ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 28, 2016

3

ದಲಿತರ ಹೆಗಲ ಮೇಲೆ ಬಂದೂಕಿಟ್ಟಿರುವ ಕೈಗಳು ಯಾರದ್ದು?

‍ನಿಲುಮೆ ಮೂಲಕ

ರಾಕೇಶ್ ಶೆಟ್ಟಿ

udupi‘ಅಧಿಕಾರದಲ್ಲಿರುವ ಕಾಂಗ್ರೆಸ್ಸಿಗಿಂತಲೂ, ಅಧಿಕಾರದಲ್ಲಿರದ ಕಾಂಗ್ರೆಸ್ಸ್ ದೇಶಕ್ಕೆ ಅಪಾಯಕಾರಿ’ ಅಂತ ಗೆಳೆಯನೊಬ್ಬ ಆಗಾಗ್ಗೆ ಹೇಳ್ತಾ ಇರ್ತಾನೆ. 2014ರ ಮೇ 16 ರಂದು ಬಿಜೆಪಿ ಅಧಿಕಾರ ಹಿಡಿದ ದಿನದಿಂದ ಇವತ್ತಿನವರೆಗೂ ಕಾಂಗ್ರೆಸ್ಸ್ ಪಕ್ಷದವರ ಆರ್ಭಟಗಳನ್ನು ನೋಡಿದರೇ, ಗೆಳೆಯನ ಮಾತು ನಿಜವೆನಿಸುತ್ತದೆ. 2014ರ ಲೋಕಸಭಾ ಚುನಾವಣೆಯ ಫಲಿತಾಂಶ ಈ ಹಿಂದಿನ ಯಾವುದೇ ಚುನಾವಣೆಗಳಂತಿರಲಿಲ್ಲ. ಕಾಂಗ್ರೆಸ್ ಎಂಬ ಪುರಾತನ ಪಕ್ಷ ಮಕಾಡೆ ಮಲಗಿದರೇ, ಉಳಿದ ಅವಕಾಶವಾದಿ ಪ್ರಾದೇಶಿಕ, ಕೌಟುಂಬಿಕ, ಸೆಕ್ಯುಲರ್, ಕಮ್ಯುನಿಸ್ಟ್ ಪಕ್ಷಗಳು ಹೇಳ ಹೆಸರಿಲ್ಲದಂತಾದವು.

ಸ್ವಾತಂತ್ರ್ಯಾನಂತರ ಬಹುತೇಕ ಸಮಯ ದೇಶದ ಚುಕ್ಕಾಣಿಯನ್ನು ತನ್ನ ಬಳಿಯೇ ಉಳಿಸಿಕೊಂಡಿದ್ದ ಪಕ್ಷವೊಂದಕ್ಕೆ ಧಿಡೀರ್ ಎಂದು ಕುರ್ಚಿಯಿಂದ ಒದ್ದು ಹೊರ ನೂಕಿದರೇ ಹೇಗಾಗಬೇಡ ಹೇಳಿ. ಜನತಾ ಪಕ್ಷ,  ಸಂಯುಕ್ತರಂಗ, ವಾಜಪೇಯಿಯವರ ಎನ್ಡಿಎ-೧ ಸರ್ಕಾರಗಳ ಕಾಲದಲ್ಲಿ ಅಧಿಕಾರದಲ್ಲಿ ಇಲ್ಲದಿದ್ದರೂ ಕಾಂಗ್ರೆಸ್ಸಿನ ಸ್ಥಿತಿ ಈಗಿನಂತೆ ಇರಲಿಲ್ಲ. ಆಗಿನ ಕಾಲದ ರಾಜಕೀಯದ ಪಟ್ಟುಗಳಲ್ಲಿ ಕೊಡುಕೊಳ್ಳುವಿಕೆಗಳು ತಣ್ಣಗೆ ನಡೆದು ಹೋಗುತ್ತಿದ್ದವು. ಆದರೆ, ಈಗ ಮೋದಿಯವರ ಕಾಲದಲ್ಲಿನ ರಾಜಕೀಯ ಪಟ್ಟುಗಳು ಬದಲಾಗುತ್ತಿವೆ. ನರೇಂದ್ರ ಮೋದಿಯವರ ನೇತೃತ್ವದಲ್ಲಿ ಬಹುಮತದ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೇ ಕಾಂಗ್ರೆಸ್ಸ್ ತನ್ನ ಭವಿಷ್ಯವನ್ನು ನೆನೆದು ಗಾಬರಿಯಾಗಿದೆ. ಅಧಿಕಾರಕ್ಕೇರಿ ಮೂರನೇ ವರ್ಷದ ಹೊಸ್ತಿಲ ಬಳಿ ಬಂದರೂ ಮೋದಿಯವರ ಜನಪ್ರಿಯತೆ ಒಂದಿನಿತೂ ಕುಗ್ಗದಿರುವುದು ಮತ್ತು ವಿರೋಧ ಪಕ್ಷದ ಯಾವುದೇ ನಾಯಕನೂ ಮೋದಿಯವರ ಜನಪ್ರಿಯತೆಯ ಆಸುಪಾಸಿನಲ್ಲೂ ಇಲ್ಲದಿರುವುದು ಕೇವಲ ಕಾಂಗ್ರೆಸ್ಸ್ ಮಾತ್ರವಲ್ಲ, ಉಳಿದೆಲ್ಲ ವಿರೋಧ ಪಕ್ಷಗಳಿಗೂ ಆತಂಕದ ವಿಷಯವೇ.

ಇಂತಹ ಪರಿಸ್ಥಿತಿಯಲ್ಲಿ, ಮೋದಿಯೆಂಬ ವ್ಯಕ್ತಿಯೊಡನೇ ನೇರಾ-ನೇರ ಹೋರಾಟಕ್ಕಿಳಿಯಲು ಸಾಧ್ಯವಿಲ್ಲವೆಂಬುದನ್ನು ಅರಿತುಕೊಂಡಿರುವ ಕಾಂಗ್ರೆಸ್ಸ್, ನೆಹರೂ ಕಾಲದಿಂದಲೂ ದೇಶದ ಮೂಲೆ ಮೂಲೆಯನ್ನು ತಾನು ಸಾಕಿಕೊಂಡು ಬಂದಿರುವ ಗಂಜಿಕೇಂದ್ರದ ಗಂಜಿಗಿರಾಕಿಗಳನ್ನು ಅಖಾಡಕ್ಕಿಳಿಸಿದೆ. ವಿಧ್ವಂಸಕತೆಯಲ್ಲಿ ತನ್ನ ಮಾತೃ ಪಕ್ಷ ಕಾಂಗ್ರೆಸ್-ಕಮ್ಯುನಿಸ್ಟರನ್ನು ಮೀರಿಸಬಲ್ಲ ಈ ಗಂಜಿಗಿರಾಕಿಗಳು ಸರ್ಕಾರದ ವಿರುದ್ಧ ನಿಲ್ಲಲು ಆರಿಸಿಕೊಂಡಿದ್ದೆಲ್ಲಾ ಮನೆಹಾಳು ಮಾರ್ಗಗಳನ್ನೇ.

ಘಟನೆ ೧ : ದಾಭೋಲ್ಕರ್, ಪನ್ಸಾರೆ, ಕಲ್ಬುರ್ಗಿಯವರ ಹಂತಕರನ್ನು ಬಂಧಿಸಲಾಗಿಲ್ಲ ಎಂಬ ಕಾರಣವಿಟ್ಟುಕೊಂಡು “ಅಸಹಿಷ್ಣುತೆ” ಎಂದು ವಿಕಾರವಾಗಿ ಕೂಗಿಕೊಂಡ ಗಂಜಿಗಿರಾಕಿಗಳು, ಈ ಹತ್ಯೆಗಳಿಗೆ ಆಯಾ ರಾಜ್ಯಗಳ ಕಾನೂನು ಸುವ್ಯವಸ್ಥೆಯ ವೈಫಲ್ಯವೂ ಕಾರಣ ಎಂದು ಅರಿವಿರಲಿಲ್ಲವೇ? ಅರಿವಿಲ್ಲದೇ ಏನು, ಜನರ ಹಾದಿ ತಪ್ಪಿಸುವ ವಿದ್ವಂಸಕರು ಈ ಪ್ರಗತಿಪರರು.

ಘಟನೆ ೨ : ದಾದ್ರಿಯಲ್ಲಿ ದನದ ಮಾಂಸವಿಟ್ಟುಕೊಂಡಿದ್ದ ಎಂಬ ಕಾರಣಕ್ಕಾಗಿಯೇ ಮುಸ್ಲಿಂ ಒಬ್ಬರ ಹತ್ಯೆಯಾದ ಸುದ್ದಿ – ಈ ಸುದ್ದಿಗಳಿಗೇ ಹಲವು ಮುಖಗಳಿರುವ ವರದಿಗಳು ಬಂದಿವೆ. ಅದರಲ್ಲಿ ಮುಖ್ಯವಾಹಿನಿಗಳಲ್ಲಿ ಕಾಣಿಸಿಕೊಂಡ ದನದ ಮಾಂಸದ ಕಾರಣವೂ ಒಂದಾದರೇ, ಇನ್ನೊಂದು ಅದೇ ಗ್ರಾಮದ ಹೋಂಗಾರ್ಡ್ ಒಬ್ಬನ ಜೊತೆಗೆ ಹತ್ಯೆಗೀಡಾದ ವ್ಯಕ್ತಿಗಿದ್ದ ವೈಯುಕ್ತಿಕ ತಕರಾರು. ಮತ್ತೊಂದು ವರದಿಯ ಪ್ರಕಾರ ಹತ್ಯೆಗೀಡಾದ ವ್ಯಕ್ತಿ ಪಾಕಿಸ್ತಾನಕ್ಕೆ ಹೋಗಿ ತಿಂಗಳುಗಟ್ಟಲೇ ಇದ್ದು ಬಂದ ನಂತರ ಪ್ರಚೋದನಕಾರಿ ಭಾಷಣ ಮಾಡಲಾರಂಭಿಸಿದ ಎಂಬುದು. ಮಗದೊಂದು ಮಗ್ಗುಲಿನ ವರದಿಯ ಪ್ರಕಾರ ಆ ಗ್ರಾಮದ ವ್ಯಕ್ತಿಯೊಬ್ಬನ ಕರುವೊಂದು ಕಾಣೆಯಾಗಿತ್ತು. ಕಾಣೆಯಾಗಿದ್ದ ಆ ಕರುವಿನ ಕಾಲುಗಳು ಹತ್ಯೆಗೀಡಾದ ವ್ಯಕ್ತಿಯ ಮನೆಯ ಬಳಿ ದೊರಕಿದೆಯೆಂದು ಗ್ರಾಮದಲ್ಲಿ ಸುದ್ದಿಯಾಯಿತು. ಅದನ್ನು ಪ್ರಶ್ನಿಸಲು ಹೋದವನ ಮೇಲೆ ಹತ್ಯೆಗೀಡಾದ ವ್ಯಕ್ತಿಯ ಮಗ ಗುಂಡಿನ ದಾಳಿ ನಡೆಸಿದ, ಆ ವ್ಯಕ್ತಿಯೂ ಗಂಭೀರವಾಗಿ ಗಾಯಗೊಂಡು ಜೀವನ್ಮರಣದ ಹೋರಾಟ ನಡೆಸುತಿದ್ದಾನೆ. ಇದರಿಂದ ಕೆರಳಿದ ಜನ ಸಮೂಹ ಅವರ ಮನೆಯೊಳಗೆ ನುಗ್ಗಿ ಹತ್ಯೆಗೈದಿದೆ ಎಂಬುದು.

ದೇಶದಾದ್ಯಂತ ಬೊಬ್ಬೆ ಹೊಡೆದ ಗಂಜಿಗಿರಾಕಿ ಪ್ರಗತಿಪರರಿಗೆ ಈ ವಿವಿಧ ವರದಿಗಳ ಬಗ್ಗೆ ಮಾಹಿತಿ ಇತ್ತೋ ಇಲ್ಲವೋ ಅಥವಾ ತಮ್ಮ ಅಜೆಂಡಾಗೆ ಸರಿಹೊಂದುವ ಮೊದಲ ಕಾರಣವನ್ನೇ ಮುನ್ನೆಲೆಗೆ ತರೋಣವೆಂದುಕೊಂಡೇ ಹೊರಟರೋ ಏನೋ! ಒಟ್ಟಿನಲ್ಲಿ ಕಾನೂನು ಸುವ್ಯವಸ್ಥೆಯ ಸಮಸ್ಯೆಯನ್ನು ಈ ದೇಶದ ಸೆಕ್ಯುಲರ್ರುಗಳು ಧಾರ್ಮಿಕ ಸಮಸ್ಯೆಯೆಂಬಂತೆಯೇ ಬಿಂಬಿಸಲು ಸದಾಕಾಲ ಉತ್ಸುಕರಾಗಿರುತ್ತಾರೆ. ಕಾರಣ ಸ್ಪಷ್ಟ! ಸಮಸ್ಯೆಯ ಮೂಲ ಕಂಡು ಹಿಡಿದರೆ ಪರಿಹಾರ ಸಿಗುತ್ತದೆ. ಸಮಸ್ಯೆಯ ಸ್ವರೂಪವನ್ನೇ ವಿರೂಪಗೊಳಿಸಿದರೆ ಪ್ರತಿಭಟನೆಗೆ ಮತ್ತು ತಮ್ಮ ಅಜೆಂಡಾದ ಈಡೇರಿಕೆಗೆ ಹಾದಿ ತೆರೆದುಕೊಳ್ಳುತ್ತದೆ. ಜನರನ್ನು ಸಮಸ್ಯೆಗಳಿಂದ ಮುಕ್ತಗೊಳಿಸದಿರುವುದೇ ಇವರ ಐಡಿಯಾಲಜಿಯ ಮೂಲಮಂತ್ರ. ಅವೆಲ್ಲಕ್ಕಿಂತ ಮುಖ್ಯವಾಗಿ ಮೋದಿ ಸರ್ಕಾರಕ್ಕೆ ಅಲ್ಪಸಂಖ್ಯಾತರ ವಿರೋಧಿ ಎಂಬ ಹಣೆಪಟ್ಟಿಕಟ್ಟಿ ಮುಸ್ಲಿಮರಿಗೆ ಕೃತಕ ಭಯದ ವಾತಾವರಣದ ಕಲ್ಪನೆ ಮೂಡಿಸಿ ತಮ್ಮ ಅನ್ನದಾತರಾದ ಕಾಕ(ಕಾಂಗಿ+ಕಮ್ಯುನಿಸ್ಟ್) ಗಳನ್ನು ಅಧಿಕಾರಕ್ಕೆ ತರುವುದೇ ಧ್ಯೇಯ.

ಘಟನೆ ೩ : ಉತ್ತರ ಪ್ರದೇಶದಲ್ಲಿ ದೇವಸ್ಥಾನ ಪ್ರವೇಶಿಸಲು ಪ್ರಯತ್ನಿಸಿದ 90 ವರ್ಷದ ವೃದ್ಧರೋರ್ವರನ್ನು ಸುಟ್ಟ ಸುದ್ದಿ.– ಮುಖ್ಯವಾಹಿನಿಗಳಲ್ಲಿ ಇದು ಸುದ್ದಿಯಾಗಿದ್ದೂ ದೇವಸ್ಥಾನದ ಪ್ರವೇಶ ಮಾಡಲು ಪ್ರಯತ್ನಿಸಿದ ದಲಿತ ವೃದ್ಧರನ್ನು ಕೊಲೆಗೈದು ಸುಡಲಾಗಿದೆ ಎಂದೇ. ಪೋಲಿಸರ ಪ್ರಕಾರ ಹತ್ಯೆಗೈದ ಆರೋಪಿ ಡ್ರಗ್ಸ್ ನಶೆಯಲ್ಲಿದ್ದ, ಹತ್ಯೆಗೀಡಾದ ವೃದ್ಧರನ್ನು ಹಣಕ್ಕಾಗಿ ಪೀಡಿಸಿದ.. ಕೊಡಲು ನಿರಾಕರಿಸಿದಾಗ ಅವರನ್ನು ಕೊಲೆಗೈದು ಸುಟ್ಟಿದ್ದಾನೆ…!

ಇದರ ಜೊತೆಗೆ ದಲಿತ ಕುಟುಂಬವೊಂದನ್ನು ಉತ್ತರ ಪ್ರದೇಶದ ಪೋಲಿಸರು ವಿವಸ್ತ್ರಗೊಳಿಸಿದರು ಎಂಬ ಸುದ್ದಿಯೂ ಹರಿದಾಡತೊಡಗಿತು. ಆದರೆ, ಅಷ್ಟೇ ಬೇಗ ಅದು ಪೋಲಿಸರು ಮಾಡಿದ್ದಲ್ಲ ಖುದ್ದು ಆ ಕುಟುಂಬವೇ ಪ್ರತಿಭಟನೆಯ ರೂಪದಲ್ಲಿ ಮಾಡಿದ್ದು ಎಂಬುದೂ ಹೊರಬಿದ್ದು, ಆ ಸುದ್ದಿ ತೆರೆಗೆ ಸರಿಯಿತು.

ಘಟನೆ ೪ : ಹರ್ಯಾಣದ ಫರಿದಾಬಾದಿನಲ್ಲಿ ಮೇಲ್ಜಾತಿಯವರು ಇಬ್ಬರು ದಲಿತ ಮಕ್ಕಳ ಸಜೀವ ದಹನ ಮಾಡಿದ್ದಾರೆ ಎಂದು ಕಳೆದ ವರ್ಷದ ಅಕ್ಟೋಬರಿನಲ್ಲಿ ಸುದ್ದಿಯಾಗಿತ್ತು. ಘಟನೆಯನ್ನು ಖಂಡಿಸಿ ದೇಶದ ನಾನಾ ಭಾಗಗಳಲ್ಲಿ ಪ್ರತಿಭಟನೆಯಾಗಿತ್ತು. ಯಥಾ ಪ್ರಕಾರ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಲಾಗಿತ್ತು. ಆ ನಂತರ ಡಿಸೆಂಬರ್ ತಿಂಗಳ ಸಮಯಕ್ಕೆ ಹೊರಬಂದ ಫಾರೆನ್ಸಿಕ್ ವರದಿಯ ಪ್ರಕಾರ, ಬೆಂಕಿಯ ಮೂಲ ಹೊರಗಿನದ್ದಲ್ಲ, ಮನೆಯ ಒಳಗಿನದ್ದೇ ಎಂದಿತ್ತು. ಬೊಬ್ಬೆ ಹೊಡೆದ ಯಾವ ಗಂಜಿಗಿರಾಕಿಯೂ ಪಶ್ಚಾತ್ತಾಪಪಡಲಿಲ್ಲ.

ಘಟನೆ ೫ : ಹೈದರಬಾದಿನ ಉಸ್ಮಾನಿಯಾ ಯುನಿವರ್ಸಿಟಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೋಹಿತ್ ವೇಮುಲಾ ಎಂಬ ಯುವಕನ ಶವ ಇಟ್ಟುಕೊಂಡು ಈ ಗಂಜಿಗಿರಾಕಿಗಳು ಪ್ರತಿಭಟನೆಗಿಳಿದರು. ಖುದ್ದು ರೋಹಿತನೇ ತನ್ನ ಸಾವಿಗೇ ತಾನೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟರೂ ಕಾಂಗಿ-ಕಮ್ಯುನಿಸ್ಟ್-ಗಂಜಿಗಿರಾಕಿಗಳು ಸ್ಮೃತಿ ಇರಾನಿಯವರ ಮೇಲೆ ಗೂಬೆ ಕೂರಿಸಿದವು. ರೋಹಿತ್ ವೇಮುಲಾ ಹಿಂದುಳಿದ ವರ್ಗದವನು ಎಂದು ಧೃಡಪಟ್ಟಿದ್ದರೂ ಆತ ದಲಿತ ಎಂದೂ ಇವರೇ ಬೊಬ್ಬೆ ಹೊಡೆದರು. ಇವರ ಕಾಳಜಿಯಿದ್ದಿದ್ದು ರೋಹಿತ್ ವೇಮುಲಾನ ಮೇಲಲ್ಲ. ಬದಲಿಗೆ ರೋಹಿತನ  ಹೆಗಲ ಮೇಲಿಂದ  ಕೇಂದ್ರ ಸರ್ಕಾರಕ್ಕೆ ಗುರಿಯಿಡುವುದಷ್ಟೇ ಆಗಿತ್ತು. ಮೊನ್ನೆ ಮೊನ್ನೆಯಷ್ಟೇ ಕೇಂದ್ರ ಸರ್ಕಾರ ನೇಮಿಸಿದ್ದ ತನಿಖಾ ಸಮಿತಿಯ ವರದಿ ಹೊರಬಂದಿದೆ. ಅದರ ಪ್ರಕಾರ ರೋಹಿತನ ಸಾವಿಗೆ ವೈಯುಕ್ತಿಕ ಕಾರಣಗಳೇ ಮೂಲವೇ ಹೊರತು ಯಾವುದೇ ಸಂಘಟನೆಗಳಲ್ಲ. ಹಾಗೆಯೇ ರೋಹಿತ್ ದಲಿತನಲ್ಲ ಅಂತಲೂ ಹೇಳಿದೆ. ರೋಹಿತನ ಆತ್ಮಹತ್ಯೆಯನ್ನು ದಲಿತರ ಮೇಲಿನ ದೌರ್ಜನ್ಯ ಎಂತಲೂ, ಆತನ ಸಾವಿಗೆ ಎಬಿವಿಪಿ, ಆಡಳಿತ ಮಂಡಳಿ, ಕೇಂದ್ರ ಸಚಿವೆ ಸ್ಮೃತಿ ಇರಾನಿ, ಬಂಡಾರು ದತ್ತಾತ್ರೇಯ ಕಾರಣ ಎಂದ ಗಂಜಿಗಿರಾಕಿಗಳು ಈಗ ಬಿಲ ಸೇರಿಕೊಂಡಿವೆ.

ಘಟನೆ ೬ : ಹೆಸರಿಗೆ ತಕ್ಕಂತೆ ವಿಧ್ವಂಸಕತೆಗೆ ಹೆಸರಾಗಿರುವ ದೆಹಲಿಯ JNU ವಿನ ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳು, ಕಾಶ್ಮೀರಿ ಪ್ರತ್ಯೇಕತಾವಾದಿಗಳು, ಭಯೋತ್ಪಾಕರ ಬೆಂಬಲಿಗರ ಜೊತೆ ಸೇರಿಕೊಂಡು ಯುನಿವರ್ಸಿಟಿಯ ಆವರಣದಲ್ಲಿ ‘ಭಾರತ್ ಕಿ ಬರ್ಬಾದಿ’ ಘೋಷಣೆ ಕೂಗಿ ಕುಖ್ಯಾತರಾಗಿದ್ದು ಗೊತ್ತಲ್ಲವೇ? ಆ ನಂತರ ಬೆಳವಣಿಗೆಗಳಲ್ಲಿ ದೆಹಲಿ ಪೋಲಿಸರು ವಿದ್ಯಾರ್ಥಿ ಮುಖಂಡ ಕನ್ಹಯ್ಯ ಕುಮಾರನನ್ನು ಬಂಧಿಸಿದಾಗ ಗಂಜಿಗಿರಾಕಿಗಳು ಭೂಮಿ-ಆಕಾಶವನ್ನು ಒಂದು ಮಾಡಿ ಬೊಬ್ಬೆ ಹೊಡೆದರು. ದೇಶ ಹಾಳಾದರೇ ನಮಗೇನು ಅಧಿಕಾರವಷ್ಟೇ ನಮಗೆ ಮುಖ್ಯವೆಂದು ರಾಹುಲ್ ಗಾಂಧಿ, ಕೇಜ್ರಿವಾಲ, ಯೆಚೂರಿ, ರಾಜಾ ಎಲ್ಲರೂ ಒಬ್ಬರ ಹೆಗಲ ಮೇಲೊಬ್ಬರು ಕೈ ಹಾಕಿಕೊಂಡು ಯುನಿವರ್ಸಿಟಿಯೊಳಗೆ ತೂರಿಕೊಂಡು ಮೊಸಳೆ ಕಣ್ಣೀರು ಸುರಿಸಿ, ಭಾರತವನ್ನು ಬರ್ಬಾದಿ ಮಾಡಲು ಹೊರಟವರಿಗೆ ಬೆಂಬಲ ಘೋಷಿಸಿ ಬಂದರು. ಜೈಲಿನಿಂದ ಹೊರಬಂದ ಕನ್ಹಯ್ಯ ಕುಮಾರನನ್ನು ಬಂಗಾಳ-ಕೇರಳ ಚುನಾವಣೆಯ ಪೋಸ್ಟರ್ ಬಾಯ್ ಮಾಡಿಕೊಂಡರು. ಚುನಾವಣೆ ಮುಗಿದ ನಂತರ ಕೇರಳದಲ್ಲಿ ಕಾಂಗ್ರೆಸ್, ಬಂಗಾಳದಲ್ಲಿ ಕಮ್ಯುನಿಸ್ಟರು ಕಸದ ಬುಟ್ಟಿ ಸೇರಿದಂತೇ ಕುಮಾರನೂ ಕಸದ ಬುಟ್ಟಿ ಸೇರಿಕೊಂಡಿದ್ದಾನೆ.. ಈಗ ಆತನನ್ನು ಕೇಳುವವರಿಲ್ಲ.(ಸದ್ಯ, ಉತ್ತರ ಪ್ರದೇಶ ಚುನಾವಣೆಗಾಗಿ ಜಿಗ್ನೇಶ್ ಮೇವಾನಿ ಎಂಬ ಹೊಸ ಪೋಸ್ಟರ್ ಬಾಯ್ ಹುಟ್ಟಿಕೊಂಡಿದ್ದಾನೆ)

ಘಟನೆ ೭ : ಅದುವರೆಗೂ ಹೆಸರೇ ಕೇಳಿರದ ಹುಚ್ಚಂಗಿ ಪ್ರಸಾದನೆಂಬ ಯುವ ಲೇಖಕನೊಬ್ಬ, ನಾಲಗೆಯನ್ನು ಎಕ್ಕಡಕ್ಕಿಂತಲೂ ಹೀನಾಯವಾಗಿ ಬಳಸುವ ಭಗವಾನರರನ್ನು ತನ್ನ ಪುಸ್ತಕ ಬಿಡುಗಡೆಗೆ ಕರೆಸಿದ್ದನ್ನು ಸಹಿಸದ ಸಂಘಟನೆಗಳು ನನ್ನ ಮೇಲೆ ಹಲ್ಲೆ ಮಾಡಿವೆ ಎಂದು ಹೇಳಿಕೊಂಡು ಸುದ್ದಿಯಾದ. ಕೇರಳದ ರಸ್ತೆಯಲ್ಲಿ ರಾಜಕೀಯ ವಿರೋಧಿಗಳನ್ನು ಕೊಚ್ಚಿ ಕೊಲೆಗೈಯ್ಯುವ ಕಮ್ಯುನಿಸ್ಟರು ಈ ಹುಚ್ಚಂಗಿಯನ್ನೂ, ಪ್ರಚಾರ ಹಪಹಪಿಯಿರುವ Opportunist (ಆಕೆ Communist ಅಲ್ಲ ಅಂತ ಕಾಮ್ರೇಡುಗಳೇ ಹೇಳಿರುವುದು) ಮಹಿಳೆಯನ್ನು ಕರೆಸಿ ಸನ್ಮಾನ ಮಾಡಿಸಿ, ಮಾಧ್ಯಮ ಲೋಕದಲ್ಲಿ ತಮ್ಮ ಗಂಜಿಯ ಋಣದಲ್ಲಿ ಬದುಕಿರುವ ಗುಲಾಮರ ಮೂಲಕ ಪ್ರಚಾರವನ್ನೂ ಕೊಡಿಸಿದರು. ಮೊನ್ನೆ ಮೊನ್ನೆಯಷ್ಟೇ ಪೋಲಿಸರು, ಈ ಹುಚ್ಚಂಗಿಯ ಮೇಲೆ ಯಾವುದೇ ಹಲ್ಲೆ ನಡೆದಿರಲಿಲ್ಲ ಅದೊಂದು ಕಟ್ಟುಕತೆ ಎಂದು ಸ್ಪಷ್ಟಪಡಿಸಿದರು. ಪೋಲಿಸರು ಸತ್ಯ ಬಹಿರಂಗಪಡಿಸಿದರೆಂದು ಅಂದು ಹುಚ್ಚಂಗಿಯನ್ನು ಬೆಂಬಲಿಸಿ ಟೌನ್ ಹಾಲ್ ಮುಂದೆ ಬೊಬ್ಬೆ ಹೊಡೆದ ಗಂಜಿಗಿರಾಕಿಗಳು ತಲೆಮರೆಸಿಕೊಂಡೇನೂ ಓಡಾಡುತ್ತಿಲ್ಲ. ನಾಚಿಕೆ ಮಾನ ಮರ್ಯಾದೆ ಇದ್ದವರಾದರೇ ಹಾಗೇ ಮಾಡುತ್ತಿದ್ದರು. ಮಾಡಿಲ್ಲವೆಂದರೆ ಇವರ ಬಗ್ಗೆ ಏನು ಹೇಳುವುದು?

ಘಟನೆ ೮ : ಗುಜರಾತಿನ ಉನಾದಲ್ಲಿ ಸತ್ತ ದನದ ಚರ್ಮ ಸುಲಿಯುತ್ತಿದ್ದವರ ಮೇಲೆ ಗೋ ರಕ್ಷಕ ದಳದವರು ಎನ್ನಲಾದವರು ಮಾಡಿವ ಅಮಾನುಷ ಹಲ್ಲೆ. ಅಪರಾಧ ನಡೆದ ದಿನವೇ, FIR ದಾಖಲಾಗಿ 4 ಜನರ ಬಂಧನವೂ ಆಗಿದೆ. ಈಗ ಬಂಧಿತರ ಸಂಖ್ಯೆ 16 ದಾಟಿದೆ. ಅವರಲ್ಲಿ ಒಬ್ಬ so called ಗೋ ರಕ್ಷಕನ ಹೆಸರು ಮುಷ್ತಾಖ್! ಈ ಮಹಾನುಭಾವ ಗೋ ರಕ್ಷಕರು ಬಂದಿದ್ದು ೭೦೦ ಕಿ.ಮೀ ದೂರದಿಂದ ಬಂದಿದ್ದರೆಂದು ವರದಿಗಳು ಬಂದಿದ್ದವು. ಖುದ್ದು ಮುಖ್ಯಮಂತ್ರಿಯಿಂದ ಹಿಡಿದು, ಸಚಿವ, ಶಾಸಕರೆಲ್ಲ ಸಂತ್ರಸ್ತರ ಭೇಟಿಯಾದರು. ಕರ್ತವ್ಯ ಲೋಪ ಎಸಗಿದ್ದಾಕ್ಕಾಗಿ 4 ಪೋಲಿಸರ ತಲೆದಂಡವಾಯಿತು. ಪ್ರಕರಣದ ತನಿಖೆ ತ್ವರಿತವಾಗಿ ಆಗಬೇಕು ಎಂದು ಆದೇಶಿಸಲಾಯಿತು. ಇಷ್ಟೆಲ್ಲಾ ಆದರೂ, ಇಷ್ಟು ದಿನ ಅಸಹಿಷ್ಣುತೆ, ಪ್ರಶಸ್ತಿ ವಾಪಸಾತಿ, ಹೆಣದ ರಾಜಕೀಯ ಮಾಡುತ್ತಿದ್ದವರೆಲ್ಲ ಈಗ ‘ದಲಿತಾಸ್ತ್ರ’ ಪ್ರಯೋಗಿಸಲು ಹೊರಟಿದ್ದಾರೆ. ಬಂಗಾಳ-ಕೇರಳ ಚುನಾವಣೆಗೆ ಕನ್ಹಯ್ಯ ಕುಮಾರನೆಂಬ ಪೋಸ್ಟರ್ ಬಾಯ್ ಹುಟ್ಟಿಕೊಂಡಂತೆ ಉತ್ತರ ಪ್ರದೇಶದ ಚುನಾವಣೆಗಾಗಿ ಜಿಗ್ನೇಶ್ ಮೇವಾನಿ ಎಂಬವ ಹುಟ್ಟಿಕೊಂಡ. ಊನಾದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಿದ್ದಾರೆ. ಇದನ್ನು ಸ್ಪೂರ್ತಿಯಾಗಿ ತೆಗೆದುಕೊಂಡು ಕರ್ನಾಟಕದಲ್ಲೂ ಒಂದು ಪ್ರತಿಭಟನೆಯನ್ನು ಮಾಡಿದರು(೨೫ ಸಾವಿರ ಜನರನ್ನು ಸೇರಿಸುತ್ತೇವೆ ಎಂದಿದ್ದರು ಸಂಘಟಕರು. ಸೇರಿದ್ದು ಎಷ್ಟು ಸಾವಿರ ಎಂಬ ಸುದ್ದಿಯೇಕೋ ಹೊರಬರಲಿಲ್ಲ).

ಇವರ ಬೇಡಿಕೆ ಭೂಮಿಯದ್ದು. ಸರ್ಕಾರದತ್ತ ಮುಖ ಮಾಡಿ ಭೂಮಿ ಕೇಳುವ ಬದಲು ಈ ಹೋರಾಟದಲ್ಲಿ ಪಾಲ್ಗೊಂಡಿದ್ದ ಮುಖಂಡರು ಮೊದಲು ತಮ್ಮ ಆಸ್ತಿಯ ವಿವರಗಳನ್ನು ಬಹಿರಂಗಪಡಿಸಲಿ. ಅಗತ್ಯಕ್ಕಿಂತ ಹೆಚ್ಚು ಭೂಮಿ ಯಾರ ಬಳಿಯೂ ಇರಬಾರದು ಎನ್ನುವುದು ಇವರದ್ದೇ ನಿಲುವಲ್ಲವೇ? ಅದರ ಪ್ರಕಾರ ತಮ್ಮ ಭೂಮಿಗಳನ್ನೇ ಮೊದಲು ಹಂಚಲಿ ನೋಡೋಣ. ಈ ಹೋರಾಟಕ್ಕೆ ಬೆಂಬಲ ಕೊಟ್ಟ ಮುಖಂಡರೊಬ್ಬರ ಆಸ್ತಿ ಬೆಂಗಳೂರಿನ ಜಯನಗರದ ೪ನೇ ಬ್ಲಾಕಿನ ಆಯಕಟ್ಟಿನ ಜಾಗದಲ್ಲಿದೆ (ಕೂಲ್ ಜಾಯಿಂಟಿನ ಪ್ಯಾರಲಲ್ ರಸ್ತೆಯಲ್ಲಿ ದೊಡ್ಡ ಬೋರ್ಡಿನಲ್ಲೇ ಬರೆದಿದ್ದಾರೆ). ಅದನ್ನು ಮಾರಿ ದಲಿತರ ಉದ್ಧಾರಕ್ಕಾಗಿ ಬಳಸಲಿ ನೋಡೋಣ.

ಕರ್ನಾಟಕದ ವೈಚಾರಿಕ ಜಗತ್ತಿನಲ್ಲಿ ಲಂಕೇಶರದ್ದು ದೊಡ್ಡ ಹೆಸರು. ಲಂಕೇಶ್ ಬರಹಗಳನ್ನು ಬಿಟ್ಟರೆ ಲಂಕೇಶರು ಮಾಡುತಿದ್ದ ಪಾರ್ಟಿಗಳ ಬಗ್ಗೆ ಅವರ ಶಿಷ್ಯ ಕೋಟಿಗಳ ರಸವತ್ತಾಗಿ ಬರೆದಿದ್ದಾರೆ. ಬೆಂಗಳೂರಿನಲ್ಲಿದ್ದ ಲಂಕೇಶರಿಗೆ ತೋಟವೊಂದಿತ್ತು ಅಂತ ಓದಿದ್ದೇನೆ. ಲಂಕೇಶರು ಹೋಗುವಾಗ ಆ ತೋಟವನ್ನು, ತಮ್ಮ ಆಸ್ತಿಯನ್ನು ದಲಿತರಿಗೇನಾದರೂ ಕೊಟ್ಟು ಹೋದರೇ? ಪತ್ರಿಕೆ, ಪಾರ್ಟಿಗಳಾಚೆಗೆ ಇವರು ಬಡವರಿಗಾಗಿ ಏನೆಲ್ಲಾ ಸಹಾಯ ಮಾಡಿದ್ದರು ಅಂತ ಓದಿದ ನೆನಪಿಲ್ಲ. ಕೇವಲ ಲಂಕೇಶ್ ಒಬ್ಬರೇ ಅಲ್ಲ ಡಾಲರ್ಸ್ ಕಾಲೋನಿಯಲ್ಲಿದ್ದ ಅನಂತ ಮೂರ್ತಿಗಳಿರಬಹುದು. ದಿವಂಗತ ಬುದ್ಧಿಜೀವಿಗಳಿಂದ ಹಿಡಿದು ಇನ್ನೂ ಬದುಕಿರುವ ಬುದ್ಧಿಜೀವಿ, ಗಂಜಿಗಿರಾಕಿಗಳು ತಮ್ಮ ಆಸ್ತಿಗಳನ್ನೇ ಬಿಟ್ಟುಕೊಡಲಿ ನೋಡೋಣ. ವಿನೋಭಾ ಭಾವೆಯವರ ಭೂದಾನ ಚಳುವಳಿಯನ್ನು ಕಂಡ ದೇಶವಿದು. ಈ ದುರ್ಬುದ್ದಿ ಜೀವಿಗಳು ಭಾಷಣ ಬಿಗಿಯುವುದು ನಿಲ್ಲಿಸಿ ಕೆಲಸ ಮಾಡಿ ತೋರಿಸಲಿ ನೋಡೋಣ. ಅವೆಲ್ಲಾ ಸಾಧ್ಯವೇ? ಇವರ ಬಡಬಡಿಕೆಗಳೆಲ್ಲ ಪ್ರಾಕ್ಟಿಕಲಿ ಆಗುವಂತದ್ದಲ್ಲ ಎನ್ನುವುದು ಈ ವಿಧ್ವಂಸಕ ಬುದ್ಧಿಜೀವಿಗಳಿಗೆ ಗೊತ್ತಿಲ್ಲದ್ದೇನಲ್ಲ. ತಮ್ಮ ಹಿಂದೆ ಬರುವ ಯುವಕರನ್ನು ಹಿಡಿದಿಡಲು ಒಂದು ಸುಳ್ಳು ಬೇಕಾಗುತ್ತದಲ್ಲ, ಅದಕ್ಕೆ ಈ ನಾಟಕಗಳು.

ಭೂಮಿಯ ಬೇಡಿಕೆಗಿಂತ ದೊಡ್ಡದಾಗಿ ಆ ಸಮಾವೇಶದಲ್ಲಿ ಬೊಬ್ಬೆ ಹೊಡೆದು ಕೇಳಿದ್ದೇನು? ಉಡುಪಿ ಮಠದಲ್ಲಿ ಸಹಭೋಜನ ಬೇಕು. ಪ್ರತ್ಯೇಕ ಪಂಕ್ತಿ ರದ್ದಾಗಬೇಕು ಅಂತ! ಉಡುಪಿ ಮಠದಲ್ಲಿ ಪ್ರತ್ಯೇಕ ಪಂಕ್ತಿ ನಿಷೇಧಿಸಿದರೆ ದಲಿತರ ಉದ್ಧಾರವಾಗುತ್ತಾರೇನು?

ಯಾವುದೇ ಗೊತ್ತು-ಗುರಿಯಿಲ್ಲದೇ, ಕೇವಲ ರಾಜಕೀಯ ಉದ್ದೇಶಕ್ಕಾಗಿ ಮಾಡುವ ಇಂತ ಸಮಾವೇಶಗಳ ಅಂತಿಮ ಫಲಶೃತಿಗಳು ಹೀಗೆಯೇ ಇರುತ್ತವೆ. ಇದ್ದಕ್ಕಿದ್ದಂತೆ, ಈ ಪರಿ ದಲಿತ ಪ್ರೇಮ ಜಾಗೃತವಾಗಲು, ಉತ್ತರ ಪ್ರದೇಶದಲ್ಲಿ ಚುನಾವಣೆ ಹತ್ತಿರ ಬರುತ್ತಿರುವುದೇ ಮುಖ್ಯಕಾರಣ. ಗುಜರಾತ್, ಉ.ಪ್ರ ಘಟನೆಗಳ ಸಮಯದಲ್ಲೇ, ಬಿಹಾರದಲ್ಲಿ ಇಬ್ಬರು ದಲಿತ ಯುವಕರ ಮೇಲೆ ಹಲ್ಲೆ ನಡೆದ ಪ್ರಕರಣ ವರದಿಯಾಯಿತು. ಇಲ್ಲಿ ಬೊಬ್ಬೆ ಹೊಡೆದವರೆಲ್ಲ ಆ ಪ್ರಕರಣದ ಬಗ್ಗೆ ಮಾತನಾಡಲಿಲ್ಲ. ಮಾತನಾಡುವುದಾದರೂ ಹೇಗೆ ಹೇಳಿ? ಬಿಹಾರದ ಮುಖ್ಯಮಂತ್ರಿ ಇವರದ್ದೇ ಗುಂಪಿನವರು!

ಕೇರಳದಲ್ಲಿ ಕಮ್ಯುನಿಸ್ಟರ ಕೈಯಲ್ಲಿ ಹತ್ಯೆಯಾದ ದಲಿತರೆಷ್ಟು ಜನ ಎನ್ನುವುದು ಈ ಹೋರಾಟಗಾರರಿಗೆ ಗೊತ್ತೇ? ನಾರಾಯಣ ಗುರುಗಳ ಮಂದಿರಕ್ಕೆ ದಾಳಿಗೈದಿದ್ದ ಕಮ್ಯುನಿಸ್ಟರ ಜೊತೆ ಅನೈತಿಕ ಸಂಬಂಧ ಬೆಳೆಸಿರುವ ಕರ್ನಾಟಕದ ಬುದ್ಧಿ ಜೀವಿಗಳು ದಲಿತ-ಹಿಂದುಳಿದವರ ಏಳ್ಗೆಯ ಬಗ್ಗೆ ಮಾತನಾಡುವುದಕ್ಕಿಂತ ದೊಡ್ಡ ಮೋಸ ಬೇರೇನಾದರೂ ಇದೆಯೇ?

ಈ ಗಂಜಿಗಿರಾಕಿಗಳು ಇಷ್ಟೆಲ್ಲಾ ಹೋರಾಟ ಮಾಡುತ್ತಿರುವುದೇತಕ್ಕೇ ಗೊತ್ತಾ, “ನಾನು ಬ್ರಾಹ್ಮಣ” ಎಂದು ಹೇಳಿಕೊಳ್ಳುವ ರಾಹುಲ್ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ಗೆಲ್ಲಿಸಲು. ಇದೇ ಕಾರಣಕ್ಕಾಗಿಯೇ ದಲಿತರ ಹೆಗಲ ಮೇಲೆ ಬಂದೂಕನ್ನಿರಿಸಿ ಕಾಕಗಳು (ಕಾಂಗಿ+ಕಮ್ಯುನಿಸ್ಟ್) ನಾಟಕವಾಡುತ್ತಿದ್ದಾರೆ. ಇವರ ಆಟವನ್ನು ಅರ್ಥ ಮಾಡಿಕೊಳ್ಳಲಾಗದವರು ಜೈ ಜೈ ಎನ್ನುತ್ತಿದ್ದಾರೆ.

ದಲಿತರಿಗೆ ರಾಜ್ಯಾಧಿಕಾರ ಬೇಕು ಎಂದು ಬುದ್ಧಿಜೀವಿಗಳು ಬಾಯಿ ಬಡಿದುಕೊಂಡು ದಲಿತರನ್ನು ಯಾಮಾರಿಸುತ್ತಲೇ ಬಂದಿದ್ದಾರೆ. ಕರ್ನಾಟಕದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದ ಪರಮೇಶ್ವರ್ ಅವರ ಸ್ಥಿತಿಯೇನಾಗಿದೆ? ದಲಿತ ನಾಯಕ ಕಾನ್ಶಿರಾಮ್ ಅವರ ಕನಸನ್ನು ನನಸಾಗಿಸಿ, ಮಾಯಾವತಿಯವರನ್ನು ಮೊದಲ ದಲಿತ ಮಹಿಳಾ ಮುಖ್ಯಮಂತ್ರಿಯಾಗಿ ಮಾಡಿದ್ದು ಇವರ ಸೋ-ಕಾಲ್ಡ್ ಮನುವಾದಿ, ಮಹಿಳಾ ವಿರೋಧಿ ಬಿಜೆಪಿ ಪಕ್ಷವೇ. ಹಾಗೆಯೇ ಮೆಹಬೂಬ ಮುಫ್ತಿಯವರನ್ನು ಮೊದಲ ಮುಸ್ಲಿಂ ಮಹಿಳಾ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ್ದು ಸೋ-ಕಾಲ್ಡ್ ಅಲ್ಪಸಂಖ್ಯಾತ, ಮಹಿಳಾ ವಿರೋಧಿ ಬಿಜೆಪಿ ಪಕ್ಷವೇ. ಇವೆಲ್ಲ ವಾಸ್ತವಗಳನ್ನು ಗಂಜಿಗಿರಾಕಿಗಳು ಮುಚ್ಚಿಟ್ಟು ದಲಿತರನ್ನು ಉತ್ತರ ಪ್ರದೇಶ ಚುನಾವಣೆಗಳಿಗಾಗಿ ಬಳಸಿಕೊಳ್ಳುತ್ತಿದ್ದಾರೆ.

ಈ ದೇಶದ ಬುದ್ಧಿಜೀವಿಗಳ ನಿಂತ ನೆಲ ಕುಸಿದಿದ್ದು 2014ರ ಮೇ 16ರ ದಿನ.ನೆಹರೂ ಕಾಲದಿಂದ ಬುದ್ಧಿಜೀವಿಗಳ ಕಾಶಿ JNU ಇಂದ ಹಿಡಿದು ದೇಶದ ಮೂಲೆ ಮೂಲೆಯ ಸೆಕ್ಯುಲರ್ ಬಿಲಗಳಲ್ಲಿ ಸೇರಿಕೊಂಡಿದ್ದವರಿಗೆಲ್ಲ ಮುಳುಗು ನೀರಿನ ಅನುಭವವಾದ ದಿನವದು. ಜಾತಿ ಮತ್ತು ದ್ವೇಷದ ರಾಜಕೀಯಕ್ಕೆ ಕ್ಯಾರೇ ಎನ್ನದ ಜನರು ಮೋದಿಯವರ ಅಭಿವೃದ್ಧಿ ಮಂತ್ರಕ್ಕೆ ಮತ ನೀಡಿದ್ದು ಬುದ್ಧಿಜೀವಿಗಳನ್ನು ದಂಗುಬಡಿಸಿತು. ಸಾಮಾಜಿಕ ಜಾಲತಾಣಗಳು ಇನ್ನೂ ಕಣ್ಣು ಬಿಡುತ್ತಿರುವಾಗಲೇ, ಅಷ್ಟೆಲ್ಲಾ ವ್ಯವಸ್ಥಿತ ಹೇಟ್ ಕ್ಯಾಂಪೇನ್ ಮಾಡಿಯೂ ನಮ್ಮ ಕೈಯಿಂದ ತಪ್ಪಿಸಿಕೊಂಡ ಈ ಚಾಣಾಕ್ಷ ಮೋದಿ, ಇನ್ನೀಗ ಸಾಮಾಜಿಕ ಜಾಲತಾಣಗಳ ಅಬ್ಬರದ ದಿನಗಳಲ್ಲಿ ನಮ್ಮ ಕೈಗೆ ಸಿಗುತ್ತಾನೆಯೇ ಎಂಬುದೇ ಇವರ ಅಳಲು. ಇದರ ಜೊತೆಗೆ NGOಗಳ ಹೆಸರಿನಲ್ಲಿ ಇವರ ಐಡಿಯಾಲಜಿಯನ್ನು ಹರಡಲು ಮೊದಲೆಲ್ಲಾ ದಾರಿಗಳಿದ್ದವು. ಇವರ ಜೇಬಿಗೂ ಆಗ ಸುಭೀಕ್ಷದ ದಿನಗಳು, ಈ ಮಹಾನುಭಾವ ಮೋದಿ ಬಂದ ಮೇಲೆ ಅದಕ್ಕೂ ಕಲ್ಲು ಹಾಕಿದ್ದಾರೆ. ವಿದೇಶಿ ದೇಣಿಗೆ ಪಡೆಯುವ NGOಗಳ ಮೇಲೆ ಕಣ್ಗಾವಲಿದೆ, ಬೇನಾಮಿ NGOಗಳಿಗೆ ಬೀಗವನ್ನು ಜಡಿಯಲಾಗಿದೆ. ಗಂಜಿ ಕೇಂದ್ರಗಳೆಲ್ಲ ಮುಚ್ಚಿದಾಗ ಬಂಡಾಯವೇಳುವುದೂ ಸಹಜವೇ. ಈಗ ಆಗುತ್ತಿರುವುದೂ ಅದೇ ತಾನೇ? ವಾಜಪೇಯಿಯವರ ಕಾಲಕ್ಕಿಂತಲೂ ಅತಿಕೆಟ್ಟ ದಿನಗಳನ್ನು ಕಾಂಗ್ರೆಸ್ಸ್ ಮೋದಿಯವರ ಕಾಲದಲ್ಲಿ ನೋಡುತ್ತಿದೆ. ಮಾತೃಪಕ್ಷವೇ ದೈನೇಸಿ ಸ್ಥಿತಿಯಲ್ಲಿರುವಾಗ ಋಣ ತೀರಿಸದಿದ್ದರೇ ಹೇಗೆ?

ಚುನಾವಣೆ ಸಮಯದಿಂದ ಹಿಡಿದು, ಸರ್ಕಾರ ರಚನೆಯಾದ ನಂತರವೂ ಕಾಕಗಳು, ಬುದ್ಧಿಜೀವಿಗಳು, ಗಂಜಿಗಿರಾಕಿಗಳು, ಕಮ್ಯುನಿಸ್ಟರು ಮೋದಿಯವರ ಸರ್ಕಾರ ಕಾರ್ಪೋರೇಟ್ ಸರ್ಕಾರ ಎಂದೇ ಬಿಂಬಿಸುತ್ತಾ ಬಂದಿದ್ದಾರೆ. ಹಾಗಿದ್ದರೇ, ಮೋದಿಯವರ ಸರ್ಕಾರ ಬಂದ ನಂತರ ಬಡವರು, ದಲಿತರಿಗಾಗಿ ಏನೂ ಯೋಜನೆಗಳನ್ನೂ ಮಾಡಿಯೇ ಇಲ್ಲವೇ?

 • ಶ್ರೀಮಂತರು, ಮಧ್ಯಮ-ಮೇಲ್ಮಧ್ಯಮ ವರ್ಗದವರಿಗೆ ಮಾತ್ರ ತೆರೆದುಕೊಂಡಿದ್ದ ಬ್ಯಾಂಕುಗಳನ್ನು ಬಡವರ ಬಳಿಕೊಂಡೊಯ್ದಿದ್ದು ಮೋದಿಯವರ ಸರ್ಕಾರ.ಅದು ಸ್ವಾತಂತ್ರ್ಯ ಬಂದು ೬೭ ವರ್ಷಗಳ ನಂತರ.
 • ಸೌದೇ ಒಲೆಯಲ್ಲಿ ಅಡುಗೆ ಮಾಡುತ್ತ,ಅದರ ಹೊಗೆಯಿಂದ ಆರೋಗ್ಯ ಹದಗೆಡಿಸಿಕೊಳ್ಳುತ್ತಿದ್ದ ಬಡವರ ಮನೆಯ ಹೆಣ್ಣುಮಕ್ಕಳಿಗಾಗಿ “ಪ್ರಧಾನ ಮಂತ್ರಿ ಉಜ್ವಲ ಯೋಜನೆ” ಮಾಡಿದ್ದು ಮೋದಿಯವರ ಸರ್ಕಾರ.
 • ಸಾತಂತ್ರ್ಯ ಬಂದು ೬೭ ವರ್ಷಗಳ ಕಾಲ ರಸ್ತೆ,ವಿದ್ಯುತ್ತಿನಿಂದ್ ಅವಂಛಿತರಾಗಿರುವ ಬಡವರ ಹಳ್ಳಿಗಳಿಗೆ ದೀನ್ ದಯಾಳ್ ಉಪಾದ್ಯಾಯ ಗ್ರಾಮ ಜ್ಯೋತಿ ಯೋಜನೆಗಳ ಮೂಲಕ ಬೆಳಕು ನೀಡಿದ್ದು ಮೋದಿಯವರ ಸರ್ಕಾರ.
 • ಪ್ರತಿ ಮನೆಗೊಂದು ಟಾಯ್ಲೆಟ್ಟು ಕಟ್ಟಿಸಲು ಯೋಜನೆ ಹಾಕಿಕೊಂಡು, ಅದನ್ನು ಸಾಕಾರಗೊಳಿಸಿ ಬಡವರ ಪರ ನಿಂತಿದ್ದು ಇದೇ ಮೋದಿ ಸರ್ಕಾರ.
 • ಬೇಟಿ ಬಚಾವೋ-ಬೇಟಿ ಪಡಾವೋ ಎಂದು ಹೆಣ್ಣುಮಕ್ಕಳ ಬಗ್ಗೆ ಕಾಳಜಿ ತೋರಿದ್ದು ಇದೇ ಮೋದಿಯವರ ಸರ್ಕಾರ.
 • ಹೊರದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದ ಭಾರತೀಯರನ್ನು ಬಡವ-ಶ್ರೀಮಂತ,ಜಾತಿ,ಧರ್ಮ ಕೇಳದೇ ಭಾರತಕ್ಕೆ ಸುರಕ್ಷಿತವಾಗಿ ಕರೆತಂದಿದ್ದು ಇದೇ ಮೋದಿ ಸರ್ಕಾರ.

ಈ ಮೇಲಿನ ಉದಾಹರಣೆಗಳು ಕೇವಲ ಸ್ಯಾಂಪಲ್ಲುಗಳಷ್ಟೇ. ನರೇಂದ್ರ ಮೋದಿಯವರ ಸರ್ಕಾರ ಬಡವರು, ದಮನಿತರು, ದಲಿತರ ಏಳ್ಗೆಗಾಗಿ ಕೈಗೊಂಡಿರುವ ಯೋಜನೆಗಳ ಬಗ್ಗೆ ಒಂದು ಲೇಖನವನ್ನೇ ಬರೆಯಬಹುದು. ಬಹುಶಃ ಸ್ವಾತಂತ್ರ್ಯಾ ನಂತರ ಬಂದ ಎಲ್ಲಾ ಸರ್ಕಾರಗಳಿಗಿಂತಲೂ ಹೆಚ್ಚು ಬಡವರು, ದಲಿತರು, ದಮನಿತರ ಕಾಳಜಿಯುಳ್ಳ ಸರ್ಕಾರ ಮೋದಿಯವರ ಸರ್ಕಾರ. ಹೀಗಿದ್ದಾಗ್ಯೂ ಅದೇಕೆ ಮೋದಿಯವರ ಮೇಲೆ ಇವರಿಗೆ ಈ ಪರಿ ಸಿಟ್ಟು?

ಈ ಸಿಟ್ಟಿನ ಹಿಂದಿನ ಮನಸ್ಥಿತಿಯನ್ನು ಪ್ರಗತಿಪರ ಪ್ರೇತಾತ್ಮವನ್ನು ಆವಾಹಿಸಿಕೊಂಡು ಅವರದೇ ಭಾಷೆಯಲ್ಲಿ ಹೇಳುವುದಾದರೇ…

ಬ್ರಾಹ್ಮಣ್ಯ ಮನಸ್ಥಿತಿಯ ಬುದ್ಧಿಜೀವಿ, ಗಂಜಿಗಿರಾಕಿ, ಕಮ್ಯುನಿಸ್ಟರು ತಾನೊಬ್ಬ ಬ್ರಾಹ್ಮಣ ಎಂದು ಹೇಳಿಕೊಳ್ಳುವ ರಾಹುಲ್ ಗಾಂಧಿಯನ್ನೋ (ನಯಾ ಪೈಸೆಯ ಬುದ್ಧಿಯಿಲ್ಲದಿದ್ದರೂ) ಅಥವಾ ಕಾಶ್ಮೀರಿ ಪಂಡಿತ ನೆಹರೂ ಕುಟುಂಬದ ಇನ್ನಾರೋ ಪ್ರಧಾನಿಯಾಗಿ ಒಪ್ಪಿಕೊಳ್ಳಬಲ್ಲರೇ ಹೊರತೂ, ಬಡವರ ಮನೆಯ, ಟೀ ಮಾರುವ ಹುಡುಗ, ಅತ್ಯಂತ ಹಿಂದುಳಿದ ಜಾತಿಯವರಾದ ನರೇಂದ್ರ ಮೋದಿಯವರನ್ನು ಪ್ರಧಾನಿಯಾಗಿ ಒಪ್ಪಿಕೊಳ್ಳಲು ಈ Elite Class ಜನರಾದ ಬುದ್ಧಿಜೀವಿ, ಗಂಜಿಗಿರಾಕಿ, ಕಮ್ಯುನಿಸ್ಟರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಇದೇ ಕಾರಣದಿಂದಾಗಿ ಪ್ರಶಸ್ತಿ ವಾಪಸಾತಿ, ಅಸಹಿಷ್ಣುತೆ, ಮಣ್ಣು-ಮಸಿಯೆಂದು ದಿನಕ್ಕೊಂದು ಕತೆ ಕಟ್ಟಿ ಬೊಬ್ಬೆ ಹೊಡೆಯುತ್ತಿದ್ದಾರೆ ಮತ್ತು ಇವಕ್ಕೆಲ್ಲ ಇವರು ಬಳಸಿಕೊಳ್ಳುತ್ತಿರುವುದು ಬಡವರ ಮನೆಯ, ಹಿಂದುಳಿದ ಜಾತಿಯ ಹುಡುಗರನ್ನೇ.

ಹಿಂದುಳಿದ ಜಾತಿಗೆ ಸೇರಿದ ವ್ಯಕ್ತಿ ನರೇಂದ್ರ ಮೋದಿಯ ವಿರುದ್ಧ ಹಿಂದುಳಿದ-ದಲಿತ ವರ್ಗದ ಯುವಕರನ್ನೇ ಎದುರಾಳಿಯಾಗಿ ನಿಲ್ಲಿಸುವಲ್ಲಿ ಕಾಂಗ್ರೆಸ್, ಕಮ್ಯುನಿಸ್ಟ್ ದುಷ್ಟಕೂಟದ ಬ್ರಾಹ್ಮಣ್ಯ ಮನಸ್ಥಿತಿಯ ಬುದ್ಧಿಜೀವಿಗಳು ಯಶಸ್ವಿಯಾಗಿದ್ದಾರೆ. ಉನ್ಮಾದದಲ್ಲಿ ಮುಳುಗಿರುವ ಯುವಕರಿಗೆ ಈ ಒಳಸುಳಿಗಳು ಅರ್ಥವಾಗುತ್ತಿಲ್ಲ. ಅಂದ ಹಾಗೇ ಈ ನಾಟಕಗಳು ೨೦೧೯ರ ಚುನಾವಣೆ ಹತ್ತಿರ ಬರುವಾಗ ಇನ್ನಷ್ಟು ಭೀಕರವಾಗಲಿವೆ.

3 ಟಿಪ್ಪಣಿಗಳು Post a comment
 1. vasu
  ಆಕ್ಟೋ 28 2016

  ಲೇಖನ ಚೆನ್ನಾಗಿದೆ. ಆದರೆ ರಾಹುಲ್ ಗಾಂಧಿ ಬ್ರಾಹ್ಮಣನೇ? ಯಜ್ಞ ಮಾಡುತ್ತಿರುವಾಗ ಸರಿಯಾಗಿ ಕುಳಿತುಕೊಳ್ಳಲೂ ಬಾರದ, ಮತ್ತು ಯಾವುದೇ ಬ್ರಾಹ್ಮಣ ಸಂಪರ್ಕದಿಂದ ಜನಿಸದ ಈ ವೈಕ್ತಿ ಬ್ರಾಹ್ಮಣ ಹೇಗೆ? ಮತ್ತೊಂದು ಮಾತು ಬ್ರಾಹ್ಮಣ್ಯ ಮನೋಸ್ಥಿತಿ ಎಂದರೇನು? ಈ ಸಮಾಜದ ಎಲ್ಲಾ ದುರ್ಬಲತೆಗಳಿಗೆ brhaminism ಕಾರಣ ಎಂದು ಹೇಳುವ ಒಂದು ವರ್ಗದವರ ಬ್ರಾಹ್ಮಣ್ಯದ ಕಲ್ಪನೆಗೆ ನೀವು ಸಹ ಮರುಳಾಗಿದ್ದೀರೆಂದು ನನ್ನ ಅನಿಸಿಕೆ, ನಿಸ್ವಾರ್ಥಿಯಾಗಿ, ಪರೋಪಕಾರಿಯಾಗಿ , ಸಮಾಜಕ್ಕೆ ಶಿಕ್ಷಣ ನೀಡಿ ಮಾರ್ಗದರ್ಶನ ಮಾಡುವವನೇ ಬ್ರಾಹ್ಮಣ ಎಂಬ ವೇದಾರ್ಥವನ್ನು ಮಾತ್ರ ನಾನು ಸರಿಯೆಂದು ಕೊಂಡಿದ್ದೇನೆ. ಈ ಅರ್ಥ ಇಂದು ಅಪಾರ ಧೂಷಣೆಗೊಳಗಾಗಿರುವವ ಮನುವಿನ ಒಂದು ವ್ಯಾಖ್ಯಾನ.

  ಉತ್ತರ
  • ರಾಕೇಶ್ ಶೆಟ್ಟಿ
   ಆಕ್ಟೋ 28 2016

   ಬ್ರಾಹ್ಮಣ್ಯ ಎಂಬ ಪದ ನುಸುಳುವ ಮೊದಲು “ಪ್ರಗತಿಪರ ಪ್ರೇತಾತ್ಮವನ್ನು ಆವಾಹಿಸಿಕೊಂಡು ಅವರದೇ ಭಾಷೆಯಲ್ಲಿ ಹೇಳುವುದಾದರೇ…” ಅಂತ ಬರೆದಿದ್ದೇನೆ ನೋಡಿ ಸರ್. ನನ್ನ ದೃಷ್ಟಿಯಲ್ಲಿ ಬ್ರಾಹ್ಮಣ್ಯ ಎಂಬುದು ಅರ್ಥವಿಲ್ಲದ ಪದ
   No Doubt!

   ಕಳೆದ ಬಾರಿ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಸಮಯದಲ್ಲಿ ರಾಹುಲ್ ಗಾಂಧಿ, ನಾನೊಬ್ಬ ಬ್ರಾಹ್ಮಣ ಅಂತ ಹೇಳಿಕೊಂಡಿದ್ದರು 😀

   ಮತ ಪಡೆಯಲು ನಾನಾ ವೇಷಗಳಷ್ಟೇ.ಈ ಜನರು ಮೋದಿಯವರ ಮೇಲೆ ಇಷ್ಟೆಲ್ಲಾ ದ್ವೇಷ ಸಾಧಿಸಿ ಯಾರನ್ನು ಪಟ್ಟಕ್ಕೆ ಕೂರಿಸಲು ಹೊರಟಿದ್ದಾರೆ ಅಂತ ಹೇಳಲಿಕ್ಕೆ ಅದನ್ನು ಉಲ್ಲೇಖಿಸಿದೆ.

   ಉತ್ತರ
 2. Rame gowda
  ಆಕ್ಟೋ 29 2016

  Nimagenri gottu, rahul gandhi appa dehaliyalli archakaragidru.Sonia gandi maduve aadmele pradani aagirodu:)

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments