಯರನ್ನಾಗಿ ಇಟ್ಟುಕೊಳ್ಳುತ್ತಿದ್ದರು. ಬರಬರುತ್ತ ಈ ಅಭ್ಯಾಸ ಎಷ್ಟು ವಿಕೋಪಕ್ಕೆ ಹೋಯಿತೆಂದರೆ, ಮುಸ್ಲಿಂ ಸೈನಿಕರು ಊರಿಗೆ ಲಗ್ಗೆ ಹಾಕಿದರೆಂದು ಗೊತ್ತಾಗುತ್ತಲೇ ಮನೆಯೊಳಗಿದ್ದ ಹೆಂಗಸರು ತಮ್ಮ ಸೊಂಪಾದ ಕೂದಲನ್ನು ಕತ್ತರಿಸಿ ಮುಖವನ್ನು ವಿಕಾರ ಮಾಡಿಕೊಳ್ಳುವವರೆಗೆ ಹೋಯಿತು. ಇದೇ ಮುಂದೆ ಹಿಂದೂ ಧರ್ಮದಲ್ಲಿ ಹೊಸತೊಂದು ಸಂಪ್ರದಾಯ ಹುಟ್ಟಲು ಕಾರಣವಾಯಿತು. ಗಂಡ ಸತ್ತ ಮೇಲೆ ಹೆಂಗಸು ಬೇರೆಯವರ ಕಾಕದೃಷ್ಟಿಗೆ ಬೀಳಬಾರದೆಂದರೆ ತನ್ನನ್ನು ತಾನೇ ವಿಕಾರಗೊಳಿಸಿಕೊಳ್ಳಬೇಕು; ಕುಂಕುಮ ಅಳಿಸಿ, ಮಾಂಗಲ್ಯ-ಬಳೆ-ಕಾಲಂದುಗೆ ಕಳಚಿ, ತಲೆ ಬೋಳಿಸಿ ಕಪ್ಪು ಸೀರೆ ಉಡಬೇಕು ಎಂಬ ಅಲಿಖಿತ ಸಂವಿಧಾನ ಜಾರಿಗೆ ಬಂತು. ವೈದಿಕ ಆಚರಣೆಗಳಲ್ಲಿ ಎಲ್ಲೂ ಉಲ್ಲೇಖಗೊಳ್ಳದ ಈ ಹೊಸ ಆಚರಣೆ ಬರಲು ಕಾರಣವಾದದ್ದು ಪರಕೀಯರ ದಾಳಿಯೇ ಹೊರತು ಬೇರೇನಲ್ಲ ಎಂಬುದು ಗಮನಾರ್ಹ. ಹೀಗೆ ವಿರೂಪಗೊಂಡ ಹೆಂಗಸರಿಗೆ, ತಲೆ ಬೋಳಿಸಿದ್ದಾರೆ ಎಂಬುದನ್ನು ಸೂಚಿಸಲು ‘ಬೋಳಿ’ ಎಂದು ಕರೆಯುವ ಸಂಪ್ರದಾಯ ಹುಟ್ಟಿತು. ಇಂಥ ಹೆಂಗಸಿನ ಮಗ ‘ಬೋಳೀಮಗ’ ಆದ.
ಗಂಡನಿಂದ ಗರ್ಭ ಧರಿಸಿದ ಮೇಲೆ ಬೋಳಿಯಾದ ಹೆಂಗಸು ಜನ್ಮ ನೀಡಿದ ಮಗುವಿಗೆ ತಂದೆ ಆಕೆಯ (ತೀರಿಕೊಂಡ) ಪತಿಯೇ. ಆದರೆ, ಬೋಳಿಯಾದ ಮೇಲೆ ಆಕೆಯ ಮೇಲೆ ಬಲಾತ್ಕಾರ ಮಾಡಿದವರು ಹುಟ್ಟಿಸಿದ ಮಕ್ಕಳಿಗೆ ಮಾತ್ರ ಅಪ್ಪ ಯಾರೆಂದು ಗೊತ್ತಿರುತ್ತಿರಲಿಲ್ಲ. “ಬೋಳೀಮಗ” ಎಂಬ ಬಯ್ಗುಳ, ಏಕಕಾಲಕ್ಕೆ, ತಲೆ ಬೋಳಿಸಿಕೊಂಡ ಅವನ ವಿಧವೆ ತಾಯಿಯನ್ನೂ, ಅಪ್ಪ ಗೊತ್ತಿಲ್ಲದೆ ಅಥವಾ ಅಪ್ಪನನ್ನು ನೋಡುವ ಭಾಗ್ಯವಿಲ್ಲದೆ ಹುಟ್ಟಿದ ಅವನ ದುಃಸ್ಥಿತಿಯನ್ನೂ ಅವಹೇಳನ ಮಾಡುತ್ತದೆ. ಹೆಂಗಸನ್ನು ಬೋಳಿಯಾಗುವಂತೆ ಮಾಡಿದ ಪುರುಷಮೃಗದ ಕ್ರೌರ್ಯದ ಬಗ್ಗೆ ಅದೇಕೆ ಈ ಬಯ್ಗುಳಗಳು ಮೌನವಾಗಿವೆಯೋ ಗೊತ್ತಿಲ್ಲ!

ಮುಂಡೆ- ಎಂಬ ಪದ ಬಹುಶಃ ಎಲ್ಲ ದ್ರಾವಿಡ ಭಾಷೆಗಳಲ್ಲೂ ಒಂದೇ ಅರ್ಥದಲ್ಲಿ ಬಳಕೆಯಲ್ಲಿದ್ದಂತೆ ಕಾಣುತ್ತದೆ. ಮುಂಡೆ ಎಂದರೂ ಬೋಳಿಯಂತೆಯೇ ವಿಧವೆ ಎಂದೇ ಅರ್ಥ. ಮುಂಡ ಎಂದರೆ ಸಂಸ್ಕೃತದಲ್ಲಿ, ಕತ್ತಿನಿಂದ ಕೆಳಗಿನ ದೇಹದ ಭಾಗಕ್ಕಿರುವ ಹೆಸರು. ಆದರೆ, ಯಾವುದೋ ಕಾಲಘಟ್ಟದಲ್ಲಿ, ಮುಂಡ – ತಲೆಯ ಭಾಗವನ್ನು ಸೂಚಿಸುವ ಪದವಾಗಿ ಬಳಕೆಯಾಗುತ್ತಿತ್ತು ಎನ್ನುವುದಕ್ಕೆ ದ್ರಾವಿಡ ಪದಗಳು ಸಾಕ್ಷಿ ಹೇಳುತ್ತವೆ. ತಲೆಗೆ ಸುತ್ತಿಕೊಳ್ಳುವ ರುಮಾಲಿಗೆ ಮುಂಡಾಸು ಎಂದು ಹೆಸರು. ತಲೆ ಬೋಳಿಸುವುದಕ್ಕೆ ಮುಂಡನ ಎನ್ನುತ್ತೇವೆ. ಅದೇ ಪ್ರಕಾರ, ತಲೆಗೂದಲು ಬೋಳಿಸಿದ ಹೆಂಗಸು ಮುಂಡೆ. ಯಾವ ಹೆಂಗಸೂ ಸ್ವಇಚ್ಛೆಯಿಂದ ಈ ಕೂದಲು ಬೋಳಿಸುವ ಕೆಲಸಕ್ಕೆ ಸಮ್ಮತಿಸುತ್ತಿರಲಿಲ್ಲ ಎನ್ನುವುದು ನಿಚ್ಚಳ. ಗಂಡ ಸತ್ತ ಮೇಲೆ, ಆಕೆಯನ್ನು ಸಂಬಂಧಿಕರು ಎಳೆದುತಂದು ಹೆಣದ ಮುಂದೆ ಕೂರಿಸಿ ಈ ಎಲ್ಲ ಅನಾಗರಿಕ ಕ್ರಿಯೆಗಳನ್ನು ನೆರವೇರಿಸುತ್ತಿದ್ದರು. ತನ್ನನ್ನು ಮುಂಡೆ ಮಾಡಿದ ಸಮಾಜದ ಮೇಲೆ ಕೋಪಗೊಂಡ ಮಹಿಳೆ, ಒಳಗೊಳಗೇ ಆದರೂ, ತನ್ನನ್ನು ಹಿಡಿದು ಕೂರಿಸಿ ತಲೆ ಬೋಳಿಸಿದ ಮಹಿಳೆಯರಿಗೂ ಅದೇ ಗತಿ ಬರಲಿ ಎಂದು ಆಶಿಸಿರಬಹುದೆ?

ತುಳುವಿನಲ್ಲಿ ಒಂದು ಗಾದೆ ಮಾತಿದೆ: ‘ಮುಂಡೆಗ್ ನಮಸ್ಕಾರ ಮಲ್ತಿನೆಕ್ ತನ್ನಲೆಕ್ಕನೆ ಆಲಾಂದ್ ಪಂಡಲ್‍ಗೆ’ ಎಂದು. ವಿಧವೆಗೆ ನಮಸ್ಕಾರ ಮಾಡಿದರೆ ತನ್ನಂತೆಯೇ ಆಗು ಎಂದು ಹರಸಿದಳಂತೆ! ತನ್ನ ಕಷ್ಟ ಇತರರಿಗೂ ಗೊತ್ತಾಗಲಿ ಎಂದು ಬಯಸಿದ ಹೆಣ್ಣಿನ ಆಂತರ್ಯದ ತಣ್ಣಗಿನ ಕ್ರೋಧವನ್ನು ಹೇಳುವ ಮಾತಾಗಿಯೂ ಈ ಗಾದೆ ಗಮನೀಯ. ಅಲ್ಲದೆ, ವಿಧವೆಗೆ ನಮಸ್ಕರಿಸಬಾರದು ಎಂದು ಹಿರಿಯರು ಹಾಕಿದ ಕಟ್ಟಳೆಯ ಬಗ್ಗೆಯೂ ಈ ಗಾದೆ ಸೂಕ್ಷ್ಮವಾಗಿ ನಮ್ಮ ಗಮನ ಸೆಳೆಯುತ್ತದೆ.

(ಪದರಚನೆಯ ಬಗ್ಗೆ ತಲೆ ಕೆಡಿಸಿಕೊಳ್ಳುವ “ವರ್ಡ್‍ಲೋರ್” ಎಂಬ ಶಾಸ್ತ್ರದಲ್ಲಿ ಆಳವಾದ ಪರಿಶ್ರಮವುಳ್ಳ ಪ್ರೊಫೆಸರ್ ಜಿ. ವೆಂಕಟಸುಬ್ಬಯ್ಯನವರು “ಬಡ್ಡಿಮಗ” ಎಂಬ ಪದಕ್ಕೆ ಬೇರೆ ರೀತಿಯ ವಿವರಣೆ ಕೊಟ್ಟಿದ್ದಾರೆ. ಒಂದು ಪದ ಹೇಗೆ ಬಂತು ಎಂಬ ವಿಷಯದಲ್ಲಿ ಇಂತಹ ಭಿನ್ನ ತರ್ಕಗಳು, ಚಿಂತನೆಗಳು ಸಹಜ. ಜಿವಿ ಅವರ ತರ್ಕದ ಪ್ರಕಾರ ಬೊಡ್ಡಿ ಎಂದರೆ ವೇಶ್ಯೆ, ಸೂಳೆ, ಕುಲಟೆ ಎಂದರ್ಥ. ಬೊಡ್ಡಿಯೇ ಕಾಲಾಂತರದಲ್ಲಿ ಬಡ್ಡಿ ಆಗಿದೆ. ಹಾಗಾಗಿ ಬಡ್ಡಿಮಗ ಎಂದರೆ ವೇಶ್ಯೆಯ ಮಗ – ಎಂದು ಅವರು ಹೇಳುತ್ತಾರೆ. ಜಿವಿ ಅವರ ವಿವರಣೆಯ ಕುರಿತೂ ನನಗೆ ಗೌರವವಿದೆ)

7 ಟಿಪ್ಪಣಿಗಳು Post a comment
  1. ಆಕ್ಟೋ 23 2016

    Hammm ಒಗೆದ ಕಲ್ಲನ್ನು ಕಚ್ಚಿ ಹಿಡಿವ ಮಣ್ಣಿನಂತೆ……
    ಓಲಾಡುವ ಬಡಕಲು ಬೆಂಕಿಗೆ…
    ಇಂಥ ಸುಂದರವಾದ ಮನ ಮುಟ್ಟುವ ಉಪಮೆಗಳು ನಿಮ್ಮ ಬರಹದಲ್ಲಿ ಆದುವಾಗ ಮನ ಹೂವಾಗುತ್ತದೆ ಸರ್. ಎಂಥಾ ಉಪಮೆಗಳು. ಚೆನ್ನಾಗಿದೆ ಬರಹ.

    ಉತ್ತರ
  2. Murari
    ಆಕ್ಟೋ 23 2016

    ಹಾಗೆಯೇಯೇ “ಮುಂಡೆಗೆ ಮುಂಡೆಯನ್ನು ಕಂಡರೆ ಉಂಡಷ್ಟು ಸಂತೋಷ ” ಎಂಬ ಗಾದೆಯೂ ಇದೆ.!!!

    ಉತ್ತರ
    • ಶೆಟ್ಟಿನಾಗ ಶೇ.
      ಆಕ್ಟೋ 25 2016

      ಮಿ. ಮುರಾರಿ, ನಿಮ್ಮ ಈ ಗಾದೆ ಬ್ರಾಹ್ಮಣರಲ್ಲಿ ಹೆಚ್ಚಾಗಿ ಕೇಳಿ ಬರುತ್ತದೆ ಹಾಗೂ ಬ್ರಾಹ್ಮಣ್ಯದ ಕ್ರೌರ್ಯವನ್ನು ಹರಳೀಕರಿಸಿದೆ.

      ಉತ್ತರ
  3. Salam Bava
    ಆಕ್ಟೋ 24 2016

    To blame Islam for all cruelty of Hinduism is very cheap and vile thinking. At this rate you’ll blame Ghazni for the anal itching you experience every morning!

    ಉತ್ತರ
    • ಶೆಟ್ಟಿನಾಗ ಶೇ.
      ಆಕ್ಟೋ 25 2016

      ಅಂಕೆ ಇಲ್ಲದೆ ವಡೆ ಪಾಯಸ ತಿನ್ನುವುದರಿಂದ ವೈದಿಕರಿಗೆ anal itching ನಿತ್ಯಸುಖವಾಗಿದೆ. ಘಜನಿ ಮೊಹಮ್ಮದ ಬಂದ ಹೋದ, ಆದರ ವಡೆ ಪಾಯಸ ತಿನ್ನುವುದಕ್ಕೆ ಬಾಧ್ಯವಾಗಿಲ್ಲ.

      ಉತ್ತರ
      • sudarshana gururajarao
        ಆಕ್ಟೋ 27 2016

        ನೀನೀಗ ಶರಣರ ಹೆಸರಲ್ಲಿ ಬಿಟ್ಟಿ ಕೂಳು ನೆಕ್ಕುತ್ತಿರುವೆಯಲ್ಲಾ ಅದಕ್ಕಿಂತಾ ಕಡೆ ಏನಲ್ಲ ಬಿಡೋ ದುಷ್ಟ ಹುಳುವೇ

        ಉತ್ತರ
  4. ಶ್ರೀ
    ಜುಲೈ 11 2019

    ನಿಜ ಹೇಳಿದರೆ ತಿಕದಲ್ಲಿ ಉರಿ, ಕೆರೆತ ಉಂಟಾಗೋದು ಸಹಜ..

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments