ಯೌವನದ ಬರೆ..!
– ಗೀತಾ ಹೆಗ್ಡೆ
ಜಗತ್ತು ಎಷ್ಟು ವಿಚಿತ್ರ. ಯಾವುದು ನಮ್ಮ ಕೈಗೆ ಸಿಗುತ್ತದೆ ಎಂದು ಭಾವಿಸುತ್ತೇವೊ ಅದು ಸುಲಭದಲ್ಲಿ ಸಿಗೋದೇ ಇಲ್ಲ. ನನಗಾಗಿ ಈ ಜಗತ್ತಿದೆ. ನನ್ನ ಆಸೆಗಳೆಲ್ಲ ಇಲ್ಲಿ ಈಡೇರುತ್ತದೆ, ನಾ ಯಾವತ್ತೂ ಸೋಲೋದೆ ಇಲ್ಲ ಅನ್ನುವ ಭಾವಾವೇಶದಲ್ಲಿ ಸಾಗುವ ಈ ಯೌವ್ವನದ ಒಂದೊಂದು ಮಜಲು ದಾಟಿಕೊಂಡು ಹೋದಂತೆಲ್ಲ ಪರಿಸ್ಥಿತಿಯ ಅನುಭವ ತನ್ನಷ್ಟಕ್ಕೆ ಚಿತ್ತವನ್ನು ಕಲಕಲು ಶುರುಮಾಡುತ್ತದೆ. ನೂರೆಂಟು ಕನಸುಗಳ ಆಗರ ಈ ಯೌವ್ವನದ ಮೆಟ್ಟಿಲು. ಏರುವ ಗತಿ ತೀವ್ರವಾದಂತೆಲ್ಲ ಆಸೆಗಳ ಭಂಡಾರ ಹೆಚ್ಚುತ್ತಲೇ ಹೋಗುತ್ತದೆ. ಏರುವ ರಭಸದಲ್ಲಿ ಹಿಂತಿರುಗಿ ನೋಡುವ ಗೊಡವೆ ಕಡೆಗೆ ಲಕ್ಷವಿಲ್ಲ. ಅಷ್ಟೊಂದು ಕಾತರ, ನಿರೀಕ್ಷೆ, ಪಡೆದೆ ತೀರಬೇಕೆನ್ನುವ ಉತ್ಕಟ ಆಕಾಂಕ್ಷೆ. ಈ ಸಮಯದಲ್ಲಿ ಯಾರ ಮಾತೂ ಕಿವಿಗೆ ಬೀಳೋದೆ ಇಲ್ಲ. ನಾ ಮಾಡಿದ್ದೆ ಸರಿ. “ಕೋಳಿಗೆ ಮೂರೇ ಕಾಲು” ಎಂದು ವಾದ ಮಾಡುವ ಮೊಂಡು ಬುದ್ಧಿ ಅದೆಲ್ಲಿಂದ ಮನಸ್ಸು ಹೊಕ್ಕು ತಾಂಡವವಾಡುತ್ತೊ!
ಕಂಡವರಿಗೆ ತಾ ಅಂದವಾಗಿ ಕಾಣಬೇಕೆನ್ನುವ ಯೋಚನೆಯಲ್ಲಿ ಕನ್ನಡಿಯ ಮುಂದೆ ನಿಂತು ಗಂಟೆಗಟ್ಟಲೆ ವ್ಯರ್ಥ ಕಾಲ ಹರಣ. ಮಂಕು ಬುದ್ಧಿಗೆ ಇದೆಲ್ಲ ಏನೂ ಗೊತ್ತಾಗೋದೆ ಇಲ್ಲ. ತಿದ್ದಿ ತೀಡಿ ಅದೆಷ್ಟು ಸ್ಟೈಲು, ಅದೇನು ವೈಯ್ಯಾರ, ಮಾತಿನಲ್ಲಿ ಅದೆಷ್ಟು ಧಿಮಾಕು. ಹಿರಿಯರು ಹೇಳುತ್ತಾರೆ “ಬಹಳ ಮೆರೆದರೆ ಅವನು/ಳು ನೆಲ ಕಾಣುತ್ತಾ? ಬಿಸಿ ರಕ್ತ ನೋಡು ಹಾರಾಡ್ತಾನೆ/ಳೆ. ಎಲ್ಲ ಇಳಿದ ಮೇಲೆ ದಾರಿಗೆ ಬರ್ತಾನೆ/ಳೆ ಬಿಡು”. ಎಷ್ಟು ಸತ್ಯ! ಆದರೆ ಈ ಸತ್ಯವನ್ನು ಅರಗಿಸಿಕೊಳ್ಳುವುದು ಬಲು ಕಷ್ಟ. “ಇದ್ದಿದ್ದು ಇದ್ದಾಂಗೆ ಹೇಳಿದರೆ ಎದ್ದು ಬಂದು ಎದೆಗೆ ಒದ್ದಾಂಗೆ” ಗಾದೆ ಮಾತು ಸುಳ್ಳಲ್ಲ.
ಪ್ರತಿಯೊಬ್ಬ ಮನುಷ್ಯನಿಗೂ ಈ ವಯಸ್ಸಿನಲ್ಲಿ ತಾಳ್ಮೆ ಕಡಿಮೆ. ಏನಾದರೂ ಬುದ್ಧಿ ಹೇಳಿದರೆ ಹೆತ್ತವರ ಮೇಲೆ ಎಗರಾಡೋದು, ಸಿಟ್ಟು ಮಾಡಿಕೊಂಡು ಊಟ ಬಿಡೋದು. ಇನ್ನೂ ಸಿಟ್ಟು ಹೆಚ್ಚಾದರೆ ಗಾಡಿ ತಗೊಂಡು ರೊಯ್ಯ^^^^^ ಅಂತ ಓಡಿ ಹೋಗೋದು. “ಸಿಟ್ಟಿನ ಕೈಗೆ ಬುದ್ಧಿ ಕೊಡಬೇಡ್ರೋ, ನಿಧಾನ ಕಂಡ್ರೋ” ಅಂದರೂ ಎಲ್ಲಿ ಕೇಳುತ್ತದೆ. ಸುರಕ್ಷಿತವಾಗಿ ವಾಪಸ್ಸು ಬಂದು ಮನೆ ಮೆಟ್ಟಿಲು ಹತ್ತಿದಾಗಲೇ ಹೆತ್ತವರಿಗೆ ಸಮಾಧಾನದ ನಿಟ್ಟುಸಿರು ಹೊರಗೆ ಬರೋದು. ಅಲ್ಲಿಯವರೆಗೂ ಉಸಿರು ಬಿಗಿ ಹಿಡಿದು ಆತಂಕದ ಮಡುವಲ್ಲಿ ಒದ್ದಾಡುವ ಹಿರಿ ಜೀವಗಳ ಸಂಕಟ ಹರೆಯಕ್ಕೆ ಗೊತ್ತಗೋದಿಲ್ಲ. ಗಮನ ಪೂರ ತನ್ನ ಉತ್ಕಟಾಂಕ್ಷೆಯ ಕಡೆಗೆ. ದೇಹ ಮನೆಯಲ್ಲಿ ಇದ್ದರೂ ಚಿತ್ತ ಇನ್ನೆಲ್ಲೋ. ಮಾಡುವ ಕೆಲಸವೆಲ್ಲಾ ಅಯೋಮಯ.
ಅಲ್ಲಿ ಯೌವ್ವನದ ಕನಸಿದೆ, ಹುಚ್ಚು ಕುದುರೆ ಓಟವಿದೆ. ಅದು ಪಡೆಯಬೇಕೆನ್ನುವ ಹಂಬಲವಿದೆ. ಈ ಹಂಬಲವು ಮನಸ್ಸಿನಲ್ಲಿ ಗಟ್ಟಿಯಾಗಿ ಛಲ ಹೆಡೆಯೆತ್ತಿದರೆ ಸರಿಯಾದ ಹಾದಿಯಲ್ಲಿ ಮುನ್ನಡೆದರೆ ಕೆಲವು ಕನಸುಗಳನ್ನಾದರೂ ಈಡೇರಿಸಿಕೊಳ್ಳಬಹುದು. ಅದಿಲ್ಲದೆ ಅತೀ ಆಕಾಂಕ್ಷೆಯಲ್ಲಿ ಐಶಾರಾಮಿ ಬದುಕಿನತ್ತ ವಾಲಿದಲ್ಲಿ ಅವನ/ಳ ಕನಸು ಭಗ್ನವಾಗುವುದು ನಿಶ್ಚಿತ. ಏಕೆಂದರೆ ಕನಸಿಗೆ ಯಾವುದೆ ಕಾಯ್ದೆ ಕಾನೂನುಗಳ ಕಟ್ಟಪ್ಪಣೆ ಇಲ್ಲ. ಅದು ತನಗೆ ಬೇಕಾದಂತೆ ಯೋಚಿಸಿ ಮನದಲ್ಲಿ ಕನಸಿನ ಸೌಧವನ್ನೆ ಕಟ್ಟಿಬಿಡುತ್ತದೆ. ಅಡೆತಡೆಯಿಲ್ಲದ ಮನದ ಗೋಡೆಗಳ ದಾಟಿ ಮನಸ್ಸನ್ನು ಹುಚ್ಚನಾಗಿಸುವುದರಲ್ಲಿ ಎತ್ತಿದ ಕೈ. ಎಲ್ಲವೂ ತಾನು ಅಂದುಕೊಂಡಂತೆ ಆಗಬೇಕು ಅನ್ನುವ ಹಠ ಅದಕ್ಕೆ. ಮುಂದಿನ ಆಗು ಹೋಗುಗಳ ಅರಿವು ಅದಕ್ಕಿಲ್ಲ. ನಿರ್ಯೋಚನೆಯಿಂದ ಕುಣಿದು ಕುಪ್ಪಳಿಸಿದ ಬಾಲ್ಯ ಪೃಕ್ರತಿಗನುಗುಣವಾಗಿ ದೇಹದಲ್ಲಾಗುವ ಬದಲಾವಣೆ ಯೌವ್ವನ ನಾ ಅಡಿಯಿಟ್ಟೆ ಅನ್ನುವ ಕಾಲ. ಗಂಡಾಗಲಿ ಹೆಣ್ಣಾಗಲಿ ತಿಳುವಳಿಕೆ ಕಡಿಮೆ, ಅನುಭವಿಸಿ ತಿಳಿದುಕೊಳ್ಳುವ ಹಂಬಲ ಜಾಸ್ತಿ. ಕಾಲಕ್ಕನುಗುಣವಾಗಿ ಜೀವನದಲ್ಲಿ ಬರುವ ಹಲವು ವ್ಯಕ್ತಿತ್ವದ ಪರಿಚಯ ಸ್ನೇಹ, ಪ್ರೀತಿ ಪ್ರೇಮದ ಮೇಘೋತ್ಕಷ೯ ತೊನೆದಾಡಿದಾಗ ಸ್ವಗ೯ಕ್ಕೆ ಮೂರೆ ಗೇಣು.
ದಿನಗಳು ಸರಿದಂತೆ ಅನ್ನದ ಹಳಸಿದ ವಾಸನೆ ಮೂಗಿಗೆ ಬಡಿಯೋದು. ಆಗ ಮನದ ಕಣ್ಣು ನಿಧಾನವಾಗಿ ತೆರೆಯಲು ಶುರು ಮಾಡುತ್ತದೆ. ಎಲ್ಲಿ ನಾನು ಎಡವಿದೆ, ನಾನು ಹೇಗಿರಬೇಕಿತ್ತು ಇತ್ಯಾದಿ ಮನಸ್ಸನ್ನು ಕೊರೆಯಲು ಶುರು ಮಾಡುತ್ತದೆ. ನಿಜ! ಮಕ್ಕಳಿಗೆ ಬೆಳೆಯುವ ವಯಸ್ಸಿನಲ್ಲಿ ಹಿರಿಯರ ಮಾರ್ಗದರ್ಶನ ಅತ್ಯಗತ್ಯ. “ಬೆಳೆಯುವ ಸಿರಿ ಮೊಳಕೆಯಲ್ಲಿ” ಹಿರಿಯರ ಗಾದೆಯಂತೆ ಚಿಕ್ಕ ಮಕ್ಕಳಿದ್ದಾಗಿಲಿಂದಲೇ ತಿಳುವಳಿಕೆಯ ಬೀಜ ಬಿತ್ತುತ್ತ ಬಂದರೆ ಸ್ವಲ್ಪವಾದರು ಯೋಚಿಸಿ ಮುಂದಡಿಯಿಡುವ ವ್ಯಕ್ತಿತ್ವ ಮಕ್ಕಳದಾಗಬಹುದು. ಆದರೆ ಇಂತಹ ಅದೃಷ್ಟ ಎಲ್ಲರಿಗೂ ಸಿಗಲು ಸಾಧ್ಯವೇ? ಮೊದಲು ಹೆತ್ತವರ ಬಗ್ಗೆ ಯೋಚಿಸಿದಲ್ಲಿ ಈಗಿನ ಧಾವಂತದ ಬದುಕೋ ಅಥವಾ ವಾಹಿನಿಗಳ ಅಬ್ಬರಾಟವೋ ಒಟ್ಟಿನಲ್ಲಿ ಮಕ್ಕಳ ಬಗೆಗೆ ಗಮನ ಕಡಿಮೆ ಆಗುತ್ತಿದೆ. ಇದಂತೂ ದಿಟ.
ಕಾರಣ ಇಷ್ಟೆ; ಮಗು ಹುಟ್ಟಿದಾಗ ಅದಕ್ಕೆ ಸಕಲ ವ್ಯವಸ್ಥೆ ಮನೆಯ ವಾತಾವರಣದಲ್ಲಿ ಇದ್ದರೆ ಪರವಾಗಿಲ್ಲ. ಅದಿಲ್ಲವಾದರೆ ಕೇರ್ ಸೆಂಟರ್ ಗತಿ. ಇಲ್ಲಿಂದಲೇ ಶುರುವಾಗುತ್ತದೆ ಮಗುವಿನ ಒಂಟಿತನ. ಕಾಲ ಕ್ರಮೇಣ ಮಕ್ಕಳು ಹಿರಿಯರ ಗಮನಕ್ಕೆ ಬಾರದಂತೆ ತಮ್ಮದೆ ಸರ್ಕಲ್ ನಿರ್ಮಿಸಿಕೊಳ್ಳಲು ಶುರುಮಾಡುತ್ತದೆ. ಸುಮಾರು ವರ್ಷಗಳವರೆಗೆ ಹೆತ್ತವರ ಅರಿವಿಗೆ ಬರುವುದಿಲ್ಲ. ಮಕ್ಕಳನ್ನು ಬೆಳೆಸುವಾಗ ನಾನು ಎಲ್ಲಿ ತಪ್ಪು ಮಾಡಿದೆ ಎಂದು ಯೋಚನೆ ತಲೆಗೆ ಗೊತ್ತಾಗುವಷ್ಟರಲ್ಲಿ ಸೀಮಿತದ ಗಡಿ ದಾಟಿ ಮುಂದೆ ಹೋಗಿರುತ್ತಾರೆ. ಅವರಲ್ಲಿ ಹುಚ್ಚು ಧೈರ್ಯ, ಆಸೆ, ಆಕಾಂಕ್ಷೆ ಅತಿಯಾಗಿ ಇಂಡಿಪೆಂಡೆಂಟ್ ಜೀವನದತ್ತ ವಾಲುವದು ಜಾಸ್ತಿ. ಒಂಟಿಯಾಗಿ ಬದುಕನ್ನು ಧೈರ್ಯವಾಗಿ ಎದುರಿಸಬಲ್ಲೆ ಅನ್ನುವ ಯೋಚನೆ ಸಹಜವಾಗಿ ಮನೆ ಮಾಡುತ್ತದೆ.
ಇದು ಕೆಟ್ಟ ನಡೆ ಅಲ್ಲ. ಆದರೆ ಹೆತ್ತವರಿಗೆ ಮಕ್ಕಳ ಭವಿಷ್ಯ ಎದುರಿಗೆ ಬಂದು ನಿಲ್ಲುತ್ತದೆ. ಎಲ್ಲರಂತೆ ಸಂಸಾರಸ್ಥರಾಗಿ ಜೀವನ ಸಾಗಿಸುವುದರತ್ತ ನನ್ನ ಮಕ್ಕಳ ಗಮನ ಇಲ್ಲ. ಅವರದೇ ಸಾಮ್ರಾಜ್ಯದಲ್ಲಿ ಬದುಕುತ್ತಿದ್ದಾರಲ್ಲ ಅನ್ನೋ ಕೊರಗು. ಒಟ್ಟಿನಲ್ಲಿ ಮಕ್ಕಳ ಬೆಳವಣಿಗೆ ಹರೆಯಕ್ಕೆ ಕಾಲಿಟ್ಟಾಗ ಅವರ ಓದು, ಕೆಲಸ, ಮದುವೆ, ಸಂಸಾರ ಎಲ್ಲವೂ ಸಾಂಗವಾಗಿ ನೆರವೇರಿದರೆ ಸಮಾಜದಲ್ಲಿ ಗೌರವ, ಮಾನ್ಯತೆ. ಅದಿಲ್ಲವಾದರೆ ಅಸ್ಪರ್ಷ್ಯರಂತೆ ಕಾಣುವ ಈ ಸಮಾಜದ ನಡೆ ಅನಾದಿಕಾಲದಿಂದ ಮುಂದುವರೆದುಕೊಂಡೇ ಬಂದಿದೆ.
ಬಿಸಿರಕ್ತದ ವಯಸ್ಸು, ಅತಿಯಾದ ಆಕಾಂಕ್ಷೆಗೆ ಬಲಿಯಾಗಿ ಅತಂತ್ರ ಸ್ಥಿತಿ ತಲುಪುತ್ತಿರುವವುದು ಶೋಚನೀಯ. ಎಲ್ಲಿ ನೋಡಿದರೂ ಹೆಣ್ಣು ಗಂಡುಗಳ ಅಲೆದಾಟಕ್ಕೆ ಇತಿ ಮಿತಿ ಇಲ್ಲ. ಸಂಕೋಚ, ಸಮಾಜದ ಕುರಿತು ಭಯ ಮೊದಲೇ ಇಲ್ಲ. It’s common ಎಂದು ಹಿರಿಯರ ಬಾಯಿ ಮುಚ್ಚಿಸುವ ಮಾತು. ಇತ್ತೀಚೆಗೆ ಓದಿದ ಬರಹ, ಚೀಣಾ ದೇಶದಲ್ಲಿ ಜನ ಸಂಖ್ಯೆ ನಿಯಂತ್ರಣ ಕಾನೂನಿನ ಪರಿಣಾಮ ಮದುವೆಯಾಗುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಹೆಚ್ಚಿನ ಯುವಕ ಯುವತಿಯರು ಒಂಟಿಯಾಗೇ ಬದುಕಲು ಇಷ್ಟ ಪಡುತ್ತಿದ್ದಾರೆ. ಇದರಿಂದಾಗಿ ಹೆತ್ತವರಿಗೆ “ನಾವಿರುವವರೆಗೆ ತೊಂದರೆ ಇಲ್ಲ, ಆಮೇಲೆ ಮಗು ಒಂಟಿಯಾಗಿಬಿಡುತ್ತಲ್ಲ” ಅನ್ನುವ ಕೊರಗು ಶುರುವಾಗಿದೆ. ಚಿಕ್ಕ ಮನೆಗೆ ಬೇಡಿಕೆ ಬಂದಿದೆ. ಬೆಳ್ಳಿ ಬಂಗಾರಕ್ಕೆ ಕಿಮ್ಮತ್ತಿಲ್ಲ. ಮನೆ ಪರಿಕರದ ಮಾರಾಟ ಕುಂಟಿತವಾಗುತ್ತಿದೆ.. ಇತ್ಯಾದಿ.
ಒಟ್ಟಿನಲ್ಲಿ ಭಾರತದಲ್ಲೂ ಹೀಗೆ ಏನಾದರೂ ಬದಲಾವಣೆ ಗಾಳಿ ಬೀಸಬಹುದೆ? ಹಳ್ಳಿ ಹುಡುಗರಿಗೆ ಹೆಣ್ಣು ಸಿಗೋಲ್ಲ. ಪೇಟೆ ಹುಡುಗ ಹುಡುಗಿಯರ ಅತಿಯಾದ ಆಕಾಂಕ್ಷೆ, ನಿರೀಕ್ಷೆ ಈಡೇರದ ಪರಿಣಾಮ ಎಲ್ಲಿಗೆ ಹೋಗಿ ತಲುಪುತ್ತೋ. ಹರೆಯಕ್ಕೆ ಮದುವೆ ಅನ್ನುವ ಮೂರಕ್ಷರದ ಗಂಟು, ಸಂಸಾರದಲ್ಲಿ ಸಮರಸ, ನಿರೀಕ್ಷೆಯ ಜೀವನ ದೊರೆತಾಗಲೇ ಮನುಷ್ಯ ಮನುಷ್ಯನಾಗಿರಲು ಸಾಧ್ಯ. ಒಂಟಿತನ ಚಿತ್ತ ದಿಕ್ಕೆಡಿಸುತ್ತದೆ. ಸಮಾಜದ ಕಟ್ಟು ಪಾಡು, ಶಾಸ್ತ್ರ ಸಂಪ್ರದಾಯ ಹಿಂಸೆಯಂತೆ ಪರಿಣಮಿಸುತ್ತದೆ. ಎಲ್ಲದರ ಬಗ್ಗೆ ತಾತ್ಸಾರ. “ನೀವು ಮಾಡುವ ಗೊಡ್ಡು ಶಾಸ್ತ್ರಕ್ಕೆ ನನ್ನ ಜೀವನ ಬಲಿ” i am independent, why you worry? ಮದುವೆಯೇ ಜೀವನವಲ್ಲ” ಇತ್ಯಾದಿ. ಮಾತುಗಳು ಮಕ್ಕಳ ಬಾಯಲ್ಲಿ. ಮೂಕ ಪ್ರೇಕ್ಷಕರಂತೆ ಹೆತ್ತವರ ಮೌನ ಮಕ್ಕಳ ಮೂಕ ರೋದನ. ಒಳಗೊಳಗೆ ನೊಂದು ಬೆಂದು ಎದುರಿಗೆ ಅದೆಷ್ಟು ಮಕ್ಕಳು ಮುಖವಾಡ ಹಾಕಿ ಬದುಕುತ್ತಿದ್ದಾರೋ!
ಆಗಬೇಕು ಎಲ್ಲ
ಆಗಬೇಕಾದ ಕಾಲದಲ್ಲಿ
ಅದಿಲ್ಲವಾದರೆ ಮಕ್ಕಳಿಗೆ
ಹರೆಯ ಹೊರೆಯಂತೆ
ಹೆತ್ತವರಿಗೆ
ಹಾಕಿಕೊಳ್ಳಲಾಗದ ಉರುಳು
ಜನರ ಬಾಯಲ್ಲಿ
ಸದಾ ಹರಿದಾಡುವ ತಿರುಳು!
Trackbacks & Pingbacks