ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 3, 2016

2

ಶಿಕ್ಷಣ: ಗುರಿ ಭೀಮ, ಸಾಧಕ ಕುಚೇಲ!

‍ನಿಲುಮೆ ಮೂಲಕ

– ಕಲ್ಗುಂಡಿ ನವೀನ್‍

school-studentsಇಂದು ಶಿಕ್ಷಣ ಕ್ಷೇತ್ರದಲ್ಲಿ ನಡೆಯುತ್ತಿರುವ ಚರ್ಚೆಗಳು, ಪ್ರಯೋಗಗಳು ಇನ್ಯಾವುದೇ ಕ್ಷೇತ್ರದಲ್ಲಿ ನಡೆಯುತ್ತಿಲ್ಲ. ತೀರಾ ವಿರಳವಾಗಿದ್ದ ಓಪನ್ ಮಾದರಿ ಶಾಲೆಗಳು ಇಂದು ವಿಪುಲವಾಗಿವೆ. ಸರ್ಕಾರಿ ಶಾಲೆಗಳೂ ಅದರ ಕೆಲವು ಆಂಶಗಳನ್ನು “ಕಾಪಿ” ಮಾಡುತ್ತಿವೆ. ಇನ್ನು ಮಾಂಟೆಸ್ಸೊರಿ ಎಂಬ ಪದ್ಧತಿ (ಮಾರಿಯಾ ಮಾಂಟೆಸ್ಸೊರಿ ಎಂಬಾಕೆ ಚಾಲ್ತಿಗೆ ತಂದ ಶಿಕ್ಷಣ ಪದ್ಧತಿ) ಹೆಚ್ಚುಕಡಿಮೆ ಮನೆ ಮಾತಾಗಿದೆ. ಇದಲ್ಲದೆ, ಖಾಸಗಿ ನೆಲೆಯಲ್ಲಿ ಅನೇಕರು ತಾವೇ ಕಂಡರಿಸಿದ ಪದ್ಥತಿಯನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದಾರೆ. ಶಾಲೆ ಹೀಗೂ ಇರಬಲ್ಲುದೇ ಎಂದು ತಜ್ಞರೂ ಹುಬ್ಬೇರಿಸುವಂತೆ ಮಾಡಿದ್ದಾರೆ. “ಒಂದು ಇಡೀ ವರ್ಷ ನೀನು ಏನು ಬೇಕೋ ಮಾಡಿಕೋ, ನಿನಗಿಷ್ಟವಾದದ್ದನ್ನು ಕಲಿತುಕೋ” ಎಂದು ಶಾಲೆಯಲ್ಲಿ ಹೇಳುತ್ತಾರೆ ಎಂದರೆ ನಂಬುತ್ತೀರಾ? ಅದು ಆರೋಹಿ ಎಂಬ ಶಾಲೆ. ಶಿಕ್ಷಣದಲ್ಲಿ ಆಸಕ್ತಿ ಇರುವ ಎಲ್ಲರೂ ಒಮ್ಮೆ ಹೋಗಿ ನೋಡಿಯಾದರೂ ಬರಬೇಕಾದ ಶಾಲೆಯಿದು ( http://www.aarohilife.org ). ಪೂರ್ಣಪ್ರಮತಿ ಎಂಬ ವಿಶಿಷ್ಟ ಶಾಲೆಯಲ್ಲಿ ಪ್ರತಿ ವರ್ಷ ಶಿಕ್ಷಣ ಪದ್ಧತಿಗಳು ಹಾಗೂ ಕಲಿಕೆ ಹೇಗೆ ನಡೆಯುತ್ತದೆ ಎಂದು ವಿಶ್ಲೇಷಿಸಿ ಹೊಸ ಮಾರ್ಗಗಳನ್ನು ಕಂಡುಕೊಳ್ಳಲೆಂದೇ ಪೂರ್ಣಪ್ರಮತಿ ವ್ಯಾಖ್ಯಾ ಎಂಬ ಹೆಸರಿನಲ್ಲಿ ವಿಚಾರ ಸಂಕಿರಣಗಳನ್ನು ನಡೆಸುತ್ತಾರೆ. ಅನೇಕ ದೃಷ್ಟಿಕೋನಗಳಿಂದ ಹಾಗೂ ಪ್ರಯೋಗಗಳಿಂದಾಗಿ ಗಮನಿಸುತ್ತಿರಬೇಕಾದ ಶಾಲೆ, ಪೂರ್ಣಪ್ರಮತಿ (http://purnapramati.in/) ಹ್ಞಾ ಹಾಗೆ “ನೀವು ನೋಡಲೆಂದು ಬರಲೇಬೇಡಿ. ಮಕ್ಕಳು ತಮಗಿಷ್ಟವಾದದ್ದನ್ನು ಮಾಡುತ್ತಿರುತ್ತಾರೆ. ನಿಮ್ಮ ಭೇಟಿ ಅವರನ್ನು ಡಿಸ್ಟರ್ಬ್ ಮಾಡುತ್ತದೆ” ಎನ್ನುವ ಮಣಿವೆಣ್ಣನ್ ಅವರ ಶಾಲೆಯೂ ಇದೆ! ಅಷ್ಟೇ ಅಲ್ಲ ಅಲ್ಲಿನ ಪದ್ಧತಿಗಳು ನಿರಂತರ ಚರ್ಚೆ, ಮಂಥನದ ಆಧಾರದಿಂದ ಬದಲಾಗುತ್ತಿದೆ. ದೇಶದ ಶಿಕ್ಷಣ ವ್ಯವಸ್ಥೆ ನೀಡಿರುವ ಸ್ವಾತಂತ್ರ್ಯವನ್ನು ಚೆನ್ನಾಗಿಯೇ ಬಳಸಿಕೊಂಡು ಮೆಚ್ಚಿ ತಲೆದೂಗುವಂತಹ ಪ್ರಯತ್ನಗಳು ಖಾಸಗಿ ನೆಲೆಯಲ್ಲಿ ನಡೆದಿದೆ. ಇದರ ನಡುವೆ ನಮ್ಮ ಶಿಷ್ಟ ಪದ್ಧತಿಯನ್ನೇ ಮುಂದುವರೆಸುತ್ತಿರುವ, ಆದರೆ ಆದರ್ಶ ಪ್ರಾಯವಾದ ಖಾಸಗಿ ಶಾಲೆಗಳಿವೆ. ಇಲ್ಲಿಯೂ “ಅಂಕವಲ್ಲ, ಗುಣ ಮುಖ್ಯ” ಎಂದು ಯೋಚಿಸುತ್ತ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿರುವ ಶಾಲೆಗಳಿವೆ. ಇದರ ಜೊತೆ ತನ್ನಷ್ಟಕ್ಕೆ ತಾನು ಬೇರೆ ಯಾವ ಗೊಡವೆಗೂ ಹೋಗದೆ ಮುಂದುವರೆಯುತ್ತಿರುವ ಸಿ ಬಿ ಎಸ್ ಇ ಇತ್ಯಾದಿ ಕೇಂದ್ರದ ಪಠ್ಯಕ್ರಮವನ್ನು ಅಳವಡಿಸಿಕೊಂಡಿರುವ ಖಾಸಗಿ ಶಾಲೆಗಳಿವೆ. ಈ ಎಲ್ಲಕ್ಕಿಂತ ದೊಡ್ಡ, ಕೊರತೆ ಎಂಬ ಪದದ ಅರ್ಥವೇ ತಿಳಿಯದ ರಾಜವೈಭೋಗದ ಅಂತಾರಾಷ್ಟ್ರೀಯ ಶಾಲೆಗಳನ್ನು ಸದ್ಯದ ಚರ್ಚೆಯಿಂದ ದೂರ ಇಡೋಣ.

ಖಾಸಗಿ ಶಾಲೆಗಳಲ್ಲಿ ಮೌಲ್ಯಾಧಾರಿತ ಶಾಲೆಗಳಿವೆ, ಹಣಕ್ಕಾಗಿಯೇ ನಡೆಯುತ್ತಿರುವ ಶಾಲೆಗಳಿವೆ ಮತ್ತು ಆಶ್ಚರ್ಯಕರವಾಗಿ ಕೇವಲ ಸರ್ಕಾರದ ನಿಯಮಾವಳಿಗಳನ್ನು ಅನುಷ್ಠಾನಕ್ಕೆ ತರಲು ಮಾತ್ರವೇ ನಡೆಯುತ್ತಿದೆಯೇನೋ ಎಂಬ ಸಂದೇಹ ತರುವಂತಹ ಶಾಲೆಗಳೂ ಇವೆ!

ಇದು ಇಂದು ನಡೆಯುತ್ತಿರುವ ಚಿಂತನ-ಮಂಥನ ಪ್ರಯೋಗಗಳ ಮಾತಾಯಿತು, ನಮ್ಮ ಮಧ್ಯಮವರ್ಗದ ಮಕ್ಕಳಿಗೆ ಸಿಗುವ ಶಿಕ್ಷಣ ಎಂಥದ್ದು? ಎಂದು ಯೋಚಿಸಿದಾಗ ನಮ್ಮ ಸರ್ಕಾರಿ ಶಾಲೆಗಳ ನೆಲೆ ಬೆಲೆ ಅರಿವಾಗುತ್ತದೆ. ನಿಜದಲ್ಲಿ ಸರ್ಕಾರಿ ಶಾಲೆಗಳು ನಮ್ಮ ಆತ್ಮಗೌರವದ ಸಂಕೇತ ಹಾಗೂ ಭವಿಷ್ಯದ ಸೂಚಕ. ಕರ್ನಾಟಕದಲ್ಲಿರುವ 50,000 ಸರ್ಕಾರಿ ಶಾಲೆಗಳು ಮತ್ತು 75,000 ಅಂಗನವಾಡಿ ಕೇಂದ್ರಗಳು ಯುಕ್ತ ಸಂಪನ್ಮೂಲಗಳಿಂದ ಸಮೃದ್ಧವಾದರೆ ರಾಜ್ಯ ತನ್ಮೂಲಕ ರಾಷ್ಟ್ರ ಸಹಜವಾಗಿಯೇ ಪ್ರಗತಿಪಥಕ್ಕೆ ಬರುತ್ತದೆ.

ಇಲ್ಲಿನ ಸಾಧನೆ-ಸಮಸ್ಯೆ-ಸವಾಲುಗಳೇನು? ಎಂದು ಯೋಚಿಸಿದರೆ ಜಗತ್ತಿನ ಸಮಾನ ವ್ಯವಸ್ಥೆಯಲ್ಲಿರುವಂತೆಯೇ ಸರ್ಕಾರಿ ಶಾಲೆಗಳಲ್ಲಿಯೂ ವ್ಯವಸ್ಥೆಗಳಲ್ಲಿಯೂ ಉತ್ತಮಾಂಶ-ನ್ಯೂನತೆಗಳಿವೆ. ತಮ್ಮ ಉಸಿರಿಗಿಂತಲೂ ಶಾಲೆ, ಶಾಲೆಯ ಅಭಿವೃದ್ಧಿಯೇ ಮುಖ್ಯ ಎಂದು ನಂಬಿ ಹಾಗೆಯೇ ಜೀವನ ನಡೆಸುತ್ತಿರುವ ಶಿಕ್ಷಕ ಸಮುದಾಯವಿದೆ.  ಶಾಲೆಯ ಅಭಿವೃದ್ಧಿಯನ್ನೇ ಉಸಿರಾಡುವ ಎಸ್ ಡಿ ಎಂ ಸಿ ಗಳಿವೆ. ಹಾಗೆಯೇ ಹಾಗಲ್ಲದ, ಆಸಕ್ತಿಯಿರದ ಮಾತ್ರವಲ್ಲ ಎಲ್ಲೂ ಸಲ್ಲದ ಕೆಲವರೂ ಇಲ್ಲಿ ಸೇರಿಬಿಟ್ಟಿದ್ದಾರೆ. ಎಲ್ಲೆಡೆ ಇಂಥವರಿರುವಾಗ ಇಲ್ಲಿ ಯಾಕೆ ದೂರಬೇಕು ಎಂದರೆ, ಉತ್ತರ ಬಹಳ ಸರಳ: ಇದು ಶಿಕ್ಷಣ ಕ್ಷೇತ್ರ ಎಂಬುದು. ಇದು ಶಿಕ್ಷಕರ ಹಾಗೂ ಕೆಳವ್ಯವಸ್ಥೆಯ ಕತೆಯಾದರೆ ಸರ್ಕಾರದ್ದನ್ನು ಎರಡು ನೆಲೆಗಳಲ್ಲಿ ನೋಡಬೇಕಿದೆ. ಒಂದು: ಅದರ ನಿಯಮಾವಳಿಗಳು, ಗುರಿ ಹಾಗೂ ಪದ್ಧತಿಗಳು. ಎರಡು: ಇವರನ್ನು ಆಗಮಾಡಿಸಲು ಬೇಕಾದ ಮೂಲಭೂತ ಸೌಕರ್ಯಗಳ ಲಭ್ಯತೆ.

ಸರ್ಕಾರದ ನಿಯಮಾವಳಿಗಳು, ಗುರಿ ಹಾಗೂ ಯೋಜನೆಗಳನ್ನು ನೋಡಿದರೆ ಇವು ಖಂಡಿತಾ ಸ್ವರ್ಗವನ್ನು ಭುವಿಗೆ ಇಳಿಸುತ್ತವೆ ಎನಿಸುತ್ತವೆ! ಆದರೆ ವಾಸ್ತವ ಹಾಗಿಲ್ಲ! ನಿಯಮಾವಳಿಗಳಲ್ಲಿ, ಯೋಜನೆ-ಜಾರಿ ಪದ್ಧತಿಗಳಲ್ಲಿ ಶೇ 20ರಷ್ಟು ಸಮಸ್ಯೆಗಳಿವೆ, ಅಥವಾ ಸಮರ್ಪಕವಲ್ಲ ಎಂದಿಟ್ಟುಕೊಂಡರೂ ಉಳಿದಂತೆ ಇವು ಚೆನ್ನಾಗಿಯೇ ಇವೆ. ಆದರೂ ಸಹ ನಮ್ಮ ಸರ್ಕಾರಿ ಶಾಲೆಗಳ ಸ್ಥಿತಿ ಸಮರ್ಪಕವಾಗಿಲ್ಲ, ಏಕೆ? ಎಂದರೆ ಇದಕ್ಕೆ ಬಹಳ ಮುಖ್ಯವಾದ ಕಾರಣಗಳು ಎರಡು: ಒಂದು ಸಿಬ್ಬಂದಿಯ ತೀವ್ರ ಕೊರತೆ (ಇದು ಬೋಧಕ ಹಾಗೂ ಬೋಧಕೇತರ) ಎರಡು: ಯುಕ್ತ ತರಬೇತಿಯಿಲ್ಲದ ಸಿಬ್ಬಂದಿ (ಮತ್ತೆ ಬೋಧಕ ಹಾಗೂ ಬೋಧಕೇತರ). ಇದಕ್ಕಿಂತಲೂ ಮುಖ್ಯವಾದದ್ದು ಸ್ಫೂರ್ತಿ! ಇದಿಲ್ಲದೆ ಏನೇನೂ ಸಾಧ್ಯವಿಲ್ಲ! ಇಂದು ಇಷ್ಟೆಲ್ಲ ಇಲ್ಲಗಳ, ಕೊರತೆಗಳ ನಡುವೆ ಕೆಲವು ಸರ್ಕಾರಿ (ಹಾಗೂ ಖಾಸಗಿ ಸಹ) ಶಾಲೆಗಳು ನಳನಳಿಸುತ್ತಿವೆ ಎಂದರೆ ಅಲ್ಲಿನ ಸಿಬ್ಬಂದಿಯಲ್ಲಿನ ಸ್ಫೂರ್ತಿ ಹಾಗೂ ಶ್ರದ್ಧೆ. ಇದನ್ನು ಗುರುತಿಸಲೇ ಬೇಕು. ಈ ಸಮುದಾಯದಲ್ಲಿ ಶಾಲಾ ಸಮಯದ ನಂತರ ಉಚಿತವಾಗಿ ಪಾಠ ಹೇಳುವವರಿದ್ದಾರೆ, ಸರ್ಕಾರಿ ಶುಲ್ಕುವನ್ನೂ ಕಟ್ಟಲಾಗದ ವಿದ್ಯಾರ್ಥಿಗಳಿಗೆ ನಿರಂತರವಾಗಿ ಆರ್ಥಿಕ ಸಹಾಯ ಮಾಡುತ್ತಿರುವವರಿದ್ದಾರೆ. ಎಸ್ ಡಿ ಎಂ ಸಿ, ಸ್ಥಳೀಯರ ಜನರ ಬೆಂಬಲ ಪಡೆದು ಸರ್ಕಾರಿ ಶಾಲೆಗಾಗಿ ಹಣ ಸಂಗ್ರಹಿಸಿ ಕಟ್ಟಡ ಕಟ್ಟಿಸಿದವರಿದ್ದಾರೆ. ದಿನವೂ ಮೈಲುಗಟ್ಟಲೆ ನಡೆದು ಶಾಲೆ ತಲುಪಿ ಪಾಠ ಹೇಳಿ ಬರುತ್ತಿರುವವರಿದ್ದಾರೆ. ನಿಜ ಹೇಳಬೇಕೆಂದರೆ ಇವರೇ ಈ ನೆಲದ ಸಾರ! ಸರಿ, ಆದರೆ, ಇಷ್ಟರಿಂದಲೇ ಎಲ್ಲವೂ ಆಗುವುದಿಲ್ಲ. ಒಂದು ವರದಿಯ ಪ್ರಕಾರ ನಮ್ಮ ಶಾಲೆಗಳಲ್ಲಿ ಒಂಬತ್ತನೇ ತರಗತಿಯ ಮಕ್ಕಳಿಗೂ ಸರಿಯಾಗಿ ಒಂದು ವಾಕ್ಯ ರಚಿಸುವ ಶಕ್ತಿಯಲ್ಲ, ಯಾವುದೇ ಒಂದು ಭಾಷೆಯಲ್ಲಿ ತಮ್ಮದಲ್ಲದ ಹೆಸರನ್ನು ಬರೆಯುವ ಶಕ್ತಿಯಿಲ್ಲ. ಇಂಗ್ಲಿಷ್, ಗಣಿತ-ವಿಜ್ಞಾನಗಳು, ದೇವರೇ ಗತಿ. ಇಂತಿಪ್ಪ – ನಮ್ಮ ಸ್ವಾಭಿಮಾನದ ಪ್ರತೀಕವಾದ – ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಿ ದೇಶದ ಭವಿಷ್ಯವನ್ನು ಸುಭದ್ರಗೊಳಿಸುವುದು ಹೇಗೆ ಎಂಬುದು ಪ್ರಶ್ನೆ. ಇದಕ್ಕೆ ಜಟಿಲತೆ ಒದಗುವುದು ನಮ್ಮ ಸಾಮಾಜಿಕ, ಆರ್ಥಿಕ ವ್ಯವಸ್ಥೆಯಿಂದ.

ಪರಿಹಾರವೇನು?

ಇದಕ್ಕೆ ಪರಿಹಾರವಿದ್ದೇ ಇದೆ. ಇದು ಸರ್ಕಾರದ ನೆಲೆಯಲ್ಲಿಯೂ ವೈಯಕ್ತಿಕವಾಗಿ ಪ್ರತಿಯೊಬ್ಬ ಸಿಬ್ಬಂದಿಯ ಮಟ್ಟದಲ್ಲಿಯೂ ನೆರವೇರಬೇಕು. ಯಾವುದೇ ಕಾರಣ (ನೆಪ!) ಕೊಡದೆ ಸರ್ಕಾರ ಶಿಕ್ಷಣ ಕ್ಷೇತ್ರವನ್ನು ವಿಶೇಷವೆಂದು ಪರಿಗಣಿಸಿ ಎಲ್ಲ ಮೂಲಭೂತ ಸೌಕರ್ಯಗಳನ್ನು ತುರ್ತಾಗಿ, ಯುದ್ಧೋಪಾದಿಯಲ್ಲಿ ಮಾಡಿಕೊಡಬೇಕು. ಶಿಕ್ಷಣ ಕ್ಷೇತ್ರದಲ್ಲಿ ಸಿಬ್ಬಂದಿಯ ಕೊರೆತೆ ಇರಲೇ ಬಾರದು. ನಿವೃತ್ತರು ಬಂದು ಪಾಠ ಹೇಳಲಿ, ಬಿಡುವಿದ್ದ ಕಲಿತ ಗೃಹಣಿಯರು ಬಂದು ಪಾಠ ಹೇಳಲಿ ಇತ್ಯಾದಿಗಳು ಎಷ್ಟೇ ಆಕರ್ಷಣೀಯವಾಗಿ ಕಂಡರೂ, ಸರ್ಕಾರ-ಜನಸಾಮಾನ್ಯರ ನಡುವಿನ ಬಾಂಧವ್ಯ ವೃದ್ಧಿಸುತ್ತದೆ ಎಂದರೂ ಬೇಡ. ಇದು ಕ್ರಮೇಣ ಇತರ ಆಡಳಿತಾತ್ಮಕ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ. ಆದ್ದರಿಂದ ಮೊಟ್ಟ ಮೊದಲನೆಯದಾಗಿ ಶಾಲೆಗಳಲ್ಲಿ ನೇಮಿತರಾದ ಶಿಕ್ಷಕರಿರಬೇಕು. ಇದರಷ್ಟೇ ಮುಖ್ಯವಾದದ್ದು ಬೋಧಕೇತರ ಸಿಬ್ಬಂದಿ. ಇವರ ಕೊರತೆಯೂ ಇರಬಾರದು. ಇದ್ದಲ್ಲಿ, ಇವರ ಕೆಲಸವನ್ನು ಶಿಕ್ಷಕರು ಮಾಡಬೇಕಾಗುತ್ತದೆ, ನಾವು ಹೊರಟಲ್ಲಿಗೇ ಹಿಂದಿರುಗುತ್ತೇವೆ. ಅದ್ದರಿಂದ ಶಾಲೆಗಳಲ್ಲಿ ಯಾವುದೇ ಬಗೆಯ ಸಿಬ್ಬಂದಿಯ ಕೊರತೆ ಇರಬಾರದು. ಬೋಧಕೇತರ ಸಿಬ್ಬಂದಿಗೂ ಯುಕ್ತವಾದ ತರಬೇತಿ ನೀಡಿ ಶಿಕ್ಷಕರನ್ನು ಬೋಧನೇತರ ಕೆಲಸಗಳಿಂದ ದೂರ ಇಡಬೇಕು. ಇದು ಬಹಳ ಮುಖ್ಯವಾದ ವಿಷಯ. ಇಂದು ಶಿಕ್ಷಕರು ಅದರಲ್ಲಿಯೂ ಮುಖ್ಯೋಪಾಧ್ಯಾಯರು ಎಷ್ಟು ಪತ್ರಗಳನ್ನು, ದಾಖಲೆಗಳನ್ನು ಸಿದ್ಧಪಡಿಸಿ ರವಾನಿಸಬೇಕೆಂದು ನೋಡಿದರೆ ಅವರ ಕಾಲುಗಳನ್ನು ಹಿಡಿದು ನಮಸ್ಕರಿಸಬೇಕು ಎನಿಸುತ್ತದೆ. ಅಷ್ಟು ಒತ್ತಡ ಹಾಗೂ ಕೆಲಸವನ್ನು ಅವರು ಅಭಿಮನ್ಯುವಂತೆ ನಿರ್ವಹಿಸುತ್ತಿದ್ದಾರೆ. ಆದ್ದರಿಂದ ಬೋಧಕೇತರ ಸಿಬ್ಬಂದಿಗೆ ಯುಕ್ತ ತರಬೇತಿ ನೀಡಿ ಶಿಕ್ಷಕರನ್ನು ಗುಮಾಸ್ತಿಕೆಯಿಂದ ಪಾರು ಮಾಡಬೇಕಾಗಿದೆ. ಇನ್ನು ನಾನಾ ಗಣತಿಗಳಿಗೆ ಶಿಕ್ಷಕರನ್ನು ಕಳಿಸುವ ಪರಿಪಾಠವನ್ನು ಬಿಟ್ಟುಬಿಡಬೇಕು. ಶಿಕ್ಷಕರು ಆಯಾ ಶಾಲೆಗೆ ಬರುವ ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟ, ಸಾಮಾಜಿಕ ಹಾಗೂ ಆರ್ಥಿಕ ನೆಲೆಗಳನ್ನು ಅರ್ಥಮಾಡಿಕೊಂಡು ಅವರಿಗೆ ಯುಕ್ತವಾದ ಶಿಕ್ಷಣ ಕೊಡುವತ್ತ ಯೋಚಿಸುವಂತಾಗಬೇಕು. ಇದು ಬಹಳ ಮುಖ್ಯವಾದದ್ದು.

ಇನ್ನು ಶಿಕ್ಷಕರ ತರಬೇತಿ. ಇದೊಂದು ನಿರಂತರವಾದ ಪ್ರಕ್ರಿಯೆಯಾಗಬೇಕು. ಇಂದು ಪಠ್ಯಕ್ರಮ ಎಷ್ಟು ಬೆಳೆದಿದೆ ಎಂದರೆ ವಿಜ್ಞಾನಿಗಳೊಬ್ಬರು ಅದನ್ನು ನೋಡಿ ಇಷ್ಟು ಭೌತವಿಜ್ಞಾನ, ಗಣಿತ ಓದಿದ ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್‍ ಎಂಬುದೊಂದು ಆಟ ಎಂದರು! ಈ ಮಟ್ಟದ ಶಿಕ್ಷಣ ನೀಡಲು, ವಿದ್ಯಾರ್ಥಿಗಳಿಗೆ ವೈಯಕ್ತಿಕ ಗಮನನೀಡಿ ಅವರ ಪ್ರಗತಿಗೆ ಸಹಾಯ ಮಾಡುವಂತಹ ತರಬೇತಿಯನ್ನು, ಸಮಯಾವಕಾಶವನ್ನು (ಸ್ಪೇಸ್‍ ಎಂಬಂರ್ಥದಲ್ಲಿ) ಶಿಕ್ಷಕರಿಗೆ ಅಗತ್ಯ ತರಬೇತಿ ನಿರಂತರವಾಗಿಯೂ, ಬೇಕಾದಂತೆಯೂ (ಆನ್ ಡಿಮಾಂಡ್) ಲಭ್ಯವಿರಬೇಕು. ತರಬೇತಿ ಇಂದು ಮನೆಯಲ್ಲಿ ತಾಯಂದಿರ ಸ್ಥಾನ ತುಂಬಲೂ ಬೇಕಾಗಿದೆ! ಉನ್ನತ ಪಠ್ಯವನ್ನು ಮನೆಯಲ್ಲಿನ ಜನ ಹೇಳಿಕೊಡಲಾರರು. ಆ ಕೊರತೆಯನ್ನು ತರಬೇತಿ ಯುಕ್ತ ಮಾರ್ಗಗಳಿಂದ ತುಂಬಬೇಕಿದೆ.

ಒಳ್ಳೆಯ ವಿಷಯವೂ ತರಬೇತಿಯಿಲ್ಲದೆ ಹೇಗೆ ದಾರಿತಪ್ಪುತ್ತದೆ ಎಂಬುದಕ್ಕೆ ಅತ್ಯುತ್ತಮ ಉದಾಹರಣೆ: ಸಿಸಿಇ. ಇನ್ನು ಇಲಾಖೆ ಸಿದ್ಧಪಡಿಸಿರುವ ನಿಯಮಾವಳಿಗಳಲ್ಲಿ ಮಕ್ಕಳಿಗೆ ಸಿಸಿಇ ಅಳವಡಿಸಲಾಗಿದೆ (ಕಂಟಿನ್ಯುಯಸ್ ಅಂಡ್ ಕಾಂಪ್ರಿಹೆನ್ಸಿವ್ ಇವಾಲ್ಯುಯೇಷನ್‍). ಇದು ಪ್ರಾಜೆಕ್ಟ್ ಎಂದೇ ಶಾಲಾಮಕ್ಕಳಲ್ಲಿ ಪ್ರಚಲಿತ! ನಿಜದಲ್ಲಿ ಇದು ಪ್ರಾಜೆಕ್ಟ್ ಅಲ್ಲ! ಮಕ್ಕಳು ವಿಷಯವನ್ನು ಎಷ್ಟು ಮತ್ತು ಹೇಗೆ ಗ್ರಹಿಸಿದ್ದಾರೆಂದು ತಿಳಿಯಲು ಇರುವ ಸಾಧನ! ಆದರೆ, ಅದು ಆ ಸಾಧನವಾಗಿ ಬಳಕೆಯಾಗುತ್ತಿರುವುದು ತೀರಾ ಕಡಿಮೆ. ಖಾಸಗಿ ಶಾಲೆಗಳಲ್ಲಿ ಈ ಅಪಪ್ರಚಾರ ಇನ್ನೂ ಹೆಚ್ಚು. ಶಿಕ್ಷಕರು ಯಾವುದೋ ಒಂದು ವಿಷಯ ಕೊಡುತ್ತಾರೆ. ಮಕ್ಕಳು ಹೋಗಿ ಸೈಬರ್ ಕೆಪೆಯಲ್ಲಿ ಕೂತು ಆ ವಿಷಯವನ್ನು ಮನೆದೇವರಾದ ಗೂಗಲಿಗೆ ಅರ್ಪಸಿತ್ತಾರೆ. ಅದರಿಂದ ಬಂದ ವರಪ್ರಸಾಧವನ್ನು ಮುದ್ರಿಸಿಯೋ ಬರೆದೋ ಒಪ್ಪಿಸಿದರೆ ಸಿಸಿಇ ಮುಗಿಯಿತು! ತರಗತಿಯ ಎಲ್ಲರೂ ಒಂದೇ ಮಾಹಿತಿ ಕೊಟ್ಟಿರುತ್ತಾರೆ! ಹೇಗೆ ಮೌಲ್ಯಮಾಪನ ಮಾಡುವುದು?! ಒಂದು ಗ್ರಾಮಾಂತರ ಪ್ರದೇಶದ ಪ್ರತಿಷ್ಠಿತ ಶಾಲೆಯ ಮುಖ್ಯೋಪಾಧ್ಯಾರಿಗೆ ಇದನ್ನು ಹೇಳಿದೆ. ಅದಕ್ಕವರು, “ನೀನು ಬೆಂಗಳೂರಿನಲ್ಲಿದ್ದೀಯ. ಹಾಗಾಗಿ ಮಕ್ಕಳು ಸೈಬರ್ ಕೆಫೆಗೆ ಹೋಗುತ್ತಾರೆ. ಇಲ್ಲಿ ನಾನು ಅದನ್ನೂ ಬೋರ್ಡಿನ ಮೇಲೆ ಬರೆಯಬೇಕು. ಅದನ್ನು ಮಕ್ಕಳು ಬರೆದುಕೊಂಡು ತರುತ್ತಾರೆ”ಎಂದರು! ಇದು ಕಲಿಕಾ ಉದ್ದೇಶದ ಹಂದರಕ್ಕೆ ನಡೆದ ಗದಾಪ್ರಹಾರ.

ಈ ಸಿಸಿಇ ಕುರಿತಾಗಿ ಶಿಕ್ಷಕರು ಮತ್ತು ಆಡಳಿತಾಧಿಕಾರಿಗಳಲ್ಲೇ (ಮುಂದುವರೆದು ಇಲಾಖೆಯವರಲ್ಲಿಯೇ, ಕೆಲವರಲ್ಲಿ) ಸ್ಪಷ್ಟತೆ ಇಲ್ಲ! ಹಾಗಾಗಿ, ಒಂದು ಒಳ್ಳೆಯ ಪದ್ಧತಿ ತರಬೇತಿಯಿಲ್ಲದೆ ಅಡ್ಡದಾರಿ ಹಿಡಿಯುತ್ತಿದೆ. ಹಾಗೆಯೇ, ರೂಪಣಾತ್ಮಕ ವಿಶ್ಲೇಷಣೆ (ಫಾರ್ಮೆಟಿವ್ ಅನಾಲಿಸಿಸ್) ಎಂಬುದೂ ಸಹ ತುಂಬ ಬೇಕಾದ ಒಂದು ಕಾಲಂಗಳಾಗಿ ನರಳುತ್ತಿದೆ. ಇದಕ್ಕೆ ಪರಿಹಾರ ತರಬೇತಿಯೇ. ಸರ್ಕಾದ ಡಯಟ್‍ಗಳಲ್ಲಿ ಈ ಕುರಿತು ತರಬೇತಿಯಿದೆ. ಆದರೆ ಅದು ಎಲ್ಲ ಶಿಕ್ಷಕರಿಗೂ ಎಲ್ಲೆಡೆ ದೊರೆಯಬೇಕು. ಎಲ್ಲ ತರಬೇತಿಗಳನ್ನು ಮಾಹಿತಿ ತಂತ್ರಜ್ಞಾನ ಬಳಸಿ ಜಾಲತಾಣದಲ್ಲಿ ಅಳವಡಿಸಿ, ಶಿಕ್ಷಕರಿಗೆ ಬೇಕೆಂದಾಗ-ಬೇಕಾದಲ್ಲಿ ದೊರೆಯುವಂತಾಗಬೇಕು.

ಒಟ್ಟಾರೆ. ನಮ್ಮ ಭವಿಷ್ಯದ ಆಶಾಕಿರಣವಾದ ಸರ್ಕಾರಿ ಶಾಲೆಗಳನ್ನು ಶಿಕ್ಷಣ ಇಲಾಖೆ ಯಾವುದೇ ಕೊರೆತೆಗಳಿಲ್ಲದಂತೆ ಒಂದು ಯಶಸ್ವೀ ಐಟಿ ಕಂಪನಿಯಂತೆ ನಡೆಸಬೇಕು. ಆಗ ತಕ್ಷಣವಲ್ಲ, ಆದರೆ ಕ್ರಮೇಣ ಇದರ ಫಲ ದೇಶದ ಅಭಿವೃದ್ಧಿ, ಜವಾಬ್ದಾರಿಯುತ ಸಮಾಜದ ಮೂಲಕ ನಮಗೆ ದೊರೆಯುತ್ತದೆ.

2 ಟಿಪ್ಪಣಿಗಳು Post a comment
 1. ನವೆಂ 3 2016

  ಸಕಾಲಿಕ, ಅಪೇಕಷಿತ ಬರಹ.
  ಮೂಕರೋದನೆ,
  ಕಿವುಡಾದ ಸರಕಾರದ ಮುಂದೆ ಕಿನ್ನರಿಯಾಗುವ ಅಪಾಯ.

  ಉತ್ತರ
 2. ವಲವಿ
  ನವೆಂ 5 2016

  ಕಲ್ಗುಂಡಿ ನವೀನ್ ಅವರೆ ನೀವು ಶಿಕ್ಷಕರಾಗಿದ್ದೀರಾ?? ಆಗಿದ್ದರೆ ಸರಕಾರಿ ಶಾಲೆಯ ಶಿಕ್ಷಕರಾಗಿದ್ದೀರಾ?? ಆಗಿದ್ದರೂ ಶಿಕ್ಷಕರಿಗೆ ಎಂಥ ಸಮಸ್ಯೆಗಳಿವೆ?? ನಿಜವಾದ ಸಮಸ್ಯೆಯ ಮೂಲ ಎಲ್ಲಿದೆ ಎಂದು ಅರ್ಥೈಸುವಲ್ಲಿ ಸೋತಿರುವಿರೇನೋ ಅನಿಸುತ್ತಿದೆ. ಹಾಗಂತ ನಿಮ್ಮ ಇಡೀ ಲೇಖನ ಉಪಯುಕ್ತವಲ್ಲದ್ದು ಎಂದು ಹೇಳುವದಿಲ್ಲ. ಬಹಳ ಚನ್ನಾಗಿ ಶೈಕ್ಷಣಿಕ ಸಮಸ್ಯೆಗಳ ಮೇಲೆ ಬೆಳಕು ಬೀರಿದ್ದೀರಿ. ಆದರೆ……

  ಬಹು ಮುಖ್ಯವಾದ ಕೆಲವನ್ನು ತಾವು ಪರಿಗಣಿಸಿಲ್ಲವೆಂದು ನನಗನಿಸುತ್ತದೆ. ನಾನೂ ಒಬ್ಬ ಸರಕಾರಿ ಶಾಲಾ ಶಿಕ್ಷಕಿಯಾದ್ದರಿಂದ ಆ ಶಿಕ್ಷಣ ವ್ಯವಸ್ಥೆಯಲ್ಲಿನ ನೇರ ಮತ್ತು ಹತ್ತಿರದ ಹಾಗೂ ನಿತ್ಯದ ಭಾದ್ಯತೆಗಳ ಹೊಣೆಗಾರಳಾದ್ದರಿಂದ ಇನ್ನೂ ಕೆಲವು ಗಂಭೀರ ಸಮಸ್ಯೆಗಳ ಮೇಲೆ ಬೆಳಕು ಬೀರಬೇಕಾಗಿತ್ತೆಂದು ನಾನು ಹೇಳುವದು ಅತಿಶಯೋಕ್ತಿಯಾಗಲಾರದೆಂದು ಅಂದುಕೊಂಡು ಕೆಲವು ವಿಷಯಗಳ ಮೇಲೆ ಬೆಳಕು ಚಲ್ಲಬೇಕೆಂದು ಈ ಕಮೆಂಟ್ ಬರೆಯುತ್ತಿರುವೆ.

  ೧) ಮೊದಲಿಗೆ ಸರಕಾರಿ ಶಾಲೆಗಳನ್ನು ಅವುಗಳ ಪಠ್ಯಕ್ರಮ, ಮಕ್ಕಳ ವಯಸ್ಸು, ಮೌಲ್ಯಮಾಪನ ಇವನ್ನೆಲ್ಲಾ ವಿದೇಶದಿಂದ ಖಾಸಗಿ ಶಾಲೆಗಳು ನೇರವಾಗಿ ಅಳವಡಿಸಿಕೊಂಡವುಗಳನ್ನು ಸರಕಾರ ತನ್ನ ಸರಕಾರೀ ಶಾಲೆಗಳ ಮೇಲೆ ಹೇರಿದೆ. ಖಾಸಗೀ ಶಾಲೆಗಳು ಶ್ರೀಮಂತರ ಮಕ್ಕಳಿಗೆ ಸರಕಾರಿ ಶಾಲೆಗಳು ಬಡವರ ಮಕ್ಕಳಿಗೆ ಎನ್ನುವಂಥ ಪರಿಸ್ಥಿತಿ ನಿರ್ಮಾಣವಾದ ಈ ದಿನಗಳಲ್ಲಿ ಖಾಸಗಿಯವರಿಗೂ, ಸರ್ಕಾರೀ ಮಕ್ಕಳಿಗೂ ಏಕರೂಪದ ಪಠ್ಯಕ್ರಮ, ಮೌಲ್ಯಮಾಪನ, ಕಾನೂನುಗಳು, ಹೊಂದಿಕೆಯಾಗುವದಿಲ್ಲ. ಉದಾ: ಫೇಲ್/ ಅನುತ್ತೀರ್ಣ ಮಾಡಬಾರದೆನ್ನುವ ನಿಯಮವನ್ನು ತಗೊಳ್ಳೋಣ. ಖಾಸಗೀ ಮಕ್ಕಳು೨+ ಗೆ ನರ್ಸರಿ ಶಾಲೆಗೆ ಹೋಗಲು ಪ್ರಾರಂಭಿಸಿ ೫+ ಗೆ ಒಂದನೇ ತರಗತಿಗೆ ಬರುತ್ತಾರೆ. ಆದರೆ ನಮ್ಮ ಸರಕಾರಿ ಮಕ್ಕಳು ನೇರ ೫+ ಗೆ ಒಂದನೇ ತರಗತಿಗೆ ಬರುತ್ತಾರೆ. ಆ ಮಕ್ಕಳು ಅಳಲಾರದೇ ಶಾಲೆಯಲ್ಲಿ ಕುಳಿತುಕೊಳ್ಳುವದೇ ಸಾಹಸವಾಗಿರುವಾಗ ಕಲಿಕೆ ಎಲ್ಲಿಂದ?? ಹೀಗೆ ಮೊದಲ ಸೆಮ್ ಕಳೆದು ಬಿಡುತ್ತದೆ. ಈಗಾಗಲೇ ಮೂರು ವರ್ಷ ಶಾಲಾ ವಾತಾವರಣ ಅನುಭವಿಸಿ ಬಂದ ಖಾಸಗೀ ಶಾಲೆ ಮಗು. ಎರಡೇ ದಿನಕ್ಕೇ ಹೊಸ ಶಾಲೆಗೆ ( ಕೆಲ ಬಾರಿ ಅದೇ ಶಾಲೆ) ಹೊಂದಿಕೊಳ್ಳುತ್ತದೆ. ಮತ್ತು ಕಲಿಕೆಯೂ ಆಗುತ್ತದೆ. ಆದರೆ ಸರಕಾರಿ ಮಗು ಇನ್ನೂ ಪೆನ್ಸಿಲ್ ಹಿಡಿಯಲೇ ಕಲಿತಿರುವದಿಲ್ಲ. ಹಾಗೇನೇ ಈ ಮಕ್ಕಳಿಗೆ ಮನೆಯಲ್ಲಿ ತಂದೆ ತಾಯಿ ಕಲಿಸುವವರಿರುವದಿಲ್ಲ. ಹಣ ಕೊಟ್ಟು ಟ್ಯೂಷನ್ ಕೊಡಿಸಲು ಶಕ್ತರಲ್ಲ. ಶಾಲೆಯಲ್ಲಿ ಎಷ್ಟು ಕಲಿತಿರುತ್ತಾನೋ ಅದಷ್ಟೇ. ಆದರೂ ವರ್ಷದ ಕೊನೆಗೆ ಪೆನ್ಸಿಲ್ ಹಿಡಿಯಲು ಕೂಡಾ ಬಾರದ ಈ ಮಗುವನ್ನು ಉತ್ತೀರ್ಣಗೊಳಿಸಲೇ ಬೇಕು. ಒಂಬತ್ತನೇ ತರಗತಿ ವರೆಗೂ ಫೇಲ್ ಮಾಡುವ ಹಾಗಿಲ್ಲ!.
  ಸರಿ ಎರಡನೇ ತರಗತಿಗೆ ಬಂದಾಗ ಒಂದನೇ ತರಗತಿಯ ಅರ್ಧ ಸಾಮರ್ಥ್ಯ ಕೆಲವೇ ಮಕ್ಕಳು ಗಳಿಸಿರುತ್ತಾರೆ. ಇನ್ನು ಕೆಲವರು ಶಾಲೆ ವಿಪರೀತ ಬಿಡುತ್ತಾರೆ. ತಂದೆ ತಾಯಿಯ ನಿರ್ಲಕ್ಷ, ಅನಾಸಕ್ತಿ, ಕಲಿತವರಿಗೆಲ್ಲಾ ನೌಕರಿ ಸಿಗುತ್ತದಾ ಎಂಬ ಉಡಾಫೆ ಇವೆಲ್ಲಾ ಕಾರಣಗಳಿಂದ ೨೩೦ ದಿನ ಶಾಲೆ ನಡೆದರೆ ಕೆಲ ಮಕ್ಕಳು ಕೇವಲ ಐವತ್ತು ಅರವತ್ತು ದಿನ ಸಹ ಶಾಲೆಗೆ ಬಂದಿರುವದಿಲ್ಲ. ಅಂಥವರು ಹೇಗೆ ನಿರ್ದಿಷ್ಟ ಅವಧಿಯಲ್ಲಿ ನಿಗದಿತ ಕಲಿಕಾ ಸಾಮರ್ಥ್ಯ ಗಳಿಸಿಯಾರು?? ಆದರೆ ಸರಕಾರದ ಏಕರೂಪ ಕಾನೂನಿನ ಪ್ರಕಾರ ಉತ್ತೀರ್ಣಗೊಳಿಸಲೇಬೇಕಾದ ಅನಿವಾರ್ಯತೆ ಇದೆ.

  ೨) ಶಾಲೆಯಲ್ಲಿ ಉಂಟಾಗುವ ಸಮಸ್ಯೆಗಳು ಶಿಕ್ಷಕರಿಗೆ ಮಾತ್ರ ಅನುಭವಕ್ಕೆ ಬರುತ್ತವೆ. ಕೆಲವು ಸಮಸ್ಯೆಗಳು ಶಾಲೆಯಿಂದ ಶಾಲೆಗೆ, ಓಣಿಯಿಂದ ಓಣಿಗೆ, ಊರಿನಿಂದ ಊರಿಗೆ, ಜಿಲ್ಲೆಯಿಂದ ಜಿಲ್ಲೆಗೆ ಬೇರೆ ಬೇರೆಯಾಗಿವೆ. ಅವುಗಳನ್ನು ಮೇಲಾಧಿಕಾರಿಯಾದಿಯಾಗಿ ಸಾಮಾನ್ಯ ಪಾಲಕರ ವರೆಗೂ ಎಲ್ಲರೂ ಹಗುರವಾಗಿ ಪರಿಗಣಿಸುತ್ತಾರೆ.ಅಥವಾ ಶಿಕ್ಷಕರದೇ ತಪ್ಪು ಅವರಿಗೇನೂ ಬರುವದಿಲ್ಲ. ಕಲಿಸಲು ಮನಸ್ಸಿಲ್ಲ ಇತ್ಯಾದಿಯಾಗಿ ಭಾವಿಸಿ ಸಮಸ್ಯೆಗಳಿಗೇನು ಪರಿಹಾರ ಎಂದು ವಿಚಾರಿಸದೇ “ಸಮಸ್ಯೆ ಹೇಳಕೋತ ಬರಬ್ಯಾಡ ಹೋಗ್ರಿ. ಕುಣೀಲಿಕ್ ಬರಲಿಲ್ಲಂದ್ರ ನೆಲ ಡೊಂಕ್ ಅಂದ್ರಂತ ಹಂಗಾತು. ಮೊದ್ಲ ಸರಿಯಾಗಿ ಸಾಲೀಗಿ ಹೋಗಿ ಪಾಠ ಮಾಡ್ರಿ” ಎಂದು ಬೆದರಿಸಿ ಶಿಕ್ಷಕರು ತಮ್ಮ ಸಮಸ್ಯೆ ಹೇಳಿಕೊಳ್ಳಲೇ ಸಾಧ್ಯವಿಲ್ಲದಂತೆ ಮಾಡುತ್ತಾರೆ.ತಿಂಗಳಿಗೊಮ್ಮೆ ನಡೆಯುವ ಸಮಾವೇಶಗಳು ಹೇಳಿದ್ದನ್ನು ಕೇಳಿ ಬರಲಿಕ್ಕೆ ಮಾತ್ರ ಇವೆಯೇ ಹೊರತು ಶಿಕ್ಷಕರ ನುಡಿ ಆಲಿಸಲು ಇಲ್ಲವಾಗಿವೆ.

  ೩) ಶಾಲೆಗೆ ಬಾರದ ಮಕ್ಕಳನ್ನು ಕರೆತರುವ ಜೊತೆಗೆ ದಾಖಲೆಗಳನ್ನು ನಿರ್ವಹಿಸುವಲ್ಲೂ ಶಿಕ್ಷಕರು ಸೋತು ಹೋಗಿದ್ದಾರೆ.
  ಶಿಕ್ಷಕರು ಏನೇನು ಬರೆದಿಡಬೇಕು ಗೊತ್ತಾ??
  ೧) ಪಾಠ ಟಿಪ್ಪಣಿಗಳು.
  ೨) ವಾರ್ಷಿಕ ಅಂದಾಜು ಯೋಜನೆ
  ೩) ಸಿ. ಸಿ.ಈ ಯಲ್ಲಿ ಬರುವ ಸಾಮರ್ಥ್ಯ, ಒಂದು ಸಾಮರ್ಥ್ಯ ಗಳಿಸಿದ ಬಗ್ಗೆ ಕೇಳಲು ಪ್ರಶ್ನೆಗಳು, ನಂತರ ಯಾವ ಸಾಧನ ತಂತ್ರ ಅಳವಡಿಸಿದಿರಿ? ಇತ್ಯಾದಿ ಬರೆದು ನಂತರ ಮಗು ಸಾಧಿಸಿದ್ದಾನೋ ಇಲ್ಲೋ?? ರೈಟ್ ಮಾರ್ಕು ಹಾಕಿ ಇಟ್ಟುಕೊಂಡ ಮೇಲೆ ಹತ್ತು ಅಂಕಕ್ಕೆ ಎಷ್ಟು ಪಡೆದ? ಹೀಗೆ ಎಷ್ಟು ವಿಷಯ ಬೋಧಿಸುವೆವೋ ಅಷ್ಟಕ್ಕೂ ಬರೆಯಬೇಕು.
  ೪) ರೇಡಿಯೋ ಪಾಠಗಳ ಬಗ್ಗೆ ದಾಖಲೆ .
  ೫) ಪರಿಹಾರ ಬೋಧನೆಗೆ ಎರಡು ಸಲ ಎಷ್ಟು ಬುನಾದಿ ಸಾಮರ್ಥ್ಯಗಳಿವೆಯೋ ಅಷ್ಟಕ್ಕೆ ಮೂರು / ಐದರಂತೆ ಪ್ರಶ್ನೆಗಳು. ನಂತರ ಸಾಧಿಸದೇ ಇದ್ದ ಮಕ್ಕಳಿಗೆ ಪರಿಹಾರ ಬೋಧನೆ ಏನು ಮಾಡಿದಿರಿ?? ದಾಖಲೆ ಇಡಬೇಕು.

  ೬) ವಿಜ್ಞಾನದ ಪ್ರಯೋಗಗಳನ್ನು ಮಾಡಿಸಿದ ದಾಖಲೆ.
  ೭) ವಾರ್ಷಿಕ ಮೌಲ್ಯಮಾಪನಕ್ಕೆ ಹತ್ತು ಹಂತಗಳ ಪ್ರಶ್ನೆ ಪತ್ರಿಕೆ ಶಿಕ್ಷಕರೇ ತೆಗೆಯಬೇಕು.( ವರ್ಷಕ್ಕೆ ಎರಡು ಸಲ.)
  ೮) ಕ್ರೀಯಾಯೋಜನೆ
  ಕ್ರೀಯಾ ಸಂಶೋಧನೆಗಳು.
  ೯) ವಾಚನಾಲಯ ಪುಸ್ತಕಳನ್ನು ಕೊಟ್ಟ ಇಸಿದುಕೊಂಡ ಮಾಹಿತಿ.
  ಇವೆಲ್ಲವನ್ನೂ ಸಹ ಶಿಕ್ಷಕರೇ ನಿರ್ವಹಿಸಬೇಕು. ಮುಖ್ಯಗುರುಗಳದಂತೂ ಇನ್ನೂ ಹೆಚ್ಚಿರುತ್ತದೆ.
  ೧೦) ಇವೆಲ್ಲವುಗಳ ಜೊತೆಗೆ ಪಾಠೋಪಕರಣಗಳನ್ನೂ ಮಾಡಿಕೊಳ್ಳಬೇಕು.

  ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿರುವದರಿಂದ ಹನ್ನೆರಡರಿಂದ ಹದಿನಾರು ವಿಷಯ ಒಬ್ಬೊಬ್ಬ ಶಿಕ್ಷಕರೇ ಬೋಧಿಸಬೇಕು. ಯಾವ ವಿಷಯವನ್ನು ಶಿಕ್ಷಕರು ಪೂರ್ತಿಗೊಳಿಸಲಾಗುತ್ತದೆ??
  ಇವುಗಳ ಮಧ್ಯ ತರಬೇತಿಗಳಿಗೆಂದು ಬೇರೆ ಸಮಯ ಹಾಳು. ನೂರೆಂಟು ಜಯಂತಿ, ಪಂದ್ಯಾಟ, ಪ್ರತಿಭಾ ಕಾರಂಜಿ, ಮೆಟ್ರಿಕ್ ಮೇಳ, ವಿಜ್ಞಾನ ಮೇಳ, ಅಕ್ಷರ ಜಾತ್ರೆ, ಸಮಾವೇಶಗಳು ಜೊತೆಗೆ ಬಿ.ಎಲ್.ಓ ಕಾರ್ಯ. ಮುಖ್ಯ ಗುರುಗಳಿಗಂತೂ ನಿತ್ಯವೂ ಒಂದಿಲ್ಲೊಂದು ಮಾಹಿತಿ ಕೇಳುವದು. ಆ ಮಾಹಿತಿ ತುಂಬಲು ಒಂದು ಮೀಟಿಂಗ್. ಕೆಲವು ಶಾಲೆಗಳಲ್ಲಿ ಸಹ ಶಿಕ್ಷಕರೇ ಮುಖ್ಯಗುರುಗಳೂ ಇರುವದರಿಂದ ಅವರು ಮೀಟಿಂಗ್ ಅಂತಾ ದಿನಾ ಹೋದರೆ ಅವರ ತರಗತಿಯನ್ನೂ ನೋಡಿಕೊಳ್ಳಬೇಕು.
  ಇಂಥ ಪರಿಸ್ಥಿತಿಯಲ್ಲಿ ಪಾಲಕರು ಯಾವ ರೀತಿ ಆಕರ್ಷಿತರಾಗಿ ಮಕ್ಕಳನ್ನು ಕಳಿಸಬೇಕು??
  ಯಾವ ಸರಕಾರಿ ಪ್ರಾಥಮಿಕ ಶಾಲೆಗಳಲ್ಲೂ ಬೋಧಕೇತರ ಸಿಬ್ಬಂದಿ ಇಲ್ಲವೇ ಇಲ್ಲ.

  ಇಂಥ ಕೆಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಲು ಪ್ರಭುತ್ವಕ್ಕೆ ಮನಸ್ಸಿಲ್ಲ. ಬಾಯಿಗೆ ಬಂದಂತೆ ಶಿಕ್ಷಕರನ್ನು ಬೈದು ಹಚಾ ಹಚಾ ಎಂದು ಕಳಿಸಿ ಯಾಕಾದರೂ ನಾನು ಮಾತಾಡಿದೆನಪ್ಪಾ ಎಂದು ಪಶ್ಚಾತ್ತಾಪ ಪಡುವಂತೆ ಮಾಡುತ್ತಾರೆ. ಅಥವಾ ಗಾಳಿ ಬಂದತ್ತ ತೂರಿಕೋ ಎಂಬಂತೆ ಎಲ್ಲವನ್ನೂ ನಿರ್ವಹಿಸಲಾಗದೇ ಪರ್ಯಾಯ/ ವಾಮ ಮಾರ್ಗಿಗಳಾಗುತ್ತಾರೆ. ಹೇಗಾದರೂ ಎಲ್ಲರಲ್ಲೂ ಜಾಗೃತಿ ಮೂಡಿಸಿ ಸರಕಾರಿ ಶಾಲೆಗಳು ಮತ್ತೆ ಮೈ ಕೊಡವಿಕೊಂಡೇಳುವಂತೆ ಮಾಡಲೇ ಬೇಕಾಗಿದೆ. ಸರಕಾರಿ ಶಾಲೆಗೆ ಸೌಲಭ್ಯಗಳ ಕೊರತೆ ಇಲ್ಲ. ಆದರೆ ಕಲಿಸಲು ಬಿಡುತ್ತಿಲ್ಲ. ದಯವಿಟ್ಟು ನೂರೊಂದು ಯೋಜನೆ ಮಾಡದೇ ಕಲಿಸಲು ಸರಕಾರಿ ಶಿಕ್ಷಕರಿಗೆ ಬಿಟ್ಟರೇ ಸಾಕು.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments