ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 2, 2016

ಭಾರತದಲ್ಲೊಂದು ಸುಂಕದ ಬೇಲಿ

‍ನಿಲುಮೆ ಮೂಲಕ

– ನವೀನ್ ನಾಯಕ್ ಕೊಪ್ಪ

ಸಾಮಾನ್ಯವಾಗಿ ಉಪ್ಪಿನ ಕುರಿತು ನಡೆದಿರುವ ಹೋರಾಟ ಎಂದರೆ ನಮಗೆ ನೆನಪಾಗುವುದು ಗಾಂಧಿಯವರ ನೇತೃತ್ವದಲ್ಲಿ ನಡೆದ ದಂಡಿ ಸತ್ಯಾಗ್ರಹ ಮಾತ್ರ. ಈ ಸತ್ಯಾಗ್ರಹವು ಸಬರಮತಿ ಆಶ್ರಮದಿಂದ ದಂಡಿಯವರೆಗೆ ಅಂದರೆ ಸರಿಸುಮಾರು ೨೪೦ ಮೈಲಿಗಳನ್ನು ಇಪ್ಪತೈದು ದಿನಗಳಲ್ಲಿ ಕಾಲ್ನಡಿಗೆ ಮುಖಾಂತರ ನಡೆಸಲಾಗಿತ್ತು. ‘ಉಪ್ಪಿನ ಮೇಲಿನ ಕರ’ ಎಂದು ಕೇಳಿದೊಡನೆ ನಮಗೆ ನೆನಪಾಗುವುದು ಇಷ್ಟೇ.

ಆದರೆ ‘ಭಾರತದಲ್ಲೊಂದು ಸುಂಕದ ಬೇಲಿ’ ಕೃತಿ ಓದುತ್ತಾ ಹೋದಂತೆ ಈ ಉಪ್ಪಿನ ಮೇಲೆ ಹೇರಿದ್ದ ತೆರಿಗೆಯ ಕಾರಣದಿಂದ ಬ್ರಿಟಿಷರು ನಡೆಸುತಿದ್ದ ಬರ್ಬರತೆ ಪ್ರಕಟವಾಗುತ್ತಾ ಹೋಗುತ್ತದೆ. ಉಪ್ಪಿನ ತೆರಿಗೆಗಾಗಿ  ನಡೆಯುತಿದ್ದ ಸುಲಿಗೆಯನ್ನು ತಿಳಿಸುವಂತಹ ಪುಸ್ತಕ ಇದೊಂದೇ ಏನೋ .  ರಾಯ್ ಮ್ಯಾಕ್ಸ್ ಹ್ಯಾಮ್ (ಮೂಲ ಲೇಖಕರು) 1992 ರಲ್ಲಿ ಮೊದಲ ಬಾರಿಗೆ ಪ್ರವಾಸಕ್ಕೆಂದು ಬಂದವರು ಇಲ್ಲಿಯ ಸಂಸ್ಕೃತಿಯನ್ನು ಕಂಡು ಮಾರುಹೋದರು. ಭಾರತದ ಬಗ್ಗೆ ಕುತೂಹಲ ಹೆಚ್ಚಿ ಇನ್ನಷ್ಟು ತಿಳಿಯಲು ಇಲ್ಲಿನ ಇತಿಹಾಸವನ್ನು ಅರಿಯುವ ಪ್ರಯತ್ನದೊಂದಿಗೆ, ಹಲವು ಗ್ರಂಥಾಲಯಗಳಿಗೆ ಭೇಟಿ ನೀಡಿ ಭಾರತದ ಕುರಿತಿದ್ದ ಪುಸ್ತಕಗಳನ್ನೆಲ್ಲಾ ರಾಶಿ ಹಾಕಿ ಅವನ್ನು ಓದತೊಡಗಿದಾಗ ಅವರ ಗಮನ ಸೆಳೆದದ್ದು ೧೮೯೩ ರಲ್ಲಿ ಪ್ರಕಟಗೊಂಡಿದ್ದ, ಭಾರತದಲ್ಲಿ ಮೇಜರ್ ಜನರಲ್ ಆಗಿ ಕಾರ್ಯ ನಿರ್ವಹಿಸುತಿದ್ದ ಸರ್ ಡಬ್ಲ್ಯು ಯು ಹೆಚ್ ಸ್ಲೀಮನ್ ರವರ Rambles and recollections  of an Indian official ಎಂಬ ಕೃತಿಯಲ್ಲಿನ ಒಂದು ಸಣ್ಣ ಟಿಪ್ಪಣಿ. ಆ ಟಿಪ್ಪಣಿ ಹೀಗಿತ್ತು.. ” ಉಪ್ಪಿನ ಮೇಲಿನ ಸುಂಕದ ಸಂಗ್ರಹಣೆಗಾಗಿ ಎರಡು ಸಾವಿರದ ಮುನ್ನೂರು ಮೈಲು, ಅಂದರೆ ಸಿಂಧು ನದಿಯಿಂದ ಮದ್ರಾಸಿನ ಮಹಾನದಿಯವರೆಗೆ ಬೇಲಿ ನಿರ್ಮಿಸಲಾಗಿತ್ತಲ್ಲದೇ ಕಾವಲಿಗಾಗಿ ಹನ್ನೆರಡು ಸಾವಿರ ಜನ ನಿಯುಕ್ತರಾಗಿದ್ದರು!! ಈ ಬೇಲಿ ಬೃಹತ್ ಮರಗಳಿಂದ, ಮುಳ್ಳು ಪೊದೆ, ಬಳ್ಳಿ ಗಳಿಂದ ಈ ಬೃಹತ್ ಬೇಲಿ ನಿರ್ಮಾಣವಾಗಿತ್ತು!!” ಈ ಟಿಪ್ಪಣಿಯ ಬೆನ್ನು ಹಿಡಿದು ಹೊರಟ ಹ್ಯಾಮ್ ಗೆ ಕಂಡದ್ದು ಬ್ರಿಟಿಶರ ಅಮಾನವೀಯತೆ.

ಈಸ್ಟ್ ಇಂಡಿಯಾ ಕಂಪನಿಯು ಉಪ್ಪಿನ ಮೇಲೆ ವಿಪರೀತ ತೆರಿಗೆ ಹೇರಿದ್ದ ಕಾರಣವಾಗಿ ಕಂಪನಿಯ ಕಣ್ತಪ್ಪಿಸಿ ಸಾಗಣಿಕೆಯಾಗುತಿದ್ದ ಉಪ್ಪನ್ನು ತಡೆಹಿಡಿಯಲು ಹೆಣಗಾಡುತಿತ್ತು. ಬ್ರಿಟಿಷರ ದೃಷ್ಟಿಯಲ್ಲಿ ಅಕ್ರಮವಾದ ಈ ಸಾಗಾಣಿಕೆಯನ್ನು ತಡೆಯಲು ರೂಪುಗೊಂಡಿದ್ದೇ ಸುಂಕದ ಬೇಲಿ! ಸ್ಥಳೀಯವಾಗಿ ಸಿಗುವಂತಹ ಮುಳ್ಳಿನ ಗಿಡ ಮರವನ್ನು ಬಳಸಿ ನಿರ್ಮಿಸಿದ್ದ ಸರಿಸುಮಾರು ಎರಡೂವರೆ ಸಾವಿರ ಮೈಲುಗಳಷ್ಟು ಉದ್ದದ ಬೇಲಿಯದು. ಸುಲಭವಾಗಿ ಅರ್ಥವಾಗಬೇಕೆಂದರೆ ಹಿಮಾಲಯದಿಂದ ಶುರುವಾಗಿ ಈಗಿನ ಪಾಕಿಸ್ತಾನ ಇರುವ ಜಾಗದ ಮುಖಾಂತರ ದೆಹಲಿ, ಆಗ್ರವನ್ನು ಹಾಯ್ದು ಒರಿಸ್ಸಾದಲ್ಲಿ ಕೊನೆಗೊಳ್ಳುತ್ತದೆ. ಇದರ ಉದ್ದ ಎಷ್ಟಿತ್ತೆಂದರೆ ‘ಚೀನ ಮಹಾಗೋಡೆ’ ಯ ನಂತರದ ಸ್ಥಾನ ಈ ಬೇಲಿಯದು ಅಂತ ಸುಂಕದ ಬೇಲಿಯನ್ನು ಕಣ್ಣಾರೆ ಕಂಡಿದ್ದ ‘ಗ್ರಾಂಡ್ ಡಫ್’ ಅವರ ಅಭಿಪ್ರಾಯ. ಈ ಬೇಲಿಯ ವರ್ಣನೆಗೆ ಮೂಕ ವಿಸ್ಮಿತರಾದ ಲೇಖಕರು ಭಾರತ ಕುರಿತು ದಾಖಲೆಗಳಿರುವ ಎಲ್ಲಾ ಗ್ರಂಥಾಲಯಗಳನ್ನು, ಕಚೇರಿಗಳಿಗೆ ಹೋಗಿ ಬೇಲಿಯ ಕುರಿತು, ಉಪ್ಪಿನ ಸುಂಕದ ಕುರಿತು ದಾಖಲೆ ಸಂಗ್ರಹಿಸಲು ಶುರು ಮಾಡುತ್ತಾರೆ. ಎಷ್ಟೇ ಪ್ರಯತ್ನ ಪಟ್ಟರೂ ಖಚಿತವಾದ ದಾಖಲೆಗಳು, ನಕ್ಷೆಗಳು ಸಿಗುವುದಿಲ್ಲ …. ಸಿಕ್ಕ ದಾಖಲೆಗಳನ್ನೇ ಬಳಸಿ ಭಾರತಕ್ಕೆ ಬರುತ್ತಾರೆ.. ಬೇಲಿ ಹುಡುಕುತ್ತಾರೆ.. ವಿಫಲರಾಗುತ್ತಾರೆ.. ಆದರೆ ಅಷ್ಟಕ್ಕೇ ಹತಾಶರಾಗದೆ ಬೇಲಿ ಕಂಡು ಹಿಡಿಯಲು ಸಿಕ್ಕ ಸಣ್ಣ ಸಣ್ಣ ಸುಳಿಹುಗಳನ್ನೇ ಆಧಾರಿಸಿ ನಡೆಸುವ ಭಗೀರತ ಪ್ರಯತ್ನ ಎಲ್ಲವು ಅಚ್ಚರಿ ಹುಟ್ಟಿಸುತ್ತವೆ.

ಈ ಅಧ್ಯಯನದಿಂದ ಹ್ಯಾಮ್ ರವರಿಗೆ, ಬ್ರಿಟೀಷರು ಭಾರತದಲ್ಲಿ ಉಪ್ಪಿನ ಕರಕ್ಕಾಗಿ ನಡೆಸಿದ್ದ ಕ್ರೌರ್ಯವು ಅನಾವರಣಗೊಳ್ಳುತ್ತಾ ಹೋಗುತ್ತದೆ. ಒಬ್ಬ ಕೃಷಿಕನಿಗೆ ಮಾಸಿಕ ಎರಡು ಮೂರು ರುಪಾಯಿ ಆದಾಯವಿದ್ದಂತಹ ಸಮಯದಲ್ಲಿ ಬ್ರಿಟಿಷರು ಉಪ್ಪಿನ ತೆರಿಗೆ ಸಂಗ್ರಹಿಸಲು ನಿರ್ಮಿಸಿದ ಸುಂಕದ ಬೇಲಿಯ ಮುಖಾಂತರ ವಾರ್ಷಿಕವಾಗಿ ನಾಲ್ಕು ಕೋಟಿ ರುಪಾಯಿಯವರೆಗೆ ದೋಚುತಿದ್ದರು. ಕ್ಷಾಮವಿದ್ದಂತಹ ಸಮಯದಲ್ಲಿ ರಾಜರು ತೆರಿಗೆ ವಿನಾಯಿತಿ ನೀಡುತಿದ್ದರೆ, ಬ್ರಿಟಿಷ್ ಆಳ್ವಿಕೆಯಲ್ಲಿದಂತಹ ಪ್ರದೇಶದಲ್ಲಿ ಕಂದಾಯವನ್ನು ಇನ್ನಷ್ಟು ಹೆಚ್ಚಿಸಲಾಗುತಿತ್ತು. ಆ ತೆರಿಗೆ ನೀಡಲು ಮುಂದಿನ ವರ್ಷಕ್ಕೆಂದು ಕೂಡಿಟ್ಟ ಬೀಜಗಳನ್ನು ಮಾರಬೇಕಾಯಿತು. ಇದೇ ಸಮಯದಲ್ಲಿ ೮೨ ಪೌಂಡ್ ( ೩೭ ಕಿ.ಗ್ರಾಂ. ) ಅಕ್ಕಿಯ ಬೆಲೆ ನಲವತ್ತು ಪೈಸೆಯಿಂದ ಹದಿಮೂರು ರುಪಾಯಿಗೆ ಏರಿ, ಬೆಲೆ ತೆರಲಾಗದ ಜನರು ಡಕಾಯಿತರಾಬೇಕಾಯಿತು. ಈ ನರಕ ಸದೃಶ್ಯ ಘಟನೆಗಳು ಸ್ಪಷ್ಟವಾಗಿ ಎಲ್ಲೂ ದಾಖಲಾಗದಿರುವುದು ಅಚ್ಚರಿ ತರುವಂತದ್ದು.

ಈ ಸುಂಕದ ಬೇಲಿಯನ್ನು ಹುಡುಕಲು ಏಳೆಂಟು ಬಾರಿ ಭಾರತಕ್ಕೆ ಬಂದು, ಬೇಲಿ ಸಿಗದೇ ಹಿಂತಿರುಗಿ, ಇನ್ನಷ್ಟು ಮಾಹಿತಿಯನ್ನು ಸಂಗ್ರಹಿಸಿ ಪುನಃ ಪುನಃ ಭಾರತಕ್ಕೆ ಬರುವ ‘ಮ್ಯಾಕ್ಸ್ ಹ್ಯಾಮ್’ ಇತರರಿಗೆ ಹುಚ್ಚನಂತೆಯೇ ಕಾಣುತಿದ್ದರು. ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿದ ನಂತರ ಬೇಲಿ ಹುಡುಕುವಲ್ಲಿ ಯಶಸ್ವೀ ಆಗುತ್ತಾರೋ ಇಲ್ಲವೋ ಎಂಬುದನ್ನು ತಿಳಿಯಲು ಪುಸ್ತಕವನ್ನೇ ಓದಬೇಕು. ಬೇಲಿ ಹುಡುಕಲು ಅವರು ನಡೆಸಿದ ಪ್ರಯತ್ನವನ್ನು, ಅದರೊಂದಿಗೆ ಸಿಕ್ಕ ಬ್ರಿಟಿಷರ ದೌರ್ಜನ್ಯದ ಮಾಹಿತಿಯನ್ನು ನಾಲ್ಕು ಸಾಲಿನಲ್ಲಿ ವಿವರಿಸಲಂತೂ ಸಾಧ್ಯವೇ ಇಲ್ಲ.

ಇಂಗ್ಲಿಷ್ ಭಾಷೆಯಲ್ಲಿರುವ (ಲೇಖಕರು: ರಾಯ್ ಮ್ಯಾಕ್ಸ್ ಹ್ಯಾಮ್ ) ಈ ಕೃತಿಯನ್ನು ಎಸ್ ಎಸ್ ನರೇಂದ್ರ ಕುಮಾರ್ ರವರು ಕನ್ನಡಕ್ಕೆ ತಂದಿದ್ದಾರೆ. ಭಾರತದ ಇತಿಹಾಸ ಕುರಿತು ತಿಳಿಯಲು ಆಸಕ್ತಿ ಇರುವ ಕನ್ನಡಿಗರಿಗೆ ಇದೊಂದು ಒಳ್ಳೆಯ ಪುಸ್ತಕ.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments